ಕೆಲವರು ಪರಿಸರದಿಂದಲೋ ಸಾಂದರ್ಭಿಕ ಪ್ರೇರಣೆಯಿಂದಲೋ ಸಾರ್ವಜನಿಕ ಕಾರ್ಯಕ್ಕೆ ಇಳಿಯುತ್ತಾರೆ. ಆದರೆ ಸಿದ್ದವನಹಳ್ಳಿ ಕೃಷ್ಣಶರ್ಮರು ಸಾರ್ವಜನಿಕ ಕಾರ್ಯಕ್ಕಾಗಿಯೇ ಹುಟ್ಟಿದವರು ಎನಿಸುತ್ತಿತ್ತು.
ಕಳೆದ ಎಂದರೆ ಇಪ್ಪತ್ತನೇ ಶತಮಾನದ ನಡುಭಾಗದ ದಶಕಗಳಲ್ಲಿ ಕನ್ನಡ ಪತ್ರಿಕೋದ್ಯಮಕ್ಕೂ ಸಾಹಿತ್ಯಕ್ಕೂ ವಿಶೇಷ ಮೊನಚನ್ನೂ ನಾವೀನ್ಯವನ್ನೂ ತುಂಬಿದವರು ಸಾಮಾಜಿಕ ಕಾರ್ಯಕರ್ತರಾಗಿಯೂ ಗಣ್ಯತೆ ಪಡೆದಿದ್ದ ಸಿದ್ದವನಹಳ್ಳಿ ಕೃಷ್ಣಶರ್ಮ (೪.೭.೧೯೦೪-೧೪.೧೦.೧೯೭೩). ಅವರ ಮಾತು, ಬರಹ, ಕ್ರಿಯಾಶೀಲತೆ – ಎಲ್ಲವೂ ಅಸಾಮಾನ್ಯವೇ ಆಗಿದ್ದವು. ಇಂದು ಪತ್ರಿಕೆಗಳ ವೈಶಿಷ್ಟ್ಯಗಳೆನಿಸಿರುವ ಅಂಕಣವೈವಿಧ್ಯ, ಶೈಲಿ, ನುಡಿಗಟ್ಟು ಮೊದಲಾದವುಗಳ ಆವಿಷ್ಕರಣ ಬಹುಮಟ್ಟಿಗೆ ಕೃಷ್ಣಶರ್ಮರ ಕೊಡುಗೆಯೆಂದರೆ ಅತ್ಯುಕ್ತಿಯಾಗದು. ಅವರ ಸ್ವಂತ ರಚನೆಗಳಲ್ಲಿಯೂ ಅನುವಾದಗಳಲ್ಲಿಯೂ ಕಾಣುವ ಲವಲವಿಕೆಯಂತೂ ಹೋಲಿಕೆಯಿಲ್ಲದ್ದು. ಇಷ್ಟಾಗಿ ಬರವಣಿಗೆ ಅವರ ಜೀವನದ ಒಂದು ಮುಖವಷ್ಟೆ ಆಗಿದ್ದಿತು. ಸಮಾಜೋಜ್ಜೀವಕ ಸಂಸ್ಥೆಗಳನ್ನು ಕಟ್ಟಿ ಬೆಳೆಸುವುದನ್ನೂ ಧ್ಯೇಯಾಭಿಮುಖಿ ಕಾರ್ಯಕರ್ತರನ್ನು ನಿರ್ಮಾಣ ಮಾಡುವುದನ್ನೂ ತಮ್ಮ ಪ್ರಮುಖ ಜೀವಿತಕಾರ್ಯವೆಂದು ನಂಬಿ ನಡೆದವರು ಅವರು. ಕೃಷ್ಣಶರ್ಮರು ಜೀವಿತಯಾತ್ರೆ ಮುಗಿಸಿದುದರ ೪೮ನೇ ವರ್ಷದ ವ್ಯಾಜದಲ್ಲಿ ಅವರ ಸಾಧನೆಯನ್ನು ಮೆಲುಕುಹಾಕುವುದು ಪ್ರೇರಣಾದಾಯಕ.
ಕೃಷ್ಣಶರ್ಮ ಪಾದರಸದಂತೆ ಎನ್ನುತ್ತಿದ್ದರು, ಕೃಷ್ಣಶರ್ಮರಿಗೂ ನನಗೂ ಇಬ್ಬರಿಗೂ ಗುರುಪಂಕ್ತಿಯವರಾದ ರಾಳ್ಳಪಲ್ಲಿ ಅನಂತಕೃಷ್ಣಶರ್ಮ: ಸಿದ್ದವನಹಳ್ಳಿ ಕೃಷ್ಣಶರ್ಮ ಎಲ್ಲಿಗೂ ಅಂಟಿಕೊಳ್ಳುತ್ತಿರಲಿಲ್ಲ ಎಂಬ ಅರ್ಥದಲ್ಲಿ. ಆ ಪಾದರಸವನ್ನು ಗಟ್ಟಿಯಾಗಿ ಹಿಡಿದು ನಿಲ್ಲಿಸಿ ಕೆಲಸ ಮಾಡಿಸಲು ಗಾಂಧಿಯವರಂಥ ಸರ್ವಂಕಷ ಮೂರ್ತಿಯೇ ಬೇಕಾಯಿತು. ಕೃಷ್ಣಶರ್ಮರ ಪ್ರಸ್ತಾವ ಬಂದಾಗ ಅವನೊಬ್ಬ ರಾಕ್ಷಸ ಎಂದು ಉದ್ಗರಿಸುತ್ತಿದ್ದರು, ವಿ. ಸೀತಾರಾಮಯ್ಯ. ಹೀಗೆ ತಮ್ಮ ಸಮಕಾಲೀನ ಧೀಮಂತರಿಂದಲೇ ಪ್ರಶಂಸೆಗೊಳಗಾಗಿದ್ದವರು, ಕೃಷ್ಣಶರ್ಮ. ಸಾಮಾಜಿಕ ಕಾರ್ಯಕರ್ತರ ಪಾಲಿಗಂತೂ ಅವರೊಬ್ಬ ಅದ್ಭುತ ವ್ಯಕ್ತಿಯೇ ಆಗಿದ್ದರು.
ಕನ್ನಡಕ್ಕೆ ಕೃಷ್ಣಶರ್ಮರಷ್ಟು ಪ್ರಮಾಣದ ಗಾಂಧಿ ಸಾಹಿತ್ಯ, ಸರ್ವೋದಯ ಸಾಹಿತ್ಯವನ್ನಿತ್ತವರು ಬಹುಶಃ ಬೇರೆಯಿಲ್ಲ.
ಕೆಲವರು ಪರಿಸರದಿಂದಲೋ ಸಾಂದರ್ಭಿಕ ಪ್ರೇರಣೆಯಿಂದಲೋ ಸಾರ್ವಜನಿಕ ಕಾರ್ಯಕ್ಕೆ ಇಳಿಯುತ್ತಾರೆ. ಆದರೆ ಸಿದ್ದವನಹಳ್ಳಿ ಕೃಷ್ಣಶರ್ಮರು ಸಾರ್ವಜನಿಕ ಕಾರ್ಯಕ್ಕಾಗಿಯೇ ಹುಟ್ಟಿದವರು ಎನಿಸುತ್ತಿತ್ತು.
ಸಿದ್ದವನಹಳ್ಳಿ ಇರುವುದು ಚಿತ್ರದುರ್ಗದ ಬಳಿ. ಚಿತ್ರದುರ್ಗ ಬಿಟ್ಟು ಕಾಲೇಜು ವ್ಯಾಸಂಗಕ್ಕೋಸ್ಕರ ಮೈಸೂರಿಗೆ ಬಂದರು ಕೃಷ್ಣಶರ್ಮ. ಆಗ ಎಲ್ಲ ಕಡೆ ಸತ್ಯಾಗ್ರಹ ಚಳವಳಿಗಳು ಆರಂಭವಾಗಿದ್ದವು. ಅಲ್ಪಕಾಲದಲ್ಲಿ ಕೃಷ್ಣಶರ್ಮರು ತಮ್ಮ ಜೀವಿತಕಾರ್ಯ ಏನೆಂಬುದನ್ನು ಕಂಡುಕೊಂಡರು. ಖಾದಿದೀಕ್ಷೆ ತೊಟ್ಟರು. ಯಂಗ್ ಇಂಡಿಯಾ ಮೂಲಕ ಪ್ರಸಾರಗೊಳ್ಳುತ್ತಿದ್ದ ಗಾಂಧಿಯವರ ಸಂದೇಶಕ್ಕೆ ಮಾರುಹೋದರು.
