೧೯೩೦ರ ಬಳಿಕ ಸ್ವಾತಂತ್ರ್ಯ ಹೋರಾಟದಲ್ಲಿ ಸ್ತ್ರೀಯರ ಹೋರಾಟ ಗ್ರಾಮೀಣ ಪ್ರದೇಶವನ್ನೂ ಸೇರಿದಂತೆ ವ್ಯಾಪಕ ರೂಪ ಪಡೆಯುತ್ತದೆ. ‘ಕ್ರಾಂತಿಕಾರಿ ಭಯೋತ್ಪಾದನೆ’ ಎಂಬ ಹೆಸರಿನಲ್ಲಿ ನಡೆಯುತ್ತಿದ್ದ ಕಾರ್ಯಾಚರಣೆಯಲ್ಲಿ ಮೇಡಮ್ ಭಿಕಾಜೀ ಕಾಮಾ, ಸರಳಾದೇವಿ ಘೋಷಾಲ್ನಂತಹ ಮಹಿಳೆಯರು ನೇಪಥ್ಯದಲ್ಲಿದ್ದರೇ ವಿನಾ ಎಂದೂ ನೇರ ಕಾರ್ಯಾಚರಣೆಯಲ್ಲಿ ಭಾಗಿಗಳಾಗಿರಲಿಲ್ಲ. ಆದರೆ ಮೂವತ್ತರ ದಶಕ, ಶಾಂತಿ ಘೋಷ್, ಸುನೀತಿ ಚೌಧರಿ, ಬೀನಾ ದಾಸ್, ಆಕೆಯ ಅಕ್ಕ ಕಲ್ಯಾಣಿ ದಾಸ್, ಪ್ರೀತಿಲತಾ ವಡ್ಡೆದಾರ್, ಕಲ್ಪನಾ ದತ್ತ ಮೊದಲಾದವರು ಈ ಸೀಮಿತ ಪರಿಧಿಯಿಂದ ಹೊರಬಂದು ಪುರುಷ ಸಂಗಾತಿ ಕ್ರಾಂತಿಕಾರಿಗಳೊಂದಿಗೆ ಸರಿಸಮನಾಗಿ ಭಾಗಿಗಳಾಗುತ್ತಾರೆ.’
೧೯೩೦ ಭಾರತದ ಸ್ವಾತಂತ್ರ್ಯದ ಇತಿಹಾಸದಲ್ಲಿ ಪರ್ವಕಾಲವೆನ್ನಬಹುದಾಗಿದೆ. ಒಂದೆಡೆ ಗಾಂಧಿಯವರು ತಮ್ಮ ಉಪ್ಪಿನ ಸತ್ಯಾಗ್ರಹವನ್ನು ಘೋಷಿಸಿ ದೇಶದಾದ್ಯಂತ ಅಹಿಂಸಾತ್ಮಕ ಆಂದೋಲನಕ್ಕೆ ಆಹ್ವಾನ ನೀಡಿದರೆ ಮತ್ತೊಂದೆಡೆ ಬ್ರಿಟಿಷರು ‘ಕ್ರಾಂತಿಕಾರಿ ಭಯೋತ್ಪಾದನೆ’ ಎಂದು ಕರೆಯುವ ಕ್ಷಾತ್ರ ಚಳವಳಿ ಉಚ್ಛ್ರಾಯಕ್ಕೇರಿರುತ್ತದೆ. ಪಂಜಾಬ್ನಲ್ಲಿ ಭಗತ್ಸಿಂಗ್ ಮತ್ತು ಸಹಚರರ ‘ಹಿಂದುಸ್ತಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಶನ್’ ಪಂಜಾಬ್ ಕೇಸರಿ ಲಾಲಾ ಲಜಪತ್ರಾಯ್ ಅವರ ಮೇಲಿನ ಪೊಲೀಸ್ ಹಲ್ಲೆಗೆ ಪ್ರತಿಕ್ರಿಯೆಯಾಗಿ ಸಾಂಡರ್ಸ್ನನ್ನು ಯಮಲೋಕಕ್ಕಟ್ಟುವ ಮೂಲಕ ಆರಂಭಿಸಿದ ಕ್ರಾಂತಿಕಾರಿ ಹತ್ಯೆಯಿಂದ ಆರಂಭಗೊಂಡು ‘ಕಿವುಡನನ್ನೂ ಕೇಳುವಂತೆ ಮಾಡಬೇಕೆಂಬ ಘೋಷಣಾ ಪತ್ರ’ದೊಂದಿಗೆ ಕೇಂದ್ರೀಯ ಶಾಸನ ಸಭೆಯ ಸಭಾಂಗಣದಲ್ಲಿ ಬಾಂಬನ್ನು ಸ್ಫೋಟಿಸುವ ಮೂಲಕ ಇಡೀ ಜಗತ್ತು ನಿಬ್ಬೆರಗಾಗುವಂತೆ ಮಾಡುತ್ತದೆ. ಇದರಿಂದ ಬಂಗಾಳವೇನೂ ಹೊರತಾಗಲಿಲ್ಲ. ಚಿತ್ತಗಾಂವ್ನ ‘ಇಂಡಿಯನ್ ರಿಪಬ್ಲಿಕನ್ ಆರ್ಮಿ’ ಚಿತ್ತಗಾಂವ್ ಶಸ್ತಾçಗಾರ ದಾಳಿಯ ಮೂಲಕ ರಣದುಂದುಭಿ ಮೊಳಗುವಂತೆ ಮಾಡುತ್ತದೆ.
ಬಂಗಾಳ ಎಂದೂ ಹಿಂಸಾತ್ಮಕ ಮತ್ತು ಗಾಂಧಿಯವರ ಅಹಿಂಸಾತ್ಮಕವೆಂಬ ತಾತ್ತ್ವಿಕ ಸಂಘರ್ಷದಲ್ಲಿ ತನ್ನನ್ನು ತಾನೇ ತೊಡಗಿಸಿಕೊಂಡು ಅಂತಃಶಕ್ತಿಯ ಹ್ರಾಸಕ್ಕೆ ಬಲಿಯಾಗಲಿಲ್ಲ. ಬೋಸ್ ಸಹೋದರರೂ ಸೇರಿದಂತೆ ಬಂಗಾಳದ ಘಟಾನುಘಟಿ ಕಾಂಗ್ರೆಸ್ ನಾಯಕರು ಗಾಂಧಿಯವರ ಚಳವಳಿಯಲ್ಲಿ ಪಾಲ್ಗೊಂಡರೂ ಕ್ರಾಂತಿಕಾರಿಗಳ ಬೆನ್ನೆಲುಬಾಗಿ ನಿಲ್ಲಲು ಹಿಂಜರಿಯುತ್ತಿರಲಿಲ್ಲ. ಚಿತ್ತಗಾಂವ್ ಆಪಾದಿತರ ಪರ ವಕಾಲತ್ತು ಹಾಕಲು ಸ್ವತಃ ಶರತ್ಚಂದ್ರ ಬೋಸ್ ಮುಂದಾದರೆ ಕೋಲ್ಕತಾ ನಗರಸಭೆ ಬ್ರಿಟಿಷರು ‘ಭಯೋತ್ಪಾದಕ ಕೊಲೆಗಡುಕ’ರೆಂದು ಕರೆಯುತ್ತಿದ್ದವರನ್ನು ಹಾಡಿ ಹೊಗಳುವ ನಿರ್ಣಯಗಳನ್ನು ತೆಗೆದುಕೊಳ್ಳುವ ಮೂಲಕ ದೇಶದ ಜನತೆಗೆ ತನ್ನದೇ ಆದ ಸಂದೇಶವನ್ನು ಕಳುಹಿಸುತ್ತದೆ. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಬಂಗಾಳದ ನಾರೀಶಕ್ತಿಯ ಪ್ರದರ್ಶನಕ್ಕೂ ಒಂದು ತಿರುವು ದೊರಕಿದಂತಾಗುತ್ತದೆ. ಬಂಗಾಳಿ ಅಗ್ನಿಕನ್ಯೆಯರು ದುರ್ಗಾವತಾರಿಣಿಯರಾಗಿ ರೂಪತಾಳುವ ಸನ್ನಿವೇಶ ನಿರ್ಮಾಣವಾಗುತ್ತದೆ.
೧೯೨೦ರ ಹೊತ್ತಿಗೆ ‘ಒಂದೇ ವರ್ಷದಲ್ಲಿ ಸ್ವರಾಜ್ಯ’ ಎಂಬ ಭರವಸೆಯೊಂದಿಗೆ ಪ್ರಾರಂಭಗೊಂಡ ಗಾಂಧಿಯವರ ‘ಅಹಿಂಸಾತ್ಮಕ ಸತ್ಯಾಗ್ರಹ’ವೆಂಬ ಹೊಸ ಅಸ್ತ್ರಕ್ಕೆ ಕ್ರಾಂತಿಕಾರಿಗಳು ಅವಕಾಶ ನೀಡಲು ತಮ್ಮ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವಷ್ಟು ತಾಳ್ಮೆಯನ್ನು ತೋರುತ್ತಾರೆ. ಆದರೆ ಅದೊಂದು ಭಗ್ನ ಕನಸೆಂದು ಕಂಡುಕೊಳ್ಳಲು ‘ಚೌರಿಚೌರಾ’ದಂತಹ ದುರಂತವೇ ಬೇಕಾಯಿತು.
ಮೂವತ್ತರ ದಶಕದಲ್ಲಿ ಕ್ರಾಂತಿಕಾರಿಗಳು ಇಂತಹ ಗೊಂದಲದಲ್ಲಿ ಬೀಳಲು ಸಿದ್ಧರಿರಲಿಲ್ಲ. ಗಾಂಧಿಯವರ ಯಶಸ್ಸಿನ ಹಿಂದೆ ಕಾಯುತ್ತ ಕೂಡದ ಕ್ರಾಂತಿಕಾರಿಗಳು ತಮ್ಮದೇ ರಣತಂತ್ರವನ್ನು ರಚಿಸುವ ಮೂಲಕ ಗಾಂಧಿಯವರ ಅಹಿಂಸಾತ್ಮಕ ಸತ್ಯಾಗ್ರಹಕ್ಕೆ ಸರಿಸಮನಾಗಿ ತಮ್ಮ ಕ್ಷಾತ್ರ ಕಾರ್ಯಾಚರಣೆಗಳಿಗೆ ಚಾಲನೆ ನೀಡುತ್ತಾರೆ. ಇದರಿಂದ ಅವರು ಹೆಚ್ಚಿನ ರಾಜಕೀಯ ಪ್ರಬುದ್ಧತೆಯನ್ನು ತೋರುತ್ತಾರೆ.
೧೯೩೦ರಲ್ಲಿ ಹಿಂಸಾತ್ಮಕ ಉಗ್ರವಾದ ಮುಂಚಿಗಿಂತಲೂ ಹೆಚ್ಚು ತೀವ್ರ ರೂಪದಲ್ಲಿ ತಲೆದೋರುತ್ತದೆ. ವಿವಿಧ ಕಾನೂನುಗಳ ರೂಪದಲ್ಲಿ ತಮ್ಮ ಹಕ್ಕುಗಳ ಸಂಘಟಿತ ಉಲ್ಲಂಘನೆಗೆ ಪ್ರಭುತ್ವ ಮುಂದಾದಾಗ ಯುವಕರು ಕ್ರಾಂತಿಕಾರಿ ಚಟುವಟಿಕೆಗಳತ್ತ ಆಕರ್ಷಿಸಲ್ಪಡುತ್ತಾರೆ. ಅನೇಕ ಭೂಗತ ಕಾರ್ಯಕರ್ತರು ತಮ್ಮ ಚಟುವಟಿಕೆಗಳನ್ನು ಗಾಂಧಿಯವರ ಅಹಿಂಸಾತ್ಮಕ ಹೋರಾಟದ ಮುಂದುವರಿದ ಭಾಗ ಎಂದು ಭಾವಿಸತೊಡಗಿದರು. ಕಾಂಗ್ರೆಸ್ ಮತ್ತು ಕ್ರಾಂತಿಕಾರಿಗಳ ನಡುವಿನ ನಂಟು ಬಂಗಾಳದಲ್ಲಿ ಢಾಳಾಗಿ ಕಾಣತೊಡಗಿತು. ಅನಂತಸಿಂಗ್ ಹೇಳಿದಂತೆ ಚಿತ್ತಗಾಂವ್ ಶಸ್ತಾçಗಾರ ದಾಳಿಯನ್ನು ಕ್ರಾಂತಿಕಾರಿಗಳು ‘ಗಾಂಧಿ ಪ್ರಭುತ್ವ ಬಂದಿದೆ’ ಎಂದು ಘೋಷಿಸುವ ಮೂಲಕ ಸಂಭ್ರಮಿಸುತ್ತಾರೆ.
ಅನಂತರದ ಘಟನಾವಳಿಗಳು ಬ್ರಿಟಿಷ್ ಆಡಳಿತವರ್ಗದ ಹತ್ಯೆಯ ಸರಮಾಲೆಯನ್ನು ಪೋಣಿಸುತ್ತದೆ. ೧೯೩೦ರ ಆಗಸ್ಟ್ನಲ್ಲಿ ಕೋಲ್ಕತಾದ ರಸ್ತೆಯಲ್ಲಿ ಪೊಲೀಸ್ ಕಮಿಶನರ್ ಸರ್ ಚಾರ್ಲ್ಸ್ ಟೇಗಾರ್ಟ್ ಮೇಲಿನ ಹಲ್ಲೆ, ಢಾಕಾದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಜನರಲ್ ಎಫ್.ಜೆ. ಲೋಮ್ಯಾನ್ ಹತ್ಯೆ, ಮತ್ತು ಢಾಕಾದ ಪೊಲೀಸ್ ಸೂಪರಿಂಟೆಂಡೆಂಟ್ ಎರಿಕ್ ಹೋಡ್ಸನ್ ಮೇಲೆ ಹಲ್ಲೆ, ಕ್ರೈಗ್ ಬದಲಿಗೆ ತಾರಿಣಿ ಮುಖರ್ಜಿಯ ಹತ್ಯೆ, ಡಿಸೆಂಬರ್ನಲ್ಲಿ ಕರ್ನಲ್ ಸಿಂಪ್ಸನ್ನ ಮೇಲೆ ನಡೆದ ಮರಣಾಂತಿಕ ಹಲ್ಲೆಯೊಂದಿಗೆ ಆ ವರ್ಷಕ್ಕೆ ಮಂಗಳ ಹಾಡಿದಾಗ ೧೧ ಬ್ರಿಟಿಷ್ ಅಧಿಕಾರಿಗಳು ಹತ್ಯೆಗೊಳಗಾಗಿದ್ದರೆ ೧೨ ಅಧಿಕಾರಿಗಳು ಗಾಯಗೊಂಡಿರುತ್ತಾರೆ. ಕ್ರಾಂತಿಕಾರಿಗಳಲ್ಲಿ ೨೬ ಮಂದಿ ಹುತಾತ್ಮರಾದರೆ ನಾಲ್ವರು ಗಾಯಗೊಂಡಿರುತ್ತಾರೆ. ಬಂಗಾಳ ಅಪರಾಧಿ ಶಾಸನ ತಿದ್ದುಪಡಿ ಕಾಯ್ದೆಯನ್ವಯ ೪೮೪ ಮಂದಿ ಆಪಾದಿತರಾಗಿ ಸೆರೆಮನೆ ಸೇರಿರುತ್ತಾರೆ.
