ಇಲ್ಲಿಯ ಮನೆಗಳು, ಹೊಲಗಳು, ಮರಗಳು ಎಲ್ಲವೂ ಸೇರಿ ಇಡೀ ಗ್ರಾಮವನ್ನು ಅದು ಇರುವ ಹಾಗೆ ಮಾರಾಟ ಮಾಡಲಾಗುತ್ತದೆ. ಇಡೀ ಗ್ರಾಮವನ್ನು ಒಟ್ಟಿಗೇ ಆಗಲಿ ಎರಡೋ ಮೂರೋ ಭಾಗಗಳಾಗಿಯಾಗಲಿ ಕೊಳ್ಳಬಹುದು. ಆಸಕ್ತರು ಇಲ್ಲಿಯ ಸರ್ಪಂಚ್ರನ್ನು ಸಂಪರ್ಕಿಸಬಹುದು.
ದಿನಪತ್ರಿಕೆಯಲ್ಲಿನ ಒಂದು ಸುದ್ದಿಯನ್ನು ನೋಡಿ ದೂರದರ್ಶನ ವರದಿಗಾರ್ತಿ ಮಂಜರಿ ವಿಚಲಿತಳಾದಳು. ಅವಳ ಕಣ್ಣುಗಳು ತೇವಗೊಳ್ಳತೊಡಗಿದವು. ಅವಳು ಕೂಡಲೆ ಪ್ರೋಗ್ರಾಂ ಎಕ್ಸಿಕ್ಯೂಟಿವ್ ಕ್ಯಾಬಿನ್ನಿಗೆ ಹೋಗಿ ಇದನ್ನು ಕುರಿತು ಪ್ರೋಗ್ರಾಂ ಮಾಡಲೆ, ಸಾರ್? ಎಂದು ಕೇಳಿದಳು.
ಇದನ್ನು ಕುರಿತೇ? ನಿನಗೇನಾದರೂ ಹುಚ್ಚು ಹಿಡಿದಿದೆಯೆ?
ಇದು ಒಂದು ಗ್ರಾಮದ ನೈಜಕಥೆ, ಸಾರ್….
ಗ್ರಾಮಗಳನ್ನು ವಸ್ತುವಾಗಿರಿಸಿಕೊಂಡ ಸಿನೆಮಾಗಳು ತೆರೆಯ ಮೇಲೆ ಪರಿಣಾಮಕಾರಿಯಾಗಿ ಕಾಣಿಸಬಹುದು. ಹಳ್ಳಿಗಳ ಹಿನ್ನೆಲೆಯ ಕಥೆಗಳನ್ನು ನೋಡುವುದರಲ್ಲಿ ಜನರು ಸ್ವಲ್ಪ ಆಸಕ್ತಿ ತಳೆಯಬಹುದು. ಆದರೆ ಹಳ್ಳಿಗಳ ಬವಣೆಗಳನ್ನು ಟಿವಿಯಲ್ಲಿ ಪ್ರದರ್ಶಿಸಹೊರಟರೆ ಪ್ರೇಕ್ಷಕರು ಕೂಡಲೆ ಚ್ಯಾನೆಲ್ ಬದಲಾಯಿಸುತ್ತಾರೆ. ನಮ್ಮ ರೇಟಿಂಗ್ ಪಾತಾಳಕ್ಕೆ ಹೋಗುತ್ತದೆ.
ಆದರೆ ನಮಗೆ ಸ್ವಲ್ಪವಾದರೂ ಸಾಮಾಜಿಕ ಬದ್ಧತೆಯೂ ಇರಬೇಕಾಗುತ್ತದಲ್ಲವೆ ಸಾರ್? ಈ ಸುದ್ದಿಯಲ್ಲಿರುವ ಸಂಗತಿ ನಾವೆಲ್ಲ ನಾಚಿಕೆ ಪಡಬೇಕಾದಂತಹದು…
ಪತ್ರಿಕೆಗಳವರು ಈ ಸುದ್ದಿಗೆ ಯಾವ ಸ್ಥಾನ ಕೊಟ್ಟಿದ್ದಾರೆ?
ಜಿಲ್ಲಾ ಆವೃತ್ತಿಯ ಆರನೇ ಪುಟದ ಎಡಗಡೆ ಕೆಳಗಿನ ಮೂಲೆಯಲ್ಲಿ ಪ್ರಕಟಿಸಿದ್ದಾರೆ.
ಪತ್ರಿಕೆಗಳವರು ಆ ಸುದ್ದಿಗೆ ಯಾವ ಸ್ಥಾನ ಕೊಟ್ಟಿದ್ದಾರೆಂದು ನೋಡಿದೆಯಲ್ಲ? ನನ್ನ ಸಮಯ ವ್ಯರ್ಥ ಮಾಡಬೇಡ. ಇನ್ನಾವುದಾದರೂ ಸೆನ್ಸೇಷನಲ್ ಸುದ್ದಿ ಇದ್ದರೆ ಗುರುತಿಸಿಕೊಂಡು ಬಾ. ಇನ್ನೇನೂ ಸಿಗದಿದ್ದರೆ ಸಿನೆಮಾಗಳಿಗೆ ಸಂಬಂಧಿಸಿದ ಯಾವುದೊ ಸುದ್ದಿಗಳಂತೂ ಇರುತ್ತವೆ. ಅಂತಹ ಪ್ರೋಗ್ರಾಂಗಳಿಂದಲೇ ಟಿಆರ್ಪಿ ಬೆಳೆಯುವುದು.
ಸಾರಿ ಸಾರ್. ತಮ್ಮ ಪ್ರತಿಕ್ರಿಯೆ ಹೀಗೆ ಇರುತ್ತದೆಂದು ನಾನು ನಿರೀಕ್ಷಿಸಿರಲಿಲ್ಲ. ಆ ಗ್ರಾಮಸ್ಥರು ನಮ್ಮ ಗ್ರಾಮ ಮಾರಾಟಕ್ಕೆ ಇದೆ ಎಂದು ಹೇಳುತ್ತಿದ್ದಾರಲ್ಲ! – ಎಂದಳು ಮಂಜರಿ ಉದ್ವೇಗದಿಂದ.
ನೀನು ಡಿಸ್ಟರ್ಬ್ ಆಗಬಾರದು. ಯಾರೋ ವಿನೋದಕ್ಕಾಗಿ ಈ ಪ್ರಕಟನೆ ನೀಡಿರಲೂಬಹುದು. ಅದನ್ನು ಮರೆತುಬಿಡು ಎಂದವರು ತಮ್ಮ ಲ್ಯಾಪ್ಟಾಪಿಗೆ ಮರಳಿದರು.
ಅದು ವಿನೋದವಲ್ಲ ಸಾರ್. ಅದೊಂದು ಆಕ್ರಂದನ. ಸಭ್ಯ ಸಮಾಜ ತಲೆತಗ್ಗಿಸಬೇಕಾದಂತಹದು. ಪಟ್ಟಣಗಳವರನ್ನು ತಿವಿದು ಎಚ್ಚರಿಸುವಂತಹದು. ಹಳ್ಳಿಗಳ ಜನರೆಂದರೆ ಮಣ್ಣಿನ ಗೊಂಬೆಗಳಲ್ಲವಲ್ಲ! ಹಳ್ಳಿಯೇ ಅಲ್ಲಿಯ ಜನರ ಜೀವಿಕೆಗೂ ಎಲ್ಲ ಆಶೋತ್ತರಗಳಿಗೂ ಏಳ್ಗೆಗೂ ಆಧಾರ. ಅವರು ಭೂಮಿಪುತ್ರರು.
ಅವಳ ಕಣ್ಣಿನಲ್ಲಿ ಹೊಮ್ಮುತ್ತಿದ್ದ ಕಳಕಳಿಯನ್ನು ಗಮನಿಸಿ ಸಾಹೇಬರು ಸ್ವಲ್ಪ ಸಹಾನುಭೂತಿ ತಳೆದು ಸರಿಯೆ, ನಿನಗೆ ಏನು ಅನ್ನಿಸುತ್ತದೆಯೋ ಹೇಳು ಎಂದರು.
ಇದು ಮೊದಲ ಸಾರಿಯೇನಲ್ಲ ಸಾರ್. ಶ್ರೀಕಾಕುಲಂ ಜಿಲ್ಲೆಯ ಒಂದು ಗ್ರಾಮದವರೂ ಹೀಗೆಯೇ ಮಾರುವುದಾಗಿ ಪ್ರಕಟಿಸಿದ್ದರು.
ಆಮೇಲೆ ಏನಾಯಿತು?
ನನಗೆ ತಿಳಿಯದು.
ಅಲ್ಲಿ ಏನಾದರೂ ನಡೆದಿದ್ದಿದ್ದರೆ ನಿಶ್ಚಿತವಾಗಿ ಗೊತ್ತಾಗುತ್ತಿತ್ತು. ನೀನು ಇಮೋಷನಲ್ ಆಗಬೇಡ.
