ಚಿಂತನೆಯ ವಿಷಯ ಭಗವಂತ ಅಲ್ಲವೆ? ಭಗವಂತನೆAದರೆ ಏನು, ಯಾರು? ಅರಿಯುವುದು ಅಷ್ಟೇ ಅವಶ್ಯ. ಈ ಹೂವಿನಷ್ಟು ಸ್ಪಷ್ಟವಾಗಿ ದೇವ ಕಂಡಿದ್ದರೆ ಚಿಂತನೆ ಸುಲಭವಾಗುತ್ತಿತ್ತು. ಆದರೆ ಹಾಗಿಲ್ಲ. ಆತ ಏನು, ಎಲ್ಲಿ, ಎಂಥವ – ಎಂಬುದನರಿಯದಿರೆ ಚಿಂತನೆ ಹೇಗೆ ಸಾಧ್ಯ ಹೇಳಿ? ಅಜ್ಞಾತ ವಸ್ತುವನ್ನು ಪ್ರೀತಿಸುವುದು ಹೇಗೆ? ಅದರ ನೆನಹಿನಲ್ಲಿ ನಿಮಗ್ನತೆ ಹೊಂದುವುದೆAತು?
ನಮ್ಮಲ್ಲಿ ಅನೇಕರು ಪೂಜಿಸುತ್ತೇವೆ; ಧ್ಯಾನಿಸುತ್ತೇವೆ; ಜಪಿಸುತ್ತೇವೆ; ಜೀವನದ ತುಂಬ! ಆದರೂ ಚಿಂತನೆಯಾಗದು! ತತ್ಪರಾವಸ್ಥೆ ಅಳವಡದು. ಕಾರಣ ಸ್ಪಷ್ಟ. ನಮಗೆ ದೇವವಿಷಯದಲ್ಲಿ ಸ್ಪಷ್ಟತೆಯಿಲ್ಲ. ಹೀಗಾಗಿ, ಬಹುತೇಕ ಸಾಧಕರ ಸಮಸ್ಯೆ ‘ಮನಸ್ಸು ನಿಲ್ಲುತ್ತಿಲ್ಲ ಧ್ಯಾನದಲ್ಲಿ’ ಎಂದು! ಎಲ್ಲಿ ನಿಲ್ಲಬೇಕು ಎನ್ನುವುದೇ ತಿಳಿಯದೆಂದಾಗ ನಿಲ್ಲುವ ಪ್ರಶ್ನೆ ಎಲ್ಲಿ ಬಂತು ಹೇಳಿ?
ಪ್ರವಚನ
ಚಿಂತನೆಯ ಗುಣ ಇದು. ಪ್ರತಿ ಕ್ಷಣ ಕ್ಷಣ ನಾವು ಏನನ್ನಾದರೂ ಚಿಂತಿಸುತ್ತಲೇ ಇರುತ್ತೇವೆ. ಕಣ್ಣಿಗೆ ಒಂದು ವಸ್ತು ಕಂಡಾಗ ಆ ವಸ್ತು ನಮಗೆ ಸ್ವಲ್ಪ ಹಿತವನ್ನು ಉಂಟುಮಾಡುವAತೆ ಇದ್ದರೆ ನಮ್ಮ ಮನಸ್ಸು ಆ ವಸ್ತುವಿನ ಚಿಂತನೆಗೆ ತೊಡಗುತ್ತದೆ. ಆ ಚಿಂತನೆ ಅಷ್ಟಕ್ಕೆ ನಿಂತುಹೋಗಬಹುದು ಇಲ್ಲವೇ ಅದು ತನ್ನ ಅಂತಿಮ ಫಲವನ್ನು ಕೊಡಬಹುದು. ಫಲವನ್ನು ಕೊಡುವಷ್ಟು ಚಿಂತನೆ ಸಾಗಿತು ಅಂದರೆ ಆ ಚಿಂತನೆಗೆ ಪೂರ್ಣಚಿಂತನೆ ಅನ್ನಬೇಕು. ಫಲ ಕೊಡದೆ ಮಧ್ಯದಲ್ಲಿ ಅದು ನಿಂತುಹೋದರೆ ಅದು ಅಪೂರ್ಣಚಿಂತನೆ. ವಿಷಯಚಿಂತನೆ ಇರಲಿ, ಭಗವಚ್ಚಿಂತನೆ ಇರಲಿ, ಅದು ಕೇವಲ ಪ್ರಾಸಂಗಿಕವಾಗಿ ಇದ್ದರೆ, ಅದು ನಮ್ಮ ಅಂತರAಗವನ್ನು ತುಂಬಿಕೊಳ್ಳದಿದ್ದರೆ, ಆ ಚಿಂತನೆ ಇಚ್ಛಿತವಾದ ಫಲವನ್ನು ಕೊಡುವುದಿಲ್ಲ.
ಚಿಂತನೆಯಲ್ಲಿ ಮೂರು ಅಂಶಗಳಿವೆ. ಮೊದಲನೆಯದು ಅನನ್ಯ ಮಮತೆ – ಚಿಂತನೀಯ ವಸ್ತುವಿನಲ್ಲಿ ಅತುಲ ಮಮತೆ. ಎರಡನೆಯದು ಅವಿಚ್ಛಿನ್ನ ತನ್ಮಯತೆ – ವಿಚ್ಛಿನ್ನವಾಗದ ನಿಮಗ್ನತೆ. ಮೂರನೆಯದು ಆನಂದಾನುಭೂತಿ – ವಸ್ತು ಸಮಾಲೀನತೆಯಿಂದ ಉಂಟಾಗುವ ನಿರ್ಮಲಾನಂದದ ಅನುಭವ. ಚಿಂತನೆ ಲೌಕಿಕವಾಗಿರಲಿ ಅಲೌಕಿಕವಾಗಿರಲಿ, ಈ ಮೂರು ಅಂಗಗಳು ಅದರಲ್ಲಿರುತ್ತವೆ.
