‘ಹರಿ’ಯನ್ನು ಅರ್ಥಮಾಡಿಕೊಳ್ಳುವ ಸಲುವಾಗಿ ಸಂಸ್ಕೃತ ನಿಘಂಟನ್ನು ರೆಫರ್ ಮಾಡಿದೆ. ‘ಹರಿ ಎಂದರೆ ಬ್ರಹ್ಮ, ವಿಷ್ಣು, ಪರಶಿವ, ರುದ್ರ’ ಎಂಬ ಅರ್ಥಗಳ ಸಾಲೇ ಕಂಡುಬಂದು ಗೊಂದಲ ಅಧಿಕವಾಯಿತು. ಬ್ರಹ್ಮನನ್ನು ನೆನೆದರೆ ಮಕ್ಕಳು ಹೆಚ್ಚು. ಈಗ ‘ಊರಿಗೊಂದೇ ಮಗು, ಸಮಾಜಕ್ಕೇ ನಗು’ ಎಂಬ ಕಾಲವಾದ್ದರಿಂದ ಬ್ರಹ್ಮನನ್ನು ನೆನೆದು antisocial element ಎಂದು ಕರೆಸಿಕೊಳ್ಳುವುದು ಸೂಕ್ತವಾಗದು. ವಿಷ್ಣುವನ್ನು ನೆನೆ ಎಂಬ ಅರ್ಥ ನೀಡಿದರೆ ಶಿವನ ಭಕ್ತರಿಗೆ ಕೋಪ; ಶಿವನೆಂದು ಅರ್ಥೈಸಿದರೆ ವಿಷ್ಣುಭಕ್ತರಿಗೆ ಕ್ರೋಧ. ಇವೆಲ್ಲವನ್ನೂ ಬಿಟ್ಟು ಅರ್ಥವನ್ನು ಕಾಣಹೋದರೆ ಭರ್ತೃಹರಿ ಎಂಬ ಅರ್ಥವೊಂದು ಮೂಡಿತು.
ಹಿರಿಯರೇ ಪುಣ್ಯವಂತರು. ‘ಕಲಿಯುಗದಲಿ ಹರಿನಾಮವ ನೆನೆದರೆ ಕುಲಕೋಟಿಗಳುದ್ಧರಿಸುವವೋ ರಂಗಾ…’ ಎಂಬ ಹಾಡನ್ನು ಕೇಳಿದರೆ ಅವರಿಗೆ ಹೊಳೆಯುವುದು ಒಂದೇ ಅರ್ಥ, ಅದರಲ್ಲೇ ಸಂಪೂರ್ಣ ನೆಮ್ಮದಿ.
ಅದಕ್ಕೆ ಕಾರಣವೂ ಇದೆ. ಅಂದು ‘An atom cannot be split’ ಎನ್ನುತ್ತಿದ್ದ ಕಾಲ. ಅದನ್ನೇ ಪದಗಳಿಗೂ ಅನ್ವಯಿಸಿ ‘ಪದವೊಡೆಯದೆ ಅರ್ಥೈಸುವುದೆಮ್ಮ ಧ್ಯೇಯವನನವರತ’ ಎನ್ನುವುದು ಅಂದಿಗೆ ಸೂಕ್ತವಾಗಿದ್ದ ಕ್ರಮ. ಈಗ atom ಅಷ್ಟೇ ಅಲ್ಲದೆ ನ್ಯೂಕ್ಲಿಯಸ್ಸನ್ನೂ ಛೇದಿಸುವ ಕಾಲ. ತತ್ಕಾರಣ ಪದವೊಡೆದು ಅರ್ಥರಸವಂ ಬಡಿಸುವುದೇ ಎನ್ನ ಕೈಂಕರ್ಯ. ಇದೇ ಹಿನ್ನೆಲೆಯಲ್ಲಿ ನನ್ನ ತಲೆಯನ್ನು ಓಡಿಸಲಾರಂಭಿಸಿದೆ.
‘ತಲೆ ಓಡಿಸುವುದು’ ಎನ್ನುವುದೇ ಒಂದು ವಿಶೇಷ ನುಡಿಗಟ್ಟು. ಅಂದು ಗಣೇಶನು ಇದ್ದಲ್ಲಿಯೇ ಇದ್ದೂ ಜಗವನ್ನು ಸುತ್ತಿದವನೆಂಬ ಖ್ಯಾತಿಗೆ ಭಾಜನನಾಗಿದ್ದs. ತಲೆಯೂ ಇದ್ದಲ್ಲಿಯೇ ಇದ್ದರೂ ಓಡುವ ಕಾರಣ ಅದು ಗಣೇಶನಿಗೆ ಸಮ. Each man’s ತಲೆ is his own ಗಣೇಶ!