ಒಂದು ಇಡೀ ಗ್ರಾಮವೇ ಸತ್ತುಹೋಗುತ್ತಿರುವಾಗ ನಾವು ಮಾಧ್ಯಮಗಳವರು ಗೋರ್ಕಲ್ಲಿನಂತೆ ಇರಬಹುದೆ? ನಾವು ಸಮಾಜದ ಹಿತವನ್ನು ರಕ್ಷಿಸಬೇಕಾದವರು, ಅಲ್ಲವೆ? ಬರಿಯ ರೇಟಿಂಗಿನ ಬೆನ್ನುಹತ್ತುವುದರಲ್ಲಿ ಏನು ಧನ್ಯತೆ ಇದ್ದೀತು?
ಮಂಜರಿ, ನಮ್ಮ ಚ್ಯಾನೆಲ್ ನಡೆಸಲು ಕೋಟ್ಯಂತರ ರೂಪಾಯಿ ಹೂಡಿರುವವರು ಲಾಭವನ್ನು ನಿರೀಕ್ಷಿಸುತ್ತಾರೆ. ಆದಷ್ಟೂ ಅವರ ನಿರೀಕ್ಷೆಗೆ ಅನುಗುಣವಾಗಿ ನಾವು ಹೆಜ್ಜೆಹಾಕಿದರೆ ಎಲ್ಲರಿಗೂ ಒಳ್ಳೆಯದು.
ಸಾರ್…. ದಯವಿಟ್ಟು ಇದೊಂದು ಅವಕಾಶ ಮಾಡಿಕೊಡಿ. ಇದು ಒಳ್ಳೆಯ ಪ್ರೋಗ್ರಾಂ ಆಗುತ್ತದೆಂದು ನನಗೆ ನಂಬಿಕೆ ಇದೆ.
ಅವಳ ತೀವ್ರತೆಯನ್ನು ಗಮನಿಸಿ ಸ್ವಲ್ಪ ಮನಸ್ಸು ಕರಗಿ ಸಾಹೇಬರು ಹೇಳಿದರು – ಆಯಿತು, ಹಾಗೆಯೆ ಮಾಡು. ಆದರೆ ಅಲ್ಲಿಗೆ ಹೋಗಲು ಮತ್ತಿತರ ವ್ಯವಸ್ಥೆಗಳನ್ನು ನಾನು ಮಾಡಲಾರೆ.
ಚಿಂತೆಯಿಲ್ಲ ಸಾರ್. ಧನ್ಯವಾದಗಳು.
ಮಂಜರಿ ಕೇಳಿದ ಇಬ್ಬರು-ಮೂವರು ಕ್ಯಾಮರಾಮೆನ್ಗಳು ಹಳ್ಳಿಗೆ ಹೋಗಲು ಒಪ್ಪಲಿಲ್ಲ. ಕುಗ್ರಾಮದಲ್ಲಿ ಏನು ಆಕರ್ಷಣೆ ಇರುತ್ತದೆ? ಎಂದು ಹಿಂದೆಗೆದರು. ಕಡೆಗೆ ಪ್ರಕಾಶ್ ಎಂಬವ ಒಂದು ದಿವಸದಲ್ಲಿ ಕೆಲಸ ಮುಗಿಯಬೇಕು ಎಂಬ ಷರತ್ತಿನ ಮೇಲೆ ಬರಲು ಒಪ್ಪಿದ.
ಮರುದಿನವೇ ಇಬ್ಬರೂ ಹೊರಟರು. ಸಮೀಪದ ಪಟ್ಟಣ ತಲಪಿ ಅಲ್ಲಿಂದ ಆಟೋದಲ್ಲಿ, ಉಳಿದ ಹಾದಿಯನ್ನು ಕಾಲ್ನಡಿಗೆಯಲ್ಲಿ ಕ್ರಮಿಸಿ ಪಾತೂರು ಗ್ರಾಮ ಸೇರಿಕೊಂಡರು. ಪ್ರವೇಶದ ಬಳಿಯೇ ಮನೆಯೊಂದರ ಮೇಲೆ ಇದ್ದ ಈ ಗ್ರಾಮವು ಮಾರಾಟಕ್ಕೆ ಇದೆ ಎಂಬ ಸೂಚನಾಫಲಕದ ಚಿತ್ರ ತೆಗೆದರು.
ಇಲ್ಲಿಯ ಮನೆಗಳು, ಹೊಲಗಳು, ಮರಗಳು ಎಲ್ಲವೂ ಸೇರಿ ಇಡೀ ಗ್ರಾಮವನ್ನು ಅದು ಇರುವ ಹಾಗೆ ಮಾರಾಟ ಮಾಡಲಾಗುತ್ತದೆ. ಇಡೀ ಗ್ರಾಮವನ್ನು ಒಟ್ಟಿಗೇ ಆಗಲಿ ಎರಡೋ ಮೂರೋ ಭಾಗಗಳಾಗಿಯಾಗಲಿ ಕೊಳ್ಳಬಹುದು. ಆಸಕ್ತರು ಇಲ್ಲಿಯ ಸರ್ಪಂಚ್ರನ್ನು ಸಂಪರ್ಕಿಸಬಹುದು – ಎಂಬ ವಿವರಣೆಯೂ ಅಲ್ಲಿ ಇದ್ದಿತು.
ಇದು ವಿಚಿತ್ರವಾಗಿದೆ ಎಂದ, ಪ್ರಕಾಶ್.
ಊರಿನಲ್ಲಿ ಎಲ್ಲಿಯೂ ಯಾವ ಚಟುವಟಿಕೆಯೂ ಕಾಣುತ್ತಿಲ್ಲ.
ಆಗೀಗ ದಾರಿಯಲ್ಲಿ ಹೋಗುತ್ತಿದ್ದ ಜನರ ಮುಖ ಕಳಾಹೀನವಾಗಿತ್ತು. ದೈನ್ಯವು ತಾಂಡವವಾಡುತ್ತಿತ್ತು. ಅಲ್ಲಲ್ಲಿ ಅನಿವಾರ್ಯವಾದ ಪುಡಿಗೆಲಸಗಳಷ್ಟೆ ನಡೆದಿದ್ದವು. ಪ್ರಕಾಶ್ ಅಚ್ಚರಿಗೊಂಡ.
ಆ ಪರಿಸರವನ್ನು ನೋಡಿ ಮಂಜರಿಗೆ ದಿಗ್ಭ್ರಮೆಯಾಗಿ ಅಳು ಬಂದಿತು. ಇಬ್ಬರೂ ಸರ್ಪಂಚ್ ಮನೆಗೆ ತೆರಳಿದರು.
ಸರ್ಪಂಚ್ ಚಂದ್ರಯ್ಯ ಇವರನ್ನು ಆಹ್ವಾನಿಸಿ ಕುಡಿಯುವ ನೀರನ್ನು ನೀಡಿ ತಪ್ಪು ತಿಳಿಯಬೇಡಿರಿ ಎಂದ, ತನ್ನ ಅಶಕ್ತತೆಯನ್ನು ವ್ಯಕ್ತಪಡಿಸುತ್ತ.
ನಾವು ದೂರದರ್ಶನದಿಂದ ಬಂದಿದ್ದೇವೆ. ನಿಮ್ಮೊಡನೆ ಸಂದರ್ಶನ ನಡೆಸಲು ಬಯಸಿದ್ದೇವೆ ಎಂದಳು ಮಂಜರಿ.
ಊರನ್ನು ಕೇಳಲು ಬಂದಿರಬಹುದೆಂದು ಅಂದುಕೊಂಡಿದ್ದೆ ಎಂದ ಚಂದ್ರಯ್ಯ ನಿರಾಶೆಯ ಧ್ವನಿಯಲ್ಲಿ.
ನಿಮ್ಮ ಸಮಸ್ಯೆಗೆ ಮಾರಾಟ ಪರಿಹಾರ ಆಗಲಾರದೆಂದು ನಮಗೆ ಅನಿಸುತ್ತಿದೆ. ನಮ್ಮದು ಸಣ್ಣ ಗುಲಾಮೀ ರಾಜ್ಯವೇನಲ್ಲ. ಇದು ದೊಡ್ಡ ಸ್ವತಂತ್ರ ಪ್ರಜಾಪ್ರಭುತ್ವ. ಜನರೆಲ್ಲ ಆಯ್ಕೆ ಮಾಡಿದ ಸರ್ಕಾರಗಳು ರಾಜ್ಯದಲ್ಲಿಯೂ ಕೇಂದ್ರದಲ್ಲಿಯೂ ಇವೆ. ಅಧಿಕಾರಿಗಳು ಇದ್ದಾರೆ, ರಾಜ್ಯಾಂಗ ಇದೆ…
ಈ ಜಾಡಿನ ಮಾತನ್ನು ಅವನು ಕೇಳಿಸಿಕೊಳ್ಳುವ ಮನಃಸ್ಥಿತಿಯಲ್ಲಿ ಇಲ್ಲವೆಂದು ಗ್ರಹಿಸಿ ಮಂಜರಿ ಸುಮ್ಮನಾದಳು. ಈ ವೇಳೆಗೆ ಪ್ರಕಾಶ್ ಕ್ಯಾಮೆರಾದೊಡನೆ ಸಜ್ಜಾಗಿದ್ದ.
ಸಂದರ್ಶನವನ್ನು ಆರಂಭಿಸಬಹುದೆ?
ಆಗಲಿ ಎಂಬಂತೆ ಚಂದ್ರಯ್ಯ ತಲೆಯಾಡಿಸಿದ.
