ಪ್ರಧಾನಿಗಳ ಪರಿಣಾಮಕಾರಿ ಅಮೆರಿಕ ಪ್ರವಾಸ
ಅಮೆರಿಕಕ್ಕೆ ಭಾರತದ ಪ್ರಧಾನಿಗಳ ಭೇಟಿ ಇದೇ ಮೊದಲಿನದಲ್ಲವಾದರೂ ಕಳೆದ ಸೆಪ್ಟೆಂಬರ್ ಕೊನೆಯ ವಾರದ ನರೇಂದ್ರ ಮೋದಿಯವರ ಭೇಟಿಗೆ ವಿಶೇಷ ಭೂಮಿಕೆ ಇತ್ತು; ಅದಕ್ಕೆ ಜಾಗತಿಕ ಮಹತ್ತ್ವ ಇತ್ತು. ಆರ್ಥಿಕ, ವಾಣಿಜ್ಯ, ತಂತ್ರಜ್ಞಾನ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರ ಅಧಿಕಗೊಳ್ಳಬೇಕಾದುದರ ಆವಶ್ಯಕತೆಯನ್ನು ಎರಡೂ ರಾಷ್ಟ್ರಗಳು ಸ್ಥಿರೀಕರಿಸಿದವು.
ಭಯೋತ್ಪಾದಕತೆಯನ್ನು ಪ್ರತಿಬಂಧಿಸುವುದರಲ್ಲಿ ಭಾರತವನ್ನು ಬೆಂಬಲಿಸುವ ಅಮೆರಿಕದ ಆಶ್ವಾಸನೆ ಸಾಮಯಿಕವಾಗಿದೆ. ಆಫಘಾನಿಸ್ತಾನವನ್ನು ಉಗ್ರವಾದಪೋಷಕ ನೆಲೆಯಾಗಿಸುವುದಿಲ್ಲವೆಂಬ ಮತ್ತು ತನ್ನ ದೇಶದೊಳಗೆ ಮಾನವಹಕ್ಕುಗಳನ್ನು ಪರಿರಕ್ಷಿಸುವೆನೆಂಬ ವಾಗ್ದಾನಕ್ಕೆ ಬದ್ಧವಾಗಿರ ತಕ್ಕದ್ದೆಂದು ಆಗ್ರಹವನ್ನು ವ್ಯಕ್ತಪಡಿಸಲಾಯಿತು. ಅಮೆರಿಕ-ಇಂಡಿಯ ಗಾಂಧಿ-ಕಿಂಗ್ ಅಭಿವೃದ್ಧಿ ಫೌಂಡೇಶನ್ನಿನ ಮೂಲಕ ಶಿಕ್ಷಣ, ಆರೋಗ್ಯ, ಪರಿಸರರಕ್ಷಣೆ ಮೊದಲಾದ ಕ್ಷೇತ್ರಗಳಲ್ಲಿ ಅಮೆರಿಕ ಸಹಾಯಹಸ್ತ ಚಾಚಿರುವುದು ದೀರ್ಘಕಾಲಿಕ ದೃಷ್ಟಿಯಿಂದ ಗಮನಾರ್ಹವಾಗಿದೆ. ಇದೀಗ ಅಮೆರಿಕ-ಪ್ರವರ್ತಿತ ‘ಆಕುಸ್’ ಒಕ್ಕೂಟದ ಬಗೆಗೆ ಹಲವು ಶಂಕೆಗಳು ವ್ಯಕ್ತಗೊಂಡಿರುವುದು ಹೌದಾದರೂ, ಇಡೀ ಜಗತ್ತಿನ ವಾಣಿಜ್ಯಕ್ಕೇ ಕುತ್ತು ತರುವಂತಿರುವ ಚೀಣಾದ ಸಮುದ್ರಾಕ್ರಮಣ ಪ್ರಯಾಸಗಳನ್ನು ನಿವಾರಿಸಲು ‘ಕ್ವಾಡ್’ ರೀತಿಯ ವಿವಿಧ ದೇಶ ಒಕ್ಕೂಟದ ಅನಿವಾರ‍್ಯತೆ ಇದೆಯೆಂಬುದನ್ನು ಅಲ್ಲಗಳೆಯುವಂತಿಲ್ಲ. ಇನ್ನು ಪಾಕಿಸ್ತಾನದ ವ್ಯಗ್ರತೆಯಂತಹ ಸಮಸ್ಯೆಗಳೂ ಇವೆ. ಈ ಹಿನ್ನೆಲೆಯಲ್ಲಿ ಪ್ರಸಕ್ತ ಜಗತ್‌ಸ್ಥಿತಿಯಲ್ಲಿ ಅಮೆರಿಕ-ಭಾರತ ಮೈತ್ರಿಯು ವೈಶ್ವಿಕ ಶಾಂತಿಯ ಸಾಧನೆಗೆ ಚೋದಕಶಕ್ತಿಯಾದೀತೆಂಬ ಭಾವನೆ ಹೊಮ್ಮಿರುವುದು ಭಾರತ ಪ್ರಧಾನಿಯ ಈಚಿನ ಅಮೆರಿಕ ಪ್ರವಾಸದ ಉಪಲಬ್ಧಿಯಾಗಿದೆ.