ಕೇಳುವ ಕಿವಿಯಿರಲು ನೋಡುವ ಕಣ್ಣಿರಲು ಎಲ್ಲೆಲ್ಲೂ ಸಂಗೀತವೇ ಎಲ್ಲೆಲ್ಲೂ ಸೌಂದರ್ಯವೇ.. ಎಂಬ ಸಿನೆಮಾ ಹಾಡು ಸದಾ ಕಿವಿಯಲ್ಲಿ ಗುನುಗಿದಂತಾಗುವಾಗ ಕೇಳುವುದು ಬರಿಯ ಸಂಗೀತ ಮಾತ್ರವಲ್ಲ, ಬದುಕೆಂಬುದು ನವಿರಾಗಿರಬೇಕಾದರೆ ಕೇಳಿಸಿಕೊಳ್ಳುವ ಕಿವಿಯಿರುವುದು ಎಷ್ಟು ಮುಖ್ಯ ಎನಿಸುತ್ತದೆ.
ಬೆಳಗ್ಗೆ ಕಾಲೇಜಿಗೆ ಹೊರಡುವ ಗಡಿಬಿಡಿಯಲ್ಲಿ ಅಡುಗೆಮನೆಯ ಕೆಲಸಗಳನ್ನು ಮುಗಿಸಿ ಹೊರಡುವ ಒತ್ತಡದಲ್ಲಿ ನಾನಿರುವಾಗ ಮಕ್ಕಳಿಗೆ ನೂರು ಕಥೆಗಳು ನೆನಪಾಗುತ್ತವೆ. ನನ್ನ ಗಮನವೆಲ್ಲ ಅಡುಗೆಯ ಕಡೆಗೆ, ಕೆಲಸ ಮುಗಿಸಿ ಸಮಯಕ್ಕೆ ಸರಿಯಾಗಿ ಕಾಲೇಜಿಗೆ ತಲಪುವ ಬಗೆಗೆ. ಇತ್ತ ಮಕ್ಕಳು ಮುನಿಯುವುದಕ್ಕೆ ಹೆಚ್ಚು ಹೊತ್ತೇನೂ ಬೇಡ. ನೋಡು, ನಾನು ಆಗಿನಿಂದ ಹೇಳ್ತಾ ಇದ್ದೇನೆ. ನೀನು ಯಾವುದೇ ಪ್ರತಿಕ್ರಿಯೆ ಕೊಡದೇ ಸುಮ್ಮನೇ ಹೂಂ ಹೂಂ ಅಂತಿದ್ದೀ ಅಮ್ಮ. ನಾನೇನು ಹೇಳಿದೆ ಹೇಳು? ಎಂದು ನನಗೇ ಪರೀಕ್ಷೆಯೊಡ್ಡಿ ಬಿಡುತ್ತಾರೆ, ನಾವು ವಿದ್ಯಾರ್ಥಿಗಳಿಗೆ ತರಗತಿಯಲ್ಲಿ ಎಚ್ಚರಿಸುವಂತೆ.
