ಜಲೌಕ ಮಹಾರಾಜನ ಮನಸ್ಸು ಅಲ್ಲೋಲಕಲ್ಲೋಲವಾಗಿತ್ತು. ಪ್ರಚಂಡ ಬಿರುಗಾಳಿಯು ಜಲಧಿಯಲ್ಲಿ ಎಬ್ಬಿಸುವ ಎತ್ತರದ ಅಲೆಗಳಂತೆ ಆಗಿತ್ತು ಅವನ ಮನಸ್ಸು. ಆವೇಶಕ್ಕೆ ಒಳಗಾದ ಮನುಷ್ಯನ ವಿಚಕ್ಷಣೆ ಕುಸಿದು ಅವನು ಪ್ರಾಣಿಗಳಂತೆ ವಿಚಾರಹೀನನಾಗಿ ವರ್ತಿಸುತ್ತಾನೆ ಎಂಬ ಮಾತು ಸುಳ್ಳಲ್ಲ.
ಈ ರಾತ್ರಿ ನಿದ್ರೆ ಸುಳಿಯುವ ಸಂಭವ ಇರಲಿಲ್ಲ. ಕಣ್ಣುಮುಚ್ಚಿದಾಗಲೂ ತೆರೆದಾಗಲೂ ಜಲೌಕ ಮಹಾರಾಜನ ಕಣ್ಣಮುಂದೆ ಆ ದೃಶ್ಯವೇ ಕಾಣಿಸುತ್ತಿತ್ತು. ಅಮಾಯಕ ಪ್ರಜೆಗಳ ಆರ್ತನಾದಗಳು ತೂಫಾನಿನಂತೆ ಕಿವಿಗೆ ಕೇಳಿಸುತ್ತಲೇ ಇದ್ದವು.
ತಾನು ಮಾಡಿದುದು ಸರಿಯೇ?
ಮನಸ್ಸು ಹೌದೆಂದರೂ ಮೆದುಳು ಅಲ್ಲವೆನ್ನುತ್ತಿದೆ.
“ಮಹಾರಾಜ! ಅನಿತ್ಯವಾದ ಈ ಜಗತ್ತು ಪರಿವರ್ತನಶೀಲವಾದುದು. ಇಲ್ಲಿ ಇರುವುದೆಲ್ಲ ಭಗವಂತನಿಂದ ಆವೃತವಾದುದು. ಆ ಸೃಷ್ಟಿಕರ್ತನಿಂದ ಉಗಮಗೊಂಡಿರುವ ಪ್ರಪಂಚ ಮತ್ತೆ ಅವನಲ್ಲಿ ಲೀನವಾಗುವಂಥದೇ. ಹಾಗೆಯೇ ನಮ್ಮ ಮನಸ್ಸಿನಿಂದ ಬಹಿರ್ಗತವಾದ ಪ್ರತಿ ಆಲೋಚನೆಯೂ ಬೆಳೆಯುತ್ತ ಹೋಗಿ ಮತ್ತೆ ನಮ್ಮಲ್ಲಿಗೆ ಹಿಂದಿರುಗುತ್ತದೆ. ಆದುದರಿಂದ ದ್ವೇಷದಿಂದ ಪ್ರೇರಿತರಾಗಿ ಯಾವುದೇ ಕೆಲಸವನ್ನು ಮಾಡಬಾರದು. ಏಕೆಂದರೆ ಆ ದ್ವೇಷವೂ ದ್ವಿಗುಣೀಕೃತವಾಗಿ ಮತ್ತೆ ನಮ್ಮಲ್ಲಿಗೇ ಮರಳುತ್ತದೆ. ಒಂದೊಂದು ಚರ್ಯೆಗೂ ಒಂದು ಪ್ರತಿಚರ್ಯೆ ತಪ್ಪದು.”
ಸಿದ್ಧಗುರು ಹೇಳಿದ್ದ ಈ ಮಾತುಗಳು ಜಲೌಕನ ಮನಸ್ಸಿನಲ್ಲಿ ಮಾರ್ದನಿಸುತ್ತಿದ್ದವು.
ಆದರೆ ನಾನು ದ್ವೇಷದಿಂದ ಕೆಲಸ ಮಾಡಲಿಲ್ಲವಲ್ಲ? ನಾನು ಕರ್ತವ್ಯವೆಂದುಕೊಂಡ ನನ್ನ ವಿಧ್ಯುಕ್ತ ಧರ್ಮವನ್ನಷ್ಟೇ ಆಚರಿಸಿದೆ. ಆದರೂ ನನ್ನ ಚರ್ಯೆಗೆ ಪ್ರತಿಚರ್ಯೆ ತಪ್ಪುವುದಿಲ್ಲವೆ? ಆ ಪ್ರತಿಚರ್ಯೆಯಿಂದಾಗುವ ನಷ್ಟ ನನಗಷ್ಟೇ ಆದರೆ ಪರವಾಗಿಲ್ಲ. ಆದರೆ ಅದು ಪ್ರಜೆಗಳ ಮೇಲೆ ಪ್ರಭಾವ ಬೀರಿದರೆ?
