‘ಉತ್ಥಾನ’ ಕಥಾಸ್ಪರ್ಧೆ –೨೦೨೧
ಪ್ರಥಮ ಬಹುಮಾನ ಪಡೆದ ಕಥೆ
ಲಾಕ್ಡೌನ್ ಎಂಬ ಬೋನಿನಿಂದ ಹೊರಬಿಟ್ಟ ಚಿರತೆಯಂತೆ ಅರೆದಪ್ಪಿ ಓಡುತ್ತಿದ್ದ ಮಗನನ್ನು ಮಾದೇವಿಯು ಮಾತಿನಿಂದಲೆ ಹಿಡಿದು ನಿಲ್ಲಿಸುವ ಪ್ರಯತ್ನ ಮಾಡಿದಳು. ಎಷ್ಟು ಕೂಗಿದರೂ ತನ್ನ ಮಾತನ್ನೇ ಕೇಳದೆ ಕೈಗೆ ಸಿಗದೆ ಓಡುತ್ತಿದ್ದ ಮಗನನ್ನ ಹಿಡಿಯುವ ಪ್ರಯತ್ನವನ್ನು ಕೊನೆಗೂ ಕೈಚೆಲ್ಲಿದಳು. ಒಂದೇ ಸಮನೇ ಗಂಟಲು ಹರಿಯುವಂತೆ ಕಿರುಚಿಕೊಂಡರೂ ಅದಾವುದನ್ನೂ ಲೆಕ್ಕಿಸದೇ ದೊರೆ ಎಂಬ ಅವಳ ಪುಟ್ಟ ಮಗ ಯಾರ ಕೈಗೂ ಸಿಗದೇ ನಿರ್ಜನವಾಗಿದ್ದ ಥಾರು ರಸ್ತೆಯ ಮೇಲೆ ಓಡುತ್ತಲೇ ಇದ್ದ…
ಶಂಕ್ರಜ್ಜನ ಮನೆಯಲ್ಲಿ ಪ್ರಯಾಣದ ತಯಾರಿಯ ತರಾತುರಿ ನಡೆದಿತ್ತು. ಹೊರಡುವುದಕ್ಕೆ ತುಂಬಾ ತಡವಾದದ್ದಕ್ಕೆ ಶಂಕ್ರಜ್ಜ ಕಿರುಚಾಡಲು ಶುರು ಮಾಡಿದ್ದ. ಎಲ್ಲರೂ ತಮ್ಮತಮ್ಮ ಕೆಲಸದ ತುರ್ತಿನಲ್ಲಿ ಮುಳುಗಿದ್ದಾಗಲೇ ಚಾರ್ಜಿಗೆ ಹಾಕಿದ್ದ ಮೊಬೈಲು ಒಂದೇ ಸಮನೆ ಹೊಯ್ಕೊಳ್ಳಲಾರಂಭಿಸಿತ್ತು. ಮೊದಲೇ ಗಡಿಬಿಡಿಯಲ್ಲಿದ್ದ ಶಂಕ್ರಜ್ಜನಿಗೆ ಈ ಫೋನಿನ ಮೊರೆತ ಮತ್ತಷ್ಟು ಕಿರಿಕಿರಿಯೆನಿಸಿ ಕೋಪ ಉಕ್ಕುವಂತೆ ಮಾಡಿತ್ತು. ಶಂಕ್ರಜ್ಜನ ಹೆಂಡತಿ ಪಾರಜ್ಜಿ, ಸೊಸೆ ಮಾದೇವಿ, ಮೊಮ್ಮಗಳಾದ ಗೌರಿಯೂ ಸೇರಿದಂತೆ ಎಲ್ಲರೂ ದುಃಖದ ಸೆಳವಿಗೆ ಸಿಕ್ಕು ನರಳತೊಡಗಿದ್ದರು. ನಿರಂತರವಾಗಿ ಹೊಡೆದುಕೊಳ್ಳುತ್ತಿದ್ದ ಮೊಬೈಲನ್ನು ಎತ್ತಿ ಮಾತನಾಡಲು ಯಾರೊಬ್ಬರಿಗೂ ಮನಸ್ಸಿರಲಿಲ್ಲ. ಇಂಥದ್ದನ್ನೆಲ್ಲ ಶಂಕ್ರಜ್ಜನ ಒಬ್ಬನೇ ಮಗನಾದ ಗಾದಿಲಿಂಗನೇ ಸಂಭಾಳಿಸಬೇಕಾಗಿತ್ತು.
“ಎಲ್ಲಿ ಹಾಳಾಗಿಹೋದನೋ ಏನೋ… ಈ ಮನೆಹಾಳ..” ಶಂಕ್ರಜ್ಜ ಗೊಣಗುತ್ತಾ ನಿಧಾನಕ್ಕೆ ಎದ್ದು ಬಂದು ನಡುಗುವ ಕೈಗಳಿಂದಲೇ ಮೊಬೈಲನ್ನು ಎತ್ತಿ ಕಿವಿಯ ಹತ್ತಿರ ಇಟ್ಟುಕೊಂಡ. ಅ ಕಡೆಯಿಂದ,
“ಏನ್ ಗಾದಿ… ಅಷ್ಟೊತ್ತಿಂದ ಫೋನ್ ಕರ್ ರಹಾ ಹೂಂ. ಫೋನ್ ಉಠಾನೇಕೋ ಇತನಾ ವಕ್ತ್ ಮಾಡಿಬಿಟ್ಟಿ.” ಉರ್ದು ಮಿಶ್ರಿತ ಕನ್ನಡವನ್ನು ಕೇಳಿದ್ದೇ ಶಂಕ್ರಜ್ಜ,
“ಯಾರೂ… ಅಲ್ಲಾಭಕ್ಷಿಯೇನು ಮಾತಾಡದು? ಗಾದಿಲಿಂಗ ಎಲ್ಲಿಗಿ ಹಾಳಾಗಿಹೋಗ್ಯಾನೋ ಏನೋ… ಏಟೊತ್ತಿಗಿ ಬರ್ತಾನೋ ಏಟೊತ್ತಿಗಿಲ್ಲೋ ಆ ದ್ಯಾವ್ರಿಗೇ ಗೊತ್ತು ನೋಡಪ್ಪ. ಈಗಾಗ್ಲೆ ಹೊತ್ತೇರಾಕತ್ತೇತೆ. ಇನ್ನಾ ತಡ ಆದ್ರ ಅಟು ದೂರ ನಾವ್ ಹೋಗೋದ್ಯಾವಾಗ ಬರೋದ್ಯಾವಾಗ… ನಸುಕಿನ್ಯಾಗೆ ಹೊಂಡಬೇಕಾಗಿತ್ತು. ಈಟೊತ್ತಿಗೆಲ್ಲಾ ಅರದರ್ಯಾಗ ಇರ್ಬೇಕಿತ್ತು.”
“ಸಚ್ಚೀ ಬಾತ್ ಶಂಕ್ರಜ್ಜ. ಜಲ್ದಿ ಹೋದ್ರೆ ಜಲ್ದಿ ಆನೇಕಾ ಹೋತಾ. ನೈತೋ ರಾತ್ಕೋ ಆನೇಕಾ ಮುಷ್ಕಿಲ್ ಹೋಜಾಯೇಗಾ.”
“ಹಂಗಾರ ನೀ ಒಂದ್ ಕೆಲ್ಸ ಮಾಡಪ ಭಕ್ಷಿ. ನೆಟ್ಟಗ ನೀ ಟೆಂಪೋ ತಗಂಡು ಸೀದಾ ಕಾಡಸಿದ್ದಪ್ಪ ತಾತನ ಮಠತ್ತಾಗೇ ಬಂದ್ಬುಡು. ನಾವೆಲ್ಲಾ ಬರ್ನ ಅಲ್ಲಿಗೇ ಬಂದ್ಬುಡ್ತೀವಿ. ಆ ನಮಪ್ಪಗ ಸಣ ಮಾಡಿ ಎಲ್ರೂ ಅಲ್ಲಿಂದಾನೇ ಹೋಗಾಣಂತೆ…”
“ಠೀಕ್ ಹೈ ಶಂಕ್ರಜ್ಜ.” ಅತ್ತ ಫೋನ್ ಕಟ್ಟಾಗುತ್ತಲೇ ಇತ್ತ ಗಾದಿಲಿಂಗ ಮನೆಯೊಳಕ್ಕೆ ಕಾಲಿಟ್ಟದ್ದನ್ನು ಕಂಡ ಶಂಕ್ರಜ್ಜ ಕೂಡಲೇ “ಏಟೊತ್ತಲೇ ಖೋಡಿ. ಹೊತ್ತುಗೊತ್ತಿನ ಖಬರ ಐತೇನಲೆ ನಿನಿಗಿ. ಅದೇನು ಸ್ವಲ್ಪ ದೂರ ಐತಾ… ತಪತರ ಹೋಗೋದೈತೆ.” ಶಂಕ್ರಜ್ಜ ಮಗನನ್ನು ಗದರತೊಡಗಿದ. ಪ್ರತಿಯಾಗಿ,
“ಏನ್ಮಾಡ್ಲಿ ಹೇಳು… ಶೆಟ್ರ ಅಂಗಡಿ ತುಂಬಾ ಜನ ಅಂದ್ರೆ ಜನ. ಪೂಜೆಗೆ ಬೇಕಾಗಿರ ಸಾಮಾನೆಲ್ಲ ತಾಂಬರೋದ್ರೊಳಗ ಇಟೊತ್ತಾಗೋಯ್ತಯ್ಯೋ. ಆತಿನ್ನ ಹೋಗೋನ್ನಡಿ.”
ಶಂಕ್ರಜ್ಜನ ಇಡೀ ಕುಟುಂಬ ಕಡಲಿನಂಥಾ ನೋವನ್ನ ಎದೆಯಲ್ಲಿ ಹೊತ್ತು ನಿಧಾನಕ್ಕೆ ಹೆಜ್ಜೆ ಹಾಕುತ್ತಾ ಕಾಡಸಿದ್ಧೇಶ್ವರನ ಮಠದತ್ತ ನಡೆಯುತ್ತಿತ್ತು. ಮನದಲ್ಲಿ ಹುದುಗಿದ್ದ ನೋವು ಮಡಿಲಿನ ಕೆಂಡವಾಗಿ ಸುಡತೊಡಗಿತ್ತು. ಪದೇ ಪದೇ ಅದೇ ನೆನಪಾಗಿ ದಾರಿಯುದ್ದಕ್ಕೂ ಅವರೆಲ್ಲರ ಕಣ್ಣಾಲಿಗಳು ಬೇಡ ಬೇಡವೆಂದರೂ ಹನಿಗೂಡುತ್ತಿದ್ದವು. ಹಾಗೆ ಹನಿಗಣ್ಣಾದ ತಮ್ಮ ಕಣ್ಣುಗಳನ್ನು ಅವರಿಗೆ ತಿಳಿಯದಂತೆ ಇವರು ಇವರಿಗೆ ತಿಳಿಯದಂತೆ ಅವರು ಎಷ್ಟೇ ಎಚ್ಚರವಹಿಸಿ ಒರೆಸಿಕೊಂಡರೂ ಎಲ್ಲರಿಗೂ ತಿಳಿದುಬಿಡುತ್ತಿತ್ತು. ಅದೇ ದುಃಖದಲ್ಲೇ ಊರದೈವ ಕಾಡಸಿದ್ಧೇಶ್ವರನ ಪಾದಗಳಿಗೆ ಅಡ್ಡಬಿದ್ದು “ಕಾಪಾಡಪ್ಪ… ನಮ್ಮಪ್ಪ… ಅಸಹಾಯಕರು ನಾವು. ನಮ್ಮಂಥಾ ಬಡಪಾಯಿಗಳಿಗೆ ನೀನೇ ದಿಕ್ಕಲ್ಲದೇ ಇನ್ಯಾರು ತಂದೆ…” ಮನಸಾರೆ ಪ್ರಾರ್ಥಿಸಿಕೊಂಡು ಭಾರವಾದ ಹೃದಯಗಳನ್ನು ಹೊತ್ತು ಟೆಂಪೋ ಗಾಡಿಯನ್ನು ಏರಿ ಕುಳಿತುಕೊಂಡರು. ಭಕ್ಷಿ ಗಾಡಿಯನ್ನು ನಿಧಾನಕ್ಕೆ ಚಲಾಯಿಸತೊಡಗಿದ.