ಇತ್ತ ಸಂಗಾತಿಗೂ ಅದಾವುದೋ ನಿನ್ನೆ ಮೊನ್ನೆಯ ಘಟನಾವಳಿಗಳನ್ನು ವಿವರಿಸುವ ಆತುರ. ಅವರಿಗೂ ನೆನಪಾಗುವುದು ಬೆಳಗಿನ ವೇಳೆಯಲ್ಲಿಯೇ! ನಾನೆಲ್ಲಿಯೋ ನನ್ನ ತಲೆಯೆಲ್ಲಿಯೋ ಎಂಬಂತಿರುವ ನನ್ನಿಂದ ಅವರು ನಿರೀಕ್ಷಿಸುವ ಪ್ರತಿಕ್ರಿಯೆ ಹೊಮ್ಮುವುದಾದರೂ ಹೇಗೆ? ತಗೋ, ನಿನಗೆ ಬಿಡು, ನನ್ನ ಮಾತಿನ ಬಗ್ಗೆ ಸಣ್ಣಗಿನ ಪ್ರತಿಕ್ರಿಯೆ ಕೊಡಬೇಕು ಅನಿಸುವುದೂ ಇಲ್ಲ! ಪಟಾಕಿ ಟಪ್ಪನೆ ಒಂದೇ ಸಲ ಸಿಡಿದು ಮೌನವಾಗುತ್ತದೆ. ಮತ್ತೆ ಕಥೆಯೂ ಇಲ್ಲ, ಕುತೂಹಲವೂ ಇಲ್ಲ. ಹೀಗಾಗುವುದು ನನಗೆ ಮಾತ್ರವೇ ಎಂದುಕೊಂಡರೆ ಇದು ದಿನಬೆಳಗಾದರೆ ಹೊರಗಿನ ಉದ್ಯೋಗಕ್ಕೆ ಹೋಗುವ ಎಲ್ಲ ಮಹಿಳೆಯರ ದಿನದಿನದ ಕಥೆ. ಸಂಜೆಯ ಹೊತ್ತು ಮಾತನಾಡಬಾರದೇ ಎಂದರೆ ದಿನದ ದುಡಿಮೆಯ ಶ್ರಮ ಮಾತಾಡುವ ಉತ್ಸಾಹವನ್ನು ಕದ್ದೊಯ್ದಿರುತ್ತದೆ. ನಮ್ಮೊಳಗಿನ ಮಾತುಗಳೆಲ್ಲ ನಮ್ಮೊಳಗೇ ಮರೆತು ಹೋಗುತ್ತವೆ. ಮಾತು ಮರೆತ ಬದುಕು ಮೌನವನ್ನು ನೆಚ್ಚಿಕೊಂಡರೆ ಮನೆಯೊಳಗಿನ ಮೌನ ಶಾಂತಿ, ನೆಮ್ಮದಿಗಿಂತ ಜಾಸ್ತಿ ಒಂಟಿತನವನ್ನು ತುಂಬುತ್ತದೆ, ಒಳಗನ್ನು ಕೊರಗಿಸುತ್ತದೆ. ಆಧುನಿಕ ಬದುಕಿನ ಕ್ರಮದಲ್ಲಿ ಇದೂ ಬದುಕಿನ ಒಂದು ಭಾಗವೇ ಹೌದಷ್ಟೇ?
ಒಂದು ತಲೆಮಾರು ಹಿಂದಕ್ಕೆ ಯೋಚಿಸಬಹುದಾದರೆ ಸಂಜೆ ತೋಟದ ಕೆಲಸವೆಲ್ಲ ಮುಗಿದು ಆಳುಗಳು ತೆರಳಿದ ಬಳಿಕ ಮನೆಮಂದಿ ಇನ್ನೊಂದು ರೌಂಡು ಚಹಾವೋ ಕಷಾಯವೋ ಕುಡಿಯುತ್ತ ಹರಟೆ ಹೊಡೆಯುವುದಿತ್ತು. ಮಧ್ಯಾಹ್ನದ ವಿಶ್ರಾಂತಿಯ ವೇಳೆಯಲ್ಲಿ ಹಾಸ್ಯ ಚಟಾಕಿಗಳನ್ನು ಹಾರಿಸುವುದು, ರೇಡಿಯೋ ಟೇಪ್ ರೆಕಾರ್ಡರ್ಗಳನ್ನು ಕೇಳುವುದು ಇತ್ಯಾದಿ ಇದ್ದವು. ಅಲ್ಲಿ ಜಗಳವೋ ಚರ್ಚೆಯೋ ಏನೇ ಇದ್ದರೂ ಮನೆಯೊಳಗೆ ಮಾತಿನ ಗುಲ್ಲು ತುಂಬಿರುತ್ತಿತ್ತು. ನಿಧಾನವಾಗಿ ಟಿವಿ ಸೀರಿಯಲ್ಲುಗಳು ಬಂದ ಮೇಲೆ ಅವುಗಳದ್ದೇ ದರ್ಬಾರು ಶುರುವಾಯಿತು. ಈಗ ಮೊಬೈಲಿದೆ, ಎಲ್ಲರ ಸಂಗಾತಿ, ಹಾಗೇ ಹಲವು ಜಾಲತಾಣಗಳು. ಬಿಟ್ಟೆನೆಂದರೂ ಬಿಡದ ಸೆಳೆತ ಅದರದ್ದು.
ಮನೆಯೊಳಗಿನ ಹೆಚ್ಚಿನ ಸಂದರ್ಭದಲ್ಲಿ ಬರಿಯ ಕೇಳಿಸಿಕೊಂಡರೆ ಸಾಕಾಗುವುದಿಲ್ಲ. ಆಲಿಸುವಿಕೆ ಎನ್ನುವುದೇ ಹೆಚ್ಚು ಸೂಕ್ತ. ಇಂಗ್ಲಿಷಿನ ಹಿಯರಿಂಗ್ ಮತ್ತು ಲಿಸನಿಂಗ್ ನಡುವಣ ವ್ಯತ್ಯಾಸ. ಬರಿಯ ಕೇಳಿಸಿಕೊಳ್ಳುವುದೆಂದರೆ ಮನೆಯಲ್ಲಿ ಟಿವಿ ನೋಡುತ್ತಲೂ ಹೊರಗಿನಿಂದ ತರಕಾರಿಯವನ ಕೂಗು ಕೇಳಿಸಿಕೊಳ್ಳುತ್ತೇವಲ್ಲ, ಹಾಗೆ. ಆಲಿಸುವುದು ಎಂದರೆ ನಮ್ಮ ಗಮನವೆಲ್ಲ ಅದರ ಮೇಲೆಯೇ ಇರಿಸಿ, ನಾವು ಸರಿಯಾಗಿ ಅರ್ಥ ಮಾಡಿಕೊಳ್ಳುತ್ತಿದ್ದೇವೆ ಎಂಬುದನ್ನು ನಮ್ಮಲ್ಲಿ ಮಾತಾಡುತ್ತಿರುವವರಿಗೂ ಮನದಟ್ಟು ಮಾಡಿಸಿ ಕೊಡುವುದು. ಅದಕ್ಕೆ ಅಲ್ಲಲ್ಲಿ ನಗು, ಅವರ ಮಾತುಗಳನ್ನು ಕೊಂಚ ಪ್ಯಾರಾ ಫ್ರೇಸ್ ಮಾಡುವುದು. ನಡುನಡುವೆ ಒಂದೆರಡು ಪ್ರಶ್ನೆಗಳನ್ನು ಕೇಳಿ ಇನ್ನಷ್ಟು ಮಾತಿಗೆ ಅವಕಾಶ ಮಾಡಿಕೊಡುವುದು, ಅವರ ಅನುಭವವನ್ನೋ ನೆನಪನ್ನೋ ಕೆದಕುತ್ತ, ಅವರಿಗೆ ಹೇಳುವ ಆಸಕ್ತಿ ಹೆಚ್ಚುವಂತೆ ಮಾಡುವುದು ಎಲ್ಲ ಬೆರೆತಿರುತ್ತದೆ. ಇದು ಸಾಧ್ಯವಾಗಬೇಕಾದರೆ ಕುಳಿತು ಮಾತಾಡುವ, ಅಥವಾ ಕೇಳಿಸಿಕೊಳ್ಳುವ ಸಮಯ, ವ್ಯವಧಾನ ಎರಡೂ ಅತ್ಯಗತ್ಯ. ಬದುಕಿನ ಒತ್ತಡದ ನೆವದಲ್ಲಿ ಕೇಳಿಸಿಕೊಳ್ಳಲಾಗದೇ ಹೋದರೆ ಮುಂದೊಂದು ದಿನ ನಮ್ಮ ಎಲ್ಲ ಒತ್ತಡಗಳೂ ಮುಗಿದು, ನಾವು ಮಾತಾಡುವುದಿದೆ, ಹಗುರಾಗುವುದಿದೆ ಎನ್ನಿಸಿದಾಗ ಕೇಳಿಸಿಕೊಳ್ಳುವುದಕ್ಕೆ ಯಾವ ಕಿವಿಗಳೂ ಇರಲಾರವೇನೋ!