ಮೈಸೂರಿನಲ್ಲಿ ಎಂ. ವೆಂಕಟಕೃಷ್ಣಯ್ಯನವರು, ರಾಳ್ಳಪಲ್ಲಿ ಅನಂತಕೃಷ್ಣಶರ್ಮರು ಮೊದಲಾದವರನ್ನು ಸಮೀಪದಿಂದ ಕಾಣುವ ಅವಕಾಶ ದೊರೆತದ್ದರಿಂದ ಕೃಷ್ಣಶರ್ಮರಲ್ಲಿ ಸುಪ್ತವಾಗಿದ್ದ ಧ್ಯೇಯವಾದ ಪ್ರಜ್ವಲಗೊಂಡಿತು.
ಹೈಸ್ಕೂಲು ದಿನಗಳಿಂದಲೇ ಬರವಣಿಗೆಯಲ್ಲಿಯೂ ಆಸಕ್ತರಾಗಿದ್ದ ಶರ್ಮರ ಆರಂಭದ ಬರಹಗಳು ಧಾರವಾಡದ ಜಯಕರ್ಣಾಟಕ ಪತ್ರಿಕೆಯಲ್ಲಿ ಪ್ರಕಟವಾಗತೊಡಗಿದವು. ಹಾಗೆ ದ.ರಾ. ಬೇಂದ್ರೆ, ವಿ.ಕೃ. ಗೋಕಾಕ ಮೊದಲಾದವರ ನಿಕಟ ಸಹವಾಸವೂ ದೊರೆಯಿತು.
ಅದೇ ದಿನಗಳಲ್ಲಿ ಪಂಡಿತ ತಾರಾನಾಥರ ಭೇಟಿಯೂ ಆಯಿತು. ತಾರಾನಾಥರದು ಎಂಥವರನ್ನೂ ಆಕರ್ಷಿಸುವ ಬಹುಮುಖ ವ್ಯಕ್ತಿತ್ವ. ತರುಣರಿಗಂತೂ ಅವರ ಸಹವಾಸವೆಂದರೆ ಉತ್ಸವ. ಕೃಷ್ಣಶರ್ಮರು ರಾಯಚೂರಿಗೆ ಹೋಗಿ ತಾರಾನಾಥರ ಆಶ್ರಮದಲ್ಲಿ ಒಂದಷ್ಟು ಸಮಯ ಇದ್ದರು (೧೯೨೦-೨೧). ಹೈದರಾಬಾದಿನ ಉನ್ನತ ಸರ್ಕಾರೀ ಅಧಿಕಾರಿ ರಂಗಾಚಾರ್ಯರ ಪುತ್ರಿಯೊಡನೆ ಶರ್ಮರ ವಿವಾಹವಾದ ಮೇಲೆ ಶರ್ಮರು ಹೈದರಾಬಾದಿಗೆ ವಲಸೆಹೋದರು. ಶಾಲೆಯೊಂದರಲ್ಲಿ ಕನ್ನಡ ಶಿಕ್ಷಕರಾದರು. ಆದರೆ ಒಂದಷ್ಟು ಸಮಯದ ನಂತರ ರಾಷ್ಟ್ರೀಯ ಚಟುವಟಿಕೆಯೇ ಪ್ರಧಾನವಾಯಿತು.
ಹೈದರಾಬಾದ್ ಸಂಸ್ಥಾನದಲ್ಲಿಯೂ ಕಾಂಗ್ರೆಸ್ ಚಟುವಟಿಕೆಗಳನ್ನು ಉಪಕ್ರಮಿಸಲು ೧೯೩೭ರಲ್ಲಿ ಕಾಂಗ್ರೆಸ್ನ ಅನುಮತಿ ಪಡೆಯಲು ಹೋದ ತಂಡದಲ್ಲಿ ಶರ್ಮರೂ ಇದ್ದರು. ಹೀಗೆ ಗಾಂಧಿಯವರ ದಟ್ಟಪ್ರಭಾವ ಅವರ ಮೇಲಾಗತೊಡಗಿತು.
ಏತನ್ಮಧ್ಯೆ ಜನಸಂಘಟನೆ, ಬರವಣಿಗೆ ಎರಡೂ ಬಿರುಸುಗೊಂಡಿತು. ನಿಜಾಂ ಸರ್ಕಾರ ಕೃಷ್ಣಶರ್ಮರನ್ನು ಹೈದರಾಬಾದಿನಿಂದ ಗಡೀಪಾರು ಮಾಡಿತು.
ಹೈದರಾಬಾದಿನಲ್ಲಿ ಹಲವಾರು ಸಂಘಟನೆಗಳನ್ನು ನಿರ್ಮಿಸಿ ಆ ಭಾಗದಲ್ಲಿ ಕನ್ನಡಪರ ಚಟುವಟಿಕೆಗಳಿಗೆ ಅಸ್ತಿಭಾರ ಹಾಕಿದವರು, ಕೃಷ್ಣಶರ್ಮ.
ಪತ್ರಿಕೋದ್ಯಮ ಕ್ಷೇತ್ರದಲ್ಲಿ
ಅದಾದ ಮೇಲೆ ಹೊಸಪೇಟೆ, ಮುಂಬಯಿ, ಕೆಲಕಾಲ ಚಿತ್ರದುರ್ಗ ಮುಂತಾದ ಕಡೆ ಇದ್ದರು. ಮುಂಬಯಿಯಲ್ಲಿ ಜವಾಹರಲಾಲ್ ನೆಹರು, ಪಟ್ಟಾಭಿ ಸೀತಾರಾಮಯ್ಯ, ಬಲವಂತರಾಯ್ ಮೆಹತಾ ಮೊದಲಾದವರ ಜೊತೆ ಕೆಲಸ ಮಾಡಿದರು. ೧೯೪೦ರ ದಶಕದ ಆರಂಭದಿಂದ ಅಂತಿಮವಾಗಿ ಬೆಂಗಳೂರಿಗೆ ಬಂದು ನೆಲೆಯೂರಿದರು. ತಿ.ತಾ. ಶರ್ಮರ ಹೆಗಲ ಭಾರವನ್ನು ಕಡಮೆ ಮಾಡುವ ಉದ್ದೇಶವೇ ಅವರಲ್ಲಿ ಪ್ರಧಾನವಾಗಿತ್ತೆನಿಸುತ್ತದೆ.
ತಿ.ತಾ. ಶರ್ಮರ ವಿಶ್ವಕರ್ಣಾಟಕ ಪತ್ರಿಕೆಯ ಹೊಣೆಯನ್ನು ಕೃಷ್ಣಶರ್ಮರು ವಹಿಸಿಕೊಂಡಾಗ ಹಿರಿಯರಾದ ಗೊರೂರು ರಾಮಸ್ವಾಮಿ ಅಯ್ಯಂಗಾರ್ಯರು ವರ್ಣಿಸುತ್ತಿದ್ದಂತೆ – ಗಾಳಿಯೂ ಬೆಂಕಿಯೂ ಒಂದೇ ಕಡೆ ಸೇರಿಕೊಂಡಂತಾಯಿತು. ನನ್ನದು ವಾರಪತ್ರಿಕೆ ಅಲ್ಲ, War ಪತ್ರಿಕೆ – ಎಂದು ಸ್ವಯಂ ತಿ.ತಾ. ಶರ್ಮರೇ ಹೇಳುತ್ತಿದ್ದರು.
