ಅಮೆರಿಕದ ಗೌಪ್ಯಸ್ಥಳ `ಏರಿಯ ೫೧’ರಲ್ಲಿ ಇಂದಿಗೂ ೧೮ ಅನ್ಯಲೋಕಜೀವಿಗಳು ಅಮೆರಿಕದ ವಿಜ್ಞಾನಿಗಳೊಡನೆ ಬದುಕಿದ್ದಾರಂತೆ! ಅವರಲ್ಲಿ ಕೆಲವರು ೨೫೦ ವರುಷಗಳಿಗೂ ಹೆಚ್ಚಾದ ವಯಸ್ಕರಿದ್ದಾರಂತೆ!
ಆಧುನಿಕ ಮಾನವ ತನ್ನ ವಿಕಾಸದ ಹಾದಿಯಲ್ಲಿ ಅನೇಕ ಗುಣಲಕ್ಷಣಗಳನ್ನು ಪಡೆದುಕೊಂಡ. ಅವುಗಳಲ್ಲಿ ಬಹುಮುಖ್ಯವಾದದ್ದು: ಕುತೂಹಲ. ಕುತೂಹಲದಿಂದಲೇ ಅವನು ತನ್ನನ್ನು, ತನ್ನ ಪರಿಸರವನ್ನು, ತನ್ನ ಜೀವನರೀತಿಯನ್ನು ಅರ್ಥೈಸಿಕೊಂಡ. ಈ ಕುತೂಹಲದಿಂದಾಗಿ ಅವನು ಎಂದೂ ತನಗೆ ಅರಿಯದ ಸಂಗತಿಗಳ ಬಗ್ಗೆ ನಾನಾ ತರಹದ ಪ್ರಶ್ನೆಗಳನ್ನು ಎತ್ತುತ್ತ, ಕೆಲವಕ್ಕೆ ಮುಕ್ತವಾದ ಉತ್ತರಗಳನ್ನು ಪಡೆದುಕೊಂಡ. ಆದರೆ, ನೂರಾರು ವರುಷಗಳಿಂದ ಅವನಿಗೆ ಕೆಲವು ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿದಿವೆ. ಅದರಲ್ಲಿ ಪ್ರಮುಖವಾದದ್ದು: ಅನ್ಯಲೋಕಜೀವಿಗಳು ಇದ್ದಾರೆಯೆ? ಮಾನವನು ನಿಸರ್ಗದ ಕೂಸು. ಹಾಗಾಗಿ ಅವನು ತನ್ನ ಪರಿಸರವನ್ನು ಅವಲೋಕಿಸುತ್ತಾ, ಕತ್ತಲೆಯಲ್ಲಿ ಗಗನದೆಡೆ ತನ್ನ ಕಣ್ಣುಗಳಲ್ಲೂ ಮನದಲ್ಲೂ ಅಗಣಿತ ತಾರಾಲೋಕದ ವೈಭವವನ್ನು ತುಂಬಿಕೊಂಡಾಗ, ಅವನಲ್ಲಿ ಮೂಡಿಬರುವ ಪ್ರಶ್ನೆಗಳು ಅನೇಕ: ಆ ತಾರಾಮಂಡಲದ ರಚನೆ ಹೇಗಿದೆ? ಅದರಿಂದಾಚೆ ಏನಿದೆ? ನನ್ನ ತರಹ ಬುದ್ಧಿಜೀವಿಗಳು ಅಲ್ಲಿಯೂ ವಿಕಾಸವಾಗಿ ವಾಸವಾಗಿದ್ದಾರೆಯೆ? ವಾಸವಾಗಿದ್ದಲ್ಲಿ, ಅವರು ನಮ್ಮ ಭೂಮಿಗೆ ಬಂದಿದ್ದಾರೆಯೆ? ಇಲ್ಲದಿದ್ದಲ್ಲಿ, ಬರುವರಿದ್ದಾರೆಯೇ? ಅವರು ದೈಹಿಕವಾಗಿ ಎಂತಹ ರೂಪವನ್ನು ಪಡೆದಿರಬಹುದು? ಅಥವಾ ಅವರು ರೋಬೋಗಳ ಹಾಗೆ ಕೃತಕಜೀವಿಗಳಾಗಿ ಇರುತ್ತಾರೆಯೆ? ಅವರ ನಡೆ, ನುಡಿ, ಸಂಸ್ಕೃತಿ ಹೇಗಿರಬಹುದು? ಒಂದು ವೇಳೆ, ನಮ್ಮ ಮಾನವಕುಲದೊಂದಿಗೆ ಅಂತಹ ಜೀವಿಗಳ ಸಂಪರ್ಕ ಆಕಸ್ಮಿಕವಾಗಿಯೋ ಪೂರ್ವನಿಶ್ಚಿತವಾಗಿಯೋ ಆದಲ್ಲಿ, ನಮ್ಮ ಕುಲದ (ಅಥವಾ ನಮ್ಮ ಭೂಮಿಯ) ಭವಿಷ್ಯವೇನು? ನಮ್ಮ ಪ್ರಸ್ತುತ ಅಸ್ತಿತ್ವ ನಿರ್ನಾಮವಾಗುತ್ತದೆಯೆ, ಅಥವಾ ನಾವೆಲ್ಲರೂ ಅವರೊಂದಿಗೆ ಸಮ್ಮಿಲನಗೊಂಡು `ವಿಶ್ವಪ್ರಜೆ’ಗಳಾಗಿ ಮಾರ್ಪಾಡಾಗುತ್ತೇವೆಯೆ?
ಕೆರಳಿದ ಕುತೂಹಲ
ವಿಚಿತ್ರವೆಂದರೆ, ನಮ್ಮಲ್ಲಿ ಕಳೆದ ಕೆಲವು ಶತಮಾನಗಳಿಂದ ವಿಜ್ಞಾನ ಮತ್ತು ತಾಂತ್ರಿಕತೆ ನಾನಾ ಆಯಾಮಗಳಲ್ಲಿ ಬೆಳೆದುಬಂದು, ಖಗೋಳಶಾಸ್ತ್ರ, ರಾಕೆಟ್ಗಳ ವಿನ್ಯಾಸದಿಂದಾಗಿ, ನಾವು ಚಂದ್ರಗ್ರಹದ ಮೇಲೆ ಕಾಲಿಟ್ಟಿದ್ದೇವೆ; ಸೂರ್ಯಮಂಡಲದ ಇತರ ಗ್ರಹಗಳೆಡೆಗೆ ಅನ್ವೇಷಣನೌಕೆಗಳನ್ನು ಕಳುಹಿಸಿದ್ದೇವೆ; ನಮ್ಮ ಮತ್ತಿತರ ನೌಕೆಗಳು ಮತ್ತು ಅಂತರಿಕ್ಷ ದೂರದರ್ಶಕಗಳು ಸೂರ್ಯಮಂಡಲದಿಂದಾಚೆಗೂ ಪಯಣಿಸುತ್ತಿವೆ. ಅಂತಹದರಲ್ಲೂ ಮೇಲೆ ಎತ್ತಿದ ಒಂದು ಪ್ರಶ್ನೆಗೂ ಸಮಂಜಸವಾಗಿ, ವೈಜ್ಞಾನಿಕವಾಗಿ, ಇದುವರೆಗೂ ಉತ್ತರವೇ ಸಿಕ್ಕಿಲ್ಲ. ಆದರೆ ನಮ್ಮಲ್ಲಿ ಕಲ್ಪನಾಶಕ್ತಿಯಂತೂ ಕಡಮೆಯೇನಿಲ್ಲ. ಹಾಗಾಗಿ, ನಮ್ಮಲ್ಲಿ ಅನೇಕರು ಪರಲೋಕಜೀವಿಗಳು ಖಂಡಿತವಾಗಿಯೂ ಇದ್ದಾರೆ ಎಂದು ನಂಬಿದ್ದಾರೆ. ಅವುಗಳ ರೂಪಲಕ್ಷಣಗಳನ್ನೂ, ಅವುಗಳ ಬುದ್ಧಿಶಕ್ತಿಯನ್ನೂ, ಅವರಿಗೆ ಅವಶ್ಯವುಳ್ಳ ಅಂತರಿಕ್ಷದಲ್ಲಿ ಪಯಣಿಸುವ ಅತ್ಯಾಧುನಿಕ ಸಾರಿಗೆ ವ್ಯವಸ್ಥೆಗಳನ್ನೂ ಅನೇಕ ವಿಧಗಳಲ್ಲಿ ಊಹಿಸಿಕೊಂಡಿದ್ದಾರೆ. ಈ ಊಹೆಗಳ ಆಧಾರದ ಮೇಲೆ, ಈಗಾಗಲೇ ಅನ್ಯಜೀವಿಗಳ ಬಗ್ಗೆ ತಯಾರಾದ ಅನೇಕ ಹಾಲಿವುಡ್ ಸಿನೆಮಾಗಳನ್ನೂ ರೇಡಿಯೋ ರೂಪಕಗಳನ್ನೂ ನೋಡಿ ನಾವು ನಮ್ಮ ಕುತೂಹಲವನ್ನು ಮತ್ತಷ್ಟು ಕೆರಳಿಸಿಕೊಂಡಿದ್ದೇವೆ. ಅನೇಕರು ಅನ್ಯಲೋಕಜೀವಿಗಳು ನಮ್ಮ ಭೂಮಿಗೆ ಆಗಲೇ ಬಂದಿದ್ದಾರೆ, ಬರುತ್ತಲೂ ಇದ್ದಾರೆ, ಆದರೆ ಅವರುಗಳು ಯಾವುದೋ ಕಾರಣಗಳಿಂದಾಗಿ ನಮ್ಮನ್ನು ಸಂಪರ್ಕಿಸುತ್ತಿಲ್ಲ ಎಂದೂ ವಾದಿಸುತ್ತಿದ್ದಾರೆ! ಇಂತಹ ಇಂಗಿತಗಳಿಗೆಲ್ಲ ಪುಟಕೊಟ್ಟಿರುವ ಒಂದು ಮೂಲಕಾರಣವೆಂದರೆ `ಯು.