ಮಾದೇವಿಯ ಸ್ಮೃತಿಯೊಳಗೆ ಅಡಗಿದ್ದ ನೆನಪುಗಳೆಲ್ಲವೂ ಬೇಡ ಬೇಡವೆಂದುಕೊಂಡರೂ ದಾರಿಯುದ್ದಕ್ಕೂ ಕಣ್ಣ ಮುಂದೆಯೇ ಚಿತ್ರಪಟದಂತೆ ಸುಳಿದಾಡುತ್ತಾ ಕಾಡತೊಡಗಿದವು…
***
“ಅಂಗೆಲ್ಲ ಓಡಬ್ಯಾಡವೋ… ಮಗಾ… ಓಡ್ಬಾö್ಯಡ… ಏನಾದ್ರೂ ಆದರೆ ಎಂಗೆ? ನಿಂಗೇನಾರ ಆದ್ರೆ ನನ್ ಕೈಲಿ ತಡಕಂಬಾಕೂ ಆಗಂಗಿಲ್ಲ… ನಿನ್ನ ಹಿಡ್ಕಂಬಾಕೂ ಆಗಂಗಿಲ್ಲ ಕಂದಾ… ನನ್ ಮಾತ್ ಕೇಳೋ… ನನ್ ಬಂಗಾರ ಅಲ್ವೇನೋ ನೀನು…” ಕೂಗಿ ಕರೆದು ರಮಿಸಿ ಸಾಕಾಗಿ ಕೊನೆಗೆ “ಆಯ್ತು, ನೀ ಹೆಂಗಾರ ಮಾಡಪ್ಪ… ನಿನ್ನಿಷ್ಟ.” ಲಾಕ್ಡೌನ್ ಎಂಬ ಬೋನಿನಿಂದ ಹೊರಬಿಟ್ಟ ಚಿರತೆಯಂತೆ ಅರೆದಪ್ಪಿ ಓಡುತ್ತಿದ್ದ ಮಗನನ್ನು ಮಾದೇವಿಯು ಮಾತಿನಿಂದಲೆ ಹಿಡಿದು ನಿಲ್ಲಿಸುವ ಪ್ರಯತ್ನ ಮಾಡಿದಳು. ಎಷ್ಟು ಕೂಗಿದರೂ ತನ್ನ ಮಾತನ್ನೇ ಕೇಳದೆ ಕೈಗೆ ಸಿಗದೆ ಓಡುತ್ತಿದ್ದ ಮಗನನ್ನ ಹಿಡಿಯುವ ಪ್ರಯತ್ನವನ್ನು ಕೊನೆಗೂ ಕೈಚಲ್ಲಿದಳು. ಒಂದೇ ಸಮನೇ ಗಂಟಲು ಹರಿಯುವಂತೆ ಕಿರುಚಿಕೊಂಡರೂ ಅದಾವುದನ್ನೂ ಲೆಕ್ಕಿಸದೇ ದೊರೆ ಎಂಬ ಅವಳ ಪುಟ್ಟ ಮಗ ಯಾರ ಕೈಗೂ ಸಿಗದೇ ನಿರ್ಜನವಾಗಿದ್ದ ಥಾರು ರಸ್ತೆಯ ಮೇಲೆ ಓಡುತ್ತಲೇ ಇದ್ದ… ಕೂತಲ್ಲಿ ಕೂರಲಾರದ ನಿಂತಲ್ಲಿ ನಿಲ್ಲಲಾರದ ಪಾದರಸದಂಥಾ ಹುಡುಗ. ಊರಲ್ಲಿದ್ದಾಗಲೂ ಸಹ ಹೀಗೇ ಕೈಗೆ ಸಿಗದಂತೆ ಸಂದಿಗೊಂದಿಗಳಲ್ಲೆಲ್ಲಾ ನುಗ್ಗಿ ಓಡಿಬಿಡುತ್ತಿದ್ದ. ಅನೇಕ ಸಲ ಹೀಗೆ ಓಡಿಹೋಗದಂತೆ ತಡೆಯಲು ಗಾದಿಲಿಂಗ ಮಗನ ಕಾಲಿಗೆ ಮರದ ಕೊರಡು ಹಾಕಿ ಸರಪಳಿಯಿಂದ ಬಿಗಿದುಬಿಡುತ್ತಿದ್ದ. ಆದರೆ ಇಂದು ಲಾಕ್ಡೌನ್ ಕಾರಣದಿಂದ ಮರಳಿ ನಡೆದೇ ತವರಿಗೆ ಪಯಣ ಬೆಳಸಬೇಕಾದ ಕಾರಣ ಕೊರಡು ಬಿಗಿಯುವ ಪರಿಸ್ಥಿತಿಯಿರಲಿಲ್ಲ.
ಅವನನ್ನು ಹಿಂಬಾಲಿಸಿ ಸ್ವಲ್ಪ ದೂರದವರೆಗೂ ಓಡಿದ ಮಾದೇವಿಯು ಕೊನೆಗೂ ಮಗನನ್ನು ಹಿಡಿಯಲಾಗದೆ ಸೋತು ನಿಂತಗಾ ಎದೆಯಲ್ಲಿ ಉಸಿರು ಕಟ್ಟಿದಂತಾಗಿ ಒಂದೇ ಸಮನೆ ಕೆಮ್ಮತೊಡಗಿದಳು. ಅವಳ ಹಿಂದೆಯೇ ಹಿಂಬಾಲಿಸಿ ಬಂದ ಗಾದಿಲಿಂಗನಿಗೆ ಹೆಂಡತಿಯ ಅವಸ್ಥೆಯನ್ನು ಕಂಡು ಇದಕ್ಕೆಲ್ಲಾ ಕಾರಣವಾಗಿದ್ದ ಮಗನ ಮೇಲೆ ಕೋಪ ಉಕ್ಕಿ ಬರತೊಡಗಿತ್ತು. ಕ್ರಮೇಣ ಆ ಕೋಪ ಮಗ ದೊರೆಯ ಮೇಲಿನ ಆಕ್ರೋಶವಾಗಿ ಬದಲಾಗತೊಡಗಿತು. “ಇವ್ನೇನಪ್ಪ ನಮ್ ಜಲ್ಮಕ್ಕ ಹಿಂಗ ಮೂಲ ಅಗ್ಯಾನ…” ಪೇಚಾಡಿಕೊಳ್ಳುತ್ತಿದ್ದ. ಹಾಗೆ ತನ್ನ ಕೋಪಕ್ಕೆ ಕಾರಣನಾದವನು ತನ್ನ ಮಗನಾಗಿರದೆ ಬೇರೆ ಯಾರೋ ಆಗಿದ್ದರೆ ಏನು ಮಾಡಿಬಿಡುತ್ತಿದ್ದನೋ ಏನೋ! ಆಯಾಸದಿಂದ ಬಳಲಿದ್ದ ಹೆಂಡತಿಗೆ ಕೈಯಲ್ಲಿದ್ದ ಬಾಟಲಿಯಲ್ಲಿನ ಗುಟುಕು ನೀರನ್ನು ಕುಡಿಸಿ ತನ್ನ ಲುಂಗಿಯನ್ನು ಎತ್ತಿಕಟ್ಟಿ “ಆ ಚಿದುಗ ನನ್ಮಗನ್ನ ಎಲ್ಲಿದ್ರೂ ಹುಡುಕಿ ಕೈಕಾಲ್ ಕಟ್ಟಾಕಿ ಎತ್ತಾಕಂರ್ತೀನಿ… ನೀ ಇಲ್ಲೇ ಕುಂತು ಸೊಲ್ಪು ಧಣಿವಾರಿಸಿಗ್ಯಾ…” ಎಂದವನೇ ಮಗ ಓಡಿಹೋದ ದಿಕ್ಕನ್ನನುಸರಿಸಿ ಓಡಲಾರಂಭಿಸಿದ. ಹಿಂದೆಯೇ ತನ್ನೊಬ್ಬಳನ್ನೇ ಬಿಟ್ಟು ಬಂದುದಕ್ಕಾಗಿ ಅಳುತ್ತಾ ಓಡೋಡಿ ಬಂದ ಮಗಳು ಗೌರಿಯನ್ನು ಮಾದೇವಿಯು ಕೈ ಹಿಡಿದು ಬರಸೆಳೆದು “ಬಾರ ನನ ಬಂಗಾರ… ನಿನ್ ಬಿಟ್ಟು ಬಂದದ್ದಕ್ಕ ನನ ಮ್ಯಾಲೆ ಸಿಟ್ಟು ಬಂತೇನವ್ವ ನಿನಗೆ?” ಎಂದು ಪ್ರೀತಿಯಿಂದ ಎದೆಗಪ್ಪಿಕೊಂಡು ಮುದ್ದುಗರೆಯತೊಡಗಿದಳು.
ರಣರಣ ಬಿಸಿಲು ನೀರು ಸುರಿದಂತೆ ಸುರಿಯತೊಡಗಿತ್ತು. ರಸ್ತೆಗಳೆಲ್ಲ ಕಾದ ಹೆಂಚಿನಂತಾಗಿದ್ದವು. ಇಂಥಾ ರಸ್ತೆಗಳಲ್ಲಿ ಇಡೀ ದೇಶಾದ್ಯಂತ ಎಂದೂ ಕಂಡು ಕೇಳರಿಯದ ಸಾಮೂಹಿಕ ವಲಸೆಯೊಂದು ಶುರುವಾಗಿತ್ತು. ಒಪ್ಪತ್ತಿನ ಕೂಳಿಗೆ ಕುಟುಂಬಗಳ ಸಮೇತ ತಾವು ಹುಟ್ಟಿ ಬೆಳೆದಿದ್ದ, ತಮ್ಮ ಬಾಲ್ಯದ ನವಿರು ನೆನಪುಗಳ ಬುತ್ತಿಯನ್ನು ಕಟ್ಟಿಕೊಟ್ಟಿದ್ದ, ತಮ್ಮತಮ್ಮ ಹಳ್ಳಿಗಳನ್ನೇ ತೊರೆದು ನಗರಗಳನ್ನು ಅರಸಿ ಹೋಗಿದ್ದ ಲಕ್ಷಾಂತರ ಕುಟುಂಬಗಳು ಮರಳಿ ಹಳ್ಳಿಗಳೆಡೆಗೆ ಮುಖ ಮಾಡಿದ್ದವು. ಕೊರೋನಾ ಎಂಬ ಮಾರಿಯ ಭೀತಿಗೆ ಸಿಕ್ಕು ಬದುಕುಳಿದರೆ ಸಾಕು ಎಂದು ವಯಸ್ಕರು ಹೆಂಗಸರು ಯುವಕರು ಮಕ್ಕಳಾದಿಯಾಗಿ ಎಲ್ಲರೂ ಅನ್ನ ಆಹಾರಗಳಿಲ್ಲದೆ ಉಟ್ಟ ಬಟ್ಟೆಯಲ್ಲೇ ಗಂಟೂಮೂಟೆ ಕಟ್ಟಕೊಂಡು ಬರಿಗಾಲಲ್ಲೇ ಹೆಜ್ಜೆ ಹಾಕತೊಡಗಿದ್ದರು. ಬೇಸಿಗೆಯ ಬಿಸಿಲಿಗೆ ಕಾದ ಹೆಂಚಿನಂತಾಗಿದ್ದ ಥಾರುರಸ್ತೆಯಿಂದ ಬಹುತೇಕರ ಕಾಲುಗಳಲ್ಲಿ ಬೊಬ್ಬೆಗಳು ಉಂಟಾಗಿದ್ದರೆ ಮತ್ತಷ್ಟು ಜನರ ಚರ್ಮವೇ ಕಿತ್ತು ರಕ್ತ ಸೋರುತ್ತಿದ್ದುದು ಸಾಮಾನ್ಯವೆಂಬಂತಾಗಿತ್ತು. ಮತ್ತೆ ಕೆಲವರು ನಡೆಯಲಾಗದೆ ಪ್ರಯಾಸ ಪಡುತ್ತಿದ್ದರೆ, ಮತ್ತೊಂದಿಷ್ಟು ಜನ ಅಲ್ಲಲ್ಲಿ ಕೂತು ವಿಶ್ರಮಿಸಿ ಮುನ್ನಡೆಯುತ್ತಿದ್ದರು. ಗಂಡನಿಗೆ ಹೆಂಡತಿ ಹೆಂಡತಿಗೆ ಗಂಡ ತಂದೆತಾಯಿಗಳಿಗೆ ಮಕ್ಕಳು ಮಕ್ಕಳಿಗೆ ಪೋಷಕರು ನೆರೆಯವರಿಗೆ ಕರೆಯವರು ಕರೆಯವರಿಗೆ ನೆರೆಯವರೂ… ಹೀಗೆ ಪರಸ್ಪರ ಆಸರೆಯಾಗುತ್ತಾ ನಡೆದಿದ್ದರು. ಹಾಗೆ ಹೆಜ್ಜೆ ಹಾಕುತ್ತಾ ನಡೆದಿದ್ದ ಕುಟುಂಬಗಳಲ್ಲಿ ಡಂಕಲ್ಪೇಟೆಯ ಈ ಗಾದಿಲಿಂಗನ ಕುಟುಂಬವೂ ಒಂದಾಗಿತ್ತು.
