ಭಾರತೀಯರ ಜೀವನಪದ್ಧತಿಯಲ್ಲಿ ಗೋವಿಗೆ ಅತ್ಯಂತ ಮಹತ್ತರ ಪಾತ್ರವಿದೆ ಎಂದು ಗಾಂಧಿಯವರೂ ಹೇಳಿದ್ದರು. ಅವರ ಪ್ರಕಾರ ಗೋವನ್ನು ರಕ್ಷಿಸುವುದು ಎಂದರೆ, ಕೇವಲ ಒಂದು ಜೀವಿಯನ್ನು ರಕ್ಷಿಸುವ ಕಾರ್ಯ ಮಾತ್ರವಲ್ಲ, ಬದಲಿಗೆ ಜಗತ್ತಿನಲ್ಲಿರುವ ಎಲ್ಲ ಜೀವಿಗಳನ್ನು ರಕ್ಷಿಸುವ ಕಾರ್ಯವಾಗುತ್ತದೆ. ಗೋಹತ್ಯೆ ಮಾಡುವುದು ಹಾಗೂ ಮನುಷ್ಯನ ಹತ್ಯೆ ಮಾಡುವುದು ಎರಡೂ ಸಮ ಎಂಬುದು ಗಾಂಧಿಯವರ ನಿಲವಾಗಿತ್ತು. ಒಂದೊಮ್ಮೆ ‘ನನಗೆ ಒಂದು ದಿನ ಅಧಿಕಾರ ದೊರೆತರೆ ಗೋಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸುತ್ತೇನೆ’ ಎನ್ನುವ ಉತ್ಸಾಹಭರಿತ ಮಾತನ್ನು ಗಾಂಧಿ ಹೇಳಿದ್ದರು.
ಭಾರತವು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹೊಸ್ತಿಲಲ್ಲಿ ಬಂದು ನಿಂತಿದೆ. ಭಾರತಕ್ಕೆ ಸ್ವಾತಂತ್ರ್ಯ ದೊರೆತು ೭೫ ವರ್ಷಗಳು ಕಳೆದಿವೆ. ವಿದೇಶಿಗರಿಂದ ಸ್ವಾತಂತ್ರ್ಯವನ್ನು ೧೯೪೭ರಲ್ಲೇ ಪಡೆದರೂ ಸಹ ಕಳೆದ ಹಲವಾರು ವರ್ಷಗಳಿಂದ ನಿರ್ವಸಾಹತೀಕರಣದ ಹಲವಾರು ಚರ್ಚೆಗಳೂ ನಡೆಯುತ್ತಿವೆ. ಎಡ್ವರ್ಡ್ ಸೈದ್ನಿಂದ ಹಿಡಿದು ಎಸ್.ಎನ್. ಬಾಲಗಂಗಾಧರರವರೆಗೆ ಹಲವಾರು ರೀತಿಯ ಬೌದ್ಧಿಕ ಕಾರ್ಯಾವಳಿಗಳು ವಸಾಹತು ಕಪಿಮುಷ್ಟಿಯಿಂದ ಹೊರಬರಲು ಪ್ರಯತ್ನಿಸುತ್ತಿವೆ. ವಸಾಹತುಶಾಹಿಗಳ ಭೌತಿಕ ಆಕ್ರಮಣದಿಂದ ಹೊರಬಂದ ರಾಷ್ಟ್ರಗಳು ಅವುಗಳ ಮಾನಸಿಕ ಹಿಡಿತದಿಂದಲೂ ಹೊರಬರಬೇಕೆನ್ನುವ ಪ್ರಯತ್ನವನ್ನೇ ನಿರ್ವಸಾಹತಿಕರಣವೆನ್ನಲಾಗಿದೆ. ಬ್ರಿಟಿಷರು ಕಟ್ಟಿಕೊಟ್ಟ ಚಿತ್ರಣಗಳು ಅಚ್ಚಳಿಯದೆ ವಿದ್ವಾಂಸರಾದಿಯಾಗಿ ಜನಮಾನಸದಲ್ಲಿ ಸಹಜ ಜ್ಞಾನವಾಗಿ ಪರಿವರ್ತನೆಯಾಗಿಬಿಟ್ಟಿರುವ ಸಂದರ್ಭದಲ್ಲಿ ನಿರ್ವಸಾಹತೀಕರಣವು ಅಷ್ಟು ಸುಲಭದ ಕೆಲಸವಲ್ಲ ಎನ್ನುವುದು ಎಲ್ಲರ ಮನವರಿಕೆಯಾಗಿದೆ. ಆದ್ದರಿಂದ ಬೇರೆ ಬೇರೆ ಸ್ತರಗಳಲ್ಲಿ ಇದರ ಕೆಲಸವು ಆಗಬೇಕಿದೆ. ಇಂತಹ ಪ್ರಯತ್ನಗಳಿಗೆ ಇಂಬು ನೀಡುವ ಕೆಲಸವನ್ನು ಕೆಲವು ಐತಿಹಾಸಿಕ ಸತ್ಯಗಳು ಮಾಡುತ್ತವೆ. ಅಂತಹದೇ ಒಂದು ಪ್ರಭಾವಿ ಪ್ರಯತ್ನವನ್ನು ಧರ್ಮಪಾಲ್ರವರು ತಮ್ಮ ಜೀವನದಾದ್ಯಂತ ಮಾಡಿರುವುದು ನಿಜಕ್ಕೂ ಅದ್ಭುತವಾದ ಕಾರ್ಯವಾಗಿದೆ. ಭಾರತದ ಪಾರಂಪರಿಕ ಜ್ಞಾನವನ್ನು ಬ್ರಿಟಿಷರ ದಾಖಲೆಗಳ ಮೂಲಕವೇ ಹುಡುಕಿ ತೆಗೆಯುವ ವಿನೂತನ ಪ್ರಯತ್ನವನ್ನು ಅವರು ಮಾಡಿದರು. ಅದರ ಫಲವಾಗಿಯೇ ‘ದಿ ಬ್ಯೂಟಿಫುಲ್ ಟ್ರೀ’, ‘ಪಂಚಾಯತ್ರಾಜ್ ಸಿಸ್ಟಮ್ ಅಂಡ್ ಇಂಡಿಯನ್ ಪಾಲಿಟಿ’ಯಂತಹ ಅಪೂರ್ವ ಕೃತಿಗಳು ಹೊರಬಂದಿವೆ. ಪ್ರಸ್ತುತ ಲೇಖನದಲ್ಲಿ ಇಂದು ಬಹುಚರ್ಚಿತವಾಗಿರುವ ಗೋಹತ್ಯೆಯ ಕುರಿತು ಕೆಲವು ಐತಿಹಾಸಿಕ ವಿಚಾರಗಳನ್ನು ಪ್ರಸ್ತಾವಿಸಲಾಗಿದೆ. ಇದರ ಮೂಲಕ ಗೋಹತ್ಯೆ ಕುರಿತು ನಮಗಿರುವ ಸಾಮಾನ್ಯಜ್ಞಾನ ಹಾಗೂ ಅಸ್ತಿತ್ವದಲ್ಲಿರುವ ಐತಿಹಾಸಿಕ ಸತ್ಯಗಳನ್ನು ಒರೆಗೆ ಹಚ್ಚುವ ಕಾರ್ಯವನ್ನು ಮಾಡಬೇಕಾಗಿದೆ.
