ಈ ಪ್ರಪಂಚದಲ್ಲಿ ಗಂಡನನ್ನು ಕಳೆದುಕೊಂಡು ಇರಲು ಸಾಧ್ಯವಿಲ್ಲ. ಗಂಡನ ಅಂತಿಮ ಸಂಸ್ಕಾರ ಅಂದರೆ ಚಿತೆಯ ಮೇಲೆ ಉರಿದು ಭಸ್ಮವಾಗುವ ದೇಹ. ಮತ್ತು ಆ ಕೆಟ್ಟ ದೃಶ್ಯದ ನೆನಪು ಮತ್ತು ಒಂದಿನಿತೂ ಕನಿಕರವಿಲ್ಲದೆ ವೈಧವ್ಯದ ವೇಷ ತೊಡಿಸುವ ನಿಷ್ಕರುಣ ಹೆಂಗಸರ ಶಿಕ್ಷೆ. ಅದರಿಂದ ತಪ್ಪಿಸಿಕೊಳ್ಳಲು ಮನಸ್ಸು ದಾರಿ ಹುಡುಕುತ್ತಿದೆಯೆ? ದೇಹದಾನ ಕೊಟ್ಟುಬಿಟ್ಟರೆ ಇವು ಯಾವುದೂ ಇಲ್ಲದೇ ಯಜಮಾನರು ಎಲ್ಲಿಗೋ ತಿರುಗಾಟಕ್ಕೆ ಹೋಗಿದ್ದಾರೆ ಎಂಬ ಭ್ರಮೆಯಲ್ಲಿ ಕಾಲ ಕಳೆಯಬಹುದಲ್ಲ ಎಂದು ಕಂಡುಕೊಂಡ ಸುಖದ ದಾರಿಯೇ? ಯಾವುದೂ ಅರ್ಥವಾಗುತ್ತಿಲ್ಲ.
ಆಸ್ಪತ್ರೆಯ ವಾರ್ಡಿನಲ್ಲಿ ಮಲಗಿಕೊಂಡಿರುವ ಗಂಡ ಯಶೋಧರನನ್ನು ಮಾಲತಿ ತದೇಕವಾಗಿ ನೋಡುತ್ತಿದ್ದಳು. ಕಣ್ಣು ಮುಚ್ಚಿಕೊಂಡು ಗುಹೆಯ ಹಾಗೆ ಬಾಯಿ ಕಳೆದುಕೊಂಡು ಬಿದ್ದುಕೊಂಡಿದ್ದ ಗಂಡ. ಅವನ ಮೇಲಿನ ಪಂಕ್ತಿಯ ಹಲ್ಲುಗಳು ಮೇಲಿನ ತುಟಿ ದಾಟಿ ಹೊರಬಂದು ವಿಕಾರವಾಗಿ ಕಾಣುತ್ತಿದ್ದವು. ಬಹಳ ಹೊತ್ತು ಹೀಗೆಯೇ ನೋಡುತ್ತಿದ್ದವಳಿಗೆ ಭಯ ಆಯಿತು. ದೃಷ್ಟಿ ಬದಲಿಸಿ ಕಿಟಕಿಯತ್ತ ನೋಡಿದಳು. ಒಂದನೇ ಅಂತಸ್ತಿನ ತನಕ ಬೆಳೆದುಕೊಂಡ ಹಳೆಯ ಸಂಪಿಗೆಮರ ಹಸುರುಕ್ಕಿ ಗಾಳಿಗೆ ತೊನೆದಾಡುತ್ತಿತ್ತು. ಅವಳಿಗೆ ತಕ್ಷಣ ಎನಿಸಿದ್ದು ‘ಈ ಮನುಷ್ಯಜನ್ಮವೇ ಸಾಕು, ನಾನಾದರೂ ಸಂಪಿಗೆಮರವಾಗಬಾರದಿತ್ತೆ?’ ಎಂದು. ಮನಸ್ಸು ಭಾರವಾಗಿ ಸಂಕಷ್ಟಗಳು ಬಂದೊದಗಿದಾಗ ಸಾತ್ತಿ÷್ವಕರು ಮಾಡಿಕೊಳ್ಳುವ ಸಮಾಧಾನ ಅದು ಎಂದು ಮನಸ್ಸಿನಲ್ಲಿ ಅಂದುಕೊಂಡಳು.
ಮತ್ತೆ ಅನುದ್ದಿಷ್ಟವಾಗಿ ಗಂಡನತ್ತ ದೃಷ್ಟಿ ಹೊರಳಿಸಿದಳು. ನಿಧಾನ ಉಸಿರಾಡುತ್ತಿದ್ದವನು ಏನೂ ಅರಿಯದಂತೆ ನಿದ್ದೆ ಮಾಡುತ್ತಿದ್ದ. ಅವನಿಗೆ ಆಹಾರ ಕೊಡಲು ಹಾಕಿದ ಪೈಪ್ ಅವನ ಉಸಿರಾಟಕ್ಕೆ ಕದಲುತ್ತಿತ್ತು. ವೈದ್ಯರು ರಾತ್ರಿಯೇ ಹೇಳಿ ಹೋಗಿದ್ದಾರೆ, ‘ಅವರ ಕಿಡ್ನಿ ಸರಿಯಾಗಿ ಕೆಲಸ ಮಾಡ್ತಾ ಇಲ್ಲ. ಲಿವರ್ ಕೂಡಾ. ಮೆದುಳು ನಿಷ್ಕ್ರಿಯವಾದರೆ ನಮ್ಮ ಕೈಮೀರಿದ್ದು. ಇಲಿ ಜ್ವರದ ಕೊನೆಯ ಹಂತ’ ಅಂತ. ಆ ಘಳಿಗೆಯನ್ನು ನೆನಪು ಮಾಡಿಕೊಂಡು ಮಾಲತಿ ವಿಚಲಿತಗೊಂಡಳು; ‘ವೈದ್ಯರು ಹಾಂಗೆ ಹೇಳುವಾಗ ನನಗೆ ಸಹಜವಾದ ಚಿಕ್ಕ ಆತಂಕವಾಯಿತಾದರೂ ನಂತರ ಏನೂ ಅನ್ನಿಸಲೇ ಇಲ್ಲ. ಆಗಲೇ ಮನಸ್ಸು ನಿರ್ಧರಿಸಿತ್ತು – ಕೈಲಾದ ಪ್ರಯತ್ನ ಮಾಡುವುದು, ನಂಬಿದ ಗುರುವರ್ಯರು ಕಣ್ಬಿಟ್ಟರೆ ಗಂಡನೂ ಕಣ್ಬಿಡುತ್ತಾರೆ ಅಂತ.’ ನೂರು ಬಾರಿ ಶ್ಲೋಕ ಹೇಳಿದಳು. ‘ಗಂಡನು ಆರಾಮ ಆದರೆ ನಿಮ್ಮ ವರದಪುರಕ್ಕೆ ಬಂದು ಪಾದಪೂಜೆ ಮಾಡುವೆ’ ಎಂದು ಹರಕೆ ಹೊತ್ತಳು. ಡಾಕ್ಟರು ‘ನಿನ್ನ ಗಂಡ ಇನ್ನೂ ಸೀರಿಯಸ್ಸಾಗೇ ಇದ್ದಾನಮ್ಮ. ಮುಂದಿನ ಎರಡು ದಿವಸದ ಚಿಕತ್ಸೆ ನೋಡಿ ಹೇಳಬೇಕು’ ಎಂದಾಗಲೂ ಮನಸ್ಸಿಗೆ ಯಾವ ತಳಮಳವೂ ಆಗಲಿಲ್ಲ. ಒಳಗಿನಿಂದ ತನ್ನಿಂದ ತಾನೆ ವಿಶ್ವಾಸದ ಫೀಲ್ ಬರುತ್ತಿತ್ತು – ‘ನನ್ನ ಗಂಡನಿಗೆ ಏನೂ ಆಗುವುದಿಲ್ಲ.’ ಮೈಮೇಲೆ ಖಬರು ಇಲ್ಲದೆ ಆಸ್ಪತ್ರೆಗೆ ಬಂದವನನ್ನು ಮರಳಿ ಮನೆಗೆ ಕೈ ಹಿಡಿದು ನಡೆಸಿಕೊಂಡು ಹೋಗುತ್ತೇನೆ ಎಂದು ಅಂದುಕೊಳ್ಳುತ್ತಿದ್ದಳು.
ಆಸ್ಪತ್ರೆಗೆ ಬಂದು ಐದು ದಿನಗಳಾದರೂ ಗಂಡನಿಗೆ ಎಚ್ಚರ ಬರಲಿಲ್ಲ. ಮಾಲತಿ ಗಂಡನತ್ತ ನೋಡಿದರೆ ಏನೇನೋ ನೆನಪುಗಳು. ‘ಸಂಬಂಧಿಕರಿಂದ ಛೀ ಥೂ ಎಂದು ಅಜಳಾದ ಜೀವ, ಎಷ್ಟು ನೊಂದಿದೆಯೋ’ ಎಂದು ವ್ಯಥೆಪಟ್ಟಳು. ಅವರ ಸಂಬಂಧದ ಸಹವಾಸವೇ ಬೇಡ. ಮೂಲ ಆಸ್ತಿಯನ್ನು ಕಾಪಾಡಿದ್ದಕ್ಕೆ ಈಗ ನಮ್ಮ ಮರ್ದನಕ್ಕೆ ನಿಂತಿದ್ದಾರೆ ದಾಯಾದಿಗಳು. ಹೆಣ ಸುಡುವ ಋಣದಲ್ಲಾದರೂ ಬೀಳುತ್ತಾರೋ ಎಂದು ಕಾಯುತ್ತಿದ್ದಾರಂತೆ. ಅದು ಅವರವರ ಮನಸ್ಸಿಗಾದರೆ ಪರವಾಯಿರಲಿಲ್ಲ. ಮಾತಾಡಿ ಶಾಶ್ವತ ಸಂಬಂಧ ಕಳೆದುಕೊಂಡುಬಿಟ್ಟರಲ್ಲ. ಆಡ್ತಾ ಆಡ್ತಾ ಅಣ್ಣತಮ್ಮಂದಿರು, ಬೆಳೀತಾ ಬೆಳೀತಾ ದಾಯಾದಿಗಳು. ಅಕ್ಕ-ತಂಗಿಯರ ಪಾಲಿಗೂ ಬಳಸಿ ಎಸೆಯುವ ಕಸವಾಗಿಬಿಟ್ಟರಲ್ಲ – ಎಂದು ಮಾಲತಿಗೆ ವ್ಯಥೆಯಾಯಿತು.
