ಸಮಾಜದ ಭಯಕ್ಕೋ, ಪೋಷಕರ ಒತ್ತಡಕ್ಕೋ ‘ಈಗ ನಾವು ಚೆನ್ನಾಗಿದ್ದೇವೆ’ ಎಂಬAತೆ ಬಿಂಬಿಸಿದರೂ ಅದು ಕೇವಲ ಮುಖವಾಡ ಮಾತ್ರವೇ ಆಗಿರುತ್ತದೆ. ಯಾಕೆಂದರೆ ಓರ್ವ ವ್ಯಕ್ತಿ ಯಾರನ್ನಾದರೂ ಒಮ್ಮೆ ನೋಯಿಸಿದ್ದಲ್ಲಿ ಅದು ಅವರ ಮನದಲ್ಲಿ ಸದಾ ಉಳಿದೇ ಇರುತ್ತದೆ, ಮುಖದ ಮೇಲೆ ಅದೆಷ್ಟು ನಗುವಿದ್ದರೂ. ಹರಿದ ಬಟ್ಟೆಯನ್ನು ಮತ್ತೆ ಒಂದಾಗಿಸಿ ಹೊಲಿದಲ್ಲಿ ಸೂಜಿಯ, ನೂಲಿನ ಗುರುತಿದ್ದಂತೆ ಮನದೊಳಗೂ ಅಂಥದ್ದೊಂದು ತೇಪೆ ಉಳಿದುಕೊಂಡಿರುತ್ತದೆ. ಅಷ್ಟಕ್ಕೂ ಪ್ರತಿಯೊಬ್ಬರೂ ತನ್ನ ಬದುಕಿನಲ್ಲಿ ಬಯಸುವುದೇನನ್ನು?
ಇಡಿಯ ಜಗತ್ತಿನಲ್ಲಿ ನಮ್ಮನ್ನು ಅತ್ಯಂತ ನೋಯಿಸುವುದು ನಾವು ಅತಿಹೆಚ್ಚು ಪ್ರೀತಿಸುವವರಂತೆ! ಇಂಥ ಮಾತುಗಳನ್ನು ಕೇಳಿದಾಗೆಲ್ಲ ಹಿಂದೆ ನಗು ಬರುತ್ತಿತ್ತು. ಇಂಥದ್ದೊಂದು ಹೇಗೆ ಸಾಧ್ಯ ಎಂಬ ಪ್ರಶ್ನೆ ಕಾಡುತ್ತಿತ್ತು. ಆದರೆ ಸೂಕ್ಷ್ಮವಾಗಿ ಅರ್ಥ ಮಾಡಿಕೊಂಡರೆ ಇದುವೇ ನಿಜ. ಮನೆಯ ಮಗಳು ತಾನಿಷ್ಟ ಪಟ್ಟವರನ್ನು ಮದುವೆಯಾದಳು ಎಂದ ಕಾರಣಕ್ಕೆ ಅವಳನ್ನು ಮತ್ತೆಂದೂ ಮನೆಯೊಳಗೆ ಸೇರಿಸದೆ ಉಳಿಯುವ ತಂದೆತಾಯಿಗಳಿಂದ ತೊಡಗಿ, ಕ್ಷುಲ್ಲಕವೆಂದು ಹೊರಗಿನವರಿಗೆ ಅನಿಸಬಹುದಾದ ಕಾರಣಗಳಿಗಾಗಿ ವಿಚ್ಛೇದನದತ್ತ ಮುಖಮಾಡಿ ನಿಲ್ಲುವ ಗಂಡಹೆಂಡಿರವರೆಗೂ ಅನುಬಂಧದ ತಂತುವೊಂದು ಕಡಿದುಬೀಳುವುದಕ್ಕೆ ಕಾರಣ ಇಬ್ಬರಲ್ಲೊಬ್ಬರ ಮನಸ್ಸು ವಾಸಿಯಾಗದ ಮಟ್ಟಿಗೆ ಘಾಸಿಗೊಂಡಿದೆ ಎಂಬುದೇ ತಾನೇ?
