ದೇಶಾಂತರಕ್ಕೆ ಹೋದ ತಾಪಸನು ಊರಿಂದೂರಿಗೆ ಅಲೆಯುತ್ತ ವಕ್ರೋಲಕವೆಂಬ ಗ್ರಾಮಕ್ಕೆ ಬಂದನು. ಅಲ್ಲಿ ಯಾವನೋ ಒಬ್ಬ ಬ್ರಾಹ್ಮಣನ ಮನೆಯಲ್ಲಿ ಅತಿಥಿಯಾಗಿ ನಿಂತನು. ಬ್ರಾಹ್ಮಣನು ಅತಿಥಿಯನ್ನು ಸತ್ಕರಿಸಿ ಊಟಕ್ಕೆ ಕುಳ್ಳಿರಿಸಿದನು. ಊಟ ಮಾಡುತ್ತಿರುವಾಗ ಒಂದು ಮಗುವು ತುಂಬ ಚಂಡಿ ಹಿಡಿದು ಅಳುವುದಕ್ಕೆ ಮೊದಲು ಮಾಡಿತು. ಯಾರು ಎಷ್ಟು ಸಮಾಧಾನ ಮಾಡಿದರೂ ಸುಮ್ಮನಾಗಲಿಲ್ಲ. ಮನೆಯ ಯಜಮಾನಿಯು ಕೋಪಗೊಂಡು, ಆ ಮಗುವನ್ನು ಎತ್ತಿ ಉರಿಯುತ್ತಿದ್ದ ಬೆಂಕಿಯಲ್ಲಿ ಹಾಕಿಬಿಟ್ಟಳು. ಮಗು ಉರಿದು ಬೂದಿಯಾಗಿಹೋಯಿತು!
ತ್ರಿವಿಕ್ರಮಸೇನನು ಅದೇ ಮುಳ್ಳುಮುತ್ತುಗದ ಮರದ ಬುಡಕ್ಕೆ ಬಂದನು.
ಉರಿಯುತ್ತಿದ್ದ ಚಿತೆಗಳ ಬೆಳಕಿನಲ್ಲಿ ಅವನು ಮರದ ಕೆಳಗೆ ಬಿದ್ದಿದ್ದ
ಹೆಣವನ್ನು ಕಂಡನು. ಅದು ಕೂಗಿಕೊಳ್ಳುತ್ತಿತ್ತು. ಅದರಲ್ಲಿ ಬೇತಾಳನ ಆವಾಹನೆಯಾಗಿರುವುದು ಖಂಡಿತ ಎಂದು ನಿರ್ಧರಿಸಿ ಅವನು ಆ ಹೆಣವನ್ನು ಎತ್ತಿ ಹೆಗಲ ಮೇಲೆ ಹೊತ್ತುಕೊಂಡು ಮೌನವಾಗಿ ಮತ್ತೆ ಭಿಕ್ಷುವಿದ್ದ ಕಡೆಗೆ ಹೊರಟನು. ಆಗ ಹೆಣದಲ್ಲಿದ್ದ ಬೇತಾಳನು – “ಅಯ್ಯಾ ಮಹಾರಾಜ! ನೀನು ಸುಮ್ಮನೆ ಅನುಚಿತವಾದ ಕೆಲಸ ಮಾಡುವಂತಾಯ್ತಲ್ಲ ಎಂದು ನನಗೆ ವಿಷಾದವಾಗುತ್ತಿದೆ. ಇರಲಿ, ನಿನ್ನ ಮಾರ್ಗಾಯಾಸ ಪರಿಹಾರಕ್ಕಾಗಿ ಒಂದು ಕಥೆಯನ್ನು ಹೇಳುತ್ತೇನೆ. ಗಮನವಿಟ್ಟು ಕೇಳಿಸಿಕೋ” ಎಂದು ಹೇಳಿ ಈ ಕಥೆಯನ್ನು ಹೇಳಿದನು –
ಕಾಳಿಂದೀ ನದಿಯ ತೀರದಲ್ಲಿ ಬ್ರಹ್ಮಸ್ಥಲವೆಂಬ ಅಗ್ರಹಾರವಿದೆ. ಅಲ್ಲಿ ವೇದಪಾರಂಗತನಾದ ಅಗ್ನಿಸ್ವಾಮಿ ಎಂಬ ಬ್ರಾಹ್ಮಣನಿದ್ದನು. ಅವನಿಗೆ ಮಂದಾರವತಿಯೆಂಬ ಅತ್ಯಂತ ಸುಂದರಿಯಾದ ಮಗಳಿದ್ದಳು. ಅವಳು ಪ್ರಾಪ್ತವಯಸ್ಕಳಾಗುತ್ತಿದ್ದಂತೆ ಅವಳನ್ನು ವಿವಾಹವಾಗಲು ಅನೇಕ ಯುವಕರು ನಾ ಮುಂದು ತಾ ಮುಂದು ಎಂದು ಬರಲಾರಂಭಿಸಿದರು.
