ಗ್ರಂಥಾಲಯಸೌಲಭ್ಯ ಹೆಚ್ಚಿಲ್ಲದ ಕಾಲದಲ್ಲಿ, ಅಂತರ್ಜಾಲದ ಅನುಕೂಲತೆಯ ಕಲ್ಪನೆಯೂ ಇಲ್ಲದ ಹೊತ್ತಿನಲ್ಲಿ ಯಾವುದೇ ಶೋಧಸಂಸ್ಥೆಯ ಬೆಂಬಲವಿಲ್ಲದೆ ನೂರಾರು ಮೂಲಗಳಿಂದ ರಾಯರು ತಿಳಿವನ್ನು ಸಂಗ್ರಹಿಸಿದ್ದೊಂದು ಸಾಹಸ. ಇನ್ನು ಪ್ರಕಾಶನದ ಸಮೃದ್ಧಿಯಾಗಲಿ, ಮುದ್ರಣಸೌಕರ್ಯಗಳ ಪಾರಮ್ಯವಾಗಲಿ ಅಷ್ಟಾಗಿ ಇಲ್ಲದ ಸಮಯದಲ್ಲಿ ತಮ್ಮ ತಿಳಿವನ್ನು ಪ್ರಕಾಶಕರಿಗೆ ಹೊರೆಯಾಗದ, ಓದುಗರಿಗೆ ಭಾರವೆನಿಸದ ರೀತಿಯಲ್ಲಿ ತಮಗೂ ತೃಪ್ತಿಯಾಗುವಂತೆ ತಿಳಿನುಡಿಯಲ್ಲಿ ತುಂಬಿಕೊಟ್ಟದ್ದು ಮಾತಿಗೆ ಮೀರಿದ ಸಾಹಸ. ಅಥರ್ವವೇದವು ಹೇಳುವಂತೆ ನೂರು ಕೈಗಳಿಂದ ಗಳಿಸಿ ಸಾವಿರ ಕೈಗಳಿಂದ ಹಂಚಬೇಕಲ್ಲವೇ. ಇದೇ ರಾಯರ ಹೆಗ್ಗಳಿಕೆ. ಹೀಗೆ ಸಾವಿರ ಕೈಗಳಿಂದ ಹಂಚುವಾಗ ಅವರು ದೇಶ, ಕಾಲ, ವಸ್ತು ಮತ್ತು ಕಲಿಕೆಯ ಅಧಿಕಾರಿಗಳನ್ನು ಗಮನಿಸಿಕೊಂಡು ನಡೆದಿದ್ದಾರೆ. ಇದನ್ನು ವ್ಯಾಸ–ಸಮಾಸಕೌಶಲವೆನ್ನಬೇಕು.
ನಮ್ಮ ಪರಂಪರೆಯಲ್ಲಿ ‘ಸಾರ್ವಪಾರ್ಷದ’ ಎಂಬ ಒಂದು ವಿಶಿಷ್ಟ ಪದವಿದೆ. ಇದು ಹೆಚ್ಚಾಗಿ ಶಾಸ್ತ್ರಚರ್ಚೆಗಳಲ್ಲಿ ಕಾಣಸಿಗುತ್ತದೆ. ‘ಪಾರ್ಷದ್’ ಎಂದರೆ ಪರಿಷತ್ತು ಎಂದರ್ಥ. ಹತ್ತು ಹಲವರು ಹಿರಿಯರು ಒಟ್ಟಿಗೆ ಒಂದೆಡೆ ಕುಳಿತು ಕಲೆಯುವುದನ್ನು ‘ಪರಿಷತ್’ ಎನ್ನುವರು. ಪರಿಷತ್ತಿಗೆ ‘ಸಭಾ’ ಪರ್ಯಾಯಪದ. ಸಭೆಗೆ ಬೆಳಕಿನಿಂದ ಕೂಡಿದ್ದು ಎಂಬ ಅರ್ಥವೂ ಇದೆ. ಹತ್ತು ಜನರ ನೆರವಿ ಒಂದೆಡೆ ಸುಮ್ಮನೆ ಸೇರಿ ಗೌಜೆಬ್ಬಿಸುವುದನ್ನು ಪರಿಷತ್ತೆಂದು ಕರೆಯುವುದಿಲ್ಲ. ಹೀಗೆ ಎಲ್ಲರೂ ಕಲೆತು ಕೋಲಾಹಲಿಸುವ ಗುಂಪಿಗೆ ‘ಪರಿಷೆ’ ಎಂಬ ಬೇರೊಂದು ಶಬ್ದವೇ ಇದೆ. ಇದು ಪರಿಷತ್ತಿನ ತದ್ಭವ ಎಂಬುದು ಸ್ವಾರಸ್ಯಕರ ಸಂಗತಿ! ಸಂಸ್ಕೃತವಾದುದು ಪರಿಷತ್ತು, ಪ್ರಾಕೃತವಾದುದು ಪರಿಷೆ. ಇವೆರಡಕ್ಕೂ ತಮ್ಮವೇ ಆದ ಮೌಲ್ಯ-ಮಹತ್ತ್ವಗಳಿವೆ. ಈ ಮುನ್ನ ಹೇಳಿದ ಪಾರ್ಷದ್ ಎಂಬ ಪರಿಷತ್ತಿಗೆ ಸದಸ್ಯನಾಗಬಲ್ಲ ಅರ್ಹತೆ ಉಳ್ಳವನೇ ಪಾರ್ಷದ. ಯಾರು ಒಂದು ಪರಿಷತ್ತಿಗಲ್ಲದೆ ಹತ್ತಾರು ಪರಿಷತ್ತುಗಳಿಗೆ ಸದಸ್ಯರಾಗಿ ಸೇರಬಲ್ಲರೋ, ಸೇರಿ ಅಲ್ಲಿಯವರನ್ನು ತಮ್ಮ ನಡೆ-ನುಡಿಗಳಿಂದ ಬೆಳಗಬಲ್ಲರೋ ಅವರು ಸಾರ್ವಪಾರ್ಷದರು. ಹೇಗೆ ವ್ಯಕ್ತಿಗಳು ತಮ್ಮ ಯೋಗ್ಯತೆಯಿಂದ ಸಾರ್ವಪಾರ್ಷದರಾಗಬಲ್ಲರೋ ಹಾಗೆಯೇ ವಿದ್ಯೆಗಳೂ ಆಗಬಲ್ಲುವು. ಒಟ್ಟಿನಲ್ಲಿ ಎಲ್ಲರಿಗೂ ಒದಗಿಬರಬಲ್ಲ ಮಹನೀಯರು ಸಾರ್ವಪಾರ್ಷದರು; ಅಂಥವರ ವಿದ್ಯೆ ಸಾರ್ವಪಾರ್ಷದ. ಭೋಜರಾಜನು ‘ಶೃಂಗಾರಪ್ರಕಾಶ’ ಎಂಬ ತನ್ನ ಉದ್ಗ್ರಂಥದಲ್ಲಿ ಸಾಹಿತ್ಯವನ್ನು ಸಾರ್ವಪಾರ್ಷದವೆಂದು ಆದರಿಸುವುದು ಈ ಬಗೆಯ ಪ್ರಾಚೀನ ಉಲ್ಲೇಖಗಳ ಪೈಕಿ ಸ್ಮರಣೀಯ.
ವಿದ್ಯಾಲಂಕಾರ, ಶಾಸ್ತ್ರಚೂಡಾಮಣಿ, ಸಂಗೀತಕಲಾರತ್ನ, ವಾಚಸ್ಪತಿ, ಆಚಾರ್ಯ ಸಾಲಿಗ್ರಾಮ ಕೃಷ್ಣ ರಾಮಚಂದ್ರರಾಯರು ನಮ್ಮ ಕಾಲದ ಸಾರ್ವಪಾರ್ಷದರು. ಇಂದು ಅವರು ಭೌತಿಕವಾಗಿ ನಮ್ಮೊಡನೆ ಇಲ್ಲದಿದ್ದರೂ ಅವರ ವ್ಯಕ್ತಿತ್ವ-ಕೃತಿತ್ವಗಳು ಸಾರ್ವಪಾರ್ಷದಗಳಾಗಿ ಸಲ್ಲುತ್ತಿವೆ.
ಇಪ್ಪತ್ತು ವರ್ಷಗಳಿಗೂ ಮುನ್ನ ರಾಯರನ್ನು ಕುರಿತು ಬರೆಯುವಾಗ ಅವರು ‘ಸರ್ವತಂತ್ರಸ್ವತಂತ್ರ’ರೆಂದು ಒಕ್ಕಣಿಸಿದ್ದೆ. ಈ ಶಬ್ದವೂ ಸಾರ್ವಪಾರ್ಷದದ ವರ್ಗಕ್ಕೆ ಸೇರುವಂಥದ್ದೇ. ತಂತ್ರ ಎಂದರೆ ಗುರಿ ಸೇರುವ ಕ್ರಮ ಎಂಬ ಅರ್ಥವುಂಟಷ್ಟೆ. ಇಡಿಯ ಜಗತ್ತಿಗಿರುವ ಹಿರಿಯ ಗುರಿಯೆಂದರೆ ನೆಮ್ಮದಿಯ ನೆಲೆ ತಾನೆ! ಅಂಥ ಗುರಿಗಿರುವ ಹತ್ತಾರು ಹಾದಿಗಳನ್ನು ಬಲ್ಲವರಾಗಿ, ಅವುಗಳಲ್ಲಿ ಲೀಲಾಜಾಲವಾಗಿ ಸಂಚರಿಸಬಲ್ಲವರು ಸರ್ವತಂತ್ರಸ್ವತಂತ್ರರು. ಪರಿಷತ್ತು ಕುಳಿತು ಮಾಡುವ ಸಮಾಲೋಚನೆಯ ಸಂಕೇತವಾದರೆ, ತಂತ್ರವು ನಡೆದು ನೋಡುವ ವಿಕಾಸದ ಸಂಕೇತ. ರಾಯರು ಇವೆರಡರಲ್ಲಿಯೂ ಪಳಗಿದವರು. ಅವರಲ್ಲಿ ಪ್ರಾಚೀನ-ನವೀನ, ಪೌರಸ್ತ್ಯ-ಪಾಶ್ಚಾತ್ತ್ಯ, ಉತ್ತರ-ದಕ್ಷಿಣ, ಕಲೆ-ಶಾಸ್ತ್ರ, ಮಾರ್ಗ-ದೇಶೀ, ವಿಚಾರ-ವಿನೋದ ಎಲ್ಲವೂ ಸಮರಸವಾಗಿ ಬೆರೆತಿದ್ದುವು. ಇವು ಬೆರೆತ ವ್ಯಕ್ತಿತ್ವಗಳು ತೀರ ವಿರಳವೇನಲ್ಲ. ಆದರೆ ಸಮರಸವಾಗಿ ಬೆರೆಯುವುದು ವಿಶೇಷ; ಅದು ಎಂದಿಗೂ ಅಪೂರ್ವವೇ. ಇದನ್ನೇ ಅಲ್ಲವೇ ‘ಭುವನದ ಭಾಗ್ಯ’ ಎನ್ನುವುದು!
ವಿದ್ಯೆ
ನಮ್ಮಲ್ಲಿ ವಿದ್ಯೆಗಳನ್ನು ಕುರಿತು ಬಹುಕಾಲದಿಂದ ಚಿಂತನೆ ಸಾಗಿದೆ. ಸನತ್ಕುಮಾರನ ಬಳಿ ತೆರಳಿದ ನಾರದ ತಾನರಿತ ಹತ್ತಾರು ವಿದ್ಯೆಗಳ ಪಟ್ಟಿ ಮಾಡಿ ಮುಂದಿಡುವ ಪ್ರಸ್ತಾವ ಛಾಂದೋಗ್ಯೋಪನಿಷತ್ತಿನಲ್ಲಿಯೇ ಬಂದಿದೆ. ಇಷ್ಟೆಲ್ಲ ವಿದ್ಯೆಗಳನ್ನು ತಿಳಿದಿದ್ದರೂ ತನಗೆ ಪರಮಾರ್ಥದ ಅರಿವಿಲ್ಲವೆಂಬ ಕೊರಗೂ ಅವನದಾಗಿ ಕಂಡುಬರುತ್ತದೆ. ಹೀಗೆ ಪರಮಾರ್ಥವನ್ನು ಅರಿಯುವ ಹವಣಿನಲ್ಲಿ ನೆರವಾಗುವ ಮೂವತ್ತೆರಡು ವಿದ್ಯೆಗಳು ಉಪನಿಷತ್ತುಗಳಲ್ಲಿ ಪ್ರಸಿದ್ಧವಾಗಿವೆ. ಮುಂಡಕಶ್ರುತಿಯು ವಿದ್ಯೆಗಳನ್ನು ಪರಾ ಮತ್ತು ಅಪರಾ ಎಂದು ವಿಶಾಲವಾಗಿ ವಿಂಗಡಿಸಿದೆ. ಈಶೋಪನಿಷತ್ತು ಹೇಳುವ ವಿದ್ಯೆ-ಅವಿದ್ಯೆಗಳು ಇವೇ ಆಗಿವೆ. ಒಂದನ್ನು ಅರಿಯುವ ಭರದಲ್ಲಿ ಮತ್ತೊಂದನ್ನು ಉಪೇಕ್ಷಿಸಿದರೆ ಅನರ್ಥವೆಂಬ ಎಚ್ಚರಿಕೆಯೂ ಅಲ್ಲಿದೆ. ಹೀಗೆ ಪರಾ ವಿದ್ಯೆಯನ್ನು ಅರಿಯುವಲ್ಲಿ ಅಪರಾ ವಿದ್ಯೆಯು ಸಾಧನವಾಗಿ ಒದಗಿಬರಬೇಕು.
