ಮತಾಂಧರ ತೆಕ್ಕೆಯಲ್ಲಿ ಗಾಂಧಾರಿಯ ತವರೂರು: ಅಧಿಕಾರದ ಸಿಂಹಾಸನವೇರಿದ ಭಯೋತ್ಪಾದಕರು
ತಾಲಿಬಾನ್ ಹಂಗಾಮಿ ಸರ್ಕಾರವನ್ನು ಘೋಷಿಸಿದೆ. ಮಂತ್ರಿಮಂಡಳದ ೩೩ ಸದಸ್ಯರ ಪೈಕಿ ೧೭ ಹೆಸರುಗಳು ವಿಶ್ವಸಂಸ್ಥೆಯ ನಿರ್ಬಂಧಿತ ಉಗ್ರರ ಪಟ್ಟಿಯಲ್ಲಿವೆ! ಪ್ರಧಾನಮಂತ್ರಿಯೆಂದು ಘೋಷಣೆಯಾದ ಮುಲ್ಲಾ ಮಹಮ್ಮದ್ ಹಸನ್ ಅಖುಂದ್ ವಿಶ್ವಸಂಸ್ಥೆಯ ನಿರ್ಬಂಧಿತ ಉಗ್ರ! ದೇಶದ ಗೃಹಮಂತ್ರಿಯೆಂದು ಘೋಷಿಸಲಾದ ಮೌಲ್ವಿ ಸಿರಾಜುದ್ದೀನ ಹಕ್ಕಾನಿ ನಿಷೇಧಿತ ಹಕ್ಕಾನಿ ನೆಟ್ವರ್ಕ್ ಉಗ್ರ ಸಂಘಟನೆಯ ಮುಖ್ಯಸ್ಥ; ಈತನ ತಲೆಯ ಮೇಲೆ ಅಮೆರಿಕದ ತನಿಖಾ ಸಂಸ್ಥೆ ಎಫ್ಬಿಐ ೫ ಮಿಲಿಯನ್ ಡಾಲರ್ ಬಹುಮಾನ ಘೋಷಿಸಿದೆ!
ಆಫಘಾನಿಸ್ತಾನ ಪ್ರಹಸನದ ಅಂಕ ಬದಲಾಗಿದೆ. ಇಡೀ ಅಮೆರಿಕವನ್ನೇ ನಲುಗಿಸಿದ ೨೦೦೧ರ ೯/೧೧ ಭಯೋತ್ಪಾದಕ ದಾಳಿಯ ನಂತರ ಆಫಘಾನಿಸ್ತಾನದಲ್ಲಿ ನೆಲೆಯಾಗಿದ್ದ ಅಲ್-ಖೈದಾ ಉಗ್ರರ ಮೇಲಿನ ಪ್ರತೀಕಾರದ ದಾಳಿ, ಅವರಿಗೆ ಆಶ್ರಯ ನೀಡಿದ್ದ ತಾಲಿಬಾನಿಗಳ ಪದಚ್ಯುತಿ, ನಂತರ ಶಾಂತಿ ಸ್ಥಾಪನೆ, ಹೊಸ ಆಫಘಾನಿಸ್ತಾನ ನಿರ್ಮಾಣ, ಆಫಘಾನ್ ಸೇನೆಯ ತರಬೇತಿ ಇತ್ಯಾದಿಗಳ ಹೆಸರಿನಲ್ಲಿ ಅಮೆರಿಕ ಮತ್ತು ನ್ಯಾಟೋ ಪಡೆಗಳು ಅಲ್ಲಿ ಎರಡು ದಶಕಗಳ ಕಾಲ ನೆಲೆಯಾಗಿದ್ದವು. ಅಮೆರಿಕ ಮತ್ತು ನ್ಯಾಟೋ ಪಡೆಗಳ ವಾಪಸಾತಿಯ ಅಂತಿಮ ಚರಣ ಆರಂಭವಾದಂತೆ ಒಂದೊಂದಾಗಿ ಆಫಘಾನಿಸ್ತಾನದ ಜಿಲ್ಲೆಗಳನ್ನು ತಾಲಿಬಾನ್ ತನ್ನ ತೆಕ್ಕೆಗೆ ತೆಗೆದುಕೊಂಡಂತೆ ಅಧ್ಯಕ್ಷ ಅಶ್ರಫ್ ಘನಿ ಪಲಾಯನ, ಮತ್ತು ಕಳೆದ ಆಗಸ್ಟ್ ೧೫ರಂದು ರಾಜಧಾನಿ ಕಾಬೂಲ್ ಮತ್ತು ರಾಷ್ಟ್ರಪತಿಭವನ ತಾಲಿಬಾನ್ ನಿಯಂತ್ರಣಕ್ಕೆ ಬಂದ ನಂತರ ೨೦೦೪ರಿಂದ ಅಸ್ತಿತ್ವದಲ್ಲಿದ್ದ ಇಸ್ಲಾಮಿಕ್ ರಿಪಬ್ಲಿಕ್ ಆಫ್ ಆಫಘಾನಿಸ್ತಾನ ಪತನವಾಯಿತು; ೧೯೯೬ರಲ್ಲಿ ತಾಲಿಬಾನ್ ಸ್ಥಾಪಿಸಿದ್ದ ಇಸ್ಲಾಮಿಕ್ ಎಮಿರೇಟ್ ಪುನಃಸ್ಥಾಪನೆಯ ಕಾರ್ಯ ಚುರುಕುಗೊಂಡಿತು. ಸಂಘರ್ಷ ಅನಿಶ್ಚಿತತೆಗಳ ಹೊಸ ಅಧ್ಯಾಯಕ್ಕೆ ಅದು ನಾಂದಿಯಾಯಿತು.
ಹಾಗೆ ನೋಡಿದರೆ ಸಂಘರ್ಷ ಅನಿಶ್ಚಿತತೆಗಳು ಆಫಘಾನಿಸ್ತಾನಕ್ಕೆ ಹೊಸತಲ್ಲ. ೧೯೧೯ರಲ್ಲಿ ಬ್ರಿಟಿಷರಿಗೆ ಮೂರನೇ ಪ್ರಯತ್ನದಲ್ಲಿಯೂ ಸಂಪೂರ್ಣ ಆಫಘಾನಿಸ್ತಾನವನ್ನು ತಮ್ಮ ನಿಯಂತ್ರಣಕ್ಕೆ ತರಲು ಸಾಧ್ಯವಾಗದೇ ಇದ್ದಾಗ ರಾವಲ್ಪಿಂಡಿ ಒಪ್ಪಂದದಂತೆ ರಾಜ ಅಮಾನುಲ್ಲಾ ಖಾನ್ ಆಡಳಿತದಲ್ಲಿ ದೇಶಕ್ಕೆ ಸ್ವಾತಂತ್ರ್ಯ ದೊರಕಿತು. ಅಲ್ಲಿಂದೀಚೆಗೆ ಇತ್ತೀಚಿನ ೧೯೮೦ರ ದಶಕದ ಸೋವಿಯತ್ ಆಕ್ರಮಣ, ೧೯೯೦ರ ದಶಕದ ತಾಲಿಬಾನ್ ಆಡಳಿತ ಮತ್ತು ಅಮೆರಿಕ ದಾಳಿಯ ನಂತರ ೨೦೦೪ರ ಸಂವಿಧಾನದಂತೆ ಇಸ್ಲಾಮಿಕ್ ರಿಪಬ್ಲಿಕ್ ಆಫ್ ಆಫಘಾನಿಸ್ತಾನ ಸ್ಥಾಪನೆಯವರೆಗೆ ಹಲವು ಮಜಲುಗಳನ್ನು ಆ ದೇಶ ಕಂಡಿದೆ. ಕಳೆದ ನೂರು ವರ್ಷಗಳಲ್ಲಿ ೧೮ ಬಾರಿ ಆಫಘಾನಿಸ್ತಾನದ ರಾಷ್ಟ್ರಧ್ವಜ ಬದಲಾಗಿದೆ ಎಂದರೆ ದೇಶದ ರಾಜಕೀಯ ಇತಿಹಾಸದ ಏರಿಳಿತವನ್ನು ಊಹಿಸಿಕೊಳ್ಳಬಹುದು.