ಒಮ್ಮೆ ಕಾನ್ಯಕುಬ್ಜದಿಂದ ಮೂವರು ಯುವಕರು ಅಗ್ನಿಸ್ವಾಮಿಯ ಮನೆಗೆ ಬಂದರು. ಮೂವರೂ ರೂಪವಂತರು, ಗುಣಸಂಪನ್ನರು. ಅವರಲ್ಲಿ ಒಬ್ಬೊಬ್ಬನೂ ಅವನನ್ನು “ನಿಮ್ಮ ಮಗಳನ್ನು ನನಗೇ ಕೊಡಬೇಕು. ಅವಳು ನನ್ನ ಹೆಂಡತಿಯೆಂದು ನಾನು ಈಗಾಗಲೇ ತೀರ್ಮಾನಿಸಿ ಬಿಟ್ಟಿದ್ದೇನೆ. ನನ್ನ ಪ್ರಾಣ ಹೋದರೂ ಚಿಂತೆಯಿಲ್ಲ, ನಾನು ಅವಳನ್ನು ಮತ್ತೊಬ್ಬರಿಗೆ ಕೊಡಲು ಅವಕಾಶ ನೀಡುವುದಿಲ್ಲ” ಎಂದು ಖಡಾಖಂಡಿತವಾಗಿ ಕೇಳಿಕೊಂಡರು. ಅಗ್ನಿಸ್ವಾಮಿಯ ತಲೆ ಹಾಳಾಗಿ ಹೋಯ್ತು. ಮೂವರಲ್ಲಿ ಯಾವೊಬ್ಬನಿಗೆ ಕೊಟ್ಟರೂ ಉಳಿದಿಬ್ಬರು ಕುಪಿತರಾಗಿ ಏನು ಮಾಡುತ್ತಾರೋ ಹೇಳಲು ಬರುವುದಿಲ್ಲ, ಹಾಗಾಗಿ ಅವನು ಯಾರಿಗೂ ಕೊಡಲಿಲ್ಲ.
ಆದರೆ ಯುವಕರು ಪಟ್ಟು ಬಿಡಲಿಲ್ಲ. ಹಗಲೂ, ರಾತ್ರಿಯೂ ಮಂದಾರವತಿಯ ಚಂದ್ರನAತಹ ಮುಖವನ್ನು ನೋಡಿಕೊಂಡು ಅಲ್ಲಿಯೇ ಇದ್ದುಬಿಟ್ಟರು. ಹೀಗಿರುವಾಗ ಒಂದು ದಿನ ಅಕಸ್ಮಾತ್ ಆಗಿ ಅವಳಿಗೆ ಕೆಂಡದಂತಹ ಜ್ವರ ಬಂತು. ಅದರ ತೀವ್ರತೆಯಿಂದ ಅವಳು ಸತ್ತೇ ಹೋದಳು. ಅವಳನ್ನೇ ಹೆಂಡತಿಯೆಂದು ಭಾವಿಸಿಕೊಂಡಿದ್ದ ಮೂವರಿಗೂ ಆದ ನಿರಾಶೆ ಅಷ್ಟಿಷ್ಟಲ್ಲ. ಆದರೂ ಅವರು ಹೇಗೋ ಸಹಿಸಿಕೊಂಡು ಅವಳ ಶರೀರವನ್ನು ಅಲಂಕರಿಸಿ, ಸ್ಮಶಾನಕ್ಕೆ ಕೊಂಡು ಹೋಗಿ ಅಲ್ಲಿ ಅಗ್ನಿಸಂಸ್ಕಾರ ಮಾಡಿದರು. ಆಮೇಲೆ ಒಬ್ಬನು ಆ ಬೂದಿಯ ಮೇಲೆಯೇ ಗುಡಿಸಲು ಕಟ್ಟಿಕೊಂಡು, ಬೂದಿಯನ್ನೇ ಹಾಸಿಗೆಯನ್ನಾಗಿ ಮಾಡಿಕೊಂಡು ಅದರ ಮೇಲೆಯೇ ಮಲಗುತ್ತ, ಬೇಡದೆಯೆ ಇದ್ದರೂ ಭಿಕ್ಷೆಯಾಗಿ ಏನಾದರೂ ದೊರಕಿದರೆ ಅಷ್ಟನ್ನು ಮಾತ್ರ ಸೇವಿಸುತ್ತ ಅಲ್ಲಿಯೇ ವಾಸ ಮಾಡಿದನು. ಎರಡನೆಯವನು ಆ ಬೂದಿಯ ನಡುವಿನಿಂದ ಎಲುಬುಗಳನ್ನು ಸಂಗ್ರಹಿಸಿಕೊಂಡು ಅಸ್ಥಿವಿಸರ್ಜನೆ ಮಾಡಲೆಂದು ಗಂಗಾನದಿಯ ಕಡೆಗೆ ಹೊರಟನು. ಮೂರನೆಯವನು ತಾಪಸನಾಗಿ ದೇಶಾಂತರ ಹೊರಟು ಹೋದನು.