ಭಗವಾನ್ ಕೌಟಿಲ್ಯನು ಅರ್ಥಶಾಸ್ತ್ರದಲ್ಲಿ ತ್ರಯೀ, ಆನ್ವೀಕ್ಷಿಕೀ, ವಾರ್ತಾ ಮತ್ತು ದಂಡನೀತಿಗಳೆಬ ನಾಲ್ಕು ಮೂಲಭೂತ ವಿದ್ಯೆಗಳನ್ನು ಹೆಸರಿಸಿ ವಿವರಿಸುತ್ತಾನೆ. ಕವಿ-ಪಂಡಿತ ರಾಜಶೇಖರನು ಈ ಸಾಲಿಗೆ ಸಾಹಿತ್ಯವಿದ್ಯೆಯನ್ನು ಐದನೆಯದಾಗಿ ಸೇರಿಸುತ್ತಾನೆ. ಈ ನಡುವಿನಲ್ಲಿ ಹದಿನಾಲ್ಕು ವಿದ್ಯಾಸ್ಥಾನಗಳ ಬೆಳೆವಣಿಗೆಯನ್ನು ನಾವು ಕಾಣುತ್ತೇವೆ. ಈ ಪಟ್ಟಿಯಲ್ಲಿ ನಾಲ್ಕು ವೇದಗಳು, ಆರು ವೇದಾಂಗಗಳು, ಇತಿಹಾಸ, ಮೀಮಾಂಸೆ, ಧರ್ಮಶಾಸ್ತ್ರ ಮತ್ತು ನ್ಯಾಯವಿಸ್ತರಗಳು ಸೇರುತ್ತವೆ. ಇವಕ್ಕೆ ನಾಲ್ಕು ಉಪವೇದಗಳನ್ನು ಸೇರಿಸಿ
ಮಧುಸೂದನಸರಸ್ವತಿಗಳಂಥವರು ಹದಿನೆಂಟು ವಿದ್ಯಾಸ್ಥಾನಗಳನ್ನು ಆದರಿಸಿದ್ದಾರೆ. ಹೀಗೆಯೇ ಕಾಮಸೂತ್ರ, ಲಲಿತವಿಸ್ತರ, ಪ್ರಬಂಧಕೋಶ ಮುಂತಾದ ಗ್ರಂಥಗಳಲ್ಲಿ ಕ್ರಮವಾಗಿ ಅರವತ್ತನಾಲ್ಕು, ಎಂಬತ್ತಾರು ಮತ್ತು ಎಪ್ಪತ್ತೆರಡು ಕಲೆ ಅಥವಾ ವಿದ್ಯೆಗಳ ಪ್ರಸ್ತಾವವುಂಟು. ಇದನ್ನೆಲ್ಲ ಕಂಡಾಗ ಭಾರತೀಯ ವಿದ್ಯೆಗಳ ಹರಹು ಅದೆಷ್ಟು ಹಿರಿದೆಂಬ ಭಾವ ಬಾರದಿರದು. ಆಧುನಿಕ ಕಾಲದಲ್ಲಿ ಪಾಶ್ಚಾತ್ತ್ಯರ ಸಂಪರ್ಕದಿಂದ ನಮಗೆ ಬೇಕಾಗಿಬಂದ ವಿದ್ಯೆಗಳು ಮತ್ತೂ ನೂರಾರು. ಇವುಗಳನ್ನೆಲ್ಲ ತಳ ಮುಟ್ಟಿ ತಿಳಿದವರು, ದಡ ಹಾಯ್ದು ಕಂಡವರು ಇಲ್ಲವೆಂದರೆ ಅತಿಶಯವಲ್ಲ. ಇವುಗಳಲ್ಲಿ ಮೂಲಭೂತವಾದ, ಮಾರ್ಗದರ್ಶಕವಾದ, ಸಮನ್ವಯಸಹಕಾರಿಯಾದ ಕೆಲವೊಂದು ವಿದ್ಯೆಗಳು ತುಂಬ ಮುಖ್ಯವೆನಿಸಿವೆ. ಅವೇ ಸಾರ್ವಪಾರ್ಷದಗಳು. ಅಂಥವನ್ನು ಅರಿತು ಆಸಕ್ತರಿಗೆ ಅಚ್ಚುಕಟ್ಟಾಗಿ ಹೇಳಬಲ್ಲವರಲ್ಲಿ ಅಗ್ರಗಣ್ಯರು ರಾಮಚಂದ್ರರಾಯರು. ಹೀಗಾಗಿ ಅವರ ಅರಿವಿನ ಬೆಳೆವಣಿಗೆಯ ಬಗೆಯನ್ನು ತಿಳಿದರೆ ಅಂಥವರು ನಮ್ಮ ಸಮಾಜದಲ್ಲಿ ಮುಂದೆಯೂ ರೂಪುಗೊಳ್ಳಲು ಅನುವಾದೀತು.
ಭಾವ–ಬುದ್ಧಿ
ಯಾವ ವ್ಯಕ್ತಿಯ ವಿಕಾಸಕ್ಕೇ ಆಗಲಿ, ಭಾವನೆ ಮತ್ತು ಚಿಂತನೆಗಳು ಅನಿವಾರ್ಯ. ಭಾವನೆ ಹೃದಯಕಾರ್ಯವಾದರೆ ಚಿಂತನೆ ಬುದ್ಧಿಕಾರ್ಯ. ಇಂದ್ರಿಯಗಳ ಮೂಲಕ ದಕ್ಕುವ ವಿಷಯಗಳನ್ನು ನಾವು ನಮ್ಮೊಳಗೆ ತುಂಬಿಕೊಂಡು ಅವಕ್ಕೂ ನಮಗೂ ಬೇಧವಿಲ್ಲ ಎಂಬಷ್ಟರ ಮಟ್ಟಿಗೆ ಮಗ್ನತೆಯನ್ನು ಹೊಂದುವುದು ಭಾವನೆ. ಇವೇ ವಿಷಯಗಳನ್ನು ನಮ್ಮೊಳಗೆ ತುಂಬಿಕೊಂಡ ಬಳಿಕ ಅವುಗಳ ಆಚೆ ತಟಸ್ಥವಾಗಿ ನಿಂತು ಅಲ್ಲಿಯ ಒಂದೊಂದು ವಿವರವನ್ನೂ ಬಿಡಿಸಿ ನೋಡುವ ಬಗೆ ಚಿಂತನೆ. ಒಂದರ ಹಾದಿ ಸಂಯೋಜನೆ, ಮತ್ತೊಂದರದು ವಿವೇಚನೆ. ಇವನ್ನು ಮತ್ತಷ್ಟು ಮೂರ್ತವಾಗಿಸಿ, ಒಂದು ಕಲೆಯ ಮಾರ್ಗ ಮತ್ತೊಂದು ಶಾಸ್ತ್ರದ ಮಾರ್ಗ ಎಂದು ನಮ್ಮ ಪರಂಪರೆ ಗುರುತಿಸಿದೆ. ಭಟ್ಟನಾಯಕನೆಂಬ ಆಲಂಕಾರಿಕನು ಈ ಸಂಗತಿಯನ್ನು ಹೀಗೆ ಸ್ಮರಣೀಯವಾಗಿಸಿದ್ದಾನೆ: “ದ್ವೇ ವರ್ತ್ಮನೀ ಗಿರೋದೇವ್ಯಾಃ ಶಾಸ್ತ್ರಂ ಚ ಕವಿಕರ್ಮ ಚ | ಪ್ರಜ್ಞೋಪಜ್ಞಂ ತಯೋರಾದ್ಯಂ ಪ್ರತಿಭೋದ್ಭಮಮಂತಿಮಮ್ ||” ಇಲ್ಲಿ ಶಾಸ್ತ್ರದ ಮೂಲ ಪ್ರಜ್ಞೆಯಲ್ಲಿದ್ದರೆ, ಕಲೆಯ ಮೂಲ ಪ್ರತಿಭೆಯಲ್ಲಿದೆ ಎಂಬ ಮಾತು ಬಂದಿದೆ. ವಸ್ತುತಃ ಶಾಸ್ತ್ರಕ್ಕೂ ಪ್ರತಿಭೆ ಬೇಕು, ಕಲೆಗೂ ಪ್ರಜ್ಞೆ ಬೇಕು. ನಿರೂಪಣೆಯ ಸೌಲಭ್ಯಕ್ಕಾಗಿ ಇವನ್ನು ಭಿನ್ನವೆಂಬಂತೆ ಬಿಂಬಿಸಲಾಗಿದೆ.
ರಾಮಚಂದ್ರರಾಯರು ಭಾವ-ಬುದ್ಧಿಗಳೆರಡರಲ್ಲಿಯೂ ಶ್ರೀಮಂತರು. ಅವರ ತಂದೆ ವೈಣಿಕರು; ಚಿತ್ರ-ಮೃಚ್ಛಿಲ್ಪಗಳನ್ನು ಬಲ್ಲವರು; ಆಯುರ್ವೇದವನ್ನು ಅನುಸಂಧಾನಿಸುತ್ತಿದ್ದವರು. ತಾಯಿ ಅಕ್ಕರೆಯ ಗೃಹಿಣಿ; ಸಂಪ್ರದಾಯದ ಹಾಡುಗಳನ್ನು ತಿಳಿದವರು. ರಾಯರು ಹುಟ್ಟಿನಿಂದಲೇ ಇವರಿಬ್ಬರ ಕೌಶಲಗಳನ್ನು ಮೈಗೂಡಿಸಿಕೊಂಡಿದ್ದರು. ಅನಂತರ ತಂದೆಯವರ ಶ್ರದ್ಧಾಸ್ಥಾನಗಳಾಗಿದ್ದ ರಾಮಾಯಣ ಮತ್ತು ಭಗವದ್ಗೀತೆಗಳು ಇವರಿಗೂ ಸಂಕ್ರಮಿಸಿದುವು. ಹೀಗೆ ಭಾವಾಂಶದ ಪಾರಮ್ಯ ಅವರಿಗೆ ಕೌಟುಂಬಿಕವಾಗಿಯೇ ಕೈಗೂಡಿತು. ಶಾಲೆಯ ಕಲಿಕೆಯ ಜೊತೆಗೆ ವೇದ, ತರ್ಕ, ಮೀಮಾಂಸೆ, ವೇದಾಂತಗಳಂಥ ಶಾಸ್ತ್ರಗಳ ಪರಿಚಯವೂ ಅವರಿಗೆ ಆಗತೊಡಗಿತು. ಕಾಲೇಜಿನ ಹಂತದಲ್ಲಿ ಮನೋವಿಜ್ಞಾನವನ್ನು ಕಲಿತದ್ದು ಹೊಸತೊಂದು ಶಾಸ್ತ್ರದ ಸಂಸ್ಕಾರವನ್ನು ಒದಗಿಸಿತು. ಇವೆಲ್ಲದರ ಹಿನ್ನೆಲೆಯಲ್ಲಿ ಅವರು ಹಲವು ಭಾಷೆಗಳನ್ನು ಕಲಿತರು, ಹಲವು ಆಗಮ-ದರ್ಶನಗಳನ್ನು ಅಭ್ಯಸಿಸಿದರು, ಕಲಾಭಿರುಚಿಯನ್ನು ತತ್ತ್ವ-ಪ್ರಯೋಗಗಳೆರಡರ ಹಂತಗಳಲ್ಲಿಯೂ ವಿಸ್ತರಿಸಿಕೊಂಡರು. ಇದನ್ನು ಕಂಡಾಗ ಸಾರ್ವಪಾರ್ಷದರಾಗಲು ಏನೆಲ್ಲ ಹಿನ್ನೆಲೆ ಬೇಕಾಗುವುದೆಂಬ ಅಂದಾಜು ನಮಗಾಗದಿರದು.
ಮೇಲ್ನೋಟಕ್ಕೇ ತಿಳಿಯುವಂತೆ ರಾಯರು ವೀಣೆ, ಚಿತ್ರ, ಶಿಲ್ಪ ಮುಂತಾದ ಕಲೆಗಳಲ್ಲಿಯೂ ಒಳ್ಳೆಯ ಸಾಹಿತ್ಯದ ರಚನೆಯಲ್ಲಿಯೂ ತೊಡಗಿಕೊಂಡದ್ದು ಅವರ ಭಾವಸಮೃದ್ಧಿಗೆ ಸಾಕ್ಷಿ. ವೇದ-ವೇದಾಂಗಗಳು, ಆಗಮ-ದರ್ಶನಗಳು, ಮನಃಶಾಸ್ತ್ರ, ಮಾನವಶಾಸ್ತ್ರ, ಸಮಾಜಶಾಸ್ತ್ರ ಮೊದಲಾದುವುಗಳ ಅಧ್ಯಯನ-ಅಧ್ಯವಸಾಯಗಳು ಅವರ ಬುದ್ಧಿಸಮೃದ್ಧಿಗೆ ನಿದರ್ಶನ. ಸಾರ್ಪಪಾರ್ಷದರಾಗಲು ಭಾವ-ಬುದ್ಧಿಗಳೆರಡನ್ನೂ ಪುಷ್ಟಿಗೊಳಿಸಿಕೊಳ್ಳುವುದು ಯಾರಿಗೂ ಅನಿವಾರ್ಯ. ಇಂಥ ಪುಷ್ಟಿಯನ್ನು ಅಡ್ಡಾದಿಡ್ಡಿಯಾಗಿ ಮಾಡಿಕೊಂಡರೆ ಉದ್ದಿಷ್ಟ ಫಲ ದಕ್ಕದು. ಒಳ್ಳೆಯ ದೇಹಶಿಲ್ಪವನ್ನು ಗಳಿಸಲು ವ್ಯಾಯಾಮದ ಹೆಸರಿನಲ್ಲಿ ಸುಮ್ಮನೆ ಬಳಲುವುದಾಗಲಿ, ಒಡಲಿಗೆ ಚೆನ್ನಾಗಿ ತೀನಿ ಬೇಕೆನ್ನುವ ನೆವದಲ್ಲಿ ಬೊಜ್ಜು ಬೆಳೆಸಿಕೊಳ್ಳುವುದಾಗಲಿ ಫಲಕಾರಿಯಾಗವಷ್ಟೆ. ವ್ಯಾಯಾಮವೊಂದು ಶಿಸ್ತು. ದೇಹದ ಒಂದೊಂದು ಅಂಗವೂ ಅದರ ಒಂದೊಂದು ಮಾಂಸಪೇಶಿಯೂ ವ್ಯವಸ್ಥಿತವಾಗಿ ಹುರಿಗೊಳ್ಳಬೇಕು. ಊಟವೂ ಹಾಗೆಯೇ. ನಮಗೆ ಸಂತುಲಿತವಾದ ಪೌಷ್ಟಿಕ ಆಹಾರ ಬೇಕು; ಅದು ರುಚಿಗೂ ಆರೋಗ್ಯಕ್ಕೂ ಒದಗಿಬರಬೇಕು.
ರಾಯರ ಕಲೆ-ಶಾಸ್ತ್ರಗಳ ಕಲಿಕೆ ಈ ತೆರನಾದದ್ದು.
ಅಪಾರವಾದ ಜ್ಞಾನಸಾಗರವನ್ನು ಇಡಿಯಾಗಿ ಆಪೋಶನ ತೆಗೆದುಕೊಳ್ಳುವುದು ಎಂಥ ಅಗಸ್ತ್ಯ ಪ್ರತಿಭೆಗೂ ಕಷ್ಟ. ಆದರೆ ದಿಗ್ದರ್ಶಕವಾಗಿ ಕೆಲವೊಂದು ವಿದ್ಯೆಗಳ ಒಳ-ಹೊರಗನ್ನು ಅರಿತರೆ ಈ ಮಹಾಸಾಗರದ ಅಧಿಕೃತ ಪರಿಚಯ ಆದೀತು. ವಸ್ತುನಿಷ್ಠವಾದ, ತರ್ಕಪ್ರಧಾನವಾದ ಆಧುನಿಕ ವಿಜ್ಞಾನ-ತಂತ್ರಜ್ಞಾನಗಳಂಥ ಯಾವುದಾದರೂ ಒಂದು ವಿದ್ಯೆಯನ್ನು ಮೊದಲ ಹಂತವಾಗಿ ಕಲಿಯುವುದೊಳಿತು. ಇದರೊಟ್ಟಿಗೆ ಮಾನವರೇ ರೂಪಿಸಿಕೊಂಡ ನೀತಿಪ್ರಧಾನವಾದ ಕಾನೂನು, ಸಮಾಜಶಾಸ್ತ್ರ ಮುಂತಾದ ಮತ್ತೊಂದು ವಿದ್ಯೆಯನ್ನು ಮೈಗೂಡಿಸಿಕೊಂಡರೆ ಒಳ್ಳೆಯದು. ಇವೆರಡಕ್ಕಿಂತಲೂ ವಿಭಿನ್ನವಾದ, ಭಾವೈಕಪ್ರವಣವಾದ ಕಲೆಯೊಂದರ ಆಳವಾದ ಪರಿಚಯ ಮಾಡಿಕೊಂಡರೆ ಈ ಮುನ್ನ ಪಡೆದ ಬುದ್ಧಿವಿಕಾಸಕ್ಕೆ ಒಳ್ಳೆಯ ಸಂವಾದಿಯಾಗಬಲ್ಲ ಹೃದಯಸಮೃದ್ಧಿ ಒದಗುತ್ತದೆ. ಕಲೆಯೆಂದರೆ ಸಾಹಿತ್ಯವೂ ಸೇರಿದಂತೆ ಯಾವುದೂ ಆಗಬಹುದು. ಆದರೆ ಅಭಿಜಾತ ಕಲೆಯಾದಲ್ಲಿ ಹೆಚ್ಚಿನ ಅನುಕೂಲತೆ ಉಂಟು. ಹೀಗೆ ಪಡೆದ ಬುದ್ಧಿ-ಭಾವಗಳ ಶ್ರೀಮಂತಿಕೆಯನ್ನು ತತ್ತ್ವಜ್ಞಾನದಿಂದ ಪರಿಪಾಕಕ್ಕೆ ತಂದುಕೊಳ್ಳಬೇಕು. ಇದಕ್ಕಾಗಿಯೇ ದರ್ಶನಶಾಸ್ತ್ರಗಳಿರುವುದು. ಇವುಗಳಲ್ಲಿ ವೇದಾಂತ ಅಗ್ರಗಣ್ಯ. ಅದು ಸರ್ವಾತ್ಮನಾ ಸಾರ್ವಪಾರ್ಷದ. ರಾಯರಲ್ಲಿ ಈ ನಾಲ್ಕು ಬಗೆಯ ಕಲಿಕೆಗಳೂ ಅಚ್ಚುಕಟ್ಟಾಗಿ ಕಲೆತಿದ್ದುವು. ಅವರು ಕಾಲೇಜಿನಲ್ಲಿ ಕಲಿತ ಮನಃಶಾಸ್ತ್ರ-ಸಮಾಜಶಾಸ್ತ್ರಗಳು ಮೊದಲೆರಡು ವಿದ್ಯೆಗಳ ಪ್ರತಿನಿಧಿಗಳಾದರೆ, ಮನೆಯಿಂದ ಬಂದು ತಾವೂ ಒಲಿದು ಕೈಗೊಂಡ ಸಂಗೀತ-ಸಾಹಿತ್ಯ-ಚಿತ್ರ-ಶಿಲ್ಪಗಳು ಮೂರನೆಯ ವಿದ್ಯೆಯ ಸಂಕೇತಗಳು. ಇನ್ನು ಅವರ ಸ್ವಭಾವದಲ್ಲಿಯೇ ಇದ್ದ ತಾತ್ತ್ವಿಕ ದೃಷ್ಟಿಗೆ ಶೃಂಗಗಿರಿಯ ಶ್ರೀಚಂದ್ರಶೇಖರಭಾರತೀಸ್ವಾಮಿಗಳ ಕರುಣೆ ಮತ್ತು ಮಹಾವಿದ್ವಾನ್ ಪಾಲಕ್ಕಾಡು ನಾರಾಯಣಶಾಸ್ತಿçಗಳ ಬೋಧನೆಗಳು ಇಂಬಾಗಿ ಬಂದು ಕೈಗೂಡಿದ ವೇದಾಂತದ ತಿಳಿವು ನಾಲ್ಕನೆಯ ವಿದ್ಯೆಯ ಪ್ರತೀಕ.
