ಅಂದಿನ ದಿನಗಳಲ್ಲಿ ನ್ಯಾಯಾಧೀಶ ಲೆ-ಮೈಸ್ಟ್ರ್ ಕೋಲ್ಕತಾ ನಗರದಲ್ಲಿ ಚಿಕ್ಕ ಪುಟ್ಟ ಮೊಕದ್ದಮೆಗಳ ವಿಚಾರಣೆಯನ್ನು ನಡೆಸುವ ನ್ಯಾಯಾಧೀಶನಾಗಿಯೂ (Justice of Peace) ಕಾರ್ಯ ನಿರ್ವಹಿಸುತ್ತಿದ್ದ. ಇದೊಂದು ಆಕ್ಷೇಪಾರ್ಹ ವ್ಯವಸ್ಥೆಯಾಗಿದೆ. ಏಕೆಂದರೆ ಸರ್ವೋಚ್ಚ ನ್ಯಾಯಾಲಯದಲ್ಲಿ ನ್ಯಾಯಾಧೀಶನಾಗಿ ಕುಳಿತುಕೊಳ್ಳುವ ವ್ಯಕ್ತಿ ದಂಡಾಧಿಕಾರಿಯಾಗಿ ಆಪಾದಿತನ ವಿಚಾರಣೆ ನಡೆಸಿದ ಪ್ರಕರಣದಲ್ಲಿ ತೀರ್ಮಾನ ತೆಗೆದುಕೊಳ್ಳುವುದರಿಂದ ಪ್ರಕರಣದ ಬಗ್ಗೆ ಪೂರ್ವಭಾವಿಯಾಗಿ ಪೂರ್ವಗ್ರಹಕ್ಕೆ ತುತ್ತಾಗಿರುತ್ತಾನೆ.
ಆಗಿನ ಕಾಲದಲ್ಲಿ ದೇಶೀಯ ಬ್ಯಾಂಕರ್ಗಳನ್ನು, ಎಂದರೆ ಆಭರಣಗಳನ್ನು ಅಡವಿಟ್ಟುಕೊಂಡು ಲೇವಾದೇವಿ ವ್ಯವಹಾರದಲ್ಲಿ ತೊಡಗಿದ್ದವರನ್ನು ಶರಾಫ್ಗಳೆಂದು ಕರೆಯುತ್ತಿದ್ದರು. ಬುಲಾಕಿದಾಸ ಅಂತಹ ಒಬ್ಬ ಶರಾಫನಾಗಿದ್ದು ಈ ಎಲ್ಲ ಸಮಸ್ಯೆಯ ಮೂಲ ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿದ್ದ. ಆತ ತನ್ನ ನಂಬಿಕೆಯ ಬಂಟ ಪದ್ಮೋಹನ್ (ಪದ್ಮ ಮೋಹನ್) ಹಾಗೂ ಮತ್ತೊಬ್ಬ ವ್ಯಾಪಾರಿ ಮೋಹನ್ಪ್ರಸಾದ್ ಇವರಿಗೆ ಪವರ್ ಆಫ್ ಅಟಾರ್ನಿ ಬರೆದುಕೊಡುತ್ತಾನೆ. ಮೋಹನ್ಪ್ರಸಾದ್ ನಂದಕುಮಾರನ ಆಪ್ತನಾಗಿದ್ದನಲ್ಲದೆ ಮೋಸ ಮಾಡುವುವರಲ್ಲಿ ಎತ್ತಿದ ಕೈ ಎನಿಸಿಕೊಂಡಿದ್ದ ವ್ಯಕ್ತಿ. ತನ್ನ ಕೋಲ್ಕತಾದ ವಾಣಿಜ್ಯ ವ್ಯವಹಾರಕ್ಕೆ ಇತಿಶ್ರೀ ಹಾಕಲು ಇಚ್ಛಿಸುತ್ತಿದ್ದ ಬುಲಾಕಿದಾಸ ಆತನ ಗುಮಾಸ್ತ ಕಿಶನ್ಜೀವನ್ದಾಸ್ ಬರೆಯುತ್ತಿದ್ದ ಲೆಕ್ಕದ ಪುಸ್ತಕವನ್ನಾಧರಿಸಿ ತನಗೆ ಬರಬೇಕಾಗಿರುವ ಹಣ ಮತ್ತು ತಾನು ಕೊಡಬೇಕಾಗಿರುವ ಸಾಲದ ಒಂದು ಕಚ್ಚಾ ಪಟ್ಟಿಯನ್ನು ತಯಾರಿಸಿ ಅವರಿಬ್ಬರ ವಶಕ್ಕೆ ನೀಡುತ್ತಾನೆ. ಈ ಪಟ್ಟಿಯಲ್ಲಿ ನಂದಕುಮಾರ್ಗೆ ನೀಡಬೇಕಾಗಿರುವ ೧೦,೦೦೦ ರೂಪಾಯಿಗಳನ್ನು ತೋರಿಸಲಾಗಿದೆ. ಆದರೆ ಇದಕ್ಕೆ ಸೂಕ್ತ ವಿವರಣೆ ಇರಲಿಲ್ಲ. ಇದಾದ ಕೆಲವೇ ದಿನಗಳಲ್ಲಿ ಬುಲಾಕಿದಾಸ್ ತನ್ನ ಉಯಿಲನ್ನು ಬರೆದಿಟ್ಟು ಜೂನ್ ೧೭೬೯ರಲ್ಲಿ ಸಾವನ್ನಪ್ಪುತ್ತಾನೆ.
ಬುಲಾಕಿದಾಸನ ಉಯಿಲು
ಬುಲಾಕಿದಾಸನ ಸಾವಿನ ಕೆಲ ತಿಂಗಳುಗಳ ಬಳಿಕ ಆತನ ಕೊಟ್ಟು/ಕೊಳ್ಳುವ ಲೆಕ್ಕ ಚುಕ್ತಾ ಮಾಡುವ ಸಂದರ್ಭದಲ್ಲಿ ಉಯಿಲು ನಿರ್ವಾಹಕರು ಇತರ ಅನೇಕ ದಾಖಲೆಗಳೊಂದಿಗೆ ನಂದಕುಮಾರನಿಗೆ ಸಲ್ಲಬೇಕಾಗಿದ್ದ ಹಣದ ಬಗ್ಗೆ ಬುಲಾಕಿದಾಸ ಬರೆದುಕೊಟ್ಟಿದ್ದನೆಂದು ಹೇಳಲಾಗುವ ಸಾಲ ಮರುಪಾವತಿಯ ವಚನಪತ್ರಕ್ಕನುಸಾರವಾಗಿ ನಂದಕುಮಾರನಿಗೆ ಹಣ ನೀಡುತ್ತಾರೆ. ಇದಕ್ಕೆ ಪ್ರತಿಯಾಗಿ ನಂದಕುಮಾರ ಆ ವಚನಪತ್ರವನ್ನು ಮೇಲಿನಿಂದ ಕೆಲವು ಅಂಗುಲ ಹರಿದು ಅದನ್ನು ರದ್ದುಗೊಳಿಸಿ ತಾನು ಸ್ವೀಕರಿಸಿದ ಹಣಕ್ಕಾಗಿ ರಸೀದಿಯನ್ನು ನೀಡಿರುತ್ತಾನೆ. ಈ ವಚನಪತ್ರದಂತೆ ನಂದಕುಮಾರ ಸುಮಾರು ೭೦,೦೦೦ ರೂಪಾಯಿಗಳನ್ನು ಪಡೆದಿರುತ್ತಾನೆ. ಇದಲ್ಲದೆ ಇನ್ನೂ ಹೆಚ್ಚಿನ ಹಣ ಆತನಿಗೆ ಸಂದಾಯವಾಗಿರುತ್ತದೆ. ಈ ಪ್ರಮಾಣಪತ್ರ ಖೊಟ್ಟಿಯೆಂದು ರುಜುವಾತಾದಲ್ಲಿ ಬುಲಾಕಿದಾಸನ ಕುಟುಂಬಕ್ಕೆ ಸೇರಬೇಕಾದ ಆಸ್ತಿಯ ಅರ್ಧಕ್ಕಿಂತಲೂ ಹೆಚ್ಚಿನ ಹಣವನ್ನು ಆತ ಮೋಸ ಮತ್ತು ವಿಶ್ವಾಸಘಾತದ ಮೂಲಕ ಕಬಳಿಸಿದ್ದಾನೆಂದು ಸ್ಪಷ್ಟವಾಗುತ್ತದೆ. ಮರಣಶಯ್ಯೆಯಲ್ಲಿದ್ದ ಬುಲಾಕಿದಾಸ ತನ್ನ ಆಪ್ತ ಸ್ನೇಹಿತ ನಂದಕುಮಾರನನ್ನು ಕರೆದು ನನ್ನ ಪತ್ನಿ ಮತ್ತು ಮಗಳನ್ನು ನಿನ್ನ ಸುಪರ್ದಿಗೆ ವಹಿಸುತ್ತಿದ್ದೇನೆ. ನೀನು ನನಗೆ ತೋರಿದಷ್ಟೇ ವಿಶ್ವಾಸವನ್ನು ಅವರಿಗೂ ತೋರಿಸುತ್ತೀಯೆಂದು ನಂಬಿದ್ದೇನೆ ಎಂದು ನುಡಿದಿದ್ದ. ಬುಲಾಕಿದಾಸನ ಉಯಿಲಿನ ಪ್ರಮಾಣಿತ ಇಚ್ಛಾಪತ್ರ (probate) ಪಡೆಯಲು ನಂದಕುಮಾರನ ವಚನಪತ್ರವೂ ಸೇರಿದಂತೆ ಲೆಕ್ಕಪತ್ರದ ಎಲ್ಲ ದಾಖಲೆಗಳನ್ನು ಉಯಿಲು ನಿರ್ವಾಹಕರು ಕೋಲ್ಕತಾದ ಮೇಯರ್ ನ್ಯಾಯಾಲಯಕ್ಕೆ ಸಲ್ಲಿಸುತ್ತಾರೆ.
ಉಯಿಲಿಯಲ್ಲಿ ಬುಲಾಕಿದಾಸ ತನ್ನ ಆಸ್ತಿಯನ್ನು ಎರಡು ಭಾಗಗಳಲ್ಲಿ ವಿಭಾಗಿಸಿರುತ್ತಾನೆ. ಮೊದಲನೆಯ ಭಾಗ ಆತನ ಖಾಸಗಿ ಆಸ್ತಿಯಾದರೆ ಮತ್ತೊಂದು ಭಾಗ ಆತನಿಗೆ ಈಸ್ಟ್ ಇಂಡಿಯ ಕಂಪೆನಿಯಿಂದ ಬರಬೇಕಾಗಿರುವ ಹಣವಾಗಿತ್ತು. ಎಂಟು ಬಾಂಡ್ಗಳಿಂದ ಬರಬೇಕಿದ್ದ ಒಟ್ಟಾರೆ ೧೪೩,೪೩೫ ರೂಪಾಯಿಗಳನ್ನು ಕಂಪೆನಿಯ ಹಣ ಎಂದು ಕರೆಯಲಾಗುತ್ತದೆ. ಅದನ್ನು ಈಸ್ಟ್ ಇಂಡಿಯ ಕಂಪೆನಿ ರಾಜಕೀಯ ಕಾರಣಗಳಿಗಾಗಿ ದೀರ್ಘಕಾಲದಿಂದ ವ್ಯಾಜ್ಯಕ್ಕೆ ಒಳಪಡಿಸುತ್ತದೆ. ಆದರೆ ಒಂದಲ್ಲ ಒಂದು ದಿನ ಈ ಹಣ ತನ್ನ ಕುಟುಂಬಕ್ಕೆ ಲಭ್ಯವಾಗುತ್ತದೆ ಎಂಬ ಆಶಾವಾದ ಹೊಂದಿದ್ದ ಬುಲಾಕಿದಾಸ (ಒಂದು ರೂಪಾಯಿಗೆ ಹದಿನಾರಾಣೆಯ ಲೆಕ್ಕಾಚಾರದ ಪ್ರಕಾರ) ಅದರ ೧೬/೯ನೇ ಭಾಗವನ್ನು ತನ್ನ ಕೆಲವು ಸಾಲಗಳನ್ನು ತೀರಿಸಲು ಮೀಸಲಾಗಿಟ್ಟರೆ ಬಳಿಕ ಮಿಕ್ಕ ೧೬/೭ನೇ ಭಾಗದ ಹಣದಲ್ಲಿ ೧೬/೪ನೇ ಭಾಗ ತನ್ನ ವಿಧವೆ ಪತ್ನಿಗೂ, ತನ್ನ ಸೋದರಳಿಯಂದಿರಾದ ಗಂಗಾಬಿಶನ್ ಮತ್ತು ಹಿಂಗುಲಾಲ್ ಇವರಿಗೆ ತಲಾ ೧೬/೧ ಭಾಗ ಸಲ್ಲಬೇಕೆಂದು ಬರೆಯುತ್ತಾನೆ. ತನ್ನ ಖಾಸಗಿ ಆಸ್ತಿಯಲ್ಲಿ ಅನುಕ್ರಮವಾಗಿ ದಾನ ಧರ್ಮ, ತನ್ನ ವಿಧವೆ ಪತ್ನಿಗೆ, ಪದ್ಮೋಹನ್ ಮತ್ತು ತನ್ನ ಸೋದರಳಿಯಂದಿರಿಗೆ ತಲಾ ಕಾಲು ಭಾಗವನ್ನು ಹಂಚುತ್ತಾನೆ. ಈ ಹಂಚಿಕೆಯಿಂದ ಪದ್ಮೋಹನ್ ಖಾಸಗಿ ಆಸ್ತಿಯಲ್ಲಿ ಎಲ್ಲರೊಂದಿಗೆ ಸರಿಸಮಾನ ಭಾಗಿಯಾದರೆ ಕಂಪೆನಿಯ ಹಣದಲ್ಲಿ ಕೇವಲ ಶೇಕಡ ೧೦ ಭಾಗಕ್ಕೆ ಬಾಧ್ಯನಾಗಿರುತ್ತಾನೆ. ಬುಲಾಕಿದಾಸ ಈ ಉಯಿಲನ್ನು ಬರೆಯದೆ ಮರಣ ಹೊಂದಿದ್ದರೆ ಆಗ ಆತನ ಆಸ್ತಿಯಲ್ಲಿ ಸ್ವಲ್ಪ ಭಾಗ ಅಪ್ರಾಪ್ತವಯಸ್ಸಿನ ಹೆಣ್ಣುಮಕ್ಕಳು ಮದುವೆಯಾಗುವವರೆಗೆ ಅವರ ಪೋಷಣೆಗೆ ಮೀಸಲಾದರೆ ಮಿಕ್ಕದ್ದೆಲ್ಲ ಆತನ ಪತ್ನಿಗೆ ಸೇರುತ್ತದೆ. ಪತ್ನಿಯ ಮರಣಾನಂತರ ಅದು ಬುಲಾಕಿದಾಸನ ಹೆಣ್ಣುಮಕ್ಕಳಿಗೆ ಹಾಗೂ ಸೋದರಳಿಯಂದಿರಿಗೆ ಸೇರುತ್ತದೆ. ಪದ್ಮೋಹನ್ ಬುಲಾಕಿದಾಸನ ಮಗನಾಗಿರಲಿಲ್ಲ ಮಾತ್ರವಲ್ಲ ಬೇರೆ ಜಾತಿಯ ಹಿನ್ನೆಲೆಯಲ್ಲಿ ಆತನನ್ನು ದತ್ತು ತೆಗೆದುಕೊಳ್ಳುವ ಸಾಧ್ಯತೆ ಇರಲಿಲ್ಲ. ಒಂದೊಮ್ಮೆ ಜಾತಿಯ ಸಮಸ್ಯೆ ಇಲ್ಲದಿದ್ದಿದ್ದರೆ ಬುಲಾಕಿದಾಸ ಆತನನ್ನು ತನ್ನ ಮಗನಾಗಿ ದತ್ತು ಪಡೆಯಲು ಹಿಂಜರಿಯುತ್ತಿರಲಿಲ್ಲ.