ಜನ್ಮಭೂಮಿ ಸ್ವರ್ಗಸಮಾನವೆಂದು ಹಿಂದಿನವರು ಹೇಳುತ್ತಿದ್ದರು. ಆದರೆ ನಿಮ್ಮ ಹುಟ್ಟೂರನ್ನೇ ನೀವು ಏಕೆ ಮಾರಾಟ ಮಾಡಲು ಹೊರಟಿದ್ದೀರಿ?
ಸಾಲ ಕೊಡುವ ವೈದ್ಯ, ಹೊಳೆಯ ಏರು, ಬ್ರಾಹ್ಮಣ – ಇವು ಇಲ್ಲದಿರುವ ಗ್ರಾಮವನ್ನು ಕೂಡಲೇ ತೊರೆದು ಹೋಗಬೇಕು ಎಂಬ ಹಳೆಯ ಗಾದೆಮಾತೂ ಇದೆಯಲ್ಲವೆ. ಅದು ಈಗ ನಮಗೆ ಅನ್ವಯಿಸುವಂತಿದೆ.
ಅಂದರೆ ಇಲ್ಲಿ ಕನಿಷ್ಠ ಸೌಕರ್ಯಗಳೂ ಇಲ್ಲವೆನ್ನುತ್ತೀರಾ?
ಇಲ್ಲಿ ಏನಿದೆಯೋ ನೀವೇ ಕಣ್ಣಿಂದ ನೋಡಬಹುದು. ಇಲ್ಲಿ ಏನಿದೆ?
ರಸ್ತೆಗಳು, ಬಸ್ ಸೌಕರ್ಯ, ನೀರಿನ ವ್ಯವಸ್ಥೆ – ಇವು ಇಲ್ಲವೆಂದು ಮೊದಲಿಗೇ ಕಾಣುತ್ತಿದೆ. ಆಹಾರ ಸಾಮಗ್ರಿಗಳ ಕೊರತೆಯೂ ಇದ್ದಹಾಗಿದೆ. ಆದರೆ ಸರ್ಕಾರ ಇಲ್ಲಿ ಏನೂ ಮಾಡಿಲ್ಲವೆ?
ಸರ್ಕಾರ ಇದೆಯೋ ಇಲ್ಲವೋ ತಿಳಿಯದು. ನಮಗಂತೂ ಅದು ಕಣ್ಣಿಗೆ ಬಿದ್ದಿಲ್ಲ. ರಾಜಕೀಯ ನಾಯಕರಿಗೆ ನಮ್ಮ ಗೊಡವೆ ಬೇಕಿಲ್ಲ, ಅವರೆಲ್ಲ ಪಟ್ಟಣದಲ್ಲಿ ಇರುತ್ತಾರೆ. ಅಧಿಕಾರಿಗಳು ಇಲ್ಲಿಗೆ ಕಾಲಿಡುವುದು ಜನಗಣತಿಗಾಗಿ ಮತ್ತು ಚುನಾವಣೆ ಬಂದಾಗ ಮಾತ್ರ. ಅದು ಬಿಟ್ಟರೆ ನಾವು ಇರುವುದೇ ಅವರಾರಿಗೂ ತಿಳಿದಂತಿಲ್ಲ.
ನೀವೆಲ್ಲ ಸೇರಿ ಅವರನ್ನು ಏಕೆ ತರಾಟೆಗೆ ತೆಗೆದುಕೊಳ್ಳುವುದಿಲ್ಲ? ಹಳ್ಳಿಗಳ ಅಭಿವೃದ್ಧಿಗಾಗಿ ಸರ್ಕಾರ ಹಲವಾರು ಯೋಜನೆಗಳನ್ನು ಮಾಡಿದೆ. ಈಗಲೂ ಮಾಡುತ್ತಿದೆ. ಎಷ್ಟೋ ಕಾರ್ಯಕ್ರಮಗಳನ್ನು ನಡೆಸಿದೆ. ಈ ಕೆಲಸಗಳಿಗಾಗಿ ವಿದೇಶಗಳಿಂದಲೂ ವಿಶ್ವಬ್ಯಾಂಕ್ನಿಂದಲೂ ಲಕ್ಷಾಂತರ ಕೋಟಿ ಸಾಲ ತಂದಿರುವುದು ನಿಮ್ಮಂತಹವರ ಅಭಿವೃದ್ಧಿಗಾಗಿಯೆ ಅಲ್ಲವೆ?
ಅವನು ತಲೆತಗ್ಗಿಸಿ ಅವಳಿಗೆ ಹೇಳಿದ – ಆ ಕೆಲಸಗಳನ್ನೆಲ್ಲ ನೀವಿರುವ ಊರುಗಳಲ್ಲಿ ನಡೆಸುತ್ತಿದ್ದಾರೆಯೊ ಏನೋ ನನಗೆ ತಿಳಿಯದು. ಇಲ್ಲಿಯಾದರೊ ಕರೆಂಟಿಗಾಗಿ ನೆಟ್ಟ ಕಂಬಗಳಿವೆ, ಆದರೆ ಕರೆಂಟು ಇಲ್ಲ. ಕಾಲುವೆಗಳಿವೆ, ಆದರೆ ಹೊಲಗಳಿಗೆ ನೀರು ಬರುತ್ತಿಲ್ಲ. ಒಂದು ಆಸ್ಪತ್ರೆಯಾಗಲಿ ಶಾಲೆಯಾಗಲಿ ದಿನಸಿ ಸಿಗುವ ಅಂಗಡಿಯಾಗಲಿ ಇಲ್ಲ. ರಸ್ತೆಗಳಿಲ್ಲ. ಕುಡಿಯುವುದಕ್ಕೂ ನೀರು ಇಲ್ಲ. ಇನ್ನು ಉದ್ಯೋಗ ನೌಕರಿ ವಿಷಯ ಕೇಳಲೇಬೇಡಿ. ಈ ಸ್ಥಿತಿ ಇರುವಾಗ ನಾವು ಏಕಾದರೂ ಇಲ್ಲಿ ಇರಬೇಕು? ಹೇಗೆ ಬದುಕನ್ನು ನಡೆಸಬೇಕು?
ಏನೇ ಆದರೂ ಇದು ನಿಮ್ಮ ಊರೇ ಅಲ್ಲವೆ?
ನಮ್ಮದಾಗಿರುವ ಕಾರಣದಿಂದಲೇ ಮಾರಲು ನಿರ್ಧರಿಸಿದ್ದೇವೆ. ಯಾರಾದರೂ ಕೊಂಡುಕೊಳ್ಳುವವರನ್ನು ನೀವು ಇಲ್ಲಿಗೆ ಕಳಿಸಿರಿ, ಸಾಕು. ನಿಮಗೆ ಪುಣ್ಯ ಬರುತ್ತದೆ.
ಬೇರೆ ಕಡೆಗಳಲ್ಲಿ ಕಾರ್ಖಾನೆಗಳಿಗೆ ಭೂಮಿ ಮಾರಲು ರೈತರು ತುದಿಗಾಲಲ್ಲಿ ನಿಂತಿದ್ದಾರೆ. ಆದರೆ ನಿಯಂತ್ರಣ ತಪ್ಪೀತೆಂದು ಹೆದರಿ ಸರ್ಕಾರವೇ ನಿಧಾನಿಸುತ್ತಿದೆ. ಹಾಗಿರುವಾಗ ನೀವು ಇಡಿಯಾಗಿ ಗ್ರಾಮವನ್ನೇ ತಟ್ಟೆಯಲ್ಲಿಟ್ಟು ಮಾರುತ್ತೇವೆ ಎನ್ನುತ್ತಿದ್ದೀರಲ್ಲ?
ನಮ್ಮ ಪರಿಸ್ಥಿತಿ ಎಷ್ಟು ಕೆಟ್ಟದಾಗಿದೆಯೆಂದರೆ ಕೊಂಡುಕೊಳ್ಳುವವರಿದ್ದರೆ ನಮ್ಮನ್ನೇ ನಾವು ಮಾರಲೂ ಯೋಚಿಸಬೇಕಾದೀತು! ಎಂದ, ಸರ್ಪಂಚ್ ಚಂದ್ರಯ್ಯ ನಿರ್ಲಿಪ್ತನಾಗಿ.
ಮಂಜರಿಗೆ ಏನು ಹೇಳಬೇಕೊ ತೋರಲಿಲ್ಲ. ಕಣ್ಣೀರನ್ನು ಕಷ್ಟಪಟ್ಟು ತಡೆದುಕೊಂಡು ಕೇಳಿದಳು:
ಆದರೂ ನೀವು ಇಂತಹ ಅತ್ಯಂತ ಬಾಧಾಕರ ನಿರ್ಣಯ ಕೈಗೊಳ್ಳಲು ಕಾರಣವಾದರೂ ಏನು?
ನಮ್ಮ ಊರಿನ ಸ್ಥಿತಿಯನ್ನು ಮನಸ್ಸಿಗೆ ಹಚ್ಚಿಕೊಳ್ಳುವವರು ಯಾರೂ ಕಾಣುತ್ತಿಲ್ಲ. ಉಳಿದ ವಿಷಯಗಳು ಹಾಗಿರಲಿ, ಇಲ್ಲಿ ಕುಡಿಯುವ ನೀರಿಗೂ ಏರ್ಪಾಡು ಇಲ್ಲ. ಇಂತಹ ಸನ್ನಿವೇಶದಲ್ಲಿ ನಾವು ಬದುಕನ್ನು ಹೇಗೆ ಸಾಧಿಸಬೇಕೋ ನೀವೇ ಹೇಳಿರಿ.
