ನೋಡಿ ನಿರ್ಮಲ ಜಲ ಸಮೀಪದಿ… ಕಟ್ಟಿಕೊಂಡರು ಪರ್ಣಶಾಲೆಯ ಆ..ಆ..ಆ..” – ‘ಹಿರಿಯ ಬಲಿಪ’ರ ಭಾಗವತಿಕೆಯ ಶೈಲಿಯನ್ನು ಅನುಕರಣೆ ಮಾಡುತ್ತ, ಮಾಗಿ ಬಾಗಿದ ಕದಳಿ ಗೊನೆಯನ್ನು ಕಡಿದು ಹೆಗಲಿಗೇರಿಸಿಕೊಂಡ ಕೇಶವರಾಯರು ತೋಟದಿಂದ ಮನೆಯತ್ತ ಹೆಜ್ಜೆಹಾಕಿದರು.
ಹೊಂಡ-ಗುಂಡಿಗಳ ಸಮೇತ ಏರಿಳಿತಗಳನ್ನು ಬಗಲಲ್ಲಿಟ್ಟುಕೊಂಡ ಭೂಮಿಯು ಕೆಸರನ್ನು ಹೊದ್ದುಕೊಂಡಿತ್ತು. ಮಳೆ ಬಿಟ್ಟ ಮೇಲೆ, ಹಬ್ಬಿ ಹರಡಿದ ಸೂರ್ಯನ ಶಾಖಕ್ಕೆ ಇಳೆಯು ತನ್ನ ಮೈಯನ್ನೂ ಕಾಯಿಸಿಕೊಳ್ಳುತ್ತಿದ್ದಳು.
ಏದುಸಿರುಬಿಡುತ್ತ ಬಂದ ಕೇಶವರಾಯರು, ಎರಡೂ ಹೆಗಲಲ್ಲಿ ಮಲಗಿದ್ದ ಕದಳಿ ಬಾಳೆಗೊನೆಯನ್ನು ಜಗಲಿಯಲ್ಲಿಳಿಸಿದರು. ಬಾಳೆಎಲೆಯನ್ನು ಅಲ್ಲೇ ತಿಟ್ಟೆಯ ಮೇಲಿಟ್ಟು, “ಹೌದಾ, ಎಲ್ಲಿ ಹೋದಿ ಮಾರಾಯ್ತಿ… ಈ..ಈ…ಈ…” ಭಾಗವತಿಕೆಯ ಗುಂಗಿನಲ್ಲೇ ಹೆಂಡತಿ ಕುಸುಮಾಳನ್ನು ತಾರಕದಲ್ಲಿ ಕೂಗುತ್ತ, ಕೈಯಲ್ಲಿದ್ದ ಕತ್ತಿಯಿಂದ ತುರಿಸುತ್ತಿದ್ದ ಬೆನ್ನನ್ನು ನಿಧಾನಕ್ಕೆ ಕೆರೆದುಕೊಂಡರು.
“ಎಲ್ಲಿ ಹೋಗಿ ಸಾಯ್ಲಿ… ಇಲ್ಲೇ ಇದ್ದೇನೆ. ಈ ಮನೆ ಬಿಟ್ಟು ಬೇರೆಲ್ಲಿಗಾದರು ಹೋಗಿ ಸಾಯ್ಲಿಕ್ಕೆ ನನ್ನ ಹಣೆಯಲ್ಲಿ ಬರೆದಿದ್ಯಾ? ನನ್ನಪ್ಪ ನಿಮಗೋಸ್ಕರನೇ ಸೃಷ್ಟಿಸಿದ ಸೃಷ್ಟಿಯಲ್ಲವಾ ನಾನು” ರುದ್ರಚಮೆ ಪಠಿಸಿದಂತೆ ಬಡಬಡನೆ ಬಡಾಯಿಸಿ, ತನ್ನ ಸೀರೆಯ ಸೆರಗಲ್ಲಿ ಕೈ-ಮುಖವನ್ನು ಒರೆಸಿಕೊಳ್ಳುತ್ತ ಕೇಶವರಾಯರ ಮುಂದೆ ಕುಸುಮ ಪ್ರತ್ಯಕ್ಷಳಾದಳು.
ವೀಳ್ಯ ತುಂಬಿದ ಬಾಯನ್ನು ಎತ್ತಿ, ಕುಸುಮಳತ್ತ ನೋಡಿ, “ಓಹ್! ಬಂದೇಬಿಟ್ಟೆಯಾ?” ನಗೆಚೆಲ್ಲಿ ಕೇಳಿದರು.
“ಯಪ್ಪಾ… ಅದೆಂತಹ ಮೋಹ ಮಾರಾಯರೆ ನಿಮಗೆ ಆ ‘ಕುಣಿಯ ಹೊಗೆಸೊಪ್ಪಿ’ನ ಮೇಲೆ. ನನ್ನ ಮೇಲೂ ಅಷ್ಟಿಲ್ಲ ಅಲ್ಲವಾ?” ಮುನಿಸಿಕೊಂಡೇ ಕುಸುಮ ಕೇಳಿದಳು.
“ಆ ಬಾಯಿಗೆ ಸ್ವಲ್ಪ ರೆಸ್ಟ್ ಕೊಡಿ ಮಾರಾಯ್ರೆ. ಕೇದಾರನಿಗೆ ಎಷ್ಟು ಸಲ ಹೇಳಿದ್ದೇನೆ ಕುಣಿಯ ಹೊಗೆಸೊಪ್ಪನ್ನು ತರಬೇಡವೆಂದು. ಅದೆಷ್ಟು ಹೇಳಿದರೂ ಮತ್ತದೇ ರಾಗ. ಎಷ್ಟೇ ಆದರೂ ನಿಮ್ಮದೇ ಸೃಷ್ಟಿ ಅಲ್ಲವಾ…” ಕೊಂಕನ್ನು ಸಿಡಿಸಿದಳು.
“ಆಹಾ! ಎಷ್ಟು ಚಂದ ಮಾತಾಡ್ತಿ ಮಾರಾಯ್ತಿ. ರಾಜಕೀಯಕ್ಕೆ ಹೇಳಿ ಮಾಡಿಸಿದ ಜನ ನೀನು. ಹೇಳಿಕೇಳಿ ಅವನ ಹೆಸರೇ ಕೇದಾರ. ಮತ್ತವನು ಅದೇ ರಾಗವನ್ನು ಹಾಡದಿದ್ದರೆ ಹೇಗೆ? ಸಾಂಸ್ಕೃತಿಕ ಚರಿತ್ರೆಯ ಬಗ್ಗೆ ಅವನು ಬರೆದ ಲೇಖನಗಳ ಪಟ್ಟಿ ನೋಡಿದರೆ, ಕೇದಾರ ನನ್ನ ಮಗ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ, ಕುಸುಮ” ಎಂದವರು, ರಂಗೇರಿಸಿಕೊಂಡ ತುಟಿಯನ್ನು ಹೊಳಪಿಸುತ್ತ, ಮನದಲ್ಲೇ ರಾಗ್ ಕೇದಾರನನ್ನು ಗುನುಗಿಕೊಂಡರು.
“ಓಹ್ ಪಿನ್ನೇ…! ಅದೆಲ್ಲ ಇರ್ಲಿ. ನಾನು ರುಜು ಹಾಕಿದರೆ ಮಾತ್ರ ಕೇದಾರ ನಿಮ್ಮದೇ ಮಗ ಅಂತ ಹೇಳಬಹುದು” ಕೇಶವರಾಯರನ್ನು ನೋಡಿ ಕುಸುಮ ಕಣ್ಣು ಮಿಟುಕಿಸಿದಳು.
“ಆಯ್ತು ಮಾರಾಯ್ತಿ ಆಯ್ತು. ನೋಡು, ಈ ಬಾಳೆಮೂತಿಯ ಪಲ್ಯ ಮಾಡು. ಎಂತ ರುಚಿ. ತುಂಬಾ ದಿನವಾಯ್ತು ಬಾಳೆಮೂತಿಯ ಪಲ್ಯ ಮಾಡದೆ” ಹೇಳುತ್ತ್ತ, ಬಾಳೆಮೂತಿಯನ್ನು ಕತ್ತರಿಸಿ ಕುಸುಮಳಿಗೆ ಕೊಟ್ಟರು.
“ಇದಕ್ಕೇನು ಕಮ್ಮಿ ಇಲ್ಲ ನಿಮಗೆ” ಮೂತಿಯನ್ನು ತಿರುವುತ್ತ ಕುಸುಮ ಹೇಳಿದಳು.
“ಬಾಳೆಮೂತಿಗಿಂತ ನೀನು ತಿರುಗಿಸುವ ನಿನ್ನ ಪುಟ್ಟ ಮೂತಿ ಎಷ್ಟು ಚಂದ ಮಾರಾಯ್ತಿ” ಎನ್ನುತ್ತ ಗಲ್ಲವನ್ನು ಚಿವುಟಿದರು.
“ಛಕ್ಕ್…! ಸಾಕು ಸಾಕು. ಇದೊಂದು ಕಮ್ಮಿ ಇತ್ತು” ಹುಸಿಗೋಪವನ್ನು ಕುಸುಮ ತೋರಿದಳು.
“ಬೇರೆ ಯಾವುದಕ್ಕೆ ಕಮ್ಮಿ ಮಾಡಿದ್ದೇನೆ ಹೇಳು ಮಾರಾಯ್ತಿ?” ಕೇಶವರಾಯರು ಕೇಳಿದರು.
“ಅಲ್ಲಾ, ಅಲ್ಲಿ ಒಳಗೆ ನಾಲಗೆ ಹೊರಗೆ ಹಾಕಿಕೊಂಡು ಒಬ್ಬಳು ಕೂತಿದ್ದಾಳಲ್ಲ… ಎಷ್ಟು ವರ್ಷದಿಂದ ಹೇಳುತ್ತಿದ್ದೇನೆ ಆ ರಕ್ತೇಶ್ವರಿಗೆ ಆಭರಣ ಮಾಡಿಸಿ ಎಂದು. ಯಾವತ್ತಾದರೂ ತಲೆಗೆ ಹಾಕಿಕೊಂಡಿದ್ದೀರಾ?” ಗಂಭೀರವಾಗಿಯೇ ಕೇಳಿದಳು.
“ಎಂತ ಕಿರಿಕಿರಿ ಕುಸುಮ ನಿನ್ನದು” ರಾಯರು ಬೈರಾಸಿನಿಂದ ಜನಿವಾರವನ್ನು ಒರೆಸಿಕೊಳ್ಳುತ್ತ, ಮುಖ ಸೊಟ್ಟಗೆ ಮಾಡಿದರು.
“ತಮಾಷೆ. ಮೂರೂ ಹೊತ್ತು ನಿಮಗೆ ತಮಾಷೆ. ನನಗೊಂದು ಲಾಟರಿ ಮಗುಚಿದರೆ ಮೊದಲು ಮಾಡುವುದೇ ಆ ಕೆಲಸವನ್ನು. ಕರ್ಮಕ್ಕೆ ಒಂದೇ ಒಂದು ಲಾಟರಿ ನನಗೆ ಮಗುಚಲಿಲ್ಲ. ಇಲ್ಲ ಎನ್ನುವುದಕ್ಕೆ ಒಮ್ಮೆ ಮುನ್ನೂರು ರೂಪಾಯಿ ಹೊಡೆದಿದ್ದು ಬಿಟ್ಟರೆ, ಊಹುಂ, ಈ ಪಾಪಿಗೆ ಬೇರೆ ಯಾವ ಅದೃಷ್ಟವೂ ಹೊಡೆಯಲಿಲ್ಲ. ಇನ್ನು ನಾನೇ ಮಗುಚಬೇಕೇನೋ! ಬರೆದಿರಬೇಕಪ್ಪಾ… ಬರೆದಿರಬೇಕು. ಎಲ್ಲದಕ್ಕೂ ಪಡಕೊಂಡೂ ಬಂದಿರಬೇಕು” ತನ್ನ ಅಸಹನೆಯನ್ನು ಒಂದೇ ಉಸಿರಲ್ಲಿ ಕುಸುಮ ಹೊರಹಾಕಿದಳು.
