ನಾನು ಮನಸ್ಸು ಮಾಡಿದರೆ ಇದೆಲ್ಲ ಏನು ದೊಡ್ಡದು? ಅಷ್ಟೂ ಮಂದಿಯನ್ನು ಕೊಲ್ಲುತ್ತೇನೆ ಅಥವಾ ಓಡಿಸಿಬಿಡುತ್ತೇನೆ. ಅವರು ಯಾರೂ ನನಗೆ ಗಣ್ಯವಲ್ಲ. ಈಗ ಸಮಸ್ಯೆಯಿರುವುದು ನನ್ನ ರಥ ಓಡಿಸುವವರು ಯಾರು ಅನ್ನುವುದು. ನನ್ನ ಸಾರಥಿ ತಂದೆಯವರ ಜತೆ ಹೋದವನು ಇನ್ನೂ ಹಿಂದೆ ಬಂದಿಲ್ಲ. ಅರಮನೆಯಲ್ಲಂತೂ ಯಾರೂ ಇಲ್ಲ. ಸಾರಥಿಗೂ ಗತಿಯಿಲ್ಲದ ಬಡತನ ನಮಗೆ ಎಂದು ಶತ್ರುಗಳು ತಿಳಿದುಕೊಳ್ಳಬಾರದಲ್ಲ? ಏನು ಮಾಡಲಿ?
ಕೀಚಕ ಸತ್ತ ಮೇಲೆ ನಮ್ಮ ನಗರದಲ್ಲಿ ಏನೋ ಪರಿವರ್ತನೆ ಆದ ಹಾಗೆ ಅನಿಸುತ್ತಿತ್ತು. ಸತ್ತ ಕೀಚಕನ ತಮ್ಮಂದಿರು ಕೆರಳಿದರು. ಸೈರಂಧ್ರಿಯೇ ಇದಕ್ಕೆಲ್ಲ ಕಾರಣ ಎನ್ನುವುದು ಅವರ ಆಕ್ರೋಶಕ್ಕೆ ಹಿನ್ನೆಲೆ. ಈ ನೂರೈದು ಮಂದಿ ಉಪಕೀಚಕರು ಒಟ್ಟಾಗಿ ಸೈರಂಧ್ರಿಯನ್ನು ಹಿಡಿದು ಅವರ ಅಣ್ಣನ ಶವದ ಜತೆ ಸ್ಮಶಾನಕ್ಕೆ ಸಾಗಿಸಿದರಂತೆ. ಶವದೊಂದಿಗೆ ಅವಳನ್ನೂ ಸುಡುವುದು ಅವರ ಉದ್ದೇಶವಾಗಿದ್ದಿರಬೇಕು. ಅಲ್ಲಿ ಏನಾಯಿತೋ ಯಾರಿಗೂ ತಿಳಿಯಲಿಲ್ಲ. ಉಪಕೀಚಕರು ಯಾರೂ ಜೀವ ಸಹಿತ ಮರಳಲಿಲ್ಲ. ಇದೆಲ್ಲದರಿಂದಾಗಿ ದುರ್ಬುದ್ಧಿಯ ವ್ಯವಹಾರಗಳು ಕಡಮೆಯಾದವು. ಜನ ನೆಮ್ಮದಿಯಿಂದ ಬಾಳತೊಡಗಿದರು.
ಮಹಾಬಲಿಷ್ಠ ಕೀಚಕನ ಮರಣದ ಬಳಿಕ ಅರಮನೆಯಲ್ಲಿ ದಾಸಿಯರಿಗೆ ಉಪಟಳ ಇಲ್ಲವಾಯಿತು. ಆದರೆ ಬೇರೆಯೇ ಕಷ್ಟಗಳು ಪ್ರಾರಂಭವಾದವು. ಮತ್ಸ್ಯದೇಶಕ್ಕೆ ರಕ್ಷಕರಿಲ್ಲ ಎಂದು ಭಾವಿಸಿದ ಅನ್ಯರಾಜ್ಯಗಳಿಗೆ ಆಕ್ರಮಣ ಬುದ್ಧಿ ಹುಟ್ಟಿರಬೇಕು. ಅದರ ಒಂದು ಮುಖ ಗೋಚರಿಸಿದ್ದು ಕೆಲವು ಮಲ್ಲರ ರೂಪದಲ್ಲಿ. ಯಾರೋ ಜೀಮೂತನಂತೆ. ದೊಡ್ಡ ಜಟ್ಟಿಯಂತೆ. ಅವನು ಕೆಲವರು ಅನುಚರರ ಜತೆ ಬಂದು ಪಂಥವೊಡ್ಡಿದ. ತಮ್ಮನ್ನು ಗೆಲ್ಲುವವರು ಈ ರಾಜ್ಯದಲ್ಲಿ ಯಾರಿದ್ದೀರಿ? ಎಂದು. ಅದೃಷ್ಟವಶಾತ್ ವಲಲ ಎಂಬ ಅರಮನೆಯ ಬಾಣಸಿಗ ಅವರನ್ನು ಸದೆದ.
ಇಷ್ಟಕ್ಕೆ ಮುಗಿಯಲಿಲ್ಲ. ನಮ್ಮ ರಾಜ್ಯದ ದಕ್ಷಿಣ ಭಾಗದಲ್ಲಿ ಗೋಶಾಲೆಯ ನೂರಾರು ಹಸುಗಳನ್ನು ಮೇಯಲು ಬಿಡುತ್ತಿದ್ದೆವು. ಹಸ್ತಿನಾವತಿಯ ಕೌರವರು ಸೈನ್ಯ ಸಹಿತ ಬಂದು ಆ ಗೋವುಗಳನ್ನು ಸೆರೆ ಹಿಡಿದರು. ನಮ್ಮ ತಂದೆ ವಿರಾಟ ಮಹಾರಾಜರು ಸೇನೆ ಸಹಿತ ಬಿಡಿಸಲು ಹೋದರು. ಅಚ್ಚರಿಯೆಂದರೆ ವಲಲ, ಕಂಕ ಮೊದಲಾದವರು ಅವರೊಂದಿಗೆ ಹೋಗಿದ್ದರು. ಅಲ್ಲೇನೋ ದೊಡ್ಡ ಯುದ್ಧವಾಯಿತಂತೆ. ಕೌರವರ ಕಡೆಯವರು ಸೋತರಂತೆ ಎಂಬ ಸುದ್ದಿ ಬಂತು. ಅವರೆಲ್ಲ ಹಿಂದಿರುಗುವುದಕ್ಕೆ ಸಮಯವಿತ್ತು. ಅರಮನೆಯಲ್ಲಿ ಒಂದಿಷ್ಟು ಕಾವಲಿನ ಭಟರು ಮಾತ್ರ ಇದ್ದರು. ಉಳಿದವರು ನಾನು ಮತ್ತು ನನ್ನ ಸಖಿಯರು ಮಾತ್ರ. ನಾನು ಎಂದಿನಂತೆ ಸುಖಸಂಕಥಾ ಗೋಷ್ಠಿಯಲ್ಲಿದ್ದೆ.
ಮಾತನಾಡುವುದರಲ್ಲಿ ನಾನು ನಿಪುಣನಿದ್ದೆ. ಆ ದಿನ ಹೊಸ ವಿಷಯವೂ ಇತ್ತು. ಹಿಂದಿನ ದಿನದ ಯುದ್ಧದ ವಾರ್ತೆ ಬಂದಿತ್ತಲ್ಲ. ಅದನ್ನೇ ಎತ್ತಿಕೊಂಡು ಮಾತನಾಡುತ್ತಿದ್ದೆ.
ನಾನೇನಾದರೂ ನಿನ್ನೆ ಯುದ್ಧಕ್ಕೆ ಹೋಗುತ್ತಿದ್ದರೆ ಇದಕ್ಕಿಂತ ಬೇಗ ಯುದ್ಧ ಮುಗಿಯುತ್ತಿತ್ತು. ಯುದ್ಧ ಅಂದರೆ ಒಟ್ಟು ಮುಗಿ ಬೀಳುವುದಲ್ಲ, ಅದಕ್ಕೆ ಸಮರ ತಂತ್ರಗಳನ್ನು ಉಪಯೋಗಿಸಬೇಕು. ಯುದ್ಧದಲ್ಲಿ ಪರಿಣತನಾದ ನನ್ನಂತಹವನಿಗೆ ಅವಕಾಶ ಸಿಗದೇ ಹೋಯಿತು. ತಂದೆಯವರು ಈ ವಯಸ್ಸಿನಲ್ಲಿ ತಾನೇ ಹೋಗುವುದಕ್ಕಿಂತ, ಕುಮಾರ ಭೂಮಿಂಜಯ, ಹೀಗಾಗಿದೆಯಪ್ಪ. ನಮ್ಮ ಗೋವುಗಳನ್ನು ಬಿಡಿಸಿಕೊಂಡು ಬರಬೇಕಲ್ಲ. ನೀನು ಏನಾದರೂ ಮಾಡು ಎಂದು ನನ್ನನ್ನು ಕಳುಹಿಸಬೇಕಿತ್ತು. ನಿಜವಾದ ಯುದ್ಧ ಅಂದರೆ ಹೇಗಿರುತ್ತದೆ ಎಂದು ತೋರಿಸಿಕೊಡುತ್ತಿದ್ದೆ ಹೀಗೆಲ್ಲ ಪೌರುಷ ಕೊಚ್ಚಿಕೊಳ್ಳುತ್ತಿದ್ದೆ. ನನ್ನ ಮಾತುಗಳನ್ನು ಸುತ್ತಲಿದ್ದ ಹೆಣ್ಣುಮಕ್ಕಳು ಬಹಳ ಆಸಕ್ತಿಯಿಂದ ಕೇಳುತ್ತಿದ್ದರು. ಪಾಪ ಅವರಿಗೇನು ಗೊತ್ತಿತ್ತು ಯುದ್ಧದ ವಿಚಾರ?
