ಅಪ್ಪಾ ಮಹರಾಯ, ನಿನ್ನ ದಮ್ಮಯ್ಯ. ನನ್ನನ್ನು ಬಿಟ್ಟುಬಿಡು. ನಿನಗೆಷ್ಟು ಹೊನ್ನು ಬೇಕಾದರೂ ಕೊಡುತ್ತೇನೆ. ದಯವಿಟ್ಟು ಜೀವಸಹಿತ ಅರಮನೆಗೆ ಹೋಗಲು ಬಿಡು. ಇದೋ ಕೈ ಮುಗಿಯುತ್ತೇನೆ. ನನ್ನ ಜುಟ್ಟನ್ನು ಬಿಡು. ಹೇಗಾದರೂ ಬದುಕಿಕೊಳ್ಳುತ್ತೇನೆ. ಒಮ್ಮೆ ಇಲ್ಲಿಂದ ಪಾರಾಗಲು ಅವಕಾಶ ಕೊಡು ಕೈ ಮುಗಿಯುವುದೇನು, ಅವನ ಕಾಲಿಗೆ ಬೀಳಲೂ ಸಿದ್ಧನಿದ್ದೆ. ಪ್ರಾಣ ಉಳಿಸಿಕೊಳ್ಳಲು ಯಾರ ಕಾಲು ಹಿಡಿದರೇನು? ಬದುಕುವುದು ಮುಖ್ಯ ಅಲ್ಲವೆ?
ಏನು ಮಾಡಲಿ?
ಈಸಾರಥಿಯಂತೂ ರಥ ನಿಲ್ಲಿಸುವುದಿಲ್ಲ, ಹಿಂದೆ ತಿರುಗಿಸುವುದೂ ಇಲ್ಲ. ಮುಂದೆ ಮುಂದೆ ಹೋದಂತೆ ನಾನು ಸಾಯುವ ಗಳಿಗೆ ಹತ್ತಿರವಾದಂತೆ ಭಾಸವಾಗುತ್ತಿತ್ತು. ನನ್ನ ಅರಮನೆ, ತಂದೆ ತಾಯಿ, ಸಖೀಗಡಣ ಎಲ್ಲ ನೆನಪಿಗೆ ಬಂತು. ಅವರನ್ನೆಲ್ಲ ಬಿಟ್ಟು ಹೀಗೆ ಈ ಸೈನಿಕರ ಕೈಯಲ್ಲಿ ಸಾಯುವ ಮನಸ್ಸು ನನಗಿರಲಿಲ್ಲ. ಇದಕ್ಕೆ ಮೊದಲು ನಾನೊಬ್ಬ ಮಹಾವೀರ ಎಂದುಕೊಂಡಿದ್ದ ಭ್ರಮೆಯೆಲ್ಲ ಸರಿದು, ನಾನು ಎಷ್ಟು ದುರ್ಬಲ ಎಂಬ ಅರಿವು ಹೊಸದಾಗಿ ಹುಟ್ಟಿಕೊಂಡಿತು. ಯುದ್ಧಕ್ಕೆಂದು ಹೊರಡುವ ಮೊದಲು ಗೆದ್ದು ಬರುತ್ತೇನೆ ಎಂದು ಹೇಳಿದ್ದುಂಟು. ಅದೆಂತಹ ಮೂರ್ಖತನ ಎಂದು ಈಗ ಅರ್ಥವಾಗತೊಡಗಿತು. ಇಲ್ಲಿಂದ ಪಾರಾಗಿ ಬದುಕುವುದು ಎಲ್ಲಕ್ಕಿಂತ ಮುಖ್ಯವೆಂದು ತೋರಿತು. ಆದರೆ ಈ ಬೃಹನ್ನಳೆ ನನ್ನ ಮಾತು ಕೇಳುತ್ತಿಲ್ಲವಲ್ಲ. ಅವನಿಗೆ ಸಾಯುವ ಭಯವೂ ಇಲ್ಲವೆ? ಅಥವಾ ಇವನೂ ಶತ್ರುಗಳ ಕಡೆಯವನೊ? ನನ್ನನ್ನು ಅವರ ಕೈಗೊಪ್ಪಿಸಿದರೆ ಇವನಿಗೇನಾದರೂ ಲಾಭವಿದ್ದೀತೆ?