‘ಹಾಗೆ ನೋಡಿದರೆ ನನ್ನ ಗಂಡ ಯಾವಾಗಲೂ ಹೆಚ್ಚು ಮಾತಾಡಿದವನೇ ಅಲ್ಲ. ಇಹದ ಪರಿವೆ ಇಲ್ಲದಾಗಲೂ ಅವನು ಮೌನಿಯೇ. ಈಗಂತೂ ಎಚ್ಚರವೇ ಇಲ್ಲ. ಗಂಡನ ಮೌನಸ್ವಭಾವವೇ ಅವನಿಗೆ ಅನ್ಯಾಯ ಮಾಡಿತು.’ ಮಾಲತಿಗೆ ಈ ಘಳಿಗೆಯಲ್ಲಿ ಅತ್ತೆ ಹೇಳಿದ ಮಾತು ನೆನಪಾಯಿತು. ಅತ್ತೆ ಪಾರಬ್ಬೆ ಮದುವೆಯಾದ ಹೊಸದರಲ್ಲಿ ತನ್ನ ಬದುಕಿನ ಕಥೆಗಳನ್ನು ಹೇಳುತ್ತಿದ್ದಳು. ಯಾವುದೋ ಒಂದು ಘಳಿಗೆಯಲ್ಲಿ ವಿಷಯ ತೆಗೆದಿದ್ದಳಲ್ಲ, ಅದು ಹಿಸ್ಸೆಯ ಸಂಗತಿ – ಮೂರು ಹಗಲು, ಮೂರು ರಾತ್ರಿ ನಡೆದ ಹಿಸ್ಸೆಯ ಪಂಚಾತಿಗೆ. ಆ ದಿವಸ ಪಾರಬ್ಬೆಗೆ ಸಂಕಟವಾಗಿತ್ತಂತೆ. ಇರುವ ಐದು ಗಂಡುಮಕ್ಕಳು ಇದ್ದಕ್ಕಿದ್ದಂತೆ ಪಾಲಾಗಬೇಕೆಂದು ಹಟ ತೊಟ್ಟಿದ್ದರು. ಮೊದಲು ಈ ಗಣಪನಿಂದ ಶುರುವಾದದ್ದು. ಮಾಡೂದು ಮಾಡುತ್ತೇವೆ, ಎಲ್ಲರೂ ಪಾಲಾಗೋಣ – ಎಂದು ಎಲ್ಲರೂ ಅಂದಿದ್ದು. ಅವರು ಇದ್ದಕ್ಕಿದ್ದಂತೆ ಈ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ. ನನ್ನ ಮಕ್ಕಳ ಒಳಮನಸ್ಸಿನಲ್ಲಿತ್ತೋ ಅಥವಾ ಸೊಸೆಯಂದಿರು ಸಮಯ ಕಾಯುತ್ತಿದ್ದರೋ ಗೊತ್ತಿಲ್ಲ. ಆ ಘಳಿಗೆಯಲ್ಲಿ ನನ್ನ ಮಕ್ಕಳೆಲ್ಲ ಸ್ವಾರ್ಥಿಯೇ ಆಗಿಬಿಟ್ಟಿದ್ದರು ತಂಗಿ – ಎಂದಿದ್ದಳು. “ಆಗ ಯಶೋಧರನ ಮದುವೆಗೂ ಯಾರೂ ಪ್ರಯತ್ನಿಸಿರಲಿಲ್ಲ. ನಾನು ಯಶೋಧರ ಮೂಲ ಮನೆಯಲ್ಲಿರುವುದೆಂದು, ನನ್ನ ಪಾಲಿನ ಆಸ್ತಿಯನ್ನು ನನ್ನ ಜೀವಿತದ ತನಕ ಯಶೋಧರನೇ ನೋಡಿಕೊಳ್ಳಬೇಕೆಂದು ಮಾತುಕತೆಯಾಯಿತು. ಆದರೂ ನಿನ್ನ ಗಂಡ ಮೂಕನಾಗಿಯೇ ಇದ್ದ. ಎಲ್ಲರೂ ಆರಿಸಿ ಬಿಟ್ಟ ಬೀಳುಭೂಮಿಯೇ ಸಾಕು ಎಂದ. “ಕುಟುಂಬ ಪಾಲಾಗಿ ಏಕಪಾಕದ ವ್ಯವಸ್ಥೆ ಮುಗಿದು ಹೋದರೇನು. ನನ್ನ ಅಣ್ಣಂದಿರು ಒಳ್ಳೆಯವರೇ. ನಮ್ಮ ಮನಸ್ಸು ಪಾಲಾಗುವುದಿಲ್ಲ’’ ಎಂದಿದ್ದ. ಆ ಘಳಿಗೆಯಲ್ಲಿ ನಿಮ್ಮ ನಿರ್ಣಯಕ್ಕೆ ನಾನು ಬದ್ಧ ಎಂದು ಮಹಡಿಯ ಮೇಲೆ ಹೋಗಿ ಮಲಗಿಕೊಂಡಿದ್ದ. ಈಗಲೂ ಅವನ ಮನಸ್ಸಿನಲ್ಲಿದ್ದುದು ಅಣ್ಣಂದಿರಿಗೆ ಎದುರಾಡಲಿಲ್ಲ ಎಂಬ ಸಮಾಧಾನ ಮಾತ್ರ – ಎಂದಿದ್ದಳು. ಈಗ ಆಸ್ಪತ್ರೆಯಲ್ಲಿ ಪ್ರಶಾಂತ ಮುಖದಲ್ಲಿ ಮಲಗಿದ್ದಾರೆ ಯಜಮಾನರು. ಯಾರ ಮನಸ್ಸಿಗೂ ನೋಯಿಸದೇ ಇದ್ದುದಕ್ಕೋ ಏನೋ. ‘ಒಳ್ಳೆಯವರು ತಮ್ಮ ಒಳ್ಳೆತನದಲ್ಲಿಯೇ ತಮ್ಮ ಹತ್ತಿರದವರಿಗೆ ನೋವುಂಟು ಮಾಡಿರುತ್ತಾರೆ ತಮಗೆ ಗೊತ್ತಿಲ್ಲದೆ’ ಎಂದುಕೊಂಡಳು.
ಈಗ ನಾನು ಆಸ್ಪತ್ರೆಯಲ್ಲಿ ಒಬ್ಬಳೇ ಇದ್ದೇನೆ. ಏನಾದರೂ ಹೆಚ್ಚುಕಡಮೆಯಾದರೂ ಏನು ಕಥೆಯೊ? ಸಂಬಂಧಿಕರು ‘ಬರಬೇಕಾ’ ಎಂದು ಫೋನ್ ಮಾಡಿದ್ದರು, ‘ಏನಾದರೂ ಸಹಾಯ ಬೇಕಾ’ ಎಂದು ಕೇಳಿದ್ದರು. ಅವೆಲ್ಲ ಅವರ ಮನಸ್ಸಿನ ಸಮಾಧಾನಕ್ಕೆ ಕೇಳಿದ್ದು ಇರಬೇಕು. ಅಥವಾ ನನ್ನ ಎದುರು ಅಪರಾಧಿಯಲ್ಲ ಎಂದು ತೋರಿಸಿಕೊಳ್ಳುವುದಕ್ಕೆ ಇರಬಹುದು. ಹೊರತಾಗಿ ಅವರ ಮಾತಿಗೆ ಬೇರೆ ಅರ್ಥವೇ ಇಲ್ಲ ಎಂದುಕೊಳ್ಳುವಾಗಲೇ ಮೊನ್ನೆ ಕುಮಟೆಯಿಂದ ಅಂಬ್ಯುಲೆನ್ಸ್ನಿಂದ ಹೊರಟ ಘಳಿಗೆ ನೆನಪಾಗಿ ಮಾಲತಿಗೆ ಮೈ ಜುಂ ಎಂದಿತು. ‘ಮಂಗಳೂರಿಗೆ ಬಂದು ಇಂದಿಗೆ ಒಂಭತ್ತು ದಿವಸ ಕಳೆಯಿತು. ಹಾಗೇನಾದರೂ ನಡೆದುಬಿಟ್ಟಿದ್ದರೆ ಇಷ್ಟು ಹೊತ್ತಿಗೆ ಅಸ್ಥಿಯನ್ನು ಸಂಚಯಿಸಲು ಮಗ ಮಸಣದಲ್ಲಿರಬೇಕಿತ್ತು. ಅವಳ ಕಣ್ಣಲ್ಲಿ ನೀರು ಧಾರೆ ಕೆನ್ನೆಯ ಮೇಲೆ ಹರಿಯಿತು. ಪುಣ್ಯ ಹಾಗಾಗಲಿಲ್ಲ. ಆ ಘಳಿಗೆಯಲ್ಲಿ ಗಂಡನನ್ನು ಉಳಿಸಿಕೊಳ್ಳಲು ಹೋರಾಡಿದ್ದೆಷ್ಟು! ಇವಳ ಗಂಡನ ಕಥೆ ಮುಗಿಯಿತು ಎಂದು ಪ್ರತಿವರ್ಷ ಕರೆಯುತ್ತಿದ್ದ ಶ್ರಾವಣ ವರಮಹಾಲಕ್ಷ್ಮಿಗೆ ಕರೆಯದವರೆಷ್ಟು? ಬಾಗೀನಕ್ಕೆ ನೀರು ಬಿಟ್ಟು ತೆಗೆದಿಡುವವರು ನನ್ನ ಪಾಲಿಗೆ ಅವರೇ ಇಲ್ಲ ಎನ್ನುವ ತರಹ ನಿರ್ಧಾರಕ್ಕೆ ಬಂದವರೆಷ್ಟು? ಅವರು ಸಾವಿನ ಕದ ತಟ್ಟಿದರು. ನನ್ನ ಕೊನೆಯ ಶ್ರಮ ಇಲ್ಲದಿದ್ದರೆ ಅವರು ನನಗೂ ಹೇಳದೆ ಹೋಗುವವರಿದ್ದರು. ಈಗ ಅವರನ್ನು ಉಳಿಸಿಕೊಳ್ಳುತ್ತೇನೆಂಬ ಹುಂಬು ಧೈರ್ಯ ಬರುತ್ತಿದೆ.