ನನ್ನ ಮಾತು ಅರ್ಧದಲ್ಲಿ ನಿಂತಿತು. ಅದಕ್ಕೆ ಕಾರಣ ಏದುಸಿರು ಬಿಡುತ್ತಾ ಓಡಿಬಂದ ಒಬ್ಬ ಗೋಪಾಲಕ. ಅವನ ಅವಸ್ಥೆ ನೋಡುವಂತಿರಲಿಲ್ಲ. ಭಯದಿಂದ ನಡುಗುತ್ತಿದ್ದ.
ಮೈಯೆಲ್ಲ ಬೆವರು, ಮುಖದ ಮೇಲೆ ಬಿಳಿ ನಾಮ. ರಕ್ತಸೋರುತ್ತಿದ್ದ ಗಾಯಗಳು. ಅಯ್ಯೋ ಅನಿಸಿತು. ಏನಯ್ಯಾ ಇದು? ಎಂದು ಕೇಳಿದೆ.
ರಾಜಕುಮಾರ, ಘಾತವಾಯಿತು. ಇಂದು ಉತ್ತರ ದಿಕ್ಕಿನಲ್ಲಿ ಕೌರವರ ಇನ್ನೊಂದು ಸೇನೆ ಬಂದು ಅಲ್ಲಿದ್ದ ಅಸಂಖ್ಯ ಹಸುಗಳನ್ನು ಹಿಡಿದಿದ್ದಾರೆ. ನೀವೇ ರಕ್ಷಿಸಬೇಕು ಎಂದು ಗೋಳಿಟ್ಟ.
ಒಂದು ಕ್ಷಣ ಅಸಮಾಧಾನವೇ ಆಯಿತು. ನಾನು ಅಂತಃಪುರವನ್ನು ಬಿಟ್ಟು ಹೊರಡುವುದೆ? ಅದೂ ಹಸುಗಳನ್ನು ಬಿಡಿಸುವುದಕ್ಕೆ. ನಮ್ಮ ತಂದೆಯವರಿದ್ದಾರಲ್ಲ ಎಂದು ಹೇಳುವುದಕ್ಕೆ ಹೊರಟವನು ಬಾಯಿ ಮುಚ್ಚಿಕೊಂಡೆ, ಅವರಿಲ್ಲವೆಂದು ನೆನಪಾಗಿ. ಜತೆಗೆ ಹೆಮ್ಮೆಯೂ ಆಯಿತು. ನೀವೇ ರಕ್ಷಿಸಬೇಕು ಎಂದನಲ್ಲ! ಒಮ್ಮೆ ಸುತ್ತ ನೋಡಿದೆ. ನನ್ನ ಗೆಳತಿಯರೆಲ್ಲ ಬಹು ನಿರೀಕ್ಷೆಯಿಂದ ನನ್ನ ಮುಖವನ್ನೇ ನೋಡುತ್ತಿದ್ದರು. ಅವರ ನಿರೀಕ್ಷೆಯನ್ನು ಹುಸಿಯಾಗಿಸುವುದೇ? ಸಲ್ಲದು ಅನಿಸಿತು.
ಕೌರವರ ಕಡೆಯಿಂದ ಯಾರೆಲ್ಲ ಬಂದಿದ್ದಾರೊ? ಎಂದು ಗೋಪಾಲಕನನ್ನು ಕೇಳಿದೆ. ಅವನು ಮಹಾವೀರರ ಒಂದು ಪಟ್ಟಿಯನ್ನೇ ಹೇಳಿದ. ಎಷ್ಟು ಜನ ಬಂದರೇನು ಅಯ್ಯಾ, ನೀವು ಹೋದರೆ ಅವರೊಂದು ಲೆಕ್ಕವೆ? ಎಂದು ಸೇರಿಸಿದ.
ನನ್ನ ಎದೆ ಉಬ್ಬಿತು.