ಹಿಂಸಾಚಾರದ ಬೆಂಕಿ ಇಷ್ಟಕ್ಕೆ ತಣಿಯುವಂತಿರಲಿಲ್ಲ. ಅನುಕ್ರಮವಾಗಿ ಮಿದ್ನಾಪುರದ ಮೂವರು ಜಿಲ್ಲಾ ದಂಡಾಧಿಕಾರಿಗಳಾದ ಜೆ. ಫ್ರೆಡ್ಡಿ (೧೯೩೧), ಆರ್. ಡಗ್ಲಾಸ್ (೧೯೩೨), ಮತ್ತು ಬಿ.ಇ.ಜೆ. ಬರ್ಜ್ (೧೯೩೩) ಕ್ರಾಂತಿಕಾರಿಗಳ ಗುಂಡಿಗೆ ಬಲಿಯಾದರೆ ತಿಪ್ಪೇರಾದ ಜಿಲ್ಲಾ ದಂಡಾಧಿಕಾರಿ ಸಿ.ಜಿ.ಬಿ. ಸ್ಟೀವನ್ಸ್ ಸುನೀತಿ ಚೌಧರಿ ಮತ್ತು ಶಾಂತಿ ಘೋಷ್ ಎಂಬ ಇಬ್ಬರು ಶಾಲಾ ಬಾಲಕಿಯರ ಗುಂಡಿಗೆ ಆಹುತಿಯಾಗುತ್ತಾರೆ. ೨೪ ಪರ್ಗಣಾದ ಜಿಲ್ಲಾ ನ್ಯಾಯಾಧೀಶ ಆರ್.ಆರ್. ಗಾರ್ಲಿಕ್, ತಿಪ್ಪೇರಾದ ಹೆಚ್ಚುವರಿ ಪೊಲೀಸ್ ಸೂಪರಿಂಟೆಂಡೆಂಟ್ ಇ.ಬಿ. ಎಲ್ಲಿಸನ್ ಸಾವನ್ನಪ್ಪುತ್ತಾರೆ. ಢಾಕಾದ ಕಮಿಶನರ್ ಅಲೆಕ್ಸಾಂಡರ್ ಕಾಸ್ಸೆಲ್, ಜಿಲ್ಲಾ ದಂಡಾಧಿಕಾರಿ ಎಲ್.ಎಸ್. ಡುರ್ನೊ ೧೯೩೧ರ ಬೇರೆ ಬೇರೆ ಪ್ರಕರಣಗಳಲ್ಲಿ ಗಾಯಗೊಳ್ಳುತ್ತಾರೆ. ಢಾಕಾ ಗುಪ್ತಚರ ಇಲಾಖೆಯ ಹೆಚ್ಚುವರಿ ಸೂಪರಿಂಟೆಂಡೆಂಟ್ ಸಿ.ಜಿ. ಗ್ರಾಸ್ಬೈ, ರಾಜಶಾಹಿ ಜಿಲ್ಲಾ ಕಾರಾಗೃಹದ ಸೂಪರಿಂಟೆಂಡೆಂಟ್ ಎ.ಡಬ್ಲ್ಯು. ಲ್ಯೂಕ್ ಹಲ್ಲೆಗೊಳಗಾಗುತ್ತಾರೆ. ಇವಲ್ಲದೆ ಈ ಕಾಲಘಟ್ಟದಲ್ಲಿ ಅನೇಕ ಅಧಿಕಾರಿಗಳ ಮೇಲೆ ವಿಫಲ ಹಲ್ಲೆಗಳನ್ನು ನಡೆಸಲಾಯಿತು. ಅಧಿಕಾರೇತರರಲ್ಲಿ ೧೯೩೧ರಲ್ಲಿ ಇ. ವಿಲ್ಲಿಯರ್ಸ್ ಎಂಬ ಒಬ್ಬ ವ್ಯಾಪಾರಿ ಹಾಗೂ ೧೯೩೨ರಲ್ಲಿ ‘ಸ್ಟೇಟ್ಸ್ಮನ್’ ಪತ್ರಿಕೆಯ ಸಂಪಾದಕ ಸರ್ ಆಲ್ಫೈಡ್ ವಾಟ್ಸನ್ ಹಲ್ಲೆಗೊಳಗಾಗುತ್ತಾರೆ. ಬಂಗಾಳದ ಗವರ್ನರ್ ಸರ್ ಸ್ಟ್ಯಾನ್ಲೆ ಜ್ಯಾಕ್ಸನ್ ಎರಡು ಬಾರಿ ಹಲ್ಲೆಗೆ ಒಳಗಾಗುತ್ತಾನೆ. ಮೊದಲ ಬಾರಿಗೆ ಬೀನಾ ದಾಸ್ ಎಂಬ ೨೧ ವರ್ಷ ವಯಸ್ಸಿನ ಕಾಲೇಜು ಪದವೀಧರೆ ಆತನ ಮೇಲೆ ಗುಂಡು ಹಾರಿಸಿದರೆ ೧೯೩೪ರಲ್ಲಿ ಭವಾನಿಪ್ರಸಾದ್ ಭಟ್ಟಾಚಾರ್ಯ ಮತ್ತು ರಬೀಂದ್ರನಾಥ್ ಬ್ಯಾನರ್ಜಿ ಎಂಬ ಇಬ್ಬರು ಕ್ರಾಂತಿಕಾರಿಗಳು ದಾಳಿ ಮಾಡುತ್ತಾರೆ. ಈ ಪ್ರಕರಣದಲ್ಲಿ ಉಜ್ಜಲಾ ಮಜುಂದಾರ್ ಸೇರಿದಂತೆ ಐವರನ್ನು ವಿಚಾರಣೆಗೆ ಗುರಿಪಡಿಸಲಾಯಿತು.
ಮೊದಮೊದಲು ಹಿಂಸಾತ್ಮಕ ಕಾರ್ಯಾಚರಣೆಗಳ ಮೂಲಕ ಬ್ರಿಟಿಷರಿಂದ ಭಾರತವನ್ನು ಮುಕ್ತಗೊಳಿಸಲು ಬಂಗಾಳದ ಪುರುಷರು ಮುಂದಾಳತ್ವವನ್ನು ವಹಿಸಿದರೆ ಸ್ತ್ರೀಯರು ಅಪ್ರತ್ಯಕ್ಷವಾಗಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಅನುಶೀಲನ ಸಮಿತಿ ಮತ್ತು ಜುಗಾಂತರದಂತಹ ಕ್ರಾಂತಿಕಾರಿ ಸಂಘಟನೆಗಳು ತಲೆಯೆತ್ತುವ ಮೊದಲೇ ಕ್ರಾಂತಿಕಾರಿ ವರ್ತುಲದಲ್ಲಿ ಸರಳಾದೇಬಿ ಘೋಷಾಲ್ರವರು ಇಪ್ಪತ್ತನೇ ಶತಮಾನದ ಪ್ರಾರಂಭಿಕ ವರ್ಷಗಳಲ್ಲಿ ತಮ್ಮ ಛಾಪನ್ನು ಮೂಡಿಸಿದ್ದಾರೆ. ಅವರು ಕ್ರಾಂತಿಕಾರಿ ಚಟುವಟಿಕೆಗಳಲ್ಲಿ ನೇರವಾಗಿ ಭಾಗವಹಿಸದಿದ್ದರೂ ಯುವಜನರಿಗೆ ಜುಡೋ, ಕರಾಟೆ, ಕತ್ತಿವರಸೆ, ಮಲ್ಲಯುದ್ಧದಂತಹ ದೈಹಿಕ ತರಬೇತಿ ನೀಡಲು ಅಖಾಡಾಗಳನ್ನು ಪ್ರಾರಂಭಿಸುತ್ತಾರೆ. ವಿದೇಶದಲ್ಲಿದ್ದು ಭಾರತದ ಸ್ವಾತಂತ್ರ್ಯಕ್ಕಾಗಿ ಅವಿರತವಾಗಿ ಶ್ರಮಿಸಿದವರಲ್ಲಿ ಮೇಡಂ ಭಿಕಾಜೀ ಕಾಮಾ ಸುಪ್ರಸಿದ್ಧರಾಗಿದ್ದಾರೆ. ಆಕೆ ೧೯೦೭ರಲ್ಲಿ ಸ್ಟುಟ್ಗಾರ್ಟ್ನಲ್ಲಿ ನಡೆದ ಅಂತರರಾಷ್ಟ್ರೀಯ ಸಮಾಜವಾದಿ ಕಾಂಗ್ರೆಸ್ನ ಅಧಿವೇಶನದಲ್ಲಿ ಭಾರತದ ‘ರಾಷ್ಟ್ರೀಯ ಧ್ವಜ’ಕ್ಕೆ ಜನ್ಮನೀಡಿದ ಮಹಿಳೆಯಾಗಿದ್ದಾರೆ. ಭಾರತದ ಸ್ವಾತಂತ್ರ್ಯ ಹೋರಾಟವನ್ನು ಬೆಂಬಲಿಸುವಂತೆ ಅಧಿವೇಶನದ ಪ್ರತಿನಿಧಿಗಳಿಗೆ ಕಳಕಳಿಯ ಮನವಿ ಮಾಡುತ್ತಾರೆ. ೧೯೦೯ರಲ್ಲಿ ಜಿನೀವಾದಲ್ಲಿ ‘ವಂದೇ ಮಾತರಂ’ ಎಂಬ ಪತ್ರಿಕೆಯನ್ನು ಪ್ರಾರಂಭಿಸುವಲ್ಲಿಯೂ ಅವರು ಹಿರಿದಾದ ಪಾತ್ರ ವಹಿಸಿರುತ್ತಾರೆ.
ಸ್ತ್ರೀಯರು ದುರ್ಬಲರಲ್ಲ
ಇಲ್ಲಿಯವರೆಗೆ ಸ್ವಾತಂತ್ರ್ಯ ಹೋರಾಟದಲ್ಲಿ ಸ್ತ್ರೀಯರ ಪಾತ್ರ ಬೆರಳೆಣಿಕೆಗೆ ಸೀಮಿತವಾಗಿತ್ತು. ಆದರೆ ೧೯೩೦ರ ಬಳಿಕ ಈ ಪರಿಸ್ಥಿತಿ ಬದಲಾಗಿ ಹೋರಾಟವೆಂಬುದು ಗ್ರಾಮೀಣ ಪ್ರದೇಶವನ್ನೂ ಸೇರಿದಂತೆ ವ್ಯಾಪಕ ರೂಪ ಪಡೆಯುತ್ತದೆ. ‘ಕ್ರಾಂತಿಕಾರಿ ಭಯೋತ್ಪಾದನೆ’ ಎಂಬ ಹೆಸರಿನಲ್ಲಿ ನಡೆಯುತ್ತಿದ್ದ ಹಿಂಸಾತ್ಮಕ ಕಾರ್ಯಾಚರಣೆಯಲ್ಲಿ ಮೇಡಮ್ ಭಿಕಾಜೀ ಕಾಮಾ, ಸರಳಾದೇವಿ ಘೋಷಾಲ್ನಂತಹ ಮಹಿಳೆಯರು ನೇಪಥ್ಯದಲ್ಲಿದ್ದರೇ ವಿನಾ ಎಂದೂ ನೇರ ಕಾರ್ಯಾಚರಣೆಯಲ್ಲಿ ಭಾಗಿಗಳಾಗಿರಲಿಲ್ಲ. ಆದರೆ ಮೂವತ್ತರ ದಶಕದಲ್ಲಿ ಶಾಂತಿ ಘೋಷ್, ಸುನೀತಿ ಚೌಧರಿ, ಬೀನಾ ದಾಸ್, ಆಕೆಯ ಅಕ್ಕ ಕಲ್ಯಾಣಿ ದಾಸ್, ಪ್ರೀತಿಲತಾ ವಡ್ಡೆದಾರ್, ಕಲ್ಪನಾ ದತ್ತ ಮೊದಲಾದವರು ಈ ಸೀಮಿತ ಪರಿಧಿಯಿಂದ ಹೊರಬಂದು ಪುರುಷ ಸಂಗಾತಿ ಕ್ರಾಂತಿಕಾರಿಗಳೊಂದಿಗೆ ಸರಿಸಮನಾಗಿ ಭಾಗಿಗಳಾಗುತ್ತಾರೆ.
ಮೂವತ್ತರ ದಶಕ ಸಮೀಪಿಸುತ್ತಿದ್ದಂತೆ ಸ್ತ್ರೀಯರಲ್ಲಿದ್ದ ಸಾಮಾಜಿಕ ಅವಹೇಳನದ ಬಗೆಗಿನ ಪ್ರಾರಂಭಿಕ ಹಿಂಜರಿಕೆ ಮತ್ತು ಭೀತಿ ಕ್ರಮೇಣ ಮಾಯವಾಗುತ್ತ ಅದರ ಬದಲಿಗೆ ಪುರುಷ ಕ್ರಾಂತಿಕಾರಿಗಳೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಅಪಾಯಕಾರಿ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳುವ ಹುಮ್ಮಸ್ಸು ಮತ್ತು ಆತ್ಮವಿಶ್ವಾಸ ಮೂಡತೊಡಗಿತ್ತು. ಕ್ರಾಂತಿಕಾರಿ ಚಳವಳಿಯಲ್ಲಿ ಭಾಗಿಗಳಾದ ಸ್ತ್ರೀಯರಲ್ಲಿ ಬಹುತೇಕ ಮಂದಿ ಉನ್ನತ ಶಿಕ್ಷಣ ಪಡೆದವರಾಗಿದ್ದು ಸಾಮಾಜಿಕ ರಂಗದಲ್ಲಿ ಮಧ್ಯಮವರ್ಗಕ್ಕೆ ಸೇರಿದವರಾಗಿದ್ದಾರೆ. ಉನ್ನತ ಶಿಕ್ಷಣ, ರಾಜಕೀಯ ಚಿಂತನೆ, ಸಾಮಾಜಿಕ ಪರಿವರ್ತನೆ ಎಲ್ಲವೂ ಸ್ತ್ರೀಯರಲ್ಲಿ ಸ್ವಾತಂತ್ರ್ಯದ ಭಾವನೆಯನ್ನು ಬೆಳಗಿಸಿದರೆ ಕ್ರಾಂತಿಕಾರಿ ಚಳವಳಿಯಲ್ಲಿ ತೊಡಗಿದ್ದ ಅವರ ನಿಕಟಬಂಧುಗಳು ಅವರಿಗೆ ಒತ್ತಾಸೆಯಾಗಿ ನಿಲ್ಲುವ ಮೂಲಕ ಕ್ರಾಂತಿಕಾರಿ ಸಂಘಟನೆಯಲ್ಲಿ ಅವರ ಪ್ರವೇಶಕ್ಕೆ ದಾರಿ ಮಾಡಿಕೊಡುತ್ತಾರೆ. ಈ ಕಾಲಘಟ್ಟದಲ್ಲಿ ಸ್ತ್ರೀಯರನ್ನು ಶಾರೀರಿಕವಾಗಿ ಅಣಿಗೊಳಿಸುವ ‘ದೀಪಾಲಿ ಸಂಘ’ದಂತಹ ಅನೇಕ ಸಂಘಗಳು ತಲೆಯೆತ್ತಿದ್ದುದು ಕಂಡುಬರುತ್ತದೆ.
ಪ್ರೀತಿಲತಾ ವಡ್ಡೆದಾರ್ ತನ್ನ ಕೊನೆಯ ಹೇಳಿಕೆಯಲ್ಲಿ “ಸ್ತ್ರೀಯರು ತಮ್ಮನ್ನು ದುರ್ಬಲರೆಂದು ಭಾವಿಸದೆ ಎಂತಹ ಅಪಾಯದ ಕಾರ್ಯಾಚರಣೆಯಲ್ಲಾದರೂ ತಮ್ಮ ಸಹೋದರರ ಹೆಗಲಿಗೆ ಹೆಗಲು ಕೊಟ್ಟು ಹೋರಾಡುವುದಕ್ಕೆ ಸಿದ್ಧರಾಗಿದ್ದಾರೆ” ಎಂದು ಸಾರುವ ಮೂಲಕ ಈ ಚಿಂತನೆಯನ್ನು ಪ್ರತಿಧ್ವನಿಸಿದ್ದಾರೆ.