ಇದು ಪದ್ಮೋಹನನಲ್ಲಿ ಅತೃಪ್ತಿಗೆ ಕಾರಣವಾಗುತ್ತದೆ. ತನ್ನ ಅಳಲನ್ನು ಆತ ಮಹಾರಾಜ ನಬಕಿಶನ್ ಬಳಿ ಹಂಚಿಕೊಳ್ಳುತ್ತಾನೆ. ಮಹಾರಾಜ ನಬಕಿಶನ್ ಬುಲಾಕಿದಾಸನಿಂದ ತನಗೆ ಬರಬೇಕಾಗಿದೆ ಎಂಬ ಖೊಟ್ಟಿ ಪ್ರಮಾಣವಚನವನ್ನು ನಿರ್ಮಿಸಿ ಬಂದ ಹಣದಲ್ಲಿ ತನಗೆ ಸ್ವಲ್ಪ ಭಾಗವನ್ನು ಉಳಿಸಿಕೊಂಡು ಮಿಕ್ಕಿದ್ದನ್ನು ಪದ್ಮೋಹನ್ಗೆ ನೀಡಬೇಕೆಂದು ಸೂಚಿಸುತ್ತಾನೆ. ಇದರಿಂದ ದಾನಧರ್ಮ ಮತ್ತು ಕೆಲಸಕ್ಕೆ ಬಾರದ ಸೋದರಳಿಯಂದಿರಿಗೆ ಸಲ್ಲಬೇಕಾದ ಭಾಗದಲ್ಲಿ ಕಡಿತವುಂಟಾಗಿ ಧಣಿಗಾಗಿ ಇಷ್ಟು ವರ್ಷಗಳ ಕಾಲ ನಿಃಸ್ಪೃಹವಾಗಿ ಸೇವೆ ಸಲ್ಲಿಸಿರುವ ತನಗೆ ಹಾಗೂ ಧಣಿಯ ವಿಧವೆಗೆ ಹೆಚ್ಚಿನ ಭಾಗ ಸಂದಾಯವಾದಂತಾಗುತ್ತದೆ ಎಂಬುದು ಆತನ ತರ್ಕ. ಆದರೆ ಇದಕ್ಕೆ ನಬಕಿಶನ್ ಒಪ್ಪಿಕೊಳ್ಳುವುದಿಲ್ಲ. ಆಗ ಪದ್ಮ ಮೋಹನ್ ಇದೇ ಸೂಚನೆಯನ್ನು ಮಹಾರಾಜ ನಂದಕುಮಾರನ ಮುಂದೆ ಇಟ್ಟಾಗ ನಂದಕುಮಾರ ಒಪ್ಪಿಕೊಂಡು ಆತನ ಸಹಾಯಕ್ಕೆ ಮುಂದಾಗುತ್ತಾನೆ.
ಪೂರ್ವಕಥೆ
೧೭೬೧ಕ್ಕೂ ಮೊದಲು ನಂದಕುಮಾರ ತನಗೆ ಸೇರಿದ ಕೆಲವು ಆಭರಣಗಳನ್ನು ಮಾರಲು ಬುಲಾಕಿದಾಸನಿಗೆ ನೀಡಿರುತ್ತಾನೆ. ಬುಲಾಕಿದಾಸ ಇದಕ್ಕೆ ಕೊಡಬೇಕಿದ್ದ ಹಣವನ್ನು ನೀಡದೆ ನಂದಕುಮಾರನನ್ನು ಸತಾಯಿಸುತ್ತಿದ್ದ. ಆದರೆ ತನ್ನ ವ್ಯವಹಾರದಲ್ಲಿ ನಷ್ಟ ಅನುಭವಿಸಿ ದಿವಾಳಿಯಾಗುವ ಸಂದರ್ಭದಲ್ಲಿ ಆತ ನಂದಕುಮಾರನ ಒತ್ತಾಯಕ್ಕೆ ಕಟ್ಟುಬಿದ್ದು ಒಂದು ವಚನಪತ್ರವನ್ನು ಬರೆದುಕೊಡುತ್ತಾನೆ. ಇದರ ಮುಖಬೆಲೆ ಎಷ್ಟೆಂದು ತಿಳಿಯದಿದ್ದರೂ ಆತನ ಪವರ್ ಆಫ್ ಅಟಾರ್ನಿಯಲ್ಲಿ ಉಲ್ಲೇಖಿಸಲಾಗಿರುವ ೧೦,೦೦೦ ರೂಪಾಯಿ ಎಂದು ಊಹಿಸಬಹುದಾಗಿದೆ. ಪದ್ಮ ಮೋಹನ್ನ ಯೋಜನೆಯನ್ನು ಜಾರಿಗೆ ತರುವ ವೇಳೆಯಲ್ಲಿ ಈ ವಚನಪತ್ರವನ್ನು ನಾಶಗೊಳಿಸಿರುವ ಸಾಧ್ಯತೆಯಿದೆ. ಆದರೆ ಈ ಬಗ್ಗೆ ಮೋಹನ್ಪ್ರಸಾದ್ ಮತ್ತು ಗುಮಾಸ್ತ ಕಿಶನ್ಮೋಹನ್ ಇಬ್ಬರಿಗೂ ಅಸ್ಪಷ್ಟ ತಿಳಿವಳಿಕೆ ಇದ್ದರೂ ಅದರ ಪೂರ್ತಿ ಮಾಹಿತಿ ಇದ್ದಿರಲಿಲ್ಲ. ಬುಲಾಕಿದಾಸ ನಂದಕುಮಾರನಿಗೆ ಬರೆದ ಪತ್ರವೊಂದರಲ್ಲಿ ಈ ಸಾಲದ ಬಗ್ಗೆ ಉಲ್ಲೇಖಿಸಿ ಅದನ್ನು ಮರುಪಾವತಿ ಮಾಡುವ ಬಗೆಯನ್ನು ತಿಳಿಸಿರುತ್ತಾನೆ. ಇದನ್ನೇ ಆಧಾರವನ್ನಾಗಿ ಇಟ್ಟುಕೊಂಡು ಅದರ ಮೊತ್ತವನ್ನು ಉಬ್ಬಿಸಿ ಬರೆಯುವ ಉಪಾಯ ಪದ್ಮೋಹನ್ ಮಾಡುತ್ತಾನೆ. ಇದಕ್ಕಾಗಿ ಬುಲಾಕಿದಾಸ ಹಸ್ತಾಕ್ಷರ ಹಾಕಿ ನೀಡಿದ್ದ ಕೆಲವು ಖಾಲಿ ಹಾಳೆಗಳನ್ನು ಬಳಸಿಕೊಂಡು ನಂದಕುಮಾರನಿಗೆ ಕೊಡಬೇಕಾಗಿರುವ ಸಾಲಕ್ಕಾಗಿ ವಚನಪತ್ರವನ್ನು ಬರೆದು ಅದರ ಮೇಲೆ ತನ್ನ ಬಳಿಯಿದ್ದ ಬುಲಾಕಿದಾಸನ ಮೊಹರನ್ನು ಒತ್ತುತ್ತಾನೆ. ತನ್ನ ಈ ವಂಚನೆಗೆ ಆಧಾರ ಒದಗಿಸಲು ಆತ ಹೊಸತೊಂದು ಕರಾರುನಾಮ ಅಥವಾ ಲೆಕ್ಕಾಚಾರದ ತಃಖ್ತೆಯನ್ನು ಸಿದ್ಧಗೊಳಿಸುತ್ತಾನೆ.
ಈ ರೀತಿಯಲ್ಲಿ ಫೋರ್ಜರಿ ಮಾಡಿದ ವಚನಪತ್ರದಿಂದ ಪಡೆದ ಹೆಚ್ಚುವರಿ ಹಣದಿಂದ ನಂದಕುಮಾರ ತನ್ನ ಪಾಲಿನ ದರ್ಬಾರ್ ವೆಚ್ಚವನ್ನು ಕಳೆದು ಮಿಕ್ಕ ಹಣವನ್ನು ಪದ್ಮೋಹನ್ಗೆ ನೀಡಬೇಕು. ಇದರಿಂದ ಅಗತ್ಯ ಬಿದ್ದರೆ ಪದ್ಮೋಹನ್ ಬುಲಾಕಿದಾಸನ ವಿಧವೆಗೆ ವಾರಾಣಸಿಯಲ್ಲಿ ತನ್ನ ಉಳಿದ ಜೀವನವನ್ನು ಕಳೆಯುವ ವ್ಯವಸ್ಥೆ ಮಾಡಿಕೊಡುತ್ತಾನೆ. ಈ ಪಿತೂರಿಯಿಂದ ತನ್ನ ಮೇಲಿನ ಜವಾಬ್ದಾರಿಯಿಂದ ಕಳಚಿಕೊಳ್ಳಲು ಬಯಸುತ್ತಿದ್ದ ಗಂಗಾಬಿಶನ್ ಪೂರ್ತಿಯಾಗಿ ಮೋಸಹೋಗುತ್ತಾನೆ. ಮೋಹನ್ಪ್ರಸಾದನ ಅರಿವಿಗೆ ಬರುವಷ್ಟರಲ್ಲಿ ಸಮಯ ಮೀರಿಹೋಗಿತ್ತು. ಬಹಳ ಕಾಲದ ಬಳಿಕ ಈ ವಿಷಯ ಕಿಶನ್ಜೀಬನ್ನ ತಿಳಿವಳಿಕೆಗೆ ಬರುತ್ತದೆ.
ಲೇವಾದೇವಿ ವ್ಯವಹಾರದಲ್ಲಿ ತೊಡಗಿದ್ದ ಬುಲಾಕಿದಾಸ ನಂದಕುಮಾರನಿಗೆ ತಾನು ಕೊಡಬೇಕಾಗಿದ್ದ ಹಣಕ್ಕಾಗಿ ೧೭೬೫ರಲ್ಲಿ ಬರೆದು ಕೊಟ್ಟಿದ್ದನೆಂದು ಹೇಳಲಾದ ಸಾಲ ಮರುಪಾವತಿಯ ವಚನಪತ್ರ ಕೃತಕ ಸೃಷ್ಟನೆಯಾಗಿದೆ ಎಂದು ಮೋಹನ್ಪ್ರಸಾದ್ ನಂದಕುಮಾರನ ವಿರುದ್ಧ ೧೭೭೫ ಮೇ ೬ರಂದು ಕೋಲ್ಕತಾದ ದಂಡಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ನ್ಯಾಯಾಧೀಶ ಲೆ-ಮೈಸ್ಟ್ರ್ನ ಸಮ್ಮುಖದಲ್ಲಿ ದೂರನ್ನು ದಾಖಲಿಸುತ್ತಾನೆ. ಲೆ-ಮೈಸ್ಟ್ರ ತನ್ನ ಸಹೋದ್ಯೋಗಿ ನ್ಯಾಯಾಧೀಶ ಜಾನ್ ಹೈಡ್ನ ಸಹಾಯದೊಂದಿಗೆ ಅಂದು ರಾತ್ರಿ ಹತ್ತು ಗಂಟೆಯವರೆಗೆ ಪ್ರಕರಣದ ವಿಚಾರಣೆ ನಡೆಯಿಸಿ ನಮ್ಮಿಬ್ಬರಲ್ಲೂ ಸರಕಾರ ಪ್ರಸ್ತುತಪಡಿಸಿದ ಸಾಕ್ಷ್ಯಾಧಾರಗಳ ಬಗ್ಗೆ ಎಳ್ಳು ಕಾಳಿನಷ್ಟೂ ಸಂಶಯವಿಲ್ಲ ಎಂಬ ಟಿಪ್ಪಣಿಯೊಂದಿಗೆ ನಂದಕುಮಾರನನ್ನು ಸೆರೆಮನೆಗೆ ಅಟ್ಟುತ್ತಾನೆ.
ಅಂದಿನ ದಿನಗಳಲ್ಲಿ ನ್ಯಾಯಾಧೀಶ ಲೆ-ಮೈಸ್ಟ್ರ ಕೋಲ್ಕತಾ ನಗರದಲ್ಲಿ ಚಿಕ್ಕ ಪುಟ್ಟ ಮೊಕದ್ದಮೆಗಳ ವಿಚಾರಣೆಯನ್ನು ನಡೆಸುವ ನ್ಯಾಯಾಧೀಶನಾಗಿಯೂ (Justice of Peace) ಕಾರ್ಯ ನಿರ್ವಹಿಸುತ್ತಿದ್ದ. ಇದೊಂದು ಆಕ್ಷೇಪಾರ್ಹ ವ್ಯವಸ್ಥೆಯಾಗಿದೆ. ಏಕೆಂದರೆ ಸರ್ವೋಚ್ಚ ನ್ಯಾಯಾಲಯದಲ್ಲಿ ನ್ಯಾಯಾಧೀಶನಾಗಿ ಕುಳಿತುಕೊಳ್ಳುವ ವ್ಯಕ್ತಿ ದಂಡಾಧಿಕಾರಿಯಾಗಿ ಆಪಾದಿತನ ವಿಚಾರಣೆ ನಡೆಸಿದ ಪ್ರಕರಣದಲ್ಲಿ ತೀರ್ಮಾನ ತೆಗೆದುಕೊಳ್ಳುವುದರಿಂದ ಪ್ರಕರಣದ ಬಗ್ಗೆ ಪೂರ್ವಭಾವಿಯಾಗಿ ಪೂರ್ವಗ್ರಹಕ್ಕೆ ತುತ್ತಾಗಿರುತ್ತಾನೆ. ಹೀಗಾಗಿ ಈ ಇಬ್ಬರೂ ನ್ಯಾಯಾಧೀಶರು ಸರ್ವೋಚ್ಚ ನ್ಯಾಯಾಲಯದಲ್ಲಿ ಕಿರಿಯ ನ್ಯಾಯಾಧೀಶರಾಗಿ ನಂದಕುಮಾರನ ವಿಚಾರಣೆಯಲ್ಲಿ ಮಹತ್ತ್ವದ ಪಾತ್ರವನ್ನು ನಿರ್ವಹಿಸಿರುತ್ತಾರೆ.
ಉಪವಾಸ
ನಂದಕುಮಾರನ ವಿಚಾರಣೆಯನ್ನು ಮುಗಿಸಿ ಆತನನ್ನು ಜೈಲಿಗೆ ಅಟ್ಟುವ ಆದೇಶವನ್ನು ನೀಡಿ ಮನೆಗೆ ನಿರ್ಗಮಿಸಲಿದ್ದ ನ್ಯಾಯಾಧೀಶರ ಮುಂದೆ ಜಾರೆಟ್ ಎಂಬ ವಕೀಲನೊಬ್ಬ ಸಮಾಜದಲ್ಲಿ ಘನತೆ ಮತ್ತು ಗೌರವದ ಸ್ಥಾನವನ್ನು ಹೊಂದಿರುವ ಬ್ರಾಹ್ಮಣ ನಂದಕುಮಾರನನ್ನು ಸಾಮಾನ್ಯ ಕೈದಿಗಳನ್ನು ಕೂಡುವ ಸೆರೆಮನೆಗೆ ಕಳುಹಿಸಿದರೆ ಅದರಿಂದ ಆತ ಜಾತಿಭ್ರಷ್ಟನಾಗುತ್ತಾನೆ ಎಂದು ಮನವಿಯೊಂದನ್ನು ಸಲ್ಲಿಸುತ್ತಾನೆ. ನಂದಕುಮಾರನನ್ನು ಗೃಹಬಂಧನಕ್ಕೆ ಒಳಪಡಿಸುವ ಇರಾದೆ ಇಲ್ಲದ ನ್ಯಾಯಾಧೀಶರು ವಕೀಲನ ಮನವಿಯನ್ನು ತಿರಸ್ಕರಿಸುತ್ತಾರಾದರೂ ವಕೀಲ ಅವರ ಬೆನ್ನು ಬಿಡದೆ ಕಾಡತೊಡಗಿದಾಗ ಮುಖ್ಯ ನ್ಯಾಯಾಧೀಶನ ಅಭಿಪ್ರಾಯವನ್ನು ಪಡೆಯಲು ಅವರು ಆತನ ಮನೆಗೆ ಹೋಗುತ್ತಾರೆ. ಅಲ್ಲಿಯೂ ಪ್ರಯೋಜನವಾಗುವುದಿಲ್ಲ. ಕೊನೆಗೆ ನಂದಕುಮಾರನನ್ನು ಸಾಮಾನ್ಯ ಸೆರೆಮನೆಗೆ ಕಳುಹಿಸಲು ಉಪ ಶರೀಫ್ ಟೋಲ್ ಫ್ರೈಗೆ ಲಿಖಿತ ಆದೇಶ ಕಳುಹಿಸಲಾಯಿತು.
