ಶೋಭಾವತಿಯೆಂಬ ನಗರದಲ್ಲಿ ಶೂದ್ರಕನೆಂಬ ರಾಜನು ಅತ್ಯಂತ ನ್ಯಾಯದಿಂದ ರಾಜ್ಯವನ್ನು ಪಾಲಿಸುತ್ತಿದ್ದನು. ಒಂದು ದಿನ ಮಾಲವದೇಶದಿಂದ ವೀರವರನೆಂಬ ಬ್ರಾಹ್ಮಣನು ಅವನ ಹತ್ತಿರ ಉದ್ಯೋಗವನ್ನು ಕೇಳಿಕೊಂಡು ಬಂದನು. ಅವನಿಗೆ ಧರ್ಮವತಿಯೆಂಬ ಹೆಂಡತಿಯೂ, ಸತ್ತ್ವ್ವವರನೆಂಬ ಮಗನೂ, ವೀರವತಿಯೆಂಬ ಮಗಳೂ ಇದ್ದರು. ಅವನ ಕೈಯಲ್ಲಿ ಗುರಾಣಿಯಿತ್ತು. ಸೊಂಟದಲ್ಲಿ ಖಡ್ಗವನ್ನು ಅವನು ಸಿಕ್ಕಿಸಿಕೊಂಡಿದ್ದನು. ಇದಿಷ್ಟೇ ಅವನ ಸರ್ವಸ್ವವಾಗಿತ್ತು. ಅವನು ಹೆಂಡತಿಮಕ್ಕಳೊಂದಿಗೆ ರಾಜನ ಬಳಿಗೆ ಬಂದು ತನಗೆ ದಿನವೊಂದಕ್ಕೆ ಐನೂರು ದೀನಾರಗಳ ಸಂಬಳ ಕೊಡುವುದಾದರೆ ತಾನು ಅವನು ಹೇಳುವ ಯಾವುದೇ ಕೆಲಸವನ್ನು ಮಾಡಲು ಸಿದ್ಧನಾಗಿರುವೆನೆಂದು ತಿಳಿಸಿದನು. ರಾಜನಿಗೆ ಆಶ್ಚರ್ಯವಾಯ್ತು. ಆದರೂ ಅವನ ಗಂಭೀರ ಆಕಾರವನ್ನೂ, ಪೌರುಷವನ್ನೂ ಸೂಚಿಸುವ ಆಳ್ತನವನ್ನೂ ಕಂಡು ಅವನು ಕೇಳಿದಷ್ಟು ಸಂಬಳ ಕೊಡಲು ಒಪ್ಪಿ ತನ್ನ ಬಳಿ ಕೆಲಸಕ್ಕೆ ಇಟ್ಟುಕೊಂಡನು.
ರಾಜಾ ತ್ರಿವಿಕ್ರಮಸೇನನು ನಾಲ್ಕನೆಯ ಸಾರಿ ಹೆಣವನ್ನು ಹೆಗಲಮೇಲೆ ಹಾಕಿಕೊಂಡು ಶ್ಮಶಾನಾಭಿಮುಖವಾಗಿ ನಡೆದನು. ಆಗ ಹೆಣದಲ್ಲಿದ್ದ ಬೇತಾಳನು “ರಾಜನ್! ಈ ಕ್ಷುದ್ರ ತಾಪಸನಿಗಾಗಿ ವೃಥಾ ಶ್ರಮ ಪಡುತ್ತಿರುವೆಯಲ್ಲ.., ಇರಲಿ, ನಿನ್ನ ಮಾರ್ಗಾಯಾಸ ಪರಿಹಾರಕ್ಕಾಗಿ ಕಥೆಯೊಂದನ್ನು ಹೇಳುತ್ತೇನೆ. ಗಮನವಿಟ್ಟು ಕೇಳು’’ ಎಂದು ಹೇಳಿ ಈ ಕಥೆಯನ್ನು ಹೇಳಿದನು –
ಶೋಭಾವತಿಯೆಂಬ ನಗರವಿದೆ. ಅಲ್ಲಿ ಶೂದ್ರಕನೆಂಬ ಸಕಲಗುಣಸಂಪನ್ನನಾದ ರಾಜನಿದ್ದನು. ಅವನು ಅತ್ಯಂತ ನ್ಯಾಯದಿಂದ ರಾಜ್ಯವನ್ನು ಪಾಲಿಸುತ್ತಿದ್ದನು. ಒಂದು ದಿನ ಮಾಲವದೇಶದಿಂದ ವೀರವರನೆಂಬ ಬ್ರಾಹ್ಮಣನು ಅವನ ಹತ್ತಿರ ಉದ್ಯೋಗವನ್ನು ಕೇಳಿಕೊಂಡು ಬಂದನು. ಅವನಿಗೆ ಧರ್ಮವತಿಯೆಂಬ ಹೆಂಡತಿಯೂ, ಸತ್ತ್ವವರನೆಂಬ ಮಗನೂ, ವೀರವತಿಯೆಂಬ ಮಗಳೂ ಇದ್ದರು. ಅವನ ಕೈಯಲ್ಲಿ ಗುರಾಣಿಯಿತ್ತು. ಸೊಂಟದಲ್ಲಿ ಖಡ್ಗವನ್ನು ಅವನು ಸಿಕ್ಕಿಸಿಕೊಂಡಿದ್ದನು. ಇದಿಷ್ಟೇ ಅವನ ಸರ್ವಸ್ವವಾಗಿತ್ತು. ಅವನು