ಕಾಲದಿಂದ ಕಾಲಕ್ಕೆ ಋತುಗಳು ಬದಲಾಗುವುದು ಎಷ್ಟು ಸಹಜವೋ, ಸೂರ್ಯೋದಯ ಚಂದ್ರೋದಯಗಳು ಹೇಗೆ ತಮ್ಮ ಪಾಡಿಗೆ ತಾವು ಘಟಿಸುತ್ತವೋ ಅದೇ ರೀತಿಯಲ್ಲಿ ಮನೆಯಲ್ಲಿ ಅಮ್ಮ ಇರುತ್ತಾಳೆ, ವಿಶೇಷವಾದ ಏನನ್ನೂ ಬಯಸದೇ. ಅವಳು ಕಂಗೆಟ್ಟಾಗ ಅವಳನ್ನು ಆಧರಿಸಿದ ನಮ್ಮೆಲ್ಲರ ಬದುಕೂ ಕಂಗೆಡುತ್ತದೆ. ಹಾಗಾಗಿ ಅಮ್ಮ ನಮ್ಮೊಡನಿದ್ದಾಗ ಅವಳಿಗೆ ಮನಸ್ಸಿಗೆ ಘಾಸಿಯಾಗದಂತೆ, ಒತ್ತಡಗಳು ಅವಳನ್ನು ಕಾಡದಂತೆ ನೋಡಿಕೊಳ್ಳಿ.
ಐಸಿಯುನಿಂದ ಹೊರಗೆ ಕಾಯುವ ಒತ್ತಡವನ್ನು ಸಿನಿಮಾಗಳಲ್ಲಿ ನೋಡಿ ಅಷ್ಟೇ ಗೊತ್ತು. ಹೀರೋ ಅಥವಾ ಹೀರೋಯಿನ್ ಶತಪಥ ಸುತ್ತುತ್ತಿರುತ್ತಾರೆ. ಒದ್ದಾಡುತ್ತಿರುತ್ತಾರೆ. ನನ್ನಿಬ್ಬರು ಮಕ್ಕಳು ಜನಿಸಿದಾಗ ನಾನು ಐಸಿಯುನಲ್ಲಿದ್ದೆನೇ ಹೊರತು, ಹೊರಗೆ ಕಾಯುವ ಸಂಕಟ ನನಗೆ ಅರಿವಿಲ್ಲವಲ್ಲ! ಅಷ್ಟಕ್ಕೂ ಆ ಸಂದರ್ಭದಲ್ಲಿ ಹೊರಗೆ ಕಾಯುವವರಿಗೂ ಮಡಿಲಿಗೆ ಬಂದ ಮಗುವಿನ ಕಾಳಜಿ ಅಮ್ಮನನ್ನೇ ತಕ್ಕಮಟ್ಟಿಗೆ ಮರೆಸಿರುತ್ತದೆ. ಆದರೆ ಈಗ ಈ ಕ್ಷಣದವರೆಗೂ ಚೆನ್ನಾಗಿದ್ದು ಓಡಾಡಿಕೊಂಡಿದ್ದವರು ಇದ್ದಕ್ಕಿದ್ದ ಹಾಗೆ ಆರೋಗ್ಯ ತಪ್ಪಿ ತೀವ್ರ ನಿಗಾ ಘಟಕ ಸೇರಿದಾಗ ಒಂದು ಕ್ಷಣ ಬದುಕಿಗೇ ಬ್ರೇಕ್ ಬಿದ್ದ ಅನುಭವ. ಅಲ್ಲಿಯವರೆಗೆ ನಿರಾಯಾಸವಾಗಿ ನಡೆದು ಹೋಗುತ್ತಿದ್ದ ಜೀವನ ಹಳಿತಪ್ಪಿ ಅತ್ತಿತ್ತ ಓಲಾಡಿದಂತೆ.
