ಸದಾ ನಗುವ ಮುಖ. ಒಟ್ಟಿನಲ್ಲಿ ಬಲೇ ಶೋಕಿಲಾಲ. ಏನೂ ಕೆಲಸ ಮಾಡದಿದ್ದರೂ ಸರಿ, ಬೆಳಗಾಗೆದ್ದು ಸ್ನಾನ ಮಾಡಿ ನೀಟಾಗಿ ಬಿಳಿ ಪಂಚೆ, ಮೇಲೊಂದು ಬಿಳಿಯ ಷರಟು. ಮನೆಯಿಂದ ಹೊರಟು ಆಂಜನೇಯನಿಗೊAದು ನಮಸ್ಕಾರ ಸಲ್ಲಿಸಿ ಊರ ಮಧ್ಯದ ಅರಳೀಕಟ್ಟೆಯ ಬಳಿ ಬಂದರೆ ಸಾಕು ಯಾರಾದರೊಬ್ಬರು ಮಿಕ ಬಲೆಗೆ ಬೀಳುವುದು ಗ್ಯಾರಂಟಿ. ಊರಿನಲ್ಲಿದ್ದವರಿಗೆಲ್ಲ ಇವನ ಸ್ವಭಾವ ಗೊತ್ತಿದ್ದರೂ ಒಬ್ಬರಲ್ಲ ಒಬ್ಬರು ಖೆಡ್ಡಾಕ್ಕೆ ಬೀಳಿಸುವ ಇವನ ಪರಿಗೆ ತಲೆಬಾಗುತ್ತಿದ್ದರೆಂಬುದರಲ್ಲಿ ಆಶ್ಚರ್ಯವಿಲ್ಲ.
ಊರು-ಕೇರಿ ಎಂದ ಮೇಲೆ ಎಲ್ಲ ಸ್ವಭಾವಗಳ ಜನರನ್ನು ಕಾಣಬಹುದು. ಹುಟ್ಟಿನಿಂದಲೇ ಕೆಲವರಿಗೆ ಸೋಮಾರಿತನವೆಂಬುದು ಬೆಳೆದುಬಂದಿದ್ದು ವ್ಯವಸಾಯ ಅಥವಾ ಮತ್ತೊಂದರ ಯಾವ ಕೆಲಸವನ್ನೂ ಮಾಡದೆ ಅರಳಿಕಟ್ಟೆಯ ಮೇಲೆ ಕುಳಿತು ಹರಟೆ ಹೊಡೆಯುತ್ತಾ ಪರಸ್ಥಳದಿಂದ ಬಂದವರು ಏನಾದರೂ ವಿಚಾರಿಸಿದರೆ ಸಾಕು, “ಎಯ್ ನಂಗೊತ್ತು ಬನ್ನಿ, ನಾ ತೋರಿಸ್ತೀನಿ” ಅಂತಲೊ, ಇಲ್ಲ “ನಾನು ಒಂದ್ಮಾತು ಹೇಳಿದ್ರೆ ಸಾಕು ನಿಮ್ಮ ಕೆಲಸ ಆದಂತೆ” ಎಂದೊ – ಬಂದವರಿಗೆ ಆಸೆಹುಟ್ಟಿಸಿ ತಿಂಡಿ-ಕಾಫಿಗೆ ಕಾಸು ವಸೂಲಿ ಮಾಡಿಕೊಂಡು ಎಲ್ಲೋ ಒಂದು ಕಡೆ ಅವರನ್ನು ಸೇರಿಸಿ ಮಾಯವಾಗಿ ಬಿಡುತ್ತಾರೆ.
ಇವರ ಮತ್ತೊಂದು ಸ್ವಭಾವವೆಂದರೆ ನಾಲ್ಕಾರು ಜನ ಸೇರಿ ಮಾತನಾಡುತ್ತ ಕುಳಿತಿದ್ದರೆ ಮಧ್ಯೆ ಹೋಗಿ ತಮಗೆ ತೋಚಿದ ಸಲಹೆ ಕೊಡುವುದಲ್ಲದೆ, ಯಾರು ಹೇಳಿದರೂ ತಾಳ ಹಾಕುತ್ತಾ ಯಾರ ಕೈ ಮೇಲಾಗುತ್ತದೆಂದು ಕಾಣುತ್ತದೊ ಅಂಥವರನ್ನು ಸಮರ್ಥಿಸಿ ಪುಡಿಕಾಸಿಗೆ ದಾರಿಮಾಡಿಕೊಂಡುಬಿಡುತ್ತಾರೆ. ಅದಕ್ಕೇ ಅಂಥವರನ್ನು ‘ತಾಳ-ತಂಟ್ರಿ’ ಎಂದು ಕರೆಯುವುದು. ಸಂಗೀತಗಾರರಿಗೆ ತಾಳಹಾಕುತ್ತ ಪಕ್ಕದಲ್ಲಿ ಕೂರುವಂತೆ, ಇವರು ತಮಗೇನಾದರೂ ಗಿಟ್ಟುತ್ತದೆ ಎಂಬುದು ಗ್ಯಾರಂಟಿಯಾದರೆ ಅಂಥವರ ಪರ ತಾಳ ಹಾಕಲು ಪ್ರಾರಂಭಿಸುತ್ತಾರೆ. ತಂತ್ರಿ ಅಂದರೆ ಬುದ್ಧಿವಂತಿಕೆ. ಹೌದು, ಇದಕ್ಕೆ ಬುದ್ಧಿವಂತಿಕೆಯೂ ಬೇಕಲ್ಲವೇ! ಆದರೆ ಈ ಪದ ತಾಳ-ತಂತ್ರಿ ಎಂದಿದ್ದುದು ಆಡುಭಾಷೆಯಲ್ಲಿ ತಾಳ-ತಂಟ್ರಿ ಎಂದಾಗಿದೆ.
ಆದರೆ ನಾಲ್ಕಾರು ಜನ ಸೇರಿದ ಕಡೆ ಎಲ್ಲರಿಗೂ ಒಪ್ಪಿಗೆಯಾಗುವಂತೆ ಮಾತನಾಡಲು ಬುದ್ಧಿವಂತಿಕೆಯೂ ಬೇಕು. ಚಾಕಚಕ್ಯತೆ, ನಯವಂತಿಕೆ, ಕೈಚಳಕ, ಬುದ್ಧಿ – ಈ ಎಲ್ಲ ಗುಣಗಳನ್ನು ಮೈಗೂಡಿಸಿಕೊಂಡಿರುವವರನ್ನು ಹಳ್ಳಿಯ ಕಡೆ “ಅವನ್ ಬಿಡಪ್ಪ, ಬರೇ ತಾಳ-ತಂಟ್ರಿ ನನ್ಮಗ” ಎಂದೇ ಬಿರುದು ಕೊಡುತ್ತಾರೆ. ಇವರಿಗೆ ಮೈಬಗ್ಗಿಸಿ ಕೆಲಸ ಮಾಡಲು ಆಗದಿದ್ದರೂ ಕಾಸುಗಿಟ್ಟಿಸುವ ಕರಾಮತ್ತು ಮಾತ್ರ ಕರತಲಾಮಲಕ.
