ಮರ ಕಡಿಯುವುದು, ಗಿಡಗಂಟಿಗಳನ್ನು ನೆಲಸಮ ಮಾಡುವುದು ಅನಿವಾರ್ಯ ಹಾಗೂ ಸಹಜವೇನೋ ಎಂದೂ ಯೋಚಿಸತೊಡಗಿದ. ನಾವೂ ಪ್ರಕೃತಿಯನ್ನು ಶೋಷಣೆ ಮಾಡುತ್ತೇವೆ. ಆದರೆ ಇದನ್ನೇ ಇನ್ನೊಬ್ಬರು ಮಾಡಿದಾಗ ಮಾತ್ರ ನೊಂದುಕೊಳ್ಳುತ್ತೇವೆ, ಎಲಾ ಇವನಾ! ಪ್ರಕೃತಿಯ ಧ್ವಂಸ ಒಂದೆಡೆಯಾದರೆ ಮನಸ್ಸಿನ hyprocrisy ಇನ್ನೊಂದೆಡೆ ಇದೆಯಲ್ಲಾ, ಎಂದೂ ಯೋಚಿಸತೊಡಗಿದ.
ಕೇಶವ, ಜೀವನೋತ್ಸಾಹದಿಂದ ತುಂಬಿ ತುಳುಕುತ್ತಿದ್ದ ಯುವಕ. ಇಂಜಿನಿಯರಿಂಗೆ ವ್ಯಾಸಂಗದ ಕಡೆಯ ಹಂತದಲ್ಲಿದ್ದ. ಮನೆ ಚಂದ್ರಾಪುರ ಸಿಟಿ ಹೊರವಲಯದಲ್ಲಿನ ಆರ್.ಜಿ. ನಗರದಲ್ಲಿತ್ತು. ಪರೀಕ್ಷೆ ಸಿದ್ಧತೆಗೆಂದು ಕೊಟ್ಟಿದ್ದ ರಜೆಯಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೆ ಓದುತ್ತಿದ್ದ. ಸಂಜೆ ಮನೆಯ ಹತ್ತಿರದಲ್ಲಿದ್ದ ಉದ್ಯಾನವನಕ್ಕೆ ವಾಯು ವಿಹಾರಕ್ಕಾಗಿ ಹೋಗಿ ಗಿಡ, ಮರ, ಪಕ್ಷಿ, ಕೀಟ, ಎಲ್ಲವನ್ನೂ ಆಸಕ್ತಿಯಿಂದ ನೋಡುವುದು, ಅದರ ಬಗ್ಗೆ ತಿಳಿದುಕೊಳ್ಳುವುದು ಅವನ ಅಭಿರುಚಿಯಾಗಿತ್ತು. ಆದರೆ ಗುರುವಾರ ಸಂಜೆಯಂದು ಮಾತ್ರ ರಾಯರ ಬೃಂದಾವನ ಹಾಗೂ ನರಹರಿ ಮೂರ್ತಿಯಿದ್ದ ಒಂದು ಮಂದಿರಕ್ಕೆ ಹೋಗುವ ವಾಡಿಕೆ ಇರಿಸಿಕೊಂಡಿದ್ದ.
ಒಂದು ಗುರುವಾರ ಸಂಜೆ, ನರಹರಿ ಮಂದಿರಕ್ಕೆ ಹೋಗುತ್ತಿದ್ದಾಗ ದಾರಿಯ ಎಡ ಬದಿಯಲ್ಲಿ ಹಿಂದೆ ಇದ್ದ ಬೃಹತ್ ಹುಣಸೆಮರ ಅವನ ನೆನಪಿಗೆ ಬಂತು. ಇಂದು ಆ ಮರದ ಜಾಗದಲ್ಲಿ ಎರಡಂತಸ್ತಿನ ಕಟ್ಟಡ ನಿರ್ಮಾಣವಾಗಿದೆ. ಕೆಲವೇ ವರ್ಷಗಳ ಹಿಂದೆ ಅದರ ಕೆಳಗೆ ಆಟವಾಡಿ ದಣಿವಾರಿಸಿಕೊಂಡು, ಹುಣಸೆಕಾಯಿ ಹಾಗೂ ಅದರ ಚಿಗುರನ್ನು ತಿನ್ನುತ್ತಿದ್ದುದನ್ನು ಮೆಲುಕು ಹಾಕಿದ. ನಿಸ್ತೇಜವಾಗಿ ನಿಂತಿರುವ ಕಟ್ಟಡವನ್ನು ನೋಡಿ, ಮನಸ್ಸಿಗೆ ಏನೋ ಕುಟುಕಿದಂತಾಯಿತು. ನಗರೀಕರಣದ ಪ್ರಭಾವ ನಗರದೊಳಗಿಂತ, ನಗರದ ಹೊರವಲಯಗಳಲ್ಲಿ ದೃಗ್ಗೋಚರವಾಗಿ ಕಾಣುತ್ತಿದೆಯಲ್ಲ ಎಂದು ಯೋಚಿಸುತ್ತಾ ಮಂದಿರದ ದಾರಿಯಲ್ಲಿ ಹೆಜ್ಜೆ ಹಾಕತೊಡಗಿದ.
ತಲೆಯೊಳಗೆ ವಿಚಾರಗಳ ಸುನಾಮಿಯೇ ಎದ್ದಿತ್ತು. ಬಹುಶಃ, ಅಪ್ಪ ನಮ್ಮ ಮನೆಯನ್ನು ಕಟ್ಟುವ ಮೊದಲು ಆ ಜಾಗದಲ್ಲಿದ್ದ ಮರಗಳನ್ನು ಕಡಿದಿರಬೇಕು ಎಂಬ ಯೋಚನೆಯ ಜೊತೆಗೆ ಜನ ಹೀಗೇಕೆ ಮಾಡುತ್ತಾರೆ ಎಂಬ ಯೋಚನೆಯೂ ಬೆನ್ನಲ್ಲೇ ಬಂದಿತು.
