“ಓಹ್? ಎಕ್ಸ್ಕ್ಯೂಸ್ ಮಿ, ಎಕ್ಸ್ಕ್ಯೂಸ್ ಮಿ, ನಾವು ಇಲ್ಲಿಗೆ ಬಂದಿದ್ದು ಮನ್ರೋ ಸಾಹೇಬರ ಒಪ್ಪಂದದಂತೆ ನೀವು ಕೊಡಬೇಕಾದ ಕಪ್ಪವನ್ನು ಕೇಳುವುದಕ್ಕೆ.”
“ಏನು? ಕಪ್ಪ, ನಾವು ನಿಮಗೆ ಕಪ್ಪ ಕೊಡಬೇಕೆ? ಕಬ್ಬು ತಿನ್ನುವುದನ್ನು ಬಿಟ್ಟ ತಪ್ಪಿಗೆ ಕೂಲಿಯನ್ನು ಬೇರೆ ಕೊಡಬೇಕೆ? ಏಕೆ? ಮೋಡ ಮಳೆ ಸುರಿಸುತ್ತದೆ, ಭೂಮಿ ಬೆಳೆ ಬೆಳೆಯುತ್ತದೆ. ನಿಮಗೇಕೆ ಕೊಡಬೇಕು ಕಪ್ಪ? ನಮ್ಮವರೊಂದಿಗೆ ಉತ್ತಿರಾ, ಬಿತ್ತಿರಾ ನೀರು ಹಾಯಿಸಿ ನಾಟಿ ನೆಟ್ಟಿರಾ, ಹೊರೆ ಹೊತ್ತಿರಾ ದಣಿದವರಿಗೆ ಅಂಬಲಿ ಕಾಯಿಸಿ ಕೊಟ್ಟಿರಾ? ನಿಮಗೇಕೆ ಕೊಡಬೇಕು ಕಪ್ಪ? ನೀವೇನು ಅಣ್ಣ-ತಮ್ಮಂದಿರೆ ನೆಂಟರೆ ಇಷ್ಟರೆ ದಾಯಾದಿಗಳೆ? ನಿಮಗೇಕೆ ಕೊಡಬೇಕು ಕಪ್ಪ?”
“ಓಹ್…ಚನ್ನಮ್ಮ ರಾಣಿ….”
“ಶ್…ನಡುಗಿ ಸಾಯಬೇಡ, ಕುಳಿತುಕೋ”
“ಇಂತಹ ಕಷ್ಟದಲ್ಲೂ ಇಷ್ಟೊಂದು….”
“ಹೀಗೆ ಜಂಭ ಕೊಚ್ಚಿಕೊಂಡ ಮೈಸೂರು ಮಣ್ಣುಪಾಲಾಯಿತು.”
“ಅದು ನಿಮ್ಮ ವೀರತ್ವದಿಂದಲ್ಲ, ವಂಚನೆಯಿಂದ. ಮೈಸೂರನ್ನು ಹಾಳುಮಾಡಲು ಮರಾಠರನ್ನು, ಮರಾಠರನ್ನು ಹಾಳುಮಾಡಲು ಮತ್ತೊಬ್ಬನನ್ನು ಎತ್ತಿಕಟ್ಟುತ್ತ ಇಡೀ ಹಿಂದೂ ದೇಶವನ್ನೇ ನಯವಂಚನೆಯಿಂದ ನುಂಗಲು ನಿಂತಿರುವ ನರಿ ಜಾತಿಯವರಲ್ಲವೆ ನೀವು? ಎಚ್ಚರಿಕೆ, ಕಿತ್ತೂರು ರಾಣಿಯೆದುರು ಕಪ್ಪ ಕೇಳುವವನ ನಾಲಿಗೆ ಸೀಳಿ ಹೋದೀತು.”