ಗೋಹತ್ಯೆ ಕೇವಲ ಪ್ರಾಣಿಯ ವಧೆ ಎಂದು ಭಾವಿಸಿದರೆ ಅದು ಮೂರ್ಖತನವಾಗುತ್ತದೆ. ಏಕೆಂದರೆ ಗೋವು ನಮ್ಮ ಸಂಸ್ಕೃತಿಯ ಅನನ್ಯ ಭಾಗವಾಗಿ ಬೆಳೆದಿದೆ. ಸಂಸ್ಕೃತಿಯ ರೂಪಗೊಳ್ಳುವಿಕೆಯ ಹಲವಾರು ಅಂಶಗಳಲ್ಲಿ ಗೋವು ಸಹ ಒಂದು ಎಂದರೆ ತಪ್ಪಾಗಲಾರದು. ಭಾರತೀಯರ ಜೀವನವಿಧಾನ ಮತ್ತು ಲೋಕದೃಷ್ಟಿಗಳನ್ನು ಗಮನಿಸಿದರೆ, ಸಕಲ ಜೀವಾತ್ಮಗಳನ್ನು ಗೌರವಿಸುವ ಮತ್ತು ಭಿನ್ನ ಭಿನ್ನ ಸಮುದಾಯಗಳ ಜೀವನಕ್ರಮದೊಡನೆ ಸಾಮರಸ್ಯದಿಂದ ಬದುಕುವ ಅನನ್ಯ ಜೀವನಕ್ರಮವನ್ನು ಹೊಂದಿರುವುದನ್ನು ಕಾಣುತ್ತೇವೆ. ಪಾಶ್ಚಾತ್ಯ ರಾಷ್ಟ್ರಗಳು ಎಲ್ಲಾ ಜೀವರಾಶಿಗಳು ಹಾಗೂ ಪ್ರಕೃತಿಗಿಂತ ಮನುಷ್ಯನೇ ಶ್ರೇಷ್ಠ ಎಂಬ ನಂಬಿಕೆಯ ಮೇಲೆ ಬದುಕಿದರೆ, ಇದಕ್ಕೆ ವ್ಯತಿರಿಕ್ತವಾಗಿ ಪ್ರಕೃತಿ ಹಾಗೂ ಜೀವಸಂಕುಲದೊಡನೆ ಒಂದಾಗುವ ಪ್ರಕ್ರಿಯೆಯನ್ನು ಭಾರತೀಯ ಸಂಸ್ಕೃತಿ ಕಲಿಸಿದೆ. ಆದ್ದರಿಂದಲೇ ಪ್ರತಿ ಹಬ್ಬ, ಆಚರಣೆಗಳಲ್ಲಿ ಪ್ರಕೃತಿಯ ಬೇರೆ ಬೇರೆ ಅಂಶಗಳನ್ನು ಆರಾಧಿಸುವ ಕ್ರಮಗಳನ್ನು ಇಲ್ಲಿಯ ಪೂರ್ವಿಕರು ಬೆಳೆಸಿಕೊಂಡು ಬಂದಿದ್ದಾರೆ. ಪ್ರಕೃತಿ, ಪ್ರಾಣಿ, ಪಕ್ಷಿಗಳಲ್ಲಿ ದೈವತ್ವವನ್ನು ಕಂಡುಕೊಂಡ ವಿಶಿಷ್ಟ ಸಂಸ್ಕೃತಿ ನಮ್ಮದಾಗಿದೆ. ಆದ್ದರಿಂದಲೇ ಹಸು, ಭೂಮಿ, ಆಗಸ, ಕಲ್ಲು, ಇತ್ಯಾದಿಗಳು ದೈವೀ ಸ್ವರೂಪವನ್ನು ನಮ್ಮಲ್ಲಿ ಪಡೆದುಕೊಂಡಿವೆ. ಭಾರತೀಯರ ಜೀವನಪದ್ಧತಿಯಲ್ಲಿ ಯಾವುದೇ ಜೀವಿಯು ದೈವೀ ಸ್ವರೂಪವನ್ನು ಪಡೆಯುವುದೆಂದರೆ ಅದು ಎಂದೆಂದಿಗೂ ನಮ್ಮೊಡನೆ ಇರುವಂತದ್ದೇ ಆಗಿದೆ ಎಂದು ಪರಿಭಾವಿಸುವುದೇ ಆಗಿರುತ್ತದೆ. ಆದಕಾರಣ, ಅನೇಕ ಪ್ರಾಣಿಗಳು ಅತ್ಯಂತ ಗೌರವಪೂರ್ಣ ಸ್ಥಾನವನ್ನು ಭಾರತೀಯರಲ್ಲಿ ಪಡೆದಿವೆ. ವಿಶೇಷವಾಗಿ ಗೋವುಗಳು ನÀಮ್ಮ ಜೀವನದಲ್ಲಿ ಪ್ರಮುಖ ಭಾಗವಾದರೂ ಕೂಡ ಅವುಗಳು ಕೇವಲ ಕೃಷಿ ಮತ್ತು ಹೈನುಗಾರಿಕೆಗೆ ಮೀಸಲಾದ ಪ್ರಾಣಿಗಳಾಗಿ ಉಳಿಯಲಿಲ್ಲ, ಬದಲಿಗೆ ಮನುಷ್ಯನ ಬದುಕಿಗೆ ಆಸರೆಯಾಗಿ ಜೀವನಾಧಾರವಾಗಿ ಮುನ್ನಡೆದುಕೊಂಡು ಬಂದಿದೆ. ಪ್ರಾಯಶಃ ಇದಕ್ಕಾಗಿಯೆ ಗೋವಿಗೆ ಕಲ್ಪತರುವಿನಂತಹ ವಿಶೇಷ ಸ್ಥಾನಮಾನವನ್ನು ಭಾರತೀಯ ಸಂಸ್ಕೃತಿ ನೀಡಿದೆ. ಹಸುವಿನ ಹಾಲಿನಿಂದ ಹಿಡಿದು ಸೆಗಣಿಯವರೆಗೂ ಎಲ್ಲ ಉತ್ಪನ್ನಗಳೂ ಮನುಕುಲಕ್ಕೆ ಉಪಯುಕ್ತವಾದವೇ ಆಗಿವೆ.