ಹೆಂಡತಿಮಕ್ಕಳೊಂದಿಗೆ ರಾಜನ ಬಳಿಗೆ ಬಂದು ತನಗೆ ದಿನವೊಂದಕ್ಕೆ ಐನೂರು ದೀನಾರಗಳ ಸಂಬಳ ಕೊಡುವುದಾದರೆ ತಾನು ಅವನು ಹೇಳುವ ಯಾವುದೇ ಕೆಲಸವನ್ನು ಮಾಡಲು ಸಿದ್ಧನಾಗಿರುವೆನೆಂದು ತಿಳಿಸಿದನು. ರಾಜನಿಗೆ ಆಶ್ಚರ್ಯವಾಯ್ತು. ಆದರೂ ಅವನ ಗಂಭೀರ ಆಕಾರವನ್ನೂ, ಪೌರುಷವನ್ನು ಸೂಚಿಸುವ ಆಳ್ತನವನ್ನೂ ಕಂಡು ಅವನು ಕೇಳಿದಷ್ಟು ಸಂಬಳ ಕೊಡಲು ಒಪ್ಪಿ ತನ್ನ ಬಳಿ ಕೆಲಸಕ್ಕೆ ಇಟ್ಟುಕೊಂಡನು. ಇಷ್ಟೊಂದು ಹಣವನ್ನು ಇವನು ಏನು ಮಾಡುತ್ತಾನೆ? ಮನೆಯಲ್ಲಿ ಇರುವವರು ನಾಲ್ಕು ಮಂದಿ ಮಾತ್ರ. ಹಣವನ್ನು ಹೇಗೆ ಖರ್ಚು ಮಾಡುತ್ತಾನೆ? ದುರ್ವ್ಯಯ ಮಾಡುತ್ತಾನೋ ಹೇಗೆ? ಎಂದು ಅವನ ಮನಸ್ಸಿನಲ್ಲಿ ಸಂಶಯವಾಯ್ತು. ಅವನು ವೀರವರನ ಚರ್ಯೆಯನ್ನು ಗಮನಿಸಲು ಗೂಢಚಾರರನ್ನು ನೇಮಿಸಿದನು.
ವೀರವರನು ಮುಂಜಾನೆ ಎದ್ದು ರಾಜನ ದರ್ಶನಕ್ಕಾಗಿ ಬರುತ್ತಿದ್ದನು. ಆಮೇಲೆ ಕೈಯಲ್ಲಿ ಖಡ್ಗವನ್ನು ಹಿಡಿದುಕೊಂಡು ಅರಮನೆಯ ಮಹಾದ್ವಾರದ ಬಳಿ ನಿಂತಿರುತ್ತಿದ್ದನು. ಮಧ್ಯಾಹ್ನ ಅಂದಿನ ಸಂಬಳವನ್ನು ತೆಗೆದುಕೊಂಡು ಮನೆಗೆ ಹೋಗುತ್ತಿದ್ದನು. ಅದರಲ್ಲಿ ನೂರು ದೀನಾರಗಳನ್ನು ಊಟತಿಂಡಿಯ ಖರ್ಚಿಗೆಂದು ಹೆಂಡತಿಯ ಕೈಗೆ ಕೊಡುತ್ತಿದ್ದನು. ಬಟ್ಟೆ ಬರೆ, ಅಲಂಕಾರ ಮೊದಲಾದುವುಗಳಿಗಾಗಿ ನೂರು ದೀನಾರಗಳನ್ನು ಖರ್ಚು ಮಾಡುತ್ತಿದ್ದನು. ಸ್ನಾನ ಮಾಡಿ ವೈಭವದಿಂದ ಶಿವಪೂಜೆ ವಿಷ್ಣುಪೂಜೆಗಳನ್ನು ಮಾಡುತ್ತಿದ್ದನು. ಅದಕ್ಕಾಗಿಯೇ ನೂರು ದೀನಾರಗಳನ್ನು ವೆಚ್ಚ ಮಾಡುತ್ತಿದ್ದನು. ಉಳಿದ ಇನ್ನೂರು ದೀನಾರಗಳನ್ನು ಬಡಬಗ್ಗರಿಗೆ, ದೀನ-ಅನಾಥರಿಗೆ, ಬ್ರಾಹ್ಮಣರಿಗೆ ದಾನ ಮಾಡುತ್ತಿದ್ದನು. ಅನಂತರ ಅಗ್ನಿಕಾರ್ಯವೇ ಮೊದಲಾದ ನಿತ್ಯಕರ್ಮಗಳನ್ನು ಮುಗಿಸಿಕೊಂಡು, ಊಟಮಾಡಿ ಮತ್ತೆ ಮಹಾದ್ವಾರದ ಬಳಿಗೆ ಬಂದು ರಾತ್ರಿ ಇಡೀ ಕಾವಲು ಕಾಯುತ್ತಿದ್ದನು. ಇದೇ ಅವನ ದಿನಚರ್ಯೆಯಾಗಿತ್ತು. ಅದನ್ನು ತಿಳಿದು ರಾಜನಿಗೆ ಅವನ ಬಗ್ಗೆ ತುಂಬ ಸಂತೋಷವಾಯ್ತು. ಅವನ ಮನಸ್ಸಿನಲ್ಲಿ ವೀರವರನ ಬಗೆಗೆ ಗೌರವಬುದ್ಧಿ ಹುಟ್ಟಿತು.