ಈ ಮೇಲಿನ ಡೈಲಾಗ್ ಕೇಳಿದರೆ ಸಾಕು, ಇದು ಯಾರು ಯಾರಿಗೆ ಹೇಳಿದ್ದು ಎಂದರೆ ಕನ್ನಡಿಗರು ಸಂದರ್ಭ ಸಹಿತ ವಿವರಿಸುತ್ತಾರೆ. ಸಾವಿರಾರು ನಾಟಕಗಳಲ್ಲಿ, ಶಾಲೆಯ ಕಾರ್ಯಕ್ರಮಗಳಲ್ಲಿ, ಫ್ಯಾನ್ಸಿ ಡ್ರೆಸ್ ಕಾಂಪಿಟೀಷನ್ಗಳಲ್ಲಿ, ಚಿಕ್ಕ ಮಕ್ಕಳಿಂದ ಹಿಡಿದು, ಹವ್ಯಾಸಿ ಹಾಗೂ ವೃತ್ತಿಪರ ರಂಗಭೂಮಿಯಲ್ಲಿ – ಹೀಗೆ ಎಲ್ಲದರಲ್ಲಿಯೂ ಈ ಸಂದರ್ಭ ಮತ್ತೆಮತ್ತೆ ಚಿತ್ರಿತಗೊಂಡಿದೆ. ಇಂದಿನ ತಲೆಮಾರಿಗೆ ಕೇಳಿದರೆ ಈ ದೃಶ್ಯ ಬರುವುದು ೧೯೯೧ರ ಮಾಲಾಶ್ರೀ ಅಭಿನಯದ ‘ಕಿತ್ತೂರಿನ ಹುಲಿ’ ಚಲನಚಿತ್ರದಲ್ಲಿ ಎಂದು ಸುಲಭವಾಗಿ ಹೇಳುತ್ತಾರೆ. ಇದು ಸುಳ್ಳೇನೂ ಅಲ್ಲ. ಆದರೆ ಪೂರ್ಣ ಸತ್ಯವೂ ಅಲ್ಲ. ಯಾಕೆಂದರೆ ಈ ದೃಶ್ಯ ಮೊದಲು ಮೂಡಿಬಂದಿದ್ದು ೧೯೬೧ರಲ್ಲಿ ತೆರೆಕಂಡ ಬಿ.ಆರ್. ಪಂತುಲು ನಿರ್ದೇಶನದ ‘ಕಿತ್ತೂರು ಚೆನ್ನಮ್ಮ’ ಚಲನಚಿತ್ರದಲ್ಲಿ. ಅದೇ ದೃಶ್ಯವನ್ನು ೩೦ ವರ್ಷಗಳ ಬಳಿಕ ‘ಕಿತ್ತೂರಿನ ಹುಲಿ’ ಚಲನಚಿತ್ರದಲ್ಲಿ ಕಾಲೇಜು ನಾಟಕದ ಸಂದರ್ಭದಲ್ಲಿ ಅಳವಡಿಸಿಕೊಳ್ಳಲಾಯಿತು. ಮಾಲಾಶ್ರೀ ಕಿತ್ತೂರು ರಾಣಿ ಚೆನ್ನಮ್ಮಳಾಗಿ ಅಭಿನಯಿಸಿ, ಕನ್ನಡಿಗರಿಗೆ ಮತ್ತೆ ರಾಣಿ ಚೆನ್ನಮ್ಮಳ ನೆನಪು ಮಾಡಿಕೊಟ್ಟಿದ್ದರು.
ಅಂದಹಾಗೆ, ೧೯೬೧ರ ‘ಕಿತ್ತೂರು ಚೆನ್ನಮ್ಮ’ ಚಿತ್ರದಲ್ಲಿ ಚೆನ್ನಮ್ಮಳ ಪಾತ್ರ ಮಾಡಿದ್ದುದು ಬಿ. ಸರೋಜಾದೇವಿ. ಅವರು ಮಾಡಿದ ಚೆನ್ನಮ್ಮಳ್ಳ ಪಾತ್ರವನ್ನು ನೋಡಿದ ಜನ, ಸರೋಜಾದೇವಿಯವರನ್ನು ಚೆನ್ನಮ್ಮಳ ಪುನರ್ಜನ್ಮ ಎಂದೇ ಭಾವಿಸಿದ್ದರಂತೆ. ಹಾಗಿತ್ತು ಅವರ ಅಭಿನಯ. ಅವರ ಜೊತೆ ಘಟಾನುಘಟಿಗಳ ತಾರಾಗಣವೇ ಇತ್ತು. ಡಾ. ರಾಜಕುಮಾರ್, ಲೀಲಾವತಿ, ಢಿಕ್ಕಿ ಮಾಧವರಾವ್, ನರಸಿಂಹರಾಜು, ಬಾಲಕೃಷ್ಣ, ಕೆ.ಎಸ್. ಅಶ್ವತ್ಥ್, ಎಂ.ವಿ. ರಾಜಮ್ಮ, ಚಿಂದೋಡಿ ಲೀಲಾ (ವೃತ್ತಿ ರಂಗಭೂಮಿಯಲ್ಲಿ ತಮ್ಮದೇ ಛಾಪು ಮೂಡಿಸಿದ ‘ಪೊಲೀಸನ ಮಗಳು’) ಈ ಚಲನಚಿತ್ರದಲ್ಲಿದ್ದರು. ಚಲನಚಿತ್ರದ ಅವಧಿ ಪೂರ್ತಿ ಎರಡೂ ಮುಕ್ಕಾಲು ಗಂಟೆ. ಅಂದಿನ ಖ್ಯಾತ ನಿರ್ಮಾಣ ಸಂಸ್ಥೆ ‘ಪದ್ಮಿನಿ ಪಿಕ್ಚರ್ಸ್’ ಬ್ಯಾನರ್ ಅಡಿಯಲ್ಲಿ ಬಿ.ಆರ್. ಪಂತುಲು ಈ ಚಿತ್ರವನ್ನು ನಿರ್ಮಿಸಿದ್ದರು. (ಕನ್ನಡದ ಪ್ರಥಮ ಸಾಮಾಜಿಕ ಚಿತ್ರ ‘ಸಂಸಾರನೌಕ’ ದ ನಾಯಕ ಬಿ.ಆರ್. ಪಂತುಲು, ಪದ್ಮಿನಿ ಪಿಕ್ಚರ್ಸ್ ಮೂಲಕ ಕನ್ನಡ ಚಿತ್ರರಂಗ ಬೆಳೆಯುವಲ್ಲಿ ಅಪಾರ ಕೊಡುಗೆ ನೀಡಿದವರು.) ಸಂಭಾಷಣೆ ಹಾಗೂ ಹಾಡುಗಳನ್ನು ಬರೆದವರು ಜಿ.ವಿ. ಅಯ್ಯರ್. ಸಂಗೀತ ಟಿ.ಜಿ. ಲಿಂಗಪ್ಪ. ಹಿನ್ನೆಲೆ ಗಾಯಕರು ಪಿ.ಬಿ. ಶ್ರೀನಿವಾಸ್, ಪಿ. ಕಾಳಿಂಗರಾವ್, ಪಿ. ಸುಶೀಲ, ಎಸ್. ಜಾನಕಿ. ತಮ್ಮ ಮನೋಜ್ಞ ಚಿತ್ರಗಳ ಮೂಲಕ ಕನ್ನಡಿಗರಿಗೆ ಅತ್ಯುತ್ತಮ ಚಿತ್ರಗಳನ್ನು ನೀಡಿದ ಪುಟ್ಟಣ್ಣ ಕಣಗಾಲ್, ಈ ಚಿತ್ರದ ಸಹ-ನಿರ್ದೇಶಕರಾಗಿದ್ದರು.
