ಪ್ರಾಯಶಃ ಕರ್ನಾಟಕದಲ್ಲಿ ಇದುವರೆಗೂ ಬೇರೆ ಯಾವ ವಿದ್ವಾಂಸರೂ ತಂತ್ರಶಾಸ್ತ್ರ ಮತ್ತು ಆಗಮಸಾಹಿತ್ಯಕ್ಕೆ ನೀಡದಷ್ಟು ಅಗಾಧ, ವಿಸ್ತೃತ ಪ್ರಮಾಣದಲ್ಲಿ ರಾಮಚಂದ್ರರಾಯರು ಕೊಡುಗೆ ನೀಡಿದ್ದಾರೆ. ಕರ್ನಾಟಕದಲ್ಲಿ ಅದುವರೆಗೂ ‘ಲಲಿತಾಸಹಸ್ರನಾಮ’, ‘ಸೌಂದರ್ಯಲಹರಿ’ ಮುಂತಾದ ಸ್ತೋತ್ರಸಾಹಿತ್ಯದ ಪ್ರಕಟಣೆಗಳು ನಡೆದಿದ್ದವು. ‘ದೇವೀಭಾಗವತ’, ‘ಕಾಳಿಕಾಪುರಾಣ’ದಂಥ ಶಾಕ್ತ ಪುರಾಣಕೃತಿಗಳು ಕನ್ನಡದಲ್ಲಿ ಅಚ್ಚಾಗಿದ್ದವು. ರಾಯರು ಜಾಗತಿಕ ಮಟ್ಟದಲ್ಲಿ ಕೊಡುಗೆಯಾಗಿ ಇಂದಿಗೂ ಉಳಿದಿರುವ ಕೃತಿಗಳನ್ನು ನೀಡಿದ್ದು ತಂತ್ರಾಗಮಗಳಿಗೆ ಸಂಬಂಧಿಸಿದ ಕೋಶಗಳ ಮೂಲಕ.
ಎಸ್.ಕೆ. ರಾಮಚಂದ್ರರಾಯರು ನಾಡು ಕಂಡಂಥ ಮಹಾನ್ ಮೇಧಾವಿ ಲೇಖಕ ಮತ್ತು ಕೋಶಕಾರರು. ಅವರ ಬರವಣಿಗೆಯ ವ್ಯಾಪ್ತಿ ಎಷ್ಟೆಂದರೆ ಕೆಲವು ವರ್ಷಗಳ ಹಿಂದೆ ಕೇವಲ ಅವರು ಬರೆದ ಪುಸ್ತಕಗಳ ಪಟ್ಟಿಯನ್ನು ನೀಡಲು ಹೋಗಿ ಮೂರು ವರ್ಷ ಕೆಲಸ ಮಾಡಬೇಕಾಯಿತು. ಕನ್ನಡದಲ್ಲಿ ರಾಮಚಂದ್ರರಾಯರನ್ನು ಕುರಿತು ಯಾವುದೇ ಅಭಿನಂದನಾಗ್ರಂಥ ಪ್ರಕಟವಾಗದೆ ಇರುವುದು ಕನ್ನಡಿಗರ ನಿರಭಿಮಾನಕ್ಕೆ ಸಾಕ್ಷಿ ಎಂದು ನನ್ನ ಅಭಿಪ್ರಾಯ.
ಈಗ ರಾಯರ ಅಪಾರ ಸಾಹಿತ್ಯವಾರಿಧಿಯಲ್ಲಿ ಮುಕುಟಮಣಿಯಂತೆ ಶೋಭಿಸುವ ಅವರ ತಂತ್ರ ಮತ್ತು ಆಗಮಗಳನ್ನು ಕುರಿತ ಸಾಹಿತ್ಯದ ಅತ್ಯಂತ ಕಿರುಪರಿಚಯವನ್ನು ಮಾಡುತ್ತೇನೆ.
ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಆಯಾಮಗಳಲ್ಲಿ ತಂತ್ರ ಆಗಮಗಳು ಸೇರಿವೆ. ಈ ಕುರಿತು ಜನಗಳ ತಪ್ಪು ಕಲ್ಪನೆಯಿಂದ ಅವುಗಳ ಕುರಿತು ಅರಿವಿಗಿಂತಲೂ ಭಯ, ಹೆದರಿಕೆ ಉಂಟು. ರಾಯರು ವೈದಿಕ ಮನೆತನದವರಾದರೂ, ಆ ಹಿನ್ನೆಲೆಯಿಂದ ಆಲೋಚಿಸಿದವರಾದರೂ ಶಾಕ್ತ, ಜೈನ, ಬೌದ್ಧ (ವಜ್ರಯಾನ), ವೈಷ್ಣವ ತಂತ್ರಾಗಮಗಳ ಕ್ಷೇತ್ರಕ್ಕೆ ಗಣನೀಯ ಕೊಡುಗೆಗಳನ್ನು ನೀಡಿದ್ದಾರೆ. ದೇವಾಲಯಗಳಲ್ಲಿ ನಡೆಯುವ ಆಲಯ ಅರ್ಚನೆಗೆ ಸೀಮಿತವಾದ ಆಗಮಗಳು ಹಾಗೂ ಅವುಗಳ ವಲಯ ಮೀರಿದ – ಸೈದ್ಧಾಂತಿಕವಾಗಿ ಮತ್ತು ಆಚರಣೆಯ ದೃಷ್ಟಿಯಿಂದ ರಹಸ್ಯವೆನಿಸಿರುವ – ಆಗಮ-ತಂತ್ರಗಳ ಕುರಿತು ರಾಯರು ಪುಸ್ತಕ, ಕೋಶಗಳನ್ನು ರಚಿಸಿದ್ದಾರೆ. ಆಗಮ ತಂತ್ರಗಳ ಅರಿವು ಇರದೆ ವೇದೋತ್ತರ ಮತ್ತು ಗುಪ್ತರವರೆಗಿನ ಭಾರತವನ್ನು ಅರಿಯಲು ಖಂಡಿತಾ ಸಾಧ್ಯವಿಲ್ಲ. ಆದರೆ ತಂತ್ರಗಳ ಬೆಟ್ಟದಷ್ಟು ಸಾಹಿತ್ಯರಾಶಿಯಲ್ಲಿ ಸಂಚರಿಸುವವರು ಯಾರು? ಅದರಲ್ಲಿ ಇರುವ ಅಮೂಲ್ಯ ಅರಿವಿನ ವಜ್ರಗಳನ್ನು ಅರಿವಿನ ಪಿಪಾಸುಗಳಿಗೆ ಉಣಬಡಿಸುವವರು ಯಾರು? ಈ ಸಿಂಹಪ್ರಶ್ನೆಗೆ ರಾಯರು ಸಾಕಷ್ಟು ಪ್ರಮಾಣದಲ್ಲಿ ಉತ್ತರ ನೀಡಿದ್ದಾರೆ. ಇದಕ್ಕೆ ಅವರು ಸೃಷ್ಟಿಸಿ ಬಿಟ್ಟುಹೋಗಿರುವ ಈ ಕುರಿತ ಸಾಹಿತ್ಯರಾಶಿಯೇ ಸಾಕ್ಷಿ.