ದಿಟವೇ, ಈ ವಿದ್ಯೆಗಳಷ್ಟೇ ಅಲ್ಲದೆ ರಾಯರಿಗೆ ವೇದಗಳು, ನ್ಯಾಯ-ಮೀಮಾಂಸೆ, ಶೈವ-ವೈಷ್ಣವ ಆಗಮಗಳು, ಬೌದ್ಧ-ಜೈನ ದರ್ಶನಗಳು, ವಿವಿಧ ಸ್ವದೇಶೀ-ವಿದೇಶೀ ಭಾಷೆಗಳೇ ಮುಂತಾದ ಮತ್ತೆಷ್ಟೋ ವಿಷಯಗಳಲ್ಲಿ ಪರಿಚಿತಿ ಇದ್ದಿತು. ಇವನ್ನೆಲ್ಲ ಅಧಿಕೃತ ವಿದ್ವಾಂಸರಿಂದಲೇ ತಕ್ಕಮಟ್ಟಿಗೆ ಅರಿತಿದ್ದರು. ಹೀಗೆ ಅವರ ಕಲಿಕೆ ಸಮಗ್ರವಾಗಿತ್ತು. ಜೊತೆಗೆ ಎಂ. ಹಿರಿಯಣ್ಣ, ರಾಳ್ಲಪಲ್ಲಿ ಅನಂತಕೃಷ್ಣಶರ್ಮಾ, ರಾಹುಲ ಸಾಂಕೃತ್ಯಾಯನ ಮುಂತಾದ ಅನೇಕ ಮಹನೀಯರ ಸಾಕ್ಷಾತ್ ಪರಿಚಯವಿದ್ದಿತು; ಮತ್ತೆಷ್ಟೋ ಸಾಧಕರ, ಯೋಗಿಗಳ, ಅನುಭಾವಿಗಳ, ಕಲಾವಿದರ ಹೊಕ್ಕುಬಳಕೆಯೂ ಇದ್ದಿತು. ಇವೆಲ್ಲ ಅವರ ಅರಿವಿನ ಸೀಮೆಗಳನ್ನು ವಿಸ್ತರಿಸುವುದರೊಟ್ಟಿಗೆ ಅಂತರಂಗಪಾಕವನ್ನೂ ಹೆಚ್ಚಿಸಿದುವು. ಹೀಗಲ್ಲವಾದರೆ ಒಬ್ಬ ಸರ್ವತಂತ್ರಸ್ವತಂತ್ರ ರೂಪುಗೊಳ್ಳುವುದಾದರೂ ಹೇಗೆ!
ಆಕಲನ–ಅಭಿವ್ಯಕ್ತಿ
ಇಂಥ ನೆಲೆಗಟ್ಟಿನಿಂದ ರಾಯರು ಲೇಖನ-ಅಧ್ಯಾಪನಗಳನ್ನು ಕೈಗೊಂಡ ಕಾರಣ ಅವುಗಳಿಗೆ ಎಲ್ಲಿಲ್ಲದ ಕಾಂತಿ ಬಂದಿತು. ಅವರದು ಮೊದಲಿನಿಂದಲೂ ಮಧುಕರಮನೋಧರ್ಮ – ಜೇನುಹುಳುವಿನಂತೆ ನೂರಾರು ಹೂಗಳ ಮಕರಂದ ಹೀರಿ ಅದನ್ನೆಲ್ಲ ತನ್ನೊಳಗಿನ ಸತ್ತ್ವದಿಂದ ಜೇನಿನ ಹನಿಗಳಾಗಿ ತಾನೇ ಕಟ್ಟಿದ ಚಿಕ್ಕಚಿಕ್ಕ ಗೂಡುಗಳಲ್ಲಿ ಚೊಕ್ಕವಾಗಿ ಹವಣಿಸುವುದು. ಜೇನಿನಲ್ಲಿ ಎಲ್ಲ ಹೂಗಳ ಸಾರವಿದ್ದರೂ ಅದಕ್ಕೆ ತನ್ನದೇ ಆದ ವಿಶಿಷ್ಟತೆ ಇದೆ, ಪ್ರಯೋಜನವೂ ಇದೆ. ರಾಯರ ಅಧ್ಯಾಪನ ಮತ್ತು ಲೇಖನಕರ್ಮಗಳ ರೀತಿಯೂ ಹೀಗೆಯೇ. ಇನ್ನೆಷ್ಟೋ ಮಂದಿ ಇವರಂತೆ ವಿವಿಧ ಜ್ಞಾನಶಾಖೆಗಳನ್ನು ಅರಿತು ಪಾಠ-ಪ್ರವಚನಗಳನ್ನು ಮಾಡಿದ್ದರೂ ಗ್ರಂಥರಚನೆ ನಡಸಿದ್ದರೂ ಅವರಲ್ಲಿ ಕಾಣದ ಯಾವುದೋ ಒಂದು ತೆರನಾದ ಸೌಲಭ್ಯ ಮತ್ತು ಸ್ವೋಪಜ್ಞತೆಗಳು ರಾಯರಲ್ಲಿವೆ. ಇದು ಅಲ್ಪಸ್ವಲ್ಪದ ಸಿದ್ಧಿಯಲ್ಲ. ಇದಕ್ಕೆ ಹಲವು ಕಾರಣಗಳಿರಬಹುದಾದರೂ ಪ್ರಧಾನವಾದ ಒಂದೆAದರೆ ಅವರಿಗಿದ್ದ ಆಕಲನಶಕ್ತಿ ಮತ್ತು ಅಭಿವ್ಯಕ್ತಿಶಕ್ತಿ.
ಗ್ರಂಥಾಲಯಸೌಲಭ್ಯ ಹೆಚ್ಚಿಲ್ಲದ ಕಾಲದಲ್ಲಿ, ಅಂತರ್ಜಾಲದ ಅನುಕೂಲತೆಯ ಕಲ್ಪನೆಯೂ ಇಲ್ಲದ ಹೊತ್ತಿನಲ್ಲಿ ಯಾವುದೇ ಶೋಧಸಂಸ್ಥೆಯ ಬೆಂಬಲವಿಲ್ಲದೆ ನೂರಾರು ಮೂಲಗಳಿಂದ ರಾಯರು ತಿಳಿವನ್ನು ಸಂಗ್ರಹಿಸಿದ್ದೊಂದು ಸಾಹಸ. ಇನ್ನು ಪ್ರಕಾಶನದ ಸಮೃದ್ಧಿಯಾಗಲಿ, ಮುದ್ರಣಸೌಕರ್ಯಗಳ ಪಾರಮ್ಯವಾಗಲಿ ಅಷ್ಟಾಗಿ ಇಲ್ಲದ ಸಮಯದಲ್ಲಿ ತಮ್ಮ ತಿಳಿವನ್ನು ಪ್ರಕಾಶಕರಿಗೆ ಹೊರೆಯಾಗದ, ಓದುಗರಿಗೆ ಭಾರವೆನಿಸದ ರೀತಿಯಲ್ಲಿ ತಮಗೂ ತೃಪ್ತಿಯಾಗುವಂತೆ ತಿಳಿನುಡಿಯಲ್ಲಿ ತುಂಬಿಕೊಟ್ಟದ್ದು ಮಾತಿಗೆ ಮೀರಿದ ಸಾಹಸ. ಅಥರ್ವವೇದವು ಹೇಳುವಂತೆ ನೂರು ಕೈಗಳಿಂದ ಗಳಿಸಿ ಸಾವಿರ ಕೈಗಳಿಂದ ಹಂಚಬೇಕಲ್ಲವೇ. ಇದೇ ರಾಯರ ಹೆಗ್ಗಳಿಕೆ. ಹೀಗೆ ಸಾವಿರ ಕೈಗಳಿಂದ ಹಂಚುವಾಗ ಅವರು ದೇಶ, ಕಾಲ, ವಸ್ತು ಮತ್ತು ಕಲಿಕೆಯ ಅಧಿಕಾರಿಗಳನ್ನು ಗಮನಿಸಿಕೊಂಡು ನಡೆದಿದ್ದಾರೆ. ಇದನ್ನು ವ್ಯಾಸ-ಸಮಾಸಕೌಶಲವೆನ್ನಬೇಕು.
ವ್ಯಾಸವೆಂದರೆ ವಿಸ್ತರಿಸಿ ವಿವರಿಸುವ ಕಲೆ. ಸಮಾಸವೆಂದರೆ ಅಡಕವಾಗಿ ಬಿಗಿದಿಡುವ ಜಾಣ್ಮೆ. ರಾಯರ ವ್ಯಾಸಶಕ್ತಿಗೆ ಋಗ್ವೇದದರ್ಶನದ ಸಂಪುಟಗಳೂ ಆಗಮಕೋಶ, ಪ್ರತಿಮಾಕೋಶ, ಲಲಿತಾಕೋಶ, ಶಾಲಗ್ರಾಮಕೋಶ, ನವಗ್ರಹಕೋಶ, ಆಯುರ್ವೇದವಿಶ್ವಕೋಶ ಮೊದಲಾದುವು ಸಮರ್ಥ ನಿದರ್ಶನಗಳು. ಇನ್ನು ಸಮಾಸಶಕ್ತಿಯ ವಿಷಯಕ್ಕೆ ಬಂದರೆ, ಶ್ರೀಕೃಷ್ಣನ ವ್ಯಕ್ತಿತ್ವ, ಭರತಮುನಿಯ ನಾಟ್ಯಶಾಸ್ತ್ರ, ನಗೆಯ ನೆಲೆ, ಭಾರತೀಯ ಸಂಸ್ಕೃತಿ ಮುಂತಾದ ಎಷ್ಟೋ ಕೃತಿಗಳೇ ಸಾಕ್ಷಿ. ಈ ಗುಣ ಬರೆವಣಿಗೆಯಲ್ಲಿ ಮಾತ್ರವಲ್ಲದೆ ಪಾಠ, ಪ್ರವಚನ, ಅಧ್ಯಯನಗೋಷ್ಠಿಗಳಲ್ಲಿಯೂ ಕಾಣಸಿಗುತ್ತದೆ. ಯೋಗಸೂತ್ರ, ಪ್ರತ್ಯಭಿಜ್ಞಾಶೈವದರ್ಶನ, ಸೌಂದರ್ಯಲಹರೀ, ಭಾಗವತಪುರಾಣ ಮುಂತಾದ ಎಷ್ಟೋ ವಿಷಯಗಳನ್ನು ಹತ್ತಾರು ವರ್ಷ ಅವರು ಪಾಠ ಮಾಡಿದ್ದುಂಟು. ಹಾಗೆಯೇ ದೊಡ್ಡ ದೊಡ್ಡ ಗ್ರಂಥಗಳ, ವಿಚಾರಗಳ ಬಗೆಗೆ ಕೆಲವೇ ನಿಮಿಷಗಳಲ್ಲಿ ಭಾಷಣ ಮಾಡಿದ್ದೂ ಉಂಟು.
ನಿಗ್ರಹ–ಅನುಗ್ರಹ
ಅದೊಮ್ಮೆ ಸಂಸ್ಕೃತಸಾಹಿತ್ಯದ ಪ್ರವೇಶರೂಪದ ಹತ್ತು ಹೊತ್ತಗೆಗಳನ್ನು ರಾಯರು ಅರ್ಧಘಂಟೆಯ ಅವಧಿಯಲ್ಲಿ ಪರಿಚಯಿಸಿಕೊಡಬೇಕಿತ್ತು. ಈ ಕೃತಿಗಳಲ್ಲಿ ವೇದ, ಉಪನಿಷತ್ತು, ಪುರಾಣ, ಧರ್ಮಶಾಸ್ತ್ರ, ಕಾವ್ಯ, ನಾಟಕ ಮುಂತಾದ ಎಷ್ಟೋ ವಿಷಯಗಳಿದ್ದುವು. ಇಂತಿದ್ದರೂ ರಾಯರು ಈ ಪುಸ್ತಕಗಳನ್ನು ಬರೆದ ಲೇಖಕರಿಗೂ ಅರಕೆಯಾಗದಂತೆ, ಸಭೆಯಲ್ಲಿದ್ದ ಶ್ರೋತೃಗಳಿಗೂ ತೃಪ್ತಿಯಾಗುವಂತೆ ಅದ್ಭುತವಾಗಿ ಮಾತನಾಡಿದ್ದರು. ಈ ಘಟನೆಗೆ ಸಾಕ್ಷಿಯಾಗಿದ್ದ ನನಗೆ ಇದನ್ನು ಬರೆಯುವಾಗಲೂ ಮೈನವಿರೇಳುತ್ತದೆ! ಇಂಥ ಸಂದರ್ಭಗಳು ನೂರಾರು.
