ಬ್ರಿಟಿಷರು ದಾಖಲೀಕರಣದ ವಿಷಯದಲ್ಲಿ ಕ್ರಮಬದ್ಧರು, ಶಿಸ್ತಿನ ಸಿಪಾಯಿಗಳು. ಕಾರಣಗಳು ಏನೇ ಇರಲಿ, ದಾಖಲೀಕರಣವನ್ನು ಅತ್ಯಂತ ಶಿಸ್ತುಬದ್ಧವಾಗಿ ಪ್ರಾಮಾಣಿಕವಾಗಿ ನಡೆಸುತ್ತಿದ್ದರು. ಹಾಗಾಗಿ ಬ್ರಿಟಿಷ್ ಆಡಳಿತಯಂತ್ರದಲ್ಲಿ ಓಡಾಡುತ್ತಿದ್ದ ದಾಖಲೆ-ಕಡತ-ಪತ್ರಗಳಲ್ಲಿ ಅಂಕಿ-ಅಂಶಗಳಿರಲಿ, ವೀಕ್ಷಣ ವಿವರಣೆಗಳಿರಲಿ, ಎಲ್ಲವೂ ಸುಸಂಬದ್ಧವಾಗಿದ್ದವು. ಅವುಗಳಲ್ಲಿದ್ದ ದೋಷ ಅತ್ಯಲ್ಪ. ನಿಜವಾದ ಇತಿಹಾಸ ತಿಳಿಯಬೇಕಾದರೆ ನಾವು ಓದಬೇಕಾದದ್ದು ಈ ದಾಖಲೆಗಳನ್ನೇ ಹೊರತು ಬ್ರಿಟಿಷ್ ವಿಲಾಸೀ ಇತಿಹಾಸಕಾರರು ಬರೆದ ಕಾಫಿ-ಟೇಬಲ್ ಪುಸ್ತಕಗಳನ್ನಲ್ಲ – ಎಂದು ಭಾವಿಸಿದವನು ಮೂವತ್ತರ ಆಸುಪಾಸಿನಲ್ಲಿದ್ದ ಓರ್ವ ತರುಣ. ಅವನ ಹೆಸರು ಧರ್ಮಪಾಲ್.
ಕಾರಣಾಭಾವಾತ್ಕಾರ್ಯಾಭಾವಃ,
ಸದಿತಿ ಯತೋ ದ್ರವ್ಯಗುಣಕರ್ಮಸು ಸಾ ಸತ್ತಾ,
ದ್ರವ್ಯತ್ತ್ವನಿತ್ಯತ್ವೇ ವಾಯುನಾ ವ್ಯಾಖ್ಯಾತೇ,
ಸದಕಾರಣವಿನ್ನಿತ್ಯಮ್
ಸಂಯೋಗಾಭಾವೇ ಗುರುತ್ವಾತ್ ಪತನಮ್
ಇವೆಲ್ಲ ಏನು ಎಂದು ಆಧುನಿಕ ಶಿಕ್ಷಣ ಪಡೆದ ನಮ-ನಿಮಗೆ ಅಚ್ಚರಿಯಾಗಬಹುದು. ಆದರೆ “ಹೊರಗಿನ ಬಲವೊಂದು ವರ್ತಿಸುವವರೆಗೆ ಕಾಯವು ತನ್ನ (ಚಲನ ಅಥವಾ ನಿಶ್ಚಲ) ಸ್ಥಿತಿಯಲ್ಲೇ ಮುಂದುವರಿಯುತ್ತದೆ, ದ್ರವ್ಯವನ್ನು ಒಂದು ರೂಪದಿಂದ ಇನ್ನೊಂದಕ್ಕೆ ಪರಿವರ್ತಿಸಬಹುದೇ ಹೊರತು ಸೃಷ್ಟಿ ಮಾಡುವುದಕ್ಕಾಗಲಿ ನಾಶಪಡಿಸುವುದಕ್ಕಾಗಲಿ ಆಗದು. ಒಂದು ವಸ್ತು ಚಲನೆಯಲ್ಲಿದೆ ಎಂದರೆ ಅದನ್ನು ಚಲಿಸುವಂತೆ ಮಾಡಿರುವ ಬಲವೊಂದು ಇದ್ದಿರಲೇಬೇಕು, ವಸ್ತುವೊಂದನ್ನು ಹಿಡಿದಿಡುವ ಬಲ ಇಲ್ಲದೆಹೋದರೆ ಆ ವಸ್ತು ಭೂಮಿಯ ಗುರುತ್ವಾಕರ್ಷಣೆಗೆ ಒಳಗಾಗಿ ಭೂಮಿಯತ್ತ ಧಾವಿಸುತ್ತದೆ…” – ಎಂದೆಲ್ಲ ಹೇಳಿದರೆ “ಓಹೋ, ಇದೆಲ್ಲ ನಮ್ಮ ಪ್ರೌಢಶಾಲೆಯಲ್ಲೋ ಕಾಲೇಜಿನಲ್ಲೋ ಓದಿರುವ ವಿಜ್ಞಾನ ಪಠ್ಯದಲ್ಲಿತ್ತಲ್ಲ” ಎನ್ನುತ್ತೇವೆ. ಇಂದಿನ ದಿನಬಳಕೆಯ ಇಂಗ್ಲಿಷಿನಲ್ಲಿ ಬರೆದಿಟ್ಟದ್ದನ್ನು ಓದಬಲ್ಲೆವು, ಆದರೆ ಅವನ್ನೇ ಕ್ರಿಸ್ತಪೂರ್ವ ೬೦೦ರಲ್ಲೇ ಮಹರ್ಷಿಗಳು ಸಂಸ್ಕೃತದಲ್ಲಿ ಬರೆದಿಟ್ಟಿದ್ದರು ಎಂಬುದನ್ನು ಮಾತ್ರ ಅರಿಯೆವು. ನಮ್ಮಲ್ಲೇ ಬೆಳಕಿದೆ, ಆದರೆ ಹೊರಗಿನಿಂದ ಕಡ ತಂದ ಮೋಂಬತ್ತಿಯ ಬೆಳಕಿನಲ್ಲಿ ನಮ್ಮ ಕುಂಟುನಡೆ. ಎಂಥ ವಿಪರ್ಯಾಸ!
ಇಂಥ ಭಾವನೆ ಆ ಯುವಕನನ್ನು ತೀವ್ರವಾಗಿ ಕಾಡತೊಡಗಿತು. ಹೇಳಿಕೇಳಿ ಆತನೊಬ್ಬ ವಿಜ್ಞಾನದ ವಿದ್ಯಾರ್ಥಿ, ಅಪರಿಮಿತವಾದ ಇತಿಹಾಸದ ಗೀಳನ್ನು ಹಚ್ಚಿಕೊಂಡ ಹುಡುಗ. ಪತ್ರಾಗಾರಗಳಿಗೆ ಆಗಾಗ ಎಡತಾಕುತ್ತಿದ್ದ ಆ ಯುವಕನಿಗೆ ಭಾರತದ ಇತಿಹಾಸದ ಬಗ್ಗೆ ಈ ದೇಶವನ್ನು ನಾಲ್ಕುನೂರು ವರ್ಷ ಆಳಿದ ಬ್ರಿಟಿಷರು ಏನು ಬರೆದಿಟ್ಟಿದ್ದಾರೆಂದು ನೋಡುವ ಕುತೂಹಲ ಮೊಳೆಯಿತು. ೪೦೦ ಎಂದರೆ ಸಾಧಾರಣ ಕಾಲಘಟ್ಟವಲ್ಲ, ದೀರ್ಘ ಅವಧಿಯೇ. ಬ್ರಿಟಿಷರು ನಮ್ಮವರಂತಲ್ಲ, ಎಲ್ಲವನ್ನೂ ವಿವರವಾಗಿ ಬರೆದಿಡುತ್ತಾರೆ, ‘ಡಾಕ್ಯುಮೆಂಟ್’ ಮಾಡುತ್ತಾರೆ. ಇದಕ್ಕೆ ಎರಡು ಕಾರಣಗಳು. ಒಂದು – ಅವರಿಗೆ ತಮ್ಮ ವಸಾಹತುನೆಲೆಗಳ ಮೇಲಿರುವ ಸಹಜ ಕುತೂಹಲ. ಈ ಹೊಸ ಸಂಸ್ಕೃತಿಯನ್ನು ಅಭ್ಯಸಿಸಬೇಕು, ಇಲ್ಲಿರುವ ಎಲ್ಲವನ್ನೂ ದಾಖಲೀಕರಣಗೊಳಿಸಬೇಕು – ಎಂಬ ಬಯಕೆ. ಎರಡನೆಯದು ಆಡಳಿತಾತ್ಮಕ ಕಾರಣ. ಅಂದರೆ ಪ್ರತಿ ಹಂತದಲ್ಲೂ ಅಧಿಕಾರಿಗಳು ತಮ್ಮ ಊರಿನ, ಹೋಬಳಿಯ ವಿಧಿ-ಆಚರಣೆಗಳನ್ನು, ಸಂಪ್ರದಾಯಗಳನ್ನು ಕ್ರಮಬದ್ಧವಾಗಿ ದಾಖಲೀಕರಣ ಮಾಡಿ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಬೇಕಾಗಿತ್ತು. ತಮಗೆ ಅಪರಿಚಿತವಾದ ಸಂಸ್ಕೃತಿಯನ್ನು ಆಳುತ್ತಿದ್ದುದರಿಂದ ಬ್ರಿಟಿಷರು ಇಂಥ, ಆಡಳಿತಕ್ಕೆ ಸಂಬಂಧಿಸಿದ ಕಾಗದಪತ್ರಗಳನ್ನು ಅತ್ಯಂತ ಜಾಗ್ರತೆಯಿಂದ ಸಿದ್ಧಪಡಿಸಬೇಕಾಗಿತ್ತು.