ಶೀತಲಯುದ್ಧದಲ್ಲಿ ತಾಲಿಬಾನಿ ಬೀಜೋತ್ಪತ್ತಿ
ಅಷ್ಟಕ್ಕೂ ಅಮೆರಿಕ ಮತ್ತು ನ್ಯಾಟೋ ಪಡೆಗಳ ದಾಳಿಯ ನಂತರ ಪದಚ್ಯುತಗೊಂಡು ಎರಡು ದಶಕದ ನಂತರವೂ ಜೀವಂತವಾಗಿದ್ದು ಇಡೀ ಆಫಘಾನಿಸ್ತಾನವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಸಾಮರ್ಥ್ಯ ಹೊಂದಿರುವ ಈ ತಾಲಿಬಾನ್ ಯಾರು? ಅದು ಅಷ್ಟು ದೊಡ್ಡ ಪೆಡಂಭೂತವಾಗಿ ಬೆಳೆದದ್ದಾದರೂ ಹೇಗೆ? – ಎಂದರೆ ಅಮೆರಿಕ ಮತ್ತು ಸೋವಿಯತ್ ರಷ್ಯಾ ನಡುವಿನ ಶೀತಲಸಮರದ ಕಾಲಘಟ್ಟಕ್ಕೆ ಹೋಗಬೇಕು. ಶೀತಲಸಮರವು ಶಿಖರದಲ್ಲಿದ್ದ ಸಮಯದಲ್ಲಿ ೧೯೭೯ರಲ್ಲಿ ಸೋವಿಯತ್ ರಷ್ಯಾ ಆಫಘಾನಿಸ್ತಾನದ ಮೇಲೆ ಆಕ್ರಮಣ ಮಾಡಿತು. ಕಾರಣ ಆಫಘಾನ್ ಮತ್ತು ಸೋವಿಯತ್ ನಡುವಿನ ಸ್ನೇಹ ಒಪ್ಪಂದದ ನೆಪದಲ್ಲಿ ರಾಜಕೀಯ ಪರಿಸ್ಥಿತಿಯ ನಿಯಂತ್ರಣ. ಇದಕ್ಕೆ ಹಿನ್ನೆಲೆಯಾಗಿದ್ದಿದ್ದು ೧೯೭೮ರ ಆಫಘಾನ್ ಕಮ್ಯೂನಿಸ್ಟ್ ಕ್ರಾಂತಿ, ನೂರ್ ಮಹಮ್ಮದ್ ತಾರಾಕಿ ನೇತೃತ್ವದ ಏಕಪಕ್ಷದ ಸರ್ವಾಧಿಕಾರ, ಆತ ಜನಪ್ರಿಯತೆ ಕಳೆದುಕೊಂಡಿದ್ದು, ಸೋವಿಯತ್ ಸ್ನೇಹ ಒಪ್ಪಂದದ ಮೂಲಕ ಅದನ್ನು ಉತ್ತೇಜಿಸಲು ಪ್ರಯತ್ನ, ೧೯೭೯ರಲ್ಲಿ ತಾರಾಕಿ ಹತ್ಯೆ, ಹಫೀಜುಲ್ಲಾ ಅಮಿನ್ನ ಹೊಸ ಆಡಳಿತ ಮತ್ತು ಅಮೆರಿಕದತ್ತ ಒಲವು ಇತ್ಯಾದಿ.
ಆಫ್ಘಾನ್ ನೆಲದ ಮೇಲೆ ಸೋವಿಯತ್ ಆಕ್ರಮಣ ನಡೆದರೆ ಬದ್ಧವೈರಿ ಅಮೆರಿಕ ಸುಮ್ಮನಿರಲಾದೀತೆ? ಆಗ ಅಮೆರಿಕದ ಗುಪ್ತ ಕಾರ್ಯಾಚರಣೆಯ ಅಂಗವಾಗಿ ತಯಾರಾಗಿ ಆಫಘಾನಿಸ್ತಾನದಲ್ಲಿ ಸೋವಿಯತ್ ವಿರುದ್ಧ ಹೋರಾಡಲು ಕಳುಹಿಸಲ್ಪಟ್ಟವರು ಮುಜಾಹಿದ್ದೀನ್ಗಳು. ಸೋವಿಯತ್ ರಷ್ಯವು ಕ್ರಿಶ್ಚಿಯನ್, ಅದು ಮುಸ್ಲಿಂ ಆಫಘಾನಿಸ್ತಾನದ ಮೇಲೆ ದಾಳಿ ಮಾಡಿದೆ. ಹಾಗಾಗಿ ಅದನ್ನು ಹೊಡೆದೋಡಿಸಲು ಜಿಹಾದ್ ನಡೆಯಬೇಕು ಎಂಬ ಮತೀಯ ಭಾವನೆಯನ್ನು ಕೆರಳಿಸಿ ಮುಜಾಹಿದ್ದೀನ್ರನ್ನು ಆಫಘಾನಿಸ್ತಾನಕ್ಕೆ ಕಳುಹಿಸಲಾಯಿತು. ಈ ಮುಜಾಹಿದ್ದೀನರಲ್ಲಿ ಒಸಾಮಾ ಬಿನ್ ಲಾಡೆನನೂ ಸೇರಿದ್ದ ಎನ್ನುವುದು ಈಗ ರಹಸ್ಯವಲ್ಲದ ವಿಷಯ.
ಮೊದಮೊದಲು ಗುಪ್ತವಾಗಿದ್ದ ಅಮೆರಿಕದ ಕಾರ್ಯಾಚರಣೆ ನಂತರದ ವರ್ಷಗಳಲ್ಲಿ ಅಮೆರಿಕದ ಅಧ್ಯಕ್ಷರೇ ಮುಜಾಹಿದ್ದೀನರ ಶೌರ್ಯವನ್ನು ಹೊಗಳುವ ಮಟ್ಟಕ್ಕೆ ಹೋಯಿತು. ಅಮೆರಿಕ ಬಿಲಿಯನ್ಗಟ್ಟಲೆ ಡಾಲರ್ ಹಣವನ್ನು ಇವರ ತರಬೇತಿಗೆ ವ್ಯಯಿಸಿತು. ವಿಮಾನ ಹೊಡೆದುರುಳಿಸುವ ಶಸ್ತ್ರಾಸ್ತ್ರಗಳ ಸರಬರಾಜಾಯಿತು. ಈ ಕಾರ್ಯದಲ್ಲಿ ಪೂರ್ಣ ಸಾಥ್ ನೀಡಿದ್ದು ಪಾಕಿಸ್ತಾನ. ಮುಜಾಹಿದ್ದೀನ್ಗಳು ಪಾಕಿಸ್ತಾನದ ಮದರಸಾಗಳಲ್ಲೇ ತರಬೇತಿ ಪಡೆದರು. ಹತ್ತು ವರ್ಷಗಳ ಕಾಲ ನಡೆದ ಸೋವಿಯತ್ ಆಕ್ರಮಣ ೧೯೮೯ರಲ್ಲಿ ಸೋವಿಯತ್ ಛಿದ್ರಗೊಳ್ಳುವ ಪ್ರಕ್ರಿಯೆ ಆರಂಭವಾದ ನಂತರ ಕೊನೆಗೊಂಡಿತು.
ಇತ್ತ ಸೋವಿಯತ್ ಆಫಘಾನಿನಿಂದ ಕಾಲ್ತೆಗೆದಂತೆ ಅಮೆರಿಕವೂ ಮುಜಾಹಿದ್ದೀನರನ್ನು ಕೈಬಿಟ್ಟಿತು. ಆಗ ಆರಂಭವಾಗಿದ್ದು ಮುಜಾಹಿದ್ದೀನ್ಗಳ ಅನೇಕ ಪಂಗಡಗಳ ನಡುವೆ ಅಂತಃಕಲಹ. ಈ ಅಂತಃಕಲಹದಲ್ಲಿ ನಲುಗುತ್ತಿದ್ದ ಆಫಘಾನಿಸ್ತಾನವನ್ನು ಉದ್ಧ್ದರಿಸುವ ಮತ್ತು ಶಾಂತಿ ಸ್ಥಾಪಿಸುವ ಭರವಸೆ ನೀಡಿ ಜನಮನ್ನಣೆ ಪಡೆದು ಪ್ರಬಲವಾಗಿದ್ದು ಮುಲ್ಲಾ ಓಮರ್ ನೇತೃತ್ವದ ತಾಲಿಬಾನ್. ತಾಲಿಬಾನ್ ಅಂದರೆ ಪಶ್ತೊ ಭಾಷೆಯಲ್ಲಿ ವಿದ್ಯಾರ್ಥಿ ಎಂದರ್ಥ; ಎಲ್ಲಿಯ ವಿದ್ಯಾರ್ಥಿಗಳು ಅಂದರೆ ಪಾಕಿಸ್ತಾನದ ಸುನ್ನಿ ದೇವಬಂದಿ ಮುಸ್ಲಿಂ ಮದರಸಾಗಳ ವಿದ್ಯಾರ್ಥಿಗಳು! ಆಫಘಾನಿಸ್ತಾನದಲ್ಲಿ ಇಸ್ಲಾಮಿಕ್ ಎಮಿರೇಟ್ ಸ್ಥಾಪಿಸಿದ ತಾಲಿಬಾನ್ ಶಾಂತಿ ಸ್ಥಾಪಿಸಿ ಉದ್ಧರಿಸುವುದಕ್ಕೆ ಬದಲು ಜಾರಿಗೊಳಿಸಿದ್ದು ಕಟ್ಟರ್ ಇಸ್ಲಾಂ ಶರಿಯಾ ಆಡಳಿತ; ಅದು ಆಶ್ರಯ ನೀಡಿದ್ದು ಅಲ್-ಖೈದಾದಂತಹ ಭಯೋತ್ಪಾದಕರಿಗೆ.