ನಮ್ಮ ಊರಲ್ಲೂ ಒಬ್ಬ ತಾಳ-ತಂಟ್ರಿ ಇದ್ದ. ಸಾಮಾನ್ಯ ಎತ್ತರ, ದುಂಡು ಮುಖ, ಕೆಂಪುಮಿಶ್ರಿತ ಕಂದುಬಣ್ಣ, ನೋಡಲು ಲಕ್ಷಣವಾಗಿಯೂ ಇದ್ದ. ಮಠದ ಸ್ವಾಮಿಗಳಿಗೆ ಹೇಳಿಮಾಡಿಟ್ಟಂತಹ ಸದಾ ನಗುವ ಮುಖ. ಒಟ್ಟಿನಲ್ಲಿ ಬಲೇ ಶೋಕಿಲಾಲ. ಏನೂ ಕೆಲಸ ಮಾಡದಿದ್ದರೂ ಸರಿ, ಬೆಳಗಾಗೆದ್ದು ಸ್ನಾನ ಮಾಡಿ ನೀಟಾಗಿ ಡ್ರೆಸ್ ಮಾಡಿಕೊಂಡು ಹಾಜರಾಗುತ್ತಿದ್ದ. ಡ್ರೆಸ್ ಎಂದರೆ ಬಿಳಿ ಪಂಚೆ, ಮೇಲೊಂದು ಬಿಳಿಯ ಷರಟು. ಹಣೆಗೆ ಸಣ್ಣಗೆ, ಕಣ್ಣಿಗೆ ಕಂಡೂ ಕಾಣಿಸದಂತೆ ಎಳೆದ ಕೆಂಪುಗೆರೆ. ಮನೆಯಿಂದ ಹೊರಟು ಆಂಜನೇಯನಿಗೊಂದು ನಮಸ್ಕಾರ ಸಲ್ಲಿಸಿ ಊರ ಮಧ್ಯದ ಅರಳೀಕಟ್ಟೆಯ ಬಳಿ ಬಂದರೆ ಸಾಕು ಯಾರಾದರೊಬ್ಬರು ಮಿಕ ಬಲೆಗೆ ಬೀಳುವುದು ಗ್ಯಾರಂಟಿ. ಊರಿನಲ್ಲಿದ್ದವರಿಗೆಲ್ಲ ಇವನ ಸ್ವಭಾವ ಗೊತ್ತಿದ್ದರೂ ಒಬ್ಬರಲ್ಲ ಒಬ್ಬರು ಇವನ ಬಲೆಗೆ ಬಿದ್ದೇ ಬೀಳುತ್ತಿದ್ದರೆಂದರೆ ಇವನ ಮಾತಿನ ವರಸೆಗೆ, ಕೇಳುಗರು ಇವನ ಮಾತು ಕೇಳಿದ ತಕ್ಷಣ ಒಪ್ಪಿಕೊಂಡುಬಿಡುವಂತಹ ಮಾತಿನ ಮೋಡಿಗೆ, ನಿಜದ ತಲೆಯ ಮೇಲೆ ಹೊಡೆದಂತೆ ನಂಬಿಸುವ ರೀತಿಗೆ, ಎದುರಾಳಿಯನ್ನು ಖೆಡ್ಡಾಕ್ಕೆ ಬೀಳಿಸುವ ಪರಿಗೆ ತಲೆಬಾಗುತ್ತಿದ್ದರೆಂಬುದರಲ್ಲಿ ಆಶ್ಚರ್ಯವಿಲ್ಲ.
ನಮ್ಮಪ್ಪನಂತಹ ಬುದ್ಧಿಯಿರುವವರಿಗೂ ಒಮ್ಮೆ ಚಳ್ಳೇಹಣ್ಣು ತಿನ್ನಿಸಿದನೆಂದರೆ ಇನ್ನು ಅನಕ್ಷರಸ್ಥರ ಪಾಡೇನು?
ಅದು ನಡೆದದ್ದು ಹೀಗೆ. ಹೊಲದ ಕೆಲಸಕ್ಕೆ ಆಳೊಬ್ಬನನ್ನು ಗೊತ್ತುಮಾಡಿದ್ದರು. ಕೆಲಸಕ್ಕೆ ಬಂದವ ‘ಐದು ರೂಪಾಯಿಯಿದ್ದರೆ ಕೊಡಿ. ಶೆಟ್ಟರ ಅಂಗಡಿಯಲ್ಲಿ ತಿಂಡಿ ಕಟ್ಟಿಸಿಕೊಂಡು ಹೋಗ್ತೇನೆ’ ಎಂದ. ಅಪ್ಪ ಒಳಗೆ ಹೋಗಿ ದುಡ್ಡು ತರುವಷ್ಟರಲ್ಲಿ ಆತ ಎಲ್ಲೋ ಹೊರಟುಹೋಗಿದ್ದ. ದುಡ್ಡು ಬೇಕಾದವ ಬರ್ತಾನೆ, ಎಲ್ಲಿ ಹೋಗ್ತಾನೆ ಎಂದು ನೋಟನ್ನು ಕೈಯಲ್ಲಿ ಹಿಡಿದ ಅಪ್ಪ ಮನೆಯಂಗಳದ ತುದಿಯಲ್ಲಿ ನಿಂತಿದ್ದರು. ಅಷ್ಟರಲ್ಲಿ ಈ ತಾಳ-ತಂಟ್ರಿ ಬಂದ. “ಏನ್ಸೋಮಿ ಯಾರನ್ನೋ ಹುಡುಕ್ತಾಯಿದ್ಹಂಗಿದೆ” ಎಂದ. “ಗಿಡ್ಡನನ್ನು. ಹೊಲದ ಕೆಲಸಕ್ಕೆ ಹೇಳಿದ್ದೆ. ದುಡ್ಡು ತರೋದ್ರೊಳಗೆ ಎಲ್ಲೋ ಹೊರಟುಹೋದನಲ್ಲ” ಎಂದರು. “ಗಿಡ್ಡನಾ, ಸೆಟ್ರ ಅಂಗಡಿ ತಾವ ನಿಂತಿದ್ನಲ್ಲ. ಕೊಡಿ ನಾ ಕೊಡ್ತೀನಿ. ನಾನು ಅತ್ಲಾಗೇ ಹೊಂಟಿವ್ನಿ” ಎಂದು ಕೈಯಲ್ಲಿದ್ದ ಹಣವನ್ನು ಕೊಡುವುದೊ, ಬೇಡವೊ ಎಂದು ಅನುಮಾನಿಸಲೂ ಅವಕಾಶ ಕೊಡದೆ ಕಿತ್ತುಕೊಂಡು ಹೊರಟೇ ಹೋದ. ಸರಿ ಅಂಗಡಿಯ ಕಡೆಗೇ ಹೋಗ್ತಾಯಿದ್ದಾನಲ್ಲ ಕೊಡ್ತಾನೆ, ಎಲ್ಲಿ ಹೋಗ್ತಾನೆ ಎಂದು ನೋಡುತ್ತಾ ನಿಂತರು. ಆದರೆ ಅಂಗಡಿಯ ಕಡೆ ಹೊರಟ ತಾಳ-ತಂಟ್ರಿ ಮಾರ್ಗಮಧ್ಯದಲ್ಲೇ ಹಿತ್ತಲ ಕಡೆಯಿಂದ ಹಿಂದಿನ ಬೀದಿ ತಲಪಿ ಊರ ಹೊರಗೆ ನಡೆದ.