ಮಾಲತಿಯ ಮನಸ್ಸಿನ ಯೋಚನೆ ನೋವಿನ ಧಾರೆಯಲ್ಲಿ ಸಾಗುತ್ತಿತ್ತು. ಆ ಘಳಿಗೆಯಲ್ಲಿ ಬಂದ ನರ್ಸ್, “ಯಾಕೆ ತಾಯಿ ಅಳ್ತಾ ಕುಂತೀರಿ? ಕಣ್ಣಲ್ಲಿ ನೀರು ಹಾಕಿದ್ರೆ ಎಲ್ಲವೂ ಸರಿಯಾಗುತ್ತಾ? ನೀವು, ನಿಮ್ಮ ಧೈರ್ಯ ಇಲ್ಲಿ ಕೆಲಸ ಮಾಡೋದು. ಮಗನ ಕಾಯೋದು. ಮತ್ತು ಮುಂದಿನ ಬದುಕು ಹೇಗೆ ಎಂತ ತೋರಿಸೋದು” ಸರಳವಾಗಿಯೇ ಹೇಳಿದಳು. ಕಾಣಲು ಯಂಗ್ ಇರುವ ನರ್ಸ್ ಜೀವನಾನುಭವ ದೊಡ್ಡದು. ಅವಳು ನಿತ್ಯ ಕಾಣುವ ಸಾವಿನ ಆಟ ಅವಳಿಗೆ ನಿತ್ಯ ಪಾಠ ಕಲಿಸಿದೆ. ಯರ್ಯಾರ ಸಾವಿಗೆ ಎಂತೆಂಥ ವ್ಯಾಖ್ಯಾನಗಳಿವೆಯೋ! ಎಂದು ಮಾಲತಿ ಯೋಚಿಸುತ್ತಿರುವಾಗಲೇ ಯಶೋಧರನ ದೇಹ ಒಂದು ಸಲ ಕುಲುಕಾಡಿ ತಟಸ್ಥವಾಯಿತು. ಮಾಲತಿ “ಸಿಸ್ಟರ್!” ಎಂದು ಕಿರುಚಿದಳು. ನರ್ಸ್ ಓಡಿ ಬಂದು ನಾಡಿ ಹಿಡಿದು ನೋಡಿ, “ನೋ ಪ್ರಾಬ್ಲಮ್’’ ಎಂದಷ್ಟೇ ಹೇಳಿ ಹೋದಳು. ಸಾವು-ಬದುಕಿನ ನಡುವೆ ಹೋರಾಡುತ್ತಿರುವ ಗಂಡ; ಪ್ರತಿ ಕ್ಷಣವೂ ಸಾಯುತ್ತಿರುವ ಹೆಂಡತಿ; ಸಾಯಲೆಂದೇ ದವಾಖಾನೆಗೆ ಬಂದವರ ತರಹ ಕಣ್ಣೆದುರೇ ಯಾವು ಯಾವುದೋ ಪೇಶೆಂಟ್ಗಳ ಸಾವು. ಯಾರೋ ಆಸ್ಪತ್ರೆಗೆ ಸೇರಿಸಿ ಹೋದ ಅಪರಿಚಿತ ರೋಗಿಗಳ ಅಕ್ರಂದನ. ಚಿಕಿತ್ಸೆಗೆ ಸ್ಪಂದಿಸದೇ ಸತ್ತಾಗ, ಶವಾಗಾರದೊಳಗೆ ಮೌನವಾಗಿ ಹೋಗಿ ಮಲಗಿಬಿಡುವರು.
ಮಾಲತಿ ಗಂಡನ ಮುಖವನ್ನೇ ದಿಟ್ಟಿಸಿದಳು. ನೀವು ಹೆದರಬೇಡಿ, ನಾನಿದ್ದೇನೆ ಎಂದು ಪಿಸುಗುಟ್ಟಿದಳು. ಆಸ್ಪತ್ರೆಯ ಸಿಬ್ಬಂದಿಯೊಬ್ಬ ಬಂದು ಕೈ ನರಕ್ಕೆ ಚುಚ್ಚಿ ಸಿರಿಂಜ್ನಲ್ಲಿ ರಕ್ತ ತುಂಬಿಕೊಂಡು ಹೋದ. ‘ಇದು ಆರನೇ ಬಾರಿ ಅವನು ರಕ್ತ ಒಯ್ದಿದ್ದು. ಇವರು ಆಹಾರವನ್ನೇ ತಿಂದಿಲ್ಲ. ಇನ್ನು ಮೈಯೊಳಗಿನ ರಕ್ತವನ್ನೇ ಹೀಗೆ ತೆಗೆದುಬಿಟ್ಟರೆ…? ಮತ್ತೊಮ್ಮೆ ಬಂದರೆ ಅವಕಾಶ ನೀಡಬಾರದು’ ಎಂದುಕೊಂಡಳು.
ಕುಮಟೆಯಿಂದ ಅಂಬ್ಯುಲೆನ್ಸ್ ಮೇಲೆ ಮಲಗಿಸುವಾಗ ಹೀಗೆಯೇ ತಟಸ್ಥ ಇದ್ದರು. ಈಗಲೂ ಹೀಗೆಯೇ ಇದ್ದಾರೆ. ಸೂಕ್ಷ್ಮ ಗಮನಿಸಿದರೆ ಜೀವ ಉಸಿರಾಡುತ್ತಿರುವುದನ್ನು ಬಿಟ್ಟರೆ ಅವರಿಗೆ ಈ ಪ್ರಪಂಚದ ಪರಿವೆಯೇ ಇಲ್ಲ. ದೇವರೇ ಇನ್ನೆಷ್ಟು ದಿನ ಈ ಗೋಳು. ಇಂತಹ ಸನ್ನಿವೇಶದಲ್ಲಿ ಮನುಷ್ಯನ ದೇಹ ನೋವು ಅನುಭವಿಸಬಲ್ಲುದೆ, ಅಥವಾ ಜೀವ ಮತ್ತು ಸಾವುಗಳ ಮಧ್ಯಘಟ್ಟದಲ್ಲಿ ಇದ್ದು ಸಾವಿನ ಅನುಭವ ಪಡೆಯುತ್ತಿರುವುದೆ? ಏನೇನೋ ಹುಚ್ಚು ಯೋಚನೆಗಳು. ತನ್ನ ಒಳಮನಸ್ಸಿಗೆ ‘ಅವರಿಗೆ ಏನಾಗುವುದಿಲ್ಲ. ಆರಾಮಾಗಿ ಬರುತ್ತಾರೆ’ ಎಂದು ನಂಬಿಕೆ ಈಗಲೂ ಬಲವಾಗಿರುವುದೇಕೆ? ಕಾಣದ ದೇವರೊಂದು ಕೃಪೆ ತೋರುತ್ತಿದೆ. ಗುರುವರ್ಯರೇ ಬಲ ತುಂಬುತ್ತಿದ್ದಾರೆ ಎಂದು ಮನಸ್ಸಿಗೆ ಅನಿಸಿದಾಗ ಅವಳಿಗೆ ಸಮಾಧಾನ ಆಯಿತು. ‘ಅವರಿಗೆ ಕೇವಲ ಐವತ್ತೈದು. ಬದುಕು ಪೂರ್ಣ ಮುಗಿದುಹೋಗುವ ವಯಸ್ಸೇನಲ್ಲ. ಹಾಳಾದ್ದು ನಲವತ್ತನೇ ವಯಸ್ಸಿಗೇ ಪಾರ್ಕಿನ್ಸನ್ ಕಾಯಿಲೆ ಉಲ್ಬಣವಾಗಿ ಅಕಾಲಿಕ ವೃದ್ಧಾಪ್ಯಕ್ಕೆ ಬಂದಂತೆ. ಹೆಜ್ಜೆಯೆತ್ತಿಡಲೂ ನಲುಗಿದರು. ಕೈ ಕಾಲುಗಳ ನರ-ನಿಯಂತ್ರಣ ತಪ್ಪಿ ಪ್ರತಿ ಕ್ಷಣ ಕಂಪಿಸುತ್ತಿತ್ತು. ಆಗ ನಿರಂತರ ಔಷಧಿ ಮಾಡಿದೆ. ಜನ ಹೇಳಿದ ಔಷಧಿ ಮಾಡಿದೆ. ದೇವಸ್ಥಾನಗಳಿಗೆ ಹರಕೆ ಹೊತ್ತೆ. ಆಯುರ್ವೇದದ ಔಷಧಿಗಳ ಡಬ್ಬ ಮನೆ ತುಂಬಿತೇ ಹೊರತು ಅವರ ಆರೋಗ್ಯ ಸುಧಾರಿಸಲಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ನೋವಾಗಿದ್ದು – ಇನ್ನೂ ಪ್ರಾಯಸ್ಥರು, ಹೇಗೆ ನಿಭಾಯಿಸುತ್ತಾರೋ ಎಂದು ಕಾದು ಕುಳಿತವರ ತರಹ ಸಂಬಂಧಿಕರು ಹಂಗಿಸಿಬಿಟ್ಟಿದ್ದರಲ್ಲ. ಹಾಗೆಂದೇ ತನ್ನನ್ನು ದಿನಾಲೂ ಕೊಲ್ಲುತ್ತಿದ್ದ ಜಾನಕಿಯೇ ಅಳಿಯ ತೀರಿಕೊಂಡಾಗ ಕೇವಲ ಇಪ್ಪತ್ತೆöÊದರ ಪ್ರಾಯದ ಮಗಳ ಬಗ್ಗೆ ಎಷ್ಟು ನೊಂದಿರಬಹುದು. ಯಾರಿಗೂ ಹಾಗಾಗಬಾರದು. ಅವಳ ಮಗಳು ಒಳ್ಳೆಯ ಹುಡುಗಿಯೇ ಎಂದುಕೊಂಡಳು. ‘ಮೊನ್ನೆ ಮೂರು ದಿನ ಜ್ವರ ಬಂದದ್ದಷ್ಟೆ. ಇದ್ದಕ್ಕಿದ್ದ ಹಾಗೆ ಪ್ರಜ್ಞೆ ಹೋಯಿತು. ಮಲ ಮೂತ್ರ ಬಂದ್ ಆಯಿತು. ಆಹಾರ ತೆಗೆದುಕೊಳ್ಳಲಿಲ್ಲ. ತಕ್ಷಣ ಕುಮಟೆಯ ಆಸ್ಪತ್ರೆಗೆ ಸೇರಿಸಿದೆ. ಮೂತ್ರ ರಕ್ತ ಪರೀಕ್ಷೆ ಮಾಡಿದ ವೈದ್ಯರು ಕಿಡ್ನಿ ಕೆಲಸ ಮಾಡುತ್ತಿಲ್ಲ ಎಂದರು. ಆ ದಿವಸ ಬೆಳಗಿನ ಜಾವ ಐದು ಗಂಟೆಗೆ ಹಲ್ಲು ಕಚ್ಚಿ, ಕೈಕಾಲು ಕಟ್ಟಿಗೆ ತುಂಡಿನಂತೆ ಸೆಟೆದು ನೆಟ್ಟಗಾಯಿತು. ಬಿಟ್ಟ ಕಣ್ಣು ಬಿಟ್ಟ ಹಾಗೆ ಎಷ್ಟೋ ಹೊತ್ತಿನ ತನಕ. ತಕ್ಷಣ ನನ್ನದೇ ಕೈಯಿಂದ ಕಣ್ಣು ಮುಚ್ಚಿದ್ದು. ‘ನನ್ನ ಕೈಬಿಟ್ಟು ಹೊರಟುಬಿಟ್ರಾ’ ನನಗೇ ಗೊತ್ತಿಲ್ಲದೆ ಬಡಬಡಿಸಿದ್ದೆನಲ್ಲ. ಇಲ್ಲ, ಹೇಗಾದರೂ ಅವರನ್ನು ಉಳಿಸಿಕೊಳ್ಳಬೇಕು. ಹಾಗೆ ಯೋಚಿಸಲೂ ಪುರಸೊತ್ತಿಲ್ಲದೆ ಅವರ ಬಾಯಿಗೆ ನನ್ನ ಬಾಯಿ ಒತ್ತಿ ಎಷ್ಟೋ ಹೊತ್ತಿನತನಕ ತಿದಿ ಒತ್ತಿದ ತರಹ ಉಸಿರನ್ನು ನೀಡಿದೆ. ನನ್ನ ಅದೃಷ್ಟ. ಆ ಗುರುವರ್ಯರು ಕೈಬಿಡಲಿಲ್ಲ. ಮತ್ತೆ ಉಸಿರಾಟ ಪ್ರಾರಂಭವಾಯಿತು.