ಮಾರ್ಚ್ ತಿಂಗಳ ಬೇಸಗೆಯಲ್ಲಿ ಅಚಾನಕ್ಕಾಗಿ ಹೇರಲ್ಪಟ್ಟ ಲಾಕ್ಡೌನ್ನಿಂದ ಗಾದಿಲಿಂಗನ ಕುಟುಂಬ ಬಿರುಗಾಳಿಗೆ ಸಿಕ್ಕ ದೋಣಿಯಂತೆ ಹೊಯ್ದಾಡತೊಡಗಿತ್ತು. ಇಡೀ ಜಗತ್ತೇ ಸ್ತಬ್ಧಗೊಂಡಿತ್ತು. ಒಪ್ಪತ್ತಿನ ಕೂಳಿಗಾಗಿ ಬದುಕನ್ನರಸಿ ನಗರಗಳಿಗೆ ವಲಸೆ ಬಂದಿದ್ದ ಸಾವಿರಾರು ಕುಟುಂಬಗಳ ಪರಿಸ್ಥಿತಿಗಳೂ ಇದಕ್ಕಿಂತ ಭಿನ್ನವೇನೂ ಆಗಿರಲಿಲ್ಲ. ಗಾದಿಲಿಂಗ ಮಾದೇವಿಯರಿಗೆ ತಮ್ಮ ಜೀವಗಳಿಗಿಂತ ತಮ್ಮ ಪುಟ್ಟಪುಟ್ಟ ಮಕ್ಕಳಾದ ದೊರೆ ಮತ್ತು ಗೌರಿಯರದೇ ಚಿಂತೆಯಾಗಿತ್ತು. ಲಾಕ್ಡೌನ್ ಸಂದರ್ಭದಲ್ಲಿ ಬಸ್ಸು ಲಾರಿ ರೈಲು ಟೆಂಪೋ ಮತ್ತಿತರ ಎಲ್ಲ ಸಾರಿಗೆಗಳನ್ನು ರದ್ದು ಮಾಡಿದ್ದರಿಂದ ಗಾದಿಲಿಂಗನ ಕುಟುಂಬ ತೀವ್ರ ಚಿಂತೆಗೆ ಈಡಾಗಿತ್ತು.
ಅದೊಂದು ದಿನ ಸರ್ಕಾರವು ಕೆಲ ದಿನಗಳ ಮಟ್ಟಿಗೆ ಕರ್ಫ್ಯೂವನ್ನು ಸಡಿಲಿಸಿ ವಲಸೆ ಕಾರ್ಮಿಕರು ತಮ್ಮತಮ್ಮ ಊರುಗಳಿಗೆ ತೆರಳಬಹುದೆಂದು ಘೋಷಿಸಿದಾಗ ಹೋದ ಜೀವವೇ ಮರಳಿ ಬಂದಂತಾಗಿತ್ತು. ಕಾರ್ಮಿಕರನ್ನು ಮರಳಿ ಅವರವರ ಊರುಗಳಿಗೆ ತಲಪಿಸಲು ಸರ್ಕಾರವು ಕೈಗೊಂಡಿದ್ದ ವ್ಯವಸ್ಥೆಯು ಏನೇನೂ ಸಾಲದೇ ಸಾವಿರಾರು ಕುಟುಂಬಗಳು ರಣರಣ ಉರಿಬಿಸಿಲಿನಲ್ಲೂ ಬರಿಗಾಲಲ್ಲಿ ಅನ್ನ ನೀರು ಆಹಾರಗಳಿಲ್ಲದೆ ಗಂಟುಮೂಟೆಗಳನ್ನು ಹೊತ್ತು ಸಾಮೂಹಿಕವಾಗಿ ತಮ್ಮತಮ್ಮ ಊರುಗಳತ್ತ ನಡೆಯತೊಡಗಿದ್ದುದು ಸರ್ವೇಸಾಮಾನ್ಯವಾಗಿತ್ತು. ಹಾಗೆ ಗಾದಿಲಿಂಗನ ಕುಟುಂಬವೂ ಬೆಂಗಳೂರೆಂಬ ಮಾಯಾನಗರದಿಂದ ಸುಮಾರು ನಾನ್ನೂರು ಕಿಲೋಮೀಟರಿಗೂ ಹೆಚ್ಚು ದೂರದÀಲ್ಲಿರುವ ತಮ್ಮ ಊರಾದ ಡಂಕಲ್ಪೇಟೆಯತ್ತ ನಿಧಾನಕ್ಕೆ ಹೆಜ್ಜೆಯೂರುತ್ತಾ ನಡೆದಿತ್ತು. ಹೇಗಾದರೂ ಊರು ತಲಪುತ್ತೇವಲ್ಲ ಎಂಬ ಖುಷಿಯಲ್ಲಿ ಮೊದಲನೆಯ ದಿನವೇನೋ ಸ್ವಲ್ಪ ಉಮೇದಿಯಿತ್ತು.
ಹೆಬ್ಬಾವಿನಂತೆ ಉದ್ದಾನುದ್ದಕ್ಕೆ ಮಲಗಿದ್ದ ರಸ್ತೆಗಳು ವಾಹನಗಳ ಸಂಚಾರಗಳಿಲ್ಲದೇ ಬಿಕೋ ಎನ್ನುತ್ತಿದ್ದವು. ಕೇಳುವವರಿಲ್ಲದ ರಾಜ್ಯಕ್ಕೆ ತಾನೇ ಒಡೆಯನೆಂಬಂತೆ ಮಹಾತುಂಟನಾದ ಗಾದಿಲಿಂಗನ ಮಗ ದೊರೆಯು ವಿಸ್ತಾರವಾದ ರಸ್ತೆಯ ಮೇಲೆ ರಾಜನಂತೆ ಎದೆಯುಬ್ಬಿಸಿ ನಡೆಯುತ್ತಾ ಕೀಟಲೆಯಲ್ಲಿ ತೊಡಗಿದ್ದ. ತಂಗಿ ಗೌರಿಯೂ ಅವನನ್ನೇ ಅನುಸರಿಸಿ ನಡೆಯುತ್ತಾ ತನ್ನಣ್ಣನ ಕೀಟಲೆಗಳಲ್ಲಿ ಪಾಲು ಪಡೆದಿದ್ದಳು. ವಿಪರೀತ ತುಂಟತನದ ದೊರೆಗೆ ಈ ವಿಸ್ತಾರವಾದ ರಸ್ತೆಗಳು ಅಕ್ಕಪಕ್ಕದ ಬೆಟ್ಟ ಗುಡ್ಡಗಳು ಅಚ್ಚಹಸಿರಿನ ಹೊಲ ಗದ್ದೆ ತೋಟಗಳು ಅಂಥಾ ರಣರಣ ಬಿಸಿಲಿನ ನಡುವೆಯೂ ಚೇತೋಹಾರಿಯೆನಿಸುತ್ತಿದ್ದವು. ಜಗತ್ತನ್ನು ಕಾಡುತ್ತಿರುವ ಯಾವೊಂದರ ಭೀತಿಯೂ ಇರದ ಆ ಎರಡು ಪುಟ್ಟ ಹೃದಯಗಳು ತಮ್ಮದೇ ಲೋಕದಲ್ಲಿ ವಿಹರಿಸುತ್ತಾ ನಲಿಯುತ್ತಾ ನಡೆದಿದ್ದವು.
ಗಾದಿಲಿಂಗ ಮತ್ತು ಮಾದೇವಿಯರಿಗೆ ಊರು ಮುಟ್ಟುವ ತನಕ ಮಕ್ಕಳನ್ನು ಸಂಭಾಳಿಸುವುದೇ ದೊಡ್ಡ ಸವಾಲಿನ ಕೆಲಸವೂ ಮತ್ತು ಆತಂಕದ ವಿಷಯವೂ ಆಗಿತ್ತು. ಅದರಲ್ಲೂ ಕೊರೋನಾವೆಂಬ ಮಾರಿಯಿಂದ ರಕ್ಷಿಸಲು ಕ್ಷಣ ಕ್ಷಣವೂ ಎಚ್ಚರಿಕೆ ವಹಿಸಬೇಕಾದದ್ದು ತೀರಾ ಅಗತ್ಯವಿತ್ತು. ಇಂಥಾ ವೇಳೆಯಲ್ಲಿ ತುಂಟನಾದ ದೊರೆಯನ್ನು ಹಿಡಿದಿಡುವುದೆಂದರೆ ಬಹುತೇಕ ಅದೊಂದು ಪ್ರಯಾಸದ ಕೆಲಸವೇ! ಆಗಾಗ ಶಾಲೆಯಲ್ಲಿ ಸಹಪಾಠಿಗಳ ಮೇಲೆಲ್ಲಾ ನೀರು ಎರಚುವುದು… ಪುಸ್ತಕ ಹರಿಯುವುದು, ಕಲಹಗಳುಂಟಾದಾಗ ಕಣ್ಣಿಗೆ ಮಣ್ಣೆರಚುವುದು, ಹಿಂದಿನಿಂದ ಹುಡುಗರ ಚಡ್ಡಿ ಎಳೆದು ಓಡಿಬಿಡುವುದು… ಒಮ್ಮೆ ಪಾಠ ಸರಿಯಾಗಿ ಒಪ್ಪಿಸಿಲ್ಲದ್ದಕ್ಕೆ ಬರೋಬ್ಬರಿ ಒಂದು ತಾಸು ಉರಿಬಿಸಿಲಲ್ಲಿ ನಿಲ್ಲಿಸಿದ್ದ ಗಣಿತ ಮೇಡಂ ಜಡೆಯನ್ನೇ ಕತ್ತರಿಸಿಬಿಟ್ಟಿದ್ದ. ಹೀಗೆ ಅವನ ಚಿದುಗುತನಕ್ಕೆ ಒಂದು ಮಿತಿಯೇ ಇರಲಿಲ್ಲ. ತನ್ನ ಈ ಪರಮ ತುಂಟತನದ ಸ್ವಭಾವದ ಸ್ವಲ್ಪ ಕೊಸರನ್ನೂ ಆಗಾಗ ತಂಗಿ ಗೌರಿಗೂ ದಾಟಿಸಿಬಿಡುತ್ತಿದ್ದ. ಎಷ್ಟು ಹೊಡೆದರೂ ಬಡಿದರೂ ಬಗ್ಗದ ಆಸಾಮಿ. ಮೈಮೇಲೆ ನಾಲ್ಕೇಟು ಬಿದ್ದಾಗ ಮಾತ್ರ ಸ್ವಲ್ಪ ಸಂಭಾವಿತತನ ತೋರುತ್ತಿದ್ದ. ಮರುಗಳಿಗೆಯಲ್ಲಿ ಮತ್ತದೇ ಕಥೆ ಶುರು ಹಚ್ಚಿಕೊಳ್ಳುತ್ತಿದ್ದ.
