ಈ ನಡುವೆ ಯಾರೂ ನಿರೀಕ್ಷಿಸದಿದ್ದ ಮತ್ತೊಂದು ಘಟನೆ ನಡೆದುಬಿಟ್ಟಿತು. ಮದುವೆಯ ಹೆಣ್ಣು ಸೋಮಪ್ರಭೆಯೇ ಕಾಣೆಯಾಗಿಬಿಟ್ಟಿದ್ದಳು. ಎಷ್ಟು ಹುಡುಕಿದರೂ ಅವಳು ಸಿಗಲೇ ಇಲ್ಲ. ಆಗ ಹರಿಸ್ವಾಮಿಯು ಆ ಮೂವರು ಯುವಕರಲ್ಲಿ ಭೂತ–ಭವಿಷ್ಯತ್ತುಗಳನ್ನು ಬಲ್ಲ ಜ್ಞಾನಿಯನ್ನು ಕುರಿತು – “ಅಯ್ಯಾ! ನನ್ನ ಮಗಳು ಎಲ್ಲಿ ಹೋಗಿದ್ದಾಳೆಂದು ನೀನು ಹೇಳಬಲ್ಲೆಯಾ?’’ ಎಂದು ಕೇಳಿದನು. ಜ್ಞಾನಿಯು ಒಂದು ಕ್ಷಣ ಚಿಂತಿಸಿ ಹೇಳಿದನು – “ವಿಂಧ್ಯಾಟವಿಯಲ್ಲಿ ಧೂಮಶಿಖನೆಂಬ ರಾಕ್ಷಸನಿದ್ದಾನೆ. ಅವನು ಇಲ್ಲಿಗೆ ಬಂದು ಅವಳನ್ನು ಎತ್ತಿಕೊಂಡು ತನ್ನ ವಾಸಸ್ಥಾನಕ್ಕೆ ಕರೆದುಕೊಂಡು ಹೋಗಿದ್ದಾನೆ. ಅವಳು ಅಲ್ಲಿದ್ದಾಳೆ.’’
ಛಲ ಬಿಡದ ತ್ರಿವಿಕ್ರಮನು ಮತ್ತೆ ಹೆಣವನ್ನು ಹೆಗಲ ಮೇಲೆ ಹಾಕಿಕೊಂಡು ಶ್ಮಶಾನದತ್ತ ಹೆಜ್ಜೆ ಹಾಕಿದನು. ಬೇತಾಳನು ಮತ್ತೊಂದು ಕಥೆಯನ್ನು ಹೇಳಲು ಆರಂಭಿಸಿದನು –
ಉಜ್ಜಯಿನಿಯಲ್ಲಿ ಪುಣ್ಯಸೇನನೆಂಬ ಮಹಾರಾಜನಿದ್ದನು. ಅವನಿಗೆ ಹರಿಸ್ವಾಮಿ ಎಂಬ ಗುಣವಂತನಾದ ಬ್ರಾಹ್ಮಣನು ಮಂತ್ರಿಯಾಗಿದ್ದನು. ಹರಿಸ್ವಾಮಿಗೆ ಅವನಂತೆ ಗುಣಶಾಲಿಯಾದ ದೇವಸ್ವಾಮಿ ಎಂಬ ಮಗನೂ, ರೂಪಲಾವಣ್ಯಶೋಭಿತೆಯಾದ ಸೋಮಪ್ರಭೆ ಎಂಬ ಮಗಳೂ ಇದ್ದರು. ಸೋಮಪ್ರಭೆಯು ಪ್ರಾಪ್ತವಯಸ್ಕಳಾದಾಗ ಮನೆಯಲ್ಲಿ ಅವಳ ವಿವಾಹದ ಪ್ರಯತ್ನಗಳು ಆರಂಭವಾದವು. ಆಗ ಅವಳು – “ನಾನು ಯರ್ಯಾರನ್ನೋ ಮದುವೆಯಾಗಲು ಸಿದ್ಧಳಿಲ್ಲ. ನನ್ನನ್ನು ಮದುವೆಯಾಗ ಬಯಸುವವನು ಒಂದೋ ಶೂರನಾಗಿರಬೇಕು ಅಥವಾ ಜ್ಞಾನಿಯಾಗಿರಬೇಕು, ಇಲ್ಲವೇ ವಿಜ್ಞಾನಿಯಾಗಿರಬೇಕು. ಈ ಮೂವರಲ್ಲಿ ಒಬ್ಬನನ್ನು ಮಾತ್ರ ಆಗುತ್ತೇನೆ. ಬೇರೆಯವರಿಗೆ ನನ್ನನ್ನು ಕೊಡಲು ಪ್ರಯತ್ನಪಟ್ಟರೆ ನಾನು ಉಳಿಯುವುದಿಲ್ಲ” ಎಂದು ತಂದೆ, ತಾಯಿ ಮತ್ತು ಅಣ್ಣ – ಹೀಗೆ ಮೂವರಿಗೂ ತಿಳಿಸಿದಳು.