ಮರ ಕಡಿಯುವುದು, ಗಿಡಗಂಟಿಗಳನ್ನು ನೆಲಸಮ ಮಾಡುವುದು ಅನಿವಾರ್ಯ ಹಾಗೂ ಸಹಜವೇನೋ ಎಂದೂ ಯೋಚಿಸತೊಡಗಿದ. ನಾವೂ ಪ್ರಕೃತಿಯನ್ನು ಶೋಷಣೆ ಮಾಡುತ್ತೇವೆ. ಆದರೆ ಇದನ್ನೇ ಇನ್ನೊಬ್ಬರು ಮಾಡಿದಾಗ ಮಾತ್ರ ನೊಂದುಕೊಳ್ಳುತ್ತೇವೆ, ಎಲಾ ಇವನಾ! ಪ್ರಕೃತಿಯ ಧ್ವಂಸ ಒಂದೆಡೆಯಾದರೆ ಮನಸ್ಸಿನ hyprocrisy ಇನ್ನೊಂದೆಡೆ ಇದೆಯಲ್ಲಾ, ಎಂದೂ ಯೋಚಿಸತೊಡಗಿದ. ನಗರದಲ್ಲಿದ್ದುಕೊಂಡು ನಗರೀಕರಣವನ್ನು ಬೈಯುವುದು, ಹಸುಸಾಕದೆ ಗೋಸೇವೆ ಬಗ್ಗೆ ಮಾತನಾಡುವುದು, ಕಾರು-ಬೈಕುಗಳಲ್ಲಿ ಓಡಾಡುತ್ತಾ ರೈತರಿಗೆ ಟ್ರ್ಯಾಕ್ಟರ್ ಬದಲು ಎತ್ತುಗಳನ್ನು ಉಪಯೋಗಿಸಿ ಎಂದು ಹಿತವಚನ ನೀಡುವುದು – ಇವೆಲ್ಲಾ ಒಂದು ರೀತಿಯ ಕಪಿಚೇಷ್ಟೆಯ ಹಾಗೆ ಕಾಣತೊಡಗಿತು.
ಈ ವಿಚಾರ ಮಂಥನದಿಂದ ಒಂದು ಕ್ಷಣ ಹೊರಬಂದ. ಎದುರಿಗೆ ನರಹರಿ ಮಂದಿರ, ಬಲಗಡೆ ಒಂದು ಬೃಹತ್ ಬೇವಿನ ಮರ, ಮರದ ಅಡಿ ಅಲ್ಪ-ಸ್ವಲ್ಪ ಶಿಥಿಲವಾದ ಒಂದು ಗುಡಿ, ಎರಡೂ ಕಣ್ಣಿಗೆ ಬಿತ್ತು. ಮೂರು ನಾಲ್ಕು ವರ್ಷಗಳ ಹಿಂದೆ ನರಹರಿ ಮಂದಿರ ಅಲ್ಲಿರಲಿಲ್ಲ. ಅದೊಂದು ಬಯಲು ಪ್ರದೇಶವಾಗಿತ್ತು. ಆದರೆ ಆ ದೊಡ್ಡ ಬೇವಿನ ಮರದ ಕೆಳಗಿದ್ದ ಗುಡಿ ಮುಂಚಿನಿಂದಲೂ ಇದ್ದದ್ದು ನೆನಪಿಗೆ ಬಂತು. ಮುಂಚಿನಿಂದಲೂ ಇದ್ದ ಆ ಗುಡಿಗೆ ನಾನು ಎಂದೂ ಹೋಗಿಲ್ಲವಲ್ಲಾ, ಆದರೆ ಇತ್ತೀಚೆಗಷ್ಟೇ ನಿರ್ಮಾಣವಾದ ನರಹರಿ ಮಂದಿರಕ್ಕೆ ಮಾತ್ರ ಭೇಟಿ ಕೊಡುತ್ತಿದ್ದೇನೆ. ಇದು ಒಂದು ರೀತಿಯ ತಾರತಮ್ಯವಲ್ಲವೇ? ಎಂಬುದು ಕೇಶವನ ಮನಕ್ಕೆ ಹೊಕ್ಕಿತು. ನರಹರಿ ಮಂದಿರ ನಗರೀಕರಣದ ಯಶಸ್ಸನ್ನು ಎತ್ತಿ ಹಿಡಿದಂತೆಯೂ, ಬೇವಿನ ಮರದ ಕೆಳಗೆ ಶಿಥಿಲವಾದ ಗುಡಿ, ಸೋತು ಸೊರಗಿರುವ ಗ್ರಾಮೀಣ ಸಂಸ್ಕೃತಿಯ ಪ್ರತೀಕದಂತೆಯೂ ಕಾಣತೊಡಗಿತು. ಏನಾದರೂ ಸಿಗುತ್ತದೆಯೆಂದೋ ಏನೋ ಜನ ಗೆದ್ದವರ ಹಿಂದೆ ಹಲ್ಲು ಕಿರಿಯುತ್ತಾರೆ. ಆದರೆ ನಾನು ಮಾತ್ರ ಸೋತವರ ಜೊತೆಯಿದ್ದು ಅವರನ್ನು ಮೇಲೇಳಿಸಲು ಪ್ರಯತ್ನಿಸಬೇಕು ಎಂದು ತೀರ್ಮಾನಿಸಿ, ಬಲಗಡೆಯಿದ್ದ ಗುಡಿಯ ಕಡೆಗೆ ಹೆಜ್ಜೆಯನ್ನಿರಿಸಿದ.