ಮೊದಲಿಗೆ ‘ಕಲಿಯುಗ’ ಪದದ ಅರ್ಥವನ್ನು ಅರಿಯಲು ಯತ್ನಿಸಿದೆ. ಕಲಿ ಎನ್ನುವುದಕ್ಕೆ ವೀರ ಎಂಬ ಅರ್ಥವನ್ನು ತೆಗೆದುಕೊಂಡರೆ ರಾಮಲಕ್ಷ್ಮಣಹನುಮಂತರಿದ್ದ ತ್ರೇತಾಯುಗವೂ ಕಲಿಗಳ ಯುಗವೇ ಆಗಿದ್ದಿತು; ಅದಕ್ಕಿಂತ ಹಿಂದಿನ ಕೃತಯುಗದಲ್ಲಿಯೂ ವರಾಹನು ಕಲಿಯಾಗಿದ್ದನು. ದ್ವಾಪರದಲ್ಲಂತೂ ಕಲಿಗಳ ಹಿಂಡುಗಳೇ ಇದ್ದವು. ಶತ್ರುಪಾಳ್ಯಕ್ಕೆ ಒಬ್ಬನೇ ನುಗ್ಗಿದಂತಹ ಹನುಮಂತನಂತಾಗಲಿ, ಹಾವಿನ ಹೆಡೆಯ ಮೇಲೆ ಡ್ಯಾನ್ಸ್ ಮಾಡಿದ ಪೋರವೀರನಂತಾಗಲಿ ಇಂದು ಯಾರೂ ಕಂಡುಬರದಿದ್ದರೂ, ಇದನ್ನು ಕಲಿಯುಗವೆಂದೇಕೆ ಕರೆದರೆಂದು ಹೊಳೆಯಲಿಲ್ಲ. ಕಲಿ ಎಂದರೆ ಅರಿತುಕೊಳ್ಳು ಎಂಬ ಅರ್ಥವನ್ನು ತೆಗೆದುಕೊಂಡರೆ ಅಂದಿನ ತಪಸ್ಸಿದ್ಧಿಯನ್ನು ಪಡೆದವರು ಅರಿಯದವರೆ? ಅವರಿದ್ದ ಯುಗ ಕಲಿ-ಯುಗವಲ್ಲವೆ? ಹದಿನೆಂಟು ಚಾಪ್ಟರ್ಗಳಷ್ಟು ದೀರ್ಘವಾದ ‘ಯುದ್ಧಕಾಲೇ ಶಾಸ್ತ್ರಾಭ್ಯಾಸ’ ಮಾಡಿದ ಅರ್ಜುನ ಹೋರಾಟದಲ್ಲಿಯೂ ಕಲಿ, ರಥಛಾತ್ರನಾಗಿಯೂ ಕಲಿತವನಾಗಿದ್ದ ಕಾರಣ ಅದು ಕೂಡ ಕಲಿ-ಯುಗವಲ್ಲವೆ? ‘ಕೇಳು ಜನಮೇಜಯ, ಧರಿತ್ರೀಪಾಲ’ ಎಂದು ಸೂತಪುರಾಣಿಕರು ದಿನಗಟ್ಟಲೆ ಕಥೆ ಹೇಳಿದಾಗ ಜನಮೇಜಯನೂ ಏನಾದರೂ ಕಲಿತಿರಲೇಬೇಕು; ತತ್ಕಾರಣ ಅದೂ ಕಲಿಯುಗ ಎನ್ನಿಸಿಕೊಳ್ಳಲು ಅರ್ಹವೇ… ಎಂದೆಲ್ಲ ತಲೆ ಓಡಿತು.
