ವೇದಾಂತದರ್ಶನಕ್ಕಿಂತ `ಸೆಕ್ಯುಲರ್’ ಆದ ಸಿದ್ಧಾಂತ ಜಗತ್ತಿನಲ್ಲಿ ಬೇರೆ ಇಲ್ಲ.
ಪಾವಿತ್ರ್ಯವು ಪ್ರತಿವ್ಯಕ್ತಿಯ ಸಹಜಸ್ವರೂಪ ಎಂಬುದನ್ನು ಒಪ್ಪದಿರುವ ಯಾವ ಪ್ರಸ್ಥಾನವೂ ಹಿಂದೂಧರ್ಮದ ಕಕ್ಷೆಯಲ್ಲಿ ಇಲ್ಲ. ಆತ್ಮಬಲವು ಚಿಮ್ಮಬಲ್ಲದ್ದು ಸತ್ಯಾರಾಧನೆಯಿಂದ ಮಾತ್ರ.
ಈಗ್ಗೆ ಕೆಲವು ದಶಕಗಳ ಹಿಂದೆ ಎಲ್ಲೆಡೆ ವಿರಾಜಿಸುತ್ತಿದ್ದ ಸ್ವಾಮಿ ವಿವೇಕಾನಂದರ ಚಿತ್ರದ ಕೆಳಗೆ ಇರುತ್ತಿದ್ದ ವರ್ಣನೆ “ದಿ ಹಿಂಡೂ ಮಾಂಕ್ ಆಫ್ ಇಂಡಿಯಾ” ಎಂದು. ದೇಶವಿದೇಶಗಳವರು ಸ್ವಾಮಿಜೀಯವರನ್ನು ಗುರುತಿಸಿದ್ದುದು ಹಾಗೆಯೇ. ಅದು ಅನ್ವರ್ಥವೂ ಆಗಿತ್ತು. ಸ್ವಾಮಿಜೀಯವರ ಮುಖ್ಯ ಸಂದೇಶವೆಂದರೆ ಹಿಂದೂಧರ್ಮದ ಔಜ್ಜ್ವಲ್ಯವನ್ನು ಇಡೀ ವಿಶ್ವದ ಗಮನಕ್ಕೆ ತರಬೇಕೆಂಬುದು ಮತ್ತು ಆ ಭವ್ಯತೆಯ ಮನವರಿಕೆಯ ಆಧಾರದ ಮೇಲೆ ಭಾರತವು ಅದ್ಯತನಕಾಲದ ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ತನ್ನ ಜಗದ್ಗುರುಸ್ಥಾನವನ್ನು ಮರಳಿ ಪಡೆದು ಕೊಳ್ಳಬೇಕೆಂಬುದು.
ವಾಸ್ತವವಾಗಿ `ಹಿಂದೂ’ ಎಂಬ ಶಬ್ದವು ಭಾರತದೊಳಗಿನ ಒಂದು ಜನಾಂಗದ ಸೂಚಕವಾಗಿ ಬಳಕೆಯಾಗತೊಡಗಿದುದು ಈಗ್ಗೆ ನೂರು ವರ್ಷಗಳ ಹಿಂದಿನಿಂದ ಅಷ್ಟೆ. ಭಾರತದೊಳಗಿನ ಮುಸ್ಲಿಮರನ್ನು ಹಿಂದೂಗಳೆಂದೇ ಎಲ್ಲೆಡೆ ಕರೆಯುವುದೂ ವಾಡಿಕೆಯಾಗಿತ್ತು. ಅಮೆರಿಕದ `ಟೈಮ್’ ಪತ್ರಿಕೆ ಮಹಮ್ಮದಾಲಿ ಜಿನ್ನಾರನ್ನು `ಮುಸ್ಲಿಂಲೀಗಿನ ಹಿಂದೂ ಮುಖಂಡ’ ಎಂದು ವರ್ಣಿಸಿತ್ತು. ೧೯೩೫ರಲ್ಲಿ ಇಂದಿರಾಗಾಂಧಿ ಯೂರೋಪಿಗೆ ಹೋಗಿದ್ದಾಗ ಅವರು ಗಮನಿಸಿದುದು ಅಲ್ಲಿಯ ಜನತೆ ಭಾರತ ದೊಳಗಿನ ಮುಸ್ಲಿಮರನ್ನು ಹಿಂದೂಗಳೆಂದೇ ಕರೆಯು ತ್ತಿದ್ದರು ಎಂಬುದು. ಈ ಪರಿಭಾಷೆಯು ಬದಲಾಗ ತೊಡಗಿದುದು ಪ್ರತ್ಯೇಕ ಪಾಕಿಸ್ತಾನ ಬೇಡಿಕೆ ಆರಂಭವಾದ ಮೇಲೆ.
