ಕನ್ನಡದ ಜನ ಒಂದೇ ಕಡೆ ಸೇರಬೇಕೆನ್ನುವ ಆಶಯ ಕೇವಲ ಕನಸೇನೋ ಎಂಬಂತಿತ್ತು. ಈ ಕನಸನ್ನು ಗಟ್ಟಿಯಾಗಿ ಕಂಡು ಅದನ್ನು ನನಸು ಮಾಡಬೇಕೆಂದು ಹಂಬಲಿಸುತ್ತಾ ಆ ಬಗ್ಗೆ ಶ್ರಮಿಸಿದವರು ಆಲೂರ ವೆಂಕಟರಾಯರು ಮೊದಲಾದ ಹಲವರು. ಅಂತಹ ಪ್ರಮುಖರಲ್ಲಿ ಒಬ್ಬರು ಕನ್ನಡದ ಸಣ್ಣಕತೆಗಳ ಜನಕ ಮತ್ತು ಕನ್ನಡದ ಆಸ್ತಿ ಎನಿಸಿದ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು.
ಸುಮಾರು ಒಂದು ಸಾವಿರ ವರ್ಷದ ಹಿಂದೆಯೇ ಕರ್ನಾಟಕ ಸಂಸ್ಕೃತಿಯ ವ್ಯಾಪ್ತಿ ಕನ್ನಡನಾಡು ಕಾವೇರಿಯಿಂದ ಗೋದಾವರಿ ನದಿಯವರೆಗೆ ಹಬ್ಬಿತ್ತು ಎಂದು ಹೇಳಲಾಗಿದೆ. ಕೆಲವು ರಾಜವಂಶಗಳ ಕಾಲದಲ್ಲಿ ಮುಖ್ಯವಾಗಿ ಉತ್ತರದಲ್ಲಿ ಕನ್ನಡನಾಡು ಅಥವಾ ಕರ್ನಾಟಕ ಅದಕ್ಕಿಂತ ಆಚೆಗೆ ಹಬ್ಬಿದ್ದುದಿತ್ತು. ಇಂದಿನ ಮಹಾರಾಷ್ಟ್ರದಲ್ಲಿ ಹಾಗೆಯೇ ಆಂಧ್ರಪ್ರದೇಶ, ತೆಲಂಗಾಣಗಳಲ್ಲಿ ಕನ್ನಡ ಭಾಷೆಯ ಸ್ಥಳನಾಮಗಳಿರುವುದನ್ನು ಸಂಶೋಧಕರು ಗುರುತಿಸಿದ್ದಾರೆ. ಆದರೆ ದೇಶವು ಸ್ವಾತಂತ್ರ್ಯ ಗಳಿಸುವ ಹೊತ್ತಿಗೆ ಕನ್ನಡ ನೆಲ ಹರಿದು ಹಂಚಾಗಿಹೋಗಿತ್ತೆಂದರೆ ತಪ್ಪಲ್ಲ. ಇದ್ದುದರಲ್ಲಿ ಮೈಸೂರು ಸಂಸ್ಥಾನವೇ ಸ್ವಲ್ಪ ದೊಡ್ಡ ಭಾಗ. ಇನ್ನು ಬೆಳಗಾವಿ, ಧಾರವಾಡ, ಉತ್ತರಕನ್ನಡಗಳ ಭಾಗ ಮುಂಬಯಿ ಪ್ರಾಂತಕ್ಕೆ ಸೇರಿದರೆ ಬೀದರ್, ಗುಲ್ಬರ್ಗ, ಬಿಜಾಪುರ, ರಾಯಚೂರು ಭಾಗ ಹೈದರಾಬಾದ್ ನಿಜಾಮನ ಸಂಸ್ಥಾನಕ್ಕೆ ಸೇರಿತ್ತು. ಇನ್ನು ಬಳ್ಳಾರಿ ಪ್ರದೇಶ ಮತ್ತು (ಅವಿಭಜಿತ) ದಕ್ಷಿಣಕನ್ನಡ ಜಿಲ್ಲೆಗಳು ಮದರಾಸ್ ಪ್ರಾಂತದ ಭಾಗವಾಗಿದ್ದವು. ಕನ್ನಡದ ಜನ ಒಂದೇ ಕಡೆ ಸೇರಬೇಕೆನ್ನುವ ಆಶಯ ಕೇವಲ ಕನಸೇನೋ ಎಂಬಂತಿತ್ತು.
ಈ ಕನಸನ್ನು ಗಟ್ಟಿಯಾಗಿ ಕಂಡು ಅದನ್ನು ನನಸು ಮಾಡಬೇಕೆಂದು ಹಂಬಲಿಸುತ್ತಾ ಆ ಬಗ್ಗೆ ಶ್ರಮಿಸಿದವರು ಆಲೂರ ವೆಂಕಟರಾಯರು ಮೊದಲಾದ ಹಲವರು. ಅಂತಹ ಪ್ರಮುಖರಲ್ಲಿ ಒಬ್ಬರು ಕನ್ನಡದ ಸಣ್ಣಕತೆಗಳ ಜನಕ ಮತ್ತು ಕನ್ನಡದ ಆಸ್ತಿ ಎನಿಸಿದ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು.
ಈ ಹಿರಿಯರ ಆ ಬಗೆಗಿನ ಪೂರ್ಣ ಚಿಂತನೆ ಅವರು ನಿಡುಗಾಲ ನಡೆಸಿಕೊಂಡು ಬಂದ ‘ಜೀವನ’ ಮಾಸಪತ್ರಿಕೆಯ ಸಂಪಾದಕೀಯಗಳಲ್ಲಿ ದಾಖಲಾಗಿದೆ. ಅವು ಸಂಪಾದಕೀಯ ಎನ್ನುವ ಶೀರ್ಷಿಕೆಯ ಐದು ಸಂಪುಟಗಳಲ್ಲಿ ಪ್ರಕಟವಾಗಿವೆ. ಮೇ ೧೯೫೧ರಿಂದ ಆರಂಭಿಸಿ ಸುಮಾರು ಹದಿನೈದು ವರ್ಷಗಳ ಟಿಪ್ಪಣಿಗಳು ಅಲ್ಲಿ ಬೆಳಕುಕಂಡಿವೆ. ಅಂದಿನ ನೇರ ದಾಖಲೆಗಳಾದುದರಿಂದ ಯಾವುದೇ ವ್ಯಾಖ್ಯಾನವಿಲ್ಲದೆ ವಿಷಯವನ್ನು ಅಂದಿಗೇ ಹೋಗಿ ತಿಳಿದುಕೊಳ್ಳಬಹುದು. ಕರ್ನಾಟಕ ಏಕೀಕರಣಕ್ಕೆ ಸಂಬಂಧಿಸಿದ ವಿಷಯಗಳ ಆಯ್ದಭಾಗಗಳನ್ನು ಪ್ರಸ್ತುತ ಲೇಖನಕ್ಕೆ ಬಳಸಿಕೊಳ್ಳಲಾಗಿದೆ. ಇದರಲ್ಲಿ ಮಾಸ್ತಿಯವರ ಬರವಣಿಗೆಯ ಮೊನಚು ಮತ್ತು ಸೂಕ್ಷ್ಮತೆಯನ್ನು ಉದ್ದಕ್ಕೂ ಗಮನಿಸಬಹುದು; ಬಳಸುವುದು ಸೌಮ್ಯ ಮಾತಾದರೂ ಅದು ಚಾಟಿಯೇಟೇ ಆಗಿರುತ್ತದೆ.
ದಾಸ್ಯದ ಕಾಲದಲ್ಲಿ ಪರದೇಶೀಯರಾದ ಅರಸರ ಅಸೌಹಾರ್ದದ ಫಲವೆಂದು ನಾವು ಎಣಿಸುತ್ತಿದ್ದ ಒಂದು ಅವ್ಯವಸ್ಥೆ ಸ್ವಾತಂತ್ರ್ಯ ಬಂದು ಮೂರು ವರ್ಷ ಕಳೆದರೂ ಇನ್ನೂ ಹಾಗೆಯೇ ಇರುವುದು ದುಃಖದ ಸಂಗತಿ. ಕರ್ನಾಟಕ ಏಕೀಕರಣ ಮತ್ತು ಕನ್ನಡ ದೇಶದಲ್ಲಿ ವಿದ್ಯಾಭ್ಯಾಸ ಮತ್ತು ಆಡಳಿತದಲ್ಲಿ ಕನ್ನಡಕ್ಕೆ ಇರುವ ಸ್ಥಾನ – ಈ ಎರಡು ವಿಷಯಗಳಲ್ಲಿ ನಮ್ಮ ಆಡಳಿತದ ತಾಟಸ್ಥ್ಯ ಅಥವಾ ಔದಾಸೀನ್ಯವು ಜನತೆಯ ದೌರ್ಬಲ್ಯವನ್ನು ಸೂಚಿಸುವ ಲಾಂಛನವಾಗಿದೆ. ಮುಂಬಯಿಯಲ್ಲಿ ನಡೆದ ಅಖಿಲ ಭಾರತ ಲೇಖಕರ ಸಮಾವೇಶದಲ್ಲಿ ನಡೆದ ಚರ್ಚೆಗಳಲ್ಲಿ ಸ್ಪಷ್ಟಗೊಂಡ ಒಂದು ಮುಖ್ಯ ಸಂಗತಿಯೆಂದರೆ, ದೇಶದ ಆಯಾ ಪ್ರಾಂತದಲ್ಲಿ ಆಯಾ ಭಾಷೆ ಪ್ರಮುಖ ಭಾಷೆಯಾಗಿ ವಿದ್ಯೆ, ವ್ಯವಹಾರ, ಆಡಳಿತದಲ್ಲಿ ಬಳಕೆಗೆ ಬರಬೇಕು ಎನ್ನುವುದು. ಎಲ್ಲ ಪ್ರಾಂತಗಳ ಪ್ರತಿನಿಧಿಗಳು ಈ ಮಾತನ್ನು ಹೇಳಿದರು ಎಂದು ವಿಷಯದ ಪ್ರವೇಶವಾಗುತ್ತದೆ.
ಮೊದಲ ಚುನಾವಣೆ
ಮುಂದೆ ೧೯೫೨ರ ಲೋಕಸಭಾ ಚುನಾವಣೆ ಎದುರಾಗುತ್ತದೆ. ಆಗ ಪ್ರಾಂತ ಏಕೀಕರಣಕ್ಕೆ ಪರವಾಗಿದ್ದ ಕೋಟ ರಾಮಕೃಷ್ಣ ಕಾರಂತರಂತಹ (ಸಾಹಿತಿ ಶಿವರಾಮ ಕಾರಂತರ ಅಣ್ಣ) ಹಿರಿಯ ನಾಯಕರು ಕಾಂಗ್ರೆಸಿನಿಂದ ಹೊರಗೆ ಹೋಗಿದ್ದಾರೆ. ಆಗ ಮಾಸ್ತಿ ಬರೆಯುತ್ತಾರೆ: ಜೊತೆಗೆ ಕರ್ನಾಟಕದಂತಹ ದುರದೃಷ್ಟ ಪ್ರಾಂತದಲ್ಲಿ ಈ ತುಂಡರಿಸಿದ ಕನ್ನಡ ಜನತೆ ಏಕೀಕರಣವನ್ನು ಸಾಧಿಸುವ ಜನರನ್ನು ಬಿಟ್ಟು ಏಕೀಕರಣದ ವಿಷಯದಲ್ಲಿ ಉಗುರುಬೆಚ್ಚನೆ ಮಾತನ್ನಾಡುವ ಕಾಂಗ್ರೆಸ್ ಪ್ರತಿನಿಧಿಗಳನ್ನು ಆರಿಸಬೇಕಾಗಿದೆ.
ಮುಖ್ಯವಾಗಿ ಪ್ರಧಾನಿ ನೆಹರು ಮೊದಲಿಗೆ ಭಾಷಾನುಗುಣ ಪ್ರಾಂತ ರಚನೆಗೆ ಪರವಾಗಿರಲಿಲ್ಲ. ಚುನಾವಣೆಯಲ್ಲಿ ಯಾವ ನಿಲವು ಪಕ್ಷಕ್ಕೆ ಲಾಭಕರವಾಗಬಹುದು ಎನ್ನುವ ಮೀನಮೇಷದಲ್ಲಿ ಕಾಂಗ್ರೆಸ್ ಇತ್ತು. ಬೆಂಗಳೂರಿನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಬಹಳಷ್ಟು ಚರ್ಚೆ ನಡೆದು, ಭಾಷಾಪ್ರಾಂತ ರಚನೆ ಕಾಂಗ್ರೆಸ್ಗೆ ಸಮ್ಮತ ಎನ್ನುವ ತೀರ್ಮಾನಕ್ಕೆ ಬರಲಾಯಿತು; ನೆಹರು ಅದಕ್ಕೆ ಒಪ್ಪಿಗೆ ಕೊಟ್ಟರು. ಆದರೆ ಹೈದರಾಬಾದ್ನಲ್ಲಿ ನಡೆದ ಪ್ರಚಾರ ಸಭೆಯಲ್ಲಿ ನೆಹರು ಭಾಷಾನುಗುಣ ಪ್ರಾಂತ ರಚನೆ ಸಂಕುಚಿತ ಮನೋಧರ್ಮದ್ದು ಎಂದು ಅಭಿಪ್ರಾಯಪಟ್ಟರು. ಮುಂದೆ ಸ್ವಾಮಿ ಸೀತಾರಾಮ್ ಎಂಬವರು ಆಂಧ್ರಪ್ರದೇಶ ನಿರ್ಮಾಣಕ್ಕಾಗಿ ಸತ್ಯಾಗ್ರಹ ಮಾಡಿದಾಗ ಆಂಧ್ರ ನಿರ್ಮಾಣ ತಮಗೆ ಸಮ್ಮತ ಎಂದರು. ಇಂತಹ ನಿಲವಿಗೆ ಕಾರಣ ಕಾಂಗ್ರೆಸ್ ಒಂದು ಮುಖದ ಸಂಸ್ಥೆ ಅಲ್ಲ ಎಂಬುದು ಜೀವನ ಸಂಪಾದಕರ ವಿಶ್ಲೇಷಣೆ. ಭಾಷಾಪ್ರಾಂತ ರಚನೆ ದೇಶದ ಕ್ಷೇಮಕ್ಕೆ ಒಂದು ಸಾಧನ ಎಂಬುದನ್ನು ಕಾಣದಿದ್ದರೂ ಇವರಲ್ಲಿ ಹಲವರು ಅಂತಹ ಪ್ರಾಂತರಚನೆ ಪಕ್ಷಕ್ಕೆ ಒಪ್ಪಿಗೆ ಎನ್ನುತ್ತಾರೆ. ಇದು ಆಯ್ಕೆ (ಚುನಾವಣೆ)ಗಾಗಿ ಹೇಳುವ ಮಾತೋ ಗೊತ್ತಿಲ್ಲ. ಅಂತೂ ಪಂಡಿತರಿಗೆ (ನೆಹರು) ಒಪ್ಪದ ಮಾತು ಪಕ್ಷದ (ಸಂಸ್ಥೆಯ) ಧೋರಣೆಯಲ್ಲಿ ಕಾಣುತ್ತದೆ.
ಭಾಷಾ ಪ್ರಾಂತ ಏಕೆ?
ಜನರ ಎಚ್ಚರ ಹೆಚ್ಚಬೇಕಾದರೆ ಭಾಷಾ ಪ್ರಾಂತ ನಿರ್ಮಾಣ ತೀರಾ ಆವಶ್ಯಕ. ಕೇಂದ್ರಸರ್ಕಾರ ಇದನ್ನು ಬೇಗ ಕಂಡುಕೊಳ್ಳಲಿ; ಹೊಸ ಶಾಸನಸಭೆಗಳಲ್ಲಿ ಸೇರುವ ಪ್ರತಿನಿಧಿಗಳು ಈ ವಿಷಯಕ್ಕೆ ಮೊದಲು ಗಮನಕೊಡಬೇಕು ಎಂದು ಸೂಚಿಸುವ ಪತ್ರಿಕೆ, ಭಾಷಾ ಪ್ರಾಂತ ರಚನೆಗೆ ಸದ್ಯ ಕೆಲವು ತೊಡಕಿದೆ. ಅದು ಸರಿಹೋಗುವವರೆಗೂ ನಾವೇನು ಮಾಡುವಂತಿಲ್ಲ ಎನ್ನುವ ನೆಹರು ಮಾತನ್ನು ಉಲ್ಲೇಖಿಸಿ, ‘ಇದು ತಪ್ಪು. ತೊಡಕನ್ನು ನಿವಾರಿಸಿ ಭಾಷಾಪ್ರಾಂತವನ್ನು ನಿರ್ಮಿಸಬೇಕು’ ಎಂದು ಒತ್ತಾಯಿಸುತ್ತದೆ.
೧೯೫೨ರ ಜುಲೈ ‘ಜೀವನ’ ಸಂಪಾದಕೀಯ, ಭಾಷಾ ಪ್ರಾಂತ ರಚನೆ ಅವಶ್ಯವೆಂದು ಹತ್ತಾರು ಕಡೆ ಕೇಳಿಬಂದ ಒತ್ತಾಯದಿಂದ ಕಾಂಗ್ರೆಸ್ ಪಕ್ಷದ ಕೇಂದ್ರ ಸಮಿತಿಯ ಮೇಲೂ ಸ್ವಲ್ಪ ಪರಿಣಾಮ ಆಗಿದೆಯಂತೆ. ಕನ್ನಡದ ನಾಯಕರು ದೆಹಲಿಯಲ್ಲಿ ಒಟ್ಟುಗೂಡಿ ಪ್ರಧಾನಿ ನೆಹರು ಅವರನ್ನು ಕಂಡು ಕನ್ನಡ ಪ್ರಾಂತ ರಚನೆ ಬೇಗ ಆಗಲೆಂದು ಒತ್ತಾಯ ಮಾಡಿದರಂತೆ. ದೆಹಲಿಯಲ್ಲಿರುವ ನಮ್ಮ ಪ್ರಮುಖರು ತಮ್ಮ ಪ್ರಭಾವವನ್ನು ಬಳಸಿ ಭಾಷಾ ಪ್ರಾಂತ ನಿರ್ಮಾಣದ ಬಗ್ಗೆ ಒಂದು ಸೀಮಾ ಸಮಿತಿಯನ್ನು ಬೇಗ ರಚಿಸುವಂತೆ ಮಾಡುವುದು ಒಳ್ಳೆಯದು. ದಕ್ಷಿಣದ ಪ್ರಾಂತಗಳ ಸೀಮೆ (ಗಡಿ) ನಿರ್ಣಯಿಸಲು ಸಮಿತಿಯೊಂದನ್ನು ರಚಿಸಿದರೆ ಪ್ರಾಂತ ರಚನೆಯ ಕಾರ್ಯ ಒಂದು ಹೆಜ್ಜೆ ಮುಂದೆ ನಡೆದಂತಾಗುತ್ತದೆ ಎಂದು ವಿವರಿಸುತ್ತದೆ.
