ಕಪಟ-ಸ್ವೈರಾಚಾರಗಳ ಜಾಲದಲ್ಲಿ ಸಿಲುಕಿದ ಗಣ್ಯ ವ್ಯಕ್ತಿಯೊಬ್ಬ ನೇಣಿಗೇರಿದ ಮೇಲೆ ಗವರ್ನರ್-ಜನರಲನೂ ಮುಖ್ಯ ನ್ಯಾಯಾಧೀಶನೂ ಇಂಗ್ಲೆಂಡಿನ ಸಂಸತ್ತಿನಲ್ಲಿ ಅಭಿಯೋಗವನ್ನು ಎದುರಿಸುವಂತಾದ ಹದಿನೆಂಟನೇ ಶತಮಾನದ ಅವಿಸ್ಮರಣೀಯ ಪ್ರಸಂಗ ಮಹಾರಾಜ ನಂದಕುಮಾರನದು. ಅದೊಂದು ‘Judificial Murder’ ಎಂದೇ ಇತಿಹಾಸಕಾರರು ವರ್ಣಿಸಿದ್ದಾರೆ. ಭಾರತದಲ್ಲಿ ಇನ್ನೂ ಘೋಷಣೆಯೇ ಆಗಿರದಿದ್ದ ಕಾನೂನಿನ ಬಳಕೆ, ಸಣ್ಣ ತಥಾಕಥಿತ ಅಪರಾಧವೊಂದಕ್ಕೆ ಮರಣದಂಡನೆಯಂತಹ ಆತ್ಯಂತಿಕ ಶಿಕ್ಷೆ, ನ್ಯಾಯಾಲಯದ ಅಧಿಕೃತತೆಯೇ ಪ್ರಶ್ನಾರ್ಹವಾಗಿದ್ದುದು, ನ್ಯಾಯಾಲಯ ಅಸ್ತಿತ್ವಕ್ಕೆ ಬರುವುದಕ್ಕೂ ಹಿಂದೆ ನಡೆಯಿತೆಂದು ಮಂಡಿತವಾದ ಅಪರಾಧಕ್ಕೆ ಶಿಕ್ಷೆ ನೀಡಲಾದುದು, ಗವರ್ನರ್-ಜನರಲ್ ಪದಾಧಿಷ್ಠಿತರ ಸ್ವಾರ್ಥ-ಸ್ವಚ್ಛಂದತೆಗಳು – ಈ ಹಲವು ಕಾರಣಗಳಿಂದ ನಂದಕುಮಾರ್ ಪ್ರಕರಣವು ಆಂಗ್ಲ ಸಾಮ್ರಾಜ್ಯಶಾಹಿಯ ಅನೈತಿಕತೆಯ ಉಜ್ಜ್ವಲ ನಿದರ್ಶನವಾಗಿದ್ದು ನ್ಯಾಯಾಂಗದ ಇತಿಹಾಸದಲ್ಲಿಯೂ ಮಹತ್ತ್ವದ್ದೆನಿಸಿ ಅಧ್ಯಯನಾರ್ಹವಾಗಿದೆ.
೧೭೭೫ ಆಗಸ್ಟ್ ೪ರ ಸಂಜೆ. ಅಂದು ಶುಕ್ರವಾರ. ಕಲ್ಕತ್ತೆಯ ಕೊತ್ವಾಲ (ಶರೀಫ್) ಅಲೆಗ್ಸಾಂಡರ್ ಮ್ಯಾಕ್ರಬಿ ಭಾರವಾದ ಹೆಜ್ಜೆಗಳನ್ನಿಡುತ್ತ ತನ್ನ ಸೇವಾವಧಿಯಲ್ಲಿಯೇ ಅತೀವ ಯಾತನಾದಾಯಕ ಕರ್ತವ್ಯವನ್ನು ನಿರ್ವಹಿಸಲು ಮಹಾರಾಜ ನಂದಕುಮಾರನನ್ನು ಇಟ್ಟಿದ್ದ ಕೋಣೆಯತ್ತ ಸಾಗುತ್ತಿದ್ದಾನೆ. ಮರುದಿನ ಬೆಳಗ್ಗೆ ಮಹಾರಾಜನನ್ನು ಗಲ್ಲಿಗೇರಿಸಲು ಕಲ್ಕತ್ತೆಯ ಶ್ರೇಷ್ಠ ನ್ಯಾಯಾಲಯ ಆದೇಶ ನೀಡಿದೆ. ಕೋಣೆಯನ್ನು ಪ್ರವೇಶಿಸಿದ ಕೊತ್ವಾಲನನ್ನು ಕಂಡ ಮಹಾರಾಜ ನಂದಕುಮಾರ ಎಂದಿನಂತೆ ಎದ್ದು ನಮ್ರತೆಯಿಂದ ನಮಸ್ಕರಿಸಿದ. ಇಬ್ಬರೂ ಕುಳಿತು ಮಾತನಾಡತೊಡಗುತ್ತಾರೆ.
ನಂದಕುಮಾರನ ಮುಖದಲ್ಲಿ ಆತಂಕವಾಗಲಿ, ದುಗುಡವಾಗಲಿ ಇರಲಿಲ್ಲ. ಅಲೆಗ್ಸಾಂಡರ್ ಮ್ಯಾಕ್ರಬಿಯೊಂದಿಗೆ ಸಂಭಾಷಣೆಯನ್ನು ಸೌಹಾರ್ದ ಹಾಗೂ ಸ್ನೇಹಭಾವದಿಂದಲೆ ಮುಂದುವರಿಸುತ್ತಾನೆ. ಮುಂದಿರುವ ಸಾವಿನ ನೆರಳು ಆತನಲ್ಲಿ ಭಯವನ್ನಾಗಲಿ, ಆತಂಕವನ್ನಾಗಲಿ ತಂದಿರಲಿಲ್ಲ. ಇದರಿಂದ ಗಲಿಬಿಲಿಗೊಂಡು ತನಗೊದಗಲಿರುವ ದುರ್ದಶೆಯ ಅರಿವು ಆತನಿಗಿದೆಯೋ ಇಲ್ಲವೋ ಎಂಬ ಧಾವಂತ ಮ್ಯಾಕ್ರಬಿಯನ್ನು ಕಾಡತೊಡಗಿತು. ತನ್ನೊಂದಿಗೆ ಬಂದಿದ್ದ ದುಭಾಷಿಯ ಮುಖಾಂತರ ಮ್ಯಾಕ್ರಬಿ ಮರುದಿನ ಬೆಳಗ್ಗೆ ಮಹಾರಾಜ ನಂದಕುಮಾರನನ್ನು ಗಲ್ಲಿಗೇರಿಸಲು ಬಂದಿರುವ ಆದೇಶವನ್ನು ತಿಳಿಸುವನಲ್ಲದೆ ಅಪರಾಧಿಗೆ ಕೊನೆಯ ಬಾರಿಗೆ ನಮನಗಳನ್ನು ಸಲ್ಲಿಸಲು ತಾನು ಬಂದಿರುವುದಾಗಿ ವಿವರಿಸುತ್ತಾನೆ. ಅಪರಾಧಿಯ ಅಂತಿಮ ಕ್ಷಣಗಳು ಸಾಕಷ್ಟು ಸುಖಮಯವೂ, ನಿರಾತಂಕಮಯವೂ ಆಗಿರಲು ತಾನು ಎಲ್ಲ ಪ್ರಯತ್ನಗಳನ್ನು ಮಾಡುವುದಾಗಿ ಆತ ಆಶ್ವಾಸನೆ ನೀಡಿದ. ಕರ್ತವ್ಯದ ಹೊಣೆಗೆ ಕಟ್ಟುಬಿದ್ದು ತಾನು ಇದರಲ್ಲಿ ಭಾಗಿಯಾಗುತ್ತಿರುವೆನಾದರೂ ಆತನ ಎಲ್ಲ ಆಸೆಗಳನ್ನು ಪೂರೈಸಲು ನಿಗಾ ಕೊಡುವುದಾಗಿ ಮಹಾರಾಜ ನಂದಕುಮಾರನಿಗೆ ಮ್ಯಾಕ್ರಬಿ ತಿಳಿಸಿದ. ಮುಂಜಾನೆ ಮಹಾರಾಜನನ್ನು ವಧಸ್ಥಾನಕ್ಕೆ ಕರೆದೊಯ್ಯಲು ಮಹಾರಾಜನ ಸ್ವಂತದ ಮೇನೆ ಹಾಗೂ ಆಳುಗಳು ಬರುವರು, ತನಗೆ ತಿಳಿದಮಟ್ಟಿಗೆ ಮಹಾರಾಜನನ್ನು ಭೇಟಿಯಾಗಲು ಬರುವ ಆತನ ಸ್ನೇಹಿತರಿಗೆ ಎಲ್ಲ ಸೌಕರ್ಯಗಳನ್ನೂ ಒದಗಿಸಲಾಗುವುದು ಇತ್ಯಾದಿಯಾಗಿ ಹೇಳುತ್ತಾನೆ.
ಇದನ್ನೆಲ್ಲ ಸಮಚಿತ್ತದಿಂದ ಆಲಿಸಿದ ಮಹಾರಾಜ ನಂದಕುಮಾರ ತನ್ನ ಬಗ್ಗೆ ತೋರುತ್ತಿರುವ ಆದರಕ್ಕಾಗಿ ಮ್ಯಾಕ್ರಬಿಗೆ ವಂದಿಸುವನಲ್ಲದೆ ತನ್ನ ಮರಣಾನಂತರವೂ ಇದೇ ಆದರವನ್ನು ತನ್ನ ಕುಟುಂಬದ ಸದಸ್ಯರಿಗೆ ತೋರಬೇಕೆಂದು ಕೇಳಿಕೊಂಡ. ತನ್ನ ಹಣೆಯ ಮೇಲೆ ಬೆರಳನ್ನು ತೀಡುತ್ತ ವಿಧಿಬರಹವನ್ನು ಯಾರೂ ತಿದ್ದಲಾಗದು, ಭಗವಂತನ ಇಚ್ಛೆಯಂತೆ ಎಲ್ಲವೂ ನಡೆಯುತ್ತದೆ ಎಂದು ನುಡಿಯುತ್ತಾನೆ. ಜನರಲ್ ಮಾನ್ಸನ್ ಮತ್ತು ಮಾನ್ಯ ಫ್ರಾನ್ಸಿಸ್ರಿಗೆ ತನ್ನ ಅಂತಿಮ ನಮಸ್ಕಾರಗಳನ್ನು ತಿಳಿಸಿ, ತನ್ನ ಪುತ್ರ ರಾಜ ಗುರುದಾಸನಿಗೆ ಎಲ್ಲ ರೀತಿಯ ರಕ್ಷಣೆಯನ್ನೂ ನೀಡುವಂತೆ ತಾನು ಕೇಳಿಕೊಂಡಿರುವುದಾಗಿ ತನ್ನ ಪರವಾಗಿ ಸಂದೇಶ ಮುಟ್ಟಿಸಬೇಕೆಂದು ಮ್ಯಾಕ್ರಬಿಗೆ ಆತ ಪ್ರಾರ್ಥಿಸಿದ. ತನ್ನ ಮರಣಾನಂತರ ರಾಜ ಗುರುದಾಸ ಬ್ರಾಹ್ಮಣಸಮಾಜದ ಪ್ರತಿನಿಧಿಯಾಗುವನಾದ್ದರಿಂದ ಆತನಿಗೆ ಅವರ ಕೃಪಾದೃಷ್ಟಿಯ ಅಗತ್ಯವಿರುತ್ತದೆ.
ಸಮಚಿತ್ತತೆ
ಇವೆಲ್ಲ ಮಾತುಕತೆಗಳು ನಡೆಯುವಾಗ ಒಮ್ಮೆಯೂ ಮಹಾರಾಜನ ಬಾಯಿಯಿಂದ ನಿಟ್ಟುಸಿರು ಬರಲಿಲ್ಲ. ನಡೆಯಲ್ಲಿ ಅಳುಕಿಲ್ಲದೆ, ದನಿಯಲ್ಲಿ ನಡುಕವಿಲ್ಲದೆ, ಸಮಚಿತ್ತದಿಂದ ವರ್ತಿಸುತ್ತಿರುವ ಆತನ ಚರ್ಯೆಯಿಂದ ಮ್ಯಾಕ್ರಬಿ ಅಚ್ಚರಿಗೊಳಗಾಗುತ್ತಾನೆ. ಮಹಾರಾಜ ಕೆಲವೇ ಗಂಟೆಗಳ ಮೊದಲಷ್ಟೇ ತನ್ನ ಅಳಿಯ ರಾಯ್ ರಾಧೇಚರಣನನ್ನು ಬೀಳ್ಕೊಟ್ಟಿದ್ದ ವರದಿ ಮ್ಯಾಕ್ರಬಿಗೆ ತಲಪಿತ್ತಾದರೂ ಆತನ ಸ್ಥಿತಪ್ರಜ್ಞತೆಯ ಮುಂದೆ ತಾನು ಕುಬ್ಜನಾಗುತ್ತಿರುವಂತೆ ಭಾಸಕ್ಕೊಳಗಾದ ಕೊತ್ವಾಲ ಹೆಚ್ಚು ಕಾಲ ನಿಲ್ಲಲಾಗದೆ ಕೋಣೆಯಿಂದ ಹೊರಬಿದ್ದ. ಮೆಟ್ಟಲುಗಳನ್ನು ಇಳಿಯುವಾಗ ಜೊತೆಗಿದ್ದ ಸೆರೆಮನೆಯ ಅಧಿಕಾರಿ ಮ್ಯಾಕ್ರಬಿಗೆ ಮಹಾರಾಜ ತನ್ನ ಸ್ನೇಹಿತರನ್ನು ಬೀಳ್ಕೊಟ್ಟ ಬಳಿಕ ಮಾಮೂಲಿನಂತೆ ಬರವಣೆಗೆಯಲ್ಲೂ, ಲೆಕ್ಕಾಚಾರವನ್ನು ಪೂರ್ಣಗೊಳಿಸುವಲ್ಲೂ ಗಮನಹರಿಸುತ್ತಿದ್ದುದಾಗಿ ತಿಳಿಸಿದ. ಮರುದಿನ ತನ್ನ ಸಾವನ್ನು ದೃಢತೆಯಿಂದ ಎದುರಿಸಲು ಮಹಾರಾಜ ನಂದಕುಮಾರನ ನಿರ್ಧಾರವನ್ನು ಗ್ರಹಿಸಿದ ಮ್ಯಾಕ್ರಬಿ ಸೆರೆಮನೆಯಿಂದ ಬಿರಬಿರನೆ ಹೊರಕ್ಕೆ ಹೆಜ್ಜೆಹಾಕುತ್ತಾನೆ.