ಮಾತು ಸೋತ ದೊಡ್ಡಣ್ಣ
ಪರೋಕ್ಷವಾಗಿ ತಾನೇ ಬೆಳೆಸಿದ ತಾಲಿಬಾನ್ ತನಗೇ ತಲೆನೋವಾಗುವವರೆಗೆ ಅಮೆರಿಕ ಎಚ್ಚರಾಗಲೇ ಇಲ್ಲ. ೯/೧೧ ದಾಳಿಯ ನಂತರ ಒಸಾಮಾ ಬಿನ್ ಲಾಡೆನ್ನನ್ನು ಕೈಗೊಪ್ಪಿಸಲು ನಿರಾಕರಿಸಿದ ತಾಲಿಬಾನ್ ಮೇಲೆ ಅಮೆರಿಕ ಮತ್ತು ನ್ಯಾಟೋ ಮಿತ್ರರಾಷ್ಟ್ರಗಳು ಯುದ್ಧ ಸಾರಿದವು. ತಾಲಿಬಾನ್ ಬೆಲೆ ತೆರಲೇಬೇಕು ಎಂದರು ಅಂದಿನ ಅಮೆರಿಕ ಅಧ್ಯಕ್ಷ ಜಾರ್ಜ್ ಬುಶ್. ಅಮೆರಿಕ ಮತ್ತು ಮಿತ್ರರಾಷ್ಟ್ರಗಳ ದಾಳಿ ಅಂದು ತಾಲಿಬಾನನ್ನೇನೋ ಕೆಳಗಿಳಿಸಿತು; ಆದರೆ ಎರಡು ದಶಕಗಳ ಕಾಲದ ನಿರಂತರ ಸಂಘರ್ಷ, ಟ್ರಿಲಿಯನ್ಗಟ್ಟಲೇ ಡಾಲರ್ ವೆಚ್ಚ, ಸಾವಿರಾರು ಸಾವು, ಪ್ರಜಾಪ್ರಭುತ್ವ ಸ್ಥಾಪನೆ – ಆರ್ಥಿಕ ಪ್ರಗತಿಯ ಹೆಸರಿನಲ್ಲಿ ಭಾರತವೂ ಸೇರಿದಂತೆ ಅನೇಕ ದೇಶಗಳ ನೆರವು – ಇವೆಲ್ಲವುಗಳ ನಂತರವೂ ಇದೀಗ ಇನ್ನಷ್ಟು ಬಲದೊಂದಿಗೆ ತಾಲಿಬಾನ್ ಮತ್ತೆ ದೇಶವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತು ಅಂದರೆ, ಅಮೆರಿಕ ಸಾಧಿಸಿದ್ದೇನು? – ಎನ್ನುವ ಪ್ರಶ್ನೆ ಮೂಡುತ್ತದೆ. ಆಫಘಾನಿಸ್ತಾನದಿಂದ ಅಸ್ತವ್ಯಸ್ತ ರೀತಿಯಲ್ಲಿ ಅಮೆರಿಕ ಹಿಂತೆಗೆಯಿತೇ? ಆಗಸ್ಟ್ ೩೧ರ ಒಳಗೆ ಜಾಗ ಖಾಲಿ ಮಾಡಿ ಎಂದು ತಾಲಿಬಾನ್ ಉಗ್ರರೇ ಅಮೆರಿಕಕ್ಕೆ ಗಡುವು ನೀಡಿದರು ಅಂದರೆ, ದೊಡ್ಡಣ್ಣನ ಸೈನ್ಯಶಕ್ತಿ ಉಗ್ರಗಾಮಿ ಗುಂಪಿನ ವಿರುದ್ಧ ಮಂಡಿಯೂರಿತೆ? ನ್ಯಾಟೋ ಪಡೆ ತರಬೇತಿ ನೀಡಿದ ಆಫಘಾನ್ ರಾಷ್ಟ್ರೀಯ ಸೈನ್ಯವೇಕೆ ನಾಚಿಕೆಯಿಲ್ಲದೆ ತಾಲಿಬಾನಿಗೆ ಶರಣಾಯಿತು? ಆಫಘಾನ್ ಸೈನ್ಯ ನಿರ್ಮಾಣಕ್ಕಾಗಿ ಸುರಿದ ಡಾಲರುಗಳು ಅಸಲಿಗೆ ಸೇರಿದ್ದೆಲ್ಲಿಗೆ? ಅಮೆರಿಕ ಬಿಟ್ಟುಹೋದ ಬೃಹತ್ಪ್ರಮಾಣದ ಶಸ್ತ್ರಾಸ್ತ್ರ ಯುದ್ಧವಿಮಾನಾದಿಗಳು ಉಗ್ರರ ಕೈಗೆ ಸಿಕ್ಕಾಗ ಆಗುವ ಪರಿಣಾಮಗಳೇನು?
ನಾವು ರಾಷ್ಟ್ರನಿರ್ಮಾಣಕ್ಕಾಗಿ ಆಫಘಾನಿಸ್ತಾನಕ್ಕೆ ಹೋಗಿದ್ದಲ್ಲ. ತಮ್ಮ ದೇಶದ ಭವಿಷ್ಯವನ್ನು ನಿರ್ಧರಿಸುವುದು ಮತ್ತು ತಮ್ಮ ದೇಶವನ್ನು ಹೇಗೆ ನಡೆಸಬೇಕು ಎಂದು ತೀರ್ಮಾನಿಸುವುದು ಕೇವಲ ಆಫಘಾನಿಸ್ತಾನದ ಜನರ ಹಕ್ಕು ಮತ್ತು ಜವಾಬ್ದಾರಿ – ಹೀಗೆಂದು ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅಸ್ತವ್ಯಸ್ತ ಸೇನಾ ವಾಪಸಾತಿ ಕುರಿತು ಕೇಳಲಾದ ಪ್ರಶ್ನೆಗೆ ಈಗ ಉತ್ತರಿಸಿದರು. ಹಾಗಿದ್ದರೆ ಅಮೆರಿಕ ಮತ್ತು ಮಿತ್ರದೇಶಗಳ ಸೇನೆ ೨೦ ವರ್ಷಗಳ ಕಾಲ ಅಲ್ಲಿ ನೆಲೆನಿಂತದ್ದೇಕೆ? ಟ್ರಿಲಿಯನ್ಗಟ್ಟಲೆ ಡಾಲರ್ ಸುರಿದದ್ದೇಕೆ? ಆಫಘಾನ್ ಪುನರ್ನಿರ್ಮಾಣದ ಕುರಿತು ವಿಶ್ವದ ನಾಯಕರುಗಳು ಶೃಂಗಸಭೆಗಳನ್ನು ನಡೆಸಿದ್ದೇಕೆ? ಅಂತಿಮವಾಗಿ ಮತ್ತೆ ತಾಲಿಬಾನ್ ಉಗ್ರರ ಕೈಗೆ ದೇಶವನ್ನೊಪ್ಪಿಸಿ ಜಾರಿಕೊಳ್ಳುತ್ತಿವೆ ಎಂದರೆ ಅಮೆರಿಕ ಮತ್ತು ವಿಶ್ವದ ನಾಯಕರಂತೆ ವರ್ತಿಸುತ್ತಿರುವವರು ಸಾಧಿಸಿದ್ದಾದರೂ ಏನು?
ಆಫಘಾನ್ ಯುದ್ಧದ ಲೆಕ್ಕಾಚಾರ
ಅಮೆರಿಕದ ರಕ್ಷಣಾ ಇಲಾಖೆ ಕೊಟ್ಟ ಲೆಕ್ಕದಂತೆ ಅಕ್ಟೋಬರ್ ೨೦೦೧ರಿಂದ ಡಿಸೆಂಬರ್ ೨೦೨೦ರವರೆಗೆ ಆಫಘಾನಿಸ್ತಾನದಲ್ಲಿ ಮಾಡಿದ ಮಿಲಿಟರಿ ವೆಚ್ಚ ೮೨೫ ಬಿಲಿಯನ್ ಡಾಲರ್ಗಳು. ಜೊತೆಗೆ ಸುಮಾರು ೧೩೦ ಬಿಲಿಯನ್ ಡಾಲರ್ ಪುನರ್ನಿರ್ಮಾಣ ವೆಚ್ಚ, ಒಟ್ಟು ಒಂದು ಟ್ರಿಲಿಯನ್ ಡಾಲರ್ಗಿಂತ ಸ್ವಲ್ಪ ಕಡಮೆ. ಆದರೆ ಅಮೆರಿಕದ ಬ್ರೌನ್ ಯೂನಿವರ್ಸಿಟಿ ನಡೆಸಿದ ಅಧ್ಯಯನದ ಪ್ರಕಾರ ಅಮೆರಿಕದ ಆಫಘಾನ್ ಯುದ್ಧದ ಒಟ್ಟು ವೆಚ್ಚ ೨ ಟ್ರಿಲಿಯನ್ ಡಾಲರ್ಗಳು, ಸೈನಿಕರ ಕಲ್ಯಾಣ, ಪಿಂಚಣಿ ಮೊದಲಾದ ಭವಿಷ್ಯದ ಬದ್ಧತೆಗಳನ್ನೂ ಲೆಕ್ಕಕ್ಕೆ ತೆಗೆದುಕೊಂಡರೆ ೨.೩ ಟ್ರಿಲಿಯನ್ ಡಾಲರ್ಗಳಿಗೂ ಮಿಕ್ಕುತ್ತದೆ. ಇನ್ನು ಅಮೆರಿಕವನ್ನು ಹೊರತುಪಡಿಸಿ ಅತಿಹೆಚ್ಚು ಸೈನಿಕರನ್ನು ಯುದ್ಧಕ್ಕೆ ಕಳುಹಿಸಿದ ಯುನೈಟೆಡ್ ಕಿಂಗ್ಡಮ್ (ಇಂಗ್ಲೆಂಡ್) ಮತ್ತು ಜರ್ಮನಿ ತಲಾ ೩೦ ಮತ್ತು ೧೯ ಬಿಲಿಯನ್ ಡಾಲರ್ಗಳಷ್ಟು ಹಣವನ್ನು ಸುರಿದಿವೆ. ಸೇನೆಯನ್ನು ವಾಪಸ್ ಕರೆಸಿಕೊಂಡ ಮೇಲೆಯೂ ಆಫಘಾನ್ ಸೇನೆಗೆ ೨೦೨೪ರ ವರೆಗೆ ವಾರ್ಷಿಕ ೪ ಬಿಲಿಯನ್ ಡಾಲರ್ ನೆರವು ನೀಡುವುದಾಗಿ ನ್ಯಾಟೋ ದೇಶಗಳು ವಾಗ್ದಾನ ನೀಡಿವೆ. (ಈಗ ಆ ಹಣ ಉಳಿಯಬಹುದು ಅಥವಾ ಭಯೋತ್ಪಾದನೆ ನಿಗ್ರಹದ ಹೆಸರಿನಲ್ಲಿ ತಾಲಿಬಾನಿಗೆ ಸಂದಾಯ ಮಾಡಿದರೂ ಆಶ್ಚರ್ಯವಿಲ್ಲ!) ಒಂದು ವರದಿಯ ಪ್ರಕಾರ ಆಫಘಾನ್ ಯದ್ಧದಲ್ಲಿ ವೆಚ್ಚಮಾಡಿದ ಹಣದ ಒಂದು ಪಾಲು ಮರಳಿ ಅಮೆರಿಕದ ಶಸ್ತ್ರಾಸ್ತ್ರ ಕಂಪನಿಗಳ, ನಿರ್ಮಾಣ ವ್ಯವಹಾರಗಳ ಜೇಬು ಸೇರಿದೆ.