ಅನೇಕ ದಿನಗಳು ಕಳೆದವು. ಬೇಸಿಗೆಯ ಬಿರುಬಿಸಿಲಿನ ದಿನಗಳಲ್ಲೂ ವೀರವರನ ದಿನಚರಿ ಬದಲಾಗಲಿಲ್ಲ.
ಸುಡುಬಿಸಿಲಿನಲ್ಲೂ ಅವನು ಖಡ್ಗ ಹಿಡಿದು ನಿಂತೇ ಇರುತ್ತಿದ್ದ. ಮಳೆಗಾಲ ಬಂತು. ಒಂದು ರಾತ್ರಿ ಎಡೆಬಿಡದೆ ಮಳೆ ಸುರಿಯುತ್ತಿತ್ತು. ವೀರವರನು ಅಂದೂ ಎಂದಿನಂತೆ ಮಹಾದ್ವಾರದ ಬಳಿ ಖಡ್ಗಪಾಣಿಯಾಗಿ ನಿಂತಿದ್ದ. ರಾಜನು ಅರಮನೆಯ ಉಪ್ಪರಿಗೆಯಿಂದ ಕೆಳಗೆ ನೋಡಿದ. ಮಹಾದ್ವಾರದ ಬಳಿ ಯಾರೋ ನಿಂತಿರುವುದು ಕಾಣಿಸಿತು. ರಾಜನು ಅಲ್ಲಿಂದಲೇ “ಮಹಾದ್ವಾರದಲ್ಲಿ ಯಾರಿದ್ದೀರಿ..?’’ ಎಂದು ಕೂಗಿ ಕೇಳಿದನು. “ನಾನು, ವೀರವರ ಇದ್ದೇನೆ…’’ ಎಂದು ಇವನು ಉತ್ತರಕೊಟ್ಟನು. ಅವನ ಕರ್ತವ್ಯನಿಷ್ಠೆಯನ್ನು ತಿಳಿದು ರಾಜನಿಗೆ ಆಶ್ಚರ್ಯವಾಯ್ತು.
ಅಷ್ಟು ಹೊತ್ತಿಗೆ ದೂರದಲ್ಲೆಲ್ಲೋ ಹೆಣ್ಣೊಬ್ಬಳು ಅಳುತ್ತಿರುವ ಸದ್ದು ಕೇಳಿಸಿತು. ರಾಜನು `ನನ್ನ ರಾಜ್ಯದಲ್ಲಿ ದುಃಖಿತರಾಗಲಿ, ದರಿದ್ರರಾಗಲಿ, ಗತಿಯಿಲ್ಲದವರಾಗಲಿ ಯಾರೂ ಇಲ್ಲ. ಹೀಗಿರುವಾಗ ಯಾರು ಹೀಗೆ ಅಳುತ್ತಿರಬಹುದು…?’ ಎಂದು ಚಿಂತಿಸಿದನು. ಆಮೇಲೆ ವೀರವರನನ್ನು ಕರೆದು “ಅದು ಯಾರು, ಏಕೆ ಅಳುತ್ತಿದ್ದಾಳೆ ಎಂದು ತಿಳಿದುಕೊಂಡು ಬಾ’’ ಎಂದು ಆಜ್ಞಾಪಿಸಿದನು. ವೀರವರನು ಆ ಕೂಡಲೆ ಎಡೆಬಿಡದೆ ಸುರಿಯುತ್ತಿದ್ದ ಮಳೆ, ಗುಡುಗು, ಮಿಂಚು ಒಂದನ್ನೂ ಲೆಕ್ಕಿಸದೆ ಕತ್ತಿ ಹಿಡಿದುಕೊಂಡು ಹೊರಟೇ ಬಿಟ್ಟನು. ಅವನು ಅಲ್ಲಿ ಹೋಗಿ ಏನು ಮಾಡುತ್ತಾನೆ ಎಂದು ನೋಡಬೇಕೆಂದು ರಾಜನಿಗೆ ಕುತೂಹಲವಾಯ್ತು. ಅವನ ಬಗ್ಗೆ ಕರುಣೆಯೂ ಆಯ್ತು. ತಾನೂ ಕತ್ತಿ ಹಿಡಿದುಕೊಂಡು ಅವನ ಹಿಂದೆಯೇ ಅವನಿಗೆ ಗೊತ್ತಾಗದಂತೆ ಹೋದನು. ವೀರವರನು ಅಳುವಿನ ಧ್ವನಿಯನ್ನೇ ಹಿಡಿದು ಮುಂದೆ ಸಾಗಿ, ಊರ ಹೊರಗೆ ಒಂದು ಕೊಳದ ಹತ್ತಿರಕ್ಕೆ ಬಂದು ತಲುಪಿದನು. ಕೊಳದ ನೀರಿನ ನಡುವೆ ನಿಂತು ಒಬ್ಬ ಹೆಂಗಸು “ಹಾ ಶೂರ! ಹಾ ಕೃಪಾಲು! ಹಾ ತ್ಯಾಗಿ! ನೀನಿಲ್ಲದೆ ನಾನು ಹೇಗಿರಲಿ..? ಎಲ್ಲಿರಲಿ…?’’ ಎಂದು ಅಳುತ್ತಿದ್ದಳು.