ನಾನು ಎರಡು ದಿನ ಜ್ವರದಲ್ಲಿ ಮಲಗಿದ್ದಾಗ ಮನೆಯ ಸರ್ವ ಜವಾಬ್ದಾರಿಯನ್ನೂ ಹೊತ್ತು ನಿರ್ವಹಿಸಿದ ಅಮ್ಮ ಮೂರನೇ ದಿನಕ್ಕೆ ಕೊಂಚ ನೆಗಡಿ, ಶೀತವೆಂದು ಕಷಾಯ ಕುಡಿದು ರಾತ್ರಿಯ ಹೊತ್ತಿಗೆ ಉಸಿರಿಗೆ ಒದ್ದಾಡಲಾರಂಭಿಸಿದಾಗ ನಿಜಕ್ಕೂ ಕೊರೋನಾ ಭೀತಿ ನಮ್ಮನ್ನು ಆವರಿಸಿತ್ತು. ೬೦ಕ್ಕೆ ಕುಸಿದ ಆಮ್ಲಜನಕ ಮಟ್ಟ ನಮಗಷ್ಟೇ ಅಲ್ಲ, ಎಲ್ಲ ಸಂದರ್ಭವನ್ನೂ ಧೈರ್ಯದಿಂದ ಎದುರಿಸಿದ ಅಮ್ಮನನ್ನೂ ಕಂಗಾಲಾಗಿಸಿತ್ತು. ದಡದಡನೆ ಕಾರ್ಯ ನಿರ್ವಹಿಸಿದ ಆಸ್ಪತ್ರೆ ಸಿಬ್ಬಂದಿ ಕೋವಿಡ್ ನೆಗೆಟಿವ್ ರಿಪೋರ್ಟ್ ಬಂದಾಗ ನಿರಾಳವಾಗಿದ್ದರು. ಅಂದರೂ ಶ್ವಾಸಕೋಶದ ಸೋಂಕು ಅಮ್ಮನನ್ನು ಐಸಿಯುಗೆ ತಲುಪಿಸಿತ್ತು. ಅಮ್ಮ ಒಳಗೆ, ನಾವು ಹೊರಗೆ. ಒಳಗೆ ಅಮ್ಮ ಒಂಟಿ, ಸುತ್ತಲೂ ಹಲವು ಬಗೆಯ ಸಮಸ್ಯೆಗಳಿಂದ ಒದ್ದಾಡುವವರ ನಡುವೆ. ಹೊರಗೆ ಕಳವಳದಿಂದ ಕಂಗೆಟ್ಟ ಹತ್ತಾರು ಮಂದಿಯ ನಡುವೆ ನಾನು, ಸಂಗಾತಿ ಮತ್ತು ಅಕ್ಕಂದಿರು. ನಮ್ಮ ಸುತ್ತಲೂ ಬದುಕಿನ ಹಲವು ಬಣ್ಣಗಳು, ನೂರು ಕತೆಗಳು ಕಾಣಿಸಿದ್ದವು.
ಪಕ್ಕದಲ್ಲಿ ಕುಳಿತ ಹೆಣ್ಣುಮಗಳೊಬ್ಬಳನ್ನು ಮೂರು ದಿನಗಳಿಂದ ಗಮನಿಸಿದ್ದೆ. ಅದೇ ಬಟ್ಟೆಯಲ್ಲಿದ್ದಳು! ಅವಳ ತಂದೆ ಐಸಿಯುನಲ್ಲಿ. ಇವಳ ಕಣ್ಣೀರು ಒಂದಿಷ್ಟೂ ಆರಿರಲಿಲ್ಲ. ನೋಡುವುದಕ್ಕೆ, ಮಾತನಾಡಿಸುವುದಕ್ಕೆ ಬಂದವರೆಲ್ಲರ ಜತೆಗೆ ಇವಳು ಬಿಕ್ಕಳಿಸಿ ಅಳುತ್ತಲೇ ಇದ್ದಳು. ತಡೆಯದೇ ಅವಳನ್ನು ಮಾತಾಡಿಸಿದೆ. ಅರ್ಥವಾದದ್ದಿಷ್ಟು. ಕುಡಿತದಿಂದ ಅವಳ ತಂದೆಯ ಲಿವರ್ ದಣಿದಿತ್ತು. ಆದರೆ ಮನೆತುಂಬಾ ಓಡಾಡುತ್ತಲೇ ಇದ್ದರಂತೆ! ಬಸ್ಸಿಳಿದು ಆಸ್ಪತ್ರೆಯವರೆಗೂ ನಡೆದೇ ಬಂದ ಅವರು ನಂತರ ಆಕ್ಸಿಜನ್ ಸಪೋರ್ಟ್ನಲ್ಲಷ್ಟೇ ಬದುಕಿದ್ದರು. ಆ ದಿನ ಆಕ್ಸಿಜನ್ ತೆಗೆಸುವ ನಿರ್ಧಾರಕ್ಕೆ ಇವರು ಬಂದುಬಿಟ್ಟಿದ್ದರು. ಆಸ್ಪತ್ರೆಯ ಖರ್ಚನ್ನು ಭರಿಸುವ ಸಾಮರ್ಥ್ಯ ಅವರಲ್ಲಿ ಮುಗಿದಿತ್ತು. ಜನ್ಮ ಕೊಟ್ಟವರ ಮುಖದಿಂದ ಆಕ್ಸಿಜನ್ ಮಾಸ್ಕ್ ತೆಗೆದು ಬಿಡಿ ಎಂದು ಸಹಿ ಮಾಡುವ ಚೈತನ್ಯ ಅವಳಲ್ಲಿರಲಿಲ್ಲ. ಅಕ್ಕಾ, ಅದನ್ನು ತೆಗೆದು ಬಿಟ್ರೆ ಅಪ್ಪ ಸತ್ತೇ ಹೋಗ್ತಾನಕ್ಕಾ ಎಂದು ಎದೆಬಿರಿದು ಅಳುತ್ತಿದ್ದ ಅವಳಿಗೆ ಸಮಾಧಾನ ಹೇಳಲು ಯಾವ ಪದಗಳೂ ನನ್ನಲ್ಲಿರಲಿಲ್ಲ. ಸುಮ್ಮನೇ ಹೆಗಲು ತಟ್ಟಿ ಧೈರ್ಯ ತಂದುಕೊಳ್ಳಿ ಎಂದಷ್ಟೇ ಹೇಳಿ ಸುಮ್ಮನಾದೆ.
ತಾನು ಐಸಿಯು ಒಳಗಿದ್ದಾಗ ಅಲ್ಲಿ ಒಂದೆರಡು ಜೀವಗಳು ಬದುಕಿನ ಯಾನ ಮುಗಿಸಿದ್ದು ಅಮ್ಮನ ಅರಿವಿಗೂ ಬಂದಿತ್ತು. ಅವರ ಮೇಲಿನ ಹೊದಿಕೆಯೆಲ್ಲ ತೆಗೆದು ವಾಷಿಂಗ್ಗೆ ಹಾಕಿದ್ದೂ ಅಮ್ಮನಿಗೆ ಗೊತ್ತಾಗಿತ್ತು! ತನಗೆ ಹೊದಿಸಿದ ಹೊದಿಕೆಯೂ ಅದೇ ರೀತಿ ಇನ್ನಾರದೋ ಮೈಮೇಲೆ ಹೊದ್ದು, ಒಗೆದು ಬಂದಿರುವಂಥದ್ದು ಎಂಬುದೇ ಅಮ್ಮನಿಗೆ ಕಸಿವಿಸಿಗೆ ಕಾರಣವಾಗಿತ್ತು. ಸಾಲದ್ದಕ್ಕೆ ಅಂತಹಾ ರೋಗಿಗಳ ಕಡೆಯವರ ತಾರಕದ ಅಳು ಅಮ್ಮನಿಗೆ ಭೀತಿಯನ್ನೂ ಹುಟ್ಟಿಸಿತ್ತು. ನಾವು ಮಾತನಾಡಿಸಲು ಒಳಗೆ ಹೋದಾಗಲೆಲ್ಲ ಅಮ್ಮ ಶಾಲೆಯ ಗೇಟಿನಲ್ಲಿ ಅಮ್ಮನಿಗೆ ಕಾಯುವ ಪುಟ್ಟ ಮಗುವಂತೆ ಕಾಣುತ್ತಿದ್ದಳು. ಕಂಡೂ ಕಾಣದ ಭಯ ಅವಳ ಕಣ್ಣುಗಳಲ್ಲಿತ್ತು. ಹಾಗೆಂದು ಐದು ನಿಮಿಷಕ್ಕಿಂತ ಕೊಂಚ ಹೆಚ್ಚು ಅಲ್ಲಿ ನಿಂತೆವೋ, ಅಲ್ಲಿನ ಸಿಬ್ಬಂದಿ ಜಾಸ್ತಿ ಮಾತನಾಡಿಸಬೇಡಿ ಎಂದು ನಮ್ಮನ್ನು ಕಳಿಸಿಬಿಡುತ್ತಿದ್ದರು. ಮತ್ತೆ ಹೊರಗೆ ಅಮ್ಮನ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತಾ ಕಾಯುವುದಷ್ಟೇ ನಮ್ಮ ಬದ್ಧತೆಯಾಗಿತ್ತು.