ಶನಿವಾರ ಬೆಳಗ್ಗೆ ೭ ಗಂಟೆಯ ಸುಮಾರಿನಲ್ಲಿ ಅಪರಾಧಿಯನ್ನು ಗಲ್ಲಿಗೇರಿಸಲು ಎಲ್ಲ ಸಿದ್ಧತೆಗಳೂ ಪೂರ್ಣಗೊಂಡಿವೆ ಎಂಬುದಾಗಿ ವರದಿ ಬಂದ ಅರ್ಧ ಗಂಟೆಯಲ್ಲಿ ಮ್ಯಾಕ್ರಬಿ ಸೆರೆಮನೆಯನ್ನು ತಲಪುತ್ತಾನೆ. ಮಹಾರಾಜನನ್ನು ಕೊನೆಯ ಬಾರಿಗೆ ಭೇಟಿ ಮಾಡಲು ಬಂದಿದ್ದವರ ಚೀತ್ಕಾರ, ನಿಟ್ಟುಸಿರು, ಆಕ್ರಂದನವನ್ನು ಇಲ್ಲಿ ಬಣ್ಣಿಸಲಾಗದು. ಕೊತ್ವಾಲ ಬಂದು ತಲಪಿದ ಸುದ್ದಿಯನ್ನು ಕೇಳಿದ ನಂದಕುಮಾರ ಕ್ಷಣ ಮಾತ್ರವೂ ತಡಮಾಡದೆ ತಕ್ಷಣ ಕೆಳಕ್ಕಿಳಿದು ಬಂದು ಮ್ಯಾಕ್ರಬಿ ಮತ್ತು ಸೆರೆಮನೆಯ ಅಧಿಕಾರಿಯ ಮುಂದೆ ಹಾಜರಾಗುತ್ತಾನೆ. ಮೊಗದಲ್ಲಿ ನಸುನಗೆಯೊಂದಿಗೆ ಅಲ್ಲಿದ್ದವರಿಗೆ ವಂದನೆ ಸಲ್ಲಿಸಿದ ಮಹಾರಾಜ ನಂದಕುಮಾರನ ಪಕ್ಕಕ್ಕೆ ಮ್ಯಾಕ್ರಬಿ ತನ್ನ ಕುರ್ಚಿಯನ್ನು ಎಳೆದುಕೊಂಡು ಕುಳಿತುಕೊಳ್ಳುವವರೆಗೂ ತಾನೂ ನಿಲ್ಲುತ್ತಾನೆ. ಅಷ್ಟರಲ್ಲಿ ಯಾರೋ ತಮ್ಮ ಕೈಗಡಿಯಾರವನ್ನು ನೋಡಿಕೊಂಡಾಗ ನಿಗದಿತ ಸಮಯವಾಯಿತೆಂದು ಭಾವಿಸಿದ ಮಹಾರಾಜ ದಢಕ್ಕನೆ ಎದ್ದುನಿಂತು ಸಮೀಪದಲ್ಲಿದ್ದ ಮೂವರು ಬ್ರಾಹ್ಮಣರಿಗೆ ಕೈಸನ್ನೆ ಮಾಡಿ ನಿಕಟಕ್ಕೆ ಕರೆದು ಮರಣಾನಂತರ ತನ್ನ ದೇಹದ ಸಂಪೂರ್ಣ ಜವಾಬ್ದಾರಿಯನ್ನು ಹೊರಿಸುವನಲ್ಲದೆ ಅದನ್ನು ಇನ್ನಾರೂ ಅಪವಿತ್ರಗೊಳಿಸದಂತೆ ನೋಡಿಕೊಳ್ಳಬೇಕೆಂದು ವಿನಂತಿ ಮಾಡುತ್ತಾನೆ.
ಅವರ ಮುಖದಲ್ಲಿ ದುಃಖ ಹೆಪ್ಪುಗಟ್ಟಿದೆ. ನಂದಕುಮಾರ ಅವರನ್ನೆಲ್ಲರನ್ನೂ ಬಲವಾಗಿ ಅಪ್ಪಿಕೊಂಡಾಗ ಹೆಪ್ಪುಗಟ್ಟಿದ ದುಃಖ ಕಟ್ಟೆಯೊಡೆದಂತಾಗಿ ಅವರು ಬಿಕ್ಕಿಬಿಕ್ಕಿ ಅಳಲಾರಂಭಿಸಿದರು. ಆದರೆ ನಂದಕುಮಾರನ ಮುಖದಲ್ಲಿ ಮಾತ್ರ ಮುಗುಳ್ನಗೆ ಮಾಸದೆ ಸ್ಥಿರತೆ ಎದ್ದುತೋರುತ್ತಿತ್ತು. ತನ್ನ ಕೈಗಡಿಯಾರವನ್ನು ನೋಡಿಕೊಂಡ ಮ್ಯಾಕ್ರಬಿ ನಿಗದಿತ ಸಮಯಕ್ಕೆ ಇನ್ನೂ ಸಾಕಷ್ಟು ವೇಳೆಯಿದೆಯೆಂದು ನಂದಕುಮಾರನಿಗೆ ತಿಳಿಸಿ ಮಹಾರಾಜ ಸಿದ್ಧನಾದಾಗ ತನಗೆ ಸೂಚಿಸಬಹುದೆಂದು ಹೇಳುತ್ತಾನೆ. ಅಗತ್ಯವಿದ್ದರೆ ತಾನು ಮಹಾರಾಜನಿಗೆ ಅನುಕೂಲವಾದ ಸಮಯದವರೆಗೂ ಕಾಯುವುದಾಗಿ ತಿಳಿಸಿದಾಗ ಮತ್ತೆ ಇಬ್ಬರೂ ಕುಳಿತುಕೊಂಡು ಸಂಭಾಷಣೆಯಲ್ಲಿ ತೊಡಗಿದರು. ವಧಸ್ಥಾನದಲ್ಲೂ ಅಂತಿಮ ಕ್ಷಣದಲ್ಲಿ ತನ್ನ ಸಿದ್ಧತೆಯನ್ನು ಸೂಚಿಸಲು ಯಾವುದಾದರೂ ಸನ್ನೆ ಮಾಡಿ ತಿಳಿಸಬೇಕೆಂದು ಆತ ಸೂಚಿಸಿದಾಗ ಮಹಾರಾಜ ತಾನೇ ಸ್ವತಃ ಕೂಗಿ ಹೇಳುವುದಾಗಿ ಸ್ಪಷ್ಟಪಡಿಸಿದ.
ಅಂತಿಮ ಇಚ್ಛೆ
ಸಾವಿನ ನೆರಳಿನಲ್ಲೂ ಅವರ ಸಂಭಾಷಣೆ ಇನ್ನೂ ಒಂದು ಗಂಟೆಯವರೆಗೂ ಮುಂದುವರಿಯುತ್ತದೆ. ಮಹಾರಾಜ ಒಂದೆರಡು ಬಾರಿ ತನ್ನ ಬಗ್ಗೆ ಹೇಳಿಕೊಂಡನಾದರೂ ಅವನ ಗಮನವೆಲ್ಲ ತನ್ನ ಪುತ್ರ ರಾಜ ಗುರುದಾಸನ ಬಗ್ಗೆ ಕೇಂದ್ರೀಕೃತವಾಗಿದೆ. ಇದಲ್ಲದೆ ಗವರ್ನರ್ಸ್ ಕೌನ್ಸಿಲ್ನ ಹೊಸ ಸದಸ್ಯರಾದ ಕರ್ನಲ್ ಮಾನ್ಸನ್, ಮಾನ್ಯ ಫ್ರಾನ್ಸಿಸ್ರನ್ನೂ ಆತ ನೆನಪಿಸಿಕೊಳ್ಳುತ್ತಾನೆ. ಮಿಕ್ಕಂತೆ ಆತನ ಸಮಯವೆಲ್ಲ ದೇವರ ಪ್ರಾರ್ಥನೆಯಲ್ಲಿ ಕಳೆಯುತ್ತಿತ್ತು. ಅವನ ತುಟಿಗಳು ಮಾತ್ರ ಚಲಿಸುತ್ತಿದ್ದವು. ಕೈಯಲ್ಲಿದ್ದ ಜಪಮಾಲೆಯಿಂದ ಒಂದೊಂದೇ ಮಣಿಗಳನ್ನು ಬೆರಳುಗಳು ಸವರಿ ಮುಂದಕ್ಕೆ ಹೋಗುತ್ತಿದ್ದವು.
ನ ಜಾಯತೇ ಮ್ರಿಯತೇ ವಾ ಕದಾಚಿ-
ನ್ನಾಯಂ ಭೂತ್ವಾ ಭವಿತಾ ವಾ ನ ಭೂಯಃ |
ಅಜೋ ನಿತ್ಯಃ ಶಾಶ್ವತೋಽಯಂ ಪುರಾಣೋ
ನ ಹನ್ಯತೇ ಹನ್ಯಮಾನೇ ಶರೀರೇ ||
ಈ ಆತ್ಮನು ಯಾವ ಕಾಲದಲ್ಲಿಯೂ ಸಹ ಹುಟ್ಟುವವನೂ ಅಲ್ಲ ಮತ್ತು ಸಾಯುವವನೂ ಅಲ್ಲ ಹಾಗೂ (ಹಿಂದೆ) ಉತ್ಪನ್ನವಾಗಿ ಈಗ ಇರುವವನೇ ಅಲ್ಲ; ಏಕೆಂದರೆ ಈ ಆತ್ಮ ಜನ್ಮರಹಿತ, ನಿತ್ಯ, ಸನಾತನ ಮತ್ತು ಪುರಾತನವಾಗಿದೆ, ಶರೀರ ಕೊಲ್ಲಲ್ಪಟ್ಟರೂ ಸಹ ಇವನು ಕೊಲ್ಲಲ್ಪಡುವುದಿಲ್ಲ.
ವಾಸಾಂಸಿ ಜೀರ್ಣಾನಿ ಯಥಾ ವಿಹಾಯ
ನವಾನಿ ಗೃಹ್ಣಾತಿ ನರೋಪರಾಣಿ |
ತಥಾ ಶರೀರಾಣಿ ವಿಹಾಯ ಜೀರ್ಣಾ-
ನ್ಯನ್ಯಾನಿ ಸಂಯಾತಿ ನವಾನಿ ದೇಹೀ ||
ಮನುಷ್ಯನು ಹಳೆಯ ಬಟ್ಟೆಯನ್ನು ತೆಗೆದುಹಾಕಿ ಬೇರೆ ಹೊಸ ಬಟ್ಟೆಯನ್ನು ಧರಿಸುವಂತೆ ಜೀವಾತ್ಮನು ಹಳೆಯ ಶರೀರವನ್ನು ಬಿಟ್ಟು ಬೇರೆ ಹೊಸ ಶರೀರದಲ್ಲಿ ಪ್ರವೇಶ ಪಡೆಯುತ್ತಾನೆ.
ನೈನಂ ಛಿಂದಂತಿ ಶಸ್ತ್ರಾಣಿ
ನೈನಂ ದಹತಿ ಪಾವಕಃ |
ನ ಚೈನಂ ಕ್ಲೇದಯಂತಿ ಆಪಃ
ನ ಶೋಷಯತಿ ಮಾರುತಃ ||
ಈ ಆತ್ಮನನ್ನು ಶಸ್ತ್ರಗಳು ಕತ್ತರಿಸಲಾರವು, ಬೆಂಕಿ ಸುಡಲಾರದು, ನೀರು ನೆನೆಯಿಸಲಾರದು ಮತ್ತು ಗಾಳಿ ಒಣಗಿಸಲಾರದು.