ಕೃಷ್ಣಶರ್ಮರ ಬರಹದ ಪ್ರಖರತೆ ಎಷ್ಟು ವಿಶ್ರುತವಾಗಿತ್ತೆಂದರೆ, ೧೯೪೨ರ ಕ್ವಿಟ್ ಇಂಡಿಯಾ ಘೋಷಣೆಯ ಹಿನ್ನೆಲೆಯಲ್ಲಿ ಅವರು ಬರೆದ ಇನ್ನು ಸಾಕು ಬರಹವನ್ನು ಸರ್ಕಾರ ಅದು ಮುದ್ರಿತವಾಗುವುದಕ್ಕೆ ಮುಂಚೆಯೇ ನಿಷೇಧಿಸಿ ಶರ್ಮರಿಗೆ ಬಂಧನ ವಿಧಿಸಿತು!
* * *
ಆ ದಿನಗಳಲ್ಲಿ – ಎಂದರೆ ೧೯೪೦ರ ದಶಕದಲ್ಲಿ – ಪತ್ರಿಕೋದ್ಯಮದಲ್ಲಿ ಆಸಕ್ತರಾದ ಅಸಂಖ್ಯ ಮಂದಿ ತಯಾರಾದದ್ದು ತಿ.ತಾ. ಶರ್ಮ ಮತ್ತು ಸಿದ್ದವನಹಳ್ಳಿ ಕೃಷ್ಣಶರ್ಮರ ಪ್ರಭಾವಲಯದಲ್ಲಿಯೇ. ಎನ್.ಎಸ್. ಸೀತಾರಾಮಶಾಸ್ತ್ರೀ, ಖಾದ್ರಿ ಶಾಮಣ್ಣ, ನಾಡಿಗ ಕೃಷ್ಣಮೂರ್ತಿ, ಕಿಡಿ ಶೇಷಪ್ಪ, ಎಸ್. ಅನಂತನಾರಾಯಣ, ತ.ರಾ. ಸುಬ್ಬರಾಯ, ಕೆ.ಎಸ್. ರಾಮಕೃಷ್ಣಮೂರ್ತಿ – ಇವರೆಲ್ಲ ಬೆಳೆದದ್ದು ಆ ಗರಡಿಮನೆಯಲ್ಲಿಯೇ. ವಿಶ್ವಕರ್ಣಾಟಕ ಸ್ವಾತಂತ್ರ್ಯ ಬರುವುದಕ್ಕೆ ಕೆಲವು ತಿಂಗಳ ಹಿಂದಿನವರೆಗೆ ಕುಂಟಿಕೊಂಡು ನಡೆದು ಅವಸಾನವಾಯಿತು.
ಆಮೇಲೆ ಕೆಲ ದಿನ ಕನ್ನಡದಲ್ಲಿ ಹರಿಜನ ತಂದರು, ಕೃಷ್ಣಶರ್ಮ. ಎಂ.ಎಸ್. ಚಿಂತಾಮಣಿ ಅವರ ವಾಹಿನಿ ಪತ್ರಿಕೆಗೆ ಅಂಕಣ ಬರೆದರು – ಮಾತಿನ ಮಂಟಪ. ಆಮೇಲೆ ಆ ಅಂಕಣ ಸಂಯುಕ್ತ ಕರ್ನಾಟಕದಲ್ಲಿ ಮುಂದುವರಿಯಿತು.
ಶರ್ಮರು ಬೆನ್ನುತಟ್ಟಿ ಮುಂದಕ್ಕೆ ತಂದ ಲೇಖಕರೂ ಕಲಾವಿದರೂ ಲೆಕ್ಕವಿಲ್ಲದಷ್ಟು ಮಂದಿ. ಎಷ್ಟೋ ವೇಳೆ ಸುಧಾರಣೆಯಾದ ಮೇಲೆ ಅದರಲ್ಲಿ ಆ ತರುಣಲೇಖಕರ ಬರಹಕ್ಕಿಂತ ಶರ್ಮರದೇ ಹೆಚ್ಚುಭಾಗ ಉಳಿಯುತ್ತಿದ್ದದ್ದೂ ಉಂಟು. ಇಂಥ ಸಾಹಿತ್ಯಕೈಂಕರ್ಯ ಮಾಡಿದವರು ವಿರಳ.
ಎಷ್ಟೋ ಜನ ಬರಹಗಾರರ ಕೃತಿಗಳನ್ನು ಸವರಿಸಿ ಸುಧಾರಿಸುತ್ತಿದ್ದುದಲ್ಲದೆ ಕೃಷ್ಣಶರ್ಮರು ಎಷ್ಟೋ ಸಂದರ್ಭಗಳಲ್ಲಿ ತಾವೇ ಪ್ರಕಾಶಕರೊಡನೆ ವ್ಯವಹರಿಸಿ ಪ್ರಕಟಣೆಯನ್ನು ಸುಗಮಗೊಳಿಸಿದ್ದುಂಟು.
ಗಮಕಿ ಗುಡಿಬಂಡೆ ಬಿ.ಎಸ್. ರಾಮಾಚಾರ್ಯರನ್ನು ಕಾವ್ಯಗಾಯನದಲ್ಲಿ ತೊಡಗಿಸಿದವರು ಕೃಷ್ಣಶರ್ಮರೇ.
ಆಮೇಲಿನ ದಿನಗಳಲ್ಲಿ ಗಣ್ಯರೆನಿಸಿದ ಅರ್ಚಿಕ ವೆಂಕಟೇಶ ಮೊದಲಾದವರನ್ನೆಲ್ಲ ಪತ್ರಿಕೋದ್ಯಮದಲ್ಲಿ ನೆಲೆಗೊಳಿಸಿದವರು ಕೃಷ್ಣಶರ್ಮರು.
೧೯೪೦ರ ದಶಕದಲ್ಲಿ ಬೆಂಗಳೂರಿನಲ್ಲಿದ್ದು ಕೃಷ್ಣಶರ್ಮರ ಆಪ್ತವಲಯ ಸೇರಿದ್ದ ಬಸವರಾಜ ಕಟ್ಟೀಮನಿ ಅವರು ತಮ್ಮ ಪ್ರಸಿದ್ಧ ಜ್ವಾಲಾಮುಖಿಯ ಮೇಲೆ ಕಾದಂಬರಿಯಲ್ಲಿ ತಂದಿರುವ ರಾಯರು ಎಂಬ ಪಾತ್ರ ಕೃಷ್ಣಶರ್ಮರನ್ನೇ ಮನಸ್ಸಿನಲ್ಲಿರಿಸಿಕೊಂಡು ನಿರ್ಮಿಸಿದ್ದು.
ಕೃಷ್ಣಶರ್ಮರು ಎಷ್ಟೋ ವಿಷಯಗಳಲ್ಲಿ ಪಥಪ್ರದರ್ಶಕ ಆದ್ಯರಾದರು. ಕನ್ನಡದಲ್ಲಿ ಅಂಕಣ ಬರಹಕ್ಕೆ ಚಾಲನೆ ನೀಡಿದವರು ಕೃಷ್ಣಶರ್ಮರೇ. ಅವರ ಅಂಕಣಗಳು ಸಂಯುಕ್ತ ಕರ್ನಾಟಕ, ಕರ್ಮವೀರ, ಪ್ರಜಾಮತ, ವಾಣಿ, ಪ್ರಜಾವಾಣಿ, ಕನ್ನಡ ಪ್ರಭ ಮೊದಲಾದ ನಾಲ್ಕಾರು ಪತ್ರಿಕೆಗಳಲ್ಲಿ ಪ್ರಕಟಗೊಂಡವು.
ಭಾಷೆಗೆ ಮೊನಚು; ಲವಲವಿಕೆ
ವ್ಯಕ್ತಿಚಿತ್ರಣವನ್ನು ಸಾಹಿತ್ಯದ ಪ್ರಾಕಾರಕ್ಕೆ ಏರಿಸಿದವರೂ ಸಿದ್ದವನಹಳ್ಳಿ ಕೃಷ್ಣಶರ್ಮರೇ. ಅವರು ಸರ್ದಾರ್ ಪಟೇಲ್ ಮುಂತಾದವರನ್ನು ಚಿತ್ರಿಸಿದ ಕುಲದೀಪಕರು ಬರೆಯುವುದಕ್ಕೆ ಹಿಂದೆ ಅಂಥ ಸಾಹಿತ್ಯ ಕನ್ನಡದಲ್ಲಿ ಹೆಚ್ಚಾಗಿ ಬಂದಿರಲಿಲ್ಲ ಎಂದೇ ಹೇಳಬಹುದು. ಎಲ್ಲಿಯೋ ವಿರಳವಾಗಿ ಹಲಕೆಲವು ವ್ಯಕ್ತಿಪರಿಚಯಗಳು ಪ್ರಕಟವಾಗಿದ್ದಿರಬಹುದು. ಆದರೆ ಅದರಲ್ಲಿ ಕಲೆಗಾರಿಕೆ ತುಂಬಿದವರು ಕೃಷ್ಣಶರ್ಮರು.
ಗಾಂಧಿ ಪರಿವಾರದ ಠಕ್ಕರ್ಬಾಪಾ, ಮಶ್ರುವಾಲಾ, ಜಮನಾಲಾಲ್ ಬಜಾಜ್ ಮೊದಲಾದ ನಾಲ್ಕಾರು ವ್ಯಕ್ತಿಗಳ ಸುಂದರ ಆಕರ್ಷಕ ವ್ಯಕ್ತಿಚಿತ್ರಣವನ್ನು ಶರ್ಮರು ದೀಪಮಾಲೆ ಸಂಕಲನದಲ್ಲಿ ನೀಡಿದರು.
ಕೃಷ್ಣಶರ್ಮರ ಪ್ರಕಟಿತ ಕೃತಿಗಳ ಪ್ರಮಾಣ ಅಗಾಧ: ೧೫೦ಕ್ಕೂ ಹೆಚ್ಚು. ಹಿಂದೀ, ಇಂಗ್ಲಿಷ್ ಮೊದಲಾದ ಬೇರೆ ಬೇರೆ ಭಾಷೆಗಳಿಂದ ಶರ್ಮರು ಕನ್ನಡಕ್ಕೆ ತಂದ ಕೃತಿಗಳು ಸುಮಾರು ೧೨೦ ಇದ್ದವು. ಸಂಖ್ಯಾಬಾಹುಳ್ಯದಂತೆ ಅವುಗಳ ಗುಣಮಟ್ಟ ಮತ್ತು ವೈವಿಧ್ಯವೂ ಅಚ್ಚರಿತರುವಂಥದೇ. ಅಧ್ಯಾತ್ಮದಿಂದ ಅರ್ಥಶಾಸ್ತ್ರದವರೆಗೆ, ಇತಿಹಾಸದಿಂದ ವಿಜ್ಞಾನದವರೆಗೆ ಅವರು ಸ್ಪರ್ಶ ಮಾಡದೆ ಬಿಟ್ಟ ಪ್ರಮುಖ ಕ್ಷೇತ್ರ ಯಾವುದೂ ಇಲ್ಲ. ಇಷ್ಟು ವ್ಯಾಪಕ ಸಾಹಿತ್ಯಸೇವೆ ಮಾಡಿದವರು ಹೆಚ್ಚು ಮಂದಿ ಇಲ್ಲ. ಶರ್ಮರಿಗೆ ಅಷ್ಟೊಂದು ಬೇರೆ ಬೇರೆ ವಿಷಯಗಳಲ್ಲಿ ಪ್ರಭುತ್ವ ಹೇಗೆ ಸಿದ್ಧಿಸಿತ್ತು ಎಂಬುದು ಈಗಲೂ ವಿಸ್ಮಯ ತರುವ ಸಂಗತಿಯೇ ಆಗಿದೆ. ಹಾಗೆ ನೋಡಿದರೆ ಈಗ ಇರುವ ಸೌಕರ್ಯಗಳಲ್ಲಿ ಹತ್ತರಲ್ಲೊಂದರಷ್ಟು ಭಾಗವೂ ಈಗ್ಗೆ ಐವತ್ತು ವರ್ಷ ಹಿಂದಿನ ಆ ದಿನಗಳಲ್ಲಿ ಇರಲಿಲ್ಲ. ವಿಷಯ ಯಾವುದೇ ಆಗಲಿ. ಶರ್ಮರ ಬರಹದಲ್ಲಿ ವಿಶಿಷ್ಟ ಛಾಪು ಇರದೆ ಇರುತ್ತಿರಲಿಲ್ಲ.
ಒಮ್ಮೆ ಬರೆದಿದ್ದರು:
ವಿಜ್ಞಾನಪುರುಷನು ಪ್ರಪಂಚವನ್ನೇ ಕೃಷ್ಣಾಜಿನದಂತೆ ಸುತ್ತಿ ತನ್ನ ಬಗಲೊಳಗಿಟ್ಟುಕೊಂಡಿದ್ದಾನೆ.
ಇಂಥ ಇಮೇಜರಿಗೆ ಜನ್ಮಕೊಡಬಲ್ಲವರಾಗಿದ್ದವರು ಕೃಷ್ಣಶರ್ಮರು ಮಾತ್ರ. ಇನ್ನೊಂದು ಕಡೆ ಅವರು ಬರೆದಿದ್ದರು:
ಮನುಷ್ಯನ ಗತಿ ಬೆಳೆಯಿತು; ಆದರೆ ಮನುಷ್ಯನ ಮನಸ್ಸು ಬೆಳೆಯಲಿಲ್ಲ. ಭೌತಿಕ ಪ್ರಗತಿ ಆಯಿತು; ಸಾಮಾಜಿಕ ಸನ್ಮತಿ ಬರಲಿಲ್ಲ.
ವಿಜ್ಞಾನ ಅಹಿಂಸಕವಾಗಬೇಕು; ಅಹಿಂಸೆ ವೈಜ್ಞಾನಿಕವಾಗಬೇಕು.
ವಿಜ್ಞಾನವನ್ನು ಪಳಗಿಸಬೇಕು. ಪಳಗಿಸದಿದ್ದರೆ ಅದು ಕಾಡುಕೋಣ. ಪಳಗಿಸಿದರೆ ಸಾಧುಪ್ರಾಣಿ.
ಬೆಂಕಿ ಸುಡುತ್ತದೆ ಎಂಬುದು ವಿಜ್ಞಾನ. ನಮ್ಮ ಮಾತು ಕೇಳದವರಿಗೆ ಬರೆಹಾಕು ಎಂಬುದು ವಿಜ್ಞಾನವಲ್ಲ.
ಸಾಹಿತ್ಯಸೇವೆ
ಜನರ ಮನಸ್ಸನ್ನು ಬೆಳೆಯಿಸಲಾರದುದು, ಜನರ ಹಿತವನ್ನು ಸಾಧಿಸಲಾರದುದು ಸಾಹಿತ್ಯವಲ್ಲ. ಪ್ರಿಯವಾದುದೇ ಹಿತವಲ್ಲ… ಪ್ರಿಯ-ಅಪ್ರಿಯಗಳನ್ನು ಮೀರಿದ್ದು ಹಿತ. ಆ ಹಿತ ಕೂಡಿದ್ದರೆ, ಸ-ಹಿತ ಆಗಿದ್ದರೆ ಅದು ಸಾಹಿತ್ಯ. ಇದು ಕೃಷ್ಣಶರ್ಮರೇ ನೀಡಿದ್ದ ಲಕ್ಷಣ ನಿರೂಪಣೆ.