ಇವೆರಡರ ಹೊರತಾಗಿ ಇನ್ನೆರಡು ಕಾರಣಗಳೂ ಇದ್ದವು. ಅವೆಂದರೆ, ಒಂದು – ಆಗಿನ ಕಾಲದಲ್ಲಿ ಜಗತ್ತಿನ ಯಾವೆಲ್ಲ ಭೂಭಾಗವನ್ನು ಆಳುತ್ತಿದ್ದೇವೋ ಆ ಎಲ್ಲ ಭೂಭಾಗಗಳಿಂದ ಪಡೆಯುವ ಜ್ಞಾನವನ್ನು ಇಂಗ್ಲೆಂಡಿಗೆ ಕೊಂಡುಹೋಗಬೇಕು; ಅದÀನ್ನು ಬಳಸಿಕೊಂಡು ತಮ್ಮ ಸಾಧನೆ ಮಾಡಿಕೊಳ್ಳಬೇಕೆಂಬುದು ಅವರ ಉದ್ದೇಶವಾಗಿತ್ತು. ಎರಡು – ಆ ಕಾಲದ ಮಿಷನರಿಗಳು ವಸಾಹತುನೆಲೆಗಳ ಜನರ ರೀತಿನೀತಿ, ರಿವಾಜು-ಸಂಪ್ರದಾಯಗಳನ್ನೆಲ್ಲ ಆಳವಾಗಿ ಅಭ್ಯಾಸ ಮಾಡಿ ತಮ್ಮ ಮತಾಂತರದ ಯೋಜನೆಗಳನ್ನು ಹಾಕಿಕೊಳ್ಳಬೇಕಿತ್ತು. ಈ ಎಲ್ಲ ಕಾರಣಗಳಿಂದ ೧೭-೧೮ನೇ ಶತಮಾನದಲ್ಲಿ ಭಾರತವೂ ಸೇರಿದಂತೆ ಜಗತ್ತಿನಲ್ಲಿದ್ದ ವಸಾಹತುನೆಲೆಗಳಲ್ಲೆಲ್ಲ ಬ್ರಿಟಿಷರಿಂದ ವ್ಯಾಪಕವಾದ ಸಂಸ್ಕೃತಿ ದಾಖಲೀಕರಣ ಕಾರ್ಯ ನಡೆಯಿತು.
ಮೂಲಮಾಹಿತಿಯ ಖಜಾನೆಗಳು
ಸ್ವಾರಸ್ಯವೆಂದರೆ ಭಾರತದಲ್ಲಿ ಬ್ರಿಟಿಷರು ಬರೆದಿಟ್ಟ ಇತಿಹಾಸ ಸಿಗುತ್ತಿದ್ದದ್ದು ಬ್ರಿಟಿಷ್ ಅಧಿಕಾರಿಗಳೂ, ಮಿಷನರಿಗಳೂ ಬರೆದಿಟ್ಟ ಇತಿಹಾಸ ಪುಸ್ತಕಗಳ ಮೂಲಕ. ಇದೇ ನಿಜವಾದ ಇತಿಹಾಸ ಎಂದೇ ಎಲ್ಲರೂ ಬಗೆದಿದ್ದರು. ಆದರೆ ಬ್ರಿಟಿಷ್ ಆಡಳಿತ ವ್ಯವಸ್ಥೆಯೊಳಗೆ ನಡೆಯುತ್ತಿದ್ದ ಪತ್ರವ್ಯವಹಾರದಲ್ಲಿ ಏನೇನು ಅಂಶಗಳು ದಾಖಲಾಗಿರುತ್ತಿದ್ದವು ಎಂಬುದು ಯಾರಿಗೂ ಗೊತ್ತಿರಲಿಲ್ಲ. ಆಗಲೇ ಹೇಳಿದಂತೆ ಬ್ರಿಟಿಷರು ದಾಖಲೀಕರಣದ ವಿಷಯದಲ್ಲಿ ಕ್ರಮಬದ್ಧರು, ಶಿಸ್ತಿನ ಸಿಪಾಯಿಗಳು. ಕಾರಣಗಳು ಏನೇ ಇರಲಿ, ದಾಖಲೀಕರಣವನ್ನು ಅತ್ಯಂತ ಶಿಸ್ತುಬದ್ಧವಾಗಿ ಪ್ರಾಮಾಣಿಕವಾಗಿ ನಡೆಸುತ್ತಿದ್ದರು. ಹಾಗಾಗಿ ಬ್ರಿಟಿಷ್ ಆಡಳಿತಯಂತ್ರದಲ್ಲಿ ಓಡಾಡುತ್ತಿದ್ದ ದಾಖಲೆ-ಕಡತ-ಪತ್ರಗಳಲ್ಲಿ ಅಂಕಿ-ಅಂಶಗಳಿರಲಿ, ವೀಕ್ಷಣ ವಿವರಣೆಗಳಿರಲಿ, ಎಲ್ಲವೂ ಸುಸಂಬದ್ಧವಾಗಿದ್ದವು. ಅವುಗಳಲ್ಲಿದ್ದ ದೋಷ ಅತ್ಯಲ್ಪ. ನಿಜವಾದ ಇತಿಹಾಸ ತಿಳಿಯಬೇಕಾದರೆ ನಾವು ಓದಬೇಕಾದದ್ದು ಈ ದಾಖಲೆಗಳನ್ನೇ ಹೊರತು ಬ್ರಿಟಿಷ್ ವಿಲಾಸೀ ಇತಿಹಾಸಕಾರರು ಬರೆದ ಕಾಫಿ-ಟೇಬಲ್ ಪುಸ್ತಕಗಳನ್ನಲ್ಲ – ಎಂದು ಭಾವಿಸಿದವನು ಮೂವತ್ತರ ಆಸುಪಾಸಿನಲ್ಲಿದ್ದ ಓರ್ವ ತರುಣ. ಅವನ ಹೆಸರು ಧರ್ಮಪಾಲ್.
ಧರ್ಮಪಾಲ್ ನೇರವಾಗಿ ಬ್ರಿಟಿಷರ ಕರ್ಮಭೂಮಿ ಇಂಗ್ಲೆಂಡಿಗೇ ಹೋದರು. ಅಲ್ಲಿನ ಸರಕಾರಿ ಪತ್ರಾಗಾರಗಳಲ್ಲಿ, ಪ್ರಾಚ್ಯವಸ್ತು ಇಲಾಖೆಯ ಲೈಬ್ರರಿಗಳಲ್ಲಿ, ವಸ್ತುಸಂಗ್ರಹಾಲಯಗಳಲ್ಲಿ ದಿನ-ವಾರಗಳನ್ನು ಕಳೆದರು. ಒಮ್ಮೆ ಯಾವುದಾದರೂ ಕಟ್ಟಡ ಹೊಕ್ಕಿಬಿಟ್ಟರೆಂದರೆ ಅಲ್ಲಿನ ಅಷ್ಟೂ ಕಡತಗಳನ್ನು ಪರಿಶೀಲಿಸದೆ ಹೊರಬರುತ್ತಿರಲಿಲ್ಲ ಈ ಪುಣ್ಯಾತ್ಮ! ಕೆಲವು ಕಡೆ ದಾಖಲೆಗಳನ್ನು ಹೊರಗೊಯ್ಯಲು ಅವಕಾಶವಿರಲಿಲ್ಲ. ಧರ್ಮಪಾಲ್ ಆ ಕಡತಗಳ ನೂರಾರು ಪುಟಗಳ ಮಾಹಿತಿಗಳನ್ನು ಹಸ್ತಾಕ್ಷರದಲ್ಲಿ ಬರೆದುಕೊಂಡರು! ಹಗಲಿರುಳು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಓದಿದರು. ಭಿನ್ನ ಸ್ಥಳಗಳಲ್ಲಿ ಸಿಕ್ಕ ದಾಖಲೆಗಳನ್ನು ಹೋಲಿಸಿನೋಡಿದರು. ಪರಿಷ್ಕೃತ ಮಾಹಿತಿಗಳನ್ನು ಉಳಿಸಿಕೊಂಡರು.
ಹೀಗೆ ಬ್ರಿಟಿಷ್ ಸಂಸ್ಥೆಗಳಲ್ಲಿ ವರ್ಷಗಳನ್ನು ಕಳೆಯುತ್ತ ಅವರಿಗೆ ಹೊಸದೊಂದು ಪ್ರಪಂಚವೇ ಕಣ್ಣೆದುರು ತೆರೆದುಕೊಂಡಿತು. ಅದನ್ನು ಅವರು ಹಂತ ಹಂತವಾಗಿ ಹಲವು ಪುಸ್ತಕಗಳಾಗಿ ಬರೆದು ಪ್ರಕಟಿಸಿದರು. ೧೮ನೆಯ ಶತಮಾನದ ಬ್ರಿಟಿಷ್ ಇಂಡಿಯಾದಲ್ಲಿದ್ದ ವಿಜ್ಞಾನ ಮತ್ತು ತಂತ್ರಜ್ಞಾನ – ಎಂಬ ಕೃತಿ ಹೊರಬಂದದ್ದು (೧೯೭೧) ಇಂಥ ಹಿನ್ನೆಲೆಯಲ್ಲಿ.