ಸರ್ವಗ್ರಾಹಿತೆ
ಇದರ ಹಿನ್ನೆಲೆಯನ್ನು ಸ್ವಾಮಿಜೀ ಮತ್ತೆಮತ್ತೆ ಸ್ಪಷ್ಟಪಡಿಸುತ್ತಿದ್ದರು. ಹಿಂದೂಧರ್ಮವೆಂಬುದು ಆತ್ಮಸಾಕ್ಷಾತ್ಕಾರಪ್ರಕ್ರಿಯೆಯೇ ಹೊರತು ಯಾವುದೋ ಹರಳುಗಟ್ಟಿದ ಸಿದ್ಧಾಂತಗಳ ವಾಚಕವಲ್ಲ – ಎಂದು ಅವರು ಒತ್ತಿಹೇಳುತ್ತಿದ್ದರು. ಹೀಗಾಗಿ ದೇವತೆಗಳ ಬಾಹುಳ್ಯವಾಗಲಿ ಪ್ರತ್ಯೇಕ ವೈಯಕ್ತಿಕ ಶ್ರದ್ಧೆ-ವಿಶ್ವಾಸಗಳಾಗಲಿ ಹಿಂದೂಧರ್ಮಕ್ಕೆ ಎಂದೂ ಸಮಸ್ಯೆಗಳೆನಿಸಿರಲಿಲ್ಲ. ನಾಸ್ತಿಕತೆಯ ಮಂಡನೆಯನ್ನೂ ವರ್ಜ್ಯವೆಂದು ಹಿಂದೂಧರ್ಮ ಭಾವಿಸಲಿಲ್ಲ. ಅನ್ಯ ವಿದೇಶಮೂಲದ ಮತಗಳಲ್ಲಿ ಪ್ರಚುರವಿದ್ದ ಬಹಿಷ್ಕರಣದ ಆವಶ್ಯಕತೆಯೇ ಇಲ್ಲಿ ಬೀಳಲಿಲ್ಲ. ಅನ್ಯ ನೆಲೆಗಳಲ್ಲಿ ನಡೆದಂತಹ ಧರ್ಮವಿಷಯಕ ಯುದ್ಧಗಳು ಭಾರತದಲ್ಲಿ ನಡೆದುದಿಲ್ಲ. ಇದನ್ನೆಲ್ಲ ಪರಿಶೀಲಿಸುವಾಗ ಹಿಂದೂಧರ್ಮದಷ್ಟು ಉದಾರವಾದ ಧರ್ಮ ಬೇರೆಯಿಲ್ಲವೆಂದು ಒಪ್ಪಬೇಕಾಗುತ್ತದೆ. ಇದಕ್ಕಾಗಿಯೇ ಹಿಂದೂಧರ್ಮವು ಅನನ್ಯವೆಂದು ಸ್ವಾಮಿಜೀ ಸಾರಿದುದು. ವಿದೇಶಮೂಲದ ಮತಗಳ ಆಧಾರಪಲ್ಲವಿ `ಇದನ್ನು ಕಡ್ಡಾಯವಾಗಿ ನಂಬಿರಿ, ಇಲ್ಲವಾದರೆ ಕತ್ತಿಯನ್ನು ಎದುರಿಸಿರಿ’ ಎಂದು. ಹಿಂದೂಧರ್ಮದ ಆವಾಹನೆ `ನೀವೂ ಬದುಕಿರಿ, ಇತರರನ್ನೂ ಬದುಕಗೊಡಿರಿ’ ಎಂಬುದು. ಉಪನಿಷತ್ತುಗಳು ವಿಶ್ವದಲ್ಲಿಯೆ ಅದ್ವಿತೀಯವಾದ ಜ್ಞಾನಭಂಡಾರವಾಗಿದ್ದರೂ ಅಲ್ಲಿಯೂ ಸ್ವರಭಾರ ಇರುವುದು ಸ್ವೀಯ ಜಿಜ್ಞಾಸೆ ಮತ್ತು ಸಾಕ್ಷಾದನುಭೂತಿಯ ಮೇಲೆಯೇ. ಶ್ರೇಷ್ಠ ಐರೋಪ್ಯ ಸಂಸ್ಕೃತಜ್ಞ ಮೋನಿಯರ್ ವಿಲಿಯಮ್ಸ್ ಕೂಡಾ ಗಮನಿಸಿರುವುದು “ಹಿಂದೂಧರ್ಮದ ವಿಶಿಷ್ಟತೆಯೆಂದರೆ ಅದರ ಸರ್ವಗ್ರಾಹಿತೆ. ಅದರ ವಿಶೇಷ ಶಕ್ತಿವಂತಿಕೆ ಇರುವುದು ಅದು ಎಲ್ಲ ಮನುಷ್ಯಸ್ವಭಾವ ವೈಶಿಷ್ಟ್ಯಗಳಿಗೂ ಆಸ್ಪದ ನೀಡಿರುವುದರಲ್ಲಿ” – ಎಂದು. ಆಚಾರ್ಯ ಜೆ.ಬಿ. ಕೃಪಲಾನಿ ಹೀಗೆಂದಿದ್ದಾರೆ: “ಪಾಶ್ಚಾತ್ಯರದು ನಿಜಾರ್ಥದಲ್ಲಿ ಸಹಿಷ್ಣುತೆಯೇ ಅಲ್ಲ. ಏಕೆಂದರೆ ಅದಕ್ಕೆ ಚೋದನೆ ನೀಡಿರುವುದು ವ್ಯಾವಹಾರಿಕ ಅನಿವಾರ್ಯತೆ. ಕ್ಯಾಥೊಲಿಕರೂ ಪ್ರಾಟೆಸ್ಟೆಂಟರೂ ಒಬ್ಬರ ಕುತ್ತಿಗೆಯನ್ನು ಇನ್ನೊಬ್ಬರು ಕುಯ್ದು ಆಯಾಸ ಗೊಂಡಿರುವುದರಿಂದಷ್ಟೆ ಸಹಿಷ್ಣುತೆಯ ಮಾತನಾಡುತ್ತಾರೆ.”
ಹಿಂದೂಧರ್ಮ: ಸ್ವರೂಪದಲ್ಲಿಯೆ ವೈಶ್ವಿಕ
`ಇಡೀ ವಿಶ್ವವನ್ನು ಉದಾತ್ತಗೊಳಿಸೋಣ’ (`ಕೃಣ್ವಂತೋ ವಿಶ್ವಂ ಆರ್ಯಂ’) ಎಂಬ ಘೋಷಣೆ ಪ್ರಾಚೀನ ಋಷಿಗಳದೇ ಹೊರತು ಆಧುನಿಕ ಸಾಮರಸ್ಯಾನ್ವೇಷಕರದೇನಲ್ಲ.