ಇನ್ನು ಸೈನಿಕರನ್ನು ಬಲಿಕೊಟ್ಟ ಲೆಕ್ಕಾಚಾರ ನೋಡುವುದಾದರೆ: ೨೦೧೧ರ ಹೊತ್ತಿಗೆ ಅತಿಹೆಚ್ಚು ಅಂದರೆ ೧.೧ ಲಕ್ಷ ಅಮೆರಿಕ ಯೋಧರು ಆಫಘಾನಿಸ್ತಾನದಲ್ಲಿ ನಿಯೋಜಿತರಾಗಿದ್ದರು. ಈ ಯುದ್ಧದಲ್ಲಿ ಅಮೆರಿಕದ ೨೩೦೦ ಯೋಧರು ಸೇರಿದಂತೆ ಮಿತ್ರಪಡೆಗಳ ಒಟ್ಟು ೩೫೦೦ ಸೈನಿಕರು ಆಫಘಾನ್ ಯುದ್ಧದಲ್ಲಿ ಬಲಿಯಾಗಿದ್ದಾರೆ. ಯುನೈಟೆಡ್ ಕಿಂಗ್ಡಮ್ ೪೫೦ ಯೋಧರನ್ನು ಕಳೆದುಕೊಂಡಿದೆ. ಹಾಗೆಯೇ ಮಿತ್ರಪಡೆಗಳ ೨೦,೬೬೦ ಯೋಧರು ಯುದ್ಧದಲ್ಲಿ ಗಾಯಗೊಂಡಿದ್ದಾರೆ. ಆಫಘಾನಿಸ್ತಾನದ ಸೈನ್ಯ ಮತ್ತು ಪೊಲೀಸ್ ಪಡೆಗಳಿಗೆ ಸೇರಿದ ೬೪,೧೦೦ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಸಂಯುಕ್ತ ರಾಷ್ಟ್ರ ಸಂಘದ ಅಂಕಿಅಂಶಗಳ ಪ್ರಕಾರ ೨೦೦೯ರ ನಂತರ ೧,೧೦,೦೦೦ ನಾಗರಿಕರು ಯುದ್ಧದ ಕಾರಣ ಪ್ರಾಣ ಕಳೆದುಕೊಂಡಿದ್ದಾರೆ.
ಆಫಘಾನ್ ಆಳುವವರಾರು?
ತಾಲಿಬಾನ್ ಆಫಘಾನಿಸ್ತಾನವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆಯಾದರೂ ಅದರಲ್ಲಿ ಪರಸ್ಪರ ಬದ್ಧದ್ವೇಷಿಗಳಾದ ಅನೇಕ ಬಣಗಳು, ಉಗ್ರ ಸಂಘಟನೆಗಳು ಸೇರಿವೆ. ಜೊತೆಗೆ ಆಫಘಾನಿಸ್ತಾನದ ಮೇಲೆ ನಿಯಂತ್ರಣ ಮತ್ತು ಪ್ರಭಾವ ಸಾಧಿಸಲು ಇಸ್ಲಾಮಿಕ್ ಸ್ಟೇಟ್-ಕೊರಾಸಾನ್, ಅಲ್-ಖೈದಾ ದಂತಹ ಜೆಹಾದಿ ಭಯೋತ್ಪಾದಕ ಸಂಘಟನೆಗಳೂ ಹವಣಿಸುತ್ತಿವೆ. ಇನ್ನೊಂದೆಡೆ ಪಾಕಿಸ್ತಾನವು ಆಫಘಾನಿಸ್ತಾನ ಸರ್ಕಾರವನ್ನು ತನ್ನ ಅಂಕೆಗೆ ಕುಣಿಸಲೂ ಯತ್ನಿಸುತ್ತಿದೆ; ಸ್ವತಃ ಐಎಸ್ಐ ಮುಖ್ಯಸ್ಥ ಲೆಫ್ಟಿನೆಂಟ್ ಫೈಜ್ ಹಮೀದ್ ಇತ್ತೀಚೆಗೆ ಸರ್ಕಾರ ರಚನೆಗಾಗಿ ಬಣಗಳ ನಡುವೆ ಮಾತುಕತೆಗೆ ಕಾಬೂಲ್ಗೆ ಆಗಮಿಸಿದ್ದುದು ಇದನ್ನು ಪುಷ್ಟೀಕರಿಸುತ್ತದೆ.
ಈ ಅರಾಜಕ ಸನ್ನಿವೇಶದ ನಡುವೆ ಪಂಜ್ಶೀರ್ ಗೆಲವು ಮತ್ತು ಕಾಬೂಲ್ ಸೇರಿದಂತೆ ವಿವಿಧ ಪಟ್ಟಣಗಳಲ್ಲಿ ತಾಲಿಬಾನಿ ಸೈನಿಕರ ಬಂದೂಕಿನ ಭಯವನ್ನೂ ಲೆಕ್ಕಿಸದೆ ಸ್ವಾತಂತ್ರ್ಯ ಮತ್ತು ಹಕ್ಕುಗಳಿಗಾಗಿ ಬೀದಿಗಿಳಿದಿರುವ ಮಹಿಳೆಯರ ಹೋರಾಟ ಹೆಚ್ಚಾದ ಹಿನ್ನೆಲೆಯಲ್ಲಿ ತಾಲಿಬಾನ್ ಹಂಗಾಮಿ ಸರ್ಕಾರವನ್ನು ಘೋಷಿಸಿದೆ. ಮಂತ್ರಿಮಂಡಳದ ೩೩ ಸದಸ್ಯರ ಪೈಕಿ ೧೭ ಹೆಸರುಗಳು ವಿಶ್ವಸಂಸ್ಥೆಯ ನಿರ್ಬಂಧಿತ ಉಗ್ರರ ಪಟ್ಟಿಯಲ್ಲಿದೆ! ಪ್ರಧಾನಮಂತ್ರಿಯೆಂದು ಘೋಷಣೆಯಾದ ಮುಲ್ಲಾ ಮಹಮ್ಮದ್ ಹಸನ್ ಅಖುಂದ್ ವಿಶ್ವಸಂಸ್ಥೆಯ ನಿರ್ಬಂಧಿತ ಉಗ್ರ! ದೇಶದ ಗೃಹಮಂತ್ರಿಯೆಂದು ಘೋಷಿಸಲಾದ ಮೌಲ್ವಿ ಸಿರಾಜುದ್ದೀನ ಹಕಾನಿ ನಿಷೇಧಿತ ಹಕಾನಿ ನೆಟ್ವರ್ಕ್ ಉಗ್ರ ಸಂಘಟನೆಯ ಮುಖ್ಯಸ್ಥ; ಈತನ ತಲೆಯ ಮೇಲೆ ಅಮೆರಿಕದ ತನಿಖಾ ಸಂಸ್ಥೆ ಎಫ್ಬಿಐ ೫ ಮಿಲಿಯನ್ ಡಾಲರ್ ಬಹುಮಾನ ಘೋಷಿಸಿದೆ!
ಹೀಗಿರುವ ಉಗ್ರರ ಸರ್ಕಾರವನ್ನು ಪ್ರಪಂಚದ ಯಾವಾವ ದೇಶಗಳು ಗುರುತಿಸಬಹುದು, ಎಂದರೆ ಹೆಸರುಗಳನ್ನು ಊಹಿಸಬಹುದು. ಭವಿಷ್ಯದಲ್ಲಿ ವಿಶ್ವಸಂಸ್ಥೆಯ ನಿರ್ಬಂಧಿತ ಉಗ್ರ ಪಟ್ಟಿಯಲ್ಲಿರುವವರೇ ಆಫಘಾನಿಸ್ತಾನ ಸರ್ಕಾರದ ನಾಯಕ, ಪ್ರತಿನಿಧಿಯಾಗಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಷಣ ಮಾಡುವಂತಾದರೆ ಆಶ್ಚರ್ಯವಿಲ್ಲ. ಇನ್ನು ಕಟ್ಟರ್ ಉಗ್ರರ ಜೊತೆ ಮುಲ್ಲಾಗಳು, ಮತದ ಗುರುಗಳೇ ತುಂಬಿರುವ ಸರ್ಕಾರವು ದೇಶವನ್ನು ಯಾವ ದಿಕ್ಕಿನಲ್ಲಿ ಮುನ್ನಡೆಸಬಹುದು!