ತಿಂಡಿ ತಿಂದ ಅಪ್ಪ, ಗಿಡ್ಡ ಎಷ್ಟು ಕೆಲಸ ಮಾಡಿದ್ದಾನೆಂದು ನೋಡಲು ಹೊಲದ ಕಡೆ ಹೋದರು. ಅವನ ಪಾಡಿಗೆ ಅವನು ಕೆಲಸ ಮಾಡುತ್ತಿದ್ದುದನ್ನು ಕಂಡು ತಾಳ-ತಂಟ್ರಿ ಕೊಟ್ಟ ಹಣದಿಂದಲೇ ತಿಂಡಿ ತಿಂದುಬಂದು ಕೆಲಸ ಮಾಡುತ್ತಿರಬೇಕೆಂದುಕೊಂಡ ಅಪ್ಪ ಮಾಡಬೇಕಾದ ಕೆಲಸ ತಿಳಿಸಿ ಮನೆಗೆ ಬಂದರು.
ಕೆಲಸ ಮುಗಿಸಿದ ಗಿಡ್ಡ ಸಂಜೆ ಬಂದು ಕೂಲಿ ಕೇಳಿದಾಗ ‘ಐದು ರೂಪಾಯಿ ಕೊಟ್ಟು ಕಳಿಸಿದ್ನಲ್ಲ, ತಾಳ-ತಂಟ್ರಿ ಕೈಯಲ್ಲಿ’ ಎಂದರು. ಅದಕ್ಕೆ ಗಿಡ್ಡ ‘ತಾಳವೂ ಕಾಣೆ, ತಂಟ್ರಿಯೂ ಕಾಣೆ. ಯಾರೂ ಕೊಡ್ಲಿಲ್ಲ. ಸೆಟ್ರ ಅಂಗಡೀಲಿ ಸಾಲ ಹೇಳಿ ತಿಂಡಿ ಕಟ್ಟಿಸ್ಕೊಂಡ್ಹೋದೆ’ ಎಂದಾಗ, ಅಪ್ಪನಿಗೆ ಮೋಸ ಹೋಗಿರುವುದು ಗೊತ್ತಾಯಿತು. ಗಿಡ್ಡನಿಗೆ ಕೂಲಿಹಣ ಕೊಟ್ಟು ಕಳುಹಿಸಿ ಮಾಡ್ತೀನಿ ತಾಳು ಆ ತಾಳ-ತಂಟ್ರಿಗೆ ಎಂದು ಕಾದರು.
ಯಥಾಪ್ರಕಾರ ಮಾರನೆಯ ದಿನ ತಾಳ-ತಂಟ್ರಿ ತನ್ನ ಕೆಲಸಕ್ಕೆ ಕೇಂದ್ರಸ್ಥಾನವಾಗಿದ್ದ ಅರಳೀಕಟ್ಟೆಯ ಬಳಿ ಬಂದಾಗ ಅಪ್ಪ ಹಿಡಿದುಕೊಂಡರು. ಯಾರಿಗೇನು ಮೋಸ ಮಾಡಿದರೂ ಈ ತಾಳ-ತಂಟ್ರಿಯ ಒಂದು ಗುಣವನ್ನು ಮೆಚ್ಚಬೇಕಾದ್ದೆ. ಮೋಸ ಮಾಡಿದ್ದೇನೆ, ಹಿಡಿದುಕೊಂಡರೆ ಉತ್ತರ ಹೇಳುವುದು ಕಷ್ಟ, ತಲೆ ತಪ್ಪಿಸಿಕೊಂಡು ಓಡಾಡಬೇಕು ಎಂದು ಅವನೆಂದೂ ಹಾಗೆ ಮಾಡುತ್ತಿರಲಿಲ್ಲ. ಎಲ್ಲವೂ ನೇರಾ-ನೇರ; ಮೊಕ್ತಾ-ಮೊನಚು; ಹಸ್ತ-ಹಗುರ.
ಕಂಡದ್ದೇ ತಡ ಅಪ್ಪ “ಲೋ, ನಿಂಗೇನು ಮಾನ-ಮರ್ಯಾದೆ ಇದೆಯೋ ಇಲ್ವೋ? ತಿಂಡಿ ತಿಂದು ಹೊಲದ ಕೆಲಸ ಮಾಡೋಕೆ ಹೋಗುವ ಗಿಡ್ಡನಿಗೆ ಹಣ ಕೊಡು ಅಂದ್ರೆ ಎತ್ಕೊಂಡು ಹೊರಟ್ಹೋಗೋದಾ? ಸ್ವಲ್ಪನಾದ್ರೂ ವಿವೇಕ ಬೇಡ್ವಾ? ಯರ್ದೋ ಹಣ ಹಾಗೆ ಮಾಡಬಾರದು ಎಂಬ ಪರಿಜ್ಞಾನ ಇಲ್ವಾ? ಹಣಕ್ಕೆ ಕಾದಿದ್ದ ಗಿಡ್ಡ ಹಸಿದುಕೊಂಡು ಹೊಲದ ಕೆಲ್ಸ ಹೇಗೆ ಮಾಡ್ತಾನೆ ಅನ್ನೋ ಯೋಚನೆನಾದ್ರೂ ಮಾಡ್ಲಿಲ್ವಾ?” – ಹೀಗೆ ಸಾಕಾಗೋವರೆಗೂ ಬೈದ ಅಪ್ಪ ಅವರೇ ಸುಮ್ಮನಾಗಬೇಕಾಯಿತು. ಬೈಯುತ್ತಿದ್ದರೆ ಅವನೇನು ಅದನ್ನು ಸೀರಿಯಸ್ಸಾಗಿ ತೆಗೆದುಕೊಳ್ಳಲೇ ಇಲ್ಲ. ಅವನಿಗೆ ಇವೆಲ್ಲ ಸಾಮಾನ್ಯ ಅಲ್ಲವೇ! ನಗುತ್ತಲೇ ಬೈದದ್ದನ್ನೆಲ್ಲಾ ಪ್ರಸಾದ ಎಂದು ಸ್ವೀಕರಿಸಿದ ತಾಳ-ತಂಟ್ರಿ ವಿವೇಕಬೇಡ್ವಾ ಅಂದ್ರಿ, ಪರಿಜ್ಞಾನ ಇಲ್ವಾ ಅಂದ್ರಿ, ಯೋಚನೆ ಮಾಡ್ಲಿಲ್ವಾ ಅಂದ್ರಿ – ಎಲ್ಲಾ ಸರಿ. ನಿನ್ನೆಯಿಂದ ನಂನ್ಹೆಂಡ್ರು ಒಂದೇ ಗಲಾಟೆ ಮಾಡ್ತಿದ್ಳು, ‘ಯಳಂದೂರಿನಲ್ಲೊಂದು ಮದುವೆಯಿದೆ. ಬಂದು ಕರೆದವ್ರೆ, ಹ್ವಾಗ್ದೇದ್ರೆ ಅದೇನು ಚೆಂದ, ಅವರು ಮುಯ್ಯಿಕ್ಕುವಾಗ ತಗಂಡಿಲ್ವಾ’ ಅಂದ್ಳು.