ಹೌದು ಹೌದು. ಇಲ್ಲಿಗೆ ಬಂದು ನೀನು ಒಳ್ಳೆಯ ಕೆಲಸವನ್ನೇ ಮಾಡಿದೆ. ಸದ್ಯ ಅರಮನೆಯಲ್ಲಿ ನನ್ನನ್ನು ಬಿಟ್ಟರೆ ಬೇರೆ ಯಾರೂ ಇಲ್ಲ. ಸೈನ್ಯವೂ ಇಲ್ಲ. ಅಲ್ಲ, ಅದರ ಅಗತ್ಯವೇ ನನಗೆ ಬಾರದು. ಏಕಾಂಗಿಯಾಗಿಯೇ ಅಷ್ಟೂ ಮಂದಿಯನ್ನು ಸೋಲಿಸಿ, ಗೋವುಗಳನ್ನು ಹಿಂದಿರುಗಿಸುತ್ತೇನೆ ಎಂದುಬಿಟ್ಟೆ.
ಈಗ ನನ್ನ ಗೆಳತಿಯರ ಕಣ್ಣುಗಳು ಇನ್ನಷ್ಟು ಅಗಲವಾದವು. ಅದನ್ನು ನೋಡುತ್ತಿದ್ದಂತೆ ನನ್ನಲ್ಲಿ ಉತ್ಸಾಹ ಉಕ್ಕತೊಡಗಿತು.
ನಾನು ಮನಸ್ಸು ಮಾಡಿದರೆ ಇದೆಲ್ಲ ಏನು ದೊಡ್ಡದು? ಅಷ್ಟೂ ಮಂದಿಯನ್ನು ಕೊಲ್ಲುತ್ತೇನೆ ಅಥವಾ ಓಡಿಸಿಬಿಡುತ್ತೇನೆ. ಅವರು ಯಾರೂ ನನಗೆ ಗಣ್ಯವಲ್ಲ. ಈಗ ಸಮಸ್ಯೆಯಿರುವುದು ನನ್ನ ರಥ ಓಡಿಸುವವರು ಯಾರು ಎನ್ನುವುದು. ನನ್ನ ಸಾರಥಿ ತಂದೆಯವರ ಜತೆ ಹೋದವನು ಇನ್ನೂ ಹಿಂದೆ ಬಂದಿಲ್ಲ. ಅರಮನೆಯಲ್ಲಂತೂ ಯಾರೂ ಇಲ್ಲ. ಸಾರಥಿಗೂ ಗತಿಯಿಲ್ಲದ ಬಡತನ ನಮಗೆ ಎಂದು ಶತ್ರುಗಳು ತಿಳಿದುಕೊಳ್ಳಬಾರದಲ್ಲ? ಏನು ಮಾಡಲಿ?
ನಾನು ಚಿಂತಾಕ್ರಾಂತನಾದೆ.
ನನ್ನ ಗೆಳತಿಯರ ಮುಖವೂ ಬಾಡಿತು.
ನನ್ನ ಪರಾಕ್ರಮ ವಿಜೃಂಭಿಸುವ ವರ್ಣನೆಯನ್ನು ಕೇಳುವ ಹಂಬಲದಲ್ಲಿದ್ದರು, ಪಾಪ. ಈಗ ಅವರಿಗೂ ನಿರಾಶೆಯಾದಂತಿತ್ತು.
ಯಾರು ಹೇಳಿದರೋ ಏನೋ, ನನ್ನ ತಂಗಿ ಉತ್ತರೆ ಅಲ್ಲಿಗೆ ಬಂದಳು. ಅಣ್ಣ ಯುದ್ಧಕ್ಕೆ ಹೊರಟಿದ್ದಾನೆ ಎನ್ನುವ ಸುದ್ದಿ ಕೇಳಿದೆ. ಆದರೆ ಸಾರಥಿಯಿಲ್ಲದೆ ಚಿಂತೆಯಾಗಿದೆ ಎಂದರು. ಹೌದೇನಣ್ಣಾ ಎಂದು ಕೇಳಿದಳು.
ಹೌದಮ್ಮಾ ಹೌದು. ಏನು ಮಾಡಲಿ ಹೇಳು. ನಾನು ಯುದ್ಧಕ್ಕೆ ಹೋದರೆ ಅರ್ಧ ಹೊತ್ತಿನಲ್ಲಿ ಗೆದ್ದೇ ಬರುತ್ತಿದ್ದೆ. ಬೇಕಾದ ಕೌಶಲ, ಪರಾಕ್ರಮ ಎಲ್ಲ ಉಂಟು. ಆದರೇನು ಪ್ರಯೋಜನ ಹೇಳು, ಒಬ್ಬ ಸಮರ್ಥ ಸಾರಥಿ ಇಲ್ಲದೇ ಕಷ್ಟವಾಗಿದೆ ನಾನು ನಿಟ್ಟುಸಿರು ಬಿಟ್ಟೆ.