ಒಂಭತ್ತು ಗಂಟೆಗೆ ಡಾಕ್ಟರರು ಬರುತ್ತಾರೆ ಎಂದರು. ಅಲ್ಲಿಯವರೆಗೆ ಗಂಡನ ಜೀವ ದೇವರ ಕೈಯಲ್ಲಿ. ನನ್ನ ಗಂಡ ನನ್ನೊಂದಿಗೆ ಉಸಿರಾಡಿಕೊಂಡಿದ್ದರೆ ಸಾಕು. ಮಲಗಿದ್ದಲ್ಲಿಯೂ ಇದ್ದರೆ ಅವರ ಸೇವೆ ಮಾಡುತ್ತೇನೆ. ಜೀವನಪರ್ಯಂತ ಬೇಕಿದ್ದರೆ ಅವರಿಗಾಗಿ ಶಿಕ್ಷಕಿ ಹುದ್ದೆಯನ್ನು ಬಿಟ್ಟು ಅವರಿಗಾಗಿಯೇ ಜೀವ ತೇಯಬಲ್ಲೆ. ಪಿತ್ರಾರ್ಜಿತವಾಗಿ ಬಂದ ಇವರದೇ ಅಡಿಕೆ ತೋಟದಿಂದ ನಾನು ಅನ್ನ ಕಾಣುತ್ತಿಲ್ಲವೇ? ಅಷ್ಟು ಮಾಡದಿದ್ದರೆ ಹೇಗೆ – ಎಂದು ಮಾಲತಿಯ ಯೋಚನೆ. ನಂತರ ಗಂಡನ ಉಸಿರಾಟವನ್ನು ಗಮನಿಸುವುದೇ ಅವಳ ಕೆಲಸವಾಗಿಬಿಟ್ಟಿತು. ‘ಈ ಡಾಕ್ಟರು ಹೀಗೇಕೆ ಜೀವದ ಜೊತೆ ಚೆಲ್ಲಾಟ ಮಾಡುತ್ತಾರೆ. ಒಂದು ಜೀವದ ಪ್ರಶ್ನೆ. ಅರ್ಜೆಂಟ್ ಟ್ರೀಟ್ಮೆಂಟ್ ಕೊಟ್ಟಿದ್ದರೆ..’ ಎಂದು ಸಿಟ್ಟುಬಂತು. ಸಂದರ್ಭ ತಾಳ್ಮೆಯನ್ನು ಕಲಿಸುತ್ತದೆ. ಶ್ರೀಧರಸ್ವಾಮಿಗಳು ಕೈಯೆತ್ತಿ ಆಶೀರ್ವಾದ ಮಾಡುತ್ತಿರುವ ಪಟ ಕಣ್ಣ ಮುಂದೆ ಬರುತ್ತಿದೆ. ಅದೊಂದೇ ನನ್ನೊಳಗೆ ಧೈರ್ಯ ತುಂಬುತ್ತಿರುವುದು.
ಡಾಕ್ಟರರು ಬಂದವರು ರಕ್ತ, ಮೂತ್ರ ವರದಿಯ ಹಿಡಿದು ಹೇಳಿದರು, ‘ಪೇಶೆಂಟ್ ಸ್ಥಿತಿ ಗಂಭೀರ ಇದೆ. ಕಿಡ್ನಿ ಫಂಕ್ಷನ್ ಇಲ್ಲ. ಡಯಾಲಿಸಿಸ್ ಬೇಕು. ದೊಡ್ಡಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸು.’ ಅವರ ಮಾತಿನಲ್ಲಿ ಬೇಸರವೂ, ಪಾಪಪ್ರಜ್ಞೆಯೂ, ನಿರಾಸೆಯೂ ಇರುವುದನ್ನು ಗುರುತಿಸಿದ್ದೆ. ಆಗಲೇ ಅಲ್ಲವೆ ಮಂಗಳೂರಿನ ಈ ಆಸ್ಪತ್ರೆಗೆ ಬರಲು ನಿರ್ಧರಿಸಿದ್ದು. ಗಂಡನನ್ನು ಆ್ಯಂಬುಲೆನ್ಸ್ನಲ್ಲಿ ಮಲಗಿಸಿಕೊಂಡು ಕುಮಟೆಯಿಂದ ಹೊರಟವಳು ಮಂಗಳೂರು ಆಸ್ಪತ್ರೆ ಬರುವವರೆಗೂ ನಂಬಿದ ಗುರುವಿನ ಜಪ ಮಾಡಿದ್ದೆ…
ಮಾಲತಿ ಕಣ್ಣಲ್ಲಿ ನೀರು ಜಿನುಗಿತು. ಹಗಲಾಗಿ, ರಾತ್ರಿಯಾಗಿ ದಿನ ಬೇಗ ಕಳೆದುಹೋಗುತ್ತಿದೆ. ಒಬ್ಬಂಟಿಯಾಗಿ ನಾನು ಎಷ್ಟು ದಿನ ಇರುವುದು? ಯಾವ ಸಂಬಂಧಿಕರೂ ಹತ್ತಿರ ಸುಳಿಯುತ್ತಿಲ್ಲ. ಫೋನ್ ಮಾಡಿಕೊಂಡು ಗಂಡನ ಒಳ್ಳೆಯ ಗುಣವನ್ನು ಹೊಗಳುವವರೇ. ಅವರ ಅಕ್ಕನ ಮಗ ಮೊನ್ನೆ ಫೋನ್ ಮಾಡಿ “ಯಶುಮಾವ ನನ್ನ ಮಾವಂದಿರ ಪೈಕಿ ಅತಿ ಬೆಸ್ಟ್ ಮನುಷ್ಯ. ಅವನು ನಮ್ಮ ಮನೆಯಲ್ಲಿಯೇ ಇದ್ದು ಕಾಲೇಜಿಗೆ ಹೋದದ್ದು. ಒಬ್ಬರಿಗೂ ಎದುರಾಡಿದವನಲ್ಲ. ನಮ್ಮ ಮಾವಂದಿರಲ್ಲಿ ಕಲಿಯಲು ಎಲ್ಲರಿಗಿಂತ ಹುಷಾರಿ ಇದ್ದ. ದೇವರಿಗೆ ಹೀಗೇ ಆಗಲಿ ಎನ್ನಿಸಿರಬೇಕು. ಯಾರಿಗೂ ನೋವು ನೀಡದೇ ಬದುಕಿದ’’ ಎಂದಿದ್ದ. ಆಗ ನನಗೆ ಅಳುವು ಬಂದುಬಿಟ್ಟಿತ್ತು. ನನ್ನ ಗಂಡನ ಕಥೆ ಮುಗಿದೇಹೋಯಿತೆ? ಅವರು ಉಸಿರಾಡುತ್ತಿರುವಂತೆ ಎಲ್ಲವೂ ಮುಗಿದುಹೋದಂತೆ… ಶ್ರದ್ಧಾಂಜಲಿಯ ಮಾತು… ಯಾರ ಸಹಾಯದ ಋಣ ನನಗೆ ಬೇಡ. ಸಾಂತ್ವನದ ಮಾತಿನಲ್ಲಾದರೂ ಧೈರ್ಯ ತುಂಬುವಂತಿದ್ದರೆ… ಇಲ್ಲಿಯೂ ನನ್ನ ಮನಸ್ಸಿಗೆ ನೋವು ಮಾಡಿಬಿಟ್ಟರಲ್ಲ. ಅವರ ಸಹಜ ಮಾತೇ ನನ್ನನ್ನು ಹಂಗಿಸಿದಂತೆ ಕಾಣಿಸುತ್ತಿದ್ದಿರಬಹುದೆ? – ಎಂದು ಬೇಸರ ಆಯಿತು. ಇರಲಿ, ನಾ ಒಬ್ಬಂಟಿಯೇ. ಒಂಟಿಯಾಗಿಯೇ ಬದುಕಿ ತೋರಿಸಬಲ್ಲೆ ನನ್ನನ್ನು ನಂಬಿಕೊಂಡಿರುವ ಮಗನಿಗಾದರೂ ಎಂದುಕೊಂಡಳು. ಗಂಡನನ್ನು ಹೊಗಳುವವರು ಅವರು ಆರಾಮ ಇದ್ದಾಗ ಒಂದು ದಿನವೂ ಬಂದು ಮಾತಾಡಿಸಿಕೊಂಡು ಹೋದವರಲ್ಲ. ಆಗ ಕಂಸನಂತಹ ದೊಡ್ಡ ಮಾವನ ಮನೆಯೇ ಸ್ವರ್ಗವಾಗಿತ್ತು, ಈಗಲೂ.