ಭಾರತೀಯರ ಜೀವನಪದ್ಧತಿಯಲ್ಲಿ ಗೋವಿಗೆ ಅತ್ಯಂತ ಮಹತ್ತರ ಪಾತ್ರವಿದೆ ಎಂದು ಗಾಂಧಿಯವರೂ ಹೇಳಿದ್ದರು. ಅವರ ಪ್ರಕಾರ ಗೋವನ್ನು ರಕ್ಷಿಸುವುದು ಎಂದರೆ, ಕೇವಲ ಒಂದು ಜೀವಿಯನ್ನು ರಕ್ಷಿಸುವ ಕಾರ್ಯ ಮಾತ್ರವಲ್ಲ, ಬದಲಿಗೆ ಜಗತ್ತಿನಲ್ಲಿರುವ ಎಲ್ಲ ಜೀವಿಗಳನ್ನು ರಕ್ಷಿಸುವ ಕಾರ್ಯವಾಗುತ್ತದೆ. ಗೋಹತ್ಯೆ ಮಾಡುವುದು ಹಾಗೂ ಮನುಷ್ಯನ ಹತ್ಯೆ ಮಾಡುವುದು ಎರಡೂ ಸಮ ಎಂಬುದು ಗಾಂಧಿಯವರ ನಿಲವಾಗಿತ್ತು. ಒಂದೊಮ್ಮೆ ‘ನನಗೆ ಒಂದು ದಿನ ಅಧಿಕಾರ ದೊರೆತರೆ ಗೋಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸುತ್ತೇನೆ’ ಎನ್ನುವ ಉತ್ಸಾಹಭರಿತ ಮಾತನ್ನು ಗಾಂಧಿ ಒಮ್ಮೆ ಹೇಳಿದ್ದರು. ಹಾಗೆಯೇ ಸಂವಿಧಾನ ರಚನಾಸಭೆಯಲ್ಲಿ ಗೋಹತ್ಯೆಯ ಕುರಿತು ಸುದೀರ್ಘ ಚರ್ಚೆಗಳು ನಡೆದಾಗ, ರಾಜ್ಯ ನೀತಿ ನಿರ್ದೇಶಕ ತತ್ತ್ವಗಳ ಅಡಿಯಲ್ಲಿ ಗೋರಕ್ಷಣೆಯ ಕಾರ್ಯತಂತ್ರಗಳ ಕುರಿತು ಪ್ರಭುತ್ವ ಅನುಸರಿಸಬೇಕಾದ ಕಾರ್ಯಗಳ ಕುರಿತು ಸಂವಿಧಾನವು ಕೆಲವು ಶಾಸನೀಯ ಸ್ಥಾನಮಾನಗಳನ್ನು ಕಲ್ಪಿಸಿಕೊಟ್ಟಿದೆ.
ಹಿಂದೂಗಳು ಗೋಹತ್ಯೆಯನ್ನು ವಿರೋಧಿಸಿದರೆ, ವೇದಗಳ ಕಾಲದಲ್ಲಿ ಬ್ರಾಹ್ಮಣರು ಗೋವುಗಳ ಭಕ್ಷಣೆ ಮಾಡುತ್ತಿದ್ದರು ಎಂಬ ಕಥೆಗಳನ್ನು ಎಗ್ಗಿಲ್ಲದೆ ವಿರೋಧಿಗಳು ಹೆಣೆಯಲು ಪ್ರಾರಂಭಿಸುತ್ತಾರೆ. ಆದರೆ ಇದರ ಕುರಿತು ವಿಸ್ತೃತವಾಗಿ ಅಧ್ಯಯನ ನಡೆಸಿರುವ ಧರ್ಮಪಾಲ್ ರವರು ಹೇಳುವಂತೆ, ೧೭ನೇ ಶತಮಾನದ ನಂತರ, ಬ್ರಿಟಿಷರು ಮಾಂಸಭಕ್ಷಣೆಗಾಗಿ ಗೋಹತ್ಯೆಯನ್ನು ಯಥೇಚ್ಛವಾಗಿ ಮಾಡಲು ಪ್ರಾರಂಭಿಸಿದಾಗ, ಭಾರತದಲ್ಲಿ ಎದ್ದ ವಿರೋಧಿ ಅಲೆಯನ್ನು ತಣ್ಣಗಾಗಿಸಲು ಬೌದ್ಧಿಕ ಮಾರ್ಗವನ್ನು ಬ್ರಿಟಿಷರು ಅನುಸರಿಸಿದರು. ಪಾಶ್ಚಾತ್ಯ ಮನಃಸ್ಥಿತಿಗಳನ್ನು ತಮ್ಮತ್ತ ಸೆಳೆಯುವ ಕಾರಣದಿಂದ ವೇದಗಳ ಕುರಿತು ನಿರೂಪಣೆ ಮಾಡುವ ಕಾರ್ಯವನ್ನು ಪ್ರಾರಂಭಿಸಿದರು. ಅದೇ ಸಂದರ್ಭದಲ್ಲಿ ವೇದಗಳ ಕಾಲದಲ್ಲಿ ಗೋವಿನ ಮಾಂಸವನ್ನು ಬ್ರಾಹ್ಮಣರು ಭಕ್ಷಿಸುತ್ತಿದ್ದರು ಎಂಬಂತಹ ಕಥೆಗಳನ್ನು ವ್ಯಾಪಕವಾಗಿ ಪ್ರಚಾರ ಮಾಡಲು ತೊಡಗಿದರು. ನೂರು ಸಾರಿ ಹೇಳಿದ ಸುಳ್ಳನ್ನೇ ಸತ್ಯ ಎಂದು ನಂಬಿದ ಕೆಲವು ಸುಧಾರಕರೂ ಸಹ ಅದನ್ನೇ ಸತ್ಯವೆಂದು ನಂಬಿದರು. ಅಷ್ಟೇ ಅಲ್ಲ. ಪಠ್ಯಗಳು ಏನನ್ನೇ ಹೇಳಲಿ, ಸುಮಾರು ಎರಡು ಸಾವಿರ ವರುಷದ ಭಾರತೀಯ ಜನರ ಜೀವನದ ವಿವರಗಳನ್ನು ಕಂಡುಕೊಳ್ಳುವ ಚಾರಿತ್ರಿಕ ದಾಖಲೆಗಳು ಭಾರತದಲ್ಲಿ ಗೋಹತ್ಯೆ ಸಾಮಾನ್ಯವಾಗಿತ್ತು ಎನ್ನುವ ನಿಲವನ್ನು ಪುಷ್ಟೀಕರಿಸುವುದಿಲ್ಲ. ವೈದಿಕ ಗ್ರಂಥಗಳೇ ಗೋವು ವಿಶ್ವಮಾತೆ ಎಂದು ತಿಳಿಸುತ್ತವೆ. ಆಕೆ ಇಡೀ ಬ್ರಹ್ಮಾಂಡದ ತಾಯಿ ಎನ್ನುವುದು ನಮ್ಮ ಪುರಾತನ ಗ್ರಂಥಗಳ ಸಾರವಾಗಿದೆ. ನಮ್ಮ ಬದುಕಿನುದ್ದಕ್ಕೂ ಗೋ‘ಮಾತೆ’ಯಾಗಿ ಆಕೆ ಅಸ್ತಿತ್ವದಲ್ಲಿ ಇದ್ದಾಳೆ. ಮುಕ್ಕೋಟಿ ದೇವರುಗಳಲ್ಲಿ ಗೋವು ಕೂಡ ಒಂದು. ಗೋವಿನ ಪ್ರತಿ ನಾಡಿಯಲ್ಲಿಯೂ ನಾವು ದೇವರನ್ನು ಕಾಣುತ್ತೇವೆ: ಗೋವಿನ ಮುಖದಲ್ಲಿ ಬ್ರಹ್ಮನನ್ನು, ಕಂಠದಲ್ಲಿ ರುದ್ರನನ್ನು, ಕಣ್ಣುಗಳಲ್ಲಿ ವಿಷ್ಣುವನ್ನು, ಎರಡು ಕೊಂಬುಗಳಲ್ಲಿ ಸೂರ್ಯಚಂದ್ರರನ್ನು, ನಾಲ್ಕು ಕಾಲುಗಳ ಎಂಟು ಗೊರಸುಗಳಲ್ಲಿ ಅಷ್ಟದಿಕ್ಪಾಲಕರನ್ನು, ರೋಮ ರೋಮಗಳಲ್ಲಿ ಕೋಟಿ ಕೋಟಿ ದೇವರುಗಳನ್ನು, ಬಾಲದಲ್ಲಿ ಸರ್ಪ ಸಂತತಿಯನ್ನು ಕಾಣುವ ಸಂಸ್ಕೃತಿ ನಮ್ಮದಾಗಿದೆ.