* * *
ಈ ಕೃತಿಯಲ್ಲಿ ಧರ್ಮಪಾಲ್ ವಿಜ್ಞಾನ ಮತ್ತು ತಂತ್ರಜ್ಞಾನ ಎಂಬ ಎರಡು ಭಾಗ ಮಾಡಿದ್ದಾರೆ. ಭಾರತೀಯರು ಮೂಢರು, ಕಂದಾಚಾರದವರು, ಸಂಪ್ರದಾಯವಾದಿಗಳು, ವಿಜ್ಞಾನದ ಗಂಧಗಾಳಿ ಇಲ್ಲದವರು ಎಂಬ ತಥಾಕಥಿತ ಬುದ್ಧಿಜೀವಿಗಳ ಎಲ್ಲ ಹೇಳಿಕೆಗಳನ್ನು ಬೀಸಿ ಒಗೆವಂಥ ಉದಾಹರಣೆಗಳು ಧರ್ಮಪಾಲ್ ಅವರಿಗೆ ಇಂಗ್ಲೆಂಡಿನಲ್ಲಿ ಸಿಕ್ಕಿದವು. ಒಂದಾನೊಂದು ಕಾಲದಲ್ಲಿ ಭಾರತದಲ್ಲಿ ಕಬ್ಬಿಣದ ಸಂಸ್ಕರಣೆ ಅಪಾರ ಪ್ರಮಾಣದಲ್ಲಿ ನಡೆಯುತ್ತಿತ್ತು. ಎಷ್ಟೆಂದರೆ ಅನೇಕ ಮನೆಗಳ ಹಿತ್ತಲುಗಳಲ್ಲೇ ಕುಲುಮೆಗಳಿರುತ್ತಿದ್ದವು. ಕಬ್ಬಿಣದ ಸಂಸ್ಕಾರಕ್ಕೆ ಅಪಾರ ಪ್ರಮಾಣದ ಶಾಖ ಬೇಕು. ಇಂಥ ಶಾಖವನ್ನು ತಂತಮ್ಮ ಮನೆಗಳ ಹಿತ್ತಲಿನಲ್ಲೇ ಸೃಷ್ಟಿಸಿಕೊಳ್ಳುವಷ್ಟರಮಟ್ಟಿಗೆ ಭಾರತೀಯರ ವಿಜ್ಞಾನ ಮುಂದುವರಿದಿತ್ತು. ಮಾತ್ರವಲ್ಲ ಕಬ್ಬಿಣದಲ್ಲಿ ಇಂಗಾಲದ (ಕಾರ್ಬನ್) ಅಂಶವನ್ನು ಹೆಚ್ಚುಕಡಮೆ ಮಾಡುತ್ತ ಆ ಕಬ್ಬಿಣದ ದೃಢತೆ ವ್ಯತ್ಯಾಸವಾಗುವಂತೆಯೂ ಮಾಡಬಹುದು ಎಂಬ ತಿಳಿವಳಿಕೆ ಆ ಕಾಲದವರಿಗಿತ್ತು. ೮-೧೨% ಕಾರ್ಬನ್ ಬೆರೆಸಿದ ಉಕ್ಕಿನಲ್ಲಿ ಮಾಡಿದ ಖಡ್ಗಗಳು ನೇರವಾಗಿ ಡಮಾಸ್ಕಸ್ ನಗರಕ್ಕೆ ರಫ್ತಾಗುತ್ತಿದ್ದವು. ಮುಂದೆ ಅವು ಇತಿಹಾಸದ ಪಠ್ಯಗಳಲ್ಲಿ “ಡಮಾಸ್ಕಸ್ ಕತ್ತಿ”ಗಳೆಂದೇ ಪ್ರಸಿದ್ಧಿ ಪಡೆದವು! ಡಮಾಸ್ಕಸ್ ಈ ಕತ್ತಿಗಳ ಕಾಠಿಣ್ಯಕ್ಕೆ ನಿಕಷವಾಯಿತು. ಭಾರತದ ಹೆಸರನ್ನು ಕೆಲವು ಇತಿಹಾಸ ಪಠ್ಯಗಳು ತಪ್ಪಿಯಾದರೂ ಉಲ್ಲೇಖಿಸಲಿಲ್ಲ.
ಧರ್ಮಪಾಲರಿಗೆ ಸಿಕ್ಕಿದ ಮಾಹಿತಿಯಲ್ಲಿ ಕುತೂಹಲಕರವಾಗಿದ್ದ ಅಂಶವೆಂದರೆ (ಕ್ರಿಸ್ತಶಕ) ೧೮೦೦ರ ಹೊತ್ತಿಗೆ ಭಾರತದಲ್ಲಿ ೧೦,೦೦೦ಕ್ಕೂ ಹೆಚ್ಚು ಉಕ್ಕಿನ ಕುಲುಮೆಗಳಿದ್ದವು ಎನ್ನುವುದು. ಈ ಕುಲುಮೆಗಳನ್ನು ಎಲ್ಲಿಂದೆಲ್ಲಿಗೂ ಸಾಗಿಸಬಹುದಿತ್ತು. ಇವು ವರ್ಷದಲ್ಲಿ ಕನಿಷ್ಠ ೯ ತಿಂಗಳ ಮಟ್ಟಿಗೆ ಕಾರ್ಯನಿರ್ವಹಿಸುತ್ತಿದ್ದವು; ಸರಾಸರಿ ೨೦ ಟನ್ನಿನಷ್ಟು ಉಕ್ಕನ್ನು ಅವು ತಯಾರಿಸಿಕೊಡುತ್ತಿದ್ದವು.
ಪರಂಪರೆಯ ಉಗ್ರಾಣದಲ್ಲಿ
ಕಬ್ಬಿಣದ ಉತ್ಪನ್ನ ಮಾತ್ರವಲ್ಲ, ಅದನ್ನು ಬಳಸಿಕೊಂಡು ಸೂಕ್ಷö್ಮ ಉಪಕರಣಗಳನ್ನು ಮಾಡುವ ವಿಧಾನಗಳೂ ಭಾರತೀಯರಿಗೆ ತಿಳಿದಿದ್ದವು ಎಂಬುದಕ್ಕೆ ಸುಶ್ರುತಸಂಹಿತೆಯಲ್ಲೇ ನಮಗೆ ದಂಡಿಯಾಗಿ ಉದಾಹರಣೆಗಳು ಸಿಗುತ್ತವೆ. ಅಲ್ಲಿ ಶಸ್ತ್ರಚಿಕಿತ್ಸೆಗೆ ಬಳಸುತ್ತಿದ್ದ ಉಪಕರಣಗಳನ್ನು ಪಟ್ಟಿಮಾಡುವಾಗ ತಾಲಯಂತ್ರ, ಶಂಕುಯಂತ್ರ, ಸಿಂಹಮುಖಯಂತ್ರ, ಶಲಾಕಾಯಂತ್ರ, ವೃಕಮುಖಯಂತ್ರ, ಶ್ರವಣಮುಖಯಂತ್ರ, ಯುಗ್ಮಶಂಕುಯಂತ್ರ, ವೃಣಪ್ರಕ್ಷಾಲನಯಂತ್ರ ಎಂದೆಲ್ಲ ಬಗೆ ಬಗೆಯ, ಸುಮಾರು ೧೫೦ರಷ್ಟು ಹೆಸರುಗಳನ್ನು ಕೊಡಲಾಗಿದೆ. ಇದು ಕೇವಲ ಹೆಸರಿನ ಪಟ್ಟಿಯಷ್ಟೇ ಅಲ್ಲ; ಅವುಗಳ ನಿಖರವಾದ ಗುಣಲಕ್ಷಣಗಳನ್ನೂ, ಅವನ್ನು ಯಾವ ಸಂದರ್ಭಗಳಲ್ಲಿ ಹೇಗೆ ಬಳಸಬೇಕೆಂಬುದನ್ನೂ ಸಂಹಿತೆ ವಿಸ್ತಾರವಾಗಿ ಚರ್ಚಿಸುತ್ತದೆ (ಸುಶ್ರುತಸಂಹಿತೆ ಸುಮಾರು ೧೧೨೦ ಕಾಯಿಲೆಗಳನ್ನು, ೭೦೦ರಷ್ಟು ವನೌಷಧಿಗಳನ್ನು, ಪ್ರಾಣಿಗಳನ್ನು ಬಳಸಿಕೊಂಡು ತಯಾರಿಸಬಹುದಾದದ ೬೦ರಷ್ಟು ವಿಶಿಷ್ಟ ಔಷಧಿಗಳನ್ನು ತಿಳಿಸುತ್ತದೆ).