ಎಫ್.ಒ.’ಗಳು (ಅನ್-ಐಡಂಟಿಫೈಡ್ ಫ್ಲೈಯಿಂಗ್ ಆಬ್ಜೆಕ್ಟ್ಸ್). ಅನೇಕ ದಶಕಗಳಿಂದ, ಅದರಲ್ಲೂ ಇತ್ತೀಚೆಗೆ, ಈ ಯು.ಎಫ್.ಒ.ಗಳು ನಾನಾ ದೇಶಗಳಲ್ಲಿ ಅನೇಕ ರೂಪಗಳಲ್ಲಿ, ಆಕಾಶದಲ್ಲಿ ಕಂಡುಬರುತ್ತಿವೆ ಎಂಬ ಮಾಹಿತಿ ಸ್ಫೋಟಗಳನ್ನು ಸುದ್ದಿಮಾಧ್ಯಮಗಳಲ್ಲಿ ನಾವು ನೋಡುತ್ತಲೇ ಇದ್ದೇವೆ. ಯು.ಎಫ್.ಒ.ಗಳು ನಿಜವಾದದ್ದು, ಕಲ್ಪನೆಯಲ್ಲ ಎಂದು ಸಾಬೀತುಪಡಿಸಲು ಅವುಗಳ `ವೀಕ್ಷಕರು’ ಛಾಯಾಚಿತ್ರಗಳನ್ನೂ ವಿಡಿಯೋಗಳನ್ನೂ ಪ್ರಕಟಿಸುತ್ತಿದ್ದಾರೆ (ಚಿತ್ರಗಳು ೧, ೨: ಕೆಲವು ಯು.ಎಫ್.ಒ.ಗಳ ರೂಪ ಮತ್ತು ಚಲನ ರೀತಿಗಳು). ಇಂತಹ ವೀಕ್ಷಕರಲ್ಲಿ ಅನೇಕರು ವಿಮಾನಚಾಲಕರು, ರೈತರು, ಸಾಧಾರಣ ಪ್ರಜೆಗಳು, ವಿಜ್ಞಾನಿಗಳು; ಕೆಲವು ಗಗನಯಾತ್ರಿಗಳೂ ಕೂಡ! ಅವರು ಹೇಳುವ ಹಾಗೆ – ಯು.ಎಫ್.ಒ.ಗಳು ಗಗನದಲ್ಲಿ ಬುಗುರಿಯ ಹಾಗೋ ಅಥವಾ ಪಕ್ಷಿರೂಪಗಳಲ್ಲೊ ಅಥವಾ ಇನ್ನಾವುದೋ ಅನಿರ್ದಿಷ್ಟ ರೂಪಗಳಲ್ಲೋ ಅತಿ ವೇಗದಲ್ಲಿ ಒಂದು ದಿಕ್ಕಿನಿಂದ ಇನ್ನೊಂದು ದಿಕ್ಕಿಗೆ ಹಾರಿಹೋಗುತ್ತವೆ; ಕೆಲವೊಮ್ಮೆ ಹಾರಾಡದೆಯೇ ಸ್ಥಗಿತವಾಗಿಯೂ ಸ್ವಲ್ಪ ವೇಳೆ ನಿಲ್ಲುತ್ತವೆ. ಅವುಗಳಿಂದ ಪ್ರಜ್ವಲವಾಗಿ ಬೆಳಕಿನ ಕಿರಣಗಳು ಹೊಮ್ಮುತ್ತಿರುತ್ತವೆ; ಅವುಗಳು ಹಾಯ್ದುಹೋಗುವ ಮಾರ್ಗದಲ್ಲಿ ಒಮ್ಮೊಮ್ಮೆ ರೇಡಿಯೋ ಸಂಪರ್ಕಗಳೂ ಕಡಿತವಾಗುತ್ತವೆ; ಗಿಡ-ಮರಗಳು ವಾಲುತ್ತವೆ; ಕೆಲವು ಪ್ರಾಣಿಗಳು ಚಡಪಡಿಸುತ್ತವೆ… ಹೀಗೆ.
ಈ ವೀಕ್ಷಣೆಗಳನ್ನು ನಿಜವೆಂದು ಪ್ರತಿಪಾದಿಸುವವರು ಇಂತಹ ಗಗನನೌಕೆಗಳನ್ನು ಅವರುಗಳು ಕ್ಷಣಿಕವಾಗಿ ಕಂಡರೂ, ಅವುಗಳ ತಾಂತ್ರಿಕ ವಿಶಿಷ್ಟತೆಗಳ ಬಗ್ಗೆಯೂ ಅನೇಕ ವಿವರಣೆಗಳನ್ನು ನೀಡುತ್ತಿದ್ದಾರೆ. ಉದಾಹರಣೆಗೆ – ಅವುಗಳ ಕಾರ್ಯವೈಖರಿಗಳ ಕುರಿತು: ಬ್ರಹ್ಮಾಂಡದ ಯಾವುದೋ ಮೂಲೆಯಿಂದ ಅವು ನಮ್ಮ ಭೂಮಿಯವರೆಗೂ ಪಯಣಿಸಿ ಬರಬೇಕಾದರೆ ಯು.ಎಫ್.ಒ.ಗಳ ತಾಂತ್ರಿಕ ವಿನ್ಯಾಸ ಬಹು ಉತ್ಕೃಷ್ಟವಾದುದು, ಅವುಗಳ ಚಾಲನೆಗೆ ನಮಗೆ ಇನ್ನೂ ಅರಿಯದ ಕೆಲವು ಶಕ್ತಿಮೂಲಗಳನ್ನು ಉಪಯೋಗಿಸುತ್ತಿದ್ದಾರೆ, ಅದರಿಂದಾಗಿ ನೂರಾರು ವರುಷಗಳ ಕಾಲ ನಿರಂತರವಾಗಿ ಅಂತರಿಕ್ಷದಲ್ಲಿ ಪಯಣಿಸುವ ಸಾಧ್ಯತೆ ಅವರಿಗಿದೆ, ಅನೇಕ ಕೋಟ್ಯಂತರ ಕಿಲೋಮೀಟರುಗಳ ದೂರದಿಂದಲೂ ತಮ್ಮ ತೌರುಮನೆಯ ಸಂಪರ್ಕವಿಟ್ಟುಕೊಳ್ಳಲು ಅವರಲ್ಲಿ ಬಹು ವಿಶಿಷ್ಟವಾದ ದೂರಸಂಪರ್ಕದ ತಾಂತ್ರಿಕತೆಗಳಿವೆ ಹಾಗೂ ಅವರ ವ್ಯಕ್ತಿವಿಕಸನ ನಮ್ಮ ಮಾನವಕುಲಕ್ಕಿಂತಲೂ ಅನೇಕ ಸಾವಿರ ವರುಷಗಳ ಹಿಂದೆಯೇ ಆಗಿರಬೇಕು – ಅದರಿಂದಲೇ ಅವರ ವೈಜ್ಞಾನಿಕ ಹಾಗೂ ತಾಂತ್ರಿಕ ಅರಿವು ನಮಗಿಂತಲೂ ಅತ್ಯಧಿಕವಾದುದು – ಇದರಿಂದಾಗಿಯೇ ಅವರಿಗೆ ನಮ್ಮ ಬ್ರಹ್ಮಾಂಡದಲ್ಲಿ ಇತರ ನಕ್ಷತ್ರಮಂಡಲಗಳಲ್ಲಿ ಏನಿದೆ ಎಂಬ ಕುತೂಹಲವೂ, ಸಮೀಕ್ಷೆಮಾಡುವ ಶಕ್ತಿಯೂ ಛಲವೂ ಇದೆ, ಜೈವಿಕವಾಗಿ ನಮಗೆ ಊಹಿಸಲಾಗದಷ್ಟು ಕಾಲಾವಧಿಗಳಲ್ಲಿ ಪಯಣಿಸಬೇಕಾದರೆ ಅವರ ದೈಹಿಕ ಹುಟ್ಟು-ಬೆಳವಣಿಗೆ-ಸಾವು-ಇಂತಹ ನೈಸರ್ಗಿಕ ಪ್ರಕ್ರಿಯೆಗಳ ಮೇಲೆ ಯಾವುದೋ ವಿಧಾನದಲ್ಲ್ಲಿ ಅವರು ಹತೋಟಿಯನ್ನು ಸಾಧಿಸಿರಬೇಕು, ಇಲ್ಲವೇ ಯು.ಎಫ್.ಒ.ಗಳಲ್ಲಿ ಪಯಣಿಸುತ್ತಿರುವವರು ಅತ್ಯಾಧುನಿಕ ರೋಬೋಗಳಿರಬೇಕು!
ಇದಲ್ಲದೆ ಅನೇಕರು ಕೆಲವು ದೇಶಗಳಲ್ಲಿ ವಿಚಿತ್ರವಾಗಿ ಉದ್ದನೆಯ ಗೆರೆಗಳ ಹಾಗೆ ಕಂಡುಬಂದಿರುವ ಕೆಲವು ಭೂದೃಶ್ಯಗಳನ್ನೂ, ಕೊಯ್ಲಿಗೆ ಸಜ್ಜಾಗಿ ನಿಂತಿರುವ ಧಾನ್ಯದ ನೆಲಗಳಲ್ಲಿ ಕಟಾವು ಮಾಡಿರುವಂತಹ ಜ್ಯಾಮಿತಿಯಾಕಾರದ ವೃತ್ತಗಳನ್ನೂ ನೋಡಿ, ಇವು ಭೂಮಿಯ ಚರಿತ್ರೆಯಲ್ಲಿ ಎಂದೋ ಬಂದಿಳಿದು ಹೋದ ಅನ್ಯಲೋಕಜೀವಿಗಳು ಮಾಡಿದ ರಚನಕಾರ್ಯಗಳೆಂದು ಹೇಳುತ್ತಿದ್ದಾರೆ.