ನಮ್ಮ ಸಾಮಾನ್ಯ ತಿಳಿವಳಿಕೆಯ ಪ್ರಕಾರ, ಗೋವುಗಳನ್ನು ಹತ್ಯೆ ಮಾಡುವುದು ಹಾಗೂ ಭಕ್ಷಿಸುವುದು ಮುಸ್ಲಿಮರು ಹಾಗೂ ಇತರ ರಿಲಿಜನ್ನುಗಳು ಮಾತ್ರ ಎಂದಾಗಿದೆ. ಆದರೆ ಅವರ ಜೊತೆಗೆ ಬ್ರಿಟಿಷರು ಸಹ ಅವರಿಗಿಂತ ಹೆಚ್ಚಾಗಿ ಗೋಹತ್ಯೆಗಳನ್ನು ನಡೆಸುತ್ತಿದ್ದರು ಎಂಬುದು ಐತಿಹಾಸಿಕ ಸತ್ಯವಾಗಿದೆ. ಅಂದರೆ, ಗೋಹತ್ಯೆ ಎಂಬುದು ಮುಸ್ಲಿಮರ ಕಾಲದಿಂದಲೂ ಬೆಳೆದುಬಂದಿದೆ ಎಂದು ಬಲವಾಗಿ ನಂಬಲಾಗಿದೆ. ಆದರೆ, ಮುಸ್ಲಿಂ ಆಡಳಿತಗಾರರಿಗಿಂತ ಹೆಚ್ಚು ಗೋಹತ್ಯೆ ನಡೆಸಿರುವುದು ಬ್ರಿಟಿಷ್ ಆಡಳಿತಗಾರರೇ ಆಗಿದ್ದಾರೆ. ಅದಕ್ಕೆ ಪೂರಕವಾಗಿರುವ ಹಲವಾರು ಐತಿಹಾಸಿಕ ದಾಖಲೆಗಳನ್ನು ಧರ್ಮಪಾಲ್ ತಮ್ಮ ಕೃತಿಯಲ್ಲಿ ತೋರಿಸುತ್ತಾರೆ. ಬ್ರಿಟಿಷರು ಕೇವಲ ರೈಲು, ಶಾಲೆಗಳನ್ನು ಹಾಗೂ ನಾಗರಿಕ ಸೇವಾ ವರ್ಗಗಳನ್ನು ಮಾತ್ರ ಭಾರತಕ್ಕೆ ಪರಿಚಯಿಸಲಿಲ್ಲ, ಅವುಗಳನ್ನು ಪರಿಚಯಿಸುವ ಹೊತ್ತಿಗೆ ಭಾರತದ ಸಾಂಸ್ಕೃತಿಕ ನಕಾಶೆಯನ್ನೇ ಬದಲಿಸುವ ವ್ಯವಸ್ಥಿತ ಷಡ್ಯಂತ್ರವನ್ನು ಅವರು ಮಾಡಿದ್ದರು. ಅಂತಹ ಷಡ್ಯಂತ್ರದ ಒಂದು ಭಾಗವೇ ಗೋಹತ್ಯೆಯ ಇತಿಹಾಸವಾಗಿದೆ.
ಭಾರತದ ಇತಿಹಾಸವನ್ನು ಗಮನಿಸಿದರೆ, ಸುಮಾರು ೮ನೇ ಶತಮಾನದಿಂದಲೇ ಇಸ್ಲಾಂ ದಾಳಿಕೋರರು ಭಾರತವನ್ನು ಪ್ರವೇಶಿಸಿದ್ದರು, ೧೩ನೇ ಶತಮಾನದ ಹೊತ್ತಿಗೆ ಇಸ್ಲಾಂ ಆಡಳಿತದ ಪ್ರಾಬಲ್ಯ ಉತ್ತರ ಭಾರತದಲ್ಲಿ ಹೆಚ್ಚಾಗಿ ಹರಡಿತು. ಒಂದು ಸಂಶೋಧನೆಯ ಪ್ರಕಾರ, ಇಸ್ಲಾಂ ಹುಟ್ಟಿದ ನಾಡಿನಲ್ಲಿ ಬಕ್ರೀದ್ ದಿನದಂದು ಕುರಿ, ಮೇಕೆ ಹಾಗೂ ಒಂಟೆಗಳನ್ನು ಬಲಿ ನೀಡುವ ಪದ್ಧತಿ ಇತ್ತು. ಅದರ ಅರ್ಥ ಗೋವುಗಳನ್ನು ಬಲಿ ನೀಡುವ ಆಚರಣೆ ಇಸ್ಲಾಂನ ಮೂಲ ನೆಲದಲ್ಲಿಯೇ ಇರಲಿಲ್ಲ. ಆದರೆ ಭಾರತದಲ್ಲಿ ಅವರ ಆಡಳಿತ ಪ್ರಬಲವಾಗುತ್ತಾ ಬಂದಂತೆ ಬಕ್ರೀದ್ಗಳಲ್ಲಿ ಕುರಿ ಮೇಕೆಗಳ ಜೊತೆಗೆ ಒಂಟೆಗಳ ಬದಲಿಗೆ ಹಸುಗಳನ್ನು ಬಲಿಕೊಡುವ ಪದ್ಧತಿಯನ್ನು ರೂಢಿಸಿಕೊಂಡರು. ಇದಕ್ಕೆ ಸ್ಥಳೀಯ ಭಾರತೀಯರು ವಿರೋಧ ವ್ಯಕ್ತಪಡಿಸಿದಾಗ, ಅವರ ವಿರೋಧವನ್ನು ವ್ಯವಸ್ಥಿತವಾಗಿ ಹತ್ತಿಕ್ಕುವ ಕಾರ್ಯವನ್ನು ಮುಸ್ಲಿಂ ಆಡಳಿತಗಾರರು ಮಾಡಿದರು. ಇದರ ಜೊತೆಗೆ ೧೪ ಮತ್ತು ೧೫ನೇ ಶತಮಾನದ ಹೊತ್ತಿಗೆ ಇಸ್ಲಾಮೀಕರಣ ಅಂದರೆ ಮತಾಂತರದ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತ ಬಂದಿತು. ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿದ್ದ ಕರಕುಶಲಿಗಳು, ರೈತರು ಬಿಟ್ಟರೆ ನಗರಪ್ರದೇಶಗಳಲ್ಲಿ ವಾಸಿಸುತ್ತಿದ್ದ ಹಲವಾರು ಹಿಂದೂ ಸಮುದಾಯಗಳನ್ನು ಇಸ್ಲಾಂ ಮತಾಂತರದ ಮೂಲಕ ತನ್ನ ತೆಕ್ಕೆಗೆ ಹಾಕಿಕೊಂಡಿತು. ಕಾಲಾನಂತರ ಭಾರತೀಯ ಮುಸಲ್ಮಾನರ ಸಂಖ್ಯೆ ಹೆಚ್ಚತೊಡಗಿತು. ಭಾರತೀಯ ಮುಸಲ್ಮಾನರು, ತಮ್ಮ ಸನಿಹದ ಉಳಿದ ಜಾತಿಮತಗಳ ಜನರಂತೆ ಗೋಮಾಂಸ ಭಕ್ಷಣೆಯಲ್ಲಿ ಅಷ್ಟೇನು ಆಸಕ್ತಿ ತೋರಿದ್ದಂತೆ ಕಾಣಸಿಗುವುದಿಲ್ಲ.
