* ಗುರುದೇವ ರಾ. ದ. ರಾನಡೆ
ಪ್ರತ್ಯೇಕ ಸಂಗತಿಗಳಲ್ಲಿ ಸಾರ್ವಕಾಲಿಕ-ಸಾರ್ವತ್ರಿಕ ತಿರುಳನ್ನು ಗ್ರಹಿಸಬೇಕೆಂಬ ತತ್ತ್ವವನ್ನು ಅನಾದಿಕಾಲದಿಂದ ತಾತ್ತ್ವಿಕರೂ ಅಧಿಪತಿಗಳೂ ಮನಗಂಡಿದ್ದಾರೆ. ದೈನಂದಿನ ವ್ಯವಹಾರಗಳಲ್ಲಿಯೂ ಸಾರ್ವತ್ರಿಕ ಅಂಶಗಳನ್ನು ಕಾಣುವ ದೃಷ್ಟಿವೈಶಾಲ್ಯದಿಂದಾಗಿಯೆ ಪ್ಲೇಟೋ ಮಹಾಶಯನ ಹೆಸರು ಸ್ಥಾಯಿಯಾಗಿ ಉಳಿದಿರುವುದು. ಯಾವುದನ್ನು ಅರಿತುಕೊಂಡಲ್ಲಿ ಉಳಿದೆಲ್ಲದರ ಪರಿಜ್ಞಾನ ಉಂಟಾಗುತ್ತದೋ ಅದರ ಅನ್ವೇಷಣೆಯಲ್ಲಿಯೆ ಶಂಕರಾಚಾರ್ಯರ ಜೀವನವಷ್ಟೂ ಸಾಗಿದುದು. ಆ ನೆಲೆಯಿಂದ ಮನುಷ್ಯನ ಬಾಳು ಈಗ ಬಹಳ ದೂರ ಕ್ರಮಿಸಿದೆ. ಜ್ಞಾನದ ಪರಿಧಿ ವಿಸ್ತರಿಸಿದೆ; ವಿಜ್ಞಾನಪ್ರಗತಿ ಜೀವನವನ್ನು ಸಮೃದ್ಧಗೊಳಿಸಿದೆ, ಜಗತ್‌ಸ್ಥಿತಿ ಬದಲಾಗಿದೆ. ಆದರೂ ಮಾನವಜೀವನದ ಲಕ್ಷ್ಯವಾಗಲಿ ಅದನ್ನು ಸಾಧಿಸಲು ಇರುವ ಮಾರ್ಗವಾಗಲಿ ತುಂಬಾ ಬದಲಾಗಿದೆಯೆನಿಸುವುದಿಲ್ಲ. ಈಗಲೂ ಭಗವಂತನ ಸಾಕ್ಷಾತ್ಕಾರ ಹೇಗೆ ಆದೀತೆಂಬ ಮನುಷ್ಯನ ಹುಡುಕಾಟ ನಡೆದೇ ಇದೆ. ದೈವ ಸಾಕ್ಷಾತ್ಕಾರವೇ ಪರಮಗಮ್ಯವೆಂಬುದಾಗಲಿ ನಮ್ಮ ಆಧ್ಯಾತ್ಮಿಕ ಜೀವನಕ್ಕೆ ತಾತ್ತ್ವಿಕ ಅಧಿಷ್ಠಾನವೂ ಸಮರ್ಥನೆ-ಪೋಷಣೆಯೂ ಬೇಕೆಂಬುದಾಗಲಿ ಪ್ರಾಚೀನ ಕಾಲದಲ್ಲಿದ್ದಂತೆ ಈಗಲೂ ಸಂಗತವೇ ಆಗಿದೆ.
– (‘A Constructive Survey of Upanishadic Philosophy’ ಗ್ರಂಥದ ಮುನ್ನುಡಿಯಿಂದ.)