ಭಗವದ್ಗೀತೆಯ ಪಠಣ ಮುಗಿದಂತೆ ಮಹಾರಾಜ ನಂದಕುಮಾರ ಎದ್ದುನಿಂತು ಮ್ಯಾಕ್ರಬಿಯತ್ತ ದೃಷ್ಟಿ ಹರಿಸುತ್ತಾನೆ. ಮ್ಯಾಕ್ರಬಿ ಆತನ ಸೂಚನೆಯನ್ನು ಗ್ರಹಿಸಿದ. ನಂದಕುಮಾರ ತನ್ನ ಸೇವಕರನ್ನು ಕರೆದು ಅವರಿಗೆ ಮುಂದೆ ಮಾಡಬೇಕಾಗಿರುವುದನ್ನು ಮತ್ತೊಮ್ಮೆ ನೆನಪಿಸಿ ತಾನು ಏನಾದರೂ ಹೇಳುವುದು ಮರೆತಿದ್ದರೆ ಅದನ್ನು ರಾಜ ಗುರುದಾಸ ಪೂರ್ಣಗೊಳಿಸುವುದಾಗಿ ತಿಳಿಹೇಳುತ್ತಾನೆ. ಅನಂತರ ಉಲ್ಲಾಸದಿಂದ ತನ್ನ ಮೇನೆಯತ್ತ ಹೆಜ್ಜೆ ಹಾಕಿದ. ಮೇನೆಯನ್ನು ಹತ್ತಿ ಕುಳಿತು ಸುತ್ತಲೂ ಕಣ್ಣು ಹಾಯಿಸಿದ ನಂದಕುಮಾರನ ದೃಷ್ಟಿಯಲ್ಲಿ ಶೂನ್ಯ ಮನೆಮಾಡಿತ್ತು. ಮುಖದಲ್ಲಿ ಯಾವ ಭಾವನೆಗಳಿಗೂ ಅವಕಾಶವಿಲ್ಲದಂತೆ ಶಾಂತಿ ನೆಲಸಿದೆ. ಹುಬ್ಬುಗಳಲ್ಲಿ ಗಂಟು, ಹಣೆಯಲ್ಲಿ ನೆರಿಗೆಗಳು, ಮುಖದಲ್ಲಿ ದುಗುಡ, ಮನದಲ್ಲಿ ಅಶಾಂತಿ ಹೀಗೆ ಯಾವುದೇ ಭಾವವಿಲ್ಲದೆ ಕಂಠಪಾಠವಾಗಿರುವ ಗೀತೆಯ ಶ್ಲೋಕಗಳಿಂದ ಪಡೆದ ಸ್ಥಿತಪ್ರಜ್ಞ ರಾರಾಜಿಸುತ್ತಿದೆ. ಮೇನೆಯನ್ನು ಹಿಂಬಾಲಿಸಿದ ಕೊತ್ವಾಲ ಮತ್ತು ಆತನ ಸಹಾಯಕನಿಗೆ ಈಗ ಮಹಾರಾಜನ ಮುಖಚರ್ಯೆ ಕಾಣದಾಗಿದೆ.
ಪಾವಿತ್ರ್ಯ ಪ್ರಜ್ಞೆ
ವಧಸ್ಥಾನದಲ್ಲಿ ಸಹಸ್ರಾರು ಮಂದಿ ಸೇರಿದ್ದರೂ ದೊಂಬಿಯ ವಾತಾವರಣವಿರಲಿಲ್ಲ. ಮಹಾರಾಜನ ಮೇನೆಯನ್ನು ಹೊತ್ತ ಸೇವಕರು ಅತ್ತಿತ್ತ ತೂಗುತ್ತ ಮುಂದೆ ಮುಂದೆ ಸಾಗುತ್ತಿದ್ದರೆ ನಂದಕುಮಾರ ಸುತ್ತಲೂ ಕುತೂಹಲದಿಂದ ದೃಷ್ಟಿ ಹಾಯಿಸುತ್ತಿದ್ದ. ನೇಣುಗಂಬವನ್ನು ನೋಡಿದ ಮೇಲೂ ಅವನ ಮುಖಚರ್ಯೆಯಲ್ಲಿ ದುಃಖದುಮ್ಮಾನಗಳು ಕಾಣಲಿಲ್ಲ. ನೇಣುಗಂಬದ ಸುತ್ತಲಿನ ವಿದ್ಯಮಾನಗಳೂ ಅವನಲ್ಲಿ ಆತಂಕ ಮೂಡಿಸಲಿಲ್ಲ. ತನ್ನ ಅಂತ್ಯಕ್ರಿಯೆಯನ್ನು ಮಾಡಲು ಬ್ರಾಹ್ಮಣರಿನ್ನೂ ಬಂದಿರದ ಕಾರಣ ಆತ ಅವರ ಬಗ್ಗೆ ವಿಚಾರಿಸುತ್ತಾನೆ. ಅವರ ಆಗಮನಕ್ಕೆ ಮೊದಲೇ ತನ್ನನ್ನು ನೇಣಿಗೇರಿಸಿದರೆ ಅನಂತರ ತನ್ನ ದೇಹದ ಪಾವಿತ್ರ್ಯವನ್ನು ಕಾಪಾಡಿಕೊಳ್ಳುವುದಾದರೂ ಹೇಗೆಂಬ ಚಿಂತೆ ಆತನಲ್ಲಿ ಕಾಣಿಸಿಕೊಂಡಾಗ ಮ್ಯಾಕ್ರಬಿ ಮುಂದೆ ಬಂದು ಅವರು ಬರುವವರೆಗೂ ವಧೆಯ ಕಾರ್ಯವನ್ನು ಕೈಗೊಳ್ಳುವುದಿಲ್ಲ ಎಂದು ಭರವಸೆ ನೀಡಿದ.
ಕೆಲವೇ ಕ್ಷಣಗಳಲ್ಲಿ ಬ್ರಾಹ್ಮಣರೂ ಬಂದು ಸೇರುತ್ತಾರೆ. ಅವರೊಂದಿಗೆ ವೈಯಕ್ತಿಕವಾಗಿ ಮಹಾರಾಜ ಏನಾದರೂ ಮಾತನಾಡುವುದಿದ್ದರೆ ಅದಕ್ಕೆ ಅನುಕೂಲವಾಗಲೆಂದು ಮ್ಯಾಕ್ರಬಿ ಅಲ್ಲಿದ್ದ ಸರಕಾರಿ ಅಧಿಕಾರಿಗಳನ್ನು ದೂರ ಕಳುಹಿಸಲು ಮುಂದಾದಾಗ ಅದರ ಅಗತ್ಯವಿಲ್ಲವೆಂದು ಮಹಾರಾಜ ಆತನನ್ನು ತಡೆಯುತ್ತಾನೆ. ಬಳಿಕ ತನ್ನ ಪುತ್ರ ರಾಜ ಗುರುದಾಸ ಮತ್ತು ಕುಟುಂಬದ ಹೆಂಗಳೆಯರ ಬಗ್ಗೆ ನೀಡಿದ ಸೂಚನೆಗಳನ್ನು ಚಾಚೂತಪ್ಪದೆ ನಡೆಸಬೇಕೆಂದು ಕೋರಿಕೊಳ್ಳುತ್ತಾನೆ. ತನ್ನ ಮರಣಾನಂತರ ಪಾರ್ಥಿವ ಶರೀರವನ್ನು ಬಂದಿರುವ ಬ್ರಾಹ್ಮಣರಲ್ಲದೆ ಬೇರೆಯವರಾರೂ ಮುಟ್ಟಬಾರದೆಂದು ಮ್ಯಾಕ್ರಬಿಗೆ ಹೇಳುವ ಮಹಾರಾಜನಲ್ಲಿ ಸುತ್ತಲೂ ನೆರೆದಿದ್ದವರ ಬಗ್ಗೆ ಸ್ವಲ್ಪವೂ ಕುತೂಹಲವಿರಲಿಲ್ಲ. ನೆರೆದವರಲ್ಲಿ ಸ್ವಲ್ಪ ಅಶಾಂತಿ ಉಂಟಾಗುತ್ತಿತ್ತಾದರೂ ಇನ್ನೂ ಹೆಚ್ಚು ಹೊತ್ತು ಕಾಯುವ ವ್ಯವಧಾನವಿಲ್ಲದ ಮಹಾರಾಜ ಮಾತ್ರ ಮುಂದಿನ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸಬೇಕೆಂದು ಕೊತ್ವಾಲನಿಗೆ ಹೇಳುತ್ತಾನೆ. ಕೊನೆಯ ಗಳಿಗೆಯಲ್ಲಿ ಯಾರನ್ನಾದರೂ ನೋಡುವ ಅಪೇಕ್ಷೆ ಇದೆಯೇ ಎಂದು ಮ್ಯಾಕ್ರಬಿ ಕೇಳಿದಾಗ ಅಂತಹ ಅನೇಕರು ಇರುವರಾದರೂ ಪ್ರಸ್ತುತ ಸಮಯವಾಗಲಿ, ಸ್ಥಳವಾಗಲಿ ಅದಕ್ಕೆ ತಕ್ಕನಾದುದಲ್ಲ ಎಂದು ಆತ ಮಾರುತ್ತರ ನೀಡುತ್ತಾನೆ. ಕೊನೆಗೂ ನಂದಕುಮಾರ ಯಾರದೋ ಹೆಸರನ್ನು ಹೇಳಿದಾಗ ಅದನ್ನು ಗಟ್ಟಿಯಾಗಿ ಘೋಷಿಸಲಾಯಿತು. ಆದರೆ ಆ ವ್ಯಕ್ತಿ ಮುಂದೆ ಬಾರದಿದ್ದಾಗ ಹೋಗಲಿ ಬಿಡಿ, ಆತ ಇಲ್ಲಿಗೆ ಬಂದಿರಲಾರ ಎಂದು ಕೊತ್ವಾಲನಿಗೆ ಸಮಾಧಾನಪಡಿಸುವ ಸರದಿ ಆತನದು. ಮಿಕ್ಕಂತೆ ಸಿದ್ಧತೆಗಳು ಮುಂದುವರಿಯುತ್ತಿದ್ದಾಗ ಆತ ತನ್ನ ಮೇನೆಯಲ್ಲಿ ಒರಗಿ ಕುಳಿತು ಭಗವಂತನ ನಾಮಸ್ಮರಣೆಯನ್ನು ಮುಂದುವರಿಸಿದ.
ಕೊನೆಯ ಅಂಕ
ಅಂತಿಮ ಸಂಕೇತ ನೀಡುವ ಬಗ್ಗೆ ಮ್ಯಾಕ್ರಬಿ ಮತ್ತೊಮ್ಮೆ ಆತನೊಂದಿಗೆ ಚರ್ಚಿಸುತ್ತಾನೆ. ಮಹಾರಾಜ ಕೂಗಿ ಹೇಳುವುದು ಸುತ್ತಲೂ ನೆರೆದಿದ್ದ ಜನಜಂಗುಳಿಯ ಸದ್ದಿನಲ್ಲಿ ಕೇಳಿಬರಲಾರದು ಎಂದು ಮ್ಯಾಕ್ರಬಿ ನುಡಿದಾಗ ತನ್ನ ಕೈಗಳನ್ನು ಎತ್ತಿ ಆಡಿಸುವುದಾಗಿ ನಂದಕುಮಾರ ಸೂಚಿಸಿದ. ಆದರೆ ಕೈಗಳನ್ನು ಹಿಂದಕ್ಕೆ ಕಟ್ಟುವುದರಿಂದ ಅದು ಸಾಧ್ಯವಿಲ್ಲ, ಬದಲಿಗೆ ಕಾಲನ್ನು ಬಡಿದು ಸಂಕೇತ ನೀಡಬಹುದು ಎಂದು ಮ್ಯಾಕ್ರಬಿ ಹೇಳುತ್ತಾನೆ. ಆ ವೇಳೆಗೆ ಎಲ್ಲ ಸಿದ್ಧತೆಗಳು ಮುಗಿದಿದ್ದರಿಂದ ತಾನು ನಿರ್ವಹಿಸಬೇಕಾದ ಅಂತಿಮ ಕಾರ್ಯವನ್ನು ನೆನೆದು ಮ್ಯಾಕ್ರಬಿಯ ಮನ ಭಾರವಾಯಿತು. ಮಹಾರಾಜ ನಂದಕುಮಾರನ ಮೇನೆಯನ್ನು ಗಲ್ಲುಗಂಬದ ಬಳಿಗೆ ಕೊಂಡೊಯ್ಯುವಂತೆ ಮ್ಯಾಕ್ರಬಿ ಆಳುಗಳಿಗೆ ಸೂಚಿಸಿದಾಗ ಅವರನ್ನು ತಡೆದ ಮಹಾರಾಜ ಎಂದಿಗಿಂತಲೂ ಹೆಚ್ಚಾಗಿ ಎದೆ ಸೆಟೆದುಕೊಂಡು, ದಿಟ್ಟ ಹೆಜ್ಜೆಗಳನ್ನು ಹಾಕುತ್ತ ತಾನೇ ಸ್ವತಃ ಗಲ್ಲುಗಂಬವನ್ನು ತಲಪಿದ.