ಐತಿಹಾಸಿಕ ಚಲನಚಿತ್ರವನ್ನು ನಿರ್ಮಿಸುವುದು ಅಂದಿಗೂ-ಇಂದಿಗೂ ಸವಾಲಿನ ಕೆಲಸವೇ. ಇತಿಹಾಸ ಸಂಶೋಧನೆ, ಆಕರಗ್ರಂಥಗಳ ಪರಿಶೀಲನೆ, ಸಂಶೋಧಕರ ಅಭಿಪ್ರಾಯ-ಸೂಚನೆಗಳನ್ನು ಆಧರಿಸಿಯೇ ಚಿತ್ರನಿರ್ಮಾಣ ಮಾಡಬೇಕು. ಆ ಕಾಲದ ವೇಷಭೂಷಣಗಳು, ಕೋಟೆ-ಕೊತ್ತಲಗಳು, ಒಳಾಂಗಣ-ಹೊರಾಂಗಣ ವಿನ್ಯಾಸ, ಪ್ರಾದೇಶಿಕ ಭಾಷೆಯ ಸೊಗಡು – ಎಲ್ಲವೂ ಚಿತ್ರದಲ್ಲಿರಬೇಕು. ಈ ಯಾವುದಾದರೂ ಒಂದರಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಆಭಾಸವಾಗುತ್ತದೆ. ರಾಜ-ಮಹಾರಾಜರ ಕಾಲದಲ್ಲಿ ನಟರು ಮರೆತು ವಾಚ್ ಕಟ್ಟಿಕೊಂಡಿದ್ದು, ಯುದ್ಧದ ಸಂದರ್ಭದಲ್ಲಿ ವಿದ್ಯುತ್ ಕಂಬ ಕಂಡಿದ್ದು, ಮಹಾರಾಜರು ಉದ್ಯಾನದಲ್ಲಿ ತಿರುಗಾಡುವಾಗ ತಲೆಯ ಮೇಲೆ ಏರೋಪ್ಲೇನ್ ಹಾರಿಹೋದಂತಹ ಘಟನೆಗಳೂ ನಡೆದಿವೆ! ಆದರೆ ಕಿತ್ತೂರು ಚೆನ್ನಮ್ಮ ಚಿತ್ರದಲ್ಲಿ ಮೊದಲಿಗೇ ಬಿ.ಆರ್. ಪಂತುಲು, ಚಿತ್ರಕ್ಕಾಗಿ ತಾವು ಮಾಡಿದ ತಮ್ಮ ಸಂಶೋಧನೆಯ ಮೂಲವನ್ನು ಬಿಚ್ಚಿಡುತ್ತಾರೆ. ಚಿತ್ರದಲ್ಲಿ ಆರಂಭದಲ್ಲಿ ಬರುವ ವಾಕ್ಯಗಳು ಹೀಗಿವೆ:
“ಈ ಚಿತ್ರ ತಯಾರಿಕೆಯಲ್ಲಿ ಚಾರಿತ್ರಿಕ ಅಂಶಗಳ ಬಗ್ಗೆ ಸೂಕ್ತ ಸಲಹೆಗಳನ್ನು ಕೊಟ್ಟು ಸಹಕರಿಸಿದ ಬೈಲಹೊಂಗಲದ ಚೆನ್ನಮ್ಮ-ರಾಣಿ ಇತಿಹಾಸ ಮಂಡಲದ ಕಾರ್ಯದರ್ಶಿಗಳಾದ ಶ್ರೀಮಾನ್ ತಲ್ಲೂರ ರಾಯನಗೌಡ ಪಾಟೀಲ ಮತ್ತು ಆ ಮಂಡಳಿಗೂ, ಸಾಹಿತಿ ಶ್ರೀಮಾನ್ ಅ.ನ. ಕೃಷ್ಣರಾಯರಿಗೂ, ಉತ್ತರ ಕರ್ನಾಟಕದ ಸರ್ವಶ್ರೀ ವಾಲಿ ಚೆನ್ನಪ್ಪ, ಚಿತ್ತರಗಿ ಗಂಗಾಧರಶಾಸ್ತ್ರಿ ಮತ್ತು ಉತ್ತರ ಕರ್ನಾಟಕದ ಇತರ ಮಿತ್ರರಿಗೂ ನಮ್ಮ ಧನ್ಯವಾದಗಳನ್ನು ಅರ್ಪಿಸುತ್ತೇವೆ.”