ಇವುಗಳ ವಿಷಯವ್ಯಾಪ್ತಿ ದಕ್ಷಿಣಭಾರತವನ್ನು ಮೀರಿ ಉತ್ತರಭಾರತದ ಗಡಿಗಳನ್ನೂ ದಾಟಿ ಹಿಮಾಲಯದ ಸಂಸ್ಕೃತಿಸೀಮೆಗಳಲ್ಲಿ ವಿಹರಿಸಿದೆ. ದೇಶ ಸುತ್ತುವುದಕ್ಕಿಂತಲೂ ಕೋಶ ಓದುವುದರಲ್ಲಿ, ತಾವೇ ಕೋಶ ರಚಿಸುವಲ್ಲಿ ಆಸಕ್ತಿ ಹೊಂದಿದ್ದವರು ರಾಯರು. ಅವರೇ ಹೇಳಿರುವ ಒಂದು ಮಾತು: “ಐತಿಹಾಸಿಕ ಪ್ರಜ್ಞೆ ನಮ್ಮಲ್ಲಿ ಅಷ್ಟೊಂದು ಬಲವಾಗಿಲ್ಲ. ಮತ-ಧರ್ಮಗಳ ಚೌಕಟ್ಟು ಬಿಟ್ಟು ಯೋಚಿಸುವಂತಾದರೆ ವಾಸ್ತವ ಸಂಗತಿಗಳು ಬೆಳಕು ಕಾಣುತ್ತವೆ”. ಹನ್ನೆರಡು ಸಂಪುಟಗಳ ಆಗಮಕೋಶ, ಆರು ಸಂಪುಟಗಳ ಪ್ರತಿಮಾಕೋಶ, ಧ್ಯಾನ, ಮಂಡಲ, ಯಂತ್ರ, ಮಂತ್ರಗಳನ್ನು ಕುರಿತ ವ್ಯಾಪಕ ಬರಹಗಳು ಈ ವಿಭಾಗದಲ್ಲಿ ಸೇರಿವೆ. ರಾಯರ ಹೆಸರನ್ನು ಉತ್ತರಭಾರತದಲ್ಲಿ ಈ ಕ್ಷೇತ್ರದಲ್ಲಿ ಕೆಲಸ ಮಾಡಿರುವ ಪಂಡಿತಶ್ರೇಷ್ಠರುಗಳಾದ ಗೋಪಿನಾಥ ಕವಿರಾಜ, ವ್ರಜವಲ್ಲಭ ದ್ವಿವೇದಿ, ಠಾಕೂರ್ ಜಯದೇವ್ ಸಿಂಗ್ ಅವರೊಡನೆ ನಾಡು ಕೃತಜ್ಞತೆಯಿಂದ ಸ್ಮರಿಸಿಕೊಳ್ಳಬೇಕು.
ತಂತ್ರಗಳ ಕುರಿತು ಕನ್ನಡದಲ್ಲಿ ಅರಿವನ್ನು ಒದಗಿಸಿ, ಮುಂದುವರಿದು ಬದುಕಿನಲ್ಲಿ ಅನುಷ್ಠಾನ ಇರಿಸಿಕೊಂಡ ಹಲವರು ರಾಯರ ಕಾಲದಲ್ಲೇ ಇದ್ದರು. ಆದರೆ ಅವರು ಯಾರೂ ತಮ್ಮ ತಂತ್ರಪ್ರಜ್ಞೆಯನ್ನು ಬರೆಹಗಳ ಮೂಲಕ, ವಿವರಣೆ, ವ್ಯಾಖ್ಯಾನಗಳ ಮೂಲಕ ಲೋಕಾರ್ಪಣೆ ಮಾಡುವ ಗೋಜಿಗೆ ಹೋಗಲಿಲ್ಲ. ಈ ವಿಷಯದಲ್ಲಿ ಮುನ್ನುಗ್ಗಲು ಬರೀ ಸಂಸ್ಕೃತಪಾಂಡಿತ್ಯ ಸಾಲದು. ನಾಥ, ಸಿದ್ಧ, ಶೈವ ತಾಂತ್ರಿಕ ಧಾರೆಗಳ ಚೌಕಟ್ಟಿನಲ್ಲಿ ‘ಸಾಹಸ’ ಎಂಬ ಪರಿಕಲ್ಪನೆ ಇದೆ. ಈ ಕುರಿತು ರಾಯರು ‘ಕಲಾನುಭವದಲ್ಲಿ ಸಾಹಸ’ ಎಂಬ ಅಪೂರ್ವ ಲೇಖನ ರಚಿಸಿದ್ದಾರೆ. ಕಾಶ್ಮೀರ ಶೈವಾಗಮಗಳ ಮೇಲೆ ಅಪೂರ್ವ ಹಿಡಿತವಿದ್ದ ರಾಯರು ಶಿವಸೂತ್ರಗಳು, ಅಭಿನವಗುಪ್ತರ ಚಿಂತನೆಗಳ ಕುರಿತು ಪಾಠ ಹೇಳಿದ್ದಾರೆ. ಅದು ಸಿ.ಡಿ. ರೂಪದಲ್ಲೂ ಪ್ರಕಟವಾಗಿದೆ. ಅವರು ಅಭಿನವಗುಪ್ತನನ್ನು ಕುರಿತು ಬರೆದಿರುವ ಕೃತಿ ಮುಂದೆ ಅವನದೇ ‘ತಂತ್ರಾಲೋಕ’ವನ್ನು ಕನ್ನಡೀಕರಿಸುವ ದಿಕ್ಕಿನ ಪೀಠಿಕೆ ಎಂದು ಹೇಳಿದರೆ ತಪ್ಪಲ್ಲ. ಆದರೆ ಕಾಲರಾಯನ ಕೈವಾಡದಿಂದ ಅದು ಸಾಧ್ಯವಾಗದೇ ಹೋಯಿತು. ಕೆಲವು ಕೆಲಸಗಳನ್ನು ರಾಯರಂತೆ ರೇಂಜ್ ಇದ್ದವರು ಮಾಡಿದರೇ ಅದಕ್ಕೆ ನಿಜವಾದ ನ್ಯಾಯ ಸಲ್ಲಿಸಿದಂತಾಗುತ್ತದೆ. ಏನು ಮಾಡುವುದು? ಆಗಬೇಕಿತ್ತು, ಆದರೆ ಆಗಲಿಲ್ಲ.