ಮೊದಲ ಅಂಗ: ಅನನ್ಯ ಮಮತೆ. ಚಿಂತನೆ ಮಾಡಬೇಕಾದುದು ವ್ಯಕ್ತಿ ಇರಲಿ, ವಸ್ತುವಿರಲಿ, ಅದನ್ನು ಅತ್ಯಂತ ಪ್ರೀತಿಸುವುದು. ಈ ಪ್ರೀತಿ ಗಾಢವಾದಷ್ಟೂ ಚಿಂತನೆಯ ಆಳ-ಅಳವು ಹೆಚ್ಚುತ್ತದೆ.
ಸಾಮಾನ್ಯ ಪ್ರೇಮ ಪ್ರಾಸಂಗಿಕ, ಕ್ಷಣಿಕ ಮತ್ತು ಅಭದ್ರ. ಅನನ್ಯ ಪ್ರೇಮ ಹಾಗಲ್ಲ. ಅದು ಸಾರ್ವಕಾಲಿಕ, ಸುಸ್ಥಿರ. ಪ್ರೀತಿಸಿದ ವಸ್ತುವಿಗಾಗಿ ಅದು ಪ್ರಾಣವನ್ನೂ ತ್ಯಜಿಸಬಲ್ಲದು. ಅಷ್ಟು ಗಾಢ! ಇಲ್ಲೊಂದು ಕಥೆ.
ಧನಪ್ರೇಮಿಯೊಬ್ಬ ಸಂತನನ್ನು ಸಂಧಿಸಿದ, ವನದಲ್ಲಿ. ಅವನ ಧನದ ಅನುರಾಗ ಅರಿತ ಸಂತ ಹೇಳಿದ: ‘ಇಲ್ಲೊಂದು ಗವಿಯಿದೆ ಸಮೀಪದಲ್ಲಿ. ಒಳಗೆಲ್ಲ ಮುತ್ತುರತ್ನಗಳು ರಾಶಿರಾಶಿಯಾಗಿ ಬಿದ್ದಿವೆ. ನೀನಲ್ಲಿಗೆ ಹೋಗು. ನಿನ್ನ ಮನಸ್ಸು ತೃಪ್ತಿಯಾಗುವಷ್ಟು ರತ್ನಗಳನ್ನು ಆರಿಸಿಕೊ. ಆದರೆ ಒಂದು ಮಾತು ನೆನಪಿರಲಿ. ಸೂರ್ಯ ಮುಳುಗುವ ಒಳಗಾಗಿಯೇ ಹೊರಗೆ ಬರಬೇಕು. ಇಲ್ಲವಾದರೆ ನಿನ್ನ ಪ್ರಾಣ ಉಳಿಯದು.’ ಧನಪ್ರಿಯನಿಗೆ ಹರ್ಷವೋ ಹರ್ಷ. ಸಂತನಿಗೆ ವಂದಿಸಿ, ಆತ ತೋರಿದ ಮಾರ್ಗ ಹಿಡಿದು ಬೆಟ್ಟದ ಗವಿಗೆ ಧಾವಿಸಿದ. ಒಳಗೆ ಪ್ರವೇಶಿಸಿದ. ಏನು ದೃಶ್ಯ! ಸಾವಿರ ಸಾವಿರ ಚಿಮುಕುವ ರತ್ನಗಳು! ಅವನಿಗೆ ಹುಚ್ಚು ಹಿಡಿಯುವುದಷ್ಟೇ ಉಳಿದಿತ್ತು!
ಆರಿಸಿದ; ಆರಿಸಿ ಕೂಡಿಹಾಕುತ್ತಲೇ ಇದ್ದ. ತಾಸು ಕಳೆದವು; ಅನ್ನವಿಲ್ಲ, ನೀರಿಲ್ಲ. ಅದರ ಪರಿವೆಯಿಲ್ಲ. ಸೂರ್ಯ ಮುಳುಗುವ ಕ್ಷಣ ಬಂತು. ಒಳಗೆ ಕತ್ತಲು ಹೆಚ್ಚಿತು. ರತ್ನಗಳ ಸೌಮ್ಯ ಬೆಳಕು ಗವಿಯಲ್ಲಿ ಹರಡಿತು. ರಾಶಿ ಹಾಕಿದ ರತ್ನಗಳನ್ನು ಮೂಟೆಗಟ್ಟಿದ. ಹೊರಕ್ಕೆ ಹೊರಡಲನುವಾದ. ಆದರೆ ಅವನ ಧನಪ್ರೇಮ ಬಿಡಬೇಕಲ್ಲ. ‘ಏಕೆ? ಎಲ್ಲಿಗೆ? ಯಾವುದಕ್ಕಾಗಿ ಬದುಕೋ – ಅಂಥ ದ್ರವ್ಯ ನೋಡಿದಲ್ಲೆಲ್ಲ ಹರಡಿರುವಾಗ, ಅದೆಲ್ಲವೂ ತನ್ನದಾಗಿರುವಾಗ ಅದನ್ನು ಅಗಲಿ ಹೊರಹೋಗಿ ಮಾಡುವುದಾದರೂ ಏನು? ಬಾಳಿನ ಪರಮ ಅರ್ಥ ಕೈವಶವಾದ ಬಳಿಕ ಪ್ರಾಣವಿದ್ದರೂ ಸರಿ, ಹೋದರೂ ಸರಿ’ ಎನಿಸಿತು. ಪ್ರಾಣ ಮೀರಿದ ಧನಪ್ರೇಮ! ಸಂಪತ್ತಿನ ಸಾಗರದಲ್ಲಿ, ಹರ್ಷೋನ್ಮಾದದಲ್ಲಿ ಪ್ರಾಣ ನಿವೇದಿಸಿದ! ಇದು ಅನುಪಮವಾದ ಅನನ್ಯ ಪ್ರೇಮ! ಸಾವಿನಲ್ಲೂ ಅಪಾರ ಸೌಖ್ಯವಿತ್ತ ಮಮತೆ!
