ಸಂಪ್ರಸನ್ನೇ ಭಗವತಿ ಪುರುಷಃ ಪ್ರಾಕೃತೈರ್ಗುಣೈಃ |
ವಿಮುಕ್ತೋ ಜೀವನಿರ್ಮುಕ್ತೋ ಬ್ರಹ್ಮನಿರ್ವಾಣಮೃಚ್ಛತಿ ||
– ಭಾಗವತ
“ಭಗವಂತನು ಪ್ರಸನ್ನನಾದರೆ ಮನುಷ್ಯನು ತನ್ನ ಪ್ರಾಕೃತಗುಣಗಳ ಸಂಕೋಲೆಗಳಿಂದ ಬಿಡುಗಡೆ ಹೊಂದಿ ತನ್ನ ಜೀವಭಾವವನ್ನು ಕೊಡವಿಕೊಂಡು ಪರಬ್ರಹ್ಮಸ್ವರೂಪವಾದ ಮೋಕ್ಷಪದವಿಗೆ ಸೇರಿಕೊಳ್ಳುತ್ತಾನೆ.”
ಭಗವಂತನ ಕೃಪೆಗೆ ನಾವು ಅರ್ಹರಾಗಬೇಕಾದರೆ ಅವನಲ್ಲಿ ನಮಗೆ ಅಸ್ಖಲಿತ ಪ್ರೇಮವೂ ಅವನು ನಮ್ಮನ್ನು ಸಂರಕ್ಷಿಸುತ್ತಾನೆಂಬ ಪೂರ್ಣ ವಿಶ್ವಾಸವೂ ಇರುವುದು ಆವಶ್ಯಕ. ಆದರೆ ನಮ್ಮ ಶ್ರದ್ಧೆಯನ್ನು ನಾವು ಶಬಲಿತಗೊಳಿಸಿಕೊಳ್ಳುವುದು ನಮ್ಮ ದೌರ್ಬಲ್ಯ. ಪ್ರಾಕೃತ ಪ್ರವೃತ್ತಿಗಳನ್ನು ಮೀರಲು ಯತ್ನಿಸುವುದು ಉತ್ಕರ್ಷಮಾರ್ಗದ ಮೊದಲ ಹೆಜ್ಜೆ. ಬಗೆಬಗೆಯ ನಿರೀಕ್ಷೆಗಳ ಈಡೇರಿಕೆ ಮೊದಲಾದವೆಲ್ಲ ನಮ್ಮ ಪ್ರಾಕೃತ ನಡಾವಳಿಗಳ ಕಕ್ಷೆಗೆ ಒಳಪಟ್ಟವೇ ವಿನಾ ಪಾರಮಾರ್ಥಿಕವಾದವಲ್ಲ. ಭಗವಂತನಲ್ಲಿ ಏನೇನೊ ಬೇಡಿಕೆಗಳನ್ನು ಸಲ್ಲಿಸುವುದನ್ನೂ ನಾವು ಭಕ್ತಿಯ ಭಾಗವೆಂದು ಭಾವಿಸಿಬಿಟ್ಟಿರುತ್ತೇವೆ. ಭಗವಂತನೇ ನಮಗೆ ಶರಣ್ಯನೆಂಬ ಭಾವನೆಯೇನೊ ಅಪೇಕ್ಷಣೀಯವೇ. ಆದರೆ ಕಾರುಣ್ಯಮೂರ್ತಿಯಾದ ಭಗವಂತನನ್ನು ನಮಗೆ ಇದನ್ನು ಕೊಡು ಅದನ್ನು ಕೊಡು ಎಂದು ಕೋರಿದಲ್ಲಿ ಅಷ್ಟಷ್ಟುಮಟ್ಟಿಗೆ ನಮ್ಮ ಭಗವಚ್ಛ್ರದ್ಧೆ ಅಸಮಗ್ರವಾದೀತು. ಈ ಸೂಕ್ಷ್ಮತೆಯನ್ನು ಸಂತರು ವಿಧವಿಧವಾಗಿ ಸ್ಫುಟಗೊಳಿಸಿದ್ದಾರೆ.
ಒಂದು ದಾರ್ಶನಿಕ ದೃಷ್ಟಾಂತ ಹೀಗಿದೆ. ಒಮ್ಮೆ ಅತಿವೃಷ್ಟಿಯಾಯಿತು. ಶ್ರೀಮಂತನೊಬ್ಬನಿಗೆ ತನ್ನ ವಿಲಾಸಿಜೀವನಕ್ಕೆ, ಔತಣಕೂಟಗಳಿಗೆ ಅಡ್ಡಿಯಾಗುತ್ತಿದೆಯೆನಿಸಿ ಮಳೆಯನ್ನು ನಿಲ್ಲಿಸುವಂತೆ ದೇವರಲ್ಲಿ ಬೇಡಿದ. ದೂರದ ಇನ್ನೊಂದು ಅನಾವೃಷ್ಟಿ ಪ್ರದೇಶದಲ್ಲಿ ಮಳೆಯನ್ನು ಕರುಣಿಸಿ ತನ್ನ ಜೀವನಾಧಾರವಾದ ಕೃಷಿಗೆ ಅವಕಾಶ ಕಲ್ಪಿಸುವಂತೆ ದೇವರನ್ನು ರೈತನು ಪ್ರಾರ್ಥಿಸುತ್ತಿದ್ದ. ದೇವರು ಯಾರ ಮಾತಿಗೆ ಕಿವಿಗೊಡಬೇಕು? (ಇಂತಹ ‘ಅರ್ಥವಾದ’ ಪ್ರಸಂಗಗಳನ್ನು ಅಕ್ಷರಶಃ ಅರ್ಥೈಸಲೆಳಸದೆ ತಾತ್ಪರ್ಯವನ್ನು ಗ್ರಹಿಸಬೇಕು.) ನಾವು ಭಗವಂತನಲ್ಲಿ ಸಲ್ಲಿಸಬೇಕಾದ ಒಂದೇ ಪ್ರಾರ್ಥನೆಯೆಂದರೆ ‘ಸರ್ವಶಕ್ತಿಮತ್ತ್ವವಿರುವ ನೀನು ನನಗೆ ಯಾವುದು ಹಿತವೆಂದು ನಿರ್ಣಯಿಸುತ್ತೀಯೋ ಅದನ್ನು ಕರುಣಿಸು’ ಎಂಬುದು, ‘ನಿನ್ನಲ್ಲಿ ನನ್ನ ಭಕ್ತಿ ಅವಿಚ್ಛಿನ್ನವಾಗಿರುವಂತೆ ಅನುಗ್ರಹಿಸು’ ಎಂಬುದು ಮಾತ್ರ ನಾವು ಮಾಡಬೇಕಾದ ಪ್ರಾರ್ಥನೆ. ಭಕ್ತಿಯ ಶ್ರೇಷ್ಠರೂಪವೆಂದರೆ ಈ ಬಗೆಯದು.