ಆತ ನೇಣುಗಂಬದ ಬಳಿ ಬಂದಾಗ ಆತನ ಕೈಗಳನ್ನು ಹಿಂದಕ್ಕೆಳೆದು ಕರವಸ್ತ್ರವೊಂದರಿಂದ ಬಂಧಿಸಲಾಯಿತು. ಸುತ್ತಲೂ ದೃಷ್ಟಿ ಹಾಯಿಸುತ್ತಿದ್ದ ನಂದಕುಮಾರನ ಕಣ್ಣುಗಳಲ್ಲಿ ನಿರಾಸಕ್ತಿ ಮನೆಮಾಡಿದೆ. ಕೈಗಳನ್ನು ಹಿಂದಕ್ಕೆ ಕಟ್ಟಿರುವುದರಿಂದ ಕೊಂಚ ತಡಬಡಾಯಿಸಿದಂತಾದರೂ ಸಾವರಿಸಿಕೊಂಡು ನೇಣುಗಂಬದ ಮಂಚವನ್ನೇರಲು ಇದ್ದ ಮೆಟ್ಟಲುಗಳನ್ನು ಒಂದೊಂದಾಗಿ ಏರುತ್ತಾನೆ! ನೇರವಾಗಿ ಕುಣಿಕೆಯ ಕೆಳಗೆ ನಿಂತ ಆತನ ಮುಖವನ್ನು ಬಟ್ಟೆಯಿಂದ ಮುಚ್ಚಬೇಕು. ಸರಕಾರಿ ಅಧಿಕಾರಿಗಳು ಈ ಕಾರ್ಯ ನಿರ್ವಹಿಸುವುದನ್ನು ಆತ ವಿರೋಧಿಸಿದಾಗ ಮ್ಯಾಕ್ರಬಿ ಅಲ್ಲಿಯೇ ಹಾಜರಿದ್ದ ಬ್ರಾಹ್ಮಣ ಸಿಪಾಯಿಯೊಬ್ಬನನ್ನು ಕರೆಯುತ್ತಾನೆ. ಆದರೆ ಇದಕ್ಕೆ ಒಪ್ಪದ ನಂದಕುಮಾರ ತನ್ನ ಪಾದಕ್ಕೆರಗಿದ್ದ ಒಬ್ಬ ಸೇವಕ ಬಟ್ಟೆಯನ್ನು ಕಟ್ಟಬೇಕೆಂದು ಸೂಚಿಸುತ್ತಾನೆ. ಆತನ ಮುಖ ವಸ್ತ್ರದಿಂದ ಆವರಿಸುವವರೆಗೂ ಮ್ಯಾಕ್ರಬಿ ನೆಟ್ಟ ನೋಟದಿಂದ ಅದರ ಮೇಲೆ ಮೂಡಬಹುದಾದ ಭಯ ಅಥವಾ ಆತಂಕವನ್ನು ಕಾಣಲು ಪ್ರಯತ್ನಿಸುವನಾದರೂ ಆ ಭಾವರಹಿತ ಮುಖದಲ್ಲಿ ಅವನಿಗೆ ತೋರಿಬರುವಂತಹದ್ದೇನೂ ಇರಲಿಲ್ಲ.
ನಂದಕುಮಾರನ ಮುಖವನ್ನು ಮುಚ್ಚುತ್ತಿದ್ದಂತೆ ಮ್ಯಾಕ್ರಬಿಗೆ ತನ್ನ ಕಾಲ ಕೆಳಗಿನ ನೆಲವೇ ಕುಸಿದಂತೆ ಭಾಸವಾಗಿ ಹೊಟ್ಟೆ ತೊಳೆಸುವ ಅನುಭವದಿಂದ ನೆಟ್ಟಗೆ ನಿಲ್ಲಲಾರದೆ ತನ್ನ ಮೇನೆಯನ್ನು ಸೇರಿಕೊಳ್ಳುವ ಕೆಲವೇ ಕ್ಷಣಗಳ ಮೊದಲಷ್ಟೇ ನಂದಕುಮಾರ ತನ್ನ ಕಾಲುಗಳನ್ನು ಬಡಿದು ವಧೆಗಾರನಿಗೆ ಸೂಚನೆ ನೀಡುತ್ತಾನೆ. ಅವನ ಕಾಲ ಕೆಳಗಿನ ಅಟ್ಟಣಿಗೆಯನ್ನು ಎಳೆಯಲಾಯಿತು. ಧಸಕ್ಕನೆ ಜಗ್ಗಿದ ದೇಹ ನೇಣಿನ ಕುಣಿಕೆಗೆ ಸಿಕ್ಕಿ ಜಗ್ಗಾಡತೊಡಗಿತು. ಆಘಾತದಿಂದ ಸಾವರಿಸಿಕೊಂಡ ಮ್ಯಾಕ್ರಬಿ ಸಾವಕಾಶವಾಗಿ ಆತನ ದೇಹದತ್ತ ದಿಟ್ಟಿಸುತ್ತಾನೆ. ಸಾವಿನ ಗಳಿಗೆಯಲ್ಲೂ ಅಲ್ಲಿ ನಿರಾಸಕ್ತಿ ಮನೆಮಾಡಿದೆ. ಹಿಂದಕ್ಕೆಳೆದು ಕಟ್ಟಿದ ಕೈಗಳು ತಮ್ಮ ಸ್ಥಾನದಿಂದ ಸ್ವಲ್ಪವೂ ವಿಚಲಿತಗೊಳ್ಳಲಿಲ್ಲ. ನಿಗದಿತ ಸಮಯದ ಬಳಿಕ ಶವವನ್ನು ಕೆಳಕ್ಕಿಳಿಸಿ ಅದನ್ನು ಅಂತಿಮ ಸಂಸ್ಕಾರಕ್ಕಾಗಿ ಬ್ರಾಹ್ಮಣರಿಗೆ ಒಪ್ಪಿಸಲಾಯಿತು.
* * *
ವಧಸ್ಥಾನದಿಂದ ಕೇವಲ ಅರ್ಧ ಮೈಲಿ ದೂರದಲ್ಲಿದ್ದ ಕೋಲ್ಕತಾದ ಫೋರ್ಟ್ ವಿಲಿಯಂನ ದಿಡ್ಡಿಗೋಡೆಯ ಮೇಲೆ ನಿಂತು ನಂದಕುಮಾರನನ್ನು ನೇಣಿಗೇರಿಸುವುದನ್ನು ವೀಕ್ಷಿಸುತ್ತಿದ್ದ ಕ್ಯಾಪ್ಟನ್ ಕೋವ್ ಅದಾದ ಅನೇಕ ವರ್ಷಗಳ ಬಳಿಕ ಸಂಸದೀಯ ಸಮಿತಿಯ ಮುಂದೆ ನೀಡಿದ ಸಾಕ್ಷ್ಯದಲ್ಲಿ ಅಂದು ಸುಮಾರು ೮-೧೦ ಸಾವಿರ ಮಂದಿ ವಧಸ್ಥಾನದಲ್ಲಿ ಸೇರಿದ್ದರು. ರಾಜನನ್ನು ಗಲ್ಲಿಗೇರಿಸುತ್ತಿದ್ದಂತೆ ಅದನ್ನು ಕಣ್ಣಾರೆ ಕಂಡ ನೂರಾರು ಮಂದಿ ಆಹ್ ಬಾಪ್ ರೇ ಎಂದು ಆಕ್ರಂದನ ಮಾಡುತ್ತ ಓಡಿ ಗಂಗಾನದಿಯಲ್ಲಿ ಮುಳುಗೆದ್ದರು ಎಂದು ನುಡಿಯುತ್ತಾನೆ.
ಸಂಸದೀಯ ಸಮಿತಿಯ ಮುಂದೆ ಹಾಜರಾದ ಮತ್ತೊಬ್ಬ ಸಾಕ್ಷಿ ಕ್ಯಾಪ್ಟನ್ ಪ್ರಿನ್ಸ್ ಕ್ಯಾಪ್ಟನ್ ಕೋವ್ನ ಸಾಕ್ಷ್ಯವನ್ನು ಅಲ್ಲಗಳೆಯುವನಲ್ಲದೆ ಆತನ ಹೇಳಿಕೆಗೆ ಕಾಸಿನ ಬೆಲೆಯೂ ಕೊಡಲಾಗದು. ದೇಶೀಯರ ಆಚಾರವಿಚಾರಗಳ ಬಗ್ಗೆ ಎಳ್ಳಷ್ಟೂ ಜ್ಞಾನವಿಲ್ಲದ ಕೋವ್ ಬಹುಸಂಖ್ಯಾತ ಸದಸ್ಯರು ಕೋಲ್ಕತಾದಲ್ಲಿ ಬಂದಿಳಿಯುವ ಕೆಲ ದಿನಗಳ ಮೊದಲಷ್ಟೇ ಕಾಲಿಟ್ಟಿರುತ್ತಾನೆ ಎಂದು ಹೇಳುತ್ತಾನೆ. ಸಮಿತಿಗೆ ಆಹ್ ಬಾಪ್ ರೇ ಎಂಬ ಉದ್ಗಾರವನ್ನು ವಿವರಿಸುತ್ತ ಆತ ಒಬ್ಬ ಹಿಂದು ಒಂದು ಹಸುವಿನ ಕರುವಿಗೆ ಹೊಡೆದಾಗ, ಮನೆಗೆ ಬೆಂಕಿ ಬಿದ್ದಾಗ, ಯಾವುದಾದರೂ ಪಿಂಗಾಣಿ ಸಾಮಗ್ರಿ ಒಡೆದಾಗ, ತನ್ನ ಬೆರಳಿಗೆ ಗಾಯವಾದಾಗ, ಇಬ್ಬರು ಯೂರೋಪಿಯನ್ನರು ಗುದ್ದಾಡಿದಾಗ ಅಥವಾ ಒಂದು ಗುಬ್ಬಚ್ಚಿಯನ್ನು ಕೊಂದಾಗಲೂ ಇದೇ ಉದ್ಗಾರವನ್ನು ತೆಗೆಯುತ್ತಾನೆ. ರಾಜನನ್ನು ಗಲ್ಲಿಗೇರಿಸಿದ ದೃಶ್ಯವನ್ನು ಕಂಡ ಹಿಂದೂಗಳು ಅದರಿಂದ ಮೈಲಿಗೆಯಾಯಿತೆಂದು ತಮಗೆ ತೋಚಿದ ಸುಲಭ ಉಪಾಯದಂತೆ ಓಡಿ ಗಂಗಾನದಿಯಲ್ಲಿ ಮುಳುಗೆದ್ದಿದ್ದಾರೆ. ಒಬ್ಬ ಸಾಮಾನ್ಯ ಕಳ್ಳನನ್ನು ಮುಟ್ಟಿಸಿಕೊಂಡಾಗ, ಒಬ್ಬ ಯೂರೋಪಿಯನ್ನನ ಎಂಜಲು ಅವರ ಬಟ್ಟೆಯ ಮೇಲೆ ಸಿಡಿದಾಗ, ಒಂದು ಶವವನ್ನು ಮುಟ್ಟಿದಾಗ ಅಥವಾ ಇಂತಹ ಐವತ್ತು ಸಾವಿರ ಕ್ಷುಲ್ಲಕ ಕಾರಣಗಳಿಂದಾದ ಮೈಲಿಗೆಯನ್ನು ತೊಳೆದುಕೊಳ್ಳಲು ಸಾವಿರಾರು ಹಿಂದು ಸ್ತ್ರೀ ಪುರುಷರು, ಮಕ್ಕಳು ಒಟ್ಟಾಗಿ ಸೇರಿ ಹಗಲು ರಾತ್ರಿ, ಬೆಳಗ್ಗೆ, ಸಂಜೆ, ಬೇಸಿಗೆ ಮಳೆಗಾಲ ಎಂಬುದನ್ನು ಲೆಕ್ಕಿಸದೆ ಗಂಗಾನದಿಯಲ್ಲಿ ಮುಳುಗೇಳುವುದು ಸಾಮಾನ್ಯ ದೃಶ್ಯವಾಗಿರುತ್ತದೆ. ತಮ್ಮ ದೇಹ, ಆತ್ಮ, ವಸ್ತ್ರಕ್ಕೆ ತಗಲಿರುವ ಮೈಲಿಗೆಯನ್ನು ಶುದ್ಧಗೊಳಿಸಲು ಅವರಿಗಿರುವ ಸುಲಭೋಪಾಯ ಇದಾಗಿದೆ ಎಂದು ತಿಳಿಸುತ್ತಾನೆ.
ಇಂಗ್ಲಿಷರು ಭಾರತಕ್ಕೆ ನೀಡಿದ ತಮ್ಮ ನ್ಯಾಯ ಪ್ರಣಾಳಿಕೆಯ ಇತಿಹಾಸದ ಆದಿಯಲ್ಲೇ ಒಬ್ಬ ಅಮಾಯಕ ಬ್ರಾಹ್ಮಣನನ್ನು ರಾಜಕೀಯ ಕುತಂತ್ರಕ್ಕೆ ಒಳಪಡಿಸಿ ಹೀಗೆ ನೇಣಿಗೇರಿಸಿದ್ದು ಇಂದಿಗೂ ಇತಿಹಾಸಕಾರರಲ್ಲಿ ಚರ್ಚೆಗೆ ಗ್ರಾಸವಾಗಿದೆ. ಮಹಾರಾಜ ನಂದಕುಮಾರ ಅಮಾಯಕನೆ? ಒಬ್ಬ ನಿರಪರಾಧಿಯನ್ನು ಇಂಗ್ಲಿಷರು ದಾಳವನ್ನಾಗಿ ಬಳಸಿ ಅವನ ಸಾವಿಗೆ ಕಾರಣರಾದರೇ? ಭಾರತಕ್ಕೆ ಅನ್ವಯಿಸದ ಕಾನೂನಿನ ಬಳಕೆ, ನ್ಯಾಯ ಪ್ರಣಾಳಿಕೆ, ನ್ಯಾಯಾಲಯದ ವ್ಯಾಪ್ತಿಯ ಉಲ್ಲಂಘನೆ, ನ್ಯಾಯಾಧೀಶರು ಮತ್ತು ರಾಜಕಾರಣಿಗಳ ಅನೈತಿಕ ಸ್ನೇಹದ ಪಿತೂರಿಯ ಫಲವಾಗಿ ಮಹಾರಾಜ ನಂದಕುಮಾರ ತನ್ನ ಜೀವವನ್ನೇ ಕಳೆದುಕೊಂಡನೇ?
ಎರಡು ಶತಮಾನಗಳಿಗೂ ಮೀರಿ ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನ ಮಾತ್ರ ಅವ್ಯಾಹತವಾಗಿ ಸಾಗುತ್ತಲೇ ಇದೆ.