ಅವರ ವಿವಿಧ ಕೃತಿಗಳ ಆಳವಾದ ಅಧ್ಯಯನದಿಂದ ಕನ್ನಡ ಸಾಹಿತ್ಯವನ್ನೂ ಸೇರಿದಂತೆ ಭಾರತೀಯತೆಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಹಾಯವಾಗುತ್ತದೆ. ಈಗ ತಂತ್ರಾಗಮಗಳಿಗೆ ಸಂಬAಧಿಸಿದ ರಾಯರ ಪುಸ್ತಕಗಳ ಸಾಮಾನ್ಯ ಪರಿಚಯ ಮಾಡಿಕೊಳ್ಳಬಹುದು.
ಪ್ರಾಯಶಃ ಕರ್ನಾಟಕದಲ್ಲಿ ಇದುವರೆಗೂ ಬೇರೆ ಯಾವ ವಿದ್ವಾಂಸರೂ ತಂತ್ರಶಾಸ್ತ್ರ ಮತ್ತು ಆಗಮಸಾಹಿತ್ಯಕ್ಕೆ ನೀಡದಷ್ಟು ಅಗಾಧ, ವಿಸ್ತೃತ ಪ್ರಮಾಣದಲ್ಲಿ ರಾಮಚಂದ್ರ ರಾಯರು ಕೊಡುಗೆ ನೀಡಿದ್ದಾರೆ. ಕರ್ನಾಟಕದಲ್ಲಿ ಅದುವರೆಗೂ ‘ಲಲಿತಾಸಹಸ್ರನಾಮ’, ‘ಸೌಂದರ್ಯಲಹರಿ’ ಮುಂತಾದ ಸ್ತೋತ್ರಸಾಹಿತ್ಯದ ಪ್ರಕಟಣೆಗಳು ನಡೆದಿದ್ದವು. ‘ದೇವೀಭಾಗವತ’, ‘ಕಾಳಿಕಾಪುರಾಣ’ದಂಥ ಶಾಕ್ತ ಪುರಾಣಕೃತಿಗಳು ಕನ್ನಡದಲ್ಲಿ ಅಚ್ಚಾಗಿದ್ದವು. ರಾಯರು ಜಾಗತಿಕ ಮಟ್ಟದಲ್ಲಿ ಕೊಡುಗೆಯಾಗಿ ಇಂದಿಗೂ ಉಳಿದಿರುವ ಕೃತಿಗಳನ್ನು ನೀಡಿದ್ದು ತಂತ್ರಾಗಮಗಳಿಗೆ ಸಂಬಂಧಿಸಿದ ಕೋಶಗಳ ಮೂಲಕ ಎಂಬುದರಲ್ಲಿ ಯಾವ ಉತ್ಪ್ರೇಕ್ಷೆಯೂ ಇಲ್ಲ.
೧. ಆಗಮ ಎನ್ಸೈಕ್ಲೋಪೀಡಿಯಾ (ಆಗಮ ಕೋಶ) (೧೯೮೯-೧೯೯೪)
ಮೊದಲು ‘ಆಗಮ ಕೋಶ’ ಎಂಬ ಹೆಸರಿನಲ್ಲಿ ಪ್ರಕಟವಾದ ೧೨ ಸಂಪುಟಗಳ ಸರಣಿ ಇದು. ನಂತರ ಆಗಮ ಎನ್ಸೈಕ್ಲೋಪೀಡಿಯಾ ಎಂದಾಯಿತು. ಇದು ಮೂಲ ಸರಣಿಯ ಪರಿಷ್ಕöÈತ ಹಾಗೂ ಪರಿವರ್ಧಿತ ರೂಪವಾಗಿದೆ. ವಿವರಗಳು ಹೀಗಿವೆ:
i) ಸಾಮಾನ್ಯ ಪರಿಚಯ (General Introduction, ೧೯೮೯), ii) ಶೈವ ಮತ್ತು ಶಾಕ್ತ ಆಗಮ (೧೯೯೦), iii) ವೈಖಾನಸ ಆಗಮ (೧೯೯೦), iv) ಪಾಂಚರಾತ್ರ ಆಗಮ (೧೯೯೧), v) ದೇವ್ಯಾಗಮ (೧೯೯೨), vi) ಆಲಯ ಮತ್ತು ಆರಾಧನ (೧೯೯೨), vii) ಪೂಜೆಗೆ ಸಿದ್ಧತೆಗಳು (Preparations for Puja – ೧೯೯೨), vii) ಪೂಜೆಯಲ್ಲಿನ ಮುದ್ರೆಗಳು, (Mudras in Puja – ೧೯೯೩), ix) Consecration (೧೯೯೪), x) ನಿತ್ಯಾರ್ಚನ (೧೯೯೪), xi) ಉತ್ಸವಗಳು (Utsavas), xi) ಆಕರ ಗ್ರಂಥ (Sourcebook – ೧೯೯೪).
