ಗುರುಗಳೇ ‘ಪ್ಲಾಸ್ಟರ್ ಆಫ್ ಪ್ಯಾರಿಸ್’ನಿಂದ ನಿರ್ಮಿಸಿದ್ದ ಶ್ರೀ ಚಂದ್ರಶೇಖರಭಾರತೀ. ಮಹಾಸ್ವಾಮಿಗಳ ಶಿಲ್ಪವೊಂದಿತ್ತು. ಅದರ ಸನಿಹದಲ್ಲಿ, ಕುರ್ಚಿಯಲ್ಲಿ ಕುಳಿತುಕೊಂಡು ಪಾಠ ಮಾಡುತ್ತಿದ್ದರು. ಪಾಠದ ಆರಂಭಕ್ಕೂ ಮೊದಲು ನಾವು ಒಬ್ಬೊಬ್ಬರಾಗಿ ಅವರಿಗೆ ನಮಸ್ಕಾರ ಮಾಡುತ್ತಿದ್ದೆವು; ಆಗ ಅವರು ನಿಂತಿರುತ್ತಿದ್ದರು. ಎಲ್ಲರೂ ನಮಸ್ಕರಿಸಿದಮೇಲೆ ಸ್ವಾಮಿಗಳ ಪ್ರತಿಮೆಯ ಕಡೆಗೆ ತಿರುಗಿ “ಇದೆಲ್ಲವೂ ಅವರಿಗೆ” ಎನ್ನುತ್ತಿದ್ದರು. ಗುರುಗಳು ಸ್ವಾಮಿಗಳನ್ನು ಗುರುಗಳು ಎಂದೇ ಸ್ವೀಕರಿಸಿದ್ದರು. ಮಾತ್ರವಲ್ಲ, ಜ್ಞಾನ ಎನ್ನುವುದು ಅಪೌರುಷೇಯತತ್ತ್ವ ಎಂದು ಒಪ್ಪಿದವರು ಗುರುಗಳು; ಹೀಗಾಗಿ ‘ನಾನೇ ಗುರು’ ಎಂಬ ಅಹಂ ಹುಟ್ಟುವುದಕ್ಕೆ ಅವರಲ್ಲಿ ಅವಕಾಶವಾದರೂ ಎಲ್ಲಿದ್ದೀತು? ತಮಗೆ ದೊರೆತ ಎಲ್ಲ ಮನ್ನಣೆ–ಗೌರವಗಳನ್ನೂ ಅವರು ತಮ್ಮ ಗುರುಪರಂಪರೆಗೆ ಅರ್ಪಿಸಿಬಿಡುತ್ತಿದ್ದರು.
ಭಾರತೀಯ ಪರಂಪರೆಯಲ್ಲಿ ಅಧ್ಯಯನ ಮತ್ತು ಅಧ್ಯಾಪನ – ಇವೆರಡೂ ತುಂಬ ಪ್ರಮುಖವಾದ ವಿವರಗಳು. ಜೀವನದುದ್ದಕ್ಕೂ ಇವೆರಡನ್ನೂ ತಪ್ಪದೇ ನಡೆಸುತ್ತ ಬಂದವರು ಸಾ.ಕೃ. ರಾಮಚಂದ್ರರಾಯರು. ಪರಂಪರೆಯೊಂದು ಮುಂದುವರಿಯುವುದೂ, ಸಂಪ್ರದಾಯವೊಂದು ಗಟ್ಟಿಯಾಗುವುದೂ ಇವೆರಡು ತತ್ತ್ವಗಳ ಅರಿವು ಸರಿಯಾದ ಕ್ರಮದಲ್ಲಿ ಪೀಳಿಗೆಯಿಂದ ಪೀಳಿಗೆಗೆ ಹರಿದಾಗಲೇ. ಈ ಜ್ಞಾನವಾಹಿನಿಯನ್ನೇ ನಮ್ಮ ಸಂಸ್ಕೃತಿಯು ಗುರು-ಶಿಷ್ಯರ ಪರಿಕಲ್ಪನೆಯಲ್ಲಿ ಕಾಣಿಸಿದೆ. ಗುರುವಿನ ನೆರವಿಲ್ಲದೆ ಯಾವ ವಿದ್ಯೆಯೂ ಊರ್ಜಿತವಾಗದು ಎಂಬ ಪರಂಪರೆಯ ನಿಲವಿಗೆ ಕಾರಣವಾದರೂ ಇದೇ ಹೌದು. ಸ್ವಚ್ಛಂದದಲ್ಲಿ ಕಲಿತ ವಿದ್ಯೆಗೆ ಸಮಗ್ರತೆಯಾಗಲಿ ಸಾರ್ಥಕ್ಯವಾಗಲಿ ಒದಗದು ಎಂಬ ಅರಿವು ಪರಂಪರೆಯದು. ವಿದ್ಯೆಯ ನೆಲೆಯು ಶ್ರದ್ಧೆಯಲ್ಲಿರಬೇಕು, ನೆಮ್ಮದಿಯಲ್ಲಿರಬೇಕು; ಹೀಗಲ್ಲದೆ ಅದು ಕುತೂಹಲಮೂಲವಾಗಿದ್ದರೆ