ಅವನು ಹೇಗಾದರೂ ಹಾಳಾಗಲಿ. ನಾನು ಪಾರಾಗುವುದು ಹೇಗೆ? ಸಮೀಪಿಸುತ್ತಿದ್ದ ಆ ಮಹಾ ಸೈನ್ಯವನ್ನು ಮತ್ತೊಮ್ಮೆ ನೋಡಿದೆ. ಇಲ್ಲ, ಇವರ ನಡುವೆ ಹೋದರೆ ನನ್ನ ಕಥೆ ಮುಗಿಯಿತು. ಬೃಹನ್ನಳೆಯಾದರೋ ಅವರ ನಡುವಿಗೇ ರಥವನ್ನು ನುಗ್ಗಿಸುತ್ತಿದ್ದಾನೆ. ಅವನ ಗಮನ ಆ ಕಡೆಗೇ ಇದೆ. ನಾನು ಏನು ಮಾಡಿದರೂ ಅವನಿಗೆ ಕೂಡಲೇ ತಿಳಿಯಲಾರದು. ಈಗ ರಥದಿಂದ ಕೆಳಗೆ ಹಾರಿ ಅರಮನೆಯತ್ತ ಓಡಿದರೇನು? ಸಾರಥಿಗೆ ಗೊತ್ತಾಗಿ ರಥ ನಿಲ್ಲಿಸುವ ವೇಳೆಗೆ ನಾನು ಹರದಾರಿ ದೂರಕ್ಕೆ ಓಡಿ ಆಗಿರುತ್ತದೆ. ಈ ಯೋಚನೆ ತಲೆಗೆ ಬಂದದ್ದೇ ತಡ, ನಾನು ವಿಳಂಬಿಸಲಿಲ್ಲ. ಮೆಲ್ಲನೆ ರಥದ ಹಿಂಬದಿಗೆ ಬಂದು, ಕೆಳಗೆ ಹಾರಿ, ಒಂದೇ ಉಸಿರಿನಲ್ಲಿ ಅರಮನೆಯತ್ತ ಧಾವಿಸಿದೆ.
ಒಂದು ನೂರು ಹೆಜ್ಜೆ ಓಡಿರಬಹುದು, ಗಟ್ಟಿಯಾದ ಕೈಯೊಂದು ನನ್ನ ಜುಟ್ಟನ್ನು ಹಿಡಿಯಿತು. ತಿರುಗಿ ನೋಡುತ್ತೇನೆ, ನಮ್ಮ ರಥ ಅಷ್ಟು ದೂರದಲ್ಲಿ ನಿಂತಿದೆ. ಬೃಹನ್ನಳೆ ನನ್ನನ್ನು ಹಿಡಿದು ನಿಲ್ಲಿಸಿದ್ದಾನೆ. ಶತ್ರು ಸೈನಿಕರು ಗಹಗಹಿಸುವುದು ಇಲ್ಲಿಗೂ ಕೇಳಿಸುತ್ತಿದೆ.
ಎಲಾ ಪಾಪಿ, ಯುದ್ಧ ಮಾಡುತ್ತೇನೆ, ಅವರನ್ನೆಲ್ಲಾ ಮಣ್ಣು ಮುಕ್ಕಿಸುತ್ತೇನೆ ಎಂದು ಜಂಭ ಕೊಚ್ಚಿಕೊಂಡು ಈಗ ಹೆದರಿ ಓಡುತ್ತೀಯ? ನಿಲ್ಲು. ಬಾ ರಥ ಹತ್ತು. ಯುದ್ಧ ಮಾಡು.
ಅವನ ಧ್ವನಿ ಬದಲಾಗಿತ್ತು. ಕಣ್ಣುಗಳು ಹೊಳೆಯುತ್ತಿದ್ದವು.
ಅಪ್ಪಾ ಮಹರಾಯ, ನಿನ್ನ ದಮ್ಮಯ್ಯ. ನನ್ನನ್ನು ಬಿಟ್ಟುಬಿಡು. ನಿನಗೆಷ್ಟು ಹೊನ್ನು ಬೇಕಾದರೂ ಕೊಡುತ್ತೇನೆ. ದಯವಿಟ್ಟು ಜೀವಸಹಿತ ಅರಮನೆಗೆ ಹೋಗಲು ಬಿಡು. ಇದೋ ಕೈ ಮುಗಿಯುತ್ತೇನೆ. ನನ್ನ ಜುಟ್ಟನ್ನು ಬಿಡು. ಹೇಗಾದರೂ ಬದುಕಿಕೊಳ್ಳುತ್ತೇನೆ. ಒಮ್ಮೆ ಇಲ್ಲಿಂದ ಪಾರಾಗಲು ಅವಕಾಶ ಕೊಡು. ಕೈ ಮುಗಿಯುವುದೇನು, ಅವನ ಕಾಲಿಗೆ ಬೀಳಲೂ ಸಿದ್ಧನಿದ್ದೆ. ಪ್ರಾಣ ಉಳಿಸಿಕೊಳ್ಳಲು ಯಾರ ಕಾಲು ಹಿಡಿದರೇನು? ಬದುಕುವುದು ಮುಖ್ಯ ಅಲ್ಲವೆ?
ನನ್ನ ಗೋಗರೆತಕ್ಕೆ ಅವನು ಕಿವುಡಾಗಿದ್ದ.