ಈ ನಡುವೆ ಆಂಧ್ರಪ್ರಾಂತ ನಿರ್ಮಾಣದ ಪರವಾದ ಚಳವಳಿ ವೇಗಗೊಳ್ಳುತ್ತದೆ. ಪೊಟ್ಟಿ ಶ್ರೀರಾಮುಲು ಎನ್ನುವ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದ ನಾಯಕರು ನಿರಶನ ವ್ರತದಿಂದ ತೀರಿಕೊಳ್ಳುತ್ತಾರೆ.
ಇನ್ನು ಭಾಷಾ ಪ್ರಾಂತ ರಚನೆಯ ವಿಷಯದಲ್ಲಿ ಕಾಂಗ್ರೆಸ್ನವರು ಗಾಂಧಿಯವರ ನಿಲವಿಗೂ ಬೆಲೆ ಕೊಡುತ್ತಿಲ್ಲವಲ್ಲಾ ಎನ್ನುವುದು ಮಾಸ್ತಿಯವರ ಆಕ್ರೋಶ. “ಗಾಂಧಿಯವರ ಹೆಸರನ್ನು ಹೇಳಿದ ಯಾವುದಕ್ಕಾದರೂ ಗೌರವ ಬಂದೀತೆಂಬ ಮಾತು ಕೂಡ ಬರಿಯ ಭ್ರಾಂತಿಯೇನೋ ಎಂದು ಈಗ ತೋರುತ್ತಿದೆ. ಇದಕ್ಕೆ ನಿದರ್ಶನವೆಂದರೆ, ‘ನಮ್ಮ ಜನ ಮುಂದುವರಿಯಬೇಕಾದರೆ ಪ್ರಾಂತ ಭಾಷೆ ಬೆಳೆಯಬೇಕು; ಅದಕ್ಕೆ ಭಾಷಾನುಗುಣ ಪ್ರಾಂತ ರಚನೆ ಆಗಬೇಕು’ ಎಂದಿದ್ದರು ಗಾಂಧಿ. ಅವರು ಜನಗಳ ಭಾಷೆ ಬಳಸಿದ್ದರಿಂದಲೇ ಕಾಂಗ್ರೆಸ್ ಜನತೆಯ ಸಂಸ್ಥೆಯಾಯಿತು” ಎಂದು ವಿವರಿಸುತ್ತಾರೆ. ಜೊತೆಗೆ ಭಾಷಾಪ್ರಾಂತಗಳು ಒಳ್ಳೆಯ ಆಡಳಿತಕ್ಕೆ ಪೂರಕವೆಂದು ಆರು ತಿಂಗಳ ಹಿಂದೆ ಹೇಳಿದ ರಾಜಾಜಿ ಈಗ ಭಾಷಾ ಪ್ರಾಂತದ ಕಲ್ಪನೆ Tribal (ಕೆಳಮಟ್ಟದ್ದು) ಎಂದಿದ್ದಾರೆಂದು ತರಾಟೆಗೆ ತೆಗೆದುಕೊಳ್ಳುತ್ತಾರೆ.
ಕಾಂಗ್ರೆಸ್ ಸಂಸ್ಥೆ ಒಂದು ಧೋರಣೆಯನ್ನು ಒಪ್ಪಿದವರ ಸಂಸ್ಥೆಯಲ್ಲ ಎನ್ನುವುದು ಒಂದಾದರೆ ಉತ್ತರ ಭಾರತದ ನಮ್ಮ ನಾಯಕರು ದಕ್ಷಿಣದ ಜನರ ಕಷ್ಟವನ್ನು ಕಾಣರು ಎಂಬುದು ಜೀವನ ಸಂಪಾದಕರ ಇನ್ನೊಂದು ಆಕ್ಷೇಪ.
ಕೆಂಗಲ್ ಎಚ್ಚರ
ಆ ಹೊತ್ತಿಗೆ ಮೈಸೂರು ರಾಜ್ಯದ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರು ದಕ್ಷಿಣಭಾರತದ ಭಾಷಾ ಪ್ರಾಂತ ನಿರ್ಮಾಣವನ್ನು ಮುಂದಕ್ಕೆ ತಳ್ಳುವುದು ಬೇಡವೆಂದು ಕಾಂಗ್ರೆಸ್ಗೆ ಎಚ್ಚರ ಹೇಳಿದರು; ಆದರೆ ಎಚ್.ಸಿ. ದಾಸಪ್ಪನವರು ಮೈಸೂರಿನ ಬಹುಜನಕ್ಕೆ ಉಳಿದ ಕರ್ನಾಟಕದೊಂದಿಗೆ ಸೇರುವುದು ಇಷ್ಟವಿಲ್ಲ ಎಂದರಂತೆ. ಮೈಸೂರಿನ ಈ ದ್ವಂದ್ವ ಬಹುಕಾಲ ಮುಂದುವರಿಯಿತು. ಅದೇ ಸಂಪಾದಕರ ಟೀಕೆಯ ವಸ್ತುವಾಗುತ್ತದೆ: ಜನಕ್ಕೆ ತಿಳಿವಳಿಕೆ ಕೊಟ್ಟು ಒಂದುಗೂಡುವುದು ಒಳ್ಳೆಯದು ಎಂದು ಹೇಳಬೇಕಾದ ಇಂತಹ ನಾಯಕರು ಬೇರೆಯಾಗಿರುವುದೇ ಒಳ್ಳೆಯದೆಂದು ಹೇಳಿದರೆ ಇಂತಹ ಬಲ್ಲವರ ಮಾತಿಗೆ ಒಪ್ಪುವವರು ಇದ್ದೇ ಇರುತ್ತಾರೆ. ಕರ್ನಾಟಕ ಪ್ರಾಂತ ನಿರ್ಮಾಣ ಆವಶ್ಯಕ ಎನ್ನುವುದು ಇಂತಹ ಹಿರಿಯ ನಾಯಕರಿಗೆ ಮನತಟ್ಟದಿರುವುದು ಅತ್ಯಂತ ವಿಷಾದದ ಸಂಗತಿ. ಬಳ್ಳಾರಿ, ಮಂಗಳೂರಿನ ಕನ್ನಡಿಗರ ಪ್ರತಿನಿಧಿಗಳು ಮದರಾಸಿನ ಶಾಸನಸಭೆಯಲ್ಲಿ ಶೂನ್ಯಾಧಿಕಾರಿಗಳಾಗಿರುವುದು ಈ ನಮ್ಮ ಮಿತ್ರರಿಗೆ ಇಷ್ಟವೆ? ಉತ್ತರಕರ್ನಾಟಕದ ನಾಲ್ಕು ಜಿಲ್ಲೆಯ ಪ್ರತಿನಿಧಿಗಳು ಮುಂಬಯಿ ಶಾಸನಸಭೆಯಲ್ಲಿ ಯಾವ ಲೆಕ್ಕಕ್ಕೂ ಬಾರದೆ ಜೋಲಾಡುತ್ತಿರುವುದು ಇವರಿಗೆ ಪ್ರಿಯವಾಗಿದೆಯೆ? ಈ ಕನ್ನಡ ನಾಯಕರು ಆ ಕನ್ನಡ ಜನಕ್ಕೆ ಸರಿಯಾದ ಆಡಳಿತ ದೊರೆಯುವ ಏರ್ಪಾಡನ್ನು ಮಾಡಬೇಡವೆ? ಮಡಕಶಿರಾ, ಕಲ್ಯಾಣದುರ್ಗ, ಹಿಂದೂಪುರ, ಕೊಳ್ಳೇಗಾಲ, ಗೋಪಿಶೆಟ್ಟಿಪಾಳ್ಯ, ನೀಲಗಿರಿ ಪ್ರದೇಶಗಳ ಲಕ್ಷ ಲಕ್ಷ ಕನ್ನಡ ಜನಕ್ಕೆ ಕನ್ನಡದಲ್ಲಿ ವಿದ್ಯೆ ಆಡಳಿತ ದೊರೆಯಬೇಡವೆ? ಎಂದು ಕೇಳುತ್ತಾರೆ.
ಆಗ ಇನ್ನೊಂದು ಸಮಸ್ಯೆ ಎದುರಾಗುತ್ತದೆ. ಪೊಟ್ಟಿ ಶ್ರೀರಾಮುಲು ಅವರ ಬಲಿದಾನದಿಂದ ಆಂಧ್ರಪ್ರದೇಶ ನಿರ್ಮಾಣಕ್ಕೆ ವೇಗ ದೊರೆಯುತ್ತದೆ. ಅದರಿಂದ ಕರ್ನಾಟಕ ಒಂದಾಗಬೇಕು ಎನ್ನುವುದರ ಜೊತೆಗೆ ಹೊಸದಾಗಿ ನಿರ್ಮಾಣವಾಗುವ ಆಂಧ್ರಪ್ರಾಂತದಲ್ಲಿ ಕನ್ನಡದ ಯಾವ ಭಾಗವೂ ಒಳಪಡಕೂಡದು ಎನ್ನುವ ತುರ್ತು ಸೇರಿಸಿಕೊಳ್ಳುತ್ತದೆ. ಏನೋ ಒಂದು ಆಸ್ತಿಯೆಂಬ ಭ್ರಾಂತಿಯಲ್ಲಿ ಆಸೆಪಟ್ಟು ಆಂಧ್ರದ ಜನರು ಕನ್ನಡ ಭೂಭಾಗವನ್ನು ಆಂಧ್ರದಲ್ಲಿ ಸೇರಿಸಿಕೊಳ್ಳುವುದು ಅವರಿಗೆ ಶುಭವಲ್ಲ ಎಂದು ಸಂಪಾದಕರು ಎಚ್ಚರಿಸುತ್ತಾರೆ.
ಪ್ರಾಂತ ನಿರ್ಮಾಣದ ಸಂದರ್ಭದಲ್ಲಿ ಆಂಧ್ರ ಕರ್ನಾಟಕದ ಗಡಿನಾಡಿನ ಹಂಚಿಕೆಗೆ ತೊಡಗುತ್ತದೆ. ಆ ಕುರಿತು ತಮ್ಮ ಅಭಿಪ್ರಾಯವನ್ನು ಸೂಚಿಸಬೇಕೆಂದು ಕರ್ನಾಟಕ ಏಕೀಕರಣ ಸಮಿತಿ ನ್ಯಾ. ವಾಂಚೂ ಅವರಲ್ಲಿ ಅವಕಾಶ ಬೇಡಿತು. ಆದರೆ ಅವರು ಸಮಿತಿಯ ನಿಯೋಗವನ್ನು ಕಾಣಲು ಒಪ್ಪಲಿಲ್ಲವೆಂದು ಆಕ್ಷೇಪಿಸಲಾಗಿದೆ. ಅದಕ್ಕೆ ಕೊಟ್ಟ ಕಾರಣ ಕೂಡ ಸಮರ್ಪಕವಾಗಿರಲಿಲ್ಲವಂತೆ. ಆಗ ಬಳ್ಳಾರಿ ಜಿಲ್ಲಾ ಬೋರ್ಡ್ ಜಿಲ್ಲೆ ಹಿಂದಿನಂತೆ ಮದರಾಸ್ ಪ್ರಾಂತದಲ್ಲೇ ಉಳಿದಿರಬೇಕೆಂದು ನಿರ್ಧರಿಸಿದ್ದು ಆ ಅಭಿಪ್ರಾಯವನ್ನು ನಿಜಲಿಂಗಪ್ಪನವರ ನೇತೃತ್ವದ ನಿಯೋಗವು ಸಮಿತಿಗೆ ಮುಟ್ಟಿಸಿತು.
ಆಗ ಸಂಜೀವ ರೆಡ್ಡಿ ಅವರು “ಸದ್ಯಕ್ಕೆ ಬಳ್ಳಾರಿ ಜಿಲ್ಲೆ ಒಟ್ಟಾಗಿ ಆಂಧ್ರದಲ್ಲಿ ಸೇರಬಹುದು. ಮುಂದೆ ಕರ್ನಾಟಕ ಪ್ರಾಂತ ಆದಾಗ ಜಿಲ್ಲೆಯ ಕನ್ನಡ ಭಾಗವನ್ನು ಅದಕ್ಕೆ ಬಿಟ್ಟುಕೊಡಬಹುದು” ಎಂಬ ಸಲಹೆಯನ್ನು ನೀಡಿದರು. ಅದಕ್ಕೆ ಪತ್ರಿಕೆ “ಯಾವ ಪ್ರಾಂತದಲ್ಲಾಗಲಿ, ಒಂದು ಭಾಷೆಯನ್ನಾಡುವ ಬಹುಜನರೊಂದಿಗೆ ಮತ್ತೊಂದು ಭಾಷೆಯನ್ನಾಡುವ ಅಲ್ಪಸಂಖ್ಯೆಯ ಜನ ಬೆರೆಯುವುದು ಈ ಅಲ್ಪ ಜನಕ್ಕೆ ಅನುಕೂಲವಲ್ಲ. ಇಪ್ಪತ್ತರಲ್ಲಿ ಹತ್ತೊಂಬತ್ತರಷ್ಟು ಜನ ತೆಲುಗರಾಗುವ ಆಂಧ್ರದಲ್ಲಿ ಇಪ್ಪತ್ತರಲ್ಲಿ ಒಬ್ಬನಾಗುವ ಕನ್ನಡಿಗ ಎಷ್ಟು ಕ್ಷೇಮವನ್ನು ಸಾಧಿಸಬಹುದು?” ಎಂದು ಕೇಳುತ್ತದೆ.
ಬಳ್ಳಾರಿ ಯಾರಿಗೆ?
ಸೀಮಾ ಸಮಿತಿ ಏರ್ಪಟ್ಟು ಬಳ್ಳಾರಿ ಮತ್ತು ಅನಂತಪುರ ಜಿಲ್ಲೆಗಳ ಎಷ್ಟು ಭಾಗ ಆಂಧ್ರಕ್ಕೆ ಸೇರಬೇಕು; ಯಾವ ಭಾಗ ಕರ್ನಾಟಕಕ್ಕೆ ಉಳಿಯಬೇಕೆಂದು ನಿರ್ಧರಿಸಲಿ. ಅದುವರೆಗೆ ಈ ಎರಡೂ ಜಿಲ್ಲೆ ಮದರಾಸ್ ಪ್ರಾಂತದಲ್ಲಿರಲಿ. ಮಡಕಶಿರಾ, ಕಲ್ಯಾಣದುರ್ಗ ಮತ್ತು ಹಿಂದೂಪುರ ತಾಲೂಕು ಬಿಟ್ಟು ಉಳಿದ ಭಾಗ ಆಂಧ್ರಕ್ಕೆ ಸೇರಲಿ. ಇಡೀ ಬಳ್ಳಾರಿ ಜಿಲ್ಲೆಯನ್ನು ಆಂಧ್ರಕ್ಕೆ ಸೇರಿಸುವುದು ಬೇಡ ಎನ್ನುವ ಸಂಪಾದಕರು, ಪೊಟ್ಟಿ ಶ್ರೀರಾಮುಲು ಸಾಯದೆ ಆಂಧ್ರ ಪ್ರಾಂತ ನಿರ್ಮಾಣವಾಗಲಿಲ್ಲ; ಅದೇ ರೀತಿ ನಮ್ಮ ಸರ್ಕಾರದ ದಡ್ಡತನಕ್ಕೆ ಯಾವ ಕನ್ನಡಿಗನೂ ಬಲಿಯಾಗದಿರಲಿ – ಎಂದು ಚುಚ್ಚುತ್ತಾರೆ.
ಮೈಸೂರು ಕರ್ನಾಟಕ ಪ್ರಾಂತದಲ್ಲಿ ಬೆರೆಯಲು ಒಪ್ಪುವುದೇ ಎನ್ನುವ ಪ್ರಶ್ನೆಗೆ ಎರಡು ಉತ್ತರ: ಒಪ್ಪುತ್ತದೆ ಮತ್ತು ಇಲ್ಲ. ಇದರಲ್ಲಿ ಇಲ್ಲ ಎಂಬುದನ್ನು ನೆಹರು ಬೆಂಬಲಿಸುತ್ತಾರೆ ಎನ್ನುವ ಒಂದು ಮಾತು ಬರುತ್ತದೆ. ಅದಲ್ಲದೆ ಆ ಹಂತದಲ್ಲಿ ಕೇಂದ್ರಸರ್ಕಾರ ಜಾರಿಮಾಡಲು ಹೊರಟ ಪಂಚವಾರ್ಷಿಕ ಯೋಜನೆಗೆ ಭಾಷಾನುಗುಣ ಪ್ರಾಂತಗಳು ಅಡ್ಡಿ ಆಗುತ್ತವೆಂದು ಕೂಡ ನೆಹರು ಅಭಿಪ್ರಾಯಪಡುತ್ತಿದ್ದಾರೆಂದು ಉಲ್ಲೇಖಿಸುವ ಸಂಪಾದಕೀಯ ಅದನ್ನು ಅಲ್ಲಗಳೆದು, ಕರ್ನಾಟಕ ರಚನೆ ಆಗಿದ್ದರೆ ಪಂಚವಾರ್ಷಿಕ ಯೋಜನೆಗೆ ಅನುಕೂಲವಾಗುತ್ತದೆ ಎಂದು ಸಮರ್ಥಿಸುತ್ತದೆ; ಮತ್ತು ಕಾಂಗ್ರೆಸ್ ಹೌದಯ್ಯಗಳ ಕೂಟ ಆಗಬಾರದೆಂದು ಎಚ್ಚರಿಸುತ್ತದೆ.
