ಋಣಶೇಷಶ್ಚಾಗ್ನಿಶೇಷಃ ಶತ್ರುಶೇಷಸ್ತಥೈವ ಚ |
ಪುನಃ ಪುನಃ ಪ್ರವರ್ತಂತೇ ತಸ್ಮಾಚ್ಛೇಷಂ ನ ರಕ್ಷಯೇತ್ ||
“ಮಾಡಿರುವ ಸಾಲದ ಒಂದಂಶ, ಉರಿಯುವ ಬೆಂಕಿಯ ಒಂದಂಶ, ಶತ್ರುಶೇಷ – ಇವು ಉಳಿದಿದ್ದಲ್ಲಿ ಮತ್ತೆ ಮತ್ತೆ ನಮ್ಮನ್ನು ಕಾಡುತ್ತಿರುತ್ತವೆ. ಆದ್ದರಿಂದ ಈ ಮೂರು ರೀತಿಯ ಋಣಗಳನ್ನು ಸ್ವಲ್ಪವೂ ಉಳಿಸಬಾರದು.
ತಾವು ಮಾಡಿದ ಋಣಗಳನ್ನು ಮುಂದಿನವರಿಗೆ ಉಳಿಸುವುದು ತಪ್ಪು, ನಿರ್ಗಮನಕ್ಕೆ ಮುಂಚೆ ಸಾಲಗಳನ್ನು ನಿಃಶೇಷಗೊಳಿಸಿರಬೇಕು – ಎಂಬುದು ಧಾರ್ಮಿಕ, ವ್ಯಾವಹಾರಿಕ – ಎರಡೂ ದೃಷ್ಟಿಗಳಿಂದ ಗೌರವಿಸಬೇಕಾದ ತತ್ತ್ವ. ತಾನು ಋಣಿಯಾಗಿ ಸಾಯಬಾರದು – ಎಂಬ ಜೀವನಸೂತ್ರವನ್ನು ಧರ್ಮಪ್ರಜ್ಞೆಯನ್ನುಳ್ಳವರು ಮಾತ್ರವಲ್ಲದೆ ನಾಸ್ತಿಕ ಪ್ರವೃತ್ತಿಯವರನೇಕರೂ ಒಪ್ಪುತ್ತಾರೆ. ತನ್ನ ಸಾಲಗಳನ್ನು ಮಾತ್ರವಲ್ಲದೆ, ಹಿಂದಿನವರು ಮಾಡಿದ ಸಾಲಗಳನ್ನೂ ಕಠಿಣ ಶ್ರಮದಿಂದ ತೀರಿಸಿದ ಶ್ರದ್ಧಾವಂತರ ನಿದರ್ಶನಗಳು ಹಲವಾರಿವೆ.
ಕಾನೂನಿನ ಒತ್ತಡವಾಗಲಿ ದಂಡನೆಯ ಸಾಧ್ಯತೆಯಾಗಲಿ ಇರದಿದ್ದರೂ ತಮ್ಮ ಅಂತರಂಗದ ನಿರ್ದೇಶನಕ್ಕೆ ಬೆಲೆ ಕೊಟ್ಟು ದೇಶಬಂಧು ಚಿತ್ತರಂಜನದಾಸ್ ತಮ್ಮ ತಂದೆ ಮಾಡಿದ್ದ ಸಾಲವನ್ನು ಕಷ್ಟಪಟ್ಟು ದುಡಿದು ಗಳಿಸಿ ಪೂರ್ತಿಯಾಗಿ ತೀರಿಸಿದುದು ಸುವಿದಿತ.