“ಯೋಚ್ನೆ ಮಾಡ್ದೆ, ನಿಮ್ಮ ಐದು ರೂಪಾಯಿ ಕೈಗೆ ಬಂದದ್ದೇ ತಡ ವಿವೇಕ ಕೆಲ್ಸ ಮಾಡ್ತು. ಹೋಗು ಮದುವೆಗೆ ಅಂತಾ ಪರಿಜ್ಞಾನ ಹೇಳ್ತು. ಬುಡಿ ಬುದ್ದಿ. ಮದುವೆ ಊಟ ಮಾಡ್ಕಂಡು ತಾಲ್ಲೂಕು ಆಪೀಸುತಾವ ಹೋದ್ನ. ನಮ್ಮ ನಂಜಣ್ಣ ನಂಗೆ ಕಾದಿದ್ಹಂಗೆ ಹಿಡಕಂಡ. ಜಮೀನು ರಿಜಿಸ್ಟಿç ಇತ್ತು. ಸಾಕ್ಷಿ ಹಾಕು ಐದು ರೂಪಾಯಿ ಕೊಡ್ತೀನಿ ಅಂದ್ರು. ಹ್ವಾದೆ. ಅದಕ್ಕೆ ಈಗ ನಂಜಣ್ಣನ ತಾವ್ಕೆ ಹೊಂಟಿವ್ನಿ. ಹೀಗ್ ಹೋಗಿ ಇಸ್ಕಂಡು ಹಾಗ್ ಬಂದ್ಬುಡ್ತೀನಿ” ಎಂದು ನಡೆದೇಬಿಟ್ಟ.
ಈಗ ಅಪ್ಪನಿಗೆ ಅವನ ಮಾತನ್ನು ನಂಬದೆ ಬೇರೆ ದಾರಿಯೇ ಇರಲಿಲ್ಲ. ಒಂದು ಪಕ್ಷ ನಂಬಿದ್ರೆ ಐದು ರೂಪಾಯಿ ಬಂದ್ರೂ ಬರಬಹುದು. ನಂಬದಿದ್ರೆ ಅದೂ ಇಲ್ಲ – ಎಂದು ಯೋಚಿಸುತ್ತ ಮನೆಯೊಳಗೆ ಹೋದರು. “ಅವ್ನ ನಂಬ್ಕೊಂಡು ಹಣ ಕೊಟ್ಟು ಕಳಿಸಿದ್ರೆ ಅದು ಹಿಂದಕ್ಕೆ ಬರುತ್ತಾ ಎಳ್ಳು-ನೀರು ಬಿಟ್ಬಿಡಿ” ಎಂದಳು ಅಮ್ಮ.
ಬೆಳಗಾಗೆದ್ದು ಅರಳೀಕಟ್ಟೆ ಕಡೆ ನೋಡುವುದು ಅಪ್ಪನಿಗೆ ತಪ್ಪಲಿಲ್ಲ. ಹದಿನೈದು ದಿವಸ ತಾಳ-ತಂಟ್ರಿ ಕಾಣಿಸಲೇ ಇಲ್ಲ. ಅಲ್ಲಾ ನನ್ಗೂ ಮೋಸ ಮಾಡ್ಬಿಟ್ನಲ್ಲ ಎಂದುಕೊAಡರು. ಒಂದು ದಿವಸ ಬಂದ. ಅಪ್ಪನ ಮುಖ ಕಂಡ ತಕ್ಷಣ ಸಿಕ್ಕೊಂಡೆ ಇವತ್ತು ಎಂಬ ಭಾವದಿಂದ ಅಪ್ಪನ ಮುಖವನ್ನೇ ನೋಡುತ್ತಾ ಬೈಯುತ್ತಾರೆ ಬೈಯಲಿ, ಬೈಯುವುದು ಅವರ ಹಕ್ಕು, ಬೈಸಿಕೊಳ್ಳುವುದು ನನ್ನ ಹಕ್ಕು ಎಂಬಂತೆ ನಿಂತ. ಅದೇಕೋ ಅಪ್ಪನಿಗೆ ಕೋಪ ಒತ್ತರಿಸಿಕೊಂಡು ಬರುತ್ತಿದ್ದರೂ ಬೈಯದೆ ಅವನ ಮುಖವನ್ನೇ ನೋಡುತ್ತಾ ನಿಂತುಬಿಟ್ಟರು. ಬೈದರೂ ಹಣ ಬರುವುದಿಲ್ಲ ನನ್ನ ಎನರ್ಜಿ ವೇಸ್ಟು. ಬೈಯದಿದ್ದರೆ ನಿರೀಕ್ಷೆನಾದ್ರೂ ಇಟ್ಕೋಬೋದು ಎಂದು ಯೋಜಿಸಿರಬೇಕು ಅಪ್ಪ.
ಹೀಗೆ ಸ್ವಲ್ಪ ಹೊತ್ತು ದೃಷ್ಟಿಯುದ್ಧ ನಡೆದ ನಂತರ ತಾಳ-ತಂಟ್ರಿಯೇ ಬಾಯಿ ತೆರೆದ. “ಸ್ವಾಮಿ, ನಮ್ಮ ಮಾವನವರಿಗೆ ಹುಷಾರು ತಪ್ಪಿ, ಅರ್ನ ನೋಡ್ಕೊಳ್ಳೋರು ಯಾರೂ ಇಲ್ದೆ ಗೂಳಿಪುರಕ್ಕೆ ಹೊಂಟೋಗಿದ್ನಾ” ಎಂದು ಮಾತು ಮುಗಿಸುವಷ್ಟರಲ್ಲಿಯೇ ಅಪ್ಪ “ನಿನ್ನ ಹೆಣಬಿತ್ತು. ನೀ ಯರ್ನೋ ನೋಡ್ಕೋಳೋಕ್ಕೆ ಹೋಗೋವ್ನು, ನನ್ನ ಹಣ ಕೊಟ್ಟು ಹೋಗಬೇಕಲ್ವಾ? ಮತ್ಯಾಕೆ ಕಾಣಿಸ್ಕೊಂಡೆ, ಹಾಳಾಗಿ ಹೋಗು” ಎಂದು ಮನೆಯೊಳಕ್ಕೆ ಹೋಗಲು ತಿರುಗಿದರು.
“ಸ್ವಾಮಿ” ಎಂದ.
“ಮತ್ತಿನ್ನೇನು. ಇನ್ನೊಂದು ಐದು ರೂಪಾಯಿ ಬೇಕಿತ್ತಾ? ಅಷ್ಟೆ ತಾನೆ!” ಎಂದರು ಬಂದ ಕೋಪದಲ್ಲಿ.
“ಅಲ್ಲಾ ಸ್ವಾಮಿ…”
“ಹೊರಟುಹೋಗು. ಐದು ರೂಪಾಯಿ ವಾಪಸ್ಸು ಕೊಡೋರ್ಗೂ ಬರಬೇಡ ಈ ಕಡೆ” ಎಂದು ತಿರುಗಿದಾಗ,
“ತಗಳ್ಳಿ ಸ್ವಾಮಿ. ಹಣ ಕೊಡೋಕೇ ಬಂದ್ರೂ ಬೈತೀರಲ್ಲ” ಎಂದು ಐದು ರೂಪಾಯಿ ನೋಟನ್ನು ಜಗುಲಿಯ ಮೇಲಿಟ್ಟ.