ಯಾವ ಸಂಬಂಧಗಳಲ್ಲೇ ಆದರೂ ಗಮನಿಸಿ ನೋಡಿ, ಒಬ್ಬರು ಮಾತಾಡುವುದನ್ನು ಇನ್ನೊಬ್ಬರು ಕೇಳಿಸಿಕೊಳ್ಳುತ್ತಿದ್ದಾರೆ ಎಂದರೆ ಅವರೊಳಗಿನ ಅನುಬಂಧ ಗಟ್ಟಿಯಾಗುತ್ತಾ ಹೋಗುತ್ತದೆ. ಎಳೆಯ ಮಕ್ಕಳನ್ನಾದರೂ ಗಮನಿಸಿ ನೋಡಿ, ಅವರನ್ನು ನಾವು ಎತ್ತಿಕೊಂಡಿದ್ದಾಗ ಅಥವಾ ಪಕ್ಕದಲ್ಲಿ ಕುಳಿತು ಮಾತನಾಡುತ್ತಿದ್ದಾಗ ಅವರ ಕಣ್ಣಲ್ಲಿ ಕಣ್ಣಿಟ್ಟು ದಿಟ್ಟಿಸಿ ಗಮನಿಸದೇ ಇದ್ದರೆ ಅವರಿಗೂ ಮಾತನಾಡಲು ಇಷ್ಟವಾಗುವುದಿಲ್ಲ. ಹಲವು ಮಕ್ಕಳಂತೂ ಅವರ ಕೈಯಲ್ಲಿ ನಮ್ಮ ಮುಖವನ್ನು ಬಲವಂತವಾಗಿ ತಮ್ಮೆಡೆಗೆ ತಿರುಗಿಸಿಕೊಂಡು ಬಿಡುತ್ತವೆ. ಈಗ ಕೇಳು ಎಂದು ಮತ್ತೆ ಮೊದಲಿನಿಂದ ಹೇಳಲಾರಂಭಿಸುತ್ತವೆ. ಅಕಸ್ಮಾತ್ ಕೈಯಲ್ಲಿ ಮೊಬೈಲ್ ಅಥವಾ ಪತ್ರಿಕೆಗಳಿದ್ದರೆ ಮಕ್ಕಳು ಅವನ್ನು ಕಿತ್ತೆಸೆದರೂ ಎಸೆದರು. ಯಾಕೆಂದರೆ ಅವರಿಗೆ ಸಂಪೂರ್ಣ ಗಮನ ಅವರ ಮೇಲೆಯೇ ಬೇಕು. ಅದರಿಂದ ಕೊಂಚ ಬದಲಾದರೂ ಅವರಿಗೆ ಹೇಳಿಕೊಳ್ಳುವ ಯಾವ ಉಮೇದೂ ಉಳಿಯುವುದಿಲ್ಲ. ಅಂದಮೇಲೆ ದೊಡ್ಡವರ ಪರಿಸ್ಥಿತಿಯೂ ಅದೇ ತಾನೇ?