ಈ ಇತಿಹಾಸ ಏಕೆ ಮುಖ್ಯವೆಂದರೆ, ೧೫ರಿಂದ ೧೭ನೇ ಶತಮಾನದವರೆಗೂ ಅಷ್ಟಾಗಿ ಗೋಹತ್ಯೆಗಳು ನಡೆಯಲಿಲ್ಲ ಎಂಬುದನ್ನು ಧರ್ಮಪಾಲ್ ಐತಿಹಾಸಿಕ ದಾಖಲೆಗಳ ಮೂಲಕ ತೋರಿಸುತ್ತಾರೆ. ಇದರ ಅರ್ಥ ಮುಸ್ಲಿಮೇತರ ಸಮುದಾಯಗಳು ಮತಾಂತರಗೊಂಡರೂ ಸಹ ಅಲ್ಲಿದ್ದುದು ಹಿಂದೂ ಸಮುದಾಯಗಳಿಂದ ತೆರಳಿದ ಜನರೇ ಆಗಿದ್ದರು. ಹೀಗಾಗಿ ಗೋವನ್ನು ಹತ್ಯೆ ಮಾಡುವ ಅಥವಾ ಅದರ ಮಾಂಸವನ್ನು ಭಕ್ಷಿಸುವ ಪ್ರಕರಣಗಳು ಈ ಎರಡು ಶತಮಾನದಲ್ಲಿ ಬಹಳಷ್ಟು ವಿರಳವಾಗಿದ್ದವು. ಹಾಗೆಯೇ ಮತ್ತೊಂದೆಡೆ ೧೭ ಮತ್ತು ೧೮ನೇ ಶತಮಾನದಲ್ಲಿ ಇಸ್ಲಾಂನ ಕ್ರೌರ್ಯ ಹಾಗೂ ಬ್ರಿಟಿಷರ ಸುಳ್ಳುಗಳನ್ನು ವಿರೋಧಿಸಲು ಉತ್ತರ ಭಾರತದಲ್ಲಿ ಹಲವಾರು ಗೋರಕ್ಷಣಾ ಸಮಿತಿ, ಸಭೆಗಳು ಹುಟ್ಟಿದವು. ಅವುಗಳನ್ನು ಕಾಲಕ್ರಮೇಣ ದಮನ ಮಾಡಲಾಯಿತು ಎನ್ನುವುದು ಐತಿಹಾಸಿಕ ಸತ್ಯ.
ಧರ್ಮಪಾಲ್ ತಮ್ಮ ಕೃತಿಯಲ್ಲಿ ತಿಳಿಸುವಂತೆ, ೧೭೫೦ರ ನಂತರ ಬ್ರಿಟಿಷರು ಭಾರತದ ಹಲವಾರು ಪ್ರದೇಶಗಳಲ್ಲಿ ಗೋಹತ್ಯೆಯನ್ನು ವ್ಯಾಪಕವಾಗಿ ಮಾಡಲು ತೊಡಗಿದರು. ಅವರ ಶಕ್ತಿಯು ಹೆಚ್ಚಾದಂತೆ ಮೊದಲಿಗೆ ಮದ್ರಾಸು, ನಂತರ ಬಂಗಾಳ, ಬಿಹಾರ ಹಾಗೂ ಒರಿಸ್ಸಾಗಳಲ್ಲಿ ಗೋಹತ್ಯೆಯನ್ನು ಅಧಿಕಗೊಳಿಸಿದರು. ಬ್ರಿಟಿಷ್ ಸೈನಿಕರು ಬೀಡುಬಿಡುತ್ತಿದ್ದ ಪ್ರದೇಶಗಳಲ್ಲಿ ಕಸಾಯಿಖಾನೆಗಳನ್ನು ಕೈಗಾರಿಕೆಗಳ ರೀತಿಯಲ್ಲಿ ಪ್ರಾರಂಭಿಸಿದರು. ೧೭೬೦ರ ವರೆಗೆ ಬ್ರಿಟನ್ನಿಂದ ಅವರ ಪ್ರಜೆಗಳಿಗಾಗಿ ಒಣಮಾಂಸವನ್ನು ಆಮದು ಮಾಡಿಕೊಳ್ಳುತ್ತಿದ್ದರು. ಆದರೆ ತಮ್ಮ ಪ್ರಾಬಲ್ಯ ಹೆಚ್ಚುತ್ತ ಹೋದಂತೆ ಮಾಂಸದ ಆಮದನ್ನು ಸಂಪೂರ್ಣವಾಗಿ ನಿಲ್ಲಿಸಿದರು. ಇದರ ಅರ್ಥ ಸರಳವಾಗಿಯೇ ಇದೆ, ಇಸ್ಲಾಂ ಪ್ರಭುತ್ವ ತನ್ನ ಸಾಮ್ರಾಜ್ಯ ಪ್ರಬಲವಾದರೂ ಹಿಂದೂಗಳ ವಿರೋಧವನ್ನು ತಗ್ಗಿಸುವ ದೃಷ್ಟಿಯಿಂದ ಗೋಹತ್ಯೆಯನ್ನು ಹಲವಾರು ಪ್ರದೇಶಗಳಲ್ಲಿ ನಿಷೇಧಿಸಿತು, ಆದರೆ ಇದಕ್ಕೆ ವೈರುಧ್ಯ ಎಂಬಂತೆ ಬ್ರಿಟಿಷರು ಪ್ರಬಲರಾದಂತೆ ಗೋಹತ್ಯೆಯಂತಹ ಕೆಲಸವನ್ನು ನಿರಾತಂಕವಾಗಿ ಮಾಡಲು ಮುಂದಾದರು. ಬ್ರಿಟಿಷ್ ನಾಗರಿಕರು ಮತ್ತು ಸೈನಿಕರ ಸಂಖ್ಯೆ ಭಾರತದಲ್ಲಿ ಹೆಚ್ಚಾಗುತ್ತ್ತ ಹೋದಂತೆ, ಗೋಮಾಂಸದ ಬೇಡಿಕೆಯೂ ಏರುತ್ತ ಹೋಯಿತು. ಆದ್ದರಿಂದ ಗೋಹತ್ಯೆಯನ್ನು ಬ್ರಿಟಿಷರು ಒಂದು ವೃತ್ತಿಯನ್ನಾಗಿ ಪರಿವರ್ತಿಸುವ ಹಾದಿಯನ್ನು ಹಿಡಿದರು.
ಗೋಹತ್ಯೆಯಂತಹ ವೃತ್ತಿಯನ್ನು ಯಾರು ಮಾಡಬೇಕು ಎಂಬುದು ಅಥವಾ ಅದಕ್ಕೆ ಯಾರನ್ನು ತೆಗೆದುಕೊಳ್ಳಬೇಕು ಎಂಬುದು ಅವರ ಮುಂದಿದ್ದ ದೊಡ್ಡ ಪ್ರಶ್ನೆಯಾಗಿತ್ತು. ಅದಕ್ಕೆ ಅವರ ಮುಂದಿದ್ದ ಆಯ್ಕೆ ಭಾರತೀಯ ಮುಸ್ಲಿಮರು ಅಥವಾ ಮುಸ್ಲಿಮೇತರ ಬೇಟೆಗಾರರು. ಈ ಸಂದರ್ಭದಲ್ಲಿ ಅವರ ಆಯ್ಕೆ ಭಾರತೀಯ ಮುಸ್ಲಿಮರೇ ಆಗಿದ್ದರು, ಇದಕ್ಕೆ ಮುಸ್ಲಿಮರು ಒಪ್ಪದೆ ಇದ್ದಂತಹ ಸಂದರ್ಭದಲ್ಲಿ ಅವರನ್ನು ಕ್ರೈಸ್ತ ರಿಲಿಜನ್ನಿಗೆ ಮತಾಂತರ ಮಾಡುವ ಮೂಲಕ ವೃತ್ತಿಪರತೆಯನ್ನು ಬೆಳೆಸಲು ನಿರ್ಧರಿಸಿದರು. ಇದರ ಜೊತೆ ಜೊತೆಗೆ ಬಕ್ರೀದ್ ಹಬ್ಬಗಳಲ್ಲಿ ಗೋವನ್ನು ಬಲಿಕೊಡುವುದಕ್ಕೂ ಮುಸ್ಲಿಮರಿಗೆ ಪ್ರೋತ್ಸಾಹ ನೀಡಲಾಯಿತು.