ವೀರವರನು “ಅಮ್ಮಾ, ನೀನು ಯಾರು? ಹೀಗೇಕೆ ಅಳುತ್ತಿದ್ದೀಯೆ?’’ ಎಂದು ಕೇಳಿದನು. ಅವಳು “ಮಗು ವೀರವರ! ನಾನು ಭೂದೇವಿ. ಭೂಪತಿಯಾಗಿರುವ ಶೂದ್ರಕಮಹಾರಾಜನೇ ನನ್ನ ಧರ್ಮಪತಿ. ಆದರೆ ಏನು ಮಾಡಲಿ, ಇನ್ನು ಮೂರೇ ದಿನದಲ್ಲಿ ಅವನು ಮೃತನಾಗುತ್ತಾನೆ. ಮುಂದೆ ನನಗೇನು ಗತಿ? ಇಂಥ ಗುಣವಂತನ ಕೈಹಿಡಿದ ನಾನು ಆಮೇಲೆ ಹೇಗೆ ತಾನೆ ಬೇರೆಯವನ ಕೈ ಹಿಡಿಯಲಿ? ಆ ದೌರ್ಭಾಗ್ಯವನ್ನು ನೆನೆದೂ ನೆನೆದೂ ಅಳುತ್ತಿದ್ದೇನೆ’’ ಎಂದಳು.
ವೀರವರನು “ಅಮ್ಮಾ, ನಮ್ಮ ಪ್ರಭುವಾದ ಶೂದ್ರಕಮಹಾರಾಜನು ಮೃತನಾಗದಂತೆ ರಕ್ಷಿಸಲು ಏನಾದರೂ ಉಪಾಯ ಉಂಟೆ?’’ ಎಂದು ಕೇಳಿದನು. ಭೂದೇವಿಯು “ಒಂದೇ ಒಂದು ಉಪಾಯವಿದೆ. ಮತ್ತು ಅದನ್ನು ನೀನಲ್ಲದೆ ಬೇರೆ ಯಾರೂ ಮಾಡಲು ಸಾಧ್ಯವಿಲ್ಲ’’ ಎಂದಳು. “ಹಾಗಿದ್ದರೆ ಹೇಳು ದೇವಿ! ಅದೆಷ್ಟೇ ಕಷ್ಟವಾದರೂ ನಾನು ಅದನ್ನು ಸಾಧಿಸುತ್ತೇನೆ’’ ಎಂದು ವೀರವರನು ಒತ್ತಾಯ ಮಾಡಿದಾಗ ಭೂದೇವಿ ಮತ್ತೆ ಹೇಳಿದಳು – “ಚಂಡಿಕಾದೇವಿ ಶೂದ್ರಕಮಹಾರಾಜನ ಕುಲದೇವತೆ. ನೀನು ನಿನ್ನ ಮಗನಾದ ಸತ್ತ್ವವರನನ್ನು ಚಂಡಿಕಾದೇವಿಗೆ ಬಲಿಯ ರೂಪದಲ್ಲಿ ಅರ್ಪಿಸುವೆಯಾದರೆ ಮಹಾರಾಜನು ಸಾಯುವುದಿಲ್ಲ. ಅವನು ನೂರುವರ್ಷಗಳಷ್ಟು ದೀರ್ಘಕಾಲ ಬದುಕುತ್ತಾನೆ. ಆ ಕೆಲಸವನ್ನು ಮಾಡುವುದಿದ್ದರೆ ಇಂದೇ ಈಗಲೇ ಮಾಡಬೇಕು.’’
ವೀರವರನು ಒಂದು ನಿಮಿಷವೂ ಯೋಚಿಸದೆ “ಹಾಗೇ ಆಗಲಿ’’ ಎಂದು ಹೇಳಿ ಸರಸರನೆ ಹೆಜ್ಜೆ ಇಡುತ್ತಾ ತನ್ನ ಮನೆಗೆ ಹೋದನು. ಮಲಗಿದ್ದ ಹೆಂಡತಿಯನ್ನೂ ಮಗನನ್ನೂ ಎಬ್ಬಿಸಿ ಅವರಿಗೆ ಈ ವೃತ್ತಾಂತವನ್ನು ತಿಳಿಸಿದನು. ಮಗನು ಸ್ವಲ್ಪವೂ ಅಳುಕದೆ “ಅಪ್ಪಾ! ನನ್ನ ಪ್ರಾಣದಿಂದ ಮಹಾರಾಜನ ರಕ್ಷಣೆಯಾಗುತ್ತದೆಯೆಂದಾದರೆ ನಾನು ಕೃತಾರ್ಥನಾದೆ. ಅವನ ಅನ್ನದ ಋಣ ತೀರಿಸಿದಂತೆಯೂ ಆಗುತ್ತದೆ.’’ ಎಂದು ಹೇಳಿದನು. ವೀರವರನು ತುಂಬ ಸಂತೋಷಪಟ್ಟು “ಭೇಷ್! ನೀನು ನನ್ನ ಮಗನೇ ಹೌದು’’ ಎಂದು ಹೇಳಿ ಹೆಂಡತಿ ಮಕ್ಕಳನ್ನು ಕರೆದುಕೊಂಡು ಚಂಡಿಕಾದೇವಸ್ಥಾನಕ್ಕೆ ಹೊರಟನು. ರಾಜನು ಅವರ ಹಿಂದೆಯೇ ಹೋದನು.