“ರಕ್ತೇಶ್ವರಿ ದೈವದ ಬೆಳ್ಳಿಯ ಆಭರಣಗಳೆಲ್ಲ ಜೀರ್ಣಾವಸ್ಥೆಯಲ್ಲಿವೆ. ಅದನ್ನು ಸರಿಮಾಡಿಸುವುದು ಬಿಟ್ಟು, ಗಲ್ಲ ಚಿಮುಟ್ಲಿಕ್ಕೆ ಬರ್ತಾರೆ. ನಿಮಗೆ ನಂಬಿಕೆ ಇಲ್ಲದಿದ್ದರೆ ಬೇಡ, ನನಗೆ ನಂಬಿಕೆ ಉಂಟು. ಈ ಮನೆಗೊಂದು ಪರಂಪರೆ, ಇತಿಹಾಸ ಉಂಟು. ಅದು ಗೊತ್ತುಂಟಲ್ಲ?” ಕಣ್ಣಗಲಿಸಿ, ಹುಬ್ಬೇರಿಸಿ ಕೇಳಿದಳು.
“ಎಷ್ಟು ಮಾತನಾಡ್ತಿ ಕುಸುಮ. ನಿನಗೆ ಆಯಾಸ ಆಗುವುದಿಲ್ಲವಾ?” ರಾಯರು ಕೇಳಿದರು.
“ಎಂತ ಆಯಾಸ! ಅದರ ಎಡೆಯಲ್ಲಿ ನಿಮ್ಮದೊಂದು ಕೊಂಕು ಬೇರೆ. ನಾಳಿನ ಪೀಳಿಗೆಗಾದರೂ ಮಾಡಿಸಿ ಇಡುವುದು ಒಳ್ಳೆಯದಲ್ಲವಾ? ನಮ್ಮಿಂದಾದ ಭಾರಗಳು ನಮ್ಮ ಮಕ್ಕಳಿಗೆ ವರ್ಗಾವಣೆಯಾಗಬಾರದು ನೋಡಿ” ಎನ್ನುತ್ತ, ಬಾಳೆ ಮೂತಿಯನ್ನು ಎತ್ತಿಕೊಂಡು ಮನೆಯೊಳಕ್ಕೆ ಹೊರಡಲು ಎದ್ದು ನಿಂತಳು.
ಕುಸುಮಳ ಕೈಹಿಡಿದ ಕೇಶವರಾಯರು, “ಕುಸುಮ, ದೈವಕ್ಕೆ ಏನು ಬೇಕೋ ಅದನ್ನದು ನಮ್ಮಿಂದ ಪಡೆದುಕೊಳ್ಳುತ್ತದೆ. ಇಷ್ಟೇ ಕಾದಿದೆಯಂತೆ ದೈವ, ನೀನೂ ಸ್ವಲ್ಪ ಕಾಯಬೇಕು. ಕಾರಣವಿಲ್ಲದೆ ಕ್ರಿಯೆಗಳು ಹುಟ್ಟಿಕೊಳ್ಳುವುದಿಲ್ಲ. ಯಾವುದೋ ಒಂದು ನಿಮಿತ್ತಕ್ಕೆ ದೈವ ಕಾಯುತ್ತಿರಬಹುದು. ತಾಳುವಿಕೆಗಿಂತ ತಪವು ಇಲ್ಲ” ಸಾಲನ್ನು ಹಾಡಿ, ವಾದಿರಾಜರನ್ನು ನೆನೆದುಕೊಂಡು ಹೇಳಿದರು.
“ಹ್ಮ್… ನೀವಿದ್ದೀರಿ, ಒಳಗೆ ನಾಲಗೆ ಹೊರಗೆ ಹಾಕಿ ಕೂತ ಅವಳಿದ್ದಾಳೆ. ಇನ್ನು ಕಾರಣ, ನಿಮಿತ್ತ ಬಂದರೆ ಸರಿ” ಬಲವಂತದ ನಗುವನ್ನು ನಕ್ಕು ಕುಸುಮ ಒಳಮನೆಗೆ ಹೆಜ್ಜೆ ಹಾಕಿದಳು.
* * *
“ಬಹುಸಂಸ್ಕೃತಿ ಮತ್ತು ಭಾಷೆಗಳೆಬ್ಬಿಸುವ ಸಾಂಸ್ಕೃತಿಕ ಲೋಕದ ತಲ್ಲಣಗಳ ಜೊತೆಗೆ ಅವುಗಳು ಹೊತ್ತು ತರುವ ಅಸಂಖ್ಯ ಒಳನೋಟಗಳು ಆಗಾಗ ನಮ್ಮನ್ನು ಕಾಡುವುದುಂಟು. ಈ ತಲ್ಲಣಗಳನ್ನು ರಾಜಕೀಯ ದಾಳವನ್ನಾಗಿಸುವ ವಿಭಿನ್ನ ಯೋಚನೆಯುಳ್ಳ ರಾಜಕೀಯ ಪಕ್ಷಗಳು, ವಾಸ್ತವದ ನಡುವೆಯೂ ಕೆಲವೇ ಕೆಲವು ದೇವರುಚಿ, ಹಲವು ಭಿನ್ನ ಆಸುರ ರುಚಿಗಳನ್ನು ಸೃಷ್ಟಿಸುತ್ತ, ಮಿಶ್ರ ರುಚಿಗಳುಳ್ಳ ದೇವಾಸುರ ವರ್ಗವನ್ನು ಹುಟ್ಟುಹಾಕುತ್ತದೆ” ಪಾಠ ಮಾಡುತ್ತಿದ್ದ ಕೇದಾರನ ಕ್ಲಾಸಿನಲ್ಲಿ ಗದ್ದಲವೆದ್ದಿತು.
ಗಲಾಟೆ ಎಬ್ಬಿಸಿದ ಕೊನೆಯ ಬೆಂಚಿನ ವಿದ್ಯಾರ್ಥಿಗಳನ್ನು ಕೇದಾರ ತರಾಟೆಗೆ ತೆಗೆದುಕೊಂಡ. ಪಾಠವನ್ನು ಅರ್ಧಕ್ಕೆ ನಿಲ್ಲಿಸಿ ಹೊರಡಲು ಪುಸ್ತಕವನ್ನು ಎತ್ತಿಕೊಂಡವನನ್ನು, ಅವನನ್ನು ಬಹಳ ಇಷ್ಟಪಡುವ ಗುಂಪೊಂದು ತರಲೆ ವಿದ್ಯಾರ್ಥಿಗಳನ್ನು ಸುಮ್ಮನಿರಿಸಿ ತರಗತಿಯನ್ನು ಮುಂದುವರಿಸುವಂತೆ ಕೇಳಿಕೊಂಡಿತು. ವಿದ್ಯಾರ್ಥಿಗಳ ಪ್ರೀತಿಗೆ ಮಣಿದವನು ತರಗತಿಯನ್ನು ಮುಂದುವರಿಸಿದ.
“ಇನ್ನು, ಈ ಭಾಗದಲ್ಲಿರುವಷ್ಟು ದೈವಗಳು ಕೇರಳದ ಯಾವ ಮೂಲೆಯಲ್ಲೂ ಇಲ್ಲ. ದೈವಗಳ ಮುಖವರ್ಣಿಕೆ, ಮಾತುಗಾರಿಕೆ, ನರ್ತನ, ಬಣ್ಣಗಳ ಸಂಯೋಜನೆ, ಕಿರೀಟ, ಅಣಿ, ಅರವಾಡು ಎಲ್ಲವೂ ಇಲ್ಲಿನ ವಿಶೇಷತೆಗಳನ್ನು ತೋರಿಸುತ್ತವೆ” ಎನ್ನುತ್ತ, ಕಳಕೊಂಡ ಓಘದಿಂದ ಸಾಂಸ್ಕೃತಿಕ ಚರಿತ್ರೆಯ ಪಾಠವನ್ನು ಹೆಚ್ಚು ಮುಂದುವರಿಸದ ಕೇದಾರ್ ಭಟ್, ಟ್ಯುಟೋರಿಯಲ್ ಕಾಲೇಜಿನ ಕಲಾ ವಿದ್ಯಾರ್ಥಿಗಳಿಗೆ ಬೋಧಿಸಿ ತರಗತಿಯಿಂದ ಹೊರಗೆ ಬಂದ.
ಮೊಬೈಲ್ ತೆಗೆದು ನೋಡಿದರೆ ಅಣ್ಣ ಮಹಾಬಲನ ಹನ್ನೆರಡು ಮಿಸ್ಡ್ ಕಾಲ್ಗಳಿದ್ದವು.
“ಅಯ್ಯೋ… ಇದೇನಪ್ಪಾ ಹೊತ್ತಲ್ಲದ ಹೊತ್ತಲ್ಲಿ ಅಣ್ಣ ಫೋನ್ ಮಾಡಿದ್ದಾನೆ” ಮಹಾಬಲನಿಗೆ ಗಾಬರಿಯಿಂದಲೇ ಕೇದಾರ ಫೋನಾಯಿಸಿದ.
* * *
ಮಳೆಯು ನೀಡುವ ಬಿಡುವಿನ ವೇಳೆ ಹೊರಸೂಸುವ ಸೂರ್ಯರಶ್ಮಿಯು ಮನೆಯ ನೆಲದಲ್ಲಿ ಪಸೆಯನ್ನು ಮೂಡಿಸುತ್ತದೆ. ಜೊತೆಗೆ ‘ಗುಂಯ್..ಗುಂಯ್’ಗುಟ್ಟುವ ನೊಣಗಳೂ ಮನೆಯೆಲ್ಲ ಸುತ್ತುತ್ತಿರುತ್ತವೆ. ಮಧ್ಯಾಹ್ನದ ಊಟದ ನಂತರ ಕೂರುವ ಕಣ್ಣುಗಳೊಂದಿಗೆ ಕೇಶವರಾಯರ ತಾಯಿ ಸರಸ್ವತಿ ಮಂಚದಲ್ಲಿ ಒರಗಿದರು.
ನೊಣವೊಂದು ‘ಗುಂಯ್.. ಗುಂಯ್’ಗುಡುತ್ತ, ಸರಸ್ವತಿ ಅಮ್ಮನ ಮುಖದ ಬಳಿ ಸುತ್ತುತ್ತಿತ್ತು. ನಿದ್ದೆಕಣ್ಣಲ್ಲೇ ಕೈಯನ್ನು ಅತ್ತಿತ್ತ ಸರಿಸಿ ಆಕೆ ಓಡಿಸಲು ಪ್ರಯತ್ನಪಟ್ಟರೂ ಸಾಧ್ಯವಾಗಲಿಲ್ಲ. ಕೊನೆಗೊಮ್ಮೆ ಸರಸ್ವತಿ ಅಮ್ಮನ ಮೂಗಿನ ತುದಿಯಲ್ಲಿ ಬಂದು ಕುಳಿತ ನೊಣ, ತನ್ನ ರೆಕ್ಕೆಯನ್ನು ಬಡಿಯಲಾರಂಭಿಸಿದ್ದೇ ‘ಆ..ಆ..ಆಕ್ಸಿ’ ಎಂದು ಸೀನಿ, ಒಂದೇಟಿಗೆ ಎದ್ದು, “ಕಂಡ್ರಕುಟ್ಟಿ ನೊಣ… ನಿನಗೇನೋ ಪೋಕಾಲ” ನೊಣವನ್ನು ಬೈದು ಮತ್ತೆ ಮಲಗಲು ಹೊರಟರು.
ಗುಂಯ್ಗುಡುತ್ತಾ ಬಂದ ಇನ್ನೊಂದು ನೊಣವು ಸರಸ್ವತಿಯಮ್ಮನ ಹಣೆಯನ್ನು ಮುತ್ತಿಕ್ಕಿತು. ಅದನ್ನು ಓಡಿಸಿದರೆ ತಿರುಗಿ ಮತ್ತೆ ಹಣೆಯ ಮೇಲೆಯೇ ಕುಳಿತುಕೊಳ್ಳಲು ಬರುತ್ತಿತ್ತು.
“ಬೇಡ, ಬೇಡ ನೊಣ. ನಿನಗೇನೊ ಕಾಲ. ನನ್ನ ಕೈಯಿಂದ ನೀನು ಸಾಯುವ ಎಲ್ಲಾ ಲಕ್ಷಣ ಉಂಟು. ಕುಸುಮಾ, ಇದನ್ನೊಮ್ಮೆ ಓಡಿಸು ಮಾರಾಯ್ತಿ. ಎಂಥ ಸಾವು…” ಎನ್ನುತ್ತ್ತ, ಸೊಸೆಯನ್ನು ಕೂಗಿದಳು.
“ನಿನಗೆ ಹೊಡಿತೇನೆ ನೊಣ, ಬೇಡ ಹಾಂ…” ಹೇಳಿ, ಪುನಃ ನಿದ್ದೆಗಿಳಿಯಲು ಸರಸ್ವತಿಯಮ್ಮ ಪ್ರಯತ್ನಿಸಿದಳು.
ಈ ಸಲ ಮತ್ತೆ ಗುಂಯ್ಗುಡುತ್ತಾ ಬಂದ ನೊಣವು ಸರಸ್ವತಿಯಮ್ಮನ ಕೆನ್ನೆಯ ಮೇಲೆ ಕುಳಿತುಕೊಂಡಿತು. ಉಪಾಯವಾಗಿ ನೊಣವನ್ನು ಹೊಡೆದುಬಿಡಲು ಯೋಚಿಸಿ, ತನ್ನ ಕಣ್ಣನ್ನು ತೆರೆಯದೆ ಕೈಯನ್ನು ನಿಧಾನವಾಗಿ ಎತ್ತಿ, ಇನ್ನೇನು ನೊಣಕ್ಕೆ ಏಟು ಬಿದ್ದು ಅದು ಅಪ್ಪಚ್ಚಿಯಾಗಬೇಕು ಎಂದುಕೊಳ್ಳುವಷ್ಟರಲ್ಲಿ, ಅಪಾಯದ ಸುಳಿವನ್ನು ಅರಿತ ನೊಣವು ಸರಸ್ವತಿಯಮ್ಮನ ಏಟಿನಿಂದ ತಪ್ಪಿಸಿಕೊಂಡಿತು. ಪರಿಣಾಮ ಸರಸ್ವತಿಯಮ್ಮ ತನ್ನ ಕೆನ್ನೆಗೆ ತಾನೇ ‘ಛಿಟೀರ್’ ಎಂದು ಹೊಡೆದುಕೊಂಡಳು. ಸಿಟ್ಟಿನಿಂದ ಬೈದು, ನೊಣಕ್ಕೆ ಹಿಡಿಶಾಪ ಹಾಕಿದಳು.
ಅಮ್ಮನ ಮಾತನ್ನು ಕೇಳಿಸಿಕೊಳ್ಳುತ್ತಿದ್ದ ಮಗ ಕೇಶವರಾಯ, “ಹೌದಮ್ಮಾ, ನೀನು ನೊಣದ ಜೊತೆ ಅಷ್ಟೆಲ್ಲ ಮಾತನಾಡ್ತೀಯಲ್ಲ, ಅದಕ್ಕೆ ಅರ್ಥ ಆಗ್ತದಾ ನಿನ್ನ ಭಾಷೆ? ನೀನು ಮಾತನಾಡುವುದನ್ನು ಕೇಳಿದರೆ, ಆ ನೊಣ ಯಾರೋ ನಿನ್ನ ಸಂಬಂಧಿಯೆಂದುಕೊಂಡಿದ್ದೆ” ನಗುತ್ತ ಹೇಳಿದರು.
ಬೊಚ್ಚುಬಾಯಿಯ ಸರಸ್ವತಿಯಮ್ಮ ನಕ್ಕು, “ಮತ್ತೆಂತ ಮಾಡ್ಲಿ ಮಗ ಹೇಳು? ನಿದ್ದೆ ಮಾಡಲೂ ಬಿಡುವುದಿಲ್ಲ ಈ ಹಾಳಾದವು. ಹೌದಾ ಕೇಶವ, ಅದೆಂತದ ಬೆಳಗ್ಗೆ ಕುಸುಮ ಹೇಳ್ತಿದ್ಲಲ್ಲ, ನಾಲಗೆ ಹೊರಗೆ ಹಾಕಿಕೊಂಡು ಒಳಗೆ ಕೂತಿದ್ದಾಳೆ ಅಂತ… ನನ್ನನ್ನು ಹೇಳಿದ್ದನಾ?” ಎಂದು ಕೇಳಿದಳು.
“ಅಯ್ಯೋ ಅಮ್ಮ, ನಿನ್ನ ಬಗ್ಗೆ ಅಲ್ಲ. ರಕ್ತೇಶ್ವರಿ ದೈವದ ಬಗ್ಗೆ ಹೇಳಿದ್ದು.”
“ಓಹ್! ಅವಳು ನಾಲಗೆ ಹೊರಗೆ ಹಾಕಿ ಕೂತು ಅದೆಷ್ಟೋ ವರ್ಷಗಳೇ ಆಗಿವೆ. ನಿನ್ನ ಹೆಂಡತಿ ಇವತ್ತು ನೋಡಿದ್ದಂತಾ…” ಹೇಳಿ, ಕಿಸಕ್ಕನೆ ನಕ್ಕಳು.
“ಕೇಶವ, ಗಂಟೆ ಮೂರಾಯ್ತಾ ಅಂತಾ? ಕುಸುಮಳಿಗೆ ಚಾಯ ಮಾಡ್ಲಿಕ್ಕೆ ಹೇಳು ಮಗಾ. ನಾನು ಹೇಳಿದರೆ ಕೊಂಯ್ಯೋ… ಪಂಯ್ಯೋ… ಅಂತ ಶುರುಮಾಡ್ತಾಳೆ” ಸರಸ್ವತಿಯಮ್ಮ ಹೇಳಿದಳು.
* * *
ಕಾಲೇಜು ಮುಗಿಸಿ ಬಂದ ಕೇದಾರ ಅಂಗಳದ ಮೂಲೆಯಲ್ಲಿ ಚಪ್ಪಲಿಯನ್ನು ಬಿಟ್ಟು, ಕಾಲಿಗೆ ನೀರನ್ನು ಹಾಕಿಕೊಂಡು ಒಳಕ್ಕೆ ಬಂದವನೇ, “ಅಪ್ಪಾ…” ಎಂದು ಕೇಶವರಾಯರನ್ನು ಕೂಗಿದ.
“ಇಲ್ಲೇ ಇದ್ದೇನೆ ಮಗರಾಯ, ಎಂತ ವಿಷಯ?” ಯಕ್ಷಗಾನದ ಶೈಲಿಯಲ್ಲಿ ಕೇಶವರಾಯರು ಕೇಳಿದರು.
“ಅಪ್ಪಾ, ನಿನ್ನ ಚಪ್ಪಲಿಯಲ್ಲಿ ರಕ್ತದ ಕಲೆ ಉಂಟಲ್ಲ? ಎಂತ ಕಂತಿಸಿಕೊಂಡೆ?” ಏದುಸಿರುಬಿಡುತ್ತ ಕೇಳಿದ.
“ವಾ… ಅದಾ? ಅದು ತೋಟಕ್ಕೆ ಹೋದಾಗ ಮುಳ್ಳು ಕಂತಿದ್ದು” ಹೇಳಿ, ತಮ್ಮ ಕಾಲನ್ನೊಮ್ಮೆ ರಾಯರು ನೋಡಿಕೊಂಡರು.
“ನೋಡುವ, ಎಲ್ಲಿ ಕಂತಿಸಿಕೊಂಡೆ. ತೋರಿಸು” ಎನ್ನುತ್ತ, ಅಪ್ಪನ ಕಾಲಡಿಯನ್ನು ಕೇದಾರ ನೋಡಿದ.
ಆಳವಾದ ಹಲವು ಬಿರುಕುಗಳನ್ನು ಹೊತ್ತುಕೊಂಡ ಹಿಮ್ಮಡಿಯನ್ನು ಎತ್ತಿ, “ಮುಳ್ಳು ಆಳವಾಗಿ ಹೊಕ್ಕಂತಿದೆ. ಇದೆಯಾ ಅಥವಾ ತೆಗೆದೆಯಾ?” ಕೇದಾರ ಕೇಳಿದ.
“ಅದನ್ನು ತೆಗೆದಾಯಿತು ಮಾರಾಯ. ಅದಕ್ಕೆ ಯಾಕಿಷ್ಟು ಗಲಾಟೆ?” ರಾಯರು ಕೇಳಿದರು.
“ಅಪ್ಪಾ, ಶುಗರ್ ಇರೋದು ಯಾರಿಗೆ? ನನಗಾ ನಿನಗಾ? ಹೋಳಿಗೆಯನ್ನೂ ತಿನ್ನಬೇಕು, ತೋಟಕ್ಕೂ ಹೋಗಬೇಕು, ಗಾಯ ಮಾಡಿಕೊಳ್ಳಲೂಬೇಕು ಅಂದ್ರೆ ಆಗ್ಲಿಕ್ಕಿಲ್ಲ. ನೀನೇ ಯೋಚಿಸಿ ತೀರ್ಮಾನ ತೆಗೆದುಕೋ” ಗಂಭೀರವಾಗಿಯೇ ಕೇಶವರಾಯರಿಗೆ ಹೇಳಿ, ತನ್ನ ಕೋಣೆಯತ್ತ ನಡೆದ.
“ಆಯ್ತು ಬಿಡು. ಇನ್ನು ಜಾಗ್ರತೆಯಲ್ಲಿ ಇರ್ತೇನೆ, ಆಯ್ತಾ…” ಹೇಳಿ,
“ಕುಸುಮಾ, ಮೂರು ಚಾಯ, ಎರಡು ಅಂಬಡೆ. ಬಲೇ ಚಾ ಪರ್ಕಾ” ರಾಯರು ಕೂಗಿದರು.
“ಹಾಂ! ಶುರುವಾಯ್ತು ನಾಟಕ!” ಆಡಿಕೊಂಡ ಕುಸುಮ,
“ಚಾಯ ಇಲ್ಲಿ. ಅಂಬಡೆ ಗೋವಿಂದ ಹೆಬ್ಬಾರರ ಹೋಟೆಲಿನಲ್ಲಿ!” ಅಡುಗೆಮನೆಯಿಂದಲೇ ಕೂಗಿ ಹೇಳಿದಳು.
ಬಟ್ಟೆ ಬದಲಾಯಿಸುವಾಗ ಸಂಭಾಷಣೆಗಳನ್ನು ಕೇಳಿಸಿಕೊಳ್ಳುತ್ತಿದ್ದ ಕೇದಾರ, “ಏನಮ್ಮ, ಅಪ್ಪ ಇವತ್ತು ಒಳ್ಳೆಯ ಫಾರ್ಮ್ನಲ್ಲಿ ಇರುವ ಹಾಗಿದೆ?” ಕೇಳಿದ.