ಧನಪ್ರಿಯನಂತೆ ಭಗವಂತನಲ್ಲಿ, ಸತ್ಯದಲ್ಲಿ ಅಸದೃಶ ಪ್ರೇಮವಿದ್ದರದು ಭಗವತ್-ಚಿಂತನೆ. ಚಿಂತನೆಯ ಬಹು ಮಹತ್ತ್ವದ ಪ್ರಥಮಾಂಗ!
ಎರಡನೆಯ ಅಂಗ, ಅವಿಚ್ಛಿನ್ನ ತನ್ಮಯತೆ. ಸುಚಿಂತನೀಯ ವಸ್ತುವಿನ ನೆನಹಿನಲ್ಲಿ, ಚಿಂತನೆಯಲ್ಲಿ ಮನಮಗ್ನತೆಯದು ತನ್ಮಯತೆ. ಅದು ವಿಚ್ಛಿನ್ನವಾಗಬಾರದು, ಜಲಧಾರೆಯಂತೆ ಅಖಂಡವಾಗಿರಬೇಕು. ಭಿನ್ನ ಉದ್ದೇಶ, ಅನ್ಯ ವಿಷಯದಾಸೆ ಆ ತನ್ಮಯತೆಯನ್ನು ಕೆಡಿಸಬಾರದು. ಕವಿ ನಿಸರ್ಗರಮಣೀಯ ನೋಟಗಳಲ್ಲಿ, ಕಲೆಗಾರ ಸೌಂದರ್ಯ ಸೃಷ್ಟಿಸುವಲ್ಲಿ, ಸಂಗೀತಗಾರ ನಾದಮಾಧುರ್ಯದಲ್ಲಿ ಇಂಥ ತನ್ಮಯತೆ ಅನುಭವಿಸುತ್ತಾನೆ. ತನ್ಮಯತೆ ಕಾರ್ಯಸಿದ್ಧಿಗೆ ಕಾರಣ.
ಒಂದು ಕಥೆ ಕೇಳಿ. ಒಬ್ಬ ಝೆನ್ ಗುರು. ಸುಪ್ರಸಿದ್ಧ ಜ್ಞಾನಿ. ಕಲಾನುರಾಗಿ. ಒಂದು ದಿನ ಒಂದು ಬುದ್ಧಚಿತ್ರ ಬರೆಯ ಕುಳಿತ. ಮಗ್ಗುಲದಲ್ಲಿ ಶಿಷ್ಯ ನಿಂತಿದ್ದ, ನೋಡುತ್ತ. ಚಿತ್ರ ಮುಗಿಯಿತು. ‘ಹೇಗಿದೆ?’ ಎಂದ ಗುರು. ‘ಗುರುಗಳೆ, ಕ್ಷಮಿಸಿ, ಅಷ್ಟೇನೂ ಚೆನ್ನಾಗಿಲ್ಲ’ ಎಂದ ಶಿಷ್ಯ. ಗುರು ಮತ್ತೆ ಮತ್ತೆ ಬರೆದ. ಶಿಷ್ಯ ಚೆನ್ನಾಗಿಲ್ಲವೆಂದು ಹೇಳುತ್ತಲಿದ್ದ. ಅರವತ್ತು ಸಲ ಬರೆದಾಯ್ತು. ತೃಪ್ತಿಯಿಲ್ಲ. ಶಾಯಿ ಮುಗಿಯುತ್ತ ಬಂತು. ಶಿಷ್ಯ ಶಾಯಿ ತಯಾರಿಸಿ ತರಲು ಹೋದ. ಅಷ್ಟರಲ್ಲಿ ಗುರು ಉಳಿದ ಬಣ್ಣ ಬಳಸಿ ಚಿತ್ರಿಸಿದ. ಒಂದು ಕ್ಷಣದಲ್ಲಿ ಮುಗಿದಿತ್ತು ಚಿತ್ರ. ಶಿಷ್ಯ ಬಂದ, ನೋಡಿದ. “ಗುರುಗಳೆ, ಅದ್ಭುತ! ಎಂಥ ಸುಂದರ ಕೃತಿ, ನ ಭೂತಃ ನ ಭವಿಷ್ಯತಿ ಚಿತ್ರ! ಒಂದರಗಳಿಗೆಯಲ್ಲಿ ರೂಪಿಸಿದಿರಲ್ಲ; ಅದು ಹೇಗೆ?”
“ಶಿಷ್ಯನೆ, ಅರವತ್ತು ಸಲ ಬರೆವಾಗ, ನೀನು ನೋಡುತ್ತಿರುವಿ ಎಂಬ ಕಲ್ಪನೆ ನನ್ನ ಏಕಾಗ್ರತೆಗೆ ಆತಂಕವಾಗಿತ್ತು. ನೀನು ಹೊರಟುಹೋದ ಕ್ಷಣವೇ ನಾನು ಮುಕ್ತನಾದೆ. ನಾನು ಬರೆವೆ ಎಂಬುದನ್ನೇ ಮರೆತೆ. ನಾನಿಲ್ಲ, ನೀನಿಲ್ಲ. ನೋಡುವವನಿಲ್ಲ, ಬರೆವವನಿಲ್ಲ. ಗುರುವಿಲ್ಲ, ಶಿಷ್ಯನಿಲ್ಲ! ಕೇವಲ ಬುದ್ಧ! ಕೇವಲ ಬರೆವ ಕ್ರಿಯೆ! ಆ ಅಪ್ರತಿಮ ತನ್ಮಯದ ಚಣದಲ್ಲಿ ಈ ಅನುಪಮ ರಚನೆ!” ಇದು ಅವಿಚ್ಛಿನ್ನ ತನ್ಮಯತೆ. ಇದು ಕಾರ್ಯಸಿದ್ಧಿಯ ಮೂಲ!