ಆದುದರಿಂದಲೇ ಯಾವುದೇ ವಿದ್ವತ್ಸಭೆಗಾಗಲಿ, ಗ್ರಂಥಲೋಕಾರ್ಪಣದ ಸಮಾರಂಭಕ್ಕಾಗಲಿ ರಾಮಚಂದ್ರರಾಯರ ಉಪಸ್ಥಿತಿ ಅನಿವಾರ್ಯವಾಗಿತ್ತು; ಪರ್ಯಾಪ್ತವೂ ಆಗಿತ್ತು. ಇದು ಕೇವಲ ಒಂದು ವಿದ್ಯೆಗೋ ಒಂದು ಕಲೆಗೋ ಸಂಬಂಧಿಸಿದಂತೆ ಅಲ್ಲ. ‘ಈ ವಿಷಯದ ಬಗೆಗೆ ಹೇಗಪ್ಪಾ ಮಾತನಾಡುವುದು’ ಎಂದು ಎಂಥ ವಿದ್ವಾಂಸರಿಗೂ ಎದೆ ಮುಟ್ಟಿಕೊಳ್ಳುವಂತಾಗುವ ಸಂದರ್ಭಗಳಲ್ಲಿಯೂ ರಾಯರ ಪ್ರಜ್ಞೆ ಲೀಲಾಜಾಲವಾಗಿ ಸಂಚರಿಸುತ್ತಿತ್ತು; ಆವರೆಗೆ ಆ ನಿಟ್ಟಿನಲ್ಲಿ ಯಾರೂ ಕಾಣದ ಹೊಳಹುಗಳನ್ನು ಕಂಡು ಕಾಣಿಸುತ್ತಿತ್ತು.
ಅದೊಮ್ಮೆ ‘ಶಿಲ್ಪ ಮತ್ತು ಸಂಗೀತಕಲೆಗಳ ಸಂವಾದ’ ಎಂಬ ವಿಚಾರಗೋಷ್ಠಿ ಆಯೋಜಿತವಾಗಿತ್ತು. ರಾಯರದೇ ಆಶಯಭಾಷಣ. ಕಣ್ಣಿನ ಲೋಕಕ್ಕೆ ಸೇರಿದ ಶಿಲ್ಪಕ್ಕೂ ಕಿವಿಯ ಜಗತ್ತಿಗೆ ಸಂದಿರುವ ಸಂಗೀತಕ್ಕೂ ಎಲ್ಲಿಯ ತಾಳ-ಮೇಳ! ರಾಯರು ಈ ವಿಭಿನ್ನೇಂದ್ರಿಯಸಂವೇದನೆಯನ್ನೇ ತಮ್ಮ ಮಾತಿನ ಕೇಂದ್ರವಾಗಿ ಇರಿಸಿಕೊಂಡು ಒಳನೋಟಗಳ ವೃತ್ತಗಳನ್ನು ವಿಸ್ತರಿಸಿದ್ದರು. ‘ಆಯುರ್ವೇದದಲ್ಲಿ ಮೌಲ್ಯಪ್ರಜ್ಞೆ’ ಎಂಬ ಮತ್ತೊಂದು ಉಪನ್ಯಾಸ ಸ್ಮರಣೀಯವಾಗಿದೆ. ಬುದ್ಧ-ಶಂಕರರ ಬಗೆಗೆ, ಪುರಂದರ-ತ್ಯಾಗರಾಜರ ಬಗೆಗೆ, ಸಂಗೀತಕೃತಿಗಳಲ್ಲಿಯ ತಂತ್ರಶಾಸ್ತ್ರೀಯ ಸಂಗತಿಗಳ ಬಗೆಗೆ ಅವರು ಮಾಡಿದ್ದ ಭಾಷಣಗಳು ಮರೆಯಲಾಗದಂಥವು.
ಕೆಲವೊಮ್ಮೆ ಕೊಟ್ಟ ವಿಷಯಕ್ಕೇ ವಿರುದ್ಧವಾದ ಅಭಿಪ್ರಾಯಗಳನ್ನೂ ಅವರು ಮಂಡಿಸಿದ್ದುಂಟು! ಆದರೆ ಇಲ್ಲಿಯೂ ಆಧಾರಗಳಿಗೆ ಅರಕೆ ಇರುತ್ತಿರಲಿಲ್ಲ; ಒಳನೋಟಗಳಿಗೆ ಕೊರತೆ ಇರುತ್ತಿರಲಿಲ್ಲ. ಅದೊಮ್ಮೆ ವಾಸ್ತುವಿದ್ಯೆಯನ್ನು ಕುರಿತ ಅಂತಾರಾಷ್ಟ್ರೀಯ ಸಮ್ಮೇಳನದ ಆಶಯಭಾಷಣದಲ್ಲಿಯೇ ಆ ವಿದ್ಯೆಯ ಲೋಪ-ದೋಷಗಳನ್ನು ಎತ್ತಿ ಆಡಿದ್ದರು; ಇಡಿಯ ಸಮ್ಮೇಳನದ ಉದ್ದೇಶ್ಯವನ್ನೇ ಪ್ರಶ್ನಾರ್ಥಕಚಿಹ್ನೆಯ ಮೇಲೆ ನಿಲ್ಲಿಸಿದ್ದರು! ಇನ್ನೊಮ್ಮೆ ಪ್ರಸಿದ್ಧ ಸಂಶೋಧಕರೊಬ್ಬರ ಸ್ಮರಣೆಯಲ್ಲಿ ನಡೆದ ದತ್ತಿ ಉಪನ್ಯಾಸವನ್ನು ಮಾಡುತ್ತ ಅವರ ಇಡಿಯ ಸಂಶೋಧನೆ ಮತ್ತದರ ಕ್ರಮಗಳನ್ನೇ ಸಾಧಾರವಾಗಿ ತಿರಸ್ಕರಿಸಿದ್ದರು. ಮಗದೊಮ್ಮೆ ಕನ್ನಡ ಸಾಹಿತ್ಯ ಸಮ್ಮೇಳನವೊಂದರ ಗೋಷ್ಠಿಯಲ್ಲಿ ಅಧ್ಯಕ್ಷಭಾಷಣ ಮಾಡುವಾಗ ಆವರೆಗಿನ ಭಾಷಣಕಾರರ ಅಪಸವ್ಯಗಳನ್ನೆಲ್ಲ ಎಳೆದೆಳೆದು ತೋರಿಸಿದ್ದರು. ಹೀಗೆ ರಾಯರು ನಿಗ್ರಹಾನುಗ್ರಹಸಮರ್ಥರು.
ಸಾರಸ್ವತ ಕೃಷಿ
ಸದ್ಯಕ್ಕೆ ನಮಗಿರುವ ಅವಕಾಶ ಅಲ್ಪವಾದ ಕಾರಣ ರಾಮಚಂದ್ರರಾಯರ ಸಾರಸ್ವತ ಕೃಷಿಯನ್ನೆಲ್ಲ ತಡಕಾಡಿ ಅವರ ಸಾರ್ವಪಾರ್ಷದತ್ವವನ್ನು ಸಾಕ್ಷಾತ್ಕರಿಸಿಕೊಳ್ಳಲು ಸಾಧ್ಯವಿಲ್ಲ. ದಿಙ್ಮಾತ್ರವಾಗಿ ಕೆಲವೊಂದು ಕಿರುಹೊತ್ತಿಗೆಗಳನ್ನು ಪರಿಶೀಲಿಸಿ ಅಷ್ಟರಲ್ಲಿಯೇ ಅವರ ಸರ್ವಂಕಷತೆಯನ್ನು ಮನಗಾಣಬಹುದು.
ಮೊದಲಿಗೆ ‘ಪ್ರತಿಭೆಯೆಂದರೇನು?’ ಎಂಬ ಮೂವತ್ತೊಂಬತ್ತು ಪುಟಗಳ ಪುಸ್ತಿಕೆಯನ್ನೇ ನೋಡೋಣ. ರಾಯರ ಪ್ರಧಾನ ಕ್ಷೇತ್ರ ಕಾವ್ಯಮೀಮಾಂಸೆಯಲ್ಲ. ಇದು ಅವರಿಗಿರುವ ಹತ್ತಾರು ಆಸಕ್ತಿಗಳಲ್ಲಿ ಒಂದಷ್ಟೇ. ಇಂತಿದ್ದರೂ ಪ್ರತಿಭೆಯಂಥ ಅನಿರ್ವಚನೀಯವಾದ ವಿಷಯವನ್ನು ಕುರಿತು ಸಾಕಷ್ಟು ವ್ಯಾಪಕವಾಗಿ, ವಿಶದವಾಗಿ ಚಿಂತಿಸಿದ್ದಾರೆ. ಮೊತ್ತಮೊದಲಿಗೆ ಎಲ್ಲರಲ್ಲಿಯೂ ಕಾಣಬಹುದಾದ ಒಳಹೊಳಹನ್ನು ಪ್ರತಿಭೆಯೆಂದು ಗುರುತಿಸಿ ಮುಂದುವರಿಯುವ ರಾಯರು ವೇದಗಳಿಂದ ಇದರ ಉಲ್ಲೇಖಗಳನ್ನು ಮೊಗೆದು ಕೊಡುತ್ತಾರೆ. ಮುಖ್ಯವಾಗಿ ಭಟ್ಟತೌತ, ಅಭಿನವಗುಪ್ತ, ಜಗನ್ನಾಥ ಮುಂತಾದ ಆಲಂಕಾರಿಕರನ್ನು ಆಧರಿಸುವರಾದರೂ ಶಿವಸೂತ್ರಗಳ, ಪ್ರತ್ಯಭಿಜ್ಞಾಶೈವದರ್ಶನದ ಎಷ್ಟೋ ವಿವರಗಳನ್ನು ಪೋಣಿಸುವರು. ಇವೆಲ್ಲವನ್ನೂ ಬೆಸೆಯುವಾಗ ಓದುಗರಿಗೆ ಮೇಲ್ನೋಟಕ್ಕೆ ಎದ್ದುಕಾಣದಿದ್ದರೂ ಅಂತರಂಗದ ಅರಿವಿಗೆ ಬರುವ ರೀತಿಯಲ್ಲಿ ಅವರ ಮನಃಶಾಸ್ತ್ರದ ಚಿಂತನಕ್ರಮವೂ ದುಡಿದಿದೆ. ಹೀಗೆ ದರ್ಶನಗಳು, ಅಲಂಕಾರಶಾಸ್ತ್ರಗ್ರಂಥಗಳು ಮತ್ತು ಮನಃಶಾಸ್ತ್ರೀಯ ವಿವೇಚನಕ್ರಮ ಎಂಬ ಮೂರು ವಿಭಿನ್ನ ಧಾರೆಗಳು ಇಲ್ಲಿ ಸಮರಸವಾಗಿ ಹೆಣೆದುಕೊಂಡಿರುವುದು ಗಮನಾರ್ಹ. ಇದನ್ನು ರಾಯರಂಥವರೇ ಬರೆಯಬಲ್ಲರು.
ನಾಟ್ಯಶಾಸ್ತ್ರದ ಕೆಲವೊಂದು ಅಧಿಕರಣಗಳನ್ನು ಕುರಿತ ಪುಸ್ತಿಕೆಯೇ ‘ಭರತಮುನಿಯ ನಾಟ್ಯಶಾಸ್ತ್ರ’. ಇಲ್ಲಿಯ ಹಲವಾರು ಅಧ್ಯಾಯಗಳಲ್ಲಿ ಬೇರೆ ಬೇರೆ ನಿಟ್ಟುಗಳಿಂದ ರಾಯರು ವಿಚಾರಗಳನ್ನು ಹವಣಿಸಿಕೊಟ್ಟಿದ್ದಾರೆ. ಜೊತೆಗೆ ತಮ್ಮ ಒಳನೋಟಗಳನ್ನೂ ಕಾಣಿಸಿದ್ದಾರೆ. ಅದು ಹರಿವಿನ ಅರ್ಥವನ್ನು ಒಳಗೊಂಡ ರಸಶಬ್ದದ ನಿರ್ವಚನವಾಗಿರಬಹುದು, ಮೀಮಾಂಸಾಶಾಸ್ತ್ರದ ಹಿನ್ನೆಲೆಯಲ್ಲಿ ವಿವೇಚಿಸುವ ಭಾವನಾವ್ಯಾಪಾರವನ್ನು ಕುರಿತಿರಬಹುದು, ಕಾಮಸೂತ್ರ ಮತ್ತು ಅಥರ್ವವೇದಗಳ ಆಭಿಚಾರಿಕ ಪ್ರಕರಣಗಳಿರಬಹುದು, ಸಾಂಖ್ಯದರ್ಶನದ ಪ್ರಕೃತಿ-ಪುರುಷರನ್ನು ಕುರಿತ ವಿವರವಿರಬಹುದು, ವಿಜ್ಞಾನಭೈರವದ ನೂರ ಹನ್ನೆರಡು ಬಗೆಯ ಧಾರಣೆಗಳಲ್ಲಿ ಒಂದಾದ ಸಾಹಸವಿರಬಹುದು, ತಲ್ಲಯ ಮತ್ತು ತನ್ಮಯ ಎಂಬ ಮಾತುಗಳನ್ನು ವಿವರಿಸುವ ಪರಿಯಾಗಿರಬಹುದು – ಒಂದೊಂದೂ ರಾಯರ ಛಾಪನ್ನು ಒಳಗೊಂಡಿದೆ. ಇಂಥ ಬರೆವಣಿಗೆ ಸಾರ್ವಪಾರ್ಷದರಿಗೆ ಮಾತ್ರ ಎಟುಕುವಂಥದ್ದು.
ಇನ್ನು ‘ನಗೆಯ ನೆಲೆ’ ಎಂಬ ಅಂಗೈಯಗಲದ ಪುಸ್ತಿಕೆಯನ್ನು ನೋಡೋಣ. ಎಲ್ಲರೂ ಅನುಭವಿಸಿ ಬಲ್ಲ ಚಿರಪರಿಚಿತ ಸಂಗತಿಯನ್ನೇ ಅದೆಷ್ಟು ಹೊಸತಾಗಿ, ಅದೆಷ್ಟು ಸವಿಯಾಗಿ ರಾಯರು ನಿರೂಪಿಸುವರೆಂಬುದನ್ನು ಇದರ ಓದಿನಿಂದಲೇ ಮನಗಾಣಬೇಕು. ಹಲವು ಪಾಶ್ಚಾತ್ತ್ಯ ಚಿಂತಕರ ಮಾತುಗಳಿಂದ ಉಪಕ್ರಮಿಸುವ ರಾಯರು ನಗೆಯ ಹಿಂದಿನ ಮನೋವ್ಯಾಪಾರದಿಂದ ಆರಂಭಿಸಿ ನಗುವಾಗ ಉಂಟಾಗುವ ದೈಹಿಕ ಕ್ರಿಯೆಗಳ ಕಡೆಗೆ ದಾಪಿಡುತ್ತಾರೆ. ನಗೆಯ ಬಗೆಗಳನ್ನೂ ಪ್ರಯೋಜನಗಳನ್ನೂ ಪಟ್ಟಿ ಮಾಡುತ್ತಾರೆ. ಕಡೆಗೆ ನಗುವಿನಲ್ಲಿ ಅಡಗಿದ ಹೊಗೆ-ಹಗೆಗಳನ್ನೂ ಬಗೆದಿಡುತ್ತಾರೆ. ಹೀಗೆ ಒಬ್ಬ ಮನಃಶಾಸ್ತ್ರಜ್ಞ, ಸಮಾಜವಿಜ್ಞಾನಿ, ವರ್ತನಾಶಾಸ್ತ್ರಜ್ಞ ಮತ್ತು ದಾರ್ಶನಿಕನ ತಿಳಿವುಗಳೆಲ್ಲ ಈ ಹೊತ್ತಿಗೆಗೆ ಒದಗಿಬಂದಿವೆ.