ಇಂದು ಸಾರಿಗೆ ಉದ್ಯಮದಲ್ಲಿ ಖ್ಯಾತಿವಂತವಾಗಿರುವ ವಿಜಯಾನಂದ್ ರೋಡ್‌ಲೈನ್ಸ್ – ಲಾಜಿಸ್ಟಿಕ್ಸ್ ಸಂಸ್ಥೆಯ ಸ್ಥಾಪಕ-ಮಾಲಿಕರಾದ ವಿಜಯ ಸಂಕೇಶ್ವರ್ ತಮ್ಮ ಮನೆತನಕ್ಕೆ ಆಗಿಬಂದಿದ್ದ ಮುದ್ರಣ-ಪ್ರಕಾಶನ ಕ್ಷೇತ್ರದಿಂದ ಪಕ್ಕಕ್ಕೆ ಸರಿದು ಸರಕು ಸಾಗಾಣಿಕೆ ಉದ್ಯಮವನ್ನು ನಡೆಸಲು ೧೯೭೦ರ ದಶಕದಲ್ಲಿ ನಿಶ್ಚಯಿಸಿದುದು ಅವರ ತಂದೆ ಮತ್ತು ಕುಟುಂಬಿಕರಿಗೆಲ್ಲ ತಳಮಳ ತಂದಿತ್ತು. ತಂದೆ ಬಸವಣ್ಣಪ್ಪ ನಡೆಸಿಕೊಂಡು ಬಂದಿದ್ದ ಮುದ್ರಣ-ಪ್ರಕಾಶನ ಸಂಸ್ಥೆ ಬಿ.ಜಿ. ಸಂಕೇಶ್ವರ್ ಅಂಡ್ ಕಂಪೆನಿ ಅಂದೂ ಇಂದಿಗೂ ಆ ಕ್ಷೇತ್ರದಲ್ಲಿ ಹೆಸರಾಂತ ಯಶಸ್ವಿ ಉದ್ಯಮಸಂಸ್ಥೆ. ಆದರೆ ಸಾಗಾಣಿಕೆ ಕ್ಷೇತ್ರದಲ್ಲಿ ಉತ್ತಮ ಭವಿಷ್ಯವನ್ನು ಗುರುತಿಸಿದ ವಿಜಯ ಸಂಕೇಶ್ವರ್ ತಮ್ಮ ನಿರ್ಧಾರ ಬದಲಿಸಲಿಲ್ಲ. ಸಾರಿಗೆ ಉದ್ಯಮ ವಹಿವಾಟಿಗಾಗಿ ಹುಬ್ಬಳ್ಳಿಯಲ್ಲಿ ಕಟ್ಟಡವೊಂದನ್ನು ಬಾಡಿಗೆಗೆ ಹಿಡಿದರು. ಮಗನ ಸಾಹಸ ಹೇಗೆ ನಡೆದೀತೊ ಎಂದು ಶಂಕೆಗೊಂಡ ಬಸವಣ್ಣಪ್ಪನವರು ಹಲವು ದಿನಗಳ ನಂತರ ಹುಬ್ಬಳ್ಳಿಗೆ ಹೋಗಿ ಮಗ ಬಾಡಿಗೆಗೆ ತೆಗೆದುಕೊಂಡಿದ್ದ ಕಟ್ಟಡದ ಮಾಲಿಕನನ್ನು ಕಂಡು ಹೇಳಿದರು: ಯಾವಾಗಲಾದರೂ ನನ್ನ ಮಗ ತಮಗೆ ಬಾಡಿಗೆ ಕೊಡುವುದರಲ್ಲಿ ವಿಳಂಬವಾದರೆ ದಯವಿಟ್ಟು ನನಗೆ ಕೂಡಲೆ ತಿಳಿಸಿರಿ. ನಾನು ಹಣ ಕಳಿಸುತ್ತೇನೆ. ಹೀಗೆಂದು ತಮ್ಮದೇ ವಿಳಾಸ ಬರೆದಿದ್ದ ಪೋಸ್ಟ್ ಕಾರ್ಡುಗಳನ್ನು ಆತನ ಕೈಯಲ್ಲಿರಿಸಿದರು!
ಸಾಂಪ್ರದಾಯಿಕರ ಋಣಪ್ರಜ್ಞೆ ಈ ಮಟ್ಟದ್ದು.