ಸನಾತನಮಾರ್ಗಿ ಸಂತರಾದ ರಾಮಾನಂದರಿಗೆ ಮುಸ್ಲಿಮನಾದ ಕಬೀರನನ್ನು ಶಿಷ್ಯನನ್ನಾಗಿ ಸ್ವೀಕರಿಸುವುದು ಸಮಸ್ಯೆಯೇ ಆಗಲಿಲ್ಲ. ಪ್ರತಿಯಾಗಿ ಕಬೀರನನ್ನು ದಂಡಿಸಹೊರಟವನು ಮುಸ್ಲಿಂ ಸುಲ್ತಾನ ಸಿಕಂದರ ಲೋಧಿ. ಮೂಲತಃ ಮುಸ್ಲಿಮನಾಗಿದ್ದರೂ ವೈಷ್ಣವದೀಕ್ಷೆ ಪಡೆದಿದ್ದ ಹರಿದಾಸನ ಶವಯಾತ್ರೆಗೆ ಸ್ವಯಂ ಚೈತನ್ಯ ಮಹಾಪ್ರಭುವೇ ಹೆಗಲುಕೊಟ್ಟ.`ದೇವರ ಬಗೆಗೆ ಭೀತರಾಗಿರಿ’ ಎನ್ನುತ್ತವೆ ಅನ್ಯಮತಗಳು. `ಭಗವಂತನನ್ನು ಪ್ರೀತಿಸಿ’ ಎನ್ನುತ್ತದೆ ಹಿಂದೂಧರ್ಮ. ಹಿಂದೂ ಧರ್ಮವು ಆಧಾರತತ್ತ್ವವಾಗಿ ಪ್ರತಿಪಾದಿಸಿರುವ ಕರ್ಮಸಿದ್ಧಾಂತ ಕೂಡಾ ವೈಶ್ವಿಕ-ಸಾರ್ವತ್ರಿಕ ಸ್ವರೂಪದ್ದೇ ಆಗಿದೆ.
ಹಿಂದೂಧರ್ಮವು ಆಧ್ಯಾತ್ಮಿಕ ತತ್ತ್ವಗಳ ಮೇಲೆ ದೃಢವಾಗಿ ಆಧಾರಗೊಂಡಿರುವ ಕಾರಣದಿಂದ ಈಚಿನ ಕಾಲದ ಮಾನಸಿಕ ಗೊಂದಲಗಳ ನಡುವೆ ಹಿಂದೂ ಜನಾಂಗದಲ್ಲಿ ಪುನಶ್ಚೇತನ ತರಬಲ್ಲದ್ದು ಸನಾತನ ಹಿಂದೂಧರ್ಮವೇ – ಎಂಬುದು ಸ್ವಾಮಿಜೀಯವರ ಅವಿಚಲ ವಿಶ್ವಾಸವಾಗಿತ್ತು. ಈ ನಿಲವಿನ ಅನಿವಾರ್ಯತೆಯನ್ನೂ ಸತರ್ಕತೆಯನ್ನೂ ವರ್ಷಗಳುದ್ದಕ್ಕೂ ತಮ್ಮ ಪ್ರತಿಪಾದನೆಗಳಲ್ಲಿ ಅವರು ಸಮರ್ಥಿಸಿದರು. ತಾತ್ತ್ವಿಕವಾಗಿ ಮಾತ್ರವಲ್ಲದೆ ವ್ಯಾವಹಾರಿಕವಾಗಿಯೂ ಇದಕ್ಕೆ ಪರ್ಯಾಯವಿಲ್ಲವೆಂದು ಅವರು ಸ್ಫುಟಗೊಳಿಸಿದರು.
ಮಿಷನರಿಗಳ ನಡವಳಿ ಕುರಿತು ಮಾತನಾಡುವಾಗ ಸ್ವಾಮಿಜೀ ಮೆರೆದ ಪ್ರಖರತೆಯೇ ಅವರು ಹಿಂದೂಧರ್ಮದ ಉಜ್ಜೀವನಕ್ಕೆ ಕಟಿಬದ್ಧರಾಗಿದ್ದುದನ್ನು ಸೂಚಿಸುತ್ತದೆ. ಸ್ವಾಮಿಜೀಯವರನ್ನು (ಜನ್ಮತಃ ಹಿಂದೂ ಅಲ್ಲದ ನಿವೇದಿತಾರಿಗೆ ದೀಕ್ಷೆ ಕೊಟ್ಟ ಕಾರಣದಿಂದ) `ಮ್ಲೇಚ್ಛ’ರೆಂದು ಸನಾತನಿಗಳು ನಿಂದಿಸಿದರೂ, ಬ್ರಹ್ಮಸಮಾಜಿಗಳೂ ಪಂಡಿತಾ ರಮಾಬಾಯಿ ಅನುಯಾಯಿಗಳೂ ಅಸಭ್ಯವಾಗಿ ನಿಂದೆ ಮಾಡಿ ದಾಗಲೂ, ಸ್ವಾಮಿಜೀ ದಿಟ್ಟವಾಗಿ ಘೋಷಿಸಿದುದು ತಾವು ಹಿಂದೂ ಎನ್ನಲು ತಮಗೆ ಯಾರಿಂದಲೂ ಅನುಮೋದನೆ ಬೇಕಿಲ್ಲ – ಎಂದು.