ಓದಿನಲ್ಲಿ ಮುಂದಿದ್ದ ವಿದ್ಯಾರ್ಥಿನಿಯೋರ್ವಳ ಬದುಕಿನ ಕಥೆಯಿದು. ಕೋವಿಡ್ ಲಾಕ್ಡೌನ್ನ ಅವಧಿಯಲ್ಲಿ ಅವಳ ಮದುವೆಯಾಯಿತು. ತಾವೇ ಮುಂದೆ ಓದಿಸುತ್ತೇವೆ ಎಂಬ ಭರವಸೆಯನ್ನು ಕೊಟ್ಟು ಮದುವೆ ಮಾಡಿಕೊಂಡವರು ಅವಳನ್ನು ಓದಿಸುವುದು ಹೋಗಲಿ, ಅವಳ ಕನಸುಗಳನ್ನಾಗಲಿ ಭಾವನೆಗಳನ್ನಾಗಲಿ ಗೌರವಿಸುವುದನ್ನೂ ಮರೆತರು. ಶರೀರ ಬಸವಳಿದು ಸೋತು ಹೋದಳು. ಮದುವೆಯಾದ ಹೊಸತರಲ್ಲಿ ಹಿತವೆನಿಸಿದ ಭರವಸೆಗಳೆಲ್ಲ ಬರಿಯ ಓಟಿನ ಮೊದಲಿನ ರಾಜಕಾರಣಿಗಳ ಭಾಷಣದಂತೆ ಎಂದು ಅವಳಿಗೆ ಬಹಳ ಬೇಗನೆ ಅರ್ಥವಾಗಿ ಹೋಯಿತು. ಇಪ್ಪತ್ತೆರಡರ ಹರೆಯದ ಆ ಹುಡುಗಿ ಬದುಕಿನ ಕುರಿತು ಕಟ್ಟಿಕೊಳ್ಳುವ ಆಸೆಗಳಾದರೂ ಇನ್ನೇನು? ಅವುಡುಗಚ್ಚಿ ಎಲ್ಲವನ್ನೂ ಎದುರಿಸಿ ಬದುಕ ಹೊರಟರೂ ಅವಳ ಗಂಡನ ಕಾಟ ಮಾತ್ರ ಕಡಮೆಯಾಗಲಿಲ್ಲ. ಕಡೆಗೆ ರೋಸಿ ಅವನನ್ನು ಬಿಟ್ಟುಬಿಡಬೇಕೆಂಬ ತೀರ್ಮಾನ ತೆಗೆದುಕೊಳ್ಳುವುದು ಅವಳಿಗೆ ಅನಿವಾರ್ಯವಾಯಿತು. ಮುರಿದ ಟೊಂಗೆಯನ್ನು ಮತ್ತೆ ನೆಟ್ಟು ಬೇರು ಹಿಡಿಯುವಂತೆ ಮಾಡಿ ಬದುಕಿಸುವುದು ಅದೆಷ್ಟು ಕಠಿಣ ಕೆಲಸ!
