ಒಬ್ಬ ರಾಜಕುಮಾರನಿಗೆ ಬೇಕಾದ ಕ್ರಮಶಿಕ್ಷಣ, ವಿದ್ಯಾಭ್ಯಾಸ ಎಲ್ಲ ನನಗಾಗಿತ್ತು. ಯುದ್ಧರಂಗದಲ್ಲಿ ಒಳ್ಳೆಯ ಯೋಧನೂ ಆಗುತ್ತಿದ್ದೆನೋ ಏನೋ, ನನ್ನ ಅಣ್ಣಂದಿರಂತೆ. ಎಷ್ಟು ಕಲಿತರೇನು, ಅದನ್ನು ಪ್ರಕಟಿಸುವ ಸಂದರ್ಭ ಬರಬೇಕಲ್ಲ? ನನ್ನ ಪಾಲಿಗೆ ಹಾಗೊಂದು ಸಂದರ್ಭ ಒದಗಿ ಬರಲೇ ಇಲ್ಲ. ಹೀಗಾಗಿ ನಾನು ಕಲಿತದ್ದೆಲ್ಲ ನನ್ನಲ್ಲಿ ಹೂತುಹೋಗಿತ್ತು. ಅದನ್ನು ಮತ್ತೆ ಮತ್ತೆ ಸುತ್ತಲಿದ್ದ ಸುಂದರಾಂಗಿಯರ ಎದುರು ವರ್ಣಿಸಿ ನಾನೊಬ್ಬ ಸಮರ್ಥ ಯೋಧ ಎಂದು ಅವರೆಲ್ಲ ನಂಬುವಂತೆ ಮಾಡಿದ್ದೆ. ಅವರು ಮಾತ್ರವಲ್ಲ ನಾನೇ ಸ್ವತಃ ಅದನ್ನು ನಂಬಿದ್ದೆ.
ಒಬ್ಬ ಯೋಧನಾಗಿ ಪಾಂಡವರ ಪಕ್ಷದಿಂದ ಹೋರಾಟಕ್ಕೆ ಸನ್ನದ್ಧನಾಗಿದ್ದೇನೆ. ನನ್ನ ತಂದೆ ವಿರಾಟ ರಾಜನೂ, ಸಹೋದರರೂ ಈ ಯುದ್ಧದಲ್ಲಿ ಭಾಗಿಗಳೇ. ನಮಗೆ ಈ ಯುದ್ಧದಲ್ಲಿ ಪಾಲ್ಗೊಳ್ಳುವ ಅವಕಾಶ ಬಂದುದು ಪಾಂಡವರ ಬಂಧುತ್ವದಿಂದಾಗಿ. ನಮ್ಮಷ್ಟಕ್ಕೆ ನಾವೇ ಇರಬಹುದಿತ್ತೋ ಏನೋ. ಆದರೆ ಧಾರ್ಮಿಕರಾದ ಪಾಂಡವರು ಮತ್ತು ಕೃಷ್ಣ ಧರ್ಮದ ಪ್ರತಿನಿಧಿಗಳಾಗಿ ನಮಗೆ ಗೋಚರಿಸಿದರು. ಧರ್ಮದ ಪರವಾಗಿ ಹೋರಾಡುವ ಸಂದರ್ಭ ಒದಗಿದಾಗ ಯಾವ ಕ್ಷತ್ರಿಯನಾದರೂ ಹಿಂದೆಗೆಯುವ ಪ್ರಮೇಯವುಂಟೆ? ಹಾಗಾಗಿ ನಾವೆಲ್ಲರೂ ರಣರಂಗಕ್ಕೆ ಪ್ರವೇಶಿಸಿದೆವು.
ನನ್ನ ತಂದೆಯಾಗಲಿ, ಸಹೋದರ ಶಂಖ, ಶ್ವೇತರಾಗಲಿ ಯುದ್ಧೋತ್ಸಾಹ ಹೊಂದಿದ್ದರೆ ಆಶ್ಚರ್ಯವೇನಿಲ್ಲ. ಅವರು ಸ್ವಭಾವತಃ ಯುದ್ಧಾಸಕ್ತರು. ಆದರೆ ನಾನು? ಬಹುಶಃ ಉಳಿದವರಿರಲಿ, ನಾನೇ ಹೀಗೆ ಕುರುಕ್ಷೇತ್ರದಲ್ಲಿ ಕಾದಾಡುವ ಸನ್ನಿವೇಶ ಬಂದೀತೆಂದು ಕಲ್ಪಿಸಿದವನಲ್ಲ. ಅದಕ್ಕೆ ಕಾರಣ ನನ್ನ ಹಿನ್ನೆಲೆ. ಸದಾ ಕಾಲ ನನ್ನ ಸುತ್ತ ಇದ್ದವರು ಹೆಣ್ಣುಮಕ್ಕಳು. ಅದರ ಅರ್ಥ ನಾನು ಕಾಮುಕ ಎಂದೇನೂ ಅಲ್ಲ. ಅಷ್ಟೆಲ್ಲ ದುರ್ಬುದ್ಧಿ ಹುಟ್ಟುವ ವಯಸ್ಸೂ ನನಗಾಗಿರಲಿಲ್ಲ. ನನ್ನ ಆತ್ಮತೃಪ್ತಿಗೆ ಆ ಹೆಣ್ಣುಮಕ್ಕಳು ನೀರೆರೆಯುತ್ತಿದ್ದರು. ನಿನ್ನಷ್ಟು ದೊಡ್ಡ ವೀರ ಬೇರೆ ಇಲ್ಲ ಎಂದು ಉಬ್ಬಿಸುತ್ತಿದ್ದರು. ಅಂತಃಪುರದ ಆವರಣದಲ್ಲಿ ಅದನ್ನು ಆಕ್ಷೇಪಿಸುವವರೂ ಇರಲಿಲ್ಲ.