ಶರ್ಮರ ಅನುವಾದಗಳ ಜೀವಂತಿಕೆ ಕೇವಲ ಭಾಷಾಜ್ಞಾನದಿಂದ ಬಂದದ್ದಲ್ಲ. ಅವರು ವಿಷಯವನ್ನು ಅರಗಿಸಿಕೊಂಡು ಪುನಃಸೃಷ್ಟಿ ಮಾಡಿದವರು. ಹೀಗೆ ಅನ್ಯಭಾಷೆಯ ನುಡಿಗಳಿಗೆ ಸಂವಾದಿಯಾದ ಕನ್ನಡ ದೇಸೀ ಪ್ರಯೋಗ ಅವರಿಗೆ ಥಟ್ಟನೆ ಸ್ಫುರಿಸುತ್ತಿತ್ತು. ಇದು ಅವರಿಗಿದ್ದ ಒಂದು ದೈವೀ ಶಕ್ತಿ ಎಂದೇ ಹೇಳಬೇಕಾಗುತ್ತದೆ. ಹೀಗೆ ಆಧುನಿಕ ಕಾಲದಲ್ಲಿ ಕನ್ನಡಕ್ಕೆ ಅವಶ್ಯವಾಗಿ ಬೇಕಾಗಿದ್ದ ಅಸಂಖ್ಯ ಶಬ್ದಗಳನ್ನು ತಮ್ಮ ಮೂಸೆಯಲ್ಲಿ ಟಂಕಿಸಿದವರು ಕೃಷ್ಣಶರ್ಮರು.
ಯಾವುದಾದರೂ ಬರಹವನ್ನು ನೋಡಿದರೆ ಅದರಲ್ಲಿ ಲೇಖಕರ ಹೆಸರಿಲ್ಲದಿದ್ದರೂ ಅದು ಕೃಷ್ಣಶರ್ಮರದೇ ಎಂದು ಯಾರಿಗಾದರೂ ಒಡನೆಯೇ ಹೊಳೆಯಬಲ್ಲಂಥ ವಿಶಿಷ್ಟತೆ ಶರ್ಮರ ಬರಹದಲ್ಲಿ ಇತ್ತು.
ಒಮ್ಮೆ ವಡಗೇನಹಳ್ಳಿ ಅಶ್ವತ್ಥನಾರಾಯಣರಾಯರ ಬಿಡುಗಡೆಯ ಬೆಲೆ ಗ್ರಂಥವನ್ನು ವಿಮರ್ಶಿಸುತ್ತಾ ಕುಳಕುಂದ ಶಿವರಾಯರು (ನಿರಂಜನ) ರಾಯರ ಶೈಲಿ ಕೃಷ್ಣಶರ್ಮರ ಶೈಲಿಯನ್ನು ಹೋಲುತ್ತದೆ ಎಂದು ಬರೆದಿದ್ದರು. ಅದಾದ ಎಷ್ಟೋ ಸಮಯದ ತರುವಾಯ ಒಮ್ಮೆ ಶಿವರಾಯರನ್ನು ಭೇಟಿಯಾದಾಗ ಅಶ್ವತ್ಥನಾರಾಯಣರಾಯರು ಕೇಳಿದರು: ನಿಮಗೆ ಕೃಷ್ಣಶರ್ಮರ ಪರಿಚಯ ಇದೆಯೆ? ಇಲ್ಲ ಎಂದರು ನಿರಂಜನರು. ಅಶ್ವತ್ಥನಾರಾಯಣರಾಯರು ನಕ್ಕು ಹೇಳಿದರು: ಈ ಪುಸ್ತಕ ನಾನು ಬರೆದದ್ದು ಇಂಗ್ಲಿಷಿನಲ್ಲಿ. ಅದಕ್ಕೆ ಕನ್ನಡರೂಪ ನೀಡಿದವರು ಕೃಷ್ಣಶರ್ಮರೇ.
ಕೃಷ್ಣಶರ್ಮರಿಗೆ ಅತ್ಯಂತ ನಿಕಟವರ್ತಿಯಾಗಿದ್ದ ದ.ರಾ. ಬೇಂದ್ರೆ ಒಮ್ಮೆ ಹೇಳಿದರು: ಶರ್ಮರಿಗೆ ಶಬ್ದ ಎಂದರೆ ಪ್ರಾಣ. ಆದರೆ ಧ್ವನಿಯ ಗುಹೆಯಲ್ಲಿ ನಾದದ ಕಳ್ಳಹೆಜ್ಜೆ ಪತ್ತೆಮಾಡುವುದು ನಾನು ಮಾಡುತ್ತಿರುವ ಕೆಲಸ.
ಕೃಷ್ಣಶರ್ಮರದು ಚಂದ್ರಕಾಂತಶಿಲೆಯಲ್ಲ, ಅದು ಸೂರ್ಯಕಾಂತಶಿಲೆ. ಈ ಸೂರ್ಯಕಾಂತದಲ್ಲಿ ಜೊಳ್ಳಾದುದೆಲ್ಲ ಸುಟ್ಟುಹೋಗಿ ಅವುಗಳ ತಿರುಳಿನ ನಗ್ನಸತ್ಯ ನಮ್ಮನ್ನು ಎದುರಿಸುತ್ತದೆ – ಹೀಗೆ ವರ್ಣಿಸಿದ್ದವರು ವಿ.ಕೃ. ಗೋಕಾಕರು.
ಶರ್ಮರು ಕೈಜೋಡಿಸಿದ ಪ್ರಕಟನೆಗಳದು ಉದ್ದಕ್ಕೂ ವಿಕ್ರಮಗಳೆಂದೇ ಹೇಳಬೇಕಾಗುತ್ತದೆ.
ಗಾಂಧೀ ಗ್ರಂಥಮಾಲೆಯ ಇಪ್ಪತ್ತು ಸಂಪುಟಗಳು ಮೈಸೂರಿನ ಪ್ರೊ|| ಎಂ. ಯಾಮುನಾಚಾರ್ಯರ ನಿರ್ದೇಶನದಲ್ಲಿ ಭಾರತದ ಬೇರಾವುದೇ ಭಾಷೆಗಿಂತ ಮೊದಲು ಪ್ರಕಟಗೊಂಡವು. ಅದಕ್ಕೆ ಕಾರಣವಾದದ್ದು ಕೃಷ್ಣಶರ್ಮರ ಕೌಶಲ, ದಕ್ಷತೆ. ಯಾರದೇ ಬರಹದಲ್ಲಿ ಏನೇ ನ್ಯೂನತೆ ಕಂಡರೂ ಅದನ್ನು ತುಂಬಿಸಬಲ್ಲ ಶಕ್ತಿ, ಉತ್ಸಾಹ, ಅವಧಾನ ಎಲ್ಲವೂ ಶರ್ಮರಲ್ಲಿ ಇದ್ದದ್ದರಿಂದ ಅದು ಸಾಧ್ಯವಾಯಿತು.
ಹಲವಾರು ಪತ್ರಿಕೆಗಳ ಸಂಪಾದಕತ್ವದ ಹೊಣೆಯನ್ನೂ ಶರ್ಮರು ನಿರ್ವಹಿಸಿದರು. ಅವುಗಳಲ್ಲಿ ಪ್ರಮುಖವಾದವು – ಜಯಕರ್ಣಾಟಕ, ಸರ್ವೋದಯ, ಕನ್ನಡ ಹರಿಜನ, ಭೂದಾನ, ವಾಹಿನಿ, ವಿಶ್ವಕರ್ಣಾಟಕ, ಜೀವನ, ಕನ್ನಡ ನುಡಿ.
ಶರ್ಮರ ಸಂಪಾದಕತ್ವದ ಪತ್ರಿಕೆಗಳ ಸಂಚಿಕೆಗಳನ್ನು ಈಗ ನೋಡಿದರೂ ಮೆಚ್ಚಲೇಬೇಕಾದ ಅಚ್ಚುಕಟ್ಟೂ ಲವಲವಿಕೆಯೂ ಅವುಗಳಲ್ಲಿ ಎದ್ದುಕಾಣುತ್ತದೆ.