ಆಂಧ್ರಪ್ರದೇಶ ನಿರ್ಮಾಣವಾಗುವಾಗ ಬಳ್ಳಾರಿ ಜಿಲ್ಲೆ ಮದರಾಸ್ ಪ್ರಾಂತದಲ್ಲೇ ಉಳಿಯಬೇಕು. ಅದನ್ನು ಮದರಾಸಿನಿಂದ ಆಳುವುದು ಕಷ್ಟ ಎನ್ನುವುದಾದರೆ ಅದನ್ನು ಮೈಸೂರು ಸಂಸ್ಥಾನಕ್ಕೆ ಸೇರಿಸಬೇಕೆಂದು ಬಳ್ಳಾರಿಯ ಜನ ಬಯಸುತ್ತಾರೆ ಎನ್ನುವ ಅಭಿಪ್ರಾಯವನ್ನು ಮಾಜಿ ರೆವಿನ್ಯೂ ಕಮಿಷನರ್ ಒಬ್ಬರು ವಿರೋಧಿಸುವುದನ್ನು ಪತ್ರಿಕೆ ಉಲ್ಲೇಖಿಸುತ್ತದೆ: “ಈ ಯಾವ ಮಾತೂ ಮೈಸೂರಿಗೆ ಇಷ್ಟವಿಲ್ಲ. ಮೈಸೂರು ಸಂಸ್ಥಾನವು ತಾನು ಪ್ರತ್ಯೇಕವಾಗಿ ಬೆಳೆದುಬಂದಿದೆ; ಕೆಲವು ವಿಶಿಷ್ಟ ಗುಣಗಳನ್ನು ಪಡೆದಿದೆ. ಅದನ್ನು ಕಳೆದುಕೊಳ್ಳಲು ನಾವು ಸಮ್ಮತಿಸುವುದಿಲ್ಲ. ಸದ್ಯ ನಮ್ಮ ಪಾಡಿಗೆ ನಮ್ಮನ್ನು ಬಿಡಿ” ಎಂದಿದ್ದಾರೆ. ಅದಕ್ಕೆ ಆಕ್ಷೇಪಿಸುತ್ತಾ, ಆಂಗ್ಲರು ಆಳುತ್ತಿದ್ದಾಗ ಮೈಸೂರು ಸಂಸ್ಥಾನವು ತಾನು ಪ್ರತ್ಯೇಕ ಎಂದುಕೊಂಡದ್ದು ಸರಿ ಇದ್ದಿರಬಹುದು. ಆದರೆ ಈಗ ರಾಷ್ಟ್ರ ವ್ಯಕ್ತಿತ್ವ ಭರತ ವರ್ಷದ್ದು. ಯಾವ ಒಂದು ಸಂಸ್ಥಾನವೂ ಪ್ರತ್ಯೇಕವಾಗಿ ಉಳಿದಿಲ್ಲ. ಮೈಸೂರು ತಾನು ಪ್ರತ್ಯೇಕ ಎಂದುಕೊಳ್ಳುವುದು ಭರತವರ್ಷದ ಏಕತೆಗೆ ವಿರುದ್ಧವಾದ ಒಂದು ಭಾವನೆ ಎನ್ನುತ್ತದೆ; ಮತ್ತು ಮದರಾಸಿನಲ್ಲಿ ಕನ್ನಡಿಗ ತಮಿಳ ತೆಲುಗ ಮಲೆಯಾಳಿ ಜೊತೆಯಾಗಿ ಇರಬಹುದಂತೆ. ಕರ್ನಾಟಕದಲ್ಲಿ ಮೈಸೂರು ಕನ್ನಡಿಗ, ಮಂಗಳೂರು ಕನ್ನಡಿಗ, ಧಾರವಾಡದ ಕನ್ನಡಿಗ ಒಂದಾಗಿ ಬಾಳುವುದು ಕೆಡುಕಾದೀತೆ ಎಂದು ಪ್ರಶ್ನಿಸುತ್ತದೆ.
ಮುಂದುವರಿದು “ಏನು ಮೈಸೂರಿನ ಅಂಥ ವಿಶಿಷ್ಟ ಗುಣ? ಟಿಪ್ಪೂ ಸುಲ್ತಾನನಿಗಾಗಿ ಹಾಕಿದ ನಿಲುವಂಗಿ, ಆಂಗ್ಲ ಕಮಿಷನರಿಗಾಗಿ ಹಾಕಿದ ಸೂಟ್ಹ್ಯಾಟ್ ಅಲ್ಲವೆ? ಜೊತೆಗೆ ಬೇಕಾದರೆ ಅರಮನೆಗಾಗಿ ಧರಿಸಿದ ಹೊರಗಿನ ಸ್ವಲ್ಪ ನಯ, ಒಂದು ರೀತಿಯ ವೇಷಭೂಷಣ! ಇದೆಲ್ಲ ಏನು ಮಹಾ ಪದಾರ್ಥ?” ಎಂದು ಸ್ವಲ್ಪ ಕಹಿಯಾಗಿಯೇ ಹೇಳುತ್ತಾರೆ.
ಆಂಧ್ರದ ಗಡಿ
ಮೇ ೧೯೫೩ರ ಸಂಚಿಕೆಯ ಸಂಪಾದಕೀಯ ಆಂಧ್ರ ಪ್ರಾಂತ ರಚನೆಯ ಬಗ್ಗೆ ಹೇಳುತ್ತದೆ: “ಬಳ್ಳಾರಿ ಅನಂತಪುರ ಜಿಲ್ಲೆಗಳ ಕನ್ನಡ ಪ್ರದೇಶಗಳ ಕುರಿತು ಯಾವ ನಿರ್ಣಯ ಆಗಬಹುದೋ ಎಂಬುದು ಚಿಂತೆಯ ವಿಷಯವಾಗಿತ್ತು. ಈ ಭಾಗ ಆಂಧ್ರದಲ್ಲಿ ಸೇರಬಾರದೆಂದು ಕೇಂದ್ರಸರ್ಕಾರ ಒಪ್ಪಿದಂತೆ ಕಾಣುತ್ತಿದೆ. ಬಳ್ಳಾರಿ ಜಿಲ್ಲೆಯ ಪಶ್ಚಿಮದ ಆರು ತಾಲೂಕುಗಳು ಮೈಸೂರಿಗೆ ಸೇರುವಂತಿದೆ. ಕನ್ನಡ ಪ್ರದೇಶ ಇಷ್ಟೇ ಅಲ್ಲ; ಬಳ್ಳಾರಿ, ಆದವಾನಿ ತಾಲೂಕುಗಳ ಬಹಳ ಭಾಗ, ಅನಂತಪುರ ಜಿಲ್ಲೆಯ ಮಡಕಶಿರಾ, ಕಲ್ಯಾಣದುರ್ಗ, ಹಿಂದೂಪುರ ತಾಲೂಕುಗಳ ಬಹುಭಾಗ ಮೈಸೂರಿನೊಂದಿಗೆ ಸೇರಬೇಕಾಗುತ್ತದೆ. ಬಳ್ಳಾರಿ ಪಟ್ಟಣದಲ್ಲಿ ತೆಲುಗರ ಸಂಖ್ಯೆ ದೊಡ್ಡದಾಗಿದೆ ನಿಜ. ಆಡಳಿತ, ವಿದ್ಯೆ, ವೈದ್ಯ, ವ್ಯಾಪಾರ ಇವುಗಳ ಕಾರಣದಿಂದ ಬಹುಜನ ಆಂಧ್ರರು ಬಂದು ನೆಲಸಿದ್ದಾರೆ. ಈ ಕಾರಣದಿಂದ ಬಳ್ಳಾರಿ ಆಂಧ್ರದ ಭಾಗ ಆಗಲಾರದು. ಕೇಂದ್ರಸರ್ಕಾರ ಬಳ್ಳಾರಿ ತಾಲೂಕಿನ ಭವಿಷ್ಯವನ್ನು ನಿರ್ಧರಿಸದೆ ಮುಂದೆ ಹಾಕಿದೆ. ಇದರಿಂದ ನಮ್ಮ ಜನ ಕಳವಳಗೊಂಡಿದ್ದಾರೆ. ವ್ಯಾಕುಲದ ರಭಸದಲ್ಲಿ ತರುಣರು ರೈಲುಗಳನ್ನು ತಡೆಯುವುದು, ಟೆಲಿಗ್ರಾಫ್ ತಂತಿಗಳನ್ನು ಹರಿಯುವುದು ಮುಂತಾದ ಅಸಹಕಾರ ಕಾರ್ಯಗಳಲ್ಲಿ ತೊಡಗಿದ್ದಾರೆ. ಈ ಸಂದರ್ಭದಲ್ಲಿ ಅಸಹಕಾರ ಸರಿಯಲ್ಲ. ಈಗ ನಾಯಕರಾದವರು ಕೇಂದ್ರಸರ್ಕಾರದಲ್ಲಿ ತಕ್ಕ ಮನವಿಗಳನ್ನು ಮಾಡಿ ಯೋಗ್ಯವಾದ ಆಜ್ಞೆ ಹೊರಡುವಂತೆ ಮಾಡುವುದೊಂದೇ ಸರಿ.
ಗ್ರಾಮ ಗ್ರಾಮವಾಗಿ ಎಲ್ಲೆಯನ್ನು ನಿರ್ಧರಿಸಲು ಒಂದು ಸೀಮಾಸಮಿತಿ ಕೂಡ ಒಡನೆಯೇ ನೇಮಕವಾಗಬೇಕು. ಇದು ಆದೀತು ಎಂಬ ಸೂಚನೆ ಕಾಣುತ್ತಿದೆ ಎಂದು ವಿವರಿಸಲಾಗಿದೆ.
ಬಳ್ಳಾರಿ ಜಿಲ್ಲೆಯ ಆರು ತಾಲೂಕುಗಳನ್ನು ಮೈಸೂರು ಪ್ರಾಂತಕ್ಕೆ ಸೇರಿಸಬೇಕೆಂಬ ಕೇಂದ್ರದ ನಿರ್ಧಾರವನ್ನು ಮೈಸೂರಿಗೆ ತಿಳಿಸಿಲ್ಲ; ಆದರೆ ಈ ನಿರ್ಧಾರದ ಬಗ್ಗೆ ಬಳ್ಳಾರಿ ಜನರಿಗೆ ಸಮಾಧಾನವಾಗಿದೆ. ಚಿತ್ರದುರ್ಗ, ಜಗಳೂರು, ಹರಪನಹಳ್ಳಿ, ಹೊಸಪೇಟೆಗಳೆಲ್ಲ ಮೈಸೂರಿಗೆ ಸೇರಲಿವೆ. ಇನ್ನು ದಕ್ಷಿಣಕನ್ನಡ ಜಿಲ್ಲೆ, ಕೊಳ್ಳೇಗಾಲ ಮುಂತಾದವನ್ನು ಮೈಸೂರಿಗೆ ಸೇರಿಸುವ ಬಗ್ಗೆ ಕನ್ನಡದ ನಾಯಕರು ಕೇಂದ್ರ ಸರ್ಕಾರದ ಮುಂದೆ ಧ್ವನಿ ಎತ್ತಬೇಕೆಂದು ಸಂಪಾದಕ ಮಾಸ್ತಿ ಸಲಹೆ ನೀಡುತ್ತಾರೆ.
೧೯೫೩ರ ಮಧ್ಯದ ಹೊತ್ತಿಗೆ ಕೇಂದ್ರಸರ್ಕಾರ ಬಳ್ಳಾರಿ ತಾಲೂಕು ಮತ್ತು ಪಟ್ಟಣದ ಬಗ್ಗೆ ಪರಿಶೀಲಿಸಬೇಕೆಂದು ನ್ಯಾ. ಮಿಶ್ರಾ ಅವರನ್ನು ನೇಮಿಸಿತು. ಪಟ್ಟಣದಲ್ಲಿ ಕನ್ನಡಿಗರು ಮತ್ತು ತೆಲುಗರು ಸಮಾನವಾಗಿದ್ದಾರೆ; ಆದರೆ ಸುತ್ತಲಿನ ಹಳ್ಳಿಗಳು ಸೇರಿದಂತೆ ತಾಲೂಕಿನಲ್ಲಿ ಕನ್ನಡಿಗರು ಜಾಸ್ತಿ ಇರುವ ಕಾರಣ ಇದು ಕರ್ನಾಟಕಕ್ಕೆ ಸೇರಬೇಕೆಂದು ನ್ಯಾ. ಮಿಶ್ರಾ ಅಭಿಪ್ರಾಯ ನೀಡಿದರು. ಅದಕ್ಕೆ ಕೇಂದ್ರ ಸರ್ಕಾರ ಒಪ್ಪಿತು.
ಮೈಸೂರಿನ ತಕರಾರು
ಕರ್ನಾಟಕ ಪ್ರಾಂತದ ಭಾಗವಾಗಲು ಮೈಸೂರು ಒಪ್ಪುವುದಿಲ್ಲವೆಂದು ನೆಹರು ಪುನರುಚ್ಚರಿಸಿದ್ದನ್ನು ಉಲ್ಲೇಖಿಸುವ ಸಂಪಾದಕರು, ಅದು ಸುಳ್ಳು; ಮೈಸೂರನ್ನು ಕೇಂದ್ರಸರ್ಕಾರ ಕೇಳಿಲ್ಲ. ಜನ ಕೂಡ ಕೆಲವರು ಮಾತ್ರ ಅದನ್ನು ವಿರೋಧಿಸುತ್ತಾರೆ ಎಂದು ಸ್ಪಷ್ಟಪಡಿಸುತ್ತಾರೆ.
ಕನ್ನಡ ನಾಡು ಒಂದಾಗಿ ಬಾಳಬೇಕೆಂದು ಹೊರಟ ಹೊತ್ತಿನಲ್ಲಿ ಉಳಿದ ಕರ್ನಾಟಕ ಮೈಸೂರು ಕಡೆಗೆ ಮುಖಮಾಡಿ ನೀನು ಏನು ಕೇಳುತ್ತೀಯೆ? ಎಂದು ಕೇಳಿತು. ಮೈಸೂರು ಬಾ, ನಾನು ನಿನ್ನ ಜೊತೆಗಿದ್ದೇನೆ ಎಂದು ಹೇಳಿ ೧೫ ತುಂಡಾಗಿದ್ದ ಕರ್ನಾಟಕವನ್ನು ಒಂದುಗೂಡಿಸುವ ಕೆಲಸದಲ್ಲಿ ತೊಡಗಿತು. ೩೦ ವರ್ಷ ಈ ಕೆಲಸ ಮಾಡಿದ ಮೈಸೂರಿನ ಮಕ್ಕಳು ಮೈಸೂರಲ್ಲವೆ? ಇವರು ಮೈಸೂರಲ್ಲದಿದ್ದರೆ ಬೇರೆ ಯಾರು ಮೈಸೂರು? ೩೫ ವರ್ಷ ಕನಸಿನಲ್ಲಿ ಬಯಸಿದ ಒಂದು ಶುಭ ಕೈಸೇರಿ ಬಂದ ಹೊತ್ತಿನಲ್ಲಿ ಮೈಸೂರು ಉಳಿದ ಕರ್ನಾಟಕಕ್ಕಿಂತ ಶ್ರೇಷ್ಠ, ಅದರೊಂದಿಗೆ ಬೆರೆತರೆ ಇದಕ್ಕೆ ಕೆಡುಕಾಗುತ್ತದೆ ಎಂದು ಹೇಳುವವರು ಮೈಸೂರಿನ ಇಂದಿನವರೆಗಿನ ನಡತೆಯನ್ನು ಬಲ್ಲವರೆ? ನಮ್ಮಲ್ಲಿ ಇಂಥ ಜನ ಇದ್ದಾರಲ್ಲಾ ಎನ್ನುವುದು ಸಂತಾಪಕರ. ಜೊತೆಯ ಕನ್ನಡಿಗರೊಡನೆ ಬೆರೆತು ಮೈಸೂರು ಕೆಡುವುದು ಸಾಧ್ಯವೆ? – ಹೀಗೆ ಸಂಪಾದಕರ ವಿಚಾರಲಹರಿ ಹರಿಯುತ್ತದೆ.