ಅಣ್ಣಾ, ಅದಕ್ಕಾಗಿಯೇ ನಾನು ಬಂದದ್ದು. ನಿನಗೆ ಒಪ್ಪಿಗೆಯಾದರೆ ಒಬ್ಬರು ಸಾರಥಿಯಿದ್ದಾರೆ. ಅಷ್ಟೇನೂ ಅನುಭವ ಇದ್ದವರಲ್ಲ. ಆದರೆ ರಥ ನಡೆಸಲು ಬರುತ್ತದೆ. ಒಂದು ವೇಳೆ ನಿನಗೆ ಒಪ್ಪಿಗೆಯಾದರೆ ತಾನು ಬರಬಲ್ಲೆ ಎಂದಿದ್ದಾರೆ.
ಅವಳ ಮಾತು ಕೇಳಿ ನನಗೆ ಆಶ್ಚರ್ಯವಾಯಿತು. ಅದರ ಜತೆ ಸಂತೋಷವೂ. ಯಾಕೆಂದರೆ ನಾನೊಬ್ಬ ನಿಷ್ಣಾತ ಯೋಧ ಎಂದು ಇವರೆಲ್ಲ ನಂಬಿದ್ದರು. ನಾನು ಕೂಡ ಅದನ್ನು ನಂಬಿದ್ದೆ. ಇಲ್ಲಿಯವರೆಗೆ ಪ್ರತ್ಯಕ್ಷವಾಗಿ ಯುದ್ಧದಲ್ಲಿ ಭಾಗವಹಿಸದಿದ್ದರೂ ಶಾಸ್ತ್ರೀಯವಾಗಿ ಅಧ್ಯಯನ ಮಾಡಿ, ಶಿಕ್ಷಣ ಪಡೆದ ನನಗೆ ರಣರಂಗದಲ್ಲಿ ಕಷ್ಟವಿಲ್ಲ ಎಂದು ತಿಳಿದಿದ್ದೆ. ಒಮ್ಮೆ ಯುದ್ಧದಲ್ಲಿ ಪರಾಕ್ರಮ ಪ್ರಕಟಿಸಿ ಮೆರೆಯಬೇಕು ಎಂಬ ಹಂಬಲವೂ ಇತ್ತು. ಈಗ ಅಂತಹ ಒಂದು ಅನುಕೂಲ ಸಂದರ್ಭ ಒದಗಿದೆ. ಸಾರಥಿಯಿಲ್ಲ ಎನ್ನುವ ಕೊರತೆಯೂ ನೀಗುವ ಹಾಗಾಯಿತು. ಆದುದರಿಂದ ಯುದ್ಧೋತ್ಸಾಹ ಉಕ್ಕಿತು.
ಇಷ್ಟು ಒಳ್ಳೆಯ ಸುದ್ದಿಯನ್ನು ತಂದು ಉಪಕಾರ ಮಾಡಿದೆ ತಂಗೀ. ಒಳ್ಳೆಯದು. ಯಾರವರು? ಎಲ್ಲಿದ್ದಾರೆ? ಕೂಡಲೇ ಬರಹೇಳು ಎಂದೆ.
ಅವರು ಬೇರೆ ಯಾರೂ ಅಲ್ಲ ಅಣ್ಣಾ, ನಮ್ಮ ನಾಟ್ಯಗುರುಗಳು. ಬೃಹನ್ನಳೆ. ಹಿಂದೆ ಖಾಂಡವ ವನ ದಹನದ ಕಾಲದಲ್ಲಿ ಅರ್ಜುನನಿಗೆ ಸಾರಥಿಯಾಗಿದ್ದರಂತೆ. ನಿನ್ನಂತಹ ಮಹಾವೀರನಿಗೆ ಒಮ್ಮೆಯಾದರೂ ಸಾರಥ್ಯ ಮಾಡಬೇಕು ಎಂಬ ಅಪೇಕ್ಷೆಯಿದೆ ಎಂದರು. ಅವಳ ಈ ಮಾತು ಕೇಳಿ ನನ್ನ ಉಕ್ಕಿದ ಉತ್ಸಾಹ ಬತ್ತಿಹೋಯಿತು. ನನ್ನ ಜೀವನದ ಪ್ರಥಮ ಯುದ್ಧಕ್ಕೆ ನಪುಂಸಕ ಸಾರಥಿಯೆ? ಬೇಡವೆಂದರೆ ಯುದ್ಧದ ಅವಕಾಶ ತಪ್ಪುತ್ತದೆ. ಗೋವುಗಳನ್ನು ಮರಳಿ ತರುವ ಅನುಕೂಲವೂ ಇಲ್ಲ. ಯುದ್ಧ ಮಾಡುವವನಿಗೆ ಸಾರಥಿ ಸಹಕಾರಿ ಅಷ್ಟೇ. ಯಾರಾದರೇನು?