ಗುಡಿಯ ಆವರಣದಲ್ಲಿ ಯಾರೂ ಇರಲಿಲ್ಲ. ಅಲ್ಲಿಂದಲೆ ಒಮ್ಮೆ ನರಹರಿ ಮಂದಿರದ ಕಡೆಗೆ ಕಣ್ಣುಹಾಯಿಸಿದ ಕೇಶವ. ಎಲ್ಲಾ ಆಕೃತಿಯ, ಆಕಾರದ ಜನರು ಮಂದಿರಕ್ಕೆ ಬಂದು ಸೇರುತ್ತಿರುವುದನ್ನು ಗಮನಿಸಿದ. ಕತ್ತು ಹೊರಳಿಸಿದಾಗ ಗುಡಿಯ ಗೋಡೆಯ ಮೇಲೆ ಬರೆದಿದ್ದನ್ನು ನಿಧಾನವಾಗಿ ಓದಿದ, ಕಪ್ಪೆ ಶಿಂಗನಹಳ್ಳಿ, ಮೂಗು ಮಾರಮ್ಮನ ಗುಡಿ ಎಂದು. ತಲೆಯೊಳಗೆ ಏನೋ ಮಿಂಚಿದಂತಾಯಿತು. ಮನೆ ಎಲ್ಲಿ ಕಟ್ಟುತ್ತಿದ್ದೀರಿ? ಎಂದು ಯಾರಾದರೂ ಅಪ್ಪ-ಅಮ್ಮನಿಗೆ ಕೇಳಿದರೆ, ಕೆ. ಶಿಂಗನಹಳ್ಳಿ ಲೇಔಟ್ನಲ್ಲಿ ಎಂದು ಉತ್ತರಿಸುತ್ತಿದ್ದುದು ನೆನಪಿಗೆ ಬಂತು. (ಕಪ್ಪೆ ಎಂಬ ಪದ ಹೇಳಲು ಅಸಹ್ಯಪಟ್ಟೋ ಏನೋ, ಕೆ. ಶಿಂಗನಹಳ್ಳಿ ಎಂದು ಜನ ಕರೆಯುತ್ತಿದ್ದರು ಎಂದುಕೊಂಡನು.) ಈಗ ಇದು ನಗರದೊಳಗೊಂದು ಭಾಗವಾಗಿದ್ದು, ಛಿiಣಥಿ ಛಿoಡಿಠಿoಡಿಚಿಣioಟಿ ಇದಕ್ಕೆ ಆರ್.ಜಿ. ನಗರ್ ಎಂದು ನಾಮಕರಣ ಮಾಡಿದೆ. ಹೊರಗಿನವರು ನಮ್ಮ ದೇಶದ ಸಂಸ್ಕೃತಿಯ ಮೇಲೆ ಆಕ್ರಮಣ ಮಾಡಿದಾಗ, ಊರಿನ ಹೆಸರುಗಳು ಬದಲಾಗುತ್ತದೆ ಎಂದು, ಪ್ರಯಾಗ-ಇಲ್ಲಾಹಬಾದ್, ಕನ್ಯಾಕುಮಾರಿ-ಕೇಪ್ ಕಮರಿನ್ ಆಗುವುದರ ಬಗ್ಗೆ ಅರಿತಿದ್ದ ಕೇಶವನಿಗೆ ಕಪ್ಪೆ ಶಿಂಗನಹಳ್ಳಿ – ಆರ್.ಜಿ. ನಗರ್ ಎಂದು ನಾಮಾಂತರವಾಗಿರುವುದು ಅರಿವಿಗೆ ಬಂದಾಗ, ಹೊರಗಿನವರು ಹೆಸರಿನ ಮೇಲೆ ಆಕ್ರಮಣ ಮಾಡಿದ ಹಾಗೆ ನಾವೇ ನಮ್ಮ ಜನರ, ಅಶಕ್ತರ ಮೇಲೆ ಮಾಡುತ್ತಿದ್ದೇವಲ್ಲಾ ಎಂದು ಯೋಚಿಸಿ ಖಿನ್ನನಾದ.
ಯೋಚನೆಗಳು ಕೇಶವನನ್ನು ಸುಸ್ತು ಮಾಡಿದವು. ಇನ್ನು ವಿಚಾರ ಮಾಡಿದರೆ ತಲೆ ಸಿಡಿದು ಹೋಗುತ್ತದೆ ಎಂದು, ಇನ್ನು ಯೋಚನೆ ಮಾಡುವುದಿಲ್ಲವೆಂದು ತೀರ್ಮಾನಿಸಿ, ಗುಡಿಗೆ ಅಂಟಿಕೊಂಡಿದ್ದ ಚಪ್ಪಡಿಯ ಮೇಲೆ ಕುಳಿತ. ಸೂರ್ಯ ಮುಳುಗುವ ಹೊತ್ತು ಸಮೀಪಿಸಿದ್ದರಿಂದ ಸಣ್ಣ ಪುಟ್ಟ ಹಕ್ಕಿಗಳು ಬೇವಿನ ಮರದ ರೆಂಬೆ-ಕೊಂಬೆಗಳ ಮೇಲೆ ವಿಚಿತ್ರವಾದ ಸಣ್ಣ ಸದ್ದು ಮಾಡುತ್ತಾ ಕೂರುವುದು, ಹಾರುವುದು ಮಾಡುತ್ತಿತ್ತು. ಹಿತವಾಗಿ ಬೀಸುತ್ತಿದ್ದ ಗಾಳಿಗೆ ಬೇವಿನಮರದ ಎಲೆಗಳ ಸಪ್ಪಳ, ಹಿತಕರವಾಗಿದ್ದರಿಂದ ಸುಮ್ಮನೆ ಕೇಳುತ್ತಾ ಕುಳಿತ.
ದಿಢೀರನೆ, ಈ ಸೌಮ್ಯತೆಯನ್ನು ಸೀಳಿ ಢಂ, ಢಂ, ಢಳ್, ಢಳ್, ಪೋಂ…. ಎಂಬ ಶಬ್ದ ಯಂತ್ರಚಾಲಿತ ಗಂಟೆ, ಜಾಗಟೆಗಳಿಂದ, ನರಹರಿ ಮಂದಿರದಿಂದ ಕಿವಿಗಪ್ಪಳಿಸತೊಡಗಿತು. ಇವುಗಳ ಶಬ್ದ ಏಕೋ ಅಂದು ಕೇಶವನಿಗೆ ಕಿರಿ-ಕಿರಿ ಎನ್ನಿಸತೊಡಗಿತು. ಬೇಸರದಿಂದ ಎದ್ದುನಿಂತು ಮನೆಕಡೆಗೆ ಹೊರಡಲು ಎರಡೆಜ್ಜೆ ಹಾಕಿ ಒಮ್ಮೆ ನರಹರಿ ಮಂದಿರದ ಕಡೆಗೆ ನೋಡಿದ ಕೇಶವನಿಗೆ, ಮಂದಿರದ ಪ್ರವೇಶದ್ವಾರ ನೇರವಿದ್ದುದರಿಂದ, ಶಾಂತ ನರಹರಿ ಮೂರ್ತಿಗೆ ಮಂಗಳಾರತಿ ಮಾಡುತ್ತಿದ್ದುದು ಕಂಡಿತು. ದೇವಸ್ಥಾನಕ್ಕೆಂದು ಬಂದು ದೇವಸ್ಥಾನಕ್ಕೆ ಹೋಗದೆ, ಮಂಗಳಾರತಿಯ ಸಮಯದಲ್ಲಿ ದೇವರಿಗೆ ಬೆನ್ನುತೋರಿಸಿ ಹೋಗುವುದು ತರವಲ್ಲ ಎಂದು ಭಾವಿಸಿ, ನರಹರಿ ಮಂದಿರಕ್ಕೆ ಧಾವಿಸಿದ. ಇಷ್ಟುದಿನ ಮನಸ್ಸಿಗೆ ನೆಮ್ಮದಿ ನೀಡುತ್ತಿದ್ದ ಸ್ಥಳ, ಇಂದು ವಿಪ್ಲವ ಮನಸ್ಸಿಗೆ ವೇದಿಕೆಯಾಗಿತ್ತು. ಆದರೂ, ಕೇವಲ ಮೂರ್ತಿಯನ್ನು ನೋಡದೆ ಅದರ ಹಿಂದಿನ ಶಕ್ತಿಗೆ ನಮಿಸಿ, ತೀರ್ಥ, ಮಂತ್ರಾಕ್ಷತೆಯನ್ನು ತೆಗೆದುಕೊಂಡು ಹೊರಟ.