ಕಲ್ಪತರು ರಿಸರ್ಚ್ ಅಕಾಡೆಮಿ, ಬೆಂಗಳೂರು. ನಂತರದ ಮುದ್ರಣ: ಶ್ರೀ ಸತ್ಗುರು ಪಬ್ಲಿಕೇಷನ್ಸ್, ನವದೆಹಲಿ. ಇದು ಏಕವ್ಯಕ್ತಿಯ ಸಾಹಸದ ಫಲವಾಗಿರುವ ಸರಣಿಯಾಗಿದೆ.
೨. ಪ್ರತಿಮಾ ಕೋಶ (Pratima Kosha) (೧೯೮೮-೧೯೯೨)
ಆರು ಸಂಪುಟಗಳಲ್ಲಿರುವ ಬೃಹತ್ ಕೃತಿ. ಸುಮಾರು ೪ ವರ್ಷಗಳ ಅವಧಿಯಲ್ಲಿ ಮುದ್ರಣಗೊಂಡು ಹೊರಬಂದಿದೆ. ಇದೂ ಎಸ್.ಕೆ.ಆರ್. ಅವರ ಏಕಾಂಗ ಸಾಹಸಕ್ಕೆ ದೊಡ್ಡ ಉದಾಹರಣೆಯಾಗಿದೆ. ವಿವರಗಳು: ಲಲಿತಾ ಕೋಶ (೧೯೯೧), ಗಣೇಶ ಕೋಶ (೧೯೯೨), ನವಗ್ರಹ ಕೋಶ (ಎರಡು ಸಂಪುಟಗಳಲ್ಲಿ – ೧೯೯೫), ಸಾಲಿಗ್ರಾಮ ಕೋಶ (ಎರಡು ಸಂಪುಟಗಳಲ್ಲಿ – ೧೯೯೬) ದುರ್ಗಾ ಕೋಶ (೧೯೯೭), ವಿಷ್ಣು ಕೋಶ (೧೯೯೮), ಶಿವ ಕೋಶ (ಎರಡು ಸಂಪುಟಗಳಲ್ಲಿ – ೧೯೯೮), (ತ್ರಿಶತೀ) ಗೀತಾ ಕೋಶ (೨೦೦೧), ಹನುಮಾನ್ ಕೋಶ, ವನಸ್ಪತಿ ಕೋಶ.
‘ಡಿಸ್ಕ್ರಿಪ್ಟಿವ್ ಗ್ಲಾಸರಿ ಆಫ್ ಇಂಡಿಯನ್ ಐಕನೋಗ್ರಫಿ’ ಎಂಬ ಹೆಸರೂ ಇದೆ. ಪುರಾಣ ಮತ್ತು ವೈದಿಕ ಆಗಮ ಸಾಹಿತ್ಯದಲ್ಲಿ ವರ್ಣಿತವಾಗಿರುವ ದೇವ ದೇವಿಯರನ್ನು ಕುರಿತಂತೆ ಅಕಾರಾದಿ ನಿರೂಪಣೆ ಇರುವ ಕೃತಿಯಿದು. ವಿವಿಧ ಕಲೆಗಳಲ್ಲಿ ತೊಡಗಿಸಿಕೊಂಡವರಿಗೆ, ದೈವಭಕ್ತರಿಗೆ ಮತ್ತು ಸಂಸ್ಕೃತಿಯ ಜಿಜ್ಞಾಸುಗಳಿಗೆ ಒಳ್ಳೆಯ ಗ್ರಾಸ ಒದಗಿಸುವ ಕೋಶಗಳಿವು. ಗೋಪಿನಾಥ ರಾವ್ ಅವರ ‘ಇಂಡಿಯನ್ ಐಕನೊಗ್ರಪಿ’ಯ “ಸಮರ್ಥ ಉತ್ತರಾಧಿಕಾರಿ” ಈ ಗ್ರಂಥಸರಣಿ ಎಂದು ಡಾ. ಆರ್. ಗಣೇಶ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. (ಕಲ್ಪತರು ರಿಸರ್ಚ್ ಅಕಾಡೆಮಿ, ಬೆಂಗಳೂರು.)
೩. ಆರ್ಟ್ ಅಂಡ್ ಆರ್ಕಿಟೆಕ್ಚರ್ ಆಫ್ ಇಂಡಿಯನ್ ಟೆಂಪಲ್ಸ್ (೧೯೯೩-೯೫)
ಮೂರು ಸಂಪುಟಗಳಲ್ಲಿರುವ ಈ ಸರಣಿಯ ಎಲ್ಲಾ ಬರವಣಿಗೆ ಎಸ್.ಕೆ.ಆರ್. ಅವರದ್ದು ಮತ್ತು I, II ಮತ್ತು IIIನೆಯ ಸಂಪುಟಗಳು ಕ್ರಮವಾಗಿ ೧೯೯೩, ೧೯೯೪, ೧೯೯೫ರಲ್ಲಿ ಪ್ರಕಟವಾದವು. ಭಾರತೀಯ ದೇವಾಲಯಗಳ ವಾಸ್ತು, ಶಿಲ್ಪಕಲೆ, ಸಂಸ್ಕೃತಿಯ ವಾತಾವರಣಕ್ಕೆ ಸಂಬಂಧಿಸಿದ ವಿಷಯಗಳನ್ನು ಮೇಳೈಸಿಕೊಂಡಿರುವ ಗ್ರಂಥಗಳಿವು. (ಕಲ್ಪತರು ರಿಸರ್ಚ್ ಅಕಾಡೆಮಿ, ಬೆಂಗಳೂರು.)