ಕುಮಾರ, ಏನಿದು ನಿನ್ನ ಅವಸ್ಥೆ? ನೀನೊಬ್ಬ ಕ್ಷತ್ರಿಯ. ಯುದ್ಧದ ಶಿಕ್ಷಣ ಪಡೆದವನು. ಯುದ್ಧಕ್ಕೆ ಹೆದರುವುದೆ? ನಿಮ್ಮ ಗೋವುಗಳನ್ನು ರಕ್ಷಿಸಿಕೊಳ್ಳುವುದು ನಿನ್ನ ಕರ್ತವ್ಯ. ಒಂದು ವೇಳೆ ಇದರಲ್ಲಿ ಪ್ರಾಣ ಹೋದರೂ ಸಾರ್ಥಕವೆಂದು ತಿಳಿ. ಅವರನ್ನು ಎದುರಿಸು. ಅಲ್ಲಿ ಹೆಮ್ಮಕ್ಕಳ ಮುಂದೆ ಬಹಳ ಮಾತನಾಡುತ್ತಿದ್ದೆಯಲ್ಲ? ಈಗ ಅವಕಾಶ ಬಂದಿದೆ. ಹೋರಾಟ ಮಾಡು. ಗೆದ್ದರೆ ಕೀರ್ತಿ. ಸತ್ತರೆ ಸ್ವರ್ಗ. ಅದು ಬಿಟ್ಟು ಓಡಿದರೆ ನಾಳೆ ನಿಮ್ಮವರೇ ನಗುವುದಿಲ್ಲವೆ? ಹೇಡಿಯಾಗಬೇಡ. ಯುದ್ಧಕ್ಕೆ ಅಂಜಿದ ಎಂಬ ಅಪಕೀರ್ತಿ ಬಹುಹೀನವಾದುದು. ಬಾ, ರಥವೇರು ಅವನ ಮಾತಿನಲ್ಲಿ ಒತ್ತಾಯ ಅಲ್ಲ, ಆಜ್ಞೆಯೇ ಇತ್ತು. ಆದರೆ ಪ್ರಾಣಭಯದಿಂದ ಕಂಗೆಟ್ಟವನನ್ನು ಯಾವ ಆಜ್ಞೆ ತಾನೇ ಬಂಧಿಸಬಲ್ಲುದು?
ಅಯ್ಯಾ ಬೃಹನ್ನಳೆ, ನೀನು ಹೇಳುವುದೆಲ್ಲ ನಿಜವೇ ಇರಬಹುದು. ಸೈನಿಕರನ್ನು ಉತ್ತೇಜಿಸುವುದಕ್ಕೆ ನಾವೂ ಅದನ್ನು ಹೇಳುತ್ತೇವೆ. ನಮ್ಮ ಆಚರಣೆಗಲ್ಲ. ಸತ್ತರೆ ಸಿಗುವ ಸ್ವರ್ಗಕ್ಕಿಂತ ನಮ್ಮ ಅಂತಃಪುರವೇನು ಕಡಮೆಯಲ್ಲ. ಇದೋ ನನ್ನಿಂದ ಯುದ್ಧವು ಸಾಧ್ಯವೇ ಇಲ್ಲ. ದಯವಿಟ್ಟು ಬಿಟ್ಟುಬಿಡು. ನಿನ್ನ ಮಗನೆಂದು ತಿಳಿ. ಒಂದು ವರ್ಷ ನಮ್ಮಲ್ಲಿ ಅನ್ನವುಂಡ ಕೃತಜ್ಞತೆಯಿಲ್ಲವೆ ನಿನಗೆ? ನಾನು ಕೈಮುಗಿದೆ, ಅಂಗಲಾಚಿದೆ, ಕಣ್ಣೀರಿಟ್ಟೆ. ಅವನು ಒಂದಿನಿತೂ ಕರಗಲಿಲ್ಲ. ನಾನು ಕೊಸರಾಡಿ, ಅವನಿಂದ ಬಿಡಿಸಿಕೊಳ್ಳುವ ಪ್ರಯತ್ನ ಮಾಡಿದೆ. ಅವನದು ಉಕ್ಕಿನ ಹಿಡಿತ. ನನ್ನ ಕೊಸರಾಟ ಹೆಚ್ಚಿತು. ಅವನಿಗೆ ಕೋಪ ಬಂದಿರಬೇಕು. ತನ್ನ ಒರೆಯ ಖಡ್ಗವನ್ನು ಸೆಳೆದು ನನ್ನ ಕೊರಳಿಗಿಟ್ಟ.
