ಅವತ್ತು ಕಪ್ಪುಬಣ್ಣಕ್ಕೆ ಭಯಂಕರ ಕೋಪ ಬಂದಿತ್ತು. ಭಯಂಕರ ಅಂದ್ರೆ ನಖಶಿಖಾಂತ ಅಂತಾರಲ್ಲ ಅಂಥದ್ದೊಂದು ಕೋಪ ಬಂದಿತ್ತು. ಆ ಊರಿನ ಜನರಿಗೆ ಕಪ್ಪುಬಣ್ಣವೆಂದರೆ ಆಗಿಬರುತ್ತಿರಲಿಲ್ಲ. ಅವರು ಆಗಾಗ ಕಪ್ಪುಬಣ್ಣವನ್ನು ಲೇವಡಿ ಮಾಡುತ್ತಿದ್ದರು. ಕೂಲಿ ಕೆಲಸಕ್ಕೆಂದು ಬರುವ ಕಪ್ಪಗಿನ ಹುಡುಗನನ್ನು `ಕರಿಯ’ ಅಂತ ಕರೆದು ನಗುತ್ತಿದ್ದರು. ಮಳೆಯ ಸಮಯ ಕರಿಮೋಡ ಆವರಿಸಿದಾಗಲೂ `ಥೂ ಹಾಳು ಮೋಡ’ ಅಂತ ನಿಂದಿಸುತ್ತಿದ್ದರು. ಕಾಗೆ ಕಾಣಿಸಿದರೂ ಅದನ್ನು ಬಹಳ ದೂರ ಓಡಿಸಿಕೊಂಡು ಹೋಗುತ್ತಿದ್ದರು. ಕಪ್ಪು ಮಣ್ಣು ಮೈಗೆ ತಾಕಿದ ಕೂಡಲೇ `ಛಿ! ಛೀ..’ ಅಂತ ಅಸಹ್ಯಪಟ್ಟುಕೊಳ್ಳುತ್ತಿದ್ದರು. ಇದೇ ಕಾರಣಕ್ಕೆ ಕಪ್ಪುಬಣ್ಣಕ್ಕೆ ಕೋಪಬಂದಿತ್ತು. ಅದಕ್ಕೆ ಸಾಕಷ್ಟು ನೋವೂ ಆಗಿತ್ತು. ಜನರಿಗಾಗಿ ನಾನು ಅಷ್ಟು ಕಷ್ಟಪಡುತ್ತಿದ್ದರೂ, ಸಹಾಯ ಮಾಡಿದ್ದರೂ ಅದನ್ನು ಅರ್ಥಮಾಡಿಕೊಳ್ಳದೆ ನನ್ನನ್ನೇ ಗೇಲಿ ಮಾಡುತ್ತಿದ್ದಾರಲ್ಲಾ – ಅಂತ ಅದರ ಸಿಟ್ಟು ಇಮ್ಮಡಿಯಾಗಿತ್ತು. `ಕಪ್ಪು ಬಣ್ಣವನ್ನು ಗೇಲಿಮಾಡುತ್ತೀರಲ್ಲ? ನಿಮಗೆ ಬುದ್ಧಿ ಕಲಿಸುತ್ತೇನೆ, ಇರಿ’ ಎಂದು ಮನಸ್ಸಲ್ಲೇ ಅಂದುಕೊಂಡು ಹಲ್ಲೂ ಕಡಿಯಿತು.
ಮಳೆಗಾಲವಾದರೂ ಮರುದಿನ ಇದ್ದಕ್ಕಿದ್ದಹಾಗೆ ಕಪ್ಪುಮೋಡ ಕಾಣಿಸಿಕೊಳ್ಳಲಿಲ್ಲ. ಮಳೆಯೂ ಸುರಿಯಲಿಲ್ಲ. ಮಳೆ ಇಲ್ಲದಿದ್ದರೂ ಸೊಂಪಾಗಿ ಹಸಿರು ಬೆಳೆಯುತ್ತಿದ್ದ ಕಪ್ಪು ನೆಲದಲ್ಲಿ ಹಸಿರೆಲ್ಲ ಸೊರಗಿ ಮಲಗಿತ್ತು. ಅಸಲಿಗೆ ಅಲ್ಲಿ ಕಪ್ಪು ಮಣ್ಣು ಇರಲೇ ಇಲ್ಲ. ಕಪ್ಪು ಮಣ್ಣಿಗೆ ಬದಲಾಗಿ ಕೆಂಪು ಬಣ್ಣದ ನಿಷ್ಫಲ ಮಣ್ಣಿತ್ತು. ದೂರದ ಊರಿನಿಂದ ಕೆಲಸಕ್ಕೆ ಬರುತ್ತಿದ್ದ ಕಪ್ಪು ಹುಡುಗರೂ ಅವತ್ತಿನಿಂದ ಕೆಲಸಕ್ಕೆ ಬರಲಿಲ್ಲ. ಅವರಿಲ್ಲದೆ ಆ ಊರಿನ ದಣಿಗಳ ಮನೆಯಲ್ಲಿ ಗಲೀಜಾದ ಪಾತ್ರೆ ಪಗಡೆಗಳೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದುಕೊಂಡವು. ದಿನಕಳೆದಂತೆ ಊರಿನ ಕೋಳಿಗಳೆಲ್ಲಾ ಕೆಂಪುಬಣ್ಣ ಅಥವಾ ಹಳದಿ ಬಣ್ಣಕ್ಕೆ ಬಣ್ಣ ಬದಲಾಯಿಸಿದವು. ಕಪ್ಪು ಬಣ್ಣದ ದನಕರುಗಳು, ನಾಯಿಬೆಕ್ಕುಗಳು ಎಲ್ಲೆಲ್ಲೋ ಕಳೆದುಹೋದವು. ಕಪ್ಪುಕೋಟು – ಕರಿಯಬೂಟು ಎಲ್ಲ ಬೆಳ್ಳಗಾದವು. ಕಾಗೆಗಳೇ ಕಣ್ಮರೆಯಾಗಿಬಿಟ್ಟವು. ಕಟ್ಟಿಗೆ ಸುಟ್ಟರೂ ಮಸಿ ಬರುತ್ತಿರಲಿಲ್ಲ. ಕಣ್ಣರೆಪ್ಪೆ ಕೂದಲ ಬಣ್ಣವೂ ಬೆಳ್ಳಗಾಯಿತು. ಕಣ್ಣೊಳಗಿನ ಕಪ್ಪು ಬಿಂದುವೂ ಮಾಯವಾಗಿ ಊರಿನ ಜನರು ವಿಕಾರವಾಗಿ ಕಾಣಲಾರಂಭಿಸಿದರು. ಅವರ ದೃಷ್ಟಿಯೂ ಕುಂಠಿತವಾಗತೊಡಗಿತು. ಬರಬರುತ್ತ ಆ ಊರಿನಲ್ಲಿ ಕತ್ತಲಾಗೋದೇ ನಿಂತುಹೋಯಿತು. ಅಚ್ಚರಿ ಅಂದ್ರೆ ಆ ಊರಿನಲ್ಲಿ ಕಪ್ಪು ಬಣ್ಣದ ಯಾವ ವಸ್ತುವೂ-ವ್ಯಕ್ತಿಯೂ-ವಿಚಾರವೂ ಇಲ್ಲದಂತಹ ವಿಚಿತ್ರ ಪರಿಸ್ಥಿತಿ ನಿರ್ಮಾಣವಾಯಿತು. ಊರಿಡೀ ಬರಗಾಲ ಹಬ್ಬಿ, ಭೂಮಿಯೆಲ್ಲ ಬಿರುಕುಬಿಡಲಾರಂಭಿಸಿತು. ಊರಿನಲ್ಲೆಲ್ಲೂ ನೀರಿನ ಸೆಲೆಯಾಗಲಿ, ಆಹಾರವಾಗಲಿ ಸಿಗದಾಯ್ತು. ಅನ್ನಾಹಾರವಿಲ್ಲದೆ ಜನರೆಲ್ಲ ತತ್ತರಿಸಿಹೋದರು.
ಊರಿನ ಹಿರಿಯರೊಬ್ಬರಿಗೆ ಈ ವಿಚಿತ್ರ ಸಮಸ್ಯೆಗೆ ಕಾರಣವೇನೆಂಬುದು ನಿಧಾನವಾಗಿ ಅರಿವಾಯಿತು. ಅವರು ಊರಿನ ಜನರೆಲ್ಲರನ್ನು ಒಂದೆಡೆಗೆ ಕರೆದು ಹೇಳಿದರು, ನಿಮಗೆ ಗೊತ್ತಾ, ನಾವು ಕಪ್ಪುಬಣ್ಣವನ್ನು ನಿಂದಿಸಿದಕ್ಕೇ ಈ ಶಿಕ್ಷೆಯನ್ನು ಅನುಭವಿಸುತ್ತಿದ್ದೇವೆ. ಕಪ್ಪುಬಣ್ಣ ನಮ್ಮೆಲ್ಲರ ಬದುಕಿನಲ್ಲಿ ಒಂದಲ್ಲ ಒಂದು ವಿಧದಲ್ಲಿ ಬಳಕೆಯಾಗುತ್ತಿತ್ತು. ಹಾಗಿದ್ದೂ ನಾವು ಕಪ್ಪುಬಣ್ಣವನ್ನು ಕಡೆಗಣಿಸಿದೆವು. ಅದಕ್ಕೇ ಕಪ್ಪುಬಣ್ಣ ಮುನಿಸಿಕೊಂಡಿದೆ. ಅದರ ಪರಿಣಾಮವೇ ಈ ಸಮಸ್ಯೆ. ಈಗ ನಮ್ಮೆದುರು ಇರುವುದು ಎರಡೇ ಆಯ್ಕೆ: ನಾವೀಕೂಡಲೇ ಕಪ್ಪುಬಣ್ಣವನ್ನು ಕ್ಷಮೆಕೇಳಬೇಕು. ಇಲ್ಲ, ಸಾವಿಗೆ ಶರಣಾಗಬೇಕು. ಜನರಿಗೆ ಹಿರಿಯನ ಮಾತುಕೇಳಿ ಭಯವಾಯಿತು. ಕಪ್ಪುಬಣ್ಣವನ್ನು ತಾತ್ಸಾರದಿಂದ ನೋಡಿದ್ದಕ್ಕಾಗಿ ಪಶ್ಚಾತ್ತಾಪವೂ ಉಂಟಾಯಿತು. ಅವರೆಲ್ಲರೂ ಆ ಕೂಡಲೇ ಬಾನಿನತ್ತ ದಿಟ್ಟಿಸಿ, ಕಪ್ಪುಬಣ್ಣವೇ ನಮ್ಮನ್ನು ಕ್ಷಮಿಸು. ನಮ್ಮ ತಪ್ಪು ನಮಗೆ ಅರಿವಾಗಿದೆ. ಇನ್ಯಾವತ್ತೂ ನಿನ್ನನ್ನು ಕಡೆಗಣಿಸುವುದಿಲ್ಲ. ಗೇಲಿಮಾಡುವುದಿಲ್ಲ. ನೀನು ನಮ್ಮ ಬದುಕಿನಲ್ಲಿ ಎಷ್ಟೊಂದು ಅಗತ್ಯ ಅನ್ನುವುದನ್ನು ಇವತ್ತು ಅರಿತುಕೊಂಡಿದ್ದೇವೆ. ಮುಂದೆಂದೂ ಈ ತಪ್ಪನ್ನು ಮಾಡಲಾರೆವು. ದಯಮಾಡಿ ನಮ್ಮ ಮೇಲೆ ಕರುಣೆ ತೋರಿಸು ಎಂದು ಬೇಡಿಕೊಂಡರು. ಪಾಪ! ಕಪ್ಪುಬಣ್ಣದ ಹೃದಯ ಬಹುಬೇಗನೆ ಕರಗಿಹೋಯಿತು. ಅದರ ಸಿಟ್ಟೂ ಹೇಳಹೆಸರಿಲ್ಲದೆ ಮಾಯವಾಯಿತು.
ತುಸು ಹೊತ್ತಿನಲ್ಲೇ ಕರಿಯ ಮೋಡಗಳು ದಿಗಂತವನ್ನು ಆವರಿಸಿದವು. ಮಳೆ ಭೋರ್ಗರೆಯುತ್ತ ಸುರಿಯಲಾರಂಭಿಸಿತು. ಅಷ್ಟರಲ್ಲಾಗಲೇ ಜನರ ದೃಷ್ಟಿಯೂ ಕೊಂಚ ಕೊಂಚವೇ ಸರಿಯಾಗುತ್ತಾ ಸಾಗಿ ಪೂರ್ತಿಯಾಗಿ ಕಾಣಲಾರಂಭಿಸಿತು. ಕಣ್ಣರೆಪ್ಪೆ ಕೂದಲಿನ ಬಣ್ಣವೂ ಹಿಂದಿನ ಬಣ್ಣಕ್ಕೆ ಮರಳಿತ್ತು. ಕಾಣೆಯಾಗಿದ್ದ ಕಾಗೆ-ಕೋಳಿ-ನಾಯಿ-ದನಕರುಗಳೆಲ್ಲಾ ಎಲ್ಲಿಂದಲೋ ಓಡಿಬಂದವು. ಕೋಟು-ಬೂಟಿನ ಬಣ್ಣವೂ ಹಳೆಯ ಬಣ್ಣಕ್ಕೆ ಹಿಂತಿರುಗಿತ್ತು. ಮಣ್ಣಿನ ಬಣ್ಣವೂ ಕಪ್ಪಾಗಿದ್ದರಿಂದ ಬಿದ್ದ ಮಳೆಯಿಂದಾಗಿ ಮಣ್ಣಿನವಾಸನೆ ಊರಿನ ತುಂಬೆಲ್ಲಾ ಒಂದು ರೀತಿಯ ಸುಗಂಧದಂತೆ ಆವರಿಸಲಾರಂಭಿಸಿತು. ಕತ್ತಲಾವರಿಸುತ್ತಿದ್ದಂತೆ ಜನರೆಲ್ಲಾ ಖುಷಿಯಲ್ಲಿ ಕೇಕೆ ಹಾಕುತ್ತಾ ತಮ್ಮ ತಮ್ಮ ಮನೆಗಳಿಗೆ ಹೆಜ್ಜೆಹಾಕಿದರು. ಆವತ್ತಿನಿಂದ ಆ ಊರಿನಲ್ಲಿ ಮತ್ತೆ ಸಂತೋಷ ಮನೆ ಮಾಡಿತು.
ನೀತಿ: ಬದುಕಿನ ರಂಗಿಗೆ ಎಲ್ಲಾ ಬಣ್ಣಗಳೂ ಬೇಕು. ಕಪ್ಪು ಬಣ್ಣವನ್ನು ತಾತ್ಸಾರದಿಂದ ಕಾಣಬಾರದು. ಕಪ್ಪು ಜನರನ್ನು ಹೀಯಾಳಿಸಬಾರದು. ಅವರೂ ನಮಗೆ ಸೋದರ ಸಮಾನರೇ.?