ಸ್ನೇಹಿತರೊಬ್ಬರ ತಂಗಿಯ ಬದುಕಿನ ಕಥೆಯೂ ಹೀಗೇ ಆಘಾತಕಾರಿಯಾದುದು. ಕಷ್ಟದಲ್ಲಿಯೇ ಬೆಳೆದ ಹುಡುಗಿ, ಬದುಕನ್ನು ಅರ್ಥಮಾಡಿಕೊಳ್ಳಬಲ್ಲಷ್ಟು ಪ್ರಬುದ್ಧತೆಯನ್ನು ಹೊಂದಿದವಳು. ತಂದೆಯನ್ನು ಎಳವೆಯಲ್ಲಿಯೇ ಕಳೆದುಕೊಂಡ ಕಾರಣ ತನ್ನ ತಾಯಿಗೆ ಕಷ್ಟವಾಗಬಾರದೆಂದು ಪದವಿ ಓದುವ ಹಂತದಲ್ಲಿದ್ದಾಗಲೇ ಹಿರಿಯರು ತೋರಿಸಿದ ಸಂಬಂಧವನ್ನು ಒಪ್ಪಿಕೊಂಡಳು. ಶ್ರೀಮಂತರ ಮನೆಗೆ ಮಗಳು ಸೇರಿದಳು, ಅವಳ ಬದುಕೇನಿದ್ದರೂ ಇನ್ನು ಹೂವಿನ ಹಾಸಿಗೆಯೇ ಎಂದು ಊರಿನವರೆಲ್ಲ ಮೆಚ್ಚುಗೆಯ ಮಾತುಗಳನ್ನಾಡಿದ್ದೂ ಆಯಿತು. ಸ್ಫುರದ್ರೂಪಿ ಹುಡುಗ, ಮನೆಗೆಲಸಕ್ಕೆ ಆಳುಗಳು. ಇವಳ ಸೌಭಾಗ್ಯಕ್ಕೆ ಎಣೆಯೇ ಇಲ್ಲ ಎಂದು ಅಸೂಯೆಪಟ್ಟವರೂ ಹಲವರು. ಕೆಲವೇ ದಿನಗಳಲ್ಲಿ ಇವಳಿಗೆ ರೂಪಿನ ಹಿಂದಿನ ಭೀಕರತೆಯ ಅರಿವಾಯಿತು. ಅವನಿಷ್ಟಪಟ್ಟಂತೆ ಒದಗುವ ಹೆಣ್ಣುಮಕ್ಕಳು ಹಲವಾದರೆ, ಇವಳು ತನ್ನ ತಾಯಿಗಾಗಲಿ, ಅಣ್ಣತಂಗಿಗಾಗಲಿ ಫೋನ್ ಮಾಡುವಂತಿರಲಿಲ್ಲ ಎಂಬಷ್ಟರಮಟ್ಟಿಗಿನ ಸ್ವಾತಂತ್ರ್ಯ ಹರಣ. ಸ್ವಂತ ಫೋನ್ ಇಟ್ಟುಕೊಳ್ಳುವಂತಿರಲಿಲ್ಲ. ಗಂಡನ ಅನುಮತಿಯ ಮೇರೆಗೆ ಅವನ ಉಪಸ್ಥಿತಿಯಲ್ಲಿ ಮಾತ್ರವೇ ತನ್ನ ತಾಯಿಗೆ ಕರೆ ಮಾಡಬೇಕು… ಇತ್ಯಾದಿ ಇತ್ಯಾದಿ. ಜಗಮೆಚ್ಚಿದ ಹುಡುಗನನ್ನು ಇವಳು ಮನಸಾರೆ ಮೆಚ್ಚಿ ಆರಾಧಿಸುವುದು ಸಾಧ್ಯವಾಗುವ ವಿಚಾರವೇ? ವರ್ಷಾನುಗಟ್ಟಲೆ ಇಂಥ ಸಂಗಾತಿಯೊಂದಿಗೆ ‘ಮಧುರ ಮಧುರವೀ ಮಂಜುಳಗಾನ’ ಎಂಬುದು ಮರುಭೂಮಿಯಲ್ಲಿ ನೆಟ್ಟ ಮಲ್ಲಿಗೆಬಳ್ಳಿಯಲ್ಲವೇ?