ಇದೇ ರೀತಿ ‘ವಿವಾಹಪದ್ಧತಿಗಳು’ ಎಂಬ ಪುಸ್ತಿಕೆಯಲ್ಲಿ ನಮ್ಮ ಧರ್ಮಶಾಸ್ತ್ರಗಳು ತಿಳಿಸುವ ಎಂಟು ಬಗೆಯ ಮದುವೆಗಳಿಂದ ಮೊದಲುಮಾಡಿ ಬಹುಪತಿತ್ವ, ಬಹುಪತ್ನೀತ್ವ, ಏಕಪತಿತ್ವ, ಏಕಪತ್ನೀತ್ವ ಮುಂತಾದ ಸಾಧ್ಯತೆಗಳನ್ನೂ ವಿವೇಚಿಸುತ್ತಾರೆ. ಸಹಸ್ರಮಾನಗಳಿಂದ ಬೆಳೆದುಬಂದಿರುವ ವಿವಾಹಸಂಸ್ಥೆಯ ನೆಲೆ-ಬೆಲೆಗಳನ್ನು ಚರ್ಚಿಸುವುದಲ್ಲದೆ, ಅನೇಕ ದೇಶಗಳಲ್ಲಿ ಕಂಡುಬರುವ ಬಗೆಬಗೆಯ ಮದುವೆಗಳ ಪರಿಗಳನ್ನು ಪರಿಚಯಿಸುತ್ತಾರೆ. ಇಲ್ಲಿ ವಿವಿಧ ಮತಗಳ, ವಿವಿಧ ಜನಾಂಗಗಳ, ವಿವಿಧ ಸಂಸ್ಕೃತಿಗಳ ವಿವಾಹಗಳು ವಿಶ್ಲೇಷಣೆಗೆ ಒಳಗಾಗಿವೆ. ಎಲ್ಲಿಯೂ ಮೇಲು-ಕೀಳುಗಳ ಆಗ್ರಹವಿಲ್ಲ; ಸರಿ-ತಪ್ಪುಗಳ ಅವಸರದ ತೀರ್ಪಿಲ್ಲ. ಎಷ್ಟೋ ಬಗೆಯ ಮದುವೆಗಳಲ್ಲಿ ತೋರಿಕೊಳ್ಳುವ ವೈಚಿತ್ರ್ಯ-ವೈಲಕ್ಷಣ್ಯಗಳತ್ತ ಕೂಡ ರಾಯರ ದೃಷ್ಟಿ ಹಾಯ್ದಿದೆ. ಇವನ್ನೆಲ್ಲ ಅವರು ಬಹುಪ್ರಸನ್ನವಾಗಿ, ಹೃದಯಂಗಮವಾಗಿ ನಿರೂಪಿಸುವರಲ್ಲದೆ ಗೇಲಿಯ ದನಿಯನ್ನು ಅವಲಂಬಿಸುವುದಿಲ್ಲ. ಇಷ್ಟೆಲ್ಲ ವಿವರಗಳುಳ್ಳ ಈ ಬರೆಹವನ್ನು ಪರಿಭಾವಿಸಿದಾಗ ರಾಯರ ಮನೋಧರ್ಮ ಅದೆಷ್ಟು ವಿಶಾಲ, ಅದೆಷ್ಟು ಕುತೂಹಲಿ, ಅದೆಷ್ಟು ಹಾರ್ದಿಕ ಎಂದು ತಿಳಿಯುತ್ತದೆ. ಇವು ಎಟುಕಿಸಿಕೊಳ್ಳಲು ಕಷ್ಟವಾದರೂ ಯಾವ ಲೇಖಕನೂ ಮೈಗೂಡಿಸಿಕೊಳ್ಳಲೇಬೇಕಾದ ಮಹತ್ತ್ವದ ಮೌಲ್ಯಗಳೆಂಬುದರಲ್ಲಿ ಸಂದೇಹವಿಲ್ಲ.
‘ಶ್ರೀಕೃಷ್ಣನ ವ್ಯಕ್ತಿತ್ವ’ ಎಂಬ ಪುಸ್ತಕವಂತೂ ರಾಯರ ವ್ಯಕ್ತಿತ್ವದಷ್ಟೇ ಆಕರ್ಷಕವಾಗಿದೆ, ಬಹುಮುಖಿಯಾಗಿದೆ. ಇಲ್ಲಿ ಕೃಷ್ಣತತ್ತ್ವವು ಮಹಾಭಾರತ, ಹರಿವಂಶ, ವಿಷ್ಣುಪುರಾಣ, ಭಾಗವತಪುರಾಣಗಳಂಥ ಪ್ರಾಚೀನ ಗ್ರಂಥಗಳಲ್ಲಿ ಬೆಳೆದುಬಂದ ಬಗೆಯನ್ನು ಮೊದಲು ಕಾಣಬಹುದು. ಇವುಗಳಿಗೆ ಪೂರಕವಾದ ವೇದ-ವೇದಾಂಗಗಳ ಉಲ್ಲೇಖವನ್ನೂ ನೋಡಬಹುದು. ಅನಂತರ ಜಾನಪದಜೀವನದಲ್ಲಿ ಕೃಷ್ಣನ ವ್ಯಕ್ತಿತ್ವ ಹರಳುಗಟ್ಟಿದ ಬಗೆಯೂ ಮೂಡಿರುವುದು ಸ್ವಾರಸ್ಯದ ಸಂಗತಿ. ಇಷ್ಟನ್ನೂ ಅಧಿಕರಿಸಿದ ರಾಯರು ಗೋಕುಲ ಮತ್ತು ಬೃಂದಾವನಗಳಲ್ಲಿ ಮೆರೆಯುವ ಬಾಲಕೇಳಿಯ, ರಾಸಲೀಲೆಯ ಒಬ್ಬ ಕೃಷ್ಣನನ್ನೂ ಮಹಾಭಾರತದ ಉದ್ಯೋಗಪರ್ವ ಮತ್ತು ಯುದ್ಧಪರ್ವಪಂಚಕದಲ್ಲಿ ಬೆಳಗುವ ರಾಜನೀತಿಜ್ಞನಾದ ಇನ್ನೊಬ್ಬ ಕೃಷ್ಣನನ್ನೂ ಬ್ರಹ್ಮವೈವರ್ತವೇ ಮೊದಲಾದ ಪುರಾಣಗಳಲ್ಲಿ ತೋರಿಕೊಳ್ಳುವ ಲೀಲಾಮಾನುಷಮೂರ್ತಿಯಾದ ಮತ್ತೊಬ್ಬ ಕೃಷ್ಣನನ್ನೂ ಭಗವದ್ಗೀತೆಯಂಥ ದರ್ಶನಗ್ರಂಥಗಳಲ್ಲಿ ಬಿಂಬಿತನಾದ ಯೋಗೇಶ್ವರನೆನಿಸಿದ ಮಗದೊಬ್ಬ ಕೃಷ್ಣನನ್ನೂ ಕಟ್ಟಿಕೊಡುತ್ತಾರೆ. ಎಲ್ಲವನ್ನೂ ಆಯಾ ನೆಲೆಗಳಲ್ಲಿ ನ್ಯಾಯಸಮ್ಮತವಾಗಿ ನಿರೂಪಿಸುವುದಲ್ಲದೆ ಇವೆಲ್ಲವನ್ನೂ ಒಳಗೊಂಡು ಇವನ್ನೂ ಮೀರಿದ ಬ್ರಹ್ಮತತ್ತ್ವವಾದ ಕೃಷ್ಣನು ನಮ್ಮೊಳಗೆ ಧ್ವನಿತವಾಗುವಂತೆ ಮಾಡುತ್ತಾರೆ. ಇದು ಬರಿಯ ಮುಗ್ಧ ಶ್ರದ್ಧಾಳುವಿಗೋ ಕೇವಲ ಶುಷ್ಕ ಚಿಕಿತ್ಸಕನಿಗೋ ಆಗದ ಕೆಲಸ. ಇಂಥ ರಚನೆಗೆ ಅದೊಂದು ಬಗೆಯ ಸಮುನ್ನತ ಸಮನ್ವಯದೃಷ್ಟಿ ಬೇಕು. ಓದುಗರನ್ನು ಬೆಚ್ಚಿಬೀಳಿಸುವಂಥ ವಿವರಗಳೆಷ್ಟಿದ್ದರೂ ಅವನ್ನು ಜೀರ್ಣಿಸಿಕೊಂಡು ಆಪ್ತವಾಗಿ ಹೇಳಬಲ್ಲ ಕಾವ್ಯಭಾವವೂ ಬೇಕು. ಈ ಮೌಲ್ಯಗಳು ರಾಯರ ಅಸಂಖ್ಯ ಕೃತಿಗಳ ಜೀವಧಾತುವಾಗಿರುವುದನ್ನು ನಾವು ನೋಡಬಹುದು.
ರಾಯರ ವಿದ್ವತ್ತೆಯ ಹರಹಿಗೆ ‘ಗಣಪತಿಯ ಕಲ್ಪನೆ’ ಎಂಬ ಕೃತಿ ಒಳ್ಳೆಯ ನಿದರ್ಶನ. ಇದು ಕೂಡ ಗಾತ್ರದಲ್ಲಿ ದೊಡ್ಡದಲ್ಲ. ಮೂವತ್ತೈದು ಪುಟಗಳ ವಿವರಣೆಗೆ ಮೂವತ್ತೊಂಬತ್ತು ಚಿತ್ರಗಳು ಇಂಬಾಗಿ ಬಂದಿವೆ. ಈ ರೇಖಾಚಿತ್ರಗಳನ್ನು ರಾಯರೇ ರಚಿಸಿರುವುದು ಮತ್ತೊಂದು ವೈಶಿಷ್ಟ್ಯ. ಗಣಪತಿತತ್ತ್ವವು ವೇದವಾಙ್ಮಯದಲ್ಲಿ, ಆಗಮಗಳಲ್ಲಿ, ಪುರಾಣೇತಿಹಾಸಗಳಲ್ಲಿ, ಜಾನಪದರಲ್ಲಿ ಹೇಗೆಲ್ಲ ಬೆಳೆದುಬಂದಿದೆ ಎಂಬ ವಿವರಗಳನ್ನು ಅಧಿಕೃತತೆಗೆ ಕೊರತೆಯಾಗದ – ಆದರೆ ಅನೌಪಚಾರಿಕತೆಗೆ ಧಕ್ಕೆ ಬರದ – ಅನುಪಮ ಶೈಲಿಯಲ್ಲಿ ರಾಯರು ನಿರೂಪಿಸಿದ್ದಾರೆ. ಈ ಮೂಲಕ ಗಣಪತಿ ಹೇಗೆ ಸರ್ವಜನಪ್ರಿಯ, ಎಲ್ಲ ದೇಶ-ಕಾಲಗಳಲ್ಲಿಯೂ ವ್ಯಾಪ್ತ ಎನ್ನುವುದು ಯಾರಿಗೂ ವೇದ್ಯವಾಗುತ್ತದೆ. ರಾಯರ ಸೂಕ್ಷ್ಮ ಪರಿಶೀಲನೆಗೆ ಇಲ್ಲಿಯ ಒಂದು ವಿಚಾರಶಕಲವನ್ನು ಉಲ್ಲೇಖಿಸಬಹುದು. ಗಣಪತಿಯನ್ನು ವಿದ್ಯಾಗಣಪತಿಯೆಂದು ಕೊಂಡಾಡುವರಷ್ಟೆ. ಇದಕ್ಕೆ ವೇದಗಳ ಬ್ರಹ್ಮಣಸ್ಪತಿಯಿಂದ ಮೊದಲುಗೊಂಡು ವ್ಯಾಕರಣದ ಗಣಪಾಠದವರೆಗೆ ರಾಯರು ಪುರಾವೆ ನೀಡುತ್ತ, ಮಕ್ಕಳ ಅಕ್ಷರಾಭ್ಯಾಸದ ಕಾಲದಲ್ಲಿ ‘ಓಂ ನಮಃ ಸಿದ್ಧಮ್’ ಅಥವಾ ‘ಓಂ ನಮಃ ಸ್ವಸ್ತಿ’ ಎಂದು ಬರೆಯಿಸುವ ಪರಿಪಾಟಿಯನ್ನು ನೆನಪಿಸುತ್ತ, ಇಲ್ಲಿಯೇ ಗಣಪತಿತತ್ತ್ವ, ಗಣಪತಿಯಂತ್ರ ಮತ್ತು ಗಣಪತಿಯ ರೂಪಗಳು ಕಾಣಸಿಗುತ್ತವೆನ್ನುತ್ತಾರೆ. ಈ ಕಾರಣದಿಂದಾಗಿಯೇ ಮಹಾಭಾರತಕ್ಕೆ ಗಣಪತಿ ಲಿಪಿಕಾರನಾದನೆಂದು ಒಕ್ಕಣಿಸುತ್ತ, ಇದಕ್ಕೆ ರಾಜಶೇಖರನ ‘ಬಾಲಭಾರತ’ ರೂಪಕ, ಅಲ್ಬೆರೂನಿಯ ಪ್ರವಾಸಕಥನ ಮತ್ತು ಕಂಬೋಡಿಯಾ ದೇಶದ ದ್ವಿಭುಜ ಗಣಪತಿಯ ಕೈಯಲ್ಲಿರುವ ಪುಸ್ತಕ-ಲೇಖನಿಗಳ ಸಾಕ್ಷ್ಯಗಳನ್ನು ಒದಗಿಸುತ್ತಾರೆ. ಇವೆಲ್ಲ ಕೇವಲ ಒಂದು ಪುಟದೊಳಗೆ ಅಡಕವಾಗಿವೆ. ಹೀಗೆ ರಾಯರು ಕೈಯಿಟ್ಟ ಕಡೆಯಲ್ಲೆಲ್ಲ ಕಸವರವನ್ನು ನಮ್ಮ ಕೈಗೆತ್ತಿಕೊಟ್ಟಿದ್ದಾರೆ.