ಧರ್ಮವೇ ಚೈತನ್ಯದ ಮೂಲ
“ನಮ್ಮ ರಾಷ್ಟ್ರಜೀವನಕ್ಕೆ ಮುಖ್ಯ ಅವಲಂಬವಾಗಿರುವುದು ನಮ್ಮ ಧರ್ಮವೇ. ನಮ್ಮ ಚೈತನ್ಯದ ಮೂಲವಾಗಿರುವುದೂ ನಮ್ಮ ಧರ್ಮವೇ. ಹೀಗಿರುವಾಗ ನಮ್ಮ ಧರ್ಮವು ಸರ್ವಸಮರ್ಪಕವೇ, ದೋಷಮುಕ್ತವೇ? – ಮೊದಲಾದ ಪ್ರಶ್ನೆಗಳೇ ಅಸಂಗತವಾಗುತ್ತವೆ. ಅದರ ಪರಾಮರ್ಶನೆ ಹೇಗಾದರೂ ಆಗಲಿ; ನಮಗೆ ಇರುವ ಗಟ್ಟಿಯಾದ ಆಸರೆ ಅದು ಮಾತ್ರವೇ. ನೀವು ಎಂದಿಗೂ ಅದರ ಕಕ್ಷೆಯಿಂದ ಹೊರಹೋಗಲಾರಿರಿ. ನನ್ನ ಧರ್ಮದಲ್ಲಿ ನನಗೆ ಇರುವಂತಹ ಶ್ರದ್ಧೆ ನಿಮಗೆ ಇರದಿದ್ದರೂ ಪರವಾಗಿಲ್ಲ; ಈ ಧರ್ಮಕ್ಕೆ ನೀವು ಸಂಬದ್ಧರಾಗಿರಬೇಕಾದುದು ಅನಿವಾರ್ಯ. ಅದನ್ನು ನೀವು ನಿರಾಕರಿಸಿದಲ್ಲಿ ನಾಶಗೊಳ್ಳುತ್ತೀರಿ, ಅಷ್ಟೆ. ಸನಾತನಧರ್ಮವನ್ನು ಆಧರಿಸಿರುವುದೇ ನಮ್ಮ ಜನಾಂಗದ ಬದುಕು. ಆದುದರಿಂದ ಈ ಧರ್ಮವನ್ನು ನಾವು ಬಲಪಡಿಸಲೇಬೇಕಾಗಿದೆ.”
ಧರ್ಮದಿಂದ ನಮಗೆ ಚೇತರಿಕೆ ದೊರೆಯುವುದು ಹೇಗೆ? ವಾದಗಳ ವಿಜೃಂಭಣೆಯಿಂದಲ್ಲ; ಪ್ರತಿಯಾಗಿ ತತ್ತ್ವವನ್ನು ಸಾಕ್ಷಾತ್ಕಾರ ಮಾಡಿಕೊಳ್ಳುವುದರಿಂದ ಮತ್ತು ಅದನ್ನು ವ್ಯಾವಹಾರಿಕ ಬದುಕಿಗೆ ಅನ್ವಯಿಸುವುದರಿಂದ. ಧರ್ಮವು ಜೀವಂತ ಗೊಳ್ಳಬೇಕಾಗಿದೆ, ಗತಿಶೀಲವಾಗಬೇಕಾಗಿದೆ.