ಆಗ ಅದು ವಿದ್ಯೆ ಎನಿಸಿಕೊಳ್ಳದು, ವಿಷಯವ್ಯಾಪಾರವಾಗುತ್ತದೆಯಷ್ಟೆ. ರಾಮಚಂದ್ರರಾಯರ ಅಧ್ಯಯನ-ಅಧ್ಯಾಪನಗಳಲ್ಲಿ ಇಂಥದೊಂದು ಕಾಣ್ಕೆ ಎದ್ದುಕಾಣುತ್ತಿತ್ತು. ಆದುದರಿಂದಲೇ ಹಲವರಿಂದ ಅವರಿಗೆ ದೊರೆತ ವಿದ್ಯೆಯನ್ನು ಅವರು ತಮ್ಮ ಮುಂದಿನ ಪೀಳಿಗೆಗೂ ಮುಟ್ಟಿಸುವ ಕರ್ತವ್ಯವನ್ನು ಸ್ವಲ್ಪವೂ ಲೋಪ ಬಾರದಂತೆ ನಿರ್ವಹಿಸಿದರು. ಆದರೆ ಈ ಸಾರಸ್ವತ ಯಜ್ಞದಲ್ಲಿ ಎಂದೂ ಅವರು ತಮ್ಮನ್ನು ತಾವು ‘ಗುರು’ ಎಂದು ಕಲ್ಪಿಸಿಕೊಂಡು ಭಾರಮಾಡಿಕೊಳ್ಳಲಿಲ್ಲ; ಬರೆಹ-ಮಾತು-ಪಾಠಗಳೆಲ್ಲವೂ ಋಷಿಋಣವನ್ನು ತೀರಿಸಲು ಒದಗಿದ ಅವಕಾಶ ಎಂದೇ ಭಾವಿಸಿಕೊಂಡಿದ್ದರು. ಶಾಸ್ತ್ರಶರೀರದ ತರ್ಕ-ವಿತರ್ಕಗಳ ಪಟ್ಟುಗಳಿಗಿಂತಲೂ ಅವರಿಗೆ ಅದರ ಅಂತರಂಗದ ಅರಿವಿನ ಮಟ್ಟು ಮುಖ್ಯವಾಗಿತ್ತು. ಅಗಾಧವಾದ ಶಾಸ್ತ್ರವಾಙ್ಮಯವನ್ನು ಕೌಶಲದಿಂದ ಕಡೆದು ತಾವು ದಕ್ಕಿಸಿಕೊಂಡಿದ್ದ, ಜೀವನಕ್ಕೆ ಬೇಕಾದ ಬೆಳಕಿನ ಬೆಣ್ಣೆಯನ್ನಷ್ಟೆ ಅವರು ಜಿಜ್ಞಾಸುಗಳಿಗೂ ಉಣಿಸಿದರು. ಹೀಗಾಗಿ ರಾಯರನ್ನು ನಾವು ‘ಗುರುವಲ್ಲದ ಗುರು’ ಎಂದು ಕರೆಯಬಹುದೇನೋ! ಏಕೆಂದರೆ ಅವರು ಶಾಸ್ತ್ರಗಳ ಭಾರವನ್ನು ನಮಗೆ ಹೊರಿಸಲಿಲ್ಲ, ಅವು ನಮ್ಮ ಜೀವನವನ್ನು ಹಗುರವನ್ನಾಗಿಸುವ ನೊಗಗಳನ್ನಾಗಿಸಿದರು. ಅವರ ಶಾಸ್ತ್ರಪಾಠವೂ ವಿಶಿಷ್ಟವಾದುದು. ಶಾಸ್ತ್ರದ ಮಾತುಗಳು ನಮ್ಮಲ್ಲಿ ಶಾಸನವಾಗಿ ಕಂಠಸ್ಥವಾಗಬೇಕೆಂದು ಅವರು ಹವಣಿಸಲಿಲ್ಲ; ಅದರ ಸಾರ ನಮ್ಮ ಬದುಕಿನ ಹಸನಕ್ಕೆ ಒದಗುವಂತೆ ನಮ್ಮಲ್ಲಿ ಹೃದಯಸ್ಥವಾಗಬೇಕು ಎಂದು ಹಂಬಲಿಸಿದರು. ಹೀಗಾಗಿ ಅವರ ಪಾಠಕ್ರಮವನ್ನು ‘ಶಾಸ್ತ್ರವಲ್ಲದ ಶಾಸ್ತ್ರ’ ಎಂದೂ ಕರೆಯಬಹುದೇನೋ! ಎಂದರೆ ‘ಶಾಸ್ತ್ರಕ್ಕಾಗಿ ಶಾಸ್ತ್ರ’ ಅಲ್ಲ, ಅವರ ಶಾಸ್ತ್ರಪಾಠ.
‘ಒಂದು ಜನ್ಮಕ್ಕೆ ಒಂದು ಶಾಸ್ತ್ರ’ ಎಂಬ ಒಕ್ಕಣೆ ರಾಯರ ವಿಷಯದಲ್ಲಿ ಅಪವಾದ; ಅವರಿಗೆ ಹಲವು ಶಾಸ್ತ್ರಗಳಲ್ಲಿ ಆಸಕ್ತಿ; ಪರಿಣತಿ ಕೂಡ. ವೇದ, ವೇದಾಂತ, ಬೌದ್ಧ, ಜೈನ, ಆಗಮ, ತಂತ್ರ, ವಾಸ್ತು, ಶಿಲ್ಪ – ಹೀಗೆ ಹತ್ತಾರು ವಿಷಯಗಳಲ್ಲಿ ವ್ಯಾಪಕವಾದ ಅರಿವನ್ನು ಅವರು ದಕ್ಕಿಸಿಕೊಂಡಿದ್ದರು. ಈ ಅರಿವನ್ನು ಅವರು ಬಚ್ಚಿಟ್ಟುಕೊಂಡವರಲ್ಲ; ಜನರಿಗೆ ಒದಗಲಿ ಎಂದು ನಾಲ್ಕಾರು ಧಾರೆಗಳಲ್ಲಿ ನಿರಂತರವಾಗಿ ಅದನ್ನು ಜನಮಾನಸಕ್ಕೆ ಹರಿಸಿದರು; ವಿದ್ಯೆಯಿಂದ ಎಲ್ಲರ ಜೀವನ ಒಳಿತನ್ನು ಪಡೆಯಲಿ – ಎಂದು ಹರಸಿದರು. ಅವರು ನೂರಾರು ಗ್ರಂಥಗಳನ್ನು ರಚಿಸಿದರು; ಸಾವಿರಾರು ಉಪನ್ಯಾಸಗಳನ್ನೂ, ನಿರಂತರ ಪಾಠಗಳನ್ನೂ ಮಾಡಿದರು.