ನಮ್ಮ ಮಾತುಗಳನ್ನು ಕೇಳಿಸಿಕೊಳ್ಳದೇ ಇರುವವರನ್ನು ಆಬ್ಸೆಂಟ್ ಮೈಂಡೆಡ್ ಪ್ರೊಫೆಸರ್ ಎಂದು ತಮಾಷೆ ಮಾಡುತ್ತೇವಲ್ಲ, ನಿಜಕ್ಕಾದರೂ ಅವರು ನಮ್ಮ ಮಾತುಗಳಿಗೆ ಗಮನ ಕೊಡದೇ ಇರುವುದು ಅವರ ಮನಸ್ಸು ಇನ್ನಾವುದೋ ಗಹನವಾದ ವಿಚಾರದ ಕುರಿತು ತರ್ಕಿಸುತ್ತಿರುವುದರಿಂದ. ಆದರೆ ಪರಿಣಾಮ ಮಾತ್ರ ಬಹಳ ಹಗುರದ್ದಾಗಿರುವುದಿಲ್ಲ. ನನ್ನ ಮಾತಿನ ಬಗ್ಗೆ ನಿನಗೆ ಗಮನವೇ ಇಲ್ಲ ಎಂದು ಪರಸ್ಪರ ದೋಷಾರೋಪಣೆಯೊಂದಿಗೆ ಒಂದು ಹಂತದ ಮಾತುಕತೆ ಅರ್ಧಕ್ಕೇ ಮುಗಿಯಬಹುದು. ಆದರೆ ಇದರಿಂದಾಗಿ ಎಷ್ಟೋ ಸಲ ಹಲವು ವಿಷಯಗಳನ್ನು ಹೇಳಿದ್ದೇವೆ ಅಂದುಕೊಂಡು ನಾವಿದ್ದರೆ ತನಗೆ ಹೇಳಿಯೇ ಇಲ್ಲ, ತನಗೆ ವಿಷಯವೇ ಗೊತ್ತಿಲ್ಲ ಎಂಬುದನ್ನೂ ಕೇಳಿಸಿಕೊಳ್ಳಬೇಕಾಗುತ್ತದೆ. ಅಲ್ಲಿಗೆ ಮತ್ತೆ ಪುನಃ ಹೊಸಜಗಳಕ್ಕೊಂದು ಹಳೆಯ ಟಾಪಿಕ್ ಸಿದ್ಧವಾಗಿರುತ್ತದೆ. ಹೇಳಿದ್ದೇನೆ ಅಂದುಕೊಂಡು ಹೇಳದೇ ಇರುವುದು, ಹೇಳಿದ್ದನ್ನು ಕೇಳಿಸಿಕೊಳ್ಳದೇ ಹೇಳಿಯೇ ಇಲ್ಲ ಎಂದುಕೊಳ್ಳುವುದು ಮನೆಯೊಳಗೆ ಮುಗಿಯದ ಕಥೆ. ಮಕ್ಕಳಿದ್ದರೆ ಹಲವು ಸಂದರ್ಭದಲ್ಲಿ ಅವರೇ ಸಾಕ್ಷಿಗಳಾಗಿಯೂ ತೀರ್ಪುಗಾರರಾಗಿಯೂ ವ್ಯವಹರಿಸುತ್ತಾರೆ ನಿಜ, ಆದರೆ ಅವರ ಉಪಸ್ಥಿತಿಯಲ್ಲಿ ಮಾತನಾಡದ ಹಲವು ಸಂಗತಿಗಳಿಗೆ ದಾಖಲೆ ಒದಗಿಸುವುದಾದರೂ ಹೇಗೆ! ನಿಜ, ಬದುಕು ಅಂದುಕೊಂಡಷ್ಟು ಸರಳವಲ್ಲ!!
ಒಬ್ಬರಲ್ಲಿ ಮನಸ್ಸು ಬಿಚ್ಚಿ ಮಾತನಾಡಬೇಕೆಂಬುದು ಅಂತರಂಗವನ್ನು ಹಗುರಾಗಿಸುವುದಕ್ಕೆ ಮಾತ್ರ. ಸಮಸ್ಯೆಗಳಿಗೆ ಪರಿಹಾರ ದೊರೆಯದಿದ್ದರೂ ಕಿವಿಗೊಟ್ಟು ಕೇಳುವವರಲ್ಲಿ ಹೇಳಿಕೊಳ್ಳುವುದರಿಂದ ಮನಸ್ಸು ತಿಳಿಯಾಗಿ ಬಿಡುಗಡೆಯ ದಾರಿ ನಮಗೆ ಗೋಚರಿಸುತ್ತದೆ. ಕೇಳಿಸಿಕೊಳ್ಳುವವರು ನಮಗೆ ಯಾವುದೇ ಸಲಹೆಯನ್ನು ಕೊಡದೇ ಹೋದರೂ ಅವರು ಕೇಳಿಸಿಕೊಳ್ಳುತ್ತಿದ್ದಾರೆ ಎಂಬುದೇ ಮುಖ್ಯವಾಗುತ್ತದೆ. ನಮ್ಮೊಳಗಿನ ಬೆಳಕು ನಮಗೆ ಕಾಣಿಸಬೇಕಾದರೂ ನಮ್ಮ ಕಣ್ಣಿಗೆ ಕವಿದ ಕತ್ತಲ ಜವನಿಕೆ ತೆರೆಯಬೇಕು. ಅಷ್ಟಕ್ಕಾದರೂ ಬೇಕಿರುವುದು ಮನಸ್ಸಿಟ್ಟು ಕೇಳಿಸಿಕೊಳ್ಳುವ ಮನಸ್ಸುಗಳು ಮಾತ್ರ.
