* ಪೂಜ್ಯ ಶ್ರೀ ಸಿದ್ಧೇಶ್ವರಸ್ವಾಮಿಗಳು, ವಿಜಾಪುರ
ಮಹಾದೇವನು ಮಾನವರಿಗೆ ನೀಡಿದ ಅಮೂಲ್ಯ ಕೊಡುಗೆ ಎಂದರೆ ಮಾತು, ನುಡಿ ಅಥವಾ ಭಾಷೆ. ಕಣ್ಣಿಗೆ ಕಾಣದ, ಕೈಗೆ ಎಟುಕದ, ಬುದ್ಧಿಗೆ ನಿಲುಕದ ವಸ್ತುವನ್ನು ಭಾಷೆಯು ಕಾಣಿಸಿಕೊಡುತ್ತದೆ. ಬ್ರಹ್ಮಪುತ್ರ, ಗಂಗೆ ಎಂದು ನುಡಿದಾಗ ಸುವಿಶಾಲ ಬ್ರಹ್ಮಪುತ್ರೆ, ಸಿಹಿನೀರಿನ ಗಂಗೆ ಮನೋನೇತ್ರದ ಮುಂದೆ ಪ್ರವಹಿಸುತ್ತಾಳೆ. ಹೀಗೆ ಭಾಷೆಯು ಪ್ರಪಂಚದ ಸಮಸ್ತ ವಸ್ತುಗಳನ್ನು ಕಣ್ಣಿಗೆ ಕಟ್ಟುವಂತೆ, ಮನಕ್ಕೆ ಮುಟ್ಟುವಂತೆ ಮಾಡುತ್ತದೆ!
ಅಜ್ಞಾನವನ್ನು ಬಂಧನ ಎನ್ನುವುದಾದರೆ ಭಾಷೆಯು ನಮ್ಮ ಬಂಧನವನ್ನು ಕಳೆಯುತ್ತದೆ, ಮುಕ್ತಿಯನ್ನು ಕರುಣಿಸುತ್ತದೆ. ನಾವು ಲಂಡನ್ ಪಟ್ಟಣವನ್ನು ನೋಡಿಲ್ಲ ಎಂದಿಟ್ಟುಕೊಳ್ಳೋಣ. ನೋಡಿದವರು ಅದನ್ನು ಅಚ್ಚುಕಟ್ಟಾಗಿ ವರ್ಣಿಸಿದರೆ ಲಂಡನ್ ಪಟ್ಟಣವನ್ನು ನೋಡಿದಷ್ಟೇ ಸಂತಸ ನಮ್ಮದಾಗುತ್ತದೆ.
ಭಾಷೆಯು ನಮ್ಮ ಅಜ್ಞಾನವನ್ನು ಹರಿದಂತೆ ಪರಿಮಿತಿಯನ್ನು ಕಳೆದುಬಿಡುತ್ತದೆ. ಉದಾ: ಹತ್ತು ಎಂದಾಗ ನಮ್ಮ ಮನಸ್ಸು ಹತ್ತರಷ್ಟಾಗುತ್ತದೆ. ನೂರು, ಸಾವಿರ, ಲಕ್ಷ ಎಂದಾಗ ಅಷ್ಟಷ್ಟು ವಿಸ್ತಾರವಾಗುತ್ತ ಹೋಗುತ್ತದೆ.
ನಾವು ನಮ್ಮಲ್ಲಿರುವ ವಸ್ತು, ಒಡವೆ ಎಲ್ಲವನ್ನು ಇನ್ನೊಬ್ಬರಿಗೆ ಕೈಯಿಂದ ಕೊಡಬಹುದು. ನಮ್ಮ ಅಂತರಂಗದಲ್ಲಿರುವ ಸುಮಧುರ ಭಾವನೆಗಳನ್ನು ಬೇರೆಯವರಿಗೆ ಕೊಡುವುದಕ್ಕೆ ಭಾಷೆ ಒಂದೇ ಸಮರ್ಥ ಸಾಧನ! ಮನದಲ್ಲಿರುವ ಅಮೂರ್ತವಾದ ಭಾವನೆಗಳು ಶಬ್ದದ ರೂಪವನ್ನು ಪಡೆದು ಹೊರಹೊಮ್ಮಿದಾಗ ನಮ್ಮ ಭಾವನೆಗಳು ಎಲ್ಲರಿಗೂ ಅರ್ಥವಾಗುತ್ತವೆ. ಇದು ಅರ್ಥಾವತರಣ!
ಪ್ರತಿಯೊಂದು ಶಬ್ದವೂ ಒಂದು ಕಲಶವಿದ್ದಂತೆ. ಅದರಲ್ಲಿ ಅಪಾರ ಅರ್ಥವಿದೆ. ಜ್ಞಾನಾಮೃತವೇ ತುಂಬಿದೆ! ‘ಕ’ ಎಂದರೆ ಸುಖ. ‘ಅಕ’ ಎಂದರೆ ದುಃಖ. ನಾಕ ಎಂದರೆ ದುಃಖವಿಲ್ಲದ್ದು! ಅದೇ ಸ್ವರ್ಗ! ಶಿವನೆಂದರೆ ಶಾಂತ, ವಿಷ್ಣುವೆಂದರೆ ವ್ಯಾಪಕ, ಬ್ರಹ್ಮನೆಂದರೆ ದೊಡ್ಡವ. ಭಗವಾನ್ ಎಂದರೆ ಸಂಪದವುಳ್ಳವ! ಶರೀರ, ಮನಸ್ಸು, ಬುದ್ಧಿ ಎಲ್ಲದರಲ್ಲೂ ಬೆಳಕಾಗಿ, ಚೇತನವಾಗಿ ವ್ಯಾಪಿಸಿರುವುದೇ ಆತ್ಮ! ಹೀಗೆ ಭಾಷೆಯ ವೈಭವವನ್ನು, ಮಹಿಮೆಯನ್ನು ಅರಿತು ಹಿತಮಿತವಾಗಿ ಬಳಸಿದರೆ ಅದು ಸತ್ಯಶಿವನ ದರ್ಶನಕ್ಕೆ, ಪರಶಾಂತಿಗೆ ಕಾರಣವಾಗುತ್ತದೆ. ಅದೇ ಜೀವನ್ಮುಕ್ತಿ. ಈ ಅರ್ಥದಲ್ಲಿ ಮಾತೆಂಬುದು ಜ್ಯೋತಿರ್ಲಿಂಗವಾಗಿದೆ!
[ಪೂಜ್ಯ ಸ್ವಾಮಿಗಳ ‘ಕಲ್ಯಾಣರಾಜ್ಯ’ ಪ್ರವಚನ ಸಂಕಲನದಿಂದ.
ಸಂಪಾದಕರು: ಡಾ|| ಶ್ರದ್ಧಾನಂದಸ್ವಾಮಿಗಳು.
ಸೌಜನ್ಯ: ಜ್ಞಾನಯೋಗ ಫೌಂಡೇಶನ್, ವಿಜಾಪುರ.]