‘ಅಭಿನವಗುಪ್ತ’ ರಾಮಚಂದ್ರರಾಯರ ಜೀವಿತಾವಧಿಯ ಕೊನೆಕೊನೆಯ ವರ್ಷಗಳಲ್ಲಿ ಹೊರಬಂದ ಕೃತಿ. ಕಾಶ್ಮೀರದ ವಿಖ್ಯಾತ ದಾರ್ಶನಿಕ ಮತ್ತು ಆಲಂಕಾರಿಕ ಅಭಿನವಗುಪ್ತನ ಸಂಕ್ಷಿಪ್ತ ಪರಿಚಯವಿಲ್ಲಿದೆ. ವಿಷಯ-ಸಂಶೋಧನೆಗಳ ದೃಷ್ಟಿಯಿಂದ ಇದು ಹೊಸತನ್ನೇನೂ ಹವಣಿಸುವ ಹೆಬ್ಬಕೆಯಿಂದ ಹೊರಟಿಲ್ಲ. ಆದರೆ ಇದು ಹೇಳುವ ರೀತಿ ಮತ್ತು ಕಾಣಿಸುವ ಸಾಕಲ್ಯ ಹಿರಿದು. ಇಂಥ ಪುಟ್ಟ ಪುಸ್ತಕದಲ್ಲಿಯೂ ರಾಯರ ಸಾಹಿತ್ಯ-ದರ್ಶನಶಾಸ್ತ್ರಗಳ ಅಧ್ಯಯನ ಚೆನ್ನಾಗಿ ದುಡಿದಿದೆ. ಅಭಿನವಗುಪ್ತನ ಹಾಗೂ ಅವನ ಆಚೀಚಿನ ವಿದ್ವಾಂಸರ ಮಾತುಗಳಿಂದಲೇ ಮೈದುಂಬಿಕೊಂಡ ಈ ಪುಸ್ತಕದಲ್ಲಿ ಆತನ ಭಗವದ್ಗೀತಾರ್ಥಸಂಗ್ರಹದಿಂದ ಒಂದೊಂದು ಅಧ್ಯಾಯದ ತಾತ್ಪರ್ಯವನ್ನು ತಿಳಿಸುವ ಹದಿನೆಂಟು ಶ್ಲೋಕಗಳನ್ನು ನೀಡಿರುವುದು ರಾಯರಿಗೇ ಹೊಳೆಯಬಲ್ಲ ಸಂಗತಿ. ಏಕೆಂದರೆ ಅಭಿನವಗುಪ್ತನ ಪ್ರಸಿದ್ಧಿ ಇರುವುದು ತಂತ್ರಾಲೋಕ, ಈಶ್ವರಪ್ರತ್ಯಭಿಜ್ಞಾವಿವೃತಿವಿಮರ್ಶಿನೀ, ಅಭಿನವಭಾರತೀ, ಧ್ವನ್ಯಾಲೋಕಲೋಚನಗಳಂಥ ಮಾರ್ಗದರ್ಶಕ ಗ್ರಂಥಗಳ ಮೇಲೆ. ಅವನ ಭಗವದ್ಗೀತೆಯ ವಿವರಣೆ ಒಂದರ್ಥದಲ್ಲಿ ಗೌಣ ಕೃತಿ. ಆದರೆ ತನ್ನದೇ ಆದ ಮಹತ್ತ್ವ ಅದಕ್ಕುಂಟು. ಜೊತೆಗೆ ಅದು ಕಾಶ್ಮೀರಪಾಠವನ್ನು ಅನುಸರಿಸಿದೆ. ಇಲ್ಲಿ ವಾಡಿಕೆಯ ಏಳುನೂರಕ್ಕಿಂತ ಹೆಚ್ಚಿನ ಶ್ಲೋಕಗಳಿವೆ. ಅಲ್ಲದೆ ಪ್ರಸ್ಥಾನತ್ರಯದಲ್ಲಿ ಒಂದಾದ ಭಗವದ್ಗೀತೆಗೆ ಪ್ರತ್ಯಭಿಜ್ಞಾಶೈವದರ್ಶನದ ದೃಷ್ಟಿಯಿಂದ ಬಂದ ಏಕೈಕ ವ್ಯಾಖ್ಯಾನ ಇದೇ. ಈ ಎಲ್ಲ ವಿಚಾರಗಳು ರಾಯರ ಮನಸ್ಸಿನಲ್ಲಿ ಮಿಡಿದಿರುವುದು ಮೇಲ್ನೋಟಕ್ಕೆ ತೋರದ ಸಂಗತಿ. ಇನ್ನೊಂದು ಅನುಬಂಧವಾಗಿ ಅಭಿನವಗುಪ್ತನ ಶಿಷ್ಯ ಮಧುರಾಜನ ‘ಗುರುನಾಥಪರಾಮರ್ಶ’ ಎಂಬ ಸ್ತುತಿಕವಿತೆಯ ಹತ್ತಾರು ಪದ್ಯಗಳು ಇವೆ. ತನ್ನ ಗುರುವಿನ ಬಗೆಗೆ ಆತನ ನೇರ ಶಿಷ್ಯನೊಬ್ಬನ ಮನದುಂಬಿದ ನುಡಿಯೊಸಗೆ ಸಿಗುವುದು ನಮ್ಮ ಪರಂಪರೆಯಲ್ಲಿ ವಿರಳವೇ ಸರಿ. ಇದನ್ನು ಗಮನಿಸಿಕೊಂಡ ರಾಯರು ಮೂಲದಿಂದ ಅತ್ಯುತ್ತಮ ಪದ್ಯಗಳನ್ನೇ ಆಯ್ದು ಅನುವಾದಿಸಿದ್ದಾರೆ. ಇದಕ್ಕೆಲ್ಲ ಕಿರೀಟವಿಟ್ಟಂತೆ ಅಭಿನವಗುಪ್ತ ಮತ್ತವನ ಗುರು-ಹಿರಿಯರ ಕಲ್ಪನಾಚಿತ್ರಗಳನ್ನು ರಚಿಸಿಕೊಟ್ಟಿದ್ದಾರೆ. ಈ ರೇಖೆಗಳಲ್ಲಿ ಕಾಣುವ ಅನುಭಾವದ ಬೆಳಕು-ನೆರಳುಗಳ ನಲಿದಾಟ ಮನಸೆಳೆಯುವಂಥದ್ದು. ಹೀಗೆ ಒಂದು ಪ್ರಾಥಮಿಕ ಸ್ತರದ ಪುಸ್ತಿಕೆಯೂ ತನ್ನದಾದ ಅನನ್ಯತೆಯನ್ನು ಗಳಿಸಿದೆ.
ಕಡೆಯದಾಗಿ ‘ಭಾರತೀಯ ಸಂಸ್ಕೃತಿ: ತಿರುಳು ಮತ್ತು ಪರಂಪರೆ’ ಎಂಬ ಪುಟ್ಟ ಪುಸ್ತಕವನ್ನು ಪರಿಶೀಲಿಸಬಹುದು. ಕೇವಲ ಐವತ್ತು ಪುಟಗಳಲ್ಲಿ ನಮ್ಮ ದೇಶದ ಭೌಗೋಳಿಕ ವಿಸ್ತಾರ, ಜನಸಮುದಾಯಗಳ ವೈವಿಧ್ಯ, ಕಲೆ-ಶಾಸ್ತ್ರ-ದರ್ಶನಗಳ ಪರಂಪರೆ ಮತ್ತು ಸಾಂಸ್ಕೃತಿಕ ಸಂದರ್ಭಗಳ ನಿರೂಪಣೆಯ ಮೂಲಕ ಓದುಗರಿಗೆ ಅಚ್ಚಳಿಯದ ಅನುಭವವನ್ನು ರಾಯರು ಎಟುಕಿಸಿಕೊಡುತ್ತಾರೆ. ಈ ಕೃತಿಚಕ್ರಕ್ಕೆ ನಾಭಿಯ ರೂಪದಲ್ಲಿ ಯಜ್ಞತತ್ತ್ವ ದುಡಿದಿದೆ. ಅದರಿಂದ ಹೊಮ್ಮುವ ಅರಗಳಂತೆ ವಿವಿಧ ಸಾಂಸ್ಕೃತಿಕ ಸತ್ತ್ವಗಳು ಅರಳಿವೆ. ಎಲ್ಲವನ್ನೂ ಬಳಸಿ ಬರುವ ನೇಮಿಯಾಗಿ ರಾಷ್ಟ್ರಪ್ರಜ್ಞೆ ಮೈಗೂಡಿದೆ. ಇದು ರಾಯರ ಸಮಾಸಶಕ್ತಿಗೆ ಅಸಾಧಾರಣ ನಿದರ್ಶನ. ವೇದಗಳು ಹೇಳುವ ‘ಅದ್ಧಾ ಪುರುಷ’ ಎಂಬ ವ್ಯಷ್ಟಿಸ್ತರದ ಸುಸಂಸ್ಕೃತ ವ್ಯಕ್ತಿ ವಿಶ್ವನಿಃಶ್ರೇಯಸದ ಸಮಷ್ಟಿಸ್ತರಕ್ಕೆ ಏರುವ ಪರಿಯೇ ಭಾರತೀಯ ಸಂಸ್ಕೃತಿ ಎಂಬ ಕಳಕಳಿ ಕೃತಿಯ ಉದ್ದಕ್ಕೂ ಮಿಡಿದಿದೆ.
ಇವೆಲ್ಲ ಆಸಕ್ತರಾದ ಹಿರಿಯರಿಗಾಗಿ ಬರೆದ ಹೊತ್ತಿಗೆಗಳು. ರಾಯರು ಪ್ರೌಢರಿಗೆ ಮಾತ್ರ ಸೀಮಿತರಲ್ಲ. ಮಕ್ಕಳಿಗಾಗಿಯೂ ಅವರು ಸಾಕಷ್ಟು ಬರೆದಿದ್ದಾರೆ; ಬೆಲೆಯುಳ್ಳ ಬರೆಹಗಳನ್ನೇ ಕೊಟ್ಟಿದ್ದಾರೆ. ಐವತ್ತು ವರ್ಷಗಳಿಗೂ ಮುನ್ನ ‘ಸುಧಾ’ ಪತ್ರಿಕೆಗಾಗಿ ವಾರವಾರವೂ ‘ಚಿತ್ರಮಯ ಜ್ಞಾನಕೋಶ’ ಎಂಬ ಶೀರ್ಷಿಕೆಯಲ್ಲಿ ನಾಲ್ಕು ಪುಟಗಳನ್ನು ಬರೆಯುತ್ತಿದ್ದರು. ಅದೆಲ್ಲ ಒಟ್ಟುಗೂಡಿದರೆ ಸಾವಿರ ಪುಟಗಳಿಗೆ ಕಡಮೆಯಿಲ್ಲದ ಹೆಬ್ಬೊತ್ತಿಗೆಯಾದೀತು. ಇದರ ಪ್ರಯೋಜನ ಪಡೆದ ಅಸಂಖ್ಯರ ಪೈಕಿ ನಾನೂ ಇದ್ದೇನೆ. ರಾಯರು ಅದೆಷ್ಟು ವಿಷಯಗಳನ್ನು ಅದೆಷ್ಟು ಇನಿದಾಗಿ ಬರೆಯುತ್ತಿದ್ದರು! ಆಫ್ರಿಕದ ಬುಡಕಟ್ಟುಗಳವರು ಬಳಸುವ ಮುಖವಾಡಗಳಿರಲಿ, ಕೂಚಿಪೂಡಿ ನಾಟ್ಯವಿರಲಿ, ಮ್ಯಾಕ್ಸ್ ಮುಲ್ಲರನ ಬದುಕಿರಲಿ, ಶ್ರೀರಂಗದ ದೇಗುಲಗಳ ಸಮುಚ್ಚಯವಿರಲಿ, ಉಣ್ಣೆಯ ಬಟ್ಟೆಗಳೇ ಆಗಲಿ, ಪಳೆಯುಳಿಕೆಗಳೇ ಆಗಲಿ – ಎಲ್ಲವನ್ನೂ ಕುರಿತು ಎಲ್ಲರಿಗೂ ಸೊಗಯಿಸುವ ಹಾಗೆ ಬರೆದ ಬಲ್ಮೆ ರಾಯರದೇ. ಇದೇ ಸಾಲಿಗೆ ಸೇರುವಂಥವು ‘ಭಾರತ-ಭಾರತಿ’ ಪುಸ್ತಕಸಂಪದ ಮತ್ತು ಐ.ಬಿ.ಎಚ್. ಸಂಸ್ಥೆ ಪ್ರಕಟಿಸಿದ ಮಕ್ಕಳ ಪುಸ್ತಕಮಾಲೆಗಳಿಗಾಗಿ ಅವರು ಬರೆದ ಹತ್ತಾರು ಪುಸ್ತಿಕೆಗಳು.
ಬಹುಮುಖತೆ
ಇನ್ನು ರಾಯರ ಕಲಾಕೌಶಲವನ್ನು ಕುರಿತು ಸ್ವಲ್ಪ ಚಿಂತಿಸಬಹುದು. ಅವರು ತಮ್ಮ ಅನೇಕ ಪುಸ್ತಕಗಳಿಗೆ ಮೂರ್ತಿಶಿಲ್ಪಗಳ ಚಿತ್ರಗಳನ್ನೂ ಕಲ್ಪಿತ ಹಾಗೂ ವಾಸ್ತವ ವ್ಯಕ್ತಿಗಳ ರೂಪಚಿತ್ರ ಮತ್ತು ಭಾವಚಿತ್ರಗಳನ್ನೂ ಬರೆದಿದ್ದಾರೆ; ವಿವಿಧ ಮಾಧ್ಯಮಗಳಲ್ಲಿ ಹಲಕೆಲವು ಶಿಲ್ಪಗಳನ್ನೂ ರೂಪಿಸಿದ್ದಾರೆ. ಎರಡು ಬಾರಿ ತಮ್ಮ ಕಲಾಕೃತಿಗಳ ಪ್ರದರ್ಶನವನ್ನೂ ಏರ್ಪಡಿಸಿದ್ದರು. ಆತ್ಮೀಯರ ಒತ್ತಾಯಕ್ಕೆ ಮಣಿದು, ಸಾಂದರ್ಭಿಕ ಒತ್ತಡಕ್ಕೆ ಓಗೊಟ್ಟು ಒಂದೆರಡು ರಂಗಪ್ರಯೋಗಗಳಿಗೆ ಹಿತಮಿತವಾದ ವೀಣಾವಾದನದ ಬೆಂಬಲವನ್ನೂ ನೀಡಿದ್ದರು.
ರಾಮಚಂದ್ರರಾಯರು ಉದ್ಯೋಗದಿಂದ ನಿಮ್ಹಾನ್ಸ್ ಸಂಸ್ಥೆಯ ಕ್ಲಿನಿಕಲ್ ಸೈಕಾಲಜಿ ವಿಭಾಗದ ಮುಖ್ಯಸ್ಥರಾಗಿ ಕೆಲವು ಕಾಲ ದುಡಿದದ್ದಲ್ಲದೆ ಹಲವು ವಿದ್ಯಾಕೇಂದ್ರಗಳಲ್ಲಿ ಮನಃಶಾಸ್ತ್ರ, ಭಾರತೀಯ ಸಂಸ್ಕೃತಿ, ದರ್ಶನಗಳು, ತೌಲನಿಕ ಮತಾಧ್ಯಯನ ಮುಂತಾದ ವಿಷಯಗಳನ್ನು ಬೋಧಿಸಿದ್ದರು. ಐ.ಐ.ಎಮ್., ನಿಯಾಸ್, ಮೈಸೂರು ವಿಶ್ವವಿದ್ಯಾನಿಲಯ ಮುಂತಾದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಅವುಗಳಿಗೆ ಬೇಕಾದ ವಿಷಯಗಳ ಮೇಲೆ ನಿಯತವಾಗಿ ಪ್ರವಚನಗಳನ್ನು ನಡಸಿ ಬರೆವಣಿಗೆಯನ್ನೂ ಮಾಡಿದ್ದರು. ಇವೆಲ್ಲ ಅವರ ಸರ್ವತೋಮುಖ ಪ್ರಜ್ಞಾವಂತಿಕೆಗೆ ಮೂರ್ತವಾದ ನಿದರ್ಶನಗಳು.
ವಿವಿಧ ಅಕಾಡೆಮಿಗಳಿಗೆ ಸದಸ್ಯರಾಗಿ, ಹಲವು ನಿಯೋಗಗಳ ಪ್ರತಿನಿಧಿಗಳಾಗಿ, ಹತ್ತಾರು ಸಾಂಸ್ಕೃತಿಕ ಮತ್ತು ಸಾಹಿತ್ಯಕ ಸಂಘಗಳಿಗೆ ಸೇರಿದವರಾಗಿ, ಅನೇಕ ರೀತಿಯ ವಿದ್ವತ್ತಾಕಾರ್ಯಗಳನ್ನು ನಿರ್ವಹಿಸಿದ ರಾಯರು ಭಾರತೀಯ ವಿದ್ಯಾಭವನ, ರಾಷ್ಟ್ರೋತ್ಥಾನ ಸಾಹಿತ್ಯ, ಇಂಡಿಯಾ ಬುಕ್ ಹೌಸ್, ಕಲ್ಪತರು ಸಂಶೋಧನ ಪ್ರತಿಷ್ಠಾನ ಮುಂತಾದ ಪ್ರಕಟನಸಂಸ್ಥೆಗಳಿಗೂ ನಾಡಿನ ವಿವಿಧ ವಿಶ್ವವಿದ್ಯಾಲಯಗಳಿಗೂ ಬರೆದುಕೊಟ್ಟ ಪುಸ್ತಕಗಳು ನೂರಾರು. ಇವಲ್ಲದೆ ಮತ್ತೆಷ್ಟೋ ಪ್ರಕಾಶಕರಿಂದ ಪ್ರಕಟಗೊಂಡ ಗ್ರಂಥಗಳು ಅನೇಕ. ಕನ್ನಡವಿಶ್ವಕೋಶವೂ ಸೇರಿದಂತೆ ಹಲವು ಆಕರಗ್ರಂಥಗಳಿಗೆ ರಾಯರು ಅಸಂಖ್ಯ ಲೇಖನಗಳನ್ನು ರಚಿಸಿದ್ದಾರೆ. ಇದನ್ನೆಲ್ಲ ಗಣಿಸಿದಾಗ ಗುಣ-ಗಾತ್ರಗಳಲ್ಲಿ, ವಿಷಯವೈವಿಧ್ಯ ಮತ್ತು ವಿಚಾರವೈಪುಲ್ಯಗಳಲ್ಲಿ ಅವರ ಸಾರಸ್ವತ ಪರಿಶ್ರಮ ಅದೆಷ್ಟು ಹುಲುಸಾಗಿ ಫಸಲನ್ನು ಕೊಟ್ಟಿದೆಯೆಂದು ವಿಸ್ಮಯವಾಗದಿರದು.
