ಅಯುಕ್ತಃ ಪ್ರಾಕೃತಃ ಸ್ತಬ್ಧಃ ಶಠೋ ನೈಷ್ಕೃತಿಕೋಲಸಃ |
ವಿಷಾದೀ ದೀರ್ಘಸೂತ್ರೀ ಚ ಕರ್ತಾ ತಾಮಸ ಉಚ್ಯತೇ ||
– ಭಗವದ್ಗೀತಾ, ೧೮:೨೮
“ಅಜಾಗರೂಕತೆ, ಸಂಸ್ಕಾರಹೀನತೆ, ಅವಿನಯ, ಶಠತೆ, ಕಾರ್ಯಶೀಲತೆ ಇಲ್ಲದಿರುವುದು, ಆಲಸ್ಯ, ನಿಷ್ಕಾರಣ ವಿಷಾದಪಡುವುದು, ದೀರ್ಘಸೂತ್ರತೆ – ಈ ಸ್ವಭಾವಗಳನ್ನು ಬೆಳೆಸಿಕೊಂಡವನು ‘ತಾಮಸ ಕರ್ತ’ನೆನಿಸುತ್ತಾನೆ.”
ಆಗಬೇಕಾದ ಕೆಲಸಗಳಿಂದ ವಿಮುಖರಾಗುವುದು, ಕಲ್ಪಿತ ಕಾರಣಗಳನ್ನು ಮುಂದೊಡ್ಡಿ ನಿರ್ಣಯಗಳನ್ನು ಮುಂದಕ್ಕೆ ಹಾಕುವುದು, ಏನೋ ತೊಂದರೆಯಾಗುತ್ತದೆಂದು ಶಂಕೆಪಟ್ಟು ನಿಷ್ಕ್ರಿಯರಾಗಿರುವುದು – ಇಂತಹ ದೀರ್ಘಸೂತ್ರತೆಯು ವೈಯಕ್ತಿಕ ವಹಿವಾಟುಗಳಲ್ಲಿಯೂ ಸಾರ್ವಜನಿಕ ಕ್ಷೇತ್ರಗಳಲ್ಲಿಯೂ ಅದಕ್ಷತೆಯಲ್ಲಿ ಪರಿಣಮಿಸುತ್ತದೆ. ಇದಕ್ಕೆ ಒಳಗಾಗದೆ ಕಾರ್ಯೋತ್ಸಾಹಿಗಳಾದವರಿಂದಲೇ ದೊಡ್ಡ ಸಾಧನೆಯಾಗುವುದು.
ಟರ್ಕಿ ದೇಶದ ಆಧುನಿಕೀಕರಣವನ್ನು ಅಲ್ಪಕಾಲದಲ್ಲಿ ಪವಾಡವೆಂಬಂತೆ ಸಾಧಿಸಿ ಜಗತ್ತಿನ ರಾಷ್ಟ್ರನಾಯಕ ಪಂಕ್ತಿಯಲ್ಲಿ ದಂತಕಥೆಯಾದವನು ೧೯೨೩-೧೯೩೮ರ ವರ್ಷಗಳಲ್ಲಿ ಟರ್ಕಿ ಅಧ್ಯಕ್ಷನಾಗಿದ್ದ ಕೆಮಾಲ್‌ಪಾಶಾ ಅಟಾಟುರ್ಕ್. ಭಾಷಿಕವಾಗಿಯೂ ಟರ್ಕಿ ಸ್ವತಂತ್ರವಾಗಬೇಕೆಂದು ದೃಢಮನಸ್ಕನಾಗಿದ್ದವನು ಆತ. ಅಧಿಕಾರಕ್ಕೆ ಬಂದ ತರುಣದಲ್ಲಿಯೆ ಆತ ಉನ್ನತಾಧಿಕಾರಿಗಳನ್ನೆಲ್ಲ ಕರೆಯಿಸಿ ಕೇಳಿದ: “ಇನ್ನು ಮುಂದೆ ನಮ್ಮ ದೇಶದಲ್ಲಿ ರ‍್ಯಾಬಿಕ್ ಭಾಷೆಯ ಆವಶ್ಯಕತೆ ಇಲ್ಲ. ಎಲ್ಲ ಸರ್ಕಾರೀ ವ್ಯವಹಾರಗಳಲ್ಲಿ ಈಗ ಬಳಕೆಯಲ್ಲಿರುವ ರ‍್ಯಾಬಿಕ್ ಭಾಷೆಯನ್ನು ಬಿಟ್ಟು ನಮ್ಮದೇ ಆದ ಟರ್ಕಿಶ್ ಭಾಷೆಯನ್ನು ನೆಲೆಗೊಳಿಸಬೇಕಾಗಿದೆ. ಇದಕ್ಕೆ ಎಷ್ಟು ಸಮಯ ಹಿಡಿಯಬಹುದು?”
ಅಧಿಕಾರಿಗಳು ಏನೇನೊ ಲೆಕ್ಕಾಚಾರ ಮಾಡಿ ಉತ್ತರಿಸಿದರು: “ದೃಢಪ್ರಯತ್ನ ಮಾಡಿದರೆ ಹತ್ತು ವರ್ಷಗಳಲ್ಲಿ ಇದನ್ನು ಕಾರ್ಯಗತಗೊಳಿಸಬಹುದು.” ಕೆಮಾಲ್‌ಪಾಶಾ ಹೇಳಿದ: “ಒಳ್ಳೆಯದು. ನೀವು ಹೇಳಿದ ಹತ್ತು ವರ್ಷದ ಅವಧಿ ನಾಳೆ ಬೆಳಗ್ಗೆ ಹತ್ತು ಗಂಟೆಗೆ ಮುಗಿಯುತ್ತದೆಂದು ನಾನು ಹೇಳುತ್ತಿದ್ದೇನೆ. ಅದಕ್ಕೆ ಏನೇನು ಏರ್ಪಾಡುಗಳು ಬೇಕೋ ಮಾಡಿರಿ.” ಕೆಮಾಲ್‌ಪಾಶಾನ ಮಾತೆಂದರೆ ಸುಗ್ರೀವಾಜ್ಞೆ. ಅದಕ್ಕೆ ಎದುರಿಲ್ಲ. ಹಾಗೆಯೆ ನಡೆಯಿತು. ಕೂಡಲೆ ರ‍್ಯಾಬಿಕ್ ಭಾಷೆ ನಿರ್ಗಮಿಸಿ ಟರ್ಕಿಶ್ ಭಾಷೆ ಆ ರಾಷ್ಟ್ರದ ಅಧಿಕೃತಭಾಷೆಯಾಗಿ ಚಲಾವಣೆಯಾಯಿತು. ಹೀಗೆ ಇಪ್ಪತ್ತನಾಲ್ಕು ಗಂಟೆಗಳೊಳಗೆ ಅಲ್ಲಿಯ ಭಾಷಾಸಮಸ್ಯೆ ಬಗೆಹರಿದಿತ್ತು!