ಶನಿವಾರ ರಾತ್ರಿ ಸೆರೆಮನೆಗೆ ಕಳುಹಿಸಲಾಗಿದ್ದ ನಂದಕುಮಾರ ಜಾತಿಭ್ರಷ್ಟನಾಗುವ ಭಯದಿಂದ ಸೆರೆಮನೆಗೆ ಬಂದಾಗಿನಿಂದಲೂ ಒಂದು ಹನಿ ನೀರನ್ನಾಗಲಿ ಅಥವಾ ಆಹಾರವನ್ನಾಗಲಿ ಸೇವಿಸಿಲ್ಲ, ಅಲ್ಲದೆ ಗಂಗೆಯ ನೀರಿಲ್ಲದೆ ಸ್ನಾನವನ್ನೂ ಮಾಡಿಲ್ಲ ಎಂಬ ಮಾಹಿತಿ ಸೋಮವಾರ ಬೆಳಗ್ಗೆ ಮುಖ್ಯ ನ್ಯಾಯಾಧೀಶನಿಗೆ ತಲಪುತ್ತದೆ. ಇದಕ್ಕೇನು ಪರಿಹಾರ ಎಂದು ಮುಖ್ಯ ನ್ಯಾಯಾಧೀಶ ಕೇಳಿದಾಗ ಆತ ತನ್ನನ್ನು ಕ್ರಿಸ್ತ ಅಥವಾ ಮಹಮ್ಮದೀಯ ವಾಸಿಸದೆ ಇರುವ ಮನೆಯಲ್ಲಿರಿಸಬೇಕು, ದಿನಕ್ಕೊಮ್ಮೆ ಗಂಗಾನದಿಯಲ್ಲಿ ಸ್ನಾನ ಮಾಡುವ ಸವಲತ್ತನ್ನು ನೀಡಬೇಕು ಎಂದು ಸೂಚಿಸುತ್ತಾನೆ. ನ್ಯಾಯಾಧೀಶ ಇದಕ್ಕೊಪ್ಪದೆ ಹೋದಾಗ ನಂದಕುಮಾರ ತನ್ನ ಉಪವಾಸವನ್ನು ಮುಂದುವರಿಸುತ್ತಾನಲ್ಲದೆ ಆಡಳಿತ ಮಂಡಳಿಗೆ ಮನವಿ ಸಲ್ಲಿಸುತ್ತಾನೆ. ಅಷ್ಟರಲ್ಲಾಗಲೇ ಸೆರೆಮನೆಯ ಅಧಿಕಾರಿ ಸೆರೆಮನೆಯಿಂದ ದೂರದಲ್ಲಿರುವ ತನ್ನದೇ ನಿವಾಸದ ಎರಡು ಪ್ರತ್ಯೇಕ ಕೋಣೆಗಳನ್ನು ನಂದಕುಮಾರನಿಗೆ ಬಿಟ್ಟುಕೊಟ್ಟಿರುತ್ತಾನೆ. ಅಂದು ನಡೆದ ಆಡಳಿತ ಮಂಡಳಿಯ ಸಭೆಯಲ್ಲಿ ಕ್ಲಾವೆರಿಂಗ್ ನಂದಕುಮಾರನನ್ನು ಸೆರೆಮನೆಯಲ್ಲಿ ಭೇಟಿಯಾದ ಜೋಸೆಫ್ ಫಾಕ್ ತನ್ನ ಬಳಿ ಬಂದಿದ್ದನೆಂದೂ, ನಂದಕುಮಾರ ನೀರನ್ನು ಕುಡಿಯದೇ ಇದ್ದಲ್ಲಿ ಮತ್ತೊಂದು ದಿನವೂ ಜೀವಂತವಾಗಿರಲಾರ ಎಂದೂ ತಿಳಿಸಿದುದಾಗಿ ಹೇಳುತ್ತಾನೆ. ನಾನೊಬ್ಬ ನಿರಪರಾಧಿ. ನನ್ನ ಬಗ್ಗೆ ಚಿಂತಿಸಬೇಡಿ. ಭಗವಂತನ ಇಚ್ಛೆಯಿದ್ದಂತಾಗಲಿ ಎಂದು ನಂದಕುಮಾರ ಮನವಿ ಮಾಡಿಕೊಳ್ಳುತ್ತಾನೆ.
ಸರಕಾರ ಇದನ್ನು ಮುಖ್ಯ ನ್ಯಾಯಾಧೀಶನ ಗಮನಕ್ಕೆ ತರಬೇಕೆಂದು ಶರೀಫ್ಗೆ ಹೇಳಿದಾಗ ಮುಖ್ಯ ನ್ಯಾಯಾಧೀಶ ನಂದಕುಮಾರನನ್ನು ಸೆರೆಮನೆಯಲ್ಲಿ ಭೇಟಿ ಮಾಡಿರುವ ನಾಲ್ವರು ಪಂಡಿತರು ಸೂಚಿಸಿರುವ ಪರಿಹಾರವನ್ನು ಸರಕಾರಕ್ಕೆ ಕಳುಹಿಸುತ್ತಾನೆ. ನಂದಕುಮಾರ ಕ್ರಿಸ್ತರು ಅಥವಾ ಮುಸಲ್ಮಾನರು ಜೀವಿಸಿರುವ ಮನೆಯಲ್ಲುಳಿದು ಜಾತಿಭ್ರಷ್ಟನಾದರೆ ಅದಕ್ಕಾಗಿ ಪ್ರಾಯಶ್ಚಿತ್ತ ರೂಪದಲ್ಲಿ ಒಂದು ತಿಂಗಳ ಕಾಲ ಚಾಂದ್ರಾಯಣ ವ್ರತವನ್ನು ಆಚರಿಸಬೇಕಾಗುತ್ತದೆ. ಆದರೆ ಒಬ್ಬ ವೃದ್ಧನಿಗೆ ಈ ಪ್ರಾಯಶ್ಚಿತ್ತ ಬಹಳ ತ್ರಾಸದಾಯಕವಾಗುವುದರಿಂದ ಬದಲಿಗೆ ಆತ ಕರುಗಳಿಂದ ಕೂಡಿದ ಎಂಟು ಹಾಲು ಕರೆಯುವ ಹಸುಗಳನ್ನು ದಾನ ಮಾಡಬೇಕು. ಒಂದೊಮ್ಮೆ ಆ ಬ್ರಾಹ್ಮಣ ಅಷ್ಟೊಂದು ಶ್ರೀಮಂತನಾಗಿಲ್ಲದಿದ್ದರೆ ಆತ ಶಾಸ್ತ್ರಗಳಲ್ಲಿ ಹೇಳಿದಷ್ಟು ಕವಡೆಗಳನ್ನು ಬ್ರಾಹ್ಮಣರಿಗೆ ದಕ್ಷಿಣೆಯಾಗಿ ಮತ್ತು ಬೆರಣಿಯ ಖರ್ಚಿಗಾಗಿ ನೀಡಿ, ಹಸುವಿಗೆ ಆಹಾರ ಉಣಿಸಿದರೆ ಆತ ಶುದ್ಧನಾಗುತ್ತಾನೆ. ಇದು ಪ್ರತಿನಿತ್ಯದ ಕೈಂಕರ್ಯವಾಗಿದ್ದು ಆತ ಸೆರೆಮನೆಯಲ್ಲಿರುವಷ್ಟು ಕಾಲ ಇದನ್ನು ಪಾಲಿಸಬೇಕಾಗುತ್ತದೆ.
ಆದರೆ ಪಂಡಿತರ ಈ ಪರಿಹಾರ ನಂದಕುಮಾರನಿಗೆ ಸಮ್ಮತವಾಗುವುದಿಲ್ಲ. ಆತನ ಪ್ರಕಾರ ಈ ಪಂಡಿತರಿಗಿಂತಲೂ ನಡಿಯಾದ ಬ್ರಾಹ್ಮಣರು ಉತ್ತಮ ದರ್ಜೆಯವರಾಗಿದ್ದು ಅವರಿಂದ ಸಲಹೆ ಪಡೆಯಬೇಕೆಂದು ಅಪೇಕ್ಷಿಸುತ್ತಾನೆ. ಮುಖ್ಯ ನ್ಯಾಯಾಧೀಶ ಇದಕ್ಕೆ ಸಹಮತಿ ನೀಡಲಿಲ್ಲ. ಇದರಿಂದ ಮನನೊಂದ ನಂದಕುಮಾರ ಜಾತಿಭ್ರಷ್ಟನಾಗುವುದಕ್ಕಿಂತಲೂ ಸಾವೇ ಮೇಲೆಂದು ಭಾವಿಸಿ ಅನ್ನಾಹಾರಗಳನ್ನು ತೊರೆದು ಕೂಡುತ್ತಾನೆ.
ಬುಧವಾರ ಮೇ ೧೦ರಂದು ಮುಖ್ಯ ನ್ಯಾಯಾಧೀಶ ಡಾ. ಮೂರ್ಶಿಸನ್ (Dr. Murchison)ನನ್ನು ಸೆರೆಮನೆಗೆ ಕಳುಹಿಸುತ್ತಾನೆ. ಅಲ್ಲಿ ನಂದಕುಮಾರನನ್ನು ಕಂಡ ಡಾ. ಮೂರ್ಶಿಸನ್ ಆತ ಶನಿವಾರದಿಂದ ಆಹಾರ ಸೇವಿಸದೇ ಇದ್ದಲ್ಲಿ ಮರುದಿನ ಬೆಳಗ್ಗೆ ಆಹಾರ ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ ಎನ್ನುತ್ತಾನೆ. ವೈದ್ಯನ ವರದಿಯನ್ನು ಕಂಡ ಮುಖ್ಯ ನ್ಯಾಯಾಧೀಶ ಅಂದು ರಾತ್ರಿ ನಂದಕುಮಾರನಿಗೆ ಸೆರೆಮನೆಯ ಗೇಟಿನಿಂದ ಹೊರಗೆ ಹೋಗಲು ಅನುಮತಿ ನೀಡುವಂತೆ ಲೆ-ಮೈಸ್ಟ್ರ್ನ ಮನವೊಲಿಸಲು ಪ್ರಯತ್ನಿಸುತ್ತಾನೆ. ಆದರೆ ಲೆ-ಮೈಸ್ಟ್ರ್ ಇದಕ್ಕೊಪ್ಪುವವನಾಗಿರಲಿಲ್ಲ. ಆಗ ಮುಖ್ಯ ನ್ಯಾಯಾಧೀಶ ಇಂಪೆ ಡಾ. ಮೂರ್ಶಿಸನ್ ಸೂಚಿಸಿದಂತೆ ಒಮ್ಮೆ ನಂದಕುಮಾರನಿಗೆ ಆಹಾರ ಸೇವಿಸಲು ಸಾಧ್ಯವಾಗುವಂತೆ ಜೈಲರ್ ಯಿಯಾಂಡಲ್ಗೆ ಸೂಕ್ತನಿರ್ಣಯ ತೆಗೆದುಕೊಳ್ಳುವಂತೆ ಸೂಚಿಸುತ್ತಾನೆ. ಅಷ್ಟು ಹೊತ್ತಿಗಾಗಲೇ ರಾತ್ರಿ ಹತ್ತುಗಂಟೆಯಾಗಿತ್ತು. ಯಿಯಾಂಡಲ್ ತಕ್ಷಣ ಸೆರೆಮನೆಗೆ ದೌಡಾಯಿಸಿದನಾದರೂ ನಂದಕುಮಾರ ಆ ರಾತ್ರಿ ಈ ಸವಲತ್ತನ್ನು ಬಳಸಿಕೊಳ್ಳಲು ಇಚ್ಛಿಸಲಿಲ್ಲ.
ಕೊನೆಗೆ ಇದಕ್ಕೊಂದು ಪರಿಹಾರವಾಗಿ ಮರುದಿನ ಬೆಳಗ್ಗೆ ಸೆರೆಮನೆಯ ಆವರಣದಲ್ಲಿ ಹೊರತಾದ ಬೇರೊಂದು ಕಟ್ಟಡದ ಮಾಡಿನ ಮೇಲೆ ಡೇರೆಯೊಂದನ್ನು ನಿಲ್ಲಿಸಲಾಯಿತು. ಆಗಾಗ್ಗೆ ಆ ಡೇರೆಯಲ್ಲಿ ನಂದಕುಮಾರನನ್ನು ಭೇಟಿಯಾಗುತ್ತಿದ್ದ ವಕೀಲ ಈ ವ್ಯವಸ್ಥೆಯಿಂದ ತನ್ನ ಕಕ್ಷಿದಾರ ಸಾಕಷ್ಟು ಚಿಂತಾಮುಕ್ತನಾಗಿದ್ದಾನೆ ಎಂದು ಭಾವಿಸುತ್ತಾನೆ. ಇಲ್ಲಿ ಜನರಲ್ ಕ್ಲಾವೆರಿಂಗ್ನ ಅಂಗರಕ್ಷಕ ಮತ್ತು ಕಾರ್ಯದರ್ಶಿಯೂ ಸೇರಿದಂತೆ ಅನೇಕ ಭಾರತೀಯ ಹಾಗೂ ಯೂರೋಪಿಯನ್ ಮಹನೀಯರು ನಂದಕುಮಾರನನ್ನು ಭೇಟಿ ಮಾಡುತ್ತಾರೆ. ಅನೇಕರು ತಮ್ಮ ಸಂತಾಪವನ್ನು ಸೂಚಿಸುತ್ತಾರೆ. ಅವರಲ್ಲಿ ಜನರಲ್ ಕ್ಲಾವೆರಿಂಗ್ನ ಕುಟುಂಬದ ಸ್ತ್ರೀಯರು ಮತ್ತು ಲೇಡಿ ಆನ್ ಮಾನ್ಸನ್ ಸೇರಿದ್ದರು. ನಂದಕುಮಾರನೂ ಸೇರಿದಂತೆ ಪ್ರತಿಯೊಬ್ಬ ಭಾರತೀಯನನ್ನು ಬೀದಿಯ ನಾಯಿಯೆಂದು ಪರಿಗಣಿಸಿ ಅವರನ್ನು ಸಾಲುಮರಗಳಿಗೆ ನೇಣುಹಾಕಬೇಕೆಂಬ ಆಸೆಯನ್ನು ಹೊಂದಿದ್ದ ಇಂತಹ ವ್ಯಕ್ತಿಗಳು ಈಗ ಬೇಳೆ ಬೇಯಿಸಿಕೊಳ್ಳಲು ಸೆರೆಮನೆಯ ಮುಂದೆ ಮುಕುರತೊಡಗಿದ್ದರು. ಜೂನ್ ೩ರಂದು ನಂದಕುಮಾರನ ವಿರುದ್ಧ ಅಪರಾಧಿ ವಿಚಾರಣೆ ಪ್ರಾರಂಭಗೊಳ್ಳುತ್ತದೆ.
ಕಿಂಗ್ ವರ್ಸಸ್ ನೂನ್ ಕುಮಾರ್ ಮೊಕದ್ದಮೆ
ಜೂನ್ ೮ರಂದು ಕಿಂಗ್ ವರ್ಸಸ್ ನೂನ್ ಕುಮಾರ್ (King Vs Nuncomar) ಮೊಕದ್ದಮೆಗೆ ಮುಖ್ಯ ನ್ಯಾಯಾಧೀಶ ಸರ್ ಎಲಿಜಾ ಇಂಪೆ, ಕಿರಿಯ ನ್ಯಾಯಾಧೀಶರಾದ ರಾಬರ್ಟ್ ಚೇಂಬರ್ಸ್, ಜಾನ್ ಹೈಡ್, ಮತ್ತು ಲೆ-ಮೈಸ್ಟ್ರ- ಇವರ ಸಮ್ಮುಖದಲ್ಲಿ ವಿಚಾರಣೆಗೆ ಚಾಲನೆ ನೀಡಲಾಯಿತು. ನೇಮಕಗೊಂಡಿದ್ದ ಹನ್ನೆರಡು ಮಂದಿ ಜ್ಯೂರಿಗಳಲ್ಲಿ ಇಬ್ಬರು ಯೂರೇಷಿಯನ್ನರಿದ್ದರೆ ಮಿಕ್ಕವರೆಲ್ಲ ಯೂರೋಪಿಯನ್ನರಾಗಿದ್ದರು. ಮೋಹನ್ಪ್ರಸಾದನ ಪರವಾಗಿ ಡರ್ಹ್ಯಾಮ್ ವಕೀಲನಾದರೆ ಅಲೆಕ್ಸಾಂಡರ್ ಎಲಿಯಟ್ ದುಭಾಷಿಯಾಗಿ ಕೆಲಸ ಮಾಡುತ್ತಾನೆ. ನಂದಕುಮಾರನ ಪರವಾಗಿ ಥಾಮಸ್ ಫರೇರ್ ವಕೀಲನಾಗುತ್ತಾನೆ. ೧೭೭೪ರ ಅಕ್ಟೋಬರ್ನಲ್ಲಿ ಭಾರತಕ್ಕೆ ಬಂದಿಳಿದಿದ್ದ ಫರೇರ್ ಉಚ್ಚ ನ್ಯಾಯಾಲಯದಲ್ಲಿ ಪ್ರವೇಶ ಪಡೆದ ಮೊಟ್ಟಮೊದಲ ವಕೀಲನಾಗಿದ್ದಾನೆ. ಜನರಲ್ ಕ್ಲಾವೆರಿಂಗ್ ಹಾಗೂ ಕರ್ನಲ್ ಮಾನ್ಸನ್ರವರಿಗೆ ಆಪ್ತನಾಗಿದ್ದ ಈತ ಕೇವಲ ನಾಲ್ಕು ವರ್ಷಗಳ ಅವಧಿಯಲ್ಲಿ ೬೦,೦೦೦ ಪೌಂಡ್ಗಳನ್ನು ಸಂಪಾದಿಸಿ ಇಂಗ್ಲೆಂಡಿಗೆ ಹಿಂತಿರುಗುತ್ತಾನೆ. ಆದರೆ ತಾನು ಗಳಿಸಿದ್ದನ್ನೆಲ್ಲ ಜೂಜಿನಲ್ಲಿ ಕಳೆಯದೆ ಉಳಿಸಿಕೊಂಡಿದ್ದರೆ ಮತ್ತೂ ಶ್ರೀಮಂತನಾಗಿ ಹಿಂತಿರುಗುತ್ತಿದ್ದುದರಲ್ಲಿ ಸಂದೇಹವಿಲ್ಲ. ವಿಪರ್ಯಾಸವೆಂದರೆ ನಂದಕುಮಾರ್ ಮೊಕದ್ದಮೆಯ ಆತಂಕ ಮತ್ತು ದಣಿವನ್ನು ಆತ ಜೀವಮಾನವಿಡೀ ಜೀರ್ಣಿಸಿಕೊಳ್ಳಲಾರದೆ ಹೋದ.
