ನಂಬಿ ಕೆಟ್ಟವರಿಲ್ಲವೋ ಎಂಬಂತೆ ಪ್ರಕೃತಿಯನ್ನು ಕೆಣಕಿ ಬದುಕಿದವರಿಲ್ಲವೋ ಎಂದೂ ಹೇಳಬಹುದೇನೊ. ಹಿಮಾಲಯದಲ್ಲಿ ಈಚಿನ ವರ್ಷಗಳಲ್ಲಿಯೂ ಘಟಿಸಿರುವ ದುರಂತಗಳ ಹಿಂದುಗೂಡಿ ಇದೇ ವರ್ಷದ ಆರಂಭದಲ್ಲಿ ಜೋಶಿಮಠ ಭಾಗದಲ್ಲಿ ನೆಲ ಬಿರುಕುಬಿಟ್ಟು ಅನೇಕ ಕಡೆ ನೆಲ ಕುಸಿದು ಜನಜೀವನವನ್ನು ಉಧ್ವಸ್ತಗೊಳಿಸಿದೆ. ೭೦೦ಕ್ಕೂ ಹೆಚ್ಚು ಮನೆಗಳ ಗೋಡೆಗಳು ಸೀಳಿಹೋಗಿವೆ. ಅಲ್ಲಿಯ ನಿವಾಸಿಗಳು ಸ್ಥಾನಾಂತರಗೊಳ್ಳಬೇಕಾಗಿಬAದಿದೆ. ನೂರಾರು ಕುಟುಂಬಗಳು ಸುರಕ್ಷಿತತೆಯನ್ನರಸಿ ಬೇರೆಡೆಗಳಿಗೆ ವಲಸೆ ಹೋಗುವುದು ಉತ್ತರಾಖಂಡ ಪ್ರಾಂತದಲ್ಲಿ ಮಾಮೂಲೆನಿಸಿಬಿಟ್ಟಿದೆ. ಹೀಗೆ ಲೆಕ್ಕವಿಲ್ಲದಷ್ಟು ಜನರ ಬದುಕನ್ನು ಬಲಿಗೊಟ್ಟಾದರೂ ಊರ್ಜೋತ್ಪಾದನಾದಿ ಯೋಜನೆಗಳಿಗೆ ಆದ್ಯತೆ ನೀಡಬೇಕೆ? ಅಭಿವೃದ್ಧಿಯೋಜನೆಗಳು ಬೇಡವೆಂದು ಯಾರೂ ಹೇಳರು. ಆದರೆ ಯೋಜನೆಗಳು ಯಾರಿಗಾಗಿ? ತಿಳಿದೂ ತಿಳಿದೂ ಅವಘಡಗಳನ್ನು ಆಹ್ವಾನಿಸಬೇಕೆ? ಭೂಗರ್ಭರಚನೆಯ ದೃಷ್ಟಿಯಿಂದ ಹಿಮಾಲಯ ಪ್ರಾಂತದ ನೆಲದಡಿಯ ತಳಭಾಗಗಳು ತುಂಬಾ ಸೂಕ್ಷö್ಮವೂ ನಾಜೂಕಿನದೂ ಆದವೆಂಬುದು ಹಿಂದಿನಿಂದ ತಿಳಿದಿರುವುದೇ ಆಗಿದೆ. ಆದರೂ ಅವುಗಳ ಮೇಲೆ ಪ್ರಕೃತಿಸ್ವಾಸ್ಥ್ಯಕ್ಕೆ ಪ್ರತಿಕೂಲವಾದ ಭಾರದ ಯೋಜನೆಗಳನ್ನು ಹೇರಲಾಗುತ್ತಿದೆ. ದೈತ್ಯಪ್ರಮಾಣದ ವಿದ್ಯುದುತ್ಪಾದನ ಯೋಜನೆಗಾಗಿ ನ್ಯಾಶನಲ್ ಥರ್ಮಲ್ ಪವರ್ ಕಾರ್ಪೊರೇಶನ್ ಸುರಂಗ(ಟನಲ್)ಗಳ ನಿರ್ಮಾಣಕ್ಕಾಗಿ ಸ್ಫೋಟಕ(ಡೈನಮೈಟ್)ಗಳನ್ನು ಬಳಸಿದುದರ ಪರಿಣಾಮವಾಗಿಯೆ ಜೋಶಿಮಠ ಮೊದಲಾದೆಡೆ ಭೂಕುಸಿತಗಳಾಗುತ್ತಿರುವುದು ಎಂದು ತಜ್ಞರ ಅಭಿಮತವಿದೆ. ಪ್ರಕೃತಿಯ ಮೇಲೆ ಇಂತಹ ಪ್ರಹಾರ ತಗ್ಗದಿದ್ದಲ್ಲಿ ಆ ಭಾಗದ ಜನರಿಗೆ ನೆಮ್ಮದಿಯ ಜೀವನ ಕನಸಿನ ಮಾತು.
ನಿವಾರಣೀಯ ದುರಂತಗಳು
Month : March-2023 Episode : Author :