ನಮ್ಮ ದೇಶದ ಮೂರು ಪೀಳಿಗೆಗಳ ಕೋಟ್ಯಂತರ ಜನರಿಗೆ ಅತ್ಯಂತ ಆನಂದವನ್ನು ಅತ್ಯಂತ ಹೆಚ್ಚು ಕಾಲ ನೀಡಿರುವವರು ಯಾರು? – ಎಂಬ ಪ್ರಶ್ನೆಗೆ ಹೊರಡುವ ಒಕ್ಕೊರಲಿನ ಉತ್ತರ ಭಾರತರತ್ನ ಲತಾ ಮಂಗೇಶ್ಕರ್ (೧೯೨೯-೨೦೨೨) ಎಂಬುದು. ಚಲನಚಿತ್ರಗಳಲ್ಲಿನ ಹಿನ್ನೆಲೆ ಗಾಯನಕ್ಕೆ ಅಭೂತಪೂರ್ವ ಪ್ರತಿಷ್ಠೆಯನ್ನು ತಂದುಕೊಟ್ಟವರಲ್ಲಿ ಅವರು ಅಗ್ರಶ್ರೇಣಿಯವರು. ಭಾರತದ ಎಲ್ಲ ಭಾಷೆಗಳಲ್ಲಿ ಅವರ ಸಂಗೀತಸುಧೆ ಹರಿಯಿತು. ಸುಮಾರು ಮೂವತ್ತು ಸಾವಿರದಷ್ಟು ಗೀತಗಳಿಗೆ ಅವರು ಜೀವ ತುಂಬಿದುದು ಜಾಗತಿಕ ದಾಖಲೆಯೂ ಆಯಿತು. ಆರು ದಶಕಗಳಷ್ಟು ದೀರ್ಘಕಾಲ ನಡೆದ ಅವರ ನಿರಂತರ ನಾದಸೇವೆ ಸಾಟಿಯಿಲ್ಲದ್ದು. ಚಿತ್ರಗೀತೆಗಳು ಮಾತ್ರವಲ್ಲದೆ ಭಕ್ತಿಗೀತೆಗಳು, ದೇಶಪ್ರೇಮ ಗೀತೆಗಳು ಮೊದಲಾದ ಕ್ಷೇತ್ರಗಳನ್ನೂ ಅವರು ಶ್ರೀಮಂತಗೊಳಿಸಿದರು. ಭಾರತೀಯ ಜನಮಾನಸವನ್ನು ಗಾಯನಕಲೆಯ ಮೂಲಕ ಹೇಗೆ ತಲಪಬಹುದೆಂಬುದನ್ನು ಉಜ್ಜ್ವಲವಾಗಿ ಪ್ರಕಟೀಕರಿಸಿದವರು ಲತಾ ಮಂಗೇಶ್ಕರ್. ಅವರ ಶಾರೀರದ ವ್ಯಾಪ್ತಿಯನ್ನೂ ನಾದಮಾಧುರ್ಯವನ್ನೂ ದೈವದತ್ತವೆಂದೇ ಭಾವಿಸಬೇಕಾದೀತೇನೊ. ಅವರ ಸಾಧನೆಗೆ ಪ್ರಾಂತ-ಭಾಷೆಗಳ ಗಡಿಗಳು ಇರಲಿಲ್ಲ. ಚಲನಚಿತ್ರ ಕ್ಷೇತ್ರವೇ ಅವರ ಹಾಡಿಕೆಯಿಂದ ದೋಹದ ಪಡೆಯಿತು. ಹಿನ್ನೆಲೆಗಾಯನಕ್ಕೆ ಮಾನದಂಡವನ್ನು ನಿರ್ಮಿಸಿದರು ಅವರು. ಅಭಿಜ್ಞತೆಯಿಲ್ಲದ ಕೋಟ್ಯಂತರ ಜನರಿಗೆ ಸಂಗೀತವನ್ನು ಆಪ್ತವಾಗಿಸಿದುದು ಲತಾದೀದಿಯ ಅನುಪಮ ಸಾಂಸ್ಕೃತಿಕ ಕೊಡುಗೆ. ಹೀಗೆ ದೇಶದ ಇಡೀ ಜನತೆಯ ಅಂತರಂಗದ ಭಾಗವೇ ಆಗಿಬಿಟ್ಟಿದ್ದ ಅವರು ಉಳಿಸಿ ಹೋದದ್ದು ಎಂದಿಗೂ ಮಾಸದ ನೆನಪು.
ಹಿನ್ನೆಲೆ ಗಾಯನದ ಸಮ್ರಾಜ್ಞಿ ಇನ್ನಿಲ್ಲ
Month : June-2022 Episode : Author :