* * *
ಸಾಮ್ರಾಜ್ಯದ ಉಗಮದ ಭೂಮಿಕೆ
ಭಾರತದಲ್ಲಿ ಬ್ರಿಟಿಷ್ ಸಾಮ್ರಾಜ್ಯ ಸ್ಥಾಪನೆಯನ್ನು ಒಂದು ಮಹಾನ್ ಸಾಹಸವೆಂದು ಹಲವರು ಆಂಗ್ಲರಿಂದ ವರ್ಣಿಸಲಾಗುತ್ತದೆ. ಇದಕ್ಕೆ ಅಸ್ತಿಭಾರ ಹಾಕಿದ ಮಹಾನುಭಾವರೆಂದು ರಾಬರ್ಟ್ ಕ್ಲೈವ್, ವಾರೆನ್ ಹೇಸ್ಟಿಂಗ್ಸ್, ವಿಲಿಯಂ ಬೆಂಟಿಂಕ್, ಡಾಲ್ಹೌಸಿ ಮೊದಲಾದವರ ಹೆಸರುಗಳನ್ನು ಕೊಂಡಾಡಲಾಗುತ್ತದೆ. ಅಸಾಧಾರಣ ಬುದ್ಧಿಮತ್ತೆ, ಸ್ಥೈರ್ಯ, ಸಾಹಸ, ರಾಜಕೀಯ ಮುತ್ಸದ್ದಿತನ, ನಿಃಸ್ವಾರ್ಥ ಸೇವೆ, ಪ್ರಜಾನುರಾಗಿ ಆಡಳಿತ, ಪಕ್ಷಪಾತರಹಿತ ನ್ಯಾಯಾಂಗ ಪ್ರಣಾಳಿಕೆ ಮೊದಲಾದವುಗಳು ಬ್ರಿಟಿಷರ ಸಹಜಗುಣವೆಂದೂ ಅವು ಭಾರತಕ್ಕೆ ತಾವು ನೀಡಿದ ಮಹಾನ್ ಕೊಡುಗೆಯೆಂದೂ ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುವ ಆಗಿನ ಇತಿಹಾಸಕಾರರು ಇವರನ್ನೆಲ್ಲ ಅಟ್ಟಕ್ಕೇರಿಸಿ ಕೊಂಡಾಡುತ್ತಾರಾದರೂ ಈ ಹೊಗಳಿಕೆಯ ಹಿಮಾಲಯದಡಿಯಲ್ಲಿ ಎಲ್ಲೋ ಹುದುಗಿ ಹೋಗಿರುವ ಅವರ ಭ್ರಷ್ಟಾಚಾರ, ಕುತ್ಸಿತತೆ, ಪಿತೂರಿ, ವಿಶ್ವಾಸದ್ರೋಹದ ಕಥೆಗಳು ಶೀತಲ ಮಂಜುಗಡ್ಡೆಯಂತೆ ಹೆಪ್ಪುಗಟ್ಟಿವೆ. ಆದರೆ ಇಂತಹ ಹುಳುಕುಗಳನ್ನು ಆಮೇಲಿನ ಕಾಲದಲ್ಲಿ ಬಯಲಿಗೆಳೆದವರೂ ಬ್ರಿಟಿಷರೇ ಆಗಿದ್ದಾರೆ ಎಂಬುದೂ ಅಷ್ಟೇ ವಾಸ್ತವ ಸಂಗತಿ. ಇದರಲ್ಲಿ ಇಂಗ್ಲಿಷರ ಸತ್ಯಪ್ರಿಯತೆಗಿಂತಲೂ ಹೆಚ್ಚಾಗಿ ಅಂದಿನ ಇಂಗ್ಲೆಂಡ್ನ ರಾಜಕೀಯದಲ್ಲಿ ಪ್ರಚಲಿತವಾಗಿದ್ದ ಪಕ್ಷ ರಾಜಕಾರಣದ ಪ್ರಭಾವ ಒಂದೆಡೆಯಾದರೆ ಈಸ್ಟ್ ಇಂಡಿಯ ಕಂಪೆನಿಯ ಪ್ರಭಾವಕ್ಕೆ ಕಡಿವಾಣ ಹಾಕಬೇಕೆನ್ನುವ ರಾಜಕಾರಣಿಗಳ ಹುನ್ನಾರವೂ ಅಡಗಿದೆ. ಇಂಗ್ಲೆಂಡ್ನಿಂದ ಈಸ್ಟ್ ಇಂಡಿಯ ಕಂಪೆನಿಯಲ್ಲಿ ಕೆಲಸಕ್ಕೆಂದು ಸೇರಿ ಭಾರತಕ್ಕೆ ಆಗಮಿಸಿದವರಿಗೆಲ್ಲ ಇಲ್ಲಿ ದೊರೆತ ನಿರಂಕುಶ ಅಧಿಕಾರ ವಿಫುಲವಾಗಿ ಹಣ ಗಳಿಕೆಯ ಅವಕಾಶವಾಗಿ ಪರಿಣಮಿಸಿತು.
೧೭೫೭ರ ಜೂನ್ ೨೩ರಂದು ಪ್ಲಾಸಿಯಲ್ಲಿ ನಡೆದ ಯುದ್ಧದಲ್ಲಿ ರಾಬರ್ಟ್ ಕ್ಲೈವ್ ತನ್ನ ಸಾಹಸದಿಂದ ಬಂಗಾಳದ ನವಾಬ ಸಿರಾಜ್ ಉದ್ದೌಲನನ್ನು ಸೋಲಿಸಿ ಬ್ರಿಟಿಷರಿಗೊಂದು ಬಲವಾದ ನೆಲೆಯನ್ನೊದಗಿಸಿದ.
ಕ್ಲೈವನ ಸಾಹಸ
ಸಿರಾಜ್ ಉದ್ದೌಲನ ಈ ಸೋಲಿಗೆ ಕ್ಲೈವ್ನ ಸಾಹಸದಷ್ಟೇ ಉದ್ದೌಲನ ಸೇನಾಧಿಪತಿಗಳ ವಿಶ್ವಾಸಘಾತವೂ ಕಾರಣ. ಇದಕ್ಕೆ ಕ್ಲೈವ್ ಹೂಡಿದ ಪಿತೂರಿ ಮುಖ್ಯವಾಗುತ್ತದೆ. ಸಿರಾಜ್ ಉದ್ದೌಲನ ಮರಣಾನಂತರ ಬಂಗಾಳದ ನವಾಬಗಿರಿಯನ್ನು ತನ್ನ ಮನಬಂದಂತೆ ಬೇಕಾದವರಿಗೆ ನೀಡುವ ಮೂಲಕ ಕ್ಲೈವ್ ಲಕ್ಷಾಂತರ ರೂಪಾಯಿಗಳ ಭ್ರಷ್ಟಾಚಾರದಲ್ಲಿ ತೊಡಗಿದುದರ ಆರೋಪಕ್ಕೆ ಒಳಗಾಗುತ್ತಾನೆ. ಹೀಗೆ ಜೀವನೋಪಾಯಕ್ಕಾಗಿ ಕಾರಕೂನನಾಗಿ ಬಂದಿದ್ದ ಕ್ಲೈವ್ನ ಲೇಖನಿ ರಕ್ತದ ರುಚಿ ಕಂಡು ಖಡ್ಗವಾಗಿ ಮಾರ್ಪಟ್ಟ ಬಳಿಕ ತನ್ನ ಒರೆಯನ್ನೆಂದೂ ಸೇರಲಿಲ್ಲ.
ಮುಘಲ್ ಸಮ್ರಾಟ ಔರಂಗಜೇಬನ ಮರಣಾನಂತರ ಬಂದ ಅಶಕ್ತ ದೊರೆಗಳ ಸರಣಿ, ಉತ್ತರದಿಂದ ನಡೆದ ಆಫಘಾನ್ ಆಕ್ರಮಣಗಳು, ಸಿಂಹಾಸನಕ್ಕಾಗಿ ನಡೆದ ಅಂತಃಕಲಹ ಮತ್ತು ಪಿತೂರಿ, ಮರಾಠ ಶಕ್ತಿಯ ಪ್ರಾಬಲ್ಯ ವರ್ಧನೆ, ಮುಘಲ್ ದೊರೆಗಳ ದುರ್ಬಲತೆಯ ಲಾಭ ಪಡೆಯುವ ಅವರ ಸಾಮಂತವರ್ಗದ ಮಹತ್ತ್ವಾಕಾಂಕ್ಷೆ ಮತ್ತು ಸ್ವತಂತ್ರ ಪ್ರವೃತ್ತಿ – ಹೀಗೆ ಹಲವಾರು ಕಾರಣಗಳಿಂದ ಸಾಮ್ರಾಜ್ಯ ಛಿದ್ರವಾಗತೊಡಗಿದಾಗ ವ್ಯಾಪಾರಕ್ಕಾಗಿ ತಕ್ಕಡಿ ಹಿಡಿದು ಬಂದಿದ್ದ ಪೋರ್ಚುಗೀಸ್, ಡಚ್, ಫ್ರೆಂಚ್ ಮತ್ತು ಇಂಗ್ಲಿಷರಿಗೆ ತಮ್ಮ ವಸಾಹತುಗಳನ್ನು ಬೆಳೆಸಿಕೊಳ್ಳಲು ಇಲ್ಲಿಯ ಶ್ರೀಮಂತ, ಸಮೃದ್ಧ, ಜಲ, ನೆಲ, ಹವಾಗುಣಗಳು ಫಲವತ್ತಾಗಿ ಕಂಡುಬಂದರೆ ಎಲ್ಲಕ್ಕೂ ಮಿಗಿಲಾಗಿ ಭಾರತೀಯರಲ್ಲಿದ್ದ ದೂರದೃಷ್ಟಿಯ ಅಭಾವ, ಅಂತಃಕಲಹದ ಪ್ರವೃತ್ತಿ, ಪರಕೀಯರೊಂದಿಗೆ ಕೈಜೋಡಿಸಿ ತಮ್ಮವರನ್ನೇ ಬಗ್ಗುಬಡಿಯುವ ಕುತ್ಸಿತ ಮನೋಭಾವ – ಇವು ರಸಗೊಬ್ಬರವಾಗಿ ಪರಿಣಮಿಸುತ್ತದೆ.
ಮೊಘಲ್ ಸಾಮ್ರಾಜ್ಯದ ಅವನತಿಯ ಲಾಭ ಪಡೆಯಲು ಯತ್ನಿಸುವಲ್ಲಿ ಬಂಗಾಳ ಮತ್ತು ಅವಧದ ನವಾಬರು ಹಿಂದೆ ಉಳಿಯುವುದಿಲ್ಲ. ಮೊಘಲ್ ಸಾಮ್ರಾಜ್ಯದಲ್ಲಿ ಬಂಗಾಳ, ಬಿಹಾರ ಮತ್ತು ಒರಿಸ್ಸಾಗಳು ಒಂದು ಪ್ರಾಂತವಾಗಿದ್ದು ಇದರ ಆಧಿಪತ್ಯ ಒಬ್ಬನೇ ನವಾಬನ ಕೈಕೆಳಗಿರುತ್ತದೆ. ಮೊಘಲ್ ಆಡಳಿತ ವ್ಯವಸ್ಥೆಯಲ್ಲಿ ಈ ಪ್ರಾಂತದ ಶಾಂತಿ, ವ್ಯವಸ್ಥೆ, ಸೈನಿಕ ಸುಭದ್ರತೆ ನವಾಬನ ಹೊಣೆಯಾದರೆ ಅವನ ಕೈಕೆಳಗಿನ ದಿವಾನ ರಾಜ್ಯದ ಕಂದಾಯ ವಸೂಲಿಗೆ ಹೊಣೆಯಾಗಿರುತ್ತಾನೆ. ಪ್ರಾರಂಭದಲ್ಲಿ ಮೊಘಲ್ ಸಮ್ರಾಟ ತನ್ನ ಮನಬಂದವರನ್ನು ನವಾಬರನ್ನಾಗಿ ನೇಮಿಸುವುದಾಗಲಿ, ಬೇಡವೆನಿಸಿದಾಗ ಕಿತ್ತೊಗೆಯುವುದಾಗಲಿ ಮಾಡಬಲ್ಲವನಾಗಿದ್ದ. ಆದರೆ ಕ್ರಮೇಣ ಇದು ವಂಶಪಾರಂಪರ್ಯ ಹುದ್ದೆಯಾಗಿ ಪರಿವರ್ತನೆಗೊಳ್ಳುತ್ತದೆ. ನವಾಬ ಮತ್ತು ದಿವಾನ ಇಬ್ಬರೂ ಬೇರೆಬೇರೆ ವ್ಯಕ್ತಿಗಳಾಗಿದ್ದು, ದಿವಾನನು ಸಾಮಾನ್ಯವಾಗಿ ನವಾಬನ ಆಡಳಿತಕ್ಕೆ ಬೇಕಾಗುವ ಹಣವನ್ನು ನಿಯಂತ್ರಿಸುವ ಮೂಲಕ ಸಮ್ರಾಟನ ವಿರುದ್ಧ ಯಾರೂ ಪಿತೂರಿಗಿಳಿದು ಸೈನಿಕ ಜಮಾವಣೆಗೆ ತೊಡಗದಂತೆ ನವಾಬನ ಚಟುವಟಿಕೆಗಳ ಮೇಲೆ ಕಣ್ಣಿಟ್ಟಿರುತ್ತಿದ್ದ. ಅದೇ ರೀತಿಯಲ್ಲಿ ಭೂ ಕಂದಾಯ ವಸೂಲಿಗಾಗಿ ದಿವಾನನಿಗೆ ಅಗತ್ಯಬಿದ್ದರೆ ಸೈನಿಕ ಸಹಾಯವನ್ನು ಒದಗಿಸುವುದು ನವಾಬನ ಕರ್ತವ್ಯವಾಗಿದ್ದುದರಿಂದ ಅವರೀರ್ವರೂ ಪರಸ್ಪರ ಸಹಕಾರದಿಂದ ನಡೆದುಕೊಳ್ಳುವುದು ಅಗತ್ಯವಾಗಿರುತ್ತದೆ. ಆದರೆ ಕ್ರಮೇಣ ಬಂಗಾಳದ ನವಾಬರು ತಮಗೆ ಬೇಕಾದವರನ್ನು ದಿವಾನರನ್ನಾಗಿ ನೇಮಿಸಿಕೊಳ್ಳುವ ಸ್ವಾತಂತ್ರ್ಯವನ್ನು ತೋರಿಸಿರುತ್ತಾರೆ. ಇದು ಆಡಳಿತ ವ್ಯವಸ್ಥೆಯಲ್ಲಿ ಅವರೀರ್ವರ ಕರ್ತವ್ಯಗಳು ಒಂದಾಗಿ ಸಮೀಕರಣಗೊಳ್ಳುವಂತೆ ಮಾಡಿತು.