ಸರಿ. ಬೃಹನ್ನಳೆಯನ್ನು ಬರಹೇಳು. ರಥದಲ್ಲಿ ಕುಳಿತರೂ ಸಾಕು. ನಾನು ಯುದ್ಧದಲ್ಲಿ ಹೇಗೂ ಗೆಲ್ಲುವವನೇ. ಸಾರಥಿಗೆ ಹೆಚ್ಚು ಶ್ರಮವಿಲ್ಲ. ಬರಲಿ ಎಂದೆ. ಹೀಗೆ ಬೃಹನ್ನಳೆ ನನ್ನ ಸಾರಥಿಯಾದ. ಬರುವಾಗಲೇ ಅಳುಕುತ್ತ ಬಂದ. ಕೌರವರ ಕಡೆಯಲ್ಲಿ ಮಹಾವೀರು ಬಹಳ ಮಂದಿ ಇದ್ದಾರೆ. ಅವರೊಂದಿಗೆ ಯುದ್ಧ ಎಂದರೆ ನನಗೆ ಭಯವಾಗುತ್ತದೆ. ಇತ್ತೀಚೆಗೆ ನಾಟ್ಯದಲ್ಲಿ ಗಮನ ಹೆಚ್ಚಿದ್ದರಿಂದ ಸಾರಥ್ಯ ಮರೆತಿದೆ ಎಂದೆಲ್ಲ ಹೇಳಿದ. ಅಯ್ಯಾ ಬೃಹನ್ನಳೆ, ನೀನೇನೂ ಚಿಂತಿಸುವ ಅಥವಾ ಅಂಜುವ ಅಗತ್ಯವಿಲ್ಲ. ಇದು ಭೂಮಿಂಜಯನ ಪರಾಕ್ರಮ ಪ್ರಕಟನೆಯ ಯುದ್ಧ. ಎಂತಹ ವೀರರಾದರೂ ನನ್ನ ಬಾಣಪ್ರಯೋಗದ ಮುಂದೆ ನಿಲ್ಲಲಾರರು. ನೀನು ನನ್ನ ರಕ್ಷಣೆಯಲ್ಲಿ ಇರುವಾಗ ಕೂದಲು ಕೊಂಕಲಾರದು ಎಂದು ಧೈರ್ಯ ಹೇಳಿದೆ. ನನ್ನ ವಿಜೃಂಭಣೆಯನ್ನು ಕಂಡು ಶತ್ರುಗಳು ಹಿಂದೆ ಸರಿಯುವ ಸಾಧ್ಯತೆಯೂ ಇತ್ತು ಎಂದು ನಾನು ಭಾವಿಸಿದೆ.
ಅಂತೂ ನಾವಿಬ್ಬರೂ ಸಿದ್ಧರಾದೆವು. ಬೃಹನ್ನಳೆಗೆ ಯುದ್ಧಕವಚವನ್ನು ತೊಡುವುದಕ್ಕೂ ಬರುತ್ತಿರಲಿಲ್ಲ. ಅವನು ಯುದ್ಧರಥವನ್ನು ಸಿದ್ಧಗೊಳಿಸಿದ. ಅವನು ಅಶ್ವಾಲಯದಿಂದ ಆರಿಸಿಕೊಂಡ ಸಣಕಲು ಕುದುರೆಗಳನ್ನು ಕಂಡು, ನನಗೆ ನಗುವೇ ಬಂತು. ಈ ಬಡಕಲು ಕುದುರೆಗಳು ನಮ್ಮ ರಥವನ್ನು ರಣರಂಗದವರೆಗೆ ಒಯ್ಯುವುದು ಸಾಧ್ಯವೆ? ಎಂಬ ನನ್ನ ಶಂಕೆಗೆ ಅವನು ಏನೋ ಕಾರಣ ಹೇಳಿದ. ಇರಲಿ ಎಂದುಕೊಂಡೆ. ಕುದುರೆಗಳಾಗಲೀ ಸಾರಥಿಯಾಗಲೀ ಯುದ್ಧ ಮಾಡುವುದಲ್ಲವಷ್ಟೆ? ಅದೇನಿದ್ದರೂ ನನ್ನ ಹೊಣೆ. ಇಷ್ಟಾದರೂ ಅನುಕೂಲವಾಯಿತಲ್ಲ ಎನ್ನುವ ಸಮಾಧಾನದಲ್ಲಿ ನಾನು ರಥ ಏರಿದೆ. ಶಸ್ತ್ರಾಸ್ತ್ರಗಳನ್ನು ತುಂಬಿಕೊಂಡೆ. ನಮ್ಮ ಅಂತಃಪುರದ ಸಕಲ ನಾರೀವೃಂದವು ಇಕ್ಕಡೆಗಳಲ್ಲಿ ನಿಂತು ನಮ್ಮನ್ನು ಬೀಳ್ಗೊಟ್ಟಿತು. ರಥ ಹೊರಟಿತು. ನಗರದ ಬೀದಿಗಳಲ್ಲಿ ರಥ ಸಾಗುವಾಗ ನನ್ನ ಎದೆ ಹೆಮ್ಮೆಯಿಂದ ಬೀಗುತ್ತಿತ್ತು. ಮತ್ಸ್ಯ ದೇಶದ ಅಭಿಮಾನ ರಕ್ಷಣೆಯ ನನ್ನ ಯುದ್ಧ ಇತಿಹಾಸದ ವಿಶೇಷ ಘಟನೆಯಾಗಲಿತ್ತು.