ನನ್ನ ಓರಗೆಯ ಹುಡುಗರ ಜತೆ ನಾನು ಗೆಳೆತನ ಬೆಳೆಸಿದ್ದಾಗಲಿ, ಒಡನಾಡಿದ್ದಾಗಲೀ ಇಲ್ಲ. ಹೆಚ್ಚೇನು, ನನ್ನ ತಂಗಿ ಉತ್ತರೆಯನ್ನು ಬಿಟ್ಟರೆ ನನಗೆ ಅಣ್ಣಂದಿರ ಆತ್ಮೀಯತೆಯೂ ಇರಲಿಲ್ಲ. ನನ್ನ ಅಂತಃಪುರದಲ್ಲಿ ದಿನೇ ದಿನೇ ಎಳೆವರೆಯದ ಹೆಣ್ಣುಗಳ ಸಂಖ್ಯೆ ಹೆಚ್ಚುತ್ತಿತ್ತು. ನನಗೆ ಬೇಕಾಗಿ ಅಲ್ಲ. ಅದರ ಕಾರಣ ಬೇರೆಯೇ ಇತ್ತು. ನನ್ನಿಂದ ಅಪಾಯವಿಲ್ಲ ಎಂಬ ಭರವಸೆ ಅವರಿಗೆ. ಬಂದವರೆಲ್ಲ ನನ್ನ ಶಯ್ಯಾಗೃಹ ಸಂಗಾತಿಗಳಲ್ಲ. ಇಲ್ಲಿ ದುಡಿಯಬೇಕಾಗಿರಲಿಲ್ಲ. ನನ್ನ ಸುತ್ತ ಕುಳಿತುಕೊಂಡು, ಕುಣಿದುಕೊಂಡು, ಹಾಡಿಕೊಂಡು ಸುಖವಾಗಿರಬಹುದಿತ್ತು. ಹೆಚ್ಚೆಂದರೆ ನಾನು ಕೊಚ್ಚಿಕೊಳ್ಳುವ ನನ್ನ ಪೌರುಷದ ಕಥನಕ್ಕೆ ತಲೆಯಾಡಿಸಿದರೆ ಸಾಕಿತ್ತು. ಹಾಗೆ ನೋಡಿದರೆ ನನ್ನ ಅಂತಃಪುರ ಅವರಿಗೊಂದು ಭದ್ರತೆಯ ತಾಣವೂ ಆಗಿತ್ತು. ಅರಮನೆಯಲ್ಲಿ ಅಭದ್ರತೆಯ ಭಯವುಂಟೆ ಅಂದರೆ ನಮ್ಮ ಅರಮನೆಯಲ್ಲಿ ಉಂಟು. ಅದಕ್ಕೆ ಕಾರಣ ನನ್ನ ಮಾವ.
ಹೌದು, ನನಗೊಬ್ಬ ಮಾವನಿದ್ದ. ನನ್ನ ತಾಯಿಯ ತಮ್ಮ. ಅವನ ಹೆಸರು ಕೀಚಕ. ನಾವು ಹುಟ್ಟುವ ಮೊದಲೇ ಅರಮನೆಯಲ್ಲಿ ಅವನು ನೆಲೆಸಿದ್ದ. ಯಾಕೆ ಇಲ್ಲಿಗೆ ಬಂದ? ಅವನಿಗೆ ಅವನ ಮನೆಯಿಲ್ಲವೆ? ಇಲ್ಲಿ ಅಧಿಕಾರ ನಡೆಸುವ ಹಕ್ಕು ಅವನಿಗೆ ಹೇಗೆ ಬಂತು? ಇತ್ಯಾದಿ ಪ್ರಶ್ನೆಗಳು ನಮ್ಮಲ್ಲಿ ಮೂಡಲೇ ಇಲ್ಲ. ಸಭಾ ಮಂದಿರದ ಎದುರಿದ್ದ ಆಲದ ಮರದಂತೆ ಅವನು ಶಾಶ್ವತವಾಗಿ ಇಲ್ಲಿ ಇರಬೇಕಾದವನು ಎಂದೇ ನಮ್ಮ ತಿಳಿವಳಿಕೆಯಾಗಿತ್ತು. ಅವನಾದರೋ ಮತ್ಸ್ಯನಗರದ ಎರಡನೆಯ ದೊರೆಯಂತೆ ಇದ್ದ. ಮಹಾರಾಜನಾದ ನನ್ನ ತಂದೆಯ ಆಜ್ಞೆಯಾದರೂ ನಡೆಯದೇ ಇದ್ದಿತು, ಆದರೆ ಕೀಚಕನದಲ್ಲ. ಅವನು ಹೇಳಿದ್ದು ಶಾಸನ. ವಿರೋಧಿಸುವವರು ಯಾರೂ ಇರಲಿಲ್ಲ. ಶಕ್ತಿ ಇದ್ದವರಿಗೆ ಧೈರ್ಯವಿರಲಿಲ್ಲ. ಧೈರ್ಯವಿದ್ದವರಿಗೆ ಶಕ್ತಿಯಿರಲಿಲ್ಲ. ಅವನ ಬಲವೂ ಹಾಗೆಯೇ. ಆನೆಯ ಹಾಗೆ. ಒಂದೇ ಕೈಯಲ್ಲಿ ಇಬ್ಬಿಬ್ಬರ ಕೊರಳು ಹಿಸುಕಿ ಕೊಲ್ಲುವಷ್ಟು ತ್ರಾಣ ಇದ್ದವನವ.