ಇಂದೂ ಸಹ ಹಾಗೇ ವಿಸ್ತಾರವಾದ ಬಯಲೇ ಅವನ ಆಡುಂಬೊಲವಾಗಿತ್ತು. ಉದ್ದಾನುದ್ದ ರಸ್ತೆಗಳಲ್ಲಿ ಒಮ್ಮೊಮ್ಮೆ ತಾನೇ ಒಂದು ಬಸ್ಸು ಎಂಬಂತೆ ಭ್ರಮಿಸಿ, ತನ್ನ ಎರಡೂ ಕೈಗಳನ್ನು ವಾಹನದ ಸ್ಟೇರಿಂಗ್ ಹಿಡಿದವನಂತೆ ನಟಿಸುತ್ತಾ ಝಿಯ್ಯನೆ ಓಡಿಹೋಗಿ ಕಣ್ಮರೆಯಾಗಿ ಎಲ್ಲರಿಗೂ ಆತಂಕವನ್ನುಂಟು ಮಾಡಿಬಿಡುತ್ತಿದ್ದ. ಆಗೆಲ್ಲಾ ಮಾದೇವಿಯು “ಅಯ್ಯೋ… ಸಾಕ್ಮಾಡು ದೊರೆ ಈ ನಿನ್ ಚಿದುಗು. ಬಿದ್ದುಗಿದ್ದೀಯಾ! ಮತ್ತೇ ಆ ಪಿಳ್ಳೆಗೆ ಏನಾರ ಆದ್ರೆ ಯಾರ್ ಜಬ್ದಾರಿ?” ಅಂದ ಮಾತಿಗೆ ದೊರೆಯು “ನೀನೂ ಬೇಕಾರ ಕುತ್ಗ. ಡಂಕಲ್ಪೇಟೆಗೆ ಇಳುಸ್ತೀನಿ. ಸುಂಕೆ ಯಾಕ ನಡ್ದೂ ನಡ್ದೂ ಕಾಲ್ ನೋವು ಮಾಡ್ಕಂತಿ… ಗೋರ್ಮೆಂಟ್ ಬಸ್ಸು ಇಲ್ದಿದ್ರೆ ಏನಾತು? ನನ್ ಬಸ್ ಐತಲ್ಲಾ…” ಕೀಟಲೆ ಮಾತಾಡ್ತಿದ್ದ. ಹೀಗೆ ತಾನೊಬ್ಬನೇ ಅಲ್ಲದೆ ತಂಗಿಯನ್ನೂ ತನ್ನ ಅಂಗಿಯ ಹಿಂದಿನ ಚುಂಗನ್ನು ಹಿಡಿಯುವಂತೆ ಪ್ರೇರೇಪಿಸಿ ಕರೆದೊಯ್ದುಬಿಡುತ್ತಿದ್ದ. ಮತ್ತೂ ಕೆಲವೊಮ್ಮೆ ರಸ್ತೆ ಅಕ್ಕಪಕ್ಕದ ಗಿಡ ಮರ ಪೊದೆಗಳಲ್ಲಿ ಅವಿತಿಟ್ಟುಕೊಂಡು ಗೌರಿಗೆ ಹುಡುಕುವಂತೆ ಪ್ರಚೋದಿಸುತ್ತಿದ್ದ. ಒಮ್ಮೆ ಹೀಗೆ ಪೊದೆಯೊಂದರಲ್ಲಿ ಅವಿತಿಟ್ಟುಕೊಂಡಾಗ ಪಕ್ಕದಲ್ಲೇ ಏನೋ ಸುಳುಸುಳು ಸಪ್ಪಳವಾದಂತಾಗಿ ನೋಡಿದರೆ ಹಾವಿನ ಮರಿಯೊಂದು ಹೆಡೆ ಎತ್ತಿ ಭುಸುಗುಡುತ್ತಿತ್ತು. ಕೂಡಲೇ ತನ್ನೂರಿನ ಹಾವುಹಿಡಿಯುವ ಭೋಳಗಂಟಿಯ ನೆನಪಾಗಿ ಅವನಂತೆ ಆ ಹಾವಿನ ಮರಿಯನ್ನೂ ಹಿಡಿದು ಆಚೆ ಬಂದಾಗ ಗಾದಿಲಿಂಗ ಮಾದೇವಿಯರಿಬ್ಬರಿಗೂ ಜೀವವೇ ಹೊರಟು ಹೋದಂತಾಗಿಬಿಟ್ಟಿತ್ತು.
ಇಂಥಾ ಹಲವಾರು ಪ್ರಸಂಗಗಳು ಆದಾಗಲೆಲ್ಲ ಮಾದೇವಿ ಚಡಪಡಿಸಿಬಿಡುತ್ತಿದ್ದಳು. ಆಗ ಮಕ್ಕಳನ್ನು ಸಂಭಾಳಿಸುವ ಜವಾಬ್ದಾರಿಯೆಲ್ಲಾ ಗಾದಿಲಿಂಗನ ಹೆಗಲಿಗೆ ಬೀಳುತ್ತಿತ್ತು. ಆಗೆಲ್ಲ ಗಾದಿಲಿಂಗ ಕೋಪಾವಿಷ್ಟನಾಗಿಬಿಡುತ್ತಿದ್ದ. ಕೊನೆಗೂ ಮಕ್ಕಳು ಕೈಗೆ ಸಿಕ್ಕಿದಾಗ ಕೋಪದಿಂದ ನಾಲ್ಕು ಬಿಗಿದುಬಿಡುತ್ತಿದ್ದ. ಹಠಮಾರಿ ಧೋರಣೆಯ ಮಗನನ್ನು ನಿಯಂತ್ರಿಸಲಾಗದೆ “ಊರು ಮುಟ್ಟೋದ್ರೊಳಗ ಇವ್ನಿನ್ನೂ ಏನೇನು ಮಾಡ್ತಾನೋ ಶಿವನೇ. ಎಂಗಪ್ಪಾ ಇವ್ನನ್ನ ಸಂಭಾಳ್ಸೋದು…” ಗಾದಿಲಿಂಗ ಪೇಚಾಡಿಕೊಳ್ಳುತ್ತಿದ್ದ.
ಹಿಂದೊಮ್ಮೆ ಡಂಕಲ್ಪೇಟೆಯಲ್ಲೂ ಹೀಗೇ ಆಗಿತ್ತು. ಹಳ್ಳಿಗಳಲ್ಲೆಲ್ಲಾ ಸಾಮಾನ್ಯವಾಗಿ ಬಯಲಲ್ಲೇ ಬಹಿರ್ದೆಸೆಗೆ ಹೋಗುವುದು ವಾಡಿಕೆ. ಹಾಗೆ ಬಹಿರ್ದೆಸೆಗೆಂದು ಹೋದಾಗ ದೊರೆಯು ಪೊದೆಯೊಂದರಲ್ಲಿ ಹಂದಿಯೊಂದು ಹತ್ತಾರು ಮರಿಗಳಿಗೆ ಹಾಲುಣಿಸುತ್ತಾ ಮಲಗಿದ್ದನ್ನು ಕಂಡಿದ್ದಾನೆ. ಪುಟ್ಟ ಹಂದಿಮರಿಗಳು ತುಂಬಾ ಮುದ್ದುಮುದ್ದಾಗಿ ಕಂಡಿವೆ. ಕೂಡಲೇ ಸಪ್ಪಳಾಗದಂತೆ ನಿಧನಿಧಾನಕ್ಕೆ ಹೆಜ್ಜೆಯೂರುತ್ತಾ ಪೊದೆಯ ಹತ್ತಿರಕ್ಕೆ ಹೋದವನೇ ಅನಾಮತ್ತಾಗಿ ತನ್ನೆರಡೂ ಕೈಗಳಲ್ಲೂ ಒಂದೊಂದು ಮರಿಯನ್ನು ಎತ್ತಿಕೊಂಡದ್ದೇ ಶರವೇಗದಲ್ಲಿ ಮನೆಯತ್ತ ಓಡತೊಡಗಿದ್ದ. ಒಡನೆಯೇ ಅದರ ತಾಯಿಯು ಕೋಪಾವೇಶದಿಂದ ಆರ್ಭಟಿಸುತ್ತಾ ಅವನನ್ನು ಹಿಂಬಾಲಿಸಿಕೊಂಡು ಇನ್ನಿಲ್ಲದಂತೆ ಊರಲ್ಲೆಲ್ಲಾ ಓಡಾಡಿಸಿಬಿಟ್ಟಿತ್ತು. ಕೊನೆಗೂ ತಾನೆತ್ತಿಕೊಂಡು ಬಂದಿದ್ದ ಮರಿಗಳನ್ನು ಕೆಳಕ್ಕೆ ಹಾಕದೆ ದೊರೆಗೆ ಬೇರೆ ದಾರಿಯೇ ಇರಲಿಲ್ಲ. ಆ ದಿನ ಸ್ವಲ್ಪ ಏನಾದರೂ ಹೆಚ್ಚುಕಮ್ಮಿಯಾಗಿದ್ದರೆ ಹೇಗಿತ್ತು ಅಂತ ಭೀತಗೊಂಡ ಗಾದಿಲಿಂಗ ಮಗನ ಮೈಮೇಲೆ ಬಾಸುಂಡೆ ಬರುವಂತೆ ಹೊಡೆದು ಇನ್ನೊಮ್ಮೆ ಹೀಗೆಲ್ಲಾ ಮಾಡಿದರೆ ಕೈಕಾಲು ಮುರಿದುಹಾಕುವುದಾಗಿ ಎಚ್ಚರಿಕೆ ಕೊಟ್ಟಿದ್ದ.
ಇಂಥಾ ಎಚ್ಚರಿಕೆಗಳು ಬಾಸುಂಡೆಗಳು ದೊರೆಗೆ ಯಾವ ಲೆಕ್ಕ! ದೊರೆಯ ಬಾಲ್ಯಸಹಜ ಚಿದುಗತನಕ್ಕೆ ಮಾತ್ರ ಕೊನೆಯೆಂಬುದೇ ಇರಲಿಲ್ಲ. ಅದು ಇಂದಿಗೂ ಸಹ ಅವಿರತವಾಗಿ ಮುಂದುವರಿದಿತ್ತು. ಇಂದೂ ಸಹ ಹಾಗೆ ಓಡಿ ಹೋದ ಮಗನನ್ನು ಹುಡುಕುತ್ತಾ ಬಂದ ಗಾದಿಲಿಂಗನಿಗೆ ಒಂದು ಹಂತದಲ್ಲಿ ಮಗ ಕಾಣದಾದಾಗ ಆತಂಕವೇ ಶುರುವಾಗಿತ್ತು. ಹೆದ್ದಾರಿಯ ಇಕ್ಕೆಲಗಳಲ್ಲೂ ಗಾಬರಿಗೊಂಡು ಅತ್ತಿತ್ತ ಕತ್ತು ತಿರುಗಿಸುತ್ತಾ ಕಣ್ಣು ಹಾಯಿಸುತ್ತಾ ಹುಡುಕಾಡತೊಡಗಿದ.
“ದೊರೆ… ದೊರೆ… ಎಲ್ಲೆದೀಯಾ ಮಗನೆ. ನಾನೇನು ಬಡಿಯಂಗಿಲ್ಲ ನಿಂಗೆ. ಬಂದ್ಬುಡು ಮಗನೆ. ನಿಮ್ಮಮ್ಮ ನಿನಗೋಸ್ಕರ ಅಳಕಂತ ಕುಂತಾಳ… ಅಲ್ಲಿ ಊರಾಗ ನಿಮ್ಮಜ್ಜ ನಿಂದೇ ದಾರಿ ಕಾಯಾಕತ್ತಾನ ಜಲ್ದಿ ಬಂದ್ಬುಡು ಮಗ, ಮನೇಗೋಗಾಣ” ಆತಂಕದಿಂದ ಒಂದೇಸಮನೆ ಕೂಗುತ್ತಾ ಮಗನನ್ನು ಹುಡುಕಾಡತೊಡಗಿದ್ದ.