ಹೀಗೆ ದೇಶಾಂತರಕ್ಕೆ ಹೋದ ತಾಪಸನು ಊರಿಂದೂರಿಗೆ ಅಲೆಯುತ್ತ ವಕ್ರೋಲಕವೆಂಬ ಗ್ರಾಮಕ್ಕೆ ಬಂದನು. ಅಲ್ಲಿ ಯಾವನೋ ಒಬ್ಬ ಬ್ರಾಹ್ಮಣನ ಮನೆಯಲ್ಲಿ ಅತಿಥಿಯಾಗಿ ನಿಂತನು. ಬ್ರಾಹ್ಮಣನು ಅತಿಥಿಯನ್ನು ಸತ್ಕರಿಸಿ ಊಟಕ್ಕೆ ಕುಳ್ಳಿರಿಸಿದನು. ಊಟ ಮಾಡುತ್ತಿರುವಾಗ ಒಂದು ಮಗುವು ತುಂಬ ಚಂಡಿ ಹಿಡಿದು ಅಳುವುದಕ್ಕೆ ಮೊದಲು ಮಾಡಿತು. ಯಾರು ಎಷ್ಟು ಸಮಾಧಾನ ಮಾಡಿದರೂ ಸುಮ್ಮನಾಗಲಿಲ್ಲ. ಮನೆಯ ಯಜಮಾನಿಯು ಕೋಪಗೊಂಡು, ಆ ಮಗುವನ್ನು ಎತ್ತಿ ಉರಿಯುತ್ತಿದ್ದ ಬೆಂಕಿಯಲ್ಲಿ ಹಾಕಿಬಿಟ್ಟಳು. ಮಗು ಉರಿದು ಬೂದಿಯಾಗಿ ಹೋಯಿತು!
ಇದನ್ನು ನೋಡಿದ ಅತಿಥಿಗೆ ಮೈ ಜುಂ ಎಂದಿತು. ಅವನು “ಅಯ್ಯೋ! ಹೋಗಿ ಹೋಗಿ ಬ್ರಹ್ಮರಾಕ್ಷಸನ ಮನೆಗೆ ಬಂದುಬಿಟ್ಟೆನಲ್ಲ. ಈ ಪಾಪದ ಊಟವನ್ನು ನಾನು ಮಾಡುವುದಿಲ್ಲ…’’ ಎಂದು ಹೇಳಿಬಿಟ್ಟನು. ಆಗ ಯಜಮಾನನು ಅವನನ್ನು ಸಮಾಧಾನಪಡಿಸಿ “ಚಿಂತೆ ಮಾಡಬೇಡ. ಸತ್ತವರನ್ನು ಬದುಕಿಸುವ ಮೃತಸಂಜೀವನೀಮಂತ್ರ ನನ್ನ ಬಳಿ ಇದೆ. ಅದರಿಂದ ನಾನು ಈ ಮಗುವನ್ನು ಮತ್ತೆ ಬದುಕಿಸುತ್ತೇನೆ. ನನ್ನ ಮಂತ್ರಶಕ್ತಿಯನ್ನು ನೋಡು” ಎಂದು ಹೇಳಿ, ಮನೆಯಲ್ಲಿ ನಾಗದಂತದಲ್ಲಿ (ನಾಗೊಂದಿಗೆಯಲ್ಲಿ) ಸುರಕ್ಷಿತವಾಗಿ ಇರಿಸಿದ್ದ ಮಂತ್ರದ ಪುಸ್ತಕವನ್ನು ತೆಗೆದು ಬಿಡಿಸಿ, ಆ ಮಂತ್ರವನ್ನು ಓದಿ, ಒಂದು ಚಿಟಿಕಿ ಮಣ್ಣನ್ನು ಅಭಿಮಂತ್ರಿಸಿ ಬೂದಿಯ ಮೇಲೆ ಹಾಕಿದನು. ಕೂಡಲೇ ಮಗುವು ಮೊದಲಿನಂತೆ ಬದುಕಿಬಂತು. ಅದರಿಂದ ಮನಸ್ಸಿಗೆ ಸಮಾಧಾನವಾಗಿ ತಾಪಸನು ಅಲ್ಲೇ ಊಟ ಮಾಡಿದನು. ಯಜಮಾನನೂ ಮಂತ್ರಪುಸ್ತಕವನ್ನು ಅದೇ ಜಾಗದಲ್ಲಿ ಇರಿಸಿದನು. ತಾಪಸನು ಅಂದು ರಾತ್ರಿ ಅಲ್ಲಿಯೇ ಉಳಿದುಕೊಂಡನು.