ಅಂಥ ವರನನ್ನು ಎಲ್ಲಿಂದ ಹುಡುಕುವುದು ಎಂದು ಮೂವರಿಗೂ ಚಿಂತೆಯಾಯ್ತು. ಈ ನಡುವೆ ಒಮ್ಮೆ ಪುಣ್ಯಸೇನ ಮಹಾರಾಜನು ಹರಿಸ್ವಾಮಿಯನ್ನು ರಾಜಕಾರ್ಯದ ನಿಮಿತ್ತ ದಕ್ಷಿಣ ದೇಶದ ರಾಜನ ಬಳಿಗೆ ಕಳುಹಿಸಿದನು. ಅಲ್ಲಿನ ಕೆಲಸ ಮುಗಿಯಿತು. ಆಗ ಒಬ್ಬ ಯುವಕನು ಅವನ ಬಳಿಗೆ ಬಂದು ತಾನು ಸೋಮಪ್ರಭೆಯನ್ನು ಮದುವೆಯಾಗಲು ಬಯಸಿರುವುದಾಗಿ ತಿಳಿಸಿದನು. ಹರಿಸ್ವಾಮಿಯು “ನನ್ನ ಮಗಳು ಶೂರ, ಜ್ಞಾನಿ ಮತ್ತು ವಿಜ್ಞಾನಿ – ಇವರಲ್ಲಿ ಒಬ್ಬನನ್ನು ಮದುವೆಯಾಗಲು ಒಪ್ಪುತ್ತಾಳೆ. ನೀನು ಶೂರನೋ? ಜ್ಞಾನಿಯೋ? ವಿಜ್ಞಾನಿಯೋ?’’ ಎಂದು ಕೇಳಿದನು. ಆಗ ಅವನು “ನಾನು ವಿಜ್ಞಾನಿ. ನನಗೆ ವಿಜ್ಞಾನ ಗೊತ್ತು” ಎಂದನು. “ಹಾಗಿದ್ದರೆ ನಿನಗೆ ತಿಳಿದಿರುವ ವಿಜ್ಞಾನವನ್ನು ತೋರಿಸು’’ ಎಂದು ಹರಿಸ್ವಾಮಿಯು ಹೇಳಿದನು.
ಆಗ ಆ ಯುವಕನು ಅಲ್ಲಿಯೇ ಒಂದು ಆಕಾಶಗಾಮಿಯಾದ ರಥವನ್ನು ನಿರ್ಮಿಸಿದನು. ಅದರಲ್ಲಿ ಹರಿಸ್ವಾಮಿಯನ್ನು ಕೂರಿಸಿಕೊಂಡು ಅವನು ಒಂದೇ ಕ್ಷಣದಲ್ಲಿ ಸ್ವರ್ಗಾದಿ ಲೋಕಗಳನ್ನೆಲ್ಲ ತೋರಿಸಿಕೊಂಡು ಬಂದನು. ಹರಿಸ್ವಾಮಿಗೆ ತುಂಬ ಸಂತೋಷವಾಯ್ತು. ಇವನು ನಿಜವಾಗಿಯೂ ವಿಜ್ಞಾನಿ ಹೌದು ಎಂದು ಅವನಿಗೆ ಖಾತ್ರಿಯಾಯ್ತು. ಅವನಿಗೇ ಮಗಳನ್ನು ಕೊಡುವುದಾಗಿ ಅವನು ನಿಶ್ಚಯಿಸಿದನು. “ಇಂದಿಗೆ ಏಳನೆಯ ದಿನ ನೀನು ಉಜ್ಜಯಿನಿಗೆ ಬಾ. ಮಗಳನ್ನು ಮದುವೆ ಮಾಡಿ ಕೊಡುತ್ತೇನೆ” ಎಂದು ಅವನಿಗೆ ಮಾತುಕೊಟ್ಟನು.