ಇದೀಗ ನಾನು ಏನು ಮಾಡಬೇಕೋ, ನಾನು ಮಾಡಿದುದು ದೋಷವೇ ಆಗಿದ್ದರೆ ಅದರ ದುಷ್ಫಲವನ್ನು ಹೇಗೆ ನಿವಾರಿಸಿಕೊಳ್ಳಬೇಕೋ ತಿಳಿಯುತ್ತಿಲ್ಲ. ನನಗೆ ಸಲಹೆ ನೀಡಲು ಸಿದ್ಧಪುರುಷನೂ ಈಗ ಸಮೀಪದಲ್ಲಿ ಇಲ್ಲ.
ದೇಶದಲ್ಲಿ ಸನಾತನಧರ್ಮದ ಸಂಸ್ಥಾಪನೆಗೆ ಕಂಕಣಬದ್ಧನಾಗಿರುವ ಸಿದ್ಧಪುರುಷನನ್ನು ಕಶ್ಮೀರದಲ್ಲಿಯೆ ಇರುವಂತೆ ಕೋರಲು ಜಲೌಕ ಮಹಾರಾಜನಿಗೆ ಬಾಯಿ ಬರಲಿಲ್ಲ. ಮಹಾರಾಜನು ಸನಾತನ ಧರ್ಮವನ್ನು ಸ್ವೀಕರಿಸಿದ ಮೇಲೆ ಸಿದ್ಧಪುರುಷನು ಪ್ರಾತಿಷ್ಪುರದ ಕಡೆಗೆ ಹೊರಟುಹೋದ. ತುರ್ತಾಗಿ ಮರಳುವಂತೆ ದೂತರ ಮೂಲಕ ಜಲೌಕನು ಕೋರಿಕೆ ಕಳಿಸಿದ. ಆದರೆ ಸದ್ಯಕ್ಕೆ ತನ್ನ ಸ್ಥಿತಿ ಏನು? ಎಂದು ಮಹಾರಾಜನು ಬಾಧಿತನಾಗಿದ್ದ.
ಮುಗಿಲಿನತ್ತ ನೋಟ ಬೀರಿದ, ಮಹಾರಾಜ. ತಾರೆಗಳು ಕೆಂಪಗೆ ಕಾಣಿಸಿದವು. ಅವು ನನ್ನ ನಡವಳಿಕೆಯಿಂದ ಲಜ್ಜೆಗೊಂಡು ಕೆಂಪಾಗಿದ್ದವೆ? ಅಥವಾ ಕೋಪದಿಂದ ಅವುಗಳ ಕಣ್ಣು ಕೆಂಪೇರಿದೆಯೆ? – ಎಂದೆಲ್ಲ ಮಹಾರಾಜನ ಮನಸ್ಸಿನ ಲಹರಿ ಹರಿದಿತ್ತು.
ಜಲೌಕ ಮಹಾರಾಜನು ಅಶೋಕನ ಸುಪುತ್ರ. ಜಲೌಕನಿಗೆ ಅದ್ಭುತ ಶಕ್ತಿಗಳು ಇದ್ದವೆಂದು ಪ್ರತೀತಿ ಹರಡಿತ್ತು. ಅವು ಜಲಸ್ತಂಭನವಿದ್ಯೆಯನ್ನು ಬಳಸಿ ನೀರನ್ನು ಸ್ತಬ್ಧಗೊಳಿಸಿ ನಾಗಕನ್ಯೆಯರೊಡನೆ ವಿಹರಿಸಿ ಬಂದಿದ್ದನೆಂದು ಜನ ಹೇಳುತ್ತಿದ್ದರು. ಪ್ರಾಣಿದಯೆಯಿಂದ ಕುದುರೆಸವಾರಿಯನ್ನೇ ಮಹಾರಾಜನು ನಿಷೇಧಿಸಿ ದಯಾಶೀಲತೆಯನ್ನು ಮೆರೆದಿದ್ದುದರಿಂದ ಅವನನ್ನು ನಾಗರಾಜನೇ ಬೇಕಾದೆಡೆಗೆ ಒಯ್ಯುವ ಪರಿಚರ್ಯೆ ಮಾಡುತ್ತಿದ್ದ.