ಇಲ್ಲಿ ಮತ್ತೊಂದು ಪ್ರಮುಖವಾದ ಬೆಳವಣಿಗೆಯನ್ನು ಗಮನಿಸಬೇಕಾಗುತ್ತದೆ, ಅದೆಂದರೆ, ಗೋಹತ್ಯೆ ಮತ್ತು ಗೋಮಾಂಸಕ್ಕೆ ದೊಡ್ಡ ತೊಡಕಾಗಿ ಕಂಡಿದ್ದು ಭಾರತದ ಕೃಷಿ ಸಮಾಜ. ಅದನ್ನು ದುರ್ಬಲಗೊಳಿಸಲು ಹಲವಾರು ಪ್ರಯತ್ನಗಳನ್ನು ಬ್ರಿಟಿಷರು ಮಾಡಿದರು. ಅದರಲ್ಲಿಯೂ ಅತಿಯಾದ ತೆರಿಗೆಯನ್ನು ವಿಧಿಸುವುದು, ಹಾಗೂ ರೈತರು ಬಡವರು ಎಂದು ದೂಷಿಸುವುದು, ಭೂಮಿಗಳು ನಿರುಪಯುಕ್ತ ಎಂದು ಪ್ರಚಾರಮಾಡುವುದು, ಇಂತಹ ಸಂಗತಿಗಳನ್ನು ಪಸರಿಸುವ ಮೂಲಕ ಜನರು ಕೃಷಿ ಚಟುವಟಿಕೆಗಳನ್ನು ಕೀಳರಿಮೆಯಿಂದ ನೋಡುವ ಹೊಸ ಪ್ರಕ್ರಿಯೆ ಪ್ರಾರಂಭವಾಯಿತು. ಇದರಿಂದ ಬ್ರಿಟಿಷರಿಗಿದ್ದ ಮತ್ತೊಂದು ಲಾಭವೆಂದರೆ, ಅವರ ಸರಕು ಸರಂಜಾಮುಗಳನ್ನು ಸಾಗಿಸಲು ಶ್ರಮಿಕರು, ಹಾಗೂ ಎತ್ತಿನ ಗಾಡಿಗಳು ದೊರಕಿದವು. ೧೮೫೦ರಲ್ಲಿ ರೈಲುಗಳು ಪ್ರಾರಂಭವಾಗುವವರೆಗೂ ಎತ್ತಿನ ಗಾಡಿಗಳೇ ಪ್ರಮುಖವಾಗಿ ಸಾಗಾಣಿಕೆ ವಾಹನಗಳಾಗಿ ಕಾರ್ಯನಿರ್ವಹಿಸಿದವು, ಅದಕ್ಕೂ ಮಿಗಿಲಾಗಿ ಸುಮಾರು ೧೯೩೦ರವರೆಗೂ ರೈಲುಗಳಿಲ್ಲದ ಪ್ರದೇಶಗಳಲ್ಲಿ ಇವುಗಳೇ ಪ್ರಮುಖ ಸಾಗಾಣಿಕೆ ವಾಹನಗಳಾಗಿದ್ದವು. ಜನರು ಕೃಷಿಯಿಂದ ವಿಮುಖರಾದರೆ ಗೋಹತ್ಯೆ ಹಾಗೂ ಬ್ರಿಟಿಷರ ಸರಕುಗಳನ್ನು ಸಾಗಿಸಲು ಕಾರ್ಮಿಕರ ಲಭ್ಯತೆ – ಎರಡು ಕೆಲಸಗಳು ಸುಲಭವಾದವು. ಬ್ರಿಟಿಷರು ಕೇವಲ ನಮ್ಮನ್ನು ಆಳಿದರು ಮಾತ್ರವಲ್ಲ, ಬದಲಿಗೆ ಆಳವಾಗಿ ನಮ್ಮ ರಚನೆಯನ್ನು ಅಲುಗಾಡಿಸುವ ಕಾರ್ಯಕ್ಕೆ ಕೈಹಾಕಿದ್ದರು. ಗೋಹತ್ಯೆಯನ್ನು ಪ್ರಚುರಪಡಿಸುವ ಉದ್ದೇಶದಿಂದ ಕೃಷಿ ಸಮಾಜವನ್ನು ಅಧೋಗತಿಗೆ ತರುವಂತಹ ವಿಕೃತ ಕಾರ್ಯಕ್ಕೆ ಬ್ರಿಟಿಷರು ಮುಂದಾದರು.
ಇಂದಿಗೂ ಭಾರತದ ಕೃಷಿ ಸಮಾಜವನ್ನು ಈ ಮೇಲ್ಕಾಣಿಸಿದಂತೆ ಚಿತ್ರಿಸಲಾಗುತ್ತದೆ. ಎಡಪಂಥದ ಕುಂಚಕ್ಕೆ ಸಿಕ್ಕ ರೈತರ ಚಿತ್ರಣವು ಹೇಗಿರಬಹುದು ಎಂಬುದನ್ನು ಒಮ್ಮೆ ಊಹಿಸಿ ನೋಡಿ, ಬರಗಾಲದಲ್ಲಿ ಬಿರುಕು ಬಿಟ್ಟ ಗದ್ದೆಯಲ್ಲಿ ಕೇವಲ ಲುಂಗಿ ಅಥವಾ ಕಚ್ಚೆ ಉಟ್ಟ ಕೃಶ ಶರೀರವನ್ನು ಹೊಂದಿದ ರೈತ, ತಲೆಯ ಮೇಲೆ ಕೈಹೊತ್ತು ಕುಳಿತುಕೊಂಡಿರುವ ಭಂಗಿ ಇತ್ಯಾದಿ. ಇದು ಭಾರತದ ನೈಜ ಚಿತ್ರಣವೋ ಅಥವಾ ಬ್ರಿಟಿಷರು ಪಸರಿಸಿರುವ ಚಿತ್ರಣವೋ ಎಂಬುದನ್ನು ಆಲೋಚಿಸುವ ಜರೂರು ಕಾಣುತ್ತದೆ. ರೈತರನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಮಸೂದೆಗಳನ್ನು ತಂದರೆ ಅದಕ್ಕೆ ಬಂದಿರುವ ವಿರೋಧಗಳಲ್ಲಿಯೇ ವಿರೋಧಾಭಾಸ ಇರುವುದು ಖಂಡಿತ. ಆದರೆ ನಮಗೆ ಇಲ್ಲಿ ಮುಖ್ಯವಾಗುವುದು ಅಭಿವೃದ್ಧಿಗಿಂತ ಬಡತನವೇ ಹೆಚ್ಚಿನ ಆದಾಯವನ್ನು ಕೆಲವು ಪಟ್ಟಭದ್ರ ಹಿತಾಸಕ್ತಿಗಳಿಗೆ ಲಾಭ ತಂದುಕೊಡುತ್ತದೆ ಎನ್ನುವ ಮಾತಿನಲ್ಲಿ ಯಾವುದೇ ಅತಿಶಯೋಕ್ತಿ ಇಲ್ಲ. ಬ್ರಿಟಿಷರು ತಮ್ಮ ಅನುಕೂಲಕ್ಕಾಗಿ ಬಿತ್ತಿದ ಜ್ಞಾನಪರಂಪರೆಯ ವಾರಸುದಾರರಿಗೆ ಇಂದು ಅದು ನಮ್ಮದಲ್ಲದ ಜ್ಞಾನ ಎನ್ನುವ ತಿಳಿವಳಿಕೆ ಬಾರದು.