ದೇವಸ್ಥಾನಕ್ಕೆ ತಲುಪಿದ ಕೂಡಲೇ ಸತ್ತ್ವವರನು ದೇವಿಗೆ ತಲೆಬಾಗಿ “ತಾಯಿ! ಇಗೋ ನನ್ನ ತಲೆಯನ್ನು ನಿನಗೆ ಸಮರ್ಪಿಸುತ್ತಿದ್ದೇನೆ. ಅದರಿಂದ ನಮ್ಮ ರಾಜಾ ಶೂದ್ರಕನು ಇನ್ನು ನೂರು ವರ್ಷ ನಿರಾತಂಕವಾಗಿ ರಾಜ್ಯವನ್ನು ಆಳುವಂತಾಗಲಿ’’ ಎಂದು ನಿವೇದಿಸಿಕೊಂಡನು. ವೀರವರನು ತಡಮಾಡದೆ ಅವನ ತಲೆಯನ್ನು ಕತ್ತರಿಸಿ ದೇವಿಗೆ ಬಲಿಯ ರೂಪದಲ್ಲಿ ಅರ್ಪಿಸಿ “ಶೂದ್ರಕಮಹಾರಾಜನು ಚಿರಾಯುವಾಗಲಿ’’ ಎಂದು ಹೇಳಿದನು. ಆ ಕೂಡಲೇ “ವೀರವರ! ನಿನಗೆ ಸಮಾನನಾದ ಇನ್ನೊಬ್ಬ ಸ್ವಾಮಿಭಕ್ತ ಉಂಟೆ! ಇದ್ದ ಒಬ್ಬನೇ ಮಗನನ್ನು ಬಲಿಕೊಟ್ಟು ಶೂದ್ರಕನ ಪ್ರಾಣವನ್ನೂ ರಾಜ್ಯವನ್ನೂ ಉಳಿಸಿಕೊಟ್ಟೆಯಲ್ಲ!’’ ಎಂದು ಆಕಾಶದಿಂದ ಅಶರೀರವಾಣಿ ಕೇಳಿಸಿತು.
ಆಗ ಸತ್ತ್ವವರನ ತಂಗಿಯಾದ ವೀರವತಿಯು ಅಣ್ಣನ ದೇಹದ ಮೇಲೆ ಬಿದ್ದು, ಅವನ ತಲೆಯನ್ನು ಅಪ್ಪಿಕೊಂಡು ಎದೆಯೊಡೆದು ಪ್ರಾಣಬಿಟ್ಟಳು. ಮಕ್ಕಳಿಬ್ಬರೂ ಹೀಗೆ ತನ್ನ ಕಣ್ಣ ಮುಂದೆಯೇ ಪ್ರಾಣ ಬಿಟ್ಟಿದ್ದನ್ನು ನೋಡಿ ಧರ್ಮವತಿಯು ಗಂಡನನ್ನು ಕುರಿತು “ಮಹಾರಾಜನಿಗೆ ಯಾವುದು ಶ್ರೇಯಸ್ಕರವೋ ಅದನ್ನು ಮಾಡಿಯಾಯ್ತು. ಈ ಅರಿಯದ ಹುಡುಗಿಯು ಅಣ್ಣ ಸತ್ತ ದುಃಖವನ್ನು ತಡೆದುಕೊಳ್ಳಲಾರದೆ ತಾನೂ ಪ್ರಾಣಬಿಟ್ಟಿತು. ಮುತ್ತಿನಂತಹ ಈ ಮಕ್ಕಳನ್ನು ಕಳೆದುಕೊಂಡ ಮೇಲೆ ಹತಭಾಗ್ಯಳಾದ ನಾನು ಇನ್ನು ಏಕೆ ಬದುಕಿರಬೇಕು? ವಸ್ತುತಃ ದೇವಿಗೆ ನನ್ನ ತಲೆಯನ್ನೇ ಬಲಿ ಕೊಡಬೇಕಿತ್ತು. ಆದರೆ ಅವಳಿಗೆ ಅದೇಕೋ ಬೇಕಾಗಲಿಲ್ಲ. ಹೋಗಲಿ, ಈಗಲಾದರೂ ನಾನು ಪ್ರಾಣ ಕಳೆದುಕೊಳ್ಳುತ್ತೇನೆ. ಮಕ್ಕಳ ದೇಹದೊಂದಿಗೆ ಅಗ್ನಿಪ್ರವೇಶ ಮಾಡುತ್ತೇನೆ. ನನಗೆ ಅನುಮತಿ ಕೊಡಿ’’ ಎಂದು ಗಂಡನನ್ನು ಬೇಡಿಕೊಂಡಳು.