ಯಶೋಧರನನ್ನು ನೋಡಲು ಬೆಳಗ್ಗೆ ಬಂದ ಡಾಕ್ಟರು ಹೇಳಿದರು, “ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎನ್ನಿಸುತ್ತಿದೆ. ಅವರ ರಕ್ತದಲ್ಲಿ ಮೂತ್ರ ಸೇರಿದೆ, ಡಯಾಲಿಸಿಸ್ ಮಾಡಬೇಕು.’’ ನನಗೇಕೋ ಆತಂಕವಾಗುತ್ತಿದೆ. ದೇವರೇ! ನಿಶ್ಶಕ್ತವಾದ ದೇಹ, ಡಯಾಲಿಸಿಸ್ಗೆ ಸ್ಪಂದಿಸದಿದ್ದರೆ? ಇದೊಂದು ಗೆದ್ದುಬಿಟ್ಟರೆ ಅವರು ಬದುಕಿದಂತೆಯೇ ಅನ್ನಿಸಿತು.
ರಾತ್ರಿಯಾದರೆ ಸಾಕು. ಆಸ್ಪತ್ರೆಯ ಆವರಣದ ಯಾವುದೋ ಮರದ ಮೇಲೆ ವಿಚಿತ್ರ ಹಕ್ಕಿಯ ಕೂಗು. ಆಸ್ಪತ್ರೆಯ ಹಿತ್ತಲಿನಲ್ಲಿರುವ ಸಂಪಿಗೆಮರ ಬೀಳುವ ಮಳೆಗೆ ಒದ್ದೆ ಮುದ್ದೆಯಾಗಿ ಬೆಳಕು ಚೆಲ್ಲುತ್ತಿರುವ ಹೆಲೋಜಿನ್ ಲೈಟಿಗೆ ಫಳಫಳ ಹೊಳೆಯುತ್ತ ಬೀಸುವ ಮಳೆ ಮಾರುತಕ್ಕೆ ತುಯ್ಯುವ ದೃಶ್ಯ ಯಾರೋ ಕೈಬೀಸಿ ಕರೆದಂತೆ ಭಯ ಹುಟ್ಟಿಸುತ್ತಿದೆ. ಮತ್ತೆ ತಲೆಯೊಳಗೆ ಸುಳಿದದ್ದು, ಇವರು ಮಧ್ಯದಲ್ಲಿ ಕೈಬಿಟ್ಟು ಹೋಗಿಬಿಟ್ಟರೆ? ಎಂಬ ಭ್ರಮೆ, ಅದು ಭ್ರಮೆಯೇ. ಸಾವಿನ ಸಂದೇಶ ತರುವ ಸುಟ್ರಾನ್ ಹಕ್ಕಿ ಕೂಗುತ್ತಿದೆ. ಇದು ದೊಡ್ಡ ಆಸ್ಪತ್ರೆಯಾದ್ದರಿಂದ ಪ್ರತಿ ದಿವಸ ಸಾವು ಸಂಭವಿಸುತ್ತಲೇ ಇರುತ್ತದೆ. ಅರೆಕ್ಷಣ ಒಮ್ಮೆ ಮಾಲತಿಯ ದೇಹ ನಲುಗಿತು. ಒಮ್ಮೆ ಇವರು ತೀರಿಕೊಂಡುಬಿಟ್ಟರೆ ಏನು ಮಾಡುವುದು? ದಹನ ಕ್ರಿಯೆ ದೊಡ್ಡ ಸಂಗತಿಯಲ್ಲ. ಊರಿಗೆ ದೇಹ ಸಾಗಿಸಿದರೆ ಊರವರು, ಜಾತಿಬಾಂಧವರು ಬರುತ್ತಾರೆ. ಕಂಬಳಿಯಲ್ಲಿ ದೇಹವನ್ನು ಜೋಲಿಸಿಕೊಂಡು ಹೋಗಿ ಸಾಗುವಾನಿ ತೋಪಿನಲ್ಲಿ ಸುಟ್ಟು ಮುಗಿಸುತ್ತಾರೆ… ಥತ್ ಅದಲ್ಲ ಸಂಗತಿ, ನಾವು ಮಾತಾಡಿಕೊಂಡಿದ್ದೇವಲ್ಲ. ಗಂಡ ಆರಾಮಾಗಿ ಸುರಳೀತ ಓಡಾಡಿಕೊಂಡಿರುವಾಗ ತೊಟ್ಟು ಕಳಚಿದ ಹುಳಿ ಮಾವಿನ ಹಣ್ಣಿನ ಹಾಗೆ ನಾವು. ಸತ್ತ ಮೇಲೂ ನಾವು ಸಂಬಂಧಿಕರ ಋಣದಲ್ಲಿ ಬೀಳಬಾರದು ಎಂದು ಮಾತಾಡಿಕೊಂಡಿದ್ದೇವಲ್ಲ. ಅದಕ್ಕೆ ಅವರೇ ಉಪಾಯ ಹೇಳಿದ್ದರಲ್ಲ. ‘ಒಂದು ಕೆಲಸ ಮಾಡಿಬಿಡುವ. ನಮ್ಮ ದೇಹವನ್ನು ಯಾವುದಾದರೂ ಮೆಡಿಕಲ್ ಕಾಲೇಜಿಗೆ ದಾನ ನೀಡಿಬಿಡುವ’ ಅಂತ. ಅದಕ್ಕೆ ನಾನು ಒಪ್ಪಿಕೊಂಡಿದ್ದೆ. ಈಗ ಆ ಸಮಯ ಬಂದಿದೆ. ಮೊದಲೇ ನೀವು ದೇಹದಾನಕ್ಕೆ ನಿಂತಿದ್ದೀರಿ – ಮನಸ್ಸಿಗೆ ಅನ್ನಿಸಿದಾಗ ಮಾಲತಿ ಅಳಲು ಪ್ರಾರಂಭಿಸಿದಳು. ಪಕ್ಕದ ಮಂಚದ ಪೇಶೆಂಟ್ಗಳ ನೋಡಿಕೊಳ್ಳುತ್ತಿದ್ದ ಸಂಬಂಧಿಕರು ‘ಬದುಕಿನಲ್ಲಿ ನಡೆಯಬೇಕಾದ್ದು ನಡೆಯಬೇಕು, ನಮ್ಮಿಂದ ತಪ್ಪಿಸಲು ಸಾಧ್ಯವಿಲ್ಲ’ ಎನ್ನುತ್ತಲೇ ಧೈರ್ಯ ತುಂಬಿದರು. ಅದು ಸಮಾಧಾನದ ಮಾತು. ಅದರಿಂದ ಕಷ್ಟಗಳು ಪರಿಹಾರ ಆಗೋದಿಲ್ಲ, ನನಗೆ ಗೊತ್ತು, ಆದರೆ ಅದೇ ಸಂಬಂಧಿಕರು ಆಸ್ತಿ ವಿಚಾರದ ಮನಸ್ತಾಪಕ್ಕೆ ನಮ್ಮ ಸಾವನ್ನೇ ನಿರೀಕ್ಷಿಸಿದವರಂತೆ ಜರೆದಿದ್ದರಲ್ಲ. ನಾನಾಗಲಿ, ಅವರಾಗಲಿ ಸತ್ತ ನಂತರ ದುಷ್ಟರಿಂದ ಸಂಸ್ಕಾರ ಮಾಡಿಸಿಕೊಳ್ಳುವುದೇ ಸಾಧ್ಯವಿಲ್ಲ, ನಮ್ಮ ನಿರ್ಧಾರವೇ ಸರಿ ಎಂದುಕೊಂಡಳು ಮಾಲತಿ. ಎಷ್ಟು ದಿವಸ ಅಂತ ಆಸ್ಪತ್ರೆಯಲ್ಲಿ ಉಳಿಯುತ್ತೀರಿ, ನಿಮ್ಮ ಭವಿಷ್ಯವನ್ನು ಹಾಳುಮಾಡಿಕೊಳ್ಳಬೇಡಿ ಅಂತ ಸುಮಾರು ಜನ ಹೇಳಿದರು. ಹಾಗೆಂದಾಗಲೆಲ್ಲ ಗಂಡನ ಮುಖ ನೋಡಿದಳು ಮಾಲತಿ.
ಮಾಲತಿಯ ಮನಸ್ಸು ಮತ್ತೆ ಇತಿಹಾಸಕ್ಕೆ ಹೊರಳಿತು. ‘ಇವರನ್ನು ನೋಡಿದ್ದು ಮದುವೆಯಲ್ಲಿಯೇ ಅಲ್ಲವೇ?’ ಋಣ; ಎಲ್ಲೋ ಇದ್ದವಳನ್ನು ಇಲ್ಲಿಗೆ ತಂದು ನನ್ನನ್ನು ಕಟ್ಟಿತು. ಅಂದುಕೊಂಡಂತೆ ನಡೆದಿದ್ದರೆ ನಾನು ಇವರ ಹೆಂಡತಿಯೇ ಆಗುತ್ತಿರಲಿಲ್ಲ. ಬಯಸಿ ಬಂದ ಹುಡುಗನ ಜೊತೆ ಮದುವೆಯಾಗುವುsದಿತ್ತು. ಅವನೇನೂ ಸುಬಗನಲ್ಲ. ಮನೆಯವರ ಮಾನ, ಮರ್ಯಾದೆ, ಅಂತಸ್ತು ಅಂತ ಅಲ್ಲಿಗೆ ಆ ಸಂಬಂಧ ತುಂಡಾಗಿದ್ದು. ಮತ್ತು ಇವರ ಜೊತೆಗೆ ಸಂಬಂಧ ಬೆಳೆಸಿದ್ದು. ನಾನು ವಿಧೇಯ ಸತಿಯಾಗಿ ಗಂಡನಿಗೆ ನೆರಳಾಗಿ ನಿಂತೆ. ಮಧ್ಯವಯಸ್ಸಿಗೆ ಪಾರ್ಕಿನ್ಸನ್ನಿಂದ ಪರಾವಲಂಬಿಯಾದ ಗಂಡನಿಗೆ ಆಸರೆಯಾದೆ. ಇದೆಲ್ಲೆ ಬಂದಿದ್ದು ಬಂದ ಹಾಗೆಯೇ ಕಳೆಯಬೇಕೆಂಬ ವಿಶ್ವಾಸವೇ ಹೊರತು, ಯಾರ ವಿರುದ್ಧ ಈರ್ಷೆಗೂ ಅಲ್ಲ. ನನ್ನ ದಾಂಪತ್ಯದ ಅನ್ಯೋನ್ಯತೆ ಆಡಿಕೊಂಡವರನ್ನು ಸೋಲಿಸುತ್ತಿದೆ. ಮನೆಯವರ ಊಹೆ ಬುಡಮೇಲು ಮಾಡಿ ನಾನೊಂದು ಪವಿತ್ರ ಜೀವಿ ಎಂದು ಅವರಿಗೆ ಅನ್ನಿಸಿರಲೂಬಹುದು. ನನ್ನ ಬದುಕಿನÀ ಸತ್ತ್ವಪರೀಕ್ಷೆಯಲ್ಲಿ ನಾನು ಗೆಲ್ಲುತ್ತಿದ್ದೇನೆ. ದೇವರ ಎದುರು ಅಪರಾಧಿಯಲ್ಲ ಸುತ್ತಲಿನವರ ಎದುರಿಗೂ, ಸಂಬಂಧಿಕರಿಗೂ. ಒಂದು ಸಮಾಧಾನಕರ ಸಂಗತಿಯೆಂದರೆ ನನ್ನ ಗಂಡನನ್ನು ನೋಡಿಕೊಳ್ಳುತ್ತಿರುವುದು ಆತ್ಮಸಂತೋಷದಿಂದ. ಅದರಲ್ಲಿ ಲವಲೇಶÀವೂ ಸ್ವಾರ್ಥವಿಲ್ಲ. ನಾನು ಅವರನ್ನು ಎಷ್ಟು ಪ್ರೀತಿಸುತ್ತಿದ್ದೇನೆಂದು ನನಗೆ ಈ ಘಳಿಗೆ ಅರಿವಾಗುತ್ತಿದೆ. ಮಾಲತಿಗೆ ಒಂದು ಹೆಮ್ಮೆ ಅವಳ ಬಗ್ಗೆಯೇ ಬಂದಿತು.
* * *
ಸದಾ ಧೈರ್ಯ ತುಂಬುತ್ತಿದ್ದ ಸಿಸ್ಟರ್ ಲಿನಸ್ ಇವತ್ತು ಬೆಳಗ್ಗಿನಿಂದಲೂ ಮಂಕಾಗಿದ್ದಳು. ಮಾಲತಿ ಬಳಿ ಬಂದವಳೇ ‘ಆದಷ್ಟು ಬೇಗ ನಿಮ್ಮ ಮಗನನ್ನು ಕರೆಯಿಸಿ ತಂದೆಯನ್ನು ತೋರಿಸಿಬಿಡಿಯಮ್ಮ’ ಸಹಜವಾಗಿ ಹೇಳಿ ಹೋದಳು. ಅವಳ ಮನಸ್ಸಿನಲ್ಲಿ ಏನಿದೆಯೋ ದೇವರೇ. ನನ್ನ ಗಂಡನ ಕಥೆ ಮುಗಿದುಹೋಯಿತೆ? ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಪರೀಕ್ಷೆ ಬರೆಯುತ್ತಿರುವ ಮಗನಿಗೆ ಕಷ್ಟ ಕೊಡುವುದೆ? ಹೀಗೆ ಯೋಚಿಸುವಾಗಲೇ ಎಲ್ಲಿಂದಲೋ ಬಂದ ಧೈರ್ಯ ನನ್ನನ್ನು ಗಡಸು ಮಾಡಿತ್ತು. ಅವರನ್ನು ಉಳಿಸಿಕೊಳ್ಳಲು ಕೈಮೀರಿ ಪ್ರಯತ್ನಿಸಿದೆ. ಇನ್ನು ನನ್ನಿಂದ ಯಾವ ದೇವರಿಗೂ ಮೊರೆಯಿಡಲು ಸಾಧ್ಯವಿಲ್ಲ. ಗುರುವರ್ಯರೇ, ಅವರ ಪ್ರಾಣವನ್ನು ನಿಮ್ಮ ಪದತಲದಲ್ಲಿ ಹಾಕಿದ್ದೇನೆ. ಎಲ್ಲವೂ ನಿಮಗೆ ಬಿಟ್ಟಿದ್ದು – ಎಂದುಕೊಂಡಳು. ಮಗ ಬಂದ ನಂತರ ಒಂದು ನಿರ್ಣಯ ಹೇಳಿಬಿಡುವ. ಅವನದೊಂದು ಒಪ್ಪಿಗೆ ಪಡೆದುಕೊಂಡರೆ ಸಾಕು. ಅಲ್ಲಿಗೆ ನಾನು ಅಪರಾಧಿಯಾಗುವುದಿಲ್ಲ – ಎಂದುಕೊಂಡು ಮಗ ವಿಶ್ವಜಿತ್ನಿಗೆ ಫೋನ್ ಮಾಡಿದಳು. ಅವನು ಬೆಂಗಳೂರಿನಿಂದ ರಾತ್ರಿಯೇ ಪ್ರಯಾಣಿಸಿ, ಬೆಳಗಿನ ಜಾವ ಆಸ್ಪತ್ರೆಯಲ್ಲಿದ್ದ. ಅಪ್ಪನ ಯಾತನೆ, ಅಮ್ಮನ ಪರಿಸ್ಥಿತಿ ಕಂಡು ವಿಶ್ವನ ಮನಸ್ಸು ಕಲ್ಲಾಗುತ್ತಿತ್ತು. ಇನ್ನು ಅಪ್ಪನನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ. ಇನ್ನು ಎಷ್ಟು ದಿನ ಉಸಿರಾಟ ಇರುತ್ತದೆಯೋ ಇರಲಿ ಎಂದುಕೊಂಡ. ಮಾಲತಿ “ಈ ಪರಿಸ್ಥಿತಿಯಲ್ಲಿ ನಾವು ಏನು ಮಾಡೋಣ ಅಂತೀಯಾ ಮಗನೆ?’’ ಅಂತ ಕೇಳಿದಳು. “ಡಾಕ್ಟರ್ ಏನು ಹೇಳುತ್ತಾರೋ ಹಾಗೆ” ಅಂದ ವಿಶ್ವ. “ಇವತ್ತಲ್ಲ ನಾಳೆ ನಾವು ಕೆಟ್ಟ ಸುದ್ದಿ ಕೇಳಬೇಕು. ಕೊನೆ ಘಳಿಗೆಯಲ್ಲಾದರೂ ನಮ್ಮ ಋಣದಲ್ಲಿ ಬೀಳುತ್ತಾರೆ ಎಂದು ಸಂಬಂಧಿಕರು ಕಾದು ಕುಳಿತಿದ್ದಾರೆ. “ಅಮ್ಮಾ, ಅದು ನಿನ್ನ ಭ್ರಮೆ” ಅಂದ ವಿಶ್ವ. “ತೀರಿದ ಮೇಲೆ ದೇಹ ಇಟ್ಟುಕೊಳ್ಳಲು ಸಾಧ್ಯವಿಲ್ಲ, ಸಂಸ್ಕಾರ ಮಾಡಲೇಬೇಕು. ಯಾರಿಂದಾದರೂ ಒಂದು ಸಂಸ್ಕಾರ ಆದರೆ ಆಯಿತು.’’ ಅರೆಕ್ಷಣದಲ್ಲಿ “ನೀನು ಕಾಳಜಿ ಮಾಡಬೇಡ, ಅಪ್ಪನಿಗೆ ಏನೂ ಆಗುವುದಿಲ್ಲ” ಎಂದು ಧೈರ್ಯ ತುಂಬಿದನು. “ಒಂದೊಮ್ಮೆ ಹಾಗೇನಾದರೂ ನಡೆದುಬಿಟ್ಟರೆ ದೇಹವನ್ನು ಸುಡುವುದೇ ಬೇಡ, ಮೆಡಿಕಲ್ ಕಾಲೇಜಿಗೆ ದಾನ ಕೊಟ್ಟರೆ ಆಗದೆ?” ಎಂದಳು. ಮಗ ಮಾತಾಡುವ ಮುನ್ನವೇ ನಾನು, ಅವರು ಸಂಬಂಧಿಕರು ಕೊಡುವ ಕಷ್ಟ ನೋಡಿ ಹಾಗೆಯೇ ಮಾತಾಡಿಕೊಂಡಿದ್ದೆವು. ಕೊನೆಯ ಸಂಸ್ಕಾರದ ಋಣವೂ ನಮಗೆ ಬೇಡ ಅಂತ. ನಿನ್ನಪ್ಪನೇ ಈ ಉಪಾಯವನ್ನು ಮುಂದಿಟ್ಟಿದ್ದರು… “ಅಮ್ಮ, ಅದು ಹೇಗೆ ಸರಿಯಾಗುತ್ತದೆ? ಇನ್ನು ಅಂಗಾಂಗ ದಾನ ಕೊಡಬಹುದು. ವೈದಿಕರನ್ನು ಕೇಳಬೇಕು. ಇನ್ನು ಸಂಸ್ಕಾರವೇ ಇಲ್ಲದೇ ಆ ದೇಹ…’’ ಎಂದು ಸುಮ್ಮನಾದ. “ಎಲ್ಲದಕ್ಕೂ ನೀನೇ ಅಧಿಕಾರ ಹೊಂದಿದವನು ಮಗನೆ. ನಿನ್ನ ಒಪ್ಪಿಗೆಯಿಲ್ಲದೇ ಏನೂ ನಡೆಯಲಾರದು ಇಲ್ಲಿ’’ ಎಂದು ಕಣ್ಣಲ್ಲಿ ನೀರು ತುಂಬಿಕೊಂಡಳು. ಮಗ ಹೇಳುವುದರಲ್ಲಿಯೂ ಸತ್ಯವಿದೆ. ಯಾವ ಘಳಿಗೆಯಲ್ಲಿ ಏನು ಕಥೆಯೋ. ‘ಚಿತೆಗೆ ಅಗ್ನಿಸ್ಪರ್ಶ ಮಾಡಲಾದರೂ ಬೇಕು’ ಎನ್ನುತ್ತಾ, ಅವನ ಏಳನೇ ವರ್ಷದಲ್ಲೇ ಉಪನಯನ ಸಂಸ್ಕಾರ ಮಾಡಿದ್ದರಲ್ಲವೇ. ಅವನ ಕರ್ತವ್ಯಪ್ರಜ್ಞೆ, ಅಪ್ಪನ ಕುರಿತಾದ ಮೋಹ ಎಲ್ಲವೂ ಕಣ್ಮುಂದೆ ಬಂದು ಮಗನ ಬಗ್ಗೆ ಹೆಮ್ಮೆ ಮೂಡಿತು. ‘ಇಂದಿನ ದಿನಮಾನದಲ್ಲಿ ತಂದೆ-ತಾಯಿಗಳ ಸಂಸ್ಕಾರಕ್ಕೂ ಬರಲು ಹಿಂದೇಟು ಹಾಕುವ, ಶ್ರಾದ್ಧಕರ್ಮಗಳನ್ನು ಮಾಡಲೂ ಸಮಯ ಇಲ್ಲದವರ ಮುಂದೆ ನಿನ್ನ ಹೆತ್ತಿದ್ದು ಸಾರ್ಥಕವಾಯಿತು ಮಗನೆ’ ಎಂದುಕೊಂಡಳು.
