ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಉತ್ಥಾನ ಡಿಸೆಂಬರ್ 2021 > ಮೃಗಜಲದಿಂದ ಧ್ರುವಜಲದೆಡೆಗೆ

ಮೃಗಜಲದಿಂದ ಧ್ರುವಜಲದೆಡೆಗೆ

* ಸಂತ ಜ್ಞಾನೇಶ್ವರ ಮಹಾರಾಜರು

ಬ್ರಹ್ಮಜ್ಞಾನಪ್ರಾಪ್ತಿಗೆ ಪೂರ್ವದಲ್ಲಿ ಪ್ರಪಂಚಜ್ಞಾನದ ಆವಶ್ಯಕತೆಯೂ ಇರುತ್ತದೆ. ಇಲ್ಲವಾದರೆ ಸ್ವರೂಪಜ್ಞಾನದ ಕಾಲಕ್ಕೆ ಬುದ್ಧಿಯು ಕುಂಠಿತವಾಗುವುದು. ದಂಡೆಗೆ ಮುಟ್ಟಿದ ನಾವು ಅಲ್ಲಾಡುವುದೆ? ಅದರಂತೆ ಸ್ವರೂಪದಲ್ಲಿ ಬುದ್ಧಿಯು ಪ್ರವೇಶಿಸಲಾರದು. ವಿಚಾರವು ಹಿಂದಿನ ಹೆಜ್ಜೆಯಿಂದಲೇ ಹಿಂತಿರುಗುವುದು ಮತ್ತು ಅದರ ಬಗೆಗೆ ತರ್ಕದ ಚಾತುರ್ಯವು ನಡೆಯದು. ಅರ್ಜುನಾ! ಜ್ಞಾನವೆಂಬುದು ಅದೇ. ಅದರಿಂದ ಹೊರತಾದ ಪ್ರಪಂಚವು ವಿಜ್ಞಾನವು ಮತ್ತು ಆ ಪ್ರಪಂಚದಲ್ಲಿರುವ ಸತ್ಯತ್ವ ಬುದ್ಧಿಯೇ ಅಜ್ಞಾನವೆಂದು ತಿಳಿ. ಈಗ ಅಜ್ಞಾನವೆಲ್ಲ ಇಲ್ಲದಾಗುವುದು, ಪ್ರಪಂಚವೆಲ್ಲ ಹುರುಪಳಿಸುವುದು-ಬಾಧಿತವಾಗುವುದು. ಮತ್ತು ನಾವು ಜ್ಞಾನಸ್ವರೂಪರಾಗುವೆವು.

ಸಾವಿರಾರು ಜನರಲ್ಲಿ ಯಾವನೊಬ್ಬನಿಗೆ ಮಾತ್ರ ಜ್ಞಾನಪ್ರಾಪ್ತಿಯ ಬಯಕೆಯಿರುವುದು. ಮತ್ತು ಇಂತಹ ಬಯಕೆಯುಳ್ಳ ಹಲವರಲ್ಲಿ ನನ್ನನ್ನು ಅರಿತಿರುವವನು ಕ್ವಚಿತ್ತಾಗಿ ತೋರುವನು. ಅರ್ಜುನ! ತುಂಬಿದ ಜಗತ್ತಿನೊಳಗಿಂದ ಒಬ್ಬೊಬ್ಬರಂತೆ. ಶೂರರಾದವರನ್ನು ಆಯ್ದುಕೊಳ್ಳುತ್ತ ಲಕ್ಷಾವಧಿ ಸೈನ್ಯವನ್ನು ಕೂಡಿಸುವರು. ಅನಂತರ ಪ್ರತ್ಯಕ್ಷವಾಗಿ ಶಸ್ತ್ರಾಸ್ತ್ರಗಳ ಹೊಡೆತವು ಮೈಮೇಲೆ ಬರುತ್ತಿರುವಾಗ, ವಿಜಯಲಕ್ಷ್ಮಿಯ ಸಿಂಹಾಸನವನ್ನು ಕ್ವಚಿತ್ತಾಗಿ ಯಾವನೊಬ್ಬನು ಅಲಂಕರಿಸುವನು (ಯಾವನೊಬ್ಬನೇ ವಿಜಯಿಯಾಗುವನು). ಅದರಂತೆ ಭಗವತ್ಪ್ರಾಪ್ತಿಯ ಭಾವನೆಯ ಮಹಾಪೂರದಲ್ಲಿ ಕೋಟ್ಯವಧಿ ಜನರು ಹಾರಿಕೊಳ್ಳುವರು. ಆದರೆ ಪ್ರಾಪ್ತಿರೂಪವಾದ ಆಚೆಯ ದಡವನ್ನು ಯಾವನೋ ಒಬ್ಬನು ಕಾಣುವನು. ಆದ್ದರಿಂದ ಈ ಸಂಗತಿಯು ಸಾಮಾನ್ಯವಾಗಿಲ್ಲ. ಒಳ್ಳೆ ಮಹತ್ತ್ವದ್ದಾಗಿದೆ.