ಮಲಗಿಕೊಂಡ ಅವನಿಗೆ ಹೇಗಾದರೂ ಮೃತಸಂಜೀವನೀಮಂತ್ರವನ್ನು ಕೈವಶ ಮಾಡಿಕೊಳ್ಳಬೇಕು ಎನಿಸಿತು. ಅವನು ರಾತ್ರಿ ಎಚ್ಚರವಾಗಿಯೇ ಇದ್ದು, ಎಲ್ಲರೂ ನಿದ್ದೆ ಹೋಗುವವರೆಗೆ ಕಾದಿದ್ದು, ಆಮೇಲೆ ಸದ್ದಾಗದಂತೆ ಎದ್ದು ನಾಗೊಂದಿಗೆಗೆ ಕೈಹಾಕಿ ಆ ಪುಸ್ತಕವನ್ನು ಎತ್ತಿಕೊಂಡು ಮನೆಯಿಂದ ಹೊರಗೆ ಬಂದನು. ಹಗಲೂ ರಾತ್ರಿ ಒಂದೇ ಸಮನೆ ನಡೆದು, ತನ್ನ ಪ್ರಿಯತಮೆಯಾದ ಮಂದಾರವತಿಯ ಶರೀರವನ್ನು ಬೂದಿಮಾಡಿದ್ದ ಸ್ಮಶಾನಕ್ಕೆ ಬಂದನು. ಮೊದಲನೆಯವನು ಇನ್ನೂ ಗುಡಿಸಲಿನಲ್ಲಿ ಬೂದಿಯ ಮೇಲೆ ಮಲಗಿದ್ದನು. ಅಷ್ಟು ಹೊತ್ತಿಗೆ ಗಂಗಾನದಿಗೆ ಅಸ್ಥಿವಿಸರ್ಜನೆ ಮಾಡಲು ಹೋಗಿದ್ದ ಎರಡನೆಯವನೂ ಅಲ್ಲಿಗೆ ಬಂದಿದ್ದನು. ಇವನು ಅವರಿಬ್ಬರನ್ನು ನೋಡಿ, “ಈ ಗುಡಿಸಲನ್ನು ಕಿತ್ತು ಹಾಕಿ. ನಾನು ಈ ಕ್ಷಣವೇ ಮಂದಾರವತಿಯನ್ನು ಬದುಕಿಸುತ್ತೇನೆ” ಎಂದು ಹೇಳಿದನು. ಆಮೇಲೆ ಪುಸ್ತಕವನ್ನು ತೆರೆದು, ಮಂತ್ರವನ್ನು ಓದಿ ಒಂದು ಚಿಟಿಕಿ ಮಣ್ಣನ್ನು ಅಭಿಮಂತ್ರಿಸಿ ಬೂದಿಯ ಮೇಲೆ ಹಾಕಿದನು. ಅವರೆಲ್ಲ ನೋಡುತ್ತಿರುವಂತೆ ಮಂದಾರವತಿಯು ಪುಟಕ್ಕೆ ಹಾಕಿದ ಚಿನ್ನದಂತೆ ಮೊದಲಿಗಿಂತ ಸುಂದರಳಾಗಿ ಎದ್ದು ಬಂದಳು. ಅವಳನ್ನು ನೋಡಿದ ಕೂಡಲೇ ಮೂವರೂ ಅವಳು ನನ್ನವಳು, ತನ್ನವಳು ಎಂದು ಜಗಳಕ್ಕೆ ಆರಂಭಿಸಿದರು. ಮೂರನೆಯವನು ಹೇಳಿದ – “ನನ್ನ ಮಂತ್ರಬಲದಿAದಲೇ ಅವಳು ಬದುಕಿ ಬಂದಿದ್ದು. ಹಾಗಾಗಿ ಅವಳು ನನ್ನವಳು.’’ ಎರಡನೆಯವನು ಹೇಳಿದ – “ನಾನು ತೀರ್ಥಯಾತ್ರೆ ಮಾಡಿ ಗಂಗೆಯಲ್ಲಿ ಅವಳ ಅಸ್ಥಿವಿಸರ್ಜನೆ ಮಾಡಿದ್ದೇನೆ. ಅದರ ಫಲವಾಗಿ ಅವಳು ಬದುಕಿ ಬಂದಿದ್ದಾಳೆ. ಹಾಗಾಗಿ ಅವಳು ನನ್ನವಳು.’’ ಮೊದಲನೆಯವನು “ನಾನು ಅವಳ ಬೂದಿಯನ್ನು ಇಂದಿನವರೆಗೂ ನನ್ನ ಪ್ರಾಣದಂತೆ ಕಾಪಾಡಿಕೊಂಡಿದ್ದೆ. ಅದರಿಂದಾಗಿಯೇ ಅವಳು ಎದ್ದು ಬರುವುದು ಸಾಧ್ಯವಾಯ್ತು. ಹಾಗಾಗಿ ಅವಳು ನನ್ನವಳು” ಎಂದನು.
ಹೀಗೆ ಕಥೆಯನ್ನು ಮುಗಿಸಿ ಬೇತಾಳನು – “ಮಹಾರಾಜ! ಅವರ ಜಗಳ ಪರಿಹಾರವಾಗುವುದು ಹೇಗೆ? ನ್ಯಾಯವಾಗಿ ಮಂದಾರವತಿ ಆ ಮೂವರಲ್ಲಿ ಯಾರ ಹೆಂಡತಿಯಾಗಬೇಕು? ಈ ಪ್ರಶ್ನೆಗೆ ಉತ್ತರವನ್ನು ತಿಳಿದಿದ್ದೂ ನೀನು ಹೇಳದಿದ್ದರೆ ನಿನ್ನ ತಲೆ ನೂರು ಹೋಳುಗಳಾಗಿ ಒಡೆದುಹೋಗುತ್ತದೆ” ಎಂದು ಹೇಳಿದನು. ತ್ರಿವಿಕ್ರಮನು – “ಅವರಲ್ಲಿ ಮೊದಲನೆಯವನಿಗೆ ಹೆಂಡತಿಯಾಗಬೇಕು. ಏಕೆಂದರೆ ಮೃತಸಂಜೀವನೀಮಂತ್ರದಿಂದ ಪ್ರಾಣದಾನ ಮಾಡಿದ ಮೂರನೆಯವನು ಅವಳಿಗೆ ತಂದೆಗೆ ಸಮಾನನಾಗುತ್ತಾನೆ. ತೀರ್ಥಯಾತ್ರೆ ಮಾಡಿ ಗಂಗೆಯಲ್ಲಿ ಅಸ್ಥಿವಿಸರ್ಜನೆ ಮಾಡಿದ ಎರಡನೆಯವನು ಮಗನಿಗೆ ಸಮಾನನಾಗುತ್ತಾನೆ. ಸತ್ತರೂ ಅವಳ ಬೂದಿಯನ್ನೇ ಹಾಸಿಗೆಯನ್ನಾಗಿ ಮಾಡಿ ಮಲಗಿಕೊಂಡು, ಅಲ್ಲೇ ಕಾಲಕಳೆದ ಮೊದಲನೆಯವನೇ ಅವಳ ನಿಜವಾದ ಪ್ರಿಯತಮನು. ಹಾಗಾಗಿ ಅವಳು ನ್ಯಾಯವಾಗಿ ಅವನಿಗೇ ಹೆಂಡತಿಯಾಗಬೇಕು” ಎಂದು ಉತ್ತರ ಕೊಟ್ಟನು.
ಹೀಗೆ ತ್ರಿವಿಕ್ರಮಸೇನನ ಮೌನವ್ರತ ಭಂಗವಾಗಲು ಬೇತಾಳನು ಆ ಕೂಡಲೇ ಅವನ ಹೆಗಲಿನಿಂದ ಮಾಯವಾಗಿ, ಮೊದಲಿನ ಸ್ಥಳಕ್ಕೇ ಹೋಗಿಬಿಟ್ಟನು.