ಇದರಂತೆಯೇ ಭಗವಚ್ಚಿಂತನೆ. ಯಾರಾದರೂ ನೋಡುತ್ತಿದ್ದಾರೆ, ನಾನು ಚಿಂತನೆ-ಆರಾಧನೆ-ಸ್ಮರಣೆ ಮಾಡುತ್ತಿದ್ದೇನೆ ಎಂಬ ಭಾವ ಅಡಗಿ ಕೇವಲ ದೇವಭಾವ ಉಳಿದರೆ ಅದು ತನ್ಮಯತೆ!
ಮೂರನೆಯದು ಆನಂದಾನುಭೂತಿ. ಪ್ರಿಯತಮ ವಸ್ತುವಿನಲ್ಲಿ ಮನವು ಮಗ್ನವಾಗಲಾಗಿ ಆ ವಸ್ತುವಿನೊಂದಿಗೆ ಸಮರಸಗೊಳ್ಳುತ್ತದೆ ಮನಸ್ಸು. ಆ ಕ್ಷಣದಲ್ಲಿ ವಿಲಕ್ಷಣ ಆನಂದ ಉಂಟಾಗುತ್ತದೆ. ಅದು ಆನಂದಾನುಭೂತಿ.
ಕಾಡಿನಲ್ಲಿ ಸರೋವರ. ಅಲ್ಲಿ ಒಂದು ಕಮಲದ ಬಳ್ಳಿ. ಹೂ ಅರಳಿದೆ. ಎಲ್ಲೋ ದೂರದಲ್ಲಿ ಭೃಂಗ. ಅದರ ಹೃದಯಕ್ಕೆ ವಾಸನೆ ಸ್ಪರ್ಶ. ಪರಿಮಳದಲ್ಲಿ ಅದಕ್ಕೆ ಅನನ್ಯ ಮಮತೆ! ಹಾರುತ್ತದೆ ಗಾವುದ. ಹೂ ಕಂಡು ಹುಚ್ಚಾಗುತ್ತದೆ. ಕುಳಿತು ಮಕರಂದ ಹೀರುತ್ತದೆ. ಮೈ ಮರೆಯುತ್ತದೆ. ತಾನು ಹಾಗೂ ಪರಿಮಳ ಒಂದಾಗುತ್ತವೆ. ಸಾಮರಸ್ಯಸಿದ್ಧಿ! ಐಕ್ಯಾವಸ್ಥೆ! ಆಗ ಆನಂದದ ಕಟ್ಟು ಒಡೆಯುತ್ತದೆ. ತಾನಿಲ್ಲ, ಹೂವಿಲ್ಲ. ಬರೀ ಆನಂದ. ಅದು ಆನಂದಾನುಭೂತಿ; ಸಾಕ್ಷಾತ್ಕಾರ!
ಹಾಗೆ ಸಂತನು ದೇವನನ್ನು ಪ್ರೀತಿಸುತ್ತಾನೆ, ಅನನ್ಯವಾಗಿ. ಅವನ ನೆನಹಿನಲ್ಲಿ ಮೈ ಮರೆಯುತ್ತಾನೆ. ಆಗ ತಾನು ಎಂಬ ಭಾವವಿಲ್ಲ, ಬರೀ ದೇವರು! ಸಾಮರಸ್ಯ ಅನುಭವ. ಅದ್ಭುತ ಆನಂದದ ಉನ್ಮಾದ! ಶ್ರೀರಾಮಕೃಷ್ಣ ಪರಮಹಂಸರು, ರಾಮತೀರ್ಥರು, ಪೂರ್ವಕಾಲದಲ್ಲಿ ಅನಿಮಿಷಾರ್ಯ, ಚೈತನ್ಯ ಮಹಾಪ್ರಭು, ಈ ಉನ್ಮಾದಾವಸ್ಥೆಯ ವೈಭವದಲ್ಲಿದ್ದವರು! ಹರ್ಷಾತಿರೇಕ, ಆನಂದಾಶ್ರು!
ಇAತು ಚಿಂತನಕ್ಕೆ ಮೂರು ಅಂಗಗಳು. ಇಂಥ ಪೂರ್ಣಾಂಗ ಚಿಂತನೆ ಸಮನಿಸಿದರೆ ಸತ್ಯಸಿದ್ಧಿ, ಆತ್ಮಸಾಕ್ಷಾತ್ಕಾರ! ಈ ಚಿಂತನೆ ಮೈಗೂಡುವ ಕ್ಷಣಗಳು ಒಮ್ಮೊಮ್ಮೆ ಪ್ರಯತ್ನತಃ ಬಂದರೆ, ಒಮ್ಮೊಮ್ಮೆ ಆಕಸ್ಮಿಕ ಹಾಗೂ ಅನಿರೀಕ್ಷಿತವಾಗಿ ಬರುತ್ತವೆ. ಅದೂ ಅಲ್ಲದೆ ಲೌಕಿಕ ಚಿಂತನೆ ಗಾಢವಾಗಿದ್ದರೆ ಅದು ಅಷ್ಟೇ ಹಠಾತ್ತಾಗಿ ತೀವ್ರವಾಗಿ ಪಾರಮಾರ್ಥಿಕವಾಗಿ ರೂಪಗೊಳ್ಳುವ ಸಾಧ್ಯತೆ ಇದೆ.