ಡಿವಿಜಿ ವಿಭಿನ್ನ ನಿಲವು
ಕನ್ನಡ ನವೋದಯ ಸಾಹಿತ್ಯದ ಎರಡು ಶೃಂಗಗಳಾದ ಮಾಸ್ತಿ ಮತ್ತು ಡಿ.ವಿ.ಜಿ. ಈ ವಿಷಯದಲ್ಲಿ (ಮೈಸೂರು ಕರ್ನಾಟಕದೊಂದಿಗೆ ಸೇರುವುದು) ವಿಭಿನ್ನ ನಿಲವು ತಳೆದರೆಂಬುದು ಕುತೂಹಲಕರ. ಮಾಸ್ತಿ ತಮ್ಮ ಸಂಪಾದಕೀಯದಲ್ಲಿ ಡಿ.ವಿ. ಗುಂಡಪ್ಪನವರ ನಿಲವನ್ನು ನೇರವಾಗಿ ಪ್ರಸ್ತಾಪಿಸಿ ತಮ್ಮ ಆಗ್ರಹವನ್ನು ಮುಂದಿಡುತ್ತಾರೆ: ಮೈಸೂರು ಉಳಿದ ಕರ್ನಾಟಕದೊಂದಿಗೆ ಬೆರೆತು ಒಂದು ರಾಷ್ಟ್ರ (ಪ್ರಾಂತ) ಆಗುವುದು ಸದ್ಯಕ್ಕೆ ಬೇಡ ಎಂದು ಹೇಳುವ ನಾಡ ಹಿರಿಯರಲ್ಲಿ ಶ್ರೀಮಾನ್ ಡಿ.ವಿ. ಗುಂಡಪ್ಪನವರು ಒಬ್ಬರು. ತಿಂಗಳ ಹಿಂದೆ ಹೊರಡಿಸಿದ ಹೇಳಿಕೆಯಲ್ಲಿ ಈ ಅಭಿಪ್ರಾಯವನ್ನು ಪ್ರಕಟಿಸಿದ್ದಾರೆ. ಇವರು ಈಗ ಪ್ರಕಟಿಸಿರುವ ಆತಂಕಗಳು ಜನತೆಯ ಗಮನಕ್ಕೆ ಈ ಮೊದಲೇ ಬಂದಿವೆ. ಜನತೆ ಈಗ ಇರುವ ವ್ಯವಸ್ಥೆಯನ್ನು ತಪ್ಪಿಸಿ ಹೊಸ ವ್ಯವಸ್ಥೆಯನ್ನು ಮಾಡಹೊರಟರೆ ಅಪಾಯ ಒದಗಬಹುದು; ಇದುವರೆಗಿನ ವ್ಯವಸ್ಥೆಯಲ್ಲಿ ಹೇಗೋ ಒಂದು ರೀತಿಯಲ್ಲಿ ನಿಂತಿರುವ ಜನಮನ ಹೊಸ ವ್ಯವಸ್ಥೆಯಲ್ಲಿ ಹೊಸ ಹೊರೆ ಒತ್ತಡಗಳಿಗೆ ಸಿಕ್ಕಿ ಕ್ಲೇಶಕ್ಕೆ ಗುರಿಯಾಗಬಹುದು ಎನ್ನುವುದು. ಅದಕ್ಕೆ ಇವರು ಸೂಚಿಸಿರುವ ದಾರಿ, ಉಳಿದೆಲ್ಲ ಕರ್ನಾಟಕ ಒಂದಾಗಲಿ, ಮೈಸೂರು ಸದ್ಯಕ್ಕೆ ಬೇರೆಯಾಗಿರಲಿ, ಕೆಲವು ಕಾಲ ಕಳೆದ ಮೇಲೆ ಎರಡೂ ಸೇರಿ ಒಂದು ರಾಷ್ಟ್ರ (ಪ್ರಾಂತ) ಆಗುವುದಾದರೆ ಆಗಲಿ, ಎನ್ನುವುದು… ಗುಂಡಪ್ಪನವರ ಲೇಖನದಲ್ಲಿ ಹೊಸ ಹೊರೆ ಒತ್ತಡಗಳ ಸ್ವರೂಪ ಏನಿರಬಹುದು ಎಂಬುದು ಕಾಣುವುದಿಲ್ಲ. ಕಷ್ಟದ ಸ್ವರೂಪ ತಿಳಿಯದೆ ಅದಕ್ಕೆ ನಾವು ಹೆದರಲು ಮೊದಲು ಮಾಡಿದರೆ ಜನತೆ ಯಾವ ವಿಷಯದಲ್ಲೂ ಮುಂದಕ್ಕೆ ಹೆಜ್ಜೆಯಿಕ್ಕುವಂತಿಲ್ಲ ಎನ್ನುತ್ತಾರೆ.
ಇದಕ್ಕಿಂತ ಸ್ಪಷ್ಟವಾದ ಕೆಲವು ಆತಂಕಗಳ ಕಾರಣದಿಂದ ಶ್ರೀಮಾನ್ ಗುಂಡಪ್ಪನವರ ಪಕ್ಷದ ರಾಜಕೀಯ ನಾಯಕರು ಭರತವರ್ಷಕ್ಕೆ ಒಡನೆಯೇ ಪೂರ್ಣ ಸ್ವಾತಂತ್ರ್ಯ ಬೇಡ ಎಂದೂ ಹೇಳಿದರು. ಅವರ ಭಾವನೆ ತಪ್ಪು ಎಂದು ನಾವು ಹೇಳಲಾರೆವು. ಆದರೂ ಬೇರೆಯ ಪಕ್ಷದ ನಾಯಕರು, ಎಷ್ಟೇ ಕ್ಷೇಮವಾದ ದಾಸ್ಯಕ್ಕಿಂತ, ಸ್ವಲ್ಪ ಅಪಾಯ ಒದಗೀತೋ ಎಂಬ ಭಯದಿಂದ ಬೆರೆತಿದ್ದರೂ ಸ್ವಾತಂತ್ರ್ಯ ಒಳಿತು ಎಂದು ನಿಶ್ಚಯಿಸಿದರು. ಜನತೆ ಅವರ ಮಾತಿಗೆ ಒಪ್ಪಿತು. ಇಂದು ಸ್ವತಂತ್ರವಾಗಿದೆ ಮುಂತಾಗಿ ತಮ್ಮ ವಾದವನ್ನು ಮಂಡಿಸುತ್ತಾರೆ. ಕೊಳ್ಳೇಗಾಲ, ಹೊಸೂರು ಮುಂತಾದ ಮೈಸೂರಿನ ಅಂಚಿನ ಕನ್ನಡನಾಡು ಮೈಸೂರು ಸೇರದ ಕರ್ನಾಟಕದಲ್ಲಿ ಹೇಗೆ ಒಂದು ಭಾಗವಾಗಬಹುದು? ಅವರು ಹುಬ್ಬಳ್ಳಿಗೋ ಧಾರವಾಡಕ್ಕೋ ಹೋಗಲು ಒಪ್ಪಬೇಕೇ? ಮೈಸೂರಿನ ಪೂರ್ವದ, ದಕ್ಷಿಣದ, ಪಶ್ಚಿಮದ ಕನ್ನಡ ಜನ ಮದರಾಸಿನಲ್ಲೇ ಇದ್ದುಕೊಳ್ಳಲಿ ಎನ್ನುವುದು ಎಷ್ಟು ಉಚಿತ? – ಎಂದು ನಾವು ಯೋಚಿಸಬೇಕು ಎನ್ನುತ್ತಾರೆ. ಕನ್ನಡ ನಾಡು ಎಂದು ನಲವತ್ತು ವರ್ಷದಿಂದ ಕೆಲಸ ಮಾಡಿಕೊಂಡು ಬಂದಿರುವ ಮೈಸೂರಿನ ಪ್ರಮುಖರು ಇಂಥ ಮನೋಧರ್ಮವನ್ನು ಪ್ರಕಟಿಸಿದರೆ ಅದು ನಮ್ಮ ದುರದೃಷ್ಟ, ಕನ್ನಡದ ದುರದೃಷ್ಟ ಎಂದು ಬೇಸರ ವ್ಯಕ್ತಪಡಿಸುತ್ತಾರೆ.
ಕೆಂಗಲ್ರಿಗೆ ಮನವಿ
ಮೈಸೂರು ಕರ್ನಾಟಕ ಪ್ರಾಂತ ನಿರ್ಮಾಣದಲ್ಲಿ ಮುಖ್ಯ ಪಾತ್ರ ವಹಿಸಬೇಕು, ಮೈಸೂರು ಕಾಂಗ್ರೆಸ್ ಪಕ್ಷ ಒಂದು ಸಮ್ಮೇಳನ ಕರೆದು ಮುಂದುವರಿಯಬೇಕೆಂದು ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರಿಗೆ ಶಿಷ್ಟಮಂಡಲದ ವತಿಯಿಂದ ಮನವಿ ಸಲ್ಲಿಸಲಾಯಿತು. ಅವರು ಈ ವಿಷಯದಲ್ಲಿ ತಮಗೆ ಒಪ್ಪಿಗೆ ಉಂಟು; ಪಕ್ಷದ ತಮ್ಮ ಜೊತೆಯ ಇತರರ ಅಭಿಪ್ರಾಯ ತಿಳಿಯುವುದಾಗಿ ಹೇಳಿದರು.
ಆ ಹೊತ್ತಿಗೆ ಪ್ರಕಟವಾದ ಡಿಲಿಮಿಟೇಷನ್ ಸಮಿತಿಯ ವರದಿಯು ಕನ್ನಡಿಗರು ತಮ್ಮ ಸಂಖ್ಯೆಗೆ ಅನುಗುಣವಾದ ಪ್ರಭಾವ ತೋರುವುದಕ್ಕೆ ಪ್ರಾಂತ ನಿರ್ಮಾಣವು ಆವಶ್ಯಕ ಎನ್ನುವ ಮೂಲಕ ಕರ್ನಾಟಕ ಬೇಕೆಂಬುದಕ್ಕೆ ಹೊಸ ಪ್ರಮಾಣವನ್ನು ಒದಗಿಸಿತು. ಕೇಂದ್ರದ ಪ್ರತಿನಿಧಿ ಸಭೆಯಲ್ಲಿ (ಲೋಕಸಭೆ) ಆಂಧ್ರದ ೨೯ ಪ್ರತಿನಿಧಿಗಳಿರುತ್ತಾರೆ. ಕರ್ನಾಟಕದ ಪ್ರತಿನಿಧಿಗಳೆಂದು ಒಂದು ಸಂಖ್ಯೆ ಇಲ್ಲ. ಮೈಸೂರಿಗೆ ಕೊಟ್ಟ ಸಂಖ್ಯೆ ೧೩. ಕೊಡಗಿಗೆ ಒಂದು. ಮುಂಬಯಿ, ಮದಾರಸಿನ ಕನ್ನಡಿಗರು ಆ ಪ್ರಾಂತಗಳ ಸಂಖ್ಯೆಯಲ್ಲಿ ಸೇರಿಹೋಗಿದ್ದಾರೆ. ಕರ್ನಾಟಕವಾದರೆ ೨೬-೨೯ ಪ್ರತಿನಿಧಿಗಳಾಗಬಹುದು. ಆ ಮೂಲಕ ಕನ್ನಡಿಗರಿಗೆ ರಾಜಕೀಯ ಜೀವನದಲ್ಲಿ ಸರಿಯಾದ ಸ್ಥಾನ ದೊರೆಯಬಹುದು. ಇದನ್ನು ಮೈಸೂರಿನ ನಾಯಕರು ಗ್ರಹಿಸಬೇಕು – ಎನ್ನುತ್ತದೆ ಜೀವನ ಸಂಪಾದಕೀಯ.
ತೆಲುಗರ ಪ್ರತಿಭಟನೆ
ಬಳ್ಳಾರಿಯನ್ನು ಆಂಧ್ರಕ್ಕೆ ಸೇರಿಸದಿರುವ ನ್ಯಾ. ಮಿಶ್ರಾ ತೀರ್ಪಿನ ವಿರುದ್ಧ ಬಳ್ಳಾರಿಯ ತೆಲುಗರು ಪ್ರತಿಭಟಿಸಿ ಗಲಭೆ ನಡೆಸುತ್ತಾರೆ. ಭಾಷಾ ಪ್ರಾಂತ ನಿರ್ಮಾಣವು ಅಪೇಕ್ಷಣೀಯವೇ ಎಂದು ನೋಡಲು ಹೈಪವರ್ಡ್ ಕಮಿಷನ್ ನೇಮಿಸುವುದಾಗಿ ಪ್ರಧಾನಿ ನೆಹರು ಹೇಳಿದಾಗ ಪತ್ರಿಕೆ ಅದು ಅವಶ್ಯವೆ? ಇದು ಅಕಾರಣ ಜಿಜ್ಞಾಸೆ – ಎನ್ನುತ್ತದೆ. ಹೊಸ ಪ್ರಾಂತ ಆಂಧ್ರದಲ್ಲಿ ಏನಾಗುತ್ತದೆ ನೋಡಿ ಕರ್ನಾಟಕವನ್ನು ನಿರ್ಮಿಸೋಣ ಎಂದಾಗ, ಇದು ತಪ್ಪು. ಆಂಧ್ರ, ಕರ್ನಾಟಕಗಳ ಪರಿಸ್ಥಿತಿ ಬೇರೆ ಬೇರೆ ಎಂದು ಹೇಳುತ್ತದೆ. ಪ್ರಾಂತ ನಿರ್ಮಾಣಕ್ಕೆ ಸಂಬಂಧಿಸಿ ಜನ ಗಡಿ ಗುರುತಿಸುವಿಕೆಗೆ ಸಮಿತಿ ರಚಿಸುವ ಬಗ್ಗೆ ಒತ್ತಾಯಿಸಬೇಕು; ಮತ್ತು ಶಿಷ್ಟಮಂಡಲಗಳನ್ನು ರಚಿಸಿಕೊಳ್ಳಬೇಕೆಂದು ಸಲಹೆ ನೀಡುತ್ತದೆ. ಬಳ್ಳಾರಿ ಪ್ರದೇಶದ ಗಡಿಯ ಆದವಾನಿ, ಆಲೂರು, ರಾಯದುರ್ಗ ತಾಲೂಕುಗಳನ್ನು ವಿಭಜಿಸಿ ಪಶ್ಚಿಮದ ಭಾಗವನ್ನು ಕರ್ನಾಟಕಕ್ಕೆ ಮತ್ತು ಪೂರ್ವದ ಭಾಗವನ್ನು ಆಂಧ್ರಕ್ಕೆ ನೀಡಬೇಕು. ಬೆಳಗಾವಿ ಮತ್ತು ಸೊಲ್ಲಾಪುರಗಳ ಕನ್ನಡಿಗರು ಸಭೆ ನಡೆಸಿ ತಮ್ಮ ಅಭಿಪ್ರಾಯಗಳನ್ನು ತಿಳಿಸಬೇಕು ಎನ್ನುವ ಸಂಪಾದಕೀಯ ಬಳ್ಳಾರಿಯ ತೆಲುಗು ಸತ್ಯಾಗ್ರಹಿಗಳೊಂದಿಗೆ ಒಳ್ಳೆಯ ರೀತಿಯಲ್ಲಿ ನಡೆದುಕೊಳ್ಳುವ ನಾಯಕರು ಕನ್ನಡಿಗರ ವಿಷಯದಲ್ಲಿ ಅಸಡ್ಡೆಯಾಗಿದ್ದಾರೆ. ನಮ್ಮ ಜನ ಮಹಾತ್ಮರನ್ನು ಅನುಕರಿಸಿ ಮಾತಿಗೆ ಮೊದಲು ನಿರಶನವ್ರತ, ಸತ್ಯಾಗ್ರಹ ಎನ್ನುತ್ತಿದ್ದಾರೆ; ಮತ್ತು ಪಾಶ್ಚಾತ್ಯರನ್ನು ಅನುಕರಿಸಿ ಮಾತೆತ್ತಿದೊಡನೆ ಪ್ಲೆಬಿಸೈಟ್ (ಜನಮತ ಸಂಗ್ರಹ) ನಡೆಸಬೇಕು ಎನ್ನುತ್ತಿದ್ದಾರೆ; ಇದು ಬಳ್ಳಾರಿಯ ವಿಷಯದಲ್ಲಿ ಕೇಳಿಬರುತ್ತಿದೆ ಎಂದು ಅಸಮಾಧಾನ ಸೂಚಿಸುತ್ತದೆ.
ಆಂಧ್ರಪ್ರದೇಶ ನಿರ್ಮಾಣ
೧೯೫೩ರ ಅಕ್ಟೋಬರ್ ಒಂದರಂದು ಆಂಧ್ರಪ್ರದೇಶ ನಿರ್ಮಾಣಗೊಂಡಿತು; ಅದೇ ದಿನ ಬಳ್ಳಾರಿ ಜಿಲ್ಲೆಯ ಏಳು ತಾಲ್ಲೂಕುಗಳು ಮೈಸೂರು ಸಂಸ್ಥಾನಕ್ಕೆ ಸೇರುವುದೆಂದು ತೀರ್ಮಾನವಾಯಿತು. ಆಗ ಪತ್ರಿಕೆ, ಆಂಧ್ರ ಪ್ರಾಂತ ನಿರ್ಮಾಣಕ್ಕಿಂತ ಹೆಚ್ಚು ಅಗತ್ಯವಾಗಿ ನಡೆಯಬೇಕಾಗಿದ್ದ ಕರ್ನಾಟಕ ಪ್ರಾಂತ ನಿರ್ಮಾಣವು ಇನ್ನೂ ಸಮಸ್ಯೆಯಾಗಿಯೇ ಉಳಿದಿರುವುದು ನಿಜವಾಗಿ ದುಃಖದ ಸಂಗತಿ. ಆಂಧ್ರ ಪ್ರಾಂತವು ಯಶಸ್ವಿಯಾದರೆ ಕರ್ನಾಟಕವನ್ನು ರಚಿಸುತ್ತೇವೆ; ಹಾಗೂ ಭಾಷಾನುಗುಣ ಪ್ರಾಂತ ರಚನೆ ಬಗ್ಗೆ ಸಮಿತಿ ರಚಿಸುತ್ತೇವೆ, ಅದು ಕರ್ನಾಟಕದ ಬಗ್ಗೆ ಪರಿಶೀಲಿಸುತ್ತದೆ ಎಂದು ಹೇಳುತ್ತಾರೆ. ಎರಡೂ ಅಸಂಗತ ಎಂದು ಆಕ್ಷೇಪಿಸುತ್ತದೆ.