೪. ದೇವಾಲಯ ವಾಸ್ತು (೧೯೯೭)
ಡಿ. ವಿಖನಸಾಚಾರಲು ಅವರೊಡನೆ ಸೇರಿ ರಚಿಸಿರುವ ಎರಡು ಸಂಪುಟಗಳ ಗ್ರಂಥ. ದೇವಾಲಯ ನಿರ್ಮಾಣದ ಕ್ರಮವನ್ನು ಸಾಂಪ್ರದಾಯಿಕ ಆಕರಗಳ ಹಿನ್ನೆಲೆಯಲ್ಲಿ ಮತ್ತು ಸಾಂಪ್ರದಾಯಿಕ ದೃಷ್ಟಿಯಿಂದ ನಿರೂಪಿಸಲಾಗಿದೆ. (ಕಲ್ಪತರು ರಿಸರ್ಚ್ ಅಕಾಡೆಮಿ, ಬೆಂಗಳೂರು.)
೫. ದೇವತಾ ಧ್ಯಾನ ಮಾಲಿಕಾ (೨೦೦೨)
ಮೈಸೂರಿನ ಅರಸರಾಗಿದ್ದ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಕೃತಿಯನ್ನು ಎಸ್.ಕೆ.ಆರ್. ಇಂಗ್ಲಿಷಿಗೆ ಅನುವಾದಿಸಿ, ಸಂಪಾದಿಸಿಕೊಟ್ಟಿದ್ದಾರೆ. ದೇವತೆಗಳನ್ನು ಕುರಿತಂತೆ ಹಲವು ವರ್ಣಚಿತ್ರಗಳೂ ಇವೆ. ಇವು ಅಂದಿನ ಆಸ್ಥಾನಚಿತ್ರಕಾರರ ಕಲಾಕೃತಿಗಳು. ದೇವತೆಗಳ ಧ್ಯಾನಕ್ಕೆ ಅನುಕೂಲವಾಗುವಂತೆ ಶ್ಲೋಕ ಮತ್ತು ಚಿತ್ರಗಳ ರಚನೆಯಾಗಿದೆ ಎಂದು ತಿಳಿದುಬರುತ್ತದೆ. (ಕಲ್ಪತರು ರಿಸರ್ಚ್ ಅಕಾಡೆಮಿ, ಬೆಂಗಳೂರು.)
೬. ಭಾರತೀಯ ಪ್ರಣಾಮ ಪದ್ಧತಿ (೧೯೯೭)
ದೇಶದಲ್ಲಿ ಪ್ರಚಲಿತವಿರುವ ಪ್ರಣಾಮದ ಕ್ರಮಗಳನ್ನು ಸೊಗಸಾಗಿ ವಿವರಿಸಿರುವ ಗ್ರಂಥ. ಸ್ವಂತಿಕೆಯ ಚಿಂತನೆ, ಜೀವನ ದೃಷ್ಟಿಕೋನಗಳು ಬೆರೆತಿರುವ ಅಪರೂಪದ ಕೃತಿಯಿದು. ಇದರಲ್ಲಿ ೪ ವರ್ಣಚಿತ್ರಗಳು ಮತ್ತು ೯೪ ಕಪ್ಪು-ಬಿಳುಪಿನ ಚಿತ್ರಗಳಿವೆ. (ಕಲ್ಪತರು ರಿಸರ್ಚ್ ಅಕಾಡೆಮಿ, ಬೆಂಗಳೂರು. ಪುಟಗಳು: ೨೧೦)
೭. ದೇವತಾರೂಪ ಮಾಲಾ (೨೦೦೩)
ದೇವತಾಧ್ಯಾನ ಮಾಲಿಕಾ ಸರಣಿಯಲ್ಲಿ ಪ್ರಕಟವಾದ ನಾಲ್ಕು ಸಂಪುಟಗಳಿವು. (ಕಲ್ಪತರು ರಿಸರ್ಚ್ ಅಕಾಡೆಮಿ, ಬೆಂಗಳೂರು. ಪುಟಗಳು: ೧೧೩೩)
೮. ಧ್ಯಾನ ಶತಕ (೨೦೦೨)
ಕಲ್ಪತರು ರಿಸರ್ಚ್ ಅಕಾಡೆಮಿ, ಬೆಂಗಳೂರು.
೯. ದ ಫೋಕ್ ಆರಿಜಿನ್ಸ್ ಆಫ್ ಇಂಡಿಯನ್ ಟೆಂಪಲ್ಸ್ (೧೯೮೦)
ಹೆಸರೇ ಸೂಚಿಸುವಂತೆ ನಾಡಿನ ದೇಗುಲಗಳು, ಗುಡಿಗಳ ಹುಟ್ಟಿಗೆ ಕಾರಣರಾದ, ಜಾನಪದೀಯ ನೆಲೆಗಳ ಸೊಗಸಾದ ಶೋಧನೆಯ ಕೃತಿ. ಸಾಂಸ್ಕೃತಿಕ, ಮಾನವಶಾಸ್ತ್ರ, ಸಮಾಜಶಾಸ್ತ್ರ, ಆಗಮಗಳ ಅಧ್ಯಯನಕ್ಕೆ ವಿಶೇಷ ಸೇರ್ಪಡೆಯಾಗಬಲ್ಲ ಕೃತಿ. (ಐ.ಬಿ.ಎಚ್., ಬೆಂಗಳೂರು. ಪು. ೮+೧೦೮.)