ಶತ್ರುವನ್ನು ಕ್ಷಮಿಸಿದಷ್ಟು ಸುಲಭವಾಗಿ ಮಿತ್ರನನ್ನು ಕ್ಷಮಿಸಲಾಗದು! ಎಂಬುದು ಸಾರ್ವತ್ರಿಕ ಸತ್ಯ. ಹಾಗಿರುವಾಗ ಬಾಳಗೆಳೆಯನಿಂದಲೋ ಬಾಳಗೆಳತಿಯಿಂದಲೋ ಮನಸ್ಸಿಗೆ ಈ ಬಗೆಯ ಘಾಸಿಯಾದರೆ ಆ ನೋವು ಮಾಗುವುದಕ್ಕೆ ಬಹಳವೇ ಸಮಯ ಬೇಕಾಗುತ್ತದೆ. ಪತ್ನಿಯಿಂದ ವಿಚ್ಛೇದನ ಪಡೆದ ಪರಿಚಿತರೋರ್ವರು ಹೊಸಬದುಕು ಕಟ್ಟಿಕೊಳ್ಳುವ ಆಕಾಂಕ್ಷೆಯಿಲ್ಲವೇ ಎಂದು ಕೇಳಿದ್ದಕ್ಕೆ ಉತ್ತರಿಸಿದ್ದು ಹೀಗೆ: “ಒಂದು ಅನುಭವದಲ್ಲಿಯೇ ಮನಸ್ಸು ಕಲ್ಲಾಗಿದೆ, ಬಾಳು ಮುಳ್ಳಾಗಿದೆ. ಮತ್ತೆ ಮದುವೆಯಾಗುವ ಧೈರ್ಯ ನನಗಿಲ್ಲ.” ಇನ್ನೂ ಮೂವತ್ತೈದರ ಹರೆಯದ ಅವರಿಂದ ಇಂಥ ಮಾತು ಬಂದರೆ ವಿಷಾದವಲ್ಲದೇ ಇನ್ನೇನು? ಒಂಟಿಯಾಗಿ ಸಾಗುವ ದಾರಿ ದೂರವೂ ಕಠಿಣವೂ ಎಂಬ ಅರಿವು ಇದ್ದೂ ಅದೇ ಕ್ಷೇಮ ಎನಿಸಬೇಕಾದರೆ ಅವರ ಪರಿಸ್ಥಿತಿ ಅದೆಷ್ಟು ಶೋಚನೀಯವಾಗಿರಬೇಡ!
ಬೇರೆ ಯಾವುದೇ ಸ್ನೇಹಾಚಾರದಲ್ಲಿ ಇಬ್ಬರಲ್ಲೊಬ್ಬರು ಒಂದು ತಪ್ಪು ಮಾಡಿದಾಗ ‘ಕ್ಷಮಿಸಿಬಿಡು’ ಎಂದಲ್ಲಿಗೆ ಅದು ಮುಗಿಯುತ್ತದೆ. ಆದರೆ ನಂಬಿಕೆ ಮುರಿದುಬಿದ್ದಾಗ ಅಲ್ಲ. ‘ಸಾರಿ’ ಎನ್ನುವುದು ತನ್ನ ಅರ್ಥವನ್ನೇ ಕಳೆದುಕೊಳ್ಳುವ ಮಟ್ಟಿಗೆ ಜನರು ಆ ಪದವನ್ನು ಉಪಯೋಗಿಸುತ್ತಾರೆ. ‘ಸಾರಿ’ ಎನ್ನುವ ಪದ ಕೇಳಿಬಂದಾಗ ನನಗೆ ನನ್ನ ಡ್ರೈವಿಂಗ್ ಮಾಸ್ತರರು ನೆನಪಾಗುತ್ತಾರೆ. ಕ್ಲಚ್, ಬ್ರೇಕ್, ಆಕ್ಸಿಲರೇಟರ್ಗಳ ಗದ್ದಲದಲ್ಲಿ ಒಂದೂ ನನಗರ್ಥವಾಗದೆ ಬ್ರೇಕ್ ಒತ್ತುವ ಬದಲು ಆಕ್ಸಿಲರೇಟರ್ ಒತ್ತಿಯೋ ಏನಾದರೂ ಎಡವಟ್ಟು ಮಾಡಿ ತಕ್ಷಣದಲ್ಲಿ ಸಾರಿ ಅನ್ನುತ್ತಿದ್ದೆ. ಆ ಮಾಸ್ತರರು “ಸಾರಿ ಅಂದರೆ ಆಕ್ಸಿಡೆಂಟ್ ಆಗದೆ ಇರ್ತದಾ?” ಎಂದು