ತಂತ್ರಜ್ಞಾನದ ವಲಸೆ
ಈ ಜ್ಞಾನ ಸುಶ್ರುತರ ಕಾಲಕ್ಕಷ್ಟೇ ಸೀಮಿತವಾಗಿ ನಷ್ಟವಾಗಿ ಹೋಗಲಿಲ್ಲ. ಅದು ಪರಂಪರಾಗತವಾಗಿ ಉಳಿದುಬಂತು. ೧೮ನೆಯ ಶತಮಾನದ ಅಂತ್ಯ, ೧೯ನೆಯ ಶತಮಾನದ ಆದಿಯಲ್ಲಿ ಐರೋಪ್ಯ ದೇಶಗಳಲ್ಲಿ (ಮುಖ್ಯವಾಗಿ ಇಂಗ್ಲೆಂಡಿನಲ್ಲಿ) ಮೂಗನ್ನು ಮರುಜೋಡಿಸುವ ಶಸ್ತ್ರಚಿಕಿತ್ಸೆಗಳು ಯಶಸ್ವಿಯಾಗಿ ನಡೆದವು. ಮುರಿದುಹೋದ ಮೂಗನ್ನು ಮನುಷ್ಯನ ಚರ್ಮವನ್ನೇ ಬಳಸಿಕೊಂಡು ಮರುನಿರ್ಮಾಣ ಮಾಡಬಹುದು ಎಂಬುದು ಆ ಕಾಲಕ್ಕೆ ಯೂರೋಪಿನಲ್ಲಿ ಕ್ರಾಂತಿಕಾರೀ ಚಿಂತನೆಯಾಗಿತ್ತು. ಈ ಚಿಕಿತ್ಸೆಯನ್ನು ಯುರೋಪಿನಲ್ಲಿ ಮೊದಲಬಾರಿಗೆ ಯಶಸ್ವಿಯಾಗಿ ಮಾಡಿದ ಡಾ. ಜೋಸೆಫ್ ಸಿ. ಕಾರ್ಪ್ಯೂ ನಂತರ “ಪ್ಲಾಸ್ಟಿಕ್ ಸರ್ಜರಿಯ ಜನಕ” ಎಂದೇ ಹೆಸರಾಗಿಬಿಟ್ಟ. ನಂತರದ ದಿನಗಳಲ್ಲಿ ಇಡೀ ಯೂರೋಪಿನಲ್ಲಿ ನಾಸಿಕ ಮರುಸೃಷ್ಟಿಯ ಚಿಕಿತ್ಸೆಗಳು “ಕಾರ್ಪ್ಯೂ ಸರ್ಜರಿ” ಎಂದೇ ಪ್ರಸಿದ್ಧವಾದವು. ಆದರೆ ಕಾರ್ಪ್ಯೂ ತನ್ನ ಈ “ಪ್ರಥಮ ಪ್ರಯೋಗ” ವನ್ನು ನಡೆಸುವ ಮೊದಲು ಭಾರತದಲ್ಲಿ ಇಪ್ಪತ್ತು ವರ್ಷಗಳನ್ನು ಕಳೆದಿದ್ದನೆಂಬ ಸಂಗತಿ ಹೆಚ್ಚಿನವರಿಗೆ ಗೊತ್ತಿಲ್ಲ! ೧೭-೧೮ನೇ ಶತಮಾನಗಳಲ್ಲಿ ಭಾರತದ ಪುಣೆಯಲ್ಲಿ ಮೂಗಿನ ಶಸ್ತ್ರಚಿಕಿತ್ಸೆಗಳನ್ನು ಅತ್ಯಂತ ಸಾಮಾನ್ಯ ಚಿಕಿತ್ಸೆಯಾಗಿ ನಡೆಸಲಾಗುತ್ತಿತ್ತು. ಯುದ್ಧದಲ್ಲಿ ಅಥವಾ ಬೇರಾವುದೋ ಅವಘಡಗಳಲ್ಲಿ ಮೂಗು ಕಳೆದುಕೊಂಡವರಿಗೆ ಪುಣೆಯಲ್ಲಿ ಆಯುರ್ವೇದದಲ್ಲಿ ನುರಿತ ಶಸ್ತ್ರವೈದ್ಯರು ನಾಸಿಕ ಚಿಕಿತ್ಸೆಯನ್ನು ನಡೆಸುತ್ತಿದ್ದರು. ಅವರ ಹಣೆಯಲ್ಲಿ ಬಿಡಿಸಿಟ್ಟ ಮೂಗಿನ ಆಕಾರದಲ್ಲಿ ಚರ್ಮವನ್ನು ಹರಿತವಾದ ಉಪಕರಣಗಳಿಂದ ಕತ್ತರಿಸಿತೆಗೆದು ಅದನ್ನು ಮುರಿದ ಮೂಗಿನ ಮೇಲೆ ಮುಚ್ಚಿ ಹೊಲಿಯುತ್ತಿದ್ದರು. ತೆರೆದ ಹಣೆಯನ್ನು ಒಂದಷ್ಟು ರಸಾಯನವನ್ನು ಬಳಸಿ ಮುಚ್ಚಲಾಗುತ್ತಿತ್ತು. ಈ ಶಸ್ತ್ರಚಿಕಿತ್ಸೆ ನೂರಕ್ಕೆ ನೂರು ಫಲಕಾರಿ; ಯಾವುದೇ ಸಮಸ್ಯೆಗಳಿಲ್ಲದೆ ೨-೩ ವಾರಗಳಲ್ಲಿ ಅವರು ಸಹಜ ಸ್ಥಿತಿಗೆ ಮರಳುತ್ತಿದ್ದರು; ದೈನಂದಿನ ಕೆಲಸಕಾರ್ಯಗಳನ್ನು ಯಾವ ತೊಂದರೆಯೂ ಇಲ್ಲದೆ ಮಾಡಿಕೊಳ್ಳಬಹುದಾಗಿತ್ತು.
ಈ ಶಸ್ತ್ರಚಿಕಿತ್ಸೆಯನ್ನು ನೋಡಿದ್ದು ಮಾತ್ರವಲ್ಲದೆ ಪುಣೆಯಲ್ಲೇ ದೀರ್ಘಕಾಲ ಠಿಕಾಣಿ ಹೂಡಿ ಕಾರ್ಪ್ಯೂ ಭಾರತೀಯ ವೈದ್ಯರಿಂದ ಈ ಶಾಸ್ತ್ರವನ್ನು ಶಾಸ್ತ್ರೀಯವಾಗಿ ಕಲಿತುಕೊಂಡ (ಸ್ವತಃ ದೇಹರಚನಾಶಾಸ್ತ್ರದ ವಿದ್ಯಾರ್ಥಿಯೂ ಆಗಿದ್ದನಾತ). ಕಾರ್ಪ್ಯೂ ನಡೆಸಿದ ಶಸ್ತ್ರಚಿಕಿತ್ಸೆಯಿಂದ ಪಾಶ್ಚಾತ್ಯ ಜಗತ್ತಿನಲ್ಲಿ ಭಾರತದ ಹೆಸರು ಹೇಗೆ ಮರೆಮಾಚಿತೆಂದರೆ ಮುಂದಿನ ವರ್ಷಗಳಲ್ಲಿ (ಇಂದಿಗೂ ಕೂಡ!) ನಾಸಿಕ ಚಿಕಿತ್ಸೆ “ಕಾರ್ಪ್ಯೂ ಆಪರೇಶನ್” ಎಂಬ ಹೆಸರಿಂದಲೇ ಪ್ರಸಿದ್ಧಿ ಪಡೆದಿದೆ. (೧೬-೧೭ನೇ ಶತಮಾನದಲ್ಲಿ ಯೂರೋಪಿನಲ್ಲಿ ಮೂಗಿನ ಶಸ್ತ್ರಚಿಕಿತ್ಸೆ ಇದ್ದಿರಲೇ ಇಲ್ಲ. ೧೬ನೇ ಶತಮಾನದ ಪ್ರಸಿದ್ಧ ಖಗೋಳವೀಕ್ಷಕ ಟೈಕೋ ಬ್ರಾಹೆ ಕತ್ತಿವರಸೆಯಲ್ಲಿ ಮೂಗು ಕಳೆದುಕೊಂಡು ಕೊನೆಗೆ ಲೋಹದ ಮೂಗನ್ನು ಸಿಕ್ಕಿಸಿಕೊಂಡು ಜೀವನ ಕಳೆದ).
ಧರ್ಮಪಾಲ್ ಈ ಎಲ್ಲ ವಿಚಾರಗಳನ್ನು ಬ್ರಿಟಿಷ್ ಪತ್ರಾಗಾರಗಳಲ್ಲಿ ಹುಡುಕಿತೆಗೆದರು. ೧೭೯೪ರಲ್ಲಿ ಇಂಗ್ಲೆಂಡಿನ ಒಂದು ನಿಯತಕಾಲಿಕೆಯಲ್ಲಿ ಭಾರತದಲ್ಲಿ ನಡೆಯುತ್ತಿದ್ದ ಮೂಗಿನ ಶಸ್ತ್ರಚಿಕಿತ್ಸೆಯ ಸುದ್ದಿ ಪ್ರಕಟವಾಗಿತ್ತು. ಅದನ್ನು ಓದಿ ಕುತೂಹಲಗೊಂಡ ಕಾರ್ಪ್ಯೂ ಭಾರತಕ್ಕೆ ಆ ವಿಷಯವನ್ನು ಕಲಿಯುವುದಕ್ಕೆಂದೇ ಬಂದ. ಇಲ್ಲಿ ಇಪ್ಪತ್ತು ವರ್ಷಗಳನ್ನು ಕಳೆದು, ಶಸ್ತ್ರಚಿಕಿತ್ಸೆಯ ವಿಷಯದಲ್ಲಿ ತಜ್ಞನಾಗಿ, ನಂತರ ಇಂಗ್ಲೆಂಡಿಗೆ ಮರಳಿ ‘ನಾಸಿಕ ಶಸ್ತ್ರತಜ್ಞ’ನಾಗಿ ಹೆಸರುಮಾಡಿದ. ರೈನೋಪ್ಲಾಸ್ಟಿ (ಮೂಗಿಗೆ ಸಂಬಂಧಿಸಿದ ಪ್ಲಾಸ್ಟಿಕ್ ಸರ್ಜರಿ)ಯ ಜನಕನೂ ಆದ!
ದೈನಂದಿನ ಉಪಕರಣಗಳು
ಸೂಕ್ಷ್ಮ ಉಪಕರಣಗಳ ವಿಷಯ ಹೇಗೋ ಹಾಗೆಯೇ ಕೃಷಿಗೆ ಸಂಬಂಧಿಸಿದ ಯಂತ್ರೋಪಕರಣಗಳನ್ನು ತಯಾರಿಸುವುದರಲ್ಲೂ ಭಾರತೀಯರು ಎತ್ತಿದ ಕೈಯೇ ಆಗಿದ್ದರು. ಭಾರತ ಕೃಷಿಪ್ರಧಾನ ರಾಷ್ಟ್ರ. ಹಾಗಿರುವಾಗ ಕೃಷಿಯ ವಿಷಯದಲ್ಲಿ ನಮ್ಮವರು ಸುಧಾರಣೆಗಳನ್ನು, ಆವಿಷ್ಕಾರಗಳನ್ನು ಮಾಡಿದ್ದರಲ್ಲಿ ಅಚ್ಚರಿಯೇನೂ ಇಲ್ಲ. ಆದರೆ ತಮ್ಮ ಯಂತ್ರೋಪಕರಣಗಳು ಜಗತ್ತಿನ ಕೃಷಿಕ್ಷೇತ್ರದಲ್ಲೇ ಅತ್ಯುತ್ತಮ ಮಟ್ಟದವೆಂಬ ತಿಳಿವಳಿಕೆ ನಮ್ಮವರಿಗೆ ಇತ್ತೋ ಇಲ್ಲವೋ ಎಂಬುದು ಖಚಿತವಿಲ್ಲ. ಭಾರತದಲ್ಲಿ ಕೃಷಿಯಲ್ಲಿ ಬಳಸುತ್ತಿದ್ದ ವಿವಿಧ ಬಗೆಯ ಕತ್ತಿ-ಕುಡುಗೋಲುಗಳನ್ನು, ಕಟಾವಿಗೆ ಬಳಸುತ್ತಿದ್ದ ಯಂತ್ರಗಳನ್ನು, ನೆಲ ಉಳುವ ನೇಗಿಲುಗಳ ಬಗೆ ಬಗೆಯ ಮಾದರಿಗಳನ್ನು ಬ್ರಿಟಿಷರು ಸಂಗ್ರಹಿಸಿ ಅವನ್ನು ತಮ್ಮ ದೇಶಕ್ಕೆ ಕಳಿಸಿಕೊಡುತ್ತಿದ್ದರು.