ಅನ್ಯಗ್ರಹಜೀವಿಗಳೇನಾದರೂ ಭೂಮಿಗೆ ಬಂದರೆ ಅದರಿಂದ ಮಾನವರಿಗೆ ಏನೂ ಲಾಭವಾಗದು; ಕೊಲಂಬಸ್ ಅಮೆರಿಕವನ್ನು ಕಂಡುಹಿಡಿದದ್ದರಿಂದ ಮೂಲ ಅಮೆರಿಕನ್ನರಿಗೆ ಏನು ಲಾಭವಾಯಿತು? – ಸ್ಟೀಫನ್ ಹಾಕಿಂಗ್
ಊಹಾಪೋಹಗಳು
ಇಂತಹ ಜಿಜ್ಞಾಸೆಗಳಿಗೆ ಇನ್ನಷ್ಟು ಸೊಪ್ಪುಹಾಕುವವರೂ ಇದ್ದಾರೆ. ಇತ್ತೀಚೆಗೆ ಮಂಗಳಗ್ರಹದ ಮೇಲೆ ಅಮೆರಿಕ ಇಳಿಸಿರುವ ರೋಬೊ-ನೌಕೆ `ಮಾರ್ಸ್ ರೋವರ್’ ಕಳಿಸುತ್ತಿರುವ ಛಾಯಾಚಿತ್ರಗಳನ್ನು ವಿಶ್ಲೇಷಿಸಿ, ಆ ಗ್ರಹದ ನೆಲದ ಮೇಲೆ ಮಾನವರೂಪದ ಶಿಲಾ ಕೆತ್ತನೆಗಳಿವೆ, ಜ್ಯಾಮಿತೀಯ ರಚನೆಗಳಿವೆ, ಕೆಲವು ಎಂಜಿನಿಯರಿಂಗ್ ಸಾಧನಗಳೂ ಸಲಕರಣೆಗಳೂ ಇವೆ – ಎಂದು ಸಂಶಯಪಟ್ಟಿದ್ದಾರೆ.
ಈ ಊಹೆಗಳು ಚಂದ್ರನಿಂದ ಪಡೆದ ಛಾಯಾಚಿತ್ರಗಳಿಗೂ ಅನ್ವಯಿಸುತ್ತವೆ. ಮತ್ತೆ ಕೆಲವರ ವಾದದ ಪ್ರಕಾರ, ಅನ್ಯಲೋಕಜೀವಿಗಳು ಆಕಸ್ಮಿಕವಾಗಿಯೋ ಉದ್ದೇಶಪೂರ್ವಕವಾಗಿಯೋ ಆಗಲೇ ನಮ್ಮ ಧರೆಯಲ್ಲಿ ಇಳಿದಿದ್ದಾರೆ. ಅವರಲ್ಲಿ ಕೆಲವರು ಪ್ರಾಣಬಿಟ್ಟವರೂ ಇದ್ದಾರೆ, ಬದುಕಿಯೂ ಇದ್ದಾರೆ. ಆದರೆ ಕೆಲವು ರಾಷ್ಟ್ರಗಳು ಇವರುಗಳನ್ನು ಒಂದೆಡೆ ಗೋಪ್ಯವಾಗಿ ಬಚ್ಚಿಟ್ಟು ಈ ಸುದ್ದಿಯನ್ನು ಜನತೆಗೆ ಮುಟ್ಟಿಸುತ್ತಿಲ್ಲ. ಕೆಲವು ಸುದ್ದಿಮಾಧ್ಯಮಗಳ ಪ್ರಕಾರ, ಅಮೆರಿಕದಲ್ಲಿ ‘ನೆವಾಡ – ಏರಿಯಾ ೫೧’ – ಇಂತಹ ನಿರ್ಜನ ಸ್ಥಳಗಳಲ್ಲಿ ಅನೇಕ ದಶಕಗಳಿಂದ ಅಮೆರಿಕ ಸರ್ಕಾರ ಈ ಜೀವಿಗಳನ್ನು ಗೌಪ್ಯವಾಗಿ ಸಾಕುತ್ತಿದ್ದು, ಅವರೊಡನೆ ನಾನಾ ಬಗೆಯ ಒಡನಾಟಗಳನ್ನು ಹೊಂದಿದೆಯಂತೆ!
ಈ ಗೋಪ್ಯಕ್ಕೆ ಕಾರಣ? ಅನ್ಯಲೋಕಜೀವಿಗಳು ಅಸ್ತಿತ್ವದಲ್ಲಿದ್ದಾರೆ ಹಾಗೂ ನಮ್ಮ ಭೂಮಿಗೂ ತಲಪಿದ್ದಾರೆ ಎಂದು ತಿಳಿದರೆ ಅದು ಸಾರ್ವಜನಿಕರಲ್ಲಿ ಭಯ ಮತ್ತಿತರ ವಿಚಿತ್ರ ಪ್ರತಿಕ್ರಿಯೆಗಳನ್ನು ಮೂಡಿಸಬಹುದು; ಇದುವರೆಗೂ ಈ ಭೂಮಿಯ ನಾಯಕತ್ವ ನಮ್ಮ ಕೈಗಳಲ್ಲಿದೆ ಎಂಬ ಧೋರಣೆಯಲ್ಲಿ ಬದುಕುತ್ತಿರುವ ಮಾನವ ಕುಲಕ್ಕೆ ಇಂತಹ ಸುದ್ದಿ ಆಘಾತವಾಗಿ ತೋರಬಹುದು ಎಂದು.
ಸೋಜಿಗವೆಂದರೆ ಇದುವರೆಗೂ ಅನ್ಯಲೋಕಜೀವಿಗಳ ಬಗ್ಗೆ ಸಾರ್ವಜನಿಕರಿಗೆ ಯಾವ ರೀತಿಯ ಖಚಿತ ಮಾಹಿತಿಯೂ ದೊರೆತಿಲ್ಲ. ಅವುಗಳ ಸುತ್ತಲೂ ಹೆಣೆದುಕೊಂಡಿರುವ ಅನೇಕ ಮೂಲಭೂತ ಪ್ರಶ್ನೆಗಳು ಇಂದಿಗೂ ಉಳಿದಿವೆ:
-
ಈ ಜಗತ್ತಿನಲ್ಲಿ ನಮ್ಮ ಮಾನವಕುಲ ಮಾತ್ರ ಒಂದು ವಿಶಿಷ್ಟ ಸೃಷ್ಟಿಯೇ ಅಥವಾ ಇತರೆ ತಾರಾಮಂಡಲಗಳಲ್ಲಿ ನಮ್ಮಂತಹ ಅಥವಾ ನಮಗಿಂತಲೂ ಉತ್ಕೃಷ್ಟವಾದ ಬುದ್ಧಿಜೀವಿಗಳು ಸೃಷ್ಟಿಗೊಂಡಿವೆಯೇ? ಹಾಗಿದ್ದಲ್ಲಿ ಅವುಗಳ ರೂಪಗಳೇನು; ಮತ್ತಿತರ ಗುಣಲಕ್ಷಣಗಳೇನು?
-
ಅವರ ಸೃಷ್ಟಿ ಮತ್ತು ವಿಕಾಸ ನಾವು ನಡೆದುಬಂದ ಹಾದಿಯಲ್ಲೇ ಆಗಿದೆಯೆ? ನಮ್ಮ ಪ್ರಸ್ತುತ ವೈಜ್ಞಾನಿಕ ಸಿದ್ಧಾಂತಗಳ ಪ್ರಕಾರ, ಭೂಮಿಯ ಮೇಲಿನ ಜೀವರಾಶಿಗಳು ಮೂಲ ಜೀವಕಣಗಳು ಹುಟ್ಟಿದ್ದು ಕೆಲವು ಆಕಸ್ಮಿಕ ರಾಸಾಯನಿಕ ಪ್ರಕ್ರಿಯೆಗಳಿಂದ. ಈ ಪ್ರಕ್ರಿಯೆಗಳಿಗೆ ಮೂಲವಸ್ತುಗಳಾಗಿ ಅವಶ್ಯವಿದ್ದ ಧಾತುಗಳಾದ ಅನಿಲ, ಸಾರಜನಕ, ಗಂಧಕ ಭೂಮಿಯಲ್ಲಿದ್ದವು. ಪ್ರಕ್ರಿಯೆಗಳನ್ನು ಆರಂಭಿಸುವುದಕ್ಕೆ ಮತ್ತು ಅಸ್ತಿತ್ವದಲ್ಲಿ ಇಟ್ಟಿರುವುದಕ್ಕೆ ಅವಶ್ಯವುಳ್ಳ ಪರಿಸರವೂ (ನೀರು, ಸೂರ್ಯನ ಶಾಖ, …ಹೀಗೆ) ಇತ್ತು.
-
ಈ ಜೀವಕಣಗಳು ಅನಂತರ ಮನುಷ್ಯರೂಪವನ್ನಲ್ಲದೆ ಇನ್ನೂ ಅನೇಕ ಬಗೆಯ ರೂಪಗಳನ್ನು ಹೊಂದಿದವು; ಆ ರೂಪಗಳಲ್ಲಿ ಬದಲಾವಣೆಗಳನ್ನೂ ಕಂಡುಕೊಂಡವು; ಕೆಲವು ನಿರ್ದಿಷ್ಟ ಕಾಲದಲ್ಲಿ ನಶಿಸಿದವು, ಕೆಲವು ವಿಕಸನಹಾದಿಯಲ್ಲಿ ಗೆದ್ದುಕೊಂಡು ಬದುಕಿಕೊಂಡವು, ಪರಿಸರಕ್ಕೆ ಅನುಗುಣವಾಗಿ ಮಾರ್ಪಾಡಾಗುತ್ತಾ ಭೂಮಿಯನ್ನು ಆವರಿಸಿದವು. ಇಂತಹ ಅಸ್ತಿತ್ವದ ಜಂಜಾಟದಲ್ಲಿ, ಇತ್ತೀಚೆಗಷ್ಟೇ – ಕೇವಲ ಹತ್ತು ಸಾವಿರ ವರ್ಷಗಳಿಂದೀಚೆಗೆ – ಆಧುನಿಕಮಾನವ ತನ್ನ ಅಧಿಕ ಬುದ್ಧಿಶಕ್ತಿಯಿಂದಾಗಿ, ಭೂಮಿಯ ನಾಯಕತ್ವವನ್ನು ಪಡೆದುಕೊಂಡ. ಅವನ ಗಮನಾರ್ಹ ವೈಜ್ಞಾನಿಕ ತಾಂತ್ರಿಕ ಸಾಧನೆಗಳಾಗಿದ್ದು ಕಳೆದ ಮೂರು ನಾಲ್ಕು ಶತಮಾನಗಳಲ್ಲಿ ಅಷ್ಟೆ.