ನನ್ನ ತಂದೆಯೇ ಅವನ ಎದುರು ಗಟ್ಟಿಯಾಗಿ ಮಾತನಾಡುವುದಕ್ಕೆ ಅಂಜುತ್ತಿದ್ದರು. ಅವನು ನಮ್ಮಲ್ಲಿ ಇದ್ದುದರಿಂದ ಒಂದು ಲಾಭವಿತ್ತು. ನಮ್ಮ ಮೇಲೆ ಆಕ್ರಮಣ ಮಾಡುವ ಸಾಹಸವನ್ನು ಹೊರಗಿನವರು ಯಾರೂ ಮಾಡುವ ಹಾಗಿರಲಿಲ್ಲ. ಅವನು ಒಬ್ಬನೇ ಅಲ್ಲ. ಅವನ ಒಂದು ದೊಡ್ಡ ಪಡೆಯೇ ಇತ್ತು. ನೂರು ಮಂದಿಯಿದ್ದರು. ಅವರೆಲ್ಲ ತನ್ನ ತಮ್ಮಂದಿರೆಂದು ಹೇಳಿಕೊಳ್ಳುತ್ತಿದ್ದ. ಉಪಕೀಚಕರು ಅಂತ ಅವರನ್ನು ಕರೆಯುತ್ತಿದ್ದರು. ಅವರೂ ಬಲಾಢ್ಯರೇ. ಕೀಚಕ ಹೇಳಿದ್ದನ್ನು ಮರುಮಾತಿಲ್ಲದೆ ಮಾಡುವ ನಿಷ್ಠಾವಂತರು. ಅವರಿಂದಾಗಿ ಅರಮನೆಯಲ್ಲಿದ್ದವರೆಲ್ಲ ಹೆದರಿಕೊಂಡೇ ಬಾಳುವಂತಾಗಿತ್ತು. ಅವರ ಅನಾಚಾರಕ್ಕೂ ಮಿತಿಯೆಂಬುದಿರಲಿಲ್ಲ. ಯಾರಾದರೂ ಅರಸನಿಗೆ ದೂರು ಕೊಟ್ಟರೆ ಅವರನ್ನು ಬಾಳಗೊಡುತ್ತಿರಲಿಲ್ಲ. ಅರಸನಾದ ನಮ್ಮಪ್ಪನೂ ಅವರಿಗೆ ವಿರೋಧವಾಗುವಂತೆ ಏನೂ ಮಾಡುತ್ತಿರಲಿಲ್ಲ.
ಈ ಕೀಚಕನಾದರೋ ಮಹಾ ಕಾಮುಕ. ಕಣ್ಣಿಗೆ ಬಿದ್ದ ಯಾವ ಚೆಲುವಿನ ಹೆಣ್ಣಾದರೂ ಅವನು ಬಿಡುತ್ತಿರಲಿಲ್ಲ. ಇಷ್ಟವಿರಲಿ, ಇಲ್ಲದಿರಲಿ, ಅವನ ಮಂಚವನ್ನೇರುವುದೇ ಅವಳ ವಿಧಿಯಾಗುತ್ತಿತ್ತು. ನನ್ನ ತಾಯಿ, ಮಹಾರಾಣಿ ಸುದೇಷ್ಣೆಗೆ ಅವನ ಮೇಲೆ ಒಂದು ವ್ಯಾಮೋಹ. ತಮ್ಮ ಮಾಡಿದ ದೌರ್ಜನ್ಯಕ್ಕೆ ಅವಳು ಕುರುಡಾಗಿದ್ದಳು. ಅವಳ ಅಂತಃಪುರದಲ್ಲಿದ್ದ ಯಾವ ತರುಣ ದಾಸಿಯನ್ನೂ ನನ್ನ ಮಾವ ರುಚಿ ನೋಡದೆ ಬಿಟ್ಟವನಲ್ಲ. ಹೊಸಬಳು ಬಂದಿದ್ದಾಳೋ ಅಂತ ನೋಡಲೆಂದೇ ಆಗಾಗ ಅವಳ ಅಂತಃಪುರಕ್ಕೆ ಹೋಗುತ್ತಿದ್ದ. ನನ್ನ ತಾಯಿ ಮಾತ್ರ, ಆಹಾ.. ನನ್ನ ತಮ್ಮನಿಗೆ ಅಕ್ಕ ಅಂದರೆ ಎಷ್ಟು ಪ್ರೀತಿ ಎಂದು ಭ್ರಮಿಸುತ್ತಿದ್ದಳು. ಅವನಿಗೆ ಆದರೋಪಚಾರ ಮಾಡುತ್ತಿದ್ದಳು. ಕಳ್ಳಬೆಕ್ಕಿಗೆ ಹಾಲೆರೆದಂತೆ. ಅವನು ಅದೆಲ್ಲವನ್ನೂ ಸ್ವೀಕರಿಸಿ, ಪರಿಚಾರಕಿಯರ ಚೆಲುವನ್ನು ಕಣ್ದುಂಬಿಕೊಂಡು ಹೋಗುತ್ತಿದ್ದ. ಆ ರಾತ್ರಿ ಅವರಲ್ಲೊಬ್ಬಳಿಗೆ ಅವನ ಮಂದಿರದಿಂದ ಕರೆ ಬರುತ್ತಿತ್ತು. ಎಷ್ಟು ಜನರ ಕಣ್ಣೀರಿಗೆ ಈ ದುಷ್ಟ ಕಾರಣನಾಗಿದ್ದನೋ ಲೆಕ್ಕವಿಟ್ಟವರಾರು? ಪುಣ್ಯಕ್ಕೆ ನನ್ನ ಅಂತಃಪುರದತ್ತ ಇವನು ಸುಳಿಯುತ್ತಿರಲಿಲ್ಲ. ಯಾಕೋ ಏನೋ ನನಗೂ ಗೊತ್ತಿಲ್ಲ. ನಾನಂತೂ ಅವನ ನೆರಳನ್ನು ಕಂಡರೂ ಹೆದರಿ ಸಾಯುತ್ತಿದ್ದೆ. ಅವನು ನನ್ನ ಅಂತಃಪುರಕ್ಕೆ ಬರುವುದಿಲ್ಲ ಎಂಬ ಒಂದು ಭರವಸೆಯಿಂದಾಗಿ ನೂರಾರು ಸುಂದರಿಯರು ನನ್ನ ಸುತ್ತ ತುಂಬಿಕೊಂಡಿದ್ದರು. ಅಲ್ಲದೆ ಕೀಚಕನ ಕಾಮಕ್ಕೆ ಬಲಿಯಾದವರೂ ಬೇರೆ ಆಶ್ರಯವಿಲ್ಲದೆ ನನ್ನಲ್ಲಿಗೇ ಬರುತ್ತಿದ್ದರು. ಹೀಗಾಗಿ ನನ್ನ ಅಂತಃಪುರದಲ್ಲಿ ಹೆಣ್ಣುಗಳು ತುಂಬಿ ತುಳುಕುತ್ತಿದ್ದರು.
ಇರಲಿ, ನನಗೇನೂ ನಷ್ಟವಿಲ್ಲ ಎಂದು ಸುಮ್ಮನಿರೋಣವೆ? ಇದರಿಂದಾಗಿ ನನಗೆ ಅಪಕೀರ್ತಿ ಬಂತು. ಈ ರಾಜಕುಮಾರ ಸದಾ ಹೆಂಗಳೆಯರ ಎದುರು ಜಂಭ ತೋರಿಸಿಕೊಂಡು ಮೆರೆಯುತ್ತಿದ್ದಾನೆ ಎಂದು ಎಲ್ಲರೂ ಆಡಿಕೊಳ್ಳುತ್ತಿದ್ದರು. ನಿಜವಾಗಿ ಅಪಕೀರ್ತಿ ಬರಬೇಕಿದ್ದದ್ದು ಕೀಚಕನಿಗೆ. ಎಷ್ಟು ಮಂದಿಯ ಜೀವನವನ್ನು ಹಾಳುಮಾಡಿದನೋ ಅವನು! ಅವನ ದೇಹಬಲದಿಂದಾಗಿ ಅವನನ್ನು ಯಾರೂ ನಿಂದಿಸಲಿಲ್ಲ. ಅವನು ತನ್ನ ಎಲ್ಲಾ ಅನಾಚಾರಗಳನ್ನು ಬಲದಿಂದ ಮುಚ್ಚಿಕೊಂಡ. ನಾನು ಯಾರಿಗೂ ಕೆಟ್ಟದ್ದನ್ನು ಮಾಡದಿದ್ದರೂ ನನಗೆ ಕೆಟ್ಟ ಹೆಸರು. ಇರಲಿ, ನೊಂದವರಿಗೆ ನನ್ನಲ್ಲಿ ಆಶ್ರಯ ಕೊಟ್ಟಿದ್ದೇನೆ ಎಂಬ ಸಮಾಧಾನವಂತೂ ಇದ್ದೇ ಇದೆ. ಮೊದಲು ಇಷ್ಟೆಲ್ಲ ಸೂಕ್ಷ್ಮಗಳನ್ನು ಕುರಿತು ಯೋಚಿಸುವ ಬುದ್ಧಿಯೂ ನನಗಿರಲಿಲ್ಲ. ಹೊಟ್ಟೆ ತುಂಬ ಮೃಷ್ಟಾನ್ನ, ಕಣ್ಣು ತುಂಬ ನಿದ್ರೆ, ಬಾಯಿ ತುಂಬ ಮಾತು. ಇದೇ ನನ್ನ ಬದುಕಾಗಿತ್ತು. ನನಗೆ ತೃಪ್ತಿಯೂ ಇತ್ತು. ಇದ್ದದ್ದು ಸಾಲದು ಅನ್ನುವ ಯೋಚನೆ ಬಂದಾಗ ಮಾತ್ರ ಚಿಂತೆಯೋ, ಅತೃಪ್ತಿಯೋ ಉಂಟಾಗುವುದಲ್ಲವೆ?