ತಿ.ತಾ. ಶರ್ಮರೂ ಕೃಷ್ಣಶರ್ಮರೂ ಜೊತೆಗೂಡಿ ಮಾಡಿದ ನೆಹರುರವರ ‘Glimpses of World History’ ಅನುವಾದ ‘ಜಗತ್ಕಥಾವಲ್ಲರಿ’ ಈಗ ಓದಿದರೂ ಮನೋಹರವೆನಿಸುತ್ತದೆ.
ಮೀನೂ ಮಸಾನಿ ಅವರ `Our India’ ಎಫ್.ಜಿ. ಪಿಯರ್ಸ್ ಬರೆದ ‘Footprints on the Sands of Time’, ಡಡ್ಲೀ ಸ್ಟ್ಯಾಂಪ್ ಬರೆದ ಭೂಗೋಳ ಪಠ್ಯ – ಶರ್ಮರ ಈ ಅನುವಾದಗಳು ಹತ್ತಾರು ವರ್ಷ ವಿದ್ಯಾರ್ಥಿಗಳಿಗೆ ದಾರಿದೀಪವಾದವು. ಅನೇಕ ವರ್ಷ ಅವೆಲ್ಲ ಹೈಸ್ಕೂಲು ಪಾಠ್ಯಪುಸ್ತಕಗಳಾಗಿದ್ದವು.
ಮೊದಲು ಬಿ.ಎನ್. ಗುಪ್ತರ ಆ ಕಾಲದ ಪ್ರಮುಖ ಪತ್ರಿಕೆ ಪ್ರಜಾಮತದಲ್ಲಿ ಧಾರಾವಾಹಿಯಾಗಿ ಬಂದ ವಿನೋಬಾರವರ ಗೀತಾಪ್ರವಚನ ಶರ್ಮರ ಅನುವಾದದಲ್ಲಿ ಎಷ್ಟು ರಮ್ಯವಾಗಿ ಮೂಡಿತೆಂದರೆ, ಕನ್ನಡದ ಪರಿಚಯವೂ ಇದ್ದ ವಿನೋಬಾ ಅವರೇ ನನ್ನ ಮೂಲಕ್ಕಿಂತ ನಿನ್ನ ಅನುವಾದವೇ ಸೊಗಸಾಗಿದೆ ಎಂದು ಹೇಳಿದ್ದರು.
ಕೃಷ್ಣಶರ್ಮರು ಮಾಡಿದ ಕೆ.ಎಂ. ಮುನ್ಶಿ ಅವರ ಕೃಷ್ಣಾವತಾರ ಅನುವಾದ ಧಾರಾವಾಹಿಯಾಗಿ ಸಂಯುಕ್ತ ಕರ್ನಾಟಕದಲ್ಲಿ ಪ್ರಕಟವಾಗುತ್ತಿದ್ದಾಗ ಪ್ರತಿ ಕಂತನ್ನು ಓದಲು ತುದಿಗಾಲಲ್ಲಿ ಕಾಯುತ್ತಿದ್ದವರು ಸಾವಿರಾರು ಮಂದಿ. ಇಷ್ಟು ವರ್ಷಗಳ ತರುವಾಯವೂ ಕೃಷ್ಣಾವತಾರ ಕನ್ನಡದ ಅತ್ಯಂತ ಜನಪ್ರಿಯ ಕೃತಿಗಳಲ್ಲಿ ಒಂದೆನಿಸಿದೆ.
ಕನ್ನಡ ಭಾಷೆಯನ್ನು ಕೃಷ್ಣಶರ್ಮರಷ್ಟು ಪಳಗಿಸಿದವರು ವಿರಳ. ಆದರೆ ಶಬ್ದವಿಹಾರದ ಆವೇಶದಲ್ಲಿ ಅವರು ಭಾಷಾಸಹಜ ನಿಯಮಗಳನ್ನು ಉಲ್ಲಂಘಿಸಿದವರಲ್ಲ. ಅವರ ಹೊಸ ಶೈಲಿಯ ಅನ್ವೇಷಣೆಯೂ ಕೂಡ ನಿಯಮಿತ ಶಿಷ್ಟ ಪ್ರಾಕಾರದೊಳಗೇ ನಡೆಯಿತು.
ಟಿ.ಪಿ. ಕೈಲಾಸಂ ಮದರಾಸಿನ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದಾಗ ಅವರು ಕೊಟ್ಟ ಸಾಮಗ್ರಿಯನ್ನು ಒಪ್ಪಗೊಳಿಸುವ ಕೆಲಸ ಅವರ ಆಪ್ತರಾದ ಕೃಷ್ಣಶರ್ಮರ ಪಾಲಿಗೆ ಬಂದಿತು. ಕೈಲಾಸಂರವರದಾದರೋ ಶರ್ಮರಿಂದ ಪೂರ್ತಿ ಭಿನ್ನವಾದ ಸ್ವಚ್ಛಂದ ಸ್ವಭಾವ. ಆದರೂ ಶರ್ಮರು ಭಾಷಣವನ್ನು ಸುವ್ಯವಸ್ಥಗೊಳಿಸಿಯೇಗೊಳಿಸಿದರು.
(ಕೈಲಾಸಂ ಅದನ್ನು ತಲೆಗೆ ಹಚ್ಚಿಕೊಳ್ಳದೆ ತಮಗೆ ತೋರಿದ ಆಶುಭಾಷಣವನ್ನೇ ಮಾಡಿ ಶ್ರೋತೃಗಳನ್ನು ಗೆದ್ದುಕೊಂಡರು; ಅದು ಬೇರೆ ವಿಷಯ.)
೧೯೫೬-೫೭ರಲ್ಲಿ ವಿನೋಬಾ ಭಾವೆ ಅವರು ಕರ್ನಾಟಕದಲ್ಲಿ ಭೂದಾನ ಪಾದಯಾತ್ರೆ ನಡೆಸಿದಾಗ ಅವರಿಗೆ ಉದ್ದಕ್ಕೂ ಬೆಂಬಲವಾಗಿ ನಿಂತು ಅದನ್ನು ಯಶಸ್ವಿಗೊಳಿಸಿದವರು ಕೃಷ್ಣಶರ್ಮರು.
ಬದುಕು ಆರಾಧನೆ
ಶರ್ಮರ ಜನಸಂಪರ್ಕ ವಿಶಾಲವಾದದ್ದು. ಅವರು ಬೆಳಗ್ಗೆ ಸ್ನಾನ, ಕಾಫಿ ಮುಗಿಸಿ ಹೊರಟರೆ ಒಂದು ಫರ್ಲಾಂಗ್ ದೂರ ಮುಗಿಸುವ ವೇಲೆಗೆ ೧೨ ಗಂಟೆಯೇ ಆಗುತ್ತಿದ್ದುದೂ ಅಪರೂಪವಲ್ಲ. ತರಕಾರಿಯವರು, ಜಟಕಾ ಓಡಿಸುವವರು ಎಲ್ಲರೂ ಅವರ ಪರಿವಾರದವರೇ. ಅವರು ವಿಶ್ವಕುಟುಂಬಿಯಾಗಿದ್ದರು.
ತಮ್ಮ ಬದುಕು ಒಂದು ಆರಾಧನೆ ಎಂದು ಶರ್ಮರು ಆಗಾಗ ಹೇಳುತ್ತಿದ್ದುದುಂಟು. ಅದರಲ್ಲಿ ಎಷ್ಟು ಮಾತ್ರವೂ ಉತ್ಪ್ರೇಕ್ಷೆ ಇಲ್ಲ.
ಸಾರ್ವಜನಿಕ ಹಣವನ್ನು ಬೆಂಕಿಯಂತೆ ಕಂಡವರು ಅವರು. ಅದೇ ನಿಷ್ಠೆಯನ್ನು ತಮ್ಮ ಜೊತೆಗಾರರಲ್ಲಿ ಅವರು ಸದಾ ಬೆಳೆಸಿದರು.