-
ಈ ಹಿನ್ನೆಲೆಯಲ್ಲಿ, ಅನ್ಯಲೋಕಜೀವಿಗಳ ವಿಕಸನಮಾರ್ಗ ಹೇಗಿದ್ದಿರಬಹುದು? ಎಷ್ಟು ಬಿಲಿಯನ್ ವರ್ಷಗಳ ಕಾಲಾವಧಿಯಲ್ಲಿ ಆಗಿರಬಹುದು? ಅವರ ಲೋಕದಲ್ಲೂ ಜೈವಿಕ ಸೃಷ್ಟಿಯ ಮೂಲ ಧಾತುಗಳು ಮತ್ತು ಪ್ರಕ್ರಿಯೆಗಳು ನಮ್ಮ ಭೂಮಿಯನ್ನೇ ಅನುಕರಿಸಿದವೆ? ಆ ಜೀವಿಗಳ ಬದುಕಿನ ಮಾರ್ಗಗಳೇನು? ಅವರ ಸರಾಸರಿ ಆಯುಷ್ಯದ ಅವಧಿಯೇನು?
-
ಅವರು ನಿಜವಾಗಿಯೂ ನಮ್ಮ ಭೂಮಿಯನ್ನು ಕಂಡು ನಮ್ಮನ್ನು ಪರಿಶೀಲನೆ ಮಾಡಿದ್ದಲ್ಲಿ, ಅವರ ತಾಂತ್ರಿಕ ಪ್ರಗತಿ ಮೆಚ್ಚತಕ್ಕದ್ದೇ. ಆದರೂ ಅವರು ನಮ್ಮನ್ನು ಯಾಕೆ ಇದುವರೆಗೂ ಸಂಪರ್ಕಿಸಲು ಯತ್ನಿಸಿಲ್ಲ? ನಾವು ಈ ಜಗತ್ತಿನಲ್ಲಿ ಈ ಭೂಮಿಯ ನಮ್ಮ ಅನೇಕ ಸಹಜೀವಿಗಳಾದ ಪ್ರಾಣಿ ಮತ್ತು ಸಸ್ಯ ಸಂಕುಲಗಳನ್ನು ಈಗ ಕಡೆಗಣಿಸುತ್ತಿರುವ ಹಾಗೆ, ಅವರೂ ನಮ್ಮ ಮೇಲೆ ನಿರಾಸಕ್ತಿ ಹೊಂದಿದ್ದಾರೇನು?
-
ಭವಿಷ್ಯದಲ್ಲಿ ನಮ್ಮ ಮನುಷ್ಯಕುಲವು ಈ ಅನ್ಯಲೋಕಜೀವಿ ಗಳೊಂದಿಗೆ ಜೈವಿಕವಾಗಿಯೋ ಸಾಂಸ್ಕೃತಿಕವಾಗಿಯೋ ಸಂಬಂಧ ಕಲ್ಪಿಸಿಕೊಂಡದ್ದೇ ಆದರೆ, ಅವರು ನಮ್ಮನ್ನು ಮಿತ್ರರಾಗಿ ಕಾಣುತ್ತಾರೋ ಅಥವಾ ಶತ್ರುಗಳಾಗಿ ಕಾಣುತ್ತಾರೋ? ಅವರ ಮಿಲನದಿಂದ ಮುಂದೆ ಜನಿಸುವ ಕುಲವು ಎಂತಹ ಗುಣಲಕ್ಷಣಗಳನ್ನು ಹೊಂದಿರುತ್ತದೆ?
ವೈಜ್ಞಾನಿಕ ಸಮಾಲೋಚನೆ
ಮೇಲ್ಕಂಡ ಕ್ಲಿಷ್ಟ ಪ್ರಶ್ನೆಗಳಿಗೆ ಖಚಿತ ಉತ್ತರ ಪಡೆಯಬೇಕು ಎನ್ನುವ ನಿಟ್ಟಿನಲ್ಲಿ ೧೯೬೧ನೇ ಇಸವಿ ನವೆಂಬರ್ ತಿಂಗಳಿನಲ್ಲಿ ಒಂದು ವೈಜ್ಞಾನಿಕ ಸಮಾಲೋಚನೆ ನಡೆಯಿತು. ಅಮೆರಿಕದಲ್ಲಿ ಫ್ರಾಂಕ್ ಡ್ರೇಕ್ ಎಂಬ ಯುವ ಖಗೋಳವಿಜ್ಞಾನಿ ಬಹುಸಮಯದಿಂದ ಒಂದು ಯೋಚನೆಯಲ್ಲಿ ಮುಳುಗಿದ್ದರು. ಅದು – ಅಕಸ್ಮಾತ್ ಅನ್ಯಲೋಕಜೀವಿಗಳು ಇದ್ದು, ನಮ್ಮ ರೀತಿಯಲ್ಲೇ ಬುದ್ಧಿಶಕ್ತಿ ಹೊಂದಿದ್ದಲ್ಲಿ ಬಹುಶಃ ಅವರಲ್ಲಿಯೂ ರೇಡಿಯೋ ಸಂಪರ್ಕ ತಂತ್ರಜ್ಞಾನ ಇರಬೇಕು. ಹಾಗಾಗಿ ಅವರು ನಮ್ಮ ತರಹವೇ ರೇಡಿಯೋ ತರಂಗಗಳನ್ನು ಅವರಿರುವ ಆಕಾಶಗಂಗೆಯಲ್ಲಿ ಬಿತ್ತರಿಸುತ್ತಿರಬೇಕು ಮತ್ತು ಆ ತರಂಗಗಳು ನಮ್ಮ ಭೂಮಿಯನ್ನೂ ತಲಪಿರಬೇಕು ಅಥವಾ ತಲಪಬಹುದು. ಈ ಹಿನ್ನೆಲೆಯಲ್ಲಿ ನಾವು ಭೂಮಿಯ ಮೇಲೆ ಅಂತಹ ರೇಡಿಯೋ ಪ್ರಸಾರಗಳನ್ನು ಪತ್ತೆಹಚ್ಚಿದಲ್ಲಿ, ಅಂತಹ ಜೀವಿಗಳು ಅಸ್ತಿತ್ವದಲ್ಲಿದ್ದಾರೆ ಎಂಬ ನಿಕಟ ಮಾಹಿತಿ ಸಿಕ್ಕಿದಂತಾಗುತ್ತದೆ. ತಮ್ಮ ಈ ಅನಿಸಿಕೆಯನ್ನು ತಜ್ಞರೊಡನೆ ಹಂಚಿಕೊಳ್ಳಲು ಫ್ರಾಂಕ್ ಡ್ರೇಕ್ ಒಂದು ಸಭೆ ಕರೆದು, ಅವರೆಲ್ಲರೂ ಬರುವುದಕ್ಕೆ ಮುಂಚೆ ಒಂದು ಸಮೀಕರಣವನ್ನು ಕಪ್ಪುಹಲಗೆಯ ಮೇಲೆ ಬರೆದಿಟ್ಟರು (ಈ ಸಮೀಕರಣ ಈಗ ಡ್ರೇಕ್ ಸಮೀಕರಣವೆಂದು ಪ್ರಖ್ಯಾತವಾಗಿದೆ). ಅದರ ಪ್ರಕಾರ, ನಮ್ಮ ಭೂಮಿಯ ಹೊರತಾಗಿ, ನಮ್ಮ ಆಕಾಶಗಂಗೆಯಲ್ಲಿ, ನಮ್ಮ ತರಹವೇ ನಾಗರಿಕತೆ ಪಡೆದಿರುವಂತಹ ಬುದ್ಧಿಜೀವಿಗಳ ಸಂಖ್ಯೆ, ಕೆಳಗೆ ಸೂಚಿಸಿದ ಇತರ ಸಂಖ್ಯೆಗಳ ಗುಣಾಕಾರದಿಂದ ಸಿಗುವ ಗುಣಲಬ್ಧ ಎಂದು:
– ನಮ್ಮ ಸೂರ್ಯನಂತಿರುವ ನಕ್ಷತ್ರಗಳ ಉದ್ಭವಗಳ ಗತಿ ವೇಗ ಘಿ ಅಂತಹ ನಕ್ಷತ್ರಗಳಲ್ಲಿ ನಮ್ಮ ಸೂರ್ಯಮಂಡಲದಲ್ಲಿರುವಂತೆಯೇ ಗ್ರಹಗಳುಳ್ಳ ಸಾಧ್ಯತೆಯ ಭಿನ್ನರಾಶಿ ಘಿ ಆ ಗ್ರಹಗಳಲ್ಲಿ ನಮ್ಮ ಭೂಮಿಯ ತರಹದ ಗಾತ್ರಗಳುಳ್ಳ ಹಾಗೂ ಜೀವರಾಶಿಗಳು ಬದುಕಬಲ್ಲ ವಾತಾವರಣವುಳ್ಳ (ಅಂದರೆ, ತಮ್ಮ ನಕ್ಷತ್ರಗಳಿಂದ ಬಹುಹತ್ತಿರವಾಗಲಿ ಬಹುದೂರವಾಗಲಿ, ಇರದ ಕಕ್ಷೆಗಳಲ್ಲಿ ಪರಿಭ್ರಮಿಸುತ್ತ, ಜೀವಸಂಕುಲಗಳಿಗೆ ಹೆಚ್ಚು ತಾಪಮಾನವೂ ಹೆಚ್ಚು ಶೀತವೂ ಇಲ್ಲದ ವಾತಾವರಣ) ಗ್ರಹಗಳ ಸಂಖ್ಯೆ ಘಿ ಅಂತಹ ಗ್ರಹಗಳಲ್ಲಿ ಜೀವಕಣಗಳು ಉದ್ಭವಿಸುವ ಸಾಧ್ಯತೆಯ ಭಿನ್ನರಾಶಿ ಘಿ ಹೀಗೆ ಉದ್ಭವಿಸಿದ ಜೀವಕಣಗಳು ಬುದ್ಧಿಜೀವಿಗಳಾಗಿ ಪರಿಣಮಿಸುವ ಸಾಧ್ಯತೆಯ ಭಿನ್ನರಾಶಿ ಘಿ ಈ ಬುದ್ಧಿಜೀವಿಗಳಲ್ಲಿ ರೇಡಿಯೋ ತಂತ್ರಜ್ಞಾನವನ್ನು ಪಡೆದಿರುವ ಸಾಧ್ಯತೆಯ ಭಿನ್ನರಾಶಿ ಘಿ ರೇಡಿಯೋ ಮೂಲಕ ಬುದ್ಧಿಜೀವಿಗಳು ಮಾಹಿತಿಯನ್ನು ಬಿತ್ತರಿಸುವ ಸರಾಸರಿ ಸಮಯಾವಧಿ (ರೇಡಿಯೋ ತಂತ್ರಜ್ಞಾನವನ್ನು ಪಡೆದಿದ್ದರೂ ಅಂತಹ ನಾಗರಿಕತೆ ಯಾವುದೋ ಕಾರಣಕ್ಕೆ ಅಸ್ತಿತ್ವದಲ್ಲಿ ಇಲ್ಲದಿರಬಹುದು).