“ಹೌದು ಮಗ, ಬೆಳಗ್ಗಿನಿಂದ ಒಳ್ಳೆಯ ಫಾರ್ಮ್ನಲ್ಲಿದ್ದಾರೆ. ಯಾವುದೋ ನೋವೊಂದು ಒಳಗಿಂದ ಕೊರೆಯುತ್ತಿರಬೇಕು. ಅಷ್ಟಕ್ಕೇ ಇಷ್ಟೆಲ್ಲ ನಾಟಕ” ಕುಸುಮ ಹೇಳಿದಳು.
“ಹಾಂ! ಮೂರು ಚಾಯ, ನೋ ಅಂಬಡೆ” ಎನ್ನುತ್ತ ಅತ್ತೆ, ಗಂಡ ಮತ್ತು ಮಗನಿಗೆ ಕೊಟ್ಟು, ಕಷಾಯದ ಲೋಟವನ್ನು ತನ್ನ ಸೆರಗಲ್ಲಿ ಹಿಡಿದುಕೊಂಡು ತಿಟ್ಟೆಯ ಮೇಲೆ ಕುಸುಮ ಕುಳಿತುಕೊಂಡಳು.
* * *
ಚಾಯವನ್ನು ಕುಡಿಯುತ್ತಿದ್ದ ಕೇದಾರ, “ಅಪ್ಪಾ, ಮಹಾಬಲಣ್ಣ ಫೋನ್ ಮಾಡಿದ್ದ” ಎಂದು ಹೇಳಿದ.
“ಓಹ್! ಏನಂತೆ ಮಹಾಬಲನಿಗೆ. ವಿಶೇಷ ಉಂಟಾ? ದೊಡ್ಡಪ್ಪ ಹೇಗಿದ್ದಾರಂತೆ?” ಕೇಶವರಾಯರು ಕೇಳಿದರು.
ಕೇಶವರಾಯರ ಅಣ್ಣ ಮಧುಸೂದನರಾಯರು ಕಲ್ಲಿಕೋಟೆ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತçದ ಪ್ರಾಧ್ಯಾಪಕರು. ಓದಿನ ಹುಚ್ಚು ಮಧುಸೂದನರನ್ನು ಪಿಎಚ್.ಡಿ ಮಾಡಿಸಿದ್ದಲ್ಲದೆ, ದೇಶ-ವಿದೇಶಗಳಲ್ಲಿ ನಡೆದ ಹಲವಾರು ಸೆಮಿನಾರುಗಳಲ್ಲಿ ಭಾಗವಹಿಸುವಂತೆಯೂ ಮಾಡಿತ್ತು. ಇತ್ತೀಚೆಗಷ್ಟೆ ವಿಭಾಗದ ಮುಖ್ಯಸ್ಥರಾಗಿ ಬಡ್ತಿಯನ್ನೂ ಪಡೆದಿದ್ದರು. ಅವರ ಮಗ ಮಹಾಬಲಭಟ್ ಕಲ್ಲಿಕೋಟೆಯ ಪ್ರಸಿದ್ಧ ಛಾಯಾಗ್ರಾಹಕ. ಗುಲಗಂಜಿಯಷ್ಟು ಬಿಡುವಿಲ್ಲದೆ ಕೆಲಸಗಳನ್ನು ಮೈಮೇಲೆಳೆದುಕೊಂಡು ಸದಾ ಚಟುವಟಿಕೆಯಲ್ಲಿರುವ ಮನುಷ್ಯ.
“ಅಪ್ಪಾ, ಮಹಾಬಲಣ್ಣ ಹೆಚ್ಚೇ ಬೇಜಾರು ಮಾಡಿಕೊಂಡ. ದೊಡ್ಡಪ್ಪ ನೋಡಿದರೆ ಮನೆಯತ್ತ ತಲೆಯೇ ಹಾಕುವುದಿಲ್ಲವಂತೆ. ಸದಾ ಓದಿನ ಅರಮನೆಯಲ್ಲಿ ಸುತ್ತುತ್ತ ಇರುತ್ತಾರಂತೆ. ದೊಡ್ಡಮ್ಮ ಮತ್ತು ಅತ್ತಿಗೆಗೆ ಆಗಾಗ ಜಟಾಪಟಿಯಂತೆ. ಅಣ್ಣನಿಗೆ ಬಿಡುವಿಲ್ಲದಷ್ಟು ಕೆಲಸ. ಜೊತೆಗೀಗ ನೀತು ಕೂಡಾ ದೊಡ್ಡವಳಾಗಿದ್ದಾಳಂತೆ…” – ಆತಂಕವನ್ನು ತೋಡಿಕೊಂಡ ಎಂದು ಕೇದಾರ ವರದಿಯನ್ನು ಒಪ್ಪಿಸಿದ.
“ಹಾಂ…! ಅದೆಲ್ಲ ಎಂತ ದೊಡ್ಡ ವಿಷಯ ಮಾರಾಯ. ದೊಡ್ಡಪ್ಪನದ್ದು ಗೊತ್ತಿದ್ದದ್ದೇ. ಜಟಾಪಟಿ ಅಲ್ಲಿ ಮಾತ್ರವಾ? ನಮ್ಮಲ್ಲಿ ಏನು ಕಮ್ಮಿಯಾ? ನಿನ್ನಮ್ಮನಿಗೆ ಮತ್ತು ನನಗೆ, ನಿನ್ನಜ್ಜಿಗೆ ಮತ್ತು ನಿನ್ನಮ್ಮನಿಗೆ ಆಗುವುದೆಲ್ಲಾ ಇನ್ನೇನು ಮತ್ತೆ? ಮಗು ಬೆಳೆದು ದೊಡ್ಡವಳಾಗಲೇಬೇಕು. ವಿಷಯ ಅದಲ್ಲ, ಎಂತಾ ಅಂತ ಸರಿಯಾಗಿ ಹೇಳು” ರಾಯರು ಮಗನತ್ತ ನೋಡಿ ಹೇಳಿದರು.
“ಅಪ್ಪಾ ಅದು…ಹೇಗೆ ಹೇಳಬೇಕು ಅಂತ ಗೊತ್ತಾಗ್ತಾ ಇಲ್ಲ. ಹ್ಮ್…” ಕೇದಾರ ಹೇಳಲು ಕಷ್ಟಪಟ್ಟ.
“ಅದು ಹೇಗೆ ಬೇಕಾದರೂ ಇರಲಿ ಮಗಾ, ನೀನು ಹೇಳು” ಕೇಶವರಾಯರು ಹೇಳಿದರು.
“ಬೇಡ ನೊಣ ಬೇಡ. ಎಷ್ಟು ಸಲ ಹೇಳುದಾ ನಿನಗೆ, ಮಾರಿಪುಣ. ನಿನಗೇನೊ ಕಾಲ. ನನ್ನ ಕೈಯಿಂದ ಸಾಯಲಿಕ್ಕೇ ಇರುವ ಆಟವಾ ನಿಂದು? ಏ ಕೇಶವ, ಇದನ್ನೊಮ್ಮೆ ಸಾಯಿಸಾ ದರಿದ್ರದ್ದು. ಬೇಡ ನೊಣ, ಕೊಂದೇಬಿಡ್ತೇನೆ. ಹ್ಮಾ…” – ನೊಣಕ್ಕೆ ಬೆದರಿಕೆಯನ್ನು ಒಡ್ಡುತ್ತಲೇ,
“ಮಹಾಬಲನದ್ದು ಎಂತಂತೆಯಾ ಕೇಶವ?” -ಮಲಗಿದ್ದಲ್ಲಿಂದಲೇ ಸರಸ್ವತಿಯಮ್ಮ ಕೇಳಿದಳು.
“ಏನಿಲ್ಲಮ್ಮ, ಮಹಾಬಲ ಹೊಸ ಕೆಮರಾ ತೆಕ್ಕೊಂಡಿದ್ದಾನಂತೆ, ಅದರ ಬಗ್ಗೆ ಹೇಳ್ತಾ ಇದ್ದ ಅಷ್ಟೆ” ರಾಯರು ಉತ್ತರಿಸಿದರು.
“ಅಜ್ಜಿ, ನೀವು ನೊಣದ ಹತ್ತಿರ ಮಾತನಾಡುವುದನ್ನು ಕೇಳಿಯೋ ಏನೋ ಇರಬೇಕು, ‘ರಾಜಮೌಳಿ’ ನೊಣದ ಬಗ್ಗೆ ಒಂದು ಪಿಕ್ಚರ್ ಮಾಡಿದ್ದು” ಕೇದಾರ ನಕ್ಕು ಹೇಳಿದ.
“ಅಪ್ಪಾ, ಮಹಾಬಲಣ್ಣನಿಗೆ ಕಳೆದ ಮೂರು ತಿಂಗಳಿಂದ ಒಂದೇ ತರದ ಕನಸು ಆಗಾಗ ಬೀಳುತ್ತಿದೆಯಂತೆ. ಮೊದಮೊದಲು ಅದನ್ನು ಅಲಕ್ಷಿಸಿದರೂ, ಅದು ಅವನನ್ನು ಇನ್ನಿಲ್ಲದಂತೆ ಕಾಡಲು ತೊಡಗಿತಂತೆ. ಕನಸಲ್ಲಿ ಗೆಜ್ಜೆಯ ‘ಝಲ್ ಢಣ್ ಝಲ್ ಢಣ್’ ಶಬ್ದವು ಹತ್ತಿರವಾಗುತ್ತ ಬಂದು, ಕಿವಿಯ ಬಳಿ ಜೋರಾಗಿ, ‘ಝಲ್ ಢಣ್ ಝಲ್ ಢಣ್’ ಎಂದು ಶಬ್ದ ಮಾಡಿ, ಓಡಿಹೋಗುವ ಅನುಭವವಾಯಿತಂತೆ. ಒಂದು ರಾತ್ರಿ ಗೆಜ್ಜೆಯ ಶಬ್ದವಾಗುವಾಗ, ಥಟ್ಟನೆದ್ದು ಶಬ್ದ ಬಂದ ಕಡೆ ಟಾರ್ಚ್ ಹಾಕಿ ನೋಡಿದರೆ, ಸೋಫಾದ ಮೇಲೆ ಮಲಗಿದ್ದ ನೀತಾಳ ಕಾಲ್ಗೆಜ್ಜೆ ಅಲುಗಾಡುತ್ತಿತ್ತಂತೆ. ಮಗುವಿನ ಕಾಲಗೆಜ್ಜೆಯ ಸದ್ದು ಇಷ್ಟು ದೊಡ್ಡದಾಗಿ ಹೇಗೆ ಕೇಳಿಸುತ್ತದೆ ಎಂದು ನೀತಾಳ ಕಾಲಗೆಜ್ಜೆಯಲ್ಲಿರುವ ಮಣಿಗಳನ್ನು ಟಾರ್ಚಿನ ಬೆಳಕಲ್ಲಿ ದಿಟ್ಟಿಸಿ ನೋಡಿದನಂತೆ. ಆದರೂ ಏನೂ ಗೊತ್ತಾಗದೆ ಮಲಗಿದವನಿಗೆ ಗಂಟೆ ಎರಡಾಗುವಷ್ಟರಲ್ಲಿ ಮತ್ತದೇ ಗೆಜ್ಜೆಯ ಸದ್ದು! ದೂರದಿಂದ ಕೇಳಿಬರುವ ಸದ್ದು ಹತ್ತಿರ ಹತ್ತಿರಕ್ಕೆ ಬಂದು, ಬಾಗಿಲ ಬಳಿ ಜೋರು ಸದ್ದಾಯಿತಂತೆ. ಮಹಾಬಲಣ್ಣ ಅತ್ತಿಗೆಯನ್ನು ಎಬ್ಬಿಸಿ ಕೇಳಿದರೆ, ಅತ್ತಿಗೆ ಎದ್ದವಳು “ಎಂತ ಗೆಜ್ಜೆಯೂ ಇಲ್ಲ, ಬೊಜ್ಜವೂ ಇಲ್ಲ. ಮಲ್ಕೊಳ್ಳಿ ಸುಮ್ಮನೆ ಹೇಳಿ, ಮುಸುಕೆಳೆದುಕೊಂಡಳಂತೆ” ಗೆರೆಗಳು ಎದ್ದು ಕುಳಿತ ತನ್ನ ಹಣೆಯನ್ನು ಸವರಿಕೊಳ್ಳುತ್ತ್ತ, ಕೇದಾರ ವಿಷಯವನ್ನು ತಿಳಿಸಿದ.