ರಾಯರು ತಮ್ಮ ಸಣ್ಣಪ್ರಾಯದಿಂದಲೇ ಬರೆಹ, ಉಪನ್ಯಾಸ ಮತ್ತು ಪಾಠಗಳನ್ನು ಆರಂಭಿಸಿದರು. ಆಸಕ್ತಿಯಿದ್ದವರು ಯಾರು ಕೇಳಿದರೂ ಇಲ್ಲವೆಂದು ಹೇಳದೆ ಎಲ್ಲರಿಗೂ ಪಾಠಗಳನ್ನು ಹೇಳಿದ್ದಾರೆ; ಯಾರೊಬ್ಬರ ಆಸ್ತಿ-ಅಂತಸ್ತುಗಳನ್ನಾಗಲೀ, ಜಾತಿ-ಮತ-ನಂಬಿಕೆಗಳನ್ನಾಗಲೀ ಎಣಿಸಿ-ಗುಣಿಸಿ ವಿದ್ಯೆಗೆ ಅವಕಾಶ ನೀಡಿದವರಲ್ಲ; ಅವರ ಪಾಠಗಳಿಗೆ ಎಲ್ಲರಿಗೂ ಮುಕ್ತಾವಕಾಶ ಇದ್ದಿತು. ವಿದ್ವಾಂಸರು, ಸಂಗೀತತಜ್ಞರು, ಶಿಲ್ಪಿಗಳು, ಬರಹಗಾರರು, ಕಲಾವಿದರು, ಸಾಮಾನ್ಯರು, ಅಧಿಕಾರಿಗಳು – ಹೀಗೆ ಸಮಾಜದ ಎಲ್ಲ ಕ್ಷೇತ್ರಗಳ ಜಿಜ್ಞಾಸುಗಳೂ ಅವರ ಶಿಷ್ಯವರ್ಗದಲ್ಲಿದ್ದರು; ಹಲವರು ವಿದೇಶಿಯರೂ ಅವರಲ್ಲಿಗೆ ಪಾಠಕ್ಕೆ ಬರುತ್ತಿದ್ದರು. ಆದರೆ ಯಾರಿಂದಲೂ ಏನನ್ನೂ ನಿರೀಕ್ಷಿಸದೆ, ಋಷಿಋಣವನ್ನು ತೀರಿಸಲು ತಮಗೆ ಒದಗಿದ ಅವಕಾಶ ಎಂಬಂತೆ ಅವರು ವ್ರತದಂತೆ ಪಾಠಗಳನ್ನು ಹೇಳುತ್ತಿದ್ದರು.
ರಾಯರ ಪಾಠದಲ್ಲಿ ನಾನು ಸೇರಿಕೊಂಡದ್ದು ಸ್ವಾರಸ್ಯಕರವಾಗಿದೆ.
ರಾಯರ ಮನೆಯಲ್ಲಿ ಪಾಠಗಳು ನಡೆಯುತ್ತಿರುವ ಬಗ್ಗೆ ತಿಳಿಯಿತು. ನನಗೂ ಅದರಲ್ಲಿ ಸೇರಿಕೊಳ್ಳುವ ಆಸೆ. ಧೈರ್ಯಮಾಡಿ ರಾಯರಿಗೆ ಫೋನಾಯಿಸಿದೆ. “ಸರ್! ನಾನೂ ಪಾಠಕ್ಕೆ ಸೇರಿಕೊಳ್ಳಬಹುದೆ?” ರಾಯರಿಂದ ತತ್ಕ್ಷಣ ಉತ್ತರ ಬಂತು: “ಅಗತ್ಯವಾಗಿ ಬನ್ನಿ!” ಭಯದಿಂದಲೇ ಇನ್ನೊಂದು ಪ್ರಶ್ನೆಯನ್ನೂ ಕೇಳಿದೆ: “ಸರ್! ನನಗೆ ಅಷ್ಟಾಗಿ ಸಂಸ್ಕೃತ ಬರದು, ಪರವಾಗಿಲ್ಲವೆ?” “ಅಯ್ಯೋ! ಸಂಸ್ಕೃತ ಬಂದರೆ ಕಷ್ಟ, ಬರದಿದ್ದರೆ ಅನುಕೂಲ. ನೀವು ಪಾಠಕ್ಕೆ ಖಂಡಿತ ಬನ್ನಿ!’’