ವೀರವರನು “ಹಾಗೆಯೇ ಮಾಡು. ನಮ್ಮ ಮಗನಲ್ಲದೆ ಬೇರೆ ಯಾರ ಪ್ರಾಣದಿಂದಲೂ ಮಹಾರಾಜನ ಪ್ರಾಣ ಉಳಿಸುವುದು ಸಾಧ್ಯವಿರಲಿಲ್ಲವಲ್ಲ. ಹಾಗೆಂದೇ ನಾನು ಅಂತಹ ನಿರ್ಣಯ ಕೈಗೊಂಡೆ. ಇರಲಿ’’ ಎಂದು ಹೇಳಿ ಕಟ್ಟಿಗೆಗಳನ್ನು ಸಂಗ್ರಹಿಸಿ ಚಿತೆಯನ್ನು ಸಿದ್ಧಪಡಿಸಿದನು. ಅದರ ಮೇಲೆ ಮಕ್ಕಳ ಹೆಣವನ್ನು ಏರಿಸಿ ಅಗ್ನಿಸ್ಪರ್ಶ ಮಾಡಲಾಯ್ತು. ಚಿತೆ ಉರಿಯುತ್ತಿದ್ದಾಗ ಧರ್ಮವತಿಯು ಗಂಡನಿಗೆ ನಮಸ್ಕರಿಸಿ ಚಿತೆಯೊಳಗೆ ಬಿದ್ದು ಪ್ರಾಣಬಿಟ್ಟಳು. ಆಗ ವೀರವರನು “ಮಹಾರಾಜನ ರಕ್ಷಣೆಯ ಕಾರ್ಯವನ್ನು ಮಾಡಿಯಾಯ್ತು. ಅನ್ನದ ಋಣ ಸಂದಾಯವಾಯ್ತು. ನನ್ನ ಹೆಂಡತಿಮಕ್ಕಳೆಲ್ಲರೂ ಇಲ್ಲವಾಗಿದ್ದಾರೆ. ಇನ್ನು ನಾನೊಬ್ಬನೇ ಉಳಿದುಕೊಂಡು ಸಾಧಿಸಬೇಕಾದ್ದಾದರೂ ಏನಿದೆ? ಆದ್ದರಿಂದ ನನ್ನನ್ನೂ ದೇವಿಗೆ ಅರ್ಪಿಸಿಕೊಂಡು ಅವಳನ್ನು ಸಂತೋಷ ಪಡಿಸುತ್ತೇನೆ’’ ಎಂದು ಚಿಂತಿಸಿ ಕತ್ತಿಯಿಂದ ತನ್ನ ಕತ್ತನ್ನು ತಾನೇ ಕತ್ತರಿಸಿಕೊಂಡನು.
ಹೀಗೆ ವೀರವರನ ಕುಟುಂಬವೇ ನಿಶ್ಶೇಷವಾಗಿ ಮುಗಿದುಹೋಗಿದ್ದನ್ನು ನೋಡುತ್ತಿದ್ದ ಶೂದ್ರಕನಿಗೆ ಅತ್ಯಂತ ಆಶ್ಚರ್ಯವೂ ದುಃಖವೂ ಪಶ್ಚಾತ್ತಾಪವೂ ಆಯ್ತು. “ಅಯ್ಯೋ, ಹಿಂದೆಂದೂ ಕಂಡಿದ್ದಿಲ್ಲ, ಕೇಳಿದ್ದಿಲ್ಲ. ಮುಂದೆಯೂ ಇಂಥದ್ದು ಸಂಭವಿಸಲಿಕ್ಕಿಲ್ಲ. ಈತನು ನನಗೆ ಮಾಡಿದ ಉಪಕಾರಕ್ಕೆ ತಕ್ಕಂತೆ ನಾನು ನಡೆದುಕೊಳ್ಳದಿದ್ದರೆ ನಾನು ಎಂಥ ರಾಜ! ಶುದ್ಧ ಪಶು ನಾನು. ಇಲ್ಲ, ಇದಕ್ಕೊಂದು ಪ್ರತಿಕ್ರಿಯೆಯನ್ನು ಹೇಗಾದರೂ ನಾನು ಮಾಡಲೇ ಬೇಕು ಎಂದುಕೊಂಡು ಕತ್ತಿ ಹಿರಿದು, ದೇವಿಯ ಹತ್ತಿರ ನಿಂತು “ತಾಯಿ! ಇಗೋ, ನಿನ್ನ ಭಕ್ತನಾದ ನನ್ನ ತಲೆಯನ್ನು ಸ್ವೀಕರಿಸು. ಅದರಿಂದ ಪ್ರಸನ್ನಳಾಗಿ ಈ ವೀರವರನನ್ನೂ, ಅವನ ಸಂಸಾರವನ್ನೂ ಬದುಕಿಸು’’ ಎಂದು ಹೇಳಿ ಕುತ್ತಿಗೆಯನ್ನು ಕತ್ತರಿಸಿಕೊಳ್ಳಲು ಮುಂದಾದನು. ಆ ಕ್ಷಣವೇ “ಅಯ್ಯಾ! ಸಾಹಸ ಮಾಡಬೇಡ. ನಿನ್ನ ಔದಾರ್ಯದಿಂದ ಸತ್ತ÷್ವದಿಂದ ನನಗೆ ಸಂತೋಷವಾಯಿತು. ವೀರವರನೂ ಅವನ ಹೆಂಡತಿ ಮಕ್ಕಳೂ ಬದುಕಿಬರಲಿ’’ ಎಂದು ಅಶರೀರವಾಣಿಯಾಯಿತು. ಸತ್ತವರೆಲ್ಲರೂ ಎದ್ದುಬಂದರು. ಶೂದ್ರಕನು ಈಗಲೂ ಅವರಿಗೆ ಕಾಣಿಸಿಕೊಳ್ಳಲಿಲ್ಲ.