ಮಹಾರಾಜ ನಂದಕುಮಾರ
ಬಂಗಾಳದ ಬೀರಭೂಮ್ ಜಿಲ್ಲೆಯ ಭದ್ರಪುರದ ನಿವಾಸಿ ನಂದಕುಮಾರ ಹೆಸರಿಗೆ ಮಹಾರಾಜನಾದರೂ ಜನ್ಮತಃ ಆತ ರಾಜವಂಶೀಯನೇನೂ ಆಗಿರಲಿಲ್ಲ. ಆದರೆ ಅನೇಕ ತಲೆಮಾರುಗಳಿಂದ ಬಂಗಾಳದ ನವಾಬರ ಆಸ್ಥಾನದಲ್ಲಿ ಸಾಕಷ್ಟು ಗೌರವ, ಅಧಿಕಾರ, ಮತ್ತು ಪ್ರಭಾವ ಹೊಂದಿದ್ದ ಕುಲೀನ ಶ್ರೀಮಂತ ಕುಟುಂಬಕ್ಕೆ ಸೇರಿದವನು. ಪದ್ಮನಾವ ರಾಯ್ ದಂಪತಿಗಳಿಗೆ ಸುಮಾರು ೧೭೦೭ರಲ್ಲಿ ಜನಿಸಿದ ನಂದಕುಮಾರನಿಗೆ ಬಿಷ್ಣುಪ್ರಿಯಾ ಮತ್ತು ಕೃಷ್ಣಪ್ರಿಯಾ ಎಂಬ ಇಬ್ಬರು ಹಿರಿಯ ಸಹೋದರಿಯರೂ ಕೇಬಲಕೃಷ್ಣ, ರಾಧಾಕೃಷ್ಣ ಮತ್ತು ನಬಕೃಷ್ಣ ಎಂಬ ಕಿರಿಯ ಸಹೋದರರೂ ಇರುತ್ತಾರೆ. ಪದ್ಮನಾವ ರಾಯ್ರವರ ತಾತ ರಾಮಗೋಪಾಲ ರಾಯ್ ತಮ್ಮ ಪೂರ್ವಜರ ಜರೂಲ್ ಎಂಬ ಹಳ್ಳಿಯನ್ನು ತೊರೆದು ಭದ್ರಪುರದಲ್ಲಿ ನೆಲಸಿದ್ದರು.
೧೭೫೬ರಲ್ಲಿ ನವಾಬ ಸಿರಾಜ್ ಉದ್ದೌಲ ಬಂಗಾಳದ ನವಾಬನಾಗಿದ್ದಾಗ ನಂದಕುಮಾರನನ್ನು ಹೂಗ್ಲಿ ಪ್ರಾಂತದ ಕಂದಾಯ ವಸೂಲಿ ದಿವಾನನನ್ನಾಗಿ ನೇಮಿಸಿರುತ್ತಾನೆ. ಆದರೆ ೧೭೫೭ರ ಪ್ಲಾಸಿ ಯುದ್ಧದ ಸಮಯದಲ್ಲಿ ಇಂಗ್ಲಿಷರ ಪ್ರತಿ ಆತನಿಗಿದ್ದ ನಿಷ್ಠೆ ಆತನನ್ನು ಒಬ್ಬ ಕರಿಯಕರ್ನಲ್ ಎಂದು ಕುಪ್ರಸಿದ್ಧನನ್ನಾಗಿಸಿತ್ತು. ೧೭೬೪ರಲ್ಲಿ ಈಸ್ಟ್ ಇಂಡಿಯ ಕಂಪೆನಿ ವಾರನ್ ಹೇಸ್ಟಿಂಗ್ಸ್ನ ಬದಲಿಗೆ ನಂದಕುಮಾರನನ್ನು ಬರ್ದವಾನ್, ನಡಿಯಾ ಮತ್ತು ಹೂಗ್ಲಿ ಜಿಲ್ಲೆಗಳ ಕಂದಾಯ ಕಲೆಹಾಕುವ ದಿವಾನನನ್ನಾಗಿ ನೇಮಿಸುತ್ತದೆ. ೧೭೬೪ರಲ್ಲಿ ಮೊಘಲ್ ದೊರೆ ಶಾ ಆಲಂ ನಂದಕುಮಾರನಿಗೆ ಮಹಾರಾಜ ಎಂಬ ಉಪಾಧಿಯನ್ನು ನೀಡಿ ಗೌರವಿಸುತ್ತಾನೆ. ೧೭೭೩ರಲ್ಲಿ ಬಂಗಾಳದ ಗವರ್ನರ್-ಜನರಲ್ ಆಗಿ ನೇಮಕಗೊಂಡ ವಾರನ್ ಹೇಸ್ಟಿಂಗ್ಸ್ ಮತ್ತು ನಂದಕುಮಾರನ ನಡುವೆ ಹಾವು-ಮುಂಗುಸಿಯಾಟ ಪ್ರಾರಂಭಗೊಳ್ಳುತ್ತದೆ. ೧೭೭೪ರ ಅಕ್ಟೋಬರ್ನಲ್ಲಿ ಕೋಲ್ಕತಾದಲ್ಲಿ ಬಂದಿಳಿದ ಆಡಳಿತ ಮಂಡಲಿಯ ಹೊಸ ಸದಸ್ಯರಾದ ಸರ್ ಫಿಲಿಪ್ ಫ್ರಾನ್ಸಿಸ್, ಜನರಲ್ ಜೇಮ್ಸ್ ಕ್ಲಾವರಿಂಗ್, ಕರ್ನಲ್ ಜಾರ್ಜ್ ಮಾನ್ಸನ್ ಒಂದೆಡೆಯಾದರೆ ಮತ್ತೊಂದೆಡೆ ವಾರನ್ ಹೇಸ್ಟಿಂಗ್ಸ್ ಮತ್ತು ಕಂಪೆನಿಯ ಹಳೆಯ ನೌಕರನಾದ ಬಾರ್ವೆಲ್ ಸೇರಿ ಗುಂಪುಗಾರಿಕೆಯಲ್ಲಿ ತೊಡಗುತ್ತಾರೆ. ಇವರಲ್ಲಿ ಪರಸ್ಪರ ದ್ವೇಷಾಸೂಯೆಗಳು ಹೊಗೆಯಾಡುತ್ತಿದ್ದು ತಿಕ್ಕಾಟ ಹಾಗೂ ಘರ್ಷಣೆಗಳು ಸಾಮಾನ್ಯವಾಗಿದ್ದವು.
ಈ ಮೂವರು ತಮ್ಮ ಎದುರಾಳಿ ಹೇಸ್ಟಿಂಗ್ಸ್ನನ್ನು ಇಕ್ಕಟ್ಟಿಗೆ ಸಿಲುಕಿಸಲು ರಾಜ ನಂದಕುಮಾರನಿಗೆ ವಾರನ್ ಹೇಸ್ಟಿಂಗ್ಸ್ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುವಂತೆ ಪ್ರಚೋದಿಸುತ್ತಾರೆ. ಇವರೊಂದಿಗೆ ಕೈಜೋಡಿಸಿದ ನಂದಕುಮಾರ ವಾರನ್ ಹೇಸ್ಟಿಂಗ್ ೧೭೭೨ರಲ್ಲಿ ತನ್ನ ಮಗ ಗುರುದಾಸನನ್ನು ದಿವಾನನನ್ನಾಗಿ ನೇಮಿಸಲು ತನ್ನಿಂದ ಒಂದು ಲಕ್ಷ ರೂಪಾಯಿ ಲಂಚವನ್ನು ಪಡೆದಿದ್ದನೆಂದು ೧೭೭೫ರ ಮಾರ್ಚ್ ೧೧ರಂದು ಆಡಳಿತ ಮಂಡಲಿಯ ಸದಸ್ಯನಾಗಿದ್ದ ಸರ್ ಫಿಲಿಪ್ ಫ್ರಾನ್ಸಿಸ್ಗೆ ಒಂದು ಪತ್ರವನ್ನು ಬರೆದುಕೊಡುತ್ತಾನೆ. ಸಾಲದೆಂಬಂತೆ ಮುನ್ನಿ ಬೇಗಂ ಎಂಬಾಕೆಯನ್ನು ಆಗಿನ್ನೂ ಅಪ್ರಾಪ್ತವಯಸ್ಸಿನ ನವಾಬ ಮುಬಾರಕ್ ಉದ್ದೌಲನ ಪೋಷಕಿಯಾಗಿ ನೇಮಿಸಲು ಆಕೆಯಿಂದ ಎರಡೂವರೆ ಲಕ್ಷ ರೂ.ಗಳ ಲಂಚ ಪಡೆದಿರುತ್ತಾನೆ ಎಂಬ ಆಪಾದನೆಯನ್ನೂ ಸೇರಿಸುತ್ತಾನೆ.
ನಂದಕುಮಾರನ ಪತ್ರವನ್ನು ಸಭೆಗೆ ತಂದಿದ್ದ ಫ್ರಾನ್ಸಿಸ್ಗೆ ಅದರ ಒಳ ಅಂಶದ ಅರಿವಿತ್ತೇ ಎಂದು ವಾರನ್ ಹೇಸ್ಟಿಂಗ್ಸ್ ಕೇಳಿದರೆ ಫ್ರಾನ್ಸಿಸ್ ಇಂತಹ ಪ್ರಶ್ನೆಗಳಿಗೆ ಉತ್ತರನೀಡಲು ತಾನು ಬಾಧ್ಯನಾಗಿಲ್ಲದಿದ್ದರೂ ಗವರ್ನರ್-ಜನರಲ್ನ ಮಾಹಿತಿಗಾಗಿ ಅದರಲ್ಲಿ ಏನು ಬರೆದಿದೆ ಎಂಬುದು ತನಗೆ ತಿಳಿಯದಿದ್ದರೂ ಇಂತಹದೇನೋ ಆಪಾದನೆ ಇರಬಹುದು ಎಂದು ತಾನು ಗ್ರಹಿಸಿದ್ದೆ ಎಂದು ಹೇಳುತ್ತಾನೆ.
ಹೇಸ್ಟಿಂಗ್ಸ್ನ ಸ್ವೈರಾಚಾರ
ತನ್ನ ಮೇಲಿನ ಆಪಾದನೆಯನ್ನು ಕೇಳಲು ಮುಂದಾಗಿರುವ ಮಂಡಲಿಯ ಸಭೆಯ ಅಧ್ಯಕ್ಷತೆಯನ್ನು ತಾನೇ ವಹಿಸುವುದು ಸೂಕ್ತವಲ್ಲ, ಅಲ್ಲದೆ ಈ ಮಂಡಲಿಗೆ ತನ್ನ ಮೇಲಿನ ಆಪಾದನೆಯನ್ನು ವಿಚಾರಿಸುವ ಅಧಿಕಾರವಿಲ್ಲ ಎಂದು ಗವರ್ನರ್-ಜನರಲ್ ಆಗಿ ಅಧ್ಯಕ್ಷಸ್ಥಾನದಲ್ಲಿ ಕುಳಿತಿದ್ದ ವಾರನ್ ಹೇಸ್ಟಿಂಗ್ಸ್ ತೀವ್ರವಾಗಿ ವಿರೋಧಿಸುತ್ತಾನೆ. ಜೊತೆಯಲ್ಲಿ ಮಂಡಲಿಯ ಸದಸ್ಯರು ತನ್ನ ಮೇಲೆ ನ್ಯಾಯಾಧೀಶರಂತೆ ಕುಳಿತು ವಿಚಾರಣೆ ನಡೆಸಲಾಗದು ಎಂದು ಗುಡುಗುತ್ತಾನೆ. ಮಂಡಲಿಯ ಸಭೆ ಹೇಸ್ಟಿಂಗ್ಸ್ ವಿರೋಧಿ ಕೂಟದ ಮಾನ್ಸನ್ ತಕ್ಷಣ ರಾಜ ನಂದಕುಮಾರನಿಗೆ ತನ್ನ ಆಪಾದನೆಯನ್ನು ಬೆಂಬಲಿಸುವ ದಾಖಲೆಗಳನ್ನು ಸಮಿತಿಯ ಮುಂದೆ ಹಾಜರುಪಡಿಸಬೇಕೆಂದು ಕರೆ ಕಳಿಸುವ ಠರಾವನ್ನು ಮಂಡಿಸುತ್ತಾನೆ. ಮಾರ್ಚ್ ೧೩ರಂದು ನಂದಕುಮಾರ ಬರೆದಿರುವ ಎರಡನೆಯ ಪತ್ರ ಮಂಡಲಿಯ ಕೈ ಸೇರುತ್ತದೆ. ಅದರಲ್ಲಾತ ತನ್ನ ಆಪಾದನೆಗಳನ್ನು ಪುನರುಚ್ಚರಿಸುವುದಲ್ಲದೆ ತಾನು ಮಾಡಿರುವ ಪ್ರತಿಯೊಂದು ಆಪಾದನೆಗೂ ಅಲ್ಲಗಳೆಯಲಾಗದ ಸಾಕ್ಷ್ಯಾಧಾರಗಳು ತನ್ನ ಬಳಿ ಇವೆ, ಮಂಡಲಿಯ ಮುಂದೆ ತನ್ನನ್ನು ಹಾಜರಾಗಲು ಅನುಮತಿ ನೀಡಿದಲ್ಲಿ ತಾನು ಅವುಗಳನ್ನು ಮಂಡಲಿಯ ಮುಂದೆ ಇಡಲಿದ್ದೇನೆ ಎಂದು ಸಾರುತ್ತಾನೆ.