ಗುರುವಿಗೆ ಮಾತುಕೊಟ್ಟಿದ್ದಂತೆ ಜಲೌಕ ಮಹಾರಾಜನು ಕನ್ಯಾಕುಬ್ಜದಿಂದ ಆರಂಭಿಸಿ ಕಶ್ಮೀರೇತರ ಭಾಗಗಳ ಮೇಲೆ ವಿಜಯ ಸಾಧಿಸಿ ಅಲ್ಲೆಲ್ಲ ಸನಾತನಧರ್ಮದ ಪುನಃಸ್ಥಾಪನೆ ಮಾಡಿದ. ಸಿದ್ಧಪುರುಷನೇ ಸೂಚಿಸಿದ್ದಂತೆ ಜಲೌಕನು ಆಗ್ಗೆ ಸಾವಿರದೈನೂರು ವರ್ಷಕ್ಕೂ ಹಿಂದೆ ಯುಧಿಷ್ಟಿರ ಮಹಾರಾಜನು ರಾಜ್ಯಭಾರ ನಡೆಸಿದ್ದ ರೀತಿಯನ್ನು ನೆನಪಿಗೆ ತರುವಂತೆ ಧರ್ಮಬದ್ಧವೂ ಪ್ರಜಾಹಿತಕಾರಿಯೂ ಆದ ರಾಜ್ಯಪಾಲನ ವ್ಯವಸ್ಥೆಗಳನ್ನು ಮಾಡಿದ. ಜಲೌಕನು ವೃದ್ಧಿಗೊಳಿಸಿದ್ದ ಧನಸಮೃದ್ಧಿಯಿಂದಾಗಿ ಕಶ್ಮೀರಮಂಡಲವೆಲ್ಲ ಸಂಪದ್ಭರಿತವಾಗಿತ್ತು. ರಾಜ್ಯದ ಆಡಳಿತವು ಧರ್ಮಾಧ್ಯಕ್ಷ, ಧನಾಧ್ಯಕ್ಷ, ಕೋಶಾಧ್ಯಕ್ಷ, ಸೇನಾಪತಿ, ರಾಜದೂತರು, ಪುರೋಹಿತರು, ಜ್ಯೋತಿಷವೇತ್ತರು – ಹೀಗೆ ಏಳು ಪ್ರಮುಖ ಅಧಿಕಾರಿಗಳಲ್ಲಿ ವಿಂಗಡಣೆಯಾಗಿತ್ತು. ಆಗಿನ ಕಾಲಕ್ಕೆ ಇದೆಲ್ಲ ರಾಜ್ಯಾಂಗವ್ಯವಸ್ಥೆಯಲ್ಲಿ ಹೊಸ ಆವಿಷ್ಕರಣ ಎಂದೆನಿಸಿತ್ತು. ಎಲ್ಲ ಕೆಲಸಗಳು ರಾಜಾಜ್ಞೆಯಂತೆ ನಡೆಯುತ್ತಿದ್ದ ಹಿಂದಿನ ಪದ್ಧತಿಯನ್ನು ಬಿಟ್ಟು ರಾಜ್ಯಕಲಾಪಗಳನ್ನು ಸುಶಿಕ್ಷಿತರೂ ಧರ್ಮನಿರತರೂ ನಿಪುಣರೂ ಆದ ನಿರ್ವಾಹಕರ ಕೈಗೆ ವಹಿಸಲಾಗಿತ್ತು. ಹೀಗೆ ಆಡಳಿತಕ್ಕೂ ಜನತೆಗೂ ನಡುವಣ ಅಂತರ ಕಡಮೆಯಾಗಿ ಸಾಮರಸ್ಯ ಏರ್ಪಟ್ಟಿತ್ತು. (ರಾಜ್ಯವ್ಯವಹಾರ ವ್ಯವಸ್ಥೆಯ ಮೊದಲ ಸಂಸ್ಕಾರಕರ್ತನೆಂದು ಕ್ರಿ.ಪೂ. ೧೨ನೇ ಶತಮಾನದ ಹಮ್ಮುರಬಿಯನ್ನು ಚರಿತ್ರಕಾರರು ಉಲ್ಲೇಖಿಸುತ್ತಾರೆ. ಆದರೆ ಅದಕ್ಕು ಹಿಂದೆ ಕ್ರಿ.ಪೂ. ೧೫ನೇ ಶತಾಬ್ದದಲ್ಲಿಯೆ ಮೇಲಿನಂತಹ ಅಪೂರ್ವ ಆವಿಷ್ಕಾರಗಳನ್ನು ಮಾಡಿದ್ದ ಜಲೌಕನನ್ನು ಇತಿಹಾಸಕಾರರು ಮರೆತಿದ್ದಾರೆ.)