ನನ್ನ ಮಾತಿನಂತೆ ಬಂದು ರಥವೇರುತ್ತೀಯೋ ಅಥವಾ ನಿನ್ನ ಕತ್ತು ಕತ್ತರಿಸಬೇಕೋ? ಅವನು ಹಾಗೆ ಮಾಡುವುದರಲ್ಲಿ ಸಂಶಯವಿರಲಿಲ್ಲ. ಇಲ್ಲಿ ಇವನು ಕೊಲ್ಲುವುದಕ್ಕಿಂತ ರಥ ಏರಿದರೆ ಅಷ್ಟು ಹೊತ್ತು ಬದುಕಿ ಉಳಿಯುತ್ತೇನಲ್ಲ ಎಂದುಕೊಂಡು ರಥವೇರುವುದಕ್ಕೆ ಒಪ್ಪಿದೆ. ಆದರೆ ಯುದ್ಧವಂತೂ ನನ್ನಿದ ಸಾಧ್ಯವೇ ಇಲ್ಲ ಎಂದೆ.
ಒಂದು ಕ್ಷಣ ಮೌನವಾದ. ಸರಿ, ನೀನು ಸಾರಥಿಯಾಗು. ನಾನು ಯುದ್ಧ ಮಾಡಿ ಗೋವುಗಳನ್ನು ಬಿಡಿಸುತ್ತೇನೆ ಎಂದ. ಆ ಭಯದಲ್ಲೂ ನನಗೆ ನಗುಬಂತು. ಕ್ಷತ್ರಿಯ ರಾಜಕುಮಾರ ನಾನು. ನನಗೇ ಅಶಕ್ಯವಾದ ಯುದ್ಧವನ್ನು ಅರೆವೆಣ್ಣಾದ ಇವನು ಮಾಡುವುದೆ? ಅದನ್ನು ಆಡುವುದಕ್ಕೆ ಧೈರ್ಯ ಬರಲಿಲ್ಲ. ಅವನ ಕೈಯಲ್ಲಿ ಖಡ್ಗವಿತ್ತಲ್ಲ! ಸರಿ ಎಂದೊಪ್ಪಿದೆ. ಕುದುರೆಗಳ ಕಡಿವಾಣ ಹಿಡಿದೆ.
ಮುಂದಕ್ಕಲ್ಲ, ರಥವನ್ನು ಹಿಂದೆ ತಿರುಗಿಸು ಬೃಹನ್ನಳೆ ರಥಿಕನ ಸ್ಥಾನದಿಂದ ಆದೇಶಿಸಿದ. ನನಗೆ ಅಚ್ಚರಿ, ದಿಗ್ಭ್ರಾಂತಿ ಒಟ್ಟಿಗೇ ಉಂಟಾಯಿತು. ಸಂತೋಷವೂ ಆಯಿತು. ಸದ್ಯ ವೈರಿಗಳ ಬಾಣಕ್ಕೆ ಎದೆಗೊಡುವ ಪ್ರಮೇಯವಿಲ್ಲ ಎಂದುಕೊಂಡೆ. ರಥವನ್ನು ಅವನು ಹೇಳಿದತ್ತ ಓಡಿಸಿದೆ.
ಊರ ಹೊರಗಿನ ಶ್ಮಶಾನದತ್ತ ಬಂದೆವು.
ಅಲ್ಲೊಂದು ಶಮೀವೃಕ್ಷ. ಅದರ ಮೇಲೆ ಒಂದು ಶವ. ಮರವೇರಿ ಅದನ್ನಿಳಿಸು ಎಂದ ಬೃಹನ್ನಳೆ. ನನ್ನ ಪ್ರತಿಭಟನೆ ಒಳಗೇ ಅಡಗಿತು. ಮರವೇರಿ ನೋಡಿದರೆ… ಥಳಥಳ ಹೊಳೆಯುವ ಆಯುಧಗಳು! ಇದಾರ ಆಯುಧಗಳು? ಎಂದು ಕೇಳಿದೆ. ಅದು ಪಾಂಡುಪುತ್ರರದು. ಮೊದಲು ಅವುಗಳನ್ನು ಕೆಳಗಿಳಿಸು ಬೃಹನ್ನಳೆಯೆಂದ. ಅವುಗಳನ್ನು ಕೆಳಗಿಳಿಸಿ ನೋಡುತ್ತೇನೆ, ಬೃಹನ್ನಳೆಯ ಜಾಗದಲ್ಲಿ ತೇಜಸ್ವಿಯೂ, ಆಜಾನುಬಾಹುವೂ ಆದ ಕ್ಷತ್ರಿಯ ವೀರನೊಬ್ಬ ಬೆಳಗುತ್ತಿದ್ದ. ಇದೇನು ಅದ್ಭುತ? ಅವನೆಲ್ಲಿ ಹೋದ?
ನನ್ನ ಬೆರಗನ್ನು ಕಂಡು ಅವನೇ ಎಲ್ಲವನ್ನೂ ಬಿಡಿಸಿ ಹೇಳಿದ.