ಐತಿಹಾಸಿಕಾದಿ ಕಾರಣಗಳಿಂದ ಜನರ ರೀತಿನೀತಿಗಳಲ್ಲಿ ಮನೆಮಾಡಿದ್ದ ದೌರ್ಬಲ್ಯಗಳ ಪೂರ್ಣ ಅರಿವಿದ್ದವರು ಸ್ವಾಮಿಜೀ. ಹೀಗಿದ್ದೂ ಅವರು ಹಿಂದೂಧರ್ಮಮೂಲದ ಸತ್ತ್ವವಂತಿಕೆಯನ್ನು ಬಲವಾಗಿ ಎತ್ತಿಹಿಡಿದರು. ಉದಾತ್ತ ತತ್ತ್ವಗಳ ಗುಣಗಾನ ಮಾಡಿದರೆ ಸಾಲದು; ಆ ತತ್ತ್ವಗಳು ದೈನಂದಿನ ಜೀವನದಲ್ಲಿ ಪ್ರತಿಫಲಿಸುವಂತೆ ಆಗಬೇಕು. ಇದನ್ನು ಅನುಕೂಲಗೊಳಿಸಲು ಹಿಂದೂಧರ್ಮದ ನಿಜಸ್ವರೂಪವನ್ನು ಜನಸಾಮಾನ್ಯರಿಗೆ ಸರಳವಾಗಿ ಮತ್ತು ಗ್ರಾಹ್ಯರೀತಿಯಲ್ಲಿ ತಿಳಿಯಪಡಿಸಬೇಕು. ಈ ಸಂವಹನರೀತಿಯ ಆವಶ್ಯಕತೆಯನ್ನು ಸ್ವಾಮಿಜೀ ಮೊದಮೊದಲೇ ಗ್ರಹಿಸಿ ಅಳವಡಿಸಿಕೊಂಡಿದ್ದುದು ಅವರ ದೃಷ್ಟಿಸೌಷ್ಠವವನ್ನು ನಿದರ್ಶನಪಡಿಸುತ್ತದೆ.
ವೇದಾಂತ: ಸಂಭ್ರಮಾರ್ಹ
ಇದರೊಡಗೂಡಿದ ಅವರ ಇನ್ನೊಂದು ಮುಖ್ಯ ಧೋರಣೆಯನ್ನೂ ಗಮನಿಸಬೇಕು. ಅವರ ದೃಷ್ಟಿಯಲ್ಲಿ ವೇದಾಂತದರ್ಶನವೆಂಬುದು ಹಲವು ತತ್ತ್ವಗಳ ಮತ್ತು ಕಟ್ಟಳೆಗಳ ಒಟ್ಟಿಲು ಮಾತ್ರವಾಗಿರಲಿಲ್ಲ. ಅವರಿಗೆ ವೇದಾಂತವು ಕಂಡದ್ದು ಒಂದು ಸಂಭ್ರಮಾರ್ಹ ಜೀವನವಿಲಾಸವಾಗಿ, ಸತತ ಉಲ್ಲಾಸದ ಸ್ರೋತವಾಗಿ.
ಅದಕ್ಕೆ ಹಿಂದೆ ಇದ್ದ ಪರಿಸರದಲ್ಲಾದರೋ ವೇದಾಂತವು ಜಟಿಲವಾದುದು, ಅದು ಎಲ್ಲರಿಗೂ ಹೇಳಿದಂತಹದಲ್ಲ, ಅದು ರಹಸ್ಯಗಳಿಂದ ಕೂಡಿರುವುದು, ಇತ್ಯಾದಿ. ಅದಕ್ಕೆ ವ್ಯತಿರಿಕ್ತವಾಗಿ ಸ್ವಾಮಿಜೀ ಹೇಳಿದುದು ವೇದಾಂತವು ಒಂದು ಎಳೆಮಗುವಿಗೂ ಕೂಡಾ ಅರ್ಥವಾಗುವಂತಿರಬೇಕು – ಎಂದು.