ವಿಶ್ವದೆಲ್ಲೆಡೆ ಮಸಣದ ಮೌನ
ಕಾದು ನೋಡುವವರೇ ಎಲ್ಲ
ಆಫಘಾನಿನಿಂದ ಅಮೆರಿಕ ಮತ್ತು ಮಿತ್ರಪಡೆಗಳ ವಾಪಸಾತಿ ಮತ್ತು ತಾಲಿಬಾನ್ ಆಡಳಿತದ ಸೂಚನೆಗಳು ಆರಂಭವಾದಂತೆ ದೇಶ ಬಿಟ್ಟು ಹೋಗಲು ಕಾಬೂಲ್ ವಿಮಾನನಿಲ್ದಾಣಕ್ಕೆ ಜಮಾಯಿಸಿದ ಜನರು ಮತ್ತು ಅಲ್ಲಿ ಉಂಟಾದ ಕರುಣಾಜನಕ ಸನ್ನಿವೇಶಗಳನ್ನು ವಿಶ್ವ ಕಂಡಿದೆ. ವಿಮಾನವನ್ನೇರಲು ನೂಕುನುಗ್ಗಲು, ಹಾರುವ ವಿಮಾನದಿಂದ ಬಿದ್ದು ಪ್ರಾಣಕಳೆದುಕೊಳ್ಳುವ ದೃಶ್ಯ, ವಿಮಾನನಿಲ್ದಾಣದೊಳಕ್ಕೆ ಬರಲು ಗೋಡೆ ಹತ್ತಲು ಹರಸಾಹಸ ಪಟ್ಟವರು, ಯಾರೋ ಅಪರಿಚಿತರ ಕೈಗೆ ಚಿಕ್ಕ ಮಕ್ಕಳನ್ನು ನೀಡಿ ಬದುಕಿಸಿ ಎಂದು ಬೇಡಿದವರು, ನಿರಾಶ್ರಿತರಾಗಿ ಜೀವ ಉಳಿಸಿಕೊಳ್ಳಲು ದೇಶಬಿಟ್ಟು ಸಾವಿರಾರು ಮೈಲಿ ಕಾಲ್ನಡಿಗೆಯಲ್ಲಿ ನಡೆದವರು; ಆದರೂ ವಿಶ್ವದ ನಾಯಕರು ಮಾತ್ರ ಈ ಬೃಹತ್ ಮಾನವೀಯ ಸಂಕಷ್ಟದ ಕುರಿತು ಕುರುಡರಾಗಿದ್ದಾರೆ. ಕಟ್ಟರ್ ಇಸ್ಲಾಮೀ ಆಡಳಿತದ ಬಲಿಪಶುಗಳಾಗಲು ಕಾದಿರುವ ಆಫಘಾನಿಸ್ತಾನದ ಮಹಿಳೆಯರು ಆರಂಭಿಸಿರುವ ಹೋರಾಟ ಮತ್ತು ಅಂತಾರಾಷ್ಟ್ರೀಯ ಸಮುದಾಯದ ಬೆಂಬಲಕ್ಕಾಗಿ ಮಾಡುತ್ತಿರುವ ವಿನಂತಿಗಳತ್ತ ಕಿವುಡರಾಗಿದ್ದಾರೆ.
ಬದಲು ಅಮೆರಿಕ ಮತ್ತು ಯೂರೋಪಿನ ದೇಶಗಳು ಮಾಡುತ್ತಿರುವುದೇನು? ತಾಲಿಬಾನಿನೊಡನೆ ಹಿಂಬಾಗಿಲಿನ ವ್ಯವಹಾರ; ಆಫಘಾನಿಸ್ತಾನದಲ್ಲಿ ಶಾಂತಿ ಸ್ಥಾಪನೆಯಾಗಲಿ ಎನ್ನುವ ಪೊಳ್ಳು ಆಶಯಗಳು, ಇನ್ನೊಂದೆಡೆ ಐಎಸ್-ಕೊರಾಸಾನ್, ಅಲ್-ಖೈದಾದಂತಹ ಉಗ್ರರನ್ನು ತಾಲಿಬಾನ್ ನಿಯಂತ್ರಿಸಲಿ ಎನ್ನುವ ಲೆಕ್ಕಾಚಾರ.
ಮತ್ತೊಂದೆಡೆ ಆಫಘಾನಿಸ್ತಾನದಿಂದ ಬಹುದೊಡ್ಡ ಸಂಖ್ಯೆಯಲ್ಲಿ ನಿರಾಶ್ರಿತರಾಗುವ ಅಂದಾಜಿನಲ್ಲಿ ಅವರನ್ನು ಸ್ವೀಕರಿಸಲು ಮುಸ್ಲಿಂ ದೇಶಗಳೂ ಸೇರಿದಂತೆ ಯಾರೂ ತಯಾರಿಲ್ಲ. ಟರ್ಕಿಯಂತೂ ತನ್ನ ಗಡಿಯಲ್ಲಿ ಗೋಡೆ ನಿರ್ಮಿಸಲು ಮುಂದಾಗಿದೆ. ಆಫಘಾನಿಸ್ತಾನದಿಂದ ಬರುವ ನಿರಾಶ್ರಿತರು ಬಂದರೆ ತಮಗೆ ತೊಂದರೆಯಾದೀತು ಎಂದು ಎಣಿಸಿದ ಯೂರೋಪಿನ ದೇಶಗಳು ಅವರ ನಿರ್ವಹಣೆಗಾಗಿ ಪಾಕಿಸ್ತಾನದ ಮೊರೆ ಹೋಗಿವೆ. ಈಗಾಗಲೇ ಐದು ದೇಶಗಳ ವಿದೇಶಾಂಗ ಸಚಿವರು ಪಾಕಿಸ್ತಾನಕ್ಕೆ ಭೇಟಿ ನೀಡಿ ಗಿಡ ನೆಟ್ಟು ಹೋಗಿದ್ದಾರೆ. ಮಾನವೀಯ ಪರಿಹಾರದ ಹೆಸರಿನಲ್ಲಿ ಮಿಲಿಯನ್ಗಟ್ಟಲೆ ನೆರವನ್ನು ಪಾಕಿಸ್ತಾನಕ್ಕೆ ಯೂರೋಪ್ ನೀಡುತ್ತಿದೆ. ಪಾಕಿಸ್ತಾನಕ್ಕೆ ಬೇಕಿದ್ದುದೂ ಅದೇ. ಇತ್ತ ಯೂರೋಪಿಯನ್ನರಿಂದ ನೆರವಿನ ಹಣ ಪಡೆಯುವುದು, ಆಫಘಾನ್ ನಿರಾಶ್ರಿತರನ್ನು ತನ್ನ ಗಡಿ ಪ್ರದೇಶದ ಮದರಸಾಗಳಲ್ಲಿ ಜೆಹಾದಿ ಮತಾಂಧರನ್ನಾಗಿ ತರಬೇತಿಗೊಳಿಸಿ ತಿರುಗಿ ಆಫಘಾನಿಗೋ, ಕಾಶ್ಮೀರಕ್ಕೋ, ಮಧ್ಯ ಏಷ್ಯಾಕ್ಕೋ ದಬ್ಬುವುದು! ಇಷ್ಟು ವರ್ಷಗಳ ಅನುಭವದ ನಂತರವೂ ಪಾಶ್ಚಾತ್ಯ ದೇಶಗಳು ಭಯೋತ್ಪಾದಕತೆಯ ಕಾರ್ಖಾನೆಯಾದ ಪಾಕಿಸ್ತಾನವನ್ನು ಅರಿತಿಲ್ಲ ಎನ್ನುವುದು ದೌರ್ಭಾಗ್ಯದ ಸಂಗತಿ.
ಇನ್ನೊಂದೆಡೆ ಚೀನಾವೂ ಸಹ ಆಫಘಾನಿಸ್ತಾನದ ಸನ್ನಿವೇಶದ ಲಾಭ ಪಡೆಯಲು ಯೋಜನೆ ರೂಪಿಸಿದೆ. ಆಫಘಾನಿಸ್ತಾನದಲ್ಲಿ ಇನ್ನೂ ದೂತಾವಾಸವನ್ನು ಇಟ್ಟುಕೊಂಡಿರುವ ನಾಲ್ಕು ದೇಶಗಳ ಪೈಕಿ ಚೀನಾವೂ ಒಂದು. ಕೆಲವು ದಿನಗಳ ಹಿಂದೆ ತಾಲಿಬಾನ್ ಪ್ರತಿನಿಧಿ ಮತ್ತು ಚೀನಾದ ರಾಯಭಾರಿಯ ಭೇಟಿ ನಡೆದಿತ್ತು. ಚೀನಾದ ಬೆಲ್ಟ್-ರೋಡ್ ಯೋಜನೆಯನ್ನು ತಾಲಿಬಾನ್ ಬೆಂಬಲಿಸಿದೆ, ಆಫಘಾನಿಸ್ತಾನದಲ್ಲಿ ತಾಮ್ರದ ಗಣಿಗಾರಿಕೆಗೆ ಆಹ್ವಾನ ನೀಡಿದೆ; ಬದಲಿಗೆ ಚೀನಾ ಆರ್ಥಿಕ ನೆರವು ನೀಡಲಿದೆ ಮತ್ತು ತನ್ನ ದೇಶದ ಉಯ್ಗುರ್ ಮುಸ್ಲಿಮರ ವಿಷಯದಲ್ಲಿ ತಾಲಿಬಾನ್ ತಲೆಹಾಕದಂತೆ ಗಟ್ಟಿಮಾಡಿಕೊಳ್ಳಲಿದೆ.