ಬ್ರಿಟಿಷ್ ಬೇಹುಗಾರಿಕೆಯ ಒಂದು ವರದಿಯ ಪ್ರಕಾರ ೧೮೮೦ರಿಂದ ೧೮೯೩ರವರೆಗೆ ಭಾರತದ ಉತ್ತರದ ಕೆಲವು ಪ್ರದೇಶಗಳಲ್ಲಿ ಸುಮಾರು ೧ ಲಕ್ಷ ಬ್ರಿಟಿಷ್ ಸೈನಿಕರಿಗೆ ಹಾಗೂ ಅಧಿಕಾರಿಗಳಿಗೆ ಗೋಮಾಂಸವನ್ನು ವಿತರಿಸಲಾಗುತ್ತಿತ್ತು. ಇದರಿಂದಾಗಿ ಅಲ್ಲಿ ಗೋಹತ್ಯೆಯ ವಿರುದ್ಧ ಹಲವಾರು ದಂಗೆಗಳು ಏಳಲು ಪ್ರಾರಂಭವಾದವು. ಈ ಸಂದರ್ಭದಲ್ಲಿ ವಿಕ್ಟೋರಿಯಾ ರಾಣಿಯು ಭಾರತದ ವೈಸರಾಯ್ಗೆ ಬರೆದ ಪತ್ರವು ಕುತೂಹಲಕಾರಿಯಾಗಿದೆ. ಭಾರತದಲ್ಲಿ ಭುಗಿಲೇಳುತ್ತಿದ್ದ ಗೋಹತ್ಯಾ ವಿರೋಧ ಚಳವಳಿ ಮುಸ್ಲಿಮರ ವಿರುದ್ಧ ಎಂಬುದು ಸತ್ಯವಾಗಿದ್ದರೂ, ಪರೋಕ್ಷವಾಗಿ ಈ ಚಳವಳಿ ಬ್ರಿಟಿಷರಿಗೂ ಸೂಚಿಸುತ್ತಿದೆ ಎಂದು ರಾಣಿಯು ಪತ್ರ ಬರೆದರು, ಅದಕ್ಕೆ ಅವರು ನೀಡಿದ ಪೂರಕ ಸಾಕ್ಷ್ಯಗಳೆಂದರೆ ಮೇಲೆ ತಿಳಿಸಿದ ೧ ಲಕ್ಷ ಸಂಖ್ಯೆಯಲ್ಲಿದ್ದ ಬ್ರಿಟಿಷ್ ಗೋ ಭಕ್ಷಕರು. ಹಾಗೂ ಇಲ್ಲಿ ಮುಸಲ್ಮಾನರಿಗಿಂತ ಬ್ರಿಟಿಷರೇ ಹೆಚ್ಚು ಗೋಮಾಂಸಗಳನ್ನು ಬಳಸುತ್ತಿದ್ದಾರೆ ಎಂಬ ಅಂಶವನ್ನು ಅದೇ ಪತ್ರದಲ್ಲಿ ಅವರು ತಿಳಿಸಿದರು. ಇದರಿಂದ ನಮಗೆ ಅರ್ಥವಾಗುವ ಸಂಗತಿ ಎಂದರೆ, ಮುಸ್ಲಿಮರನ್ನು ಗೋಹತ್ಯೆಗೆ ಪ್ರೋತ್ಸಾಹಿಸುವ ಮೂಲಕ ಅವರಿಗಿಂತ ಹೆಚ್ಚು ಗೋಮಾಂಸವನ್ನು ಭಕ್ಷಿಸುವ ಪ್ರವೃತ್ತಿಯನ್ನು ಬ್ರಿಟಿಷರು ಬೆಳೆಸಿಕೊಂಡಿದ್ದರು.
೧೮೫೭ರ ಮಹಾಸಂಗ್ರಾಮ ಕುರಿತು ನಾವು ಓದಿರುತ್ತೇವೆ. ಆದರೆ ಒಂದು ಕುತೂಹಲಕಾರಿ ಸಂಗತಿ ಎಂದರೆ, ಆ ಬಂಡಾಯ ಉಂಟಾಗಲು ಒಂದು ಪ್ರಮುಖ ಕಾರಣ ತುಪಾಕಿಗಳಿಗೆ ದನದ ಕೊಬ್ಬನ್ನು ಬ್ರಿಟಿಷರು ಸವರುತ್ತಾರೆ ಎಂಬ ವದಂತಿಯೇ ಆಗಿತ್ತು ಎನ್ನುವುದಾಗಿದೆ. ಇದು ಸತ್ಯವೂ ಕೂಡ. ಆದರೆ ಇದು ೧೮೫೭ರಲ್ಲಿ ಇದ್ದಕ್ಕಿದ್ದ ಹಾಗೆ ಒಮ್ಮೆಲೆ ಒಡಮೂಡಿದ ‘ದಂಗೆ’ಯಂತೂ ಅಲ್ಲ. ಇದು ನಿಜಹೇಳಬೇಕೆಂದರೆ ಗೋಹತ್ಯೆ ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆಯ ಒಂದು ಭಾಗವಾಗಿತ್ತು. ಆದರೆ ದುರದೃಷ್ಟವಶಾತ್ ಇದನ್ನು ಗುರುತಿಸುವಲ್ಲಿ ನಮ್ಮ ವಿದ್ವಾಂಸರು ಸೋತರು. ಗೋ ರಕ್ಷಣಿ ಸಭಾದಂತಹ ಹಲವಾರು ಸಂಘಟನೆಗಳು ಗೋಹತ್ಯೆಯಂತಹ ಕುಕೃತ್ಯವನ್ನು ಪ್ರಬಲವಾಗಿ ವಿರೋಧಿಸುತ್ತ ಬಂದಿದ್ದವು, ಅದಕ್ಕಾಗಿ ವ್ಯವಸ್ಥಿತವಾಗಿ ಪ್ರಚಾರಕರುಗಳನ್ನು, ದೇಣಿಗೆಗಳನ್ನು ತಯಾರಿಮಾಡಿಕೊಳ್ಳುವತ್ತ ಹಾಗೂ ವ್ಯವಸ್ಥಿತವಾಗಿ ಸಂಘಟನೆಯನ್ನು ಬಲಗೊಳಿಸುವ ಪ್ರಯತ್ನಗಳು ನಡೆದಿದ್ದವು. ಅಷ್ಟೇ ಅಲ್ಲದೆ ಇದರ ಕುರಿತು ಜನರಲ್ಲಿ ವ್ಯಾಪಕವಾಗಿ ಜಾಗೃತಿಯನ್ನು ಮೂಡಿಸುವ ಕಾರ್ಯವನ್ನು ಈ ಸಂಘಟನೆಗಳು ಮಾಡುತ್ತಿದ್ದವು. ಆ ನಿರಂತರ ಪ್ರಯತ್ನದ ಫಲವೇ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ. ಪ್ರಥಮ ಸ್ವಾತಂತ್ರ್ಯ ಹೋರಾಟ ಮಾತ್ರವೇ ಇದಾಗಿರಲಿಲ್ಲ, ಅದರ ಜೊತೆಗೆ ಗೋಹತ್ಯೆ ವಿರುದ್ಧದ ಹೋರಾಟದ ಸಂಘಟಿತ ಪ್ರಯತ್ನ ಇದಾಗಿತ್ತು.