ನಾವು ಅಮ್ಮಂದಿರನ್ನು ಬಹಳ ಹಗರವಾಗಿ ಪರಿಗಣಿಸುತ್ತೇವೆ. ಅವಳು ಖುಷಿಯಾಗಿ ಮನೆಯೊಳಗೆ ಓಡಾಡಿಕೊಂಡಿರುವಷ್ಟು ಸಮಯ ನಮಗೆ ಅವಳ ಮೌಲ್ಯ ಅರ್ಥವಾಗುವುದಿಲ್ಲ ಎಂದು ಸ್ಪಾನಿಷ್ ಬರಹಗಾರ, ಚಿಂತಕ ಜಾರ್ಜ್ ಬೋರಸ್ ಒಂದು ಸಂದರ್ಶನದಲ್ಲಿ ಹೇಳುತ್ತಾರೆ, ತಮ್ಮ ತಾಯಿಯ ಕುರಿತು ಮಾತನಾಡುತ್ತಾ. ಕಾಲದಿಂದ ಕಾಲಕ್ಕೆ ಋತುಗಳು ಬದಲಾಗುವುದು ಎಷ್ಟು ಸಹಜವೋ, ಸೂರ್ಯೋದಯ ಚಂದ್ರೋದಯಗಳು ಹೇಗೆ ತಮ್ಮ ಪಾಡಿಗೆ ತಾವು ಘಟಿಸುತ್ತವೋ ಅದೇ ರೀತಿಯಲ್ಲಿ ಮನೆಯಲ್ಲಿ ಅಮ್ಮ ಇರುತ್ತಾಳೆ, ವಿಶೇಷವಾದ ಏನನ್ನೂ ಬಯಸದೇ. ಅವಳು ಕಂಗೆಟ್ಟಾಗ ಅವಳನ್ನು ಆಧರಿಸಿದ ನಮ್ಮೆಲ್ಲರ ಬದುಕೂ ಕಂಗೆಡುತ್ತದೆ. ಹಾಗಾಗಿ ಅಮ್ಮ ನಮ್ಮೊಡನಿದ್ದಾಗ ಅವಳಿಗೆ ಮನಸ್ಸಿಗೆ ಘಾಸಿಯಾಗದಂತೆ, ಒತ್ತಡಗಳು ಅವಳನ್ನು ಕಾಡದಂತೆ ನೋಡಿಕೊಳ್ಳಿ. ಅವಳು ಕಳೆದು ಹೋದ ಮೇಲೆ ಪೂರ್ಣ ಬದುಕು ಬದಲಾಗುತ್ತದೆ ಎಂಬುದು ಬೋರಸ್ ಸಂದೇಶ. ತರಗತಿಯಲ್ಲಿ ಈ ಸಂದರ್ಶನದ ಭಾಗವನ್ನು ಬೋಧಿಸುವಾಗಲೆಲ್ಲ ಅಮ್ಮನ ಕುರಿತು, ಅಮ್ಮಂದಿರ ಕುರಿತು ನಾನು ಸ್ವಲ್ಪ ಭಾವುಕಳಾಗಿಯೇ ಮಾತಾಡುವುದಿದೆ. ಅಮ್ಮನನ್ನು ಕಳೆದುಕೊಂಡ ಕೆಲವು ವಿದ್ಯಾರ್ಥಿಗಳೂ ಕಂಬನಿ ಮಿಡಿಯುವುದಿದೆ. ಯಾಕೆಂದರೆ ಅಮ್ಮನೆಂಬ ಆಸರೆ, ಅಮ್ಮನೆಂಬ ಭದ್ರತೆ ಒಂದೊಮ್ಮೆ ಕಳೆದುಹೋದರೆ ಮತ್ತೆ ಪಡೆಯಲಾಗದ ಸಂಪತ್ತೆಂಬುದು ವಾಸ್ತವ.