ದಿನದಿಂದ ದಿನಕ್ಕೆ ಆಫಘಾನ್ ಕೇಂದ್ರಿತ ಬೆಳವಣಿಗೆಗಳು ತೆರೆದುಕೊಳ್ಳುತ್ತಿವೆ. ಅರಾಜಕತೆ, ಮತಾಂಧತೆಗಳ ಆಗರದಲ್ಲಿ ಆಫಘಾನಿಸ್ತಾನದ ಭವಿಷ್ಯ ಅಂಧಕಾರದೆಡೆಗೆ ಸಾಗುತ್ತಿರುವುದು ಮೇಲ್ನೋಟಕ್ಕೇ ಸ್ಪಷ್ಟವಾಗುತ್ತಿರುವ ಸಂಗತಿ. ಒಂದೆಡೆ ಉಗ್ರರು ಆಫಘಾನಿಸ್ತಾನದಲ್ಲಿ ತಮ್ಮ ಹಿಡಿತವನ್ನು ಬಿಗಿಗೊಳಿಸತೊಡಗಿದ್ದರೆ ಇನ್ನೊಂದೆಡೆ ವಿಶ್ವದ ದೇಶಗಳು, ವೈಶ್ವಿಕ ನಾಯಕರು ಕಂಡೂ ಕಾಣದಿರುವ, ಏನು ಮಾಡಬೇಕೆಂದು ಅರ್ಥವಾಗದೆ ಕೈಚೆಲ್ಲಿರುವ ಸ್ಥಿತಿಯಲ್ಲಿರುವಂತೆ ಗೋಚರವಾಗುತ್ತಿದೆ. ಬಹುಶಃ ಕಾದು ನೋಡದೆ ಅನ್ಯ ಮಾರ್ಗವಿಲ್ಲ.
ಭಾರತಕ್ಕೇನು ಸಂದೇಶ?
ಐತಿಹಾಸಿಕವಾಗಿ ಸುಮಾರು ೧೭೫೦ರ ವರೆಗೆ ಪೂರ್ವ ಆಫಘಾನಿಸ್ತಾನ ಭಾರತದ ಭಾಗವೆಂದು ಪರಿಗಣಿಸಲ್ಪಡುತ್ತಿತ್ತು. ಹಿಂದೂಕುಶ್ ಪರ್ವತ ಶ್ರೇಣಿಯ ತಪ್ಪಲಿನ ಕಂದಹಾರ್ ಪ್ರಾಂತವೇ ಮಹಾಭಾರತದಲ್ಲಿ ಬರುವ ಗಾಂಧಾರ ಎನ್ನುವುದು ತಿಳಿದ ಸಂಗತಿ. ಅಘಘನ್ ಎನ್ನುವ ಹೆಸರೂ ಕೂಡ ಅಶ್ವಕನ್ ಎನ್ನುವ ಸಂಸ್ಕೃತ ಮೂಲದಿಂದ ಹುಟ್ಟಿದ್ದು ಅಶ್ವಾರೋಹಿ, ಕುದುರೆಗಳ ನಾಡು – ಈ ರೀತಿಯ ಅರ್ಥದಲ್ಲಿ ಜನಿಸಿದ್ದು ಎಂದು ಭಾಷಾಶಾಸ್ತ್ರಜ್ಞರು ಅಭಿಪ್ರಾಯಪಡುತ್ತಾರೆ. ತಾಲಿಬಾನಿ ಮತಾಂಧರ ಕುಕೃತ್ಯಕ್ಕೆ ಧ್ವಂಸವಾದ ಬಾಮಿಯಾನ್ ಬುದ್ಧನವರೆಗೆ ಆಫಘಾನ್ ನೆಲ ಭಾರತದ ಭಾಗವಾಗಿತ್ತು ಎನ್ನುವುದಕ್ಕೆ ಕುರುಹುಗಳು ಸಿಗುತ್ತವೆ. ಇತ್ತೀಚಿನ ಇತಿಹಾಸವನ್ನು ನೋಡುವುದಾದರೆ ೧೯೯೯ರ ಡಿಸೆಂಬರ್ನಲ್ಲಿ ಭಯೋತ್ಪಾದಕರು ಹೈಜಾಕ್ ಮಾಡಿದ ಏರ್ ಇಂಡಿಯಾ ೮೧೪ ವಿಮಾನವು ಕೊನೆಗೆ ಲ್ಯಾಂಡ್ ಆಗಿದ್ದು ಕಂದಹಾರ್ನಲ್ಲಿ. ಆಗ ಆಫಘಾನಿಸ್ತಾನದಲ್ಲಿ ಅಧಿಕಾರ ನಡೆಸುತ್ತಿದ್ದ ತಾಲಿಬಾನ್ ಉಗ್ರರಿಗೆ ಆಶ್ರಯ ನೀಡಿತ್ತು. ಭಾರತ ದ್ವೇಷಿ ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್ ಮತ್ತು ಆತನ ಅಲ್-ಖೈದಾ ನೆಲೆನಿಂತಿದ್ದುದು ಇದೇ ತಾಲಿಬಾನಿಗಳ ಆಫಘಾನಿಸ್ತಾನದಲ್ಲಿ.
ಆದರೆ ಅಮೆರಿಕ ದಾಳಿಯ ನಂತರ ಆಫಘಾನ್ ನವನಿರ್ಮಾಣದಲ್ಲಿ ಭಾರತ ಸಹಾಯಹಸ್ತ ಚಾಚಿತು. ೨೦೧೧ರ ಭಾರತ-ಆಫಘಾನಿಸ್ತಾನ ಪಾಲುದಾರಿಕೆ ಒಪ್ಪಂದದ ನಂತರ ಭಾರತ ಸುಮಾರು ೩ ಬಿಲಿಯನ್ ಡಾಲರ್ನಷ್ಟು ನೆರವನ್ನು ಆಫಘಾನಿಸ್ತಾನಕ್ಕೆ ನೀಡಿದೆ. ಇದರಲ್ಲಿ ೨೦೧೫ರಲ್ಲಿ ಪ್ರಧಾನಿ ಮೋದಿ ಉದ್ಘಾಟಿಸಿದ ಆಫಘಾನ್ ಸಂಸತ್ಭವನ, ೨೦೧೬ರಲ್ಲಿ ಲೋಕಾರ್ಪಣೆಗೊಂಡ ಹೇರಟ್ ಪ್ರಾಂತದ ಸಲ್ಮಾ ಅಣೆಕಟ್ಟು, ೨೦೦ಕ್ಕೂ ಹೆಚ್ಚು ಶಾಲೆಗಳು, ರಸ್ತೆಗಳು, ವಿದ್ಯುತ್ ಯೋಜನೆ ಹೀಗೆ ಹಲವಾರು ಯೋಜನೆಗಳು ಸೇರಿವೆ. ಕಂದಹಾರ್ನಲ್ಲಿ ಭಾರತ ಕ್ರಿಕೆಟ್ ಸ್ಟೇಡಿಯಂ ನಿರ್ಮಿಸಿದೆ. ಆಫಘಾನ್ ಕ್ರಿಕೆಟ್ ತಂಡಕ್ಕೆ ಭಾರತದ ಲಖನೌ, ಡೆಹರಾಡೂನ್ ಸ್ಟೇಡಿಯಂಗಳು ತವರಾಗಿದ್ದವು. ೨೦೨೦ ನವೆಂಬರ್ನಲ್ಲಿ ಜಿನೇವಾದಲ್ಲಿ ನಡೆದ ಆಫಘಾನ್ ಶೃಂಗಸಭೆಯಲ್ಲಿ ಭಾರತದ ವಿದೇಶಾಂಗ ಸಚಿವ ಜೈಶಂಕರ್ ತಿಳಿಸಿದ್ದಂತೆ ಭಾರತ ಆಫಘಾನಿಸ್ತಾನದ ೩೪ ಪ್ರಾಂತಗಳಲ್ಲಿ ೪೦೦ಕ್ಕೂ ಹೆಚ್ಚು ಯೋಜನೆಗಳನ್ನು ಕಾರ್ಯರೂಪಗೊಳಿಸಿದೆ. ಒಂದು ಅಂದಾಜಿನಂತೆ ಆಫಘಾನಿಸ್ತಾನದಲ್ಲಿ ಭಾರತದ ಸುಮಾರು ೧೦ ಬಿಲಿಯನ್ ಡಾಲರ್ಗಳಿಗೂ ಹೆಚ್ಚು ಹೂಡಿಕೆಯಾಗಿದೆ.