ದೀಪಾಲಿ ಸಂಘ
ಗಾಂಧಿಯವರ ಅಹಿಂಸಾತ್ಮಕ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳುತ್ತಿದ್ದ ಸ್ತ್ರೀಯರಿಗೂ ಕ್ರಾಂತಿಕಾರಿ ಚಳವಳಿಯಲ್ಲಿ ಭಾಗಿಯಾಗುತ್ತಿದ್ದ ಸ್ತ್ರೀಯರಿಗೂ ಇರುವ ಮುಖ್ಯ ವ್ಯತ್ಯಾಸವೆಂದರೆ – ಮೊದಲ ಗುಂಪಿನ ಮಹಿಳೆಯರಿಗೆ ಗಾಂಧಿಯವರAತಹ ಪ್ರತಿಷ್ಠಿತರ ನಾಯಕತ್ವ ಮತ್ತು ನೇರ ಪ್ರೋತ್ಸಾಹ ದೊರಕುತ್ತಿದ್ದರೆ, ಎರಡನೆಯ ಗುಂಪಿನ ಮಹಿಳೆಯರು ತನ್ನ ಸ್ವಂತದ ನಾಯಕತ್ವದಿಂದ ಅವಕಾಶವನ್ನು ದಕ್ಕಿಸಿಕೊಳ್ಳಬೇಕಾಗಿತ್ತು. ಗಾಂಧಿಯವರು ಮಹಿಳೆಯರಿಗಾಗಿ ತಮ್ಮ ಆಶ್ರಮಗಳಲ್ಲಿ ವಿಶೇಷ ಕಾರ್ಯಕ್ರಮ, ತರಬೇತಿಯನ್ನು ಏರ್ಪಡಿಸಿದ್ದರೆ ಕ್ರಾಂತಿಕಾರಿಗಳಲ್ಲಿ ಈ ತರಹದ ಭೇದಭಾವವಿರಲಿಲ್ಲ. ಒಮ್ಮೆ ಸಂಘಟನೆಯಲ್ಲಿ ಸೇರಿದ ಯುವತಿ/ಬಾಲಕಿ ಇತರ ಯುವಕ/ಬಾಲಕರಂತೆ ಅದೇ ತರಬೇತಿಯನ್ನು ಪಡೆಯಬೇಕಾಗಿತ್ತು.
ಬಂಗಾಳಿ ಸ್ತ್ರೀಯರ ಸಾಮಾಜಿಕ-ಆರ್ಥಿಕ ಸುಧಾರಣೆಗಾಗಿ ೧೯೨೩ರಲ್ಲಿ ಲೀಲಾ ನಾಗ್ರವರಿಂದ ಪ್ರಾರಂಭಗೊಂಡ ‘ದೀಪಾಲಿ ಸಂಘ’ ಸ್ತ್ರೀ ಪುರುಷರಿಬ್ಬರಿಗೂ ತನ್ನ ಸದಸ್ಯತ್ವವನ್ನು ನೀಡಿ ಅವರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಜನರನ್ನು ಕ್ರಾಂತಿಕಾರಿ ಚಟುವಟಿಕೆಯತ್ತ ಸೆಳೆಯುತ್ತಿದ್ದ ಶ್ರೀ ಸಂಘದೊಂದಿಗೆ ಸಂಬಂಧ ಬೆಳೆಸುತ್ತದೆ. ಆವರೆಗಿನ ಸಂಘ ಸಂಸ್ಥೆಗಳು ಸ್ತ್ರೀಯರಿಗೆ ತಮ್ಮ ಸಂಘಟನೆಯ ಸದಸ್ಯತ್ವವನ್ನು ನೀಡಲು ಹಿಂಜರಿಯುತ್ತಿದ್ದ ಸಮಯದಲ್ಲಿ ಶ್ರೀ ಸಂಘದ ನಿಲವು ದಿಟ್ಟ ಹಾಗೂ ಪ್ರಗತಿಶೀಲ ಹೆಜ್ಜೆಯಾಗಿತ್ತು. ಇಂತಹ ಸಂಘಗಳ ಮೂಲಕವೇ ಸ್ತ್ರೀಯರು ಅಹಿಂಸಾತ್ಮಕ ಮತ್ತು ಕ್ಷಾತ್ರ ಚಳವಳಿಗಳಲ್ಲಿ ಹೆಚ್ಚಿನ ಪಾತ್ರ ವಹಿಸಲು ಸಾಧ್ಯವಾಯಿತು. ಮಹರ್ಷಿ ಅರವಿಂದರ ತಮ್ಮನ ಮಗಳಾದ ಲತಿಕಾ ಘೋಷ್ ಅವರ ನೇತೃತ್ವದಲ್ಲಿ ಅನೇಕ ಮಹಿಳೆಯರು ಕ್ರಾಂತಿಕಾರಿ ಸಂಘಟನೆಗಳ ಪುರುಷರೊಂದಿಗೆ ಸೇರಿ ಹೋರಾಟದಲ್ಲಿ ಭಾಗಿಗಳಾಗಿದ್ದರು.
ಸಮರ್ಪಣಾಭಾವದ ‘ದುರ್ಗಾವತಾರ’
ಸ್ತ್ರೀಯರನ್ನು ಶಾಂತಿಯ ಪ್ರತೀಕವೆಂದು ಭಾವಿಸಲಾಗುತ್ತಿದ್ದ ಕಾಲಘಟ್ಟದಲ್ಲಿ ೧೯೨೮ರಿಂದ ೧೯೩೪ರ ನಡುವಿನ ಅವಧಿಯಲ್ಲಿ ಕ್ರಾಂತಿಕಾರಿ ಸಂಘಟನೆಗಳ ಕಾರ್ಯಕರ್ತರಾಗಿ ಬ್ರಿಟಿಷರ ಹೃದಯದಲ್ಲಿ ಭೀತಿಯ ವಾತಾವರಣವನ್ನು ಹುಟ್ಟುಹಾಕುವ ಮೂಲಕ ತಮ್ಮ ಪುರುಷ ಸಂಗಾತಿಗಳೊಂದಿಗೆ ಹಿಂಸಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸಿದ ಬಂಗಾಳದ ಸ್ತ್ರೀಯರ ಪಾತ್ರದ ಪುನರವಲೋಕನದ ಅಗತ್ಯವಿದೆ.
ಗಾಂಧಿಯವರ ಸವಿನಯ ಪ್ರತಿರೋಧಕ್ಕೆ ಓಗೊಟ್ಟ ಅಸಂಖ್ಯಾತ ಬಂಗಾಳಿ ಮಹಿಳೆಯರು ಅವರ ಅಹಿಂಸಾ ಧರ್ಮವನ್ನು ಚಾಚೂ ತಪ್ಪದೆ ಪಾಲಿಸಿದರೆ ಸರಕಾರದ ದಬ್ಬಾಳಿಕೆಯ ಪರಿಣಾಮವಾಗಿ ಬಂಗಾಳದ ಕ್ಷಾತ್ರ ಪರಂಪರೆಯನ್ನು ನಂಬಿದ್ದ ಸ್ತ್ರೀಯರು ರಾಷ್ಟçದ ಸ್ವಾತಂತ್ರ್ಯಕ್ಕಾಗಿ ಕ್ರಾಂತಿಕಾರಿ ಪಥದಲ್ಲಿ ನಡೆಯಲು ನಿರ್ಧರಿಸಿದುದರಲ್ಲಿ ಆಶ್ಚರ್ಯವೇನಿಲ್ಲ. ಅಂತಹ ಮಹಿಳೆಯರು ಅಹಿಂಸಾತ್ಮಕ ಸವಿನಯ ಪ್ರತಿರೋಧದೊಂದಿಗೆ ಕ್ರಾಂತಿಕಾರಿ ಸಂಘಟನೆಗಳೊಂದಿಗೆ ಸಂಪರ್ಕವನ್ನು ಮುಂದುವರಿಸಿಕೊಂಡು ಹೋಗುತ್ತಾರೆ.
ಭಾರತೀಯ ಪುರುಷರಿಗೆ ಹಾಗೂ ಬ್ರಿಟಿಷರಿಗೆ ರಾಜಕೀಯ ಕ್ಷೇತ್ರದಲ್ಲಿ ಸ್ತ್ರೀಯರ ಪಾದಾರ್ಪಣೆ ಆಳವಾದ ದೇಶಭಕ್ತಿಯ ಸಂಕೇತವಾಗಿ ಕಾಣುತ್ತದೆ. ಆದರೆ ಇದರೊಂದಿಗೆ ಬ್ರಿಟಿಷರಿಗೆ ಅದೊಂದು ಅಪಾಯದ ಕರೆಗಂಟೆಯಂತಾಯಿತು. ಇದರಿಂದ ಭಾರತೀಯರ ಸ್ವಾತಂತ್ರ್ಯ ಹೋರಾಟಕ್ಕೊಂದು ತೀಕ್ಷ್ಣವಾದ ಹೊಸತೊಂದು ಆಯಾಮ ದೊರಕಿದಂತಾಯಿತು. ಸ್ತ್ರೀಯರು ತಮ್ಮೊಂದಿಗೆ ಶಸ್ತಾçಸ್ತçಗಳನ್ನು ಅಡಗಿಸಿಟ್ಟುಕೊಂಡು ಪುರುಷರಿಗಿಂತಲೂ ಹೆಚ್ಚು ಸುರಕ್ಷಿತವಾಗಿ ಸಾಗಿಸುವುದು ಸುಲಭದ ಮಾತಾಗಿದ್ದರೆ ಬದಲಾದ ಪರಿಸ್ಥಿತಿಯಲ್ಲಿ ಸ್ತ್ರೀಯರು ಪುರುಷರಂತೆ ಪ್ರತ್ಯಕ್ಷ ಕಾರ್ಯಾಚರಣೆಯಲ್ಲಿ ಭಾಗಿಗಳಾಗಬಹುದೆಂಬ ಕಲ್ಪನೆಯನ್ನು ಒಪ್ಪಿಕೊಂಡದ್ದರ ಪರಿಣಾಮವನ್ನು ಬಂಗಾಳ ತೋರಿಸಿಕೊಡುತ್ತದೆ. ಈ ಬೆಳವಣಿಗೆ ಅಂದಿನ ಸಾಮಾಜಿಕ ಜೀವನಶೈಲಿಗೊಂದು ಸವಾಲಾಗಿತ್ತೆಂಬುದರಲ್ಲಿ ಸಂದೇಹವಿಲ್ಲ. ಚಿತ್ತಗಾಂವ್ ಶಸ್ತ್ರಾಗಾರ ದಾಳಿಯ ಬಳಿಕ ಏಕಾಏಕಿ ಸಾಮಾಜಿಕ ಏಣಿಯ ಹಲವಾರು ಮೆಟ್ಟಿಲುಗಳನ್ನು ದಾಟಿದ ಸ್ತ್ರೀ ಪ್ರೀತಿಲತಾಳಂತೆ ಕ್ರಾಂತಿಕಾರಿ ದಾಳಿಯಲ್ಲಿ ಭಾಗವಹಿಸಿ ಹುತಾತ್ಮಳಾದರೆ ಕಲ್ಪನಾ ದತ್ತ್ತ ಪುರುಷವೇಷ ಧರಿಸಿ ಪುರುಷರೊಂದಿಗೆ ಭೂಗತ ಜಗತ್ತಿನಲ್ಲಿ ಪಾದಾರ್ಪಣ ಮಾಡುತ್ತಾಳೆ. ಅವಿವಾಹಿತ ಕನ್ಯೆ ಸುಹಾಸಿನಿ ಗಂಗೂಲಿ ಬೇರೊಬ್ಬ ಪುರುಷ ಸಂಗಾತಿಯೊಂದಿಗೆ ಪತ್ನಿಯ ರೂಪ ಧರಿಸಿ ಚಿತ್ತಗಾಂವ್ನ ಭೂಗತ ಕ್ರಾಂತಿಕಾರಿಗಳಿಗೆ ಆಶ್ರಯದಾತಳಾಗಿ ಮೆರೆಯುತ್ತಾಳೆ. ಇವರಲ್ಲಿ ಸ್ತ್ರೀ ಸ್ವಾತಂತ್ರ್ಯ, ಪುರುಷರೊಂದಿಗೆ ಸಮಾನತೆಯನ್ನು ಗಳಿಸುವ ದಾಹಕ್ಕಿಂತಲೂ ಹೆಚ್ಚಾಗಿ ರಾಷ್ಟ್ರಸೇವೆಯಲ್ಲಿ ಭಾಗಿಗಳಾಗುವ ಸಮರ್ಪಣಾ ಭಾವದ ‘ದುರ್ಗಾವತಾರ’ ಆವಿರ್ಭವಿಸುತ್ತದೆ.
ಹತ್ತೊಂಬತ್ತನೇ ಶತಮಾನದಲ್ಲಿ ಉಗಮವಾಗಿದ್ದ ಧಾರ್ಮಿಕ ರಾಷ್ಟ್ರೀಯತೆಯಿಂದ ಜನ್ಮತಾಳಿದ ಕ್ರಾಂತಿಕಾರಿ ಸಂಘಟನೆಗಳಿಗೆ ೧೯೦೫ರ ವಂಗಭಂಗ ಚಳವಳಿ ಶಾರೀರಿಕ ತರಬೇತಿ ಮತ್ತು ರಾಜಕೀಯ ಚಿಂತನೆಗಳಿಗೆ ಒತ್ತು ಕೊಡುವಂತೆ ಮಾಡುತ್ತದೆ. ಆಧ್ಯಾತ್ಮಿಕ ಹಾಗೂ ರಾಜಕೀಯ ಮಹತ್ತ್ವವನ್ನು ಪಡೆಯುವ ಭಯೋತ್ಪಾದಕ ಕೃತ್ಯಗಳು ಬ್ರಿಟಿಷ್ ಪ್ರಭುತ್ವದ ‘ಮಾಯೆ’ಯ ಪಟಲವನ್ನು ಕಿತ್ತೊಗೆದು ಸ್ವರಾಜ್ಯಕ್ಕಾಗಿ ರಕ್ತತರ್ಪಣವನ್ನು ನೀಡುವಂತೆ ಸಾಮಾನ್ಯ ಜನರಲ್ಲಿ ಕ್ರಾಂತಿಯ ಬಗ್ಗೆ ಜಾಗೃತಿ ಮೂಡಿಸುತ್ತದೆ. ಬಂಕಿಮಚಂದ್ರ ಚಟರ್ಜಿ, ವಿವೇಕಾನಂದ, ಸಹೋದರಿ ನಿವೇದಿತಾ ಮತ್ತು ಅರವಿಂದರವರ ಬರವಣಿಗೆಗಳು ಕ್ರಾಂತಿಕಾರಿಗಳಿಗೆ ಪ್ರೇರಕ ಶಕ್ತಿಗಳಾದವು.
ಮೊದಲ ಕ್ರಾಂತಿಕಾರಿ ಮಹಿಳೆ
ಕ್ರಾಂತಿಕಾರಿ ಚಳವಳಿಯಲ್ಲಿ ಪಾದಾರ್ಪಣೆ ಮಾಡಿ ಶಿಕ್ಷೆಗೊಳಗಾದ ಮೊದಲ ಮಹಿಳೆ ಯಾರು? ಜುಗಾಂತರದ ಮೊದಲ ಸದಸ್ಯೆಯಾಗಿದ್ದ ನಾನಿಬಾಲಾ ದೇವಿ (೧೮೮೮-೧೯೬೭). ಈಕೆ ಬಾಲ ವಿಧವೆಯಾಗಿದ್ದಳು. ವಿದ್ಯಾಭ್ಯಾಸಕ್ಕಾಗಿ ಹಾತೊರೆಯುತ್ತಿದ್ದ ಈಕೆಯನ್ನು ಗಂಡನ ಮನೆಯವರು ಹೊರಹಾಕಿದಾಗ ತನ್ನ ಸೋದರ ಅಳಿಯನ ಆಶ್ರಯಕ್ಕೆ ಬರುತ್ತಾಳೆ. ಜುಗಾಂತರದ ಸದಸ್ಯನಾಗಿದ್ದ ಆತ ಆಕೆಯನ್ನೂ ಸಂಘಟನೆಯಲ್ಲಿ ಸೇರಿಸುತ್ತಾನೆ. ಯಾವುದಾದರೂ ಬಂಧಿತ ಕ್ರಾಂತಿಕಾರಿಯ ಪತ್ನಿಯಂತೆ ನಟಿಸುವುದು, ಮನೆವಾರ್ತೆಯ ಮಹಿಳೆಯಂತೆ ಮನೆಯನ್ನು ಬಾಡಿಗೆಗೆ ಪಡೆದು ಅದರಲ್ಲಿ ಭೂಗತ ಕ್ರಾಂತಿಕಾರಿಗಳಿಗೆ ಆಶ್ರಯ ಒದಗಿಸುವುದು ಈಕೆಗೆ ವಹಿಸಲಾದ ಜವಾಬ್ದಾರಿಯಾಗಿತ್ತು. ೧೯೧೫ರಲ್ಲಿ ಬಂಧನಕ್ಕೊಳಗಾದ ನಾನಿಬಾಲಾ ದೇವಿ ಮೊದಲ ಕ್ರಾಂತಿಕಾರಿ ಮಹಿಳೆಯೆಂಬ ಕೀರ್ತಿಗೆ ಭಾಜನಳಾಗುತ್ತಾಳೆ.