ಹೇಸ್ಟಿಂಗ್ಸ್ನನ್ನು ಬೆಂಬಲಿಸುತ್ತಿದ್ದ ಬಾರ್ವೆಲ್ ಇಂತಹ ದೂರುಗಳ ವಿಚಾರಣೆ ನಡೆಸುವ ಅಧಿಕಾರ ಕೇವಲ ಸರ್ವೋಚ್ಚ ನ್ಯಾಯಾಲಯವೊಂದಕ್ಕೆ ಇರುವುದರಿಂದ ನಂದಕುಮಾರ ತನ್ನ ದೂರನ್ನು ಅಲ್ಲಿ ಸಲ್ಲಿಸಬೇಕೆಂದು ಸೂಚಿಸುತ್ತಾನೆ. ಆದರೆ ಮಂಡಲಿಯಲ್ಲಿ ಬಹುಮತ ಹೊಂದಿದ್ದ ಸದಸ್ಯರು ಇದನ್ನು ತಿರಸ್ಕರಿಸಿ ಕ್ಲಾವರಿಂಗ್ನನ್ನು ಅಧ್ಯಕ್ಷನನ್ನಾಗಿ ನೇಮಿಸಿ ನಂದಕುಮಾರನಿಗೆ ಹಾಜರಾಗುವಂತೆ ಕರೆ ಕಳುಹಿಸುತ್ತಾರೆ. ಮಂಡಲಿಯ ನಿರ್ಣಯವನ್ನು ಪ್ರತಿಭಟಿಸುವ ವಾರನ್ ಹೇಸ್ಟಿಂಗ್ಸ್ ನಂದಕುಮಾರನಂತಹ ಒಬ್ಬ ನೀಚ ವ್ಯಕ್ತಿ ತನ್ನ ಮೇಲೆ ಆಪಾದನೆ ಮಾಡುವುದನ್ನು ಸಹಿಸಲಾಗುವುದಿಲ್ಲ ಎಂದು ಬಾರ್ವೆಲ್ನೊಂದಿಗೆ ಸಭಾತ್ಯಾಗ ಮಾಡುತ್ತಾನೆ.
ವಿಚಾರಹೀನ ವಿಚಾರಣೆ
ಸಭೆಯ ಮುಂದೆ ಹಾಜರಾಗುವ ನಂದಕುಮಾರ ೧೭೭೨ರ ಸೆಪ್ಟೆಂಬರ್ ೨ರಂದು ಮುನ್ನಿ ಬೇಗಂ ತನ್ನನ್ನು ನವಾಬನ ಉಸ್ತುವಾರಿ ನೋಡಿಕೊಳ್ಳಲು ನೇಮಿಸಿದ್ದಕ್ಕಾಗಿ ಕೃತಜ್ಞತೆಯನ್ನು ಅರ್ಪಿಸುತ್ತ ಹೇಸ್ಟಿಂಗ್ಸ್ಗೆ ಒಂದು ಲಕ್ಷ ರೂಪಾಯಿ ಕಾಣಿಕೆ ನೀಡಿದ್ದೇನೆಂದು ಬರೆದಿರುವ ಪತ್ರವನ್ನು ಪ್ರಸ್ತುತಪಡಿಸುತ್ತಾನೆ. ಆದರೆ ಅಷ್ಟಕ್ಕೆ ತೃಪ್ತನಾಗದ ಹೇಸ್ಟಿಂಗ್ಸ್ ನಂದಕುಮಾರ ತನಗೆ ಎರಡು ಲಕ್ಷ ಕೊಡಲು ಒಪ್ಪಿದ್ದ ಎಂದು ಸೂಚಿಸುತ್ತಾನೆ. ಅದಕ್ಕುತ್ತರವಾಗಿ ಮುನ್ನಿ ಬೇಗಂ ನಂದಕುಮಾರನ ವಾಗ್ದಾನಕ್ಕೆ ತಾನು ಬದ್ಧಳಾಗಿರುವುದಾಗಿ ತಿಳಿಸಿ ಅದಕ್ಕನುಗುಣವಾಗಿ ವಾರನ್ ಹೇಸ್ಟಿಂಗ್ಸ್ಗೆ ಮುರ್ಶಿದಾಬಾದ್ನಲ್ಲಿ ಒಂದು ಲಕ್ಷ ಹಣ ನೀಡಿದಳಲ್ಲದೆ ಕೋಲ್ಕತಾದಲ್ಲಿ ನೂರ್ ಸಿಂಗ್ ಎಂಬಾತನ ಮೂಲಕ ಒಂದೂವರೆ ಲಕ್ಷವನ್ನು ತಲಪಿಸುತ್ತಾಳೆ. ತನ್ನ ಪರವಾಗಿ ಮತ್ತೊಂದು ಲಕ್ಷ ರೂ.ಗಳನ್ನು ಪಾವತಿಸುವಂತೆ ನಂದಕುಮಾರನಿಗೆ ಮನವಿ ಮಾಡಿಕೊಳ್ಳುತ್ತಾಳೆ. ಈ ಪತ್ರಕ್ಕನುಸಾರವಾಗಿ ನಂದಕುಮಾರ ಹೇಸ್ಟಿಂಗ್ಸ್ಗೆ ೧೦೪,೧೦೫ ರೂಪಾಯಿಗಳನ್ನು ಪಾವತಿಸುತ್ತಾನೆ. ಇವಿಷ್ಟೂ ಮುನ್ನಿ ಬೇಗಂ ನಂದಕುಮಾರನಿಗೆ ಬರೆದಿದ್ದಾಳೆನ್ನುವ ಈ ಪತ್ರದ ತಿರುಳು. ಪರ್ಶಿಯನ್ ಭಾಷೆಯಲ್ಲಿ ಬರೆಯಲಾಗಿರುವ ಈ ಪತ್ರದ ನಕಲನ್ನು ಮಂಡಲಿ ಪರಾಮರ್ಶಿಸುತ್ತದೆಯಾದರೂ ಅದನ್ನು ಮತ್ತು ಮೂಲಪತ್ರವನ್ನು ತನ್ನ ಬಳಿ ಉಳಿಸಿಕೊಳ್ಳದೆ ನಂದಕುಮಾರನಿಗೆ ಹಿಂತಿರುಗಿಸುತ್ತದೆ.
ನಂದಕುಮಾರನನ್ನು ವಿಚಾರಣೆಗೆ ಒಳಪಡಿಸುವ ಆಡಳಿತ ಮಂಡಲಿ ಆತ ಹೇಸ್ಟಿಂಗ್ಸ್ಗೆ ನೀಡಿದ್ದಾನೆನ್ನುವ ೧೦೪,೧೦೫ ರೂಪಾಯಿ ಮೊತ್ತದ ಆಭರಣಗಳನ್ನು ನೀಡಿದ ಸ್ಥಳ, ದಿನಾಂಕ, ಇಷ್ಟೊಂದು ಭಾರಿ ಮೊತ್ತವನ್ನು ಆತ ಯಾರಿಂದ ಪಡೆದ, ಲೆಕ್ಕದ ತಃಖ್ತೆಯಲ್ಲಿ ಅವುಗಳನ್ನು ನಮೂದಿಸಲಾಗಿದೆಯೆ ಇತ್ಯಾದಿಗಳ ಬಗ್ಗೆ ಪ್ರಶ್ನಿಸದೆ ಏಕಪಕ್ಷೀಯವಾಗಿ ವಾರನ್ ಹೇಸ್ಟಿಂಗ್ಸ್ ತಪ್ಪಿತಸ್ಥನೆಂದು ತೀರ್ಮಾನಿಸಿ ೩೫೪,೧೦೫ ರೂಪಾಯಿಗಳನ್ನು ಈಸ್ಟ್ ಇಂಡಿಯ ಕಂಪೆನಿಯ ತಿಜೋರಿಯಲ್ಲಿ ಭರ್ತಿ ಮಾಡಬೇಕೆಂದು ಆದೇಶಿಸುತ್ತದೆ. ಈ ಎಲ್ಲ ವ್ಯವಹಾರಗಳ ದಾಖಲೆಗಳನ್ನು ಲಂಡನ್ನಿನ ಕಂಪೆನಿಯ ಆಡಳಿತ ಮಂಡಲಿಗೆ ಕಳುಹಿಸುತ್ತದೆ. ಆದರೆ ಇಂತಹ ಏಕಪಕ್ಷೀಯ ತೀರ್ಮಾನವನ್ನು ಕಂಪೆನಿಯ ಕಾನೂನು ತಜ್ಞರು ಒಪ್ಪಿಕೊಳ್ಳಲು ಸಿದ್ಧರಿರಲಿಲ್ಲ. ಇದರಿಂದ ವಾರನ್ ಹೇಸ್ಟಿಂಗ್ಸ್ ರಾಜ ನಂದಕುಮಾರನ ಮೇಲೆ ಕೆಂಡಾಮಂಡಲನಾಗಿದ್ದುದರಲ್ಲಿ ಆಶ್ಚರ್ಯವಿಲ್ಲ.
ಹುತ್ತದಲ್ಲಿ ಹುತ್ತ
ಇಲ್ಲಿಂದ ರಾಜ ನಂದಕುಮಾರನ ಅಧೋಗತಿ ಪ್ರಾರಂಭವಾಗುತ್ತದೆ. ಏಟಿಗೆ ತಿರುಗೇಟು ನೀಡಲು ವಾರೆನ್ ಹೇಸ್ಟಿಂಗ್ಸ್ ಮುಂದಾಗುತ್ತಾನೆ. ನಂದಕುಮಾರನ ದೂರು ಸಲ್ಲಿಕೆಯಾದ ಕೆಲವೇ ವಾರಗಳಲ್ಲಿ ಆತನೇ ಸ್ವತಃ ಮೂರು ದೂರುಗಳನ್ನು ಎದುರಿಸಬೇಕಾಯಿತು. ಮೊದಲೆರಡು ದೂರುಗಳಲ್ಲಿ ಆತ ಗವರ್ನರ್-ಜನರಲ್ ಹೇಸ್ಟಿಂಗ್ಸ್ ಮತ್ತು ಮಂಡಲಿಯ ಸದಸ್ಯ ಬಾರ್ವೆಲ್ ವಿರುದ್ಧ ಷಡ್ಯಂತ್ರದಲ್ಲಿ ಭಾಗಿಯಾಗಿದ್ದ ಎಂದೂ ಮೂರನೆಯ ದೂರಿನಲ್ಲಿ ಆತ ದಾಖಲೆಯೊಂದರಲ್ಲಿ ಫೋರ್ಜರಿ ಮಾಡಿದ್ದಾನೆಂದೂ ಕಟಕಟೆಯಲ್ಲಿ ನಿಲ್ಲುವಂತಾಗುತ್ತದೆ.
೧೭೭೫ರ ಏಪ್ರಿಲ್ ೧೯ರಂದು ಕಮಾಲುದ್ದೀನ್ ಎಂಬಾತ ವಾರನ್ ಹೇಸ್ಟಿಂಗ್ಸ್ನ ಬಳಿ ಬಂದು ನಂದಕುಮಾರ, ಆತನ ಅಳಿಯ ರಾಧಾ ಚರಣ್ ಹಾಗೂ ಜೋಸೆಫ್ ಫೋಕ್ ತನ್ನಿಂದ ಬಲವಂತವಾಗಿ ಗವರ್ನರ್-ಜನರಲ್, ಮಂಡಲಿಯ ಸದಸ್ಯ ಬಾರ್ವೆಲ್, ಜಾರ್ಜ್ ವ್ಯಾನ್ಸಿಟ್ಟಾರ್ಟ್, ರಾಜ ರಾಜಬಲ್ಲಭ ಮೊದಲಾದವರಿಗೆ ಕಳೆದ ಮೂರು ವರ್ಷಗಳಲ್ಲಿ ೪೫,೦೦೦ ರೂಪಾಯಿಗಳ ಲಂಚ ನೀಡಿರುವುದಾಗಿ ಆಪಾದಿಸುವ ಅರ್ಜಿಯನ್ನು ಬರೆಸಿಕೊಂಡಿದ್ದಾರೆಂದು ಅಲವತ್ತುಕೊಳ್ಳುತ್ತಾನೆ. ಇದನ್ನು ಕೇಳಿದ ವಾರನ್ ಹೇಸ್ಟಿಂಗ್ಸ್ ಆತನನ್ನು ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶನ ಬಳಿ ಕಳುಹಿಸಿಕೊಡುತ್ತಾನೆ. ಮರುದಿನ ನ್ಯಾಯಾಧೀಶನ ಸಮ್ಮುಖದಲ್ಲಿ ಕಮಾಲುದ್ದೀನ್ ಸುದೀರ್ಘ ಹೇಳಿಕೆಯನ್ನು ದಾಖಲಿಸಿ ಅದರ ಮೇಲೆ ತನ್ನ ಮೊಹರನ್ನು ಒತ್ತುತ್ತಾನೆ. ಆಪಾದಿತರಿಗೆ ಜಾಮೀನು ನೀಡಲಾಗುತ್ತದೆ.