ಇದರ ಅರ್ಥ ನಾನು ಬರೇ ಉಂಡಾಡಿಯಾಗಿದ್ದೆ ಎಂದು ತಿಳಿಯಬೇಕಿಲ್ಲ. ಒಬ್ಬ ರಾಜಕುಮಾರನಿಗೆ ಬೇಕಾದ ಕ್ರಮಶಿಕ್ಷಣ, ವಿದ್ಯಾಭ್ಯಾಸ ಎಲ್ಲ ನನಗಾಗಿತ್ತು. ಯುದ್ಧರಂಗದಲ್ಲಿ ಒಳ್ಳೆಯ ಯೋಧನೂ ಆಗುತ್ತಿದ್ದೆನೋ ಏನೋ, ನನ್ನ ಅಣ್ಣಂದಿರಂತೆ. ಎಷ್ಟು ಕಲಿತರೇನು, ಅದನ್ನು ಪ್ರಕಟಿಸುವ ಸಂದರ್ಭ ಬರಬೇಕಲ್ಲ? ನನ್ನ ಪಾಲಿಗೆ ಹಾಗೊಂದು ಸಂದರ್ಭ ಒದಗಿ ಬರಲೇ ಇಲ್ಲ. ಹೀಗಾಗಿ ನಾನು ಕಲಿತದ್ದೆಲ್ಲ ನನ್ನಲ್ಲಿ ಹೂತುಹೋಗಿತ್ತು. ಅದನ್ನು ಮತ್ತೆ ಮತ್ತೆ ಸುತ್ತಲಿದ್ದ ಸುಂದರಾಂಗಿಯರ ಎದುರು ವರ್ಣಿಸಿ ನಾನೊಬ್ಬ ಸಮರ್ಥ ಯೋಧ ಎಂದು ಅವರೆಲ್ಲ ನಂಬುವಂತೆ ಮಾಡಿದ್ದೆ. ಅವರು ಮಾತ್ರವಲ್ಲ ನಾನೇ ಸ್ವತಃ ಅದನ್ನು ನಂಬಿದ್ದೆ. ಹೀಗೇ ದಿನಗಳು ಉರುಳುತ್ತಿದ್ದವು. ಇನ್ನೂ ಕಾಲ ಸಾಗುತ್ತಿತ್ತೋ ಏನೋ, ಅವರು ಮತ್ಸ್ಯ ದೇಶಕ್ಕೆ ಬಾರದಿದ್ದರೆ?
ನಾನೇನು ಅವರನ್ನು ನೋಡಲಿಲ್ಲ. ಆದರೆ ರಾಜಸಭೆಯಲ್ಲಿ ನಡೆದ ಎಲ್ಲ ವರ್ತಮಾನವೂ ನನ್ನ ಕಿವಿಗೆ ಬೀಳುತ್ತಿತ್ತು. ಹಾಗೆ ಈ ವರ್ತಮಾನವೂ ಬಂತು. ಯಾರೋ ಒಬ್ಬ ಪುರೋಹಿತ ಕಂಕ ಎಂಬ ಹೆಸರಿನವ ಬಂದನಂತೆ. ಅಪ್ಪ ಅವನಿಗೆ ಆಶ್ರಯ ಕೊಟ್ಟರಂತೆ. ಮರುದಿನ ವಲಲ, ಅದರ ಮರುದಿನ ಬೃಹನ್ನಳೆ, ಮತ್ತಿಬ್ಬರು. ಆಮೇಲೆ ಬಂದವಳು ಸೈರಂಧ್ರಿ. ಅವಳು ಅಮ್ಮನ ಪರಿಚಾರಕಿಯರಲ್ಲಿ ಸೇರಿದಳು. ಇದೆಲ್ಲ ಒಂದು ಅರಮನೆಯಲ್ಲಿ ವಿಶೇಷವಲ್ಲ. ಆದರೆ ಇವರ ಬಗ್ಗೆ ಹಬ್ಬಿದ ಕಥೆಗಳು ವಿಶೇಷವಾಗಿದ್ದವು. ಇವರು ಮೊದಲು ಪಾಂಡವರಲ್ಲಿ ಸೇವಕರಾಗಿದ್ದರಂತೆ. ಅವರು ಅಜ್ಞಾತವಾಸಕ್ಕೆ ಹೋಗಿ ಕಣ್ಮರೆಯಾದ ಮೇಲೆ ಮತ್ಸ್ಯ ದೇಶಕ್ಕೆ ಬಂದರಂತೆ. ಅದರಲ್ಲಿ ಬೃಹನ್ನಳೆ ಹೆಣ್ಣೂ ಅಲ್ಲದ ಗಂಡೂ ಅಲ್ಲದ ನಪುಂಸಕ. ಅವನು ನೃತ್ಯ ಸಂಗೀತಗಳಲ್ಲಿ ಬಹಳ ಪಳಗಿದವನಂತೆ. ಅವನನ್ನು ನನ್ನ ತಂದೆ ತಂಗಿ ಉತ್ತರೆಗೆ ನಾಟ್ಯ ಗುರುವಾಗಿ ನಿಯಮಿಸಿದರಂತೆ. ಸೈರಂಧ್ರಿಯದ್ದೂ ಒಂದು ವಿಚಿತ್ರ. ಅಂತಃಪುರಕ್ಕೆ ಬರುವಾಗಲೇ ಅವಳದೇನೋ ನಿಬಂಧನೆಗಳಿದ್ದವಂತೆ. ತಾನು ಉಳಿದ ದಾಸಿಯರ ಹಾಗಲ್ಲ, ಹೆಚ್ಚು ಸ್ವತಂತ್ರಳು ಇತ್ಯಾದಿ. ಅವಳ ವಿಶೇಷ ಎಂದರೆ ಅವಳಿಗೆ ಐವರು ಗಂಡಂದಿರಂತೆ. ದ್ರೌಪದಿಗೆ ಇದ್ದ ಹಾಗೆ. ಇವಳ ಗಂಡಂದಿರು ಗಂಧರ್ವರಂತೆ. ಇದನ್ನೆಲ್ಲ ಕೇಳಿ ವಿಚಿತ್ರ ಅನಿಸಿದ ಕಾರಣ ನೆನಪಿನಲ್ಲಿ ಉಳಿದಿತ್ತು.
ಅಂತೂ ಈ ನಾಲ್ಕಾರು ಮಂದಿ ಅರಮನೆಯಲ್ಲಿ ಸೇರಿದ ಮೇಲೆ ಏನೇನೋ ಪರಿವರ್ತನೆಗಳು ಕಾಣಿಸಿದವು. ಕೀಚಕ ಹೇಳಿದ್ದಕ್ಕೆಲ್ಲ ತಲೆಯಾಡಿಸುತ್ತಿದ್ದ ನನ್ನಪ್ಪ ಈಗ ಅದನ್ನೆಲ್ಲ ಒಪ್ಪುತ್ತಿರಲಿಲ್ಲವಂತೆ. ಬದಲಿಗೆ ಹೊಸ ಪುರೋಹಿತ ಕಂಕ ಹೇಳಿದ್ದಕ್ಕೆ ಬೆಲೆ ಕೊಡುತ್ತಾನಂತೆ. ನನ್ನ ತಂಗಿಯೂ ನಾಟ್ಯದಲ್ಲಿ ವಿಶೇಷ ಆಸಕ್ತಿ ತೋರಿಸಲಾರಂಭಿಸಿದಳು. ಇಷ್ಟರವರೆಗೆ ಎಲ್ಲ ರಾಜಕುಮಾರಿಯರಂತೆ ಇವಳಿಗೂ ನಾಟ್ಯ, ಸಂಗೀತಗಳು ಒಂದು ತೋರಿಕೆಯ ದೊಡ್ಡಸ್ತಿಕೆಗೆ ಅಂತ ಇತ್ತಷ್ಟೆ. ಆದರೆ ಅವಳು ನನ್ನನ್ನು ನೋಡುವುದಕ್ಕೆ ಬಂದಾಗಲೆಲ್ಲ ನಮ್ಮ ಗುರುಗಳು ಹಾಗೆ ಹೇಳುತ್ತಾರೆ, ಹೀಗೆ ಹೇಳುತ್ತಾರೆ ಎಂದೆಲ್ಲ ಕಣ್ಣರಳಿಸಿ ಮಾತನಾಡುತ್ತಿದ್ದಳು. ಎಲಾ, ಇಷ್ಟು ಪ್ರಚಂಡನಾದ ಆ ಗುರುವನ್ನು ಒಮ್ಮೆ ನೋಡಬೇಕು ಎಂದು ನನಗೂ ತೋರುವಂತಾಗಿತ್ತು. ನಮ್ಮ ಪಾಕಶಾಲೆಗೆ ವಲಲ ಬಂದ ಮೇಲೆ ನಿತ್ಯದ ಭೋಜನಕ್ಕೂ ವಿಶೇಷ ರುಚಿ ಬಂದಿತ್ತು. ಗೋಶಾಲೆಯ ಗೋವುಗಳು ಪುಷ್ಟಿಯಾಗಿ ಹೆಚ್ಚು ಹೆಚ್ಚು ಹಾಲು ಕೊಡುತ್ತಿದ್ದವು. ಕುದುರೆಗಳು ಚುರುಕಾಗಿದ್ದವು. ಇದಕ್ಕೂ ಬಂದ ಹೊಸಬರಿಗೂ ಏನಾದರೂ ಸಂಬಂಧ ಇದ್ದೀತೆಂದು ಆಗ ತಲೆಗೆ ಹೋಗಿರಲಿಲ್ಲ.