ಜಲೌಕ ಮಹಾರಾಜನ ಧರ್ಮಪತ್ನಿ ಈಶಾನದೇವಿಯೂ ರಾಣಿವಾಸ ಮೊದಲಾದೆಡೆಗಳಲ್ಲಿ ದಕ್ಷ ವ್ಯವಸ್ಥೆಗಳನ್ನು ಜಾರಿಗೆ ತಂದಿದ್ದಳು.
ಜಲೌಕನು `ವಾರಚಾಲ’ ಮೊದಲಾದ ಎಷ್ಟೋ ಅಗ್ರಹಾರಗಳನ್ನು ಸ್ಥಾಪಿಸಿದುದಲ್ಲದೆ ಸಿದ್ಧಪುರುಷನಿಗೆ ಮಾತು ಕೊಟ್ಟಿದ್ದಂತೆ ಶ್ರೀನಗರದಲ್ಲಿ ಜೇಷ್ಠರುದ್ರನ ಪ್ರತಿಷ್ಠೆ ಮಾಡಿಸಿ ಪ್ರತಿದಿನ ಜ್ಯೇಷ್ಠೇಶನ ಆರಾಧನೆ ಮಾಡುತ್ತಿದ್ದ.
ಜಲೌಕ ಮಹಾರಾಜನು ಸನಾತನಧರ್ಮವನ್ನು ಸ್ವೀಕರಿಸಿದುದರಿಂದ ಅಸಮಾಧಾನಗೊಂಡ ಹಲವಾರು ಬೌದ್ಧರು ಮಹಾರಾಜನ ದೈವಭಕ್ತಿಯನ್ನು ಅವಹೇಳನ ಮಾಡುತ್ತಿದ್ದರು. ಆದರೆ ಅಂತಹವರ ದುಷ್ಪ್ರವೃತ್ತಿಗೆ ಕಡಿವಾಣ ಬೀಳುವ ಪ್ರಸಂಗವೊಂದು ನಡೆಯಿತು.
ಜಲೌಕ ಮಹಾರಾಜನು ರುದ್ರದೇವನ ಪೂಜೆಗೆ ತೊಡಗುವುದಕ್ಕೆ ಮುಂಚೆ ಪುಷ್ಕರಣಿಯಲ್ಲಿ ಸ್ನಾನ ಮಾಡಿ ಶುಚಿರ್ಭೂತನಾಗುವುದು ವಾಡಿಕೆಯಾಗಿತ್ತು. ಅದೊಂದು ದಿನ ರಾಜಕಾರ್ಯಗಳ ಒತ್ತಡದ ನಡುವೆ ಸ್ನಾನದ ಕಡೆಗೆ ಗಮನಹರಿದಿರಲಿಲ್ಲ. ಅನಂತರ ಈ ಲೋಪ ನೆನಪಾದೊಡನೆ ಆತುರಾತುರವಾಗಿ ಸೋದರತೀರ್ಥದೆಡೆಗೆ ಸಾಗಿದ. ಸಮಯ ಮೀರುತ್ತಿತ್ತು. ಮುಖ್ಯ ಪೂಜೆಯ ಹೊತ್ತು ಸಮೀಪಿಸುತ್ತಿತ್ತು. ಅದರಿಂದ ಆಂದೋಲನಗೊಂಡು ಮಹಾರಾಜನು ದೈವಸ್ಮರಣೆ ಮಾಡುತ್ತ ವೇಗವಾಗಿ ಹೆಜ್ಜೆ ಹಾಕಿದ. ಜೊತೆಯಲ್ಲಿದ್ದ ಪರಿಚಾರಕರೂ ಪ್ರಜೆಗಳೂ ಕೂಡಾ ಹೆಜ್ಜೆಯನ್ನು ತೀವ್ರಗೊಳಿಸಿದರು.
ಆಗ ಒಂದು ಅದ್ಭುತ ನಡೆಯಿತು.
ರುದ್ರದೇವನನ್ನು ಧ್ಯಾನಿಸುತ್ತ ನಡೆದಿದ್ದ ಮಹಾರಾಜನ ಕಾಲಿಗೆ ಒದ್ದೆಯ ಅನುಭವವಾಯಿತು. ಅಚ್ಚರಿಯಿಂದ ದಿಟ್ಟಿಸಿ ನೋಡಿದ. ಅದುವರೆಗೆ ನಿರ್ಜನವಾಗಿದ್ದ ಪ್ರದೇಶದಿಂದ ಜುಳುಜುಳು ನೀರು ಚಿಮ್ಮತೊಡಗಿತ್ತು. ತನ್ನ ಪೂಜೆಗೆ ಬರುವಲ್ಲಿ ಮಹಾರಾಜನ ಕಡೆಯಿಂದ ವಿಳಂಬವಾಗಿದ್ದುದನ್ನು ಸಹಿಸಲಾಗದೆಂಬಂತೆ ರುದ್ರದೇವನು ತನ್ನ ಜಟಾಜೂಟದಿಂದ ಗಂಗೆಯನ್ನು ಇಲ್ಲಿಗೆ ಹರಿಸಿದ್ದನೆ?
ಪ್ರಜೆಗಳೆಲ್ಲ ಪರವಶರಾದರು. ಜಲೌಕ ಮಹಾರಾಜನ ಆನಂದಕ್ಕೆ ಪಾರವಿಲ್ಲದಾಯಿತು. ತನ್ನ ಬಗೆಗೆ ಪರಮಶಿವನಿಗೆ ಇಷ್ಟು ಪ್ರೀತಿಯೆ? ತನಗಾಗಿಯೆ ಮತ್ತೊಂದು ಸೋದರತೀರ್ಥವನ್ನು ಸೃಷ್ಟಿಸಿದನೆ? ಈ ಪವಿತ್ರ ವಾರಿಧಾರೆ ತನಗಾಗಿಯೆ?
ಮಹಾರಾಜನು ನಮ್ರತೆಯಿಂದ ಬಾಗಿ ನಮಸ್ಕರಿಸಿದ. ಹೊಸದಾಗಿ ಚಿಮ್ಮಿದ ಜಲಧಾರೆಯನ್ನು ನೋಡಿ ಪ್ರಜೆಗಳಿಗೆ ಸಾಕ್ಷಾತ್ ಪಾರ್ವತೀದೇವಿಯೇ ಪ್ರತ್ಯಕ್ಷವಾದಂತಾಯಿತು.
ನೂತನ ನದಿಯ ಒನಪು-ಒಯ್ಯಾರ ಸ್ವಯಂ ಭಾಗೀರಥಿಯನ್ನೇ ನೆನಪಿಗೆ ತರುತ್ತಿತ್ತು. ಅದು ಒಬ್ಬರಿಗೆ ತ್ರಿಪಥಗೆಯಂತೆ ಕಂಡರೆ, ಇನ್ನೊಬ್ಬರಿಗೆ ದೇವಿ ಪಾರ್ವತಿಯ ಮಂದಹಾಸದಂತೆ ಕಾಣುತ್ತಿತ್ತು. ಮಹಾರಾಜನಿಗೆ ಅದು ರುದ್ರದೇವನ ನರ್ತನದಂತೆ ಕಂಡಿತು. ಆನಂದದಿಂದ ಅದರಲ್ಲಿ ಮೀಯತೊಡಗಿದ.
ಜಟಕಟಾಹಸಂಭ್ರಮ-ಭ್ರಮನ್ನಿಲಿಂಪನಿರ್ಝರೀ-
ವಿಲೋಲವೀಚಿವಲ್ಲರೀ-ವಿರಾಜಮಾನಮೂರ್ಧನಿ |
ಧಗದ್ಧಗದ್ಧಗಜ್ವ್ವಲಲ್ಲಲಾಟಪಟ್ಟಪಾವಕೇ
ಕಿಶೋರ-ಚಂದ್ರಶೇಖರೇ ರತಿಃ ಪ್ರತಿಕ್ಷಣಂ ಮಮ ||
ಮಧುರನಾದದೊಡಗೂಡಿದ ಆ ಜಲತರಂಗಗಳ ಆಂದೋಲನದಲ್ಲಿ ಪ್ರಜೆಗಳು ಮುಳುಗಿಹೋದರು. ಕಶ್ಮೀರದ ರಾಜರು ಶಿವಾಂಶಜರೆಂದು ಪ್ರತೀತಿ ಇದ್ದಿತಷ್ಟೇ. ಆದರೆ ಈಗ ಸಾಕ್ಷಾತ್ ಶಿವನೇ ಕಶ್ಮೀರದ ರಾಜ ಎನಿಸತೊಡಗಿತು ಪ್ರಜೆಗಳಿಗೆ ಆ ಮಹಾದ್ಭುತ ಜಲತಾಂಡವವನ್ನು ನೋಡಿ.
ತಮ್ಮ ಕಣ್ಣೆದುರಿಗೆ ನಡೆದಿದ್ದ ಆ ಅದ್ಭುತವನ್ನು ಕಂಡು ಮೈಮರೆತು ಪ್ರಜೆಗಳು ಶಿವನ ದಿವ್ಯವಿಲಾಸಕ್ಕೆ ನಮಿಸಿದರು.