ಜ್ಯೂರಿಗಳಿಗೆ ಪ್ರಮಾಣವಚನ ಬೋಧಿಸಿದ ಬಳಿಕ ನಂದಕುಮಾರನ ವಕೀಲ ಫರೇರ್ ನ್ಯಾಯಾಲಯದ ದುಭಾಷಿ ಅಲೆಕ್ಸಾಂಡರ್ ಎಲಿಯಟ್ ವಿರುದ್ಧ ಆಪಾದಿತನ ವಿರೋಧಿಗಳೊಂದಿಗೆ ಸ್ನೇಹಸಂಬಂಧ ಹೊಂದಿದ್ದಾನೆಂದು ಆಕ್ಷೇಪಣೆ ಸಲ್ಲಿಸುತ್ತಾನೆ. ಎಲಿಯಟ್ ಪರ್ಶಿಯನ್ ಮತ್ತು ಹಿಂದುಸ್ತಾನಿ ಭಾಷೆಗಳಲ್ಲಿ ಒಳ್ಳೆಯ ಪಾಂಡಿತ್ಯ ಹೊಂದಿದ್ದ ಮತ್ತು ಗವರ್ನರ್-ಜನರಲ್ ಹಾಗೂ ಮುಖ್ಯ ನ್ಯಾಯಾಧೀಶನೊಂದಿಗೆ ಬಹಳ ಆತ್ಮೀಯವಾದ ಸ್ನೇಹ ಇಟ್ಟುಕೊಂಡಿದ್ದ. ಆದರೆ ಈತನ ಸಹೋದರ ಗಿಲ್ಬರ್ಟ್ ಎಲಿಯಟ್ ೧೩ ವರ್ಷಗಳ ಬಳಿಕ ಪಾರ್ಲಿಮೆಂಟಿನ ಕೆಳಮನೆಯಲ್ಲಿ ಇವರಿಬ್ಬರ ಮೇಲೂ ಮಹಾಭಿಯೋಗಕ್ಕೆ ಮುಂದಾಗುವ ಮೂಲಕ ಕತ್ತಿ ಮಸೆಯತೊಡಗುತ್ತಾನೆ. ಅಲೆಕ್ಸಾಂಡರ್ ಎಲಿಯಟ್ಗೆ ಸೂಕ್ತ ಪರ್ಯಾಯವಿಲ್ಲದ್ದರಿಂದ ಆತನೇ ದುಭಾಷಿಯಾಗಿ ಮುಂದುವರಿಯುತ್ತಾನೆ. ಆಪಾದಿತನ ವಕೀಲನ ವಿರೋಧದ ಹೊರತಾಗಿಯೂ ನಂದಕುಮಾರನನ್ನು ಕಟಕಟೆಯಲ್ಲಿ ನಿಲ್ಲಿಸಲಾಗುತ್ತದೆ.
ನ್ಯಾಯಾಲಯದ ವ್ಯಾಪ್ತಿ
ಆ ಬಳಿಕ ಪ್ರಸ್ತುತ ನ್ಯಾಯಾಲಯಕ್ಕೆ ಈ ಮೊಕದ್ದಮೆಯನ್ನು ವಿಚಾರಣೆಗೆ ಒಳಪಡಿಸುವ ವ್ಯಾಪ್ತಿ ಇಲ್ಲ ಎಂಬ ಆಕ್ಷೇಪಣೆಯನ್ನು ಎತ್ತಲಾಯಿತು. ಮುಖ್ಯ ನ್ಯಾಯಾಧೀಶ ಎಲಿಜಾ ಇಂಪೆ ಈ ಆಕ್ಷೇಪಣೆಯನ್ನು ತಳ್ಳಿಹಾಕಿದ ಬಳಿಕ ನ್ಯಾಯಾಧೀಶ ಚೇಂಬರ್ಸ್ ಆರೋಪ ಪಟ್ಟಿಯನ್ನು ಓದುವಂತೆ ಆದೇಶಿಸುತ್ತಾನೆ. ಅದನ್ನು ಓದಿಯಾದ ಬಳಿಕ ಫೋರ್ಜರಿಗೆ ಮರಣದಂಡನೆಯನ್ನು ವಿಧಿಸುವ ನಿಬಂಧನೆ ಇರದ ಮಹಾರಾಣಿ ಎಲಿಜಬೆತ್ಳ ಕಾಲದ ಶಾಸನದಡಿ ನಂದಕುಮಾರದ ವಿಚಾರಣೆ ನಡೆಯಬೇಕೆಂದು ಚೇಂಬರ್ಸ್ ಅಭಿಪ್ರಾಯ ವ್ಯಕ್ತಪಡಿಸುತ್ತಾನೆ. ಅವನ ಪ್ರಕಾರ ಫೋರ್ಜರಿಯ ಅಪರಾಧಕ್ಕೆ ಮರಣದಂಡನೆ ವಿಧಿಸುವ ಕಾನೂನನ್ನು ಇಂಗ್ಲೆಂಡಿನ ವಿಶೇಷ ವಾಣಿಜ್ಯ ಹಾಗೂ ಮತ್ತಿತರ ಕಾರಣಗಳನ್ನು ಮುಂದಿಟ್ಟುಕೊಂಡು ಜಾರಿಗೊಳಿಸಲಾಗಿರುವುದರಿಂದ ಅಂತಹ ಪರಿಸ್ಥಿತಿ ಬಂಗಾಳದಲ್ಲಿದೆ ಎಂದು ನಾನು ಭಾವಿಸುವುದಿಲ್ಲ ಎಂದು ತಿಳಿಸುತ್ತಾನೆ. ಇದಕ್ಕೆ ವಿರೋಧವಾಗಿ ಮುಖ್ಯ ನ್ಯಾಯಾಧೀಶ ಹಾಗೂ ಮಿಕ್ಕಿಬ್ಬರು ನ್ಯಾಯಾಧೀಶರು ವಿಚಾರಣೆ ಇದೇ ಕಾನೂನಿನಡಿಯಲ್ಲಿ ನಡೆಯಬೇಕೆಂದು ತೀರ್ಮಾನಿಸುತ್ತಾರೆ. ನ್ಯಾಯಾಲಯದ ಮುಂದಿರುವ ಪ್ರಶ್ನೆ ಬುಲಾಕಿದಾಸ ಆಭರಣಕ್ಕಾಗಿ ಬರೆದುಕೊಟ್ಟಿರುವ ಸಾಲ ಮರುಪಾವತಿಯ ವಚನಪತ್ರ ಅಪ್ಪಟ ಪತ್ರವೇ ಅಥವಾ ಖೊಟ್ಟಿ ಪತ್ರವೇ ಎಂಬುದನ್ನು ನಿರ್ಧರಿಸಬೇಕಾಗಿದೆ.
ವಚನಪತ್ರ: ಬುಲಾಕಿದಾಸನೆಂಬ ಹೆಸರಿನ ನಾನು ಒಂದು ಮುತ್ತಿನ ಸರ, ಒಂದು ವಂಕಿಯ ಕಡಗ (Kulgah), ಒಂದು ವಂಕಿಯ ಶಿರಾಭರಣ (Serpache), ಎರಡು ಕೆಂಪಿನ ಹಾಗೂ ಎರಡು ವಜ್ರದ ಉಂಗುರಗಳನ್ನು ಮಹಾರಾಜ ನಂದಕುಮಾರ ಬಹಾದುರ್ರವರ ವತಿಯಿಂದ ನನ್ನ ಬಳಿ ರಘುನಾಥ್ ರಾಯ್ಜೀಯೂ ೧೭೫೮ರಲ್ಲಿ ಮುರ್ಶಿದಾಬಾದಿನ ನನ್ನ ಸ್ವಗೃಹದಲ್ಲಿ ವಿಕ್ರಯಕ್ಕಾಗಿ ಕೊಟ್ಟಿರುತ್ತಾನೆ. ನವಾಬ್ ಮೀರ್ ಮೊಹಮ್ಮದ್ ಕಾಸಿಂ ಖಾನ್ನ ಸೇನೆ ಸೋಲನ್ನಪ್ಪಿದ ಸಮಯದಲ್ಲಿ ನಡೆದ ಲೂಟಿಯಲ್ಲಿ ನನ್ನ ಮನೆಯಲ್ಲಿದ್ದ ಸಮಸ್ತ ಹಣ, ಆಭರಣಗಳನ್ನು ಕೊಳ್ಳೆಹೊಡೆಯಲಾಯಿತು. ಆ ಲೂಟಿಯಲ್ಲಿ ಮೇಲ್ಕಂಡ ಆಭರಣಗಳು ಸೇರಿದ್ದವು. ೧೭೬೫ರಲ್ಲಿ ನಾನು ಕೋಲ್ಕತಾಗೆ ಬಂದ ಸಮಯದಲ್ಲಿ ಮಹಾರಾಜ ಈ ಆಭರಣಗಳನ್ನು ಹಿಂತಿರುಗಿಸುವಂತೆ ಆದೇಶಿಸುತ್ತಾನೆ. ಆದರೆ ನಾನು ಆರ್ಥಿಕವಾಗಿ ಬಹಳ ದುಃಸ್ಥಿತಿಯಲ್ಲಿದ್ದ ಕಾರಣ ಅವುಗಳನ್ನು ಹಿಂತಿರುಗಿಸುವ ಸ್ಥಿತಿಯಲ್ಲಿರಲಿಲ್ಲ. ಹಾಗಾಗಿ ಢಾಕಾದ ಕಂಪೆನಿಯಿಂದ ನನಗೆ ಬರಬೇಕಾಗಿರುವ ಎರಡು ಲಕ್ಷಕ್ಕಿಂತಲೂ ಕೊಂಚ ಹೆಚ್ಚಿನ ಹಣದಿಂದ ಮೇಲ್ಕಾಣಿಸಿರುವ ಆಭರಣಗಳ ಬೆಲೆ ನಲ್ವತ್ತೆಂಟು ಸಾವಿರದ ಇಪ್ಪತ್ತೊಂದು ರೂಪಾಯಿಗಳನ್ನು ಕೊಡುವುದಾಗಿಯೂ ಅದಲ್ಲದೆ ಪ್ರತಿ ರೂಪಾಯಿಗೆ ನಾಲ್ಕಾಣೆಯಷ್ಟು ಹೆಚ್ಚುವರಿ ಸಂಭಾವನೆಯನ್ನು ನೀಡುವುದಾಗಿಯೂ ನಾನು ಒಪ್ಪಿಕೊಂಡಿರುತ್ತೇನೆ. ಕಂಪೆನಿಯ ಹಣ ಕೈ ಸೇರುತ್ತಿದ್ದಂತೆ ಮಹಾರಾಜ ನಂದಕುಮಾರ್ ಇವರಿಗೆ ಸಂದಾಯವಾಗಬೇಕಿರುವ ಹಣವನ್ನು ನಾನು ಯಾವುದೇ ತಕರಾರು ಅಥವಾ ನೆಪ ಹೇಳದೆ ಹಿಂತಿರುಗಿಸುವುದಾಗಿ ನನ್ನ ಸ್ವಹಸ್ತಾಕ್ಷರದಲ್ಲಿ ಬರೆದುಕೊಟ್ಟ ವಚನಪತ್ರ ಇದಾಗಿದೆ. ಅಗತ್ಯ ಬಿದ್ದಾಗ ಈ ವಚನಪತ್ರವನ್ನು ಜಾರಿಗೊಳಿಸಬಹುದಾಗಿದೆ.
ಪರೀಕ್ಷಣ ಪ್ರಕ್ರಿಯೆ
ಸರಕಾರದ ಪರವಾಗಿ ಬುಲಾಕಿದಾಸ ನಂದಕುಮಾರನಿಗೆ ಯಾವುದೇ ಹಣವನ್ನು ನೀಡಬೇಕಾಗಿರಲಿಲ್ಲವಾದುದರಿಂದ ಈ ವಚನಪತ್ರವನ್ನು ಬರೆದುಕೊಡಬೇಕಾದ ಪ್ರಮೇಯವೇ ಇರಲಿಲ್ಲ, ಮೇಲಿನ ಹೇಳಿಕೆಗಳೆಲ್ಲವೂ ಹುಸಿಯಾಗಿದ್ದು ವಚನಪತ್ರದ ಮೇಲಿನ ಹಸ್ತಾಕ್ಷರ ಫೋರ್ಜರಿಯಾಗಿದೆ ಎಂಬ ಸಾಕ್ಷ್ಯಾಧಾರಗಳ ಮಂಡನೆ ನಡೆಯುತ್ತದೆ. ಆಪಾದಿತನ ಪರವಾಗಿ ಮೇಲ್ಕಾಣಿಸಿರುವ ಎಲ್ಲ ವ್ಯವಹಾರಗಳೂ ನೈಜವಾಗಿದ್ದು ಬುಲಾಕಿದಾಸ ವಚನಪತ್ರವನ್ನು ಬರೆದು ಹಸ್ತಾಕ್ಷರ ಮಾಡಿದುದನ್ನು ಕಣ್ಣಾರೆ ಕಂಡ ಸಾಕ್ಷಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುತ್ತದೆ. ಸಾಕ್ಷಿಗಳು ಈ ವ್ಯವಹಾರದ ಬಗ್ಗೆ ತಮಗೆ ತಿಳಿದಿದ್ದನ್ನು ವಿವರವಾಗಿ ವರ್ಣಿಸುತ್ತಾರೆ. ಆರೋಪ ಪ್ರತ್ಯಾರೋಪಗಳ ನಡುವೆ ಎದ್ದುಕಾಣುವ ದ್ವಂದ್ವ ಪಾಶ್ಚಿಮಾತ್ಯ ಕಾನೂನು ಮತ್ತು ನ್ಯಾಯಪ್ರಕ್ರಿಯೆಯ ಅರಿವಿಲ್ಲದ ದೇಶೀಯ ಸಾಕ್ಷಿಗಳನ್ನು ಕಂಗೆಟ್ಟುಹೋಗುವಂತೆ ಮಾಡಿದುದರಲ್ಲಿ ಸಂದೇಹವಿಲ್ಲ. ಸರ್ವೋಚ್ಚ ನ್ಯಾಯಾಲಯದ ಎಲ್ಲ ನ್ಯಾಯಾಧೀಶರೂ ಭಾರತಕ್ಕೆ ಹೊಸತಾಗಿ ಬಂದಿದ್ದವರಾಗಿದ್ದುದರಿಂದ ಅವರಿಗೆ ಇಲ್ಲಿಯ ವಾಣಿಜ್ಯ ವ್ಯವಹಾರ ವ್ಯವಸ್ಥೆ, ದೇಶೀಯ ಭಾಷೆಯಲ್ಲಿ ಲೆಕ್ಕದ ಪುಸ್ತಕಗಳನ್ನು ಬರೆಯುವ ಪದ್ಧತಿಗಳ ಬಗ್ಗೆ ಯಾವುದೇ ಪೂರ್ವ ಜ್ಞಾನ, ಅನುಭವವಿರಲಿಲ್ಲ. ಇಡೀ ನ್ಯಾಯಪೀಠಕ್ಕೆ ನಂದಕುಮಾರನ ಮೊಕದ್ದಮೆಯೇ ಪ್ರಪ್ರಥಮ ಅಪರಾಧಿ ಮೊಕದ್ದಮೆಯಾಗಿತ್ತು. ಸಾಲದೆಂಬಂತೆ ಸರಕಾರಿ ವಕೀಲ ಡರ್ಹ್ಯಾಮ್ ಮತ್ತೊಬ್ಬ ಅನನುಭವಿಯಾಗಿದ್ದ. ವಿಚಾರಣೆಯ ಸಂದರ್ಭದಲ್ಲಿ ಈ ಕೊರತೆಯನ್ನು ನಿವಾರಿಸಲು ರಾಬರ್ಟ್ ಚೇಂಬರ್ಸ್ನನ್ನು ಹೊರತುಪಡಿಸಿ ಮಿಕ್ಕ ನ್ಯಾಯಾಧೀಶರೇ ಸ್ವತಃ ಸಾಕ್ಷಿಗಳ ಪಾಟೀಸವಾಲಿಗೆ ಮುಂದಾಗುತ್ತಾರೆ. ಪ್ರತಿಯೊಬ್ಬ ನ್ಯಾಯಾಧೀಶನೂ ನಂದಕುಮಾರನ ಸಾಕ್ಷಿಗಳನ್ನು ಮತ್ತೆ ಮತ್ತೆ ಕಟಕಟೆಗೆ ಕರೆದು ಪ್ರಶ್ನಿಸುವುದರಿಂದ ಸಾಕ್ಷಿಗಳು ಭಯದಿಂದ ಕಂಗೆಟ್ಟುಹೋಗುತ್ತಾರೆ. ಇಂಗ್ಲಿಷ್ ನ್ಯಾಯಾಲಯಗಳ ಕಾರ್ಯವೈಖರಿಯನ್ನು ಅರಿತುಕೊಳ್ಳಲಾಗದ ಹೆಚ್ಚಿನ ಸಾಕ್ಷಿಗಳು ಬೆವತು ಕುಸಿದುಬೀಳುವಂತಾಗುತ್ತದೆ.