ಅದೇ ಹೊತ್ತಿಗೆ ಉಜ್ಜಯಿನಿಯಲ್ಲಿ ಯುವಕನೊಬ್ಬನು ಮನೆಗೆ ಬಂದು ದೇವಸ್ವಾಮಿಯನ್ನು ಕಂಡು “ನಿನ್ನ ತಂಗಿ ಸೋಮಪ್ರಭೆಯನ್ನು ಮದುವೆಯಾಗಲು ಬಯಸುತ್ತೇನೆ” ಎಂದು ಹೇಳಿದನು. “ನನ್ನ ತಂಗಿ ಜ್ಞಾನಿ, ವಿಜ್ಞಾನಿ, ಶೂರ ಇವರಲ್ಲಿ ಒಬ್ಬನನ್ನು ಮದುವೆಯಾಗುತ್ತಾಳೆ. ನೀನು ಯಾರು?’’ ಎಂದು ದೇವಸ್ವಾಮಿ ಅವನನ್ನು ಕೇಳಿದನು. ಅವನು “ನಾನು ಶೂರನಿದ್ದೇನೆ” ಎಂದು ಹೇಳಿದನು. ಹೇಳಿದ್ದು ಮಾತ್ರವಲ್ಲ, ತನ್ನ ಶಸ್ತ್ರಾಸ್ತ್ರಕೌಶಲವನ್ನು ಅವನೆದುರಿಗೆ ಪ್ರದರ್ಶಿಸಿದನು. ಅವನು ಶೂರನೆಂಬುದು ದೇವಸ್ವಾಮಿಗೆ ಖಾತ್ರಿಯಾಯ್ತು. “ಇಂದಿಗೆ ಏಳನೆಯ ದಿನ ನೀನು ಮತ್ತೆ ಬಾ, ತಂಗಿಯನ್ನು ನಿನಗೆ ಕೊಟ್ಟು ಮದುವೆ ಮಾಡುತ್ತೇನೆ” ಎಂದು ಅವನು ಆ ಯುವಕನಿಗೆ ಮಾತುಕೊಟ್ಟನು.
ಈ ನಡುವೆ ಮತ್ತೋರ್ವ ಯುವಕನು ಹರಿಸ್ವಾಮಿಯ ಹೆಂಡತಿಯನ್ನು ಕಂಡು ತಾನು ಸೋಮಪ್ರಭೆಯನ್ನು ಮದುವೆಯಾಗಲು ಬಯಸಿರುವುದಾಗಿ ತಿಳಿಸಿದನು. ಅವಳೂ “ನೀನು ಶೂರನೋ, ಜ್ಞಾನಿಯೋ, ವಿಜ್ಞಾನಿಯೋ?’’ ಎಂದು ವಿಚಾರಿಸಿದಳು. ಅವನು “ನಾನು ಜ್ಞಾನಿ, ವರ್ತಮಾನ ಮಾತ್ರವಲ್ಲ, ಭೂತ-ಭವಿಷ್ಯತ್ತುಗಳನ್ನೂ ನಾನು ಬಲ್ಲೆ” ಎಂದನು. ಅವಳು ಅವನಿಗೆ ಕೆಲವಾರು ಪ್ರಶ್ನೆಗಳನ್ನು ಕೇಳಿ ಅವನು ನಿಜವಾಗಿಯೂ ಜ್ಞಾನಿ ಎಂಬುದನ್ನು ಖಾತ್ರಿಪಡಿಸಿಕೊಂಡು ಆಮೇಲೆ ಅವನಿಗೆ “ನೀನು ಇಂದಿಗೆ ಏಳನೆಯ ದಿನ ಬಾ. ಮಗಳನ್ನು ನಿನಗೆ ಕೊಟ್ಟು ವಿವಾಹ ಮಾಡಿಸುತ್ತೇನೆ” ಎಂದು ಮಾತು ಕೊಟ್ಟಳು.
ಉಜ್ಜಯಿನಿಗೆ ಹಿಂದಿರುಗಿದ ಹರಿಸ್ವಾಮಿಯು ಹೆಂಡತಿ ಮತ್ತು ಮಗನನ್ನು ಕರೆದು ತಾನು ಮಗಳ ಮದುವೆಯನ್ನು ನಿಶ್ಚಯಿಸಿರುವುದಾಗಿ ತಿಳಿಸಿದನು. “ವಿಜ್ಞಾನಿಯೊಬ್ಬನಿಗೆ ಮಗಳನ್ನು ಕೊಡುವುದಾಗಿ ಮಾತುಕೊಟ್ಟಿದ್ದೇನೆ” ಎಂದೂ ತಿಳಿಸಿದನು. ಆಗ ಮಗನು ತಾನು ತಂಗಿಯನ್ನು ಶೂರನಿಗೆ ಕೊಡುವುದಾಗಿ ಮಾತು ಕೊಟ್ಟಿರುವೆನೆಂದು ತಿಳಿಸಿದನು. ಹೆಂಡತಿಯು ಜ್ಞಾನಿಗೆ ಮಗಳನ್ನು ಕೊಡುವುದಾಗಿ ತಾನು ಮಾತು ಕೊಟ್ಟಿರುವೆನೆಂದು ತಿಳಿಸಿದಳು.
ಹೀಗೆ ಆ ಮೂವರೂ ಮತ್ತಿಬ್ಬರಿಗೆ ತಿಳಿಯದಂತೆ ಸೋಮಪ್ರಭೆಯನ್ನು ಕೊಡುವುದಾಗಿ ಮಾತುಕೊಟ್ಟುಬಿಟ್ಟಿದ್ದರು. ಎಲ್ಲರೂ ಒಂದೇ ದಿನ ಮನೆಗೆ ಬರಬೇಕೆಂದು ಆ ಮೂವರು ಯುವಕರಿಗೂ ತಿಳಿಸಿದ್ದರು. ನಿಶ್ಚಿತವಾಗಿದ್ದ ಆ ದಿನದಂದು ಮೂವರು ಯುವಕರೂ ಸೋಮಪ್ರಭೆಯನ್ನು ಮದುವೆಯಾಗುವುದಕ್ಕೆಂದು ಮನೆಗೆ ಬಂದೇಬಿಟ್ಟರು. ಅವಳನ್ನು ಕೊಡುವುದಾಗಿ ಮಾತುಕೊಟ್ಟಿದ್ದ ಮೂವರಿಗೂ ಈಗ ಚಿಂತೆಗಿಟ್ಟುಕೊಂಡಿತು.
ಈ ನಡುವೆ ಯಾರೂ ನಿರೀಕ್ಷಿಸದಿದ್ದ ಮತ್ತೊಂದು ಘಟನೆ ನಡೆದುಬಿಟ್ಟಿತು. ಮದುವೆಯ ಹೆಣ್ಣು ಸೋಮಪ್ರಭೆಯೇ ಕಾಣೆಯಾಗಿಬಿಟ್ಟಿದ್ದಳು. ಎಷ್ಟು ಹುಡುಕಿದರೂ ಅವಳು ಸಿಗಲೇ ಇಲ್ಲ. ಆಗ ಹರಿಸ್ವಾಮಿಯು ಆ ಮೂವರು ಯುವಕರಲ್ಲಿ ಭೂತ-ಭವಿಷ್ಯತ್ತುಗಳನ್ನು ಬಲ್ಲ ಜ್ಞಾನಿಯನ್ನು ಕುರಿತು – “ಅಯ್ಯಾ! ನನ್ನ ಮಗಳು ಎಲ್ಲಿ ಹೋಗಿದ್ದಾಳೆಂದು ನೀನು ಹೇಳಬಲ್ಲೆಯಾ?’’ ಎಂದು ಕೇಳಿದನು. ಜ್ಞಾನಿಯು ಒಂದು ಕ್ಷಣ ಚಿಂತಿಸಿ ಹೇಳಿದನು – “ವಿಂಧ್ಯಾಟವಿಯಲ್ಲಿ ಧೂಮಶಿಖನೆಂಬ ರಾಕ್ಷಸನಿದ್ದಾನೆ. ಅವನು ಇಲ್ಲಿಗೆ ಬಂದು ಅವಳನ್ನು ಎತ್ತಿಕೊಂಡು ತನ್ನ ವಾಸಸ್ಥಾನಕ್ಕೆ ಕರೆದುಕೊಂಡು ಹೋಗಿದ್ದಾನೆ. ಅವಳು ಅಲ್ಲಿದ್ದಾಳೆ.’’