ಕೃಷ್ಣಶರ್ಮರ ಹೆಚ್ಚಿನ ಬರಹ – ಅದು ಲೇಖನವಾಗಲಿ ಗ್ರಂಥವಾಗಲಿ ಪತ್ರವಾಗಲಿ – ನಡೆಯುತ್ತಿದ್ದದ್ದು ಒಂದು ಕಡೆ ಖಾಲಿ ಇದ್ದ ಯಾವುದೋ ಬಳಸಿದ ಹಾಳೆಗಳಲ್ಲಿ. ಪತ್ರಗಳ ಲಕೋಟೆ, ಸಮಾರಂಭಗಳ ಆಮಂತ್ರಣಪತ್ರಗಳನ್ನೂ ಶೇಖರಿಸಿ ಒಪ್ಪಮಾಡಿ ಇಟ್ಟುಕೊಂಡಿರುತ್ತಿದ್ದರು.
ಅನೇಕ ಸಂದರ್ಭಗಳಲ್ಲಿ ಕೃಷ್ಣಶರ್ಮರ ಪ್ರತಿಕ್ರಿಯೆ ಅವರದೇ ವಿಶಿಷ್ಟವೆಂಬಂತೆ ಇರುತ್ತಿತ್ತು.
ಒಮ್ಮೆ ವಕೀಲಮಿತ್ರರೊಬ್ಬರು ಸ್ವಲ್ಪ ನೈತಿಕತೆಯಿಂದ ದೂರವಾದ ಮೊಕದ್ದಮೆಯೊಂದು ಬಂದಾಗ ಅದನ್ನು ತಿರಸ್ಕರಿಸಬೇಕೆ, ಅಥವಾ ವೃತ್ತಿಧರ್ಮವೆಂದು ಒಪ್ಪಿಕೊಳ್ಳಬೇಕೆ ಎಂದು ಶರ್ಮರ ಸಲಹೆ ಕೇಳಿದರು. ಶರ್ಮರು ತಾವೇ ಉತ್ತರಿಸಬಹುದಾಗಿತ್ತು. ಆದರೆ ಹಾಗೆ ಮಾಡಲಿಲ್ಲ. ಅವರು ಹೇಳಿದರು: ನಿಮ್ಮ ತಾಯಿಯವರನ್ನು ಒಂದು ಮಾತು ಕೇಳಿ. ಅವರು ಒಪ್ಪಿದರೆ ಮೊಕದ್ದಮೆಯನ್ನು ಕೈಗೆತ್ತಿಕೊಳ್ಳಿ.
ವಕೀಲರು ಕೇಳಿದಾಗ ಆ ತಾಯಿ ಹೇಳಿದರಂತೆ: ನಾನು ಅಡಿಗೆ ಕೂಲಿ ಮಾಡಿಯಾದರೂ ಮನೆ ನಿರ್ವಹಿಸುತ್ತೇನೆ. ನೀನು ಇಂಥ ಕೇಸುಗಳನ್ನು ಹಿಡಿಯಬೇಡ.
ಸಂಸ್ಥೆಗಳಿಗೆ ಯೋಗದಾನ
ಶರ್ಮರು ಕಟ್ಟಿ ಬೆಳೆಸಿದ ಸಂಸ್ಥೆಗಳು ಎಷ್ಟೆಂದು ನೆನಪು ಮಾಡಿಕೊಳ್ಳುವುದೂ ಕಷ್ಟ. ಹೈದರಾಬಾದಿನಲ್ಲಿ ಸಾಹಿತ್ಯ ಮಂದಿರ, ನಿಜಾಂ ಕರ್ನಾಟಕ ಪರಿಷತ್ತು, ಕನ್ನಡ ಶಾಲೆ; ಚಿತ್ರದುರ್ಗದಲ್ಲಿ ಕರ್ಣಾಟಕ ಸಂಘ; ಮೈಸೂರಿನಲ್ಲಿ ವಿದ್ಯೋದಯ ಸಭೆ; ಬೆಂಗಳೂರಿನಲ್ಲಿ ಸರ್ವಸೇವಾ ಸಂಘ, ಭೂದಾನ ಯಜ್ಞಸಮಿತಿ, ಕೃಷಿಗೋಸೇವಾ ಸಂಘ, ಗಾಂಧಿ ಶತಮಾನೋತ್ಸವ ಸಮಿತಿ, ಗಾಂಧಿ ಸಾಹಿತ್ಯ ಸಂಘ. ಇವಲ್ಲದೆ ಅವರಿಂದ ಧಾರಾಳವಾಗಿ ಯೋಗದಾನ ಪಡೆದ ಸಂಸ್ಥೆಗಳು ಹಲವಾರು: ಮೈಸೂರು ಕಾಂಗ್ರೆಸ್, ರಾಜ್ಯ ಪ್ರಕಾಶಕರ ಮತ್ತು ಪುಸ್ತಕ ವ್ಯಾಪಾರಿಗಳ ಸಂಘ, ಕನ್ನಡ ಸಾಹಿತ್ಯ ಪರಿಷತ್ತು, ದಕ್ಷಿಣಭಾರತ ಪುಸ್ತಕ ಸಂಸ್ಥೆ (ಎಸ್.ಎಲ್.ಬಿ.ಟಿ.: ಸದರ್ನ್ ಲ್ಯಾಂಗ್ವೇಜಸ್ ಬುಕ್ ಟ್ರಸ್ಟ್), ಬೆಂಗಳೂರು ನಗರ ಗ್ರಂಥಾಲಯ ಪ್ರಾಧಿಕಾರ, ರಾಜ್ಯ ಗ್ರಂಥಾಲಯ ಸಂಘ; ಎ.ವಿ. ವರದಾಚಾರ್ ಸ್ಮಾರಕ ಕಲಾಸಂಘ, ಶ್ರೀನಿವಾಸಮಂದಿರಂ ಧರ್ಮಸಂಸ್ಥೆ, ಹಲವು ಸಹಕಾರಿ ಸಂಸ್ಥೆಗಳು, ಒಂದೆರಡು ಗೃಹನಿರ್ಮಾಣ ಸಂಘಗಳು, ಮಲ್ಲೇಶ್ವರಂ ಸಹಕಾರಿ ಸೊಸೈಟಿ, ಆಂಜನೇಯ ಕೋ-ಆಪರೇಟಿವ್ ಬ್ಯಾಂಕ್, ಇತ್ಯಾದಿ. ಈ ಎಲ್ಲ ಸಂಸ್ಥೆಗಳಿಗೆ ಕೃಷ್ಣಶರ್ಮರು ಯೋಗದಾನ ಕೊಟ್ಟರೇ ವಿನಾ ಅದಾವುದರಿಂದಲೂ ಅವರು ಬಿಡಿಗಾಸನ್ನೂ ಪಡೆಯಲಿಲ್ಲ.
ಶರ್ಮರ ಬದುಕು ಮೌಲ್ಯವಂತವಾಗಿದ್ದುದರಿಂದ ಅವರ ಬರಹ ತೇಜೋಮಯವಾಯಿತು.
ಹಲವೊಮ್ಮೆ ಅವರು ತೀರಾ ನಿಷ್ಠುರರಾಗಿ ಇರುತ್ತಿದ್ದರೆಂದೇ ಅನಿಸುವ ಸಂದರ್ಭಗಳಿದ್ದವು.
ಗಾಂಧಿ ಜಯಂತಿ ಆಸುಪಾಸಿನ ದಿನಗಳಲ್ಲಿ ಖಾದಿ ಮಾರಾಟಕ್ಕೆ ಹೋಗುವ ಕಾರ್ಯಕರ್ತರಿಗೆ ಇಡ್ಲಿ-ಕಾಫಿ ಕೊಡಬೇಕೆಂಬ ಹಿತೈಷಿಗಳ ನಮ್ರ ಸಲಹೆಯನ್ನು ಅವರು ಸ್ವೀಕರಿಸಲಿಲ್ಲ. ಶ್ರದ್ಧೆ-ನಿಷ್ಠೆಯ ವಿಷಯದಲ್ಲ್ಲಿ ಅವರು ಎಂದೂ ಚೌಕಾಸಿಗೆ ಬಾಗಿದವರಲ್ಲ.