ಅಪ್ಪನಿಗೆ ಆಶ್ಚರ್ಯ. ಇದೆಲ್ಲಿಂದ ತಂದ ಈ ಐದು ರೂಪಾಯಿಯನ್ನು? ಹೇಗಾದರಿರಲಿ ಎಂದು ಜೇಬಿಗೆ ಸೇರಿಸಿದರು. ತಾಳ-ತಂಟ್ರಿ ಅತ್ತ ನಡೆದ. ಇನ್ನು ಯಾರ ಜೇಬಿಗೆ ಕತ್ತರಿ ಹಾಕಲು ಹೋಗ್ತಿದ್ದಾನೋ ಎಂದುಕೊಂಡು ಮನೆಯೊಳಗೆ ನಡೆದರು ಅಪ್ಪ.
* * *
ಸಿನಿಮಾ ಯುಗ ಪ್ರಾರಂಭವಾಗುವುದಕ್ಕೆ ಮುಂಚೆ ಜನರಿಗೆ ಮನರಂಜನೆಯಾಗಿ ಹರಿಕಥೆ, ಗಮಕ, ಬಯಲುನಾಟಕಗಳೇ ಪ್ರಮುಖವಾಗಿದ್ದ ಕಾಲ ಒಂದಿತ್ತು. ಬೇಸಿಗೆ ಬಂದಿತೆAದರೆ ಹಳ್ಳಿಗಳಲ್ಲಿ ನಾಟಕಗಳ ಪ್ರಾಕ್ಟೀಸು ಪ್ರಾರಂಭವಾಗುತ್ತಿತ್ತು. ಆಗ ನಾಟಕ ಕಲಿಸುವ ಮೇಸ್ಟಿçಗೆ, ಪರದೆ ಇಟ್ಟ ಕಂಪನಿಗಳಿಗೆ, ನಾಟಕದಲ್ಲಿ ಪಾತ್ರ ಮಾಡುವ ಕಲಾವಂತಿಯರಿಗೆ ಡಿಮ್ಯಾಂಡೊ ಡಿಮ್ಯಾಂಡು.
ನಮ್ಮೂರಲ್ಲೂ ಸಂಪೂರ್ಣ ರಾಮಾಯಣ ನಾಟಕದ ಪ್ರಾಕ್ಟೀಸು ಪ್ರಾರಂಭವಾಯಿತು. ನಾಟಕದ ಮೇಸ್ಟಿçಗೆ ಕಿರುಚಿ ಗಂಟಲೊಣಗಿಸಿಕೊಳ್ಳುತ್ತಾರೆAದು ರಾಮನ ಪಾತ್ರಧಾರಿ ಶಂಕರ ಪ್ರತಿದಿನ ಬಾದಾಮಿಹಾಲು ತಂದುಕೊಡುತ್ತಿದ್ದ. ಆದರೆ ಪಾತ್ರಧಾರಿಗಳು ಕಿರುಚಿದರೆ ಕುಡಿಯಲು ಇವರಿಗೇನಾದರೂ ಬೇಡವೇ? ಗಿರಿಜವ್ವನೆಂಬ ವಯಸ್ಸಾದ ಹೆಂಗಸು ಚಿಲ್ಲರೆ ಅಂಗಡಿಯಿಟ್ಟುಕೊAಡಿದ್ದಳು. ಅವಳಿಗೆ ಹೇಳಿ ‘ದುಡ್ಡು ಕೊಡುತ್ತೇವೆ, ಪ್ರತಿದಿನ ೮-೧೦ ಜನರಿಗೆ ಟೀ ಮಾಡಿಕೊಡು’ ಎಂದು ತಿಳಿಸಿದರು. ಆಕೆಯು ನಾಲ್ಕು ಕಾಸು ಬರುತ್ತದೆಂದು ಒಪ್ಪಿಕೊಂಡಳು. ಆದರೆ ಪ್ರತಿದಿನ ಅವಳ ಮನೆಗೆ ಹೋಗಿ ತರಬೇಕಲ್ಲ. ತಾಳ-ತಂಟ್ರಿ ಇದಕ್ಕೆಲ್ಲ ಸಿದ್ಧವಾಗೇ ಇದ್ದ. ‘ನೀವು ಪ್ರಾಕ್ಟೀಸು ಮಾಡಿ, ನಾ ಟೀ ತತ್ತೀನಿ’ ಎಂದು ಹಣಪಡೆದು ಟೀ ತಂದುಕೊಡತೊಡಗಿದ. “ನಾಟಕ ಚೆನ್ನಾಗಿ ಬರ್ತಾಯಿದೆ. ನಿಂಗೆ ಶ್ಯಾನುಭೋಗರ ಜಗುಲಿ ಮ್ಯಾಲೆ ಚಾಪೆ ಹಾಸಿ ಕೊಡ್ತೀನಿ. ನಾಟಕ ನೋಡು” ಎಂದು ಗಿರಿಜವ್ವನಿಗೆ ಪುಸಲಾಯಿಸಿ ಹಣ ಕಡಮೆ ಕೊಟ್ಟು ಒಂದೆರಡು ಲೋಟ ಟೀ ಜಾಸ್ತಿ ಮಾಡಿಸಿ ತಂದು ತಾನೂ ಟೀ ಕುಡಿಯುತ್ತಿದ್ದುದಲ್ಲದೆ ಒಂದೆರಡು ರೂಪಾಯಿಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದ.
ನಾಟಕದ ಪ್ರದರ್ಶನದ ದಿನವೂ ಬಂತು. ಮುಖ್ಯರಸ್ತೆಗಳಿಗೆಲ್ಲ ಮಾವಿನ ತೋರಣ ಕಟ್ಟಿ ಅಲಂಕರಿಸಿದರು. ನಾಗಣ್ಣನಿಗೆ ಹನುಮಂತನ ಪಾತ್ರ, ಸ್ವಲ್ಪ ಮುಖವೂ ಹಾಗೇ ಇದ್ದುದರಿಂದ ಆ ಪಾತ್ರ ಅವನಿಗೆ ಚೆಂದಾಗಿ ಒಪ್ಪುತ್ತಿತ್ತು. ಚೆನ್ನಾಗಿಯೂ ಅಭಿನಯಿಸುತ್ತಿದ್ದ. ನಾಟಕದ ದಿವಸ ಎಲ್ಲರೂ ನಾಗಣ್ಣನ ಹನುಮಂತನ ಪಾತ್ರ ನೋಡಲು ಕಾದರು. ಆ ದೃಶ್ಯವೂ ಬಂತು. ಲಂಕೆಯಲ್ಲೆಲ್ಲಾ ಕುಣಿದು ಕುಪ್ಪಳಿಸಿ ಹಾಳುಗೆಡವತೊಡಗಿದಾಗ ರಾಕ್ಷಸರು ಕಪಿಯನ್ನು ಹಿಡಿದು ರಾವಣನ ಆಸ್ಥಾನಕ್ಕೆ ಕರೆತಂದರು. ಅಲ್ಲಿ ಹನುಮಂತನು ತನ್ನ ಬಾಲವನ್ನು ಬೆಳೆಸಿಕೊಂಡು ರಾವಣನಿಗೇನು ಕಡಮೆ ಎನ್ನುವಂತೆ ಬಾಲವನ್ನೇ ಸುತ್ತಿ ರಾವಣನ ಸಿಂಹಾಸನಕ್ಕಿAತಲೂ ಎತ್ತರವಾಗಿಯೇ ಕುಳಿತಿದ್ದ. ಹನುಮಂತನ ಬಾಲ ಸುತ್ತಿದಂತಿರಬೇಕಲ್ಲ. ಎತ್ತರವಾದ ಸ್ಟೂಲಿಗೆ ಬಾಲವನ್ನು ಮೊದಲೇ ಸುತ್ತಿ ಸಿದ್ಧಪಡಿಸಿದ್ದು ಪರದೆ ಎತ್ತಿದ ತಕ್ಷಣ ಹನುಮಂತ ರಾವಣನ ಆಸ್ಥಾನದಲ್ಲಿ ಅವನಿಗಿಂತ ಎತ್ತರದಲ್ಲಿ ಕುಳಿತಿದ್ದು ಕಂಡು ಜನ ‘ಹೋ’ ಎಂದು ಜಯಕಾರ ಹಾಕಿದರು.