ಕುಮಾರ, ನಾನು ಬೃಹನ್ನಳೆಯ ರೂಪದಲ್ಲಿದ್ದ ಪಾಂಡವ ಮಧ್ಯಮನಾದ ಅರ್ಜುನ ಶಾಪದಿಂದಾಗಿ ಅರೆವೆಣ್ಣಾಗಿ ನಿಮ್ಮ ಅರಮನೆಯಲ್ಲಿ ಒಂದು ವರ್ಷ ಅಜ್ಞಾತವಾಗಿ ಇದ್ದೆವು. ಕಂಕ, ವಲಲ, ತಂತೀಪಾಲ, ದಾಮಗ್ರಂಥಿ, ಸೈರಂಧ್ರಿ – ಇವರೆಲ್ಲ ಬೇರೆ ಯಾರೂ ಅಲ್ಲ, ಯುಧಿಷ್ಠಿರ, ಭೀಮ, ನಕುಲ, ಸಹದೇವ ಮತ್ತು ದ್ರೌಪದಿಯೇ ವೇಷ ಮರೆಸಿ ಇದ್ದವರು.
ನಾನು ಅವನ ಪಾದಗಳಿಗೆ ನಮಸ್ಕರಿಸಿದೆ.
ಮಹಾನುಭಾವ, ಯಾರ ಹೆಸರನ್ನು ಕೇಳಿದರೆ ಪರಾಕ್ರಮಿಗಳ ಎದೆನಡುಗುವುದೋ ಆ ಪಾರ್ಥನನ್ನು ಇಲ್ಲಿ ಹೀಗೆ ನೋಡುವ ಸಂದರ್ಭ ಒದಗುವುದೆಂದು ಕಲ್ಪನೆಯೂ ಇರಲಿಲ್ಲ ನನಗೆ. ನನ್ನಿಂದಾದ ಅಪರಾಧಗಳನ್ನು ಕ್ಷಮಿಸಬೇಕು ಎಂದು ಬೇಡಿದೆ. ಅವನು ಮುಗುಳ್ನಕ್ಕು ಅಂಜದಿರುವಂತೆ ಹೇಳಿದ.
ಕುಮಾರ, ನಮ್ಮ ಅಜ್ಞಾತವಾಸದ ಅವಧಿ ಪೂರ್ಣವಾಗಿದೆ. ನನ್ನ ಪೂರ್ವರೂಪ ಮರಳಿ ಬಂದಿರುವುದೇ ಇದಕ್ಕೆ ಸಾಕ್ಷಿ. ಇನ್ನು ಯಾವ ಚಿಂತೆಯೂ ಬೇಡ. ಕೌರವರನ್ನು ಹೊಡೆದಟ್ಟಿ ಗೋವುಗಳನ್ನು ಬಿಡಿಸುವ ಕೆಲಸ ನಾನು ಮಾಡುತ್ತೇನೆ. ನೀನು ನಿಶ್ಚಿಂತನಾಗು. ನಿನ್ನ ಮೇಲೆ ಕತ್ತಿಯೆತ್ತಿ ಹೆದರಿಸಿದ್ದಕ್ಕೆ ಬೇಸರಿಸಬೇಡ. ನಿನ್ನದೇ ವಯಸ್ಸಿನ ಮಗನಿದ್ದಾನೆ ನನಗೆ. ಅವನಂತೆ ನೀನೂ ಒಬ್ಬ ಧೀರನಾಗಬೇಕು ಎಂಬುದಕ್ಕಾಗಿ ಹಾಗೆ ಮಾಡಿದೆ. ನಿನಗೆ ಯುದ್ಧಾನುಭವವಿಲ್ಲ. ತಾನು ಮಹಾವೀರ ಎಂಬ ಕಲ್ಪನೆಯಲ್ಲಿ ವಸ್ತುಸ್ಥಿತಿಯನ್ನು ಮರೆತಿದ್ದೆ ನೀನು. ಇದ್ದಕ್ಕಿದ್ದಂತೆ ವಿರೋಧಿಗಳ ಪ್ರಬಲ ಸೈನ್ಯವನ್ನು ಕಂಡಾಗ, ನಿನ್ನ ಭ್ರಮೆಯ ಪೊರೆ ಹರಿಯಿತು. ಈಗ ನೀನು ನಿಚ್ಚಳವಾಗಿ ಜಗತ್ತನ್ನು ನೋಡಬಲ್ಲೆ. ಹೇಳು, ಈಗಲೂ ಭಯವಾಗುತ್ತಿದೆಯೆ?