ನ್ಯಾಯಾಧೀಶರು ತನ್ನ ಕಡೆಯ ಸಾಕ್ಷಿಗಳನ್ನು ಪಾಟೀಸವಾಲು ಮಾಡುವ ವೈಖರಿಯನ್ನು ಕಂಡ ನಂದಕುಮಾರ ತನ್ನ ವಕೀಲನೊಂದಿಗೆ ಪ್ರತ್ಯೇಕವಾಗಿ ಮಾತನಾಡಲು ಬಯಸಿ ನ್ಯಾಯಾಲಯದ ಅನುಮತಿ ಕೋರುತ್ತಾನೆ. ನ್ಯಾಯಾಲಯದ ಒಪ್ಪಿಗೆ ಪಡೆದು ಹೊರನಡೆಯುವ ವಕೀಲ ಮತ್ತು ಕಕ್ಷಿದಾರರಿಗೆ ಪರಸ್ಪರರ ಭಾಷೆ ಅರ್ಥವಾಗದಿರುವುದರಿಂದ ಒಬ್ಬ ದುಭಾಷಿಯನ್ನು ಕಳುಹಿಸಲಾಯಿತು. ಆ ಸಂದರ್ಭದಲ್ಲಿ ವೃದ್ಧ ನಂದಕುಮಾರ ತನ್ನ ಪರವಾಗಿ ಹೋರಾಡುತ್ತಿರುವ ವಕೀಲನ ಶ್ರಮವನ್ನು ಶ್ಲಾಘಿಸಿದನಾದರೂ ತನ್ನ ಶತ್ರುಗಳಂತೆ ವರ್ತಿಸುತ್ತಿರುವ ನ್ಯಾಯಾಧೀಶರ ನಿಲವಿನಿಂದ ಅದೊಂದು ವ್ಯರ್ಥ ಪ್ರಯತ್ನ ಎಂದು ಕರೆಯುತ್ತಾನೆ. ತನ್ನ ಸಾಕ್ಷಿಗಳಿಗೂ ಸರಕಾರಿ ಸಾಕ್ಷಿಗಳಿಗೂ ಅವರು ತೋರುತ್ತಿದ್ದ ತರತಮ ನೀತಿ ಎದ್ದುಕಾಣುವಂತಿದೆ. ಹೀಗಾಗಿ ತನ್ನ ವಕೀಲನಿಗೆ ಹೆಚ್ಚಿನ ತೊಂದರೆ ಕೊಡದೆ ವಿಧಿಗೆ ಶರಣಾಗುವುದಾಗಿ ಆತ ತಿಳಿಸುತ್ತಾನೆ. ಈಗ ತನ್ನ ಕಕ್ಷಿದಾರನಿಗೆ ಧೈರ್ಯ ತುಂಬುವ ಹೊಣೆ ಫರೇರನದ್ದಾಗಿದೆ. ಆತ ನ್ಯಾಯಾಲಯದಿಂದ ನಂದಕುಮಾರನಿಗೆ ನ್ಯಾಯ ಒದಗಿಸುವುದಾಗಿ ಭರವಸೆ ನೀಡುತ್ತಾನೆ. ನಂದಕುಮಾರ ಬೆರಳುಮಾಡಿ ತೋರಿದ ನ್ಯಾಯಾಲಯದ ತರತಮ ನೀತಿಯ ಬಗ್ಗೆ ತೋರಿರುವ ಆತಂಕವನ್ನು ಹೇಗಾದರೂ ಮಾಡಿ ನ್ಯಾಯಾಲಯದ ಗಮನಕ್ಕೆ ತರುವುದಾಗಿ ಭರವಸೆ ನೀಡುತ್ತಾನೆ.
ಪಾಟೀಸವಾಲುಗಳು
ಅಂದು ತನ್ನ ಊಟ ಮುಗಿಸಿದ ಫರೇರ್ ಬಹಳ ಹಿಂಜರಿಕೆಯಿಂದ ತಮ್ಮ ಕೋಣೆಯಲ್ಲಿ ಊಟ ಮಾಡುತ್ತಿದ್ದ ನ್ಯಾಯಾಧೀಶರನ್ನು ಭೇಟಿ ಮಾಡಲು ಅನುಮತಿ ಕೋರುತ್ತಾನೆ. ಈ ಭೇಟಿಯ ಸಮಯದಲ್ಲಿ ಆತ ನ್ಯಾಯಾಧೀಶರು ತೋರುತ್ತಿರುವ ನೀತಿಯಿಂದ ತನ್ನ ಕಕ್ಷಿದಾರನ ಮನದಲ್ಲಿರುವ ಆಶಂಕೆ ಮತ್ತು ಆತಂಕವನ್ನು ಅವರ ಗಮನಕ್ಕೆ ತರುತ್ತಾನೆ. ಅದಕ್ಕುತ್ತರವಾಗಿ ಅವರು ತನ್ನ ಕಕ್ಷಿದಾರನಿಗಾಗಿ ಸರಕಾರಿ ಸಾಕ್ಷಿಗಳನ್ನು ಪ್ರಶ್ನಿಸುವಾಗ ಫರೇರ್ ತೋರುತ್ತಿರುವ ದಕ್ಷತೆಯನ್ನು ಮೆಚ್ಚಿ ಸರಕಾರಿ ವಕೀಲನ ಅಸಾಮರ್ಥ್ಯದಿಂದ ತಾವು ಸ್ವತಃ ಸಾಕ್ಷಿಗಳ ಪಾಟೀಸವಾಲಿಗೆ ಮುಂದಾಗಬೇಕಾಗಿದೆ ಎಂದು ತಿಳಿಸುತ್ತಾರೆ. ಮಿಕ್ಕ ನ್ಯಾಯಾಧೀಶರ ಮುಂದೆ ಚೇಂಬರ್ಸ್ ಮೌನವಾಗಿದ್ದನಾದರೂ ಆನಂತರದಲ್ಲಿ ಈ ವಿಚಾರದಿಂದ ತನಗೆ ಹೆಚ್ಚಿನ ಇರುಸುಮುರುಸು ಉಂಟಾಯಿತೆಂದು ಆತ ಫರೇರನಿಗೆ ಪ್ರತ್ಯೇಕವಾಗಿ ತಿಳಿಸುತ್ತಾನೆ. ಆತ ಸಾಕ್ಷಿಗಳಿಗೆ ಆದಷ್ಟೂ ಕಡಮೆ ಪ್ರಶ್ನೆಗಳನ್ನು ಕೇಳುವುದಾಗಿಯೂ, ಕೇಳುವ ಪ್ರಶ್ನೆಗಳು ಫರೇರನ ಕಕ್ಷಿದಾರನಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸಹಾಯಕವಾಗುವುದಾಗಿಯೂ ತಿಳಿಸುವಂತೆ ಭರವಸೆ ನೀಡುತ್ತಾನೆ.
ಮುಂದಿನ ಎರಡು ದಿನಗಳಲ್ಲಿ ವಿಚಾರಣೆ ಬಹಳ ದೀರ್ಘವಾಗಿತ್ತಲ್ಲದೆ ನ್ಯಾಯಾಧೀಶರಾದ ಲೆ-ಮೈಸ್ಟ್ರ್ ಮತ್ತು ಹೈಡ್ ಮುಖ್ಯ ನ್ಯಾಯಾಧೀಶ ಇಂಪೆಯನ್ನು ಮೀರಿ ನಂದಕುಮಾರನ ಸಾಕ್ಷಿಗಳನ್ನು ಪ್ರಶ್ನಿಸುವಲ್ಲಿ ಯಾವ ಕೊಸರನ್ನೂ ಬಿಡಲಿಲ್ಲ.
ಜೂನ್ ೧೫ರಂದು ಆಪಾದಿತನ ಪರ ವಕೀಲ ತನ್ನ ವಾದ ಮಂಡನೆಯನ್ನು ಮುಗಿಸುವ ವೇಳೆಗೆ ಮಧ್ಯರಾತ್ರಿ ಕಳೆದಿತ್ತು. ಅತೀವವಾಗಿ ಬಳಲಿದ್ದ ಫರೇರ್ ತನ್ನ ವಾದವನ್ನು ಮುಗಿಸಿ ಮನೆಗೆ ಹೋಗಿ ಮಲಗುತ್ತಾನೆ. ಇತ್ತ ನ್ಯಾಯಾಲಯದ ಕ್ರಮ ಮುಂದುವರಿಯುತ್ತದೆ.
ಅಡೆತಡೆಯಿಲ್ಲದೆ ಭಾನುವಾರವೂ ಸೇರಿದಂತೆ ಎಂಟು ದಿನಗಳ ಕಾಲ ನಡೆದ ವಿಚಾರಣೆಯಲ್ಲಿ ಬಿಡುವು ಎನ್ನುವ ಪದವೇ ಇರಲಿಲ್ಲ. ನ್ಯಾಯಾಧೀಶರು ಊಟ ಉಪಾಹಾರ, ವಿಶ್ರಾಂತಿಗೆಂದು ತೆರಳಿದಾಗ ಕನಿಷ್ಠ ಒಬ್ಬ ನ್ಯಾಯಾಧೀಶನಾದರೂ ಉಪಸ್ಥಿತನಿದ್ದು ಕೆಲಸ ಮುಂದುವರಿಯುವಂತೆ ನೋಡಿಕೊಳ್ಳುತ್ತಿದ್ದ. ಜ್ಯೂರಿಗಳು ಶರೀಫನ ಮೇಲ್ವಿಚಾರಣೆಯಲ್ಲಿ ಪಕ್ಕದ ಕೋಣೆಯಲ್ಲಿ ಉಪಹಾರ ವಿಶ್ರಾಂತಿ ಪಡೆಯುತ್ತಿದ್ದರು. ಬೆಳಗ್ಗೆ ಎಂಟು ಗಂಟೆಗೆ ಪ್ರಾರಂಭಗೊಳ್ಳುತ್ತಿದ್ದ ನ್ಯಾಯಾಲಯದ ಕಾರ್ಯಕ್ರಮ ತಡರಾತ್ರಿಯವರೆಗೆ ಮುಂದುವರಿಯುತ್ತದೆ. ಕೊನೆಯ ದಿನ ಎಂದರೆ ಜೂನ್ ೧೬ರಂದು ನ್ಯಾಯಾಲಯ ತನ್ನ ತೀರ್ಪನ್ನು ನೀಡುವ ವೇಳೆಗೆ ಮುಂಜಾನೆ ನಾಲ್ಕು ಗಂಟೆಯಾಗಿತ್ತು.
ತೀರ್ಪು
ಹನ್ನೆರಡು ಮಂದಿ ಇಂಗ್ಲಿಷ್ ಜ್ಯೂರಿಗಳು ಆಪಾದಿತ ನಂದಕುಮಾರನನ್ನು ತಪ್ಪಿತಸ್ಥ ಎಂದು ತೀರ್ಮಾನಿಸುತ್ತಾರೆ. ಅದರ ಆಧಾರದ ಮೇಲೆ ಚೇಂಬರ್ಸ್ ಸೇರಿದಂತೆ ಎಲ್ಲಾ ನ್ಯಾಯಾಧೀಶರು ಒಮ್ಮತದಿಂದ ಆತನಿಗೆ ಮರಣದಂಡನೆ ವಿಧಿಸುತ್ತಾರೆ. ತೀರ್ಪನ್ನು ಕೇಳಿದಾಗ ತನ್ನ ಬೆನ್ನ ಹಿಂದೆ ನಿಂತಿದ್ದ ಮಂಡಳಿಯ ಬಹುಮತದ ಸದಸ್ಯರ ಶಕ್ತಿಯ ಮೇಲಿರುವ ನಂಬಿಕೆ ಹಾಗೂ ಅವರು ನೀಡಿದ ವಾಗ್ದಾನದ ಮೇಲೆ ಕೊಂಚವೂ ಅಪನಂಬಿಕೆ ಇರದ ನಂದಕುಮಾರನ ಮುಖದಲ್ಲಿ ಯಾವ ಕ್ಲೇಶವೂ ಕಾಣಲಿಲ್ಲ. ಹೀಗೆ ಅಪರಾಧಿ ಎಂದು ಘೋಷಿಸಲ್ಪಟ್ಟು ಮರಣದಂಡನೆಯ ಶಿಕ್ಷೆಗೆ ಗುರಿಯಾದ ಆತನಿಗೆ ಕಾನೂನಿನ ಕೈಗಳು ಎಷ್ಟು ಬಲಶಾಲಿಯಾಗಿರುತ್ತವೆ ಎಂಬುದಿನ್ನೂ ತೋಚಿರಲಿಲ್ಲ. ವಿಚಾರಣೆಯ ಅಂತ್ಯದಲ್ಲಿ ಎಂದರೆ ಜೂನ್ ೧೬ರಂದು ನ್ಯಾಯಾಲಯ ೧೭೨೮ರಲ್ಲಿ ಬ್ರಿಟಿಷ್ ಪಾರ್ಲಿಮೆಂಟ್ ಜಾರಿಗೆ ತಂದ ಫೋರ್ಜರಿ ಕಾನೂನಿನನ್ವಯ ರಾಜ ನಂದಕುಮಾರನನ್ನು ತಪ್ಪಿತಸ್ಥ ಎಂದು ತೀರ್ಮಾನಿಸಿ ಮರಣ ದಂಡನೆಯನ್ನು ವಿಧಿಸುತ್ತದೆ. ಮುಂಜಾನೆ ನಾಲ್ಕು ಗಂಟೆಗೆ ಜಾರೆಟ್ ಫರೇರ್ ಮನೆಗೆ ಧಾವಿಸಿ ನ್ಯಾಯಾಲಯದ ತೀರ್ಪನ್ನು ತಿಳಿಸಿದಾಗ ಮಲಗಿದ್ದ ಫರೇರ್ ದಡಬಡಾಯಿಸಿ ಏಳುತ್ತಾನೆ.
ತೀರ್ಪು ಪ್ರಕಟಗೊಂಡ ಒಂದು ವಾರದ ಬಳಿಕ ಅನಾರೋಗ್ಯದಿಂದ ಬಳಲುತ್ತಿದ್ದ ಫರೇರ್ ತನ್ನ ಕಕ್ಷಿದಾರನ ಜೀವ ಉಳಿಸಲು ನ್ಯಾಯಪೀಠದ ಮುಂದೆ ಹಾಜರಾಗುತ್ತಾನೆ. ಆದರೆ ಆತನ ಎಲ್ಲ ವಾದಗಳನ್ನು ನ್ಯಾಯಾಧೀಶರು ತಳ್ಳಿಹಾಕುತ್ತಾರೆ. ದಯೆಗೆ ಅವಕಾಶವಿಲ್ಲ. ಮರಣದಂಡನೆಯ ಶಿಕ್ಷೆ ಖಚಿತಗೊಳಿಸಿದೆ ಎಂದು ಮುಖ್ಯ ನ್ಯಾಯಾಧೀಶ ಬರೆಯುತ್ತಾನೆ.