ಮಾತುಕತೆಯನ್ನು ಒಳಕೋಣೆಯಿಂದ ಕೇಳಿಸಿಕೊಳ್ಳುತ್ತಿದ್ದ ಸರಸ್ವತಿಯಮ್ಮ, “ಆಮೇಲೆ ಎಂತಾಯ್ತು ಹೇಳಾ ಕೇದಾರು. ಅದೆಂತ ಎಳೀತಿ ಮಾರಾಯ ಕತೆಯನ್ನು. ಬೇಡ, ನೊಣ ಬೇಡ. ನಿನಗೇನೊ ಪೋಕಾಲ” ಒಂದೇ ಸಮ ನೊಣವನ್ನು ಬೈಯತೊಡಗಿದಳು.
“ಅತ್ತೆ, ನೀವು ಸ್ವಲ್ಪ ಸುಮ್ಮನಿರಿ” ಕುಸುಮ ತುಸು ಅಸಮಾಧಾನದಿಂದಲೇ ಹೇಳಿದಳು.
“ಓಹ್! ನೀನು ‘ಅಡೂರು ಗೋಪಾಲಕೃಷ್ಣ’ ನೋಡು, ನಿನಗೆಲ್ಲ ಗೊತ್ತಾಗುತ್ತದಲ್ಲಾ” ಹೇಳಿ, ವ್ಯಂಗ್ಯವಾಗಿ ಸರಸ್ವತಿಯಮ್ಮ ನಕ್ಕಳು.
“ಇಲಿ ಪತ್ತಾಯ, ಇಲ್ಲೇ ಉಂಟು” ಎನ್ನುವ, ಮಾರುತ್ತರವನ್ನೂ ಕುಸುಮ ಕೊಟ್ಟಳು.
“ಒಮ್ಮೆ ನಿಲ್ಲಿಸಿಯಪ್ಪಾ, ನಿಮ್ಮ ಸಿನೆಮಾ ಕಲಾಪ” ಎನ್ನುತ್ತ, ಕೇದಾರನಿಗೆ ವಿಷಯವನ್ನು ಮುಂದುವರಿಸುವಂತೆ ಕೇಶವರಾಯರು ಹೇಳಿದರು.
“ಎಂತ ಅಪ್ಪಾ, ಮಹಾಬಲಣ್ಣ ಭಾರೀ ಹೆದರಿದ್ದಾನೆ. ಈಗೀಗಂತೂ ಕನಸಲ್ಲಿ ಗೆಜ್ಜೆ ಕಟ್ಟಿದ ಕಾಲು ‘ಝಲ್ ಢಣ್ ಝಲ್ ಢಣ್’ ಎಂದು ಶಬ್ದ ಮಾಡುತ್ತ, ಅವನ ಹೊಟ್ಟೆಯ ಮೇಲೆ ಕಾಲಿಟ್ಟು ಕುಣಿಸಿದರೆ, ಇನ್ನೊಮ್ಮೆ ಅವನ ಎದೆಯ ಮೇಲೆ ಕಾಲನ್ನಿಟ್ಟು ಕುಣಿಸುತ್ತದಂತೆ. ಕೆಂಪುಪಾದದ ಎರಡನೆ ಬೆರಳಿಗೆ ದಾರವನ್ನು ಸಿಕ್ಕಿಸಿ ಗಗ್ಗರ ಕಟ್ಟಿದ ಬಲಗಾಲನ್ನು ಕುಣಿಸುತ್ತ, ಹೊಟ್ಟೆಯೆದೆಯನ್ನು ಮನಸೋಇಚ್ಛೆ ತುಳಿಯುತ್ತದೆಯಂತೆ. ಈಗೀಗಂತೂ ಗೆಜ್ಜೆ ಹೆಜ್ಜೆಯ ಗುದ್ದಿನಾಟ ಜಾಸ್ತಿಯಾಗ್ತಿದೆಯಂತೆ. ನಿದ್ದೆಯಿಲ್ಲದ ರಾತ್ರಿಗಳ ಅವನ ಪಾಡು ಯಾರಿಗೂ ಬೇಡ, ಅಪ್ಪಾ. ದೊಡ್ಡಪ್ಪನ ಹತ್ತಿರ ಹೇಳಿದರೆ ಭ್ರಮೆ ಎಂದರಂತೆ. ಅದಕ್ಕೆ ದೊಡ್ಡಮ್ಮ ಇದ್ದವಳು, ಚಿಕ್ಕಪ್ಪನಿಗೆ ಹೇಳು ಎಂದರಂತೆ. ಹಾಗೆ ನನಗೆ ಫೋನ್ ಮಾಡಿ ನಿಮಗೆ ವಿಷಯ ತಿಳಿಸಲು ಹೇಳಿದ್ದಾನೆ. ಇದಕ್ಕೆ ಪರಿಹಾರ ಎಂತ, ಅಪ್ಪಾ?” ಕೇಳಿದವನು, ಕೆನೆಗಟ್ಟಿ ತಣ್ಣಗಾದ ಚಾಯದ ಗ್ಲಾಸನ್ನು ಕೈಗೆತ್ತಿಕೊಂಡ.
“ಪರಿಹಾರ ಎಂತ ಮಗ, ಗಟ್ಟಿ ಗುಂಡಿಗೆಯೊಂದೇ ಪರಿಹಾರ” ಕೇಶವರಾಯರು ನಿಟ್ಟುಸಿರುಬಿಟ್ಟು ಹೇಳಿದರು.
“ರಕ್ತೇಶ್ವರಿ ದೈವದ್ದು ಏನಾದರೂ, ಅಪ್ಪಾ?” ಕಣ್ಣನ್ನು ಸಣ್ಣದಾಗಿಸಿಕೊಂಡು ಕೇದಾರ ಕೇಳಿದ.
“ಹಾಂ… ಹಾಂ! ನಾನು ಹೇಳಲಿಲ್ಲವಾ ನಿಮಗೆ. ನಿನ್ನ ಅಪ್ಪನಿಗೆ ಇವತ್ತು ಬೆಳಗ್ಗೆ ದೈವದ ಆಭರಣದ ಬಗ್ಗೆ ಹೇಳಿದ್ದೆ, ಕೇದಾರ. ಈಗ ನೋಡು, ಮಹಾಬಲನಿಗೆ ಕನಸು ಬಿದ್ದಿದೆ. ಅಪ್ಪ-ಮಗ ಇಬ್ಬರಿಗೂ ದೇವರು ದಿಂಡರು ಅಂತ ಎಂತ ಕರ್ಮವೂ ಇಲ್ಲ” ಹೇಳಿದವಳು, ಹಣೆಗೆ ಕೈಕೊಟ್ಟ ಕುಸುಮ ಮುಖ ತಿರುವಿಸಿ ಕೂತಳು.
“ಪಡ್ಚಾ÷್ಯ… ಮಗ. ಇನ್ನು ನಿನ್ನ ಅಮ್ಮನ ಬಾಯಿಗೆ ಪುರುಸೊತ್ತೇ ಇರ್ಲಿಕ್ಕಿಲ್ಲ” ಕೇಶವರಾಯರು ಹೇಳಿದರು.
“ಅಪ್ಪಾ, ಮಹಾಬಲಣ್ಣನೂ ರಕ್ತೇಶ್ವರಿ ದೈವದ ಬಗ್ಗೆಯೇ ಹೇಳಿದ. ಜೀರ್ಣಾವಸ್ಥೆಯಲ್ಲಿರುವ ದೈವದ ಆಭರಣಗಳನ್ನು ಹೊಸತಾಗಿ ಮಾಡಿಸಿದರೆ ಹೇಗೆ ಎಂದು ನಿಮ್ಮನ್ನು ಕೇಳಲು ಹೇಳಿದ್ದಾನೆ. ಅವನೂ ಕೈ ಜೋಡಿಸ್ತಾನಂತೆ, ಅಪ್ಪಾ” ಮಹಾಬಲ ತಿಳಿಸಿದ ವಿಚಾರವನ್ನು ಕೇದಾರ ಬಿಡಿಸಿಟ್ಟ.
“ರೀ… ಇಲ್ಲಿ ನೋಡಿ, ಇನ್ನು ತಡಮಾಡುವುದು ಬೇಡ. ಬೆಳಗ್ಗೆ ನೀವೇ ಹೇಳಿದ್ದಲ್ಲವಾ ಒಂದು ನಿಮಿತ್ತ ಬೇಕು ಅಂತ! ಇದನ್ನೇ ಆ ನಿಮಿತ್ತ ಎಂದುಕೊಳ್ಳಿ!” ಕುಸುಮ ಹೇಳಿದಳು.
“ನೀವೆಲ್ಲ ಇಷ್ಟು ತೆಳು ಪದರಿನವರು ಎಂದು ಗೊತ್ತಿರಲಿಲ್ಲ. ಏನೂ ಮಾಡದ ನಿನಗೆ ಮತ್ತು ಆ ಮಹಾಬಲನಿಗೆ ದೈವವು ಇಷ್ಟೆಲ್ಲಾ ಭಯ ಹುಟ್ಟಿಸುತ್ತದಾದರೆ, ನನ್ನನ್ನು ಅದು ಏನು ಮಾಡಬೇಕಿತ್ತು? ನನಗೆ ಏನಾಗಬೇಕಿತ್ತು? ಹುಚ್ಚು? ಹುಚ್ಚು ಹಿಡಿದು ಸಾಯಬೇಕಿತ್ತು ನಾನು. ಗೊತ್ತುಂಟಾ?” ಕೇಶವರಾಯರು ತುಸು ಏರಿದ ಸ್ವರದಲ್ಲಿ ಕೇಳಿದರು.