ಇದರ ಜೊತೆಗೆ ಸಿನೆಮಾದ ಅಗತ್ಯಕ್ಕೆ ತಕ್ಕಂತೆ ಕೆಲ ಮಾರ್ಪಾಡುಗಳನ್ನು ಮಾಡಿಕೊಳ್ಳುವ ಅಗತ್ಯವೂ ಇರುತ್ತದೆ. ಹೀಗಾಗಿಯೆ ಮುಂದಿನ ಫ್ರೇಮ್ನಲ್ಲಿ ಪಂತುಲು ಹೀಗೆ ಬರೆಸಿದ್ದಾರೆ:
“ಕಿತ್ತೂರು ಚೆನ್ನಮ್ಮ ರಾಣಿಯ ಬಗ್ಗೆ ದೊರೆತ ಇತಿಹಾಸ ಆಧಾರಗಳೊಂದಿಗೆ ಆ ಕಾಲಕ್ಕನುಗುಣವಾಗಿ ಕೆಲವು ಕಾಲ್ಪನಿಕ ಸಂದರ್ಭಗಳನ್ನು ಕಲಾತ್ಮಕವಾಗಿ ಮೂಲಕಥೆಗೆ ಅಳವಡಿಸಿಕೊಂಡಿದ್ದೇವೆ.”
ಅಂದರೆ ಐತಿಹಾಸಿಕ ಚಿತ್ರಗಳನ್ನು ನಿರ್ಮಿಸುವಾಗ ತೆಗೆದುಕೊಳ್ಳಬೇಕಾದ ಎಲ್ಲ ಎಚ್ಚರಿಕೆಗಳನ್ನೂ ಪದ್ಮಿನಿ ಪಿಕ್ಚರ್ಸ್ ಆ ಕಾಲದಲ್ಲಿ ತೆಗೆದುಕೊಂಡಿತ್ತು. ಇಂದಿನ ಕಾಲದಲ್ಲಿ ಮಾಡುವಂತೆ ಅನಗತ್ಯವಾಗಿ ಅಸಂಬದ್ಧ ಅಂಶಗಳನ್ನು ಸೇರಿಸಿಕೊಂಡು, ಮೂಲಕಥೆಗಿಂತಲೂ ಮಸಾಲೆಯನ್ನೇ ಜಾಸ್ತಿ ಬೆರೆಸಿ, ಬೇಕೆಂದೇ ವಿವಾದಗಳನ್ನು ಸೃಷ್ಟಿಸಿ ಮಾಧ್ಯಮಗಳಲ್ಲಿ ನಕಾರಾತ್ಮಕ ಪ್ರಚಾರ (ನೆಗೆಟಿವ್ ಪಬ್ಲಿಸಿಟಿ) ಪಡೆಯುವ ತಂತ್ರಗಾರಿಕೆ ಆಗ ಇರಲಿಲ್ಲ. ಹೀಗಾಗಿ ‘ಕಿತ್ತೂರು ಚೆನ್ನಮ್ಮ’ ಯಾವುದೇ ರೀತಿಯಲ್ಲಿಯೂ ಎಲ್ಲಿಯೂ ಆಭಾಸ ಉಂಟುಮಾಡುವುದಿಲ್ಲ.
‘ಕಿತ್ತೂರು ಚೆನ್ನಮ್ಮ’ ಆರಂಭವಾಗುವುದು ಕನ್ನಡದ ಖ್ಯಾತ ಪ್ರಾರ್ಥನೆ ‘ಸ್ವಾಮಿ ದೇವನೆ ಲೋಕಪಾಲನೆ ತೇ ನಮೋಸ್ತು ನಮೋಸ್ತು ತೇ’ಯೊಂದಿಗೆ. ಚಿತ್ರದ ಆರಂಭದಲ್ಲಿಯೇ ಇದನ್ನು ಬಳಸಿಕೊಂಡಿರುವುದರಿಂದ ಹಲವರಿಗೆ ಈ ಹಾಡು ಕಿತ್ತೂರು ಚೆನ್ನಮ್ಮ ಚಿತ್ರದ್ದು ಎನಿಸುತ್ತದೆ. ಆದರೆ ಸ್ವಾಮಿ ದೇವನೆ ಹಾಡು ಮೊದಲು ಬಳಕೆಯಾಗಿದ್ದು ೧೯೫೮ರಲ್ಲಿ ಬಂದ ಸುಪ್ರಸಿದ್ಧ ಚಲನಚಿತ್ರ ‘ಸ್ಕೂಲ್ಮಾಸ್ಟರ್’ನಲ್ಲಿ. ಅದರ ನಿರ್ಮಾಪಕರು ಹಾಗೂ ನಿರ್ದೇಶಕರು ಬಿ.ಆರ್. ಪಂತುಲು ಅವರೇ ಆಗಿದ್ದರು. ಈ ಹಾಡು ಮತ್ತಷ್ಟು ಖ್ಯಾತಿಗಳಿಸಲು ಇದೂ ಕಾರಣವಾಯಿತು.
