ದೇಶದ ಸ್ವಾತಂತ್ರ್ಯಪ್ರಾಪ್ತಿಯ ಎಪ್ಪತ್ತೈದನೇ ವರ್ಷಾಚರಣೆ ಸಮೀಪಿಸುತ್ತಿರುವ ಸಂಭ್ರಮ ಒಂದೆಡೆಯಾದರೆ ಆತ್ಮಾವಲೋಕನವನ್ನು ಅವಶ್ಯವಾಗಿಸುವ ಹಲವು ಅಂಶಗಳೂ ಇಲ್ಲದಿಲ್ಲ. ರಾಜಕೀಯ ದಾಸ್ಯದಿಂದ ಮುಕ್ತರಾಗುವ ಪ್ರಕ್ರಿಯೆಯಷ್ಟೇ ಮಾನಸಿಕ-ಬೌದ್ಧಿಕ ದಾಸ್ಯವನ್ನು ಕೊಡವಿಕೊಳ್ಳುವುದೂ ಮುಖ್ಯವಷ್ಟೆ? ಹಲವು ಸಮಾಜೋನ್ನತ – ಎಲೀಟ್ ವರ್ಗಗಳು ಈಗಲೂ ಗುಲಾಮೀ ಮಾನಸಿಕತೆಗೇ ಅಂಟಿಕೊಂಡಿರುವುದಕ್ಕೆ ಪುರಾವೆಗಳು ಆಗಿಂದಾಗ ಎದ್ದುಕಾಣುತ್ತಿರುವುದು ವಿಷಾದಕರ. ಇತ್ತೀಚಿನ ನಿದರ್ಶನವೊಂದು ಗಮನಸೆಳೆಯುತ್ತದೆ. ವಿದೇಶೀ ಆಳ್ವಿಕೆಯ ಪರಿಣಾಮ ಎಷ್ಟು ದಟ್ಟವಾದುದೆಂಬುದನ್ನೂ ಇದು ತೋರಿಸುತ್ತದೆ.
ಜಲಿಯನ್‌ವಾಲಾಬಾಗ್ ಹತ್ಯಾಕಾಂಡಕ್ಕೆ ಸೇಡು ತೀರಿಸಿಕೊಳ್ಳಲು ಸಂಕಲ್ಪಿಸಿ ವರ್ಷಗಳುದ್ದಕ್ಕೂ ಆ ನಿರ್ಧಾರವನ್ನು ಜೀವಂತವಾಗುಳಿಸಿಕೊಂಡು ಅಂತಿಮವಾಗಿ ಲಂಡನ್ನಿನಲ್ಲಿ ಜನರು ನೋಡುತ್ತಿದ್ದಂತೆಯೇ ಬಹಿರಂಗವಾಗಿಯೇ ಹತ್ಯಾಕಾಂಡದ ರೂವಾರಿ ಜನರಲ್ ಓಡ್ವೆಯರನನ್ನು ಗುಂಡಿಕ್ಕಿ ಕೊಂದು ಬಲಿದಾನಿಯಾಗಿ ತನ್ನ ಹೆಸರನ್ನು ಅಮರಗೊಳಿಸಿಕೊಂಡ ಸರ್ದಾರ್ ಉಧಮ್‌ಸಿಂಹನನ್ನು ಕುರಿತು ಇತ್ತೀಚೆಗೆ ನಿರ್ಮಾಣಗೊಂಡಿದ್ದ ಚಲನಚಿತ್ರ ಎಲ್ಲ ವರ್ಗಗಳಿಂದಲೂ ಮೆಚ್ಚುಗೆ ಗಳಿಸಿತ್ತು. ಚಿತ್ರವನ್ನು ಆಸ್ಕರ್ ಪ್ರಶಸ್ತಿಗಾಗಿ ಭಾರತದ ಪರವಾಗಿ ಸಲ್ಲಿಸಬೇಕೆಂದು ಒಂದು ಹಂತದಲ್ಲಿ ನಿರ್ಣಯಿಸಲಾಗಿದ್ದು ಷಾರ್ಟ್ ಲಿಸ್ಟ್ ಪಟ್ಟಿಯಲ್ಲೂ ಅದು ಸೇರ್ಪಡೆಯಾಗಿತ್ತು. ಆದರೆ ನಿರ್ಣಾಯಕ ಘಟ್ಟದಲ್ಲಿ ಫಿಲ್ಮ್ ಫೆಡರೇಶನ್ ಆಫ್ ಇಂಡಿಯ ತನ್ನ ಹಿಂದಿನ ನಿರ್ಧಾರವನ್ನು ಕೈಬಿಟ್ಟಿತು. ಅದು ಏಕೆಂದು ಪ್ರಶ್ನಿಸಿದಾಗ ಫೆಡರೇಶನ್ ವಕ್ತಾರರು ನೀಡಿದ ವಿವರಣೆ ಹೀಗಿತ್ತು: ಚಿತ್ರದಲ್ಲಿ ಬ್ರಿಟಿಶರ ರೀತಿನೀತಿಗಳನ್ನು ಟೀಕಿಸಲಾಗಿದೆ. ಜಾಗತೀಕರಣದ ಈ ದಿನಗಳಲ್ಲಿ ಬ್ರಿಟಿಶರ ಬಗೆಗೆ ಆಕ್ರೋಶವನ್ನು ವ್ಯಕ್ತಮಾಡಿ ಹಿಂದಿನ ದೌರ್ಜನ್ಯಗಳನ್ನು ಈಗ ಚಿತ್ರೀಕರಿಸಿ ಪ್ರದರ್ಶಿಸುವುದು ಅನುಚಿತವಾದೀತೆನಿಸಿದೆ.
ಇದರ್ಕಿದೆ ವೃತ್ತಂ!