ಹಿಂದೂಧರ್ಮವು ಅಧ್ಯಾತ್ಮಾಧಾರಿತವೂ ಅನುಭೂತ್ಯಾಧಾ ರಿತವೂ ಆಗಿರುವ ಕಾರಣದಿಂದಲೇ ಅದು ಜಗತ್ತಿನ ಎಲ್ಲ ಪ್ರಾಮಾಣಿಕ ಸಾಧನಮಾರ್ಗಗಳೂ ಸ್ವೀಕಾರ್ಯ ಎಂದಿರುವುದು. `ಏಕಂ ಸದ್ ವಿಪ್ರಾ ಬಹುಧಾ ವದನ್ತಿ’ ಎಂಬ ಆರ್ಷೋಕ್ತಿಯಂತೂ ವಿಶ್ವವಿಶಾಲ ಹರಹಿನದಾಗಿದೆ; ಮತ್ತು ಬೇರೆಬೇರೆ ಸ್ತರಗಳ ಅಧಿಕಾರಿಭೇದಗಳನ್ನೂ ಮಾನ್ಯಮಾಡಿದೆ. ಈ ಸಾಕ್ಷಾತ್ಕರಣದಿಂದ ಹೊಮ್ಮುವ ಇನ್ನೊಂದು ಪರಮಲಾಭವೆಂದರೆ ನಿರ್ಭೀತಿ.
ವೇದಾಂತದರ್ಶನಕ್ಕಿಂತ `ಸೆಕ್ಯುಲರ್’ ಆದ ಸಿದ್ಧಾಂತ ಜಗತ್ತಿನಲ್ಲಿ ಬೇರೆ ಇಲ್ಲ. ಪಾವಿತ್ರ್ಯವು ಪ್ರತಿವ್ಯಕ್ತಿಯ ಸಹಜಸ್ವರೂಪ ಎಂಬುದನ್ನು ಒಪ್ಪದಿರುವ ಯಾವ ಪ್ರಸ್ಥಾನವೂ ಹಿಂದೂಧರ್ಮದ ಕಕ್ಷೆಯಲ್ಲಿ ಇಲ್ಲ. ಆತ್ಮಬಲವು ಚಿಮ್ಮಬಲ್ಲದ್ದು ಸತ್ಯಾರಾಧನೆಯಿಂದ ಮಾತ್ರ.
“ಆಧ್ಯಾತ್ಮಿಕ ಭೂಮಿಕೆಯಲ್ಲಿ ಜಗತ್ತಿನ ಯಾವ ದೇಶವೂ ಹಿಂದೂಗಳನ್ನು ಸರಿಗಟ್ಟಲಾರದು” (“On metaphysical lines, no nation on earth can hold a candle to the Hindus”) – ಇಂತಹ ಉದ್ಗಾರಗಳಿಂದ ಸ್ವಾಮಿಜೀ ಬೋಧೆಗಳು ನಿಬಿಡವಾಗಿವೆ.
ಚಿಕಾಗೋ ಸಮ್ಮೇಳನದಲ್ಲಿ ಸ್ವಾಮಿಜೀ ಹಿಂದೂಧರ್ಮದ ಪ್ರತಿನಿಧಿಯಾಗಿ ಪಾಲ್ಗೊಂಡಿದ್ದುದಷ್ಟೆ ಅಲ್ಲದೆ ಅವರು ಸಮ್ಮೇಳನದಲ್ಲಿಯೂ ಅನಂತರವೂ ಪ್ರತಿಪಾದಿಸಿದುದು ವೇದಾಂತದರ್ಶನವನ್ನೇ. ಈ ಎರಡೂ ಕಾರಣಗಳಿಂದಲೇ ಸ್ವಾಮಿಜೀ ಪಾಶ್ಚಾತ್ಯ ಜಗತ್ತಿನಾದ್ಯಂತ `ಹಿಂಡೂ ಮಾಂಕ್ ಆಫ್ ಇಂಡಿಯಾ’ ಎಂಬ ವರ್ಣನೆಗೆ ಪಾತ್ರರಾದದ್ದು.
ಎಸ್.ಆರ್.ಆರ್.
[ಲೇಖನಮಾಲೆ ಮುಗಿದಿದೆ.]