ಜಿಜ್ಞಾಸೆಯ ಸುಳಿ
ಸಮಾಲೋಚನೆಯಲ್ಲಿ ಭಾಗವಹಿಸಿದ ಎಲ್ಲ ವಿಜ್ಞಾನಿಗಳೂ ಈ ಸಮೀಕರಣದ ತರ್ಕಕ್ಕೆ ಒಪ್ಪಿಗೆ ಸೂಚಿಸಿದರು (ಚಿತ್ರ ೩ ಮತ್ತು ೩ಚಿ : ಫ್ರಾಂಕ್ ಡ್ರೇಕ್ ಮತ್ತು ಡ್ರೇಕ್ ಸಮೀಕರಣ). ಆದರೆ, ಈ ಸಮೀಕರಣವನ್ನು ಪೂರ್ಣಗೊಳಿಸಲು ಅದರಲ್ಲಿನ ಮಾಹಿತಿ ಸಂಖ್ಯೆಗಳನ್ನು ಹೇಗೆ ಪಡೆಯಬಹುದು ಎಂಬ ಜಿಜ್ಞಾಸೆಗೆ ಒಳಗಾದರು. ಅದರಿಂದಾಗಿ ನಂತರ ಖಗೋಳ-ಜೀವಶಾಸ್ತ್ರ (ಆಸ್ಟ್ರೋ-ಬಯಾಲಜಿ) ಎಂಬ ಹೊಸ ವೈಜ್ಞಾನಿಕ ಆಯಾಮವೇ ಸೃಷ್ಟಿಯಾಯಿತು. ಅಲ್ಲದೆ, `ಸೆಟಿ’ (ಸರ್ಚ್ ಫಾರ್ ಎಕ್ಸ್ಟ್ರಾಟೆರೆಸ್ಟ್ರಿಯಲ್ ಇಂಟಲಿಜೆನ್ಸ್) ಎಂಬ ಒಂದು ಮಹತ್ತರ ಯೋಜನೆಗೂ ನಾಂದಿಯಾಯಿತು. ನೂರಾರು ವಿಜ್ಞಾನಿಗಳು, ಖಗೋಳಶಾಸ್ತ್ರಜ್ಞರು ವಿಶ್ವವಿದ್ಯಾನಿಲಯಗಳಲ್ಲಿ, ಸಂಶೋಧನಕೇಂದ್ರಗಳಲ್ಲಿ ತಮ್ಮ ಗಮನವನ್ನು ಗಗನದತ್ತ ತಿರುಗಿಸಿ ಬೃಹದ್ ಗಾತ್ರದ ರೇಡಿಯೋ ದೂರದರ್ಶಕಗಳನ್ನು ಭೂಮಿಯಲ್ಲಿ ಸ್ಥಾಪಿಸಿ ಭೂಮಿಯಿಂದ ಬಿತ್ತರಣೆ ಆಗುತ್ತಿರುವ ರೇಡಿಯೋ ಮಾಹಿತಿಯ ಹೊರತಾಗಿ ಯಾವುದಾದರೂ ನಿರ್ದಿಷ್ಟ ರೀತಿಯಲ್ಲಿ ಭೂಮಿಯೆಡೆಗೆ ರೇಡಿಯೋ ಸಂದೇಶಗಳು ಬರುತ್ತಿವೆಯೇ ಎಂಬ ಅನ್ವೇಷಣೆಗೆ ಇಳಿದರು. ಸೋಜಿಗವೆಂದರೆ, ಇಷ್ಟು ದಶಕಗಳು ಕಳೆದರೂ, ಇದುವರೆಗೂ ಯಾವುದೇ ಖಚಿತ ರೇಡಿಯೋ ಸಂದೇಶ ಕೇಳಿಬಂದಿಲ್ಲ! (ಚಿತ್ರ ೪: `ಸೆಟಿ’ ಯೋಜನೆಯಲ್ಲಿ ಅನ್ಯಜೀವಿಗಳ ಸಂದೇಶಗಳ ಹುಡುಕಾಟದಲ್ಲಿ ತೊಡಗಿರುವ ಬೃಹತ್ ರೇಡಿಯೋ ದೂರದರ್ಶಕಗಳು). ಆದರೆ ಅನ್ಯಲೋಕಜೀವಿಗಳ ಹುಡುಕಾಟ ಬೇರೆಯ ರೀತಿಗಳಲ್ಲಿ ನಡೆಯುತ್ತಿದೆ. ಈ ಹುಡುಕಾಟಕ್ಕೆ, ಈಗಿರುವ ಅತ್ಯಂತ ಸಹಾಯಕ ತಂತ್ರಜ್ಞಾನವೆಂದರೆ ಅಂತರಿಕ್ಷ ತಂತ್ರಜ್ಞಾನ ಮತ್ತು ಶಕ್ತಿಯುತ ರಾಕೆಟ್ಗಳ ಉಪಯೋಗದಿಂದ ಅಂತರಿಕ್ಷದಲ್ಲಿ ಉಡಾವಣೆಯಾಗಿ ಈಗ ಮಾಹಿತಿ ಸಂಗ್ರಹಿಸುತ್ತಿರುವ ಅಂತರಿಕ್ಷ ದೂರದರ್ಶಕ ನೌಕೆಗಳು ಮತ್ತು ಖಗೋಳಜೀವಶಾಸ್ತ್ರ ವಿಜ್ಞಾನಿಗಳ ನೂತನ ಅನ್ವೇಷಣ ರೀತಿಗಳು.
ಫ್ರಾಂಕ್ ಡ್ರೇಕ್ ಸಮೀಕರಣಕ್ಕೆ ಮೊದಲ ಮಾಹಿತಿ ದೊರೆತದ್ದು ಮೂರು ದಶಕಗಳ ನಂತರವೇ! ‘೫೧ ಪೆಗಾಸಿ ಬಿ’ ಎಂಬ ಹೆಸರುಳ್ಳ ಒಂದು ಗ್ರಹವು ಭೂಮಿಯಿಂದ ಸುಮಾರು ೫೦ ಜ್ಯೋತಿರ್ವರ್ಷಗಳ ದೂರದಲ್ಲಿದ್ದು ದೊಡ್ಡಗಾತ್ರದ ಹನಿಯಂತಿದೆ; ಅದರ ಒಂದು ವರ್ಷವೆಂದರೆ ನಮ್ಮ ನಾಲ್ಕು ದಿನಗಳೇ ಆಗಿದ್ದು ಅದರ ತಾಪಮಾನವು ೧,೦೦೦ ಡಿಗ್ರಿ ಸೆಲ್ಸಿಯಸ್ ಅಷ್ಟು ಇದೆ ಎಂದು ತಿಳಿಯಿತು. ಆದರೆ ಇಷ್ಟು ತೀವ್ರ ತಾಪಮಾನದ ಪರಿಸರದಲ್ಲಿ ಜೀವಕಣಗಳು ಬದುಕಲು ಸಾಧ್ಯವೇ ಎಂಬ ಪ್ರಶ್ನೆ ಎದ್ದಿತು. ಅನಂತರದ ವರ್ಷದಲ್ಲಿ ಇನ್ನೆರಡು ಇಂತಹ ಭೂಮ್ಯೇತರ ಗ್ರಹಗಳು (ಇವನ್ನು ಈಗ ಎಕ್ಸೊ-ಪ್ಲಾನೆಟ್ಸ್ ಎಂದು ಕರೆಯುತ್ತಾರೆ) ಪತ್ತೆಯಾದವು. ತದನಂತರ – ಇಂದಿನವರೆಗೂ – ಖಗೋಳವಿಜ್ಞಾನಿಗಳು ಸಾವಿರಾರು ಭೂಮ್ಯೇತರ ಗ್ರಹಗಳನ್ನು ಪತ್ತೆಹಚ್ಚಿದ್ದಾರೆ. ಇವುಗಳಲ್ಲಿ ಕೆಲವು ಗ್ರಹಗಳು ನಮ್ಮ ಭೂಮಿಯ ಗಾತ್ರಕ್ಕಿಂತ ಚಿಕ್ಕದಾಗಿ ಇವೆ; ಕೆಲವು ನಮ್ಮ ಗುರುಗ್ರಹಕ್ಕಿಂತಲೂ ದೊಡ್ಡದಾಗಿವೆ.
ಜೀವಕಣಗಳು ಸೃಷ್ಟಿಯಾದರೂ, ಅವು ನಮ್ಮಂತೆಯೇ ವಿಕಸನಮಾರ್ಗದಲ್ಲಿ ಪಯಣಿಸಿ, ನಮ್ಮ ಹಾಗೆಯೇ ತಾಂತ್ರಿಕಪ್ರಗತಿಯನ್ನು ಪಡೆದು ತಮ್ಮ ಅಸ್ತಿತ್ವವನ್ನು ಇನ್ನೂ ಇಟ್ಟುಕೊಂಡಿವೆಯೇ ಅಥವಾ ಯಾವುದೋ ಕಾರಣಕ್ಕೆ ಅವುಗಳ ನಾಗರಿಕತೆ ನಶಿಸಿ ಹೋಗಿದೆಯೇ? – ಎಂಬ ಪ್ರಶ್ನೆಗೆ ನಾವು ಉತ್ತರಿಸಬೇಕಾಗುತ್ತದೆ.