“ಮಹಾಬಲ ನನಗೂ ಫೋನ್ ಮಾಡಿದ್ದ. ಅವನ ಹೊಟ್ಟೆ-ಎದೆಗೆ ಬಿದ್ದ ಗೆಜ್ಜೆಹೆಜ್ಜೆಯ ಗುದ್ದಿನ ಬಗ್ಗೆಯೂ ಹೇಳಿದ್ದ. ಅಣ್ಣ ಮಧುಸೂದನನಿಗೆ ಫೋನ್ ಮಾಡಿ, ಮಹಾಬಲನ ಆತಂಕವನ್ನು ತಿಳಿಸಿದೆ. ಅದಕ್ಕೆ ಬೇಕಾದ ವ್ಯವಸ್ಥೆಯನ್ನು ನಾನು ಮಾಡುವುದಾಗಿಯೂ ಹೇಳಿದ್ದಕ್ಕೆ, ಇದನ್ನೆಲ್ಲಾ ನಂಬುತ್ತೀಯಾ ಕೇಶವ? – ಅಂತಲೂ ಅಣ್ಣ ಕೇಳಿದ್ದ. ನನಗಲ್ಲದಿದ್ದರೂ ನನ್ನ ಬಳಗಕ್ಕೆ, ಕುಟುಂಬಕ್ಕಾಗಿಯಾದರೂ ನಾನು ನಂಬಬೇಕು. ಅದಕ್ಕೆ ಬೇಕಾದ ಏರ್ಪಾಡನ್ನು ಮಾಡಬೇಕೆಂದಿರುವೆ, ಅಣ್ಣಾ. ಈ ಕಾರ್ಯಕ್ಕೆ ಯಾರ ಬಳಿಯೂ ದುಡ್ಡನ್ನು ಕೇಳುವುದಿಲ್ಲ ಮತ್ತು ಕೊಟ್ಟರೆ ತೆಗೆದುಕೊಳ್ಳುವುದೂ ಇಲ್ಲ. ನನ್ನಿಂದಾದ ಕರ್ಮವದು. ನಾನೇ ದುಡ್ಡು ಹಾಕುತ್ತೇನೆ. ಕೆಲವು ಲಕ್ಷಗಳಾದಾವು. ಪರವಾಗಿಲ್ಲವೆಂದು ಹೇಳಿದೆ. ಹುಚ್ಚು ನಿನಗೆ. ಆಸ್ತಿ ಮಾರಿ ಬಂದ ದುಡ್ಡನ್ನು ಇದಕ್ಕೆಲ್ಲ ಖರ್ಚು ಮಾಡಿದರೆ, ನಾಳೆ ಕೇದಾರನ ಮದುವೆಗೆ ಏನು ಮಾಡುತ್ತಿ?” – ಅಣ್ಣನೊಡನಾಡಿದ ಮಾತುಕತೆಯನ್ನು ಮಗನ ಮುಂದೆ ಕೇಶವರಾಯರು ಬಿಡಿಸಿಟ್ಟರು.
“ಮೊದಲು ಆ ದೈವಕ್ಕೆ ಅದರ ಆಭರಣವನ್ನು ಮಾಡಿಸಿಕೊಡಿ. ದುಡ್ಡಿನ ಕೊರತೆಯಾದರೆ, ನನ್ನ ಬಂಗಾರವನ್ನು ತೆಗೆದುಕೊಳ್ಳಿ” ಕುಸುಮ ಏರುದನಿಯಲ್ಲೇ ಹೇಳಿದಳು.
“ದುಡ್ಡಿನ ಬಗ್ಗೆ ನಾನೇನು ಹೆಚ್ಚು ಯೋಚನೆ ಮಾಡಲಿಲ್ಲ, ಕುಸುಮ. ಹಾಗೆ ಬೇಕಿದ್ದರೆ ಅಲ್ಲವಾ… ಆಗ ನೋಡುವ ಆಗದಾ” ರಾಯರು ಹೇಳಿದರು.
* * *
ಗತದ ವಿಷಯವು ಗೊತ್ತಿರಲೆಂದು ರಾಯರು ಚರಿತ್ರೆಯ ಪುಟಗಳನ್ನು ಕೇದಾರನ ಮುಂದೆ ಬಿಡಿಸಿದರು:
“ನೀನಿನ್ನೂ ಹುಟ್ಟಿರ್ಲಿಲ್ಲ. ಮಹಾಬಲನಿಗೆ ಮೂರೋ ನಾಲ್ಕೋ ವಯಸ್ಸು. ನಿನ್ನ ಅಜ್ಜನಿಗೆ ವಿಪರೀತ ಇಸ್ಪೀಟಿನ ಹುಚ್ಚು. ಜೊತೆಯಲ್ಲಿ ಮೈತುಂಬಾ ಅಂಟಿಕೊಂಡ ವ್ಯಾಜ್ಯಗಳು. ವ್ಯಾಜ್ಯದಿಂದಾದ ನಷ್ಟ, ಇಸ್ಪೀಟು ಆಟದಿಂದ ಖಾಲಿಯಾದ ಸಂಪತ್ತು ಅಜ್ಜನನ್ನು ತಲೆಯೆತ್ತದಂತೆ ಮಾಡಿತು. ನಿನ್ನ ಅಜ್ಜನೂ ಒಂದು ದಿನ ಥಟ್ ಅಂತ ಕಣ್ಣು ಮುಚ್ಚಿದರು. ಅಣ್ಣನೇ ದೊಡ್ಡವ. ಇಬ್ಬರು ಅಕ್ಕಂದಿರಿಗೆ ಮದುವೆಯಾಗಿತ್ತು. ತಂಗಿ ಮದುವೆಗೆ ಸಜ್ಜಾಗಿದ್ದಳು. ಮೂವರು ತಮ್ಮಂದಿರು ಬೇರೆ ಜೊತೆಗೆ. ಮನೆಯಲ್ಲಿ ಹಸಿದ ಹೊಟ್ಟೆ ಹತ್ತಾದರೆ, ದುಡಿಯುವ ಕೈ ಒಂದೂ ಇರಲಿಲ್ಲ. ಅಣ್ಣನಿಗೆ ಅದಾಗ ತಾನೇ ಕೆಲಸ ಸಿಕ್ಕಿತ್ತು. ಅದರಲ್ಲಿ ಸಂಸಾರ ಸಾಗಿಸುವುದು ಬಹಳ ಕಷ್ಟವಿತ್ತು.
ಅಜ್ಜ ಬಿಟ್ಟು ಹೋದ ಸಾಲವನ್ನು ತೀರಿಸಲು ಒಂದು ದೊಡ್ಡ ಮೊತ್ತವೇ ಬೇಕಿತ್ತು. ನಿತ್ಯ ಮನೆಯ ಮುಂದೆ ಸಾಲಗಾರರು ಬಂದು ನಿಲ್ಲುತ್ತಿದ್ದರು. ಅವರನ್ನು ಎದುರಿಸುವ ಕರ್ಮ ನನ್ನದಾಗಿತ್ತು. ಒಕ್ಕಲಮನೆಯಿಂದ ಗೋಧಿ ತರಿಸಿಕೊಳ್ಳುವಷ್ಟು ಕಷ್ಟವೊದಗಿ ಬಂತು. ಮನೆಯಲ್ಲಿದ್ದ ಅಳಿದುಳಿದ ಸಂಪತ್ತೂ ಕರಗಿದ ಮೇಲೆ ಇನ್ನೇನು ಎಂಬ ಪ್ರಶ್ನೆಯ ಜೊತೆಗೆ ಹೊಟ್ಟೆ ತುಂಬಿಸಿಕೊಳ್ಳುವುದು ಹೇಗೆ ಎಂಬ ಚಿಂತೆ ಹುಟ್ಟಿಕೊಂಡಿತು. ಈಗ ಅದನ್ನೆಲ್ಲ ನೆನೆದರೆ ಮೈ ಜುಂ ಎನ್ನುತ್ತದೆ. ಅದೇನು ಗ್ರಹಚಾರವೋ ಗೊತ್ತಿಲ್ಲ. ಅದೇ ಸಮಯದಲ್ಲಿ ದೊಡ್ಡಕ್ಕನ ಗಂಡನೂ ತೀರಿಕೊಂಡರು. ಅಕ್ಕ ತನ್ನ ಮಕ್ಕಳಿಬ್ಬರೊಂದಿಗೆ ನಮಗೆ ಜೊತೆಯಾದಳು. ಹೊಟ್ಟೆಗಳ ಸಂಖ್ಯೆ ಹೆಚ್ಚಾಯಿತು. ಮನೆ-ಮಠ ಮಾರಿ ದೂರದೂರಿಗೆ ಹೋಗುವುದೆಂದೂ ಅಣ್ಣ ಮತ್ತು ನಾನು ತೀರ್ಮಾನಿಸಿದೆವು. ‘ನೀವು ಬೇಕಾದರೆ ಹೋಗಿ. ನಾನು ಈ ಮನೆ ಬಿಟ್ಟು ಬರಲಾರೆ, ಇಲ್ಲೇ ಸಾಯ್ತೇನೆ’ ಎಂದು ಒಂದೇ ಸಮ ನಿನ್ನಜ್ಜಿ ಹಠ ಹಿಡಿದು ಕೂತಳು.”
ರಾಯರ ಮಾತುಗಳನ್ನು ಕೇಳಿದ ಕೇದಾರನ ಮುಖದ ತುಂಬಾ ಪ್ರಶ್ನೆಗಳು ಎದ್ದು ಕುಳಿತವು.
“ಮತ್ತೆ ಏನಾಯ್ತು, ಅಪ್ಪಾ?” ಕೇಳಿದ.
ವೀಳ್ಯದ ಹರಿವಾಣವನ್ನು ತೋಡಗೇರಿಸಿಕೊಂಡ ರಾಯರು, ಅದಾಗಲೇ ಬಾಯೊಳಗೆ ಕುಳಿತಿದ್ದ ಎಲೆ-ಅಡಿಕೆಯ ರುಚಿಗೆ ಇನ್ನೂ ಹೆಚ್ಚಿನ ರುಚಿಯನ್ನು ನೀಡಲು ಕುಣಿಯ ಹೊಗೆಸೊಪ್ಪಿಗೆ ಸುಣ್ಣವನ್ನು ಬೆರೆಸಿ ಬಾಯೊಳಕ್ಕೆ ಎಸೆದು, ಇತಿಹಾಸದ ಮೆಲುಕನ್ನು ಹಾಕಲು ಸಜ್ಜಾದರು:
“ಏನು ಮಾಡುವುದು, ಕೇಶವ?” ನಿನ್ನ ದೊಡ್ಡಪ್ಪ ಕೇಳಿದಾಗ, ನನ್ನ ಬಳಿಯೂ ಉತ್ತರವಿರಲಿಲ್ಲ.
ಹೊಟ್ಟೆಗೆ ಸರಿಸರಿ ಇಲ್ಲದೆ ಸುಮಾರು ಮೂರು ವಾರಗಳಾಗಿದ್ದವು. ಯಾರ ಮುಖವನ್ನೂ ನೋಡಲಾಗುತ್ತಿರಲಿಲ್ಲ.
“ಒಂದೇ ಒಂದು ದಾರಿ ನನಗೆ ಕಾಣುತ್ತಿದೆ, ಅಣ್ಣಾ” ಏನೆಂದು ಹುಬ್ಬೇರಿಸಿ, ಕಣ್ಣಲ್ಲೇ ಅಣ್ಣ ಪ್ರಶ್ನಿಸಿದ.
“ರಕ್ತೇಶ್ವರಿ ದೈವದ ಆಭರಣ” ಎಂದು ಹೇಳಿದೆ.
“ಕೇಶವಾ…! ಅಣ್ಣ ಒಮ್ಮೆಲೆ ಕಿರುಚಿದ!” – ವರ್ತಮಾನದಲ್ಲಿ ನಿಂತು ಗತದ ಪೆಟ್ಟಿಗೆಯಿಂದ ಒಂದೊಂದೇ ನೆನಪನ್ನು ಹೆಕ್ಕಿ ತೆಗೆದು ಹೇಳುತ್ತಿದ್ದರೆ, ಕೇದಾರ ಮೈಯೆಲ್ಲಾ ಕಿವಿಯಾಗಿಸಿಕೊಂಡು,
“ಮತ್ತೇನಾಯಿತು, ಅಪ್ಪಾ?” ಕುತೂಹಲವನ್ನು ತಡೆಯಲಾಗದೆ ಕೇಳಿದ.