ಅವಳ ಮನಸ್ಸು ಬೇಡ ಎನ್ನುತ್ತಿದ್ದರೂ, ಮಾಲತಿಯೇ ವಿಶ್ವನಿಗೆ ಒತ್ತಾಯಿಸಿ ತನ್ನ ತಮ್ಮನಿಗೆ ಫೋನ್ ಮಾಡಿಸಿ ಅಭಿಪ್ರಾಯ ಕೇಳು ಎಂದಳು. ವಿಶ್ವನ ಮಾವನು ದೇಹದಾನದ ಬಗ್ಗೆ ನೇರವಾಗಿ ಮಾತಿಗಿಳಿದ. “ಪಂಡಿತರನ್ನು ಕೇಳಿಯೇ ನಿರ್ಣಯಕ್ಕೆ ಬಂದರೆ ಒಳಿತಲ್ಲವೇ ಮಾವ, ಅಂಗಾಂಗ ದಾನ ಮಾಡಬಹುದು. ಸಂಸ್ಕಾರ ಎಂಬುದೇ ಇಲ್ಲದೆ ಒಣಗಿದ ಹೆಣವಾಗಿ, ನೂರು ಜನರ ನಡುವೆ ಇದ್ದು ಅನಾಥವಾಗುವ, ಬಂಧನದಲ್ಲಿ ಇಲ್ಲದೇ ಬಂಧನದಲ್ಲಿರುವ ದೇಹದ ದಾನವನ್ನು ದಾನ ಮಾಡಿಯೂ ಅಪರಿಚಿತನಾಗಿಬಿಡುವ ಅಪ್ಪನ ದೇಹಕ್ಕೆ ಗೌರವ ಸಿಕ್ಕಬಲ್ಲುದೆ? ಮೌನವಾಗಿ ಬದುಕಿದ ಅಪ್ಪ ಸತ್ತ ನಂತರವೂ ಮೂಕವಾಗಿ ನೋವು ಅನುಭವಿಸುತ್ತಿರಬೇಕೆ? ಎಂಬೆಲ್ಲಾ ಯೋಚನೆಗಳು ಬರುತ್ತಿವೆ ನನ್ನಲ್ಲಿ’’ ಎಂದಿದ್ದ.
ತಕ್ಷಣ ವಿಶ್ವನ ಮನಸ್ಸಿಗೆ ಒಂದು ಸಂಗತಿ ಬಂತು. ಹಾಗೆ ಚರ್ಚೆ ನಡೆಯುವಾಗ ಅಪ್ಪನ ಉಸಿರಾಟ ನಿಂತಿರಲಿಲ್ಲ. ಈಗಲೂ ನಿಂತಿಲ್ಲ. ‘ಬದುಕಲೆಂದೇ ಉಸಿರು ಎಳೆಯುತ್ತಾ ಹೋರಾಟ ನಡೆಸುತ್ತಿರುವ ಅಪ್ಪ. ಅಪ್ಪನನ್ನು ಬದುಕಿಸಲು ಸತ್ತು ಬದುಕುತ್ತಿರುವ ಅಮ್ಮ. ಅಪ್ಪ ಬದುಕಿರುವಾಗಲೇ ಅವನ ಅಂತ್ಯಸಂಸ್ಕಾರದ ಬಗ್ಗೆ ತಲೆ ಕೆಡಿಸಿಕೊಂಡುಬಿಟ್ಟೆ ನಾನು.’ ವಿಶ್ವ ಅಪರಾಧಿ ಪ್ರಜ್ಞೆಯಿಂದ ಕುಸಿದುಹೋದ. ಮಾವನೊಂದಿಗೆ ಔಪಚಾರಿಕವಾಗಿಯೂ ಮಾತನಾಡದೆ ತಕ್ಷಣ ಫೋನ್ ಕರೆ ಕಟ್ ಮಾಡಿದ. ನಂತರ ಅಮ್ಮ-ಮಗನ ನಡುವೆ ಅಪ್ಪನ ದೇಹದಾನದ ವಿಚಾರ ಬರಲೇ ಇಲ್ಲ.
ಮಾಲತಿ ಬೆಳಗಿನ ಜಾವವೇ ಮಗನನ್ನು ತಯಾರು ಮಾಡಿ ಪರೀಕ್ಷೆ ಬರೆಯಲು ಬೆಂಗಳೂರಿಗೆ ಕಳುಹಿಸಿದಳು.
‘ನನ್ನ ದರಿದ್ರ ಮನಸ್ಸು ಒಮ್ಮೊಮ್ಮೆ ಅವರ ಸಾವಿನ ಬಗ್ಗೆ ಏಕೆ ಯೋಚಿಸುತ್ತಿದೆ? ದೇಹದಾನದ ಬಗ್ಗೆ ಏಕೆ ನನ್ನ ಗಮನ ಹೊರಳುತ್ತಿದೆ?’ ಎಂದು ಚಿಂತಿಸಿದಳು. ಮಾಲತಿ ಈ ಪ್ರಪಂಚದಲ್ಲಿ ಗಂಡನನ್ನು ಕಳೆದುಕೊಂಡು ಇರಲು ಸಾಧ್ಯವಿಲ್ಲ. ಅವರ ಅಂತಿಮ ಸಂಸ್ಕಾರ ಅಂದರೆ ಚಿತೆಯ ಮೇಲೆ ಉರಿದು ಭಸ್ಮವಾಗುವ ದೇಹ. ಮತ್ತು ಆ ಕೆಟ್ಟ ದೃಶ್ಯದ ನೆನಪು ಮತ್ತು ಒಂದಿನಿತೂ ಕನಿಕರವಿಲ್ಲದೆ ವೈಧವ್ಯದ ವೇಷ ತೊಡಿಸುವ ನಿಷ್ಕರುಣ ಹೆಂಗಸರ ಶಿಕ್ಷೆ. ಅದರಿಂದ ತಪ್ಪಿಸಿಕೊಳ್ಳಲು ಮನಸ್ಸು ದಾರಿ ಹುಡುಕುತ್ತಿದೆಯೆ? ದೇಹದಾನ ಕೊಟ್ಟುಬಿಟ್ಟರೆ ಇವು ಯಾವುದೂ ಇಲ್ಲದೇ ಯಜಮಾನರು ಎಲ್ಲಿಗೋ ತಿರುಗಾಟಕ್ಕೆ ಹೋಗಿದ್ದಾರೆ ಎಂಬ ಭ್ರಮೆಯಲ್ಲಿ ಕಾಲ ಕಳೆಯಬಹುದಲ್ಲ ಎಂದು ಕಂಡುಕೊಂಡ ಸುಖದ ದಾರಿಯೇ? ಯಾವುದೂ ಅರ್ಥವಾಗುತ್ತಿಲ್ಲ.