ಹರಿಸ್ವಾಮಿಗೆ ಮತ್ತೆ ಚಿಂತೆಯಾಯ್ತು. ಮಗಳು ಇರುವ ಜಾಗವೇನೋ ತಿಳಿಯಿತು. ಆದರೆ ಅದು ಇಲ್ಲಿಂದ ಬಹಳ ದೂರದಲ್ಲಿದೆ. ಅಲ್ಲಿಗೆ ಹೋಗುವ ಬಗೆ ಹೇಗೆ? ಆಗ ವಿಜ್ಞಾನಿಯು ಅವನಿಗೆ “ಚಿಂತಿಸಬೇಡಿ. ನಾನು ವ್ಯವಸ್ಥೆ ಮಾಡುತ್ತೇನೆ” ಎಂದು ಹೇಳಿ ಆ ಕ್ಷಣವೇ ಒಂದು ರಥವನ್ನು ನಿರ್ಮಿಸಿ ಅದರಲ್ಲಿ ಹರಿಸ್ವಾಮಿಯನ್ನೂ, ಜ್ಞಾನಿಯನ್ನೂ, ಶೂರನನ್ನೂ ಕೂರಿಸಿಕೊಂಡು ಒಂದೇ ಕ್ಷಣದಲ್ಲಿ ವಿಂಧ್ಯಾಟವಿಯನ್ನು ತಲುಪಿದನು. ಅಲ್ಲಿ ಸೋಮಪ್ರಭೆಯು ರಾಕ್ಷಸನಾದ ಧೂಮಶಿಖನ ಬಂಧನದಲ್ಲಿದ್ದಳು. ರಾಕ್ಷಸನ ಸೆರೆಯಿಂದ ಮಗಳನ್ನು ಬಿಡಿಸುವುದು ಹೇಗೆಂದು ಹರಿಸ್ವಾಮಿಗೆ ಮತ್ತೆ ಚಿಂತೆಯಾಯ್ತು. ಆಗ ಶೂರನು ಮುಂದೆ ಬಂದು ರಾಕ್ಷಸನೊಂದಿಗೆ ಹೋರಾಡಿ ಅವನನ್ನು ಕೊಂದು ಸೋಮಪ್ರಭೆಯನ್ನು ಬಿಡಿಸಿದನು. ಅನಂತರ ಎಲ್ಲರನ್ನೂ ವಿಜ್ಞಾನಿಯು ರಥದಲ್ಲಿ ಉಜ್ಜಯಿನಿಗೆ ತಂದು ಬಿಟ್ಟನು.