‘ಸ್ಟಾಪ್ ಇಟ್. ಯುಗ ಎಂದರೆ 56 ಇಂಚು. ಇಂದಿನ ಪ್ರಧಾನಿಗಳದು 56 ಇಂಚಿನ ಎದೆ. ಅವರು ವಿರೋಧಪಕ್ಷವನ್ನು ಧೀರೋದಾತ್ತವಾಗಿ ಎದುರಿಸುತ್ತಿರುವ ಕಲಿಯೂ ಹೌದು. ಆದ್ದರಿಂದ ಈ ಪ್ರಧಾನಿಗಳ ಕಾಲವೇ ಕಲಿಯುಗ’ ಎಂದಿತು ego. ‘ಅಹುದಹುದು. ಯಗಗಳಲ್ಲೇ ಕನಿಷ್ಠ ಧರ್ಮವಿರುವ ಯುಗ ಇಂದಿನ ಯುಗ ಎಂದು ಅವರೇ ತೋರಿಸಿಕೊಟ್ಟಿದ್ದು’ ಎಂದಿತು alter-ego. ‘ಒಂದು ಅಕ್ಷರದ ಲೋಪ ಉಂಟಾಗಿದೆ. ಇದು ಕಲಿಯುಗವಲ್ಲ; ನಕಲಿಯುಗ. ಬಾಲಿವುಡ್ ಹಾಲಿವುಡ್ನಿಂದ ಕದಿಯುತ್ತದೆ; ಸ್ಯಾಂಡಲ್ವುಡ್ಡೋ ಕಾಲಿವುಡ್ಡೋ ಬಾಲಿವುಡ್ನಿಂದ ಕದಿಯುತ್ತದೆ. ‘ಗಾಂಧಿನಗರದಲ್ಲಿ ಕಥೆ ಹೇಳಿದವನೇ ಕೆಟ್ಟ’ ಎಂಬ ಗಾದೆಯೇ ಇದೆ. ಸ್ಯಾಂಡಲ್ವುಡ್ನ ಕಾರ್ಯಾಗಾರವಾಗಿರುವ ಗಾಂಧಿನಗರದಲ್ಲಿ ಕಿವಿಗಳು ಹೆಚ್ಚು, ಕೊಡುವ ಕೈಗಳು ವಿರಳ. ಯಾರೋ ಯಾರಿಗೋ ಹೇಳಿದ ಕಥೆಯನ್ನು ಎಲ್ಲೋ ಕುಳಿತು ಕದ್ದಾಲಿಸಿದ ಕಿವಿಗಳು ರಾತ್ರೋರಾತ್ರಿ ಕಥೆಯನ್ನು ಬಳಸಿ ಚಿತ್ರ ತೆಗೆದೇಬಿಡುತ್ತವೆ. ಅಸಲಿ ತಾಕತ್ತಿನ ಕೊರತೆ ಇದ್ದಾಗ ನಕಲಿಗಳದೇ ಸಾಮ್ರಾಜ್ಯ. ಧನಬಲ, ತೋಳ್ಬಲ ಇರುವ ನಕಲಿಗಳೇ ಇಂದಿನ ಕಲಿಗಳಾದ್ದರಿಂದ ಇದು ನಕಲಿಯುಗ’ ಎಂದು ಅಂದೆಂದೋ ಗೆಳೆಯ ಸೀನು ವಿವರಣೆ ನೀಡಿದ್ದ. ಅಲ್ಲದೆ ಚೀನಾದಂತಹ ದೇಶಗಳಿರುವವರೆಗೆ ಅಸಲಿಯ ತಲೆಯ ಮೇಲೆ ಹೊಡೆಯುವ ನಕಲಿಗಳು ಇದ್ದೇ ಇರುತ್ತವೆ, ನಕಲಿಯುಗ ಎಂಬ ಹಣೆಪಟ್ಟಿ ಒಪ್ಪಿಯೇ ಒಪ್ಪುತ್ತದೆ.