ಅಂದು ದೈನಂದಿನ ಪೂಜೆ ನಡೆಯುವಾಗ ರುದ್ರದೇವನು ತನಗೆ ತಾನೇ ಪೂಜೆ ಮಾಡಿಕೊಳ್ಳುತ್ತಿದ್ದಾನೆ ಎಂದು ಪುಲಕಿತರಾದರು ಪ್ರಜೆಗಳು. ಪರಶಿವವೈಭವವನ್ನು ಪ್ರತ್ಯಕ್ಷ ನೋಡಿದ ತನ್ನ ಭಾಗ್ಯ ಮೇರೆಯಿಲ್ಲದ್ದೆನಿಸಿತು. ದಿವ್ಯಜ್ಞಾನಪ್ರಾಪ್ತಿಗೆ ವಿಗ್ರಹಾರಾಧನೆ ಮೊದಲ ಸೋಪಾನವೆಂಬುದರ ತಥ್ಯ ಈಗ ಪ್ರಜೆಗಳಿಗೆ ಅನುಭವಕ್ಕೆ ಬಂದಿತ್ತು. ಪೂಜೆ ಮುಗಿಯುವ ವೇಳೆಗೆ ಪ್ರತಿಯೊಬ್ಬರಿಗೂ ತನ್ನೊಳಗೇ ಶಿವನ ಪ್ರತಿರೂಪ ಇರುವುದೆಂಬುದು ಪ್ರಸ್ಫುಟವಾಗಿತ್ತು. ಅಂದಿನಿಂದ ಜಲೌಕ ಮಹಾರಾಜನ ಬಗೆಗೆ ಪ್ರಜೆಗಳ ಗೌರವಭಾವವೂ ಸನಾತನಧರ್ಮದಲ್ಲಿ ಅವರ ಶ್ರದ್ಧೆಯೂ ಇಮ್ಮಡಿಯಾದವು.
ಆದರೆ ಬೌದ್ಧ ಶ್ರಮಣ ಧರ್ಮಪಾಲನು ಮಾತ್ರ ಧಾರ್ಮಿಕ ಸಾಮರಸ್ಯವನ್ನು ಒಪ್ಪಿಕೊಳ್ಳಲಿಲ್ಲ. ಅವನಾದರೊ ಹಿಂದೆಲ್ಲ ಅನೇಕ ಸನಾತನ ಧರ್ಮಾನುಯಾಯಿಗಳನ್ನು ಹಿಂಸಿಸಿ ಬೌದ್ಧಮತಕ್ಕೆ ಬಲಾತ್ಕಾರದಿಂದ ಪರಿವರ್ತಿಸಿದ್ದವನು. ಆದರೆ ಸಿದ್ಧಗುರುವಿನ ಮಾರ್ಗದರ್ಶನದಿಂದಾಗಿ ಧರ್ಮಪಾಲನ ನಿಜರೂಪವನ್ನು ಅರಿತುಕೊಂಡ ಜಲೌಕನು ಧರ್ಮಪಾಲನಿಗೆ ಮರಣದಂಡನೆ ನೀಡಬೇಕೆಂದು ಯೋಚಿಸತೊಡಗಿದ್ದ. ಆಗ ಸಿದ್ಧನು ಜಲೌಕನಿಗೆ “ಯಾವುದೇ ಕೆಲಸ ಮಾಡಿದರೂ ಪ್ರೇಮದಿಂದ ಮಾಡಬೇಕೇ ಹೊರತು ದ್ವೇಷದಿಂದಲ್ಲ” ಎಂದು ಬೋಧನೆ ಮಾಡಿದ; ಮತ್ತು ಧರ್ಮಪಾಲನ ವಿಕೃತ ಪ್ರವರ್ತನೆಯಲ್ಲಿ ಸ್ವಯಂ ಜಲೌಕನದೂ ಸ್ವಲ್ಪಮಟ್ಟಿನ ಪಾತ್ರ ಇದ್ದಿತೆಂಬುದನ್ನು ಮನವರಿಕೆ ಮಾಡಿಸಿದ. ಬೌದ್ಧರ ಮೇಲೆ ಯಾವುದೇ ಪ್ರತೀಕಾರ ಕೈಗೊಳ್ಳದೆ ಎಲ್ಲರೂ ತಮತಮಗೆ ವಿಹಿತವೆನಿಸಿದ ಧರ್ಮವನ್ನು ಅನುಸರಿಸಲು ಆಸ್ಪದ ಇರಬೇಕೆಂದು ತಿಳಿಸಿದ.
ಧರ್ಮಪಾಲನು ಮಾತ್ರ ಜಲೌಕ ಮಹಾರಾಜನ ವಿಷಯದಲ್ಲಿ ತನಗಿದ್ದ ಅಸಹನೆಯನ್ನು ತ್ಯಜಿಸಲಿಲ್ಲ. ಇದೀಗ ಧರ್ಮಪಾಲನ ಸ್ಥಿತಿ ಹಲ್ಲುಕಿತ್ತ ಹುಲಿಯ ಹಾಗೆ ಆಗಿದ್ದಿತು. ಹಿಂದೆಯೇ ಪ್ರಜೆಗಳು ಬೌದ್ಧಮತಕ್ಕೆ ಸೇರುವುದರಲ್ಲಿ ಉತ್ಸಾಹ ತೋರಿಸುತ್ತಿರಲಿಲ್ಲ. ಈಚಿನ ಘಟನೆಯ ನಂತರವಂತೂ ಜನರು ಬೌದ್ಧವಿಹಾರಗಳ ಕಡೆಗೆ ಹೋಗುವುದನ್ನೇ ಬಿಟ್ಟಿದ್ದರು. ಇದು ಧರ್ಮಪಾಲನಿಗೆ ಜಲೌಕನ ಬಗೆಗೆ ಇದ್ದ ಕೋಪವನ್ನು ಇನ್ನಷ್ಟು ಹೆಚ್ಚಿಸಿತ್ತು.
ಒಂದು ದಿನ ಜಲೌಕನು ನೂತನ ಪುಷ್ಕರಣಿಯಲ್ಲಿ ಸ್ನಾನಮಾಡಲು ಹೋಗುತ್ತಿದ್ದಾಗ ಜನರೆಲ್ಲ ಗಮನಿಸುತ್ತಿದ್ದಂತೆಯೇ ಧರ್ಮಪಾಲನು ಜಲೌಕನಿಗೆ ಅಡ್ಡಗಟ್ಟಿ ಹೇಳಿದ:
“ಈ ನೂತನ ತೀರ್ಥವು ದೇವನಿರ್ಮಿತವೆಂದು ನೀವು ಹೇಗೆ ನಂಬುತ್ತಿದ್ದೀರಿ? ನಮಗೆ ತಿಳಿಯದ ಏನೇನೋ ಕಾರಣಗಳಿಂದ ಭೂಮಿಯೊಳಗಡೆ ಮಾರ್ಪಾಟುಗಳಾಗಿ ಅದರಿಂದಾಗಿ ಇಲ್ಲಿ ನದಿ ಏರ್ಪಟ್ಟಿರಬಹುದು. ಹಾಗೆ ಆದದ್ದು ನಿಮ್ಮ ಪೂಜೆಗೆ ವಿಳಂಬವಾಗಿದ್ದ ಸನ್ನಿವೇಶದಲ್ಲಿಯೇ ನಡೆದುದು ಆಕಸ್ಮಿಕವಷ್ಟೆ. ನೀವು ಅದನ್ನು ದೈವಿಕ ಘಟನೆ ಎಂದು ನಿರಾಧಾರವಾಗಿ ಭಾವಿಸಿದುದು ಜನರನ್ನು ತಪ್ಪುದಾರಿಗೆ ಎಳೆದಂತೆ ಆಗಿದೆ.”
ಧರ್ಮಪಾಲನ ವಾದವನ್ನು ಕೇಳಿ ಕೋಪೊದ್ರಿಕರಾದ ಜನ ಅವನ ಮೇಲೆ ಪ್ರಹಾರ ನಡೆಸಲು ಸಜ್ಜಾದರು. ಆದರೆ ಅವರನ್ನು ಜಲೌಕನು ತಡೆದು ಹೇಳಿದ:
ಯಾವುದನ್ನಾದರೂ ಸಂದೇಹಿಸುವ ಸ್ವಾತಂತ್ರ್ಯ ನಮ್ಮ ರಾಜ್ಯದಲ್ಲಿ ಪ್ರತಿಯೊಬ್ಬರಿಗೂ ಇದೆ. ಧರ್ಮಪಾಲನಿಗೂ ಆ ಸ್ವಾತಂತ್ರ್ಯ ಇರುವುದನ್ನು ನೀವು ಅಲ್ಲಗಳೆಯಬಾರದು. ನಾನು ಈ ನೂತನ ಜಲಧಾರೆಯನ್ನು ದೇವನಿರ್ಮಿತವೆಂದು ಭಾವಿಸಿದುದು ಸರಿಯೆನ್ನಲು ತಾನೆ ಆಧಾರ ಏನಿದೆ?”
ಜನರಲ್ಲಿ ಯಾರೂ ಮರುಮಾತಾಡಲಿಲ್ಲ. ಇಲ್ಲಿ ಈಗ ಇದ್ದುದು ಸೋದರತೀರ್ಥವೆಂದೇ ಅವರಿಗೆಲ್ಲ ಅನ್ನಿಸಿತ್ತು. ಆದರೆ ರುಜುವಾತು ಬೇಕಲ್ಲ?