ಇಷ್ಟಕ್ಕೂ ಸರ್ಕಾರವೆಂದರೆ ನಾವು ಆಯ್ಕೆ ಮಾಡಿರುವವರದಷ್ಟೆ? ಅಧಿಕಾರ ಇರುವುದು ನಾವು ಆಯ್ಕೆ ಮಾಡಿರುವವರ ಕೈಯಲ್ಲೇ. ಹೀಗಿರುವಾಗ ನಿಮ್ಮ ಸಮಸ್ಯೆಗಳಿಗೆ ನಮ್ಮ ಚ್ಯಾನೆಲ್ ಮೂಲಕ ಗಮನ ಸೆಳೆದರೆ ಬಹುಶಃ ಅಧಿಕಾರಿಗಳು ಎಚ್ಚೆತ್ತುಕೊಂಡಾರೇನೊ ಎನಿಸುತ್ತದೆ.
ಅವರು ಯಾರೂ ಕಿವುಡರಲ್ಲ. ಕಿವಿ ಚೆನ್ನಾಗಿಯೆ ಕೇಳುತ್ತದೆ. ಆದರೂ ಈಗ ನೀವು ಕೇಳುತ್ತಿರುವುದರಿಂದ ಮತ್ತೆ ಇಲ್ಲಿಯ ಕಥೆ ಹೇಳುತ್ತೇನೆ. ನನಗೆ ನಷ್ಟವಾದರೂ ಏನು! ಎಂದ ಚಂದ್ರಯ್ಯ. ನಿಮ್ಮಲ್ಲಿ ನಮ್ಮ ಮನವಿ ಏನೆಂದರೆ – ಸಾಧ್ಯವಾದರೆ ಸಹಾಯ ದೊರಕಿಸಿಕೊಡಿ. ಇಲ್ಲವಾದರೆ ಊರನ್ನು ಮಾರುವುದಕ್ಕಾದರೂ ನೆರವನ್ನು ಕೊಡಿರಿ ಎಂದು ಹೇಳುವಾಗ ಚಂದ್ರಯ್ಯ ಬಿಕ್ಕತೊಡಗಿದ.
ನಿಮ್ಮ ಊರಿಗೆ ನೆರವು ಸಿಗುತ್ತದೆ – ಎಂದು ಮಂಜರಿ ಮತ್ತು ಪ್ರಕಾಶ್ ಭರವಸೆಯ ಮಾತನ್ನು ಹೇಳಿದರು.
ಗ್ರಾಮದ ಒಂದಷ್ಟು ಮಂದಿ ಹಿರಿಯರನ್ನೂ ಹಲವರು ತರುಣರನ್ನೂ ಅಲ್ಲಿ ಸೇರಿಸಿದರು. ಎಲ್ಲರ ಮುಖಗಳಲ್ಲಿಯೂ ಹತಾಶೆ ಹರಡಿತ್ತು. ದೇವರು ಕೂಡಾ ನಮ್ಮನ್ನು ಕೈಬಿಟ್ಟಂತಿದೆ ಎನಿಸುವಂತಿತ್ತು ಅವರ ಮುಖಭಾವ.
ಗ್ರಾಮಗಳ ಅಭಿವೃದ್ಧಿಗಾಗಿ ಸರ್ಕಾರ ಕೋಟ್ಯಂತರ ಹಣ ಖರ್ಚು ಮಾಡುತ್ತಿದೆಯಲ್ಲ – ಅದೆಲ್ಲ ಎಲ್ಲಿಗೆ ಹೋಗುತ್ತಿರಬಹುದು?
ಅದು ಎಲ್ಲಿ ಹೋಗುತ್ತಿದೆಯೊ ನಾವೇನು ಬಲ್ಲೆವು! ನೀರಿನ ಕಾಲುವೆಯಲ್ಲಿ ಹೂಳೆತ್ತಿ ಹೆಚ್ಚು ಆಳ ಮಾಡುವುದಾಗಿ ಹೇಳುತ್ತ ಒಮ್ಮೆ ಬಂದಿದ್ದರು. ಕಾಲುವೆಯ ಬಳಿ ನಿಂತು ಫೋಟೋ ತೆಗೆಸಿಕೊಂಡು ನಿರ್ಗಮಿಸಿದರು. ಎಲ್ಲಿಯೋ ದೂರದಿಂದ ನೀರನ್ನು ಹೊತ್ತು ತರುತ್ತಿದ್ದ ಹೆಂಗಸರ ಫೋಟೋಗಳನ್ನು ತೆಗೆದರು. ಅಲ್ಲಿಂದಾಚೆಗೆ ಏನೂ ನಡೆಯಲಿಲ್ಲ. ಮಳೆಗಾಲಕ್ಕೆ ಮುಂಚೆ ಮತ್ತೆ ಬಂದು ಹೋದರು. ಅನಂತರ ಬಂದಿಲ್ಲ. ಇನ್ನೊಂದು ತಂಡ ರಸ್ತೆ ಮಾಡಿಸುವುದಾಗಿ ಹೇಳಿಕೊಂಡು ಬಂದರು. ಅಳತೆ ಮಾಡಿಕೊಂಡು ಹೋದರು. ಮತ್ತೆ ಬಂದಿಲ್ಲ. ಕುಡಿಯುವ ನೀರಿನ ವ್ಯವಸ್ಥೆ ಮಾಡುತ್ತೇವೆಂದು ಬಂದವರು ಒಂದಷ್ಟು ಪೈಪುಗಳನ್ನು ತಂದು ಹಾಕಿ ಹೋದವರು ಮತ್ತೆ ಬರಲಿಲ್ಲ.
ಅಂದರೆ ಕೆಲಸವನ್ನು ಮಾಡದೆಯೇ ಮಾಡಿದಂತೆ ತೋರಿಸಿ ಹಣ ಗುಳುಂ ಮಾಡಿದರು ಎನ್ನುತ್ತೀರಾ?
ಅದನ್ನು ಓದು-ಬರಹ ಬಲ್ಲ ನೀವೇ ಹೇಳಬೇಕು.
ನಡೆಯುವುದಕ್ಕೆ ಆಗದ ಮಣ್ಣುರಸ್ತೆಗಳನ್ನೂ ನೀರಿಲ್ಲದೆ ಒಣಗಿದ್ದ ಹೊಲಗಳನ್ನೂ ಪಾಳುಬಿದ್ದ ಕಾಲುವೆಗಳನ್ನೂ ಎಲ್ಲಿಯೊ ದೂರದಿಂದ ಬಿಂದಿಗೆಗಳಲ್ಲಿ ನೀರು ಹೊತ್ತು ತರುತ್ತಿದ್ದ ಹೆಂಗಸರನ್ನೂ ವಿಡಿಯೊದಲ್ಲಿ ಚಿತ್ರೀಕರಿಸಿಕೊಂಡದ್ದು ಆಯಿತು.
ಸ್ಥಾನಿಕ ಶಾಸಕರು ಜಿಲ್ಲಾ ಕೇಂದ್ರದಲ್ಲಿ ಇರುತ್ತಾರೆಂದು ತಿಳಿದು ಅವರನ್ನು ಭೇಟಿ ಮಾಡಲು ತೆರಳಿದರು, ಮಂಜರಿ ಮತ್ತು ಪ್ರಕಾಶ್. ಆತನ ಬಂಗಲೆ ಯಾವ ರಾಜಭವನಕ್ಕೇನೂ ಕಡಮೆ ಇರಲಿಲ್ಲ. ಟಿವಿ ಚ್ಯಾನೆಲ್ನವರು ಬಂದಿದ್ದಾರೆಂದು ಕೇಳಿದೊಡನೆ ಒಳ್ಳೆಯ ಪೋಷಾಕು ಧರಿಸಿ ಶಾಸಕ ಹಾಜರಾದ.
ಮಂಜರಿ ಕೇಳಿದಳು – ಪಾತೂರು ಗ್ರಾಮವನ್ನು ಗ್ರಾಮಸ್ಥರು ಮಾರಾಟಕ್ಕೆ ಇಟ್ಟಿರುವ ವಿಷಯ ತಮಗೆ ತಿಳಿದಿರಬೇಕಲ್ಲ?
ಹಾಗೇನು? ಸಾರ್ವಜನಿಕ ಹರಾಜಿನ ಮೂಲಕವೋ ಅಥವಾ ಟೆಂಡರ್ ಸಿಸ್ಟಮ್ ಮೂಲಕವೋ? ಎಂದು ಆತನೆಂದಾಗ ಮಂಜರಿ ದಿಗ್ಭ್ರಾಂತಳಾದಳು.
ನಿಮಗೆ ತಿಳಿಯದೆ? ಆ ಗ್ರಾಮ ಇರುವುದು ನಿಮ್ಮ ಕ್ಷೇತ್ರದೊಳಗೇ.