ವ್ಯಕ್ತಿಮಾಹಾತ್ಮ್ಯ
ರಾಮಚಂದ್ರರಾಯರೇನೋ ಕೃತಾತ್ಮರು, ಸುಕೃತಾತ್ಮರು. ದೊಡ್ಡದೊಂದು ವಿಶ್ವವಿದ್ಯಾಲಯ ಮಾಡಬಲ್ಲಷ್ಟು ಕೆಲಸಗಳನ್ನು ತಾವೊಬ್ಬರೇ ಮಾಡಿ ಮುಗಿಸಿದರು. ಹಾಗೆ ನೋಡಿದರೆ ವಿಶ್ವವಿದ್ಯಾಲಯಗಳಂಥ ಸಂಸ್ಥೆಗಳಿಂದ ಇಂಥ ಏಕನಿಷ್ಠೆಯ ತತ್ತ್ವಸ್ಪೃಕ್ಕಾದ ಕೆಲಸ ಆಗುವುದು ಕಷ್ಟ. ಇಂಥ ಸಂಸ್ಥೆಗಳಲ್ಲಿ ಅನೇಕಾಂತಿಕವಾದ ಎಷ್ಟೋ ನಿರ್ಬಂಧಗಳಿರುತ್ತವೆ. ದೂರದೃಷ್ಟಿಯೂ ಸ್ವೋಪಜ್ಞತೆಯೂ ಉಳ್ಳ ಕಾರ್ಯದಕ್ಷರಿಗೆ ಹೆಜ್ಜೆಹೆಜ್ಜೆಗೂ ಎಡರು-ತೊಡರುಗಳು ಅಲ್ಲಿ ಎದುರಾಗುತ್ತವೆ. ಹೀಗಾಗಿ ಒಳ್ಳೆಯ ಕೆಲಸಗಳು ವ್ಯಕ್ತಿಮಾಹಾತ್ಮ್ಯದಿಂದಲೇ ನಡೆಯಬೇಕು. ಇದಕ್ಕೆ ಗಂಗಾನಾಥ ಝಾ, ಪಿ.ವಿ. ಕಾಣೆ, ಶ್ರೀಪಾದ ದಾಮೋದರ ಸಾತವಲೇಕರ್, ವಾಸುದೇವಶರಣ ಅಗ್ರವಾಲ, ಪಿ.ಕೆ. ಗೋಡೆ, ವಿ. ರಾಘವನ್, ಪುಲ್ಲೆಲ ಶ್ರೀರಾಮಚಂದ್ರುಡು ಮುಂತಾದ ನೂರಾರು ಮಂದಿ ಮಹನೀಯರ ಉದಾಹರಣೆಗಳುಂಟು. ಇವರ ಸಾಲಿಗೆ ರಾಯರು ಸೇರುತ್ತಾರೆ.
ಈಗ ನಮ್ಮೆದುರು ಇರುವ ಪ್ರಶ್ನೆ, ಇಂಥ ಸಾರಸ್ವತ ಮೂರ್ತಿಗಳು ರೂಪಿತವಾಗಲು ಎಂಥ ಹಿನ್ನೆಲೆ ಬೇಕು, ಯಾವೆಲ್ಲ ಗುಣಗಳು ಒಟ್ಟುಗೂಡಿದರೆ ಈ ಬಗೆಯ ವಿದ್ವದವತಂಸರು ಒಡಮೂಡಿಯಾರು ಎಂಬುದು. ನಿಯತಿವಾದಿಗಳು ಹೇಳಿಯಾರು – ‘ಇಂಥ ಪುಣ್ಯಾತ್ಮರು ಉದಿಸುವುದು ಭುವನದ ಭಾಗ್ಯದಿಂದಲೇ. ಅದ್ಭುತಗಳು ಅನುದಿನವೂ ಘಟಿಸುವುದಿಲ್ಲ. ಮಾನುಷ ಯತ್ನದಿಂದ ವಿಶ್ವಾದ್ಭುತಗಳು ಮೈದಳೆಯುವುದಿಲ್ಲ. ಎಷ್ಟೇ ಆಗಲಿ, ಲೋಕವು ಅತಿಲೋಕವನ್ನು ಸೃಜಿಸಲಾಗುವುದಿಲ್ಲ’ ಎಂದು. ನಮ್ಮ ಪ್ರಯತ್ನಗಳೆಲ್ಲ ಮುಗಿದು ನಾವು ಕೈಚೆಲ್ಲಿ ಕುಳಿತಾಗ ಮಾತ್ರ ಇಂಥ ನಿಲವಿಗೆ ಬರಬಹುದು. ಅದಕ್ಕೂ ಮುನ್ನ ಹೀಗೆ ಹಳಹಳಿಸುವುದು ಸನಾತನಧರ್ಮದ ಜೀವನಾಡಿಯಾದ ಕರ್ಮಯೋಗಕ್ಕೆ ಒಗ್ಗುವುದಿಲ್ಲ.
ನಮ್ಮಲ್ಲಿ ಸಾರ್ವಪಾರ್ಷದರೂ ಸರ್ವತಂತ್ರಸ್ವತಂತ್ರರೂ ಇರುವಂತೆ ಪಾಚಾತ್ತ್ಯ ಜಗತ್ತಿನಲ್ಲಿ ‘ರಿನೈಸಾನ್ಸ್ ಮ್ಯಾನ್’ ಎಂಬ ಪರಿಕಲ್ಪನೆ ಉಂಟು. ದೈವವಾದದ ಕುರುಡುನಂಬಿಕೆಯ ಸಂಕಲೆಗಳನ್ನು ಕಳಚಿಕೊಂಡು ಇಡಿಯ ಯೂರೋಪ್ ಪೌರುಷಪಾರಮ್ಯದ ಹೊಸ ಹುರುಪನ್ನು ಮೈದಳೆದಾಗ ಉದಿಸಿದ್ದು ಪುನರುತ್ಥಾನಯುಗ. ಇದೇ ರಿನೈಸಾನ್ಸ್. ಜ್ಞಾನ-ವಿಜ್ಞಾನಗಳ, ಕಲೆ-ಸಾಹಿತ್ಯಗಳ ಎಲ್ಲ ಮುಖಗಳೂ ಕಳೆಗೊಂಡು ಹೊಸ ಬೆಳಕನ್ನು ಕಂಡ ಈ ಹೊತ್ತಿನಲ್ಲಿ ಇದಕ್ಕೆ ಕಾರಣರಾದ ಹಲಕೆಲವು ಮಹನೀಯರ ವ್ಯಕ್ತಿತ್ವವನ್ನು ಈ ಯುಗದ ವಾಚಕದಿಂದಲೇ ಗುರುತಿಸಿ ಆದರಿಸಿದ್ದಾರೆ. ಆ ಕಾಲದ ಲಿಯಾನ್ ಬತಿಸ್ತ ಆಲ್ಬರ್ತಿ, ಲಿಯೊನಾರ್ದೊ ದ ವಿಂಚಿ, ನಿಕೊಲೊ ಮ್ಯಾಕಿಯವೆಲ್ಲಿ ಮುಂತಾದವರು ಏಕಕಾಲದಲ್ಲಿ ಕವಿಗಳಾಗಿ, ಕಲಾವಿದರಾಗಿ, ವ್ಯಾಕರಣ, ರಾಜನೀತಿ, ಯಂತ್ರಶಿಲ್ಪ, ಜೀವಶಾಸ್ತ್ರ ಮುಂತಾದ ವಿದ್ಯೆಗಳಲ್ಲಿ ಕೋವಿದರಾಗಿ ಅನುಪಮ ಕಲಾಕೃತಿಗಳನ್ನು ನೀಡಿದರೆಂದೂ ಮಾರ್ಗದರ್ಶಿಯಾದ ಸಂಶೋಧನೆಗಳನ್ನು ಮಾಡಿದರೆಂದೂ ಇತಿಹಾಸ ಹೇಳುತ್ತಿದೆ. ಇಂಥ ಮಹಾಸಾಧಕರು ಕಾಲಕಾಲಕ್ಕೆ ಆವಿರ್ಭವಿಸದಿದ್ದರೆ ಜಗತ್ತಿಗಾದರೂ ಬಾಳುವೆ ಹೇಗೆ? ಈ ಪ್ರಶ್ನೆಯನ್ನು ಚರ್ಚಿಸಿದರೆ ಗಟ್ಟಿಯಾದ ಪರಿಹಾರ ಸಿಕ್ಕದಿದ್ದರೂ ನಿಸ್ತಾರದ ಕಾಲುದಾರಿಯಾದರೂ ಕಂಡೀತು.
ಗುಣ–ಧರ್ಮಗಳು
ಈ ಎಲ್ಲ ಮಹನೀಯರಲ್ಲಿ ಎದ್ದುಕಾಣುವ ಅಂಶವೆಂದರೆ ಪ್ರತಿಭೆ. ಇದು ನಿಜಕ್ಕೂ ಅಚಿಂತ್ಯ, ಅತಿಮಾನುಷ. ಪ್ರತಿಭೆಯನ್ನು ಯಾರೂ ಯಾರಲ್ಲಿಯೂ ತುಂಬಿಕೊಡಲಾರರು. ಆದರೆ ಇರುವ ಪ್ರತಿಭೆಯನ್ನು ಬೆಳೆಸುವ, ಬೆಳಗಿಸುವ, ವ್ಯವಸ್ಥಾಪಿಸುವ ಪ್ರಕಲ್ಪಗಳನ್ನು ಸರ್ವಥಾ ಕೈಗೊಳ್ಳಬಹುದು. ಈ ನಿಟ್ಟಿನಲ್ಲಿ ಕಲಿಕೆ ಮತ್ತು ಅಭ್ಯಾಸಗಳಿಗೆ ಎಲ್ಲಿಲ್ಲದ ಬೆಲೆಯುಂಟು. ನಮ್ಮ ಆಲಂಕಾರಿಕರೆಲ್ಲ ಪ್ರತಿಭೆಗೆ ಪೂರಕವಾಗಿ ಮೇಲಿನ ಎರಡು ಅಂಶಗಳನ್ನೇ ಒಕ್ಕಣಿಸಿದ್ದಾರೆ. ಇವುಗಳೊಟ್ಟಿಗೆ ಜಗಜ್ಜೀವನದಲ್ಲಿ ಗಾಢವಾಗಿ ಮುಳುಗುವ, ಹಾಗೆ ಮುಳುಗಿದರೂ ಮಿಂಚುಳ್ಳಿಯಂತೆ ಮೇಲೆದ್ದು ನೆಗೆಯುವ ಸತ್ತ್ವ ಅವರಲ್ಲಿರುತ್ತದೆ. ಇವನ್ನು ನಮ್ಮ ಕವಿವರ್ಯ ಪು.ತಿ.ನ. ಅವರ ಮಾತಿನಲ್ಲಿ ‘ಭವನಿಮಜ್ಜನಚಾತುರ್ಯ’ ಮತ್ತು ‘ಲಘಿಮಕೌಶಲ’ ಎನ್ನಬಹುದು. ಇವು ಜಡ-ಜೀವಗಳೆಂಬ ಭೇದವಿರದೆ ಸಮಗ್ರ ಪ್ರಕೃತಿಯನ್ನು ಸಂಯಮ-ಸಹಾನುಭೂತಿಗಳಿಂದ ನೋಡುವ ಶಕ್ತಿಯನ್ನು ತುಂಬಿಕೊಡುತ್ತವೆ. ಈ ಸಂಸ್ಕಾರ ಸಹಜವಾಗಿಯೇ ನಮ್ಮನ್ನು ನಮ್ಮೊಳಗೆ ಸರಿಯುವಂತೆ ಮಾಡುತ್ತದೆ. ಇದೇ ತತ್ತ್ವಚಿಂತನೆಗೆ ಬೇಕಿರುವ ಪ್ರಮುಖ ಸಾಧನ. ಈ ಏಣಿಯನ್ನು ಹಿಡಿದು ಹತ್ತಿದರೆ ದರ್ಶನಶಾಸ್ತ್ರಗಳ ಬೇರೆ ಬೇರೆ ಅಂತಸ್ತುಗಳು ನಮ್ಮ ಕೈಗೆಟುಕುತ್ತವೆ. ಒಳನಡೆ-ಮೇಲ್ನಡೆಗಳ ಈ ಪಯಣ ವಿಶಾಲ ವಿಶ್ವದ ನೇಪಥ್ಯದಲ್ಲಿ, ಸಹಜೀವಿಗಳ ಒಡನಾಟದಲ್ಲಿ ನಮ್ಮ ಒಳ-ಹೊರಗುಗಳನ್ನು ನಿಚ್ಚಳವಾಗಿ ನೋಡುವಂತೆ ಮಾಡುತ್ತದೆ. ಒಳಗೆ ಬಂದರೆ ಜ್ಞಾನ, ಹೊರಗೆ ಹೋದರೆ ವಿಜ್ಞಾನ. ವಿಶಿಷ್ಟವಾದ ಎಲ್ಲ ಬಗೆಯ ಜ್ಞಾನವೂ ವಿಜ್ಞಾನ ತಾನೆ? ವಿಜ್ಞಾನ ಪ್ರತ್ಯಕ್ಷಪ್ರಮಾಣದ ಮೇಲೆ ನಿಂತರೆ ಜ್ಞಾನ ಅಪರೋಕ್ಷಪ್ರಮಾಣದ ಮೇಲೆ ನಿಲ್ಲುತ್ತದೆ. ಈ ಅಪರೋಕ್ಷಪ್ರಮಾಣದ ಪರಮಲಕ್ಷ್ಯವೇ ಆತ್ಮಜ್ಞಾನ. ಈ ನಿಟ್ಟಿನ ಒಂದು ಗಣ್ಯವಾದ ಮಜಲೇ ಕಲೆ-ಸಾಹಿತ್ಯಗಳು.
ಮೇಲೆ ಕಾಣಿಸಿದ ವಿಕಾಸಕ್ಕೆ ಅಣಿಯಾಗಲು ನಾವು ನಮ್ಮ ಸ್ವಧರ್ಮವನ್ನು ಕಂಡುಕೊಳ್ಳಬೇಕು. ಇದು ನಮ್ಮ ಕೆಲಸಗಳಲ್ಲಿ ಶ್ರಮ ಕಾಣದಂತೆ ಮಾಡುತ್ತದೆ. ಈ ಅನುಕೂಲತೆ ಸಹಜವಾಗಿಯೇ ಕಾರ್ಯಸಮೃದ್ಧಿ ಮತ್ತು ಕರ್ಮಕೌಶಲಗಳನ್ನು ಒದಗಿಸುತ್ತದೆ. ಇಂಥ ದುಡಿಮೆ ಎಲ್ಲಿಯೂ ಆಯಾ ವಿದ್ಯೆಗಳ ತಿರುಳನ್ನು ತತ್ಕ್ಷಣ ಕಾಣುವಂತೆ ಮಾಡುತ್ತದೆ. ಇದೇ ಶಾಸ್ತ್ರಸದ್ಭಾವದ ಅರಿವು. ಈ ತಿಳಿವನ್ನು ಗಳಿಸಿದಾತ ತನ್ನ ನಡೆ-ನುಡಿಗಳಲ್ಲಿ ಒಪ್ಪ-ಓರಣಗಳನ್ನು ಗಳಿಸಿಕೊಳ್ಳುತ್ತಾನೆ; ಹದ-ಹಾಳತಗಳನ್ನು ಪಾಲಿಸುತ್ತಾನೆ. ಹೀಗೆ ಪಕ್ವಗೊಂಡವರು ಜ್ಞಾನದ ಮೇಲಣ ಆದರದಿಂದ, ಸುತ್ತಣ ಜಗತ್ತಿನ ಮೇಲಣ ಅಕ್ಕರೆಯಿಂದ ದುಡಿಯುವರಲ್ಲದೆ ತಮ್ಮ ಸ್ವಾರ್ಥಕ್ಕಾಗಿ ಹೆಣಗುವ ಹಂತಕ್ಕೆ ಇಳಿಯುವುದಿಲ್ಲ.