ಅಂಥ ಎಲ್ಲ ವ್ಯವಹಾರಗಳ ಕಾಗದಪತ್ರಗಳು ಧರ್ಮಪಾಲರಿಗೆ ದೊರೆತವು. ತಥಾಕಥಿತ ಬುದ್ಧಿಜೀವಿಗಳು ಅದುವರೆಗೆ ನಿರ್ಮಿಸಿದ್ದ ಕಥನಗಳಿಗೆ ಸಂಪೂರ್ಣ ವಿರುದ್ಧ ದಿಕ್ಕಿನಲ್ಲಿ ನಿಂತಿದ್ದವು ಈ ಸಾಕ್ಷ್ಯಗಳು! ಭಾರತದಲ್ಲಿ ಏನೂ ಇರಲಿಲ್ಲ; ಇಲ್ಲಿಯವರು ನಿರಕ್ಷರಕುಕ್ಷಿಗಳು; ಇದೊಂದು ದಟ್ಟದರಿದ್ರ ದೇಶ; ಆಧುನಿಕ ತಂತ್ರಜ್ಞಾನವೆಲ್ಲ ಬಂದದ್ದು ಪಶ್ಚಿಮದಿಂದ – ಎಂಬ ವಸಾಹತುಪ್ರೀತಿಯ ಚಿಂತನೆಗೆ ತದ್ವಿರುದ್ಧವೆಂಬಂತೆ ಧರ್ಮಪಾಲರಿಗೆ ಸಿಕ್ಕಿದ್ದು – ತಂತ್ರಜ್ಞಾನದ ಆಮದಲ್ಲ, ರಫ್ತು! ಕ್ರಿ.ಶ. ೧೮೦೦ರಲ್ಲಿ ಒಬ್ಬ ಆಂಗ್ಲ ಕಲೆಕ್ಟರ್ ಭಾರತದಲ್ಲಿ ಬಳಕೆಯಲ್ಲಿದ್ದ ಹತ್ತಾರು ಬೇರೆ ಬೇರೆ ಕೃಷಿಸಂಬಂಧೀ ಉಪಕರಣಗಳನ್ನು ಇಂಗ್ಲೆಂಡಿಗೆ ಕಳಿಸಿಕೊಟ್ಟು “ಇವೆಲ್ಲ ನಮ್ಮ ತಂತ್ರಗಳಿಗಿಂತ ಬಹಳ ಮುಂದಿವೆ” ಎಂಬ ಷರಾ ಬರೆದಿದ್ದ ದಾಖಲೆ ಧರ್ಮಪಾಲರಿಗೆ ಸಿಕ್ಕಿದ್ದು ಬ್ರಿಟಿಷ್ ಪತ್ರಾಗಾರಗಳ ಕಡತಗಳಲ್ಲಿ.
ಲಸಿಕೆಗಳ ಬಳಕೆ
೧೭೯೬ರಲ್ಲಿ ಬ್ರಿಟಿಷ್ ವೈದ್ಯ ಎಡ್ವರ್ಡ್ ಜೆನ್ನರ್ ಸಿಡುಬಿಗೆ ಮೊದಲ ಬಾರಿಗೆ ಲಸಿಕೆ ಪ್ರಯೋಗ ಮಾಡಿದ – ಎಂಬ ಚರಿತ್ರೆಯನ್ನು ನಾವಿಂದು ಓದುತ್ತೇವೆ. ‘ವ್ಯಾಕ್ಸಿನೇಶನ್’ ಎಂಬ ಹೆಸರನ್ನು ಬಳಕೆಗೆ ತಂದವನು ಇವನೇ. ಆದರೆ ಇದಕ್ಕಿಂತ ಕನಿಷ್ಠ ನೂರಿನ್ನೂರು ವರ್ಷಗಳ ಹಿಂದೆಯೇ ಭಾರತದಲ್ಲಿ ವ್ಯಾಕ್ಸಿನೇಶನ್ ಇತ್ತೆಂದರೆ ಎಂಥವರಿಗೂ ಅಚ್ಚರಿಯಾದೀತು. ಇದು ಭಾರತೀಯರು ಬರೆದಿಟ್ಟ ಕಟ್ಟುಕತೆಯಲ್ಲ; ಬ್ರಿಟಿಷರೇ ದಾಖಲಿಸಿದ ಐತಿಹಾಸಿಕ ಸತ್ಯ. ೧೭ನೇ ಶತಮಾನದ ಪ್ರಾರಂಭದಲ್ಲಿ ಬರೆದ ಬ್ರಿಟಿಷ್ ದಾಖಲೆಗಳಲ್ಲಿ ಕಾಣಿಸುವ ಸತ್ಯ ಇದು: ಆ ಕಾಲದಲ್ಲಿ ಬಂಗಾಳ ಪ್ರಾಂತದಲ್ಲಿ ಸಿಡುಬಿನ ಲಸಿಕೆ ಹಾಕುವ ಕ್ರಮವಿತ್ತು. ಪ್ರತಿ ವರ್ಷ, ವರ್ಷದ ಒಂದು ನಿರ್ದಿಷ್ಟ ಸಮಯದಲ್ಲಿ ಕಾಶಿಯಿಂದ ಒಂದಷ್ಟು ಬ್ರಾಹ್ಮಣರು ಬಂಗಾಳ ಪ್ರಾಂತಕ್ಕೆ ಬರುತ್ತಿದ್ದರು. ಇವರು ಬರುವುದನ್ನು ಮೊದಲೇ ಪ್ರಚಾರ ಮಾಡಲಾಗುತ್ತಿತ್ತು. ಯರ್ಯಾರಿಗೆ ಲಸಿಕೆ ಹಾಕಬೇಕೆಂಬುದರ ಪಟ್ಟಿ ತಯಾರಾಗುತ್ತಿತ್ತು. ಅಂಥ ವ್ಯಕ್ತಿಗಳು ಲಸಿಕೆ ಹಾಕಿಸಿಕೊಳ್ಳುವುದಕ್ಕೆ ಕೆಲದಿನಗಳ ಹಿಂದೆಯೇ ತಮ್ಮ ಕಟ್ಟುನಿಟ್ಟಾದ ಆಹಾರಪಥ್ಯವನ್ನು ಶುರುಮಾಡಿಕೊಳ್ಳಬೇಕಿತ್ತು. ಕಾಶಿಯ ಬ್ರಾಹ್ಮಣರು ಹಳ್ಳಿಗಳಿಗೆ ಬಂದು, ಲಸಿಕೆ ಹಾಕಿಸಿಕೊಳ್ಳಲಿದ್ದ ವ್ಯಕ್ತಿಗಳನ್ನು ಭೇಟಿಮಾಡುತ್ತಿದ್ದರು. ಆ ವ್ಯಕ್ತಿಗಳ ದೇಹದ ನಿರ್ದಿಷ್ಟ ಭಾಗಗಳಲ್ಲಿ ತಮ್ಮ ಕತ್ತಿಗಳಿಂದ ಸಣ್ಣ ಗಾಯ ಮಾಡಿ, ರೇಷ್ಮೆ ಬಟ್ಟೆಯಿಂದ ಉಜ್ಜಿ, ತಮ್ಮಲ್ಲಿದ್ದ ಒಂದು ವಿಶೇಷ ಬಟ್ಟೆಯಿಂದ ಆ ಗಾಯವನ್ನು ಕಟ್ಟಿ, ಮೇಲೆ ಗಂಗಾಜಲದ ಪ್ರೋಕ್ಷಣೆ ಮಾಡುತ್ತಿದ್ದರು. ಹೀಗೆ ಅವರು ಕಟ್ಟುತ್ತಿsದ್ದದ್ದು ಸಾಮಾನ್ಯ ಬಟ್ಟೆಯಲ್ಲ; ವರ್ಷದ ಹಿಂದೆಯೇ ಸಿಡುಬಿನಿಂದ ಬಳಲಿದ್ದವರ ವ್ರಣಗಳಲ್ಲಿದ್ದ ರಸಿಕೆಯನ್ನು ಬಹಳ ಜಾಗ್ರತೆಯಿಂದ ಸಂಗ್ರಹಿಸಿಟ್ಟ ಬಟ್ಟೆಗಳನ್ನು! ಹೀಗೆ ಮಾಡುವುದರಿಂದ ಹೊಸ ವ್ಯಕ್ತಿಗಳಿಗೆ ಒಂದೆರಡು ದಿನಗಳ ಸಾಮಾನ್ಯ ಜ್ವರ ಬಂದು ಹೋಗುತ್ತಿತ್ತು ಮತ್ತು ಸಿಡುಬು ಯಾವತ್ತೂ ಕಾಡುತ್ತಿರಲಿಲ್ಲ.