ತುಲಸೀದಾಸ ಯುವಕ, ಸತಿಪ್ರೇಮಿ. ಒಂದು ದಿನ ಕೂಡ ಅಗಲಿರಲು ಆಗದು. ತವರಿಗೆ ಹೋದ ಸತಿಯ ನೆನಹು ಹೆಚ್ಚಿ ತುಂಬಿದ ನದಿಯ ಈಸಿದ ಕರಾಳ ರಾತ್ರಿಯಲ್ಲಿ! ಹಾವನ್ನೇ ಹಗ್ಗವೆಂದು ಅದ ಹಿಡಿದ. ಮಹಡಿಯನೇರಿದ! ಪ್ರಾಣದ ಪರಿವೆ ಮೀರಿದ ಪ್ರೇಮವದು! ನೂತನ ಸತಿಗೆ ಅಷ್ಟೇ ಸಂತಸ; ಆದರೆ ಅಷ್ಟೇ ಆತಂಕ; ಭಯ. ನುಡಿದಳು – “ಎಂಥ ಪ್ರೇಮ ನಿಮ್ಮದು! ಇಷ್ಟು ಪ್ರೇಮವನ್ನು ದೇವನಲ್ಲಿಟ್ಟರೆ ಆತ ತತ್ಕ್ಷಣ ಒಲಿದಾನು!” ಎಂದಳು. ಅದೇ ಕ್ಷಣ ತುಲಸೀದಾಸ ರಾಮನ ದಾಸನಾದ! ಸತಿಚಿಂತನೆ ಬದಲಿಸಿ ರಾಮಚಿಂತನೆಯಾಯ್ತು!
ಜೀವನದ ತುಂಬ ಓದುತ್ತೇವೆ ಮಹಾಗ್ರಂಥಗಳನ್ನೆಲ್ಲ. ಒಂದೇ ಸಮನೆ ನಿರರ್ಗಳ ಭಾಷಣ ಮಾಡುತ್ತೇವೆ. ಆದರೆ ಆತನಂತೆ ಆಗದಲ್ಲ, ಯಾಕೆ? ಹೆಂಡತಿ ಹೇಳಿದ ಒಂದು ಮಾತು ಅವನನ್ನು ತಾರಿಸಿತ್ತು. ನಮಗೆ ಋಷಿಮುನಿಗಳು ಹೇಳಿದ ಮಾತು ಕೂಡ ಪರಿಣಾಮ ಬೀರುತ್ತಿಲ್ಲವಲ್ಲ! ಕಾರಣವೆಂದರೆ ಅವನು ಹೆಂಡತಿಯ ಚಿಂತನದೊಳಗೆ ಮಗ್ನನಾಗಿದ್ದ. ಚಿಂತನೆ ಹೇಗೆ ಮಾಡಬೇಕು ಎಂಬುದು ಅವನಿಗೆ ಗೊತ್ತಿತ್ತು. ಅಪೂರ್ಣ ಚಿಂತನದೊಳಗೆ ಇದ್ದವನಿಗೆ ಪೂರ್ಣಚಿಂತನದ ಅನುಭವ ಬರುವುದಿಲ್ಲ. ಅವ ಒಂದರಲ್ಲಿ ಪೂರ್ಣನಾಗಿದ್ದ. ಪ್ರೀತಿಯ ಪರಾಕಾಷ್ಠೆ ಕಂಡಿದ್ದ. ಪ್ರೇಮವಿತ್ತು; ವಿಷಯ ಬದಲಿಸಬೇಕಿತ್ತು, ಅಷ್ಟೇ. ಹೆಂಡತಿಯ ಮೂರ್ತಿಯನ್ನು ಸರಿಸಿ ರಾಮನ ಮೂರ್ತಿಯನ್ನು ಸ್ವೀಕರಿಸಿದ, ಪ್ರೀತಿಗಾಗಿ. ಆಗ ಎಲ್ಲೆಡೆ ರಾಮ ತುಂಬಿದ! ನೋಡಿದಲ್ಲೆಲ್ಲ್ಲ ರಾಮ ಕಂಡ! ಬಹು ಮುಖ್ಯವಾದುದು ಚಿಂತನೆ! ಸರ್ವಾಂಗಪೂರ್ಣ ಚಿಂತನೆ! ಗಾಢ ಚಿಂತನೆ!
ಇನ್ನು ಚಿಂತನೆಯ ವಿಷಯ ಭಗವಂತ ಅಲ್ಲವೆ? ಭಗವಂತನೆAದರೆ ಏನು, ಯಾರು? ಅರಿಯುವುದು ಅಷ್ಟೇ ಅವಶ್ಯ. ಈ ಹೂವಿನಷ್ಟು ಸ್ಪಷ್ಟವಾಗಿ ದೇವ ಕಂಡಿದ್ದರೆ ಚಿಂತನೆ ಸುಲಭವಾಗುತ್ತಿತ್ತು. ಆದರೆ ಹಾಗಿಲ್ಲ. ಆತ ಏನು, ಎಲ್ಲಿ, ಎಂಥವ – ಎಂಬುದನರಿಯದಿರೆ ಚಿಂತನೆ ಹೇಗೆ ಸಾಧ್ಯ ಹೇಳಿ? ಅಜ್ಞಾತ ವಸ್ತುವನ್ನು ಪ್ರೀತಿಸುವುದು ಹೇಗೆ? ಅದರ ನೆನಹಿನಲ್ಲಿ ನಿಮಗ್ನತೆ ಹೊಂದುವುದೆAತು?
ನಮ್ಮಲ್ಲಿ ಅನೇಕರು ಪೂಜಿಸುತ್ತೇವೆ; ಧ್ಯಾನಿಸುತ್ತೇವೆ; ಜಪಿಸುತ್ತೇವೆ; ಜೀವನದ ತುಂಬ! ಆದರೂ ಚಿಂತನೆಯಾಗದು! ತತ್ಪರಾವಸ್ಥೆ ಅಳವಡದು. ಕಾರಣ ಸ್ಪಷ್ಟ. ನಮಗೆ ದೇವವಿಷಯದಲ್ಲಿ ಸ್ಪಷ್ಟತೆಯಿಲ್ಲ. ಹೀಗಾಗಿ, ಬಹುತೇಕ ಸಾಧಕರ ಸಮಸ್ಯೆ ‘ಮನಸ್ಸು ನಿಲ್ಲುತ್ತಿಲ್ಲ ಧ್ಯಾನದಲ್ಲಿ’ ಎಂದು! ಎಲ್ಲಿ ನಿಲ್ಲಬೇಕು ಎನ್ನುವುದೇ ತಿಳಿಯದೆಂದಾಗ ನಿಲ್ಲುವ ಪ್ರಶ್ನೆ ಎಲ್ಲಿ ಬಂತು ಹೇಳಿ?