ಬೈಯುತ್ತಿದ್ದರು. ಹೌದಲ್ಲ! ಮನಸ್ಸಿನೊಳಗೆ ಘಟಿಸುವ ಅಪಘಾತಗಳನ್ನೂ ಸಾರಿ ಎಂಬುದು ತಡೆಯದು! ಹಾಗೆಂದು ಕ್ಷಮಿಸಿ ಎಂದು ಕೇಳುವುದೇ ತಪ್ಪೆಂದು ಇದರರ್ಥವಲ್ಲ. ಕ್ಷಮಿಸಿ ಎಂಬುದು ಅರ್ಥಪೂರ್ಣವಾಗುವುದು ಅದೇ ತಪ್ಪು ಮತ್ತೆ ಮರುಕಳಿಸದೆ ಇದ್ದಾಗ ಮಾತ್ರ. ನಿಜಕ್ಕೂ ತಾನು ಮಾಡಿದ್ದು ತಪ್ಪೆಂಬ ಭಾವ ಇದ್ದಾಗ, ತನ್ನ ಇಂತಹ ನಿರ್ದಿಷ್ಟ ವರ್ತನೆಯಿಂದ ತನ್ನ ಆಪ್ತರಿಗೆ ನೋವಾಗುತ್ತದೆ ಎಂಬುದನ್ನು ಅರ್ಥ ಮಾಡಿಕೊಂಡು ಬದಲಾದಾಗ ಮಾತ್ರ.
ಪರಿಚಿತರು ಅನೇಕರು ಆಡುವುದನ್ನು ಕೇಳಿದ್ದೇನೆ. ಗಂಡಹೆಂಡತಿಯರ ನಡುವೆ ವೈಮನಸ್ಸು ಹೆಚ್ಚಾಗಿ ಪೊಲೀಸ್ ಕಂಪ್ಲೇಟ್ ಆಗಿ ಬಳಿಕವೂ ಒಂದೇ ಮನೆಯಲ್ಲಿ ವಾಸಿಸುವವರ ಕಥನಗಳನ್ನು ಕೇಳಿದಾಗೆಲ್ಲ, ಅಷ್ಟೆಲ್ಲಾ ಆದ ಮೇಲೂ ದಾಂಪತ್ಯದ ಅನ್ಯೋನ್ಯತೆ ಹೇಗೆ ಉಳಿಯುವುದಕ್ಕೆ ಸಾಧ್ಯ? ಸಮಾಜದ ಭಯಕ್ಕೋ, ಪೋಷಕರ ಒತ್ತಡಕ್ಕೋ ‘ಈಗ ನಾವು ಚೆನ್ನಾಗಿದ್ದೇವೆ’ ಎಂಬಂತೆ ಬಿಂಬಿಸಿದರೂ ಅದು ಕೇವಲ ಮುಖವಾಡ ಮಾತ್ರವೇ ಆಗಿರುತ್ತದೆ. ಯಾಕೆಂದರೆ ಓರ್ವ ವ್ಯಕ್ತಿ ಯಾರನ್ನಾದರೂ ಒಮ್ಮೆ ನೋಯಿಸಿದ್ದಲ್ಲಿ ಅದು ಅವರ ಮನದಲ್ಲಿ ಸದಾ ಉಳಿದೇ ಇರುತ್ತದೆ, ಮುಖದ ಮೇಲೆ ಅದೆಷ್ಟು ನಗುವಿದ್ದರೂ. ಹರಿದ ಬಟ್ಟೆಯನ್ನು ಮತ್ತೆ ಒಂದಾಗಿಸಿ ಹೊಲಿದಲ್ಲಿ ಸೂಜಿಯ, ನೂಲಿನ ಗುರುತಿದ್ದಂತೆ ಮನದೊಳಗೂ ಅಂಥದ್ದೊಂದು ತೇಪೆ ಉಳಿದುಕೊಂಡಿರುತ್ತದೆ. ಅಷ್ಟಕ್ಕೂ ಪ್ರತಿಯೊಬ್ಬನೂ ತನ್ನ ಬದುಕಿನಲ್ಲಿ ಬಯಸುವುದೇನನ್ನು? ಅಂತರಂಗ ಸವರುವ ಪ್ರೀತಿ, ಕಾಳಜಿಗಳ ಹೊರತಾಗಿ. ಯಶಸ್ಸು, ಹಣ, ಸಾಮಾಜಿಕ ಗೌರವ ಇತ್ಯಾದಿಗಳ ನಡುವೆಯೂ ಬದುಕಿನ ಹೆಜ್ಜೆಯ ಗುರಿ ಕೇವಲ ನೆಮ್ಮದಿಯ ಸಾವೊಂದೇ ಅಲ್ಲವಲ್ಲ!