ರಸ್ತೆಯ ಬದಿಯಲ್ಲಿ ಕೆ. ಶಿಂಗನಹಳ್ಳಿ, ಮೂಗು ಮಾರಮ್ಮ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಎಂದು, ಅದರ ಕೆಳಗೆ <— ಇರುವ ಬೋರ್ಡ್ ನೆಟ್ಟಿದ್ದು ಕೇಶವನ ಕಣ್ಣಿಗೆ ಬಿತ್ತು. ಗುಡಿಯ ಬಗ್ಗೆ ತಿಳಿದುಕೊಳ್ಳಲು ಉತ್ಸಾಹವಿದ್ದುದರಿಂದ, ಆತ ದಿಕ್ಕು ಸೂಚಿಸಿದ್ದ ದಾರಿಯಲ್ಲೇ ನಡೆದ. ಹತ್ತಿಪ್ಪತ್ತು ಹೆಜ್ಜೆ ಇನ್ನೂ ಕ್ರಮಿಸಿಲ್ಲ; ಸಣ್ಣ ರಸ್ತೆಗಳು, ರಸ್ತೆಯ ಇಕ್ಕೆಲಗಳಲ್ಲಿ ದೊಡ್ಡ ಚಿಕ್ಕ ಹಂಚಿನ ಮನೆಗಳು, ಮನೆಯ ಮುಂದೆ ನೀರಿನ ನಲ್ಲಿಗಳು, ಜನರ ಉಡುಪು, ಭಾಷೆ ಕಂಡು ಆಶ್ಚರ್ಯಚಕಿತನಾದ. ಸಿಟಿ ಒಳಗಡಯೇ ಹಳ್ಳಿ ಇದೆಯಲ್ಲ ಎಂದುಕೊಂಡ. ಮೂಗು ಮಾರಮ್ಮ ದೇವಸ್ಥಾನ ಜೀರ್ಣೊದ್ಧಾರ ಸಮಿತಿ ಎಂದು ಒಂದು ಮನೆಯ ಗೋಡೆಯ ಮೇಲೆ ಬರೆದಿದ್ದನ್ನು ಓದಿದ. ಮನೆಯಲ್ಲಿ ಯಾರೂ ಇದ್ದಂತೆ ಕಾಣಲಿಲ್ಲ. ಹಿಂದಿರುಗಿ ತನ್ನ ಮನೆಯ ಕಡೆ ಹೆಜ್ಜೆಯನ್ನಿರಿಸುತ್ತಾ ಇದೇ ಮೂಲ ಊರಿರಬೇಕು, ಲೇಔಟ್ಗೆ ಜಮೀನನ್ನು ಮಾರಿದ್ದರೂ ಮನೆಯನ್ನು ಮಾರದೆ ಇಲ್ಲೇ ವಾಸವಿದ್ದಾರೆ. ಅವರ ಜಮೀನಿನಲ್ಲೇ ನಾವಿಂದು ಜೀವನ ಮಾಡುತ್ತಿದ್ದೇವೆ. ಸಿಟಿ ಹಳ್ಳಿಯನ್ನು ಆಕ್ಟೋಪಸ್ ರೀತಿ ಕಬಳಿಸಿ ನುಂಗಿದೆ. ಘೋರ, ಆದರೂ ಇದು ನ್ಯಾಚುರಲ್! ಎಂದು ಯೋಚಿಸಿ ಉಫ್ ಎಂದು ಉಸಿರುಬಿಟ್ಟು ಮನೆ ಸೇರಿದ.