ಆಫಘಾನಿಸ್ತಾನದಲ್ಲಿ ಪ್ರಜಾಪ್ರಭುತ್ವ ಸಂಕೇತವಾಗಿದ್ದ ಭಾರತ ನಿರ್ಮಿಸಿದ ಅದೇ ಸಂಸತ್ಭವನದಲ್ಲಿ ಇದೀಗ ತಾಲಿಬಾನ್ ಮತಾಂಧರ ಆಡಳಿತ ಆರಂಭವಾಗಿದೆ. ಭಾರತವಿರೋಧಿ ಪಾಕ್ ಮೂಲದ ಭಯೋತ್ಪಾದಕರಿಗೆ ಆಫಘಾನ್ ಹೊಸ ನೆಲೆಯಾಗಬಹುದು, ಅದರಲ್ಲೂ ಕಾಶ್ಮೀರದ ಉಗ್ರಚಟುವಟಿಕೆಗಳಿಗೆ ಆಫಘಾನ್ ನೆಲ ಬಳಕೆಯಾಗಬಹುದೆಂಬ ಆತಂಕ ಬಲಗೊಳ್ಳುತ್ತಿದೆ. ಇತ್ತೀಚೆಗೆ ತಾಲಿಬಾನಿಗೆ ಅಭಿನಂದನೆ ಸಲ್ಲಿಸಿ ಅಲ್-ಖೈದಾ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿಯೂ ಕಾಶ್ಮೀರವನ್ನು ಮುಕ್ತಗೊಳಿಸಿ ಇಸ್ಲಾಂ ಸಾಮ್ರಾಜ್ಯ ಬೆಳೆಸುವ ಉಲ್ಲೇಖವಿದೆ. ಹಾಗೆಯೇ ಆಫಘಾನಿಸ್ತಾನದಲ್ಲಿ ತಾಲಿಬಾನಿಗಳ ಮೇಲುಗೈಯಿಂದಾಗಿ ಭಾರತದಲ್ಲಿ ಸಕ್ರಿಯರಾಗಿರುವ ಜೆಹಾದಿ ಶಕ್ತಿಗಳ ಮನಃಸ್ಥೈರ್ಯ ಹುರಿದುಂಬಬಹುದೆಂಬ ಗಂಭೀರ ಆತಂಕವಿದೆ. ಇನ್ನೊಂದೆಡೆ ತಾಲಿಬಾನಿ ಆಡಳಿತದಲ್ಲಿ ಭಾರತದ ಹೂಡಿಕೆಗಳ ಭವಿಷ್ಯವೇನು? ಎಂಬ ಗಂಭೀರ ಸವಾಲು ಮುಂದಿದೆ. ಮತ್ತು ಆಫಘಾನಿಸ್ತಾನದಲ್ಲಿ ಅತ್ಯಂತ ಕಡಮೆ ಸಂಖ್ಯೆಯಲ್ಲಿರುವ ಹಿಂದೂ ಮತ್ತು ಸಿಖ್ ಜನರ ಸಂಕ್ಷೇಮದ ಹೊಣೆಗಾರಿಕೆಯೂ ಭಾರತದ ಮೇಲಿದೆ.
ಪಂಜ್ಶೀರ್ ಕಣಿವೆಯಲ್ಲಿ ಬತ್ತಿಲ್ಲ ಕೆಚ್ಚು
ಅಮೆರಿಕ ಒಕ್ಕೂಟದ ಪಡೆಗಳು ಜಾಗ ಖಾಲಿಮಾಡತೊಡಗಿದಂತೆ ಒಂದೊಂದೇ ಜಿಲ್ಲೆಗಳು ತಾಲಿಬಾನ್ ತೆಕ್ಕೆಗೆ ತರಗೆಲೆಗಳಂತೆ ಬೀಳತೊಡಗಿದವು. ಅವರೇ ತರಬೇತಿ ನೀಡಿದ ಆಫಘಾನಿಸ್ತಾನ್ ಸೇನೆಯ ಯೋಧರು ಒಂದು ಗುಂಡನ್ನೂ ಹಾರಿಸದೇ, ಯಾವ ಪ್ರತಿರೋಧವನ್ನೂ ಒಡ್ಡದೇ ಶರಣಾಗುವ ದೃಶ್ಯಗಳು ಕಂಡುಬಂದವು. ತಾಲಿಬಾನಿಗಳನ್ನು ಸ್ವಾಗತಿಸಲು ಸಿದ್ಧರಾಗಿದ್ದಂತೆಯೆ ಕಂಡಿತು. ಆಗಸ್ಟ್ ೧೫ಕ್ಕೆ ರಾಜಧಾನಿ ಕಾಬೂಲ್ ತಾಲಿಬಾನ್ ನಿಯಂತ್ರಣಕ್ಕೆ ಒಳಪಟ್ಟು, ಸ್ವಯಂ ರಾಷ್ಟ್ರಪತಿ ಅಬ್ದುಲ್ ಘನಿ ಪಲಾಯನ ಮಾಡುವುದರೊಂದಿಗೆ ಇಡೀ ದೇಶ ಶರಣಾಯಿತು. ಆದರೆ ಒಂದು ಪ್ರಾಂತ ಮಾತ್ರ ಬಗ್ಗಿರಲಿಲ್ಲ. ಅದು ಪಂಜ್ಶೀರ್ ಕಣಿವೆ – ಕಾಬೂಲ್ನ ಉತ್ತರಕ್ಕಿರುವ ಒಂದು ಪ್ರದೇಶ. ಸೋವಿಯತ್ ಆಕ್ರಮಣದಲ್ಲಿ ಪಂಜ್ಶೀರ್ ಪ್ರಬಲ ಹೋರಾಟ ನಡೆಸಿ ಸ್ವಾತಂತ್ರ್ಯ ಉಳಿಸಿಕೊಂಡಿತ್ತು. ಹಿಂದೆ ಬ್ರಿಟಿಷರಿಗೂ ಸೋಲದಿದ್ದ ಈ ಪ್ರಾಂತ ೧೯೯೦ರ ದಶಕದಲ್ಲಿ ಅಂದಿನ ತಾಲಿಬಾನಿಗೂ ಬಗ್ಗಿರಲಿಲ್ಲ. ನಾಯಕ ಅಹ್ಮದ್ ಶಾ ಮಸೌದ್ ನೇತೃತ್ವದಲ್ಲಿ ಪಂಜ್ಶೀರ್ ಅಜೇಯವಾಗಿತ್ತು.
ಇದೀಗ ದೇಶದ ಸರ್ಕಾರವೇ ಮಂಡಿಯೂರಿ ಕಾಬೂಲ್ ತಾಲಿಬಾನ್ ತೆಕ್ಕೆಗೆ ಸೇರುತ್ತಿದ್ದಂತೇ ಆಫಘಾನ್ ಸೇನೆಯ ಒಂದಿಷ್ಟು ತಾಲಿಬಾನ್ವಿರೋಧಿ ಸೈನಿಕರು ಪಂಜ್ಶೀರ್ ಸೇರಿ ಅಹ್ಮದ್ ಮಸೌದ್ ನೇತೃತ್ವದ ರಾಷ್ಟ್ರೀಯ ಪ್ರತಿರೋಧ ಬಲ (ನ್ಯಾಶನಲ್ ರೆಸಿಸ್ಟನ್ಸ್ ಫೋರ್ಸ್ ಆಫ್ ಆಫಘಾನ್ – ಎನ್ಆರ್ಎಫ್) ಸೇರಿ ತಾಲಿಬಾನಿಗಳ ವಿರುದ್ಧ ಹೋರಾಟ ಮುಂದುವರಿಸಿದರು. ಆಫಘಾನ್ ಉಪರಾಷ್ಟ್ರಪತಿ ಅಮ್ರುಲ್ಲಾ ಸಾಲೇ ನೇತೃತ್ವದಲ್ಲಿ ತಾಲಿಬಾನ್ನಿಂದ ದೇಶವನ್ನು ಉಳಿಸುವ ಪ್ರಯತ್ನ ಮುಂದುವರಿಸಿದರು. ವರದಿಗಳ ಪ್ರಕಾರ ಎನ್ಆರ್ಎಫ್ ಅನೇಕ ತಾಲಿಬಾನಿ ಉಗ್ರರನ್ನು ಹೊಡೆದುರುಳಿಸಿತು. ಆದರೆ ಅಂತಿಮವಾಗಿ ಸೆಪ್ಟೆಂಬರ್ ೫ರಂದು ಪಾಕಿಸ್ತಾನದ ಐಎಸ್ಐ ಬೆಂಬಲದಲ್ಲಿ ಏರ್ಸ್ಟ್ರೈಕ್ ನಡೆದ ಕಾರಣ ಪಂಜ್ಶೀರ್ ತಾಲಿಬಾನಿಗೆ ಸೋಲಬೇಕಾಯಿತು. ಆದರೂ ಪ್ರತಿರೋಧವನ್ನು ಮುಂದುವರಿಸುವುದಾಗಿ ನಾಯಕ ಅಹ್ಮದ್ ಮಸೌದ್ ಹೇಳಿದ್ದು, ದೇಶದ ನಾಗರಿಕರನ್ನು ತಾಲಿಬಾನ್ ವಿರುದ್ಧ ಸಿಡಿದೇಳುವಂತೆ ಹುರಿದುಂಬಿಸಿದ್ದಾನೆ. ಅಂತರರಾಷ್ಟ್ರೀಯ ಸಮುದಾಯ ಸ್ವಲ್ಪ ನೆರವು ನೀಡಿದ್ದರೂ ಬಹುಶಃ ಪಂಜ್ಶೀರ್ನ ಎನ್ಆರ್ಎಫ್ ತಾಲಿಬಾನ್ಗೆ ಪ್ರಬಲ ಪ್ರತಿರೋಧ ಒಡ್ಡುತ್ತಿತ್ತು.