ಒಬ್ಬ ಸಾಧಕನು ಧ್ಯಾನ ಸಾಧನೆ ಮಾಡುತ್ತಿದ್ದ. ಮನಸ್ಸು ನಿಲ್ಲುತ್ತಿರಲಿಲ್ಲ. ಏನು ಮಾಡಬೇಕು ತಿಳಿಯದೆ, ಮಾರ್ಗದರ್ಶನ ಪಡೆಯಲು ಓರ್ವ ಸಂತನ ಬಳಿ ಹೋದ. ತನ್ನ ತಾಪ ತೋಡಿಕೊಂಡ. “ಈ ದುಷ್ಟ ಮನಸ್ಸು ನಿಲ್ಲುತ್ತಲೇ ಇಲ್ಲ ಸಂತರೆ, ಉಪಾಯ ಹೇಳಿ” ಎಂದ. ಆಗ ಆ ಮನಸ್ಸು ಹೇಳಿತು “ಸಂತರೆ, ಸ್ವಲ್ಪ ಕೇಳಿ; ಈತ ‘ಧ್ಯಾನ ಮಾಡು; ಚಿಂತಿಸು; ಸ್ಥಿರವಾಗಿ ನಿಲ್ಲು’ ಎಂದು ಹೇಳುತ್ತಾನೆಯೇ ವಿನಾ ನಾನು ಎಲ್ಲಿ ನಿಲ್ಲಬೇಕು, ಏನು ಧ್ಯಾನಿಸಬೇಕು ಎಂಬುದನ್ನೇ ಹೇಳುವುದಿಲ್ಲ. ತಪ್ಪು ಯಾರದು? ತಾವೇ ಹೇಳಿ?”
ಈ ಕಥೆಯ ಸಾಧಕನ ಸ್ಥಿತಿ, ನಮ್ಮ ಸ್ಥಿತಿ ಭಿನ್ನವೇನಿಲ್ಲ. ಮನಸ್ಸು ಸಾಮಾನ್ಯವಲ್ಲ. ಅದು ಛಲಿ. ಅಭಿಮಾನಿ. ಅದರ ಹಿಡಿತ ಬಹು ಭದ್ರ. ನೀವು ಯಾವುದನ್ನು ಪ್ರೀತಿಸಲು ಹಿಡಿಯಲು ಹೇಳುವಿರೋ ಅದನ್ನು ಎಷ್ಟು ಗಟ್ಟಿಯಾಗಿ ಹಿಡಿದೀತೆಂದರೆ ಅನಂತರ ಅದನ್ನು ಬಿಡಿಸುವುದೇ ಕಷ್ಟ. ಬುದ್ಧನ ಮನಸ್ಸು ಅವನನ್ನು ರಾಜ್ಯ ಬಿಡಿಸಿತು; ಅರಣ್ಯಕ್ಕೊಯ್ದಿತು; ಸತ್ಯಸಾಕ್ಷಾತ್ಕಾರದವರೆಗೆ ವಿರಮಿಸದಂತೆ ಮಾಡಿತು!
ಮನಸ್ಸು ಒಳ್ಳೆಯದೇ. ಅದನ್ನು ಜಾಣ್ಮೆಯಿಂದ ಉಪಯೋಗಿಸಬೇಕು. ಅದನ್ನು ದೇವಚಿಂತನೆಗೆ ನಿಯೋಗಿಸುವ ಮುಂಚೆ ದೇವನ ನಿಜವಾದ ತಿಳಿವನ್ನು ಪಡೆಯುವುದು ಅತ್ಯನಿವಾರ್ಯ.
ದೇವನಾರು? ಸುಲಭವಾಗಿ ಅರಿಯುವುದಾದರೆ, ಅವನು ಸತ್ಯ, ಶಿವ, ಸುಂದರ. ಅವನು ‘ಮಧು’. ಸೂರ್ಯೋದಯ, ಸೂರ್ಯಾಸ್ತ, ತೇಲುವ ಮೇಘಗಳು, ಬೀಸುವ ಗಾಳಿ, ಮಿಣುಕುವ ನಕ್ಷತ್ರ, ಹೊಳೆ ಹಳ್ಳ, ಗುಡ್ಡ, ಬೆಟ್ಟ. ನೋಡುಗನನ್ನು ಮುಗ್ಧಗೊಳಿಸುವ ಸೌಂದರ್ಯ ಅವುಗಳಲ್ಲಿದೆ.
ವ್ಯಷ್ಟಿ ಸಮಷ್ಟಿಗಳೆಲ್ಲ ಮೆತ್ತಿಕೊಂಡಿರುವ ಈ ‘ಮೆರುಗು’ ದೇವನೇ ಸರಿ! ಸುಂದರ ವಸ್ತುಗಳು ವ್ಯಕ್ತಿಗಳು ಭಿನ್ನ ಭಿನ್ನ; ಅಸಂಖ್ಯ. ತಾಯಿ, ಹೆಂಡತಿ, ಮಕ್ಕಳು, ಮನೆ, ಮಂದಿರ, ವನ, ಸಾಗರ, ಆಗಸ ಎಲ್ಲೆಡೆ ಸೌಂದರ್ಯ! ಆ ವಸ್ತು ವ್ಯಕ್ತಿಗಳನ್ನು ಮರೆತರೆ ಅವುಗಳಲ್ಲಿ ನೆಲೆನಿಂದ ಸೌಂದರ್ಯ ‘ಒಂದು’! ಅದರಲ್ಲಿ ಭೇದವಿಲ್ಲ, ಅದ್ವಯ! ವಸ್ತುಗಳಿಂದ ಸೀಮಿತವಾದ ಸೌಂದರ್ಯ ರಾಗ-ದ್ವೇಷ ಕಾರಣವಾದೀತು. ಆದರೆ ಸೀಮೆಯನಳಿದ ಸೌಂದರ್ಯ ದಿವ್ಯ, ಭವ್ಯ, ರಾಗಾದಿಗಳಾಚೆಗಿನ ಸತ್ಯ. ಆ ಸೌಂದರ್ಯ ಹಾಗೂ ಭಗವಂತ ಬೇರೆ ಬೇರೆಯಲ್ಲ ಎಷ್ಟೂ!