ಕಾರ್ಯಸ್ಫುಟತೆ
ಈ ಕಾರ್ಯಕ್ಕೆ ಪುಟಕೊಟ್ಟಿದ್ದು ಅಮೆರಿಕ ಮಾರ್ಚ್ ೨೦೦೯ರಲ್ಲಿ ಇಂತಹ ಅನ್ವೇಷಣೆಗೆಂದೇ ಅಂತರಿಕ್ಷಕ್ಕೆ ಉಡಾವಣೆ ಮಾಡಿದ `ಕೆಪ್ಲರ್’ ದೂರದರ್ಶಕ ನೌಕೆ. ಸುಮಾರು ಒಂದು ವರುಷದ ಕಾಲ ತಾಂತ್ರಿಕ ದೋಷದಿಂದ ಕೆಪ್ಲರ್ ಮಾಹಿತಿ ದೊರಕಿಸದಿದ್ದರೂ ಮಿಕ್ಕ ಅವಧಿಯಲ್ಲಿ ಅದು ರವಾನಿಸಿರುವ ಮಾಹಿತಿಯ ಗಾತ್ರವಂತೂ ಆಶ್ಚರ್ಯಕರವಾದದ್ದೇ. ಹೀಗೆ ಪತ್ತೆಯಾದ ಗ್ರಹಗಳು ನಮ್ಮ ಭೂಮಿಯ ತದ್ರೂಪಿಗಳಾಗಿರದಿದ್ದರೂ ಅವುಗಳಲ್ಲಿ ಐದನೇ ಒಂದು ಭಾಗದಷ್ಟು ಗ್ರಹಗಳು ಬಹುಶಃ ಜೀವಿಗಳನ್ನು ಹೊಂದಿರಬಹುದೆಂಬ ಅಂದಾಜಿದೆ ಮತ್ತು ಒಂದು ಗ್ರಹವಂತೂ ಭೂಮಿಯಿಂದ ಕೇವಲ ೧೨ ಜ್ಯೋತಿರ್ವರ್ಷಗಳ ದೂರದಲ್ಲಿದೆ ಎಂಬ ಮಾಹಿತಿಯೂ ಸಿಕ್ಕಿದೆ. (ಚಿತ್ರ ೫: ಕೆಪ್ಲರ್ ಅಂತರಿಕ್ಷ ದೂರದರ್ಶಕ ನೌಕೆ. ಚಿತ್ರ ೬: ಭೂಮಿಯ ಗಾತ್ರದ ಹಾಗೂ ಅದರ ಪರಿಸರವನ್ನು ಹೋಲುವ ಭೂಮ್ಯೇತರ ಗ್ರಹಗಳನ್ನು ಪತ್ತೆಹಚ್ಚಲೆಂದೇ ಕೆಪ್ಲರ್ ನೌಕೆಯನ್ನು ವಿನ್ಯಾಸಗೊಳಿಸಲಾಗಿತ್ತು)
ಡ್ರೇಕ್ ಸಮೀಕರಣದ ಇನ್ನೊಂದು ಅಂಶ: ಜೀವಕಣಗಳು ಉದ್ಭವಿಸುವ ಸಾಧ್ಯತೆ. ಈ ನಿಟ್ಟಿನಲ್ಲಿ, ವಿಜ್ಞಾನಿಗಳ ಚಿಂತನೆ ಹಾಗೂ ಕಾರ್ಯವೈಖರಿ ಕೆಲವು ನಿರ್ದಿಷ್ಟ ಹಾದಿಗಳಲ್ಲಿ ನಡೆಯುತ್ತಿದೆ. ಭೂಮಿಯ ಮೇಲೆ ನಮ್ಮ ಜೀವಕಣಗಳು ಸೃಷ್ಟಿಯಾದದ್ದು ಕೆಲವು ಮೂಲವಸ್ತುಗಳಾದ ದ್ರವರೂಪದ ನೀರು, ಅನಿಲ, ಸಾರಜನಕ (ನೈಟ್ರೋಜನ್) ಮತ್ತು ಗಂಧಕ ಇವುಗಳ ಪ್ರಕ್ರಿಯೆಗಳಿಂದ ಎಂದೂ ಮತ್ತು ಈ ಪ್ರಕ್ರಿಯೆಗಳಿಗೆ ಪ್ರೇರಕವಾಗಿರಬೇಕಾದ ಶಕ್ತಿಮೂಲ ಭೂಮಿಗೆ ದೊರಕಿದ್ದು ಎಂದೂ ಈಗ ಖಚಿತವಾಗಿದೆ. ಈ ಮೂಲವಸ್ತುಗಳು ಭೂಮಿಯಲ್ಲೇ ಅದು ರೂಪುಗೊಳ್ಳುವ ಸಮಯದಲ್ಲಿ ಇದ್ದವೋ ಅಥವಾ ಭೂಮಿಯ ಸೃಷ್ಟಿಯಾದ ನಂತರ ಭೂಮಿಗೆ ಅಪ್ಪಳಿಸಿದ ಕೆಲವು ಧೂಮಕೇತುಗಳು ಮತ್ತು ಇತರ ಕಾಯಗಳು ಅವನ್ನು ಕೊಂಡುತಂದವೋ ಎಂಬ ಸಂದೇಹವೂ ಇದೆ. ಹಾಗಿದ್ದಲ್ಲಿ, ಇಂತಹ ಮೂಲವಸ್ತುಗಳೇ ಆಗಲಿ, ಜೀವಕಣಗಳೇ ಆಗಲಿ ಧೂಮಕೇತುಗಳಲ್ಲಿ, ಅವುಗಳ ಪಥಗಳಲ್ಲಿ ನಾವು ಕಂಡಿರುವ ವೈಪರೀತ್ಯ ಪರಿಸರಗಳಲ್ಲಿ – ಮುಖ್ಯವಾಗಿ ಅತಿ ಹೆಚ್ಚು ತಾಪಮಾನದಲ್ಲಿ ಹೇಗೆ ನಶಿಸದೇ ಬಂದವು ಎಂಬ ಸಾಧ್ಯತೆಯನ್ನು ವಿಶ್ಲೇಷಿಸಬೇಕಾಯಿತು. (ಚಿತ್ರ ೭: ನಮ್ಮ ಜೀವಕಣಗಳ ಸೃಷ್ಟಿಗೆ ಅಂದು ಭೂಮಿಯಲ್ಲಿದ್ದ ಮೂಲವಸ್ತುಗಳು ಮತ್ತು ಪರಿಸರ ಜೊತೆಗೂಡಿದವು. ಚಿತ್ರ ೮: ನಮ್ಮ ಭೂಮಿಯಲ್ಲಿ ಜೀವಸೃಷ್ಟಿಗೆ ಅವಶ್ಯವಾದ ಮೂಲವಸ್ತುಗಳು ಧೂಮಕೇತು ಅಂತಹ ಕಾಯಗಳಿಂದಲೂ ಬಂದಿರಬಹುದೆಂಬ ವೈಜ್ಞಾನಿಕ ಸಿದ್ಧಾಂತವೂ ಇದೆ.)
ರೋಚಕ ಶೋಧಫಲಗಳು
ಈ ನಿಟ್ಟಿನಲ್ಲಿ ಈಗ ಹೊರಬರುತ್ತಿರುವ ಸಂಶೋಧನಫಲಗಳು ರೋಚಕಮಯವಾಗಿವೆ. ಅವುಗಳ ಪ್ರಕಾರ, ಜೀವಸೃಷ್ಟಿಗೆ ಫ್ರಾಂಕ್ ಡ್ರೇಕ್ ಪ್ರಸ್ತಾಪಿಸಿದ ಭೂಮಿಯಂತಹ ಸಮತೋಲನ ವಾತಾವರಣದಲ್ಲಿ ಮಾತ್ರ ಜೀವಕಣಗಳು ಬದುಕಬೇಕೆಂಬ ನಿಯಮವೇನಿಲ್ಲ. ತಾಪಮಾನ ವೈಪರೀತ್ಯ ಮತ್ತು ರಾಸಾಯನಿಕ ಪರಿಸರ ಭೂಮಿಗಿಂತಲೂ ತೀವ್ರವಾಗಿ ಅಧಿಕ ಪ್ರಮಾಣದಲ್ಲಿದ್ದರೂ ಅವು ಬದುಕಿ ಬೆಳೆಯಲು ಸಾಧ್ಯವಿದೆ. ಇದಕ್ಕೆ ಸಾಬೀತಾಗಿ ನಮ್ಮ ಭೂಮಿಯಲ್ಲೇ ಉದಾಹರಣೆಗಳು ಕಂಡುಬಂದಿವೆ! ಕೆಲವೆಡೆ ಭೂಮಿಯಲ್ಲಿನ ಬಿರುಕುಗಳಿಂದ ಚಿಮ್ಮುವ ಅಧಿಕ ತಾಪಮಾನವುಳ್ಳ ಉಗಿಯ ವಾತಾವರಣದಲ್ಲೂ ಬ್ಯಾಕ್ಟೀರಿಯಾದ ವ್ಯವಸ್ಥೆಗಳು ಕಂಡುಬಂದಿವೆ. ನೀರಿನಲ್ಲಿ ಕರಗಿರುವ ಹೈಡ್ರೋಜನ್ ಸಲ್ಫೈಡ್ ಹಾಗೂ ಕೆಲವು ರಾಸಾಯನಿಕ ಮೂಲವಸ್ತುಗಳನ್ನು ಆಹಾರವಾಗಿ ಬಳಸಿಕೊಂಡು ಈ ಬ್ಯಾಕ್ಟೀರಿಯಾಗಳು ಬದುಕಿರುವುದಲ್ಲದೆ ಅವಕ್ಕೂ ಹಿರಿದಾದ ಜೀವಕಣಗಳಿಗೆ ಆಹಾರವಾಗಿಯೂ ಆಗಿದೆ. ಬಿಸಿನೀರಿನ ಬುಗ್ಗೆಗಳಲ್ಲದೆ ಅತ್ಯಂತ ಶೀತಲ ತಾಪಮಾನದಲ್ಲಿರುವ ಅಂಟಾರ್ಟಿಕಾ ಖಂಡದ ಮೇಲ್ನೆಲದ ಕೆಳಗೂ, ಅಧಿಕ ಆಮ್ಲ ಅಥವಾ ಅಧಿಕ ಕ್ಷಾರೀಯ, ಅಧಿಕ ಲವಣ ಅಥವಾ ಅಧಿಕ ವಿಕಿರಣವುಳ್ಳ ವಾತಾವರಣಗಳಲ್ಲೂ ಜೀವಕಣಗಳು ಕಂಡುಬಂದಿವೆ. ಇದರ ಅರ್ಥವೇನು? ಇಂತಹ ವಾತಾವರಣಗಳು ನಮ್ಮಂತಹ ಮಾನವ ಹಾಗೂ ಇತರ ಪ್ರಾಣಿ ಸಸ್ಯ ಸಂಕುಲಗಳಿಗೆ ಸರಿಹೋಗದಿದ್ದರೂ, ಭೂಮ್ಯೇತರ ಗ್ರಹಗಳಲ್ಲಿ ನಮಗಿಂತ ಬೇರೆಯ ತರಹ ವೈಪರೀತ್ಯ ವಾತಾವರಣಗಳಿದ್ದರೂ, ಅವಕ್ಕೆ ಅನುಗುಣವಾಗಿ ಜೀವಕಣಗಳು ಉದ್ಭವವಾಗಿ ಬದುಕುವ ಸಾಧ್ಯತೆಗಳಿವೆ – ಬಹುಶಃ ಅವುಗಳ ರೂಪ-ಲಕ್ಷಣಗಳೂ ನಮ್ಮ ಹಾಗೆ ಇರುವುದಿಲ್ಲವೇನೋ!