ಅಷ್ಟು ಹೊತ್ತಿಗೆ ಮದುವೆಗೆ ಗೊತ್ತು ಮಾಡಿದ್ದ ಲಗ್ನ ಹತ್ತಿರವಾಗಿತ್ತು. ಆದರೆ ಸೋಮಪ್ರಭೆ ತನಗೇ ಸಿಗಬೇಕು ಎಂದು ಆ ಮೂವರು ಯುವಕರಲ್ಲಿ ವಿವಾದ ಏರ್ಪಟ್ಟಿತು. “ಸೋಮಪ್ರಭೆಯು ಕಾಣೆಯಾದಾಗ ಅವಳು ಎಲ್ಲಿದ್ದಾಳೆಂದು ತಿಳಿದು ಹೇಳಿದವನು ನಾನು. ಆದ್ದರಿಂದ ಅವಳು ನನಗೇ ಸೇರಬೇಕು” ಎಂದ ಜ್ಞಾನಿ. “ಅವಳಿದ್ದ ಜಾಗ ತಿಳಿದರೂ ಅಲ್ಲಿಗೆ ಅಷ್ಟು ವೇಗದಲ್ಲಿ ಹೋಗುವಂತೆ ಮಾಡಿದವನು ನಾನು. ಸಮಯಕ್ಕೆ ಸರಿಯಾಗಿ ಹೋಗದಿದ್ದರೆ ಅವಳನ್ನು ರಕ್ಷಿಸಲಾಗುತ್ತಿತ್ತೆ? ಹಾಗಾಗಿ ಅವಳು ನನಗೇ ಸೇರಬೇಕು” ಎಂದ ವಿಜ್ಞಾನಿ.
“ಅಲ್ಲಿಗೆ ಹೋಗಿಯೂ ಪ್ರಯೋಜನವೇನಿತ್ತು…? ಯುದ್ಧಮಾಡಿ ರಾಕ್ಷಸನನ್ನು ಕೊಂದು ಅವಳನ್ನು ಸೆರೆಯಿಂದ ಬಿಡಿಸಿದವನು ನಾನು. ಹಾಗಾಗಿ ಅವಳು ನನಗೇ ಸೇರಬೇಕು” ಎಂದ ಶೂರ. ಮೂವರೂ ಹೀಗೆ ವಿವಾದ ಮಾಡುತ್ತಿದ್ದರೆ ಹರಿಸ್ವಾಮಿಗೆ ಹೇಗೆ ನಿರ್ಣಯ ಮಾಡಬೇಕೆಂಬುದೇ ತಿಳಿಯಲಿಲ್ಲ.
ಹೀಗೆ ಕಥೆಯನ್ನು ಹೇಳಿ ಬೇತಾಳನು “ಮಹಾರಾಜ, ಆ ಮೂವರಲ್ಲಿ ಸೋಮಪ್ರಭೆಯನ್ನು ಯಾರಿಗೆ ಕೊಡಬೇಕು, ನೀನೇ ಹೇಳು. ಉತ್ತರ ಗೊತ್ತಿದ್ದೂ ಹೇಳದಿದ್ದರೆ ನಿನ್ನ ತಲೆ ಒಡೆದು ಚೂರು ಚೂರಾಗುತ್ತದೆ” ಎಂದನು.
ತ್ರಿವಿಕ್ರಮನು ನಸುನಕ್ಕು ಕೂಡಲೇ – “ಅದರಲ್ಲಿ ಸಂಶಯವೇನಿದೆ…? ಶೂರನಿಗೇ ಅವಳನ್ನು ಕೊಡಬೇಕು. ಏಕೆಂದರೆ ಮುಖ್ಯಕಾರ್ಯವನ್ನು ಸಾಧಿಸಿದವನು ಅವನು. ರಾಕ್ಷಸನನ್ನು ಕೊಂದು, ಸೋಮಪ್ರಭೆಯನ್ನು ಬಂಧನದಿAದ ಬಿಡಿಸಿದವನು ಅವನು. ಅವನ ಈ ಮುಖ್ಯಕಾರ್ಯಕ್ಕೆ ಉಳಿದವರಿಬ್ಬರು ಮಾಡಿದ ಕೆಲಸ ಸಹಾಯಕವಾಗಿತ್ತು, ಅಷ್ಟೆ” ಎಂದನು.
ಹೀಗೆ ರಾಜನಿಗೆ ಮೌನಭಂಗವಾದ್ದರಿಂದ ಬೇತಾಳನು ಅವನ ಹೆಗಲಿನಿಂದ ಹಾರಿ ಮತ್ತೆ ಮೊದಲಿದ್ದ ಜಾಗಕ್ಕೆ ಹೋಗಿ ಅದೇ ಮರದ ಮೇಲೆ ನೇತುಹಾಕಿಕೊಂಡನು.