ಮರುದಿನ ಬೆಳಗ್ಗೆ ಸ್ನಾನದ ನಂತರ ಏಕೋ ಏನೋ ಮತ್ತೊಮ್ಮೆ ಮೂಗು ಮಾರಮ್ಮನ ಗುಡಿಗೆ ಹೋಗಬೇಕೆಂದೆನಿಸಿತು. ಕೇಶವ, ಏಕೆಂದು ಹೆಚ್ಚು ಯೋಚಿಸದೆ ಗುಡಿಗೆ ಹೋದ. ದೊಡ್ಡ ಬೇವಿನ ಮರದ ಹೊರಚಾಚಿದ ಕೊಂಬೆಗಳನ್ನು ಒಬ್ಬ ವ್ಯಕ್ತಿ ಕಡಿಯುತ್ತಿದ್ದ. ಕೇಶವ ಗಾಬರಿಗೊಂಡು ಹತ್ತಿರ ಹೋಗಿ ಸರ್… ಅಲ್ಲಾ ಅಣ್ಣಾ, ನೀವು ಕೇವಲ ಕೊಂಬೆ ಕತ್ತರಿಸುತ್ತಿರುವಿರಿ ತಾನೆ? ಎಂದು ಪ್ರಶ್ನಿಸಿದ. ಅದಕ್ಕೆ ಆತ ಇಲ್ಲಾ ಸಾರ್, ಮರನೇ ಕಡಿಯಕ್ಕೆ ಹೇಳವ್ರೆ ಎಂದ. ಯಾರು? ಎಂದು ಕೇಶವ ಮರುಪ್ರಶ್ನಿಸಿದ. ಗುಡಿದು ಸಮಿತಿ ಇದ್ಯಲ್ಲಾ ಅದ್ರ ಅಧ್ಯಕ್ಸರು ಎಂದನು. ಮುಂದುವರಿಸಿ, ದೊಡ್ಡ ಮರ ಅಲ್ಲವ್ರ ಅದಕ್ಕೆ ಇವತ್ತು ರೆಂಬೆಗಳನ್ನು ಕಡಿದು ನಾಳೆ ಕಾಂಡ ಕಡಿಯುತ್ತೇನೆ ಎಂದ. ಮರವಿಲ್ಲದ ಗುಡಿಯ ಚಿತ್ರವನ್ನು ಊಹಿಸಿ, ಕೇಶವ ಥೂ….. ಮರ ಕಡಿಯುವುದು ಎಲ್ಲರಿಗೂ ಒಂದು ಚಟವಾಗಿ ಬಿಟ್ಟದೆ ಎಂದು ಮನಸ್ಸಿನಲಿಯೇ ಗೊಣಗತೊಡಗಿದ. ಗುಡಿ ಗ್ರಾಮದ ದ್ಯೋತಕವಾಗಿದೆ. ಮರವಿಲ್ಲದೆ ಗುಡಿ ಇರಲು ಸಾಧ್ಯವಿಲ್ಲ. ಗುಡಿಯ ಅಸ್ತಿತ್ವವಿರುವುದೇ ಗುಡಿಯ ಪಕ್ಕದಲ್ಲಿರುವ ಮರದಿಂದ. ಬರೀ ನೊಂದರೆ ಪ್ರಯೋಜನವಿಲ್ಲ. ಮರವನ್ನು ಉಳಿಸಿ, ಗುಡಿಯನ್ನು ಹಾಗೂ ಗ್ರಾಮೀಣ ಸೊಗಡನ್ನು ಉಳಿಸಲೇಬೇಕೆಂದು ನಿರ್ಧರಿಸಿದ. ಆದರೆ ಹೇಗೆ ಎನ್ನುವುದು ಕೇಶವನನ್ನು ಕಾಡತೊಡಗಿತು. ನಗರದಲ್ಲಿ ಬೆಳೆದಿದ್ದ ಅವನ ಬುದ್ಧಿ ಮಿಂಚಿನಂತೆ ಕೆಲಸ ಮಾಡಲು ಆರಂಭಿಸಿತು!
ಭಕ್ತಿ ಎಲ್ಲೂ ಇಲ್ಲ. ನಗರದ ದೇವಸ್ಥಾನಗಳಲ್ಲಿ ಆಡಂಬರ ಹಾಗೂ ವಿದ್ವತ್ತು ಪ್ರದರ್ಶನವಾದರೆ, ಗ್ರಾಮದ ಗುಡಿಗಳಲ್ಲಿ ಭಯ ಹಾಗೂ ಮೂಢನಂಬಿಕೆ ತಾಂಡವವಾಡುತ್ತದೆ. ಆದ್ದರಿಂದ ಈ ದೋಷವನ್ನೇ ಉಪಯೋಗಿಸಿ ಮರ, ಗುಡಿ ಹಾಗೂ ಸಿಟಿಯಲ್ಲಿರುವ ಗ್ರಾಮ ಸಂಸ್ಕೃತಿಯ ಉಳಿವಿಗೆ ಪ್ರಯತ್ನಪಡುತ್ತೇನೆ ಎಂದು ತೀರ್ಮಾನಿಸಿ ಮನೆಗೆ ಓಡಿದ. ತಿಂಡಿಯನ್ನೂ ತಿನ್ನದೆ ತನ್ನ ಕೋಣೆಗೆ ನುಗ್ಗಿ ಟೇಬಲ್ ಮೇಲೆ ಹರಡಿದ್ದ ಇಂಜಿನಿಯರಿಂಗ್ ಪುಸ್ತಕಗಳನ್ನು ಸರಿಸಿ ಒಂದು ಹಾಳೆಯನ್ನು, ಲೇಖನಿಯನ್ನು ತೆಗೆದು ಈ ರೀತಿ ಬರೆದ:
ಏಯ್! ಜನರೇ ಅನೇಕ ವರ್ಷಗಳಿಂದ ಬಿಸಿಲು, ಮಳೆಯಿಂದ ರಕ್ಷಿಸಿ ನಿಮಗೆ ಆಸರೆ ನೀಡಿದ ಬೇವಿನ ಮರವನ್ನು ಕಡಿಯಲು ಹೊರಟಿದ್ದೀರಾ? ನಿಮಗೆ ಒಳ್ಳೆಯದು ಆಗಲಿ, ನೀವೆಲ್ಲಾ ನನ್ನ ಆಸರೆಯಲ್ಲಿದ್ದರೆ ನಾನು ಬೇವಿನ ಮರದ ಅಸರೆಯಲ್ಲಿದ್ದೇನೆ. ಈ ಮರ ಕಡಿಯುವುದನ್ನು ತಕ್ಷಣ ನಿಲ್ಲಿಸಿ! ಈ ಪತ್ರ ಯಾರು ಬರೆದರು ಎಂದು ಯೋಚಿಸಬೇಡಿ. ಆದರೆ ಪತ್ರದಲ್ಲಿರುವ ಆಜ್ಞೆಯನ್ನು ಪಾಲಿಸಿ ಇಲ್ಲದಿದ್ದರೆ ಕೆಡುಕಾದೀತು, ಹುಷಾರ್ ಎಂದು ಮೂಗು ಮಾರಮ್ಮನೇ ಬರೆದಿರುವಂತೆ ಅಥವಾ ಬರೆಸಿರುವಂತೆ ಬರೆದು, ಈ ಪತ್ರವನ್ನು ಯಾರೂ ಇಲ್ಲದಿರುವ ಸಂಜೆ ಸಮಯಕ್ಕೆ ಹೋಗಿ ಮರಕ್ಕೆ ತಗಲುಹಾಕಬೇಕು. ನಾಳೆ ನೋಡಿ ಗ್ರಾಮಸ್ಥರು ಹೆದರಿ ಮರ ಕಡಿಯುವುದನ್ನು ನಿಲ್ಲಿಸುತ್ತಾರೆ. – ಇದು ಕೇಶವನ ಪ್ಲಾನ್ ಆಗಿತ್ತು.