ಗೋಹತ್ಯೆಯ ಕುರಿತು ಬ್ರಿಟಿಷ್ ಸರಕಾರಗಳ ದಾಖಲೆಗಳು ನಮಗೆ ಕೆಲವು ಪ್ರಮುಖ ಸಂಗತಿಗಳನ್ನು ತಿಳಿಸಿಕೊಡುತ್ತವೆ. ಮೊದಲನೆಯದಾಗಿ ಅವಿಭಜಿತ ಭಾರತದಲ್ಲಿ ಎಲ್ಲ ರಾಜರುಗಳೂ ಗೋಹತ್ಯೆಯನ್ನು ವಿರೋಧಿಸುತ್ತಿದ್ದರು. ಅಲ್ಲದೆ, ಬ್ರಿಟಿಷರೊಡನೆ ಒಪ್ಪಂದಗಳನ್ನು ಮಾಡುವಾಗ ಗೋಹತ್ಯೆ ಮಾಡಬಾರದೆನ್ನುವ ಕರಾರನ್ನು ಸೇರಿಸಿರುತ್ತಿದ್ದರು.
ಎರಡನೆಯದಾಗಿ ಗೋಹತ್ಯೆ ಎನ್ನುವುದು ನಾವು ಇಂದು ಗ್ರಹಿಸುತ್ತಿರುವಂತೆ ಹಿಂದೂ-ಮುಸ್ಲಿಂ ಸಮಸ್ಯೆಯಲ್ಲ. ಗೋಹತ್ಯೆಯನ್ನು ಹಿಂದು-ಮುಸ್ಲಿಂ ಸಮಸ್ಯೆಯನ್ನಾಗಿಸುವುದರಲ್ಲಿ ಬ್ರಿಟಿಷರ ಪಾತ್ರ ಅತ್ಯಂತ ಪ್ರಮುಖವಾಗಿದೆ. ಇಂದಿನ ನಂಬಿಕೆಗಳಿಗೆ ವಿರೋಧವಾಗಿ ೧೯ನೇ ಶತಮಾನದ ಮುಸ್ಲಿಂ ಸಮುದಾಯ ಗೋಹತ್ಯೆಯನ್ನು ಅಷ್ಟಾಗಿ ಒಪ್ಪಿರಲಿಲ್ಲ ಮತ್ತು ಹಿಂದೂ ಬಾಂಧವರಿಗಾಗಿ ಗೋಹತ್ಯೆಯನ್ನು ಅವರು ತ್ಯಜಿಸಲು ಸಿದ್ಧರಿದ್ದರು.
ಮೂರನೆಯದಾಗಿ ಗೋಹತ್ಯೆಯ ವಿಷಯ ಇಂದು ನಾವು ವಾದಿಸುತ್ತಿರುವಂತೆ ಸಮಸ್ಯೆಯಾಗಿ ಮಾರ್ಪಡಲು ಬ್ರಿಟಿಷರ ನೀತಿಯೇ ಮುಖ್ಯ ಕಾರಣವಾಗಿದೆ. ಎಲ್ಲಿಯವರೆಗೆ ನಮಗೆ ಈ ವಿಷಯದ ಮರೆವು ಇರುತ್ತದೆಯೋ ಅಲ್ಲಿಯವರೆಗೆ ನಮ್ಮ ಸಮಸ್ಯೆಗಳು ಬಗೆಹರಿಯುವುದಿಲ್ಲ.
ಹೀಗೆ ಪಟ್ಟಿ ಮಾಡುತ್ತ ಹೋದರೆ ಒಂದು ಹಂತದಲ್ಲಿ ಇಸ್ಲಾಂ ಮತ್ತೊಂದು ಹಂತದಲ್ಲಿ ಬ್ರಿಟಿಷ್ ಆಡಳಿತ ಭಾರತೀಯ ಸಂಸ್ಕೃತಿಯಲ್ಲಿ ತಲ್ಲಣ ಸೃಷ್ಟಿಸುವ ಮೂಲಕ ಹಲವಾರು ಪಲ್ಲಟಗಳನ್ನು ತಂದಿರುವುದು ಗಮನಕ್ಕೆ ಬರುತ್ತದೆ. ಅದಕ್ಕೆ ಆಗಿಂದಾಗ್ಗೆ ಭಾರತೀಯರೂ ಸಹ ಪ್ರತಿಕ್ರಿಯೆಗಳನ್ನು ನೀಡುತ್ತಲೂ ಬಂದಿದ್ದಾರೆ. ೨೧ನೇ ಶತಮಾನದ ಆಧುನಿಕತೆಯ ನೆರಳಿನಲ್ಲಿ ಬದುಕುತ್ತಿರುವ ನಾವು ನಮ್ಮ ಸಂಸ್ಕೃತಿಯಲ್ಲಾಗಿರುವ ವಸಾಹತುಶಾಹಿಗಳ ಭೌತಿಕ ಹಾಗೂ ಮಾನಸಿಕ ದಾಳಿಗಳನ್ನು ಅರ್ಥೈಸಿಕೊಳ್ಳಬೇಕಾಗಿದೆ. ಹೀಗೆ ಅರ್ಥಮಾಡಿಕೊಳ್ಳಬೇಕಾಗಿರುವುದು ಬ್ರಿಟಿಷರನ್ನೋ ಅಥವಾ ಮುಸ್ಲಿಮರನ್ನೋ ವಿರೋಧಿಸುವ ಅಥವಾ ಅವರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಉದ್ದೇಶದಿಂದ ಅಲ್ಲ, ಬದಲಿಗೆ ಕಳೆದುಕೊಂಡಿರುವ ನಮ್ಮತನವನ್ನು ಮತ್ತೆ ಹುಡುಕುವ ಕಾರಣದಿಂದಾಗಿ ಮಾತ್ರ. ವಿಸ್ಮೃತಿಗೊಂಡಿರುವ ನಮ್ಮ ಪಾರಂಪರಿಕ ಜ್ಞಾನದ ಮರುಹುಟ್ಟು ಆಗಬೇಕಾದರೆ ಧರ್ಮಪಾಲ್ರಂತಹ ಚಿಂತಕರ ಪ್ರಚುರಪಡಿಸಿರುವಂತಹ ಐತಿಹಾಸಿಕ ದಾಖಲೆಗಳು ಹಾಗೂ ಎಸ್.ಎನ್ ಬಾಲಗಂಗಾಧರರಂತಹ ಚಿಂತಕರು ಸೈದ್ಧಾಂತಿಕ ಒಳನೋಟಗಳು ನಮಗೆ ಸಹಾಯ ಮಾಡಬಲ್ಲವು.