೧೦. ಹ್ಯೂಮನ್ ವ್ಯಾಲ್ಯೂಸ್ ಇನ್ ಟಿಬೆಟನ್ ಟ್ರೆಡಿಶನ್ (೧೯೯೮)
ಭಾರತೀಯ ವಿದ್ಯಾಭವನವರು ಮಾನವ ಮೌಲ್ಯಗಳನ್ನು ಕುರಿತು ಹೊರತಂದ ಸರಣಿಯಲ್ಲಿ ಪ್ರಕಟ. ತಂತ್ರ, ಬೌದ್ಧ ದರ್ಶನದಿಂದ ಬೆಳಕು ಕಂಡುಕೊಂಡ ಟಿಬೆಟ್ಟಿನ ಜೀವನಮೌಲ್ಯಗಳ ಮೇಲೆ ಬೆಳಕು ಚೆಲ್ಲುವ ಪುಸ್ತಕ. (ಭಾರತೀಯ ವಿದ್ಯಾ ಭವನ. ಪು. ೧೫೮.)
೧೧. ಐಕಾನ್ಸ್ ಅಂಡ್ ಇಮೇಜಸ್ ಇನ್ ಇಂಡಿಯನ್ ಟೆಂಪಲ್ಸ್ (೧೯೮೧)
ಭಾರತೀಯ ದೇಗುಲ ಪರಂಪರೆಯ ಮೂರ್ತಿಶಿಲ್ಪಗಳನ್ನು ಕುರಿತ ಪುಸ್ತಕ. ಆಗಮ ಗ್ರಂಥಗಳನ್ನು ಅವಲಂಬಿಸಿ ಬರೆದ ಕೃತಿ. (ಐ.ಬಿ.ಎಚ್., ಬೆಂಗಳೂರು. ಪು. ೮+೧೧೬.)
೧೨. ಇಂಡಿಯನ್ ಐಕನೋಗ್ರಫಿ (೧೯೮೧)
ಭಾರತೀಯ ಮೂರ್ತಿ ಶಿಲ್ಪಶಾಸ್ತ್ರ ಮತ್ತು ಶಿಲ್ಪಿಗಳಿಗೆ ಸೂಚನೆಗಳಿರುವ ಕೃತಿ. (ಐ.ಬಿ.ಎಚ್., ಬೆಂಗಳೂರು, ಪು. ೮+೧೩೨.)
೧೩. ಇಂಡಿಯನ್ ಟೆಂಪಲ್ ಟ್ರೆಡಿಶನ್ (೧೯೯೭)
೧೪. ಲಲಿತ ಅರ್ಚನ ಚಂದ್ರಿಕ (೨೦೦೪, ೨೦೧೨)
ಇದರ ಉಪಶೀರ್ಷಿಕೆ ಹೀಗಿದೆ: Hymn to Lalita, form of Tripurasundari, Hindu deity for worship and associated rituals. ಇಂಗ್ಲಿಷಿನಲ್ಲಿರುವ ಗ್ರಂಥ. ತ್ರಿಪುರಸುಂದರಿಯ ರೂಪವಾದ ಲಲಿತೆಯ ಪೂಜಾವಿಧಾನ ಕುರಿತ ಕೃತಿ. ವೈದಿಕ ಸಮ್ಮತ ತಂತ್ರಸAಪ್ರದಾಯದಲ್ಲಿ ಲಲಿತೆಗೆ ವಿಶೇಷ ಸ್ಥಾನವಿದೆ.
ಕಲ್ಪತರು ರಿಸರ್ಚ್ ಅಕಾಡೆಮಿ, ಬೆಂಗಳೂರು, ೨೦೦೪. ಪುಟಗಳು: ೧೨೪ (ಜೊತೆಗೆ ೧೦ ಕಪ್ಪು-ಬಿಳುಪಿನ ಚಿತ್ರಗಳಿವೆ). ಎರಡನೆ ಬಾರಿಗೆ ಈ ಗ್ರಂಥ ಡಿವೈನ್ ಬುಕ್ಸ್ನಿಂದ ಮರುಮುದ್ರಣಗೊಂಡಿತು.
೧೫. ಮಂಡಲಾಸ್ ಇನ್ ಟೆಂಪಲ್ ವರ್ಶಿಪ್ (೧೯೮೮)
ದೇವಾಲಯ ಆರಾಧನೆಯಲ್ಲಿ ಯಂತ್ರಗಳು ಮತ್ತು ಮಂಡಲಗಳನ್ನು ಕುರಿತ ಸರಣಿಯಲ್ಲಿ ಪ್ರಕಟವಾಗಿರುವಂಥ ಗ್ರಂಥ. ಎರಡು ಸಂಪುಟಗಳಿವೆ. ಮಂಡಲಗಳನ್ನು ಕುರಿತಂತೆ ಅಪರೂಪ ಕೃತಿಮಾಲೆ.
೧೬. ಮೆಡಿಟೇಷನ್ಸ್ ಆನ್ ಲಲಿತಾ ಸಹಸ್ರನಾಮ (೧೯೯೦, ೨೦೧೩)
ಕಲ್ಪತರು ರಿಸರ್ಚ್ ಅಕಾಡೆಮಿ, ಬೆಂಗಳೂರು ಮತ್ತು ಡಿವೈನ್ ಬುಕ್ಸ್
೧೭. ನವಗ್ರಹ ಕೋಶ (೧೯೯೫, ೨೦೦೫)
ಎರಡು ಸಂಪುಟಗಳಲ್ಲಿ ಪ್ರಕಟವಾಗಿದೆ. ನವಗ್ರಹಗಳನ್ನು ಕುರಿತು ವಿಸ್ತಾರವಾದ ಮಾಹಿತಿ ಇದೆ.
ಕಲ್ಪತರು ರಿಸರ್ಚ್ ಅಕಾಡೆಮಿ, ಬೆಂಗಳೂರು ಮತ್ತು ಐ.ಬಿ.ಸಿ. ಪುಟಗಳು: ೩೭೫.
೧೮. ಶ್ರೀಚಕ್ರ, ಇಟ್ಸ್ ಯಂತ್ರ, ತಂತ್ರ ಅಂಡ್ ಮಂತ್ರ (೧೯೮೩, ೨೦೦೮)
ಕಲ್ಪತರು ರಿಸರ್ಚ್ ಅಕಾಡೆಮಿ, ಬೆಂಗಳೂರು ಮತ್ತು ಐ.ಬಿ.ಸಿ. ಪುಟಗಳು: ೧೨೨.