ದೇಶದ ಭವಿಷ್ಯವನ್ನು ರೂಪಿಸುವಲ್ಲಿ ತಾವೇನೂ ಕಡಮೆಯಲ್ಲ ಎಂದು ಕ್ರಾಂತಿಕಾರಿ ಕ್ಷೇತ್ರದಲ್ಲಿ ಧುಮುಕಿದ ಸ್ತ್ರೀಯರು ತೋರಲಾರಂಭಿಸಿದ ದೃಢನಿಶ್ಚಯದಿಂದ ಅದರ ಪ್ರಯೋಜನ ಪಡೆಯಲು ಪುರುಷ ಕ್ರಾಂತಿಕಾರಿಗಳೂ ನಿರ್ಧರಿಸುತ್ತಾರೆ. ಪುರುಷ ಕ್ರಾಂತಿಕಾರಿಯ ಸಹಧರ್ಮಿಣಿಯಂತೆ ಆಕೆಯನ್ನು ಬಳಸಿ ಪೊಲೀಸರ ಕಣ್ಣಿಗೆ ಮಣ್ಣೆರಚಿದ ಅತ್ಯುತ್ತಮ ನಿದರ್ಶನ ೧೯೨೮ರಲ್ಲಿ ಲಾಹೋರ್ನಲ್ಲಿ ಕಂಡುಬರುತ್ತದೆ. ಸಾಂಡರ್ಸ್ನನ್ನು ಹತ್ಯೆಗೈದ ಬಳಿಕ ಭಗತ್ಸಿಂಗ್ ಅಲ್ಲಿಂದ ತಪ್ಪಿಸಿಕೊಳ್ಳುವುದರಲ್ಲಿ ಮತ್ತೊಬ್ಬ ಕ್ರಾಂತಿಕಾರಿ ಭಗವತಿ ಚರಣ್ ವೋರಾನ ಪತ್ನಿ ದುರ್ಗಾದೇವಿ ವೋರಾ ನೆರವಾಗುತ್ತಾರೆ. ಭಗತ್ಸಿಂಗ್ನ ಪತ್ನಿಯಂತೆ ವೇಷ ಧರಿಸಿದ ದುರ್ಗಾದೇವಿ ವೋರಾ ತನ್ನ ಮಗುವಿನೊಂದಿಗೆ ಆತನೊಂದಿಗೆ ಟ್ರೈನ್ನಲ್ಲಿ ಕೋಲ್ಕತಾಗೆ ಹೊರಡುತ್ತಾರೆ.
ಲೀಲಾ ನಾಗ್
ಢಾಕಾದ ಈಡನ್ ಪ್ರೌಢಶಾಲೆಯಿಂದ ಮೆಟ್ರಿಕ್ ಪರೀಕ್ಷೆಯಲ್ಲಿ ಉತ್ತೀರ್ಣಳಾದ ಲೀಲಾ ನಾಗ್ ಬಿ.ಎ. ಪದವಿಗಾಗಿ ಕೋಲ್ಕತಾದ ಬೆಥನಿ ಕಾಲೇಜ್ ಸೇರಿದ ಬಳಿಕ ರಾಷ್ಟ್ರಭಕ್ತ ಬಾಲ ಗಂಗಾಧರ ತಿಲಕ್ರು ಅಸುನೀಗಿದ ದಿನ ಕಾಲೇಜಿಗೆ ರಜೆ ಘೋಷಿಸುವಂತೆ ಮಾಡುವ ಮೂಲಕ ಒಬ್ಬ ವಿದ್ಯಾರ್ಥಿನಿ ನಾಯಕಿಯಾಗಿ ಬೆಳೆಯುತ್ತಾಳೆ. ಇದರೊಂದಿಗೆ ವೈಸರಾಯ್ ಪತ್ನಿಯ ಎದುರು ಮಂಡಿಯೂರಿ ನಮಸ್ಕರಿಸುವ ಪದ್ಧತಿಗೆ ವಿರೋಧ ಸೂಚಿಸುವ ಆಂದೋಲನಕ್ಕೂ ಚಾಲನೆ ನೀಡುತ್ತಾಳೆ. ಪದವಿ ಮುಗಿಸಿ ಎಂ.ಎ. ಓದಲು ಢಾಕಾಗೆ ಹಿಂತಿರುಗುವ ಲೀಲಾ ೧೯೨೩ರಲ್ಲಿ ತನ್ನ ಹನ್ನೆರಡು ಗೆಳತಿಯರೊಂದಿಗೆ ‘ದೀಪಾಲಿ ಸಂಘ’ಕ್ಕೆ ಬುನಾದಿ ಹಾಕುತ್ತಾಳೆ. ಸ್ತ್ರೀ ಶಿಕ್ಷಣವನ್ನೇ ಆದರ್ಶವನ್ನಾಗಿಸಿಕೊಂಡ ಆಕೆ ಅನತಿ ಸಮಯದಲ್ಲಿ ಬಾಲಕಿಯರ ಶಿಕ್ಷಣಕ್ಕಾಗಿ ಹನ್ನೆರಡು ಪ್ರಾಥಮಿಕ ಶಾಲೆಗಳು ಹಾಗೂ ಮೂರು ಪ್ರೌಢಶಾಲೆಗಳನ್ನು ಕಟ್ಟಿ ಬೆಳೆಸುತ್ತಾಳೆ.
ಕಲ್ಯಾಣಿ ದಾಸ್
ಬೆಥನಿ ಕಾಲೇಜ್ನಲ್ಲಿ ‘ಛಾತ್ರಿ ಸಂಘ’ ಪ್ರಾರಂಭಿಸಿದ ಕಲ್ಯಾಣಿ ದಾಸ್ ಗಾಂಧಿಯವರ ಅಹಿಂಸಾ ತತ್ತ್ವಕ್ಕೆ ಬದ್ಧಳಾಗಿ ೧೯೩೦ರ ಸವಿನಯ ಪ್ರತಿರೋಧದಲ್ಲಿ ಭಾಗಿಯಾಗುತ್ತಾಳೆ. ಹಜಾರ ಪಾರ್ಕ್ನಲ್ಲಿ ಮಾಡಿದ ಭಾಷಣಕ್ಕಾಗಿ ಬಂಧನಕ್ಕೊಳಗಾಗಿ ‘ಪ್ರೆಸಿಡೆನ್ಸಿ ಜೈಲ್’ನ ನೆಲಮಾಳಿಗೆಯ ಕೋಣೆಯಲ್ಲಿ ಸೀರೆ, ಹಾಸಿಗೆ, ಸೊಳ್ಳೆ ಪರದೆಗಳಿಲ್ಲದೆ ದಿನಗಳನ್ನು ಕಳೆದ ಕಲ್ಯಾಣಿ ಬಿಡುಗಡೆಯಾದ ಬಳಿಕ ಕ್ರಾಂತಿಕಾರಿಯಾಗಿ ಬದಲಾಗುತ್ತಾಳೆ. ದಿನೇಶ್ ಮಜುಂದಾರ್ ಅವರೊಂದಿಗೆ ಸೇರಿ ಭೂಗತ ಕ್ರಾಂತಿಕಾರಿಗಳೊಂದಿಗೆ ಸಂಪರ್ಕ ಇರಿಸಿಕೊಳ್ಳುವುದು, ರಹಸ್ಯ ಸಂದೇಶಗಳನ್ನು ರವಾನಿಸುವುದು ಹಾಗೂ ಶಸ್ತ್ರಾಸ್ತ್ರಗಳನ್ನು ಅಡಗಿಸಿಡುವುದರ ಮೂಲಕ ಕಾರ್ಯಾರಂಭ ಮಾಡುತ್ತಾಳೆ. ದೀಪಾಲಿ ಸಂಘ ಮತ್ತು ಛಾತ್ರಿ ಸಂಘಗಳಿಂದ ಸ್ತ್ರೀ-ಸದಸ್ಯರನ್ನು ರಹಸ್ಯ ಕ್ರಾಂತಿಕಾರಿ ಕಾರ್ಯಾಚರಣೆಗಾಗಿ ಸೇರಿಸಲಾರಂಭಿಸುತ್ತಾಳೆ. ‘ಅವರು ತಮ್ಮ ಸಹೋದರರು ಪಕ್ಷದ ಸದಸ್ಯರಾಗಿದ್ದಾರೆಂಬ ಕಾರಣಕ್ಕಾಗಿ ಕ್ರಾಂತಿಕಾರಿ ಚಟುವಟಿಕೆಗಳಲ್ಲಿ ಭಾಗಿಗಳಾಗಲಿಲ್ಲ. ಬದಲಿಗೆ ತಾವು ಕ್ರಾಂತಿಕಾರಿಗಳಾಗಲು ಸೂಕ್ತ ಸಮಯ ಬಂದೊದಗಿದೆ ಎಂಬ ಅರಿವಾದಾಗ ಅವರು ಹಿಂದೆಗೆಯದೆ ಧುಮುಕಿದರು. ಹಿಜ್ಲಿಯಲ್ಲಿ ನಡೆದ ಪೊಲೀಸರ ದೌರ್ಜನ್ಯದ ಬಳಿಕ ಸುಮಾರು ೩೦೦ ವಿದ್ಯಾರ್ಥಿನಿಯರು ನಮ್ಮನ್ನು ಬಂದು ಸೇರಿಕೊಂಡರು’ – ಎಂದು ಕಲ್ಯಾಣಿ ಬರೆಯುತ್ತಾಳೆ.
ಬೀನಾ ದಾಸ್
ಕೋಮಿಲ್ಲಾದಲ್ಲಿ ವಿದ್ಯಾರ್ಥಿನಿಯರಾಗಿದ್ದ ಶಾಂತಿ ಘೋಷ್ ಮತ್ತು ಸುನೀತಿ ಚೌಧರಿ ಯುಗಾಂತರ ಗುಂಪಿನ ಪ್ರಫುಲ್ಲ ನಳಿನಿ ಬ್ರಹ್ಮ ಎಂಬ ಸಹ-ವಿದ್ಯಾರ್ಥಿಯ ಸಂಪರ್ಕದಿಂದ ಕ್ರಾಂತಿಕಾರಿ ಚಳವಳಿಯಲ್ಲಿ ಪಾದಾರ್ಪಣೆ ಮಾಡುತ್ತಾರೆ. ಇವರು ನಡೆಸಿದ ಕೋಮಿಲ್ಲಾದ ಜಿಲ್ಲಾ ದಂಡಾಧಿಕಾರಿ ಸ್ಟೀವನ್ಸ್ನ ಹತ್ಯೆಯಿಂದ ರಾಜಕೀಯ ಚಿಂತನೆಯ ದಿಕ್ಕು ಬದಲಾಗುತ್ತದೆ. ಬೀನಾ ದಾಸ್ ೧೯೨೮ರ ಸೈಮನ್ ವಿರೋಧಿ ಹೋರಾಟದಲ್ಲಿ ಕಾಂಗ್ರೆಸ್ ಕಾರ್ಯಕರ್ತೆಯಾಗಿ ಹೋರಾಡಿದವಳು. ಆಕೆಯಲ್ಲಿದ್ದ ಹೋರಾಟದ ಕಸುವನ್ನು ಮೆಚ್ಚುವ ಆಕೆಯ ಸ್ನೇಹಿತೆಯರಾದ ಸುಹಾಸಿನಿ ದತ್ತ ಮತ್ತು ಶಾಂತಿ ದಾಸ್ಗುಪ್ತ ಬೀನಾಳನ್ನು ತಾವಿದ್ದ ಕ್ರಾಂತಿಕಾರಿ ಗುಂಪಿಗೆ ಪರಿಚಯಿಸುತ್ತಾರೆ. ತನ್ನ ಸುತ್ತಲೂ ನಡೆಯುತ್ತಿದ್ದ ಕ್ರಾಂತಿಕಾರಿ ಕಾರ್ಯಾಚರಣೆಯಿಂದ ಪ್ರಭಾವಿತಗೊಂಡ ಬೀನಾ ದಾಸ್ ತನ್ನ ಸ್ನೇಹಿತೆ ಕಮಲಾ ದಾಸ್ ಗುಪ್ತಳಲ್ಲಿ ಇಂತಹ ಕಾರ್ಯಾಚರಣೆಯಲ್ಲಿ ಭಾಗಿಯಾಗುವ ಇಚ್ಛೆಯನ್ನು ಪ್ರಕಟಿಸಿದಾಗ ಆಕೆ ನೀಡಿದ ರಿವಾಲ್ವರ್ನಿಂದ ಬೀನಾ ಘಟಿಕೋತ್ಸವ ಸಮಾರಂಭದಲ್ಲಿ ಬಂಗಾಳದ ಗವರ್ನರನ ಮೇಲೆ ಹಲ್ಲೆಗೆ ಮುಂದಾಗುತ್ತಾಳೆ.
ಚಾಂದ್ಪುರದ ಪೊಲೀಸ್ ಇನ್ಸ್ಪೆಕ್ಟರ್ ತಾರಿಣಿ ಮುಖರ್ಜಿಯ ಹತ್ಯೆಯಲ್ಲಿ ಭಾಗಿಯಾಗಿದ್ದ ರಾಮಕೃಷ್ಣ ಬಿಸ್ವಾಸ್ನನ್ನು ಗಲ್ಲಿಗೇರಿಸಿದ ನಂತರ ಸೂರ್ಯಸೇನ್ನೊಂದಿಗೆ ನೇರ ಸಂಪರ್ಕಕ್ಕೆ ಬರುವ ಪ್ರೀತಿಲತಾ ೧೯೩೨ರ ಜೂನ್ ೧೨ರಂದು ಅದೃಷ್ಟವಶಾತ್ ಪೊಲೀಸರಿಂದ ತಪ್ಪಿಸಿಕೊಂಡ ಬಳಿಕ ಆತನೊಂದಿಗೆ ಹಲವಾರು ತಿಂಗಳುಗಳ ಕಾಲ ಭೂಗತಳಾಗಿ ಹಳ್ಳಿಗಳಲ್ಲಿ ಕಾಲ ಕಳೆಯುತ್ತಾಳೆ. ಸೆಪ್ಟೆಂಬರ್ ೨೪ರಂದು ಸೂರ್ಯಸೇನ್ನ ಅನುಮತಿಯೊಂದಿಗೆ ಪಹಾಡ್ತಲಿ ಕ್ಲಬ್ ಮೇಲಿನ ದಾಳಿಯ ನೇತೃತ್ವ ವಹಿಸಿದ ಪ್ರೀತಿ ದಾಳಿಯ ನಂತರ ಸಯನೈಡ್ ವಿಷ ಸೇವಿಸಿ ಹುತಾತ್ಮಳಾಗುತ್ತಾಳೆ.