ಮುಂದೆ ಪತ್ರಿಕೆಯ ಸಿಟ್ಟು ಕರ್ನಾಟಕದ ನಾಯಕತ್ವದ ಕಡೆಗೇ ತಿರುಗುತ್ತದೆ: ಅವ್ಯವಸ್ಥೆಗೆ ಕಾರಣ ಕನ್ನಡದ ನಾಯಕರು ಪ್ರಾಂತ ನಿರ್ಮಾಣದ ವಿಷಯದಲ್ಲಿ ಏಕಾಭಿಪ್ರಾಯ ಉಳ್ಳವರಾದರೂ ರಾಜಕೀಯವಾಗಿ ಹತ್ತು ಪಕ್ಷಗಳಲ್ಲಿ ಹಂಚಿ ನಿಂತಿರುವುದು. ಕಾಂಗ್ರೆಸ್, ಪ್ರಜಾಪಕ್ಷ, ಏಕೀಕರಣ ಸಂಘ ಹೀಗೆ ಬೇರೆ ಬೇರೆ ಪಕ್ಷಗಳ ಎಲ್ಲ ಪ್ರಮುಖರೂ ಏಕೀಕರಣ ಬೇಕೆನ್ನುತ್ತಾರೆ. ಆದರೆ ಜೊತೆ ಸೇರಿ ಸರ್ಕಾರಕ್ಕೆ ಇದನ್ನು ಹೇಳಲಾರದೆ ಇದ್ದಾರೆ. ಇದರ ಮೇಲೆ ಸ್ಥಳೀಯ ರಾಜಕೀಯವು ಪರಿಸ್ಥಿತಿಯನ್ನು ಮತ್ತಷ್ಟು ವಿಷಮ ಮಾಡಿದೆ ಎನ್ನುತ್ತದೆ.
ಆಂಧ್ರಪ್ರದೇಶದ ಉದ್ಘಾಟನಾ ಸಮಾರಂಭವು ಕರ್ನೂಲಿನಲ್ಲಿ ಜರಗುತ್ತದೆ. ಅದರಲ್ಲಿ ಭಾಗವಹಿಸಿದ ಪ್ರಧಾನಿ ನೆಹರು ಈ ಭಾಷಾ ಪ್ರಾಂತದ ವಿಷಯ ತನಗೆ ಅರ್ಥವಾಗುವುದಿಲ್ಲ ಎಂದರು. ಅಂತಹ ಕೇಂದ್ರಸರ್ಕಾರದ ಧೋರಣೆಯನ್ನು ಪ್ರಶ್ನಿಸುವ ಸಂಪಾದಕರು ವ್ಯಕ್ತಿಪರವಾದ ಅಭಿಪ್ರಾಯ ಏನೇ ಇದ್ದರೂ ಮಂತ್ರಿಗಳು ತಮ್ಮ ಪಕ್ಷದ ನೀತಿಗೆ ಒಳಪಟ್ಟೇ ಮಾತನಾಡಬೇಕಾಗುತ್ತದೆ ಎಂದು ವಿಶ್ಲೇಷಿಸುತ್ತದೆ.
ರಾಜ್ಯ ಕಾಂಗ್ರೆಸ್ ಚುರುಕು
೧೯೫೩ರ ಕೊನೆಯ ಹೊತ್ತಿಗೆ ಕರ್ನಾಟಕ ಪ್ರಾಂತ ನಿರ್ಮಾಣದ ಬಗ್ಗೆ ರಾಜ್ಯ ಕಾಂಗ್ರೆಸ್ ಸಮಿತಿಯು ಚುರುಕಾದಂತೆ ತೋರುತ್ತದೆ. ಪ್ರಾಂತ ನಿರ್ಮಾಣದ ಬಗ್ಗೆ ತಕ್ಕ ಆಶ್ವಾಸನೆ ನೀಡದಿದ್ದರೆ ಕಠಿಣ ಕಾರ್ಯಕ್ರಮವನ್ನು ಕೈಗೊಳ್ಳಬೇಕಾಗುತ್ತದೆ ಎನ್ನುವ ನಿರ್ಣಯವನ್ನು ಅಂಗೀಕರಿಸಿ, ಪ್ರಧಾನಿ ನೆಹರು ಅವರನ್ನು ಭೇಟಿ ಮಾಡಿ ತಿಳಿಸಿದಾಗ ಅವರು, ವಿಷಯವು ಹೈ ಪವರ್ಡ್ ಕಮಿಷನ್ ಎದುರು ಹೋಗಬೇಕು ಎನ್ನುವ ತೀರ್ಮಾನ ಹೇಳಿದರು.
ಹಿಂದೊಮ್ಮೆ ಕೇಳಿಬಂದ ಮಾತನ್ನು ಈಗ ರಾಜಾಜಿ ಕೂಡ ಹೇಳಿದರು. ಕೇರಳ ಪ್ರಾಂತ ಆಗಬೇಕೆಂದು ಹೇಳಿದಾಗ ಅವರು, ಆಂಧ್ರ ಬೇರೆಯಾಗಿ ಹೋಯಿತು. ಅದು ಎಷ್ಟರಮಟ್ಟಿಗೆ ಬಾಳುತ್ತದೆ ಎಂಬುದು ನೋಡಿ ಅದರ ಸ್ಥಿತಿ ಚೆನ್ನಾಯಿತೆಂದರೆ ಹತ್ತು ವರ್ಷದ ನಂತರ ನೀವೂ ಬೇರೆಯಾಗಿ; ಸದ್ಯ ಆತುರಪಡಬೇಡಿ ಎಂದು ಸಲಹೆ ನೀಡಿದರಂತೆ. ಆ ಬಗ್ಗೆ ಸಂಪಾದಕರು ಮದರಾಸ್ ಪ್ರಾಂತದಲ್ಲಿ ಪ್ರಬಲ ಪಕ್ಷವಾಗಿದ್ದೇ ಆಂಧ್ರರು ಎಂದು ಬೇಸರಪಟ್ಟರು. ಅವರಷ್ಟು ಪ್ರಬಲರಲ್ಲದ ಮಲೆಯಾಳಿಗಳಿಗೆ ಎಷ್ಟು ಅವಕಾಶ ಕೊಟ್ಟಾರು? ಮದರಾಸ್ ಪ್ರಾಂತದಲ್ಲಿ ಸಿಕ್ಕಿಕೊಂಡಿರುವ ಕನ್ನಡ ಪ್ರದೇಶ ಆಂಧ್ರದ ಹತ್ತರಲ್ಲಿ ಒಂದು ಪಾಲಿಲ್ಲ. ಮಲೆಯಾಳಿಗಳ ಅರ್ಧವೂ ಇಲ್ಲ. ಹೀಗೆಂದ ಮೇಲೆ ಯಾವ ಸಂಖ್ಯೆಯೂ ಇಲ್ಲದ ಕನ್ನಡಿಗನ ಪಾಡು ಏನಿರಬಹುದು? ತಮ್ಮ ನಾಯಕನ ಬಾಯಿಂದ ತಮ್ಮ ಭಾಷೆಯನ್ನು ಕೇಳುವ ಪುಣ್ಯ ಈ ಜನರಿಗೆ ಬೇಡವೆ? ಇದೆಯೇ ಪ್ರಜಾಪ್ರಭುತ್ವ? ಎಂದು ತೀವ್ರವಾಗಿ ಪ್ರಶ್ನಿಸುತ್ತಾರೆ.
ಈ ನಡುವೆ ಮಲೆಯಾಳದ ಕೇಶಪ್ಪ ಎಂಬವರು ಮಲೆಯಾಳದ ತಮ್ಮ ರಾಜ್ಯದಲ್ಲಿ ಕರಾವಳಿ ಭಾಗದ ದಕ್ಷಿಣಕನ್ನಡ, ಉತ್ತರಕನ್ನಡ ಜಿಲ್ಲೆಗಳು ಮತ್ತು ಕೊಡಗು ಕೂಡ ಸೇರಬೇಕು ಎಂದರು; ಭಾಷಾ ಪ್ರಾಂತ ಸರಿಯಲ್ಲ ಎಂಬುದು ಕೂಡ ಅವರ ಅಭಿಪ್ರಾಯವಾಗಿತ್ತು. ಬಹುಶಃ ಅದೇ ಕಾರಣದಿಂದ ಅದು ಬಿದ್ದುಹೋಯಿತು.
ಆದವಾನಿ, ಅನಂತಪುರ
ಆಂಧ್ರ ರಚನೆಯಾಗುವಾಗ ಬಳ್ಳಾರಿ ಜಿಲ್ಲೆಯ ಏಳು ತಾಲೂಕುಗಳನ್ನು ಮೈಸೂರಿಗೆ ಸೇರಿಸುವುದಾಗಿ ಬಿಟ್ಟರು. ಮೂರು ತಾಲೂಕುಗಳನ್ನು ಆಂಧ್ರಕ್ಕೆ ಸೇರಿಸಿದರು. ಆದವಾನಿ, ಆಲೂರು, ರಾಯದುರ್ಗ ತಾಲೂಕುಗಳ ಒಂದು ಭಾಗ ಕರ್ನಾಟಕಕ್ಕೆ ಸೇರಬೇಕು ಎನ್ನುವ ಜೀವನ ಸಂಪಾದಕರು, ಅನಂತಪುರ, ಸೇಲಂ, ಕೊಯಮತ್ತೂರು ಜಿಲ್ಲೆಗಳ ಕನ್ನಡ ಭಾಗಗಳನ್ನು ಗುರುತಿಸಬೇಕು; ಈ ಬಗ್ಗೆ ಕೇಂದ್ರಸರ್ಕಾರದ ಜೊತೆ ಪತ್ರವ್ಯವಹಾರ ನಡೆಸಬೇಕು ಎಂದು ಸಲಹೆ ನೀಡಿದರು.
ಆಂಧ್ರಪ್ರದೇಶ ನಿರ್ಮಾಣ ಮಾಡಿದ ಮೇಲೂ ಕೇಂದ್ರ ಸರ್ಕಾರ ಭಾಷಾ ಪ್ರಾಂತ ರಚನೆಯನ್ನು ಪ್ರಾಂತಗಳ ಪುನಾರಚನೆ (ಖeoಡಿgಚಿಟಿisಚಿಣioಟಿ) ಎಂಬ ಬೃಹತ್ ಪ್ರಶ್ನೆ ಒಳಗೊಳಿಸಿ ಒಟ್ಟು ವಿಷಯದ ಪರಿಶೀಲನೆಗೆ ಒಂದು ಸಮಿತಿಯನ್ನು ನೇಮಿಸಿತು. ಈ ಸಮಿತಿಯಲ್ಲಿ ಇಬ್ಬರು ದಕ್ಷಿಣ ದೇಶದ ಕಷ್ಟ ಕಾಣದವರು, ಒಬ್ಬರು ಮಲೆಯಾಳದವರು. ಇಬ್ಬರು ನೆಹರು ಸರ್ಕಾರದಿಂದ ಅಧಿಕಾರ ಸಂಪಾದಿಸಿದವರು; ಈಗಾಗಲೆ ಅವರು ನೆಹರು ಅಭಿಪ್ರಾಯಕ್ಕೆ ಅನುಸಾರವಾದ ಅಭಿಪ್ರಾಯವನ್ನು ಪ್ರಕಟಿಸಿದ್ದಾರೆ – ಎಂದು ಪತ್ರಿಕೆ ಗುರುತಿಸಿದೆ. ಧಾರ್ ಸಮಿತಿ ಕರ್ನಾಟಕ ಪ್ರಾಂತ ನಿರ್ಮಾಣ ಆವಶ್ಯಕ; ಆದರೆ ಅದಕ್ಕೆ ಕೆಲವು ಅಡಚಣೆಗಳಿವೆ ಎಂದು ಹೇಳಿ ಆ ಮಾತನ್ನು ಅಲ್ಲಿಗೇ ಬಿಟ್ಟಿತು.
ಹೊಸ ಸಮಿತಿಗೆ ಫಜಲ್ ಆಲಿ ಅಧ್ಯಕ್ಷರು. ಕನ್ನಡ ಪ್ರಾಂತ ಒಡನೆಯೇ ಆಗಬೇಕೆಂದು ಶಿಷ್ಟಮಂಡಲಗಳನ್ನು ನಡೆಸಿದ ಕನ್ನಡ ನಾಯಕರು ಈಗ ಅವರವರಿಗೆ ಕಂಡ ಕಾರಣದಿಂದ ಬಾಯಿ ಮುಚ್ಚಿಕೊಂಡಿದ್ದಾರೆ. ಪ್ರಾಂತವು ಐದು ವರ್ಷದಲ್ಲಿ ಆಗುತ್ತದೆಂದು ಕೆಲವರು ಹೇಳಿದರೆ, ಮೂರು ವರ್ಷದಲ್ಲಿ ಆಗಲಿದೆಯೆಂದು ಇನ್ನು ಕೆಲವರು ಹೇಳುತ್ತಾರೆ; ತಾಳ್ಮೆ ವಹಿಸಿ ಎನ್ನುತ್ತಾರೆ. ಇಂಥವರೇ ಈಗ ನಾಯಕರ ಕಿವಿ ಬಳಿ ಇರುವವರು ಎಂದು ಸಂಪಾದಕ ಮಾಸ್ತಿ ಕುಟುಕುತ್ತಾರೆ.
ಆ ಹೊತ್ತಿಗೆ ಕೊಡಗಿನ ಕೆಲವು ನಾಯಕರು ಪ್ರಾಂತ ಏಕೀಕರಣಕ್ಕೆ ಬೇರೆ ಒಂದು ರೀತಿಯ ತೊಡಕು ಒಡ್ಡಿರುವುದು ಗೊತ್ತಾಗುತ್ತದೆ. ಅಲ್ಲಿಯ ಒಂದು ಪಕ್ಷದ ಜನ ಕೊಡಗು ಎಲ್ಲ ಕಾಲಕ್ಕೂ ಬೇರೆ ಸಂಸ್ಥಾನ ಆಗಿರಬೇಕೆಂದು ಬಯಸುತ್ತಾರೆ. ಆದರೆ ಕರ್ನಾಟಕದ ಜೊತೆ ಬೆರೆತರೆ ಒಳ್ಳೆಯದು ಎನ್ನುವವರು ಹೆಚ್ಚು. ಇದು ಆ ಭಾಗದಲ್ಲಿ ಬಹಳಷ್ಟು ಚರ್ಚೆ ನಡೆದು ಅಂತಿಮವಾಗಿ ಕೊಡಗು ಕರ್ನಾಟಕದಲ್ಲಿ ಸೇರುವ ಬಗ್ಗೆ ಅಲ್ಲಿಯ ಪ್ರಮುಖರು ನಿರ್ಧಾರ ಕೈಗೊಳ್ಳುತ್ತಾರೆ.
ಒಕ್ಕಲಿಗರ ವಿರೋಧ
ಮೈಸೂರು ಕರ್ನಾಟಕ ಪ್ರಾಂತದೊಂದಿಗೆ ಸೇರಿಕೊಳ್ಳುವ ವಿಚಾರವಾಗಿ ಆ ಹಂತದಲ್ಲಿ ಇನ್ನೊಂದು ಸಮಸ್ಯೆ ತಲೆದೋರುತ್ತದೆ. ಆ ಬಗ್ಗೆ ಪತ್ರಿಕೆ ಮೈಸೂರಿನಲ್ಲಿ ಈಗ ಪ್ರಥಮ ಸ್ಥಾನದಲ್ಲಿರುವವರು ನಮ್ಮ ಒಕ್ಕಲ ಸೋದರರು. ಕರ್ನಾಟಕದಲ್ಲಿ ವೀರಶೈವರ ಸಂಖ್ಯೆ ಪ್ರಥಮ ಸ್ಥಾನ ಪಡೆಯುತ್ತದೆಂಬ ಕಾರಣದಿಂದ ಏಕೀಕರಣಕ್ಕೆ ಒಕ್ಕಲಿಗರು ಅಡ್ಡಿಯಾಗಿದ್ದಾರೆ ಎಂಬ ಮಾತು ಈ ಮೊದಲು ಕೇಳಿಬಂದಿದೆ. ಎಚ್.ಕೆ. ವೀರಣ್ಣಗೌಡರು ಮೈಸೂರಿಗೆ ಅಂಟಿಕೊಂಡಿರುವ ಕನ್ನಡ ಭೂಮಿ ಮೈಸೂರಿನೊಂದಿಗೆ ಬೆರೆಯಲಿ; ಉತ್ತರಕರ್ನಾಟಕ ಬೇರೆ ಒಂದು ಪ್ರಾಂತವಾಗಲಿ ಎಂದಿದ್ದಾರೆ. ಎರಡು ಪ್ರಾಂತ ಬೇಡ ಎಂಬುದಕ್ಕೆ ಕಾರಣವನ್ನು ಹೇಳಬೇಕು. ವಿಸ್ತೀರ್ಣದ ದೃಷ್ಟಿಯಿಂದ ಇದು ಆಡಳಿತಕ್ಕೆ ಕಷ್ಟವಲ್ಲ. ತಮಿಳುನಾಡು, ಆಂಧ್ರ, ಬಂಗಾಳ, ಉತ್ತರಪ್ರದೇಶಗಳಿಗಿಂತ ಇದು ದೊಡ್ಡದಾಗುವುದಿಲ್ಲ. ಹೀಗಿರುವಾಗ ಒಂದು ಭಾಷೆ ಮಾತನಾಡುತ್ತಾ ಒಂದು ಆಡಳಿತದಲ್ಲಿ ಬಾಳಬಹುದಾದ ಜನಸಂಖ್ಯೆ ಎರಡು ಆಡಳಿತದಲ್ಲಿ ಹೋಳಾಗಿ ಏಕೆ ಇರಬೇಕು? ಅದಲ್ಲದೆ ಎರಡು ರಾಜ್ಯವೆಂದರೆ ಎಲ್ಲವೂ (ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ) ಎರಡೆರಡಾಗಿ ವೆಚ್ಚ ದುಬಾರಿಯಾಗುತ್ತದೆ. ಹೊಟ್ಟೆಗಿಲ್ಲದ ಜನ ಈ ದುಬಾರಿ ವೆಚ್ಚವನ್ನು ಏಕೆ ಹೊರಬೇಕು? ಎಂದು ಕೇಳುತ್ತದೆ. ಜೊತೆಗೆ ಒಕ್ಕಲ ಸೋದರರಲ್ಲಿ ಹಲವರು ಏಕೀಕರಣದ ಪರ ಇದ್ದಾರೆಂದು ತಿಳಿಸುತ್ತದೆ.