ಇದಾಗುತ್ತಿದ್ದಂತೆ ರಾಜಕೀಯ ವಲಯದಲ್ಲಿ ತೀವ್ರ ಚಟುವಟಿಕೆಗಳು ತೋರಿಬರಲಾರಂಭಿಸಿತು. ಅಪರಾಧಿಗೆ ಕ್ಷಮಾದಾನ ನೀಡುವಂತೆ ಅನೇಕ ಮನವಿಪತ್ರಗಳು ಓಡಾಡತೊಡಗಿದವು. ಅನೇಕ ಮೂಲಗಳಿಂದ ಇಂಗ್ಲೆಂಡಿನ ದೊರೆಯ ಮುಂದೆಯೂ ಮನವಿ ಸಲ್ಲಿಸುವ ಪ್ರಯತ್ನ ರೂಪಗೊಳ್ಳತೊಡಗಿತು. ಆದರೆ ಕೆಲವು ತಲೆ ಎತ್ತುತ್ತಿದ್ದಂತೆ ನೆಲ ಕಚ್ಚಿದವು. ಅವುಗಳಲ್ಲಿ ಒಂದಂತೂ ಆಡಳಿತ ಮಂಡಳಿಯ ಮೂಲಕ ನ್ಯಾಯಾಧೀಶರಿಗೆ ಸಲ್ಲಿಸಬೇಕಾದ ಮನವಿ ಕ್ಲಾವೆರಿಂಗ್ ಮತ್ತು ಮಾನ್ಸನ್ರವರ ವಿರೋಧದಿಂದ ಹುಟ್ಟುವ ಮೊದಲೇ ಕೊನೆಯುಸಿರೆಳೆಯಿತು. ಫ್ರಾನ್ಸಿಸ್ ಒಬ್ಬನೇ ಸಹಿ ಹಾಕಲು ಮುಂದಾಗಿದ್ದ. ಶಿಕ್ಷೆಗೊಳಗಾಗಿದ್ದ ಅಪರಾಧಿಯೇ ಸಲ್ಲಿಸಿದ್ದ ಮನವಿ ಎಂದೂ ನ್ಯಾಯಾಲಯ ತಲಪಲೇ ಇಲ್ಲ. ಬಂಗಾಳದ ನವಾಬ ಮಾಡಿದ ಕೋರಿಕೆಯೂ ಕಸದ ಬುಟ್ಟಿ ಸೇರುತ್ತದೆ. ಇವೆಲ್ಲದರ ಮಧ್ಯದಲ್ಲಿ ಅಪರಾಧಿಯ ಪರವಾಗಿ ಕೋಲ್ಕತಾದ ಯೂರೋಪಿಯನ್ ಸಮುದಾಯದ ಒಂದು ಮನವಿಯೂ ಇರಲಿಲ್ಲ ಎಂಬುದು ಚೋದ್ಯದ ಸಂಗತಿಯಾಗಿದೆ.
ಮನವಿ–ಬಿನ್ನವತ್ತಳೆಗಳು
೧೭೬೫ರಲ್ಲಿ ಇದೇ ಕಾನೂನಿನನ್ವಯ ಫೋರ್ಜರಿ ಪ್ರಕರಣದಲ್ಲಿ ಮರಣದಂಡನೆಗೆ ಗುರಿಯಾಗಿದ್ದ ರಾಧಾಚರಣ ಮಿತ್ರನನ್ನು ನೇಣುಗಂಬದಿಂದ ಉಳಿಸಲು ಆಗಿನ ಗವರ್ನರ್ ಸ್ಪೆನ್ಸರ್ಗೆ ಮರಣದಂಡನೆಯನ್ನು ಮನ್ನಾ ಮಾಡುವಂತೆ ಅಥವಾ ಇಂಗ್ಲೆಂಡಿನ ಮಹಾಪ್ರಭುಗಳಿಗೆ ಮನವಿ ಸಲ್ಲಿಸಿ ಅದರ ಪರಿಣಾಮ ತಿಳಿಯುವವರೆಗೆ ವ್ಯವಧಾನ ತೋರುವಂತೆ ಕೋಲ್ಕತಾದ ದೇಶೀ ನಾಗರಿಕರು ಮನವಿ ಸಲ್ಲಿಸುತ್ತಾರೆ. ಈ ಮೊಕದ್ದಮೆಯಲ್ಲಿ ಜ್ಯೂರಿಗಳು ಕ್ಷಮಾದಾನವನ್ನು ತೋರುವಂತೆ ಶಿಫಾರಸು ಮಾಡಿದ್ದರು. ಆ ಆಧಾರದ ಮೇಲೆ ರಾಧಚರಣ ಮಿತ್ರನ ಮರಣದಂಡನೆಯನ್ನು ಮನ್ನಾ ಮಾಡಲಾಗಿತ್ತು. ಇದೇ ಆಧಾರದ ಮೇಲೆ ಫರೇರ್ ನ್ಯಾಯಾಧೀಶರ ಮೂಲಕ ಜ್ಯೂರಿಗಳಿಗೆ ವಯೋವೃದ್ಧ ನತದೃಷ್ಟ ಸಂತ್ರಸ್ತನ ವಯಸ್ಸನ್ನು ಗಮನದಲ್ಲಿಟ್ಟುಕೊಂಡು ಸಾರ್ವಭೌಮ ಸಮ್ರಾಟನಿಗೆ ಕ್ಷಮಾದಾನವನ್ನು ಕರುಣಿಸುವಂತೆ ಬೇಡಿಕೊಳ್ಳುವ ಮನವಿಗೆ ಮಹಾಪ್ರಭುಗಳಿಂದ ಉತ್ತರ ಬರುವವರೆಗೆ ಮರಣದಂಡನೆಯನ್ನು ತಡೆಹಿಡಿಯಬೇಕೆಂಬ ಮನವಿಯನ್ನು ಸಿದ್ಧಗೊಳಿಸುತ್ತಾನೆ. ಇದನ್ನಾತ ಜುಲೈ ತಿಂಗಳ ಕೊನೆಯ ದಿನ ಜ್ಯೂರಿಗಳ ಮುಖ್ಯಸ್ಥ (ಫೋರ್ಮನ್) ಜಾನ್ ರಾಬಿಸ್ಸನ್ನಿಗೆ ಕಳುಹಿಸಿಕೊಡುತ್ತಾನೆ. ಈ ಫೋರ್ಮನ್ ಆದರೋ ತನಗೆ ಹೇಳಿದ ಕೆಲಸ ಬಿಟ್ಟು ಸ್ವಪ್ರತಿಷ್ಠೆಯಿಂದ ಬ್ರಿಟಿಷ್ ಜ್ಯೂರಿಗಳು ತೆಗೆದುಕೊಂಡ ಪ್ರಮಾಣವಚನದ ನೆಪ ಒಡ್ಡಿ ಅದನ್ನು ತಿರಸ್ಕರಿಸುತ್ತಾನೆ. ಫರೇರ್ ತನ್ನ ಮನವಿಯಲ್ಲಿ ಈ ನತದೃಷ್ಟ ಸಂತೃಸ್ತನ ಮೇಲೆ ಕರುಣೆ ತೋರುವಂತೆ ಬರೆದ ಮನವಿಗೆ ಘೋರ ವಿರೋಧ ವ್ಯಕ್ತಪಡಿಸುವ ಜಾನ್ರಾಬಿನ್ಸನ್ ನತದೃಷ್ಟ ಎಂಬ ಶಬ್ದದಿಂದ ತಾನು ಘಾಸಿಗೊಂಡಿರುವುದಾಗಿ ರೋದಿಸುತ್ತ ಫರೇರ್ ತನ್ನ ಪ್ರಯತ್ನವನ್ನು ಮುಂದುವರಿಸಿದಲ್ಲಿ ನ್ಯಾಯಾಧೀಶರ ಮೇಲೆ ಮಾಡಿರುವ ಈ ಅಪಮಾನಜನಕ ಪದಪ್ರಯೋಗದ ಬಗ್ಗೆ ಸರ್ವೋಚ್ಚ ನ್ಯಾಯಾಧೀಶರಿಗೆ ದೂರು ಸಲ್ಲಿಸಲು ತನಗೆ ಅನುಮತಿ ನೀಡಬೇಕೆಂದು ಸರ್ ಇಂಪೆಗೆ ಪತ್ರ ಬರೆಯುತ್ತಾನೆ. ಮುಂದಿನ ಬಾರಿ ಫರೇರ್ ನ್ಯಾಯಾಲಯದ ಮುಂದೆ ಹಾಜರಾದಾಗ ಇಂಪೆ ಆತನನ್ನು ಕಠಿಣ ವಾಗ್ದಂಡನೆಗೆ ಗುರಿ ಮಾಡುತ್ತಾನೆ. ಇಷ್ಟೆಲ್ಲ ಅವಾಂತರದ ಬಳಿಕ ಹನ್ನೆರಡು ಜನ ಜ್ಯೂರಿಗಳ ಪೈಕಿ ಎಡ್ವರ್ಡ್ ಎಲ್ಲಿರಿಂಗ್ಟನ್ ಎಂಬ ಒಬ್ಬನೇ ಒಬ್ಬ ಕರುಣಾಳು ಸಹಿಹಾಕಿದ್ದ ಆ ಮನವಿ ವಾಪಸ್ಸು ಬರೆದಾತನ ಕೈ ಸೇರುತ್ತದೆ.
ಇದಕ್ಕೆ ತದ್ವಿರುದ್ಧವಾಗಿ ಮತ್ತೊಂದು ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಸರ್ವೋಚ್ಚ ನ್ಯಾಯಾಧೀಶ ಸರ್ ಎಲಿಜಾ ಇಂಪೆಯ ಮೇಲೆ ಭರವಸೆ ಮತ್ತು ಸಂತೃಪ್ತಿಯನ್ನು ವ್ಯಕ್ತಪಡಿಸುವ ಬಿನ್ನವತ್ತಳೆ ಸಿದ್ಧಗೊಳ್ಳುತ್ತಿತ್ತು. ಹೊಗಳುಭಟ್ಟಂಗಿಗಳ ಆಡಂಬರಪೂರ್ಣ ಪದಗಳಿಂದ ಕೂಡಿದ ಈ ಬಿನ್ನವತ್ತಳೆಯಲ್ಲಿ ನ್ಯಾಯಾಧೀಶರ ನಿಷ್ಕಾಪಟ್ಯ, ಪ್ರಜ್ಞಾವಂತಿಕೆ ಮತ್ತು ಸಂಯಮವನ್ನು ಕೊಂಡಾಡುವ ಜೊತೆಯಲ್ಲಿ ಸರ್ವೋಚ್ಚ ನ್ಯಾಯಾಲಯದ ಘಟನೆಯಾಗದೇ ಹೋಗಿದ್ದಲ್ಲಿ ತಮ್ಮೆಲ್ಲರ ಕೀರ್ತಿ, ಭವಿಷ್ಯ, ಮತ್ತು ಪ್ರಾಯಶಃ ಪ್ರಾಣ ಸಹಿತ ಕುತ್ಸಿತ ಮನಸ್ಸಿನ ಸ್ವೇಚ್ಛಾಚಾರಿ ವಕೀಲರ ಪಾಲಾಗುತ್ತಿತ್ತೆಂದು ಕಳವಳ ವ್ಯಕ್ತಪಡಿಸುತ್ತಾರೆ. ೮೪ ಮಂದಿ ಸಹಿ ಹಾಕಿದ ಈ ಬಿನ್ನವತ್ತಳೆಯಲ್ಲಿ ಪೊಲೀಸ್ ಸೂಪರಿಂಟೆಂಡೆಂಟ್ ಪ್ಲೇಡೇಲ್ ಮತ್ತು ಜ್ಯೂರಿಗಳ ಫೋರ್ಮನ್ ರಾಬಿನ್ಸನ್ರವರ ಸಹಿ ಮುಂಚೂಣಿಯಲ್ಲಿದೆ. ಇಂಗ್ಲೆಂಡಿನ ದೊರೆಯ ಮುಂದೆ ಮೇಲ್ಮನವಿಯನ್ನು ಸಲ್ಲಿಸುವ ಅನುಮತಿ ಬೇಡುವ ಮನವಿಯನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಲಾಯಿತು. ಆದರೆ ಎಲಿಜಾ ಇಂಪೆ ಇದನ್ನು ತಿರಸ್ಕರಿಸುತ್ತಾನೆ. ಬಳಿಕ ಬ್ರಿಟಿಷ್ ಆಡಳಿತ ಮಂಡಳಿಯ ಸಮ್ಮುಖದಲ್ಲಿ ಕ್ಷಮಾದಾನದ ಮನವಿಯನ್ನು ಸಲ್ಲಿಸುವ ಅವಕಾಶಕ್ಕಾಗಿ ಮನವಿ ಸಲ್ಲಿಸಿದಾಗ ಅದನ್ನೂ ತಿರಸ್ಕರಿಸಲಾಯಿತು. ಸರ್ವೋಚ್ಚ ನ್ಯಾಯಾಲಯದ ತೀರ್ಪಿಗನುಗುಣವಾಗಿ ರಾಜ ನಂದಕುಮಾರನನ್ನು ಗಲ್ಲಿಗೇರಿಸಿದ ಬಳಿಕವೇ ವಾರನ್ ಹೇಸ್ಟಿಂಗ್ಸ್ ನೆಮ್ಮದಿಯ ಉಸಿರನ್ನು ಬಿಡಬಹುದೆಂದು ಭಾವಿಸುತ್ತಾನೆ. ಆದರೆ ವಿಧಿ ಆತನ ಹಣೆಯಲ್ಲಿ ಬೇರೆಯದನ್ನೇ ಬರೆದಿದೆ ಎನ್ನುವುದನ್ನು ತಿಳಿಯಲು ಆತನಿಗೆ ಹೆಚ್ಚಿನ ಸಮಯ ಹಿಡಿಯಲಿಲ್ಲ.
ಆಗಸ್ಟ್ ೪ರಂದು ನಂದಕುಮಾರ ಖುದ್ದಾಗಿ ಗವರ್ನರ್-ಜನರಲ್ ಮತ್ತು ಆತನ ಆಡಳಿತ ಮಂಡಳಿಯ ಮಾನ್ಯ ಸದಸ್ಯರಿಗೆ ಸಂಬೋಧಿಸಲಾದ ಮನವಿಯೊಂದನ್ನು ತನ್ನ ಸೇವಕನ ಮೂಲಕ ಜನರಲ್ ಕ್ಲಾವೆರಿಂಗ್ನ ಖಾಸಗಿ ಬಂಗಲೆಗೆ ತಲಪಿಸುತ್ತಾನೆ. ನಂದಕುಮಾರನನ್ನು ನೇಣುಗಂಬದಿಂದ ಬಚಾವು ಮಾಡುವುದಾಗಿ ಬಡಾಯಿ ಕೊಚ್ಚುತ್ತಿದ್ದ ಜನರಲ್ ಕ್ಲಾವರಿಂಗ್ ಈ ಪತ್ರದಲ್ಲಿ ತನ್ನನ್ನು ಮಧ್ಯೆ ಪ್ರವೇಶಿಸುವಂತೆ ಮನವಿ ಇರಬಹುದೆಂಬ ಆತಂಕದಿಂದ ಅದನ್ನು ಒಡೆದು ಓದುವ ಸಾಹಸಕ್ಕೂ ಕೈ ಹಾಕಲಿಲ್ಲ. ಅದನ್ನು ಆರನೆಯ ದಿನಾಂಕದಂದು ತೆರೆದು ಓದುವಷ್ಟರಲ್ಲಿ ಹಿಂದಿನ ದಿನವೇ ನಂದಕುಮಾರನನ್ನು ನೇಣಿಗೇರಿಸಲಾಗಿತ್ತು.