ಮೊದಲ ಪದದ ಅರ್ಥವನ್ನು ತಿಳಿಯುವುದಕ್ಕೆ ಅಡ್ಜರ್ನ್ಮೆಂಟ್ ನೀಡಿ ಎರಡನೆಯ ಪದವಾದ ‘ಹರಿ’ಯನ್ನು ಅರ್ಥಮಾಡಿಕೊಳ್ಳುವ ಸಲುವಾಗಿ ಸಂಸ್ಕೃತ ನಿಘಂಟನ್ನು ರೆಫರ್ ಮಾಡಿದೆ. ‘ಹರಿ ಎಂದರೆ ಬ್ರಹ್ಮ, ವಿಷ್ಣು, ಪರಶಿವ, ರುದ್ರ’ ಎಂಬ ಅರ್ಥಗಳ ಸಾಲೇ ಕಂಡುಬಂದು ಗೊಂದಲ ಅಧಿಕವಾಯಿತು. ಬ್ರಹ್ಮನನ್ನು ನೆನೆದರೆ ಮಕ್ಕಳು ಹೆಚ್ಚು. ಈಗ ‘ಊರಿಗೊಂದೇ ಮಗು, ಸಮಾಜಕ್ಕೇ ನಗು’ ಎಂಬ ಕಾಲವಾದ್ದರಿಂದ ಬ್ರಹ್ಮನನ್ನು ನೆನೆದು antisocial element ಎಂದು ಕರೆಸಿಕೊಳ್ಳುವುದು ಸೂಕ್ತವಾಗದು. ವಿಷ್ಣುವನ್ನು ನೆನೆ ಎಂಬ ಅರ್ಥ ನೀಡಿದರೆ ಶಿವನ ಭಕ್ತರಿಗೆ ಕೋಪ; ಶಿವನೆಂದು ಅರ್ಥೈಸಿದರೆ ವಿಷ್ಣುಭಕ್ತರಿಗೆ ಕ್ರೋಧ. ಇವೆಲ್ಲವನ್ನೂ ಬಿಟ್ಟು ಅರ್ಥವನ್ನು ಕಾಣಹೋದರೆ ಭರ್ತೃಹರಿ ಎಂಬ ಅರ್ಥವೊಂದು ಮೂಡಿತು. ‘ನಾನು ಪ್ರೇಮಿಸಿದವಳು ಇನ್ನಾರನ್ನೋ ಪ್ರೀತಿಸಿದಳು. ಅವನು ಮತ್ತಾರನ್ನೋ ಪ್ರೀತಿಸಿದ. ಅವನ ಪ್ರೇಯಸಿ ಇನ್ನಾರದೋ ತೆಕ್ಕೆಯಲ್ಲಿ. ತತ್ಕಾರಣ ಅವನಿಗೂ, ಅವಳಿಗೂ, ಆ ಅವಳಿಗೂ, ಆ ಅವನಿಗೂ, ಮದನನಿಗೂ, ಕಡೆಗೆ ನನಗೂ ಧಿಕ್ಕಾರವಿರಲಿ’ ಎಂದ ಭರ್ತೃಹರಿಯನ್ನು love is materialistic ಎಂಬ ಈ ಕಾಲದಲ್ಲಿ ನೆನೆಯುವುದು ಸರಿಯಿದೆಯೆನಿಸಿದರೂ, ಈ ಯುಗ anti-Sanskrit ಮತ್ತು anti-ಸಂಸ್ಕೃತಿ ಆಗುತ್ತಿರುವುದರಿಂದ ಸಂಸ್ಕೃತಕವಿಯನ್ನು ನೆನೆಯೆಂದು ಹೇಳುವುದು ಕಲಿಗಾಲಕ್ಕೆ ತರವಲ್ಲವೆನಿಸಿ ಅರ್ಥಶೋಧವನ್ನು ಮುಂದುವರಿಸಿದೆ.