ಹೀಗೆ ಗುರುಗಳ ಪಾಠವನ್ನು ಕೇಳುವ ಅವಕಾಶ ನನಗೆ ದೊರೆಯಿತು; ಇದು ಬೆಳಕಿನ ಬಾಗಿಲಿಗೆ ಪ್ರವೇಶವೇ ಆಯಿತು. ಆಗ ಗುರುಗಳು ಉಪನಿಷತ್ತಿನ ಪಾಠವನ್ನು ಮಾಡುತ್ತಿದ್ದರು; ಪ್ರತಿ ಶನಿವಾರ ಸಂಜೆ ಐದು ಗಂಟೆಯಿಂದ ಆರು ಗಂಟೆಯ ತನಕ. ಗುರುಗಳು ಎಂದಿಗೂ ಒಂದು ನಿಮಿಷವೂ ಪಾಠವನ್ನು ತಡಮಾಡಿ ಆರಂಭಿಸಿದವರೂ ಅಲ್ಲ, ವಿಳಂಬಮಾಡಿ ನಿಲ್ಲಿಸಿದವರೂ ಅಲ್ಲ. ಅವರು ಪಾಠ ಆರಂಭಿಸಿದರು ಎಂದರೆ ನಿಮ್ಮ ಗಡಿಯಾರದಲ್ಲಿ ಸಮಯವನ್ನು ಸರಿ ಮಾಡಿಕೊಳ್ಳಬಹುದು, ಅಷ್ಟು ಶಿಸ್ತು ಇತ್ತು ಅವರ ಸಮಯಪಾಲನೆಯಲ್ಲಿ. ನಲವತ್ತೈದು ನಿಮಿಷಗಳಿಗಿಂತಲೂ ಹೆಚ್ಚಾಗಿ ಯಾರೂ ವಿಷಯವನ್ನು ಏಕಕಾಲದಲ್ಲಿ ಗ್ರಹಿಸಲಾರರು ಎಂಬುದು ಅವರ ಬಲವಾದ ನಂಬಿಕೆ. ಹೀಗಾಗಿ ಅವರು ಪಾಠವನ್ನು ಲಂಬಿಸುತ್ತಿರಲಿಲ್ಲ; ಉಪನ್ಯಾಸಗಳೂ ಅಷ್ಟೆ, ನಲವತ್ತೆöÊದು ನಿಮಿಷಗಳಿಂದ ಒಂದು ಗಂಟೆ. ಎಂದಿಗೂ ಈ ಗಡಿಯನ್ನು ಅವರು ದಾಟುತ್ತಿರಲಿಲ್ಲ.
‘ಸಂಸ್ಕೃತ ಬಾರದಿರುವುದೇ ಪಾಠಕ್ಕೆ ಒಳ್ಳೆಯದು’ ಎಂದು ಗುರುಗಳು ಹೇಳಿದರಷ್ಟೆ. ಅದಕ್ಕೆ ಕಾರಣವೂ ಇದ್ದಿತು. ಗುರುಗಳು ಆಗ ವೇದಾಂತದ ಪಾಠವನ್ನು ಮಾಡುತ್ತಿದ್ದರು. ವಿಷಯವನ್ನು ಗ್ರಹಿಸಲು ಭಾಷೆ ಆವಶ್ಯಕ, ದಿಟ. ಆದರೆ ಭಾಷೆಯೇ ನಮ್ಮ ಪಾಲಿಗೆ ಬಲೆಯಾಗಬಾರದು, ಶುಷ್ಕ ತರ್ಕವೇ ಬಂಧನವಾಗಬಾರದು ಎಂಬುದು ಅವರ ಆಶಯ. ಸಂಸ್ಕೃತ ಬಂದಮಾತ್ರಕ್ಕೆ ಎಲ್ಲ ವಿದ್ಯೆಗಳೂ ಕರತಲಾಮಲಕ – ಎಂದು ಭ್ರಾಂತಿಗೆ ಪಕ್ಕಾಗಿದ್ದವರಲ್ಲ, ಗುರುಗಳು. ವಿಷಯವನ್ನು ಅರ್ಥಮಾಡಿಕೊಳ್ಳುವುದಕ್ಕೆ ಬೇಕಾದದ್ದು ಬುದ್ಧಿಯ ಸಂಸ್ಕಾರವೇ ಹೊರತು ಭಾಷೆಯ ಪ್ರೌಢಿಮೆಯಲ್ಲ ಎನ್ನುವುದು ಅವರ ನಿಲವಾಗಿತ್ತೆಂದು ತೋರುತ್ತದೆ. ಹೀಗಾಗಿ ಅವರು ಎಂದಿಗೂ ಶಾಸ್ತ್ರವ್ಯಾಸಂಗಕ್ಕೂ ಭಾಷಾಜ್ಞಾನಕ್ಕೂ ನಂಟನ್ನು ಕಲ್ಪಿಸಲಿಲ್ಲ. ವೇದಶಾಸ್ತ್ರಗಳನ್ನು ನಮ್ಮ ಜೀವನಕ್ಕಾಗಿ ಒಲಿಸಿಕೊಳ್ಳಬೇಕೆ ಹೊರತು ಶಾಸ್ತ್ರಾಭ್ಯಾಸ ಎನ್ನುವುದು ಪಾಂಡಿತ್ಯಪ್ರದರ್ಶನಕ್ಕೆ ಬಳಸಿಕೊಳ್ಳುವ ಕಸರತ್ತು ಆಗಬಾರದು ಎಂಬುದು ಅವರ ಖಚಿತ ಅಭಿಪ್ರಾಯ. ಆದುದರಿಂದಲೇ ಆಗಾಗ ಅವರು ಹೇಳುತ್ತಿದ್ದುದು: “ನಿಮ್ಮನ್ನು ಶಾಸ್ತ್ರಾರ್ಥಕ್ಕೆ ಸಿದ್ಧಮಾಡುವುದು ನನ್ನ ಗುರಿಯಲ್ಲ, ಶಾಸ್ತ್ರದ ಬೆಳಕನ್ನು ಕಾಣಿಸಿಕೊಡಬೇಕೆಂಬುದು ನನ್ನ ಪ್ರಯತ್ನ. ಶಾಸ್ತ್ರಗಳ ಗುಟ್ಟನ್ನು ತಿಳಿದುಕೊಳ್ಳಲು ನಾನು ಪಟ್ಟ ಕಷ್ಟವನ್ನು ನೀವು ಪಡಬಾರದು.’’ ಹೀಗಿದ್ದರೂ ಅವರಿಗೆ ಸಂಸ್ಕೃತಭಾಷೆಯು ಪ್ರಿಯವೇ ಆಗಿದ್ದಿತು. ಸಂಸ್ಕೃತಭಾಷೆಯ ಸೊಗಸನ್ನು ಅರ್ಥಮಾಡಿಸಲೆಂದೇ ಅವರು ನಮಗೆ ವಾಲ್ಮೀಕಿ ರಾಮಾಯಣದ ಕೆಲವೊಂದು ಸರ್ಗಗಳನ್ನು ಪಾಠ ಮಾಡಿದ್ದರು.