ಇಲ್ಲಿ ಬೇವಿನ ಮರದಡಿಯಲ್ಲಿ ಮಗಳು ಗೌರಿಯೊಂದಿಗೆ ಮಾದೇವಿಯು ಗಂಡ ಮತ್ತು ಮಗನ ದಾರಿಯನ್ನು ಕಾಯುತ್ತಾ ಕೂತಿದ್ದಳು. ಗೌರಿಯು ಬೇವಿನ ಮರದ ನೆರಳಡಿಯಲ್ಲಿ ಅಮ್ಮನ ಮಡಿಲಲ್ಲಿ ತಲೆಯಿಟ್ಟು ಮೆಲ್ಲನೇ ನಿದ್ರೆಗೆ ಜಾರಿದ್ದಳು. ಇಲ್ಲೆಲ್ಲೋ ಹತ್ತಿರದಲ್ಲೇ ಆಂಬುಲೆನ್ಸೊಂದು ಸೈರನ್ ಕೂಗುತ್ತಾ ಬರುತ್ತಿತ್ತು. ನಿದ್ರೆಯ ವಶದಲ್ಲಿದ್ದ ಗೌರಿಯು ಆಂಬುಲೆನ್ಸಿನ ಸದ್ದಿಗೆ ಎಚ್ಚರಗೊಂಡಳು. ಕೆಲವೇ ಕ್ಷಣಗಳಲ್ಲಿ ಅತಿವೇಗದೊಂದಿಗೆ ಹಾಗೆ ಬಂದ ಆಂಬುಲೆನ್ಸ್ ಇವರ ಕಣ್ಣ ಮುಂದೆಯೇ ರ್ರನೇ ಹಾದುಹೋಯಿತು. ಕೊರೋನಾವೆಂಬ ಸಾಂಕ್ರಾಮಿಕ ರೋಗವೊಂದು ಜಗತ್ತಿಗೆ ಒಕ್ಕರಿಸಿದಾಗಿನಿಂದಾಗಲೂ ಆಂಬುಲೆನ್ಸುಗಳ ಓಡಾಟಕ್ಕೆ ಮಿತಿಯೇ ಇರಲಿಲ್ಲ. “ಪಾಪ! ಯಾವ ತಾಯಿಯ ಮಗನೋ…” ಮಾದೇವಿ ಮನದಲ್ಲೇ ಮರುಗಿದಳು.
“ಯಾರಮ್ಮಾ ಅದು?” ಗೌರಿಯು ತನ್ನ ತಾಯಿಯನ್ನು ಕೇಳಿದಳು.
“ಯಾರೋ ಅದೃಷ್ಟವಂತರು ಅಂತ ಕಾಣ್ತೆöÊತೆ ಮಗಳೇ! ವ್ಯಾನಿನ್ಯಾಗ ಊರಿಗೆ ಹೊಂಟಿರಬೇಕು…”
“ನಾವೂ ಅಂತದ್ರಾಗ ಹೋಗಾನವ್ವ. ನಡದೂ ನಡದೂ ಸಾಕಾಗೇತೆ. ಕಾಲು ನೋವಂದ್ರೆ ನೋವು ಅವ್ವ.”
“ಹಂಗನ್ಬಾರ್ದು ಪುಟ್ಟ. ಯಾರ ಪಾಡು ಅವ್ರಿಗೆ ಅಂತ ದೇವ್ರು ಬದಿರ್ತಾನೆ.”
“ಅಂದ್ರೆ?”
“ಅಂದ್ರೆ ಆ ದೇವ್ರು ಯಾರಿಗೆ ಯಾವಾಗ ಏನೇನ್ ಕೊಡ್ಬೇಕೋ ಕೊಡ್ತಾನೆ.”
“ನಂಗೀಗ ಹೊಟ್ಟೆ ಹಸಿತಾ ಐತಮ್ಮ.”
ಆಗಲೇ ಯಾರೋ ಒಂದಿಬ್ಬರು ದಾನಿಗಳು ತಮ್ಮ ಬೈಕುಗಳಲ್ಲಿ ಆಹಾರದ ಪೊಟ್ಟಣಗಳನ್ನೂ ನೀರಿನ ಬಾಟಲಿಗಳನ್ನೂ ಹೆದ್ದಾರಿಯುದ್ದಕ್ಕೂ ಹಂಚುತ್ತಾ ಬರುತ್ತಿದ್ದುದು ಕಾಣಿಸಿತು.
“ನೋಡು ಆ ದೇವ್ರು ನಿಂಗಾಗಿ ಅನ್ನ ಕಳಿಸಿದಾನೆ. ನೀನಂದ್ರೆ ದೇವ್ರಿಗೂ ಪ್ರೀತಿ ಅನ್ಸತೈತೆ ಅಲ್ಲೇನೇ ಗೌರಿ?” ಮಾದೇವಿಯು ಗೌರಿಯನ್ನು ತನ್ನ ಎರಡೂ ತೋಳುಗಳಿಂದ ಪ್ರೀತಿಯಿಂದ ತಬ್ಬಿ ಗಲ್ಲ ಹಿಂಡಿ ಮುದ್ದಿಸುತ್ತಾ ಕೇಳಿದಳು.
“ಹೂಂ ಮತ್ತೆ ನಾ ಅಂದ್ರೆ ಏನನ್ಕಂಡಿದಿ” ಗೌರಿಯ ಮುಖದಲ್ಲಿ ನಗೆಯ ಹೂ ಅರಳಿತ್ತು.
“ಏಟತ್ತಿದ್ರು ದೊರೆ ತಂಗಿ ತಾನೆ? ಆಹ್ಹಾ… ಯುವರಾಣಿ! ಈಟಾದ್ರೂ ಜಂಬ ಇರಬೇಕಾದ್ದೇ ಬಿಡವ್ವ ನಿನಿಗಿ.” ಇತ್ತ ಮಗಳನ್ನು ರಮಿಸುತ್ತಿದ್ದ ಮಾದೇವಿಯ ಒಳಮನಸ್ಸಲ್ಲಿ ಮಗನ ಕಡೆಯದೇ ಚಿಂತೆ, ಸೆಳೆತ.
ಗಂಡ ಮತ್ತು ಮಗ ಇನ್ನೂ ಬಾರದಿದ್ದಕ್ಕೆ ಮಾದೇವಿಗೆ ಒಳಗೊಳಗೇ ಆತಂಕ ಶುರುವಾಗಿತ್ತು. ಅದೇ ದಿಕ್ಕಿನಲ್ಲೇ ನೆಟ್ಟ ಕಣ್ಣು ಬದಲಿಸದೆ ಕಾಯತೊಡಗಿದಳು. ಕ್ರಮೇಣ ಸೂರ್ಯನ ಪ್ರಖರ ಕುಂದತೊಡಗಿತ್ತು. ಮರದ ನೆರಳು ಕ್ಷಣಕ್ಷಣವೂ ಚಿಕ್ಕದಾಗುತ್ತಾ ಹೋಗುತ್ತಿತ್ತು. ಕತ್ತಲು ಗಾಢವಾಗುತ್ತಿರುವಂತೆಯೇ ಮಾದೇವಿಯ ಮನದೊಳಗಿನ ಆತಂಕ ಭಯ ತಲ್ಲಣಗಳೂ ಹೆಚ್ಚತೊಡಗಿದ್ದವು.
ಅನತಿ ದೂರದಲ್ಲೇ ಯಾರೋ ಒಂದಿಬ್ಬರು ತಾವು ಕೂತ ಬೇವಿನ ಮರದೆಡೆಗೆ ಬರುತ್ತಿರುವುದು ಕಾಣತೊಡಗಿತು. ಮೊದಮೊದಲಿಗೆ ಭಯವಾದರೂ ಆ ಗುಂಪಿನಲ್ಲಿ ಒಬ್ಬ ಮಹಿಳೆ ಇದ್ದದ್ದು ಮಾದೇವಿಗೆ ಕೊಂಚ ನೆಮ್ಮದಿಯನ್ನು ತಂದಿತ್ತು. ತೀರಾ ಹತ್ತಿರ ಬಂದಾಗ ಎಲ್ಲವೂ ಪರಿಚಿತ ಮುಖಗಳೇ ಎನಿಸಿ ಮನಸು ನಿರಾಳವಾಯ್ತು. ಹಾಗೇ ಬಂದವರು ಡಂಕಲ್ಪೇಟೆಯ ಪಕ್ಕದ ಊರಾದ ಹಳೇಕೋಟೆಯ ಅಲ್ಲಾಭಕ್ಷಿ ಮತ್ತವನ ಕುಟುಂಬದವರು. ಮಾದೇವಿಯನ್ನು ಕಂಡದ್ದೇ ಅಲ್ಲಾಭಕ್ಷಿಯ ಹೆಂಡತಿ ಖಾದರಬೀ ತುಂಬು ಖುಷಿಯಿಂದ “ಈಗ ಬೇಷಾತು ನೋಡವ್ವ. ಇಬ್ರೂ ಅಕ್ಕಪಕ್ಕದ ಊರವ್ರೇ. ಹಿಂಗ ಕಷ್ಟದಾಗ ಒಬ್ರಿಗೊಬ್ರು ಇದ್ರೆ ಬಾಳೇವು ಚಂದ.” ಎನ್ನುತ್ತಾ ತನ್ನ ಖುಷಿಯನ್ನು ಹಂಚಿಕೊಂಡಳು. ಅಲ್ಲಾಭಕ್ಷಿ ಮತ್ತು ಖಾದರ್ಬೀ ದಂಪತಿಗಳೂ ಸಹ ಅನೇಕರಂತೆ ಬದುಕನ್ನರಸಿ ಬೆಂಗಳೂರಿಗೆ ಹೋದವರು. ಕೊರೋನಾ ಸಾಂಕ್ರಾಮಿಕದ ಕಾರಣದಿಂದಾಗಿ ತವರೂರಿನತ್ತ ಮುಖ ಮಾಡಿದ್ದರು. ಸ್ವಂತ ಊರಲ್ಲೇ ಹಣ್ಣು ತರಕಾರಿ ಮಾರಿಯೋ ಇಲ್ಲ ಯಾವುದಾದರೂ ಗಾಡಿ ಓಡಿಸಿಯೋ ಜೀವ ಉಳಿಸಿಕೊಳ್ಳಬಹುದೆಂದು ನಿರ್ಧರಿಸಿ ಪ್ರಯಾಣ ಬೆಳೆಸಿದ್ದರು.
ಒಂದು ಕಡೆ ಇಂಥಾ ಸಂಕಷ್ಟದ ಹೊತ್ತಿನಲ್ಲಿ ಅಲ್ಲಾಭಕ್ಷಿಯ ಕುಟುಂಬ ಜೊತೆಯಾದದ್ದರಿಂದ ಮಾದೇವಿಯು ಹರ್ಷಗೊಂಡರೆ ಮತ್ತೊಂದೆಡೆ ಇಷ್ಟು ಹೊತ್ತಾದರೂ ಮಗನನ್ನು ಹುಡುಕುತ್ತಾ ಹೋದ ಗಂಡ ಬರದೇ ಇದ್ದದ್ದು ಕ್ಷಣಕ್ಷಣಕ್ಕೂ ಆತಂಕವನ್ನುಂಟು ಮಾಡುತ್ತಿತ್ತು. ಇದ್ದಕ್ಕಿದ್ದಂತೆ ಮಾದೇವಿಯ ಕಣ್ಣುಗಳಲ್ಲಿ ನೀರು ಕಾಣಿಸಿಕೊಂಡವು. ಖಾದರಬೀ ಕಕ್ಕುಲಾತಿಯಿಂದ ಕೇಳಿದ್ದಕ್ಕೆ ಮಾದೇವಿ ಎಲ್ಲವನ್ನೂ ವಿವರಿಸಿದಳು. ತಾಯಿ ಅಳುವುದನ್ನು ನೋಡಿ ಗೌರಿಯೂ ಅಳತೊಡಗಿದಳು. ಖಾದರ್ಬೀ ಮತ್ತು ಅಲ್ಲಾಭಕ್ಷಿ ಇಬ್ಬರೂ “ಇಂಥಾ ವಕ್ತನ್ಯಾಗಾ ಒಬ್ರಿಗೊಬ್ರು ಆಗಬೇಕು. ನಿಮ್ಗೆ ಮನೆಗ್ ಮುಟ್ಸೊ ಜಿಮ್ಮೆದಾರಿ ಹಮಾರ ಹೈ. ಚಿಂತಾ ಮತ್ ರ್ನಾ ಬೆಹೆನ್. ಹಮ್ ತುಮಾರ ಸಾತ್ ಚಲೇಂಗೆ” ಅಂತ ಸಮಾಧಾನ ಹೇಳುತ್ತಾ ಸಂತೈಸುತ್ತಾ ಧೈರ್ಯ ತುಂಬತೊಡಗಿದರು.