ಮುಂಬಯಿ, ಮದರಾಸ್ ಭಾಗಗಳ ಕನ್ನಡ ಪ್ರಾಂತವನ್ನು ಮೈಸೂರು ಸಂಸ್ಥಾನಕ್ಕೆ ಸೇರಿಸುವ ಬಗ್ಗೆ ತೀರ್ಮಾನವಾದರೂ ಕೇಂದ್ರಸರ್ಕಾರ ಆ ವಿಷಯವನ್ನು ಪ್ರಾಂತ ರಚನಾ ಸಮಿತಿಗೆ ಒಪ್ಪಿಸಿತು. ಸಮಿತಿಯು ಬೆಂಗಳೂರಿಗೆ ಬಂದು ಜನರ ಅಭಿಪ್ರಾಯವನ್ನು ಸಂಗ್ರಹಿಸುವಾಗ ಮುಖ್ಯಮಂತ್ರಿ ಹನುಮಂತಯ್ಯನವರು ಪ್ರತಿನಿಧಿ ಪಕ್ಷದ ಸಭೆ ಕರೆದರು. ಪ್ರತಿನಿಧಿಗಳು ಉಳಿದ ಕರ್ನಾಟಕದ ಪ್ರಕೃತ ಸ್ಥಿತಿಯ ವಿವರ ಸಂಗ್ರಹಿಸಬೇಕು ಎಂದರು. ಸರ್ಕಾರ ಅದಕ್ಕಾಗಿ ಒಂದು ಸಮಿತಿಯನ್ನು ನೇಮಿಸಿತು ಎನ್ನುವ ಪತ್ರಿಕೆ, ಸಮಿತಿ ಆವಶ್ಯಕವೇ ಎಂಬುದು ವಿಚಾರಣೀಯ. ಇದು ಆಂಗ್ಲರು ಆಡುತ್ತಿದ್ದ ಒಂದು ಆಟ. ಸರ್ಕಾರದ ಕಾರ್ಯದರ್ಶಿಗಳು ಪತ್ರ ಬರೆದು ಆ ವಿಷಯ ಸಂಗ್ರಹಿಸಬಹುದಿತ್ತು; ಅದಕ್ಕೆ ನಾಲ್ವರು ಸದಸ್ಯರ ಸಮಿತಿ ಬೇಕಿರಲಿಲ್ಲ ಎಂದು ಸೂಚಿಸುತ್ತದೆ. ಪ್ರಾಂತದ ಉಳಿದ ಭಾಗವು ಮೈಸೂರಿಗೆ ಹೊರೆ ಆಗುತ್ತದೆ ಎನ್ನುವ ಮಾತಿಗೆ ಉತ್ತರಿಸಿದ ಸಂಪಾದಕರು, ಹೊರೆ ಆಗುವುದಿಲ್ಲ. ಹೊರೆ ಆದರೂ ಕೂಡ ಅವರು ಬೇರೆಯವರಲ್ಲ – ಎನ್ನುವ ಸಮಾಧಾನ ನೀಡಿದ್ದಾರೆ.
ಮತ್ತೆ ಬಳ್ಳಾರಿಯ ಬಗ್ಗೆ ಪ್ರಸ್ತಾಪಿಸುತ್ತಾ ರಾಯಲಸೀಮೆಯ ಭಾಗ ಎಂಬ ಕಾರಣದಿಂದ ಹಿಂದೆ ಎಂದೋ ಆಡಳಿತಕ್ಕೆ ಬಳ್ಳಾರಿ ತೆಲುಗು ಪ್ರಾಂತವೆಂದು ಪರಿಗಣಿತವಾಯಿತು. ತೆಲುಗು ಜನ ಬಳ್ಳಾರಿಗೆ ಬಂದು ನಿಂತು ಬೆಳೆದು ಈಗ ಪ್ರಜಾಸಂಖ್ಯೆಯ ದೊಡ್ಡ ಭಾಗ ಆಗಿದ್ದಾರೆ. ನಗರದ ಸುತ್ತೆಲ್ಲ ಕನ್ನಡ ಗ್ರಾಮಗಳು. ಪಟ್ಟಣದಲ್ಲಿ ತೆಲುಗರು ಸ್ವಲ್ಪ ಹೆಚ್ಚು ಇದ್ದಾರೆಂಬ ಕಾರಣದಿಂದ ಪಟ್ಟಣವೂ ಸುತ್ತಿನ ನೂರು ಗ್ರಾಮವೂ ತೆಲುಗುದೇಶ ಆಗಲಾರವು… ಕೇಂದ್ರಸರ್ಕಾರ ಈ ಸಂಗತಿಯನ್ನು ಮರೆತು ಏನೋ ವಿಚಾರಣೀಯ ಅಂಶ ಇದೆ ಎಂಬಂತೆ ಕಮಿಟಿಗಳನ್ನು ನೇಮಿಸಿತು. ಕೊನೆಗೆ ಬಳ್ಳಾರಿ ಪಟ್ಟಣ ಕನ್ನಡನಾಡು ಹೌದೆಂದು ತೀರ್ಮಾನ ಕೊಟ್ಟಿತು. ಎಲ್ಲ ಸಮಿತಿಗಳು ಹಾಗೆ ಹೇಳಿದರೂ ಬಳ್ಳಾರಿ ಪುರಸಭೆ ಆಂಧ್ರಕ್ಕೆ ಸೇರಬೇಕು ಎನ್ನುತ್ತದೆ.
ಬಳ್ಳಾರಿ ಆ ಹೊತ್ತಿಗೆ ಪರಿಶೀಲನೆಯ ವಿಷಯವಲ್ಲವಾದರೂ ಕೇಂದ್ರಸರ್ಕಾರ ನೇಮಿಸಿದ ಪ್ರಾಂತ ಪುನಾರಚನಾ ಸಮಿತಿ ಈ ವಿಷಯವನ್ನು ಮರಳಿ ಪರಿಶೀಲಿಸಬೇಕೆಂದು ಯಾರೋ ಸೂಚಿಸಿ ಯಾರೋ ಒಪ್ಪಿ ಸದಸ್ಯರಾದ ಕುಂಜ್ರು ಮತ್ತು ಪಣಿಕ್ಕರ್ ಬಳ್ಳಾರಿಗೆ ಬಂದರು. ಇದರಿಂದ ಆಂಧ್ರರಲ್ಲಿ ಗೊಂದಲ, ಕನ್ನಡಿಗರಲ್ಲಿ ಕ್ಷೋಭೆಗೆ ಕಾರಣವಾಯಿತು.
ಇಂತಹ ಸಂದರ್ಭದಲ್ಲಿ ಎಷ್ಟು ಕ್ಷುಲ್ಲಕ ವಾದಗಳು ಮುಂದೆ ಬರುತ್ತವೆ ಎಂಬುದಕ್ಕೆ ಒಂದು ಉದಾಹರಣೆ ಇಲ್ಲಿದೆ. ಹೊಸಪೇಟೆ ಸಮೀಪ ತುಂಗಭದ್ರಾ ನದಿಗೆ ಅಣೆಕಟ್ಟು ನಿರ್ಮಾಣವಾಗುತ್ತಿದೆ. ಅದರ ನೀರಿನಿಂದ ಸಾಗುವಳಿ ಆಗುವ ಬಹುಭಾಗ ಆಂಧ್ರದಲ್ಲಿದೆ. ಹೀಗಿರುವಾಗ ಜಲಾಶಯದ ಆಡಳಿತ ಮೈಸೂರಿನಲ್ಲಿರುವುದು ಕ್ಷೇಮವೆ? ಆದ್ದರಿಂದ ಹೊಸಪೇಟೆವರೆಗಿನ ಎಲ್ಲ ಪ್ರದೇಶ ಆಂಧ್ರಕ್ಕೆ ಸೇರಬೇಕು – ಎಂಬುದು ಆ ವಾದ! ಆ ವಾದ ಅಂತಿಮವಾಗಿ ನಿಲ್ಲಲಿಲ್ಲ ಎಂಬುದು ನಿಜವಾದರೂ ಒಂದಕ್ಕಿಂತ ಹೆಚ್ಚು ಸಲ ಮುನ್ನೆಲೆಗೆ ಬಂದಿದೆ ಎಂಬುದು ಅಷ್ಟೇ ನಿಜ.
ಅಸೆಂಬ್ಲಿಯಲ್ಲಿ ಚರ್ಚೆ
ವಿಧಾನಸಭೆಯಲ್ಲಿ ಆದವಾನಿ, ಆಲೂರು, ರಾಯದುರ್ಗ ತಾಲೂಕುಗಳ ಕನ್ನಡ ಭಾಗಗಳನ್ನು ಕೇಳಿಲ್ಲವೆ ಎಂಬ ಪ್ರಶ್ನೆ ಬಂದುದನ್ನು ೧೯೫೪ರ ನವೆಂಬರ್ ಸಂಚಿಕೆ ಉಲ್ಲೇಖಿಸುತ್ತದೆ. ಮೈಸೂರು ಈ ದೀರ್ಘವಾದ ಯೋಚನೆ ಮಾಡುತ್ತಿರುವಾಗ ಕೊಳ್ಳೇಗಾಲ, ಹೊಸೂರು, ಗೋಪಿಶೆಟ್ಟಿಪಾಳ್ಯ ತಾಲೂಕುಗಳ ಕನ್ನಡಭಾಗಗಳನ್ನು ತನ್ನ ಹೊಟ್ಟೆಯಲ್ಲಿ ಇರಿಸಿಕೊಳ್ಳಲು ಮದರಾಸ್ ಪ್ರಾಂತ ಸಿದ್ಧವಾಗಿದೆ; ಬಳ್ಳಾರಿಯ ಬಗ್ಗೆ ಆಂಧ್ರ ಬಾಯಿ ತೆರೆದು ನಿಂತಿದೆ. ಉತ್ತರಕನ್ನಡ, ಧಾರವಾಡ, ಬೆಳಗಾವಿ, ಬಿಜಾಪುರಗಳನ್ನು ಮುಂಬಯಿ ಕೇಳುತ್ತಿದೆ ಎಂದು ಪತ್ರಿಕೆ ದಾಖಲಿಸುತ್ತದೆ.
ಮೈಸೂರು ಉಳಿದ ಕರ್ನಾಟಕದ ಜೊತೆ ಸೇರಿ ಪ್ರಾಂತ ರಚನೆ ಆಗುವುದು ಸರಿಯೆ ಎಂದು ತೀರ್ಮಾನಿಸಲು ಮಾಜಿ ಮಂತ್ರಿ ಶೇಷಾದ್ರಿ ಅವರ ನೇತೃತ್ವದ ಒಂದು ಸಮಿತಿಯನ್ನು (ಮೈಸೂರಿನಲ್ಲಿ) ರಚಿಸಲಾಯಿತು. ಆ ಭಾಗಗಳು ಮೈಸೂರು ಸಂಸ್ಥಾನಕ್ಕೆ ಸೇರಿದರೆ ಸರಿದೂಗಿಸಲು ಕೋಟಿಗಟ್ಟಲೆ ಹಣ ಬೇಕಾಗುತ್ತದೆಂದು ಸಮಿತಿ ವರದಿ ನೀಡಿತು. ಆ ಕುರಿತು ಜೀವನ ಸಂಪಾದಕೀಯವು ಏಕೀಕರಣದ ವಿಷಯದಲ್ಲಿ ಇದು ವಾದ ಅಲ್ಲ. ಹಿಂದೆ ಬಿದ್ದಿರುವ ಕನ್ನಡ ಪ್ರದೇಶ ಸ್ವಲ್ಪ ಪ್ರಯತ್ನದಿಂದ ಮುಂದೆ ಬರಬಲ್ಲದು. ಇತರರು ಸಹಾಯ ಮಾಡಲು ಒಪ್ಪದಿದ್ದರೆ ಅದು ತನ್ನದೇ ಪ್ರಯತ್ನದಿಂದ ಆ ಧನವನ್ನು ಒದಗಿಸಬಲ್ಲದು; ಮತ್ತು ಇದನ್ನು ಲಾಭ-ನಷ್ಟದ ದೃಷ್ಟಿಯಿಂದ ನೋಡುವುದು ಮೂಲತಃ ಅಸಾಧು. ನೆರೆ ಪ್ರಾಂತಗಳಲ್ಲಿ ಸೇರಿ ಅಲ್ಪಸಂಖ್ಯಾತರಾಗಿರುವ ಕನ್ನಡಿಗರ ಅಭ್ಯುದಯವನ್ನು ಕಾಯುವುದು ಮೈಸೂರಿನ ಹೊಣೆ. ಅದು ಲಾಭವಾಗಿ ಪರಿಣಮಿಸುತ್ತದೆ ಎಂದು ಮಾರ್ಗದರ್ಶನ ಮಾಡುತ್ತದೆ; ಉತ್ತರಕರ್ನಾಟಕವು ಹಿಂದುಳಿದ ಪ್ರದೇಶವೆಂದು ದೂರವಿಟ್ಟರೆ ಮಹಾರಾಷ್ಟ್ರ ಅದನ್ನು ಸ್ವಾಗತಿಸುತ್ತದೆ ಎಂದು ಎಚ್ಚರಿಸಲಾಗುತ್ತದೆ.
ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರ ಹಿಂಜರಿಕೆಯಿಂದಾಗಿ ಪ್ರಾಂತ ಏಕೀಕರಣವು ವಿಳಂಬವಾಗುತ್ತಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತದೆ. ಕೇಂದ್ರ ಒಪ್ಪಿದರೆ ೨೪ ತಾಸಿನಲ್ಲಿ ಪ್ರಾಂತ ಏಕೀಕರಣ ಆಗುತ್ತದೆ ಎಂದು ಅವರು ಒಮ್ಮೆ ಹೇಳಿದ್ದರು. ಅವರಿಂದ ವಿಳಂಬ ಆಗುತ್ತಿದ್ದರೆ ಅದಕ್ಕೆ ಕಾರಣ ಮೈಸೂರಿನ ಒಕ್ಕಲಿಗರ ಒತ್ತಡ ಅನ್ನಿಸುತ್ತದೆ. ಪ್ರಾಂತ ಪುನರ್ವಿಂಗಡಣೆ ಕಮಿಷನ್ ಯಾವ ತಪ್ಪನ್ನು ಮಾಡಿದರೂ ಕೇಂದ್ರಸರ್ಕಾರ ಕರ್ನಾಟಕ ನಿರ್ಮಾಣ ಆಗಲೇಬೇಕೆಂದು ನಿರ್ಣಯ ಮಾಡಲಿ – ಎಂದು ಪತ್ರಿಕೆ ಒತ್ತಾಯಿಸುತ್ತದೆ.
ಮೈಸೂರಿನ ಒಂದು ಸಮುದಾಯದ ಒಂದು ಭಾಗ ಅಡ್ಡಿ ಮಾಡುತ್ತಿದೆ ಎಂಬ ಕಾರಣದಿಂದ ಒಟ್ಟು ಕರ್ನಾಟಕದ ಬಹುಭಾಗದ ಜನರ ಆಸೆಯನ್ನು ಭಂಗ ಮಾಡುವುದು ಕೇಂದ್ರದ ಅಚಾತುರ್ಯವಾಗುತ್ತದೆ; ಇದುವರೆಗೆ ಹೇಗೋ ಸಹಿಸಿಕೊಂಡ ಜನ ಇನ್ನೊಂದು ಸಲಕ್ಕೆ ಕಾಂಗ್ರೆಸಿಗೆ ಎದುರುಬಿದ್ದೇ ಬೀಳುತ್ತದೆ. ದೇಶದ ಹಿತಕ್ಕಾಗಿ ಕಾಂಗ್ರೆಸ್ ಅಧಿಕಾರದಲ್ಲಿರುವುದು ಸದ್ಯ ಆವಶ್ಯಕ ಎಂಬುದು ನಮ್ಮ ತಿಳಿವಳಿಕೆ. ಕನ್ನಡನಾಡಿನ ಬಹುಜನರನ್ನು ಮೇಲೆ ಹಾಕಿಕೊಂಡು ಕಾಂಗ್ರೆಸ್ ಈ ಸ್ಥಾನವನ್ನು ಇಲ್ಲಿ ಕಳೆದುಕೊಂಡರೆ ಕನ್ನಡ ಭೂಮಿ ಮತ್ತೊಂದು ತಿರುವಾಂಕೂರು, ಕೊಚಿನ್, ಮತ್ತೊಂದು ಆಂಧ್ರ ಆಗುತ್ತದೆ. ಕಾಂಗ್ರೆಸ್ ಪೆಟ್ಟು ತಿಂದು ಬುದ್ಧಿ ಕಲಿತು ಮರಳಿ ಜನರನ್ನು ಒಲಿಸಿಕೊಳ್ಳುವ ಯತ್ನದಲ್ಲಿ ಇಲ್ಲದ ಶ್ರಮ ಪಡಬೇಕಾಗುತ್ತದೆ ಎಂದೂ ಪತ್ರಿಕೆ ಎಚ್ಚರಿಸುತ್ತದೆ.
ಮಂಗಳೂರಿಗನ ಕಷ್ಟ
ಮದರಾಸು ಶಾಸನಸಭೆಯಲ್ಲಿ ಎಲ್ಲ ವ್ಯವಹಾರಗಳು ತಮಿಳಿನಲ್ಲಿ ನಡೆಯುತ್ತವೆ ಎಂಬುದನ್ನು ಉಲ್ಲೇಖಿಸುತ್ತಾ, ಮಲೆಯಾಳಿಯಾದರೂ ತಮಿಳನ್ನು ಸ್ವಲ್ಪ ತಿಳಿದುಕೊಂಡಾನು. ಮಂಗಳೂರಿನ ಕನ್ನಡಿಗ ಏನು ಮಾಡಿಯಾನು? ಒಟ್ಟಿನಲ್ಲಿ ಶಾಸನಸಭೆಯ ಬಾಳುವೆ ಒಂದು ಸಭೆಯ ಬಾಳುವೆಯಾಗಿಲ್ಲ. ಎರಡು ಅಥವಾ ಮೂರು ಸಭೆಗಳ ಬಾಳುವೆ ಆಗಿದೆ. ಹೇಗೆಂದರೆ ಪ್ರಾಂತವೂ ಒಂದು ಪ್ರಾಂತವಲ್ಲ, ಮೂರು ಪ್ರಾಂತ. ಇದು ಡೆಮಾಕ್ರಸಿಯೇ ಅಲ್ಲ ಎಂದು ಟೀಕಿಸುತ್ತಾರೆ.
