ಭಾರತೀಯ ಇತಿಹಾಸವನ್ನೂ ಸಮಾಜವನ್ನೂ ನೈಜ ಭಾರತೀಯತೆಯ ದೃಷ್ಟಿಯಿಂದ ವಿಶ್ಲೇಷಿಸಿ ಅವನ್ನು ಅದೇ ರೀತಿಯಲ್ಲಿ ಭಾರತೀಯರಿಗೆ ಕಾಣಿಸಿದ ಸಂಶೋಧಕರಲ್ಲಿ ಅಗ್ರಗಣ್ಯರಾದ ಒಬ್ಬರು ಧರ್ಮಪಾಲ್ (೧೯.೨.೧೯೨೨-೨೪.೧೦.೨೦೦೬). ಭಾರತದಲ್ಲಿನ ಹಾಗೂ ಲಂಡನ್ನಿನ ಲೇಖ್ಯಾಗಾರಗಳಲ್ಲಿ ಅಸೀಮ ಶೋಧನೆ ನಡೆಸಿದ ಧರ್ಮಪಾಲ್ ಪ್ರಚಲಿತ ಕಥನಗಳಿಂದ ಪೂರ್ಣ ಭಿನ್ನವಾದ ಬ್ರಿಟಿಷ್‌ಪೂರ್ವ ಭಾರತದ ಚಿತ್ರಣವನ್ನೂ ಶಿಕ್ಷಣ, ಕೃಷಿ, ವಿಜ್ಞಾನ-ತಂತ್ರಜ್ಞಾನ ಮೊದಲಾದ ಕ್ಷೇತ್ರಗಳಲ್ಲಿ ಭಾರತ ಇಂಗ್ಲೆಂಡಿಗಿಂತ ಬಹುಪಾಲು ಉನ್ನತ ಮಟ್ಟದಲ್ಲಿದ್ದುದನ್ನೂ ಬ್ರಿಟಿಷರದೇ ದಾಖಲೆಗಳ ಆಧಾರದ ಮೇಲೆ ದೃಢವಾಗಿ ಸ್ಥಾಪಿಸಿದ ಸಾಧನೆ ದಿಕ್‌ಪ್ರದರ್ಶಕವೂ ರೋಮಾಂಚಕಾರಿಯೂ ಆದದ್ದು. ಈ ಸತ್ಯದರ್ಶನದ ಬೆಳಕಿನಲ್ಲಿ ಧರ್ಮಪಾಲ್ ಭಾರತದ ಅಭ್ಯುದಯವು ಭಾರತದ ಪರಂಪರೆಯ ಆಧಾರದ ಮೇಲೆಯೆ ನಡೆಯಬೇಕೆಂದು ವರ್ಷಗಳುದ್ದಕ್ಕೂ ಸಮರ್ಥವಾಗಿಯೂ ಸತರ್ಕವಾಗಿಯೂ ಪ್ರತಿಪಾದಿಸಿದರು. ನಿರ್ಣಾಯಕ ಸ್ಥಾನಗಳಲ್ಲಿರುವವರೂ ಸಮಾಜೋನ್ನತ – ‘ಎಲೀಟ್’ ವರ್ಗಗಳವರೂ ಪಾಶ್ಚಾತ್ಯಾಭಿಮುಖತೆಯ ಮಾನಸಿಕತೆಯನ್ನೂ ಅಂಧಾನುಕರಣವನ್ನೂ ರೂಢಿಸಿಕೊಂಡಿರುವ ಹಿನ್ನೆಲೆಯಲ್ಲಿ ಈ ಜಾಡ್ಯಕ್ಕೆ ಚಿಕಿತ್ಸಕರೂಪವಾದ್ದು ಧೀಮಂತ ಧರ್ಮಪಾಲ್‌ರವರ ಚಿಂತನೆ-ವಾಙ್ಮಯಗಳು. ಪರಕೀಯ ದೃಷ್ಟಿ-ಧೋರಣೆಗಳ ಪ್ರಾಚುರ್ಯದಿಂದಾಗಿ ಅಧಿಕಾರಕ್ಕೂ ಸಾಮಾನ್ಯಜನತೆಗೂ ನಡುವೆ ಏರ್ಪಟ್ಟಿರುವ ಬಿರುಕು ಹ್ರಸ್ವಗೊಂಡಲ್ಲಿ ಮಾತ್ರ ದೇಶದ ಅಭ್ಯುದಯ ಸಮ್ಯಗ್ರೀತಿಯಲ್ಲಿ ನಡೆಯುವುದು ಶಕ್ಯವಾದೀತು. ಈ ಕಾರ್ಯಕ್ಕೆ ಬೇಕಾದ ಹೇರಳ ಬೌದ್ಧಿಕ ಸಾಮಗ್ರಿಯನ್ನು ಧರ್ಮಪಾಲ್ ನೀಡಿದ್ದಾರೆ. ಈ ವರ್ಷ ಧರ್ಮಪಾಲ್‌ರವರ ಜನ್ಮಶತಾಬ್ದದ ವರ್ಷವಾಗಿರುವುದರ ಹಿನ್ನೆಲೆಯಲ್ಲಿ ಭಾರತದ ಇತಿಹಾಸದ ಋಜುದೃಷ್ಟಿಯ ಗ್ರಹಿಕೆಗೂ ಅಭ್ಯುದಯ ಚಿಂತನೆಗೂ ಪೋಷಕವಾದ ಅವರ ಕೆಲವು ಮೌಲಿಕ ಚಿಂತನೆಗಳನ್ನು ಮೆಲುಕುಹಾಕುವುದು ಈ ವಿಶೇಷಾಂಕದ ಆಶಯವಾಗಿದೆ.
ದೇಸೀ ದೃಷ್ಟಿಯ ಅಭ್ಯುದಯ ಚಿಂತನೆ
Month : January-2022 Episode : Author :