ನಿನ್ನೆಯ ಹಾಗೆ ಸಂಜೆ ಸುಮಾರು ೬.೩೦ಕ್ಕೆ ಹೋಗಿ ಈ ಪತ್ರವನ್ನು ತಗುಲುಹಾಕಲು ತೀರ್ಮಾನಿಸಿದ. ಅಲ್ಲಿಯವರೆಗೆ ಇಂಜಿನಿಯರಿಂಗ್ ಪುಸ್ತಕ ಓದುತ್ತಿದ್ದರೂ ಮನಸ್ಸು ಮಾತ್ರ ಗಡಿಯಾರ ೬.೩೦ ಆಗುವುದನ್ನೇ ಎದುರು ನೋಡುತ್ತಿತ್ತು. ಸಂಜೆ ೬.೩೦ಕ್ಕೆ ಸರಿಯಾಗಿ ೪ ಚಿಕ್ಕ ಮೊಳೆ, ಮೊಳೆ ಹೊಡೆಯುವುದಕ್ಕೆ ಒಂದು ಕಲ್ಲು ಹಾಗೂ ಪತ್ರವನ್ನು ಜೇಬಿನೊಳಗೆ ತುರುಕಿಕೊಂಡು ಗುಡಿಯ ಕಡೆ ಉತ್ಸಾಹದಿಂದಲೆ ಧಾವಿಸಿದ.
ಅದೇನಾಶ್ಚರ್ಯ! ಎಂದೂ ಜನಗಳು ಬಾರದೇ ಇದ್ದ ಗುಡಿಯಲ್ಲಿ ಅಂದು ಬಹಳ ಜನ ಸೇರಿದ್ದಾರೆ. ಒಂದು ಕಡೆ ಪೂಜೆ ನಡೆಯುತ್ತಿದ್ದರೆ, ಇನ್ನೊಂದು ಕಡೆ ಅಡುಗೆಗೆ ಜನ ಸಿದ್ಧತೆ ನಡೆಸುತ್ತಿದ್ದಾರೆ. ಮತ್ತೊಂದು ಕಡೆ ಜನರು ಕುಳಿತುಕೊಂಡು ಏನನ್ನೋ ಚರ್ಚಿಸುತ್ತಿದ್ದಾರೆ. ಎಪ್ಪಾ…. ಒಂದು ಒಳ್ಳೆ ಕೆಲಸಮಾಡಲು ಎಷ್ಟೊಂದು ತೊಂದರೆಗಳು, ಯಾರೂ ಇರುವುದಿಲ್ಲ, ಈ ಪತ್ರವನ್ನು ನೇತುಹಾಕೋಣ ಎಂದರೆ ಜಾತ್ರೆ ಥರ ಜನ ಸೇರದ್ದಾರಲ್ಲ. ಇವತ್ತು ಈ ಪತ್ರ ಹಾಕಲಾಗುವುದಿಲ್ಲ. ನಾಳೆ ಹಾಕೋಣವೆಂದರೆ ಪೂರ್ಣ ಕಡಿದು ಹಾಕಿರುತ್ತಾರೆ. ಏನು ಮಾಡುವುದು? ಎಂದು ಮನಸ್ಸಿನಲ್ಲೇ ಕೇಳಿಕೊಂಡ.
ಇವತ್ತು ಎಕಿಷ್ಟು ಜನ ಸೇರಿದ್ದಾರೆ ಎಂದು ತಿಳಿದುಕೊಳ್ಳಲು ಚರ್ಚೆ ನಡೆಸುತ್ತಿದ್ದ ಗುಂಪಿನ ಬಳಿಗೆ ಹೋದ. ಪೂರ್ಣತೋಳಿನ ಬಿಳಿ ಬಟ್ಟೆ, ಬಿಳಿ ಪಂಚೆ ಧರಿಸಿದ್ದ ಒಬ್ಬ ಮಧ್ಯವಯಸ್ಸಿನ ವ್ಯಕ್ತಿ ಎದ್ದು ಕೇಶವನನ್ನು ಬನ್ನಿ ಸಾರ್… ನನ್ನ ಹೆಸರು ನಿಂಗೇಗೌಡ, ಮೂಗು ಮಾರಮ್ಮ ದೇವಸ್ಥಾನ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಸ. ನಿಮ್ಮನ್ನ ಒಂದೆರಡು ಬಾರಿ ರಸ್ತೆಯಲ್ಲಿ ನೋಡಿದ್ದೇನೆ. ಏನ್ ವಿಷ್ಯ ಸರ್? ನಮ್ ಗುಡಿಗಂಟ ಬಂದಿದ್ದೀರಾ. ತುಂಬಾ ಸಂತೋಸ ಬನ್ನಿ ಬನ್ನಿ ಎಂದರು.
ಏನಿಲ್ಲಾ ಸಾರ್… ಆ ಗೌಡ್ರೆ, ಸುಮ್ನೆ ಈ ಕಡೆ ಬಂದಿದ್ದೆ. ತುಂಬ ಜನ ಸೇರಿದ್ರಲ್ಲಾ, ಜಾತ್ರೆನಾ ಇವತ್ತು ಇಲ್ಲಿ ಅಂತ ನೋಡಕ್ಕೆ ಬಂದೆ ಅಷ್ಟೆ ಎಂದ ಕೇಶವ. ಏ ನಿಮ್ಮಂಥವರು ಬರಬೇಕು ಸಾರ್… ನಮಗೂ ಒಂದಿಷ್ಟು ಬುದ್ದಿ ಬರುತ್ತೇ. ಜಾತ್ರೆ-ಗೀತ್ರೆ ಏನಿಲ್ಲಾ. ಇವತ್ತು ಅಮಾವಾಸೆ, ಶುಕ್ರವಾರ ಬೇರೆ ಅಲ್ಲವ್ರಾ ಅದಕ್ಕೆ ಗ್ರಾಮದವರೆಲ್ಲ ಸೇರಿದ್ದೀವಿ ಅಷ್ಟೆ. ಬನ್ನಿ ಕೂತ್ಕೊಳ್ಳಿ ಎಂದರು ನಿಂಗೆಗೌಡರು.