ಕಪಿಯು ಲಂಕೆಯ ಅಶೋಕವನವನ್ನೆಲ್ಲಾ ಹಾಳುಗೆಡವಿದೆ ಎಂಬ ಕೋಪದಿಂದ ರಾವಣನು ಆರ್ಭಟಿಸುತ್ತಾ ಹನುಮಂತನನ್ನು ಪ್ರಶ್ನಿಸತೊಡಗಿದ.
ಏಳೇಳು ಶರಧಿಯು ಏಕವಾಗಿದೆ ಕಂಡ್ಯ
ಹೇಗೆ ಬಂದೆ ಹೇಳೊ ಕೋತಿ
ಎಂದದ್ದಕ್ಕೆ,
ಏಳು ಶರಧಿಯು ಎನಗೆ ಏಳು ಕಾಲುವೆಯು
ತೂಳಿ ಲಂಘಿಸಿ ಬಂದೆ ಭೂತ
ಹೀಗೆ ಹನುಮಂತನು ಉತ್ತರಿಸುತ್ತಾ ಹೋದನು.
ರಾವಣನು ಕೇಳಿದ ಪ್ರಶ್ನೆಗಳಿಗೆಲ್ಲ ಹನುಮಂತನ ಪ್ರತ್ಯುತ್ತರ. ಒಂಭತ್ತು ನುಡಿಗಳ ಈ ಹಾಡನ್ನು ಕೇಳಿದ ಜನ ಹನುಮಂತನ ಪಾತ್ರವನ್ನು ಒಪ್ಪಿಕೊಂಡು ಹುಚ್ಚೆದ್ದು ಕುಣಿದರು. ಹನುಮಂತನದು ಎಂತಹ ನಟನೆ. ರಾವಣನಿಗೆ ಹೇಗೆ ಉತ್ತರಿಸಿಬಿಟ್ಟ. ‘ಹೆಂಡತಿಯನ್ನು ಕದ್ದೊಯ್ದರೆ ರಾಮರು ಬಿಟ್ಟಾರೆಯೇ? ಸ್ವಲ್ಪ ಇರು ನಿನ್ನ ಹತ್ತು ತಲೆಯನ್ನು ಕಡಿಯದೆ ಬಿಡರು’ ಎಂದು ರಾವಣನನ್ನು ನೋಡುತ್ತಾ ಹೆಂಗಸರೆಲ್ಲರೂ ನಟಿಕೆ ಮುರಿದರು. ಎಲ್ಲರೂ ಹನುಮಂತನ ಪಾತ್ರವನ್ನು ಹೊಗಳುವವರೇ. ಜನರ ವಿಪರೀತವಾದ ಪ್ರತಿಕ್ರಿಯೆ ಕಂಡ ಹನುಮಂತನಿಗೆ ತನಗಾದ ಸಂತೋಷವನ್ನು ಹತ್ತಿಕ್ಕಲಾರದೆ ಆ ದೃಶ್ಯ ಮುಗಿಯುವುದಕ್ಕೆ ಮುಂಚೆಯೇ ಸ್ಟೂಲಿನ ಮೇಲಿನಿಂದ ಎಗರಿ, ಗದೆಯನ್ನು ತಿರುವುತ್ತಾ ಆಸ್ಥಾನದಲ್ಲೆಲ್ಲಾ ಸುತ್ತತೊಡಗಿದ.
ಇಲ್ಲೇ ಆದದ್ದು ತಪ್ಪು.
ಹನುಮಂತ ಎಗರಿದಾಗ ಬಾಲವೂ ಅವನ ಜೊತೆ ಬರಬೇಕಲ್ಲವೇ. ಸ್ಟೂಲಿಗೆ ಸುತ್ತಿದ್ದರಿಂದ ಬಾಲವಿಲ್ಲದ ಕೋತಿಯಂತಾಗಿದ್ದು ನಾಟಕ ನೋಡುತ್ತಿದ್ದವರಿಗೆ ಇನ್ನೂ ಹೆಚ್ಚಿನ ಮನರಂಜನೆಯೊದಗಿಸಿ ಎಗರುತ್ತಿದ್ದ ಬಾಲವಿಲ್ಲದ ಕೋತಿಯನ್ನು ಕಂಡು ಕೇಕೆ ಹಾಕಿ ನಗುತ್ತಾ, ಸಿಲ್ಪಿ ಹೊಡೆದು ನೋಡುಗರನ್ನು ಹುರಿದುಂಬಿಸುತ್ತ, ಚಪ್ಪಾಳೆ ತಟ್ಟಿ ‘ಹೋ’ ಎಂದು ಕೂಗುತ್ತಾ ನಿದ್ದೆಯಲ್ಲಿದ್ದವರನ್ನು ಎಬ್ಬಿಸಿ ಜನ ಬಿದ್ದುಬಿದ್ದು ನಗತೊಡಗಿದರು. ಆದರೆ ಇದನ್ನೆಲ್ಲಾ ನೋಡಿದ ಹನುಮಂತನಿಗೆ ಬಾಲದ ಕಡೆ ಗಮನವೇ ಹೋಗದೆ ಜನರು ತನಗೆ ತೋರುತ್ತಿರುವ ಪ್ರತಿಕ್ರಿಯೆ ಎಂದುಕೊಂಡು ಮತ್ತು ಮೇಲಕ್ಕೆ ಎಗರಿ, ಕುಣಿದು ಕುಪ್ಪಳಿಸಿದ. ಹಾಡಿದ್ದನ್ನೇ ಹಾಡಿ ರಾವಣನನ್ನೇ ಕೆಣಕತೊಡಗಿದ.
ಹಾರ್ಮೋನಿಯಂ ಮಾಸ್ಟರಿಗೆ ಯೋಚನೆಗಿಟ್ಟುಕೊಂಡಿತು.