“ಮತ್ತೆಂತ ಮಣ್ಣು. ಬೇರೆ ಉಪಾಯ ಕಾಣದೆ ನನ್ನ ಸಲಹೆಗೆ ‘ಆಗಬಹುದು’ ಎಂದ. ಆದರೆ ಅದನ್ನು ಕಾರ್ಯಗತ ಮಾಡ್ಲಿಕ್ಕೆ ಯಾರೂ ಮುಂದೆ ಬರಲಿಲ್ಲ. ದೈವದ ಹತ್ತಿರ ಸುಳಿಯುವ ಧೈರ್ಯ ಯಾರಿಗೂ ಇರಲಿಲ್ಲ. ಕೊಟ್ಟ ಸಲಹೆಯನ್ನು ಅನುಷ್ಠಾನಿಸಲು ಕೊನೆಗೆ ನಾನೇ ಎದ್ದು ನಿಂತೆ. ಮಣಭಾರದ ಬೆಳ್ಳಿ ಆಭರಣವನ್ನು ‘ಹಿಡಿದೆತ್ತಲು ಸ್ವಲ್ಪ ಕೈ ಕೊಡಿ’ ಎಂದು ಕೇಳಿದರೆ ಯಾರೂ ಮುಂದೆ ಬರಲಿಲ್ಲ. ಒಳಗೊಳಗೇ ಭಯವಿದ್ದಿರಬೇಕು. ಅಂದು ನನ್ನ ಸುತ್ತ ಸೇರಿದವರ ಹಾವ-ಭಾವ ಹೇಗಿತ್ತು ಎಂದರೆ, ‘ಶಾಪ ತಟ್ಟಿದರೆ ಗುದ್ದಿದವನಿಗೆ ತಟ್ಟಲಿ… ತಿಂದು ತೇಗಿದವರಿಗೆ ತಟ್ಟುವುದು ಬೇಡ’ ಎಂಬಂತಿತ್ತು.”
“ಹೂಂ?” ಎನ್ನುತ್ತ ನಿಟ್ಟುಸಿರು ಬಿಟ್ಟ ಕೇಶವರಾಯರು,
“ಇರಲಿ ಬಿಡು, ಒಂದೊಂದು ಜನ್ಮದ ಪ್ರಾಪ್ತಿ” ಎಂದುಕೊಳ್ಳುತ್ತ, ತನಗೆ ತಾನೇ ಸಮಾಧಾನ ಹೇಳಿಕೊಂಡು ಮಾತನ್ನು ಮುಂದುವರಿಸಿದರು:
“ದೀಪದ ಸಣ್ಣ ಬೆಳಕು ದೈವದ ಕೋಣೆಯ ಕತ್ತಲನ್ನು ಸಾಧ್ಯವಾದಷ್ಟುಮಟ್ಟಿಗೆ ಓಡಿಸಲು ಪ್ರಯತ್ನಿಸುತ್ತಿತ್ತು. ದೀಪದೆಣ್ಣೆಗೂ ಕೈಯಲ್ಲಿ ಕಾಸಿರಲಿಲ್ಲ ಅಂದರೆ ನೀನೊಮ್ಮೆ ಯೋಚಿಸು. ರಕ್ತೇಶ್ವರಿಯ ಉಗ್ರರೂಪವನ್ನೇ ಕಂಡ ನನಗೆ, ಅಂದು ಮಾತ್ರ ಮಿಣುಕುದೀಪದ ಬೆಳಕಲ್ಲಿ ಆಕೆ ಮಾತೃ ಸ್ವರೂಪಿಣಿಯಾಗಿ, ದಯಾಮಯಿಯಾಗಿ ಕಂಡಳು. ತನ್ನ ಮಕ್ಕಳ ನೋವು ಅವಳಿಗೆ ತಿಳಿದಂತಿತ್ತು. ಹಾಗಾಗಿ ಎಲ್ಲವನ್ನೂ ಅರಿತು ಸುಮ್ಮನಿದ್ದುಬಿಟ್ಟಿದ್ದಳೇನೋ ಎಂದು ಈಗ ಅನಿಸುತ್ತಿದೆ.”
“ಹಾಗಾದರೆ ದೈವಕ್ಕೆ ಎಲ್ಲಾ ಗೊತ್ತಿತ್ತಾ, ಅಪ್ಪಾ…?” ಕೇದಾರ ಆಶ್ಚರ್ಯದಿಂದ ಕೇಳಿದ.
“ನನ್ನನ್ನು ಈಗಲೂ ಕಾಡುವ ಪ್ರಶ್ನೆಯದು ಮಗ. ನಾಲಗೆ ಹೊರಚಾಚಿ ಕುಳಿತವಳ ಬಳಿ ತಡಮಾಡದೆ ಹೋಗಿ ಕೈ ಮುಗಿದು, ‘ತಾಯಿ ಕಾಪಾಡು. ನಿನಗೆ ಗೊತ್ತಿಲ್ಲದ್ದು ಯಾವುದೂ ಇಲ್ಲ’ ಹೇಳಿ, ಬೇಡಿ ‘ಪೊರೆದುಬಿಡು’ ಎಂದಷ್ಟೇ ಕೇಳಿಕೊಂಡೆ. ನನ್ನ ಸುತ್ತಲಿನ ಹಸಿದ ಹೊಟ್ಟೆಗಳು ಕೆನ್ನೆಗೆ ಕೈಕೊಟ್ಟು ನಿಂತಿದ್ದರೆ, ಇನ್ನು ಕೆಲವುಗಳ ಹಣೆಯಲ್ಲಿ ಬೆವರು ಒಡೆಯಲು ತೊಡಗಿತು. ಉಳಿದಂತಿತರರು ದೇವರ ಕೋಣೆಯ ಹೊರಗಿನಿಂದ ಕಿಟಕಿಯ ಸರಳುಗಳಿಗೆ ಮುಖವನ್ನು ಒತ್ತಿಸಿಕೊಂಡು, ಹೊಟ್ಟೆಯಲ್ಲಾಗುತ್ತಿದ್ದ ಭಯದ ಮರ್ಕಟಸಂಕಟವನ್ನು ಶಮನಗೊಳಿಸಲು ಪ್ರಯತ್ನಿಸುತ್ತಿದ್ದರು. ನಿನ್ನ ಅಮ್ಮ, ತನ್ನ ತಾಳಿಯನ್ನು ಗಟ್ಟಿಯಾಗಿ ಕಣ್ಣಿಗೊಮ್ಮೆ ಒತ್ತಿ ನನ್ನ ಪಕ್ಕದಲ್ಲಿ ನಿಂತಿದ್ದಳು. ಆ ಹೊತ್ತು ಹೇಗಿತ್ತೆಂದರೆ – ಹೀಗೇ ಆಗಬೇಕೆಂದು ಎಲ್ಲವೂ ನಿರ್ಧಾರವಾದಂತಿತ್ತು. ದೈವದಿಚ್ಛೆಯ ಮುಂದೆ ಯಾವುದೂ ಇಲ್ಲ. ದೈವದ ಭಂಡಾರಕ್ಕೆ ಹಾಕಿದ್ದ ಬೀಗದ ಚಾವಿ ಎಷ್ಟು ಹುಡುಕಿದರೂ ಸಿಗಲಿಲ್ಲ. ಕೊನೆಗೆ ಸುತ್ತಿಗೆಯಲ್ಲಿ ಭಂಡಾರದ ಬೀಗವನ್ನು ಒಡೆಯಬೇಕಾಯಿತು. ಸುತ್ತಲೂ ಕಣ್ಣು ತೆರೆದು ನೋಡುತ್ತಿದ್ದ ಅಷ್ಟೂ ಹಸಿದ ಹೊಟ್ಟೆಗಳು ಒಮ್ಮೆಗೆ ಕಂಪಿಸಿದವು. ‘ತಾಯಿ ರಕ್ತೇಶ್ವರೀ…’ ಸಣ್ಣ ಧ್ವನಿಯಲ್ಲಿ ಉಲಿದ ಅಷ್ಟೂ ತುಟಿಗಳು, ತೆರೆದಷ್ಟೇ ವೇಗದಲ್ಲಿ ಹೊಲಿದುಕೊಂಡವು. ದೈವದ ಒಂದೊಂದೇ ಬೆಳ್ಳಿಯ ಆಭರಣವನ್ನು ಸುತ್ತಿಗೆಯಿಂದ ಗುದ್ದಿ, ಹತ್ತರಿಂದ ಹನ್ನೆರಡು ಮುದ್ದೆಗಳನ್ನಾಗಿ ಮಾಡಿದೆ. ಆ ಬೆಳ್ಳಿ ಮುದ್ದೆಗಳನ್ನು ಮಾರಿ ಬಂದ ಹಣದಲ್ಲಿ ಹಸಿದ ಹೊಟ್ಟೆಗಳನ್ನು ತುಂಬಿಸಬೇಕು, ತಂಗಿಯ ಮದುವೆಗೆ ತಯಾರಿ ನಡೆಸಬೇಕು, ತಮ್ಮಂದಿರ ವಿದ್ಯಾಭ್ಯಾಸವನ್ನು ನೋಡಿಕೊಳ್ಳಬೇಕೆಂಬ ಯೋಜನೆಯನ್ನು ಅಣ್ಣ ಮತ್ತು ನಾನು ಹಾಕಿಕೊಂಡೆವು” ಮಡಚಿಟ್ಟಿದ್ದ ನೆನಪುಗಳನ್ನು ಹರಡಿ ಕೇಶವರಾಯರು ಕುಳಿತರು.
“ಮೈ ಜುಂ ಎನ್ನುತ್ತಿದೆ ಅಪ್ಪಾ. ಮತ್ತೇನಾಯಿತು?” ಕೇದಾರ ಕೇಳಿದ.
“ಗುದ್ದಿ ಮುದ್ದೆಯಾಗಿಸಿದ ಬೆಳ್ಳಿಯನ್ನು ಅಜ್ಜನ ಹಳೆಯ ಪಂಚೆಯಲ್ಲಿ ಸುತ್ತಿ, ಚೀಲದಲ್ಲಿ ತುಂಬಿಸಿಕೊಂಡು ಮಾರಲು ಪೇಟೆಗೆ ಹೋದೆವು. ಆದರೆ ಪೇಟೆಯಲ್ಲಿ ಎಲ್ಲರೂ ಗೊತ್ತಿರುವವವರೇ. ಅಲ್ಲಿ ಸಂಶಯ ಬಂದೀತು. ಹಾಗಾಗಿ ಪೇಟೆಯಲ್ಲಿ ಮಾರುವುದು ಬೇಡವೆಂದು ಅಣ್ಣನಿಗೆ ಹೇಳಿ, ನಾವಿಬ್ಬರೂ ಕಲ್ಲಿಕೋಟೆಯ ರೈಲನ್ನು ಹತ್ತಿದೆವು. ಕಲ್ಲಿಕೋಟೆ ನಿಲ್ದಾಣ ಬರುವ ತನಕ ಒಂದೇ ಒಂದು ಶಬ್ದವನ್ನು ನಾವಿಬ್ಬರೂ ಆಡಲಿಲ್ಲ. ರೈಲಿನಲ್ಲಿ ಎದುರಾ-ಬದುರು ಕುಳಿತು ಮುಖಮುಖ ನೋಡುತ್ತಿದ್ದದ್ದು ಬಿಟ್ಟರೆ, ತುಟಿ ತೆರೆಯುವ ಸಾಹಸಕ್ಕೆ ಮುಂದಾಗಲಿಲ್ಲ. ಬೆಳ್ಳಿಮುದ್ದೆಯ ಚೀಲವನ್ನು ಹೊಟ್ಟೆಗೆ ಒತ್ತಿಕೊಂಡೇ ನಾನು ಕುಳಿತಿದ್ದೆ. ನನ್ನೊಳಗೆ ಭಯವಾಗಲಿ ಆತಂಕವಾಗಲಿ ಏನೂ ಇರಲಿಲ್ಲ. ಇದ್ದದ್ದು ಒಂದೇ ಯೋಚನೆ; ನನ್ನವರ ಹೊಟ್ಟೆಯನ್ನು ಹೇಗೆ ತುಂಬಿಸಲಿ ಎನ್ನುವುದು ಮಾತ್ರ. ನನ್ನೊಳಗೊಂದು ಹುಚ್ಚು ಧೈರ್ಯ, ಆವೇಶ ಸೇರಿಕೊಂಡಿತ್ತು. ಪೂರ್ತಿ ಮುಳುಗಿದವನಿಗೆ ಚಳಿ ಎಂತದ್ದು ಅಂತ ಹೇಳ್ತಾರಲ್ಲ ಹಾಗೆ” ಎಂದವರು ಕೊಳಂಬಿಯಲ್ಲಿ ಸತ್ತ್ವ ಕಳೆದ ವೀಳ್ಯದ ಕಸವನ್ನು ಉಗಿದು, ಹೊಸ ವೀಳ್ಯದ ತಯಾರಿಗೆಂದು ಹರಿವಾಣವನ್ನು ಕೇಶವರಾಯರು ಮತ್ತೆ ಎತ್ತಿಕೊಂಡರು.