‘ಛಾತ್ರಿ ಸಂಘ’ದ ಕಲ್ಪನಾ ದತ್ತ
ವಿದ್ಯಾರ್ಥಿನಿ ದೆಸೆಯಲ್ಲಿ ‘ಛಾತ್ರಿ ಸಂಘ’ದ ಸದಸ್ಯೆಯಾಗಿದ್ದ ಕಲ್ಪನಾ ದತ್ತಳನ್ನು ಮನೋರಂಜನ್ ರಾಯ್ ಶಸ್ತ್ರಾಗಾರ ದಾಳಿ ಪ್ರಕರಣದ ಬಳಿಕ ಸೂರ್ಯಸೇನ್ನೊಂದಿಗೆ ಭೇಟಿಯಾಗುವಲ್ಲಿ ಸಹಾಯ ಮಾಡುತ್ತಾನೆ. ಸೂರ್ಯಸೇನ್ನ ಆದೇಶದ ಮೇರೆಗೆ ಆ ವೇಳೆಗಾಗಲೇ ಬಂಧಿತರಾಗಿದ್ದ ಇತರ ನಾಯಕರಾದ ಅನಂತ ಸಿಂಗ್, ಗಣೇಶ್ ಘೋಷ್ ಮೊದಲಾದವರನ್ನು ಸೆರೆಮನೆಯನ್ನು ಸ್ಫೋಟಿಸಿ ಹೊರತರುವ ಯೋಜನೆಗಾಗಿ ಕಲ್ಪನಾ ದತ್ತ ಗನ್ಕಾಟನ್ ತಯಾರಿಸಲು ತೊಡಗುತ್ತಾಳೆ. ಆದರೆ ಈ ಯೋಜನೆ ವಿಫಲಗೊಂಡು ಬೇರೊಂದು ಸಂದರ್ಭದಲ್ಲಿ ಬಂಧನಕ್ಕೊಳಗಾಗುವ ಕಲ್ಪನಾ ವಿರುದ್ಧ ಸಾಕಷ್ಟು ಸಾಕ್ಷ್ಯಾಧಾರಗಳಿಲ್ಲದ ಕಾರಣ ಅವಳು ಬಿಡುಗಡೆಯಾಗುತ್ತಾಳೆ. ಪಹಾಡ್ತಲಿ ಕ್ಲಬ್ ಮೇಲೆ ದಾಳಿ ನಡೆಸಲು ಪ್ರೀತಿಲತಾ ಜೊತೆ ಆಯ್ಕೆಯಾದರೂ ಅದಕ್ಕೆ ಮುಂಚೆ ಮತ್ತೊಮ್ಮೆ ಬಂಧನಕ್ಕೊಳಗಾಗುತ್ತಾಳೆ. ೧೯೩೩ರ ಫೆಬ್ರುವರಿ ೧೬ರಂದು ಆಕೆ ಮತ್ತು ಮಣೀಂದ್ರ ದತ್ತ್ ಪೊಲೀಸ್ ದಾಳಿಯಲ್ಲಿ ತಪ್ಪಿಸಿಕೊಂಡರೆ ಸೂರ್ಯಸೇನ್ ಮತ್ತು ಬ್ರೊಜೇನ್ ಸೇನ್ ಸೆರೆಯಾಗುತ್ತಾರೆ. ಅದೇ ವರ್ಷದ ಮೇ ತಿಂಗಳಿನಲ್ಲಿ ಕಲ್ಪನಾ ದತ್ತ ಮತ್ತು ತಾರಕೇಶ್ವರ್ ದಸ್ತಿದಾರ್ ಪೊಲೀಸರಿಗೆ ಕೈಸೆರೆ ಸಿಗುತ್ತಾರೆ. ಆ ಬಳಿಕ ಶಸ್ತಾçಗಾರ ದಾಳಿ ಪ್ರಕರಣ ಎರಡನೆಯ ಹೆಚ್ಚುವರಿ ಮೊಕದ್ದಮೆಯಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗುತ್ತಾಳೆ.
ತನ್ನ ತಂದೆಯಿಂದ ಪ್ರೇರಿತಳಾದ ಉಜ್ಜಲಾ ಮಜುಂದಾರ್ ಬಂಗಾಳ ಸ್ವಯಂಸೇವಕರ ಗುಂಪನ್ನು ಸೇರಿ ಇತರರನ್ನೂ ಕ್ರಾಂತಿಕಾರಿ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಉತ್ತೇಜಿಸುತ್ತಾಳೆ. ತನ್ನ ಸಂಗಾತಿಗಳಾದ ಮನೋರಂಜನ್ ಬ್ಯಾನರ್ಜಿ, ಭವಾನಿ ಭಟ್ಟಾಚಾರ್ಯ, ಮತ್ತು ರಬಿ ಬ್ಯಾನರ್ಜಿಯವರೊಂದಿಗೆ ಸೇರಿ ದಾರ್ಜಿಲಿಂಗ್ನಲ್ಲಿ ನಡೆಯುತ್ತಿದ್ದ ಕ್ರಿಕೆಟ್ ಪಂದ್ಯಾವಳಿಯನ್ನು ವೀಕ್ಷಿಸುತ್ತಿದ್ದ ಬಂಗಾಲದ ಗವರ್ನರನ ಮೇಲೆ ನಡೆಸಿದ ದಾಳಿಯಲ್ಲಿ ಗವರ್ನರ್ ಪಾರಾಗುತ್ತಾನೆ. ಉಜ್ಜಲಾ ೧೪ ವರ್ಷದ ಶಿಕ್ಷೆಗೆ ಗುರಿಯಾಗುತ್ತಾಳೆ.
ಅನುಶೀಲನ ಸಮಿತಿಯ ಸಕ್ರಿಯ ಸದಸ್ಯನಾಗಿದ್ದ ತಮ್ಮ ಅಣ್ಣ ಅಮೂಲ್ಯ ಮುಖರ್ಜಿಯ ಪ್ರಭಾವದಿಂದ ಪಾರುಲ್ ಮತ್ತು ಉಷಾ ಮುಖರ್ಜಿ ಕ್ರಾಂತಿಕಾರಿ ಜಗತ್ತಿಗೆ ಪರಿಚಿತರಾಗುತ್ತಾರೆ. ೧೯೩೨ರಲ್ಲಿ ಪೂರ್ಣೇಂದು ದಾಸ್ಗುಪ್ತ ಮತ್ತು ಶ್ಯಾಮ್ ಬಿನೋದ್ ಪಾಲ್ರಂತಹ ಅನೇಕ ಕ್ರಾಂತಿಕಾರಿಗಳಿಗೆ ತೀತಾಘರ್ನಲ್ಲಿ ಬಾಂಬ್ ತಯಾರಿಸುವಲ್ಲಿ ಸಹಾಯ ಮಾಡಿದ ಪಾರುಲ್ ೧೯೩೫ರಲ್ಲಿ ಬಂಧನಕ್ಕೊಳಗಾಗಿ ತೀತಾಘರ್ ಪಿತೂರಿ ಮೊಕದ್ದಮೆಯಲ್ಲಿ ಮೂರು ವರ್ಷ ಕಾರಾಗೃಹವಾಸಕ್ಕೆ. ಗುರಿಯಾಗುತ್ತಾಳೆ. ೧೯೩೪ರಲ್ಲಿ ಉಷಾ ಮುಖರ್ಜಿ ಬಂಧನಕ್ಕೊಳಗಾಗುತ್ತಾಳೆ.
ಸುಹಾಸಿನಿ ಗಂಗೂಲಿಯ ನಿರ್ಭೀತ ನಡಾವಳಿ ಮತ್ತು ಆತ್ಮವಿಶ್ವಾಸ ಯುಗಾಂತರ ಗುಂಪಿನ ಕಲ್ಯಾಣಿ ದಾಸ್ ಮತ್ತು ಕಲ್ಪನಾ ದಾಸ್ಗುಪ್ತರ ಗಮನ ಸೆಳೆಯುತ್ತದೆ. ಅಲ್ಲಿಂದ ಆಕೆಯ ಕ್ರಾಂತಿಕಾರಿ ಜೀವನ ಆರಂಭಗೊಳ್ಳುತ್ತದೆ. ಆಕೆಯನ್ನು ಮತ್ತೊಬ್ಬ ಸಹ-ಕ್ರಾಂತಿಕಾರಿ ಶಶಿಧರ್ ಆಚಾರ್ಯನ ಪತ್ನಿಯಂತೆ ನಟಿಸುತ್ತ ಚಿತ್ತಗಾಂವ್ ಶಸ್ತಾçಗಾರ ದಾಳಿಯಲ್ಲಿ ಭಾಗಿಗಳಾಗಿ ಭೂಗತರಾಗಿದ್ದ ಕ್ರಾಂತಿಕಾರಿಗಳಿಗೆ ಆಶ್ರಯ ಒದಗಿಸಲು ೧೯೩೦ರಲ್ಲಿ ಚಂದ್ರನಗರಕ್ಕೆ ಕಳುಹಿಸಲಾಯಿತು. ಆಕೆಯ ನಿವಾಸದ ಮೇಲೆ ೧೯೩೦ರ ಸೆಪ್ಟೆಂಬರ್ನಲ್ಲಿ ನಡೆದ ಪೊಲೀಸ್ ದಾಳಿಯಲ್ಲಿ ಕ್ರಾಂತಿಕಾರಿಗಳೊಂದಿಗೆ ಸೆರೆಸಿಕ್ಕ ಬಳಿಕ ಸುಹಾಸಿನಿ ಹಿಜ್ಲಿ ಕಾರಾಗೃಹದಲ್ಲಿ ಆರು ವರ್ಷಗಳನ್ನು ಕಳೆಯಬೇಕಾಯಿತು.
ಸುಹಾಸಿನಿ ಗಂಗೂಲಿ
ಚಿತ್ತಗಾಂವ್ ದಾಳಿಯ ರೂವಾರಿ ಅನಂತ ಸಿಂಗ್ನ ಅಕ್ಕ ಇಂದುಮತಿ ಸಿಂಗ್ ಕ್ರಾಂತಿಕಾರಿಗಳಿಗೆ ಬಹಳಷ್ಟು ಆರ್ಥಿಕ ಸಹಾಯ ಒದಗಿಸಿರುತ್ತಾಳೆ. ಇಲ್ಲಿ ಸುಹಾಸಿನಿ ಗಂಗೂಲಿಯನ್ನು ಮರೆಯುವಂತಿಲ್ಲ. ಚಿತ್ತಗಾಂವ್ ಪ್ರಕರಣದ ಜೀಬನ್ ಘೋಷಾಲ್ ಮತ್ತು ಆನಂದ ಗುಪ್ತ, ಟೇಗಾರ್ಟ್ ಕಾರಿನ ಮೇಲೆ ಡಾಲ್ ಹೌಸಿ ಚೌಕದಲ್ಲಿ ಬಾಂಬ್ ಎಸೆದ ದಿನೇಶ್ ಮಜುಂದಾರ್ ಮತ್ತು ಅನುಜ ಸೇನ್ರೊಂದಿಗಿದ್ದ ಮನೋರಂಜನ್ ರಾಯ್ಗೆ ಸುಹಾಸಿನಿ ಆಶ್ರಯ ನೀಡಿರುತ್ತಾಳೆ. ಲೇಬಾಂಗ್ನಲ್ಲಿ ದಾಳಿ ನಡೆಸಿದ ಉಜ್ಜಲಾ ಮಜುಂದಾರ್ ಸಹ ಆಕೆಯ ಆಶ್ರಯಕ್ಕೆ ಒಳಗಾಗಿದ್ದಳು. ಕ್ರಾಂತಿಕಾರಿಗಳಿಗೆ ಆಕೆ ಒದಗಿಸಿದ ಆರ್ಥಿಕ ಸಹಾಯವೂ ಕಡಮೆಯದೇನಲ್ಲ.
ಶಾಂತಿಸುಧಾ ಘೋಷ್
ಕ್ರಾಂತಿಕಾರಿಗಳೊಂದಿಗೆ ಸಕ್ರಿಯವಾಗಿದ್ದು ಆರ್ಥಿಕ ಸಹಾಯ, ಶಸ್ತ್ರಾಸ್ತ್ರಗಳ ಸಂಗ್ರಹ, ದಾಖಲೆಗಳನ್ನು ಸುರಕ್ಷಿತ ಸ್ಥಾನಗಳಲ್ಲಿ ಭದ್ರವಾಗಿಟ್ಟುಕೊಳ್ಳುವುದು, ಗುಪ್ತ ಆಶ್ರಯದಾಣಗಳಲ್ಲಿರುವ ಅವರೊಂದಿಗೆ ಸಂಪರ್ಕವನ್ನೇರ್ಪಡಿಸುವುದು ಮೊದಲಾದ ಕಾರ್ಯಗಳನ್ನು ಯಶಸ್ವಿಯಾಗಿ ನಿಭಾಯಿಸಿದ ಸಾವಿತ್ರಿ ದಾಸ್, ಪ್ರತಿಭಾ ಭದ್ರ, ಬನಲತಾ ದಾಸ್ಗುಪ್ತ, ಹೆಲೆನ ದತ್ತ್, ಇಂದುಸುಧಾ ದಾಸ್, ಆಲೋಕ ಡೇ, ಶಾಂತಿಸುಧಾ ಘೋಷ್ ಮತ್ತು ಸುಲತಾ ಮಿತ್ರ ಉಲ್ಲೇಖನೀಯರಾಗಿದ್ದಾರೆ. ಮೊದಲಿನಿಂದಲೂ ಕ್ರಾಂತಿಕಾರಿಗಳೊAದಿಗೆ ಅಪ್ರತ್ಯಕ್ಷ ಸಂಪರ್ಕದಲ್ಲಿದ್ದ ಶಾಂತಿಸುಧಾ ಘೋಷ್ ಸ್ನಾತಕೋತ್ತರ ಪದವಿ ಪಡೆದ ನಂತರ ಸಕ್ರಿಯವಾಗಿ ಭಾಗವಹಿಸತೊಡಗಿದಳು. ಅರವಿಂದರ ಜೀವನ ಮತ್ತು ರಾಜಕೀಯ ಚಿಂತನೆಯಿಂದ ಆಳವಾಗಿ ಪ್ರಭಾವಿತಳಾದ ಶಾಂತಿಸುಧಾ ಜುಗಾಂತರ ಗುಂಪನ್ನು ಸೇರುತ್ತಾಳೆ. ‘ಗಾಂಧಿಯವರ ಚಿಂತನೆಗಿಂತಲೂ ತನಗೆ ಅರವಿಂದರವರ ಚಿಂತನೆಯೇ ಹೆಚ್ಚು ಪ್ರೇರಕವಾಗಿತ್ತೆಂದು’ ಆಕೆ ಹೇಳಿಕೊಳ್ಳುತ್ತಾಳೆ. ಅನೇಕ ಬಾರಿ ಆಕೆ ರಿವಾಲ್ವರ್ ಮೊದಲಾದ ಶಸ್ತ್ರಾಸ್ತ್ರಗಳನ್ನು ಸುರಕ್ಷಿತವಾಗಿ ಅಡಗಿಸುವಲ್ಲಿ ಯಶಸ್ವಿಯಾಗುತ್ತಾಳೆ. ೧೯೩೧ರಲ್ಲಿ ಬಾರಿಸಾಲ್ನಲ್ಲಿ ‘ಶಕ್ತಿ ಬಾಹಿನಿ’ಯನ್ನು ಪ್ರಾರಂಭಿಸುತ್ತಾಳಾದರೂ ಸರಕಾರದ ಒತ್ತಡದಿಂದ ಅದು ಹೆಚ್ಚಿನ ಪ್ರಗತಿ ಸಾಧಿಸಲಾಗಲಿಲ್ಲ. ಆದರೆ ಸರಕಾರದ ಕಣ್ಣಿಗೆ ಮಣ್ಣೆರಚಲು ಆಕೆ ‘ಹರಿಜನ್ ಬಿದ್ಯಾಮಂದಿರ’ವನ್ನು ಪ್ರಾರಂಭಿಸುತ್ತಾಳೆ. ೧೯೩೦-೩೨ರಲ್ಲಿ ಅಪಾರ ಸಂಖ್ಯೆಯ ಕ್ರಾಂತಿಕಾರಿಗಳನ್ನು ಬಂಧಿಸುವಲ್ಲಿ ಸರಕಾರ ಯಶಸ್ವಿಯಾದಾಗ ಸಂಘಟನೆಯ ಹೊಣೆ ಈ ಮಹಿಳೆಯರ ಮೇಲೆ ಬೀಳುತ್ತದೆ. ಹೀಗಾಗಿ ೧೯೩೨ರಲ್ಲಿ ಶಾಂತಿಸುಧಾ ಕೋಲ್ಕತಾದಲ್ಲಿ ಕಲ್ಯಾಣಿದಾಸ್ ಜೊತೆ ಸೇರಿ ಮಹಿಳಾ ಸಂಘಟನೆಗೆ ಮುಂದಾಗುತ್ತಾಳೆ. ದಿನೇಶ್ ಮಜುಂದಾರ್ ಮೊದಲಾದವರೊಂದಿಗೆ ಸಂಪರ್ಕಕ್ಕೆ ಬರುವ ಶಾಂತಿಸುಧಾ ೧೯೩೩ರ ಗ್ರಿಂಡ್ಲೆ ಬ್ಯಾಂಕ್ ದರೋಡೆ ಪ್ರಕರಣದಲ್ಲಿ ಬಂಧನಕ್ಕೊಳಗಾದರೂ ಅನಾರೋಗ್ಯದ ನಿಮಿತ್ತ ಬಿಡುಗಡೆ ಹೊಂದುತ್ತಾಳೆ.