ನನ್ನ ಕ್ಷೇತ್ರದೊಳಗಿನ ಗ್ರಾಮಗಳ ಹೆಸರುಗಳೆಲ್ಲ ನನಗೆ ತಿಳಿದಿವೆಯೆನ್ನಿ… ಎಂದವನೇ ಆತ ಮುಂದುವರಿಸುವಷ್ಟರಲ್ಲಿ ಅವನ ಅನುಚರನೊಬ್ಬ ಬಂದು ಕಿವಿಯಲ್ಲಿ ಏನೋ ಹೇಳಿದ.
ಅದು ಗಡಿಸೀಮೆಯ ಗ್ರಾಮವಾದುದರಿಂದ ನನಗೆ ಸರಿಯಾಗಿ ನೆನಪಿಲ್ಲ. ಆದರೆ ಊರನ್ನು ಮಾರಲು ಅಲ್ಲಿಯವರೆಲ್ಲ ಸಿದ್ಧರಾಗಿದ್ದಾರೆ ಎನ್ನುತ್ತೀರಾ?
ಹೌದು. ಅದು ಪತ್ರಿಕೆಗಳಲ್ಲಿಯೂ ಬಂದಿತ್ತಲ್ಲ. ಆ ಪ್ರಕಟಣೆಗೆ ಶಾಸಕರಾದ ನೀವು ಪ್ರತಿಕ್ರಿಯೆ ನೀಡಬೇಕಾಗಿತ್ತಲ್ಲವೆ? ಆ ವಿಷಯದಲ್ಲಿ ನಿಮ್ಮ ಯೋಜನೆ ಏನೆಂದು ನಮ್ಮ ಚ್ಯಾನೆಲಿನ ವೀಕ್ಷಕರಿಗೆ ದಯವಿಟ್ಟು ತಿಳಿಸುತ್ತೀರಾ?
ನಾನು ಮುಖ್ಯಮಂತ್ರಿಗಳೊಡನೆ ಇಂದೇ ಮಾತನಾಡುತ್ತೇನೆ. ಒಂದು ಅಧ್ಯಯನ ತಂಡವನ್ನು ಏರ್ಪಡಿಸಿಕೊಂಡು ಮುಂಬೈ, ದೆಹಲಿ, ಚೆನ್ನೈ ಮೊದಲಾದ ಮಹಾನಗರಗಳ ವೀಕ್ಷಣೆಗಾಗಿ ಹೋಗುತ್ತೇನೆ. ಪ್ರಮುಖ ಉದ್ಯಮಿಗಳನ್ನೂ ವ್ಯಾಪಾರಿಗಳನ್ನೂ ಭೇಟಿ ಮಾಡಿ ಬರುತ್ತೇನೆ ಎಂದ ಆತ, ಉತ್ಸಾಹದ ಧ್ವನಿಯಲ್ಲಿ.
ಅದೆಲ್ಲ ಏತಕ್ಕಾಗಿ? ಎಂದಳು ಮಂಜರಿ ದಿಗ್ಭ್ರಮೆಗೊಂಡು.
ಇದೇನು ನಿಮ್ಮ ಪ್ರಶ್ನೆ? ನಮ್ಮ ಪ್ರಧಾನಿಗಳೂ ರಾಜ್ಯಗಳ ಮುಖ್ಯಮಂತ್ರಿಗಳೂ ವಿದೇಶಗಳಿಗೆ ಹೋಗಿ ನಮ್ಮಲ್ಲಿ ಹಣ ಹೂಡಿಕೆ ಮಾಡಬೇಕೆಂದು ಆ ದೇಶಗಳ ಉದ್ಯಮಪತಿಗಳನ್ನೂ ವ್ಯಾಪಾರಸಂಸ್ಥೆಗಳವರನ್ನೂ ಕೋರಿದ್ದಾರೆ, ಅಲ್ಲವೆ? ತುಂಬಾ ಅಗ್ಗದ ದರದಲ್ಲಿ ಅವರಿಗೆ ಜಮೀನನ್ನು ಒದಗಿಸುತ್ತೇವೆ, ಅರ್ಧ ದರಕ್ಕೇ ವಿದ್ಯುತ್ತನ್ನೂ ನೀರನ್ನೂ ಒದಗಿಸುತ್ತೇವೆ, ತೆರಿಗೆ ರಿಯಾಯಿತಿ ಕೊಡುತ್ತೇವೆ – ಎಂದೆಲ್ಲ ಆಶ್ವಾಸನೆ ನೀಡಿ ಬಂದಿದ್ದಾರಲ್ಲವೆ? ನಮ್ಮಲ್ಲಿ ಯಥೇಷ್ಟ ಪ್ರಾಕೃತಿಕ ಸಂಪನ್ಮೂಲಗಳೂ ಮಾನವಸಂಪನ್ಮೂಲವೂ ಇವೆ, ಇಲ್ಲಿಗೆ ಬರುವವರಿಗೆ ಸ್ವಾಗತ ಕಾದಿರುತ್ತದೆ – ಎಂದಿದ್ದಾರಲ್ಲವೆ? ನಾನೂ ಹಾಗೆಯೇ ಮಾಡುತ್ತೇನೆ ಎನ್ನುತ್ತಿದ್ದೇನೆ.
ಅಂದರೆ ವಿದೇಶೀ ಸಂಸ್ಥೆಗಳವರು ಹಣದ ಮೂಟೆಗಳೊಡನೆ ಇಲ್ಲಿ ಬಂದು ಕನಿಷ್ಠ ದರದಲ್ಲಿ ಸಂಪನ್ಮೂಲಗಳನ್ನು ಬಳಸಿಕೊಂಡು ಉತ್ಪನ್ನಗಳನ್ನು ಅಧಿಕ ಬೆಲೆಗೆ ಮಾರಿ ಯಥೇಷ್ಟ ಲಾಭವನ್ನು ಗಳಿಸಲಿ – ಎಂದು ನಿಮ್ಮ ಅಭಿಪ್ರಾಯವೆ?
ಆತ ಸ್ವಲ್ಪ ಖಿನ್ನನಾದಂತೆನಿಸಿ ಹಾಗೇನಿಲ್ಲ…. ಎಂದ.
ಇಲ್ಲಿ ಉತ್ಪಾದನೆಗೊಳ್ಳುವುದನ್ನು ಇಲ್ಲಿಯವರೇ ಕೊಳ್ಳಲಾರರು, ಹೆಚ್ಚಿನವರು ಬಡತನದಲ್ಲಿರುವುದರಿಂದ – ಎಂದು ನಿಮ್ಮ ಅಭಿಪ್ರಾಯವೆ?
ಹಾಗೇನಿಲ್ಲ ಮೇಡಂ. ನನ್ನ ಮಾತನ್ನು ತಪ್ಪಾಗಿ ತಿಳಿಯಬೇಡಿ. ನಾನು ಅಂತಹ ಮಾತುಗಳನ್ನು ಹೇಳಿದರೆ ನನ್ನ ಸ್ಥಾನಕ್ಕೇ ಸಂಚಕಾರ ಬಂದೀತು. ನನ್ನ ಕ್ಷೇತ್ರದ ಜನರ ಕ್ಷೇಮವು ನನ್ನ ಹೊಣೆಗಾರಿಕೆಯಾಗಿರುವುದರಿಂದ ಬೇರೆ ಕಡೆಗಳಿಂದ ಬಂಡವಾಳ ಸಂಗ್ರಹಿಸಿಯಾದರೂ ಇಲ್ಲಿಯವರ ಸ್ಥಿತಿಯನ್ನು ಸುಧಾರಿಸಲು ನಾನು ಇಚ್ಛಿಸುವೆ. ಈ ಎಲ್ಲ ವ್ಯವಹಾರವೂ ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಆಶ್ವಾಸನೆ ಕೊಡುತ್ತಿದ್ದೇನೆ. ನಮಸ್ತೇ.
ಇನ್ನೇನೂ ಪ್ರಶ್ನೆಗಳಿಗೆ ಅವಕಾಶವಿಲ್ಲವೆಂದು ಸೂಚಿಸುವಂತೆ ಆತ ಎದ್ದುನಿಂತ.
ಖಿನ್ನಮನಸ್ಕರಾಗಿ ಅಲ್ಲಿಂದ ತೆರಳಿದ ಮಂಜರಿ ಮತ್ತು ಪ್ರಕಾಶ್ ಹಿಂದಿನ ಜಿಲ್ಲಾ ಕಲೆಕ್ಟರನನ್ನು ಭೇಟಿ ಮಾಡಲು ಹೊರಟರು.