ಒಂದು ದಿನ ಮಾತ್ರ ಇವರಲ್ಲಿ ಏನೋ ವಿಶೇಷ ಇದೆ ಅನಿಸುವಂತೆ ಘಟನೆಯೊಂದು ಸಂಭವಿಸಿತು. ಅದು ನನ್ನ ತಾಯಿ ಸುದೇಷ್ಣೆಯ ಅಂತಃಪುರದಲ್ಲಿ ಪ್ರಾರಂಭವಾದುದು.
ತನ್ನ ಅಭ್ಯಾಸದಂತೆ ನನ್ನ ಮಾವ ಕೀಚಕ ಅಕ್ಕನ ಅಂತಃಪುರಕ್ಕೆ ಹೋಗಿದ್ದ. ಅಲ್ಲಿ ಈ ಸೈರಂಧ್ರಿ ಅವನ ಕಣ್ಣಿಗೆ ಬಿದ್ದಳು. ಅಷ್ಟು ದಿನ ಅವನ ಕಣ್ಣಿಗೆ ಬೀಳದಂತೆ ಹೇಗಿದ್ದಳೋ ಗೊತ್ತಿಲ್ಲ. ಅವಳನ್ನು ಕಂಡೊಡನೆ ಕೀಚಕನ ಕಾಮಸ್ವಭಾವ ಜಾಗೃತವಾಯಿತು. ಅಕ್ಕ, ಈ ಹೊಸ ದಾಸಿ ಯಾರು? ಎಂದು ಕೇಳಿದ. ಅಮ್ಮ ಅವನಿಂದ ಸೈರಂಧ್ರಿಯನ್ನು ತಪ್ಪಿಸುವುದಕ್ಕೆ ಎಷ್ಟೆಷ್ಟೋ ಪ್ರಯತ್ನ ಮಾಡಿದಳು. ಆದರೆ ಅವನೆಲ್ಲಿ ಕೇಳುತ್ತಾನೆ?
ನೀನು ಏನೆಂದರೂ ಸರಿ, ನನಗೆ ಅವಳು ಬೇಕೇ ಬೇಕು. ಇಂದು ಅವಳನ್ನು ನನ್ನ ಮಂದಿರಕ್ಕೆ ಕಳುಹಿಸು ಎಂದು ಹಟ ಹಿಡಿದ. ಅಕ್ಕನಿಗೆ ತಮ್ಮನ ಈ ಹಟ ಮಾತ್ರ ಹಿಡಿಸಲಿಲ್ಲ. ಬೇಡಪ್ಪ ಕೀಚಕ, ಅವಳು ಸಾಧಾರಣ ಹೆಣ್ಣಲ್ಲ. ಅವಳ ಗಂಡಂದಿರು ಬಲಾಢ್ಯರಾದ ಗಂಧರ್ವರು. ಅವಳನ್ನು ಕೆಣಕಿದರೆ ನಿನಗೆ ಆಪತ್ತು ಖಂಡಿತ. ಅವಳ ಯೋಚನೆ ಬಿಟ್ಟುಬಿಡು ಎಂದು ವಿಧವಿಧವಾಗಿ ಹೇಳಿದಳು. ಆದರೆ ಈ ದೈತ್ಯಬಲದ ಕೀಚಕ ಅದಕ್ಕೆಲ್ಲ ಅಂಜುವ ಜಾಯಮಾನದವನಲ್ಲ. ಕೊನೆಗೂ ಸೈರಂಧ್ರಿಯನ್ನು ಕಳುಹಿಸಲು ಒಪ್ಪಿದ ಮೇಲೇ ಅಲ್ಲಿಂದ ಕಾಲ್ತೆಗೆದ.
ಅದಾದ ಮೇಲೆ ನನ್ನ ತಾಯಿಗೆ ಸೈರಂಧ್ರಿಯನ್ನು ಒಪ್ಪಿಸುವ ಕೆಲಸ. ಸೈರಂಧ್ರಿ ತಾನು ಕೀಚಕನಲ್ಲಿಗೆ ಹೋಗುವುದಿಲ್ಲ ಅಂತ ಖಡಾಖಂಡಿತ ಹೇಳಿಬಿಟ್ಟಳು. ನನ್ನ ತಾಯಿಗೋ ಉಭಯ ಸಂಕಟ. ಕೀಚಕನ ಸ್ವಭಾವವನ್ನು ಬಲ್ಲವಳಷ್ಟೆ? ಅವನು ನಾಳೆ ಅಂತಃಪುರಕ್ಕೆ ಬಂದು ಎಲ್ಲರ ಎದುರೇ ಸೈರಂಧ್ರಿಯನ್ನು ಹೊತ್ತುಕೊಂಡು ಹೋಗಲು ಹೇಸುವವನಲ್ಲ. ಬೇರೆ ದಾರಿ ಕಾಣದೆ, ನೀನು ಹೋಗಲೇ ಬೇಕು. ಇದು ನನ್ನ ಆಜ್ಞೆ ಎಂದಳು. ದೊಡ್ಡವರಿಗೆಲ್ಲ ಇದೊಂದು ಗುಣವಿರುತ್ತದೆ. ತಪ್ಪೋ, ಸರಿಯೋ ತಾನು ಹೇಳಿದ್ದು ನಡೆಯಬೇಕು ಎನ್ನುವ ಗುಣ. ಸೈರಂಧ್ರಿ ತನ್ನ ಗಂಡಂದಿರು ಕೀಚಕನನ್ನು ಉಳಿಯಗೊಡಲಾರರು ಎಂದಳು. ನನ್ನ ಅಮ್ಮನಿಗೆ ಇದೇ ಬೇಕಾಗಿತ್ತೋ ಏನೋ. ತಮ್ಮನ ಕಾಟ ತಪ್ಪಲಿ ಎಂದು ಬಯಸಿದಳೋ ಅಂತ ನನಗೆ ಸಂಶಯ. ಅಂತೂ ಸೈರಂಧ್ರಿ ಅನಿವಾರ್ಯವಾಗಿ ಮಧು ಪಾತ್ರೆಯನ್ನು ಹೊತ್ತು ಕೀಚಕನಲ್ಲಿಗೆ ಹೊರಡಲೇ ಬೇಕಾಯಿತು.