ನಿಂಗೇಗೌಡರು ಮತ್ತು ಕೇಶವ ಮಾತನಾಡುತ್ತಿದ್ದರೆ ಉಳಿದವರೆಲ್ಲಾ ಮಾತುನಿಲ್ಲಿಸಿ ಇವರನ್ನೇ ನೋಡುತ್ತಿದ್ದರು. ಅಯ್ಯೋ ಸಾರ್… ಅಲ್ಲಾ ಗೌಡ್ರೇ, ಏನೊ ಸೀರಿಯಸ್ ಆಗಿ ನೀವೆಲ್ಲಾ ಮಾತನಾಡುತ್ತಿದ್ರಿ, ನೀವು ಮುಂದುವರಿಸಿ. ನಾನು ದೇವರಿಗೆ ನಮಸ್ಕಾರ ಮಾಡಿ ಹೊರಡುತ್ತೇನೆ ಎಂದ ಕೇಶವ.
ಅದಕ್ಕೆ ನಿಂಗೇಗೌಡರು, ಅಂಥದ್ದೇನು ಇಲ್ಲ ಸಾರ್.ದೇವಸ್ಥಾನ ರಿಪೇರಿ ಮಾಡುತ್ತಿದ್ದೇವಲ್ಲಾ ಅದರ ಬಗ್ಗೆ ಮಾತಾಡ್ತಿದ್ವಿ, ಬನ್ನಿ ನೀವೂ ನಮ್ನ ಸೇರಿಕೊಳ್ಳಿ ಎಂದರು.
ಇದು ದೇವಸ್ಥಾನ ಅಲ್ಲ. ಇದು ಗುಡಿ. ಗುಡೀನ ದೇವಸ್ಥಾನ ಮಾಡಬೇಕಾ? ಎಂದು ಕೇಳಲು ಕೇಶವ ಮುಂದಾದನಾದರೂ, ವಿಚಾರ ಮಂಡಿಸುವ ತವಕವನ್ನು ಹಿಡಿದು ನಿಲ್ಲಿಸಿದ.
ಜನರ ಮುಗ್ಧತೆಯನ್ನು, ಭಯವನ್ನು ಉಪಯೋಗಿಸಿಕೊಂಡು ಬುದ್ಧಿವಂತಿಕೆ ಬಳಸಿ ಗೆಲ್ಲುವುದಕ್ಕೆ ಹೊರಟಿದ್ದ ಕೇಶವನಿಗೆ ತನ್ನ ಪ್ಲಾನ್ ಏಕೋ ಇಷ್ಟವಾಗಲಿಲ್ಲ. ಬುದ್ಧಿವಂತಿಕೆಗಿಂತ ಹೃದಯವಂತಿಕೆಯ ಆಳ ಮತ್ತು ವಿಸ್ತಾರ ಬಹುದೊಡ್ಡದೆಂದು ಹೇಳಿದ್ದ ವಿವೇಕಾನಂದರ ಮಾತು ಸ್ಮೃತಿಗೆ ಹೊಕ್ಕಿತು. ತಕ್ಷಣ ಕೇಶವ ಗೌಡ್ರೆ ಹಾಗೂ ಇಲ್ಲಿರುವ ಜನರೆ, ನನ್ನದೊಂದು ವಿನಂತಿ. ದಯವಿಟ್ಟು ಆ ಬೇವಿನ ಮರವನ್ನು ಕಡಿಯುವುದನ್ನು ತಪ್ಪಿಸಿ. ಜನರು ಬರೀ ದೇವರಿಗಲ್ಲದೆ ಆ ಮರಕ್ಕೂ ಪೂಜೆ ಮಾಡಿದ್ದಾರೆ. ಮರ ಜೀವಂತ ದೇವರಲ್ಲವೇ? ಮರ ಕತ್ತರಿಸಲೇಬೇಕಾ? ಯೋಚನೆ ಮಾಡಿ. ಮೈಸೂರಿನ ಚಾಮುಂಡಿ ಬೆಟ್ಟದಲ್ಲೂ ಕೂಡ ಅಮ್ಮನವರ ಪಕ್ಕದಲ್ಲಿರುವ ಸಂಪಿಗೆ ಮರವನ್ನು ಉಳಿಸಿಕೊಂಡಿದ್ದಾರೆ. ಹಾಗೆಯೇ ನಾವು ಕೂಡ ಈ ಮರವನ್ನು ಉಳಿಸಿಕೊಂಡು ಜೀರ್ಣೊದ್ಧಾರ ಮಾಡಲು ಸಾಧ್ಯವಿಲ್ಲವೆ? ಎಂದು ಭಾವಪೂರ್ಣವಾಗಿ ನುಡಿದ. ಮೌನ ಎಲ್ಲವನ್ನೂ, ಎಲ್ಲರಲ್ಲೂ ಆವರಿಸಿತು.