ಆತ ಇವರು ಹೇಳಿದುದನ್ನೆಲ್ಲ ಕೇಳಿದ ಮೇಲೆ ಹೀಗೆಂದ: ಈಗಲೂ ಕೂಡಾ ಅಂತಹ ಗ್ರಾಮಗಳು ಇವೆಯೆಂದರೆ ಆಶ್ಚರ್ಯವಾಗುತ್ತದೆ. ಸರ್ಕಾರದ ವರದಿಗಳನ್ನು ನೀವೇ ನೋಡಿರಿ. ಈಗಿನ ದಿನಗಳಲ್ಲಿ ಅಂತಹ ಗ್ರಾಮಗಳು ಇರುವುದು ಸಾಧ್ಯವೇ ಇಲ್ಲವೇನೊ. ಆದರೂ ನೀವು ಹೇಳಿರುವುದನ್ನು ಮನಸ್ಸಿನಲ್ಲಿ ಇರಿಸಿಕೊಂಡು ಈ ವಿಷಯದಲ್ಲಿ ಇನ್ನು ಮುಂದೆ ಏನು ಮಾಡಬಹುದೆಂದು ಆದೇಶ ಕಳಿಸುವಂತೆ ಮಂಡಲಾಧಿಕಾರಿಗಳಿಗೆ ಪತ್ರ ಬರೆಯುತ್ತೇನೆ. ಆದರೂ ನನಗನಿಸುವುದು – ಜನರು ತಮಗೆ ಏನು ಬೇಕೆಂದು ಕೇಳದಿದ್ದಲ್ಲಿ ಯಾವ ಅಧಿಕಾರಿಗಳು ತಾನೇ ಏನು ಮಾಡಬಲ್ಲರು? ಕೇಳದ ಹೊರತು ಮಗುವಿಗೆ ತಾಯಿಯೂ ಅನ್ನ ನೀಡುವುದಿಲ್ಲ ಎಂಬ ಗಾದೆಮಾತು ಇದೆಯಷ್ಟೆ. ಸ್ಪಷ್ಟವಾಗಿ ಕೇಳುವ ಹೊಣೆಗಾರಿಕೆ ಜನರದೇ ಅಲ್ಲವೆ?
ಮಂಜರಿ ಕೇಳಿದಳು: ಜಪಾನ್ ದೇಶದ ಒಂದು ಕುಗ್ರಾಮದಲ್ಲಿ ಒಬ್ಬಳೇ ಒಬ್ಬ ಬಾಲಿಕೆ ದೂರದ ಶಾಲೆಗೆ ಹೋಗಿಬರುವ ಇಚ್ಛೆ ವ್ಯಕ್ತಪಡಿಸಿದಾಗ ಅವಳೊಬ್ಬಳಿಗಾಗಿ ಸರ್ಕಾರ ಅವಶ್ಯ ವ್ಯವಸ್ಥೆಗಳನ್ನು ಮಾಡಿತೆಂದು, ಪ್ರತ್ಯೇಕ ರೈಲನ್ನೇ ಏರ್ಪಡಿಸಿತೆಂದು ಓದಿದ್ದೇವೆ. ಹಾಗಿರುವಾಗ ಪ್ರಾಥಮಿಕ ಆವಶ್ಯಕತೆಗಳಿಗೂ ನೀವು ಏರ್ಪಾಡು ಮಾಡಲಾರಿರಾ?
ಭಾರತವೂ ಜಪಾನ್ ಆದ ಮೇಲೆ ನಾವೂ ಮಾಡಿ ತೋರಿಸುತ್ತೇವೆ! ಎಂದ ಆತ ನಗುತ್ತ.
ಆತ ಹೊರಡಲು ಸಿದ್ಧನಾದುದನ್ನು ಗಮನಿಸಿ ಮಂಜರಿ ಕೇಳಿದಳು:
ಸಾರ್, ಕಡೆಯ ಒಂದು ಪ್ರಶ್ನೆ. ಕೇಂದ್ರ-ರಾಜ್ಯ ಮಂತ್ರಿಗಳೂ ಅಧಿಕಾರಿಗಳೂ ದಿನಕ್ಕೊಂದು ಹೊಸ ಯೋಜನೆ ಘೋಷಿಸುತ್ತಿರುತ್ತಾರೆ. ಆದರೆ ನೆಲಮಟ್ಟದಲ್ಲಿ ಪರಿಸ್ಥಿತಿ ಬೇರೆಯೆ ಆಗಿರುತ್ತದೆ. ಎರಡಕ್ಕೂ ತಾಳಮೇಳವೇ ಇರುವುದಿಲ್ಲವೆನಿಸುತ್ತದೆ. ಜನರ ಆವಶ್ಯಕತೆಯನ್ನು ಅಂತಹ ಯೋಜನೆಗಳು ಪೂರೈಸುತ್ತಿಲ್ಲವೇನೊ ಎನಿಸುತ್ತದೆ. ಜನರ ಮೂಲಭೂತ ಆವಶ್ಯಕತೆಗಳೇನು, ಅವರ ಆದ್ಯತೆಗಳು ಏನು, ಅವರಿಗೆ ಏನು ಬೇಕು, ಎಷ್ಟು ಬೇಕು ಮೊದಲಾದವನ್ನು ತಿಳಿದುಕೊಳ್ಳದೆಯೇ ಹವಾನಿಯಂತ್ರಿತ ಕೋಣೆಗಳಲ್ಲಿ ಕುಳಿತು ಏನೇನೋ ಯೋಜನೆಗಳನ್ನು ಆವಿಷ್ಕರಿಸುತ್ತಿರುವಂತಿದೆ. ಗಾಂಧಿಯವರೂ ಗ್ರಾಮಸ್ವರಾಜ್ಯವನ್ನು ಅಪೇಕ್ಷಿಸಿದ್ದರು. ಆದರೀಗ ರಾಜ್ಯವಾಗಲಿ ಕೇಂದ್ರವಾಗಲಿ ಆ ವಿಷಯಗಳ ಬಗೆಗೆ ಸ್ವತಂತ್ರವಾಗಿ ಯೋಚಿಸುತ್ತಿವೆ ಎಂದೇ ಅನಿಸುತ್ತಿಲ್ಲ. ನೀವೇನೆನ್ನುತ್ತೀರಿ?
ದೇಶದ ಅಭಿವೃದ್ಧಿಗೆ ವಿಶಿಷ್ಟ ಸನ್ನಿವೇಶಗಳೂ ಕಾಲಮಾನಗಳೂ ಇರುತ್ತವೆ ಎಂದು ಗ್ರಹಿಸಿದರೆ ನಿಮ್ಮ ಪ್ರಶ್ನೆಗಳಿಗೆ ಸಮಾಧಾನ ಸಿಕ್ಕೀತು. ಅದನ್ನು ಅರ್ಥಮಾಡಿಕೊಳ್ಳದೆ ಆರೋಪಗಳನ್ನು ಮಾಡಿದರೆ ಏನು ಪ್ರಯೋಜನ?
ಮಂಜರಿಗೆ ಕಣ್ಣೀರನ್ನು ತಡೆದುಕೊಳ್ಳುವುದೇ ಕಷ್ಟವಾಯಿತು.
ಯೋಚನೆ ಮಾಡಬೇಡಿ, ಈಗ ಸಿಕ್ಕಿರುವಷ್ಟು ಮಾಹಿತಿ ಅರ್ಧ ಗಂಟೆಯ ಪ್ರೋಗ್ರಾಂಗೆ ಸಾಕಾಗಬಹುದು ಎಂದು ಮಂಜರಿಯನ್ನು ಸಮಾಧಾನಪಡಿಸಿದ, ಪ್ರಕಾಶ್.
ಸ್ಟುಡಿಯೋಗೆ ಹಿಂದಿರುಗಿ ಮಂಜರಿ ಸಂಪಾದಕರೊಡನೆ ಕುಳಿತು ನಡುನಡುವೆ ಪ್ರಮುಖರ ಹೇಳಿಕೆಗಳನ್ನು ಅಳವಡಿಸಿ ವರದಿಯನ್ನು ಸಿದ್ಧಪಡಿಸಿದಳು. ಅದು ಪ್ರಸಾರವೂ ಆಯಿತು.
ವೀಕ್ಷಕರಿಂದ ಹೇಳಿಕೊಳ್ಳುವಷ್ಟು ಪ್ರತಿಕ್ರಿಯೆಗಳೇನೂ ಬರಲಿಲ್ಲ. ಈ ಪ್ರಸಾರದ ಸಮಯದಲ್ಲಿಯೆ ಬೇರೊಂದು ಚ್ಯಾನೆಲಿನಲ್ಲಿ ಪ್ರಸಾರಗೊಂಡ ಸಿನೆಮಾ ನಾಯಕನಟನನ್ನು ಕುರಿತ ಕಾರ್ಯಕ್ರಮಕ್ಕೆ ತುಂಬಾ ಪ್ರತಿಕ್ರಿಯೆಗಳು ಬಂದವು.
ನಿನ್ನ ಶ್ರಮವೆಲ್ಲ ನೀರಿನಲ್ಲಿ ಮಾಡಿದ ಹೋಮವಾಯಿತೆ? ಎಂದು ಪ್ರೋಗ್ರಾಂ ಎಕ್ಸಿಕ್ಯೂಟಿವ್ ಮೂದಲಿಸಿದ. ಮಂಜರಿ ಹತಾಶೆಗೊಳ್ಳದೆ ಏನು ಮಾಡಬೇಕೋ ಅದನ್ನು ಮಾಡಿಯೇ ಮಾಡುತ್ತೇನೆ ಎಂದುಕೊಂಡಳು.