ಹಾಗೆ ಹೊರಟವಳು ದಾರಿಯುದ್ದಕ್ಕೂ ತನ್ನನ್ನು ಕಾಪಾಡಿ ಎಂದು ಯಾರಿಗೋ ಮೊರೆಯಿಡುತ್ತ ಹೋದಳಂತೆ. ಮತ್ಸ್ಯದಲ್ಲಿ ಯಾರಿದ್ದಾರೆ, ಕೀಚಕನ ವಿರುದ್ಧ ನಿಲ್ಲುವ ಎದೆಯಿದ್ದವರು? ಇವಳು ಕೀಚಕನ ಮನೆಗೆ ಹೋದಳು. ಅನಂತರ ಮಾತ್ರ ಅದ್ಭುತವೇ ನಡೆಯಿತೆನ್ನಬೇಕು. ಕೀಚಕ ಸೈರಂಧ್ರಿಯನ್ನು ಕಂಡ ಕೂಡಲೇ ಮೇಲೆ ಬೀಳುವುದಕ್ಕೆ ಬಂದ. ಇವಳು ತಪ್ಪಿಸಿಕೊಂಡು ಓಡಿದಳು. ಅವನು ಬೀದಿಯಲ್ಲಿ ಅಟ್ಟಿಕೊಂಡು ಬಂದ. ಆಗ ಎಲ್ಲಿದ್ದನೋ ಒಬ್ಬ ಬಲಿಷ್ಠ ಯೋಧ, ಕೀಚಕನನ್ನು ಹಿಡಿದು ಹೊಡೆದು ಧೂಳಿನಲ್ಲಿ ಹೊರಳಿಸಿ, ಕೆಡವಿದನಂತೆ. ಇದನ್ನು ಕೇಳಿದಾಗ ನನಗೆ ಭಲರೇ ಅನಿಸಿತು. ಇವನಾದರೆ ನಿಜವಾಗಿ ಗಂಡು. ದುರ್ದೈವವಶಾತ್ ಆ ಯೋಧ ಆಮೇಲೆ ಯಾರ ಕಣ್ಣಿಗೂ ಬೀಳಲಿಲ್ಲ.
ಇದು ಅಲ್ಲಿಗೇ ಮುಗಿಯುತ್ತಿದ್ದರೆ ಕೀಚಕ ಉಳಿದುಕೊಳ್ಳುತ್ತಿದ್ದ. ಆದರೆ ವಿನಾಶ ಕಾಲ ಬಂದಾಗ ಬುದ್ಧಿ ವಿಪರೀತವಾಗುವುದು ಸಹಜ. ಕೀಚಕನಿಗೂ ಇದೇ ಆಯಿತು. ಅವನು ಸೈರಂಧ್ರಿಯ ಬೆನ್ನು ಬಿಡಲಿಲ್ಲ. ಅದರ ಪರಿಣಾಮವೂ ಬೇಗನೇ ಆಯಿತು. ಸೈರಂಧ್ರಿಯ ಮಾನರಕ್ಷಣೆಗೆ ಯಾರೋ ಮುಂದಾಗಿರಬೇಕು. ಮರುದಿನ ಉತ್ತರೆಯ ನಾಟ್ಯಶಾಲೆಯಲ್ಲಿ ಕೀಚಕನ ಶವ ಬಿದ್ದಿತ್ತು. ಅದೂ ವಿಕಾರವಾಗಿ ಕೈಕಾಲು, ತಲೆ ಎಲ್ಲ ಹೊಟ್ಟೆಯಲ್ಲಿ ಸೇರುವಂತೆ ಮುದ್ದೆಯಾದ ಸ್ಥಿತಿಯಲ್ಲಿ! ಯಾರಿದನ್ನು ಮಾಡಿದರು ಎಂಬುದು ತಿಳಿಯಲೇ ಇಲ್ಲ. ಇದರಿಂದಾಗಿ ನಮ್ಮ ರಾಜ್ಯದ ನೂರಾರು ಹೆಣ್ಣುಮಕ್ಕಳು ನೆಮ್ಮದಿಯ ನಿಟ್ಟುಸಿರು ಬಿಟ್ಟರು.