ಹನುಮAತನ ಎಗರಾಟವನ್ನು ನಿಲ್ಲಿಸುವುದು ಹೇಗೆಂದು ಯೋಚಿಸಿ ಕಡೆಗೆ ತಬಲದವನ ಕೈಗೆ ಐದು ರೂಪಾಯಿ ನೋಟು ಕೊಟ್ಟು ಹನುಮಂತನ ಕವಚಕ್ಕೆ ಸಿಕ್ಕಿಸಿ ಬಾ ಎಂದರು.
ಕುಣಿದಾಡುತ್ತಿದ್ದ ಹನುಮಂತನನ್ನು ಕಡೆಗೂ ಹಿಡಿದು ನಿಲ್ಲಿಸಿ ಐದು ರೂಪಾಯಿ ಓದಿಸುವುದರಲ್ಲಿ ಆತನಿಗೂ ಸಾಕಾಯಿತು. ನಾಟಕಗಳಲ್ಲಿ ಪಾತ್ರ ಮಾಡಿರುವಾತನ ನಟನೆ ಹಳ್ಳಿಗರಿಗೇನಾದರೂ ಇಷ್ಟವಾದರೆ ಈ ರೀತಿ ರಂಗದ ಮೇಲೆ ಬಂದು, ಉಡುಗೊರೆ ನೀಡುವುದು ರೂಢಿ. ನಾಟಕ ನಡೆಯುತ್ತಿದ್ದಾಗ ಮಧ್ಯದಲ್ಲಿ ಹೋಗಿ ನಾಟಕದ ಓಘಕ್ಕೆ ಧಕ್ಕೆ ತರುತ್ತಿದ್ದೇವೆಂದು ಅವರೆಂದೂ ಭಾವಿಸುವುದಿಲ್ಲ. ಹೀಗೆ ಹಣ ಓದಿಸಿ ಮೆಚ್ಚುಗೆ ಸೂಚಿಸುವುದರ ಮೂಲಕ ತಾವೂ ರಂಗದ ಮೇಲೆ ಕಾಣಿಸಿಕೊಳ್ಳುವ ಆಸೆಯನ್ನು ನೆರವೇರಿಸಿಕೊಳ್ಳುವುದು ಇದರ ಪರೋಕ್ಷ ಉದ್ದೇಶವೂ ಹೌದು. ತಬಲದವನು ಮಾಡಿದ್ದು ಇನ್ನಷ್ಟು ಜನರಿಗೆ ಪ್ರಚೋದನೆ ನೀಡಿದಂತಾಗಿ ಹಲವಾರು ಮಂದಿ ರಂಗದ ಮೇಲೆ ಹನುಮಂತನಿಗೆ ನೋಟು ಸಿಕ್ಕಿಸತೊಡಗಿದರು. ಕಾಕ-ಪೋಕಗಳೆಲ್ಲ ರಂಗದ ಮೇಲೆ ಕಾಣಿಸಿಕೊಳ್ಳುತ್ತಿರುವಾಗ ಊರ ಮುಖಂಡರಾದ ಪಟೇಲ್ ರುದ್ರಪ್ಪನವರು ರಂಗದ ಮೇಲೆ ಬರದಿದ್ದರೆ ಹೇಗೆ? ಅವರೂ ಬಂದರು. ನಿಶ್ಶಬ್ದರಾದ ಜನ ಅವರು ಎಷ್ಟು ಓದಿಸುತ್ತಾರೆಂದು ತಿಳಿಯಲು ಕುತೂಹಲದಿಂದ ನೋಡತೊಡಗಿದರು. ಜನರ ಕಡೆ ನೋಟು ತೋರಿಸಿ ಹನುಮಂತನ ಕವಚಕ್ಕೆ ನೂರು ರೂಪಾಯಿ ನೋಟು ಸಿಕ್ಕಿಸಿ ಪ್ರೇಕ್ಷಕರಿಗೆಲ್ಲ ಕೈ ಮುಗಿದು ತಮ್ಮ ಸ್ಥಾನದಲ್ಲಿ ಬಂದು ಕುಳಿತರು.
ಒಂದು ಕಡೆ ಉಡುಗೊರೆ ಓದಿಸುವ ಭರಾಟೆ. ಮತ್ತೊಂದೆಡೆ ನಾಟಕವನ್ನು ಮುಂದುವರಿಸಲು ಮೇಸ್ಟುç ಮಾಡುತ್ತಿದ್ದ ಹಾರ್ಮೋನಿಯಂನ ಏಳನೆಯ ಮನೆಯ ಭಯಂಕರ ಶಬ್ದ. ತಬಲದವನು ನಾನೇನು ಕಡಮೆ ಎಂದು ಠಂ, ಠಂ ಎಂದು ಬಾರಿಸಿ ಬಿಸಾಡುತ್ತಿದ್ದ. ಹುಚ್ಚೆದ್ದ ಜನರ ಸೀಟಿ, ಚಪ್ಪಾಳೆ, ಡಬ್ಬ ಬಡಿಯುವ ಶಬ್ದ, ‘ಹೋ’ ಎಂಬ ಕೂಗು. ಆದರೆ ಇದಾವುದನ್ನೂ ಲೆಕ್ಕಕ್ಕೆ ತೆಗೆದುಕೊಳ್ಳದೆ ಕುಳಿತಿದ್ದ ಒಬ್ಬನಿದ್ದನೆಂದರೆ ಅವನೇ ‘ತಾಳ-ತಂಟ್ರಿ’. ಅವನ ಮನಸ್ಸು ಮತ್ತೆಲ್ಲೋ ಯೋಚಿಸುತ್ತಿತ್ತು. ಅತ್ತ ಇತ್ತ ತಿರುಗಿ ನೋಡಿದ. ಪಕ್ಕದವ ಐದು ರೂಪಾಯಿ ನೋಟು ಹಿಡಿದು ಹನುಮಂತನಿಗೆ ಕೊಡಲು ಮೇಲೇಳುವಷ್ಟರಲ್ಲಿ ಅವನ ಕೈಯಲ್ಲಿದ್ದ ನೋಟು ಕಸಿದುಕೊಂಡ ತಾಳ-ತಂಟ್ರಿ ರಂಗವನ್ನು ಹತ್ತೇಬಿಟ್ಟಿದ್ದ. ನೋಟು ಕಳಕೊಂಡವ ಬಾಯಿ ಬಿಟ್ಟುಕೊಂಡು ಅಲಲಲಲೇ…. ಎಂದು ನೋಡತೊಡಗಿದ.
ತಾಳ-ತಂಟ್ರಿ ಹೋದವನು ಐದು ರೂಪಾಯಿ ಸಿಕ್ಕಿಸುವ ನೆಪದಲ್ಲಿ ನೂರರ ನೋಟನ್ನು ಹನುಮಂತನಿಗೂ ಕಾಣದಂತೆ ಎಗರಿಸಿಬಿಟ್ಟು ಮಗುಮ್ಮಾಗಿ ಬಂದು ಕುಳಿತ.
ನಾಟಕ ಮುಗಿಯಿತು.