ನಂತರ ಈ ಜಾಗ ಅಷ್ಟೊಂದು ಸುರಕ್ಷಿತವಲ್ಲವೆಂದು ಸ್ವಲ್ಪ ಮುಂದೆ ಹೋದರೆ ಅಲ್ಲೊಂದು ಡಾಬಾ ಇದ್ದು ಇವತ್ತೊಂದು ರಾತ್ರಿ ಅಲ್ಲಿ ಕಳೆದು, ಮುಂದಿನದು ನಾಳೆ ನೋಡಿದರೆ ಆಯಿತೆಂದು ಅಲ್ಲಾಭಕ್ಷಿಯು ಎಲ್ಲರನ್ನೂ ಅಲ್ಲಿಂದ ಹೊರಡಿಸಿಕೊಂಡು ಹೊರಡುತ್ತಿರುವಾಗಲೇ ಎದುರಿನಲ್ಲಿ ಮಗನನ್ನು ಕೈಕಾಲು ಕಟ್ಟಿ ಹೆಗಲ ಮೇಲೆ ಹೊತ್ತು ಬರುತ್ತಿದ್ದ ಗಾದಿಲಿಂಗ ಕಾಣಿಸಿಕೊಂಡದ್ದೆ ಎಲ್ಲರ ಮುಖಗಳಲ್ಲೂ ಸಮಾಧಾನದ ಗೆರೆಯೊಂದು ಮೂಡತೊಡಗಿತು. ಮಾದೇವಿಗೆ ಮಗನ ಮೇಲಿನ ಮಮತೆಯೊಂದು ಕಡೆಯಾದರೆ ಕಾಡಿಸಿದನೆಂಬ ಸಿಟ್ಟೊಂದು ಕಡೆ! ಇಂಥಾ ಮಿಶ್ರಭಾವ ಹೊತ್ತ ಮಾದೇವಿಯು ಕೂಡಲೇ ಓಡುತ್ತಾ ಹೋಗಿ ಗಂಡನ ಹೆಗಲ ಮೇಲಿನ ಜೀವದ ಮಗನನ್ನು ಅನಾಮತ್ತಾಗಿ ತನ್ನ ತೋಳುಗಳಿಗೆ ವರ್ಗಾಯಿಸಿಕೊಂಡವಳೇ ನೆಲದ ಮೇಲೆ ಕೂತು ಅವನ ಕೈಕಾಲುಗಳಿಗೆ ಕಟ್ಟಿದ್ದ ಕಟ್ಟನ್ನು ಬಿಚ್ಚಲು ತೊಡಗಿದಳು.
ಕೂಡಲೇ ಗಾದಿಯು, “ಬಿಚ್ಚಬೇಡ ಮಾದೇವಿ, ಮತ್ತೇ ಓಡಿಬಿಟ್ಟಾನು… ಬುದ್ಧಿ ಬರಲಿ ಈ ಕಳ್ನನ್ಮಗನಿಗೆ… ಈ ಸಲ ಓಡಿಹೋದ್ರೆ ನನ್ ಕೈಲಿ ಮಾತ್ರ ಅವನ್ನ ಹಿಡಿಯೋಕಾಗಂಗಿಲ್ಲ ಮತ್ತೇ.” ತನ್ನ ಕಾಲಿನಿಂದ ಮಗನ ಬೆನ್ನಿಗೊಮ್ಮೆ ತಿವಿಯುತ್ತಾ ನುಡಿದ.
ಅಲ್ಲಾಭಕ್ಷಿಯು “ಯೇ ಬಿಚ್ಚಲಿ ಬಿಡು ಗಾದಿ. ಹಮ್ ಹೈ ನಾ? ಅದೆಂಗ ಓಡಿಹೋಗ್ತಾನೆ. ಜರ ಹಮ್ ಬಿ ದೇಖೇಂಗೆ…” ಎಂದುತ್ತರಿಸುತ್ತಾ, ದೊರೆಯತ್ತ ತಿರುಗಿ “ಕ್ಯಾರೇ ಬೇಟೆ ನಮ್ದು ಮಾತ್ ಕೇಳ್ತಿ? ನಹೀತೋ ನಿನ್ನ ಇಲ್ಲೆ ಬಿಟ್ಟು ಚಲೆ ಜಾತೇ ಹಂ. ಹುಲಿ ಗಿಲಿ ತಿಂದಬಿಡ್ತೆöÊತೆ ತುಮ್ಕೋ…” ಅಂದದ್ದಕ್ಕೆ ದೊರೆಯು ಕಣ್ಣೀರು ಒರೆಸಿಕೊಳ್ಳುತ್ತಾ “ಹೂಂ… ಇನ್ನೊಂದಪ ಮಾಡಂಗಿಲ್ಲ. ನೀವೇಳ್ದಂಗೇ ಕೇಳ್ತೀನಿ…ಹೂಂಹೂಂಹೂಂ…” ಅಳುವನ್ನು ಹಾಗೇ ಮುಂದುವರಿಸಿದ್ದ.
“ನಿನಗಿದೆಲ್ಲಾ ಗೊತ್ತಾಗಲ್ಲ ಭಕ್ಷಿಯಣ್ಣ. ಬರಿ ನಾಟ್ಕ ಮಾಡ್ತಾನಾ… ಬಹುತ್ ಬದ್ಮಾಷ್ ಐದಾನ್ ಇವ್ನು… ಬಿಟ್ರೆ ಕೈಗ್ ಸಿಗ್ದಂಗೆ ಓಡೋಗಿಬಿಡ್ತಾನೆ…”
“ತೂ ಚಿಂತಾ ಮತ್ ಕರೋ. ಹಮ್ ಹೈನಾ ಡೂಂಡ್ಕೆ ಹುಠಾಕೆ ಲಾಯೇಂಗೆ. ಕಿದರ್ ಜಾತಾ ಹೈ ಸಾಲ ಹಮ್ ಬಿ ಏಕ್ ಬಾರ್ ದೇಖೇಂಗೆ.”
ಈ ಮಾತುಕತೆಗಳ ನಡುವೆಯೇ ಮಾದೇವಿಯು ದೊರೆಯ ಕೈಕಾಲುಗಳಿಗೆ ಕಟ್ಟಿದ್ದ ಕಟ್ಟುಗಳನ್ನೆಲ್ಲಾ ಬಿಚ್ಚಿ “ಎಂಗ್ ಹುಟ್ಟಿಯೋ ನನ್ ಹೊಟ್ಯಾಗ. ಏಟೊಂದು ಹೊಟ್ಟೆ ಹುರುಸ್ತೀಯಾ… ನಿಂಗೇನಾದ್ರೂ ಆದ್ರೆ ಎಂಗೋ ತಡಕಂಬ್ಲಿ… ಅವತ್ತೇನೋ ಒಂದಿನ ಹಂದಿಮರಿ ಹಿಡ್ಕೊಂಡ್ ಬಂದಿ… ಮತ್ತೊಂದ್ ದಿನ ಹಾವಿನ ಮರಿ ಹಿಡ್ದಿ… ಇನ್ನೊಂದಿವ್ಸ ಗಣಿತ ಮೇಡಮ್ಮೋರ ಜಡೆ ಕೊಯ್ದಿ… ಚಿದುಗಮುಂಡೆಮಗನೆ… ಇನ್ನೂ ಏನೇನ್ ಮಾಡ್ಬೇಕು ಅನ್ಕೊಂಡಿಯೋ…” ಮುಂತಾಗಿ ಬೈಯುತ್ತಾ ಬರುತ್ತಿದ್ದ ಸಿಟ್ಟಿನಲ್ಲಿ ಮಗನ ತಲೆಗೆ ಎರಡು ಮೊಟುಕಿದ ಮರುಕ್ಷಣವೇ ಕಕ್ಕುಲಾತಿಯಿಂದ ಗಟ್ಟಿಯಾಗಿ ತಬ್ಬಿ ಲೊಚಲೊಚನೆ ಅವನ ಕೆನ್ನೆಯನ್ನೆಲ್ಲಾ ಮುದ್ದಿಸತೊಡಗಿದಳು. ಮಗಳು ಗೌರಿಯೂ ಹಿಂದಿನಿಂದ ತನ್ನ ಎಳೆಯ ತೋಳುಗಳಿಂದ ತಾಯಿಯ ಕೊರಳ ಬಳಸಿ ಬೆನ್ನಿಗೆ ಆತು ನಿಂತಳು. ತಾಯಿಹೃದಯದ ಮಮತೆಯ ಕಂಡ ಎಲ್ಲರ ಕಂಗಳೂ ತೇವಗೊಂಡಿದ್ದವು. ಅಲ್ಲಿಂದ ನಿಧಾನಕ್ಕೆ ಎಲ್ಲರೂ ಡಾಬಾದ ಹತ್ತಿರಕ್ಕೆ ತೆರಳತೊಡಗಿದರು.
***
ವಿಶಾಲವಾದ ರಸ್ತೆಯ ಮೇಲೆ ಯಾವುದೇ ಅಡೆತಡೆಯಿಲ್ಲದೆ ಟೆಂಪೋ ಮುನ್ನುಗ್ಗುತ್ತಿತ್ತು. ಹೊಸದಾಗಿ ನಿರ್ಮಾಣಗೊಂಡಿದ್ದ ವಿಶಾಲವಾದ ರಸ್ತೆ ತಗ್ಗುದಿನ್ನೆಗಳಿಂದ ಮುಕ್ತವಾಗಿತ್ತು. ಅದಾಗಲೇ ಸುಮಾರು ದೂರ ಕ್ರಮಿಸಿತ್ತು. ಮಾದೇವಿಯ ಕಣ್ಣುಗಳಿಂದ ಕಂಬನಿ ಸುರಿಯುವುದು ಇನ್ನೂ ನಿಂತಿರಲಿಲ್ಲ. ಸಮಾಧಾನ ಮಾಡಿಕೊಳ್ಳುವಂತೆ ಪಕ್ಕದಲ್ಲೇ ಕೂತಿದ್ದ ಗಾದಿಲಿಂಗ ಹೆಂಡತಿಯ ಬೆನ್ನು ನೇವರಿಸುತ್ತಾ ಸಂತೈಸುತ್ತಿದ್ದ. ಯಾವ ಸಂತೈಕೆಗಳೂ ಮಾದೇವಿಯ ಕಂಬನಿಯನ್ನು ತುಡಿಯುವಷ್ಟು ಶಕ್ತವಾಗಿರಲಿಲ್ಲ. ಎಷ್ಟು ಬೇಡವೆಂದು ತಡೆದುಕೊಂಡರೂ ಪಾರಜ್ಜಿಯು ತೇವಗೊಳ್ಳುತ್ತಿದ್ದ ತನ್ನ ಕಣ್ಣುಗಳನ್ನು ಮತ್ತು ಸೋರುತ್ತಿದ್ದ ಮೂಗನ್ನೂ ಸೆರಗಿನ ಅಂಚಿನಿಂದ ಮತ್ತೆಮತ್ತೆ ಒರೆಸಿಕೊಳ್ಳುತ್ತಿತ್ತು. ಗಂಡಸಾಗಿದ್ದಕ್ಕೋ ಏನೋ ಎದೆಯಲ್ಲಿ ಕೆಂಡದಂಥಾ ನೋವಿದ್ದರೂ ಶಂಕ್ರಜ್ಜ ಮಾತ್ರ ಹಿಮದಂತೆ ತಣ್ಣಗೆ ಕೂತಿದ್ದ.
“ನಿನಗ ಸರಿಯಾದ ಜಾಗ ಖೂನೈತೇನಪಾ ಭಕ್ಷಿ?”
“ಅಚ್ಚಿ ತರಾಸೆ ಜಾಂತಿ ಹೂಂ…ಶಂಕ್ರಜ್ಜ.. ಸೀದಾ ಉಸೀ ಜಗೇ ಪೇ ಹಿ ಗಾಡಿ ಕಡಾ ಕರ್ದೂಂಗಾ. ಟೀಕ್ ಹೈ?”