೧೯೬೭ರಲ್ಲಿ ಬಿಡುಗಡೆಗೊಂಡ ಚಿತ್ರ ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ.’ ಚಿತ್ರವಾಣಿ ಸಂಸ್ಥೆ ನಿರ್ಮಿಸಿದ, ಬಿ.ಟಿ. ಅಥಣಿ ಗುರುಬಾಳ ನಿರ್ದೇಶಿದ ಈ ಚಿತ್ರ ರಾಯಣ್ಣನ ಕಥೆ ಹೇಳುತ್ತದೆ. ಲತಾ ಮಂಗೇಶ್ಕರ್ ಹಾಡಿದ ಕನ್ನಡ ಹಾಡು ‘ಬೆಳ್ಳನ ಬೆಳಗಾಯಿತು’ ಇದೇ ಚಿತ್ರದ್ದು.
೧೯೭೭ರಲ್ಲಿ ಬಿಡುಗಡೆಗೊಂಡ ಚಲನಚಿತ್ರ ‘ವೀರ ಸಿಂಧೂರ ಲಕ್ಷ್ಮಣ’. ಬ್ರಿಟಿಷ್ ದಬ್ಬಾಳಿಕೆಯ ವಿರುದ್ಧ ಸಿಡಿದೆದ್ದು ತನ್ನದೇ ತಂಡ ಕಟ್ಟಿಕೊಂಡು ಹೋರಾಟ ನಡೆಸಿದ, ಬ್ರಿಟಿಷ್ ಪೊಲೀಸ್ ಅಧಿಕಾರಿಗಳ ನಿದ್ದೆಗೆಡಿಸಿದ, ಕೊನೆಗೆ ಅವರ ನರಿಬುದ್ಧಿಗೆ ಗುರಿಯಾಗಿ ವೀರ ಮರಣವನ್ನಪ್ಪುವ ಕಥೆಯೇ ‘ವೀರ ಸಿಂಧೂರ ಲಕ್ಷ್ಮಣ’ ಚಲನಚಿತ್ರ. ನಿರ್ದೇಶನ ಹುಣಸೂರು ಕೃಷ್ಣಮೂರ್ತಿ. ಚಿತ್ರಕ್ಕೂ ಮೊದಲು ಹುಣಸೂರು ಕೃಷ್ಣಮೂರ್ತಿಯವರು ಸಿಂಧೂರ ಲಕ್ಷ್ಮಣನ ಕುರಿತು ಸಾಕಷ್ಟು ಅಧ್ಯಯನ ಮಾಡಿದ್ದಾರೆ. ಚಿತ್ರದ ಆರಂಭದಲ್ಲಿ “ಸಿಂಧೂರು, ತಗ್ಗಿ, ಜಮಖಂಡಿ, ಅಥಣಿ, ಬೀಳಗಿ, ಗುಡಗೇರಿ, ಗೌಡಗೇರಿ, ಸೋಗಲ, ಮುರಗೋಡ, ಹೀರೇಬಾಗೇವಾಡಿ, ಹುಬ್ಬಳ್ಳಿ ಮುಂತಾದ ಸ್ಥಳಗಳಲ್ಲಿ ಲಕ್ಷ್ಮಣನ ಜೀವನದ ವಿಷಯ ತಿಳಿಸಿ ಚಿತ್ರೀಕರಣಕ್ಕೆ ನಮಗೆ ಸರ್ವ ವಿಧದಿಂದಲೂ ಸಹಾಯ ಮಾಡಿದ ಮಹಾ ಜನಗಳಿಗೂ ಬೆಂಗಳೂರಿನ ಸಿ.ಎ.ಆರ್. ಪೊಲೀಸ್ ಅಧಿಕಾರಿಗಳಿಗೂ ನಮ್ಮ ಕೃತಜ್ಞತೆಗಳು’’ ಎಂಬ ಸಂದೇಶ ಬರುತ್ತದೆ. ಇದು ಲಕ್ಷ್ಮಣನ ಕುರಿತು ಅಧ್ಯಯನ ಮಾಡಿಯೇ ಚಿತ್ರವನ್ನು ನಿರ್ಮಾಣ ಮಾಡಲಾಗಿದೆ ಎಂಬುದನ್ನು ಸೂಚಿಸುತ್ತದೆ.
ಎನ್. ಬಸವರಾಜ್, ಕೆ.ಎಸ್. ಅಶ್ವತ್ಥ್, ಸುಧೀರ್, ಮಂಜುಳಾ, ಲೀಲಾವತಿ, ವಜ್ರಮುನಿ, ಹನುಮಂತಾಚಾರ್ ಮುಂತಾದವರು ನಟಿಸಿರುವ ಈ ಚಿತ್ರ, ಸಿಂಧೂರ ಲಕ್ಷ್ಮಣ ಹೋರಾಟವನ್ನು ಎಳೆಎಳೆಯಾಗಿ ಪರದೆಯ ಮೇಲೆ ತೆರೆದಿಡುತ್ತದೆ. ಇದಕ್ಕೆ ಟಿ.ಜಿ. ಲಿಂಗಪ್ಪನವರ ಸಂಗೀತವಿದೆ. ವೀರ ಸಿಂಧೂರ ಲಕ್ಷ್ಮಣಚಲನಚಿತ್ರ ಆರಂಭವಾಗುವುದು ಹುಣಸೂರು ಕೃಷ್ಣಮೂರ್ತಿಯವರು ಬರೆದ ಹಾಡಿನಿಂದ.