ಸವಿನಯ ಪ್ರತಿರೋಧ
ಗಾಂಧಿಯವರಾಗಲಿ ಅಥವಾ ಕ್ರಾಂತಿಕಾರಿಗಳಾಗಲಿ ತಮ್ಮ ಆಂದೋಲನ ಮತ್ತು ಕಾರ್ಯಾಚರಣೆಗಳಲ್ಲಿ ಸ್ತ್ರೀಯರನ್ನು ಸೇರಿಸಿಕೊಳ್ಳಲು ಇದ್ದ ಪ್ರಮುಖ ಕಾರಣಗಳಾದರೂ ಏನು ಎಂದು ಪ್ರಶ್ನಿಸುವ ಮಾನಿನಿ ಚಟರ್ಜಿ ಗಾಂಧಿಯವರಿಗೆ ಸ್ತ್ರೀಯರ ತಾಳ್ಮೆ, ಸಹನಾಶಕ್ತಿ, ತ್ಯಾಗಮಯತೆ ಹಾಗೂ ಅಹಿಂಸಾತ್ಮಕ ಮನೋಭಾವ ಅವರನ್ನು ತಮ್ಮ ‘ಅಹಿಂಸಾತ್ಮಕ’ ಆಂದೋಲನದಲ್ಲಿ ಭಾಗಿಗಳಾಗಲು ಪುರುಷರಿಗಿಂತಲೂ ಹೆಚ್ಚು ಅರ್ಹರೆಂಬ ಭರವಸೆ ಮೂಡಿಸಿದ್ದರೂ ಸಾಬರ್ಮತಿ ಆಶ್ರಮದಿಂದ ಹೊರಟ ತಮ್ಮ ದಂಡೀ ಯಾತ್ರೆಗಾಗಿ ಆಯ್ಕೆ ಮಾಡಿದ ೭೧ ಮಂದಿ ಸ್ವಯಂಸೇವಕರ ತಂಡದಲ್ಲಿ ಒಬ್ಬ ಮಹಿಳೆಯನ್ನೂ ಸೇರಿಸದಿರುವುದು ಚೋದ್ಯದ ಸಂತತಿ ಎನ್ನುತ್ತಾರೆ. ಸರೋಜಿನಿ ನಾಯ್ಡು ಸಹ ದಂಡಿಯ ಸಮುದ್ರ ತಟದಲ್ಲಿ ಸೇರಿ ಬಂಧನಕ್ಕೊಳಗಾದ ಪ್ರಥಮ ಮಹಿಳೆ ಎಂದು ಗುರುತಿಸಲ್ಪಟ್ಟರಾದರೂ ಪಾದಯಾತ್ರೆಯಲ್ಲಿ ಭಾಗಿಯಾಗಿರಲಿಲ್ಲ. ಈ ಬಗ್ಗೆ ಗಾಂಧಿಯವರಿಗೆ ಸರೋಜಿನಿ ನಾಯ್ಡು ಮತ್ತು ಕಮಲಾದೇವಿ ಚಟ್ಟೋಪಾಧ್ಯಾಯ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದರೆಂದು ಹೇಳಲಾಗಿದೆಯಾದರೂ ಗಾಂಧಿಯವರು ಅದಕ್ಕೆ ಸೊಪ್ಪು ಹಾಕಿದಂತಿಲ್ಲ.
ಗಾಂಧಿಯವರು ಈ ಬಾರಿಯ ತಮ್ಮ ಸವಿನಯ ಪ್ರತಿರೋಧ ಆಂದೋಲನ ತಮ್ಮ ಕೈಮೀರಿ ೧೯೨೨ರ ಚೌರಿಚೌರಾದಂತಹ ಹಿಂಸಾತ್ಮಕ ರೂಪ ತಳೆಯಬಾರದೆಂಬ ಆಶಯದೊಂದಿಗೆ ಮಹಿಳೆಯರನ್ನು ಭಾಗಿಯಾಗಲು ಮುಕ್ತವಾಗಿ ಆಹ್ವಾನಿಸುತ್ತಾರೆ. ಹಿಂಸೆಯನ್ನು ಕುರಿತಂತೆ ಮಹಿಳೆಯರಲ್ಲಿರುವ ಮೂಲಭೂತ ಹಿಂದೆಗೆತದಲ್ಲಿ ನಂಬಿಕೆಯಿದ್ದ ಗಾಂಧಿಯವರು ಸರಾಯಿ ಅಂಗಡಿ ಮತ್ತು ವಿದೇಶೀ ವಸ್ತ್ರ ಮಾರಾಟ ಮಳಿಗೆಗಳ ಎದುರು ‘ಪಿಕೆಟಿಂಗ್’ ನಡೆಸಲು ಸ್ತ್ರೀಯರೇ ಸೂಕ್ತ ಎಂದು ನಿರ್ಣಯಿಸುತ್ತಾರೆ. ಪುರುಷರಿಗಿಂತಲೂ ಸ್ತ್ರೀಯರೇ ಪೊಲೀಸರ ಲಾಠಿಗಳನ್ನು ಸಮರ್ಥವಾಗಿ ಎದುರಿಸಬಲ್ಲರು ಎಂಬ ಆತ್ಮವಿಶ್ವಾಸ ಅವರದ್ದಾಗಿತ್ತು.
ಬ್ರಿಟಿಷ್ ಸರಕಾರಕ್ಕೆ ನಡುಕ ಹುಟ್ಟಿಸಿದ ಚಿತ್ತಗಾಂವ್ ಶಸ್ತ್ರಾಗಾರ ಪ್ರಕರಣ
ರಿವಾಲ್ವರ್ ಹಿಡಿದು ಕ್ರಾಂತಿಕಾರಿ ಚಟುವಟಿಕೆಗಳಲ್ಲಿ ಭಾಗಿಯಾದ ಸ್ತ್ರೀಯರತ್ತ ಗಮನ ಹರಿಸಿದರೆ ಗಾಂಧಿಯವರ ದಂಡೀ ಯಾತ್ರೆ ಪ್ರಾರಂಭಗೊಂಡ ಎರಡೇ ವಾರಗಳಲ್ಲಿ ಬರಸಿಡಿಲಿನಂತೆ ಬಂದೆರಗಿದ ಚಿತ್ತಗಾಂವ್ ಶಸ್ತಾçಗಾರ ದಾಳಿ ಸ್ತ್ರೀಯರನ್ನು ತನ್ನತ್ತ ಆಕರ್ಷಿಸುವ ಮೂಲಕ ಕ್ರಾಂತಿಕಾರಿ ಹೋರಾಟಕ್ಕೊಂದು ಹೊಸ ಆಯಾಮ ತರುತ್ತದೆ. ಸ್ವಾತಂತ್ರ್ಯಾನಂತರ ನಾವು ಶಾಲಾಕಾಲೇಜುಗಳಲ್ಲಿ ಓದುವ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಸವಿನಯ ಪ್ರತಿರೋಧಕ್ಕೆ ಪ್ರಾಮುಖ್ಯ ನೀಡಿ ಚಿತ್ತಗಾಂವ್ ಆಂದೋಲನವನ್ನು ಕೇವಲ ಒಂದು ಅಡಿಟಿಪ್ಪಣಿಗೆ ಇಳಿಸಲಾಗುತ್ತಿದೆ. ಆದರೆ ಸಮಕಾಲೀನ ಸರಕಾರಿ ದಾಖಲೆಗಳನ್ನು ವೀಕ್ಷಿಸಿದವರಿಗೆ ನಾಲ್ಕು ವರ್ಷಗಳವರೆಗೆ ಹರಡಿದ್ದ ಚಿತ್ತಗಾಂವ್ ಶಸ್ತಾçಗಾರ ಪ್ರಕರಣ ಬ್ರಿಟಿಷ್ ಸರಕಾರವನ್ನು ಭಯದಿಂದ ತತ್ತರಗುಟ್ಟುವಂತೆ ಮಾಡಿತ್ತೆಂಬುದು ಸ್ಪಷ್ಟವಾಗುತ್ತದೆ. ‘ಚಿತ್ತಗಾಂವ್ ಕ್ರಾಂತಿಕಾರಿ ದುಷ್ಕೃತ್ಯದ ಯೋಜನೆಯನ್ನು ಹಿಂದೆಂದೂ ಕಾಣದ ನಿಖರತೆ ಮತ್ತು ಪ್ರಮಾಣದಲ್ಲಿ ಯೋಜಿಸಲಾಗಿತ್ತು’ ಎಂದು ಅಧಿಕಾರಿಗಳು ಒಪ್ಪಿಕೊಂಡರೆ ಭಾರತ ಸರಕಾರದ ಗೃಹ ಕಾರ್ಯದರ್ಶಿ ಎಚ್. ಸಿ. ಹೇಗ್ “ಚಿತ್ತಗಾಂವ್ ದಾಳಿ ಬಂಗಾಳ ಕ್ರಾಂತಿಕಾರಿ ಸಂಘಟನೆಗಳ ಅತ್ಯಂತ ಹಿರಿಯ ಸಂಘಟನಾತ್ಮಕ ಕೌಶಲ ಮತ್ತು ಶೌರ್ಯ ಪ್ರದರ್ಶಕಕ್ಕೆ ಅತ್ಯುತ್ತಮ ನಿದರ್ಶನವಾಗಿದೆ” ಎಂದು ಬಣ್ಣಿಸುತ್ತಾನೆ. ಚಿತ್ತಗಾಂವ್ನ ಯುರೋಪಿಯನ್ ಅಸೋಸಿಯೇಶನಿನ ಕಾರ್ಯದರ್ಶಿ “೧೮೫೭ರ ದಂಗೆಯ ಬಳಿಕ ಏಪ್ರಿಲ್ ೧೯೩೦ರಲ್ಲಿ ನಡೆದ ಚಿತ್ತಗಾಂವ್ ದಾಳಿ ಪ್ರಕರಣಕ್ಕೆ ಸಮನಾದ ಮತ್ತೊಂದು ಉದಾಹರಣೆ ಇಲ್ಲ” ಎಂದು ಬರೆಯುತ್ತಾನೆ.
ಚಿತ್ತಗಾಂವ್ ದಾಳಿಯಿಂದ ಬ್ರಿಟಿಷರು ಮತ್ತೊಮ್ಮೆ ತಮ್ಮ ದಮನಕಾರಿ ಶಾಸನಗಳಿಗೆ ಪುನರುಜ್ಜೀವನ ನೀಡಿದಾಗ ಅದು ಬಂಗಾಳಿ ಯುವಕ ಮತ್ತು ಯುವತಿಯರನ್ನು, ವಿದ್ಯಾರ್ಥಿಗಳನ್ನು ಹುರಿದುಂಬಿಸುತ್ತದೆ. ‘ದೇಶದ ಕ್ರಾಂತಿಕಾರಿ ಹೋರಾಟದಲ್ಲಿ ತಮ್ಮ ತಮ್ಮ ಮನೆಗಳಲ್ಲಿ ಉಳಿದು ತಾಯಿ-ತಂಗಿಯರಾಗಿ ಸಾಮಾಜಿಕ, ಪಾರಂಪರಿಕ ಕರ್ತವ್ಯವನ್ನು ನಿಭಾಯಿಸುತ್ತಿದ್ದ ಮಹಿಳೆಯರನ್ನು ಸೆಳೆದು ಕ್ರಾಂತಿಪಥದಲ್ಲಿ ಹೋರಾಟಗಾರ್ತಿ ಹಾಗೂ ಸಹಚರ ಸಂಗಾತಿಯನ್ನಾಗಿ ಪರಿವರ್ತಿಸುವಲ್ಲಿ ಚಿತ್ತಗಾಂವ್ ದಾಳಿ ಪ್ರಮುಖ ತಿರುವುಗಲ್ಲಾಗಿ ಪರಿಣಮಿಸಿತು’ ಎಂದು ಮಾನಿನಿ ಚಟರ್ಜಿ ಅಭಿಪ್ರಾಯ ಪಡುತ್ತಾರೆ.
ಆಂದೋಲನಗಳಲ್ಲಿ ಭಾಗಿಗಳಾದ ಸ್ತ್ರೀಯರ ಮೇಲೆ ಹಿಂಸಾಚಾರವಾಗುವ ಭಯ ಕಾಡುತ್ತಿತ್ತು. ಇದರಿಂದ ರಾಜಕೀಯ ಚಳವಳಿಯಲ್ಲಿ ಭಾಗಿಯಾಗುವುದು ಅಪಾಯಕಾರಿ ಎಂಬ ಭಾವನೆ ಬೆಳೆಯಿತು. ಬೀನಾ ದಾಸ್ ಹೇಳುವಂತೆ ಪೊಲೀಸರ ದಬ್ಬಾಳಿಕೆ ಕಾರಣವಾದರೆ ಕ್ರಾಂತಿಕಾರಿ ಚಳವಳಿಯತ್ತ ಮುಖ ಮಾಡುವುದು ಅದರ ಪರಿಣಾಮ ರೂಪವಾಗಿತ್ತು. ಇತರ ಎಲ್ಲ ಮಾರ್ಗಗಳು ಮುಚ್ಚಿದಾಗ ಅವರು ಭಾರತದ ಸ್ವಾತಂತ್ರ್ಯಹೋರಾಟವನ್ನು ಮುಂದುವರಿಸಲು ಕ್ರಾಂತಿಕಾರಿ ಕಾರ್ಯಾಚರಣೆಗೆ ಶರಣಾಗುತ್ತಾರೆ. ೧೯೩೧ರಲ್ಲಿ ಬಂಗಾಳ ಅಹಿಂಸಾತ್ಮಕ ಆಂದೋಲನದ ಕೇಂದ್ರ ಬಿಂದುವಿನಿಂದ ದೂರ ಸರಿದಂತೆ ಅದು ಮಹಿಳಾ ಕ್ರಾಂತಿಕಾರಿಗಳು ನಡೆಸಲಾರಂಭಿಸಿದ ಹತ್ಯೆ, ಸ್ಥೈರ್ಯಪೂರ್ಣ ದಾಳಿ ಹಾಗೂ ರಾಜಕೀಯ ಡಕಾಯಿತಿಗಳ ತವರುಮನೆಯಾಯಿತು.