೧೭೩೬ರಲ್ಲಿ ಕಾರಕೂನನಾಗಿ ಭಾರತಕ್ಕೆ ಬಂದಿದ್ದ ಜೋಸೆಫ್ ಫೋಕ್ ಮದ್ರಾಸ್ ಮಂಡಲಿಯ ಸದಸ್ಯನಾಗಿ ಬೆಳೆದು ನಿಂತಿದ್ದ. ತನ್ನ ಸೇವಾ ಅವಧಿಯಲ್ಲಿ ಸಾಕಷ್ಟು ಹಣ ಗಳಿಸಿ ಇಂಗ್ಲೆಂಡಿಗೆ ಹಿಂತಿರುಗಿದನಾದರೂ ತನ್ನ ದುಂದು ವೆಚ್ಚದಿಂದ ಎಲ್ಲ ಹಣವನ್ನು ಕಳೆದುಕೊಂಡು ಒಬ್ಬ ವಜ್ರದ ವ್ಯಾಪಾರಿಯಾಗಿ ಭಾರತಕ್ಕೆ ಹಿಂತಿರುಗಿದ. ಇಲ್ಲಿ ಬಂದ ಮೇಲೆ ಆತ ಕೋಲ್ಕತಾ ಮಂಡಲಿಯ ಹೊಸ ಸದಸ್ಯರ ಪರವಾಗಿ ನಿಲ್ಲುವುದರ ಮೂಲಕ ವಾರನ್ ಹೇಸ್ಟಿಂಗ್ಸ್ ಜೊತೆ ಜಗಳಕ್ಕೆ ನಿಲ್ಲುತ್ತಾನೆ. ಪಿತೂರಿ ಮೊಕದ್ದಮೆಯ ಎಲ್ಲ ಸಾಕ್ಷ್ಯಾಧಾರಗಳನ್ನು ಪರಿಶೀಲಿಸುವ ಸರ್ವೋಚ್ಚ ನ್ಯಾಯಾಲಯ ಏಪ್ರಿಲ್ ೨೩ರಂದು ವಾರನ್ ಹೇಸ್ಟಿಂಗ್ಸ್ನ ವಿರುದ್ಧದ ಪಿತೂರಿ ಆರೋಪದಲ್ಲಿ ಎಲ್ಲರನ್ನೂ ಮುಕ್ತಗೊಳಿಸಿದರೆ ಬಾರ್ವೆಲ್ ವಿರುದ್ಧದ ಪಿತೂರಿಯಲ್ಲಿ ಎಲ್ಲರನ್ನೂ ದೋಷಿಗಳೆಂದು ಘೋಷಿಸಿ ಜುಲೈನಲ್ಲಿ ಫೋಕ್ಗೆ ರೂಪಾಯಿ ೫೦ ದಂಡ ವಿಧಿಸಿತಾದರೂ ನಂದಕುಮಾರದ ಮೇಲಿನ ಫೋರ್ಜರಿ ಪ್ರಕರಣದ ಮೊಕದ್ದಮೆಯಲ್ಲಿ ಆತ ಸೆರೆಮನೆಯಲ್ಲಿದ್ದುದರಿಂದ ಆತನಿಗೆ ಪ್ರತ್ಯೇಕ ಶಿಕ್ಷೆ ವಿಧಿಸುವುದಿಲ್ಲ. ನಂದಕುಮಾರನ ವಿರುದ್ಧ ದೂರನ್ನು ದಾಖಲಿಸುವುದಕ್ಕೆ ಆಡಳಿತ ಮಂಡಲಿ ತೀವ್ರ ವಿರೋಧ ಸೂಚಿಸುತ್ತದೆಯಾದರೂ ನ್ಯಾಯಾಲಯ ಅದನ್ನು ಪರಿಗಣಿಸುವುದಿಲ್ಲ.
ಮಂಡಲಿಯ ಸಮ್ಮುಖದಲ್ಲಿ ನಂದಕುಮಾರನೇನೋ ಗವರ್ನರ್-ಜನರಲ್ ಮೇಲೆ ಆಪಾದನೆಯನ್ನು ಹೊರಿಸುತ್ತಾನೆ. ಆತನ ಆಪಾದನೆಯನ್ನು ಮಂಡಲಿಯೂ ಆಲಿಸುತ್ತದೆ. ಆದರೆ ಅದೇ ಸಮಯದಲ್ಲಿ ನಂದಕುಮಾರನ ಮೇಲೂ ಆಪಾದನೆಗಳು ದಾಖಲಾಗುತ್ತವೆ. ಆದರೆ ಬಂಗಾಳದಲ್ಲಿ ಆಡಳಿತ ಮಂಡಲಿಗಿಂತಲೂ ಪ್ರಬಲವಾದ ಹೊಸತೊಂದು ಶಕ್ತಿ ಉದಯಿಸಿದೆ, ಅದು ತನ್ನನ್ನು ಸಂಪೂರ್ಣವಾಗಿ ನಾಶ ಮಾಡಬಲ್ಲದು ಎಂಬ ಸತ್ಯ ಗೋಚರಿಸಲು ಈ ಬ್ರಾಹ್ಮಣನಿಗೆ ಸಾಕಷ್ಟು ಸಮಯ ಬೇಕಾಯಿತು. ಕೆಲವೇ ಕವಡೆ ಕಾಸುಗಳಿಗಾಗಿ ಸುಳ್ಳು ಪ್ರಮಾಣ ಮಾಡುವವರ ದೇಶದಲ್ಲಿ ಸುಳ್ಳು ಸಾಕ್ಷ್ಯ ಮತ್ತು ಫೋರ್ಜರಿಯಂತಹ ಕೃತ್ಯಗಳನ್ನು ಅಪರಾಧ ಎಂದು ಪರಿಗಣಿಸುವ ಪ್ರಮೇಯವೇ ಇರಲಿಲ್ಲ. ಐದಾರು ವರ್ಷಗಳ ಹಿಂದೆ ಮಾಡಿದ ಒಂದು ವಚನ ಪತ್ರದ ಫೋರ್ಜರಿ ತನ್ನನ್ನು ನೇಣುಗಂಬದವರೆಗೆ ಕರೆದುಕೊಂಡು ಹೋಗಬಲ್ಲದು ಎಂಬ ಕಲ್ಪನೆಯೂ ಆತನಿಗಿರಲಿಲ್ಲ.
ಸರ್ಕಾರಾತೀತ ಶಕ್ತಿಕೇಂದ್ರ
ಮೇಲೆ ಹೇಳಿದ ನಂದಕುಮಾರನ ಫೋರ್ಜರಿ ಹೊಸ ಸಂಗತಿಯೇನಲ್ಲ. ಈ ಪ್ರಕರಣದಲ್ಲಿ ದೂರುದಾರ ಗಂಗಾ ಬಿಶನ್ ನಂದಕುಮಾರನ ವಿರುದ್ಧ ಮೇಯರ್ ನ್ಯಾಯಾಲಯದಲ್ಲಿ ಮೊಕದ್ದಮೆಯನ್ನು ಹೂಡಿದಾಗ ದೂರುದಾರನ ವಕೀಲನಾಗಿ(attoney) ಮೋಹನಪ್ರಸಾದ ಪ್ರತಿನಿಧಿಸುತ್ತಾನೆ. ಈ ಮೊಕದ್ದಮೆಯಲ್ಲಿ ಬಂಧನಕ್ಕೊಳಗಾಗಿ ವಿಚಾರಣೆಯನ್ನೆದುರಿಸುತ್ತಿದ್ದ ನಂದಕುಮಾರನನ್ನು ಬಚಾವು ಮಾಡಲು ಸ್ವತಃ ವಾರನ್ ಹೇಸ್ಟಿಂಗ್ಸ್ ಮುಂದಾಗಿದ್ದ. ನಂದಕುಮಾರ ಹೇಸ್ಟಿಂಗ್ಸ್ನ ಮೇಲೆ ಆಪಾದನೆ ಹೊರೆಸುವ ಕೆಲದಿನಗಳ ಮೊದಲು ಮೇಯರ್ ನ್ಯಾಯಾಲಯದಲ್ಲಿ ಕೊಳೆಯುತ್ತಿದ್ದ ಆ ಫೋರ್ಜರಿ ದಾಖಲೆಯನ್ನು ಸರ್ ಎಲಿಜಾ ಇಂಪೆ ಮತ್ತು ಆತನ ಸಹೋದ್ಯೋಗಿಗಳು ಹೊರಕ್ಕೆ ತೆಗೆಸಿ ಮೂಲ ದೂರುದಾರನಿಗೆ ಕೊಡಿಸುತ್ತಾರೆ.
ಇಂತಹ ಕಾಕತಾಳೀಯ ಘಟನೆಗಳು ದೂರುದಾರ ಕೇವಲ ತನಗಾದ ವೈಯಕ್ತಿಕ ಅನ್ಯಾಯವನ್ನು ಸರಿಪಡಿಸಿಕೊಳ್ಳಲು ಸರ್ವೋಚ್ಚ ನ್ಯಾಯಾಲಯದ ಮುಂದೆ ಎರಡನೆಯ ಬಾರಿ ಮೊಕದ್ದಮೆ ಹೂಡಿದ ಎಂಬುದರ ಸುತ್ತ ಅನುಮಾನದ ಹುತ್ತ ಬೆಳೆಯುವಂತೆ ಮಾಡಿದೆ. ಆದರೆ ಮತ್ತೊಂದು ಕೋನದಿಂದ ನೋಡಿದಾಗ ಪ್ರಸ್ತುತ ಪರಿಸ್ಥಿತಿಯಲ್ಲಿ ಸರಕಾರವನ್ನೂ ಮೀರಿದ ಹೊಸತೊಂದು ಶಕ್ತಿಕೇಂದ್ರ ಉದಯಿಸಿದೆ ಎಂಬುದನ್ನು ಅರಿತ ದೂರುದಾರ ತನ್ನ ಅಹವಾಲನ್ನು ಆ ಶಕ್ತಿಕೇಂದ್ರದ ಮುಂದೆ ತಂದಿರುವುದರಲ್ಲಿ ಆಶ್ಚರ್ಯವೇನಿಲ್ಲ. ಮೆಕಾಲೆಯ ದೃಷ್ಟಿಯಲ್ಲಿ: ಮೂರ್ಖರು ಮತ್ತು ವಂದಿಮಾಗಧರನ್ನು ಹೊರತುಪಡಿಸಿ ಈ ಎಲ್ಲ ಬೆಳವಣಿಗೆಗಳ ಹಿಂದೆ ಹೇಸ್ಟಿಂಗ್ಸ್ನ ಕೈವಾಡವಿತ್ತು ಎನ್ನುವುದನ್ನು ಯಾರೂ ಅಲ್ಲಗಳೆಯಲಾರರು. ಹೇಸ್ಟಿಂಗ್ಸ್ನ ಬಗ್ಗೆ ಇಂತಹ ತೀರ್ಮಾನಕ್ಕೆ ಬರುವುದು ಅವಸರದ ನಿರ್ಧಾರ ಎನಿಸಬಹುದಾದರೂ ಆತನ ಕೈಗೆ ಇಂಪೆ ನ್ಯಾಯಾಂಗದ ಒಂದು ಅಸ್ತ್ರವಾಗಿ ಬಳಕೆಯಾಗಿರುವುದು ಸತ್ಯವಾದಲ್ಲಿ ಅದಕ್ಕಿಂತ ಅಕ್ಷಮ್ಯ ಅಪರಾಧ ಬೇರಿಲ್ಲ. ಆದರೆ ಲಭ್ಯವಾಗಿರುವ ಸಾಕ್ಷ್ಯಾಧಾರಗಳಿಂದ ನ್ಯಾಯಾಲಯ ನಂದಕುಮಾರನನ್ನು ಸೆರೆಮನೆಗೆ ಅಟ್ಟುವುದರಿಂದ ನೇಣಿಗೇರಿಸುವವರೆಗೆ ಪ್ರತಿಯೊಂದು ಹೆಜ್ಜೆಯಲ್ಲೂ ತನ್ನ ನ್ಯಾಯಪ್ರಕ್ರಿಯೆಯನ್ನು (ಗ್ರಂಥಾಕ್ಷರವನ್ನಂತೂ) ಕರಾರುವಾಕ್ಕಾಗಿ ಅನುಸರಿಸಿದೆ ಎಂದು ಒಪ್ಪಬೇಕಾದೀತು.
ನಂದಕುಮಾರನ ಮೇಲಿನ ಮೊಕದ್ದಮೆ ಒಂದಲ್ಲ ಒಂದು ದಿನ ನಡೆಯಬೇಕಿದ್ದ ಘಟನೆಯಾಗಿದೆ. ಮೊದಲೇ ಹೇಳಿದಂತೆ ದೂರುದಾರ ಹೊಸ ನ್ಯಾಯಾಲಯದ ನೇಮಕ, ಅದು ಕಾರ್ಯ ನಿರ್ವಹಿಸುವಲ್ಲಿ ತೋರಿದ ಸ್ವಾತಂತ್ರ್ಯ, ಗವರ್ನರ್-ಜನರಲ್ ಮತ್ತು ಮಂಡಲಿಯ ಸದಸ್ಯರ ಮಧ್ಯೆ ಏರ್ಪಟ್ಟ ವೈಮನಸ್ಯದಿಂದ ಉತ್ತೇಜಿತನಾಗಿ ಅವುಗಳ ಲಾಭ ಪಡೆಯುವಲ್ಲಿ ಮುಂದಾದ ಎಂದು ಕೋಲ್ಕತ್ತಾ ರೆವ್ಯೂ ಭಾವಿಸುತ್ತದೆ.
(ಸಶೇಷ)