ಮನೆಯೊಳಗಿನ ನೆಮ್ಮದಿಯನ್ನು ಕೆಡಿಸುವ ಹಲವು ವಿಷಯಗಳಲ್ಲಿ ಮುಖ್ಯವಾದದ್ದು ನಂಬಿಕೆದ್ರೋಹ. ವಿಶ್ವಾಸದ್ರೋಹದ ಕುರಿತು ಒಂದೇ ಸೋಜಿಗದ ವಿಚಾರವೆಂದರೆ ಅದು ನಮ್ಮ ಶತ್ರುಗಳಿಂದ ಘಟಿಸುವುದಿಲ್ಲ, ಮಿತ್ರರಿಂದಲೇ ಆಗಿರುತ್ತದೆ ಎಂಬುದು. ಮನಸ್ಸಿಗೆ ಅತ್ಯಂತ ಘಾಸಿಯಾಗುವುದು ಅದು ನಮ್ಮವರಿಂದಲೇ ಆಯಿತು ಎಂಬ ಕಾರಣಕ್ಕೆ. ಇಂದಿನ ಯುಗದಲ್ಲಿ ಬೆರಳತುದಿಯಲ್ಲೇ ಬ್ರಹ್ಮಾಂಡವೆಂಬುದು ಇದೆ. ಜತೆಗೆ ಮನೆ-ಮನಸ್ಸುಗಳ ನಡುವೆ ಇದು ಅಷ್ಟೇ ದೊಡ್ಡ ಅಂತರವನ್ನೂ ಸೃಷ್ಟಿಸಬಲ್ಲದು. ಒಂದೇ ಮನೆಯೊಳಗಿದ್ದೂ ಸಂವಹನವು ಯಾಂತ್ರಿಕವಾಗುತ್ತ ಬಂದಷ್ಟೂ ನಂಬಿಕೆಯೂ ಸಡಿಲವಾಗುತ್ತ ಬರುತ್ತದೆ. ದೀಪದಡಿಯಲ್ಲಿ ಕತ್ತಲು ಎಂದ ಹಾಗೆ ಹೊರಜಗತ್ತಿನ ಆಗುಹೋಗುಗಳನ್ನೆಲ್ಲ ಬಲ್ಲವರೂ ಸಂಗಾತಿಯ ಕನಸು-ನಿರೀಕ್ಷೆಗಳನ್ನು ಅರ್ಥಮಾಡಿಕೊಳ್ಳದೆ ಹೋಗುವುದು ಎಷ್ಟೋ ಸಂಸಾರಗಳ ನಡುವಿನ ವಿಪರ್ಯಾಸ. ಒಂದು ಹಂತದವರೆಗೆ ತಮ್ಮಷ್ಟಕ್ಕೆ ತಾವೇ ಜೀವನೋಲ್ಲಾಸವನ್ನು ಕಾಪಾಡಿಕೊಂಡವರೂ ಮಕ್ಕಳನ್ನು ನೋಡಿ ನೋವು ಮರೆತವರು, ಮಕ್ಕಳೂ ತಮ್ಮ ವಿದ್ಯಾಭ್ಯಾಸ, ಉದ್ಯೋಗದ ಕಡೆಗೆ ಮುಖ ಮಾಡಿದಾಗ ಒಂಟಿಯಾಗಿಬಿಡುತ್ತಾರೆ. ಈ ಭಾವನಿರ್ವಾತವನ್ನು ತುಂಬಲು ಸಾಮಾಜಿಕ ಮಾಧ್ಯಮದ ಮೊರೆ ಹೋಗುತ್ತಾರೆ. ಬೊಗಸೆ ಪ್ರೀತಿಯನ್ನು ತೋರುವವರು ಸಿಕ್ಕಿದರೂ ಸಾಕು ಬಹಳ ಸುಲಭವಾಗಿ ಸೋತುಬಿಡುತ್ತಾರೆ. ಮುಚ್ಚುಮರೆಯೆಂಬುವುದರ ಎರಡನೆಯ ಇನ್ನಿಂಗ್ಸ್ ಪ್ರಾರಂಭವಾಗುವುದು ಇಲ್ಲಿಂದ.