ನಮ್ಮ ಖಗೋಳ ಜೈವಿಕವಿಜ್ಞಾನಿಗಳ ಪ್ರಕಾರ ದ್ರವರೂಪದ ನೀರು ಜೀವಸೃಷ್ಟಿಗೆ ಅತ್ಯಂತ ಮುಖ್ಯವಾದ ವಸ್ತು. ನೀರು ಅತ್ಯಂತ ಶಕ್ತಿಯುತ ದ್ರಾವಕವೂ ಕೂಡ. ಹಾಗಾಗಿ ಜೀವದ ಉಳಿವಿಗೆ ಅಗತ್ಯವುಳ್ಳ ಎಲ್ಲಾ ಪೋಷಕಗಳನ್ನೂ (ನ್ಯೂಟ್ರಿಯೆಂಟ್ಸ್) ನೀರು ಜೀವಕಣದ ಎಲ್ಲಾ ಭಾಗಗಳಿಗೂ ರವಾನಿಸುತ್ತದೆ. ೧೯೭೧ರ ನಂತರ ಮಂಗಳಗ್ರಹದ ಕಕ್ಷೆಗೆ ಬಾಹ್ಯಾಕಾಶ ನೌಕೆ ಮ್ಯಾರಿನರ್-೯ನ್ನು ಕಳಿಸಿದಾಗ ಒಂದು ಕಾಲದಲ್ಲಿ ಮಂಗಳನಲ್ಲೂ ಹರಿವ ನೀರಿತ್ತು ಎಂಬ ಮಾಹಿತಿ ದೊರಕಿದೆ. ಬಹುಶಃ ಮೇಲ್ಮೈಯಲ್ಲಿದ್ದ ನೀರು ಮಂಗಳನ ಗುರುತ್ವಾಕರ್ಷಣೆಯ ಬಲ ಕಡಮೆಯಿದ್ದ ಕಾರಣ ಕ್ರಮೇಣವಾಗಿ ಆವಿಯಾಗಿ ಹೋಗಿದ್ದರೂ, ಮಂಗಳನ ನೆಲದ ಒಳಪದರಗಳಲ್ಲಿ ಈಗಲೂ ದ್ರವರೂಪದಲ್ಲಿ ನೀರಿದೆ ಎಂದೂ ತಿಳಿದುಬಂದಿದೆ. ಹಾಗಿದ್ದಲ್ಲಿ, ಅಲ್ಲಿಯೂ ಯಾವುದಾದರೂ ರೀತಿಯ ಮೈಕ್ರೋಬ್ಗಳು ಈಗಲೂ ಇರಬಹುದು. ನಮ್ಮ ಸೂರ್ಯಮಂಡಲದ ಗ್ರಹ ಗುರುವಿನ ಒಂದು ಉಪಗ್ರಹವಾದ ಯೂರೋಪಾದಲ್ಲೂ ಇದೇ ರೀತಿ ಅದರ ನೆಲದ ಕೆಳಗಿನ ಪದರದಲ್ಲಿ ದ್ರವರೂಪದ ನೀರಿನ ಸಮುದ್ರವೇ ಇದೆ ಎಂಬ ಶಂಕೆಯಿದೆ. ಇದನ್ನು ಸಾಬೀತುಪಡಿಸಲು ಅಮೆರಿಕದ ನಾಸಾ ಸಂಸ್ಥೆ ೨೦೨೨ರ ಹೊತ್ತಿಗೆ `ಕ್ಲಿಪ್ಪರ್’ ಎಂಬ ಅನ್ವೇಷಣನೌಕೆಯನ್ನು ಯೂರೋಪಾದೆಡೆಗೆ ಕಳಿಸುತ್ತಿದೆ. ಇತ್ತೀಚೆಗೆ ಯೂರೋಪ್ ಅಂತರಿಕ್ಷ ಸಂಸ್ಥೆ `ರೊಸೆಟ್ಟ’ ಎಂಬ ಅಂತರಿಕ್ಷ ನೌಕೆಯಿಂದ ಮೊಟ್ಟಮೊದಲ ಬಾರಿಗೆ `೬೭ ಪಿ/ಚಾರ್ಯುಮರ್-ಗೆರಾಸಿಮೆಂಕೋ’ ಎಂಬ ನಾಮಾಂಕಿತ ಧೂಮಕೇತುವಿನ ಮೇಲೆ, `ಫಿಲೆ’ ಎಂಬ ಸಂಶೋಧನ ರೋಬೋವನ್ನು ಇಳಿಸಿತು. ಫಿಲೆ ಈಗ ಆ ಧೂಮಕೇತುವಿನ ನೆಲವನ್ನೂ ಅದರ ಮಾದರಿಗಳನ್ನೂ `ಮೂಸಿ’ ನೋಡುತ್ತಿದೆ! ಅದರಲ್ಲಿ ಇಂಗಾಲ ಮತ್ತಿತರ ಮೂಲವಸ್ತುಗಳ ಇರುವಿಕೆಯನ್ನು ಅದು ನಿರ್ದಿಷ್ಟವಾಗಿ ಖಚಿತಪಡಿಸಿದರೆ, ಭೂಮಿಗೆ ಮೂಲವಸ್ತುಗಳನ್ನು ಧೂಮಕೇತುಗಳು ಕೊಂಡುತಂದವು ಎಂಬ ಕೆಲವರ ವೈಜ್ಞಾನಿಕ ಸಿದ್ಧಾಂತಕ್ಕೆ ಬೆಲೆ ಬರುತ್ತದೆ (ಚಿತ್ರ ೯: ಧೂಮಕೇತುವಿನ ನೆಲದ ಮೇಲೆ `ಫಿಲೆ’ – ಅನ್ವೇಷಣರೋಬೋ).
ಇನ್ನು ಡ್ರೇಕ್ ಸಮೀಕರಣದ ಕೊನೆಯ ಎರಡು ಸಂಖ್ಯೆಗಳ ಬಗ್ಗೆ ಹೇಳುವುದಾದರೆ, ಜೀವಕಣಗಳು ಸೃಷ್ಟಿಯಾದರೂ, ಅವು ನಮ್ಮಂತೆಯೇ ವಿಕಸನಮಾರ್ಗದಲ್ಲಿ ಪಯಣಿಸಿ, ನಮ್ಮ ಹಾಗೆಯೇ ತಾಂತ್ರಿಕಪ್ರಗತಿಯನ್ನು ಪಡೆದು ತಮ್ಮ ಅಸ್ತಿತ್ವವನ್ನು ಇನ್ನೂ ಇಟ್ಟುಕೊಂಡಿವೆಯೇ ಅಥವಾ ಯಾವುದೋ ಕಾರಣಕ್ಕೆ ಅವುಗಳ ನಾಗರಿಕತೆ ನಶಿಸಿ ಹೋಗಿದೆಯೇ? – ಎಂಬ ಪ್ರಶ್ನೆಗೆ ನಾವು ಉತ್ತರಿಸಬೇಕಾಗುತ್ತದೆ. ಉದಾಹರಣೆಗೆ, ಮಂಗಳಗ್ರಹದ ಮೇಲೆ ಹರಿವ ನೀರಿದ್ದ ಸಮಯದಲ್ಲಿ ನಾಗರಿಕತೆ ಇದ್ದಿತೇನೋ! ಅಮೆರಿಕದ ರೋಬೋನೌಕೆ `ಮಾರ್ಸ್ ರೋವರ್’ ಈಗ ಮಂಗಳದ ನೆಲದ ಮೇಲೆ ಅನ್ವೇಷಣಕಾರ್ಯದಲ್ಲಿ ಸುತ್ತಾಡುತ್ತಿದೆ. ಅದು ಕಳಿಸುತ್ತಿರುವ ಕೆಲವು ಛಾಯಾಚಿತ್ರಗಳನ್ನು ವಿಶ್ಲೇಷಿಸುತ್ತಿರುವ ಕೆಲವರು ಮಂಗಳದ ಮೇಲೆ ಎಂದೋ ನಶಿಸಿಹೋಗಿರುವ ನಾಗರಿಕತೆಯ ಕೆಲವು ಅವಶೇಷಗಳನ್ನು ಚಿತ್ರಗಳಲ್ಲಿ ಕಾಣಬಹುದು ಎಂದು ಹೇಳುತ್ತಿದ್ದಾರೆ.