ವಾರ್ಡಿಗೆ ಬಂದ ಮೇಲೂ ನಿಧಾನಗತಿಯಲ್ಲಿ ಅಮ್ಮ ಚೇತರಿಸಿಕೊಳ್ಳುತ್ತಿದ್ದುದರಿಂದ ವೈದ್ಯರು ಮತ್ತೆ ಹೃದಯದಲ್ಲಿ ಸಮಸ್ಯೆಯಿರಬಹುದೆಂದು ಶಂಕಿಸಿ ಆಂಜಿಯೋಗ್ರಾಮ್, ಆಂಜಿಯೋಪ್ಲಾಸ್ಟಿ ಮಾಡಿ ಸ್ಟಂಟ್ ಕೂರಿಸಿದ್ದಾಯಿತು. ಜೀವನದುದ್ದಕ್ಕೂ ತನಗಾಗಿ ಏನನ್ನೂ ಹಂಬಲಿಸದ ಅಮ್ಮ, ಬಯಸಿದ ಕೆಲವು ಸೀಮಿತ ಕೋರಿಕೆಗಳು ಈಡೇರದಾದಾಗಲೂ ಅತ್ತುಗರೆದು ಮಾಡದೇ ನೋವು ನುಂಗಿ ನಿರ್ಲಿಪ್ತವಾದ ಅಮ್ಮ ಎಲ್ಲ ದುಃಖವನ್ನೂ ಹೃದಯದ ಮೇಲೆ ಹೊರಿಸಿದ್ದೇ ತೊಂದರೆಯಾದದ್ದಿರಬೇಕು. ಪುಟ್ಟ ಹೃದಯ ಎಷ್ಟೆಂದು ತಡೆದೀತು? ಮತ್ತೆ ಐಸಿಯು.. ವಿಸ್ತರಿಸಲ್ಪಟ್ಟ ಆಸ್ಪತ್ರೆ ವಾಸ. ಅಂತೂ ಹತ್ತುದಿನಗಳ ಆಸ್ಪತ್ರೆ ಬಂಧನದಿಂದ ಮುಕ್ತರಾಗಿ ಮನೆಗೆ ಬಂದದ್ದೇ ಅಮ್ಮ ಕೊಂಚ ಗೆಲುವಾದರು. ಒಂದೊಮ್ಮೆ ಪುಟ್ಟ ಮಗುವಾಗುತ್ತ, ಮರುಕ್ಷಣದಲ್ಲಿ ಅಪ್ಪಟ ಅಮ್ಮನಾಗುತ್ತಾ, ಕಾಡುವ ಮೊಮ್ಮಕ್ಕಳ ಎದುರು ಎಳೆಯ ಹುಡುಗಿಯಾಗುತ್ತಾ ಜೀವಂತಿಕೆಯನ್ನೆಲ್ಲ ತನ್ನ ನಗುಮುಖದಲ್ಲಿ ತುಂಬಿ ಅಮ್ಮ ನಮಗೆ ಬಲವಾಗಿದ್ದಾಳೆ. ಇಂತಹ ಪರಿಸ್ಥಿತಿಯಲ್ಲೂ ತನ್ನಿಂದ ಇತರರಿಗೆ ನೋವಾಗಬಾರದು ಎಂಬ ಎಚ್ಚರದೊಂದಿಗೆ!
