ಕೆಲವು ಮಂತ್ರಗಳ ಶಬ್ದವೇ ಅವುಗಳ ಅರ್ಥಕ್ಕಿಂತ ಮಹತ್ತ್ವದ್ದಾಗಿರುತ್ತದೆ. ಒಂದು ವಿಶಿಷ್ಟ ಕ್ರಮದ ಶಬ್ದೋಚ್ಚಾರಣೆಯಿಂದ ವಿಶಿಷ್ಟ ಶಕ್ತಿಯೊಂದು ಜನಿಸುತ್ತದೆ. ವೇದಮಂತ್ರಗಳು ಜೀವಿಗಳಿಗೆ ಈ ಲೋಕದಲ್ಲಿಯೂ ಲೋಕಾಂತರಗಳಲ್ಲಿಯೂ ಹಿತವನ್ನೆಸಗುತ್ತವೆಂದು ನಾವು ವಿಶ್ವಾಸವನ್ನಿರಿಸಿಕೊಳ್ಳಬೇಕು. ನಮ್ಮ ಪರಿಮಿತ ಗ್ರಹಿಕೆಯದಷ್ಟೆ ಆಧಾರದ ಮೇಲೆ ವೇದಗಳನ್ನು ಅರಿಯಲು ಯತ್ನಿಸಬಾರದು. ನಮ್ಮ ಕಣ್ಣು ಕಿವಿ ಬುದ್ಧಿಗಳ ಶಕ್ತಿಗೆ ಮೀರಿದ ಸಂಗತಿಗಳನ್ನು ಕುರಿತೇ ವೇದಗಳು ಹೇಳುವುದು. ಎಷ್ಟೋ ವೇಳೆ ಮಾಧ್ಯಮವಿಲ್ಲದೆಯೆ ಗ್ರಹಿಕೆಯು ಸಾಧ್ಯವಾಗುತ್ತದೆಂಬುದನ್ನು ವೇದೇತರ ಸಂದರ್ಭಗಳಲ್ಲಿಯೂ ನಾವು ಗಮನಿಸಬಹುದು.
ನಮ್ಮ ಬುದ್ಧಿಯ ಪರಿಧಿಗೆ ಎಟುಕದ ಸಂಗತಿಗಳನ್ನು ಋಷಿಗಳು ವೇದದ ಮೂಲಕ ತಿಳಿಸುತ್ತಾರೆ. ಪತ್ರಿಕೆಗಳ ಆಧಾರದ ಮೇಲೆಯೆ ನಾವು ಕಾಣದ ದೇಶಗಳ ಬಗೆಗೆ ತಿಳಿದುಕೊಳ್ಳುತ್ತೇವಲ್ಲವೆ? ಹಾಗೆಯೆ ಯಾವ ಲೌಕಿಕ ಪರಿಕರಗಳಿಗೂ ಎಟುಕದ ಘನತತ್ತ್ವಗಳು ನಮಗೆ ವೇದಮಂತ್ರಗಳ ಮೂಲಕ ಬೋಧವಾಗುತ್ತವೆ. ತೇರೀಜುಬೇರೀಜು ಮಾಡದೆ ವೇದಗಳಲ್ಲಿ ನಾವು ವಿಶ್ವಾಸವಿರಿಸಿದಲ್ಲಿ ಅದರ ಸತ್ಫಲದ ಅನುಭವ ನಮಗೆ ಆಗುತ್ತದೆ; ಉತ್ತರೋತ್ತರ ಅದರ ಸಾಮಂಜಸ್ಯದ ಮನವರಿಕೆಯೂ ಆಗುತ್ತದೆ. ಒಮ್ಮೊಮ್ಮೆ ವರುಣಜಪದಿಂದ ಮಳೆ ಬಾರದಿರಬಹುದು. ಆದರೆ ಈ ಕಾರಣದಿಂದ ಎಲ್ಲ ಮಂತ್ರಗಳನ್ನೂ ಸಗಟಾಗಿ ತಿರಸ್ಕರಿಸಬಾರದು. ಒಂದು ಚಿಕಿತ್ಸೆಯಿಂದ ಒಬ್ಬ ರೋಗಿ ಗುಣಮುಖನಾಗಲಿಲ್ಲವೆಂಬ ಕಾರಣಕ್ಕೆ ಇಡೀ ವೈದ್ಯಶಾಸ್ತçವನ್ನೇ ತಿರಸ್ಕರಿಸಬಹುದೆ? ರೋಗಿಯ ಸ್ಥಿತಿ ಚಿಕಿತ್ಸಾಸಾಧ್ಯತೆಯ ಹಂತವನ್ನು ಮೀರಿರಲೂಬಹುದು. ಅದರಂತೆ ಮಂತ್ರಗಳ ನಡೆಯಲ್ಲಿ ಶಕ್ತಿವಂತ ಪೂರ್ವಕರ್ಮಗಳ ಪಾತ್ರವೂ ಇದ್ದೀತು. ಪಥ್ಯಗಳ ಅಲಕ್ಷ್ಯ ಮೊದಲಾದ ಅಂಶಗಳೂ ಚಿಕಿತ್ಸೆಯ ಪರಿಣಾಮವನ್ನು ಅಪರ್ಯಾಪ್ತವಾಗಿಸಬಹುದು. ಭೌತ ಪ್ರಯೋಗಾಲಯಗಳಲ್ಲಿರುವಂತೆ ಮಂತ್ರಗಳ ಅನುಷ್ಠಾನದಲ್ಲಿಯೂ ನಿಯಮಗಳ ಪಾಲನೆಯ ಅನಿವರ್ಯತೆ ಇರುತ್ತದೆ. ಈ ನಿಯಮಗಳ ಜಟಿಲತೆಯ ಕಾರಣದಿಂದಲೇ ಯಾರೆಂದವರಿಗೆಲ್ಲ ವೇದವು ತೆರೆದುಕೊಳ್ಳಲಾರದೆಂದು ಹೇಳಿರುವುದು, ಮೌಖಿಕ ಪರಂಪರೆಗೆ ಪ್ರಾಶಸ್ತ್ಯ ನೀಡಲಾಗಿರುವುದು.
[ಪೂಜ್ಯ ಪರಮಾಚಾರ್ಯರ ಪ್ರವಚನದಿಂದ]