ಅಂತಿಮ ವಿನಂತಿಯೂ ಅಲಕ್ಷಿತ
ಗವರ್ನರ್-ಜನರಲ್ ಮತ್ತು ಆತನ ಆಡಳಿತ ಮಂಡಳಿಗೆ ಸಲ್ಲಿಸಲಾದ ಮನವಿಯಲ್ಲಿ ನಂದಕುಮಾರ ಲಾರ್ಡ್ ಇಂಪೆ ಮತ್ತು ಸಹ-ನ್ಯಾಯಾಧೀಶರು ಈ ದೇಶದಲ್ಲಿ ಪಾರಂಪರಿಕವಾಗಿ ರೂಢಿಗತವಲ್ಲದ ಮತ್ತು ಹಿಂದೆಂದೂ ಜಾರಿಗೊಳಿಸಿರಲಾಗದ ಇಂಗ್ಲಿಷ್ ಕಾನೂನಿನನ್ವಯ ನನ್ನ ವಿಚಾರಣೆ ನಡೆಸಿ, ನನ್ನ ಶತ್ರುಗಳ ಸಾಕ್ಷ್ಯಾಧಾರಗಳ ಬೆಂಬಲದ ಮೇಲೆ ಮರಣದಂಡನೆ ವಿಧಿಸಿರುತ್ತಾರೆ. ನನ್ನ ಜೀವನದ ಕೊನೆಯ ಕ್ಷಣಗಳಲ್ಲಿ ಆಡಳಿತ ಮಂಡಳಿಯ ಘನತೆವೆತ್ತ ಸದಸ್ಯರ ಸಮ್ಮುಖದಲ್ಲಿ ಸತ್ಯವನ್ನು ಬಿಚ್ಚಿಡಲು ಮುಂದಾಗಿದ್ದೇನೆ. ನಾನು ಫೋರ್ಜರಿ ಮಾಡಿದ್ದೇನೆಂದು ಆಪಾದಿಸಲಾದ ಬಾಂಡು ನನ್ನಿಂದ ಬರೆಸಲ್ಪಟ್ಟಿಲ್ಲ. ನನ್ನ ಪ್ರಾಮಾಣಿಕತೆಯ ಬಗ್ಗೆ ತಿಳಿವಳಿಕೆ ಇದ್ದ ಈ ದೇಶದ ಅನೇಕ ಗಣ್ಯರು ದೊರೆ ಮಹಾಪ್ರಭುಗಳ ಕೃಪಾದೃಷ್ಟಿಗೆ ನನ್ನ ಮನವಿಯನ್ನು ಸಲ್ಲಿಸಿ ಅದರ ನಿರ್ಣಯ ಬರುವವರೆಗೆ ಶಿಕ್ಷೆಯನ್ನು ತಡೆಹಿಡಿಯಬೇಕೆಂದು ನ್ಯಾಯಾಧೀಶರಿಗೆ ಕಳಕಳಿಯ ಮನವಿ ಮಾಡಿರುತ್ತಾರೆ. ಅದನ್ನು ತಿರಸ್ಕರಿಸಿದ ನ್ಯಾಯಾಧೀಶರು ಅನ್ಯಾಯಪೂರ್ವಕವಾಗಿ ನನ್ನ ಜೀವವನ್ನು ಕಿತ್ತುಕೊಳ್ಳಲು ಮುಂದಾಗಿದ್ದಾರೆ. ಸತ್ಯಾನ್ವೇಷಣೆಯಲ್ಲಿ ಮತ್ತು ನ್ಯಾಯಪಾಲನೆಯಲ್ಲಿ ನಂಬಿಕೆ ಇರುವ ಆಡಳಿತ ಮಂಡಳಿಯ ಸದಸ್ಯರಲ್ಲಿ ದೊರೆ ಮಹಾಪ್ರಭುಗಳ ಇಂಗಿತ ವ್ಯಕ್ತವಾಗುವವರೆಗೆ ನನಗೆ ಪ್ರಾಣಭಿಕ್ಷೆ ನೀಡಬೇಕೆಂದು ಭಗವಂತನ ಹೆಸರಿನಲ್ಲಿ ಪ್ರಾರ್ಥನೆ ಮಾಡುತ್ತಿದ್ದೇನೆ. ಅನ್ಯಾಯಪೂರ್ಣವಾಗಿ ನನ್ನ ಪ್ರಾಣಹರಣ ಮಾಡಿದಲ್ಲಿ ನನ್ನ ಕುಟುಂಬದ ಸದಸ್ಯರ ಸಮೇತ ಮುಂದಿನ ಜನ್ಮದಲ್ಲಿ ನ್ಯಾಯಭಿಕ್ಷೆ ಬೇಡಲು ಸಿದ್ಧನಾಗಿದ್ದೇನೆ. ನನ್ನ ಮೇಲಿನ ದ್ವೇಷ ಹಾಗೂ ಪಕ್ಷಪಾತ ಧೋರಣೆಯಿಂದ ನನ್ನ ಜೀವತಂತುವನ್ನೇ ಕತ್ತರಿಸಲು ಮುಂದಾಗಿರುವ ಈ ಕ್ಷಣದಲ್ಲಿ ಮಂಡಳಿಯ ಘನ ಸದಸ್ಯರಿಗೆ ಇಂಗ್ಲೆಂಡಿನ ದೊರೆಗಳ ಕೃಪಾದೃಷ್ಟಿಗೆ ನನ್ನ ಪ್ರಕರಣವನ್ನು ನನಗೆ ಹಾನಿಯಾದರೂ ನನ್ನ ನಿರಪರಾಧಿತ್ವ ಅವರಿಗೆ ಮನವರಿಕೆಯಾಗುವಂತೆ ತಲಪಿಸಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ.
ಆಡಳಿತ ಮಂಡಳಿಯ ಸಭೆಯಲ್ಲಿ ಈ ಮನವಿಯನ್ನು ಓದಿದ ಬಳಿಕ ಹೇಸ್ಟಿಂಗ್ಸ್ ಇದರ ಒಂದು ಪ್ರತಿಯನ್ನು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಿಗೆ ಕಳುಹಿಸಿಕೊಡಬೇಕೆಂದು ಸೂಚಿಸಿದಾಗ ಫ್ರಾನ್ಸಿಸ್ ಮನವಿಯಲ್ಲಿ ಅವರ ವಿರುದ್ಧ ಬರೆದಿರುವ ಆರೋಪಗಳು ಸಾಕ್ಷ್ಯಾಧಾರರಹಿತವಾಗಿದ್ದು ಮಾನಹಾನಿಯನ್ನುಂಟು ಮಾಡುವಂತಿದೆ ಎಂದು ವಿರೋಧಿಸುತ್ತಾನೆ. ಅಲ್ಲದೆ ಅದರ ಮೂಲಪ್ರತಿಯನ್ನು ನೇಣಿಗೇರಿಸುವವನ ಕೈಯಿಂದ ಸುಟ್ಟು ನಾಶ ಪಡಿಸಬೇಕೆಂಬ ಆದೇಶವನ್ನು ಶರೀಫನಿಗೆ ಕಳುಹಿಸಬೇಕೆಂದು ಸೂಚಿಸುತ್ತಾನೆ. ಹೀಗೆ ನಂದಕುಮಾರ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ಮೇಲೆ ಮಾನಹಾನಿಯ ಆರೋಪಗಳನ್ನು ಮಾಡಿರುವ ಮನವಿಪತ್ರವನ್ನು ಆತನನ್ನು ನೇಣಿಗೇರಿಸಿದವನ ಕೈಯಿಂದಲೇ ಸುಟ್ಟುಹಾಕಿಸಲಾಯಿತು. ಅನೇಕ ವರ್ಷಗಳ ಬಳಿಕ ಫ್ರಾನ್ಸಿಸ್ ಈ ಪ್ರಕರಣದ ಬಗ್ಗೆ ಮಾತನಾಡುತ್ತ ಆ ಮನವಿಯಲ್ಲಿ ಸರ್ ಎಲಿಜಾ ಇಂಪೆಗಿಂತಲೂ ಹೆಚ್ಚಾಗಿ ಮಿಕ್ಕ ನ್ಯಾಯಾಧೀಶರ ಮೇಲೂ ಆರೋಪ ಹೊರಿಸಲಾಗಿತ್ತಾದುದರಿಂದ ಅದನ್ನು ನಾಶಗೊಳಿಸಲಾಯಿತು ಎಂದು ಸಮಜಾಯಿಶಿ ನೀಡುತ್ತಾನೆ.
ಚೋದ್ಯದ ಸಂಗತಿಯೆಂದರೆ ನ್ಯಾಯಾಧೀಶರು ಈ ದಾಖಲೆಯ ಒಂದು ಪ್ರತಿಯನ್ನು ತಮಗೆ ಒದಗಿಸುವಂತೆ ಆಡಳಿತ ಮಂಡಳಿಗೆ ಮನವಿ ಮಾಡಿಕೊಳ್ಳುತ್ತಾರೆ. ಇದಕ್ಕುತ್ತರವಾಗಿ ಈ ದಾಖಲೆಯ ಯಾವುದೇ ಪ್ರತಿ ಉಳಿಯದಂತೆ ಮೂಲ ಹಾಗೂ ಪ್ರತಿಯನ್ನು ನಾಶಗೊಳಿಸುವಂತೆ ಆದೇಶಿಸಲಾಗಿದೆ. ಈ ಮಂಡಳಿಯ ಕಾರ್ಯಕಲಾಪಗಳು ಗುಪ್ತವಾಗಿರುತ್ತವೆ ಎಂದು ನಿಮಗೆ ಅನೇಕ ಬಾರಿ ಸೂಚಿಸಲಾಗಿದೆ. ಹಾಗಿರುವಾಗ ಅಂತಹದ್ದೊಂದು ಮನವಿಯನ್ನು ಸಲ್ಲಿಸಲಾಗಿದೆ ಎಂಬ ಮಾಹಿತಿ ತಮಗೆ ಒದಗಿಸಿದವರು ಯಾರು ಎಂದು ತಿಳಿಯಬಯಸುತ್ತೇವೆ ಎಂದು ಬರೆಯುತ್ತದೆ. ಇದಕ್ಕುತ್ತರ ಹೇಸ್ಟಿಂಗ್ಸ್ ಅಲ್ಲದೆ ಬೇರಾರು ತಾನೇ ಒದಗಿಸಬಲ್ಲರು? ದಾಖಲೆಯನ್ನು ನಾಶಪಡಿಸಿದಾಗ್ಯೂ ಎಲಿಜಾ ಇಂಪೆ ಬರೆದ ಪತ್ರವೊಂದರಲ್ಲಿ ಸೆಪ್ಟೆಂಬರ್ ೧೫ರ ಮಂಡಳಿಯ ಕಾರ್ಯಕಲಾಪದ ವರದಿಯನ್ನು ಇಂಡಿಯಾ ಹೌಸ್ಗೆ ಕಳುಹಿಸಲಾಗಿದೆ. ಈ ವರದಿಗಳು ರಹಸ್ಯವಾಗಿದ್ದರೂ ತಾನು ಕೋಲ್ಕತಾದಲ್ಲಿರುವವರೆಗೆ ಈ ಸಂಗತಿಯನ್ನು ಬಹಿರಂಗಗೊಳಿಸುವುದಿಲ್ಲ ಎಂಬ ವಚನ ಪಡೆದ ಹೇಸ್ಟಿಂಗ್ಸ್ ಅವುಗಳ ವಿವರಗಳನ್ನು ನನಗೆ ಒದಗಿಸಿರುತ್ತಾನೆ ಎಂದು ತನಗೆ ಹೇಸ್ಟಿಂಗ್ಸ್ ಒದಗಿಸಿದ ರಹಸ್ಯವನ್ನು ಬಯಲು ಮಾಡುತ್ತಾನೆ.
* * *
ಇಲ್ಲದ ಕಾನೂನಿನ ಅನ್ವಯ
ಈಗ ಕಾನೂನಿನ ವಿಚಾರಕ್ಕೆ ಬಂದರೆ: ಬ್ರಿಟಿಷ್ ಸರಕಾರ ನಡೆಸಿದ ಕಾನೂನಿನ ದುರ್ಬಳಕೆಯ ಪ್ರಥಮ ಹಾಗೂ ಅತಿ ಹೀನ ಉದಾಹರಣೆಯಾಗಿ ಈ ಮೊಕದ್ದಮೆಯನ್ನು ಭಾರತೀಯ ಕಾನೂನಿನ ಇತಿಹಾಸದಲ್ಲಿ ಪರಿಗಣಿಸಲಾಗುತ್ತದೆ.
ಇದಕ್ಕೆ ಮುಖ್ಯ ಕಾರಣವೆಂದರೆ ಫೋರ್ಜರಿಗೆ ಮರಣ ದಂಡನೆಯನ್ನು ವಿಧಿಸುವ ಕಾನೂನನ್ನು ಬ್ರಿಟಿಷ್ ಪಾರ್ಲಿಮೆಂಟ್ ೧೭೨೮ರಲ್ಲಿ ಇಂಗ್ಲೆಂಡಿನ ಆರ್ಥಿಕ, ವಾಣಿಜ್ಯ ಅಗತ್ಯಕ್ಕನುಗುಣವಾಗಿ ಜಾರಿಗೊಳಿಸಿರುತ್ತದೆ. ಇದನ್ನು ಎಂದೂ ಭಾರತದಲ್ಲಿ ಪ್ರಚುರಪಡಿಸಿರಲಿಲ್ಲವಾದುದರಿಂದ ಭಾರತೀಯರಿಗೆ ಇಂತಹ ಒಂದು ಕಾನೂನು ಇದೆ ಎಂಬ ಕಲ್ಪನೆಯೂ ಇರಲಿಲ್ಲ. ಎರಡನೆಯದಾಗಿ ಕೋಲ್ಕತಾದಲ್ಲಿ ಸರ್ವೋಚ್ಚ ನ್ಯಾಯಾಲಯವನ್ನು ಪ್ರಾರಂಭಿಸಿದುದೇ ೧೭೭೪ರಲ್ಲಿ. ಹಾಗಿರುವಾಗ ೧೭೭೦ರಲ್ಲಿ ರಾಜ ನಂದಕುಮಾರ ಎಸಗಿದ್ದಾನೆಂದು ಆಪಾದಿಸಲಾಗಿದ್ದ ಫೋರ್ಜರಿ ಅಪರಾಧಕ್ಕೆ ಮರಣ ದಂಡನೆಯನ್ನು ವಿಧಿಸಿದುದು ಎಷ್ಟರಮಟ್ಟಿಗೆ ಸರಿ ಎಂಬ ಪ್ರಶ್ನೆ ಏಳುತ್ತದೆ. ಹೀಗೆ ಸರ್ವೋಚ್ಚ ನ್ಯಾಯಾಲಯ ಹುಟ್ಟುವುದಕ್ಕೆ ಮೊದಲೇ ಘಟಿಸಿದೆ ಎನ್ನಲಾದ ಅಪರಾಧದ ವಿಚಾರಣೆ ನಡೆಸುವ ಅದರ ಅಧಿಕಾರವು ಪ್ರಶ್ನಾರ್ಹವಾಗುತ್ತದೆ. ನಂದಕುಮಾರನಾಗಲಿ ಅಥವಾ ಆತನ ವಿರುದ್ಧ ಆಪಾದನೆ ಹೊರೆಸಿದ ಮೋಹನ್ಪ್ರಸಾದನಾಗಲಿ ಕೋಲ್ಕತಾದ ನಿವಾಸಿಗಳಾಗಿರಲಿಲ್ಲ, ಹಾಗಾಗಿ ಸರ್ವೋಚ್ಚ ನ್ಯಾಯಾಲಯವು ತನ್ನ ಭೌಗೋಲಿಕ ವ್ಯಾಪ್ತಿಯನ್ನು ಮೀರಿ ಅಧಿಕಾರವನ್ನು ಚಲಾಯಿಸಿರುತ್ತದೆ.
ಆದರೆ ಇದನ್ನು ಎಲ್ಲರೂ ಒಪ್ಪಿಕೊಳ್ಳುವುದಿಲ್ಲ. ಸರ್ವೋಚ್ಚ ನ್ಯಾಯಾಲಯ ಪ್ರಾರಂಭಗೊಳ್ಳುವ ಮೊದಲೇ ಭಾರತೀಯ ದಂಡ ಪರಂಪರೆಯಲ್ಲಿ ಫೋರ್ಜರಿಗೆ ಮರಣದಂಡನೆ ವಿಧಿಸುವ ಕಾನೂನು ಜಾರಿಯಲ್ಲಿತ್ತು ಎಂಬುದನ್ನು ಸಾಬೀತುಮಾಡಲು ಕೆಲವು ವರ್ಷಗಳ ಹಿಂದೆ ರಾಧಾಚಂದ್ ಮಿತ್ರ ಎಂಬಾತನಿಗೆ ಮರಣ ದಂಡನೆ ವಿಧಿಸಿದುದನ್ನು ಉಲ್ಲೇಖಿಸಲಾಗುತ್ತದೆ. ಆದರೆ ಆನಂತರದಲ್ಲಿ ಆತನಿಗೆ ಕ್ಷಮಾದಾನ ನೀಡಲಾಗಿತ್ತು. ಕ್ಷಮಾದಾನ ನೀಡುವಂತೆ ಆತನ ಪರವಾಗಿ ಸರಕಾರಕ್ಕೆ ಮರಣದಂಡನೆಯನ್ನು ಜಾರಿಗೊಳಿಸದಿದ್ದರೂ ಅಂತಹ ಶಿಕ್ಷೆ ಇದೆ ಎಂಬುದು ಮುಂಬರುವ ದಿನಗಳಲ್ಲಿ ಎಲ್ಲರಿಗೂ ಅಪರಾಧ ಗೈಯದಂತೆ ತಡೆಯುತ್ತದೆ ಎಂಬುದಾಗಿ ಸಲ್ಲಿಸಲಾಗಿದ್ದ ಮನವಿಪತ್ರಕ್ಕೆ ಸ್ವತಃ ನಂದಕುಮಾರನೂ ಸಹಿ ಹಾಕಿರುತ್ತಾನೆ.