ಹರಿಯೆಂದರೆ ಇಂದ್ರ ಎಂಬ ಅರ್ಥ ಕಂಡುಬಂದಿತು. ನಮ್ಮಲ್ಲಿ ದೇವೇಂದ್ರನನ್ನು ಮೀರಿಸುವಂತಹ ಡ್ಯಾನ್ಸ್ ವೀಕ್ಷಕರೂ, ರಂಭೆ-ಊರ್ವಶಿಯರು ನಾಚುವಂತಹ ವಸ್ತ್ರಗಳನ್ನು ತೊಟ್ಟು ನರ್ತಿಸುವ ನರ್ತಕಿಯರೂ ಇರುವುದರಿಂದಲೂ, ಶ್ರೀಸಾಮಾನ್ಯರು ಅಂತಿರಲಿ, ಧರ್ಮಪ್ರವರ್ತಕರೂ ಅಹಲ್ಯೆಯ ಹಿಂದೆ ಹೋದ ಇಂದ್ರನಂತೆ ಇನ್ನಾರದೋ ಹಿಂದೆ ಹೋಗುವುದರಿಂದಲೂ ಇದೇ ಅರ್ಥ ಸರಿಯೆನ್ನಿಸಿತು. ಇಂದ್ರನದೂ ವಿವಾಹದ ಬಾಬ್ತಿಲ್ಲ, ಲಿವಿಂಗ್ ಟುಗೆದರ್ರಿಗೇ ಪ್ರಿಫರೆನ್ಸು. ‘ಕಲಿಯುಗದಲ್ಲಿ ಇಂದ್ರನನ್ನು ನೆನೆದರೆ’ ಎಂಬ ಅರ್ಥಕ್ಕೆ ego ಸಮ್ಮತಿಸಿತು. ಆದರೆ ಡುಂಡಿರಾಜರ ‘ಮತ್ತೆ ಇಂದ್ರ ಬಂದ; ಕೊಕ್ಕೊಕ್ಕೋ ಎಂದ; ಆದರೆ ಈ ಬಾರಿ ಜಾಣೆ ಅಹಲ್ಯ; ಮಾಡಿದಳು ಕೋಳಿಪಲ್ಯ’ ಎಂದು alter-ego ಎಚ್ಚರಿಸಿ ಇಂದ್ರನ ಅರ್ಥ ಅನರ್ಥಕ್ಕೆ ಎಡೆಯಾದೀತೆಂದಿತು.
ಅರ್ಥಾನ್ವೇಷಣೆ ಮುಂದುವರಿಯಿತು. ಹರಿ ಎಂದರೆ ಸೂರ್ಯ ಎಂಬುದು ವಿಟಮಿನ್-ಡಿ ಕೊರತೆಯಿರುವ ಕಾಲದಲ್ಲಿ ಸೂಕ್ತವೆನಿಸಿತು. ವೆಸ್ಟಿಂಡೀಸಿನ ಬಿಸಿಲುನಾಡಿನವರು ಒಪ್ಪಲಿಲ್ಲ. ಹರಿ ಎಂದರೆ ಕುದುರೆ ಎನ್ನುವುದನ್ನು ರೇಸ್ ಕೋರ್ಸ್ ಮಂದಿ ಮಾತ್ರ ಒಪ್ಪಿದರು. ಹರಿ ಎಂದರೆ ಕಪಿ ಎಂಬ ಅರ್ಥವು ಅತಿ ಸೂಕ್ತವೆನಿಸಿತು. ‘ಮನವೆಂಬ ಮರ್ಕಟ’ದ ಅಡಿಯಾಳುಗಳೇ ನಾವೆಲ್ಲ. ಆದ್ದರಿಂದ ಅದುವೇ ಸರಿ. ಬೆಳಗಾಗೆದ್ದು ಕಪಿಯನ್ನು ನೆನೆಯುವುದೇ ಇಂದಿನ ದಿನಚರಿ. ಕೊಂಬೆಯಿಂದ ಕೊಂಬೆಗೆ ಹಾರುವಂತೆಯೇ ಪಕ್ಷದಿಂದ ಪಕ್ಷಕ್ಕೆ ಹಾರುವ ರಾಜಕಾರಣಿಗಳೂ ಕಪಿಗಳೇ; ‘ಲವ್ ಕೆನ್ ನೈದರ್ ಬಿ ಕ್ರಿಯೇಟೆಡ್ ನಾರ್ ಡೆಸ್ಟ್ರಾಯ್ಡ್. ಇಟ್ ಕ್ಯಾನ್ ಓನ್ಲಿ ಬಿ ಶಿಫ್ಟೆಡ್ ಫ್ರಂ ಒನ್ ಬಾಯ್/ಗರ್ಲ್ ಟು ಅನದರ್ ಬಾಯ್/ಗರ್ಲ್’ ಎಂಬ ಪಡ್ಡೆಗಳೂ ಕಪಿಗಳೇ. ಹರಿಯೆನಲ್ ಕಪಿಯೆಂದೇ ಅರ್ಥವು ಎಂದು ತೀರ್ಮಾನಕ್ಕೆ ಬಂದೆ. ನನ್ನ ಮನವೂ ಮರ್ಕಟವಲ್ಲವೆ! ಕೂಡಲೆ ತೀರ್ಮಾನ ಬದಲಾಗಿ ಮತ್ತಷ್ಟು ಶೋಧಕ್ಕೆ ತೊಡಗಿತು.