ಕಾಶಿಯ ಬ್ರಾಹ್ಮಣರ ಈ ‘ಚಮತ್ಕಾರ’ದಿಂದಾಗಿ ಬಂಗಾಳ-ಉತ್ಕಲ-ಬಿಹಾರ ಪ್ರಾಂತಗಳಲ್ಲಿ ಸಿಡುಬಿನ ಸಮಸ್ಯೆ ಸಾಕಷ್ಟು ಹಿಡಿತಕ್ಕೆ ಬಂತು. ಈ ಅದ್ಭುತ ಚಿಕಿತ್ಸೆಯ ಕುರಿತು ಇಂಗ್ಲೆಂಡಿನ ಪತ್ರಿಕೆಗಳಲ್ಲಿ ಲೇಖನಗಳು ಪ್ರಕಟವಾದವು. ಅದಾಗಿ ಇಪ್ಪತ್ತು ವರ್ಷಗಳಲ್ಲಿ ಎಡ್ವರ್ಡ್ ಜೆನ್ನರ್ ಸಿಡುಬಿನ ಲಸಿಕೆಯನ್ನು ಹೊಸದಾಗಿ ಕಂಡುಹಿಡಿದು ‘ಲಸಿಕೆಯ ಜನಕ’ನೇ ಆಗಿಬಿಟ್ಟ! ಭಾರತದಲ್ಲಿ ಮೂರು ಶತಮಾನಗಳ ಹಿಂದೆ ಬಳಕೆಯಲ್ಲಿದ್ದ ಲಸಿಕೆಗೆ ‘ಟೀಕಾ’ ಎಂದು ಹೆಸರು. ಆ ಹೆಸರು ಇಂದೂ ಉಳಿದಿದೆ; ಆದರೆ ಅದರ ಅದ್ಭುತ ಚರಿತ್ರೆ ಮಾತ್ರ ನಮ್ಮ ಸ್ಮರಣಕೋಶದಿಂದ ಅಳಿಸಿಹೋಗಿದೆ.
ಗಣಿತ, ಖಗೋಲಶಾಸ್ತ್ರ
ಜಗತ್ತಿನಲ್ಲಿ ಭಾರತ ಎರಡು ವಿಷಯಗಳಿಗೆ ಪ್ರಖ್ಯಾತ: ಗಣಿತ ಹಾಗೂ ಖಗೋಳ. ಈ ಎರಡು ವಿಷಯಗಳಲ್ಲಿ ನೂರಾರು ಕೃತಿಗಳು ಭಾರತದಲ್ಲಿ ಬರೆಯಲ್ಪಟ್ಟ ಕಾರಣಕ್ಕೋ ಏನೋ, ಬ್ರಿಟಿಷರಿಗೆ ಆ ಇತಿಹಾಸವನ್ನು ತಿರುಚುವುದು ಸಾಧ್ಯವಾಗಲಿಲ್ಲ. ಆದರೂ ಆಧುನಿಕ ಶಿಕ್ಷಣ ನಮಗೆ ನಮ್ಮ ನೆಲದ ಹೆಸರುಗಳನ್ನು ತಿಳಿಸಿಕೊಡುವ ಬದಲು ಪಾಶ್ಚಾತ್ಯ ಹೆಸರುಗಳನ್ನೇ ತುರುಕಿತು ಎಂಬುದು ಸತ್ಯ. ನಮ್ಮ ಮೇರುಪ್ರಸ್ತಾರವು ಬ್ಲೇಸ್ ಪ್ಯಾಸ್ಕಲ್ನ ಹೆಸರಿನ ತ್ರಿಕೋನವಾಯಿತು. ಶುಲ್ಬಗಳಲ್ಲಿ ಬರುವ ಪ್ರಮೇಯವು ಪೈಥಾಗೊರಸ್ ಥಿಯರಂ ಆಯಿತು. ನಮ್ಮವರು ಸಾವಿರ ವರ್ಷಗಳ ಹಿಂದೆ ಬಳಸುತ್ತಿದ್ದ ಕಲನಶಾಸ್ತ್ರವು ನ್ಯೂಟನ್ ಮತ್ತು ಲೈಬ್ನಿಜ್ ಹೊಸದಾಗಿ ಆವಿಷ್ಕರಿಸಿದ ಕ್ಯಾಲ್ಕುಲಸ್ ಆಯಿತು. ಭಾಸ್ಕರರು ಬಳಸಿದ್ದ (ಮತ್ತು ಅವರಿಗೆ ಮೊದಲೇ ಬಳಕೆಯಲ್ಲಿದ್ದ) ದ್ವಿಪದ ಬೀಜೋಕ್ತಿಗಳ ಮೇಲಿನ ಫಲಿತಾಂಶವು ನ್ಯೂಟನ್ಪ್ರಣೀತ ಬೈನೋಮಿಯಲ್ ಪ್ರಮೇಯವಾಯಿತು. ರೇಖಾಗಣಿತದಲ್ಲಂತೂ ನಮ್ಮವರು ಮಾಡಿದ ಯಾವ ಸಾಧನೆಯನ್ನೂ ನಮ್ಮ ಪಠ್ಯಗಳು ಉಲ್ಲೇಖಿಸುವ ಕೃತಜ್ಞತೆಯನ್ನು ತೋರಲಿಲ್ಲ. ಬ್ರಹ್ಮಗುಪ್ತನ ಚಕ್ರೀಯ ಚತುರ್ಭುಜಗಳ ಫಲಿತಾಂಶಗಳಿರಬಹುದು; ಆರ್ಯಭಟ ಕೊಟ್ಟ ತ್ರಿಕೋನ-ವೃತ್ತಸಂಬಂಧೀ ಸೂತ್ರಗಳಿರಬಹುದು – ಯಾವುದೂ ಭಾರತೀಯ ಪರಂಪರೆಯನ್ನು ಕಾಣಿಸದೆ ಕೇವಲ ಪಾಶ್ಚಾತ್ಯರ ಕೊಡುಗೆ ಎಂಬಂತೆಯೇ ಪಠ್ಯಗಳಲ್ಲಿ ಪ್ರಕಟವಾಗಿ ಬಂದವು. ಥೇಲ್ಸ್, ಪೈಥಾಗೊರಸ್, ಆರ್ಕಿಮಿಡೀಸ್, ಟಾಲೆಮಿ ಹೆಸರಲ್ಲಿ ಹತ್ತಾರು ಅಂಶಗಳನ್ನು ಕಲಿವ ನಮಗೆ ಯೂಕ್ಲಿಡನ ಎಲಿಮೆಂಟ್ಸ್ ಗೊತ್ತು (ಯೂಕ್ಲಿಡ್ ಎಂಬ ವ್ಯಕ್ತಿಯೊಬ್ಬ ಇದ್ದನೇ ಎಂಬುದೇ ಇಂದಿಗೂ ಅನುಮಾನದ ಸಂಗತಿಯಾದರೂ!); ಆದರೆ ನಮ್ಮ ನೆಲದ ಬೌಧಾಯನ, ಕಾತ್ಯಾಯನ, ವಾಧೂಲ, ಭಾಸ್ಕರ, ಶ್ರೀಧರರ ಪರಿಚಯವೇ ಇಲ್ಲ.
ಇದು ಒಂದು ಅತಿಯಾದರೆ ಇನ್ನೊಂದು ಅತಿ: ಭಾರತದಲ್ಲಿ ಎಲ್ಲವೂ ಇತ್ತು ಎಂಬುದರ ಜೊತೆ, ಭಾರತೀಯರು ಎಲ್ಲವನ್ನೂ ತಮ್ಮ ಮನಶ್ಚಕ್ಷÄವಿನಿಂದಲೇ ಅರಿತುಕೊಂಡರು ಎಂಬುದು. ಭಾರತೀಯ ಪಂಚಾಂಗಗಳಿಗೆ ಕನಿಷ್ಠ ೪೦೦೦ ವರ್ಷಗಳ ಇತಿಹಾಸವಿದೆ; ಖಗೋಳದ ಜ್ಞಾನ ನಿರಂತರವಾಗಿ ಮುಂದುವರಿಯುತ್ತ, ಪರಿಷ್ಕಾರಗೊಳ್ಳುತ್ತ ನಡೆದಿದೆ. ಭಾರತೀಯರು ಎಲ್ಲವನ್ನೂ ಅಂತರ್ದೃಷ್ಟಿಯಿಂದ ನೋಡಿದರು; ಅವರಿಗೆ ಆಕಾಶವನ್ನು ನೋಡುವ ಅಗತ್ಯವೇ ಇರಲಿಲ್ಲ; ಎಲ್ಲವನ್ನೂ ದಿವ್ಯಸ್ಫುರಣೆಯಿಂದ ಮಾಡಿದರು – ಎಂಬೆಲ್ಲ ಉತ್ಪ್ರೇಕ್ಷೆಗಳು ಭಾರತಕ್ಕೆ ಒಳ್ಳೆಯದಕ್ಕಿಂತ ಹೆಚ್ಚು ಕೆಡುಕನ್ನೇ ಮಾಡಿವೆ ಎಂಬುದನ್ನು ಗಮನಿಸಬೇಕು.