ಅಂತೆ-ಕಂತೆ ಮತ್ತು ಕೌತುಕ
ದಿವಂಗತ ಬಾಯ್ಡ್ ಬುಶ್ಮ್ಯಾನ್ ಎಂಬ ಅಂತರಿಕ್ಷವಿಜ್ಞಾನಿ ತಾನು ಸಾಯುವುದಕ್ಕೆ ಮುಂಚೆ ಕೊಟ್ಟ ಒಂದು ಹೇಳಿಕೆಯ ಪ್ರಕಾರ – ಅಮೆರಿಕದ ಗೌಪ್ಯಸ್ಥಳ `ಏರಿಯ ೫೧’ರಲ್ಲಿ ಇಂದಿಗೂ ೧೮ ಅನ್ಯಲೋಕಜೀವಿಗಳು ಅಮೆರಿಕದ ವಿಜ್ಞಾನಿಗಳೊಡನೆ ಬದುಕಿದ್ದಾರಂತೆ! ಅವರಲ್ಲಿ ಕೆಲವರು ೨೫೦ ವರುಷಗಳಿಗೂ ಹೆಚ್ಚಾದ ವಯಸ್ಕರಿದ್ದಾರಂತೆ! ಮತ್ತೆ ಕೆಲವರು ಇಲ್ಲಿಯೇ ಪ್ರಾಣಬಿಟ್ಟರಂತೆ! ಅವರ ದೇಹಗಳು ನಮ್ಮ ವಿಜ್ಞಾನಿಗಳ ತೀಕ್ಷ್ಣ ತಪಾಸಣೆಯಲ್ಲಿವೆಯಂತೆ. ಏನೇ ಆಗಲಿ, ಸಾಮಾನ್ಯ ಜನತೆಗೆ, ಅನ್ಯಲೋಕಜೀವಿಗಳು ಪ್ರತ್ಯಕ್ಷವಾಗಿ ಯಾವಾಗ ಕಣ್ಣೆದುರು ಕಂಡುಬರುತ್ತಾರೆ ಎಂದು ಈಗಂತೂ ಯಾರಿಗೂ ಹೇಳಲಸಾಧ್ಯವಾಗಿದೆ. ಅಲ್ಲಿಯವರೆಗೆ, ನಾವು ಹಾಲಿವುಡ್ ಚಿತ್ರಗಳಲ್ಲಿ ನಾನಾ ವಿಧದ ಕಲ್ಪಿತ ಅನ್ಯಜೀವಿಗಳ ರೂಪಗಳನ್ನೂ ಅವರುಗಳು ನಮ್ಮ ಭೂಮಿಯಲ್ಲಿ ಇಳಿದು ನಮ್ಮನ್ನು ನಿರ್ನಾಮ ಮಾಡುವುದನ್ನೂ ನೋಡಿಕೊಂಡು ತೃಪ್ತಿಪಡಬೇಕಾಗಿದೆ! (ಚಿತ್ರಗಳು ೧೦, ೧೧ ಮತ್ತು ೧೨: ಸಿನೆಮಾ ಮತ್ತಿತರ ಮಾಧ್ಯಮಗಳಲ್ಲಿ ಕಲ್ಪಿತವಾಗಿರುವ ಅನ್ಯಲೋಕಜೀವಿಗಳ ರೂಪಗಳು). ಯಾವ ಕಾರಣದಿಂದಲೋ ಏನೋ, ಎಲ್ಲಾ ಅನ್ಯಲೋಕಜೀವಿಗಳು ಮಾನವಕುಲಕ್ಕೆ ಶತ್ರುಗಳೇ ಎಂದು ಒಂದು ವಿಚಿತ್ರ ಪೂರ್ವನಿರ್ಧಾರವನ್ನು ಎಲ್ಲರೂ ಮಾಡಿರುವ ಹಾಗಿದೆ!
ಏತನ್ಮಧ್ಯೆ ವೃತ್ತಿಜೀವನದಲ್ಲಿ ನಿವೃತ್ತಿ ಪಡೆದಿದ್ದರೂ ಫ್ರಾಂಕ್ ಡ್ರೇಕ್ ಅನ್ಯಲೋಕಜೀವಿಗಳ ಮೇಲಿನ ಚಿಂತನೆಯನ್ನು ಬಿಟ್ಟಿಲ್ಲ. ಈಗ ಅವರಿಗೆ ಒಂದು ಹೊಸ ಸಾಧ್ಯತೆ ಕಂಡುಬಂದಿದೆ. ಅದು: ಅನ್ಯಲೊಕಜೀವಿಗಳು ರೇಡಿಯೋ ತರಂಗಗಳನ್ನು ಮಾತ್ರವಲ್ಲ, ಬಹು ಶಕ್ತಿಯುತ, ಪ್ರಬಲವಾದ ದೂಲವನ್ನು ಸಂದೇಶರೂಪದಲ್ಲಿ ಬಿತ್ತರಿಸುತ್ತಿದ್ದಾರೆ ಎಂದು.
ಬಹುಶಃ ಮುಂದಿನ ದಶಕಗಳಲ್ಲಿ ಒಂದು ದಿನ ಮಧ್ಯರಾತ್ರಿಯಲ್ಲಿ ನಿಮ್ಮ ಮನೆಯ ಬಾಗಿಲನ್ನು ಯಾರೋ ತಟ್ಟಿದಂತಾಗಿ ನೀವು ಬಾಗಿಲು ತೆರೆದಾಗ, ಅಲ್ಲಿ ಊಹಿಸಲಸಾಧ್ಯವಾದ ರೂಪದಲ್ಲಿ ಒಂದು ವಿಚಿತ್ರ ಜೀವಿ ನಿಂತು ನಿಮ್ಮ ಭಾಷೆಯಲ್ಲೇ, ಕಂಪ್ಯೂಟರ್ ಸಂಶ್ಲೇಷಣೆಯಾದ ಧ್ವನಿಯಲ್ಲಿ, ನಾನು ಆಂಡ್ರೊಮೆಡಾ ಬ್ರಹ್ಮಾಂಡದಿಂದ ಬಂದಿದ್ದೇನೆ, ಒಳಗೆ ಬರಲೇ? ಎಂದು ಕೇಳಿದರೆ ಬಾಗಿಲನ್ನು ತೆರೆಯಬೇಕೋ ಬೇಡವೋ ಎಂಬುದರ ಬಗ್ಗೆ ಈಗಲೇ ಯೋಚಿಸಿ!?
ನಾಸಾ ಪ್ರಕಟಿಸಿದ ರೋಚಕ ಪುಸ್ತಕ
ಅನ್ಯಗ್ರಹ ಜೀವಿಗಳು ಇದ್ದಾರೆಯೇ ಇಲ್ಲವೇ ಎಂಬ ಚರ್ಚೆಯಲ್ಲಿ ನಾಸಾದ ಪಾತ್ರ ತುಂಬಾ ಮುಖ್ಯ. ದಶಕಗಳ ಕಾಲ ನಾಸಾ ಸಂಸ್ಥೆಯು ಅನ್ಯಗ್ರಹಜೀವಿಗಳ ಕುರಿತು ಸಾರ್ವಜನಿಕರು ತಿಳಿಸಿದ ಮಾಹಿತಿಗಳನ್ನೆಲ್ಲಾ ಮುಚ್ಚಿಟ್ಟಿದೆ ಎಂಬ ಆರೋಪವೇ ನೂರಾರು ಸಲ ಕೇಳಿಬಂದಿದೆ. ನಾಸಾ ಸಂಸ್ಥೆಯು ಇತ್ತೀಚೆಗಷ್ಟೆ (೨೦೧೨) ಅನ್ಯಗ್ರಹಜೀವಿಗಳ ಬಗ್ಗೆ ೩೩೦ ಪುಟಗಳ ಪುಸ್ತಕವನ್ನು ಪ್ರಕಟಿಸಿದೆ. ಡೌಗ್ಲಾಸ್ ಎ ವಾಕೋಚ್ ಸಂಪಾದಿಸಿರುವ ಈ ಪುಸ್ತಕದ ಹದಿನೈದು ಅಧ್ಯಾಯಗಳಲ್ಲಿ ಅನ್ಯಗ್ರಹಜೀವಿಗಳ ಬಗ್ಗೆ, ಅವುಗಳ ಹುಡುಕಾಟದ ಯತ್ನದ ಬಗ್ಗೆ, ಭೂಮಿಯಿಂದ ಕಳಿಸಿದ ಸಂದೇಶಗಳ ಬಗ್ಗೆ ವಿಶ್ಲೇಷಣಾತ್ಮಕ ಲೇಖನಗಳಿವೆ. `೧೯೬೦ರ ಏಪ್ರಿಲ್ ೮ರಂದು ಫ್ರಾಂಕ್ ಡ್ರೇಕ್ ಎಂಬ ಖಗೋಳ ವಿಜ್ಞಾನಿಯು ಗ್ರೀನ್ಪಾರ್ಕ್ನ ೮೫ ಅಡಿಗಳ ರೇಡಿಯೋ ದೂರದರ್ಶಕವನ್ನು ಹತ್ತಿರದ ನಕ್ಷತ್ರಪುಂಜಗಳತ್ತ ತಿರುಗಿಸಿದ ದಿನದಿಂದ ಅನ್ಯಗ್ರಹ ಜೀವಿಗಳ ಹುಡುಕಾಟವು ಮಹತ್ತ್ವದ ತಿರುವು ಪಡೆಯಿತು’ ಎಂದು ವಾಕೋಚ್ ಆರಂಭಿಸುತ್ತಾರೆ. ಈ ಪುಸ್ತಕದಲ್ಲಿ ಅನ್ಯಗ್ರಹಜೀವಿ ಸಂಶೋಧನೆ (ಸೇಟಿ) ಕುರಿತು ಹಲವು ಕುತೂಹಲಕರ ಅಂಶಗಳಿವೆ. ಈ ಪುಸ್ತಕವನ್ನು ಉಚಿತವಾಗಿ ಡೌನ್ಲೋಡ್ ಮಾಡಿಕೊಳ್ಳಬಹುದು.
ಪುಸ್ತಕದ ಡೌನ್ಲೋಡ್ ಕೊಂಡಿ:
http://1.usa.gov/1m4nsXx
ಕ್ಷುದ್ರಗ್ರಹದಲ್ಲಿ ಜೀವಿಗಳು?
ಈ ಮಧ್ಯೆ ೨೬ ಕೋಟಿ ಮೈಲುಗಳ ದೂರದಲ್ಲಿರುವ ಸೆರೆಸ್ ಎಂಬ ಕ್ಷುದ್ರಗ್ರಹದಲ್ಲಿ ಕಂಡುಬಂದ ವಿಚಿತ್ರ ಬೆಳಕು ವಿಜ್ಞಾನಿಗಳಲ್ಲಿ ಕುತೂಹಲ ಮೂಡಿಸಿದೆ. ಇದು ಅನ್ಯಗ್ರಹಜೀವಿಗಳ ತಾಣವಾಗಿರಬಹುದೆ ಎಂದು ಅಚ್ಚರಿಯಿಂದ ಸಂಶೋಧನೆ ನಡೆಸುವಂತಾಗಿದೆ
ಅಮೆರಿಕದಲ್ಲಿ ೧೯೫೨ರಲ್ಲಿ ಕಂಡುಬಂತು ಎನ್ನಲಾದ ಹಾರುವ ತಟ್ಟೆಗಳ ಕುರಿತು ಹಿಸ್ಟರಿ ಟಿವಿ ಚಾನೆಲ್ ನಿರ್ಮಿಸಿದ ವಿಡಿಯೋವನ್ನು ಇಲ್ಲಿ ನೋಡಿ:
ಅನ್ಯಗ್ರಹ ಜೀವಿಗಳ ಕುರಿತು ಇರುವ ವಿವಿಧ ಮುದ್ರಿತ ದಾಖಲೆ, ವಿಡಿಯೋ ಮತ್ತು ಛಾಯಾಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ:
http://www.abovetopsecret.com/
forum/thread1046591/pg1
Thanky Thanky for all this good infotmarion!