“ಏನೋಪಾ ನಿನ ಮಾತೇ ಅರ್ಥಾಗೊಲ್ವು ನನಗ. ಜಲ್ದಿ ನೆಡಿಪಾ…”
“ಎಲ್ಲಾ ಹೊಸ ರಸ್ತೆ ಮಾಡ್ಯಾರ ಶಂಕ್ರಜ್ಜ. ಲಾಕ್ಡೌನ್ ಕೆ ಬಾದ್ ರಾಸ್ತಾಕಾ ಕಾಮ್ ಫಿರ್ ಶುರು ಹೋಗಯಾ… ರಾಸ್ತಾ ಭೀ ಹಚ್ಚಿ ಹೈ… ಜಲ್ದಿ ಹಿ ಪೌಂಚ್ ಜಾಯೇಂಗೆ.”
ಗಾಡಿಯು ಮತ್ತಷ್ಟು ವೇಗ ಪಡೆದುಕೊಂಡು ಮುನ್ನುಗ್ಗತೊಡಗಿದಂತೆ. ಬೀಸುಗಾಳಿಯ ಸದ್ದು ಜೋರಾಗಿ ಟೆಂಪೋದೊಳಗಿನ ಮೌನ ಮತ್ತಷ್ಟು ಸಾಂದ್ರಗೊಳ್ಳತೊಡಗಿತು…
***
ಡಾಬಾದ ಹೆಂಚಿನ ನೆರಳಲ್ಲಿ ವಿಶ್ರಮಿಸಿದ್ದವರಿಗೆ ಮುಂಜಾನೆ ಚುಮುಚುಮು ಚಳಿಗೆ ಬೇಗನೇ ಎಚ್ಚರವಾಗಿತ್ತು. ಅಲ್ಲಾಭಕ್ಷಿ ಮತ್ತು ಗಾದಿಲಿಂಗ ಇಬ್ಬರೂ ನಸುಕಿನ ಚಹಾ ಮುಗಿಸಿ ಮಾತಿಗೆ ಕೂತಿದ್ದಾಗ ಮಾದೇವಿಯು ನಿಧಾನಕ್ಕೆ ಎಚ್ಚರಗೊಂಡಳು. ಮಕ್ಕಳಿಬ್ಬರು ಇನ್ನೂ ನಿದ್ರೆಯಲ್ಲಿ ಇದ್ದರು. “ಎದ್ದು ಬಿರಬರ್ನೆ ರೆಡಿಯಾಗಿ ಎಲ್ರೂ… ಜಲ್ದಿ ಊರು ಸರ್ಕಂಬಿಡಾಣ.” ಗಾದಿಲಿಂಗನ ಮಾತಿಗೆ ಎಲ್ಲರೂ ತರಾತುರಿಯ ಸಿದ್ಧತೆ ನಡೆಸಿದರು. ಮಕ್ಕಳನ್ನು ನಿದ್ರೆಯಿಂದ ಎಚ್ಚರಿಸಲು ಹೋದ ಮಾದೇವಿ ಮತ್ತು ಖಾದರಬೀ ಇಬ್ಬರಿಗೂ ಆಘಾತವೇ ಕಾದಿತ್ತು. ದೊರೆಯ ಮೈ ಕೆಂಡದುಂಡೆಯಾಗಿತ್ತು. ತೀವ್ರ ಜ್ವರದಿಂದ ಬಳಲುತ್ತಿದ್ದ ಮಗನ ಅವಸ್ಥೆಯನ್ನು ಕಂಡು ತನ್ನ ಮಗನಿಗೆ ಎಲ್ಲಿ ಕೊರೋನಾ ಒಕ್ಕರಿಸಿತೋ ಎಂಬ ದಿಗಿಲಿಗೆ ಮಾದೇವಿಯ ಎದೆ ಬಿರಿಯುವುದೊಂದೇ ಬಾಕಿ ಇತ್ತು. ಮಾದೇವಿ ಇಲ್ಲದ್ದನ್ನೆಲ್ಲಾ ಕಲ್ಪಿಸಿಕೊಂಡು ರೋದಿಸತೊಡಗಿದಳು. ಒಂದು ವೇಳೆ ಕೊರೋನಾ ಬಂದು ಸತ್ತರೆ ಮುಖಾನೂ ತೋರ್ಸಂಗಿಲ್ಲ… ಹೆಣ ಕೂಡ ಸಿಗಂಗಿಲ್ಲ… ಮಣ್ಣು ಮಾಡೋಕೂ ಬಿಡಂಗಿಲ್ಲ ಅನ್ನೋದನ್ನು ಟೀವಿಯಲ್ಲಿ ನೋಡಿದ್ದು ನೆನಪಾಗಿ ಮತ್ತಷ್ಟು ದಿಗಿಲುಗೊಂಡಳು. ಅದರಲ್ಲೂ ಒಂದೇ ಕುಣಿಯಲ್ಲಿ ಹತ್ತಾರು ಜನರ ಶವಗಳನ್ನು ಎತ್ತೆತ್ತಿ ಬಿಸಾಕಿ ಮಣ್ಣು ಮಾಡುತ್ತಿದ್ದ ದೃಶ್ಯಗಳಂತೂ ಎಂಥವರ ಎದೆಗಳನ್ನೂ ಝಲ್ ಎನ್ನುವಂತೆ ನಡುಗಿಸಿಬಿಡುತ್ತಿದ್ದವು.
ಖಾದರ್ಬೀ ಮತ್ತುಳಿದವರು ಎಷ್ಟೇ ಸಮಾಧಾನ ಹೇಳಿದರೂ ಮಾದೇವಿಯ ದುಃಖ ನಿಲ್ಲಲಿಲ್ಲ. ಗಾದಿಲಿಂಗನಿಗೂ ಇನ್ನಿಲ್ಲದ ಆತಂಕ ಶುರುವಾಗಿತ್ತು. ಹೇಗಾದರೂ ಮಾಡಿ ಆದಷ್ಟು ಬೇಗನೆ ಮನೆ ಸೇರಿದರೆ ಮಗನ ಜ್ವರಕ್ಕೆ ಮದ್ದು ಮಾಡಿಸಬಹುದೆಂದು ತರಾತುರಿಯಿಂದ ಊರಿನತ್ತ ನಡೆಯತೊಡಗಿದರು. ಈಗಾಗಲೇ ಎಲ್ಲರ ಕಾಲುಗಳೂ ನೋವಿನಿಂದ ಸೆಳೆಯಲಾರಂಭಿಸಿದ್ದವು. ಅಸ್ವಸ್ಥಗೊಂಡಿದ್ದ ದೊರೆಯನ್ನು ಅಲ್ಲಾಭಕ್ಷಿಯು ತನ್ನ ಹೆಗಲಿನಲ್ಲಿ ಹೊತ್ತು ಬಿರಬಿರನೆ ಹೆಜ್ಜೆ ಹಾಕತೊಡಗಿದ್ದ. ಅಲ್ಲಾಭಕ್ಷಿಗೆ ಬಳಲಿಕೆಯಾದಾಗ ಗಾದಿಲಿಂಗನೂ, ಗಾದಿಲಿಂಗನಿಗೆ ಬಳಲಿಕೆಯಾದಾಗ ಮಾದೇವಿಯೂ, ನಂತರ ಖಾದರ್ಬೀಯೂ ಹೀಗೆ ಒಬ್ಬರಿಗೊಬ್ಬರು…. ಅಲ್ಲಲ್ಲಿ ಕೂತು, ಯಾರೋ ಕೊಟ್ಟದ್ದು ತಿಂದು ನೀರು ಕುಡಿದು ದಣಿವಾರಿಸಿಕೊಳ್ಳುತ್ತಾ ದುಗುಡವನೊತ್ತಿ ನಡೆಯತೊಡಗಿದರು. ಗೌರಿಯು ಪದೇ ಪದೇ ಕಾಲುನೋವೆಂದು ಅಳುತ್ತಾ ಕುಂಟುತ್ತಾ ಅಮ್ಮನ ಸೆರಗು ಹಿಡಿದು ಓಡುತ್ತಿತ್ತು.
ಹೀಗೆ ಎಷ್ಟೂ ಅಂತಾ ನಡೆದಾರು? ಬೇಸಿಗೆ ಕಾಲದ ಮಟ ಮಟ ಮಧ್ಯಾಹ್ನದ ಸೂರ್ಯ ಆಗಲೇ ನೆತ್ತಿಯ ಮೇಲೆ ಕುಳಿತು ತಾಂಡವನೃತ್ಯ ಮಾಡತೊಡಗಿದ್ದ. ಎಲ್ಲರ ಮುಖಗಳೂ ಕಳಾಹೀನಗೊಂಡಿದ್ದವು. ಮೈಯೆಲ್ಲಾ ಬೆವರು. ಉಪ್ಪುಪ್ಪು. ಎದೆಬಡಿತ ಜೋರಾಗಿ ಮೈಯೊಳಗಿನ ಶಕ್ತಿಯೆಲ್ಲಾ ಉಡುಗಿ ಕಾಲುಗಳಲ್ಲೆಲ್ಲಾ ಬೊಬ್ಬೆಗಳೆದ್ದು ಇನ್ನೊಂದು ಹೆಜ್ಜೆ ಮುಂದಿಡಲಾರದಷ್ಟು ನಿತ್ರಾಣಕ್ಕೆ ಬಿದ್ದು, ಕಣ್ಣಳತೆಯಲ್ಲೇ ಕಾಣುತ್ತಿದ್ದ ಪಾಳುಕಟ್ಟಡವೊಂದರ ನೆರಳಲ್ಲಿ ವಿಶ್ರಮಿಸುವುದೆಂದು ನಿರ್ಧರಿಸಿ ಅತ್ತ ಸಾಗತೊಡಗಿದರು.
ಸಂಜೆಯಾದರೂ ಮಗ ನಿಸ್ತೇಜನಾಗಿ ಬಿದ್ದದ್ದು ನೋಡಿ ಎಲ್ಲರೂ ಅತಂಕಕ್ಕೀಡಾದರು. ದೊರೆಯ ಇಡೀ ದೇಹದಲ್ಲಿ ಒಂದು ಕದಲಿಕೆಯೂ ಕಂಡುಬರಲಿಲ್ಲ. ಅಕ್ಕಪಕ್ಕದಲ್ಲೆಲ್ಲೂ ಡಾಕ್ಟರೂ ಇಲ್ಲ, ದವಾಖಾನೆಯೂ ಇಲ್ಲ. ಮಾದೇವಿಯು ತನ್ನ ಕೈಯ ಬಳೆಯನ್ನು ಒಡೆದು ಚೂರು ಮಾಡಿ ಕಾಸಿ ಚುಟುಕಿ ಇಟ್ಟರೂ ಒಂದಿನಿತೂ ಅಲುಗಾಡಲಿಲ್ಲ. ಗೌರಿಯು ಕಾಲು ನೋವು ಅಂತ ರೋದಿಸತೊಡಗಿತ್ತು. “ವತನ್ ಥಂಡಾ ಲಗರಹಾ ಹೈ ಜೀ” ಅಂತ ಅತಂಕದಿಂದ ಖಾದರ್ಬೀಯು ಅಲ್ಲಾಭಕ್ಷಿಯ ಪಕ್ಕಕ್ಕೆ ಬಂದು ಕಿವಿಯಲ್ಲಿ ಮೆತ್ತಗೆ ಉಸಿರಿದಳು. ಹೆಂಡತಿಯ ಮಾತು ಕೇಳಿ ಅಲ್ಲಾಭಕ್ಷಿಯ ಮೈಯ್ಯಲ್ಲಿ ತಣ್ಣನೆಯ ಸೆಳಕೊಂದು ಹಾದುಹೋದಂತಾಗಿ ಬೆವೆತುಬಿಟ್ಟ. ಇದ್ದೊಬ್ಬ ಮಗ ಕೈಬಿಟ್ಟುಹೋದನೆಂಬ ವಾಸ್ತವ ಪರಿಸ್ಥಿತಿಯ ಅರಿವಾಗುತ್ತಿದ್ದಂತೆಯೇ ಗಾದಿಲಿಂಗನ ಮುಖವೂ ಕಪ್ಪಿಟ್ಟಿತು. ಅವರೆಲ್ಲರ ಮುಖಗಳೇ ಕಠೋರ ವಾಸ್ತವವೊಂದÀನ್ನು ಸೂಚಿಸುತ್ತಿದ್ದವು. ಇದರ ಸೂಚನೆಯನ್ನರಿತೋ ಏನೋ, ಇದ್ದಕ್ಕಿದ್ದಂತೆ ಮಗನನ್ನು ಗಾಢವಾಗಿ ತಬ್ಬಿ “ಮಗನೇ ಕೊನೆಗೂ ನನ್ನ ಬಿಟ್ಟು ಹೋದೆಯಾ ಕಂದಾ… ನಿನಗಿದು ನ್ಯಾಯವೇನೋ ಮಗನೇ…” ಮಾದೇವಿ ಎದೆ ಹೊಡೆದುಕೊಳ್ಳುತ್ತಾ… ಮುಗಿಲೇ ಕವಚಿ ಬಿದ್ದಂತೆ ರೋದಿಸತೊಡಗಿದಳು.