ಭಯ! ಅದೆಲ್ಲಿ ಮಾಯವಾಯಿತು? ಎದುರಿದ್ದವನು ಅರ್ಜುನ ಎಂಬ ಸತ್ಯ ಗೋಚರವಾಗುತ್ತಿದ್ದಂತೆ ನನ್ನ ಭೀತಿಯೆಲ್ಲ ಕಳೆದು, ನನ್ನೊಳಗೆ ಹೊಸ ಉತ್ಸಾಹವು ಪುಟಿಯಲಾರಂಭಿಸಿತ್ತು. ಅಥವಾ ಮರಣದ ಸಮೀಪ ಹೋಗಿ ಬಂದುದರಿಂದ ಹಾಗಾಯಿತೊ? ಏನಿದ್ದರೂ ಭ್ರಮೆಗಳಿಲ್ಲದ ಯಥಾರ್ಥ ಪ್ರಪಂಚದಲ್ಲಿ ನಾನು ನಿಂತಿದ್ದೆ. ಈಗ ನನಗೆ ಸಾವಿನ ಭೀತಿ ಇರಲಿಲ್ಲ. ಸಾವಿಗೆ ಹೆದರಿದರೆ ಬದುಕಿಗೂ ನೆಮ್ಮದಿಯಿಲ್ಲ. ಮೃತ್ಯುಭಯದಿಂದ ಮುಕ್ತನಾದವನು ಮಾತ್ರ ನೆಮ್ಮದಿಯಾಗಿ ಬದುಕಬಲ್ಲ. ನನಗದರ ಅನುಭವವಾಗುತ್ತಿತ್ತು. ಸತ್ತರೇನು? ಅದಕ್ಕೂ ಮೌಲ್ಯ ಉಂಟು ಅನಿಸುತ್ತಿತ್ತು.
ಈಗ ಅರ್ಜುನ ತನ್ನ ಗಾಂಡೀವವನ್ನು ಎದೆಯೇರಿಸಿ ಸಜ್ಜಾಗಿದ್ದ. ನಾನು ಕುದುರೆಗಳ ಕಡಿವಾಣ ಹಿಡಿದೆ. ಶ್ಮಶಾನದಿಂದ ಮತ್ತೆ ಯುದ್ಧ ಭೂಮಿಯತ್ತ ರಥ ಓಡಿತು. ಶತ್ರು ಸೇನೆ ಗೋಚರಿಸುತ್ತಿದ್ದಂತೆ ಅರ್ಜುನ ತನ್ನ ಶಂಖವನ್ನು ಮೊಳಗಿಸಿದ. ಆ ಬಳಿಕ ಗಾಂಡೀವದ ಸಿಂಜಿನಿಯನ್ನು ಮಿಡಿದು ಠಂಕಾರವೆಬ್ಬಿಸಿದ. ಅಲ್ಲಿಯವರೆಗೆ ಗಜಬಜಿಸುತ್ತಿದ್ದ ಕೌರವ ಸೇನೆ ಈ ಸಿಡಿಲಿನಂತಹ ಧ್ವನಿಯನ್ನು ಕೇಳುತ್ತಿದ್ದಂತೆ ಸ್ತಬ್ಧವಾಯಿತು. ನಮ್ಮ ರಥದತ್ತ ದಿಟ್ಟಿನೆಟ್ಟರು.
ಕುಮಾರಾ, ಸ್ವಲ್ಪ ನಿಧಾನಿಸು. ಅಲ್ಲಿ ಪಾರ್ಶ್ವಕ್ಕೆ ನೋಡು. ಸಣ್ಣ ದಳವೊಂದು ಗೋವುಗಳ ಮಂದೆಯನ್ನು ಅಟ್ಟಿಕೊಂಡು ಧಾವಿಸುವುದು ಕಾಣುತ್ತಿದೆಯಲ್ಲ, ಅದು ಇವರ ತಂತ್ರ. ನಮ್ಮನ್ನು ತಡೆದು ಹಸುಗಳನ್ನು ಮರಳಿಸದಂತೆ ಮಾಡುವಂತಿದೆ. ನಾವು ಮೊದಲು ಹಸುಗಳನ್ನು ಬಿಡಿಸಿಕೊಳ್ಳಬೇಕು. ಈ ಸೇನೆಯನ್ನು ಬಳಸಿ ಆ ಕಡೆ ರಥ ನಡೆಸು ಎಂದ. ನಾನು ಹಾಗೇ ಮಾಡಿದೆ. ನಾವು ದೂರದಿಂದ ಸೇನೆಯನ್ನು ಸುತ್ತಿಕೊಂಡು ಹಸುಗಳ ಮಂದೆಯತ್ತ ಸಾಗಿದೆವು. ಇದನ್ನು ನಿರೀಕ್ಷಿಸದ ಕೌರವರು ಬೆರಗಾದರು.
