ಇಂಗ್ಲೆಂಡ್ನ ದೊರೆ ಪಂಚಮ ಜಾರ್ಜನು ೧೯೧೧ರಲ್ಲಿ ಭಾರತಕ್ಕೆ ಭೇಟಿ ನೀಡಿದನು. ಆ ವರ್ಷದ ಡಿಸೆಂಬರ್ ತಿಂಗಳಲ್ಲಿ ದೆಹಲಿಯಲ್ಲಿ ಅವನ ದರ್ಬಾರು ಏರ್ಪಾಡಾಯಿತು (ಅದು ದೆಹಲಿ ದರ್ಬಾರು ಎಂದು ಚರಿತ್ರೆಯಲ್ಲಿ ಪ್ರಸಿದ್ಧಿ). ಸರಿ, ಎಲ್ಲಾ ರಾಜಮಹಾರಾಜರು ದೆಹಲಿಗೆ ದೌಡಾಯಿಸಿದರು. ಆ ದರ್ಬಾರಿನಲ್ಲಿ ಈ ರಾಜಮಹಾರಾಜರು ಇಂಗ್ಲೆಂಡ್ ದೊರೆಯ ಬಳಿಗೆ ಬಹಳ ಭಯಭಕ್ತಿಯಿಂದ ಬೆನ್ನು ಬಾಗಿಸಿ ತೆರಳಿ, ನಜರು ಒಪ್ಪಿಸಬೇಕು. ಹಿಂತಿರುಗುವಾಗ ಹಿಮ್ಮುಖವಾಗಿ ಬರಬೇಕು. ದೊರೆಗೆ ಬೆನ್ನು ತೋರಿಸಕೂಡದು. ಎಲ್ಲಾ ರಾಜಮಹಾರಾಜರು ಅವರಿಗೆ ಇಷ್ಟವಿರಲಿ ಅಥವಾ ಇಲ್ಲದಿರಲಿ, ಹಾಗೆಯೇ ಮಾಡಬೇಕು. ಇಲ್ಲದೇ ಹೋದರೆ ಅವರ ಅಧಿಕಾರಕ್ಕೇ ಸಂಚಕಾರ. ಆದ್ದರಿಂದ ಎಲ್ಲ ರಾಜಮಹಾರಾಜರೂ ಹಾಗೆಯೇ ಮಾಡಿದರು. ಅವರಿಗೆ ಸ್ವಾಭಿಮಾನ ಮತ್ತು ಮರ್ಯಾದೆಗಿಂತ ಅಧಿಕಾರ, ಅರಮನೆ, ಸಂಪತ್ತು ಮತ್ತು ದೌಲತ್ತು ಮುಖ್ಯವಾಗಿತ್ತು. ಹಾಗೆ ಭೇಟಿಮಾಡಲು ಬಂದವರಲ್ಲಿ ಬರೋಡಾದ ಮಹಾರಾಜ ಸರ್ ಸಯ್ಯಾಜಿರಾವ್ ಗಾಯಕವಾಡರೂ ಇದ್ದರು. ಅವರು ಇತರ ಅನೇಕ ರಾಜರಂತೆ ಭೋಗಾಸಕ್ತರಾಗದೆ ತಮ್ಮ ಪ್ರಜೆಗಳ ಯೋಗಕ್ಷೇಮದ ಬಗ್ಗೆ ಬಹಳ ಆಸಕ್ತಿ ಹೊಂದಿದ್ದ ಮಹಾರಾಜರಾಗಿದ್ದರು. ಅವರು ಆ ಕಾಲದಲ್ಲೇ ಬಾಲಕರು ಮತ್ತು ಬಾಲಕಿಯರಿಗೆ ಕಡ್ಡಾಯ ವಿದ್ಯಾಭ್ಯಾಸ ಜಾರಿಗೆ ತಂದಿದ್ದರು. ಗ್ರಾಮ ಪುಸ್ತಕ ಭಂಡಾರಗಳ ಏರ್ಪಾಟು, ಗ್ರಾಮ ಪಂಚಾಯಿತಿ, ಸಹಕಾರ ಸಂಘಗಳ ಚಳವಳಿ, ವ್ಯವಸಾಯ ಶಿಕ್ಷಣ, ಬಾಲ್ಯವಿವಾಹ ನಿಷೇಧ ಮುಂತಾದ ಅನೇಕ ಸಾಮಾಜಿಕ ಮತ್ತು ಶೈಕ್ಷಣಿಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದರು. ಅವರು ಮಾಡಿದ ಮತ್ತೊಂದು ವಿಶೇಷ ಕಾರ್ಯ ಡಾ. ಬಿ.ಆರ್. ಅಂಬೇಡ್ಕರ್ರವರ ಪ್ರತಿಭೆಯನ್ನು ಗುರುತಿಸಿ ಅವರನ್ನು ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಕಳುಹಿಸಿದ್ದು.
