ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಉತ್ಥಾನ ಫೆಬ್ರವರಿ 2023 > ಪರಿಸರಸ್ನೇಹಿ ಜೀವನಶೈಲಿ

ಪರಿಸರಸ್ನೇಹಿ ಜೀವನಶೈಲಿ

ಪರಿಸರಸ್ವಾಸ್ಥ್ಯ ಕುಸಿಯುತ್ತಿರುವುದರಿಂದುಂಟಾಗುತ್ತಿರುವ ಸಮಸ್ಯೆಗಳ ಅರಿವು ಈಗ ಜಗತ್ತಿಗೆಲ್ಲ ಆಗಿದೆ. ಆದರೆ ಇದುವರೆಗೆ ಬಹುಮಟ್ಟಿಗೆ ಯಾರಾರನ್ನೋ ಕಾರಣವಾಗಿಸುವುದು, ಪರಿಹಾರವನ್ನು ತಾಂತ್ರಿಕತೆಗಳಲ್ಲಿ ಅರಸುವುದು ಮೊದಲಾದವೇ ನಡೆದಿವೆ. ಈಗಲಾದರೋ ಎಲ್ಲೆಡೆ ಹವಾಮಾನವೈಪರೀತ್ಯ, ಹಿಮನದಿಗಳು ಕರಗುತ್ತಿರುವುದು, ಸಮುದ್ರಮಟ್ಟ ಏರುತ್ತಿರುವುದು, ಅಕಾಲಿಕ ಮಳೆ, ಭೂಕುಸಿತ ಮೊದಲಾದ ವಿದ್ಯಮಾನಗಳು ಹಿಂದಿಗಿಂತ ಹೆಚ್ಚು ಆತಂಕವನ್ನು ಸೃಷ್ಟಿಸುತ್ತಿವೆ. ಈ ಹಿನ್ನೆಲೆಯಲ್ಲಿ ಕಳೆದ ವಿಶ್ವ ಪರಿಸರ ದಿನ (ಜೂನ್ ೫) ಮೊದಲಾದ ಸಂದರ್ಭಗಳಲ್ಲಿ ಪ್ರಧಾನಿ ನರೇಂದ್ರಮೋದಿ ಅವರು ಪ್ರವರ್ತಿಸುತ್ತ ಬಂದಿರುವ ‘ಮಿಷನ್ ಲೈಫ್’ ಸೂತ್ರಾವಳಿ ಎಲ್ಲರ ಚಿಂತನೆಗೂ ಅನುಷ್ಠಾನಕ್ಕೂ ಅರ್ಹವಾಗಿದೆ. ಹಿಂದೆಯೆ   ೨೦೨೧ ನವೆಂಬರ್ ೧ರ ಗ್ಲಾಸ್ಗೋ ಶೃಂಗಸಭೆಯಲ್ಲಿಯೂ ಇದು ಮಂಡಿತವಾಗಿತ್ತು. ಪ್ರಕೃತ್ಯಾರಾಧನೆಯ ಪರಂಪರೆ ಇರುವ ಭಾರತದ ಪ್ರಧಾನಿಗಳು ಪರಿಸರಸ್ವಾಸ್ಥ್ಯಾನುಗುಣ ಜೀವನಶೈಲಿ ಮಾತ್ರ ಈಗಿನ ಚಿಂತಾಜನಕ ಸನ್ನಿವೇಶಕ್ಕೆ ಶಮನಕಾರಿಯಾಗಬಲ್ಲದು ಎಂದಿರುವುದು ಅನುಸಂಧಾನಾರ್ಹವಾಗಿದೆ. ಹಾಗೆಂದು ಇದು ದಂತಗೋಪುರ ಚಿಂತನೆಯೆಂದು ಭಾವಿಸಬೇಕಾಗಿಲ್ಲ. ಜನರ ಪಾಲ್ಗೊಳ್ಳುವಿಕೆಯಿಂದಾಗಿ ಸ್ವಚ್ಛ ಭಾರತ ಮೊದಲಾದ ಪ್ರಯಾಸಗಳು ಗಣನೀಯ ಪ್ರಮಾಣದ ಯಶಸ್ಸನ್ನು ಕಂಡಿವೆಯಲ್ಲವೆ? ಅದೇ ರೀತಿಯಲ್ಲಿ ಬಳಸಿ ಬಿಸಾಡುವುದಕ್ಕೆ ಬದಲಾಗಿ ಮರುಬಳಕೆ, ಅನಿಲ ಹೊರಸೂಸುವಿಕೆಯನ್ನು ಮಿತಗೊಳಿಸಬಲ್ಲ ಹಸಿರು-ಪೋಷಣೆ, ಹೊಸ ತಾಂತ್ರಿಕತೆಯ ಮೂಲಕ ಇಂಧನದ ನವೀಕರಣ, ‘ಕಾರ್ ಪೂಲಿಂಗ್’, ಅವಶ್ಯವಾದಷ್ಟೆ ಪ್ರಮಾಣದ ಶುದ್ಧನೀರಿನ ಉಪಯೋಗ, ಅಧಿಕಾಧಿಕ ಪ್ರಮಾಣದಲ್ಲಿ ಮಳೆನೀರಿನ ಸಂಗ್ರಹಣೆ, ಅಡಿಗೆಗೆ ಕಡಮೆ ನೀರು ಸಾಕಾಗುವ ಸಿರಿಧಾನ್ಯಗಳ ಬಳಕೆ, ಹವಾನಿಯಂತ್ರಕಾದಿಗಳಲ್ಲಿ ವಿದ್ಯುತ್ತು ಪೋಲಾಗದಂತಹ ಕ್ರಮಗಳು, ಹೆಚ್ಚುಹೆಚ್ಚು ಸೌರಶಕ್ತಿಯ ಬಳಕೆ – ಈ ವಿಧಾನಗಳೆಲ್ಲ ವೈಯಕ್ತಿಕ-ಕೌಟುಂಬಿಕ ನೆಲೆಯಲ್ಲಿಯೆ ಕಾರ್ಯಸಾಧ್ಯವಾದವು ತಾನೆ? ‘ಮಿಷನ್ ಲೈಫ್’ ಸೂಚನಾವಳಿ ಸಕಾಲಿಕವಾಗಿದೆ.

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