ನಿಂಗೇಗೌಡರು, ಕೇಶವನ ಕೈ ಹಿಡಿದು, ಸಾರ್ ನೀವೇಳುವುದೆಲ್ಲಾ ಸತ್ಯವೇ. ಮೂಗು ಮಾರಮ್ಮ ನಮ್ಮ ಕಪ್ಪೆ ಶಿಂಗನಹಳ್ಳಿಯ ಗ್ರಾಮ ದೇವತೆ. ಅದರ ಪಕ್ಕದಲ್ಲಿರುವ ತಲೆತಲಾಂತರಗಳಿಂದ ಬಾಳಿರುವ ಮರವನ್ನು ಕಡಿಯಲು ನಮಗೆ ಇಷ್ಟಾನೂ ಇಲ್ಲ. ಜೊತೆಗೆ ಭಯವೂ ಇತ್ತು. ಆದ್ರಿಂದ್ಲೇ ನಾವು ದೇವರಲ್ಲಿ ರುಜು ಕೇಳಿ ಮುಂದುವರಿದದ್ದು. ಅರಣ್ಯ ಇಲಾಖೆ ಅನುಮತಿ ಕೋರಿದಾಗ ಅವರು ಮರವನ್ನು ಪರೀಕ್ಷಿಸಿ, ಇದು ತುಂಬಾ ಹಳೇಮರ; ಒಳಗೆ ಪೂರ್ತಿ ಪೊಳ್ಳಾಗಿದೆ. ಇದನ್ನು ತೆಗೆಯದೆ ಕಾಮಗಾರಿ ಮಾಡಿದಲ್ಲಿ ಮುಂದೊಂದು ದಿನ ಮರ ಕುಸಿದು ಬೀಳಬಹುದು ಎಂದರು. ಈ ಎಲ್ಲ ಕಾರಣದಿಂದಲೇ ಮರ ತೆಗೆಯಲು ನಿರ್ಧರಿಸಿದ್ದು ಸಾರ್. ಹೀಗಂತೀನಿ ಎಂದು ಬೇಜಾರು ಮಾಡಿಕೊಳ್ಳಬೇಡಿ. ಇತ್ತೀಚೆಗೆ ಬಂದ ದೇವಸ್ಥಾನಗಳು ಧೂಂ-ಧಾಮ್ ಆಗಿರಬೇಕಾದರೆ, ನಮ್ಮ ಗ್ರಾಮದೇವತೆ ಒಂದು ಬಿದ್ದುಹೋಗೋ ಗುಡಿಯಲ್ಲಿರುವುದನ್ನು ನೋಡಿದರೆ ಬೇಜಾರಾಗುತ್ತೆ ಸಾರ್. ಅದಕ್ಕೆ ಜೀರ್ಣೋದ್ಧಾರ ಮಾಡಲೇಬೇಕಾಗಿದೆ. ಮರ ತೆಗೆಯುವುದು ಅನಿವಾರ್ಯ ಸಾರ್ ಎಂದರು.
ಕೇಶವ ಮರುಮಾತನಾಡದೆ ತಲೆ ಕೆಳಗೆ ಮಾಡಿ ನಿಂತ. ಮತ್ತೆ ಮೌನ.
ನಿಂಗೇಗೌಡರೇ ಪುನಃ, ಆದರೆ ಸಾರ್. ನೀವೇಳುವುದರಲ್ಲೂ ಸತ್ಯ ಇದೆ. ಈಗಲೇ ಅಮ್ಮನವರ ಮುಂದೆ ಮಾತು ಕೊಡುತ್ತೇನೆ. ಈ ದೇವಸ್ಥಾನದ ಪಕ್ಕದಲ್ಲೇ ಐದು ಬೇವಿನ ಮರಗಳನ್ನು ಬೆಳೆಸುತ್ತೇನೆ ಸಾರ್ ಎಂದರು. ಅಧ್ಯಕ್ಷರ ಈ ಮಾತನ್ನು ಕೇಳಿ ಅಲ್ಲಿ ಕುಳಿತಿದ್ದವರೆಲ್ಲಾ ಚಪ್ಪಾಳೆ ತಟ್ಟಿದರು. ಕುಳಿತಿದ್ದವರಲ್ಲಿ ಒಬ್ಬರು ಎದ್ದು ನಿಂತು, ಈಗ ತೆಗೆಯುತ್ತಿರುವ ಬೇವಿನ ಮರದ ಬೀಜದಿಂದಲೇ ನಾನು ಮೂರು ಸಸಿಗಳನ್ನು ಬೆಳೆಸಿ ಇಲ್ಲಿ ನೆಡುತ್ತೇನೆ. ಆಗ ಇದೇ ಮರದ ಜೀವ ಇನ್ನೂ ಉಳಿಸಿದಂತಾಗುತ್ತಲ್ವರಾ? ಎಂದರು.
ಈ ಮಾತಿಗೆ ಕೇಶವ ಮನಸ್ಸಿನಲ್ಲಿಯೆ ವಾಹ್ ಎಂದುಕೊಂಡು ಅವರ ಕಡೆಗೆ ಕತ್ತನ್ನು ಬಾಗಿಸಿ ಕೈ ಮುಗಿದನು. ಅದಕ್ಕೂ ಜನರು ಚಪ್ಪಾಳೆ ತಟ್ಟಿದರು.
ಕೇಶವನು ಹುಮ್ಮಸ್ಸಿನಿಂದ ಆದರೂ ವಿನಮ್ರದಿಂದಲೇ ಪ್ಯಾಂಟಿನ ಜೇಬಿಗೆ ಕೈ ಹಾಕಿ ಪರ್ಸ್ ತೆಗೆದು ಅದರೊಳಗಿಂದ ೫೦೦ ರೂ. ತೆಗೆದು ನಿಂಗೇಗೌಡರ ಹಸ್ತಕ್ಕೆ ಇಟ್ಟು ಅದನ್ನು ಬೇವಿನ ಸಸಿ ತರಲು ಹಾಗೂ ಜೀರ್ಣೋದ್ಧಾರಕ್ಕೆ ಬಳಸಿಕೊಳ್ಳಲು ಹೇಳಿದ.
ಏ ಶಿವಣ್ಣಾ, ರಸೀದಿ ಪುಸ್ತಕದಾಗೆ… ಸಾರ್ ನಿಮ್ಮ ಹೆಸರು.. ಕೇಶವ. ಕೇಶವ, ೫೦೦ ರುಪಾಯಿ, ಇವತ್ತಿನ ತಾರೀಖು ಹಾಕಿ ಇವರಿಗೆ ಹರ್ದು ಕೊಡು ಎಂದರು ನಿಂಗೇಗೌಡರು, ಎತ್ತರದ ಧ್ವನಿಯಲ್ಲಿ.
ರಶೀದಿ ತೆಗೆದುಕೊಂಡು ಎಲ್ಲರಿಗೂ ನಮಿಸಿ, ದೇವರಿಗೂ ನಮಸ್ಕರಿಸಿ ಸಂತೃಪ್ತ ಭಾವನೆಯೊಂದಿಗೆ ಕೇಶವ ಗುಡಿಯಿಂದ ಹೊರ ನಡೆದನು.
ಏನೋ ಮರೆತವನಂತೆ ಥಟ್ ಅಂತ ನಿಂತು, ಹಿಂದೆ ತಿರುಗಿ ಬಡಬಡನೆ ನಡೆದನು ನರಹರಿಯ ಮಂದಿರದೆಡೆಗೆ.