ಸಿಂಧೂರ ಲಕ್ಷ್ಮಣನೆಂದರೆ ಸಾಕು ಶೌರ್ಯವು
ಮೈಯಲ್ಲಿ ತುಂಬುವುದು.
ಅವನು ಮಾಡಿದ ತ್ಯಾಗ ಕೇಳಿದರೆ ಎದೆಯಲಿ
ಸ್ಫೂರ್ತಿ ಉಕ್ಕುವುದು.
ಆ ಕಾಲದಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಪಡೆದ ಈ ಹಾಡು ಇಂದಿಗೂ ಪ್ರಚಲಿತವಾಗಿದೆ. ಚಿತ್ರತಂಡವು ಚಿತ್ರವನ್ನು ಅರ್ಪಿಸಿರುವುದು ಸ್ವಾತಂತ್ರ್ಯಹೋರಾಟಗಾರರರಿಗೆ. ಚಿತ್ರದ ಆರಂಭದಲ್ಲಿ ಬರುವ ಸಂದೇಶ ಹೀಗಿದೆ: “ಸ್ವಾತಂತ್ರ್ಯಕ್ಕೋಸ್ಕರ ತನು-ಮನ-ಧನಗಳನ್ನು ಅರ್ಪಿಸಿದ ದೇಶಭಕ್ತರ ಪುಣ್ಯಸ್ಮರಣೆಗೆ ಈ ಚಿತ್ರವನ್ನು ಅರ್ಪಿಸಿದೆ.” ಇವೆಲ್ಲವನ್ನೂ ಗಮನಿಸಿದರೆ, ಇಂತಹ ಚಿತ್ರಗಳ ಹಿಂದೆ ವಾಣಿಜ್ಯ ಉದ್ದೇಶದ ಹೊರತಾಗಿ ದೇಶಭಕ್ತಿಯ ಸೆಲೆಯೂ ಇತ್ತು ಎಂಬುದು ತಿಳಿಯುತ್ತದೆ.
೧೯೭೭ರಲ್ಲಿ ತೆರೆ ಕಂಡ ಮತ್ತೊಂದು ಚಲನಚಿತ್ರ ‘ಕನ್ನೇಶ್ವರ ರಾಮ’. ನಿರ್ಮಾಪಕರು ಮೂಲಾ ಸೋದರರು. ನಿರ್ದೇಶನ ಎಂ.ಎಸ್. ಸತ್ಯು. ಎಸ್.ಕೆ. ನಾಡಿಗ್ ಅವರ ಕಾದಂಬರಿಯನ್ನು ಆಧರಿಸಿ ಶಮಾ ಜೈದಿ ಇದಕ್ಕೆ ಚಿತ್ರಕಥೆ ಬರೆದರು. ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಜೊತೆಗೆ ಸಮಾಲೋಚಿಸಿ ಚಿತ್ರಕಥೆಯನ್ನು ಸಿದ್ಧಪಡಿಸಲಾಗಿತ್ತು. ಚಿತ್ರಕ್ಕೆ ಬಿ.ವಿ. ಕಾರಂತರ ಸಂಗೀತ, ಸಮ್ಮದ್ ಸಾಹೇಬರ ಲಾವಣಿ, ಪಿ.ಬಿ. ಶ್ರೀನಿವಾಸ್ ಹಾಗೂ ಬಾಳಪ್ಪ ಹುಕ್ಕೇರಿ ಅವರ ಗಾಯನವಿತ್ತು. ಹೀಗಾಗಿ ಚಿತ್ರದ ಸಂಗೀತ ಜನರಲ್ಲಿ ದೇಶಭಕ್ತಿಯ ಭಾವ ಹುಟ್ಟುಹಾಕಿತ್ತು. ಚಿತ್ರದ ಆರಂಭದಲ್ಲಿಯೇ ಬಳಸಲಾದ
“ನರವೀರ ಕನ್ನೇಶ್ವರ ರಾಮನೆಂಬ ಕಡುಶೂರ
ಧೀರತನವ ತೋರಿದ ಪ್ರಾಣಕೊಟ್ಟ ಸರದಾರ
ಧಾರವಾಡ ಪ್ರಾಂತ ಹಾನಗಲ್ಲತಾಲೂಕವನೂರ
ಐಶ್ವರ್ಯದಿ ಮೆರೆವುದು ಕನ್ನೇಶ್ವರೆಂಬುದ ಶಹರ
ಅದೇ ಶಹರದೊಳಗಿದ್ದು ಮಾಡಿಕೊಂಡು ಮನಿ ಮಾರ
ಅವ ಹರುಷದಿ ಸಾಗಿಸಿದ ಕೂಡಿಕೊಂಡು ಸಂಸಾರ
ಬಲ ಕಲಿ ಗಟ್ಟಿ ಬಹಳ, ನಡತೆ ನಿವ್ವಳ?”
ಲಾವಣಿ, ಕನ್ನೇಶ್ವರ ರಾಮ ಯಾಕೆ ದೌರ್ಜನ್ಯ, ದಬ್ಬಾಳಿಕೆಯ ವಿರುದ್ಧ ತಿರುಗಿಬಿದ್ದ, ಹೇಗೆ ಬ್ರಿಟಿಷರಿಗೆ ಸಿಂಹಸ್ವಪ್ನವಾದ ಎಂಬುದನ್ನು ವಿವರಿಸುತ್ತದೆ.