ಮನೆಯೊಳಗಿನ ಎಲ್ಲ ಅನುಬಂಧಗಳೂ ಭಸ್ಮವಾಗಲು ಈ ಹೆಜ್ಜೆಗಳು ಸಾಕು. ನಾವು ಯಾವ ರಹಸ್ಯವನ್ನೂ ಮುಚ್ಚಿಡದೇ ಎಲ್ಲವನ್ನೂ ಹಂಚಿಕೊಂಡ ವ್ಯಕ್ತಿ ನಮ್ಮಿಂದ ಎಲ್ಲವನ್ನೂ ಮುಚ್ಚಿಟ್ಟಿದ್ದಾರೆ ಎಂದು ಅರ್ಥವಾದಾಗ ಅನುಭವಿಸುವ ನೋವು ಅತ್ಯಂತ ಹೀನಾಯವಾಗಿರುತ್ತದೆ, ಎಷ್ಟೆಂದರೆ ಜಗತ್ತಿನಲ್ಲಿ ನಾವು ಇನ್ಯಾರನ್ನೂ ನಂಬದಷ್ಟು! ಕಲ್ಲಾಗಿಬಿಡುವ ಮನಸ್ಸು ಮತ್ತೆಂದೂ ಮೊಗ್ಗಾಗದು, ಹೂವಾಗದು.
ಇತ್ತೀಚಿನ ದಿನಗಳಲ್ಲಿ ನಮ್ಮ ಸುತ್ತಮುತ್ತ ಎಳೆಯ ವಯಸ್ಸಿನ ದಂಪತಿಗಳ ನಡುವಿನ ಕಲಹಗಳನ್ನು, ಬಿರುಕುಗಳನ್ನು ಕಂಡಾಗ ಪೋಷಕರು ನಿಜಕ್ಕೂ ಚಿಂತಿಸಬೇಕಿರುವುದು ತಮ್ಮ ಮಕ್ಕಳು ಎಸ್ಎಸ್ಎಲ್ಸಿ, ಪಿಯುಸಿಯಲ್ಲಿ ಅದೆಷ್ಟು ಅಂಕಗಳನ್ನು ಗಳಿಸುತ್ತಾರೆಂದೋ, ನಾಳೆಯ ದಿನ ಲಕ್ಷಗಟ್ಟಲೆ ಮೊತ್ತ ಸಂಪಾದಿಸಬಲ್ಲರೋ ಎಂದು ಮಾತ್ರ ಅಲ್ಲ. ಬದುಕೆಂಬ ಪುಟ್ಟ ಗಿಡವನ್ನು ಅಕ್ಕರೆಯಿಂದ ಕಾಪಾಡಿಕೊಂಡು ಅದು ಸದಾ ಹಸಿರಾಗಿರುವಂತೆ ನೋಡಿಕೊಳ್ಳಬಲ್ಲಂತೆ ಅವರನ್ನು ರೂಪಿಸಬೇಕಿದೆ ಎಂಬುದು. ಇಲ್ಲಿ ಹೆತ್ತವರ ಶ್ರಮ ಬಹಳವಿದೆ.
ಅಷ್ಟಕ್ಕೂ ನಮ್ಮ ಮಕ್ಕಳಿಗೆ ಮಾದರಿ ನಾವೇ ತಾನೇ?