ಆ ದಾರಿ ಹಿಡಿದು ಹೋಗುತ್ತಿದ್ದ ಮತ್ತಷ್ಟು ಜನ ವಲಸಿಗರು ಈ ಅಪರಿಚಿತರ ನೋವಿನಲ್ಲಿ ಭಾಗಿಯಾದರು. ಅವರ ನೋವು ತಮ್ಮ ನೋವೂ ಸಹ ಎನ್ನುವಂತೆ ಮರುಗಿದರು. ನಾಲ್ಕು ಸಮಾಧಾನದ ಮಾತುಗಳನ್ನಾಡಿದರು. ಕಾಳಜಿ ಕಕ್ಕುಲಾತಿ ತೋರಿದರು. ತಮಗೆ ಸರಿಯೆನಿಸಿದ ಸಲಹೆ ಸೂಚನೆಗಳನ್ನಿತ್ತರು. ಯಾರೋ ಮಾಡಿದ ಪ್ರಮಾದಕ್ಕೆ ಮತ್ತಾರೋ ಶಿಕ್ಷೆಯನ್ನನುಭವಿಸಿದ ಘಟನೆಗೆ ಮೂಕ ಸಾಕ್ಷಿಯಾದರು.
ಶವವನ್ನು ಮನೆಗೆ ತೆಗೆದುಕೊಂಡು ಹೋಗಲು ವಾಹನಗಳ ಸೌಲಭ್ಯವಿಲ್ಲದೆ ಅನ್ಯ ದಾರಿ ಕಾಣದೆ ದೊರೆಯ ದೇಹವನ್ನು ಹೆದ್ದಾರಿ ಪಕ್ಕದ ಆ ಪಾಳುಬಿದ್ದ ಕಟ್ಟಡದ ಮುಂದೆಯೇ ವಿಧಿಯಿಲ್ಲದೆ ಮಣ್ಣುಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಯಿತು. ಮಾದೇವಿಯು ಎದೆಗಟ್ಟಿ ಮಾಡಿಕೊಂಡು ಹಿಡಿ ಮಣ್ಣು ಹಾಕುತ್ತಾ “ದೊರೆಯಂಗೆ ಬಾಳಲಿ ಅಂತ ನಿಂಗೆ ದೊರೆ ಅಂತ ಹೆಸರಿಟ್ಟಿವಲ್ಲೋ ಮಗನೇ…” ಇನ್ನೂ ಮುಂತಾಗಿ ಗೋಗರೆದು ಅತ್ತಳು.
***
ವೇಗವಾಗಿ ಓಡುತ್ತಿದ್ದ ಗಾಡಿಯನ್ನು ಅಲ್ಲಾಭಕ್ಷಿ ನಿಧಾನಗೊಳಿಸಿದ. ದೊರೆಯ ದೇಹವನ್ನು ಮಣ್ಣುಮಾಡಿದ ಜಾಗದ ಬಗ್ಗೆ ಅವನಲ್ಲಿ ಗೊಂದಲಗಳು ಶುರುವಾಗಿದ್ದವು. ಬಹುಶಃ ಇನ್ನೊಂದೆರಡು ಕಿಲೋಮೀಟರ್ ದೂರ ಇರಬಹುದೆಂದು ಭಾವಿಸಿ ಅಲ್ಲಿಗೂ ಗಾಡಿಯನ್ನು ಚಲಾಯಿಸಿಕೊಂಡು ಹೋಗಿ ಬಂದ. ಪ್ರಯೋಜನವಾಗಲಿಲ್ಲ. ಗೊಂದಲಗಳು ಹಾಗೇ ಮುಂದುವರಿದವು. ಅವನಲ್ಲಿನ ಗೊಂದಲಗಳಿಗೂ ಕಾರಣಗಳಿದ್ದವು. ಕೇವಲ ಕೆಲವೇ ದಿನಗಳಲ್ಲಿ ಅಲ್ಲಿನ ಸಂಪೂರ್ಣ ಚಿತ್ರಣವೇ ಬದಲಾಗಿ ಹೋಗಿತ್ತು. ದ್ವಿಪಥ ರಸ್ತೆಯು ಚತುಷ್ಪಥ ರಸ್ತೆಯಾಗಿ ಬದಲಾಗಿತ್ತು. ಅಲ್ಲಾಭಕ್ಷಿಯು ನಿಧಾನಕ್ಕೆ ಗಾಡಿಯನ್ನು ಬದಿಗೆ ಹಾಕಿ ಪರಿಶೀಲಿಸತೊಡಗಿದ. ಹೆದ್ದಾರಿ ಬದಿಯ ಪಾಳುಬಿದ್ದ ಕಟ್ಟಡದ ಲವಲೇಶವೂ ಕಾಣದೆ ನಿಶ್ಶೇಷವಾಗಿತ್ತು. ಹೊಸದಾಗಿ ನಿರ್ಮಾಣಗೊಂಡಿದ್ದ ಹೆದ್ದಾರಿಯ ತುಂಬಾ ವಾಹನಗಳ ದಟ್ಟಣೆಯ ಓಡಾಟ ಅವಿರತವಾಗಿ ಮುಂದುವರಿದಿತ್ತು. ಕಳೆದ ಕೆಲವೇ ತಿಂಗಳ ಹಿಂದೆ ಒಂದು ಇರುವೆಯೂ ಕಾಣದಂಥಾ ರಸ್ತೆಯ ಮೇಲೆ ಇಂದು ಒಂದು ಇರುವೆಯೂ ಕಾಲಿಡಲು ಆಗದಷ್ಟು ವಾಹನಗಳ ಸಂಚಾರ! ಅಲ್ಲಾಭಕ್ಷಿಯಲ್ಲಿ ಉಂಟಾಗಿದ್ದ ಅದೇ ಗೊಂದಲಗಳು ಗಾದಿಲಿಂಗನಲ್ಲೂ ಉಂಟಾಗಿದ್ದವು. ಮಗನ ಸಮಾಧಿಯನ್ನು ಕಾಣದೆ ಗಾದಿಲಿಂಗನೂ ಕಳವಳಗೊಂಡ. ಇವರಿಬ್ಬರ ಹಾವಭಾವ ತವಕ ತಲ್ಲಣಗಳನ್ನು ಗಮನಿಸಿದ ಮಾದೇವಿಗೂ ಆತಂಕ ಶುರುವಾಗಿತ್ತು. ನಿಧಾನಕ್ಕೆ ಗಮನಿಸತೊಡಗಿದಳು. ಹೊಸದಾಗಿ ರಸ್ತೆಗಳು ವಿಸ್ತರಿಸಿದ್ದು ಅರಿವಿಗೆ ಬಂದು ತಲ್ಲಣಗೊಂಡಳು. ಶಂಕ್ರಜ್ಜನಂತೂ ಏನೂ ತಿಳಿಯದೆ ಗಲಿಬಿಲಿಗೊಂಡು ಕಣ್ಣಾಡಿಸತೊಡಗಿದ್ದ.
“ಗಾದೀ… ಸಮಾಧಿಕೇ ಊಪರ್ ಹೀ ರಸ್ತೆ ಹಾದು ಹೋಗ್ಬಿಟ್ಟೆöÊತೆ. ಅಬ್ ಸಮಾಧಿಗೆ ಸಿಗೋದು ನ ಮುಮ್ಕಿನ್ ಲಗ್ ರಹಿ ಹೈ.” ಅಲ್ಲಾಭಕ್ಷಿಯು ಗಾದಿಲಿಂಗನ ಪಕ್ಕದಲ್ಲೇ ನಿಂತು ಅಡಿದ ಮಾತು ಅದ್ಯಾವ ಪರಿಯಲಿ ತಾಯಿಯ ಹೃದಯಕ್ಕೆ ತಾಕಿತೋ… ಅವಳಿಗೂ ಅದು ಮನದಟ್ಟಾಗಿ ಹೋಯಿತು. ಕೂಡಲೇ ಆತುರಾತುರವಾಗಿ ಟೆಂಪೋದಿಂದ ಕೆಳಕ್ಕಿಳಿದವಳೇ ರಸ್ತೆಯ ಮೇಲೆ ಕುಸಿದು ಎದೆ ಎದೆ ಬಡಿದುಕೊಳ್ಳತೊಡಗಿದಳು. ಅಲ್ಲಾಭಕ್ಷಿ ಗಾದಿಲಿಂಗ ಅವಳಿಗೆ ಸಮಾಧಾನದ ನಾಲ್ಕು ಮಾತುಗಳನ್ನೂ ಹೇಳದಷ್ಟು ಅಸಹಾಯಕರಾದರು. ಎಲ್ಲರ ಕಣ್ಣಂಚುಗಳೂ ತೇವಗೊಂಡಿದ್ದವು. “ಅಯ್ಯೋ… ಮಗನೇ ಏನು ಕರ್ಮಾನೋ ನಂದು. ವರುಷದ ತಿಥಿ ಪೂಜೆಗೂ ಸಿಗದಂಗಾಗಿಬಿಟ್ಟೆಲ್ಲೋ… ಹೆಂಗೋ ತಡಕೊಳ್ಳಿ ಈ ಸಂಕಟಾನಾ… ದೇವ್ರೇ ವೈರಿಗೂ ಇಂಥಾ ನೋವು ಕೊಡಬ್ಯಾಡಪ್ಪೋ ತಂದೆ… ನನಗಿನ್ಯಾರೋ ದಿಕ್ಕು ಮಗನೇ…” ಹಣೆ ಹಣೆ ಚಚ್ಚಿಕೊಳ್ಳುತ್ತಾ ಅಳುತ್ತಾ ನೆಲ ಬಡಿಯುತ್ತಾ ಬಿದ್ದು ಹೊರಳಾಡತೊಡಗಿದಳು. ಮಗನ ಮುದ್ದುಮುಖ ಮತ್ತವನ ಚೇಷ್ಟೆಗಳು ತುಂಟತನಗಳೆಲ್ಲಾ ಸುರುಳಿ ಸುರುಳಿಯಾಗಿ ಸರಣಿಯೋಪಾದಿಯಲ್ಲಿ ಅವಳ ಕಣ್ಣೆದುರಲ್ಲೇ ಸುಳಿದಂತಾಗಿ ಮತ್ತಷ್ಟು ಬಿಕ್ಕಿಬಿಕ್ಕಿ ಅಳತೊಡಗಿದಳು. ತಾಯಿಯ ರೋದನೆಗೆ ಮಗಳು ಗೌರಿಯ ಅಳುವೂ ಜೊತೆಗೂಡುತ್ತಿತ್ತು.
ಶಂಕ್ರಜ್ಜ ಗಾದಿಲಿಂಗ ಪಾರಜ್ಜಿ… ಹಣೆಗೆ ಕೈ ಹಚ್ಚಿ ಕುಸಿದು ಕೂತರು. ಅಲ್ಲಾಭಕ್ಷಿಯು ಮಾತ್ರ ಈ ಕಾಲದ ವಿಡಂಬನೆಗೆ ಜೀವಂತ ಸಾಕ್ಷಿಯಾಗಿ ನಿಂತಿದ್ದ.