ಹರಿಯೆಂದರೆ ಸೂರ್ಯ ಎಂದ ನಿಘಂಟೇ ಚಂದ್ರ ಎಂದೂ ನುಡಿಯಿತು. ಹಸಿರು ಎಂದ ನಿಘಂಟೇ ಕೆಂಪುಬೆರೆತ ಹಳದಿ ಎಂದೂ ಬಣ್ಣಿಸಿತು. ಕಪಿಯಲ್ಲದೆ ಗಿಣಿ (ರಾಜಕಾರಣಿಗಳ ಚುನಾವಣಾಸಮಯದ ಮಾತಿಗೆ ಅನ್ವಯ), ಕಪ್ಪೆ (ಅವರದೇ ಚುನಾವಣಾನಂತರದ ಸಮ್ಮಿಶ್ರಸರ್ಕಾರ ರಚನಾಸಮಯದ ನೆಗೆತಬುದ್ಧಿ), ಸರ್ಪ (ಡಿಟೋ ವಿಷಕಾರುವ ಗುಣ) ಇವೆಲ್ಲವನ್ನು ದಿನನಿತ್ಯವೂ ನೆನೆದರೆ ನಾವು patience ಕಳೆದುಕೊಂಡು patient ಆಗುವುದು ಖಚಿತವಾದ್ದರಿಂದ ಸಕಲಾರ್ಥಗಳನ್ನು for future musings ಬದಿಗಿಟ್ಟು ‘ನಾಮ’ ಪದದ ಅರ್ಥದತ್ತ ಗಮನ ಹೊರಳಿಸಿದೆ.
* * *
ನಾಮ ಎಂದರೆ ಹೆಸರು. ಒಪ್ಪೋಣ. ಹರಿಯ ನಾಮವೆಂದಾಗ ಗಿಳಿ, ಕಪ್ಪೆ, ಕುದುರೆ, ಸಿಂಹಗಳಿಗೆ ಮೊದಲು ನಾವೇ ನಾಮಕರಣ ಮಾಡಿ ಅನಂತರ ನೆನೆಯುವ ಕೈಂಕರ್ಯಕ್ಕೆ ತೊಡಗಬೇಕು. ನಾಮ ಎಂದರೆ ತಿಲಕ ಎಂಬ ಅರ್ಥವನ್ನು ತೆಗೆದುಕೊಂಡರೆ ವಿಷ್ಣುವಿನ ಮುದ್ರೆಯೋ, ಶಿವನ ವಿಭೂತಿಯೋ ತಿಳಿಯಲಿಲ್ಲ. ಬ್ರಹ್ಮನ ನಾಲ್ಕೂ ಹಣೆಗಳ ಮೇಲೆ ಒಂದೇ ವಿಧದ ತಿಲಕ ಇರುವುದೋ ಅಥವಾ ಬೇರೆಬೇರೆಯೋ ಎಂದು ತಿಳಿಯಲು ಅತ್ತ ತಿರುಗಿರುವ ಕಾರಣ ಮರೆಯಾಗಿರುವ ಹಣೆ ಅಡ್ಡಿಯಾಗುತ್ತದೆ. ಈ ಪದದ ಬಗ್ಗೆಯೂ ಅರ್ಥದ ಇತ್ಯರ್ಥವಾಗಲಿಲ್ಲ.
ಮುಂದಿನ ಪದವಾದ ‘ನೆನೆದರೆ’ ಜರಗನಹಳ್ಳಿ ಶಿವಶಂಕರರು ರಚಿಸಿದ ‘ಬಹಳ ನೆನೆಯುತ್ತಿದ್ದೇನೆ; ನನಗೆ ಬೇಕಾದ್ದು ಕೊಡೆ’ ಎಂಬ ಹನಿಗವನವನ್ನು ಜ್ಞಾಪಿಸಿತು. ನಾಮಕ್ಕೆಂದು ಗಂಧವನ್ನೋ ಉಂಡೆಯನ್ನೋ ನೆನೆಸುವುದು ಸಹಜ. ‘ನಾಮವ ನೆನೆದರೆ’ ಎಂದರೆ ನಾಮದ ಉಂಡೆಯನ್ನು ನೆನೆಯಿಸಿದರೆ ಎಂದು ಅರ್ಥೈಸಬಹುದು. ಅಂತೆಯೇ ‘ಹರಿನಾಮ’ ಪದದ ಅರ್ಥಗೊಂದಲ ಬಗೆಹರಿದರೆ ಆ ಹೆಸರನ್ನು ಜ್ಞಾಪಿಸಿಕೊಳ್ಳುವುದು ಎಂದಾಯ್ತು. ಆದರೆ ಹರಿ ಮತ್ತು ನಾಮಗಳು ಅರ್ಥವಾಗುವವರೆಗೆ ಇದು ಅರ್ಥವಾಗುವಂತಿಲ್ಲ.