ಎಲ್ಲರೂ ಸಂಪೂರ್ಣ ರಾಮಾಯಣಕ್ಕಿಂತ ಹನುಮಂತನ ಪಾತ್ರವನ್ನು ಪ್ರಶಂಸಿಸುವವರೇ!
ಒAದೆರಡು ದಿವಸ ಕಳೆದ ನಂತರ ಅರಳೀಮರದ ಕಟ್ಟೆಯ ಮೇಲೆ ಕುಳಿತು ನಾಟಕದ ಬಗ್ಗೆಯೇ ಚರ್ಚಿಸುತ್ತಿದ್ದ ನಾಗಣ್ಣನನ್ನು ನೋಡಿದ ಪಟೇಲರು, ಮತ್ತೊಮ್ಮೆ ಪ್ರಶಂಸಿಸಿ “ಏನು, ಉಡುಗೊರೆ ಭಾರಿಯಾಗಿ ಬಂದಿರಬೇಕಲ್ಲ” ಎಂದರು.
“ಅಯ್ಯೋ ಬಿಡಿ ಪಟೇಲರೇ ನೂರು ರೂಪಾಯಿ ಬಂದಿದ್ರೆ ಹೆಚ್ಚು” ಎಂದ ನಾಗಣ್ಣ.
“ಏನ್ ಹಿಂಗ್ ಹೇಳ್ತಿ ನಾಗಣ್ಣ, ನಾನೇ ನೂರರ ನೋಟು ಸಿಕ್ಕಿಸಿದ್ದೆ.”
“ಏನು, ನೂರರ ನೂಟೇ? ನೂರರ ನೋಟು ಇರಲೇ ಇಲ್ವಲ್ಲ. ಬರೇ ಐದು ಹತ್ತರ ನೋಟುಗಳೇ.”
ನೂರರ ನೋಟು ಓದಿಸಿದ್ದರಿಂದ ಪುನಃ ಜನಗಳ ಮುಂದೆ ಹೊಗಳುತ್ತಾನೆ ಎಂದು ನಿರೀಕ್ಷಿಸಿದ್ದವರಿಗೆ ಬೇಸರವಾಯಿತು. ಹಾಗಾದರೆ ನೋಟು ಎಲ್ಲಿ ಹೋಯಿತು? ಕೆಳಗೆ ಬಿದ್ದುಹೋಯಿತಾ? ಯಾರಿಗಾದರೂ ಸಿಕ್ಕಿರಲೇಬೇಕು. ಹಾಗೇ ಯೋಚಿಸಿದರು.
ನಾಗಣ್ಣ, ನಾ ಬಂದ ಮೇಲೆ ಮೂರ್ನಾಲ್ಕು ಜನ ಬಂದ್ರು ಅಲ್ವಾ, ಅದರಲ್ಲಿ ತಾಳ-ತಂಟ್ರಿಯೂ ಒಬ್ಬ ಎಂದರು.
ನಾಗಣ್ಣನ ತಲೆ ಚಕ್ಕನೆ ಓಡಿತು. ಇದು ಅವನದೇ ಕೆಲಸ ಎಂದು ಗೊತ್ತಾಗಿಹೋಯಿತು. ತಕ್ಷಣ ತಾಳ-ತಂಟ್ರಿಯನ್ನು ಊರೆಲ್ಲ ಹುಡುಕಿಸಿದರು.
ಅವನಾಗಲೇ ಮಂಡ್ಯ ತಲಪಿದ್ದ.
ಸೀತೆಯ ಪಾತ್ರ ಮಾಡಲು ಬಂದಿದ್ದ ಕಲಾವಂತಿಯು ಮಂಡ್ಯದಿಂದ ಬಂದಿದ್ದು. ಅವಳ ಹಿಂದೆ ಬಿದ್ದ ತಾಳ-ತಂಟ್ರಿಯು ಹಣವೆಲ್ಲ ಖರ್ಚಾದ ನಂತರ ಊರು ಸೇರಿದ. ಕಲಾವಂತಿ ಇವನಿಗೆ ಸಿಕ್ಕಿದಳೋ ಇಲ್ಲವೋ ಆ ವಿಷಯ ಮಾತ್ರ ಯಾರಲ್ಲಿಯೂ ಬಾಯಿಬಿಡಲಿಲ್ಲ.
ಪ್ರಮುಖರನ್ನೆಲ್ಲಾ ಸೇರಿಸಿ, ತಾಳ-ತಂಟ್ರಿಯನ್ನು ಚಾವಡಿಗೆ ಕರೆಸಿದರು. ನಿಜ ಹೇಳ್ತಿಯೋ ಇಲ್ಲ ಹನುಮಂತನ ಕೈಲೇ ನಾಲ್ಕು ಬಿಡಿಸಲೋ ಎಂದು ನೇರವಾಗಿ ವಿಷಯಕ್ಕೆ ಬಂದರು ಪಟೇಲರು. ತಾಳ-ತಂಟ್ರಿಗೆ ಬೇರೆ ದಾರಿಯಿಲ್ಲದೆ ಒಪ್ಪಿಕೊಳ್ಳಲೇಬೇಕಾಯಿತು. ಜೇಬಿನಲ್ಲಿ ಐದು ರೂಪಾಯಿ ಕೂಡಾ ಇಲ್ಲದವನ ಬಳಿ ನೂರು ರೂಪಾಯಿ ಪೀಕಿಸುವುದು ಅಸಾಧ್ಯವೇ ಎಂದರಿತ ಪಟೇಲರು ‘ಏನು ಶಿಕ್ಷೆ ಕೊಡೋಣ?’ ಎಂದರು. ‘ಯಜಮಾನ್ರೇ, ನೀವೇ ನಿರ್ಧರಿಸಿ’ ಎಂದು ಪಟೇಲರ ವಿವೇಚನೆಗೆ ಬಿಟ್ಟರು ಇತರರು.
“ನೋಡಪ್ಪ ತಾಳ-ತಂಟ್ರಿ, ಗುಡ್ಡದ ಹೊಲಕ್ಕೆ ಕಡ್ಲೆಕಾಯಿ ಬಿತ್ತಿದ್ದೇವೆ. ಹಂದಿಕಾಟ. ಒಂದು ತಿಂಗಳು ಊರೊಳಗೆ ಬರದೆ ನಮ್ಮ ಆಳಿನೊಡನೆ ಹೊಲ ಕಾಯ್ಕೊ. ಊಟ-ತಿಂಡಿ ಎಲ್ಲಾ ಅಲ್ಲೇ. ನಿನ್ನ ಕೂಲಿ ಹಣವನ್ನೆಲ್ಲಾ ಸೇರಿಸಿ ನಾಗಣ್ಣನಿಗೆ ಕೊಡ್ತೀನಿ” ಎಂದರು. ಪ್ರಮುಖರೆಲ್ಲರೂ ಅದೇ ಸರಿ, ಅದೇ ಸರಿ ಎಂದು ಒಪ್ಪಿದರು.
ವಿಧಿಯಿಲ್ಲದೆ ತಾಳ-ತಂಟ್ರಿ ಪಟೇಲರ ಆಳಿನ ಜೊತೆ ಹಂದಿ ಕಾಯಲು ಹೊಲದ ಕಡೆ ಹೋಗಲೇಬೇಕಾಯಿತು.