ಸ್ವಲ್ಪ ಸಮಯದ ನಂತರ ಒಬ್ಬ ಚಿತ್ರನಟನಿಗೆ ಒಂದು ಗ್ರಾಮವನ್ನು ದತ್ತಕ ತೆಗೆದುಕೊಳ್ಳುವ ಇಚ್ಛೆಯಿದ್ದ ಸುದ್ದಿ ಪ್ರಕಟಗೊಂಡಿತು. ಮಂಜರಿ ಹೋಗಿ ಆತನನ್ನು ಭೇಟಿಯಾದಳು. ಆತನ ಸಂಕಲ್ಪಕ್ಕಾಗಿ ಅಭಿನಂದನೆ ಹೇಳಿ, ಪಾತೂರಿನ ಬಗೆಗೆ ತಿಳಿಸಿ ಅದನ್ನು ದತ್ತಕಕ್ಕೆ ತೆಗೆದುಕೊಂಡರೆ ಗ್ರಾಮದ ಜನತೆಗೆ ಸಹಾಯವಾಗುವುದಲ್ಲದೆ ಆತನ ಹೆಸರೂ ಶಾಶ್ವತಗೊಳ್ಳುವುದಾಗಿ ಅವನನ್ನು ಓಲೈಸಲು ಯತ್ನಿಸಿದಳು.
ಆದರೆ ಆತ ಹೇಳಿದ – ಇದೊಳ್ಳೆ ಸಲಹೆ ತಂದಿರಲ್ಲ! ಎಲ್ಲಿಯೋ ದೂರದ ಹಳ್ಳಿಗೆ ನಾನು ಹೋಗುವುದು ಸಾಧ್ಯವಾದೀತೆ? ಇಲ್ಲಿಗೆ ಹತ್ತಿರದಲ್ಲಿರುವ ಈಗಾಗಲೇ ಸ್ವಲ್ಪ ಅಭಿವೃದ್ಧಿ ಹೊಂದಿರುವ ಗ್ರಾಮವಾದರೆ ನನ್ನ ಟ್ರಸ್ಟಿನ ಮೂಲಕ ಕೆಲವು ಸೇವಾ ಕಾರ್ಯಕ್ರಮಗಳನ್ನು ನಡೆಸಬಹುದು. ಒಂದಷ್ಟು ಪ್ರಚಾರ ಸಿಕ್ಕೀತು. ಪ್ರಚಾರ ಬೇಡವೆನ್ನುವವನು ನಾನಲ್ಲ. ನೀವು ಹೇಳುವುದನ್ನು ಕೇಳಿದರೆ ಆ ಗ್ರಾಮದ ಜನ ಸೋಮಾರಿಗಳೇನೊ ಅನಿಸುತ್ತದೆ. ಅವರ ಬಗೆಗೆ ಅನುಕಂಪ ಮೂಡುತ್ತದೆ. ಆದರೆ ನಾನೇನೂ ಮಾಡಬೇಕೆನಿಸುತ್ತಿಲ್ಲ.
ಪಾಪ, ಅವರು ಗಂಗೆ ಗೋವಿನಂತೆ ಮುಗ್ಧ ಜನ ಸಾರ್!
ಹಾಲು ಕರೆಯದ ಗೋವು ಯಾರಿಗೆ ಬೇಕಾಗಿದೆ! ಐ ಆಮ್ ಸಾರಿ.
ಮುಂದೆ ಏನು ಮಾಡಬೇಕೆಂದು ತೋರದೆ ಮರುದಿನ ಮಂಜರಿ ಯೂಟ್ಯೂಬ್, ಫೇಸ್ಬುಕ್, ವಾಟ್ಸಾಪ್ ಎಲ್ಲಕ್ಕೂ ತನ್ನ ಚ್ಯಾನೆಲ್ನಲ್ಲಿ ಪ್ರಸಾರವಾಗಿದ್ದ ಕಾರ್ಯಕ್ರಮದ ಲಿಂಕ್ ಏರ್ಪಡಿಸಿ ತನ್ನ ಅನಿಸಿಕೆಗಳನ್ನೂ ಸೇರಿಸಿದಳು. ವೀಕ್ಷಕರೊಬ್ಬೊಬ್ಬರೂ ಅದನ್ನು ಹತ್ತು ಮಂದಿಯೊಡನೆ ಹಂಚಿಕೊಳ್ಳಬೇಕೆಂದೂ ಕೋರಿದಳು.
ಹಲವಾರು ಪ್ರತಿಕ್ರಿಯೆಗಳು ಬಂದವು. ಕೆಲವರು ಸಣ್ಣ ಮೊತ್ತಗಳನ್ನು ದೇಣಿಗೆಯಾಗಿ ಕೊಡಬಲ್ಲೆವು ಎಂದರು. ಒಂದು ಸಂಸ್ಥೆಯವರು ನಿಮ್ಮ ಪ್ರಾಜೆಕ್ಟ್ ರಿಪೋರ್ಟ್ ಕಳಿಸಿರಿ. ಒಟ್ಟು ಮೊತ್ತದ ಶೇ. ೨೫ ರಷ್ಟನ್ನು ಗ್ರಾಮಸ್ಥರು ಭರಿಸಿದರೆ ನಾವು ಉಳಿದ ಹಣಕ್ಕೆ ವ್ಯವಸ್ಥೆ ಮಾಡುವ ಯೋಚನೆ ಮಾಡಬಹುದು ಎಂದರು.
ಏನೂ ತೋರದೆ ಆ ಮಾಹಿತಿಯನ್ನೇ ಇತರರಿಗೂ ಕಳಿಸಿದಳು ಮಂಜರಿ.
ಚೈತನ್ಯ ಎಂಬಾತ ಪೋಸ್ಟ್ ಮಾಡಿದ ಉತ್ತರ ಮಂಜರಿಯನ್ನು ಚಕಿತಗೊಳಿಸಿತು:
ಜನರು ತಮ್ಮ ಊರನ್ನಾಗಲಿ ದೇಶವನ್ನಾಗಲಿ ತಾವೇ ಅಭಿವೃದ್ಧಿಪಡಿಸಿಕೊಳ್ಳಬೇಕಾಗುತ್ತದೆ. ಇರುವ
ಸಂಪನ್ಮೂಲಗಳನ್ನು ಗರಿಷ್ಠ ಸ್ಥಾಯಿಯಲ್ಲಿ ಬಳಸಿಕೊಳ್ಳಬೇಕು. ಅದಕ್ಕೆ ಬೇಕಾದ ಶಿಕ್ಷಣವನ್ನು ತರುಣರಿಗೆ ಕೊಡಬೇಕು. ಅಭಿವೃದ್ಧಿಗೆ ಅನುಕೂಲಕರವಾದ ಪರಿಸರವನ್ನು ಕಲ್ಪಿಸಬೇಕು. ಅಲ್ಲಲ್ಲಿಯ ಆವಶ್ಯಕತೆಗಳಿಗೆ ಹೊಂದುವಂತಹ ಯೋಜನೆಗಳನ್ನು ರೂಪಿಸಿಕೊಳ್ಳಬೇಕು. ಹೀಗೆ ಮಾಡುವುದನ್ನು ಬಿಟ್ಟು ಯಾರೋ ಹೊರಗಿನಿಂದ ಮೂಟೆಗಳಲ್ಲಿ ಹಣವನ್ನು ತಂದರೆ ತಮ್ಮ ಗ್ರಾಮದ ಪ್ರಗತಿ ಸಾಧ್ಯ ಎಂದು ಆಶಿಸಬಾರದು. ಒಬ್ಬರ ಅಭಿವೃದ್ಧಿಯ ಬಗೆಗೆ ಇನ್ನೊಬ್ಬರು ಎಷ್ಟು ಮಾತ್ರ ಹಚ್ಚಿಕೊಂಡಾರು? ಅವರು ಒಂದಲ್ಲ ಒಂದು ರೀತಿಯ ಸ್ವಪ್ರಯೋಜನದ ಮೇಲೆಯೆ ಕಣ್ಣನ್ನು ಇಟ್ಟಿರುತ್ತಾರೆ. ಕೆಲವರು ಇಲ್ಲಿಯ ಸಂಪನ್ಮೂಲಗಳನ್ನು ದೋಚಿ ಅಸ್ಥಿಪಂಜರವನ್ನಷ್ಟೆ ಉಳಿಸಿ ಹೋಗಬಹುದು. ಅಂತಹವರ ಲಾಭಕ್ಕಾಗಿ ಇಲ್ಲಿಯವರು ಬಲಿದಾನ ಮಾಡಬೇಕೆ?
ಗಾಢವಾಗಿ ಯೋಚಿಸಿದ ಮೇಲೆ ಮಂಜರಿ ಒಂದು ನಿರ್ಣಯಕ್ಕೆ ಬಂದಳು.
ಪಾತೂರಿಗೆ ತೆರಳಿ ಅಲ್ಲಿಯ ಪ್ರಮುಖರನ್ನು ಸೇರಿಸಿ ಅವರಿಗೆ ಹೇಳಿದಳು:
ಸರ್ಕಾರಕ್ಕೂ ರಾಜಕೀಯ ಪಕ್ಷಗಳಿಗೂ ನೇತಾರರಿಗೂ ನಾನು ಅಲ್ಟಿಮೇಟಂ ಕಳಿಸಿದ್ದೇನೆ: ಬರುವ ಆಗಸ್ಟ್ ೧೫ ಮಧ್ಯಾಹ್ನ ೧೨ ಗಂಟೆಯೊಳಗೆ ಈ ಗ್ರಾಮದ ಸ್ಥಿತಿಯನ್ನು ಸುಧಾರಿಸಲು ಕ್ರಮಗಳನ್ನು ಕೈಗೊಳ್ಳದಿದ್ದಲ್ಲಿ ಜನರು ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ – ಎಂದು.