ಈ ಚಿತ್ರದಲ್ಲಿ ಕನ್ನೇಶ್ವರ ರಾಮನಾಗಿ ನಟಿಸಿದ್ದು ಅನಂತನಾಗ್. ಅವರ ಜೊತೆ ಶಬಾನಾ ಆಜ್ಮಿ, ಅಮೋಲ್ ಪಾಲೇಕರ್, ಬಿ.ವಿ. ಕಾರಂತ, ಮಾಲತಿ, ಧೀರೇಂದ್ರ ಗೋಪಾಲ್, ಟಾಮ್ ಆಲ್ಟರ್, ಸಿ.ಆರ್. ಸಿಂಹ ಅವರ ತಾರಾಗಣವಿದೆ. ತಮ್ಮ ಗಾಯನದಿಂದ ಪ್ರಸಿದ್ಧರಾಗಿದ್ದ ಬಾಳಪ್ಪ ಹುಕ್ಕೇರಿ, ಈ ಚಿತ್ರದಲ್ಲಿ ಹಾಡಿರುವುದು ಮಾತ್ರವಲ್ಲ ನಟಿಸಿದ್ದಾರೆ ಕೂಡ! ಅಂದರೆ ಜಾತ್ರೆಯೊಂದರ ಸಂದರ್ಭದಲ್ಲಿ ಜನಸಂದಣಿಯಲ್ಲಿ ಬಾಳಪ್ಪ ಹುಕ್ಕೇರಿ ಅವರ ಗಾಯನ ಇಲ್ಲಿ ಚಿತ್ರಿಸಲ್ಪಟ್ಟಿದೆ. ಅದನ್ನು ಇಲ್ಲಿ ನೋಡಿ-ಕೇಳಿ ಆನಂದಿಸಬಹುದು. ನಗರ, ಹೊಸನಗರ, ಶಿಕಾರಿಪುರ ಸುತ್ತಮುತ್ತಲ ಪ್ರದೇಶಗಳಲ್ಲಿ ಈ ಚಿತ್ರದ ಚಿತ್ರೀಕರಣ ನಡೆದಿತ್ತು. ಇದೀಗ ಈ ಪ್ರದೇಶಗಳಿಗೆ ಭೇಟಿ ನೀಡಿದರೂ, ಅಲ್ಲಿನ ಹಿರಿಯರು ಕನ್ನೇಶ್ವರ ರಾಮ ಚಿತ್ರದ ಶೂಟಿಂಗ್ ಕುರಿತು ನೆನಪುಗಳನ್ನು ಹಂಚಿಕೊಳ್ಳುತ್ತಾರೆ.
ಮೊದಲಿಗೆ ಊರ ಪಟೇಲನ ದೌರ್ಜನ್ಯದ ವಿರುದ್ಧ ತಿರುಗಿಬೀಳುವ ರಾಮ ಜೈಲು ಸೇರುತ್ತಾನೆ. ಜೈಲಿನಿಂದ ತಪ್ಪಿಸಿಕೊಂಡು ದರೋಡೆಕೋರರ ಗುಂಪು ಸೇರುತ್ತಾನೆ. ಆರಂಭದಲ್ಲಿ ದರೋಡೆ ಮಾಡಿದರೂ ಅನಂತರ ಹಲವಾರು ಸಂದರ್ಭಗಳಲ್ಲಿ ಹಳ್ಳಿಗರಿಗೆ ನೆರವಾಗುತ್ತಾನೆ. ಜಾತಿ, ದೇವರ ಹೆಸರಿನಲ್ಲಿ ನಡೆಯುತ್ತಿದ್ದ ಬಡ ರೈತರ ಶೋಷಣೆಯನ್ನು, ಮಠದ ಖಾತೆ ಪುಸ್ತಕವನ್ನು ಹರಿದು ಸಮಾಪ್ತಿಗೊಳಿಸುತ್ತಾನೆ. ಊರ ಶ್ರೀಮಂತರಿಂದ, ಸರ್ಕಾರೀ ಖಜಾನೆಯಿಂದ ಹಣ ಲೂಟಿ ಮಾಡಿ ಬಡ ಹಳ್ಳಿಗರಿಗೆ ಹಂಚುತ್ತಾನೆ. ಆದರೆ ಹಳ್ಳಿಯ ಜನರೇ ರಾಮನ ಋಣ ನೆನೆಯುವುದಿಲ್ಲ. ಹೀಗಾಗಿ ಮತ್ತೆ ಮೋಸಕ್ಕೆ ಒಳಗಾಗಿ ಪೊಲೀಸರ ಕೈವಶವಾಗುತ್ತಾನೆ.