ಪ್ರಾಯೋಗಿಕ ವಿಜ್ಞಾನ
ಗಣಿತ, ಖಗೋಳಗಳ ವಿಷಯದಲ್ಲಿ ಭಾರತ ಮಾಡಿದ್ದ ಸಾಧನೆಯ ದಾಖಲೆಗಳನ್ನು ಧರ್ಮಪಾಲರು ಸಂಶೋಧಿಸಿ ಹೊರತೆಗೆದಾಗ ಭಾರತದ ಆಕಾಶವೀಕ್ಷಣೆಯ ಇತಿಹಾಸವೂ ಜಗತ್ತಿನ ಮುಂದೆ ಅನಾವರಣಗೊಂಡಿತು. ಭಾರತೀಯರು ಆಕಾಶವೀಕ್ಷಣೆಗಾಗಿ ಬಗೆ ಬಗೆಯ ಉಪಕರಣಗಳನ್ನು ಬಳಸುತ್ತಿದ್ದರು. ಗಣಿತ ಮತ್ತು ಖಗೋಳ ಒಂದನ್ನೊಂದು ಬಿಡದ ಅವಿನಾಭಾವ ಸಂಬಂಧದಲ್ಲಿ ಬೆಸೆದುಕೊಂಡಿದ್ದವು. ಪ್ರಸಿದ್ಧ ಖಗೋಳಜ್ಞ ಆರ್ಯಭಟ ಆಕಾಶವೀಕ್ಷಕನೂ ಆಗಿದ್ದ. ಸುಸಜ್ಜಿತವಾದ ವೇದಶಾಲೆಯನ್ನು ಬಳಸುತ್ತಿದ್ದ. ಗಣಿತದ ಮೂಲಕ ಅದೆಷ್ಟೇ ಲೆಕ್ಕಾಚಾರಗಳನ್ನು ಮಾಡಿದರೂ ಕಣ್ಣಿನಿಂದ ಕಾಣುವ ಸತ್ಯಗಳನ್ನೇ (ಅರ್ಥಾತ್ ಆಕಾಶದಲ್ಲಿ ನಡೆಯುವ ವಿದ್ಯಮಾನಗಳನ್ನೇ) ಅಂತಿಮಸತ್ಯವಾಗಿ ಒಪ್ಪಿಕೊಳ್ಳಬೇಕೆಂಬ ಧೀಮಂತಿಕೆ ಹಾಗೂ ವಿನಯ ಆರ್ಯಭಟನಲ್ಲಿತ್ತು. ದೃಕ್ಗಣಿತ ಪಂಚಾಂಗಕ್ಕೆ ಆರ್ಯಭಟನಿಂದ ಮಹತ್ತಮವಾದ ಪ್ರಾಶಸ್ತ್ಯ ಸಿಕ್ಕಿತು.
೧೮ನೇ ಶತಮಾನದ ಆದಿಭಾಗದಲ್ಲಿ ಸವಾಯಿ ಎರಡನೇ ಜಯಸಿಂಹ ಭಾರತದ ಐದು ಕಡೆಗಳಲ್ಲಿ ವೇದಶಾಲೆಗಳನ್ನು ನಿರ್ಮಿಸಿದ. ಸಣ್ಣ ಉಪಕರಣಗಳನ್ನು ಬಳಸಿಕೊಂಡು ಖಗೋಳವೀಕ್ಷಣೆ ಮಾಡುವ ಬದಲು ಬೃಹದ್ ಗಾತ್ರದ ಉಪಕರಣ ಬಳಸಿ ಲೆಕ್ಕಾಚಾರದ ದೋಷಗಳನ್ನು ಕಡಮೆ ಮಾಡಿಕೊಳ್ಳುವ ಹೊಚ್ಚಹೊಸ ಯೋಚನೆಯೇ ಜಯಸಿಂಹನಿಂದ ರಚನೆಯಾದ ಜಂತರ್ ಮಂತರ್ ಕಟ್ಟಡಗಳ ಮೂಲ. ಇಲ್ಲಿ ಜಂತರ್ ಎಂದರೆ ಯಂತ್ರ, ಮಂತ್ರ ಎಂದರೆ ಗಣಿತ ಲೆಕ್ಕಾಚಾರ ಹಾಗೂ ಸಿದ್ಧಾಂತ. ಇವೆರಡನ್ನು ಜೊತೆಯಾಗಿಟ್ಟು ಆಕಾಶದ ವೀಕ್ಷಣೆ ಮಾಡಿ ಫಲಿತಾಂಶ ತೆಗೆಯಲು ಸಹಾಯ ಮಾಡುವ ಉಪಕರಣವೇ ಜಂತರ್ ಮಂತರ್. ಇವನ್ನು ದೆಹಲಿ, ಜೈಪುರ, ಉಜ್ಜೈನಿ, ಮಥುರಾ ಮತ್ತು ವಾರಾಣಸಿಗಳಲ್ಲಿ ಸ್ಥಾಪಿಸಲಾಯಿತು. ಆಕಾಶವೀಕ್ಷಣೆಯನ್ನು ಭೂಮಿಯ ಬೇರೆ ಬೇರೆ ಭಾಗಗಳಿಂದ ಮಾಡಿ, ಆ ಎಲ್ಲ ಫಲಿತಾಂಶಗಳನ್ನು ಕ್ರೋಡೀಕರಿಸಿ ಅಂತಿಮ ಸತ್ಯವನ್ನು ಪ್ರಕಟಿಸಬೇಕೆಂಬ ಎಚ್ಚರ ಜಯಸಿಂಹನಿಗಿತ್ತು. ಆತನೇ ಸ್ವತಃ ನುರಿತ ಖಗೋಳಜ್ಞ, ಗಣಿತವಿದನೂ ಆಗಿದ್ದ. ವಾರಾಣಸಿಯಲ್ಲಿ ಮಾನಮಂದಿರದ ಒಂದು ಭಾಗವನ್ನು ಹೀಗೆ ಖಗೋಳವೀಕ್ಷಣಾಲಯವಾಗಿ ಪರಿವರ್ತಿಸಲಾಯಿತು. ಎಲ್ಲ ಶಾಸ್ತ್ರಗಳ ಜ್ಞಾನಪ್ರಸರಣ ಕೇಂದ್ರವಾಗಿದ್ದ ವಾರಾಣಸಿ ಈ ಮಾನಮಂದಿರದ ವೀಕ್ಷಣಾಲಯದಿಂದಾಗಿ ಖಗೋಳದ ಜ್ಞಾನಕಾಶಿಯೂ ಆಯಿತು ಎನ್ನಬಹುದು.
ಇತಿಹಾಸದ ಸುವರ್ಣಪುಟಗಳನ್ನು ಮರೆತು ನಾವು ಅದೆಷ್ಟು ಮುಂದೆ ಬಂದುಬಿಟ್ಟಿದ್ದೆವೆಂದರೆ ಧರ್ಮಪಾಲರು ಬ್ರಿಟಿಷ್ ಪತ್ರಗಳನ್ನೂ ದಾಖಲೆಗಳನ್ನೂ ಮುಂದಿಟ್ಟುಕೊಂಡು ವಾರಾಣಸಿಯ ಖಗೋಳಸಂಬಂಧೀ ಕಟ್ಟಡಗಳ ಬಗ್ಗೆ ಹೇಳುವವರೆಗೆ ಆ ವಿಷಯದ ಬಗ್ಗೆ ಭಾರತೀಯರು ಸಂಪೂರ್ಣ ವಿಸ್ಮೃತಿಯಲ್ಲೇ ಕಳೆದುಹೋಗಿದ್ದರು.
* * *
ಹೀಗೆ ಧರ್ಮಪಾಲರ ‘ಹದಿನೆಂಟನೆಯ ಶತಮಾನದ ಭಾರತೀಯ ವಿಜ್ಞಾನ ಹಾಗೂ ತಂತ್ರಜ್ಞಾನ’ ಕೃತಿ ಹಲವು ಅಚ್ಚರಿಗಳನ್ನು ದಾಖಲಿಸಿತು. ಭಾರತೀಯರು ಸುಸಜ್ಜಿತವಾದ ಖಗೋಳವೀಕ್ಷಣಾಲಯಗಳನ್ನು ಕಟ್ಟಿಕೊಂಡಿದ್ದರು, ಖಗೋಳ ವೀಕ್ಷಣೆಗೆ ಬೇಕಾದ ಉಪಕರಣಗಳನ್ನು ಸ್ವಯಂ ನಿರ್ಮಿಸಿಕೊಂಡಿದ್ದರು, ಯೂರೋಪಿನ ಜಗತ್ತು ೧೭-೧೮ನೇ ಶತಮಾನದಲ್ಲಿ ಚರ್ಚಿಸುತ್ತಿದ್ದ “ಆಲ್ಜೀಬ್ರ”ದ (ಬೀಜಗಣಿತ) ಅನೇಕ ಸಮಸ್ಯೆಗಳನ್ನು ಭಾಸ್ಕರ, ಬ್ರಹ್ಮಗುಪ್ತರು ಚರ್ಚಿಸಿ ಪರಿಹಾರದ ವಿಧಾನಗಳನ್ನೂ ಸೂಚಿಸಿದ್ದರು, ಭಾರತದಲ್ಲಿ ನಿರ್ಮಿಸಿದ ಅತ್ಯುತ್ತಮ ಗುಣಮಟ್ಟದ ಕಬ್ಬಿಣ ಮತ್ತು ಉಕ್ಕಿಗೆ ಹೊರರಾಷ್ಟ್ರಗಳಲ್ಲಿ ಅಪಾರ ಬೇಡಿಕೆ ಇತ್ತು, ಭಾರತೀಯ ವಸ್ತ್ರೋದ್ಯಮ ಇಡೀ ಜಗತ್ತಿನಲ್ಲಿ ಹೆಸರು ಮಾಡಿತ್ತು, ಭಾರತದಲ್ಲಿ ಬರ್ಫದ (‘ಐಸ್’) ಕೃತಕ ತಯಾರಿಯೂ ನಡೆದಿತ್ತು, ಜಗತ್ತಿಗೆ ಪ್ಲಾಸ್ಟಿಕ್ ಸರ್ಜರಿಯನ್ನೂ ಲಸಿಕೆಯ ಪರಿಕಲ್ಪನೆಯನ್ನೂ ಕೊಟ್ಟದ್ದು ಭಾರತ ದೇಶವೇ – ಎಂಬೆಲ್ಲ ವಿಚಾರಗಳು ಕೇವಲ ಅಡುಗೂಲಜ್ಜಿ ಕತೆಯಾಗದೆ ಸಾಕ್ಷ್ಯಸಮೇತ ಸತ್ಯ ವಿಚಾರಗಳಾಗಿ ಧರ್ಮಪಾಲರ ಕೃತಿಯಲ್ಲಿ ಬಂದವು. ಧರ್ಮಪಾಲರ ಕೃತಿಯನ್ನು ಅಲ್ಲಗಳೆಯಬೇಕಾದರೆ ಹಾಗೆ ಮಾಡುವವರು ಧರ್ಮಪಾಲರು ಮಾಡಿದ್ದ ಅಷ್ಟೂ ವರ್ಷಗಳ ಸಂಶೋಧನೆಯನ್ನು ತಾವೂ ಮಾಡಿ, ಎಲ್ಲ ಬ್ರಿಟಿಷ್ ದಾಖಲೆಗಳನ್ನೂ ಪರಿಶೀಲಿಸಿ, ಅವೆಲ್ಲವನ್ನೂ ನಿರಾಕರಿಸುವ ಧೈರ್ಯ ಮಾಡಬೇಕಿತ್ತು.