ಅವರು ದೆಹಲಿಯ ದರ್ಬಾರಿನಲ್ಲಿ ತಮ್ಮ ಸರದಿ ಬಂದಾಗ ಎಲ್ಲರಂತೆ ಬೆನ್ನು ಬಾಗಿಸಿ ನಡೆಯಲಿಲ್ಲ. ಹಿಮ್ಮುಖನಾಗಿ ಹಿಂತಿರುಗಲಿಲ್ಲ. ಅದಕ್ಕೆ ಬದಲಾಗಿ ತಮ್ಮ ಕೋಲನ್ನು ತಿರುಗಿಸುತ್ತಾ ತಿರುಗಿಸುತ್ತಾ ರಾಜ-ರಾಣಿಯ ಬಳಿಗೆ ನಡೆದರು. ನಜರನ್ನು ಒಪ್ಪಿಸಿ ರಾಜ-ರಾಣಿಗೆ ಬೆನ್ನು ತೋರಿಸುತ್ತಾ ತಮ್ಮ ಆಸನಕ್ಕೆ ನಡೆದು ಬಂದು ಕುಳಿತರು. ಅದನ್ನು ನೋಡಿ ಅಲ್ಲಿದ್ದವರೆಲ್ಲ ಸ್ತಂಭೀಭೂತರಾದರು.
ಈ ಸುದ್ದಿ ಇಡೀ ದೇಶಕ್ಕೆ ಹರಡಿತು. ಅದನ್ನು ಕೇಳಿ ಕೆಲವರಿಗೆ ಗಾಬರಿ ಮತ್ತು ದಿಗ್ಭ್ರಾಂತಿ ಉಂಟಾಯಿತು. ಮತ್ತೆ ಕೆಲವರಿಗೆ ಆನಂದವಾಯಿತು. ಆದರೆ ಬ್ರಿಟಿಷ್ ಸರ್ಕಾರಕ್ಕೆ ಗಾಯಕವಾಡರ ಮೇಲೆ ಅತೀವ ಆಕ್ರೋಶ ಉಂಟಾಯಿತು. ಅವರಿಗೆ ಶಿಕ್ಷೆ ವಿಧಿಸಲು ಮುಂದಾಯಿತು. ಅವರಿಗೆ ನೀಡಬೇಕಾದ ಶಿಕ್ಷೆಯ ಬಗ್ಗೆ ಬ್ರಿಟಿಷ್ ಪಾರ್ಲಿಮೆಂಟಿನಲ್ಲಿ ಭಾರಿ ಚರ್ಚೆ ನಡೆಯಿತು. ಗಾಯಕವಾಡರು ಸಿಂಹಾಸನ ಕಳೆದುಕೊಳ್ಳುವ ಪರಿಸ್ಥಿತಿ ಉಂಟಾಯಿತು. ಆದರೆ ಬ್ರಿಟಿಷ್ ಲೇಬರ್ ಪಕ್ಷದ ಸ್ಥಾಪಕ ಕೇರ್ ಹಾರ್ಡಿ(Keir Hardy)ಯು “ಹಿಮ್ಮುಖನಾಗಿ ನಡೆಯುವುದಕ್ಕೆ ಮನುಷ್ಯನು ಏಡಿಯಲ್ಲ” ಎಂದು ಗುಡುಗಿದನು. ಇವನ ಮತ್ತು ಇವನಂತಹವರ ಅಭಿಪ್ರಾಯದ ಫಲವಾಗಿ, ಹಾಗೂ ಇಂಗ್ಲೆಂಡ್ ಮತ್ತು ಭಾರತದ ಪ್ರಜಾಭಿಪ್ರಾಯವನ್ನು ಗಮನಿಸಿ, ಆ ಸಣ್ಣ ಕಾರಣಕ್ಕೆ ಸಿಂಹಾಸನವನ್ನು ಕಸಿಯುವುದು ಸೂಕ್ತವಲ್ಲ ಎಂದು ಚಿಂತಿಸಬೇಕಾಯಿತು, ಬ್ರಿಟಿಷ್ ಪಾರ್ಲಿಮೆಂಟ್. ಅದು ಕೊನೆಗೆ ಕ್ಷಮಾಪಣೆ ಕೇಳುವ ಶಿಕ್ಷೆಗೇ ತೃಪ್ತಿಪಟ್ಟುಕೊಳ್ಳಬೇಕಾಯಿತು.?
(ಆಧಾರ: ಭವನ್ಸ್ ಜರ್ನಲ್)