ಈ ಬದಲಾವಣೆಗೆ ಕ್ರಾಂತಿಕಾರಿ ನಾಯಕರಲ್ಲಿ ಉಂಟಾದ ತಾತ್ತ್ವಿಕ ಚಿಂತನೆಗಿಂತಲೂ ಹೆಚ್ಚಾಗಿ ಸಾಂದರ್ಭಿಕ ಅಗತ್ಯ ಹೆಚ್ಚಾಗಿತ್ತು. ಚಿತ್ತಗಾಂವ್ ಕ್ರಾಂತಿಯ ನಾಯಕ ಸೂರ್ಯಸೇನ್ ಸ್ತ್ರೀಯರನ್ನು ಗುಪ್ತ ಕ್ರಾಂತಿಕಾರಿ ಸಂಘಟನೆಗಳಲ್ಲಿ ಸೇರಿಸಿಕೊಳ್ಳಲು ಸುತಾರಾಂ ಸಿದ್ಧನಿರಲಿಲ್ಲ. ಭಾರತೀಯ ಪ್ರಜಾತಂತ್ರ ಸೇನೆಯ ಮತ್ತೊಬ್ಬ ಪ್ರಮುಖ ನಾಯಕ ಅನಂತಸಿಂಗ್ ಮಹಿಳೆಯರನ್ನು ಮಾತ್ರವಲ್ಲದೆ ಅವರೊಂದಿಗೆ ಸಂಪರ್ಕ ಹೊಂದಿರುವ ಪುರುಷರನ್ನೂ ಕ್ರಾಂತಿಕಾರಿ ಚಳವಳಿಯಿಂದ ಹೊರಗಿಡಬೇಕೆಂಬ ಧೋರಣೆ ಹೊಂದಿದ್ದ ಎಂದು ಕಲ್ಪನಾ ದತ್ತ ದಾಖಲಿಸಿದ್ದಾರೆ. ಕ್ರಾಂತಿಕಾರಿಗಳಿಗೆ ಬೆನ್ನೆಲುಬಾಗಿ ನಿಂತಿದ್ದ ಅನಂತಸಿಂಗ್ನ ಅಕ್ಕ ಇಂದುಮತಿ ಸಿಂಗ್ ದಾಳಿಯ ರಾತ್ರಿ ಭಾಗವಹಿಸಲು ತನಗೆ ಅವಕಾಶ ನೀಡಿರಲಿಲ್ಲ ಎಂದು ಮಾಸ್ತರ್ ದಾ ಮೇಲೆ ಕೋಪಗೊಂಡಿದ್ದಳೆಂದು ಅನಂತಸಿಂಗ್ ದಾಖಲಿಸುತ್ತಾನೆ.
ಆದರೆ ಶಸ್ತ್ರಾಗಾರ ದಾಳಿ ಪ್ರಕರಣದ ಬಳಿಕ ಬ್ರಿಟಿಷ್ ಸರಕಾರ ಜಿಲ್ಲೆಯಲ್ಲಿ ನಡೆಸಿದ ದಬ್ಬಾಳಿಕೆಯ ಆಡಳಿತ ಎಲ್ಲವನ್ನೂ ಬದಲಾಯಿಸಿತು ಎಂದು ಮಾನಿನಿ ಚಟರ್ಜಿ ಅಭಿಪ್ರಾಯ ಪಡುತ್ತಾರೆ. ವಿಶೇಷ ಶಾಸನಗಳಿಂದ ಬಂಗಾಳದಾದ್ಯಂತ ಸಹಸ್ರಾರು ಹಿಂದು ಯುವಕರನ್ನು ಸೆರೆಮನೆಗೆ ಅಟ್ಟಲಾಯಿತು. ಇದರಿಂದ ಕ್ರಾಂತಿಕಾರಿಗಳಿಗೆ ತಮ್ಮ ಸಂಘಟನೆ ಮತ್ತು ಕಾರ್ಯಾಚರಣೆಗಳಲ್ಲಿ ಮಹಿಳೆಯನ್ನು ಬಳಸಿಕೊಳ್ಳುವ ಅಗತ್ಯವೇರ್ಪಡುತ್ತದೆ. ಪ್ರಾರಂಭದ ದಿನಗಳಲ್ಲಿ ಕೋಲ್ಕತಾ ಮತ್ತು ಚಿತ್ತಗಾಂವ್ಗಳ ನಡುವೆ ಸಂಪರ್ಕ ಕೊಂಡಿಗಳಂತೆ ವರ್ತಿಸುತ್ತಿದ್ದ ಸ್ತ್ರೀಯರು ಕ್ರಮೇಣ ಪ್ರತ್ಯಕ್ಷ ಕಾರ್ಯಾಚರಣೆಯಲ್ಲಿ ಭಾಗವಹಿಸುವ ಮಟ್ಟಕ್ಕೇರುತ್ತಾರೆ. ಮೇಲೆ ತಿಳಿಸಿರುವಂತೆ ೧೯೩೧-೩೨ರಲ್ಲಿ ನಡೆದ ಅನೇಕ ಹಿಂಸಾತ್ಮಕ ದಾಳಿಗಳಲ್ಲಿ ಅನೇಕ ಶಾಲಾಕಾಲೇಜುಗಳ ವಿದ್ಯಾರ್ಥಿನಿಯರು ತಮ್ಮ ಶೌರ್ಯ ಮತ್ತು ಬಲಿದಾನವನ್ನು ಮೆರೆಯುತ್ತಾರೆ. ಕೋಲ್ಕತಾದಿಂದ ಚಿತ್ತಗಾಂವ್ಗೆ ಹಿಂತಿರುಗುವ ಕಲ್ಪನಾ ದತ್ತ ಮತ್ತು ಪ್ರೀತಿಲತಾ ವಡ್ಡೆದಾರ್ರವರ ವಿಸ್ಫೋಟಕಗಳ ಸಂಗ್ರಹ ಮತ್ತು ರವಾನೆ, ಬಾಂಬ್ ತಯಾರಿಕೆ, ಮಾಸ್ತರ್ ದಾನೊಂದಿಗೆ ಭೂಗತ ಜೀವನ, ಕ್ಲಬ್ ಮೇಲಿನ ದಾಳಿ, ಆತ್ಮಾಹುತಿ ಇತ್ಯಾದಿ ಸಕ್ರಿಯ ಕ್ರಾಂತಿಕಾರಿ ಜೀವನ ಇಂತಹ ಅಗತ್ಯದ ಕುರುಹಾಗಿ ನಿಲ್ಲುತ್ತದೆ.
ಪ್ರತ್ಯಕ್ಷ ಕಾರ್ಯಾಚರಣೆಯಲ್ಲಿ ಸ್ತ್ರೀಯರು
ಸ್ತ್ರೀಯರು ಕ್ರಾಂತಿಕಾರಿ ಹೋರಾಟದಲ್ಲಿ ಭಾಗಿಗಳಾಗಲು ಬೇಕಾಗುವ ಸಿದ್ಧತೆ ಮತ್ತು ಸಾಧನೆಗಳನ್ನು ಒಂದೇ ದಿನದಲ್ಲಿ ಗಳಿಸಲಿಲ್ಲ. ಪುರುಷರು ಅವರನ್ನು ಪ್ರತ್ಯಕ್ಷ ಕಾರ್ಯಾಚರಣೆಯಿಂದ ಹೊರಗಿಟ್ಟಿದ್ದರಾದರೂ ಅದಕ್ಕೆ ಬೇಕಾದ ಮಾನಸಿಕ ಹಾಗೂ ಶಾರೀರಿಕ ಮಟ್ಟಕ್ಕೇರಲು ಅವರು ೧೯೨೦ರಿಂದಲೇ ತಮ್ಮ ತಯಾರಿಯನ್ನು ನಡೆಸಿರುತ್ತಾರೆ. ಕೋಲ್ಕತಾ, ಢಾಕಾ ಮತ್ತಿತರ ಸಣ್ಣ ಸಣ್ಣ ಪಟ್ಟಣಗಳಲ್ಲಿ ನಡೆಸಲಾಗುತ್ತಿದ್ದ ಸ್ತ್ರೀ ವ್ಯಾಯಮ ಶಾಲೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಅಲ್ಲಿ ರಹಸ್ಯವಾಗಿ ಹಂಚಲಾಗುತ್ತಿದ್ದ ರಾಷ್ಟ್ರೀಯ ಹಾಗೂ ಕ್ರಾಂತಿಕಾರಿ ಸಾಹಿತ್ಯವನ್ನು ಓದುವ ಮೂಲಕ ಶಾರೀರಿಕ ಮತ್ತು ಬೌದ್ಧಿಕ ವಿಕಾಸದ ಮೇಲೆ ಒತ್ತು ನೀಡುತ್ತಾರೆ. ಇದು ಅವರ ಭೂಗತ ಜೀವನ, ಕ್ರಾಂತಿಕಾರಿ ಕಾರ್ಯಾಚರಣೆ, ಸೆರೆಮನೆ ವಾಸ, ಸ್ವಾತಂತ್ರ್ಯಾನಂತರದ ಸಮಾಜ ಜೀವನದಲ್ಲಿ ಬಹಳ ಸಹಕಾರಿಯಾಗಿ ನಿಂತಿತು ಎಂಬುದನ್ನು ಇತಿಹಾಸ ಸ್ಪಷ್ಟವಾಗಿ ದಾಖಲಿಸಿದೆ. ಅಂದಿನವರೆಗೆ ಅತ್ಯಂತ ಸಾಂಪ್ರದಾಯಿಕ ಸಮಾಜದ ಅವಿಭಾಜ್ಯ ಅಂಗವಾಗಿ ಬೆಳೆದು, ಕೇವಲ ಅಡುಗೆಮನೆ, ಸಂಸಾರ ನಿರ್ವಹಣೆ, ಕುಟುಂಬ ಜೀವನ, ಮಕ್ಕಳ ಲಾಲನೆ ಪಾಲನೆ ಇತ್ಯಾದಿಗಳಿಗಾಗಿ ತಮ್ಮ ಅಸ್ತಿತ್ವವನ್ನು ಸಮರ್ಪಿಸಿಕೊಂಡಿದ್ದ ಮಹಿಳೆಯರು ತಮ್ಮ ಸೇವೆ ಕೇವಲ ಮನೆಯ ನಾಲ್ಕು ಗೋಡೆಗಳಿಗೆ ಸೀಮಿತವಾಗಿರದೆ ದೇಶದ ಸ್ವಾತಂತ್ರ್ಯಕ್ಕಾಗಿ ಪುರುಷನೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ದುಡಿಯುವವರೆಗೆ ಹಬ್ಬಬಹುದೆಂಬುದನ್ನು ನಿರ್ವಂಚನೆಯಿಂದ, ನಿರ್ವಿವಾದವಾಗಿ ನಿರೂಪಿಸಿಕೊಟ್ಟಿದ್ದಾರೆ. ದೇಶ ಸ್ವಾತಂತ್ರ್ಯ ಗಳಿಸಿದ ದಶಕಗಳ ಬಳಿಕವೂ ಈ ಸ್ತ್ರೀಯರು ತುಳಿದ ಹಾದಿ ಇಂದಿನ ಯುವಪೀಳಿಗೆಗೆ ಮಾರ್ಗದರ್ಶಕವಾಗಿ ನಿಲ್ಲುತ್ತದೆ.
ಪ್ರತ್ಯಕ್ಷ ಕಾರ್ಯಾಚರಣೆಗಳಿಂದ ಮಹಿಳೆಯರನ್ನು ದೂರವಿರಿಸಲು ಪುರುಷ ಕ್ರಾಂತಿಕಾರಿಗಳ ಬೌದ್ಧಿಕ ಹಿಂಜರಿಕೆಗಿಂತಲೂ ಹೆಚ್ಚಾಗಿ ಮಹಿಳೆಯರನ್ನು ರಿವಾಲ್ವರ್ ಮೊದಲಾದ ಆಯುಧಗಳನ್ನು ಬಳಸಲು ನೀಡಬೇಕಾದ ತರಬೇತಿಯ ಅಭಾವವೇ ಹೆಚ್ಚಾಗಿತ್ತೆಂದು ಜಿರಾಲ್ಡೈನ್ ಫೋರ್ಬ್ಸ್ ಸೂಚಿಸುತ್ತಾರೆ. ಸ್ತ್ರೀಯರು ಪಡೆಯುತ್ತಿದ್ದ ಜಿಯು ಜಿಟ್ಸು, ಕಠಾರಿ ಬಳಕೆ, ಕತ್ತಿವರಸೆ, ಮೋಟರ್ ಚಾಲನೆ ಮೊದಲಾದ ತರಬೇತಿಗಳು ಈ ಕೊರತೆಯನ್ನು ಪೂರೈಸುವಲ್ಲಿ ಶಕ್ತವಾಗಿರಲಿಲ್ಲ. ಸ್ತ್ರೀ ಪುರುಷರ ಭೇಟಿಯನ್ನು ಏರ್ಪಡಿಸುವುದೂ ಕಷ್ಟದ ಕೆಲಸವಾಗಿರುವ ಸಮಯದಲ್ಲಿ ಅವರಿಗೆ ರಿವಾಲ್ವರ್ ತರಬೇತಿ ನೀಡುವುದು ಅಪಾಯದಿಂದ ಹೊರತಾಗಿರಲಿಲ್ಲ.
೧೯೩೧ರ ಡಿಸೆಂಬರ್ನಲ್ಲಿ ತಿಪ್ಪೇರಾದ ಜಿಲ್ಲಾ ದಂಡಾಧಿಕಾರಿ ಚಾರ್ಲ್ಸ್ ಜಿಯೋಫ್ರೈ ಸ್ಟೀವನ್ಸ್ನನ್ನು ಆತನ ಬಂಗಲೆಯಲ್ಲಿ ಸುನೀತಿ ಚೌಧರಿ ಮತ್ತು ಶಾಂತಿ ಘೋಷ್ ಎಂಬ ಇಬ್ಬರು ಯುವತಿಯರು ಗುಂಡಿಟ್ಟು ಕೊಲೆ ಮಾಡುತ್ತಾರೆ. ಇದಾದ ಎರಡು ತಿಂಗಳಲ್ಲಿ ಕೋಲ್ಕತಾ ವಿಶ್ವವಿದ್ಯಾನಿಲಯದ ಘಟಿಕೋತ್ಸವಕ್ಕೆ ಆಗಮಿಸಿದ್ದ ಗವರ್ನರ್ ಸ್ಟಾನ್ಲೆ ಜಾಕ್ಸನ್ನತ್ತ ಬೀನಾ ದಾಸ್ ಎಂಬ ವಿದ್ಯಾರ್ಥಿನಿ ತನ್ನ ಘಟಿಕೋತ್ಸವದ ಗೌನಿನಲ್ಲಿ ಅಡಗಿಸಿಟ್ಟುಕೊಂಡಿದ್ದ ರಿವಾಲ್ವರ್ನಿಂದ ಗುಂಡು ಹಾರಿಸುತ್ತಾಳೆ. ಆಕೆಯ ಗುರಿ ತಪ್ಪಿದಾಗ ಆಕೆಯನ್ನು ಸೆರೆಹಿಡಿಯಲಾಯಿತು. ಸ್ಟಾನ್ಲೆಯ ನಂತರ ಗವರ್ನರ್ ಆಗಿ ಅಧಿಕಾರ ವಹಿಸಿಕೊಂಡು ತಪಾಸಣೆ ಮತ್ತು ಬಂಧನ ಕುರಿತಂತೆ ಕಠಿಣ ತುರ್ತು ಕಾನೂನನ್ನು ಜಾರಿಗೊಳಿಸಿದ ಜಾನ್ ಆಂಡರ್ಸನ್ ಮೇಲೆ ೧೯೩೪ರಲ್ಲಿ ದಾರ್ಜಿಲಿಂಗ್ನಲ್ಲಿ ಗುಂಡು ಹಾರಿಸಿದಾಗ ಆತ ಆಶ್ಚರ್ಯಕರ ರೀತಿಯಲ್ಲಿ ಪಾರಾಗುತ್ತಾನೆ.