ಕನ್ನೇಶ್ವರ ರಾಮ ಚಿತ್ರ ಆರಂಭವಾಗುವುದೇ ರಾಮನನ್ನು (ಅನಂತನಾಗ್) ಎತ್ತಿನ ಗಾಡಿಯ ಮೇಲೆ ನಿಲ್ಲಿಸಿ, ಸರಪಳಿಯಿಂದ ಬಿಗಿದು ಊರಿನಲ್ಲಿ ಪೊಲೀಸರು ಮೆರವಣಿಗೆ ಮಾಡುವ ದೃಶ್ಯದಿಂದ. ಇದರ ನಿರೂಪಣೆ ಎಷ್ಟು ಸ್ವಾರಸ್ಯಕರವಾಗಿದೆಯೆಂದರೆ, ಈ ಮೆರವಣಿಗೆ ಸಾಗುವಾಗ ನಿಂತು ನೋಡುವ ಜನರ ಮಧ್ಯೆ ಕ್ಯಾಮೆರಾ ನಿರ್ದಿಷ್ಟ ವ್ಯಕ್ತಿಯೊಬ್ಬನ ಮೇಲೆ ಬಿದ್ದಾಗ ಆ ಮನುಷ್ಯ ಹಾಗೂ ರಾಮನ ಸಂಬಂಧ ಹೇಳುವ ಕಥೆ ಆರಂಭವಾಗುತ್ತದೆ. ಕಥೆ ಮುಗಿದ ಬಳಿಕ ಮತ್ತೆ ಮೆರವಣಿಗೆ ದೃಶ್ಯ. ಮತ್ತೆ ಕ್ಯಾಮೆರಾದ ಫೋಕಸ್ ಮತ್ತೊಬ್ಬ ವ್ಯಕ್ತಿಯ ಮೇಲೆ. ಅಲ್ಲಿಂದ ಮತ್ತೆ ರಾಮನ ಕಥೆ. ಹೀಗಾಗಿ ಚಿತ್ರ ಆರಂಭವಾಗುವುದು ಹಾಗೂ ಅಂತ್ಯವಾಗುವುದು ಒಂದೇ ಶಾಟ್ನಲ್ಲಿ ಎಂಬುದು ವಿಶೇಷ.
ಈ ಚಿತ್ರಗಳನ್ನು ಹೊರತುಪಡಿಸಿ ಕೆ.ಎಸ್. ನರಸಿಂಹಸ್ವಾಮಿ ಅವರ ಕವನಗಳ ಆಧಾರಿತ ಹಾಗೂ ಸಿ. ಅಶ್ವತ್ಥ್ ಅವರ ಗಾಯನದಿಂದ ಖ್ಯಾತಿ ಪಡೆದ ‘ಮೈಸೂರ ಮಲ್ಲಿಗೆ’, ಬರಗೂರು ರಾಮಚಂದ್ರಪ್ಪ ಕಥೆ-ನಿರ್ದೇಶನದ ‘ಹಗಲುವೇಷ’, ಕೆಲ ವರ್ಷಗಳ ಹಿಂದೆ ತೆರೆಕಂಡ ‘ಸಂಗೊಳ್ಳಿ ರಾಯಣ್ಣ’ದಂತಹ ಬ್ರಿಟಿಷರ ವಿರುದ್ಧದ ಹೋರಾಟದ ಚಲನಚಿತ್ರಗಳು ಬಂದಿವೆ. ಆದರೆ ಸ್ವಾತಂತ್ರ್ಯ ಹೋರಾಟದ ಎರಡು ಶತಕಗಳು, ಹೋರಾಟ ನಡೆದ ಬಗೆ, ಆಧುನಿಕ ಮಾನವ ಇತಿಹಾಸದಲ್ಲಿಯೇ ಸುದೀರ್ಘ ಹಾಗೂ ಲಕ್ಷಾಂತರ ಜನರ ಬಲಿದಾನದಂತಹ ಘಟನೆಗಳು ನಡೆದಿದ್ದರೂ ಕನ್ನಡ ಚಿತ್ರರಂಗದಲ್ಲಿ ಈ ಕುರಿತು ಅಪೇಕ್ಷಿಸಿದಷ್ಟು ಚಲನಚಿತ್ರಗಳು ಬಂದಿಲ್ಲ. ಹಾಗೆಂದು, ಕರ್ನಾಟಕದಲ್ಲಿ ಸ್ವಾತಂತ್ರ್ಯ ಹೋರಾಟಗಾರರಿಗೇನೂ ಕೊರತೆಯಿಲ್ಲ. ಇಲ್ಲಿ ಸ್ವಾತಂತ್ರ್ಯ ಹೋರಾಟಗಾರರ ದೊಡ್ಡ ಪಟ್ಟಿಯೇ ಇದೆ. ಲಾಂಗು, ಮಚ್ಚು, ರೋಮ್ಯಾನ್ಸ್, ಗುಂಗಿನಿಂದ ಹೊರಬಂದು, ಕಣ್ತೆರದು ನೋಡಿದಾಗ ಮಾತ್ರ ಕನ್ನಡದಲ್ಲಿಯೂ ಸ್ವಾತಂತ್ರ್ಯ ಹೋರಾಟಗಾರರ ಬಯೋಪಿಕ್ಗಳು ಸಾಧ್ಯವಾಗಲಿವೆ. ಆದರೆ ಈ ರಿಸ್ಕ್ ತೆಗೆದುಕೊಳ್ಳಲು ನಿರ್ಮಾಪಕರು ಹಾಗೂ ನಿರ್ದೇಶಕರು ಮುಂದೆ ಬರಬೇಕಷ್ಟೆ.