ಕುತ್ಸಿತ ವರ್ತನೆ
ಕೊನೆಯ ದಿನ ಎಂದರೆ ಜೂನ್ ೧೬ರಂದು ಎಲ್ಲ ಸಾಕ್ಷಿಗಳ ವಿಚಾರಣೆ ಮುಗಿದು, ವಾದವಿವಾದಗಳನ್ನು ಆಲಿಸಿದ ಬಳಿಕ ಸರ್ವೋಚ್ಚ ನ್ಯಾಯಾಧೀಶ ಅಂತಿಮವಾಗಿ ಜ್ಯೂರಿಗಳಿಗೆ ಮೊಕದ್ದಮೆಯ ಸಾರಾಂಶವನ್ನು ವಿವರಿಸಲು ಮುಂದಾಗುತ್ತಾನೆ. ಸರ್ ಎಲಿಜಾ ಇಂಪೆ ತನ್ನ ಸಾರಾಂಶದಲ್ಲಿ ಏನನ್ನು ಹೇಳಿದ ಎಂಬಷ್ಟೇ ಏನನ್ನು ಹೇಳದೆ ಬಿಟ್ಟ ಎಂಬುದೂ ಮುಂದಿನ ದಿನಗಳಲ್ಲಿ ಸಾಕಷ್ಟು ಚರ್ಚೆಯ ವಿಚಾರವಾಗಿ ಪರಿಣಮಿಸಿತು. ಹದಿಮೂರು ವರ್ಷಗಳ ಬಳಿಕ ಬ್ರಿಟಿಷ್ ಪಾರ್ಲಿಮೆಂಟ್ನಲ್ಲಿ ಲಾರ್ಡ್ ಇಂಪೆಯ ಮೇಲೆ ನಡೆದ ಮಹಾಭಿಯೋಗ ಪ್ರಕ್ರಿಯೆಯಲ್ಲಿ ನಂದಕುಮಾರನ ಮೊಕದ್ದಮೆಯೂ ಮಹತ್ತ್ವದ ಪಾತ್ರ ವಹಿಸುತ್ತದೆ. ಲಾರ್ಡ್ ಇಂಪೆ ಜ್ಯೂರಿಗಳಿಗೆ ತನ್ನ ಸಾರಾಂಶವನ್ನು ತಿಳಿಸುವ ಸಮಯದಲ್ಲಿ ಒಟ್ಟಾರೆ ನಾಚಿಕೆಗೇಡಿನ ಪಕ್ಷಪಾತವನ್ನು ತೋರಿದ್ದನೆಂಬ ಆರೋಪಕ್ಕೊಳಗಾಗುತ್ತಾನೆ.
ತನ್ನನ್ನು ಶತ್ರುವಿನಂತೆ ಪರಿಗಣಿಸುವ ಆಡಳಿತ ಮಂಡಳಿಯ ಹೊಸ ಸದಸ್ಯರೊಂದಿಗೆ ಕೈ ಜೋಡಿಸಿ ತನ್ನ ಮೇಲೆ ಭ್ರಷ್ಟಾಚಾರದ ಆರೋಪ ಹೊರಿಸಿದ ನಂದಕುಮಾರನನ್ನು ಯಮಸದನಕ್ಕೆ ಅಟ್ಟಿದ ಬಳಿಕ ೧೭೭೬ರಲ್ಲಿ ಮಾನ್ಸನ್ ಮತ್ತು ೧೭೭೭ರಲ್ಲಿ ಕ್ಲಾವೆರಿಂಗ್ ಮೃತರಾದಾಗ ವಾರನ್ ಹೇಸ್ಟಿಂಗ್ಸ್ ನಿರಾತಂಕಗೊಳ್ಳುತ್ತಾನೆ. ಆಡಳಿತ ಮಂಡಳಿಯಲ್ಲಿ ತನ್ನ ಪ್ರಾಬಲ್ಯವನ್ನು ಮೆರೆಯುತ್ತಾನೆ. ಆದರೆ ಬ್ರಹ್ಮಹತ್ಯೆ ಗೈದಿದ್ದ ವಾರನ್ ಹೇಸ್ಟಿಂಗ್ಸ್ನನ್ನು ಆ ಬ್ರಾಹ್ಮಣ ಪ್ರೇತಾತ್ಮ ಸುಮ್ಮನೆ ಬಿಡಲು ಸಿದ್ಧವಿರಲಿಲ್ಲ. ೧೭೮೫ರಲ್ಲಿ ತನ್ನ ಗವರ್ನರ್ ಜನರಲ್ ಗಿರಿಗೆ ರಾಜಿನಾಮೆ ನೀಡಿ ಇಂಗ್ಲೆಂಡಿಗೆ ಹಿಂತಿರುಗಿದ ಆತನಿಗೆ ನಂದಕುಮಾರನ ಪ್ರೇತ ತನ್ನನ್ನು ಹಿಂಬಾಲಿಸಿದೆ ಎಂದರಿಯಲು ಬಹಳ ಸಮಯ ಬೇಕಾಗಲಿಲ್ಲ.
೧೭೮೭ರಲ್ಲಿ ಆತನ ಮೇಲೆ ಭ್ರಷ್ಟಾಚಾರ, ನೈತಿಕ ದುಷ್ಕೃತ್ಯ, ಹಣ ಲಪಟಾಯಿಸಿರುವುದು, ಒತ್ತಾಯದಿಂದ ಹಣ ವಸೂಲಿ ಮತ್ತು ಬಲವಂತದ ಆರ್ಥಿಕ ಲಂಪಟತನ ಇತ್ಯಾದಿಗಳೊಂದಿಗೆ ನಂದಕುಮಾರನನ್ನು ಕಾನೂನಿನ ಮೂಲಕ ಕೊಲೆಗೈದ ಆರೋಪವೂ ಸೇರಿದಂತೆ ೨೦ ಅಪರಾಧಗಳ ಆರೋಪ ಪಟ್ಟಿಯೊಂದಿಗೆ ಬ್ರಿಟನ್ನಿನ ಹೌಸ್ ಆಫ್ ಕಾಮನ್ಸ್ ಈ ಮಹಾಭಿಯೋಗಕ್ಕೆ ಮುಂದಾದಾಗ ಈ ಮಾಜಿ ಗವರ್ನರ್-ಜನರಲ್ ಪತರಗುಟ್ಟುವಂತಾಗುತ್ತದೆ.
ಮಹಾಭಿಯೋಗ
ಅಂದಿನ ಪಾರ್ಲಿಮೆಂಟಿನ ಘಟಾನುಘಟಿ ಸದಸ್ಯರಲ್ಲಿ ಒಬ್ಬನಾಗಿದ್ದ ಎಡ್ಮಂಡ್ ಬರ್ಕ್ ಹೇಸ್ಟಿಂಗ್ಸ್ ಮೇಲಿನ ಆರೋಪಪಟ್ಟಿಯನ್ನು ಹಿಡಿದು ಎರಡು ದಿನಗಳ ಕಾಲ ಅವ್ಯಾಹತವಾಗಿ ನಡೆಸಿದ ವಾಕ್ಪ್ರಹಾರದಿಂದ ಹೇಸ್ಟಿಂಗ್ಸ್ ನಲುಗಿಹೋಗುತ್ತಾನೆ. ಬರ್ಕ್ ಬೆನ್ನ ಹಿಂದೆ ಚಾರ್ಲ್ಸ್ ಜೇಮ್ಸ್ ಫಾಕ್ಸ್, ರಿಚರ್ಡ್ ಬ್ರಿನ್ಸ್ಲೆ, ಶೆರಿಡನ್ ಮುಂತಾದವರು ಏಳು ವರ್ಷಗಳ ಕಾಲ ಹರಡಿದ ಈ ಮಹಾಭಿಯೋಗದ ಚರ್ಚೆಯಲ್ಲಿ ೧೪೮ ದಿನಗಳ ಪಾರ್ಲಿಮೆಂಟಿನ ಕಾಲಾವಧಿಯನ್ನು ಕಬಳಿಸುತ್ತಾರೆ. ಒಂದೆಡೆ ಸಾಮ್ರಾಜ್ಯವಾದದ ವಿಸ್ತರಣಾ ವಸಾಹತುವಾದಿಗಳು ಹೇಸ್ಟಿಂಗ್ಸ್ನನ್ನು ವಿಜೃಂಭಿಸಲು ಮುಂದಾದರೆ ಮತ್ತೊಂದೆಡೆ ಆತನ ವಿರೋಧಿ ಬಣ ವಸಾಹತುಗಳ ಸಾರ್ವಭೌಮತ್ವದ ಹಕ್ಕನ್ನು ಎತ್ತಿಹಿಡಿಯಲು ಮುಂದಾಗುತ್ತದೆ. ದೀರ್ಘಕಾಲ ನಡೆದ ಈ ಗುದ್ದಾಟದಲ್ಲಿ ವಾರನ್ ಹೇಸ್ಟಿಂಗ್ಸ್ ತನ್ನನ್ನು ಬಚಾವು ಮಾಡಿಕೊಳ್ಳಲು ವ್ಯಯ ಮಾಡಿದ ಹಣದಿಂದ ದಿವಾಳಿತನ ತಲಪುವಂತಾಗುತ್ತಾನೆ. ಒಮ್ಮೆಯಂತೂ ತಾನು ಅನುಭವಿಸಿದ ಮಾನಸಿಕ ಮತ್ತು ಆರ್ಥಿಕ ಚಿತ್ರಹಿಂಸೆಗಿಂತಲೂ ತಾನು ತಪ್ಪಿತಸ್ಥ ಎಂದು ಒಪ್ಪಿಕೊಂಡಿದ್ದರೆ ಎದುರಿಸಬೇಕಾದ ಶಿಕ್ಷೆ ಎಷ್ಟೋ ಲಘುವಾಗಿರುತ್ತಿತ್ತು ಎಂದು ಅಲವತ್ತುಕೊಳ್ಳುತ್ತಾನೆ. ೧೭೯೫ರ ಏಪ್ರಿಲ್ ೨೪ರಂದು ಕೊನೆಗೂ ಆತನಿಗೆ ಪಾರ್ಲಿಮೆಂಟಿನ ಮೇಲ್ಮನೆಯಲ್ಲಿ (ಹೌಸ್ ಆಫ್ ಲಾರ್ಡ್ಸ್) ಎಲ್ಲ ಆರೋಪಗಳಿಂದ ಮುಕ್ತಿ ದೊರಕುತ್ತದೆ. ಆತನ ಸೇವೆಯನ್ನು ಮೆಚ್ಚಿದ ಈಸ್ಟ್ ಇಂಡಿಯ ಕಂಪೆನಿ ಹೇಸ್ಟಿಂಗ್ಸ್ ಇಂಗ್ಲೆಂಡಿಗೆ ಮರಳಿದ ದಿನದಿಂದ ೪೦೦೦ ಪೌಂಡ್ಗಳ ವರ್ಷಾಶನವನ್ನು ನೀಡುವ ಮೂಲಕ ಆತನಿಗಾದ ಆರ್ಥಿಕ ಹಾನಿಯನ್ನು ಭರಿಸುತ್ತದೆಯಾದರೂ ಆತ ಖರ್ಚು ಮಾಡಿದ್ದಾನೆನ್ನುವ ೭೦೦೦೦ ಪೌಂಡ್ ವಕೀಲಿ ಖರ್ಚನ್ನು ಭರಿಸಲು ಮುಂದಾಗುವುದಿಲ್ಲ. ಮುಂದಿನ ೨೯ ವರ್ಷಗಳ ಕಾಲ ಈ ವರ್ಷಾಶನವನ್ನು ಪಡೆದ ವಾರನ್ ಹೇಸ್ಟಿಂಗ್ಸ್ಗೆ ದೀರ್ಘ ಕಾಲ ಕಾಡಿದ ನಂದಕುಮಾರನ ಪ್ರೇತಾತ್ಮ ಕೊನೆಗೂ ಮುಕ್ತಿ ನೀಡಿತು.
ಸರ್ ಎಲಿಜಾ ಇಂಪೆಯ ಹಣೆಬರಹವೇನೂ ಬೇರೆಯದಾಗಿರಲಿಲ್ಲ. ಮಹಾರಾಜ ನಂದಕುಮಾರನ ಮರಣದಂಡನೆ ಪ್ರಕರಣದಿಂದ ಎದ್ದ ಬಿರುಗಾಳಿಯಿಂದ ಆಘಾತಗೊಂಡ ಇಂಗ್ಲೆಂಡ್ ೧೭೮೩ರಲ್ಲಿ ಆತನನ್ನು ಹಿಂದಕ್ಕೆ ಕರೆಯಿಸಿಕೊಳ್ಳುತ್ತದೆ. ೧೭೮೭ರಲ್ಲಿ ಹೇಸ್ಟಿಂಗ್ಸ್ ಮೇಲಿನ ಮಹಾಭಿಯೋಗದಲ್ಲಿ ಈತನನ್ನೂ ಎಳೆದು ತರಲಾಯಿತು. ಆದರೆ ಅದೃಷ್ಟವಶಾತ್ ಈತನ ಮೇಲಿನ ಮಹಾಭಿಯೋಗವನ್ನು ೧೭೮೮ರಲ್ಲಿ ಕೈಬಿಡಲಾಯಿತು. ನಂದಕುಮಾರನ ವಿಚಾರಣೆ ನಡೆಸುವ ಸಮಯದಲ್ಲಿ ೪೩ ವರ್ಷ ವಯಸ್ಸಿನ ಎಲಿಜಾ ಇಂಪೆ ಮಿಕ್ಕೆಲ್ಲ ನ್ಯಾಯಾಧೀಶರಿಗಿಂತ ಹಿರಿಯನಾಗಿದ್ದು ಭಾರತದಲ್ಲಿ ಸುಮಾರು ೯ ವರ್ಷಗಳವರೆಗೆ ಸರ್ವೋಚ್ಚ ನ್ಯಾಯಾಧೀಶನಾಗಿ ಸೇವೆ ಸಲ್ಲಿಸಿರುತ್ತಾನೆ. ಈ ಅವಧಿಯಲ್ಲಿ ಆತನ ಮೇಲೆ ಹೊರಿಸಲಾದ ಆರೋಪಗಳಿಗೆ ಉತ್ತರ ನೀಡಲು ಆತ ಇಂಗ್ಲೆಂಡಿಗೆ ಹಿಂತಿರುಗಬೇಕಾಯಿತು. ಆತನನ್ನು ಮಹಾಭಿಯೋಗಕ್ಕೊಳಪಡಿಸುವ ನಿರ್ಣಯವನ್ನು ಹೌಸ್ ಆಫ್ ಕಾಮನ್ಸ್ ತಿರಸ್ಕರಿಸುತ್ತದೆ. ೧೮೦೯ರಲ್ಲಿ ಮರಣಹೊಂದಿದ. ಪಾರ್ಲಿಮೆಂಟಿನಿಂದ ತನ್ನ ಮೇಲೆ ಹೊರೆಸಲಾದ ಆರೋಪಗಳಿಂದ ಆತ ಬಿಡುಗಡೆಯನ್ನು ಪಡೆದರೂ ಆ ಪೆಡಂಭೂತ ಆತನನ್ನು ಗೋರಿಯವರೆಗೆ ಕಾಡುವುದನ್ನು ಬಿಡಲಿಲ್ಲ. ಇವರಿಬ್ಬರ ಮಹಾಭಿಯೋಗದಲ್ಲಿ ಪ್ರಸ್ತುತಪಡಿಸಿದ ಆರೋಪ, ದಾಖಲೆ, ಉತ್ತರ-ಪ್ರತ್ಯುತ್ತರಗಳ ಹಸ್ತಪ್ರತಿಗಳನ್ನು ಐವತ್ತೆಂಟು ಸಂಪುಟಗಳಲ್ಲಿ ಸಂಗ್ರಹಿಸಿಡಲಾಗಿದೆ.
(ಮುಗಿಯಿತು)