ತಮಿಳರ ಮನೋಧರ್ಮ ಹೀಗಿರುತ್ತ ನಮ್ಮ ಕನ್ನಡ ನಾಯಕರು ತೀರಾ ವಿಚಿತ್ರ ರೀತಿಯ ಮಾತುಗಳನ್ನು ಆಡುತ್ತಿದ್ದಾರೆ. ಮದರಾಸ್ ಮಂತ್ರಿವರ್ಗದಲ್ಲಿರುವ ಕನ್ನಡ ಹಿರಿಯರು ಶ್ರೀ ಅತ್ತಾವರ ಬಾಲಕೃಷ್ಣ ಶೆಟ್ಟಿ ಅವರು, ಪ್ರಾಂತಗಳನ್ನು ಭಾಷಾ ದೃಷ್ಟಿಯಿಂದ ತಿದ್ದಿ ರಚಿಸಬೇಕೆನ್ನುವುದು ಸರಿಯಲ್ಲ. ದಕ್ಷಿಣಕನ್ನಡ ಜಿಲ್ಲೆ ಉಳಿದ ಕರ್ನಾಟಕದೊಂದಿಗೆ ಸೇರಿದರೆ ನಷ್ಟಕಷ್ಟಗಳಿಗೆ ಗುರಿಯಾಗುತ್ತದೆ ಎಂದರೆಂದು ವರದಿಯಾಗಿದೆ ಎಂದು ಪತ್ರಿಕೆ ಗಮನಸೆಳೆಯುತ್ತದೆ. ಮದರಾಸು ತಮಿಳು ಪ್ರಾಂತ ಎಂದು ವ್ಯವಹಾರ ನಡೆಯುವಾಗ ಇವರು ಅದು ಮುಂದುವರಿದ ಪ್ರಾಂತ ಎಂಬ ಕಾರಣದಿಂದ ಮಂಗಳೂರು ಅದರ ಜೊತೆಯಲ್ಲಿಯೇ ಇರಬೇಕು ಎನ್ನುತ್ತಿದ್ದಾರೆ ಎಂದು ಆಕ್ಷೇಪಿಸುತ್ತಾ, ಒಟ್ಟು ಮದರಾಸ್ ಪ್ರಾಂತದ ಜೀವನದಲ್ಲಿ ಅದರ ಕನ್ನಡ ಭಾಗಕ್ಕೆ ಯಾವ ಸ್ಥಾನ ದೊರೆಯುತ್ತದೆ ಎನ್ನುವುದನ್ನು ಈ ನಾಯಕರು ಯೋಚಿಸಬೇಕು ಎಂದು ಸಲಹೆ ನೀಡುತ್ತದೆ.
ಉಳಿದ ಕರ್ನಾಟಕ ಮೈಸೂರಿಗೆ ಸೇರುವುದಲ್ಲ; ಎಲ್ಲ ಸೇರಿ ಒಂದು ಕರ್ನಾಟಕ ಆಗಬೇಕು ಎನ್ನುವ ಮಂಗಳೂರು ಜನರ ಅಭಿಪ್ರಾಯವನ್ನು ಉಲ್ಲೇಖಿಸುವ ಜೀವನ ಸಂಪಾದಕೀಯ ಒಂದುಗೂಡಿದ ನಾಡಿನಲ್ಲಿ ಯಾವ ಭಾಗವೂ ಬೇರೆ ಯಾವ ಭಾಗಕ್ಕೂ ಆಶ್ವಾಸನೆ ಕೊಡುವುದಿಲ್ಲ; ಕೊಡಬೇಕಾಗಿಲ್ಲ. ಒಂದಾಗಿ ಬಾಳುತ್ತೇವೆಂದು ನಿಶ್ಚಯ ಮಾತ್ರ ಮಾಡಿಕೊಳ್ಳಬೇಕು. ಭಾಷೆಯೊಂದೇ ಕಾರಣವಲ್ಲ. ಇತಿಹಾಸ, ಆಡಳಿತ ಸೌಕರ್ಯ, ಆರ್ಥಿಕ ಬಾಂಧವ್ಯ, ಜನರ ಅಪೇಕ್ಷೆ ಇವು ಭಾಷೆಯ ಹಾಗೇ ಮುಖ್ಯವಾಗಿವೆ. ಪ್ರಾಂತವು ಒಟ್ಟಾದಾಗ ಅದು ಮೈಸೂರೂ ಹೌದು, ಕರ್ನಾಟಕವೂ ಹೌದು ಎನ್ನುವ ತೀರ್ಮಾನ ನೀಡುತ್ತದೆ. ಬಹುಶಃ ಭಾಷಾ ಪ್ರಾಂತ ರಚನೆಯಲ್ಲಿ ಯಾರು ಬೇಕಾದರೂ ಮೈಸೂರಿಗೆ ಸೇರಬಹುದು ಎಂದ ಮುಖ್ಯಮಂತ್ರಿ ಕೆಂಗಲ್ ಅವರ ಮಾತಿಗೆ ಈ ಪ್ರತಿಕ್ರಿಯೆ ಇರಬೇಕು.
ಸಮಿತಿ ಅನಾರೋಗ್ಯ
ಇದೇ ವೇಳೆ ಫಜಲ್ ಆಲಿ ಸಮಿತಿಯ ಹುಳುಕು ಕೂಡ ಹೊರಗೆ ಬರುತ್ತದೆ. ಸಮಿತಿಯ ಅಧ್ಯಕ್ಷ ಫಜಲ್ ಆಲಿ ಪೂರ್ತಿಯಾಗಿ ಅನಾರೋಗ್ಯದಲ್ಲಿದ್ದರು. ಉಳಿದ ಇಬ್ಬರು ಸದಸ್ಯರಲ್ಲಿ ದಕ್ಷಿಣಭಾರತವನ್ನು ಬಲ್ಲವರು ಪಣಿಕ್ಕರ್ ಮಾತ್ರ; ಕುಂಜ್ರು ದಕ್ಷಿಣ ದೇಶವನ್ನು ಕಾಣರು. ಅಷ್ಟೇ ಅಲ್ಲ, ನಾವು ನೋಡಿದ ಮಟ್ಟಿಗೆ ಅದರ ವಿಷಯ ತಿಳಿದುಕೊಳ್ಳಬೇಕು ಎಂಬ ಮನೋಗತ ಕೂಡ ಅವರಿಗೆ ಇದ್ದಂತೆ ಕಾಣಲಿಲ್ಲ. ಸಂಗತಿಯನ್ನು ಬಲ್ಲ ಪಣಿಕ್ಕರ್ ಮಹಾಶಯರ ಅಭಿಪ್ರಾಯವಾದರೂ ಹೇಗಿರಬಹುದೋ ನಾವು ಕಾಣೆವು ಎನ್ನುವ ಆತಂಕ ಇಲ್ಲಿ ವ್ಯಕ್ತವಾಗಿದೆ. ಕಾಸರಗೋಡಿನ ವಿಷಯದಲ್ಲಿ ಆ ಆತಂಕ ನಿಜವಾದುದನ್ನು ಮುಂದೆ ಕಾಣಬಹುದು.
ಹೈದರಾಬಾದ್ನ ಭಾಗ ಕರ್ನಾಟಕಕ್ಕೆ ಮತ್ತೆ ಸೇರಿದರೂ ಆಗಬಹುದು. ಅದಕ್ಕಾಗಿ ಪ್ರಾಂತ ಏಕೀಕರಣ ವಿಳಂಬ ಬೇಡ ಎಂಬ ನಿಲವನ್ನು ಪತ್ರಿಕೆ ಪ್ರಕಟಿಸಿದರೆ ಆಂಧ್ರ ಮುಖ್ಯಮಂತ್ರಿ ಗೋಪಾಲರೆಡ್ಡಿ, ಹೈದರಾಬಾದ್ ಸಂಸ್ಥಾನದ ಮರಾಠಿ ಭಾಗ ಮಹಾರಾಷ್ಟ್ರಕ್ಕೆ, ಕನ್ನಡ ಭಾಗವು ಕರ್ನಾಟಕಕ್ಕೆ ಸೇರಲಿ; ಉಳಿದ ತೆಲಂಗಾಣ ಭಾಗವು ಎರಡನೇ ಆಂಧ್ರ ಪ್ರಾಂತವಾಗಲಿ ಎಂದು ಸೂಚಿಸಿದ್ದರು.
ಪ್ರಾಂತ ನಿರ್ಮಾಣಕ್ಕೆ ಸಂಬಂಧಿಸಿ ಒಕ್ಕಲ ಸೋದರರ (ಒಕ್ಕಲಿಗರು) ಅಭಿಪ್ರಾಯವನ್ನು ತಿದ್ದಲು ಮುಖ್ಯಮಂತ್ರಿ ಕೆಂಗಲ್ ಪ್ರಯತ್ನಿಸಿದರೆಂದು ತೋರುತ್ತದೆ. ಅದನ್ನು ಸ್ವಾಗತಿಸುವ ಪತ್ರಿಕೆ ಮುಖ್ಯವಾಗಿ ನಾವು ಈ ಸಂದರ್ಭದಲ್ಲಿ ನಾಡಿನ ಎರಡು ಪ್ರಮುಖ ಜನಸಮುದಾಯದವರಲ್ಲಿ ಒಂದು ವಿಜ್ಞಾಪನೆಯನ್ನು ಮಾಡಿಕೊಳ್ಳಬೇಕಾಗಿದೆ… ಒಕ್ಕಲ ಸೋದರರು ಮತ್ತು ವೀರಶೈವ ಸೋದರರು. ಎಲ್ಲ ಕರ್ನಾಟಕ ಒಂದು ಪ್ರಾಂತವಾದರೆ ಅದರಲ್ಲಿ ಒಕ್ಕಲಿಗರ ಸ್ಥಾನ ತಗ್ಗುತ್ತದೆ ಎನ್ನುವುದು ಆ ಸಮುದಾಯದ ಕೆಲವು ನಾಯಕರ ತಿಳಿವಳಿಕೆ. ಇದು ನಿಷ್ಕಾರಣವಾದ ಭಯ. ಈ ಭಯ ಮೂಡಿಸುತ್ತಿರುವುದು ಕರ್ನಾಟಕ ಒಂದಾಗಬೇಕು ಎಂಬ ವಿಷಯದಲ್ಲಿ ಮೈಸೂರಿನ ವೀರಶೈವರಲ್ಲಿ ಬಹುಜನರು ತೋರಿಸುತ್ತಿರುವ ಆತುರ. ಏಕೀಕರಣ ಬೇಕು ಎಂಬ ಸಭೆಗಳಿಗೆ ವೀರಶೈವರು ಹೆಚ್ಚು ಬರುವುದು ಈ ಸಂಬಂಧದ ಸಮಿತಿಗಳಲ್ಲಿ ವೀರಶೈವರು ಬಹುಸಂಖ್ಯಾತರಾಗಿರುವುದು ಮಾತ್ರ ಲಾಭ ಎಂದು ಯಾವನಾದರೂ ಮೂಢ ವೀರಶೈವ ತಿಳಿದಿದ್ದಾನೋ ನಾವು ಕಾಣೆವು. ಇಂಥ ಕಲ್ಪನೆ ಯಾರ ತಲೆಯಲ್ಲಾದರೂ ಇದ್ದರೆ ಅದು ನಿರಾಧಾರವಾದದ್ದು ಎಂದು ಭರವಸೆ ಕೊಡುತ್ತದೆ.
ದಕ್ಷಿಣಕನ್ನಡ ಜಿಲ್ಲೆಯ ದಕ್ಷಿಣ ಭಾಗ ಕೇರಳಕ್ಕೆ ಸೇರಬೇಕೆಂದು ಕೆಲವು ಮಲೆಯಾಳಿ ನಾಯಕರು ಕಿರುದನಿಯಲ್ಲಿ ಕೂಗುತ್ತಿದ್ದಾರೆ. ಆದರೆ ಶೇ. ೬೦ ಜನ ಮಲೆಯಾಳಿಗಳಿರುವ ಪ್ರದೇಶ ಕೇರಳಕ್ಕೆ ಹೋಗಲಿ. ಆದರೆ ಅಷ್ಟೇ ಖಂಡಿತವಾಗಿ ಶೇ. ೬೦ ಕನ್ನಡಿಗರಿರುವ ಗಡಿಪ್ರದೇಶ ಕರ್ನಾಟಕದಲ್ಲೇ ಇರಬೇಕು – ಎಂದು ಪತ್ರಿಕೆಒತ್ತಿಹೇಳುತ್ತದೆ. ಆದವಾನಿ, ರಾಯದುರ್ಗ, ಆಲೂರಿನ ಕನ್ನಡಿಗರು ಆಂಧ್ರದಿಂದ ಬರಬೇಕು ಎಂದು ಆಗ್ರಹಿಸುತ್ತದೆ.
೧೯೫೫ರ ನವೆಂಬರ್ ಹೊತ್ತಿಗೆ ಪ್ರಾಂತಗಳ ಪುನರ್ವಿಂಗಡಣೆ ಸಮಿತಿಯ ವರದಿ ಬಂತು. ಮೈಸೂರು ಸಂಸ್ಥಾನ ಮತ್ತು ಉಳಿದ ಕರ್ನಾಟಕ ಎಲ್ಲ ಸೇರಿ ಒಂದು ಪ್ರಾಂತ ಆಗಬೇಕೆಂದು ಶಿಫಾರಸು ಮಾಡಿತ್ತು. ವರದಿ ಪ್ರಕಟ ಆದೊಡನೆ ಮೈಸೂರು ಬೇರೆ ಇರಬೇಕೆಂದು ಹೇಳಿಕೆ ನೀಡಿದವರಲ್ಲಿ ಮೈಸೂರಿನ ಮೂವರು ಮಂತ್ರಿಗಳು, ಸರ್ ಎಂ. ವಿಶ್ವೇಶ್ವರಯ್ಯ ಮತ್ತು ಮಾಜಿ ದಿವಾನರಾದ ಮಿರ್ಜಾ ಇಸ್ಮಾಯಿಲ್ ಕೂಡ ಇದ್ದರು. ಆಗ ಸಂಪಾದಕೀಯದಲ್ಲಿ ಇಂತಹ ಕೆಲವರು, ಆಂಗ್ಲರು ಭಾರತವನ್ನು ಬಿಡುವುದನ್ನು ಕೂಡ ಇಷ್ಟಪಡಲಿಲ್ಲ; ಆಡಳಿತವು ವಿದ್ಯಾವಂತರ ಕೈಯಿಂದ ಸಾಮಾನ್ಯರ ಕೈಗೆ ಬರುವುದನ್ನು ಅಪೇಕ್ಷೆ ಪಡಲಿಲ್ಲ ಎಂದು ಬರೆಯಲಾಗಿತ್ತು; ವರದಿಯಲ್ಲಿ ಕರ್ನಾಟಕಕ್ಕೆ ಸೇರದಿದ್ದ ಸೊಲ್ಲಾಪುರ, ಬೀದರ್ನ ಒಂದು ಭಾಗ, ಆದವಾನಿ, ರಾಯದುರ್ಗ, ಆಲೂರು, ಕಲ್ಯಾಣದುರ್ಗ, ಮಡಕಶಿರಾ, ಹಿಂದೂಪುರ, ಹೊಸೂರು, ನೀಲಗಿರಿ, ಗೋಪಿಶೆಟ್ಟಿಪಾಳ್ಯ, ಕಾಸರಗೋಡು ಈ ಎಲ್ಲ ಗಡಿಭೂಮಿಯ ಜನರಲ್ಲಿ ತಿಳಿವಳಿಕೆಯನ್ನು ಹರಡಬೇಕು, ಸಭೆ ನಡೆಸಬೇಕು ಎಂದು ಪತ್ರಿಕೆ ಸಲಹೆ ನೀಡಿತು. ನಾಲ್ಕು ಲಕ್ಷ ಕನ್ನಡಿಗರು ಆಂಧ್ರದಲ್ಲಿ ಬಾಳಲಿ ಎಂದಂತಾಗಿದೆ. ಇದು ಸರಿಯಲ್ಲ ಎಂದು ಬಳ್ಳಾರಿಯಲ್ಲಿ ಕನ್ನಡಿಗರು ಸತ್ಯಾಗ್ರಹ ನಡೆಸಿದರು. ಬಳ್ಳಾರಿ ಪಟ್ಟಣವು ಮೈಸೂರಿಗೆಂದು ಮೂರು ಬಾರಿ ತೀರ್ಮಾನ ಆಗಿದೆ; ಈಗ ರಾಜ್ಯ ಪುನರ್ವಿಂಗಡಣೆ ಸಮಿತಿ ಮತ್ತೆ ಅದನ್ನು ನೋಡಬೇಕಿಲ್ಲ ಎಂದು ಸ್ಪಷ್ಟಪಡಿಸಲಾಯಿತು.