ರಥ ನಿಧಾನವಾಗಿ ಪಟ್ಟಣದ ಹೊರಗೆ ಬಂತು. ಅಲ್ಲಿಂದ ಮೇಲೆ ಏನಾಯಿತು ಎಂದು ನನ್ನ ಗಮನಕ್ಕೆ ಬರುವ ಮೊದಲೇ ನಮ್ಮ ರಥ ಗಾಳಿಯಲ್ಲಿ ಹಾರುತ್ತಿತ್ತು. ಏನು ಮೋಡಿ ಮಾಡಿದನೋ ಈ ಸಾರಥಿ! ರಥದ ವೇಗಕ್ಕೆ ನನ್ನ ಉಸಿರುಗಟ್ಟುತ್ತಿತ್ತು. ಅಬ್ಬಾ ಏನು ರಭಸ, ಏನು ವೇಗ! ಈ ಬಡಕಲು ಕುದುರೆಗಳಿಗೆ ಇಷ್ಟು ಚೈತನ್ಯ ಎಲ್ಲಿಂದ ಬಂತು ಎಂದು ಬೆರಗಾದೆ. ಶತ್ರುಗಳ ಸೈನ್ಯ ಕಣ್ಣಿಗೆ ಬೀಳುತ್ತಿದ್ದಂತೆ ಧನುಸ್ಸಿಗೆ ಹೆದೆಯೇರಿಸಿ ಒಮ್ಮೆ ಧನುಷ್ಠಂಕಾರ ಮಾಡಿ ಉತ್ತರಕುಮಾರ ಯುದ್ಧಕ್ಕೆ ಬಂದಿದ್ದಾನೆ ಎಂದು ಸೂಚಿಸಿ ಅವರ ಎದೆಗೆಡಿಸಬೇಕು ಎಂದುಕೊಂಡಿದ್ದೆ. ಆದರೆ ಈ ಓಟದ ರಭಸಕ್ಕೆ ನನಗೆ ಎದ್ದು ನಿಲ್ಲುವುದಕ್ಕೂ ಆಗಲಿಲ್ಲ. ಕಣ್ಣು ಮುಚ್ಚಿ ತೆರೆಯುವ ಮೊದಲೇ ರಥ ರಣಕ್ಷೇತ್ರದ ಸಮೀಪ ತಲಪಿಯೇ ಬಿಟ್ಟಿತು.
ಎದುರಿಗೆ ನೋಡುತ್ತೇನೆ, ಅದೇನು ಎಂದು ಅರ್ಥವಾಗದ ಒಂದು ಸಾಗರವೇ ಮೊರೆಯುತ್ತಿದೆ! ಓ ಸಾರಥಿ, ಸ್ವಲ್ಪ ನಿಧಾನಿಸು. ಅದೇನು, ಅಲ್ಲಿ ನಿರ್ಘೋಷದ ಧ್ವನಿಯೆಬ್ಬಿಸುತ್ತಿರುವುದು? ಶತ್ರು ಸೈನ್ಯ ಎಲ್ಲಿ? ಎಂದೆ.