ಗುರುಗಳೇ ‘ಪ್ಲಾಸ್ಟರ್ ಆಫ್ ಪ್ಯಾರಿಸ್’ನಿಂದ ನಿರ್ಮಿಸಿದ್ದ ಶ್ರೀ ಚಂದ್ರಶೇಖರಭಾರತೀಮಹಾಸ್ವಾಮಿಗಳ ಶಿಲ್ಪವೊಂದಿತ್ತು. ಅದರ ಸನಿಹದಲ್ಲಿ, ಕುರ್ಚಿಯಲ್ಲಿ ಕುಳಿತುಕೊಂಡು ಪಾಠ ಮಾಡುತ್ತಿದ್ದರು. ಪಾಠದ ಆರಂಭಕ್ಕೂ ಮೊದಲು ನಾವು ಒಬ್ಬೊಬ್ಬರಾಗಿ ಅವರಿಗೆ ನಮಸ್ಕಾರ ಮಾಡುತ್ತಿದ್ದೆವು; ಆಗ ಅವರು ನಿಂತಿರುತ್ತಿದ್ದರು. ಎಲ್ಲರೂ ನಮಸ್ಕರಿಸಿದಮೇಲೆ ಸ್ವಾಮಿಗಳ ಪ್ರತಿಮೆಯ ಕಡೆಗೆ ತಿರುಗಿ “ಇದೆಲ್ಲವೂ ಅವರಿಗೆ’’ ಎನ್ನುತ್ತಿದ್ದರು. ಗುರುಗಳು ಸ್ವಾಮಿಗಳನ್ನು ಗುರುಗಳು ಎಂದೇ ಸ್ವೀಕರಿಸಿದ್ದರು. ಮಾತ್ರವಲ್ಲ, ಜ್ಞಾನ ಎನ್ನುವುದು ಅಪೌರುಷೇಯತತ್ತ್ವ ಎಂದು ಒಪ್ಪಿದವರು ಗುರುಗಳು; ಹೀಗಾಗಿ ‘ನಾನೇ ಗುರು’ ಎಂಬ ಅಹಂ ಹುಟ್ಟುವುದಕ್ಕೆ ಅವರಲ್ಲಿ ಅವಕಾಶವಾದರೂ ಎಲ್ಲಿದ್ದೀತು? ತಮಗೆ ದೊರೆತ ಎಲ್ಲ ಮನ್ನಣೆ-ಗೌರವಗಳನ್ನೂ ಅವರು ತಮ್ಮ ಗುರುಪರಂಪರೆಗೆ ಅರ್ಪಿಸಿಬಿಡುತ್ತಿದ್ದರು.
ಅಂದು ಯಾವ ಗ್ರಂಥದ ಪಾಠವನ್ನು ಮಾಡಬೇಕಾಗಿದ್ದಿತೋ ಆ ಗ್ರಂಥವನ್ನು ಒಂದು ಕೈಯಲ್ಲಿ ಹಿಡಿದೇ ಪಾಠ ಮಾಡುತ್ತಿದ್ದರು, ಗುರುಗಳು. ಆ ಪುಸ್ತಕದಲ್ಲಿ ಅಲ್ಲಲ್ಲಿ ಟಿಪ್ಪಣಿಗಳೂ ಇರುತ್ತಿದ್ದವು. ಆದರೆ ಅವರು ಗ್ರಂಥವನ್ನು ನೋಡಿಕೊಂಡೇ ಪಾಠಮಾಡುತ್ತಿದ್ದರು ಎಂದೇನೂ ಅಲ್ಲ; ಅದೊಂದು ನೆಪಕ್ಕಾಗಿ ಇರುತ್ತಿತ್ತು. ಗ್ರಂಥದಲ್ಲಿಯ ಯಾವುದಾರೂ ಒಂದು ವಿಷಯವನ್ನು ಪ್ರಧಾನವಾಗಿ ಆರಿಸಿಕೊಂಡು, ಅದರ ಅರ್ಥ, ಆಶಯ, ತಾತ್ಪರ್ಯಗಳನ್ನು ಹಂತಹಂತವಾಗಿ ವಿವರಿಸುತ್ತಿದ್ದರು. ಅದಕ್ಕೆ ಹೊಂದಿಕೆಯಾಗುವ ಇತರ ಗ್ರಂಥಗಳಲ್ಲಿರುವಂಥ ವಾಕ್ಯಗಳನ್ನು ಮಧ್ಯೆ ಮಧ್ಯೆ ಧಾರಾಳವಾಗಿಯೇ ಉಲ್ಲೇಖಿಸುತ್ತಿದ್ದರು. ಪಾಠ ಕನ್ನಡಲ್ಲಿಯೇ ಇರುತ್ತಿತ್ತು. ಸಂಸ್ಕೃತವಾಕ್ಯಗಳೂ ಇರುತ್ತಿದ್ದವು. ಅಗತ್ಯ ಎನಿಸಿದ ಕಡೆಗಳಲ್ಲಿ ಆಧುನಿಕ ಚಿಂತಕರ ಅಭಿಪ್ರಾಯಗಳನ್ನೂ ಉದ್ಧರಿಸುತ್ತಿದ್ದರು. ಪಾಠ ಮುಗಿದಮೇಲೆ ಯಾರಾದರೂ ಪ್ರಶ್ನೆಗಳನ್ನು ಕೇಳಿದರೆ ಅವಕ್ಕೆ ಹಿತಮಿತವಾದ ಉತ್ತರವನ್ನೂ ಕೊಡುತ್ತಿದ್ದರು. ಆದರೆ ಅನಗತ್ಯ ಚರ್ಚೆಗಳನ್ನು ಅವರು ಪ್ರೋತ್ಸಾಹಿಸುತ್ತಿರಲಿಲ್ಲ. ಪಾಠಕ್ಕೆ ಆಗಾಗ ಬರುತ್ತಿದ್ದ ಪ್ರತಿಷ್ಠಿತರೊಬ್ಬರಿಗೆ ಒಂದು ಚಟ ಇದ್ದಿತು. ಗುರುಗಳು ಪಾಠದಲ್ಲಿ ಉಲ್ಲೇಖಿಸಿದ ವಾಕ್ಯಗಳ ಮೂಲವನ್ನು ಉಲ್ಲೇಖಿಸುವುದರಲ್ಲಿ ಅವರಿಗೆ ಆನಂದ. ಉದಾಹರಣೆಗೆ, ವೇದದ ಯಾವುದಾದರೊಂದು ಮಂತ್ರವನ್ನು ಗುರುಗಳು ಹೇಳಿದ್ದರೆ, ಈ ಮಹಾಶಯರು ಕೊನೆಯಲ್ಲಿ “ಇದು ಋಗ್ವೇದ ೮.೨.೪ ಅಲ್ಲವೆ?’’ ಎಂದು ಒಪ್ಪಿಸುತ್ತಿದ್ದರು, ಇಂಗ್ಲಿಷಿನಲ್ಲಿ. ಋಗ್ವೇದದ ಎಂಟನೆಯ ಮಂಡಲ, ಎರಡನೆಯ ಸೂಕ್ತ, ನಾಲ್ಕನೆಯ ಮಂತ್ರ – ಎನ್ನುವುದು ಅದರ ತಾತ್ಪರ್ಯ. ಆಗ ಗುರುಗಳು ನಸುನಗುತ್ತ “ಹೌದು, ಹೌದು” ಎನ್ನುತ್ತಿದ್ದರಷ್ಟೆ!
ದಶೋಪನಿಷತ್ತ್ತುಗಳು, ಬ್ರಹ್ಮಸೂತ್ರಗಳು, ಭಗವದ್ಗೀತೆ, ವಾಸುದೇವಮನನಮ್, ನಾಟ್ಯಶಾಸ್ತ್ರ – ಹೀಗೆ ಗುರುಗಳಿಂದ ಹಲವು ಗ್ರಂಥಗಳ ಪಾಠಗಳನ್ನು ಕೇಳುವ ಭಾಗ್ಯ ನನಗೆ ಒದಗಿತು. ಕಾಶ್ಮೀರ ಶೈವದರ್ಶನಕ್ಕೆ ಸೇರಿದ ವಸುಗುಪ್ತನ ‘ಶಿವಸೂತ್ರ’ದ ಪಾಠದ ಬಗ್ಗೆ ಪ್ರತ್ಯೇಕವಾಗಿಯೇ ಹೇಳಬೇಕಾಗುತ್ತದೆ. ಈ ಪಾಠವನ್ನು ಅವರು ಬಂಗಾಳಿಮೂಲದ ಜಿಜ್ಞಾಸುವೊಬ್ಬರಿಗಾಗಿಯೇ ಆರಂಭಿಸಿದ್ದುದು. ಹೀಗಾಗಿ ಅದನ್ನು ಗುರುಗಳು ಪೂರ್ಣ ಇಂಗ್ಲಿಷಿನಲ್ಲಿಯೇ ಮಾಡಿದರು. ನಮ್ಮಲ್ಲಿ ಕಾಶ್ಮೀರಶೈವದರ್ಶನವನ್ನು ಅಧ್ಯಯನ ಮಾಡಿರುವವರ ಸಂಖ್ಯೆಯೇ ತುಂಬ ವಿರಳ. ಆದರೆ ಗುರುಗಳು ಶಿವಸೂತ್ರದ ಪಾಠವನ್ನು ತುಂಬ ಆಳವಾಗಿ ಮಾಡಿದರು. ಕ್ಷೇಮರಾಜ ಮತ್ತು ಭಾಸ್ಕರ – ಇವರ ವ್ಯಾಖ್ಯಾನಗಳಲ್ಲದೆ ತಂತ್ರಾಲೋಕ, ಸ್ಪಂದಕಾರಿಕಾ, ಈಶ್ವರಪ್ರತ್ಯಭಿಜ್ಞಾವಿವೃತಿವಿಮರ್ಶಿನಿ, ಪರಾತ್ರಿಂಶಿಕಾ, ವಿಜ್ಞಾನಭೈರವ, ಮಾಲಿನೀವಿಜಯತಂತ್ರ ಮುಂತಾದ ಕಾಶ್ಮೀರಶೈವಗ್ರಂಥಗಳ ಜೊತೆಗೆ ಇನ್ನೂ ಹಲವು ದರ್ಶನಗಳ ಅಭಿಪ್ರಾಯಗಳನ್ನೂ ಸಮೀಕರಿಸಿಕೊಂಡು ಅಪೂರ್ವ ರೀತಿಯಲ್ಲಿ ಕಾಶ್ಮೀರದರ್ಶನದ ಬೆಳಕನ್ನು ಕಾಣಿಸಿದರು. ವಿಜ್ಞಾನ ಮತ್ತು ಮನಃಶಾಸ್ತ್ರಗಳ ಸಂಶೋಧನೆಗಳ ನಿಲವುಗಳನ್ನೂ ತತ್ತ್ವಗಳ ವಿವರಣೆಯ ಸಮಯದಲ್ಲಿ ಬಳಸಿಕೊಳ್ಳುತ್ತಿದ್ದರು. ಪ್ರತಿ ಬುಧವಾರ, ಮಧ್ಯಾಹ್ನದ ಸಮಯದಲ್ಲಿ ನಡೆಯುತ್ತಿದ್ದ ಈ ದರ್ಶನಪಾಠ ಸುಮಾರು ಒಂದೂವರೆ ವರ್ಷಗಳ ಕಾಲ ನಡೆಯಿತು. ಗುರುಗಳಲ್ಲಿ ನೆಲೆಗೊಂಡಿದ್ದ ಋಷಿತ್ವದ ಬೆಳಕು ಈ ಸಮಯದಲ್ಲಿ ಹೊಳೆಯುತ್ತಿತ್ತು ಎಂದರೆ ಇದೇನೂ ಅತ್ಯುಕ್ತಿಯಾಗದು.
“ಪಾಠ ಚೆನ್ನಾಗಿತ್ತೋ” ಎಂದೋ ಅಥವಾ “ಅರ್ಥವಾಯಿತೋ” ಎಂದೋ ಗುರುಗಳು ಎಂದೂ ಕೇಳುತ್ತಿರಲಿಲ್ಲ. ಆದರೆ ಒಮ್ಮೆ ಹೀಗಾಯಿತು. ಮಾಂಡೂಕ್ಯೋಪನಿಷತ್ತಿನ ಪಾಠ. ಅಂದು ಗುರುಗಳ ವಿವರಣೆ ತುಂಬ ಸೊಗಸಾಗಿತ್ತು. ವೇದಗಳ ಹಿನ್ನೆಲೆಯಲ್ಲಿ ಉಪನಿಷತ್ತಿನ ದರ್ಶನವನ್ನು ವಿಸ್ತಾರವಾಗಿ ವಿವರಿಸಿದರು. ಕೆಲವೊಂದು ಘಟ್ಟಗಳಲ್ಲಂತೂ ನಾನು ಭಾವುಕನಾಗಿಬಿಟ್ಟಿದ್ದೆ; ಆನಂದದ ನೀರು ಕಣ್ಣುಗಳಲ್ಲಿ ಒಸರಿತ್ತು. ಒಟ್ಟಿನಲ್ಲಿ ನನ್ನ ಪಾಲಿಗೆ ಅದೊಂದು ದರ್ಶನಸಮಯ. ಪಾಠ ಮುಗಿದಮೇಲೆ ಅವರ ಮನೆಯ ಗೇಟಿನ ತನಕ ಬಂದು ನಮ್ಮನ್ನು ಬೀಳ್ಕೊಡುವುದು ಗುರುಗಳ ಪದ್ಧತಿ. ಹೀಗೆ ಜೊತೆಯಲ್ಲಿ ಗೇಟಿನ ತನಕ ಬಂದ ಗುರುಗಳು ಕೇಳಿದರು: “ಹೇಗಿತ್ತು ಇಂದಿನ ಪಾಠ?’’ ಗುರುಗಳು ಹೀಗೆ ಕೇಳಿದ್ದು ಅದೇ ಮೊದಲು ಮತ್ತು ಅದೇ ಕೊನೆ! ನಾನು ಸ್ವಲ್ಪ ಅಂಜುತ್ತಲೇ ಹೇಳಿದೆ: “ಇವತ್ತಿನ ಪಾಠ ತುಂಬಾ ಸೊಗಸಾಗಿತ್ತು ಸರ್! ಎಷ್ಟೋ ಕಡೆಗಳಲ್ಲಿ ಆನಂದ ಕುಮಾರಸ್ವಾಮಿಯವರೇ ನೆನಪಾಗುತ್ತಿದ್ದರು” ಎಂದೆ. ಅವರಿಗೂ ಆ ಹೋಲಿಕೆ ಹಿತವನ್ನುಂಟುಮಾಡಿತು ಎನಿಸುತ್ತದೆ. “ಕುಮಾರಸ್ವಾಮಿ ಒಬ್ಬ ಋಷಿ. ಅವರ ‘ಅತ್ಯತಿಷ್ಠದ್ದಶಾಂಗುಲಮ್’ ನೋಡಿದ್ದೀರಾ?’’ ಎಂದರು. ವಾಸ್ತವದಲ್ಲಿ ಆ ಪ್ರಬಂಧವನ್ನು ನಾನು ಹುಡುಕುತ್ತಿದ್ದೆ! “ನೋಡಿಲ್ಲ ಸರ್” ಎಂದೆ. ಮನೆಯ ಒಳಕ್ಕೆ ಹೋಗಿ ಆ ಪ್ರಬಂಧದ ಪ್ರತಿಯೊಂದನ್ನು ತಂದು ನನ್ನ ಕೈಯಲ್ಲಿಟ್ಟರು. ನನಗೆ ದೊಡ್ಡ ನಿಧಿಯೊಂದು ಸಿಕ್ಕಷ್ಟು ಸಂತೋಷ. ಬಳಿಕ ಅದರ ‘ಫೋಟೊಪ್ರತಿ’ಯೊಂದನ್ನು ಮಾಡಿಸಿಕೊಂಡು, ಗುರುಗಳ ಪ್ರತಿಯನ್ನು ಹಿಂದಿರುಗಿಸಿದೆ. ಅಂದಿನ ಅನುಭವವನ್ನು ನಾನು ಜೀವನದುದ್ದಕ್ಕೂ ಸ್ಮರಿಸಿಕೊಳ್ಳುತ್ತಲೇ ಇರುವೆ.