೧೯. ಶ್ರೀಚಕ್ರ (೧೯೮೨, ೧೯೮೯)
ಕಲ್ಪತರು ರಿಸರ್ಚ್ ಅಕಾಡೆಮಿ, ಬೆಂಗಳೂರು ಮತ್ತು ಐ.ಬಿ.ಸಿ. ಪುಟಗಳು: ೯೬.
೨೦. ಶ್ರೀವಿದ್ಯಾಕೋಶ (೨೦೦೦, ೨೦೦೫)
ವೈದಿಕ ತಂತ್ರ ಸಾಧನೆಯ ಪ್ರಮುಖಧಾರೆಯಾದ ಶ್ರೀವಿದ್ಯಾ ಉಪಾಸನೆಯನ್ನು ಕುರಿತು ಅಪಾರ ಮಾಹಿತಿಗಳಿರುವ ಗ್ರಂಥ. (ಕಲ್ಪತರು ರಿಸರ್ಚ್ ಅಕಾಡೆಮಿ, ಬೆಂಗಳೂರು ಮತ್ತು ಐ.ಬಿ.ಸಿ. ಪುಟಗಳು: ೩೯೯.)
೨೧. ತಂತ್ರ ಶ್ರೀಚಕ್ರ (೧೯೮೩, ೨೦೦೮)
ಇನ್ನೊಂದು ಹೆಸರು ಭಾವನೋಪನಿಷತ್. ವೈದಿಕ ಸಾಹಿತ್ಯದಲ್ಲಿ ಅಥರ್ವವೇದದಲ್ಲಿ ದಶವಿದ್ಯೆಗಳ ಪ್ರಸ್ತಾಪವಿದೆ. ಇವುಗಳನ್ನು ಅಸಾಧಾರಣ ವಿದ್ಯೆಗಳಾದ ಮಹಾವಿದ್ಯೆಗಳು, ಸಾಮಾನ್ಯ ವಿದ್ಯೆಗಳಾದ ವಿದ್ಯೆಗಳು ಮತ್ತು ಸಿದ್ಧವಿದ್ಯೆಗಳು ಎಂದು ಮೂರು ವಿಭಾಗ ಮಾಡಲಾಗಿದೆ. ಸಾಮಾನ್ಯ ವಿದ್ಯೆಗಳ ಪೈಕಿ ಮೊದಲನೆಯದೇ ಶ್ರೀವಿದ್ಯೆ. ಇದೇ ಷೋಡಶಿವಿದ್ಯೆ. ಶ್ರೀಚಕ್ರವು ಶ್ರೀವಿದ್ಯೆಯ ಸಂಕೇತವಾಗಿದೆ. ಇದು ಮಹಾತಾಯಿಯ ಬಳಿ ಸಾರುವ ದಾರಿಯಾಗಿದೆ. ಶ್ರೀಚಕ್ರದ ಸಾಂಕೇತಿಕತೆ, ಶ್ರೀಚಕ್ರಾರ್ಚನೆಯಲ್ಲಿ ಅಡಕವಾಗಿರುವ ಆಚರಣೆಗಳು ಹಾಗೂ ಗ್ರಂಥಗಳ ಹಿನ್ನೆಲೆಯನ್ನು ಈ ಕೃತಿಯಲ್ಲಿ ವಿವರಿಸಲಾಗಿದೆ. ಸಂಬAಧಿಸಿದ ಆಕರಗಳನ್ನೂ ನೀಡಲಾಗಿದೆ. (ಶ್ರೀ ಸತ್ಗುರು ಪಬ್ಲಿಕೇಷನ್, ನವದೆಹಲಿ.)
೨೨. ಮಂತ್ರ, ಯಂತ್ರ, ತಂತ್ರ ಸೈಕಾಲಜಿ (೧೯೭೯, ೨೦೦೮)
ತಂತ್ರದ ಮನಶ್ಶಾಸ್ತ್ರ ಕುರಿತ ಕೃತಿ. (ಆರ್ನಾಲ್ಡ್-ಹೆನಿಮನ್, ನವದೆಹಲಿ. ಪುಟಗಳು: ೯೯.)
೨೩. ತಾಂತ್ರಿಕ ಟ್ರೆಡಿಶನ್ಸ್ ಇನ್ ಟಿಬೆಟ್ (೨೦೦೨)
ತಂತ್ರ ಮತ್ತು ತಾಂತ್ರಿಕ ಬೌದ್ಧಧರ್ಮಕ್ಕೆ ಸಂಬಂಧಿಸಿದ ಕೃತಿ. (ಬಿಬ್ಲ್ಲಿಯೋಥಿಕಾ ಇಂಡೋ-ಬುದ್ಧಿಕಾ ಸರಣಿಯ ೨೩೦ನೇ ಪ್ರಕಟಣೆ. ಶ್ರೀ ಸತ್ಗುರು ಪಬ್ಲಿಕೇಷನ್ಸ್, ನವದೆಹಲಿ. ಪುಟಗಳು: ix+೩೪೩.)
೨೪. ಟಿಬೆಟನ್ ತಾಂತ್ರಿಕ ಟ್ರೆಡಿಶನ್ (೧೯೭೭)
ಆರ್ನಾಲ್ಡ್-ಹೆನಿಮನ್, ನವದೆಹಲಿ. ಪುಟಗಳು: ೧೩೪.
೨೫. ಟಿಬೆಟನ್ ಮೆಡಿಟೇಷನ್: ಥಿಯರಿ ಅಂಡ್ ಪ್ರಾಕ್ಟಿಸ್ (೧೯೭೯)
ಗುಲಾಬ್ ವಜಿರಾನಿ / ಆರ್ನಾಲ್ಡ್ – ಹೆನಿಮನ್, ನವದೆಹಲಿ.
