ನಿಮ್ಮ ನಿಜವಾದ ಸಮಾಧಾನ ಕೇವಲ ಭಗವಂತನ ಹತ್ತಿರವೇ ಇರುತ್ತದೆ ಎಂಬ ವಿಶ್ವಾಸವನ್ನು ಹೊಂದಿದವರಾಗಿ ಪ್ರಪಂಚದಲ್ಲಿ ವ್ಯವಹರಿಸಿರಿ. ಜನರು ಲಾಭವಾಗಬೇಕೆಂಬ ಉದ್ದೇಶದಿಂದಲೇ ವ್ಯಾಪಾರ ಮಾಡುತ್ತಾರೆ. ವ್ಯಾಪಾರದಲ್ಲಿ ಲಾಭವಾಗದಿದ್ದರೆ ಆ ವ್ಯಾಪಾರಕ್ಕೆ ಏನೂ ಅರ್ಥವಿಲ್ಲದಂತೆ. ಇದರಂತೆ ಪ್ರಪಂಚದಲ್ಲಿ ಸಮಾಧಾನವು ನಿಜವಾದ ಲಾಭವಿರುತ್ತದೆ. ಇಂಥ ಸಮಾಧಾನವು ಪ್ರಾಪ್ತವಾಗದಿದ್ದರೆ ಪ್ರಪಂಚದ ಬಗ್ಗೆ ಆಸಕ್ತಿ ಹೊಂದಿರುವುದರಿಂದ ಆಗುವ ಲಾಭವೇನು? ನಿನ್ನ ಅಸಮಾಧಾನಕ್ಕೆ ನಿಶ್ಚಿತವಾದ ಕಾರಣವೇನು ಹೇಳು ಎಂದು ನಾವು ಯಾರನ್ನಾದರೂ ಕೇಳಿದರೆ, ಅವನಿಗೆ ನಿಶ್ಚಿತವಾದ ಕಾರಣವನ್ನು ಹೇಳಲು ಸಾಧ್ಯವಿಲ್ಲ. ಇದರ ಅರ್ಥವೇನೆಂದರೆ ತಾತ್ತ್ವಿಕ ದೃಷ್ಟಿಯಿಂದ ಸಮಾಧಾನ ಪಡೆಯುವುದಕ್ಕಾಗಿ ನಿಜವಾಗಿಯೂ ಯಾವ ವಸ್ತುವಿನ ಆವಶ್ಯಕತೆಯೂ ಇರುವುದಿಲ್ಲ. ಆದರೆ ಈ ವಿಷಯವು ಯಾರಿಗೂ ಮನವರಿಕೆಯಾಗಿರುವುದಿಲ್ಲ. ಇದ್ದ ಪರಿಸ್ಥಿತಿಯಲ್ಲಿ ನಮಗೆ ಸಮಾಧಾನ ಎನಿಸುವುದಿಲ್ಲ ಹಾಗೂ ಅಪೇಕ್ಷಿತ ವಸ್ತುವನ್ನು ಪಡೆದುಕೊಂಡು ಕೂಡ ನಾವು ಪೂರ್ಣ ಸುಖಿಯಾಗುವುದಿಲ್ಲ. ಕಾರಾಗೃಹದಲ್ಲಿಯ ಮನುಷ್ಯನಿಗೆ ನಾನು ಸುಖವಾಗಿರುತ್ತೇನೆ ಎಂದು ಅನ್ನಿಸುವುದು ಎಂದಾದರೂ ಶಕ್ಯವಿದೆಯೆ? ಪ್ರಾಪಂಚಿಕರ ಅವಸ್ಥೆಯೂ ಕೂಡ ಹೀಗೆಯೇ ಆಗಿರುತ್ತದೆ. ನಿಜವಾಗಿಯೂ ಪ್ರಪಂಚದಲ್ಲಿ ಸಮಾಧಾನ, ಆನಂದ ಪ್ರಾಪ್ತವಾಗುವುದಿಲ್ಲವೆಂದು ಎಲ್ಲರಿಗೂ ತಿಳಿಯುತ್ತದೆ. ಆದರೆ ಪಟ್ಟಣದಲ್ಲಿಯ ಜನರು ಕೇವಲ ಅಭಿಮಾನದಿಂದ ಹಾಗೂ ಹಳ್ಳಿಯಲ್ಲಿಯ ಜನರು ಅಜ್ಞಾನದಿಂದ ಹೇಗೆ ನಡೆಯಬೇಕೋ ಹಾಗೆ ನಡೆಯುವುದಿಲ್ಲ. ಈ ಪ್ರಪಂಚದಲ್ಲಿದ್ದುಕೊಂಡು ಭಗವಂತನ ಪ್ರೇಮ ಹಾಗೂ ಸಮಾಧಾನವನ್ನು ನಮಗೆ ಹೇಗೆ ಸಂಪಾದಿಸಲು ಬರುತ್ತದೆ ಎಂಬುದನ್ನು ನಾವು ವಿಚಾರ ಮಾಡಬೇಕು. ಭಗವನ್ನಾಮದ ಸಹವಾಸದಲ್ಲಿ ಇರುವುದರಿಂದ ದೇಹದ ಮೇಲಿನ ಪ್ರೇಮವು ತಾನಾಗಿಯೇ ನಷ್ಟವಾಗುತ್ತದೆ ಹಾಗೂ ಅದರಿಂದ ಈ ದೇಹವು ಮಂಡಿಸಿದ ಪ್ರಪಂಚದ ಮೇಲಿನ ಪ್ರೇಮವು ಕಡಮೆಯಾಗುತ್ತದೆ ಹಾಗೂ ಕೊನೆಗೆ ಅವನಿಗೆ ಸರ್ವತ್ರ ಪರಮೇಶ್ವರನೇ ಕಾಣಿಸುತ್ತಾನೆ.
(ಮಹಾರಾಜರ ಪ್ರವಚನದಿಂದ.
ಅನುವಾದ: ಶ್ರೀ ದತ್ತಾತ್ರೇಯ ಅವಧೂತರು.
ಸೌಜನ್ಯ: ಚೈತನ್ಯಾಶ್ರಮ, ಹೆಬ್ಬಳ್ಳಿ.)