ಯಾವುದೇ ಸಮಾಜದ ಹಿರಿಮೆ-ಗರಿಮೆಗಳು ಸಿದ್ಧಿಸುವುದು ರಾಮಚಂದ್ರರಾಯರಂಥ ಸಾರ್ವಪಾರ್ಷದರಿಂದಲೇ ಹೊರತು ಔಪಭೋಗಿಕ ಸಮೃದ್ಧಿಯಿಂದ ಅಲ್ಲ.
ಪ್ರಯೋಜನ, ಉಪಕಾರ
ಲೋಕ ಬಲುಮಟ್ಟಿಗೆ ಸಾಗುವುದು ಗತಾನುಗತಿಕವಾಗಿ. ಭೌತಶಾಸ್ತ್ರದ ಪರಿಭಾಷೆಯಲ್ಲಿ ಹೇಳುವುದಾದರೆ, ಅದರ ನಡಿಗೆ ಒಂದು ‘ಸ್ಕೇಲರ್ ಕ್ವಾಂಟಿಟಿ.’ ಅಂದರೆ, ದಿಕ್ಕಿಲ್ಲದ ಗತಿ. ಸಾರ್ವಪಾರ್ಷದರು ಇದಕ್ಕೆ ಗೊತ್ತು-ಗುರಿಗಳನ್ನು, ನೆಲೆ-ಬೆಲೆಗಳನ್ನು ಹವಣಿಸಿಕೊಡುತ್ತಾರೆ. ಆ ಮೂಲಕ ಜಗದ ಗತಿ ಒಂದು ‘ವೆಕ್ಟರ್ ಕ್ವಾಂಟಿಟಿ’ ಆಗುತ್ತದೆ. ಗತಿಯನ್ನು ಪ್ರಗತಿಯನ್ನಾಗಿಸಿ, ಪ್ರಗತಿಯನ್ನು ಪರಿಪಾಕವನ್ನಾಗಿಸುವ ಕ್ರಮವೇ ಇದು. ಒಂದು ಮಾತಿನಲ್ಲಿ ಹೇಳುವುದಾದರೆ, ತಥ್ಯಗಳಲ್ಲಿ ತೊಳಲುವ ಜೀವ ಮೌಲ್ಯಗಳಲ್ಲಿ ನೆಮ್ಮದಿ ಕಾಣುವಂತೆ ಆಗುತ್ತದೆ. ಇದು ವಿಶಾಲವಾದ ನೆಲೆಯ ಚಿತ್ರ.
ಅನುದಿನದ ಬದುಕಿನಲ್ಲಿ ಕೂಡ ಸಾರ್ವಪಾರ್ಷದರ ಉಪಕಾರ ದೊಡ್ಡದು. ಅವರು ಸಮಾಜದ ಆಗು-ಹೋಗುಗಳಲ್ಲಿ ತಲೆದೋರುವ ಏರಿಳಿತಗಳನ್ನು ಗಮನಿಸಿ ದೀನರಿಗೆ ಸಾಂತ್ವನ ಹೇಳುತ್ತಾರೆ, ದುಷ್ಟರಿಗೆ ಎಚ್ಚರಿಕೆ ನೀಡುತ್ತಾರೆ, ಉತ್ಸಾಹಿಗಳಿಗೆ ರಚನಾತ್ಮಕ ಮಾರ್ಗವನ್ನು ಕಾಣಿಸುತ್ತಾರೆ. ತೈತ್ತಿರೀಯೋಪನಿಷತ್ತು ಇಂಥವರನ್ನೇ ‘ಯುಕ್ತ’ರೆಂದು ಹೇಳಿದೆ. ಪತಂಜಲಿ ಮುನಿಗಳ ಮಹಾಭಾಷ್ಯ ‘ಶಿಷ್ಟ’ರೆಂದು ಗುರುತಿಸಿರುವುದು ಇವರನ್ನೇ. ಹೂರಣಕ್ಕಿಂತ ತೋರಣವೇ ಹೆಚ್ಚಾದ ಮಂದಿಯಿಂದ ಜನಸಾಮಾನ್ಯರು ಭ್ರಮೆಗೊಂಡಾಗ ದಿಟದ ನೆಲೆ ಯಾವುದೆಂದು ಅತ್ತ ನಡೆದು ತೋರಿಸುವವರು ಸಾರ್ವಪಾರ್ಷದರು.
ಎಂದೇ ಆಗಿರಲಿ, ಎಲ್ಲಿಯೇ ಆಗಿರಲಿ, ಜನಸಾಮಾನ್ಯರಿಗೆ ಎಲ್ಲ ವಿಷಯಗಳ ಎಲ್ಲ ವಿವರಗಳೂ ಬೇಕಾಗುವುದಿಲ್ಲ. ಇವನ್ನು ತಿಳಿದುಕೊಳ್ಳುವ ಶಕ್ತಿಯಾಗಲಿ, ಸಾಮಾರ್ಥ್ಯವಾಗಲಿ ಅವರಿಗೆ ಕಡಮೆ ಕೂಡ. ಅಷ್ಟೇಕೆ, ಇಂಥ ಹೆಚ್ಚಿನ ವಿವರಗಳನ್ನು ತಿಳಿದರೆ ಅವರಿಗೆ ಉಪಕಾರಕ್ಕಿಂತ ಅಪಕಾರವೇ ಹೆಚ್ಚು! ಈ ವಿವೇಕ ನಮ್ಮ ಹಿಂದಿನವರಿಗಿದ್ದಿತು. ಆಗಿನ ಕಾಲವೂ ಇದಕ್ಕೆ ಅನುಕೂಲವಾಗಿತ್ತು. ಆದರೆ ಈಗ ಹಾಗಲ್ಲ. ವಿಜ್ಞಾನ-ತಂತ್ರಜ್ಞಾನಗಳ ಮೂಲಕ ದೇಶ-ಕಾಲಗಳ ಅಡೆ-ತಡೆಗಳು ಇಲ್ಲವಾಗುತ್ತಿವೆ; ಈ ಮೂಲಕ ಜಗತ್ತು ಕಿರಿದಾಗುತ್ತಿದೆ. ಜೊತೆಗೆ ಸಮಾನತೆ, ಹೇತುವಾದ, ಪ್ರಜಾಪ್ರಭುತ್ವ ಮುಂತಾದ ಮೌಲ್ಯಗಳ ಕಾರಣ ಎಲ್ಲರೂ ಎಲ್ಲವನ್ನೂ ತಿಳಿದುಕೊಳ್ಳಬೇಕೆಂಬ ಒತ್ತಡ ಹೆಚ್ಚಾಗುತ್ತಿದೆ. ಆದರೆ ಮನುಷ್ಯ ಮೂಲತಃ ಇರುವುದು ಎಂದಿನಿಂದಲೂ ಒಂದೇ ರೀತಿ: ‘ಇದ್ದಿದ್ರಲ್ ಹಾಯಾಗಿ, ನಮ್ಮಷ್ಟಕ್ ನಾವಾಗಿ!’ ಇಂಥ ಸಹಜ ಸ್ಥಿತಿಗೆ ಈ ಹೊತ್ತಿನ ಒತ್ತಡಗಳು ತಮ್ಮ ಉಪಯೋಗಗಳ ನಡುವೆಯೂ ತೊಂದರೆಗಳನ್ನು ಹೆಚ್ಚಾಗಿ ತರುತ್ತಿವೆ. ಇವನ್ನು ಕೆಲಮಟ್ಟಿಗಾದರೂ ಪರಿಹರಿಸಿಬಲ್ಲವರು ಸಾರ್ವಪಾರ್ಷದರು. ಅವರು ‘ಸ್ಪೆಷಲಿಸ್ಟ್’ ಎಂದು ಹೆಸರಾದ ಆಯಾ ವಿಷಯಗಳ ತಜ್ಞರಿಗೂ ‘ಮಾಸಸ್’ ಎಂದು ಗುರುತಿಸಲ್ಪಟ್ಟ ಸಾಮಾನ್ಯರಿಗೂ ಸೇತುವೆಯಾಗಿ ನಿಲ್ಲುತ್ತಾರೆ. ವಿವಿಧ ವಿಷಯಗಳ ತಜ್ಞರು ಏಕದೇಶೀಯವಾಗಿ ನಡಸಿದ ಚಿಂತನೆ-ಪ್ರಯೋಗಗಳ ಸಾರಾಸಾರಗಳನ್ನು ಮಥಿಸಿ ನವನೀತವನ್ನು ತಿಳಿಯಾದ ನುಡಿಯಲ್ಲಿ, ಅಡಕವಾದ ರೀತಿಯಲ್ಲಿ ಆಸ್ಥೆ-ಅನುನಯಗಳಿಂದ ಜಗತ್ತಿಗೆ ತಿಳಿಸುತ್ತಾರೆ. ಜೊತೆಗೆ ಬಹುಸಂಖ್ಯೆಯ ಸಾಮಾನ್ಯರ ಅಂತರಂಗದಲ್ಲಿ ಇರುವ ತೊಡಕು-ತೋಟಿಗಳನ್ನೂ ಶಾಂತಿ-ಸಮಾಧಾನಗಳನ್ನೂ ವಿಷಯತಜ್ಞರಿಗೆ, ಲೋಕಪ್ರಮುಖರಿಗೆ ಶಾಸ್ತ್ರಶುದ್ಧವಾದ ರೀತಿಯಲ್ಲಿ ಸ್ಪಷ್ಟಪಡಿಸುತ್ತಾರೆ. ಹೀಗೆ ಒಂದೆಡೆ ಸಾಮಾನ್ಯರಿಗೂ ಮತ್ತೊಂದೆಡೆ ವಿಶಿಷ್ಟರಿಗೂ ಮೌಲ್ಯಗಳನ್ನು ಮನವರಿಕೆ ಮಾಡಿಕೊಡುತ್ತಾರೆ. ಇದಕ್ಕೆ ಬೇಕಾದ ಧರ್ಮದೃಷ್ಟಿ ರಾಯರಂಥ ಸಾರ್ವಪಾರ್ಷದರ ಸೊತ್ತು. ಅದು ಘನವಾದ ತತ್ತ್ವಾನುಭವದಿಂದ ಸುಪುಷ್ಟವಾಗಿರುತ್ತದೆ.
ಗೀತ-ನೃತ್ಯಗಳ ಕಲಾವಿದರಾಗಲಿ, ವಿವಿಧ ಶಾಸ್ತ್ರ-ಸಾಹಿತ್ಯಗಳ ಕೋವಿದರಾಗಲಿ, ಸಮಾಜ-ಸಂಸ್ಕೃತಿಗಳ ಹಿತಚಿಂತಕರಾಗಲಿ ಮತ್ತೆ ಮತ್ತೆ ರಾಮಚಂದ್ರರಾಯರನ್ನು ಸಲಹೆ-ಸೂಚನೆಗಳಿಗಾಗಿಯೋ ಬರೆಹ-ಭಾಷಣಗಳಿಗಾಗಿಯೋ ಪಾಠ-ಪ್ರವಚನಗಳಿಗಾಗಿಯೋ ಆಶ್ರಯಿಸುತ್ತಿದ್ದುದರ ರಹಸ್ಯ ಇಲ್ಲಿದೆ. ಅವರು ಆಯಾ ವಿಷಯಗಳ ತಜ್ಞರಿಗಿಂತ ಸುಲಭವಾಗಿ ವಿಚಾರಗಳನ್ನು ತಿಳಿಸುತ್ತಿದ್ದುದಲ್ಲದೆ, ಅಂಥವರಿಗೂ ಕಾಣಲಾಗದ ಎತ್ತರ-ಬಿತ್ತರಗಳನ್ನು ಬೆರಳಿಟ್ಟು ತೋರಿಸುತ್ತಿದ್ದರು. ಇದನ್ನು ಸಾಮಾನ್ಯರಿರಲಿ, ವಿದ್ವಾಂಸರೂ ಪ್ರಜ್ಞಾಪೂರ್ವಕವಾಗಿ ಗುರುತಿಸಿಕೊಳ್ಳುವುದು ಕಷ್ಟವಾಗುತ್ತಿತ್ತು. ಆದರೆ ಅವರಿಗೆ ದಕ್ಕುತ್ತಿದ್ದ ಸ್ಪಷ್ಟತೆ-ಸಮಾಧಾನಗಳಲ್ಲಿ ಮಾತ್ರ ಸ್ವಲ್ಪವೂ ಕೊರತೆ ಇರುತ್ತಿರಲಿಲ್ಲ.
ಒಟ್ಟಿನಲ್ಲಿ ಸಮಾಜಪುರುಷನ ರಕ್ತಶುದ್ಧಿಗೆ ಶ್ವಾಸಕೋಶಗಳಂತೆ ಒದಗಿಬರಬಲ್ಲವರು ರಾಯರಂಥ ಸಾರ್ವಪಾರ್ಷದರು. ವಿಶೇಷವೇನೆಂದರೆ, ಇಂಥವರ ಸಾಧನೆ-ಸಿದ್ಧಿಗಳ ಅರಿವಿಲ್ಲದ ಸಾಮಾನ್ಯರಿಗೂ ಇವರ ಸಾನ್ನಿಧ್ಯ ತಂಪೆರೆಯುತ್ತದೆ. ನಾವು ನೆಳಲಿಗಾಗಿ ನಿಂತ ಮರದ ಹೆಸರು ತಿಳಿಯದಿದ್ದರೂ ಅದರ ತಂಪು ಇಲ್ಲವಾಗುವುದಿಲ್ಲ ತಾನೆ! ಈ ಬಗೆಯ ಸಾರ್ವಪಾರ್ಷದರ ಅತ್ಯುನ್ನತ ಹಂತ ಜೀವನ್ಮುಕ್ತಿ.
ಈ ನಿಟ್ಟಿನಲ್ಲಿ ತಾವೂ ಸಾಗಿ ಮಿಕ್ಕವರನ್ನೂ ಕರೆದೊಯ್ದ ಜೀವನರಸಿಕರ ಸಾಲಿನಲ್ಲಿ ರಾಮಚಂದ್ರರಾಯರ ಹೆಸರು ನಮ್ಮ ಪಾಲಿಗೆ ಎಂದಿಗೂ ಹಸುರಾಗಿರುತ್ತದೆ.
ಬಾಳ ಸಿರಿ ಸೊಗಸುಗಳ ಪೆರ್ಚಿಪನು ಖೇಲಕನು
ಕೀಳದೆನಿಪವನೊರಟ, ಮಂಕ, ಕಲ್ಲೆದೆಗ |
ತೋಳಿಂದೆ ತಿಳಿವಿಂದೆ ನುಡಿಯಿಂದೆ ಜಗದಿರವ
ಮೇಲೆನಿಪವನೆ ರಸಿಕ – ಮಂಕುತಿಮ್ಮ || (೨೬೫)