ನಾವೀಗ ಇದು ಹೂವಿನ ಸೌಂದರ್ಯ, ಇದು ಮಗುವಿನ ಸೌಂದರ್ಯ, ಇದು ನಗುವಿನ ಸೌಂದರ್ಯ – ಹೀಗೆ ಎಲ್ಲ ಪ್ರತ್ಯೇಕಿಸಿ ನೋಡುತ್ತೇವೆ. ಇದನ್ನು ಬಿಟ್ಟು ಹೂವಿನಲ್ಲಿ ಮಗುವಿನಲ್ಲಿ ನಗುವಿನಲ್ಲಿ ಇರುವುದು ದೇವಸೌಂದರ್ಯ ಎಂದು ನೋಡಬೇಕು. ಅದಕ್ಕಾಗಿ ವಿಶಿಷ್ಟ ದೃಷ್ಟಿ ಬೆಳೆದುಬರಬೇಕು; ತೆರೆದು ನಿಲ್ಲಬೇಕು. ಹಾಗೆ ಸೌಂದರ್ಯದಲ್ಲಿ ದೇವನನ್ನೇ ಗುರುತಿಸುವುದು ಚಿಂತನೆ; ದೇವಚಿಂತನೆ. ದೃಷ್ಟಿ ಎಲ್ಲವನ್ನೂ ಬದಲಿಸುತ್ತದೆ!
ಒಮ್ಮೆ ಸಾಕ್ರಟೀಸ್ನ ಹತ್ತಿರ ಒಬ್ಬ ಯುವಕ ಬಂದ. ಕೇಳಿದ, “ಗುರುಗಳೆ, ನಾನು ಲಗ್ನವಾಗಿ ನಾಲ್ಕು ವರುಷ. ಪ್ರೇಮಲಗ್ನ. ಆದರೆ ಇದೀಗ ಗೊತ್ತಾಯ್ತು. ನನ್ನ ಹೆಂಡತಿ ಅತ್ಯಂತ ಕುರೂಪಿ ಎಂದು. ನಾನು ಸಣ್ಣವ. ೪೦-೫೦ ವರ್ಷಗಳ ಕಾಲ ಆ ಕುರೂಪಿ ಹೆಂಡತಿಯೊಡನೆ ಬದುಕುವುದೆಂತು? ನನ್ನ ಪೂರ್ಣ ಬದುಕೇ ಹಾಳಾಯಿತು! ಏನಾದರೂ ಉಪಾಯ ಹೇಳಿ!” ಸಾಕ್ರಟೀಸ್ ಹೇಳಿದ. “ಅದಕ್ಕೇಕೆ ಚಿಂತಿಸುವಿ? ಅದು ಸುಲಭವಾಗಿ ಬಿಡಿಸಬಹುದಾದ ಸಮಸ್ಯೆ. ಇದಕ್ಕೆಲ್ಲ ಕಾರಣ ನಿನ್ನ ದೃಷ್ಟಿ. ಮೊದಲು ಯಾವ ದೃಷ್ಟಿಯಿಂದ ನೋಡಿ ಲಗ್ನವಾದೆಯಲ್ಲ ಆ ದೃಷ್ಟಿಗೆ ಕುರೂಪ ಕಾಣದು, ಕಂಡಿಲ್ಲ. ಇದೇ ಹೆಂಡತಿಯಲ್ಲಿ ಅಪರೂಪದ ಮೋಹಕ ಸೌಂದರ್ಯ ಕಂಡಿತ್ತು. ಅದ ಕಂಡು ಹುಚ್ಚನಾದೆ! ಅಷ್ಟು ಸೌಂದರ್ಯ! ಆ ದೃಷ್ಟಿ, ಆ ಪ್ರೇಮದೃಷ್ಟಿಯಿಂದ ಮತ್ತೆ ಆಕೆಯತ್ತ ನೋಡಲು ಪ್ರಾರಂಭಿಸು, ಅದೇ ಹೆಂಡತಿ ಸುಂದರಳಾಗಿ, ಅಪ್ರತಿಮ ರೂಪವತಿಯಾಗಿ ಕಾಣುತ್ತಾಳೆ. ಬದಲಾದ ಈ ಪತಿಯ ದೃಷ್ಟಿ ಮುಚ್ಚು. ಆ ಪ್ರಿಯಕರನ ದೃಷ್ಟಿ ತೆರೆ! ನಿನ್ನ ಬದುಕು ಸ್ವರ್ಗಸಮವಾಗುತ್ತದೆ!”
ಸಾಕ್ರಟೀಸನ ಹೆಂಡತಿ ಒರಟು, ಛಲವಾದಿ; ಬಿರುಸಾದ ಭಾಷೆ ಆಕೆಯದು. ಸದಾ ಬೈಗಳು. ಜಗಳ ಮಾಡುವಲ್ಲಿ ಆಕೆಗೆ ಸಮರಿಲ್ಲ ಎನ್ನಿ. ಆದರೇನು, ಸಾಕ್ರಟೀಸ್ ಅವಳನ್ನು ಪ್ರೇಮದೃಷ್ಟಿಯಿಂದ ನೋಡಿದರು. ಅಂಥ ಹೆಂಡತಿಯೊAದಿಗಿದ್ದರೂ ಅವರ ಮನೆ ‘ಸೌಖ್ಯಮಂದಿರ!’