ದುರ್ಯೋಧನ ಗೋವುಗಳನ್ನು ಹಸ್ತಿನಾವತಿಗೆ ಒಯ್ಯುತ್ತಿದ್ದವನು ನಮ್ಮ ರಥ ಚಕ್ರಗಳ ಚೀತ್ಕಾರ ಕೇಳಿ ನಿಂತ. ಅವನ ಸಣ್ಣ ಸೇನೆಯೂ ನಮ್ಮ ರಥವನ್ನು ಆಕ್ರಮಿಸಿತು. ಈಗ ಅರ್ಜುನ ನಿಜವಾದ ಧನುರ್ವಿದ್ಯಾ ಪ್ರದರ್ಶನ ಮಾಡುವವನಂತೆ ಬಾಣಪ್ರಯೋಗಕ್ಕೆ ತೊಡಗಿದ. ಅವನ ಯಾವ ಬಾಣವೂ ಹುಸಿಯಾಗಲಿಲ್ಲ. ಕ್ಷಣ ಮಾತ್ರದಲ್ಲಿ ಅವನ ರಥ ಹುಡಿಯಾಯಿತು. ಕೈದಯಗಳು ನೆಲಕ್ಕೆ ಬಿದ್ದವು. ಯೋಧರು ದಿಕ್ಕಾಪಾಲಾಗಿ ಚದರಿದರು. ಹಸುಗಳ ಮಂದೆಯನ್ನು ಹಿಂದಿರುಗಿ ನಗರದತ್ತ ಓಡಿಸಿ, ನಾವು ಕುರುಬಲವನ್ನು ಆಕ್ರಮಿಸಿದೆವು. ಅರ್ಜುನನ ಯುದ್ಧ ವೈಖರಿಗೆ ನಾನು ದಂಗಾದೆ. ನನ್ನ ಬೆಂಗಡೆಯಿಂದ ಅವನ ಧನುಸ್ಸಿನಿಂದ ಮುಕ್ತವಾದ ಬಾಣಗಳು ಸುಂಯ್ ಸುಂಯ್ಯೆಂದು ಹಾರುತ್ತಿದ್ದವು. ಎದುರಿನಲ್ಲಿದ್ದ ಯೋಧರು ಸಾಲು ಸಾಲಾಗಿ ನೆಲಕ್ಕೊರಗುತ್ತಿದ್ದರು. ಎದುರಿದ್ದ ಬಿಲ್ಲುಗಾರ ಯೋಚಿಸುವ ಮೊದಲೇ ಅರ್ಜುನನ ಬಾಣಗಳು ಅವನ ಮೈಯಲ್ಲಿ ನಾಟಿಕೊಳ್ಳುತ್ತಿದ್ದವು. ಆಯಕಟ್ಟಿನ ಜಾಗ ನೋಡಿ ಹೊಡೆಯುತ್ತಿದ್ದ ಅರ್ಜುನನ ಗುರಿ ತಪ್ಪುತ್ತಲೇ ಇರಲಿಲ್ಲ. ನಾನು ಅಂತಃಪುರದಲ್ಲಿ ಯುದ್ಧದ ಕುರಿತು ಏನನ್ನೆಲ್ಲ ಕಲ್ಪಿಸಿಕೊಂಡು ಹೇಳುತ್ತಿದ್ದೆನೋ ಅದಷ್ಟನ್ನೂ ಅಭಿನಯಿಸಿ ತೋರಿಸುವಂತೆ ಇತ್ತು ಅವನ ಯುದ್ಧವೈಖರಿ.
ಕೌರವರ ಪಕ್ಷದಲ್ಲಿದ್ದವರು ಸಾಮಾನ್ಯರಲ್ಲ. ಒಬ್ಬೊಬ್ಬನೂ ಅಸದೃಶ ವಿಕ್ರಮಿಯೇ. ಅಚಾರ್ಯ ಭೀಷ್ಮರು, ಗುರು ದ್ರೋಣರು, ಕರ್ಣ, ಆಶ್ವತ್ಥಾಮ ಇವರೆಲ್ಲ ಅರ್ಜುನನನ್ನು ಎದುರಿಸಲಾರದೇ ಹೋದರು. ಪ್ರತಿಯೊಬ್ಬರನ್ನು ಗುರುತಿಸಿ ಮಾತನಾಡಿಸಿ, ಮತ್ತೆ ಬಾಣ ಹೊಡೆಯುತ್ತಿದ್ದ ಅರ್ಜುನ. ಅವನು ಬಂದಿದ್ದಾನೆ ಎಂಬುದನ್ನು ತಿಳಿದೇ ಶತ್ರುಸೈನಿಕರಲ್ಲಿ ಅರ್ಧಕ್ಕರ್ಧ ಹತಪ್ರಭರಾಗಿದ್ದರು. ಮುಂಚೂಣಿಯ ನಾಯಕರೆಲ್ಲ ಸೋತು