* * *
ಕುಲ, ಕೋಟಿಗಳು, ಉದ್ಧಾರಗಳ ಬಗ್ಗೆ ಬಹಳ ಗೊಂದಲವಾಗದಿದ್ದರೂ ‘ರಂಗ’ ಮತ್ತೆ ಪ್ರಶ್ನೆಗಳನ್ನೆಬ್ಬಿಸಿತು. ಯಾರೀ ರಂಗ? ಸಾರ್ವಜನಿಕ ವಾಹಿನಿಯ ಸರ್ವಜ್ಞನ ವಂಶಜರಾದ ರಂಗನಾಥರೇ? ಬೆಕ್ಕು ಮನೆಗಳನ್ನು ಬದಲಾಯಿಸುವಂತೆ ಟಿವಿ ಚಾನಲ್ಲುಗಳನ್ನು ಬದಲಾಯಿಸಿದ ಮತ್ತೊಬ್ಬ ರಂಗನಾಥರೇ? ವಿಶ್ವರಂಗಕ್ಕೇ ನಾಥನಾದ ಜಗನ್ನಿಯಾಮಕನೆ? ಈ ರೀತಿಯಾದ Self-irritationಗೆ ಒಳಗಾಗುವ ಬದಲು ಎಲ್ಲವನ್ನು ಬಲ್ಲ ಶ್ರೀನಿವಾಸಗುರು ಉರುಫ್ ಬಹುವಿದ್ಯಾದ್ರೋಣಾಚಾರ್ಯ ಶ್ರೀನಿವಾಸಾಚಾರ್ಯ ಅಲಿಯಾಸ್ ಸೀನುವನ್ನೇ ‘ಸಾಲಿನರ್ಥವನರುಹು ಗುರುವೇ’ ಎಂದೆ.
‘ಸಮಯ ಸಂದರ್ಭಗಳಿಗೆ ಅನುಗುಣವಾಗಿ ಅರ್ಥಬದಲಾವಣೆ ಹೊಂದುವುದೇ ಶ್ರೇಷ್ಠಸಾಹಿತ್ಯದ ಕುರುಹು. ಕಲಿ ಎಂದರೆ ಹಿಂದಿಯ ಕಲೀ ಅರ್ಥಾತ್ ಮೊಗ್ಗು ಎಂದರ್ಥ. ಕಲಿಯುಗ ಎಂದರೆ ಇನ್ನೂ ಅರಳುತ್ತಿರುವ ಕಾಲ – developing period ಆ ಅವಧಿಯಲ್ಲಿ hurry – ಆತುರವನ್ನು ಹೊಂದಿರಬೇಕು. ಚಲನೆ ನಿಧಾನವಾದರೆ ಇನ್ನಾರೋ ಡೆವಲಪ್ ಆಗಿಬಿಡುವುದರಿಂದ hurry is important. ನಾಮ ಎಂದರೆ ಟೋಪಿ ಹಾಕುವುದು. ಸರ್ವಕಾಲವೂ ಪ್ರಾಮಾಣಿಕವಾಗಿದ್ದರೆ ಕಲಿಗಾಲದಲ್ಲಿ ಬದುಕಲು ಕಷ್ಟವಾಗುವುದರಿಂದ a judicious mixture of hurry and ನಾಮ ಬಳಸುವವರ ಕುಲಗಳೇ ಕೋಟಿಗಳನ್ನು ಗಳಿಸಿ ಉದ್ಧಾರವಾಗಿರುವುದು. ಇಂದಿಗೆ ಅದು ರಂಗಾ ಅಲ್ಲ; wrong? – ಎಂಬ ಕೊಶ್ಚೆನಿಂಗ್ ವರ್ಡು. hurry, ನಾಮವೇ ಚೆಂದ. ಅದ ನಂಬಿಕೋ ಕಂದ’ ಎಂದ ಸೀನು.
ನೀವೇನಂತೀರಿ?