ಮಧುರತೆ ಹೃದಯದಲಿ, ಸೌಂದರ್ಯ ನೋಟದಲಿ ಇದ್ದರೆ ಜಗತ್ತು ಜನಾಂಗ ಹೇಗಿದ್ದರೂ ಅದು ಅಂದವಾಗಿ ಚಂದವಾಗಿ ಕಾಣುತ್ತದೆ. ಆಗ ಒಂದು ಬ್ರೆಡ್ಡಿನ ತುಣುಕು ಮೃಷ್ಟಾನ್ನ. ಅನ್ನದ ಗಂಜಿ ಅಮೃತ. ಪುಟ್ಟ ಮನೆಯು ಮಹಲು! ಬದುಕು ಹೃದ್ಯವಾಗಿಬಿಡುತ್ತದೆ!
ನಮಗೆ ಆ ದೇವಕಲೆ, ನೋಡುವ ಮಾಟ ಅಳವಡುತ್ತಿಲ್ಲ ಅಷ್ಟೇ. ಹೂ ತಂದು ದೇವನ ತಲೆಗಿಡುತ್ತೇವೆ, ದೇವದರ್ಶನ ಬಯಸುತ್ತೇವೆ. ದೇವರೆನ್ನುತ್ತಾನೆ “ಅದನ್ನೇಕೆ ಅರ್ಪಿಸುವೆ? ಆ ಹೂವೇ ನಾನು; ನೀನು ನನ್ನ ನೋಡಲಿ, ನೋಡಿ ಸಂತಸಪಡಲಿ, ಆನಂದೋನ್ಮಾದ ಹೊಂದಲಿ ಎಂದೇ ಅದರಲ್ಲಿ ಸೌಂದರ್ಯವಾಗಿ ನಿಂತೆ! ನೀನು ಹಿಡಿದ ಹೂವಿನಲ್ಲಿ ನನ್ನ ಕಾಣು!”
ನಾವು ಕಾಣಬೇಕು ದೇವನನ್ನು; ಹುಡುಕುವುದಲ್ಲ! ಅಡಗಿದ್ದರಲ್ಲವೆ ಹುಡುಕುವುದು! ಮಲ್ಲಿಗೆಯ ಲತೆಯಲ್ಲಿ, ಕಮಲದ ಸರದಲ್ಲಿ, ಮಾಮರದ ಹೂವಿನಲ್ಲಿ, ಇನಿಕಂಠದ ಶುಕದಲ್ಲಿ; ಮಹಂತರಲಿ, ಮಹತ್ತಿನಲಿ ಆ ದೇವನ ರೂಹು ನೆಲಸಿದೆ. ಅದನ್ನು ಕಾಣುವುದು, ಅದನ್ನು ಗುರುತಿಸುವುದು ಅದುವೇ ಭಗವಚ್ಚಿಂತನ!
ಭಗವAತನನ್ನು ಕಾಣಲು ಒಂದು ವಿಶಿಷ್ಟ ಮಂದಿರಕ್ಕೆ, ಗುಡ್ಡ-ಬೆಟ್ಟದ ದೇಗುಲಕ್ಕೆ, ತೀರ್ಥ-ಕ್ಷೇತ್ರದ ತಾಣಕ್ಕೆ ಹೋಗಬೇಕಿಲ್ಲ. ಹೋಗಬಾರದೆಂದೂ ಅಲ್ಲ. ದೇವನ ಕಾಣುವುದಕ್ಕೂ ಅದಕ್ಕೂ ಸಂಬAಧ ಅಷ್ಟಕ್ಕಷ್ಟೇ. ಹೃದಯದಲ್ಲಿ ಮಧುರ ರಸ ತುಂಬಿಕೊAಡು ಎಲ್ಲಿ ಹೋದರೂ ಸರಿ ಏನ ದೃಷ್ಟಿಸಿದರೂ ಸರಿ, ಅಲ್ಲಿ ಭಗವದ್ದರ್ಶನ ‘ಸೌಂದರ್ಯ’ ‘ಆನಂದ’ ರೂಪದಲ್ಲಿ!
ಸೌಂದರ್ಯ ಕೇವಲ ರೂಪದಲ್ಲಲ್ಲ; ಶಬ್ದ ಸ್ಪರ್ಶ ರಸ ಗಂಧಗಳಲ್ಲೂ ಇದೆ. ಐದಿಂದ್ರಿಯ ಬಳಸುವಾಗ ಕಂಡುದೆಲ್ಲ ಸವಿ! ಸವಿಯಾದುದೆಲ್ಲ ದೇವನೇ! ಮೋಹ, ಮದ, ದ್ವೇಷ, ಅಸೂಯೆ, ಅಹಂಗಳಿಗಾಗ ಅವಕಾಶವೇ ಇಲ್ಲ. ಅವುಗಳ ಅಭಾವವೇ ಮನಸ್ಸಿನ ಮಧುರತೆ! ಮಧುರತೆಯನ್ನು ದೇಹ ವಚನ ಮನಸ್ಸಿನ ಮೂಲಕ ಹೊರಹೊಮ್ಮಿಸುವುದೇ ಭಗವಚ್ಚಿಂತನ!!
[ಪೂಜ್ಯ ಸ್ವಾಮಿಗಳ ‘ಭಗವಚ್ಚಿಂತನ’ ಪ್ರವಚನ ಸಂಕಲನದಿAದ.
ಕೃಪೆ: ಜಗದ್ಗುರು ಶ್ರೀ ಶಿವರಾತ್ರೀಶ್ವರ ಗ್ರಂಥಮಾಲೆ, ಮೈಸೂರು, ೧೯೯೩]