೧೯೩೨ರಲ್ಲಿ ಬಂಗಾಳದ ಗವರ್ನರ್ನನ್ನು ಹತ್ಯೆಗೈಯಲು ಪ್ರಯತ್ನಿಸಿದ ಬೀನಾ ದಾಸ್ಳ ಅನುಭವ ಇದನ್ನು ವಿಶದಪಡಿಸುತ್ತದೆ:
“ನಮ್ಮ ಗುಂಪಿನಲ್ಲಿರದ ಗೆಳತಿಯೊಬ್ಬಳನ್ನು ಸಂಪರ್ಕಿಸಿ ನನಗೊಂದು ರಿವಾಲ್ವರ್ ಕೊಡುವಂತೆ ಮನವೊಲಿಸಿದೆ. ಕೆಲವೇ ದಿನಗಳಲ್ಲಿ ವಿಶ್ವವಿದ್ಯಾನಿಲಯದ ಘಟಿಕೋತ್ಸವ ನಡೆಯಲಿದ್ದು ಅದಕ್ಕೆ ಬಂಗಾಳದ ಗವರ್ನರ್ ಬರುವವನಿದ್ದಾನೆಂದು ತಿಳಿಯಿತು. ಬ್ರಿಟಿಷ್ ಪ್ರಭುತ್ವದ ವಿರುದ್ಧ ನನ್ನ ಪ್ರತಿಭಟನೆಯನ್ನು ವ್ಯಕ್ತಪಡಿಸಲು ಇದೊಂದು ಸುವರ್ಣಾವಕಾಶವಾಗಿತ್ತು. ಈ ಬಗ್ಗೆ ಮನಸ್ಸಿನಲ್ಲಿ ಕೊಂಚವೂ ಹಿಂಜರಿಕೆಯಿರಲಿಲ್ಲ. ನನ್ನ ಕೈಯಲ್ಲಿರುವ ಆ ಚಿಕ್ಕದೊಂದು ಸಲಕರಣೆ ಆತನ ಜೀವಕ್ಕೆ ಮುಳುವಾಗುವುದಲ್ಲದೆ ನನ್ನ ಜೀವನಕ್ಕೂ ಇತಿಶ್ರೀ ಹಾಡಬಲ್ಲದ್ದಾಗಿತ್ತು. ನಾನೊಂದು ಮಹಾನ್ ಯಜ್ಞದ ಚಿಕ್ಕ ಭಾಗವೆಂಬಂತೆ ಮನಸ್ಸು ಬೇರಾವುದೋ ಭಾವನೆಗಳಿಗೆ ಎಡೆಮಾಡಿಕೊಡದಷ್ಟು ಜಡವಾಗಿತ್ತು.
“ಆಗ ನನ್ನ ಯಶಸ್ಸಿನ ಬಗ್ಗೆ ನನ್ನಲ್ಲಿ ಅನುಮಾನ ಉದ್ಭವಿಸುತ್ತದೆ. ಬಹಳ ಸೂಕ್ಷö್ಮ ಮನಸ್ಸಿನ ನನಗೆ ವಿಫಲ ಪ್ರಯತ್ನ ತರುವ ಅಪಮಾನದ ಅರಿವಿತ್ತು. ಅದಕ್ಕೂ ಮಿಗಿಲಾಗಿ ಒಮ್ಮೆ ಗೆಳತಿಯರೊಂದಿಗೆ ಹೋಗಿ ಅವರು ಹಕ್ಕಿಗಳಿಗೆ ಗುರಿಯಿಟ್ಟು ಗುಂಡು ಹಾರಿಸಿದಾಗ ನಾನು ಮರದ ಮೇಲಿದ್ದ ಎಲೆಯೊಂದಕ್ಕೆ ಗುರಿಯಿಟ್ಟು ಹಾರಿಸಿದ್ದ ಗುಂಡು ಎಲೆಗೆ ತಗಲಿತ್ತು ಎಂಬುದನ್ನು ಬಿಟ್ಟರೆ ರಿವಾಲ್ವರ್ ಅನ್ನು ಚಲಾಯಿಸುವಲ್ಲಿ ನನಗೆ ಯಾವ ಅನುಭವವೂ ಇರಲಿಲ್ಲ. ಆ ಸಂದರ್ಭದಲ್ಲಿ ನಾನು ಬಳಸಿದ ಗನ್ ನನ್ನನ್ನು ಬಲವಾಗಿ ಹಿಂದಕ್ಕೆ ತಳ್ಳಿತ್ತು. ರಿವಾಲ್ವರ್ನಂತಹ ಚಿಕ್ಕದೊಂದು ಆಯುಧ ನನ್ನ ಕೈಗೆ ಬಂದಾಗ ಅದನ್ನು ಹೇಗೆ ಚಲಾಯಿಸುವುದೆಂದು ತಿಳಿಯದೆ ನಾನು ಗೊಂದಲಕ್ಕೀಡಾದೆ. ಅದನ್ನು ಚಲಾಯಿಸಲು ನನಗೆ ಅನುಮತಿ ನೀಡಬೇಕೆಂದು ಗೆಳತಿಗೆ ಮನವಿಮಾಡಿಕೊಂಡೆ. ಆದರೆ ಅಭ್ಯಾಸ ನಡೆಸಲು ಯಾವ ನಿರ್ಜನ ಪ್ರದೇಶವೂ ಇರಲಿಲ್ಲ. ‘ಪರವಾಗಿಲ್ಲ. ಇತರರೂ ಮುಂಚಿನ ಅಭ್ಯಾಸವಿಲ್ಲದೆ ಇದನ್ನು ಚಲಾಯಿಸಿದ್ದಾರೆ. ಬಿನಯ್ ಬಾಬು ಸಹ ಅಭ್ಯಾಸವಿಲ್ಲದೆ ಚಲಾಯಿಸಿದ್ದ’ – ಎಂದು ನನ್ನ ಗೆಳತಿ ಭರವಸೆ ಕೊಟ್ಟಳು. ಇದರಿಂದ ನಾನು ನಿಶ್ಚಿಂತಳಾದೆ. ಆದರೆ ಬೀನಾ ದಾಸ್ಗೂ ಬಿನಯ್ ಬೋಸ್ಗೂ ವ್ಯತ್ಯಾಸವಿದೆ ಎಂಬುದು ನನಗೆ ಅನಂತರದಲ್ಲಿ ಗೋಚರವಾಯಿತು.”
ಈ ಮೊದಲು ಬೀನಾ ದಾಸ್ಗೆ ಎಂದೂ ರಿವಾಲ್ವರ್ನಿಂದ ಗುಂಡು ಹಾರಿಸಿದ ಅಭ್ಯಾಸವಿರಲಿಲ್ಲ. ಪ್ರಕರಣ ನಡೆದ ದಿನ ಮುಂಜಾನೆಯಷ್ಟೇ ಅವಳಿಗೆ ರಿವಾಲ್ವರ್ ನೀಡಲಾಗಿತ್ತು. ಆಕೆ ಒಂದೆರಡು ಗುಂಡುಗಳನ್ನು ಹಾರಿಸಿ ಅಭ್ಯಾಸ ಮಾಡಿದ್ದಳು.
ಬಂಗಾಳದ ಗವರ್ನರ್ ಸ್ಟಾನ್ಲೆ ಮೇಲೆ ಗುಂಡಿನ ದಾಳಿ ನಡೆದುದು ಇದೇ ಮೊದಲ ಬಾರಿಯಲ್ಲ. ೧೯೩೧ರ ಫೆಬ್ರುವರಿ ೨೮ರಂದು ಕೋಲ್ಕತಾ ವಿಶ್ವವಿದ್ಯಾನಿಲಯ ಆತನಿಗೆ ಕಾನೂನು ವಿಭಾಗದಲ್ಲಿ ಪದವಿಯನ್ನು ನೀಡಿ ಗೌರವಿಸಲು ನಿರ್ಧರಿಸಿರುತ್ತದೆ. ಅಂದು ಆತ ವೇದಿಕೆಯ ಮೇಲೆ ಆಸೀನನಾಗಿರುವಾಗ ಪಾರ್ವತಿ ಎಂಬ ಒಬ್ಬ ಸುಂದರ ವಿಧವೆ ಯುವತಿ ತನ್ನ ಲಜ್ಜಾಭರಿತ ನಡೆಯಿಂದ ಆತನ ಗಮನ ಸೆಳೆಯುತ್ತಾಳೆ. ಸ್ಟಾನ್ಲೆ ಆಕೆಯನ್ನು ಮುಂದಕ್ಕೆ ಬರುವಂತೆ ಮನವೊಲಿಸಲು ಪ್ರಯತ್ನಿಸುತ್ತಿರುವಾಗ ಆಕೆ ತನ್ನ ಸೀರೆಯಲ್ಲಿ ಅಡಗಿಸಿಟ್ಟುಕೊಂಡಿದ್ದ ರಿವಾಲ್ವರ್ನಿಂದ ಆತನತ್ತ ಗುಂಡನ್ನು ಹಾರಿಸುತ್ತಾಳೆ. ಪಕ್ಕದಲ್ಲಿದ್ದ ವಿಶ್ವವಿದ್ಯಾನಿಲಯದ ರೆಕ್ಟರ್ ಲೆಫ್ಟಿನೆಂಟ್ ಕರ್ನಲ್ ಸುಹ್ರಾವರ್ದಿ ಆಕೆಯ ಕೈಯನ್ನು ಹಿಡಿದು ಎಳೆದಾಗ ಗುಂಡು ಮೇಲ್ಛಾವಣಿಗೆ ಬಡಿಯಿತು. ಆಕೆಯನ್ನು ಬಂಧಿಸುತ್ತಿದ್ದಂತೆ ಮತ್ತೊಬ್ಬ ಶಾಂತಿಲಾಲ್ ಎಂಬ ಯುವಕ ತನ್ನ ಬಳಿಯಿದ್ದ ರಿವಾಲ್ವರ್ ಅನ್ನು ಅವರಿಗೊಪ್ಪಿಸಿ ಸ್ವಯಂಪ್ರೇರಣೆಯಿಂದ ಶರಣಾಗುತ್ತಾನೆ.
ಕೋಮಿಲ್ಲಾದ ದಂಡಾಧಿಕಾರಿಯ ಮೇಲೆ ಗುಂಡನ್ನು ಹಾರಿಸಿದ ಶಾಂತಿ ಘೋಷ್ಳ ವಿಚಾರದಲ್ಲಿ ಆಕೆಯ ಹಸ್ತ ಎಷ್ಟು ಪುಟ್ಟದ್ದಾಗಿತ್ತೆಂದರೆ ರಿವಾಲ್ವರ್ ಹಿಡಿಯಲು ಆಕೆ ಎರಡೂ ಹಸ್ತಗಳನ್ನು ಬಳಸಿದ್ದಳಲ್ಲದೆ ಅದರ ಕುದುರೆ ಮೀಟಲು ಎರಡು ಬೆರಳುಗಳನ್ನು ಬಳಸಬೇಕಾಯಿತು.
ಕ್ರಾಂತಿಕಾರಿ ಚಳವಳಿಯನ್ನು ಪ್ರವೇಶಿಸುವ ಮಹಿಳೆಯರನ್ನು ಸಮಾಜ ಹೇಗೆ ಕಾಣುತ್ತಿತ್ತು? ಅಂದಿನ ಪತ್ರಿಕಾ ವರದಿಗಳನ್ನು ವೀಕ್ಷಿಸಿದಾಗ ಅವರನ್ನು ಮೆಚ್ಚುವವರು ಅವರ ಶೌರ್ಯ ಮತ್ತು ತ್ಯಾಗವನ್ನು ಹೊಗಳಿದರೆ ಅವರನ್ನು ಮೆಚ್ಚದವರು ಮಹಿಳೆಯ ಮಮತೆಯನ್ನು ತೊರೆದ ವಿಕೃತರೆಂದು ತೆಗಳುತ್ತಾರೆ. ಹೆಚ್ಚಿನವರು ಮೊದಲ ವರ್ಗಕ್ಕೆ ಸೇರಿದವರಾಗಿದ್ದರು. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತ ಬಲಿಪೀಠದ ಮೇಲೆ ತಮ್ಮನ್ನು ಅರ್ಪಿಸಿಕೊಳ್ಳುವುದೇ ಮೂಲ ಉದ್ದೇಶವಾಗಿತ್ತೆಂದು ಕ್ರಾಂತಿಕಾರಿ ಮಹಿಳೆಯರು ವಿವರಿಸುತ್ತಾರೆ. ಶಾಂತಿ ಸುನೀತಿ ಹಾಗೂ ಬೀನಾ ದಾಸ್ ನೇಣಿನ ಕುಣಿಕೆಗಾಗಿ ಹಾತೊರೆಯುತ್ತಿದ್ದರು. ‘ಸತ್ಯ ಮತ್ತು ಸ್ವಾತಂತ್ರ್ಯ’ಕ್ಕಾಗಿ ಪ್ರೀತಿಲತಾ ವಡ್ಡೆದಾರ್ ಆತ್ಮಸಮರ್ಪಣೆ ಮಾಡಿಕೊಳ್ಳುತ್ತಾಳೆ. ಗಾಂಧಿಯವರ ಆಂದೋಲನ ಬೇಡುತ್ತಿದ್ದ ಚಿಕ್ಕಪುಟ್ಟ ತ್ಯಾಗದಿಂದ ಭ್ರಮನಿರಸನಗೊಂಡಿದ್ದ ಕಮಲಾ ದಾಸ್ಗುಪ್ತ ಎಂತಹ ಮಹಾನ್ ತ್ಯಾಗಕ್ಕಾದರೂ ಸಿದ್ಧಳಾಗಿರುವುದಾಗಿ ತನ್ನ ಇಚ್ಛೆಯನ್ನು ವ್ಯಕ್ತಪಡಿಸುತ್ತಾಳೆ. ತ್ಯಾಗ ಮತ್ತು ಬಲಿದಾನವನ್ನು ಸ್ತ್ರೀಯರ ಸಾಂಸ್ಕೃತಿಕ ಲಾಂಛನವೆಂದು ಅಂಗೀಕರಿಸಿದ ಸಮಾಜ ಕ್ರಾಂತಿಕಾರಿ ಮಹಿಳೆಯರು ಅದನ್ನು ಆಧುನಿಕ ರಾಜಕೀಯ ಪ್ರಪಂಚಕ್ಕೆ ವಿಸ್ತರಿಸಿದುದನ್ನು ಮುಕ್ತವಾಗಿ ಸ್ವಾಗತಿಸುತ್ತದೆ. ರಾಜಕೀಯ ಸ್ವಾತಂತ್ರ್ಯವನ್ನು ಗುರಿಯಾಗಿರಿಸಿಕೊಂಡು ಇದುವರೆಗೆ ತಮಗೆ ನಿಷಿದ್ಧವಾಗಿದ್ದ ರಂಗವನ್ನು ಪ್ರವೇಶಿಸಿದ ಈ ಮಹಿಳೆಯರ ವಿದ್ರೋಹಿ ಪಾತ್ರವನ್ನು ಗೌಣವಾಗಿ ಕಂಡ ಸಮಾಜ ಅವರ ತ್ಯಾಗಕ್ಕೆ ಹೆಚ್ಚಿನ ಮಹತ್ತ್ವವನ್ನು ನೀಡುತ್ತದೆ. ಬ್ರಿಟಿಷ್ ಪ್ರಭುತ್ವವನ್ನು ಧಿಕ್ಕರಿಸಿ ತಮ್ಮ ಬೆಚ್ಚಗಿನ ಕೌಟುಂಬಿಕ ಜೀವನವನ್ನು ತೊರೆದು ದೇಶಕ್ಕಾಗಿ ಜೀವವನ್ನು ಪಣಕ್ಕಿಟ್ಟು ಅಗ್ನಿಕುಂಡಕ್ಕೆ ಧುಮುಕಿದ ಈ ಬಾಲಿಕೆಯರು ಬಂಗಾಳಿಗಳ ಕಣ್ಣಿಗೆ ಅಗ್ನಿಕನ್ಯೆಯರಾಗಿ ಪ್ರಜ್ವಲಿಸಿದರೆ ಮಿಕ್ಕ ಸಮಾಜ ಅವರನ್ನು ವಿದ್ರೋಹಿಗಳೆಂದು ಪರಿಗಣಿಸದೆ ಬಲವತ್ತರವಾದ ರಾಜಕೀಯ ನಂಬಿಕೆ ಮತ್ತು ಚಿಂತನೆಯಿಂದ ಕಾರ್ಯೋನ್ಮುಖರಾದ ಯುವತಿಯರೆಂದು ಸನ್ಮಾನಿಸುತ್ತದೆ.