ಸಮಿತಿಯ ಪಕ್ಷಪಾತ
ಫಜಲಾಲಿ ಸಮಿತಿಯ ಸದಸ್ಯ ಪಣಿಕ್ಕರರು ಮಲೆಯಾಳಿ. ಕೇರಳಕ್ಕೆ ಕೆಲವು ತಮಿಳು ನೆಲ ಮತ್ತು ಕನ್ನಡ ನೆಲವನ್ನು ಸೇರಿಸುವುದು ಆವಶ್ಯಕವೆಂದು ಅವರಿಗೆ ಕಂಡಿರಬೇಕು. ಅದಕ್ಕೆ ಸಾಧಕವಾಗಿ ಅವರು ಕೆಲವು ಕಾರಣಗಳನ್ನು ಊಹಿಸಿದರು. ಅವೆಲ್ಲ ಸಮಿತಿಯ ವರದಿಯಲ್ಲಿ ಉಕ್ತವಾಗಿವೆ. ಓದಿದವರಿಗೆ ಒಂದು ಪಕ್ಷಕ್ಕಾಗಿ ಎತ್ತಿರುವ ವಾದ – ಸ್ಪೆಷಲ್ ಪ್ಲೀಡಿಂಗ್- ಆಗಿ ಕಾಣುತ್ತಿವೆ. ಇಂಥ ಕಾರಣಗಳಿಗಾಗಿ ಕಾಸರಗೋಡು ಇಡೀ ತಾಲೂಕು, ನೀಲಮೀಡು ಮುಂತಾದ ತಮಿಳುಪ್ರದೇಶ ಕೇರಳಕ್ಕೆ ಸೇರಬೇಕು ಎನ್ನುವುದಾದರೆ ಇಂಥದೇ ಕಾರಣಕ್ಕಾಗಿ ಬಳ್ಳಾರಿ ಜಿಲ್ಲೆಯ ಕನ್ನಡ ಭೂಮಿ ಆಂಧ್ರಕ್ಕೆ ಸೇರಬೇಕು ಎನ್ನುವುದು ಅದಕ್ಕೆ ಪೂರಕ ಆಗುವುದಿಲ್ಲವೆ? ಇದರ ಮೇಲೆ ಕೋಲಾರ ತೆಲುಗಾದರೂ ಅದನ್ನು ಮೈಸೂರಿಗೆ ಬಿಟ್ಟಿದ್ದೇವೆ ಎನ್ನುವ ಮಾತು ಇದ್ದೇ ಇದೆ. ಬೆಳಗಾವಿಯನ್ನು ಕರ್ನಾಟಕಕ್ಕೆ ಬಿಟ್ಟಿದ್ದೇವೆ ಎಂಬುದನ್ನು ಸಮಿತಿಯ ವರದಿ ಇದಕ್ಕೆ ಸಮ ಮಾಡಿದೆ. ಭಾಷೆ ಒಂದೇ ಗಣ್ಯವಲ್ಲ; ಇತರ ಸಂದರ್ಭಗಳನ್ನೂ ಗಣಿಸಬೇಕು ಎಂಬ ಸೂತ್ರದ ಅಡಿಯಲ್ಲ್ಲಿ ತಂದು ಸಮಿತಿ ಇದನ್ನೆಲ್ಲ ಸಮರ್ಥಿಸಿದೆ ಎಂದ ಸಂಪಾದಕರ ವ್ಯಂಗ್ಯ, ಕೇರಳಕ್ಕೆ ಮಾತ್ರ ಕನ್ನಡ, ತಮಿಳು ನೆಲವನ್ನು ಕೊಟ್ಟರೆ ಪಕ್ಷಪಾತ ಆದೀತು; ಆಂಧ್ರಕ್ಕೂ ಒಂದಷ್ಟು ಕನ್ನಡ ನೆಲವನ್ನು ಬಿಟ್ಟರೆ ಸಮಿತಿಯ ನಿಷ್ಪಕ್ಷಪಾತ ಸಿದ್ಧಾಂತವಾಯಿತು ಎಂಬಲ್ಲಿ ಶ್ರೇಷ್ಠಮಟ್ಟವನ್ನು ಮುಟ್ಟಿದೆ.
ಮೈಸೂರು ಕರ್ನಾಟಕದಲ್ಲಿ ಸೇರಿ ಒಂದು ಪ್ರಾಂತ ಆಗುವುದಕ್ಕೆ ಮೈಸೂರಿನ ಕೆಲವು ನಾಯಕರು ಅಸಮ್ಮತಿ ಸೂಚಿಸಿದ್ದರಿಂದ ಅಖಿಲ ಭಾರತ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ಸಂಬಂಧಪಟ್ಟ ಎಲ್ಲರ ಸೂಚನೆ ಕೇಳಿ ಒಂದು ನಿರ್ಧಾರಕ್ಕೆ ಬರುವ ಹೊರೆಯನ್ನು ಕಾಂಗ್ರೆಸ್ ಅಧ್ಯಕ್ಷ ಧೇಬರ್, ನೆಹರು, ಮೌಲಾನಾ ಆಜಾದ್ ಮತ್ತು ಜಿ.ಬಿ. ಪಂತ್ ಅವರ ಉಪಸಮಿತಿಗೆ ವಹಿಸಿತು. ಸಮಿತಿ ಎಲ್ಲ ಪರಿಶೀಲಿಸಿ, ಒಟ್ಟಿನಲ್ಲಿ ಕರ್ನಾಟಕ ಒಂದೇ ಪ್ರಾಂತ ಆಗಿರಬೇಕು ಎಂಬ ನಿರ್ಧಾರವನ್ನು ಹೇಳಿತು.
ಬಳ್ಳಾರಿಯ ಸುತ್ತಲಿನ ನೆಲದಲ್ಲಿ ಕನ್ನಡ ಜನ ಬಾಳುತ್ತಿದ್ದಾರೆ; ಆದ್ದರಿಂದ ಅದು ಆಂಧ್ರಕ್ಕೆ ಸೇರಬಾರದು. ಬೆಳಗಾವಿ, ಸೊಲ್ಲಾಪುರದ ಸುತ್ತಲಿನ ನೆಲದಲ್ಲಿ ಕನ್ನಡ ಜನ ಬಾಳುತ್ತಿದ್ದಾರೆ; ಆದ್ದರಿಂದ ಅದು ಮಹಾರಾಷ್ಟ್ರಕ್ಕೆ ಸೇರಕೂಡದು. ಅದೇ ರೀತಿ ಮುಂಬಯಿ ಗುಜರಾತಿಗೆ ಸೇರಬಾರೆಂದು ತೀರ್ಮಾನಿಸಲಾಯಿತು. ಕರ್ನಾಟಕವೆಲ್ಲ ಒಂದುಗೂಡಿ ಮೈಸೂರು ಎಂಬ ಹೆಸರಿನ ಒಂದು ಪ್ರಾಂತ ಆಗಬೇಕೆಂದು ಕೇಂದ್ರಸರ್ಕಾರ ಪ್ರಕಟಿಸಿತು. ಫಜಲಾಲಿ ಸಮಿತಿ ಇಡೀ ಬೀದರ್ ಜಿಲ್ಲೆಯನ್ನು ತೆಲಂಗಾಣಕ್ಕೆ ಸೇರಿಸಬೇಕೆಂದರೆ ಕೇಂದ್ರಸರ್ಕಾರ ಅದನ್ನು ಬದಲಿಸಿ ಜಿಲ್ಲೆಯ ಕನ್ನಡ ಭಾಗವನ್ನು ಕರ್ನಾಟಕಕ್ಕೆ ಸೇರಿಸಿತು. ಪ್ರಾಂತ ನಿರ್ಮಾಣ ಮಸೂದೆಯನ್ನು ಲೋಕಸಭೆಯಲ್ಲಿ ತಂದು ಬಳ್ಳಾರಿ ಕರ್ನಾಟಕದಲ್ಲೇ ಉಳಿಯುತ್ತದೆ ಎಂದು ಪ್ರಕಟಿಸಿದರು.
ಅತಂತ್ರ ಕಾಸರಗೋಡು
ತಾಲೂಕನ್ನು ಒಡೆಯಬಾರದೆಂದು ಇಡೀ ಕಾಸರಗೋಡು ತಾಲೂಕನ್ನು ಕೇರಳಕ್ಕೆ ನೀಡಲಾಗಿದೆ ಎಂಬುದು ಸಮಿತಿಯ ಒಂದು ಸಮರ್ಥನೆ. ಅದು ತಪ್ಪು. ಚಂದ್ರಗಿರಿ ಹೊಳೆಯ ದಕ್ಷಿಣಕ್ಕೂ ಕನ್ನಡದ ಜನ ಬಹುಸಂಖ್ಯೆಯಲ್ಲಿ ಇರುವ ಗ್ರಾಮಗಳು ತಕ್ಕಷ್ಟು ಇವೆ. ಆದರೂ ನಮ್ಮ ಹಿರಿಯರು ಹೊಳೆಯ ದಕ್ಷಿಣದ ಬಹುಸಂಖ್ಯೆಯ ಜನ ಮಲೆಯಾಳಿಗಳು ಎಂದು ಒಪ್ಪಿ ಅದು ಕೇರಳಕ್ಕೆ ಹೋಗಬಹುದು. ಕನ್ನಡಿಗರು ಬಹುಸಂಖ್ಯೆಯಲ್ಲಿ ಇರುವ ಹೊಳೆಯ ಉತ್ತರದ ಭಾಗ ಮಾತ್ರ ಕರ್ನಾಟಕದಲ್ಲಿರಲಿ ಎಂದು ಸೂಚಿಸಿದ್ದಾರೆ ಎನ್ನುವ ಪತ್ರಿಕೆ ಕೇಂದ್ರಸರ್ಕಾರ ಕಾಸರಗೋಡಿನ ಸಮಸ್ಯೆಯನ್ನು ಪರಿಹರಿಸಬೇಕೆಂದು ಒತ್ತಾಯಿಸಿತು; ಜನರ ಇಚ್ಛೆಯಂತೆ ಸೇರ್ಪಡೆ ಎನ್ನುವ ನೆಹರು ಮಾತನ್ನು ಇಲ್ಲಿಗೂ ಅನ್ವಯಿಸಬೇಕೆಂದು ಸೂಚಿಸಿತು, ಅದಾಗಲಿಲ್ಲ.
ದೊಡ್ಡಮನುಷ್ಯರು ಎನ್ನುವವರ ವಿಷಯದಲ್ಲಿ ಸಣ್ಣ ಮಾತನ್ನಾಡುವುದು ನಮಗೇನೂ ರುಚಿಸುವ ಸಂಗತಿಯಲ್ಲ. ದೊಡ್ಡವರಾದವರು ದೊಡ್ಡವರಾಗಿ ಉಳಿದಿರಲಿ ಎನ್ನುವ ಜೀವನ ಸಂಪಾದಕರು, ಚಂದ್ರಗಿರಿ ಹೊಳೆಯ ಉತ್ತರ ಭಾಗ ಕರ್ನಾಟಕಕ್ಕೆ ಸೇರಬೇಕಾದ್ದು ಎಂಬುದನ್ನು ಇವರು ಬಲ್ಲರು. ಇದು ಸಮಿತಿಯ ವರದಿಯಲ್ಲೇ ಉಕ್ತವಾಗಿದೆ. ಹೇಗಾದರೂ ತಾಲೂಕನ್ನು ತುಂಡರಿಸಬಾರದೆಂದು ಕಾರಣ ಹೇಳಿ ಇವರು ತಮ್ಮ ಸಲಹೆಯನ್ನು ಸಮರ್ಥಿಸಿದ್ದಾರೆ. ಆಂಧ್ರದ ಸಲುವಾಗಿ ಬಳ್ಳಾರಿ ಜಿಲ್ಲೆಯ ಒಂದು ತಾಲೂಕನ್ನು ತುಂಡರಿಸುವುದು ಇವರಿಗೆ ಸರಿ ಎಂದು ಕಂಡಿತು. ಕರ್ನಾಟಕದ ಸಲುವಾಗಿ ಈ ಕೆಲಸ ಮಾಡುವುದು ಸರಿ ಎಂದು ಕಾಣಲಿಲ್ಲ ಎಂದು ತಪ್ಪನ್ನು ಬಯಲಿಗೆಳೆದಿದ್ದಾರೆ.
ಬೆಳಗಾವಿ ಬಗೆಗೂ ಅಂದು ಸಾಕಷ್ಟು ಚರ್ಚೆ ನಡೆದಿದೆ. ಬೆಳಗಾವಿಯ ಬಹಳಷ್ಟು ಮಹಾರಾಷ್ಟ್ರರು ಕರ್ನಾಟಕಕ್ಕೆ ಬಂದು ನೆಲಸಿ ಬೆಳೆದವರು. ಇವರು ಕರ್ನಾಟಕದ ಮಕ್ಕಳಾಗಿ ಬಾಳುವುದು ಸರಿ. ಹೀಗಾಗಿ ಬೆಳಗಾವಿ ನಗರವನ್ನು ಮಹಾರಾಷ್ಟ್ರದ ಆಸ್ತಿ ಮಾಡಲು ಅಸಾಧ್ಯ ಎಂದಿದ್ದಾರೆ. ಒಂದು ಹಂತದಲ್ಲಿ ಮಹಾರಾಷ್ಟ್ರವು ಕಾರವಾರ ಕೂಡ ತನಗೆ ಸೇರಬೇಕೆಂದು ಕೇಳಿತ್ತು. ಆ ಬಗ್ಗೆ ಪತ್ರಿಕೆ ಕಾರವಾರದಲ್ಲಿ ಕನ್ನಡ ಕಡಮೆಯಾದರೆ (ಕೊಂಕಣಿ ಸ್ವಲ್ಪ ಜಾಸ್ತಿ) ಮರಾಠಿ ಇನ್ನೂ ಕಡಮೆ ಎಂದು ಹೇಳಿದೆ.
ಸಂಸದ ಬೆನಗಲ್ ಶಿವರಾವ್
ಕಾಸರಗೋಡು ಒಳಪಟ್ಟ ಅಂದಿನ ದಕ್ಷಿಣಕನ್ನಡ ಜಿಲ್ಲಾ ಲೋಕಸಭಾ ಸದಸ್ಯ ಬೆನಗಲ್ ಶಿವರಾಯರು ಕಾಸರಗೋಡಿಗೆ ಸಂಬಂಧಪಟ್ಟು ನಡೆದುಕೊಂಡ ರೀತಿಯನ್ನು ಕೂಡ ಜೀವನ ವಿಶ್ಲೇಷಣೆಗೊಳಪಡಿಸಿದೆ. ಆ ಸಂಬಂಧವಾಗಿ ಅವರು ಸದಸ್ಯತ್ವವನ್ನೇ ಬಿಟ್ಟರು ಎಂಬುದು ಪ್ರತೀತಿ. ಆದರೆ ಕಾಸರಗೋಡಿನ ಉತ್ತರಭಾಗವಾದರೂ ಕರ್ನಾಟಕಕ್ಕೆ ಸೇರಲಿ ಎಂದು ಇವರು ಸಕಾಲದಲ್ಲಿ ಹೇಳಲಿಲ್ಲ. ತಾಟಸ್ಥ್ಯದ ಹೊಣೆಯನ್ನು ಅವರು ಒಪ್ಪಿಕೊಳ್ಳಬೇಕು. ತಡವಾಗಿ ಮಂಡಿಸಿದರು; ದ್ವಿಭಾಷಾ ಪ್ರಾಂತ ಆಗಲಿ ಎಂದೂ ಹೇಳಿದರು. ಅದಕ್ಕಾಗಿ ಅವರು ಕಾಂಗ್ರೆಸ್ ತೊರೆದು (ಸದಸ್ಯತ್ವ ಅಲ್ಲ) ಪ್ರತಿಪಕ್ಷದ ಸಾಲಿನಲ್ಲಿ ಕುಳಿತರು ಎಂದು ಸಂಪಾದಕೀಯ ದಾಖಲಿಸಿದೆ.
ಪ್ರಾಂತ ಪುನಾರಚನೆ ಶಾಸನವು ಲೋಕಸಭೆಯಲ್ಲಿ ಅಂಗೀಕೃತವಾಗಿ ನವೆಂಬರ್ ಒಂದನೇ ತಾರೀಖಿನಿಂದ (೧೯೫೬) ದೇಶದ ಜನ ಬಹುಮಟ್ಟಿಗೆ ಭಾಷಾನುಗುಣ ಪ್ರಾಂತಗಳಲ್ಲಿ ಬಾಳಲು ತೊಡಗಿದರು; ಆದರೆ ಒಂದು ಕೊರೆ (ಕೊರತೆ) ಉಳಿದುಕೊಂಡಿತು. ಇಂದಿನ ಈ ಸಂತೋಷದಲ್ಲಿ ನಮ್ಮ ಜನರಿಗೆ ಸ್ವಲ್ಪ ಅತೃಪ್ತಿ ಉಳಿದಿದೆ. ತೀರ ಕನ್ನಡ ನೆಲವಾದ ಮಡಕಶಿರಾ, ಡೆಂಕಣಿಕೋಟೆ, ಕಾಸರಗೋಡುಗಳ ನಮ್ಮ ಜನ ಕನ್ನಡ ನಾಡಿನೊಳಗೆ ಸೇರಬೇಕಾದವರು ಹೊರಗಿದ್ದಾರೆ. ಇವರೆಲ್ಲ ಕನ್ನಡ ನಾಡಿನೊಳಗೆ ಬರುವವರೆಗೆ ಇವರಿಗೂ ಸುಖವಿಲ್ಲ, ನಮಗೂ ಸುಖವಿಲ್ಲ ಎಂದು ಪತ್ರಿಕೆ ಆ ಸಂದರ್ಭದಲ್ಲಿ ಹೇಳಿತು.
ಮುಂದುವರಿದು, ಹೊಸ ಮೈಸೂರಿನ ಸರ್ಕಾರ ಕರ್ನಾಟಕದೊಳಗೆ ಬರಬಯಸುವ ಕನ್ನಡ ಜನರ ಅಪೇಕ್ಷೆಗೆ ಮನ್ನಣೆ ತೋರಿ ಅವರನ್ನು ನಮ್ಮ ಆಡಳಿತದೊಳಗೆ ತಂದುಕೊಳ್ಳಲು ಸರ್ವಪ್ರಯತ್ನವನ್ನು ಮಾಡಬೇಕು, ಇದು ಹೊಸ ಸರ್ಕಾರದ ಮೊಟ್ಟಮೊದಲ ಕರ್ತವ್ಯ ಎಂದು ಸಲಹೆ ನೀಡಿತು. ಆ ಮೊಟ್ಟಮೊದಲ ಕರ್ತವ್ಯವನ್ನು ಕನ್ನಡಿಗರಾದ ನಾವು ಇನ್ನೂ ನೆರವೇರಿಸಿಲ್ಲ. ಜೈ ಕರ್ನಾಟಕ ಮಾತೆ!