ಶ್ರಾವಣಮಾಸದ ಎರಡನೇ ಮಂಗಳವಾರ ವರಮಹಾಲಕ್ಷ್ಮಿ ವ್ರತÀ. ಬಹಳ ವರ್ಷಗಳಿಂದ ಕರೆಯುತ್ತಿರುವವರು ಕರೆದಿಲ್ಲ. ಗಂಡನ ಕಥೆ ಮುಗಿಯಿತೆಂದೇ ಅವರೆಲ್ಲ ತಿಳಿದಿರಬೇಕು. ಬಾಗಿನವನ್ನು ಅವರು ನೀಡಿಲ್ಲ. ನನ್ನ ಗಂಡ ಜೀವಂತ ಇದ್ದಾಗಲೇ ನನ್ನನ್ನು ಬಯಸದ ಪಟ್ಟಕ್ಕೆ ತಳ್ಳಿಬಿಟ್ಟರಲ್ಲ ಎಂದು ಬೇಸರಿಸಿದಳು ಮಾಲತಿ. ಸಮಾಜ ನನ್ನನ್ನು ಹೀಗೆ ನಡೆಸಿಕೊಂಡಿದ್ದು ತಪ್ಪು ಎಂದು ಪಶ್ಚಾತ್ತಾಪ ಪಡಲಾದರೂ ನನ್ನ ಗಂಡನ ಜೀವ ಉಳಿಸು ದೇವರೇ – ಎಂದು ಪ್ರಾರ್ಥಿಸಿದಳು. ‘ನಾನು ಹಾಗೇ ಅಲ್ಲವೇ? ಗಂಡ ಉಸಿರಾಡುತ್ತಿರುವಾಗಲೇ ದೇಹದಾನದ ಬಗ್ಗೆ ಮಾತನಾಡಿದ್ದು, ಅನಾವಶ್ಯಕವಾಗಿ ಮಗನೊಂದಿಗೆ ಚರ್ಚಿಸಿ ಅವನ ಮನಸ್ಸನ್ನು ನೋಯಿಸಿದ್ದು. ಮತ್ತು ಈಗ ನನ್ನ ಮನಸ್ಸನ್ನು ನೋಯಿಸಿಕೊಳ್ಳುತ್ತಿರುವುದು. ದಿಕ್ಕು ತೋಚದೆ ಭ್ರಮೆಯ ಲೋಕದಲ್ಲಿ ಹಾಗೆ ಮಾಡಿದೆನೇನೋ. ಅಸಹಾಯಕ ಮನಸ್ಸು ಯಾವುದೇ ನಿರ್ಧಾರಕ್ಕೆ ಬರಲು ಅಂಜುತ್ತಿದೆ.
* * *
ಯಶೋಧರ ಮಂಗಳೂರು ಆಸ್ಪತ್ರೆಗೆ ಸೇರಿ ಹದಿನಾಲ್ಕು ದಿನವಾಯಿತು. ತುರ್ತು ನಿಗಾ ಘಟಕದಿಂದ ನರ್ಸ್ ಸುದ್ದಿ ತಂದಳು. ‘ನಿಮ್ಮ ಯಜಮಾನರಿಗೆ ಪ್ರಜ್ಞೆ ಬಂದಿದೆಯಮ್ಮ.’ ಮಾಲತಿ ಭಯ, ಆತಂಕ, ಸಂಭ್ರಮದಿಂದ ಮಧ್ಯಾಹ್ನ ಗಂಡನನ್ನು ನೋಡಿಕೊಂಡು ಬಂದಳು. ಆಗೊಮ್ಮೆ, ಈಗೊಮ್ಮೆ ಕಣ್ಣು ಬಿಟ್ಟು, ಮುಚ್ಚುವ ಗಂಡ ಮಾಲತಿಯನ್ನು ಗುರುತು ಹಿಡಿಯಲಿಲ್ಲ. “ನಾನು ಮಾಲತಿ, ನನ್ನ ಗುರುತು ಸಿಕ್ಕಲಿಲ್ಲವಾ?” ಎಂದಳು. ಗಂಡನ ಗಲ್ಲ ಮುಟ್ಟಿ “ಯೂ ಆರ್ ಎ ಬ್ರೇವ್ ಬಾಯ್, ಏನೂ ಆಗಿಲ್ಲ, ಆರಾಮ ಆಗ್ತೀರಿ” ಎಂದು ಹುರಿದುಂಬಿಸಿದಳು. ಗುರುವರ್ಯ ಕಡೆಗೂ ನನ್ನ ಕೈ ಬಿಡಲಿಲ್ಲ. ಅಯಾಚಿತವಾಗಿ ಅವಳು ಹಲುಬಿದಳು. ಯಶೋಧರ ಪಿಳಿಪಿಳಿ ಕಣ್ಣು ಬಿಡುತ್ತಲೇ ಇದ್ದ.
ಅಲ್ಲಿಂದ ಮಾಲತಿ ಪ್ರತಿ ರಾತ್ರಿಯೂ ಹಗಲಾಗುವುದನ್ನು ಕಾಯುತ್ತಿದ್ದಳು.
ಹದಿನೈದನೆ ದಿನ. ಯಶೋಧರ ಏನೇನೋ ತೊದಲು ನುಡಿಗಳನ್ನು ಆಡತೊಡಗಿದ. “ಅವರು ಏನೇನೋ ಬಡಬಡಿಸುತ್ತಾರಪ್ಪ. ಒಂದೂ ಅರ್ಥವಾಗುತ್ತಿಲ್ಲ” ಎಂದಳು ನರ್ಸ್. ಮಾಲತಿ ಗಂಡನನ್ನು ಮಾತಾಡಿಸಿಕೊಂಡು ಬಂದಳು. ಏನು ಮಾತನ್ನಾಡುತ್ತಾನೋ ಯಶೋಧರ, ಅವನಿಗೇ ಗೊತ್ತಿಲ್ಲ.
ಹದಿನಾರನೇ ದಿನ: ಯಶೋಧರ ಮಾಲತಿಯನ್ನು ಗುರುತುಹಿಡಿದ! “ನಾವು ಎಲ್ಲಿ ಇದ್ದೇವೆ. ಕುಮಟೆಯಲ್ಲೋ, ಬೆಂಗಳೂರಿನಲ್ಲೋ?” – ಎಂದು ತೊದಲಿದ. ಮಾಲತಿ “ಮಂಗಳೂರಿನಲ್ಲಿ. ಜಾಸ್ತಿ ಮಾತಾಡಿ ಆಯಾಸ ಮಾಡ್ಕೋಬೇಡಿ” ಎಂದಳು. “ತುಳಸು ಮಾರುಗೆ ಸವದೆ ಬೇಡ ಎಂದು ಹೇಳು, ನಾನು ಆರಾಮು ಎಂದು ಹೇಳು.’’ ಮಾಲತಿಯ ಕಣ್ಣಲ್ಲಿ ನೀರು ಜಿನುಗಿತು.
ಹದಿನೇಳನೇ ದಿನ: ಡಯಾಲಿಸಿಸ್ ಬೇಡ, ಕಿಡ್ನಿ ಫಂಕ್ಷನ್ ಸರಿಯಾದಂತಿದೆ – ಎಂದರು ಡಾಕ್ಟರರು. ಯಶೋಧರನನ್ನು ಜನರಲ್ ವಾರ್ಡಿಗೆ ಶಿಫ್ಟ್ ಮಾಡಿದರು. ಇನ್ನು ಮೂಗಿಂದ ಅಹಾರ ಬೇಡ, ಘನ ಅಹಾರ ತಿನ್ನಿಸಿ ಎಂದರು ಡಾಕ್ಟರು. ಮಾಲತಿ ಅವನಿಗೆ ಇಡ್ಲಿ ತಿನ್ನಿಸಿದಳು.
ಹದಿನೆಂಟನೇ ದಿನ: ಯಶೋಧರನಿಗೆ ಶಾಪ ವಿಮೋಚನೆಯಾದಂತೆ ಆಸ್ಪತ್ರೆಯಿಂದ ಬಿಡುಗಡೆ ಮಾಡಿದರು. ಮಾಲತಿ ಭವದ ಯುದ್ಧ ಗೆದ್ದವರ ತರಹ ಸಂಭ್ರಮದಲ್ಲಿ ಗಂಡನ ಕೈ ಹಿಡಿದುಕೊಂಡು ಆಸ್ಪತ್ರೆಯ ವರಾಂಡದಲ್ಲಿ ನಡೆಯತೊಡಗಿದಳು.
* * *
ನಿನ್ನೆ ಮೊನ್ನೆ ಬಂದವರ ತರಹ ಮನೆಗೆ ಬಂದು ಒಂದು ವಾರ ಕಳೆಯಿತು. ರಾತ್ರಿ ಲಹರಿಯಿಂದ ಯಶೋಧರ ಮುರಿದುಹೋದ ಬೆತ್ತದ ತೊಟ್ಟಿಲಿಗೆ ಹಗ್ಗ ಬಿಗಿಯುತ್ತಿದ್ದ. ಒಡೆಯನನ್ನು ಮಾತಾಡಿಸಲು ಬಂದ ತುಳಸು “ಒಡಿದೀರು ತೊಟ್ಟಿಲು ರಿಪೇರಿಗೆ ಹಣಿಕಂಡರಂಬಾಂಗೆ’’ ಎಂದ. “ಹೌದಪ್ಪ ತುಳಸು, ಈ ಬಾರಿ ಮಗನ ಮದುವೆ ಮಾಡಬೇಕಪ್ಪ. ಮೊಮ್ಮಕ್ಕಳ ಕಾಣಬೇಕಪ್ಪ. ಇಲ್ದೇ ಇದ್ರೆ ನಮಗೆಲ್ಲಿ ಮುಕ್ತಿ ಹೇಳು’’ ಎಂದ ಯಶೋಧರ. ಸುಟ್ರಾನ ಹಕ್ಕಿ ಅಡಿಕೆ ತೋಟದಲ್ಲೆಲ್ಲೋ ಕುಳಿತು ಕೂಗುವುದು ಕೇಳಿತು. “ಈ ಸುಟ್ಟ ಜಾತಿ ಹೆಚ್ಚಾಗ್ಬಿಟ್ಟದೆ. ಹಗಲು-ರಾತ್ರಿಯಿಲ್ಲ, ಕೂಗದೇಯ. ಯರ್ನ ತಕ್ಕಂಡ್ ಹೋಗೂಕ್ ಬಂದದೇಯೇನ” ಎಂದ ತುಳಸು. ಮಾಲತಿಗೆ ಆಸ್ಪತ್ರೆಯ ಆವಾರದ ಸಂಪಿಗೆಮರ ನೆನಪಾಯಿತು. ಅದರಲ್ಲಿ ಕುಳಿತು ಕೂಗಿದ ಹಕ್ಕಿ ನೆನಪಾಯಿತು.
ಯಶೋಧರ ನಕ್ಕ. ಮಾಲತಿ ಗಂಡನನ್ನು ನೋಡಿ ನಗೆ ಮಾಡಿದಳು.
⭐⭐⭐⭐⭐ ಒಂದೊಂದು ಮಾತು ಕಣ್ಣಿನಲ್ಲಿ ನೀರು ತುಂಬಿಸುವಂತದ್ದು. ಬಹಳ ಚೆನ್ನಾಗಿ ಬರೆದಿದ್ದಾರೆ.