ವೀರವರನು ಹೆಂಡತಿ ಮಕ್ಕಳನ್ನು ನೋಡಿ, ‘ಇದೇನು? ನೀವೆಲ್ಲ ಸುಟ್ಟು ಬೂದಿಯಾಗಿರಲಿಲ್ಲವೆ? ನಾನು ನನ್ನ ತಲೆಯನ್ನು ಕತ್ತರಿಸಿ ದೇವಿಗೆ ಅರ್ಪಿಸಿರಲಿಲ್ಲವೆ? ನಾವೆಲ್ಲ ಅದು ಹೇಗೆ ಬದುಕಿದ್ದೇವೆ? ಇದೇನು ಭ್ರಾಂತಿಯೋ? ದೇವಿಯ ಅನುಗ್ರಹವೋ? ದೇವಿಯ ಅನುಗ್ರಹವೇ ಇರಬೇಕು. ಅದಲ್ಲದೆ ಹೀಗೆಲ್ಲ ಆಗಲು ಸಾಧ್ಯವೇ ಇಲ’್ಲ ಎಂದು ಅಂದುಕೊಂಡು ದೇವಿಗೆ ನಮಸ್ಕರಿಸಿದನು. ಬೇಗಬೇಗನೆ ಹೆಂಡತಿ, ಮಕ್ಕಳನ್ನು ಕರೆದುಕೊಂಡು ಹೋಗಿ ಮನೆಯಲ್ಲಿ ಬಿಟ್ಟು, ತಾನು ಮಾತ್ರ ಮಹಾದ್ವಾರದ ಬಳಿಗೆ ಬಂದು ಮೊದಲಿನಂತೆ ಕತ್ತಿಹಿಡಿದು ನಿಂತನು. ಹಿಂದಿನಿಂದಲೇ ಬಂದ ಶೂದ್ರಕನು ಇದೆಲ್ಲವನ್ನೂ ಕಂಡಿದ್ದರೂ ಏನೂ ತಿಳಿಯದವನಂತೆ ಅರಮನೆ ಸೇರಿಕೊಂಡು, ಉಪ್ಪರಿಗೆಯನ್ನೇರಿ ಅಲ್ಲಿಂದಲೇ “ದ್ವಾರದಲ್ಲಿ ಯಾರಿದ್ದೀರಿ?’’ ಎಂದು ಕೇಳಿದನು. ವೀರವರನು “ನಾನಿದ್ದೇನೆ ಪ್ರಭು. ತಮ್ಮ ಅಪ್ಪಣೆಯಂತೆ ಹೋಗಿ ನೋಡಿಕೊಂಡು ಬಂದೆ. ಯಾರೋ ಏನೋ ಆ ಹೆಂಗಸು, ನಾನು ನೋಡುತ್ತಿದ್ದಂತೆ ರಾಕ್ಷಸಿಯಂತೆ ಮಾಯವಾಗಿ ಹೋದಳು’’ ಎಂದನು. ಅವಳ ಬಗೆಗೆ ಚಿಂತೆ ಮಾಡಬೇಕಾದ ಅಗತ್ಯವಿಲ್ಲ ಎಂಬರ್ಥದಲ್ಲಿ.
ವೀರವರನ ಈ ಮಾತುಗಳನ್ನು ಕೇಳಿ ಶೂದ್ರಕನಿಗೆ ಅತ್ಯಂತ ಆಶ್ಚರ್ಯವಾಗಿತ್ತು. ಏಕೆಂದರೆ ಏನೇನು ನಡೆದಿತ್ತು ಅದಕ್ಕೆಲ್ಲ ಅವನೇ ಪ್ರತ್ಯಕ್ಷ ಸಾಕ್ಷಿಯಾಗಿದ್ದನು. ಹೀಗಿದ್ದರೂ ಇವನು ಏನೂ ನಡೆದಿಲ್ಲ ಎನ್ನುವಷ್ಟು ನಿರ್ಲಿಪ್ತನಾಗಿ ಹೇಳುತ್ತಿರುವನಲ್ಲ… ಈತನದು ಏನು ಗಾಂಭೀರ್ಯ.. ಏನು ಔದಾರ್ಯ…! ಹೀಗೆಂದು ಅವನು ಅಂದುಕೊಂಡು ಅರಮನೆಯೊಳಗೆ ಹೋಗಿ ಆ ರಾತ್ರಿಯನ್ನು ಕಳೆದನು. ಮರುದಿನ ರಾಜಸಭೆಯಲ್ಲಿ ಎಲ್ಲ ಮಂತ್ರಿಗಳ ಸಮ್ಮುಖದಲ್ಲಿ ಹಿಂದಿನ ರಾತ್ರಿ ನಡೆದ ವೃತ್ತಾಂತವನ್ನೆಲ್ಲ ವರ್ಣಿಸಿದನು. ಅವರೆಲ್ಲ ಆಶ್ಚರ್ಯದಿಂದ ಬೆರಗಾಗಿ ಹೋದರು. ಆಮೇಲೆ ಶೂದ್ರಕನು ವೀರವರನಿಗೆ ಕರ್ಣಾಟಕ ದೇಶವನ್ನೂ ಒಳಗೊಂಡ ಲಾಟದೇಶವನ್ನು ಉಂಬಳಿಯಾಗಿ ಕೊಟ್ಟನು. ಅವರಿಬ್ಬರೂ ಸುಖವಾಗಿದ್ದರು.