ಧರ್ಮಪಾಲರ ಯಾವೊಂದು ಸಾಲನ್ನೂ ಸುಳ್ಳು ಎಂದು ಸಾಬೀತುಮಾಡುವುದು ವಸಾಹತೋತ್ತರ ಭಾರತದ ಆಧುನಿಕ ಬುದ್ಧಿಜೀವಿಗಳಿಗೆ ಸಾಧ್ಯವೇ ಇರಲಿಲ್ಲ. ಹಾಗಾಗಿ ಅವರು ಇನ್ನೊಂದು – ಸರಳವಾದ – ದಾರಿ ಹಿಡಿದರು. ಅದೆಂದರೆ ಧರ್ಮಪಾಲರ ಕೃತಿಗಳ ದಿವ್ಯ ಉಪೇಕ್ಷೆ! ಧರ್ಮಪಾಲ್ ಬರೆದ ಕೃತಿಗಳು ಎಲ್ಲೂ ಚರ್ಚೆಗೆ ಬರದಂತೆ, ಅದರಲ್ಲಿದ್ದ ವಿಚಾರಗಳು ಬೇರಾವ ಕೃತಿಗಳಲ್ಲೂ ಮರುಉಲ್ಲೇಖ ಕಾಣದಂತೆ, ಆ ವಿಷಯಗಳು ಯಾವೊಂದು ಪಠ್ಯಪುಸ್ತಕದಲ್ಲೂ ಒಂದು ಸಾಲಲ್ಲೂ ಮೂಡಿಬರದಂತೆ ನೋಡಿಕೊಳ್ಳಲಾಯಿತು. ಆ ಮೂಲಕ, ಸ್ವಾತಂತ್ರ್ಯ ಬಂದ ಮೇಲಿನ ೭೦ ವರ್ಷಗಳಲ್ಲಿ ನಾವು ಬ್ರಿಟಿಷರಿಂದ ಅಲ್ಲ, ಬ್ರಿಟಿಷ್ ಮಾನಸಿಕತೆಯ ಗುಲಾಮಗಿರಿಗೆ ನಮ್ಮ ತಲೆ ಕೊಟ್ಟು ಕುರಿಗಳಂತೆ ಬದುಕಿದೆವು ಎನ್ನಬೇಕು.
ತಾಜಮಹಲಿನ ನೆಲಮಾಳಿಗೆಯ ಬಾಗಿಲಿನಂತೆ – ಬೀಗ ನಮ್ಮಲ್ಲೇ ಇದೆ, ಕೀಲಿ ನಮ್ಮಲ್ಲೇ ಇದೆ, ತೆರೆಯುವ ಸ್ಥೈರ್ಯಕ್ಕಾಗಿ ಕಾಲ ಕಾಯುತ್ತಿದೆ.
“ಪ್ಲಾಸ್ಟಿಕ್ ಸರ್ಜರಿಯ ಜನಕ” ಎಂದೇ ಹೆಸರಾಗಿಬಿಟ್ಟ ಡಾ. ಜೋಸೆಫ್ ಸಿ. ಕಾರ್ಪ್ಯೂ ತನ್ನ ಈ “ಪ್ರಥಮ ಪ್ರಯೋಗ”ವನ್ನು ನಡೆಸುವ ಮೊದಲು ಭಾರತದಲ್ಲಿ ಇಪ್ಪತ್ತು ವರ್ಷಗಳನ್ನು ಕಳೆದಿದ್ದ! ೧೭-೧೮ನೇ ಶತಮಾನಗಳಲ್ಲಿ ಭಾರತದ ಪುಣೆಯಲ್ಲಿ ಮೂಗಿನ ಶಸ್ತ್ರಚಿಕಿತ್ಸೆಗಳನ್ನು ಅತ್ಯಂತ ಸಾಮಾನ್ಯ ಚಿಕಿತ್ಸೆಯಾಗಿ ನಡೆಸಲಾಗುತ್ತಿತ್ತು. ಯುದ್ಧದಲ್ಲಿ ಅಥವಾ ಬೇರಾವುದೋ ಅವಘಡಗಳಲ್ಲಿ ಮೂಗು ಕಳೆದುಕೊಂಡವರಿಗೆ ಪುಣೆಯಲ್ಲಿ ಆಯುರ್ವೇದದಲ್ಲಿ ನುರಿತ ಶಸ್ತ್ರವೈದ್ಯರು ನಾಸಿಕ ಚಿಕಿತ್ಸೆಯನ್ನು ನಡೆಸುತ್ತಿದ್ದರು.
ತಮ್ಮ ಯಂತ್ರೋಪಕರಣಗಳು ಜಗತ್ತಿನ ಕೃಷಿಕ್ಷೇತ್ರದಲ್ಲೇ ಅತ್ಯುತ್ತಮ ಮಟ್ಟದವೆಂಬ ತಿಳಿವಳಿಕೆ ನಮ್ಮವರಿಗೆ ಇತ್ತೋ ಇಲ್ಲವೋ ಎಂಬುದು ಖಚಿತವಿಲ್ಲ. ಭಾರತದಲ್ಲಿ ಕೃಷಿಯಲ್ಲಿ ಬಳಸುತ್ತಿದ್ದ ವಿವಿಧ ಬಗೆಯ ಕತ್ತಿ-ಕುಡುಗೋಲುಗಳನ್ನು, ಕಟಾವಿಗೆ ಬಳಸುತ್ತಿದ್ದ ಯಂತ್ರಗಳನ್ನು, ನೆಲ ಉಳುವ ನೇಗಿಲುಗಳ ಬಗೆ ಬಗೆಯ ಮಾದರಿಗಳನ್ನು ಬ್ರಿಟಿಷರು ಸಂಗ್ರಹಿಸಿ ಅವನ್ನು ತಮ್ಮ ದೇಶಕ್ಕೆ ಕಳಿಸಿಕೊಡುತ್ತಿದ್ದರು.
ಔದ್ಯಮಿಕ ಕ್ಷೇತ್ರದಲ್ಲಿನ ಭಾರತದ ಸಂಪನ್ನತೆ
ಔದ್ಯಮಿಕ ಕ್ಷೇತ್ರದಲ್ಲಿನ ಭಾರತದ ಸಂಪನ್ನತೆ ಕುರಿತು ೧೯೬೦-೧೯೯೦ರ ದಶಕಗಳಲ್ಲಿ ಧರ್ಮಪಾಲ್ ಕ್ರೋಡೀಕರಿಸಿರುವ ಮಾಹಿತಿಗಳು ಅಲ್ಲಿಂದೀಚಿನ ಅನ್ಯ ಸಂಶೋಧಕರ ಕೃತಿಗಳಿಂದಲೂ ಸ್ಥಿರಪಟ್ಟಿವೆ. ಭಾರತದಲ್ಲಿ ಬ್ರಿಟಿಷರ ಆಗಮನಕ್ಕೆ ಹಿಂದೆ ಭಾರತ ಪ್ರಮುಖ ಔದ್ಯಮಿಕ ದೇಶವಾಗಿದ್ದು ಇಡೀ ಜಗತ್ತಿನ ಜಿ.ಡಿ.ಪಿ.ಯಲ್ಲಿ ಭಾರತದ ಪಾಲು ಶೇ. ೨೫ರಷ್ಟು ಇದ್ದಿತೆಂದು ಖ್ಯಾತ ಸಂಶೋಧಕ ಪಾಲ್ ಕೆನೆಡಿ ಸ್ಥಾಪಿಸಿದ್ದಾರೆ. ಭಾರತದಿಂದ ಕೊಳ್ಳೆಹೊಡೆದ ಧಾನ್ಯರಾಶಿಗಳನ್ನು ಇಂಗ್ಲೆಂಡ್ ಪರಿಷ್ಕರಿಸಿ ಭಾರತಕ್ಕೇ ಅಧಿಕ ದರದಲ್ಲಿ ಮಾರಾಟ ಮಾಡುತ್ತಿತ್ತು, ಇತರ `ವಸಾಹತು’ಗಳಿಗೆ ಕೂಡಾ – ಎಂದೂ ಪಾಲ್ ಕೆನೆಡಿ ವಿವರಿಸಿದ್ದಾರೆ. ಇದೇ ಜಾಡಿನ ವಾಸ್ತವಗಳು ಇತ್ತೀಚಿನ ಹಾರ್ವರ್ಡ್ ವಿಶ್ವವಿದ್ಯಾಲಯದ ಸಂಶೋಧಕರಾದ ಡೇವಿಡ್ ಕ್ಲಿಂಗಿಂಗ್ಸ್ಮಿತ್, ಜೆಫ್ರಿ ಜಿ. ವಿಲಿಯಂಸನ್ ಮೊದಲಾದವರ ಕೃತಿಗಳಲ್ಲಿಯೂ ಸ್ಥಿರೀಕೃತವಾಗಿವೆ.