ಸೂಕ್ಷ್ಮವಾದ ಪರಾಪ್ರಕೃತಿಯು ಸ್ಥೂಲರೂಪವನ್ನು ಹೊಂದಿದಾಗ ಪ್ರಾಣಿಗಳ ಉತ್ಪತ್ತಿಯ ಟಂಕಸಾಲೆಯೇ ಆರಂಭವಾಗುವುದು. ಆದಿಶೂನ್ಯವಾದ ಈ ಮಾಯೆಯ ಭಂಡಾರವು ಬಗೆಬಗೆಯ ನಾಣ್ಯಗಳಿಂದ ತುಂಬಿಹೋಗಿರುವುದು. ಅವುಗಳ ಪರಿಮಿತಿಯನ್ನು ಆ ಪ್ರಕೃತಿಯೇ ಬಲ್ಲದು. ಇಂತು ಮೊದಲೇ ಪರಿಮಿತಿಯನ್ನು  ಗೊತ್ತುಪಡಿಸಿ ನಾಣ್ಯಗಳನ್ನು ಉತ್ಪತ್ತಿ ಮಾಡುವುದು, ಅವನ್ನೆಲ್ಲ ಕರಗಿಸುವುದು ಮತ್ತು ಮಧ್ಯಂತರಕಾಲದಲ್ಲಿ ಪ್ರಾಣಿಗಳಿಂದ ಕರ್ಮಾಕರ್ಮಗಳ ವ್ಯವಹಾರವನ್ನು ಮಾಡಿ ತೋರಿಸುವುದು! ಇಂತು ರೂಪಕದ ಬಣ್ಣನೆ ಸಾಕು.

ಈ ವಿಶ್ವಕ್ಕೆ ಆಕಾರವಿರುವವರೆಗೆ ವಿಶ್ವರೂಪದಿಂದ ಭಾಸಿಸುವವನೂ ಪ್ರಲಯ ಕಾಲದಲ್ಲಿ ಯಾವುದೇ ಸ್ಥೂಲರೂಪದಿಂದ ತೋರದವನೂ ಮತ್ತು ಸ್ವಭಾವತಃ ಅನಾದಿಯಾಗಿರುವವನೂ ಆದ ವಿಶ್ವ ಬೀಜವೆನಿಸಿದ ಓಂಕಾರನು ನಾನು. ಈ ವಿಚಾರವನ್ನು ನಾನು ಪ್ರಕಟವಾಗಿ ನಿನ್ನ ಕೈಯಲ್ಲಿ ಕೊಡುತಲಿರುವೆ (ಸ್ಪಷ್ಟವಾಗಿ ಹೇಳುವೆ). ಅನಂತರ ನೀನು ಇದನ್ನು ತಿಳಿದುಕೊಂಡು, ಚೆನ್ನಾಗಿ ವಿಚಾರ ಮಾಡಿದರೆ, ಇದರ ಉಪಯೋಗವು ಚೆನ್ನಾಗಿದೆಯೆಂಬುದನ್ನು ನೀನು ತಿಳಿಯುವಿ.

[ಜ್ಞಾನೇಶ್ವರೀ ಗೀತೆ, ಅಧ್ಯಾಯ ೭.

ಅನುವಾದ: ಅಣ್ಣಪ್ಪಪ ಕೃಷ್ಣಾಜಿರಾವ ಕುಲಕರ್ಣಿ.]

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