ಅವರೇ ಕಟ್ಟಿಬೆಳೆಸಿದ ಶ್ರೀರಾಮಾ ಕೋ-ಆಪರೇಟಿವ್ ಬ್ಯಾಂಕ್ ಕಾರ್ಯಕಾರಿಣಿಯ ಸಭೆಯಲ್ಲಿ ಒಮ್ಮೆ ಸದಸ್ಯರೊಬ್ಬರು ಕಾಫಿ ಬಯಸಿದಾಗ, ಶರ್ಮರು ತಮ್ಮ ಕಿಸೆಯಿಂದಲೇ ಹಣ ತೆಗೆದು ಕಾಫಿ ತರಿಸಿದರು. ಇದಕ್ಕೆ ಸಂಸ್ಥೆಯ ಹಣ ವೆಚ್ಚವಾಗಬಾರದು ಎಂಬ ನಿಷ್ಠುರ ನಿಯಮವನ್ನು ಅವರು ಸಡಿಲಿಸಲಿಲ್ಲ.
ಆತ್ಮಸ್ಥೈರ್ಯ
ಸದಾ ಉತ್ಸಾಹ-ಉಲ್ಲಾಸದಲ್ಲಿರುತ್ತಿದ್ದ ಕೃಷ್ಣಶರ್ಮರು ಶ್ರದ್ಧೆಯ ವಿಷಯ ಬಂದಾಗ ಪಾಷಾಣವಾಗುತ್ತಿದ್ದರು.
ಒಮ್ಮೆ ವಿದ್ಯಾರ್ಥಿಗಳ ನಡುವೆ ಪ್ರಸಿದ್ಧ ಪ್ರೊಫೆಸರರೊಬ್ಬರು ಖಾದಿಯ ಬಗ್ಗೆ ವ್ಯಂಗ್ಯವಾಗಿ ಮಾತನಾಡಿದರು – “My Patriotism is not measured by the roughness of my cloth” ಎಂದು. ಅವರು ತುಂಬ ಗಣ್ಯರಾಗಿದ್ದವರು; ಅವರಿಗೆ ಎದುರಾಡುವ ಧೈರ್ಯ ಇತರರಿಗೆ ಇರಲಿಲ್ಲ. ಆದರೆ ಅಲ್ಲಿದ್ದ ಕೃಷ್ಣಶರ್ಮರು ತಕ್ಷಣವೇ ಉತ್ತರಿಸಿದರು – “Nor is anybody’s culture established by the fineness of his dress.”
ಜೀವನವನ್ನು ವ್ರತದಂತೆ ನಡೆಸಿದ ಕೃಷ್ಣಶರ್ಮರು ಎಂದೂ ಯಾರ ಹಂಗಿಗೂ ಒಳಗಾದವರಲ್ಲ. ಆದ್ದರಿಂದ ಅವರ ಆತ್ಮಸ್ಥೈರ್ಯ ಎಂದೂ ನಲುಗಲಿಲ್ಲ, ನುಗ್ಗಾಗಲಿಲ್ಲ.
ಹೈದರಾಬಾದಿನ ಮೊದಲ ಮುಖ್ಯಮಂತ್ರಿ ಬಿ. ರಾಮಕೃಷ್ಣರಾಯರು ಕೃಷ್ಣಶರ್ಮರನ್ನು ರಾಜ್ಯಸಭೆಗೆ ಸದಸ್ಯರಾಗಿ ನಿಯುಕ್ತಿ ಮಾಡಬಯಸಿದರು. ಶರ್ಮರು ನಿರಾಕರಿಸಿದರು. ಉತ್ತರೋತ್ತರ ರಾಮಕೃಷ್ಣರಾಯರು ಕೇರಳ ರಾಜ್ಯಪಾಲರಾದಾಗ ಅವರ ಖಾಸಗಿ ಸಹಾಯಕರಾಗಿರುವಂತೆ ಶರ್ಮರನ್ನು ಕರೆದರು. ಶರ್ಮರು ಈಗಲೂ ನಿರಾಕರಿಸಿದರು.
ಹೈದರಾಬಾದಿನಲ್ಲಿ ಒಂದೋ ಎರಡೋ ಲಕ್ಷ ರೂಪಾಯಿ ವೆಚ್ಚದ ಮುದ್ರಣಾಲಯವನ್ನು ಏರ್ಪಡಿಸಿಕೊಡುವುದಾಗಿಯೂ ಶರ್ಮರು ತಮ್ಮ ಪತ್ರಿಕಾದಿ ಪ್ರಕಟಣೆಯನ್ನು ಸ್ವತಂತ್ರವಾಗಿ ನಡೆಸಬಹುದೆಂದೂ ರಾಮಕೃಷ್ಣರಾಯರು ಹೇಳಿದರು. ಇಂಥ ಎಲ್ಲ ಸ್ನೇಹಪೂರ್ವಕ ಸಲಹೆಗಳನ್ನೂ ಶರ್ಮರು ತಿರಸ್ಕರಿಸುತ್ತಲೇ ಬಂದರು.
ಬಿ.ಎನ್. ಗುಪ್ತರವರು ತಾವು ನಡೆಸುತ್ತಿದ್ದ ಪತ್ರಿಕೆಗಳ ಸಂಪಾದಕತ್ವ ವಹಿಸಿಕೊಳ್ಳುವಂತೆ ಕೃಷ್ಣಶರ್ಮರನ್ನು ಎಷ್ಟೋ ಸಲ ಆಹ್ವಾನಿಸಿದ್ದರು. ಅವೆಲ್ಲ ಆ ಕಾಲದ ಯಶಸ್ವಿ ಪತ್ರಿಕೆಗಳಾಗಿ ಮೆರೆದಿದ್ದವು. ಆದರೆ ಶರ್ಮರು ಸ್ವತಂತ್ರವಾಗಿ ಉಳಿಯಬಯಸಿದರು.
ಹೀಗೆ ಕಷ್ಟಕಾರ್ಪಣ್ಯಗಳನ್ನು ಶರ್ಮರು ತಾವಾಗಿ ತಂದುಕೊಂಡರು – ತಮ್ಮ ಧ್ಯೇಯನಿಷ್ಠೆಯಿಂದಾಗಿ.
ಶರ್ಮರ ಮನೆವಾರ್ತೆ ದೊಡ್ಡದೇ. ಆರು ಹೆಣ್ಣುಮಕ್ಕಳೂ ಸೇರಿದಂತೆ ಒಂಬತ್ತು ಮಕ್ಕಳ ಸಮೃದ್ಧ ಕುಟುಂಬ. ಸಾಲದುದಕ್ಕೆ ವಿದ್ಯಾರ್ಥಿಗಳೋ ಬಂಧುವರ್ಗದವರೋ ಒಬ್ಬಿಬ್ಬರಾದರೂ ಸದಾ ಇರುತ್ತಿದ್ದರು.
ಇಷ್ಟು ದೊಡ್ಡ ಪರಿವಾರವನ್ನು ಶರ್ಮರ ಕುಟುಂಬ ಪ್ರಮೀಳಾತಾಯಿಯವರು ಹೇಗೆ ನಿರ್ವಹಿಸಿದರೆಂದು ನೆನೆದರೆ ಈಗಲೂ ದಿಗ್ಭ್ರಮೆಯಾಗುತ್ತದೆ.
ಆದರೆ ಕೃಷ್ಣಶರ್ಮರ ಮುಖದಲ್ಲಿ ಕಷ್ಟದ ಅಥವಾ ದೈನ್ಯದ ಗೆರೆಯನ್ನು ಎಂದೂ ಯಾರೂ ಕಂಡದ್ದಿಲ್ಲ.
ಅಂಥ ಕರ್ಮಯೋಗಿಯ ನೆನಪು ಸಂಸ್ಕಾರಕಾರಿ.