ಬೇತಾಳನು ಹೀಗೆ ಕಥೆಯನ್ನು ಮುಗಿಸಿ “ಮಹಾರಾಜ! ಈ ಎಲ್ಲರಲ್ಲಿ ಅತ್ಯಧಿಕ ವೀರ ಯಾರು? ಈ ಪ್ರಶ್ನೆಗೆ ಉತ್ತರ ಹೇಳು. ತಿಳಿದಿದ್ದೂ ಹೇಳದಿದ್ದರೆ ನಿನ್ನ ತಲೆ ನೂರು ಹೋಳಾಗಿ ಒಡೆದು ಹೊಗುತ್ತದೆ’’ ಎಂದನು. ರಾಜನು “ಇವರಲ್ಲಿ ಶೂದ್ರಕನೇ ಎಲ್ಲರಿಗಿಂತ ಹೆಚ್ಚಿನ ಶೂರ’’ ಎಂದನು. “ಅದು ಹೇಗೆ ಸಾಧ್ಯ? ತನ್ನ ಸ್ವಾಮಿಗಾಗಿ ತನ್ನ ಹೆಂಡತಿಮಕ್ಕಳನ್ನೂ, ತನ್ನನ್ನೂ ಅರ್ಪಿಸಿದ ವೀರವರನು ಶೂರನಲ್ಲವೆ? ಅವನಿಗಿಂತ ಶೂರ ಇರಲು ಸಾಧ್ಯವೇ ಇಲ್ಲ. ಇನ್ನು ಅವನ ಹೆಂಡತಿಯೇನು ಕಡಮೆಯೇ? ಮಗನಂತೂ ರಾಜನ ಆಯುಷ್ಯಕ್ಕಾಗಿ ತನ್ನ ತಲೆಯನ್ನೇ ಬಲಿ ಕೊಟ್ಟ ಮಹಾವೀರ. ಅವರೆಲ್ಲರನ್ನೂ ಬಿಟ್ಟು ಶೂದ್ರಕನೇ ಮಹಾವೀರ ಎಂದು ನೀನು ಹೇಳುತ್ತಿರುವೆಯಲ್ಲ..’’ ಎಂದು ಬೇತಾಳನು ಮತ್ತೆ ಕೇಳಿದನು.
“ಹಾಗಲ್ಲ! ಏಕೆಂದರೆ ವೀರವರನು ಕುಲಪುತ್ರಕನು. ತನ್ನ ಹೆಂಡತಿ ಮಕ್ಕಳನ್ನು ಬಲಿಕೊಟ್ಟಾದರೂ ರಾಜನನ್ನು ರಕ್ಷಿಸುತ್ತೇನೆ ಎಂದು ಅವನು ವ್ರತವನ್ನು ಕೈಗೊಂಡಿದ್ದನು. ಅದನ್ನೇ ಅವನು ಮಾಡಿದ. ಇನ್ನು ಅವನ ಹೆಂಡತಿ ಗಂಡನಿಗೆ ಅನುರೂಪಳಾದ ಹೆಂಡತಿ. ಪರಮ ಪತಿವ್ರತೆ. ಗಂಡನ ದಾರಿಯನ್ನೇ ಅವಳು ಹಿಡಿದದ್ದರಲ್ಲಿ ಆಶ್ಚರ್ಯವಿಲ್ಲ. ಅವರಿಬ್ಬರ ಮಗನೂ ಅಂತೆಯೇ ಸ್ವಾಮಿಭಕ್ತನಾಗಿ ತಂದೆಯ ದಾರಿಯನ್ನೇ ಹಿಡಿದದ್ದೂ ಸಹಜವೇ. ಇನ್ನು ರಾಜನಿಗಾಗಿ ಸೇವಕರು ಪ್ರಾಣ ಬಿಡುವುದು ಲೋಕದಲ್ಲಿ ಸಹಜ. ಹೀಗಿರುವಾಗ ಸೇವಕರಿಗಾಗಿ ರಾಜನೇ ತನ್ನ ಪ್ರಾಣ ಬಿಡಲು ಸಿದ್ಧನಾಗುತ್ತಾನೆಂದರೆ ಅದೇನು ಸಾಮಾನ್ಯವೆ? ಅಂತಹ ಅಸಾಮಾನ್ಯ ಕೆಲಸ ಮಾಡಲು ಹೊರಟಿದ್ದರಿಂದ ಶೂದ್ರಕನೇ ಹೆಚ್ಚಿನ ಶೂರ!’’ ಎಂದು ವಿಕ್ರಮಸೇನನು ಉತ್ತರಿಸಿದನು. ಹೀಗೆ ರಾಜನಿಗೆ ಮೌನಭಂಗವಾದ್ದರಿಂದ ಬೇತಾಳನು ಅವನ ಹೆಗಲಿನಿಂದ ಹಾರಿ ಮತ್ತೆ ಮೊದಲಿದ್ದ ಜಾಗಕ್ಕೆ ಹೋಗಿಬಿಟ್ಟನು.