ರಾಜಕುಮಾರ, ಅದೇ ಕೌರವರ ಸೇನೆ. ಅವರೆಲ್ಲ ಆಯುಧ ಹಿಡಿದು ಸಜ್ಜಾಗಿದ್ದಾರೆ. ನೀನು ಪುಂಖಾನುಪುಂಖವಾಗಿ ಬಾಣ ಪ್ರಯೋಗಿಸಿ ಅವರನ್ನು ಚದುರಿಸು. ತಡವೇಕೆ? ಎಂದು ಬೃಹನ್ನಳೆ ಹಿಂದೆ ತಿರುಗಿ ನೋಡಿದ. ನೋಡುವುದೇನು? ನಾನು ರಥದಲ್ಲಿ ಕುಸಿದು ಕುಳಿತಿದ್ದೆ. ನನ್ನ ಮೈಯಿಡೀ ನಡುಗುತ್ತಿತ್ತು. ಬೆವರು ಧಾರೆಯಾಗಿ ಹರಿಯುತ್ತಿತ್ತು. ಧನುಸ್ಸು ಎಲ್ಲಿ, ಬಾಣಗಳೆಲ್ಲಿ ಎಂಬುದೂ ನನಗೆ ತಿಳಿಯಲಿಲ್ಲ.
ಎದುರಿಗೆ ಅಬ್ಬರಿಸುತ್ತಿರುವುದು ಸಮುದ್ರವಲ್ಲ, ಕೌರವರ ಸೈನ್ಯ ಎಂಬುದನ್ನು ಕೇಳಿಯೇ ನಾನು ದಿಗ್ಭ್ರಾಂತನಾದೆ. ಇಷ್ಟು ದೊಡ್ಡ ಸೈನ್ಯ ನಮಗೆ ಎದುರಾದೀತು ಎಂಬ ಕಲ್ಪನೆಯೇ ನನಗಿರಲಿಲ್ಲ. ಹೆಚ್ಚೆಂದರೆ ನಮ್ಮ ನಗರ ರಕ್ಷಣೆಯ ಭಟರ ಪಡೆಯಷ್ಟು ಇರಬಹುದು ಎಂಬುದು ನನ್ನ ಊಹೆಯಾಗಿತ್ತು. ಆದರೆ ಇದು!
ಸಾರಥಿ, ಈ ಯುದ್ಧ ನನ್ನಿಂದಾಗದು. ನಿಜ ಹೇಳುತ್ತೇನೆ. ನಾನು ನನ್ನ ಕುರಿತು ಇಟ್ಟುಕೊಂಡದ್ದು ಒಂದು ಭ್ರಮೆ. ಮಹಾವೀರ ಎಂದು ನನ್ನನ್ನು ಕರೆದುಕೊಂಡಿದ್ದೆ. ಇಷ್ಟು ದೊಡ್ಡ ಸೇನೆಯನ್ನು, ರಣಾಂಗಣವನ್ನು ನಾನು ಜೀವನದಲ್ಲಿ ಒಮ್ಮೆಯೂ ಕಂಡವನಲ್ಲ. ನಿಜವಾದ ಯುದ್ಧದ ಕಲ್ಪನೆಯೂ ನನಗಿಲ್ಲ. ನನ್ನದೆಲ್ಲ ಸ್ವಪ್ನದ ಭ್ರಾಂತಿಯಾಗಿತ್ತು. ನಾನು ಅಲ್ಲಿ ಹೋದರೆ ಅರೆಗಳಿಗೆಯೂ ಬದುಕಲಾರೆ. ರಥ ನಿಲ್ಲಿಸು. ನಾವು ತಿರುಗಿ ಹೋಗೋಣ. ನಮ್ಮ ತಂದೆಯವರು ಬಂದ ಬಳಿಕ ಅವರು ಹಸುಗಳನ್ನು ಬಿಡಿಸಲಿ ಎಂದೆ. ನನ್ನ ಮೈ ಮಾತ್ರವಲ್ಲ, ಸ್ವರವೂ ಭಯದಿಂದ ಕಂಪಿಸುತ್ತಿತ್ತು.
ನನ್ನ ಮಾತು ಕೇಳಿ ಬೃಹನ್ನಳೆ ಗಟ್ಟಿಯಾಗಿ ನಕ್ಕ. ರಥ ನಿಲ್ಲಲಿಲ್ಲ.
ಹೇ…ರಥ ನಿಲ್ಲಿಸು. ಹಿಂದೆ ತಿರುಗಿಸು ಎಂದು ಬೊಬ್ಬಿಟ್ಟೆ.
ಉಹೂ. ಅವನು ರಥ ನಿಲ್ಲಿಸುವುದಿರಲಿ, ಮತ್ತಷ್ಟು ವೇಗವಾಗಿ ಓಡಿಸಿದ. ಈ ಸಾರಥಿಯನ್ನು ಕರೆತಂದುದು ಘಾತವಾಯಿತು ಎಂದುಕೊಂಡೆ. ಹೀಗೇ ಮುಂದೆ ಹೋದರೆ ನಾನು ಸಾಯುವುದು ಖಚಿತ ಅನಿಸಿತು.
ಏನು ಮಾಡಲಿ?
(ಸಶೇಷ)