ನೋವು ನುಂಗಿ ನಗುವ ಬಗ್ಗೆ ಹಲವು ಸಲ ಮಾತನಾಡುತ್ತೇವೆ, ಹಾಗಿರುವವರ ಬಗ್ಗೆ ಅಭಿಮಾನ ಹೊಂದುತ್ತೇವೆ. ಆದರೆ ನಿಜಕ್ಕೂ ಅದು ನಾವು ಮಾಡುವ ತಪ್ಪೆನಿಸುತ್ತದೆ. ಹೃದಯಕ್ಕೂ ಆರೋಗ್ಯವಾಗಿರುವ ಹಕ್ಕು ಇದ್ದೇ ಇದೆಯಲ್ಲ! ನೋವು ನುಂಗಿ ನಕ್ಕು ಅಂತರಂಗದಲ್ಲಿ ಕರಗಿ, ಸೊರಗಿ ಕಡೆಗೆ ಸಾಧಿಸುವುದೇನು? ನೋವಾದಾಗ ಅಳುವುದು ಒಂದು ವರದಾನವೇ ಅಲ್ಲವೇ? ಹೆಚ್ಚಿನ ಸಂದರ್ಭ ಇತರರು ಏನಂದುಕೊಳ್ಳುತ್ತಾರೋ ಎಂದುಕೊಂಡು ಅಥವಾ ಇಷ್ಟು ಚಿಕ್ಕವಿಷಯಕ್ಕೆ ಅಳುವುದು ದೌರ್ಬಲ್ಯವೆಂದುಕೊಂಡು ನಗುವುದೇ ಶ್ರೇಷ್ಠ ಅಂದುಕೊಳ್ಳುತ್ತೇವೆ. ಮುಖ ನಕ್ಕೀತು. ಕಣ್ಣುಗಳು ಕಂಬನಿ ಮಿಡಿಯುವುದನ್ನು ನಿಯಂತ್ರಿಸಿಯಾವು, ಆದರೆ ಹೃದಯ ಸಹಿಸಬಹುದಾದ ನೋವುಗಳಿಗೆ ಒಂದು ಮಿತಿಯಿರುತ್ತದಲ್ಲ!
ಅಮ್ಮಂದಿರನ್ನು ಗಮನಿಸಿ ನೋಡಿ ಬೇಕಿದ್ದರೆ – ಎಷ್ಟೋ ಸಲ ಅಳು ತಡೆದುಕೊಂಡು ಕಣ್ಣೊರೆಸಿಕೊಳ್ಳುತ್ತಾರೆ. ಮಕ್ಕಳು ಕೇಳಿದಾಗ ಕಣ್ಣುರಿ ಬಂತೆನ್ನುತ್ತಾರೆ. ಅಮ್ಮಂದಿರಿಗೆ ಆಗೀಗ ಕಣ್ಣಿಗೆ ಕಸ ಬೀಳುತ್ತಲೇ ಇರುತ್ತದೆ. ಆ ಕಸ ಘಾಸಿಗೊಳಿಸಿರುವುದು ಹೃದಯವನ್ನು ಎಂಬುದು ಎಷ್ಟೋ ಸಲ ಮನೆಯ ಸದಸ್ಯರಿಗೆ ಅರ್ಥವಾಗುವುದಿಲ್ಲ. ಅರ್ಥವಾಗುವ ಹೊತ್ತಿಗೆ ಹೃದಯ ದಣಿದಿರುತ್ತದೆ.
ಹಾಗಾಗಿ ಹೇಳುವುದಿಷ್ಟೇ: ನೋವು ನುಂಗಿ ನಗಬೇಡಿ. ಅತ್ತು ಹಗುರಾಗಿ. ಹೃದಯ ತನ್ನ ಪಾಡಿಗೆ ತಾನು ಲಯಬದ್ಧವಾಗಿ ಮಿಡಿಯುತ್ತಿರಲಿ!