ಸಂವಹನದ ಅತಿದೊಡ್ಡ ಸಮಸ್ಯೆಯೆಂದರೆ ನಾವು ಅರ್ಥ ಮಾಡಿಕೊಳ್ಳುವುದಕ್ಕಾಗಿ ಕೇಳುವುದಿಲ್ಲ, ಉತ್ತರಿಸುವುದಕ್ಕಾಗಿ ಕೇಳುತ್ತೇವೆ, ಎಂದಿದ್ದರು ಒಬ್ಬ ಚಿಂತಕರು. ಪರಸ್ಪರರ ಮಾತುಗಳನ್ನು ಒಬ್ಬರ ಮೇಲೊಬ್ಬರು ಸಿಟ್ಟಾಗದೇ, ಹತಾಶೆ ವ್ಯಕ್ತಪಡಿಸದೇ ಕೇಳಿಸಿಕೊಳ್ಳುವ ಮೂಲಕ ಅವರು ಒಬ್ಬರಿಗೊಬ್ಬರು ಅತ್ಯುತ್ತಮ ಉಡುಗೊರೆ ಕೊಟ್ಟುಕೊಳ್ಳುತ್ತಾರಂತೆ. ಅದೆಂದರೆ ಯಾವುದೇ ವಸ್ತು ರೂಪದಲ್ಲಲ್ಲ. ತಮ್ಮೊಳಗಿನ ತುಮುಲಗಳನ್ನೆಲ್ಲ ತೆರೆದಿಡುವ ಮುಕ್ತ ಅವಕಾಶ. ಅಷ್ಟು ದೊರೆಯುತ್ತಿದ್ದರೆ ಸಾಕು, ಅವರಿಗೆ ತಮ್ಮೊಳಗನ್ನು ಕೇಳುವವರಿದ್ದಾರೆ, ಅರ್ಥ ಮಾಡಿಕೊಳ್ಳುವವರಿದ್ದಾರೆ ಎಂಬ ನಂಬಿಕೆ ಭದ್ರವಾಗುತ್ತದೆ. ಪರಿಣಾಮವಾಗಿ ಒಬ್ಬರಿನ್ನೊಬ್ಬರ ಪ್ರೀತಿ, ನಂಬಿಕೆ, ಸ್ವೀಕೃತಿ, ಮೆಚ್ಚುಗೆ, ಪ್ರೋತ್ಸಾಹ ಎಲ್ಲವನ್ನೂ ಪಡೆಯುತ್ತಾರೆ. ಅದರಿಂದ ಮನೆ-ಮನಗಳು ಬೆಳಗುತ್ತವೆ. ಬದುಕಿನ ಬೆಸುಗೆ ಭದ್ರವಾಗುತ್ತದೆ.
ನೆಮ್ಮದಿಯ ಮನೆ ನಮ್ಮದಾಗಬೇಕಾದರೆ ಅಗತ್ಯವಿರುವುದು ದುಬಾರಿ ಉಡುಗೊರೆಗಳಲ್ಲ, ದುಡ್ಡಿನಿಂದ ಖರೀದಿಸಲಾಗದ ಒಂದು ಹಿಡಿ ಪ್ರೀತಿ ಮತ್ತು ಕೊಂಚ ಸಮಯವನ್ನು ಬಯಸುವ, ಪರಸ್ಪರರ ಮಾತುಗಳನ್ನು ಕೇಳುವ ತಾಳ್ಮೆ! ಆ ಸಮಯ, ಆ ತಾಳ್ಮೆ ನಮಗೆ ಒದಗಲಿ.