ತತ್ತ್ವಮಾತ್ಮಸ್ಥಮಜ್ಞಾತ್ವಾ ಮೂಢಃ ಶಾಸ್ತ್ರೇಷು ಮುಹ್ಯತಿ |
ಗೋಪಃ ಕಕ್ಷಗತೇ ಛಾಗೇ ಕೂಪೇ ಪಶ್ಯತಿ ದುರ್ಮತಿಃ ||
– ಗರುಡಪುರಾಣ
ತನ್ನೊಳಗೇ ಇರುವ ತತ್ತ್ವವನ್ನು ಅರಿತುಕೊಳ್ಳದೆ ಮೂಢನು ತತ್ತ್ವವನ್ನು ಕಾಣಲು ಗ್ರಂಥಗಳಲ್ಲೆಲ್ಲ ಹುಡುಕಾಡುತ್ತಾನೆ. ಕುರಿ ಕಾಯುವವನು ತನ್ನ ಬಗಲಲ್ಲಿಯೆ ಮೇಕೆಯನ್ನು ಇಟ್ಟುಕೊಂಡಿರುವುದನ್ನು ಮರೆತು ಅದೇನಾದರೂ ಬಾವಿಯಲ್ಲಿ ಬಿದ್ದಿರಬಹುದೇನೊ ಎಂದು ಬಗ್ಗಿ ನೋಡುತ್ತಾನೆ.
ತನಗೆ ಅದು ಬೇಕು ಇದು ಬೇಕು ಎಂದು ಸದಾ ಹಪಹಪಿಸುವುದನ್ನು ಅಭ್ಯಾಸ ಮಾಡಿಕೊಂಡವನಿಗೆ ತನ್ನಲ್ಲಿ ಈಗಾಗಲೇ ಇರುವ ಭಾಗ್ಯದ ಕಡೆಗೆ ಲಕ್ಷ್ಯವೇ ಇರುವುದಿಲ್ಲ. ಸಂತೃಪ್ತಿಯ ಸ್ವಭಾವವಿರುವವನು ಸದಾ ಸಂತುಷ್ಟನಾಗಿರುತ್ತಾನೆ. ಅತೃಪ್ತಿಯನ್ನೇ ಸ್ವಭಾವಗತವಾಗಿಸಿಕೊಂಡವನು ಸದಾ ಖಿನ್ನನಾಗಿಯೆ ಇರುತ್ತಾನೆ. ಸಾಮಾನ್ಯವಾಗಿ ವಿನೋದಪ್ರಸಂಗವೆಂದು ಚಲಾವಣೆಯಲ್ಲಿರುವ ಒಂದು ಕಾಲ್ಪನಿಕ ಕಥೆಯಲ್ಲಿ ಮುಖ್ಯವಾದ ಬೋಧೆ ಅಡಗಿದೆ. ಒಬ್ಬಾತ ತಾನಿದ್ದ ಮನೆಯನ್ನು ಮಾರಾಟ ಮಾಡಬಯಸಿದ. ತನ್ನ ಪರಿಚಯದ ರಿಯಲ್ ಎಸ್ಟೇಟ್ ಕ್ಷೇತ್ರದವನಲ್ಲಿಗೆ ಹೋದ. ಮಾರಾಟಕ್ಕೆ ನೆರವಾಗುವಂತೆ ಕೋರಿದ. ಮರುದಿನ ರಿಯಲ್ ಎಸ್ಟೇಟ್ ಏಜೆಂಟ್ ಅದಕ್ಕಾಗಿ ಜಾಹೀರಾತೊಂದನ್ನು ಸಿದ್ಧಪಡಿಸಿದ: ಸುಂದರವಾದ ತೋಟವನ್ನೊಳಗೊಂಡ ಆವರಣವಿರುವ ಮನೆ ಮಾರಾಟಕ್ಕಿದೆ. ಆಕರ್ಷಕ ಗೇಬಲ್‌ಗಳ ಮೇಲುಹಾಸು. ವಿಶಾಲ ವೆರಾಂಡಾ. ಧಾರಾಳ ಗಾಳಿ-ಬೆಳಕು ಇರುವ ದೊಡ್ಡ ಕೊಠಡಿಗಳು ಮತ್ತು ಅಡಿಗೆಮನೆ ಹಾಗೂ ಊಟದ ಕಕ್ಷಗಳು. ಹಲವರು ಮಕ್ಕಳಿರುವ ಕುಟುಂಬಕ್ಕೆ ಹೇಳಿಮಾಡಿಸಿದಂಥದು…. ಈ ಜಾಹೀರಾತನ್ನು ನೋಡಿದೊಡನೆ ಮನೆ ಮಾರಲಿದ್ದಾತನ ಮನಸ್ಸು ಬದಲಾಗಿಬಿಟ್ಟಿತು. ಆತ ಏಜೆಂಟನಿಗೆ ಹೇಳಿದ: ನಾನು ಮನೆಯನ್ನು ಮಾರದಿರಲು ನಿರ್ಧರಿಸಿದ್ದೇನೆ. ನಾನು ವರ್ಷಗಳಿಂದ ಹಂಬಲಿಸುತ್ತಿದ್ದಂಥ ಮನೆ ಇದೇ ಆಗಿದೆ – ಎಂದು ಈಗ ಕಂಡುಕೊಂಡೆ.