ಮೂರಾಬಟ್ಟೆಯಾದ ಆಫಘಾನ್ ಮಹಿಳೆಯರ ಬದುಕು
ತಾಲಿಬಾನಿಗಳ ಬಂದೂಕಿನ ನಳಿಕೆ ನೇರ ಗುರಿಯಾಗಿದ್ದು ಆಫಘಾನಿಸ್ತಾನದ ೧.೮ ಕೋಟಿ ಮಹಿಳೆಯರು ಮತ್ತು ಹೆಣ್ಣುಮಕ್ಕಳ ಭವಿಷ್ಯದ ಬದುಕು. ತೊಂಭತ್ತರ ದಶಕದ ಕಟ್ಟರ್ ತಾಲಿಬಾನ್ ಆಡಳಿತದಲ್ಲಿ ಮಹಿಳೆಯರ ಮಾನವಹಕ್ಕುಗಳ ಹರಣವನ್ನು ಪ್ರತ್ಯಕ್ಷ ಅನುಭವಿಸಿದವರು ಮಹಿಳೆಯರು. ಶಿಕ್ಷಣ ಉದ್ಯೋಗಗಳಲ್ಲಿ ಸಮಾನ ಅವಕಾಶ ನೀಡುವುದಾಗಿ ತಾಲಿಬಾನ್ ಹೇಳಿಕೊಳ್ಳುತ್ತಿದೆಯಾದರೂ ಅದನ್ನು ನಂಬುವ ಸ್ಥಿತಿಯಲ್ಲಿ ಯಾರೂ ಇಲ್ಲ.
ತಾಲಿಬಾನ್ ಶೈಕ್ಷಣಿಕ ಪ್ರಾಧಿಕಾರ ಇತ್ತೀಚೆಗೆ ಜಾರಿಮಾಡಿದ ಖಾಸಗಿ ವಿಶ್ವವಿದ್ಯಾಲಯಗಳು ಮಹಿಳೆಯರ ಶಿಕ್ಷಣಕ್ಕೆ ಸಂಬಂಧಿಸಿದಂತೆ ಅನುಸರಿಸಬೇಕಾದ ನಿಯಮಗಳ ಉದ್ದನೆಯ ಪಟ್ಟಿಯನ್ನು ಗಮನಿಸಿದರೆ ಭವಿಷ್ಯ ಹೇಗಿರಬಹುದು ಎಂದು ಊಹಿಸಬಹುದು; ಈ ನಿಯಮಗಳಲ್ಲಿ ಹೇಳಿರುವಂತೆ – ಮಹಿಳೆಯರು ಮತ್ತು ಹುಡುಗಿಯರು ಬುರ್ಖಾ ಧರಿಸಿರಬೇಕು, ಮುಖದ ಬಹುಭಾಗ ಮುಚ್ಚಿರುವಂತೆ ಅಬಯಾ ಅಥವಾ ನಿಖಾಬ್ ಧರಿಸಬೇಕು. ಹುಡುಗಿಯರಿಗೆ ಪ್ರತ್ಯೇಕ ವರ್ಗ ನಡೆಸಬೇಕು, ಇದು ಸಾಧ್ಯವಾಗದಿದ್ದಲ್ಲಿ ಕರ್ಟನ್ ಹಿಂದೆ ಮರೆಮಾಡಬೇಕು. ಹುಡುಗಿಯರಿಗೆ ಕಲಿಸಲು ಮಹಿಳಾ ಶಿಕ್ಷಕರನ್ನು ನೇಮಿಸಬೇಕು, ಸಾಧ್ಯವಾಗದಿದ್ದಲ್ಲಿ ಉತ್ತಮ ಚಾರಿತ್ರ್ಯ ಹೊಂದಿರುವ ಮುದಿ ವಯಸ್ಸಿನ ಶಿಕ್ಷಕರನ್ನು ನೇಮಿಸಿಕೊಳ್ಳಬೇಕು. ತರಗತಿಯಲ್ಲಿ ಹುಡುಗರಿಗಿಂತ ಐದು ನಿಮಿಷ ಮೊದಲು ಹುಡುಗಿಯರು ಹೊರಹೋಗಬೇಕು, ತದನಂತರ ಹುಡುಗರು ಶಾಲಾಕಟ್ಟಡ ಬಿಟ್ಟು ಹೋಗುವವರೆಗೆ ಹುಡುಗಿಯರು ವಿಶ್ರಾಂತಿ ಕೊಠಡಿಯಲ್ಲಿ ಕಾಯಬೇಕು! ಒಟ್ಟಾರೆಯಾಗಿ ವಿದ್ಯಾರ್ಥಿ-ವಿದ್ಯಾರ್ಥಿಗಳು ಬೆರೆಯಲೇ ಬಾರದು! ಇಷ್ಟಾದರೂ ಹುಡುಗಿಯರನ್ನು ವಿಶ್ವವಿದ್ಯಾಲಯ, ಶಾಲೆಗಳಿಗೆ ಕಲಿಯಲು ಬಿಡುತ್ತಿದ್ದಾರಲ್ಲಾ ಎನ್ನುವುದೇ ಬಹುದೊಡ್ಡ ಸಂಗತಿ!
ಹೀಗಿರುವಾಗ ಆಡಳಿತ ವ್ಯವಸ್ಥೆ, ಪ್ರಮುಖ ಉದ್ಯೋಗಗಳಲ್ಲಿ ಮಹಿಳೆಯರಿಗೆ ಅವಕಾಶ ಸಿಗುವುದು ಕನಸೇ ಸರಿ. ಇನ್ನೊಂದೆಡೆ ತಾಲಿಬಾನ್ ಪುಂಡರ ದೌರ್ಜನ್ಯವಂತೂ ಆರಂಭವಾಗಿದೆ. ಕಳೆದ ಜನವರಿಯಲ್ಲೇ ಸರ್ವೋಚ್ಚ ನ್ಯಾಯಾಲಯದ ಈರ್ವರು ಮಹಿಳಾ ನ್ಯಾಯಾಧೀಶರನ್ನು ಗುಂಡಿಕ್ಕಿ ಸಾಯಿಸಲಾಗಿತ್ತು. ಇದೀಗ ಕ್ಷಮಾದಾನದ ಹೆಸರಿನಲ್ಲಿ ಜೈಲಿನಲ್ಲಿದ್ದ ದಂಡಿತರನ್ನು ತಾಲಿಬಾನ್ ಬಿಡುಗಡೆ ಮಾಡಿದೆ. ಹೀಗೆ ಬಿಡುಗಡೆಯಾದವರು ತಮ್ಮನ್ನು ಜೈಲಿಗಟ್ಟಿದ ಮಹಿಳಾ ನ್ಯಾಯಾಧೀಶರನ್ನು ಗುರಿಯಾಗಿಸಿರುವ ಆತಂಕ ಮೂಡಿದೆ. ಸುಮಾರು ೨೫೦ ಮಹಿಳಾ ನ್ಯಾಯಾಧೀಶರ ಜೀವ ಅಪಾಯವನ್ನು ಎದುರಿಸುತ್ತಿದೆ. ಸಾವಿರಾರು ಮಂದಿ ಮಹಿಳಾ ಹಕ್ಕು ಹೋರಾಟಗಾರರಿಗೆ ಜೀವಬೆದರಿಕೆಯಿದೆ. ಇತ್ತೀಚಿನ ಒಂದು ವರದಿಯಂತೆ ಘೋರ್ ಪ್ರಾಂತದಲ್ಲಿ ಪತಿ ಮತ್ತು ಮಕ್ಕಳ ಎದುರೇ ಓರ್ವ ಮಹಿಳಾ ಪೊಲೀಸ್ ಅಧಿಕಾರಿಯನ್ನು ತಾಲಿಬಾನ್ ಪುಂಡರು ಗುಂಡು ಹೊಡೆದು ಸಾಯಿಸಿದ್ದಾರೆ. ತಾಲಿಬಾನ್ ಆಗಮನದ ಅಪಾಯವನ್ನು ಕಂಡು ಪ್ರಾಣವನ್ನೇ ಪಣವಾಗಿಟ್ಟು ಆಫಘಾನ್ನಿಂದ ಪಲಾಯನಗೈದ ಚಲನಚಿತ್ರ ನಿರ್ಮಾಪಕಿ ಶಾಹರಾಬಾನೋ ಸಾದತ್, ರೋಯಾ ಹೈದಿರಿ ಮತ್ತು ಕೆಲವು ಮಹಿಳಾ ಹಕ್ಕು ಹೋರಾಟಗಾರರು ಆಫಘಾನ್ ಮಹಿಳೆಯರಿಗೆ ಎದುರಾಗಿರುವ ಅಪಾಯವನ್ನು ಎಳೆಎಳೆಯಾಗಿ ಬಿಚ್ಚಿಟ್ಟರೂ, ವಿಶ್ವದ ತಥಾಕಥಿತ ಮಾನವಹಕ್ಕು ಹೋರಾಟಗಾರ ಸಂಸ್ಥೆಗಳು, ನಾಯಕರು ಮಾತ್ರ ಮೌನ ಮುರಿಯಲು ಮುಂದಾಗಿಲ್ಲ!
ಈ ಎಲ್ಲ ವೈರುಧ್ಯಗಳ ಹೊರತಾಗಿಯೂ ಆಫಘಾನ್ ಮಹಿಳೆಯರು ತಾಲಿಬಾನ್ ಆದೇಶವನ್ನು ಧಿಕ್ಕರಿಸಿ ತಮ್ಮ ದೇಶ, ಸ್ವಾತಂತ್ರ್ಯ ಹಕ್ಕುಗಳಿಗಾಗಿ ಬೀದಿಗಿಳಿದಿದ್ದಾರೆ; ಬಂದೂಕು ಹಿಡಿದ ತಾಲಿಬಾನ್ ಮುಜಾಹಿದ್ದೀನರಿಗೆ ನಿಶ್ಶಸ್ತ್ರರಾಗಿ ಸವಾಲೊಡ್ಡಿದ್ದಾರೆ.