೨೬. ಯಂತ್ರಾಸ್ (೧೯೯೮)
೨೭. ಯೋಗ ಅಂಡ್ ತಂತ್ರ ಇನ್ ಇಂಡಿಯ ಅಂಡ್ ಟಿಬೆಟ್ (ಭಾಗ ೧, ೨),
ಕಲ್ಪತರು ರಿಸರ್ಚ್ ಅಕಾಡೆಮಿ, ಬೆಂಗಳೂರು
೨೮. ಧ್ಯಾನ ಅಂಡ್ ಜೆನ್ (೨೦೦೫)
ಕಲ್ಪತರು ರಿಸರ್ಚ್ ಅಕಾಡೆಮಿ, ಬೆಂಗಳೂರು
೨೯. ದಿ ಹಿಲ್-ಶ್ರೆöÊನ್ ಆಫ್ ವೆಂಗಡA – ಆರ್ಟ್, ಆರ್ಕಿಟೆಕ್ಚರ್ ಅಂಡ್ ಆಗಮ ಆಫ್ ತಿರುಮಲ ಟೆಂಪಲ್ (೧೯೯೩)
ಕನ್ನಡದ ‘ತಿರುಪತಿ ತಿಮ್ಮಪ್ಪ’ ಕೃತಿಯ ಇಂಗ್ಲಿಷ್ ರೂಪ. ಅದರ ವಿಸ್ತೃತರೂಪ ಇದು. ಕನ್ನಡ ಪುಸ್ತಕದಲ್ಲಿರುವುದಕ್ಕಿಂತ ಹೆಚ್ಚಿನ ಮಾಹಿತಿ, ಚಿತ್ರಗಳು ಸೇರಿಕೊಂಡಿವೆ.
ಕಲ್ಪತರು ರಿಸರ್ಚ್ ಅಕಾಡೆಮಿ, ಬೆಂಗಳೂರು. ಪುಟಗಳು: ೩೨೦.
೩೦. ದಿ ಹಿಲ್-ಶ್ರೈನ್ ಆಫ್ ತಿರುಪತಿ (೨೦೧೧)
ಪೂರ್ವ ಘಟ್ಟಗಳ ಶೇಷಾಚಲ ಪರ್ವತಮಾಲೆಗೆ ಸೇರಿರುವ ತಿರುಮಲ ಬೆಟ್ಟಗಳ ಬುಡದಲ್ಲಿರುವ ದೇಗುಲದ ಸುತ್ತ ಹಬ್ಬಿರುವ ಕತೆ, ಐತಿಹ್ಯಗಳ ಪುನಾರಚನೆ ಈ ಕೃತಿಯಲ್ಲಿದೆ.
೩೧. ವಾಸ್ತುಶಿಲ್ಪ ಕೋಶ (೨೦೦೧-೦೩)
ಹಿಂದೂ ದೇವಾಲಯ ಮತ್ತು ವಾಸ್ತು ಕುರಿತಂತೆ ಮೂರು ಸಂಪುಟಗಳಲ್ಲಿರುವ ವಿಶ್ವಕೋಶ. (ಸುರಮಾ ಪ್ರಕಾಶನ, ಬೆಂಗಳೂರು.)
ರಾಮಚಂದ್ರರಾಯರ ಸಮಗ್ರ ಬರಹಗಳನ್ನು ಒಂದು ಕಡೆ ತಂದರೆ ಸುಮಾರು ನೂರು ಸಂಪುಟಗಳೇ ಆಗಬಹುದು. ಪ್ರಾಚೀನ ಭಾರತದಲ್ಲಿ ಮಹಾನ್ ಕೋಶಕಾರರು, ನಿಘಂಟುಕಾರರು ಆಗಿಹೋಗಿದ್ದಾರೆ. ಬ್ರಿಟಾನಿಯಾ ಮತ್ತು ಅಮೆರಿಕಾನಾ ವಿಶ್ವಕೋಶಗಳೇ ಜಗತ್ತಿನ ಮೊದಲ ಮತ್ತು ಕೊನೆಯ ವಿಶ್ವಕೋಶಗಳಲ್ಲ. ಆ ವಿಶ್ವಕೋಶಗಳು ಹಲವರು ವಿದ್ವಾಂಸರು ಮತ್ತು ಅರೆ ಬರೆ ವಿದ್ವಾಂಸರ ಮತ್ತು ವಸಾಹತುಶಾಹೀ ಕಾಲದ ಧೋರಣೆ ಉಳ್ಳ ಮನಸ್ಸುಗಳ ರಚನೆಯಾಗಿವೆ ಎಂದರೆ ಯಥಾರ್ಥವಾಗುತ್ತದೆ. ಆದರೆ ರಾಯರ ಕೆಲಸ ಹಾಗಲ್ಲ. ಜೀವನಮಾನ ಪೂರ್ತಿ ಕುಳಿತು ಓದಿ ಮುಗಿಸಲು ಆಗದಷ್ಟು, ಓದಿದರೆ ಜೀವ ಕಳಿತು ಮಾಗುವಂತಹ ತಂತ್ರಾಗಮ ಸಾಹಿತ್ಯವನ್ನು ರಾಯರು ತಮ್ಮ ಉಳಿದ ಬರೆಹಗಳ ನಡುವೆಯೇ ಅದು ಹೇಗೆ ಮಾಡಿದರೋ ಎಂದು ನನಗೆ ಸದಾ ನಿಬ್ಬೆರಗು. ನಮ್ಮ ಕಾಲದ ಲೆಜೆಂಡ್ ಆದ ರಾಯರ ದಿವ್ಯಸ್ಮöÈತಿಗೆ ನನ್ನ ಅಂಜಲಿಬದ್ಧ ಪ್ರಣಾಮಗಳು. ರಾಯರ ಸಾಹಿತ್ಯ ಓದಿ ಆಸ್ವಾದಿಸುವ ರಸಿಕರ ಸಂತತಿ ಕನ್ನಡನಾಡಿನಲ್ಲಿ ಸಾವಿರವಾಗಲಿ. ಅವರ ಸಮಗ್ರ ಸಾಹಿತ್ಯ ಆದಷ್ಟು ಬೇಗ ಬರಲಿ.