ಯಾರ ಅಭಿಪ್ರಾಯಗಳನ್ನೂ ಗುರುಗಳು ಪಾಠದಲ್ಲಿ ಉಗ್ರವಾಗಿ ಟೀಕಿಸುತ್ತಿರಲಿಲ್ಲ. ತಾತ್ತ್ವಿಕವಾದ ಭಿನ್ನಾಭಿಪ್ರಾಯಗಳನ್ನು ಅವರು ಶಾಸ್ತ್ರೀಯವಾಗಿಯೂ ನಯವಾಗಿಯೂ ಮಂಡಿಸುತ್ತಿದ್ದರಷ್ಟೆ. ಅಂದು ರಾಮಾಯಣದ ಪಾಠವನ್ನು ಮಾಡುತ್ತಿದ್ದರು. ಸಾಮಾನ್ಯವಾಗಿ ನಾವು ಪಾಠಗಳನ್ನು ರೆಕಾರ್ಡ್ ಮಾಡಿಕೊಳ್ಳುತ್ತಿದ್ದೆವು. ಪಾಠದ ಯಾವುದೋ ಒಂದು ಹಂತದಲ್ಲಿ ರೆಕಾರ್ಡ್ ಮಾಡುವುದನ್ನು ನಿಲ್ಲಿಸುವಂತೆ ನಮಗೆ ಸೂಚಿಸಿದರು; ನಾನು ನಿಲ್ಲಿಸಿದೆ. “ನನ್ನ ಈ ಅಭಿಪ್ರಾಯವನ್ನು ರಂಗನಾಥಶರ್ಮರು ಒಪ್ಪುವುದಿಲ್ಲ” ಎಂದು ನಗುನಗುತ್ತ ಹೇಳಿ, ಪಾಠವನ್ನು ಮುಂದುವರಿಸಿದರು; ರೆಕಾರ್ಡ್ ಮಾಡುವುದನ್ನು ಮುಂದುವರಿಸಲೂ ಸೂಚಿಸಿದರು. ಭಿನ್ನಾಭಿಪ್ರಾಯಗಳೆಂದರೆ ಅದು ಎಂದಿಗೂ ನಿಲ್ಲುವ ವೈರವೇ ಹೌದು – ಎಂದು ಗ್ರಹಿಸಿಕೊಂಡಿರುವ ಹಲವರು ವಿದ್ವಾಂಸರಿಗೆ ಗುರುಗಳ ಈ ಸೌಹಾರ್ದ-ಸಾಮರಸ್ಯಗಳು ಪಾಠವಾಗಲಿ ಎಂದು ಹಾರೈಸಬೇಕಾಗಿದೆಯೆನ್ನಿ!
ಗುರುಗಳ ಪಾಠವನ್ನಾಗಲೀ, ಅವರ ವ್ಯಕ್ತಿತ್ವನ್ನಾಗಲೀ ಸ್ಮರಿಸಿಕೊಂಡಾಗಲೆಲ್ಲ ಭಾರತೀಯ ವಿದ್ಯೆಗಳೆಲ್ಲವೂ ಒಂದಾಗಿ ಸಾ.ಕೃ. ರಾಮಚಂದ್ರರಾಯರ ರೂಪದಲ್ಲಿ ಕಾಣಿಸಿಕೊಂಡಿರುವಂಥ ಅನುಭೂತಿ ನನಗೆ ಉಂಟಾಗುತ್ತದೆ. ಆಚಾರ್ಯರು ಯಾರು – ಎಂಬುದಕ್ಕೆ ಶಂಕರಾಚಾರ್ಯರ ಒಕ್ಕಣೆಯೊಂದು ಸೊಗಸಾಗಿದೆ. “ವಿದ್ಯೆಯೊಂದು ತುತ್ತತುದಿಯಲ್ಲಿ ಕೊಡಬಹುದಾದ ಫಲವನ್ನು ದಕ್ಕಿಸಿಕೊಂಡು ಜೀವನದಲ್ಲಿ ಸಾರ್ಥಕತೆಯನ್ನು ಸಂಪಾದಿಸಿರುವವರೇ ಆಚಾರ್ಯರು.’’ ನನ್ನ ಗುರುಗಳು ಈ ಅರ್ಥದಲ್ಲಿ ದಿಟವಾದ ಆಚಾರ್ಯರೇ ಹೌದು.