ಸ್ಥಾನಿಕರು ಅವಳತ್ತ ನಿರ್ಭಾವುಕರಾಗಿ ನೋಡುತ್ತ ನಿಂತಾಗ ಅವಳು ಗೊಂದಲಕ್ಕೆ ಈಡಾದಳು. ಅವರ ಆಂತರ್ಯವೇನೆಂದು ಊಹಿಸಲಾರದಾದಳು.
ನಾಡಿನೆಲ್ಲೆಡೆ ಸ್ವಾತಂತ್ರ್ಯೋತ್ಸವದ ಸಂಭ್ರಮ ನಡೆಯುತ್ತಿತ್ತು. ಆದರೂ ಒಂದಷ್ಟು ಮಂದಿ ಮಾಧ್ಯಮದವರು ಪಾತೂರಿಗೆ ಬಂದಿಳಿದರು. ಕೆಲವರು ಕೇಂದ್ರ ನಾಯಕರೂ ಸ್ಥಳೀಯ ಮುಖಂಡರೂ ವಿಪಕ್ಷಗಳವರೂ ಕೂಡಾ ಬಂದರು, ಅನುಚರರೊಡನೆ.
ಇಲ್ಲಿಯ ಪರಿಸ್ಥಿತಿಗೆ ತಮ್ಮ ಉದಾಸೀನತೆಯಿಂದ ಕಾರಣರಾದ ಕೇಂದ್ರ ಸರ್ಕಾರದವರನ್ನು ಕೈಬಿಟ್ಟು ನಮ್ಮನ್ನು ಚುನಾಯಿಸಿದರೆ ನಿಮ್ಮ ಊರನ್ನು ಸಿಂಗಾಪುರ ಮಾಡಿಯೇವು ಎಂದು ವಿರೋಧಪಕ್ಷ ನಾಯಕ ಭಾಷಣ ಬಾರಿಸಿದ.
ಅಧಿಕಾರಾರೂಢ ಪಕ್ಷದ ನಾಯಕ ವಿಪಕ್ಷಗಳವರಿಗೆ ಹೇಳಿದ – ಇದಕ್ಕೆಲ್ಲ ನೀವೇ ಕಾರಣ. ಈ ಭಾಗವನ್ನು ಮರುಭೂಮಿಯಾಗಿಸಿರುವವರು ನೀವೇ. ಸಮಸ್ಯೆಗಳ ಪರಿಹಾರಕ್ಕಾಗಿ ನಮ್ಮಲ್ಲೇನು ಮಂತ್ರದಂಡ ಇಲ್ಲವಲ್ಲ! ಯಾರ ಹಯಾಮಿನಲ್ಲಿ ಎಷ್ಟು ಅಭಿವೃದ್ಧಿಕಾರ್ಯ ನಡೆದಿದೆಯೋ ಲೆಕ್ಕ ಮಾಡಿದಲ್ಲಿ ನಿಜಸ್ಥಿತಿ ಬಯಲುಗೊಳ್ಳುತ್ತದೆ. ನಿಮ್ಮನ್ನು ಬಹಿರಂಗ ಚರ್ಚೆಗೆ ಆಮಂತ್ರಿಸುತ್ತಿದ್ದೇನೆ.
ಇದೇ ಧಾಟಿಯಲ್ಲಿ ಎರಡು ಬಣಗಳ ಅನುಚರರ ನಡುವೆಯೂ ವಾಗ್ಯುದ್ಧ ನಡೆಯಿತು.
ಈ ಸನ್ನಿವೇಶದಿಂದ ಖುಷಿಗೊಂಡವರು ಮಾಧ್ಯಮದವರು. ಅವರು ಲೈವ್ ಕವರೇಜ್ಗಾಗಿ ಎದುರಿಗೆ ಸಿಕ್ಕ ಸಿಕ್ಕವರ ಅಭಿಪ್ರಾಯಗಳನ್ನು ಕೇಳಿ ಸಂಗ್ರಹಿಸತೊಡಗಿದರು. ಪರಿಣಾಮವಾಗಿ ಈ ಗ್ರಾಮದ ಬಗೆಗೆ ದೂರದರ್ಶನದಲ್ಲಿಯೂ ಚರ್ಚೆ ನಡೆಯತೊಡಗಿತು.
ಮಧ್ಯಾಹ್ನ ಆಗುತ್ತಿದ್ದಂತೆ ಎಲ್ಲರ ಗಂಟಲೂ ಒಣಗಿತ್ತು. ತಂದಿದ್ದ ನೀರಿನ ಬಾಟಲ್ಗಳು ಖಾಲಿಯಾಗಿದ್ದವು. ಈ ಊರಿನಲ್ಲಿ ಕುಡಿಯುವ ನೀರು ದೊರಕದೆಂದು ಅವರು ಊಹಿಸಿರಲಿಲ್ಲ. ಕೆಲವರು ಉಪಾಯವಾಗಿ ಅಲ್ಲಿಂದ ಜಾರಿಕೊಂಡರು.
ಮಾಧ್ಯಮದವರ ಕಡೆಯ ಒಬ್ಬಾತ ಮಂಜರಿಯ ಬಳಿಗೆ ಬಂದು ಕೇಳಿದ – ಈಗ ಏನಾಗುತ್ತದೆ? ಮಧ್ಯಾಹ್ನದ ಸಮಯವೂ ದಾಟುತ್ತಿದೆ. ಜನರು ನಿಜವಾಗಿ ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸಿದ್ದಾರೆಯೆ? ಅಥವಾ ಆ ಯೋಚನೆಯನ್ನು ಕೈಬಿಟ್ಟಿದ್ದಾರೆಯೆ?
ಅವನ ಕಡೆಗೆ ಮಂಜರಿ ಖಿನ್ನಳಾಗಿ ನೋಡಿದಳು. ತಾನು ಕೇಳಿದುದು ಅನುಚಿತವಾಯಿತೋ ಏನೋ ಎಂದು ಚಿಂತಿಸುತ್ತ ಅವನೂ ಅಲ್ಲಿಂದ ನಿಷ್ಕ್ರಮಿಸಿದ.
ಕಟ್ಟಕಡೆಗೆ ಮಂಜರಿ ಮತ್ತು ಗ್ರಾಮಸ್ಥರಷ್ಟೆ ಅಲ್ಲಿ ಉಳಿದರು.
ಇಷ್ಟರಲ್ಲಿ ಚೈತನ್ಯನ ನಾಯಕತ್ವದಲ್ಲಿ ಹಲವರು ಯುವಕ-ಯುವತಿಯರ ತಂಡ ಅಲ್ಲಿಗೆ ಬಂದು ಸೇರಿತು. ಅವರತ್ತ ಸ್ಥಳೀಯರು ಕುತೂಹಲದಿಂದ ನೋಡಿದರು. ಆ ತಂಡದವರೆಲ್ಲ ಊರನ್ನು ಮಾರಾಟ ಮಾಡುತ್ತಿದ್ದೇವೆಂಬ ಗೋಡೆಬರಹ ಇದ್ದ ಸ್ಥಳಕ್ಕೆ ಹೋದರು. ಗ್ರಾಮಸ್ಥರು ನೋಡುತ್ತಿದ್ದಂತೆ ಆಗಂತುಕರು ತಾವು ಸಂಗಡ ತಂದಿದ್ದ ಸುಣ್ಣವನ್ನು ಬಳಸಿ ಅಲ್ಲಿದ್ದ ಬರಹವನ್ನು ಅಳಿಸಿಹಾಕಿ ಅದರ ಸ್ಥಾನದಲ್ಲಿ ಬೇರೊಂದು ಪ್ರತಿಜ್ಞಾವಾಕ್ಯವನ್ನು ಹೊಸದಾಗಿ ಬರೆದರು, ಹೀಗೆ:
ಇದು ನಮ್ಮ ಊರು. ಇದು ನಮ್ಮ ಜನ್ಮಭೂಮಿ. ಇದೇ ನಮ್ಮ ಕರ್ಮಭೂಮಿಯಾಗಿದೆ. ಇಲ್ಲಿ ನಮ್ಮೊಡನೆ ಇರುವವರೆಲ್ಲ ನಮ್ಮ ಅಣ್ಣತಮ್ಮಂದಿರು, ಅಕ್ಕತಂಗಿಯರು. ಎಲ್ಲರೂ ಒಟ್ಟಾಗೋಣ, ಸಾಹಸ ಮೆರೆಯೋಣ. ಇದೇ ಭೂಮಿಯಲ್ಲಿ ಹೊಸ ಬೀಜಗಳನ್ನು ನೆಡೋಣ, ಬನ್ನಿ. ಶ್ರಮಯಜ್ಞ ನಮ್ಮದಾಗಲಿ. ನಮ್ಮ ಗ್ರಾಮದ ಪುನರ್ನಿರ್ಮಾಣ ಮಾಡುವುದರಲ್ಲಿ ಎಲ್ಲರೂ ಬೆವರು ಸುರಿಸಿ ಭಾಗಿಗಳಾಗೋಣ.
(ತೆಲುಗಿನಿಂದ ಅನುವಾದ: ಎಸ್.ಆರ್.ಆರ್.)