ತಲೆತಗ್ಗಿಸಿದ ಬಳಿಕ ಅವರೊಂದು ಹೊಸ ಯೋಜನೆ ರೂಪಿಸಿದರು. ಕೊಂಚ ಹಿಂದೆ ಸರಿದ ಅವರೆಲ್ಲ ಒಂದುಗೂಡಿ ಸತತವಾಗಿ ಬಾಣಪ್ರಯೋಗ ಮಾಡುತ್ತ ನಮ್ಮ ರಥವನ್ನು ಸುತ್ತುವರಿದು ಆಕ್ರಮಿಸಿದರು. ನನಗೋ ಈಗ ಅರ್ಜುನನೇನು ಮಾಡುತ್ತಾನೆ ಎಂಬ ಕುತೂಹಲ. ಅಷ್ಟು ಮಂದಿ ವಿಕ್ರಮಿಗಳನ್ನು ಒಮ್ಮೆಲೇ ಎದುರಿಸುವುದು ಎಂತಹವನಿಗೂ ಕಷ್ಟ. ಅರ್ಜುನನಲ್ಲಿ ಆತಂಕವೇ ಇಲ್ಲ. ಏನು ಮಾಡಿದನೋ, ಯಾವ ಬಾಣವನ್ನು ಬಿಟ್ಟನೋ ತಿಳಿಯಲೇ ಇಲ್ಲ. ಅಷ್ಟು ಮಂದಿಯೂ ನಿಶ್ಚೇಷ್ಟಿತರಾಗಿ ನೆಲಕ್ಕೊರಗಿದರು. ಸಮೂಹಕ್ಕೆ ಸಮೂಹವೇ ಸಮ್ಮೋಹನಕ್ಕೆ ಒಳಗಾದಂತೆ!
ಬಿಟ್ಟ ಕಣ್ಣು ಬಿಟ್ಟಂತೆ ದಂಗುಬಡಿದು ಕುಳಿತಿದ್ದ ನನ್ನನ್ನು ಅರ್ಜುನ ಎಚ್ಚರಿಸಿದ. ಕುಮಾರ, ಹೋಗು. ಮಲಗಿದ ಅವರ ದುಕೂಲಗಳನ್ನು, ಆಭರಣ, ಕಿರೀಟಗಳನ್ನು ಸಂಗ್ರಹಿಸಿ ತಾ. ಉತ್ತರೆಗೆ ಉಡುಗೊರೆಯಾಗಿ ಕೊಡೋಣ ಎಂದ. ನಾನು ರಥವಿಳಿದು ಅವುಗಳನ್ನೆಲ್ಲ ಸಂಗ್ರಹಿಸಿಕೊಟ್ಟೆ.
ನಾವು ಗೆಲುವಿನ ಹುಮ್ಮಸ್ಸಿನಲ್ಲಿ ನಗರಕ್ಕೆ ಮರಳಲು ಸಜ್ಜಾದೆವು. ಅರ್ಜುನ ರಥದ ಸ್ಥಾನಕ್ಕೆ ಬಂದ. ಹಿಂದಿನ ಬೃಹನ್ನಳೆಯ ರೂಪದಲ್ಲಿ ಸಾರಥಿಯಾದ. ನಾವು ಯಾರೆಂಬ ನಿಜವನ್ನು ನೀನಾಗಿ ಯಾರಲ್ಲೂ ಬಾಯಿ ಬಿಡಕೂಡದು. ಸಂದರ್ಭ ಒದಗಿದಾಗ ನಾವೇ ಬಹಿರಂಗ ಪಡಿಸುತ್ತೇವೆ. ಈ ಯುದ್ಧವನ್ನು ನೀನೇ ಗೆದ್ದವನೆಂದು ಜನ ತಿಳಿದುಕೊಳ್ಳಲಿ ಎಂದ. ನಾನು ಬರಿದೇ ತಲೆಯಾಡಿಸಿದೆ. ನನ್ನ ಅರ್ಹತೆಗೆ ಮೀರಿದ ಕೀರ್ತಿಯನ್ನು ಅರ್ಜುನ ನನ್ನ ತಲೆಯ ಮೇಲೆ ಹೊರಿಸಿದ. ಇದನ್ನು ಉಳಿಸಿಕೊಳ್ಳುವುದಕ್ಕೆ ನನಗಿದ್ದ ದಾರಿ ಒಂದೇ. ನಾನು ಬದಲಾಗಬೇಕು. ಜಂಭ ಕೊಚ್ಚುತ್ತಿದ್ದ ನಾನು ನಿಜವಾದ ಧೀರನಾಗಿ ಮೆರೆಯಬೇಕು. ಜೀವನದಲ್ಲಿ ಬಹು ಅಮೂಲ್ಯವಾದ ಪಾಠವನ್ನು ಅರ್ಜುನ ನನಗೆ ಕಲಿಸಿಕೊಟ್ಟ; ಗುರುವಾದ.
******
(ಸಶೇಷ)