“ಕಲ್ಲಿಕೋಟೆ ಪೇಟೆಯ ಅಕ್ಕಸಾಲಿಗರ ಓಣಿಯಲ್ಲಿ ಒಂದು ಸುತ್ತು ಹಾಕಿ ಬಂದು, ಯಾವ ಅಂಗಡಿಯಾಗಬಹುದೆಂದು ಲೆಕ್ಕ ಹಾಕುತ್ತಿರಬೇಕಾದರೆ,
“ಕೇಶವ, ನನಗಿಲ್ಲಿ ಪರಿಚಯದ ಸುಮಾರು ಜನ ಇದ್ದಾರೆ ಮಾರಾಯ. ನನ್ನ ಕಾಲೇಜು ಕೂಡ ಇಲ್ಲೇ ಇದೆ. ಹಾಗಾಗಿ ನೀನು ಹೋಗಿ ಕಾರ್ಯವನ್ನು ಪೂರೈಸಿಕೊಂಡು ಬಸ್ ಸ್ಟ್ಯಾಂಡಿನ ಬಳಿ ಇರುವ ನಾಯರ್ ಹೋಟೆಲಿಗೆ ಬಂದುಬಿಡು” ಹೇಳಿ, ನನ್ನ ಉತ್ತರಕ್ಕೂ ಕಾಯದೆ ಸಿಗರೇಟಿನ ಹೊಗೆಯನ್ನು ಹೊರಕ್ಕೆ ದಬ್ಬುತ್ತ ಅಕ್ಕಸಾಲಿಗರ ಓಣಿಯ ತುದಿಯಲ್ಲಿ ಅಣ್ಣ ಮರೆಯಾದ.
“ಅಕ್ಕಸಾಲಿಗನಿಗೆ ಮಾರುವಾಗ ಏನು ಎತ್ತ ಎಂಬೆಲ್ಲ ಪ್ರಶ್ನೆಗಳು ಬಂದುವು. ನನ್ನ ವಯಸ್ಸೂ ಸಣ್ಣದೇ ಇತ್ತು. ಅಕ್ಕಸಾಲಿಗನಿಗೆ ಸ್ವಲ್ಪ ಸಂಶಯ ಬಂದ ಹಾಗಿತ್ತು. ‘ಅವಿಭಕ್ತ ಕುಟುಂಬದಲ್ಲಿ ಪಾಲಾದಾಗ ನನ್ನ ಪಾಲಿಗೆ ಬಂದ ಬೆಳ್ಳಿಗಟ್ಟಿಗಳಿವು. ಅಪ್ಪನಿಗೆ ಹುಷಾರಿಲ್ಲ. ಆಸ್ಪತ್ರೆಯ ಖರ್ಚಿಗೆ ಹಣ ಒದಗಿಸಬೇಕಿದೆ, ಹಾಗಾಗಿ ಮಾರುತ್ತಿದ್ದೇನೆ’ ಎಂಬ ಬೆಳ್ಳಗಿನ ಸುಳ್ಳಿನ ಸತ್ಯವನ್ನು ಹೇಳಿ ನಂಬಿಸಿ, ಚೌಕಾಸಿ ಮಾಡಿ, ಗುದ್ದಿ ಮುದ್ದೆಯಾಗಿಸಿದ ದೈವದ ಆಭರಣವನ್ನು ಮಾರಿ ದುಡ್ಡನ್ನು ಪಡಕೊಂಡೆ. ಗುದ್ದಿ ಮಾರಿದ ಬೆಳ್ಳಿಯ ಮುದ್ದೆಗಳು ನಮ್ಮನ್ನು ಉಸಿರಾಡುವಂತೆ ಮಾಡಿ ಪುನರ್ಜನ್ಮ ಕೊಟ್ಟವು. ನಾನು ಹೀಗೆ ಮಾಡಿದೆನೆಂದೋ, ನನ್ನಿಂದ ಹೀಗಾಯಿತೆಂದೋ ನನಗೆ ಅಂದೂ ಭಯವಿರಲಿಲ್ಲ, ಇಂದೂ ಭಯವಿಲ್ಲ. ಮುಂದೂ ಭಯವಿರುವುದಿಲ್ಲ. ನಾನು ಸ್ಪಷ್ಟವಾಗಿದ್ದೆ. ಕಾರಣವೂ ಸ್ಪಷ್ಟವಾಗಿಯೇ ಇತ್ತು. ನನ್ನೊಳಗೆ ಕಲ್ಮಶವಿರಲಿಲ್ಲ. ನನ್ನವರಿಗಾಗಿ ನನ್ನ ನಂಬಿಕೊಂಡು ಬಂದವಳ ಬಗ್ಗೆಯೂ ಚಿಂತಿಸಿರಲಿಲ್ಲ. ನನ್ನವರು ಇದ್ದರೆ ತಾನೇ ನನ್ನದು ಎನ್ನುವುದನ್ನು ಪ್ರೀತಿಸಲು ಸಾಧ್ಯ. ಅದ್ಯಾವುದೂ ಇಲ್ಲದ ಮೇಲೆ ಏನಿದ್ದು ಏನು ಪ್ರಯೋಜನ? ಆದ್ದರಿಂದ ಯಾರಿಂದಲೂ ಮಾಡಲು ಸಾಧ್ಯವಾಗದ್ದನ್ನು ನನಗೆ ಮಾಡಲು ಸಾಧ್ಯವಾಯಿತು. ಅದೇನೇ ಬಂದರೂ ನನ್ನವರಿಗಾಗಿ ಅನುಭವಿಸಲು ನಾನು ತಯಾರಾಗಿದ್ದೆ. ಗದೆ ಬೀಸಿ ಎದೆ ಕೊಟ್ಟ ಭೀಮಸೇನನಂತೆ, ಪರಮೇಶ್ವರನಿಗೆ ‘ಅನ್ಯಂ ಶರಣಂ ನಾಸ್ತಿ’ ಎಂದು ಸಂಪೂರ್ಣವಾಗಿ ಶರಣಾಗಿದ್ದೆ. ‘ಕೊಲ್ಲುವ ಕೈ ನೂರಿದ್ದರೆ ಕಾಯುವ ಕೈ ಒಂದು ಇರ್ತದೆ’ ಅಂತ ನಿನ್ನ ಅಮ್ಮ ಆಗಾಗ ಹೇಳ್ತಿರ್ತಾಳೆ. ಹಮ್.. ಇರಲಿ, ನಾಡಿದ್ದು ಸಂಕ್ರಾಂತಿಯಂದು ರಕ್ತೇಶ್ವರಿ ದೈವದ ಅಷ್ಟೂ ಆಭರಣಗಳನ್ನು ರಾಮ ಆಚಾರಿ ಮಾಡಿಕೊಂಡು ತರುತ್ತಾನೆ. ಅದಕ್ಕೆ ತಂಬಿಲದ ವ್ಯವಸ್ಥೆಯಾಗಬೇಕು. ನಾಳೆ ಕಾಲೇಜಿಗೆ ಹೋಗುವಾಗ ಧಾರೆಮನೆಯ ಅಗ್ಗಿತ್ತಾಯರಿಗೆ ತಂಬಿಲದ ವ್ಯವಸ್ಥೆ ಮಾಡಲು ಹೇಳಿ ಹೋಗು, ಕೇದಾರ” ಎಂದು ಮಗನಿಗೆ ಹೇಳಿ, ಕೇಶವರಾಯರು ಕೊಳಂಬಿಯನ್ನು ಕೈಗೆತ್ತಿಕೊಂಡರು.
“ನಿನಗೆ ಏನೋ ಪೋಕಾಲ ಬಿಗ್ನಾಸಿ ನೊಣ. ಬೇಡ… ಬೇಡ… ಅಂತ ಹೇಳಿದ್ರೂ ನಿನಗೆ ಬುದ್ಧಿಯಿಲ್ಲ ಅಲ್ಲವಾ? ಮತ್ತೆ ಹೇಳ್ತೇನೆ ಬೇಡ…ಬೇಡ. ಅಬ್ಬಾ! ಸಿಕ್ಕಿದೆಯಲ್ಲಾ ದರ್ಬೇಸಿ” ಎಂದ ಸರಸ್ವತಿಯಮ್ಮ, ತನ್ನ ಕೈಯೊಳಗೆ ಬಂದಿಯಾಗಿ ಗಿರಗಿರನೆ ರೆಕ್ಕೆ ಬಡಿಯುತ್ತಿದ್ದ ನೊಣವನ್ನು ಮುಷ್ಟಿಯಿಂದ ಬಲವಾಗಿ ಅಮುಕಿ, ಹಿಚುಕಿ ಕೊಂದು, ಮಗನನ್ನು ಕೂಗಿ, “ಕೇಶವಾ, ನೊಣವನ್ನು ಕೊಟ್ಟೆಕಾಯಿ ಮಾಡಿದೆ” ಖುಷಿಯಿಂದ ಹೇಳಿದಳು.
“ಓಹ್! ಅಂತೂ ಗೆದ್ದೇಬಿಟ್ಟೆಯಮ್ಮಾ” ರಾಯರು ನಕ್ಕು ಹೇಳಿದರು.
ಕಾಲಿಗೆ ಕಂತಿಸಿಕೊಂಡಿದ್ದ ಮುಳ್ಳಿನ ಗಾಯದ ಆಳವನ್ನು ನೋಡುತ್ತಾ, ಗತ-ವರ್ತಮಾನ-ಭವಿಷ್ಯತ್ತಿನ ನಡುವೆ ಓಡುತ್ತಿದ್ದ ಮನಸ್ಸನ್ನು ಥಟ್ಟನೆ ಹಿಡಿದು ನಿಲ್ಲಿಸಿ, “ಏನು ಕುಸುಮಾ, ನಿಮಿತ್ತಗಳೆಲ್ಲಾ ಸರಿ ಉಂಟಾ?” ಕೇಳಿ, ವೀಳ್ಯದ ಹರಿವಾಣವನ್ನು ಕೇಶವರಾಯರು ಮತ್ತೊಮ್ಮೆ ತೊಡೆಗೇರಿಸಿಕೊಂಡರು.
ಕಂಬಕ್ಕೊರಗಿ ತಿಟ್ಟೆಯಲ್ಲಿ ಕುಳಿತ ಕುಸುಮಳ ಒಂದು ಕೈ ಹೊಟ್ಟೆಯೊಳಗೆ ಸಂಕಟವೆಬ್ಬಿಸುತ್ತಿರುವ ಚಿಟ್ಟೆಗಳನ್ನು ಸಮಾಧಾನಿಸಲು ಶ್ರಮಿಸುತ್ತಿದ್ದರೆ; ಇನ್ನೊಂದು ಕೈಯಲ್ಲಿ ಉಮ್ಮಳಿಸಿ ಬರುತ್ತಿರುವ ದುಃಖವನ್ನು ಸೆರಗಲ್ಲಿ ಹಿಡಿದಿಡಲು ಒದ್ದಾಡುತ್ತಿದ್ದಳು.