ಗತ್ಯಂತರವಿಲ್ಲದೆ ಕಡೆಗೆ ಇದು ಸೋದರತೀರ್ಥವೆಂಬುದನ್ನು ಹೇಗೆ ರುಜುವಾತು ಮಾಡಬೇಕೆಂಬುದನ್ನು ಧರ್ಮಪಾಲನೇ ಸೂಚಿಸಿದ. ಒಂದು ಖಾಲಿ ಬಂಗಾರದ ತಂಬಿಗೆಯ ಬಾಯನ್ನು ಮುಚ್ಚಿ ಅದನ್ನು ಸೋದರತೀರ್ಥದಲ್ಲಿ ಮುಳುಗಿಸಿ ಹೇಳಿದ: “ಇದೂ ಸೋದರತೀರ್ಥವೇ ಆದ ಪಕ್ಷದಲ್ಲಿ ತಂಬಿಗೆಯು ಇದರಲ್ಲಿ ಮೇಲಕ್ಕೆ ತೇಲಬೇಕು.”
ಜನರು ಅಸಹಾಯರಾಗಿ ಒಪ್ಪಿದರು.
ಮಾರನೆಯ ದಿನ ತಂಬಿಗೆಯು ಮೇಲ್ಭಾಗದಲ್ಲಿ ಕಾಣದಿದ್ದಾಗ ಜನರು ಸಂಶಯಗೊಳ್ಳತೊಡಗಿದರು. ಅವರ ಅಪನಂಬಿಕೆಯನ್ನು ಧರ್ಮಪಾಲ ಬಲಗೊಳಿಸಿದ. ಅಂದು ಜಲೌಕ ಮಹಾರಾಜನ ಪೂಜೆಗೆ ಕಡಮೆ ಜನ ಬಂದರು. ಪೂಜಾಮಂದಿರದ ಹೊರಗೆ ನಿಂತು ಧರ್ಮಪಾಲನು ಬೋಧಿಸತೊಡಗಿದ:
“ಈಶ್ವರನೆಂಬವನಿದ್ದಾನೆ, ಅವನು ನಂದಿಕೇಶಾದಿಗಳಿಂದ ಸೇವಿತನಾಗುತ್ತಿದ್ದಾನೆ – ಎಂಬ ಇದೆಲ್ಲ ಜನರನ್ನು ಮರುಳುಮಾಡುವ ಕಟ್ಟುಕಥೆಗಳು. ಇಲ್ಲಿ ಕಾಣುತ್ತಿರುವುದು ಸೋದರತೀರ್ಥ ಎಂಬುದು ಎಷ್ಟು ನಿರಾಧಾರವೋ ಕೈಲಾಸದಲ್ಲಿ ಶಿವನು ಇರುವನೆಂಬುದೂ ಅಷ್ಟೇ ನಿರಾಧಾರ…..”
ಇದಾವುದನ್ನೂ ಜಲೌಕ ಮಹಾರಾಜನು ಮನಸ್ಸಿಗೆ ಹಚ್ಚಿಕೊಳ್ಳಲಿಲ್ಲ. ಎಂದಿನಂತೆ ಏಕಾಗ್ರಚಿತ್ತನಾಗಿ ಪೂಜೆಯನ್ನು ಮುಗಿಸಿ ನೂತನ ಸೋದರತೀರ್ಥದ ಕಡೆಗೆ ಹೆಜ್ಜೆಹಾಕಿದ. ಪ್ರಜೆಗಳೂ ಅವನನ್ನು ಅನುಸರಿಸಿದರು. ಮಹಾರಾಜನು ತೀರ್ಥದ ದಡದಲ್ಲಿ ನಿಂತು ಶಿವನನ್ನು ಧ್ಯಾನಿಸಿದ.
“ಈಗಾಗಲೆ ಎರಡು ದಿನ ಕಳೆದಿದೆ. ಇನ್ನೆಲ್ಲಿಯ ತಂಬಿಗೆ! ಅದು ಎಲ್ಲಿಗೋ ಕೊಚ್ಚಿಕೊಂಡು ಹೋಗಿರುತ್ತದೆ. ಮಂತ್ರ ಪಠಿಸಿದರೆ ಅದು ಇಲ್ಲಿ ಪ್ರತ್ಯಕ್ಷವಾಗುತ್ತದೆ ಎಂದು ನಿರೀಕ್ಷಿಸಿಕೊಂಡಿದ್ದೀರಾ?” ಎಂದು ಧರ್ಮಪಾಲನು ವ್ಯಂಗ್ಯವಾಡಿದ.
ಅವನು ಮಾತನ್ನು ಮುಗಿಸುವುದಕ್ಕೆ ಮುಂಚೆಯೇ ಜನರೆದುರಿಗೆ ಆಶ್ಚರ್ಯ ಘಟಿಸಿತು. ನೀರಿನ ಅಲೆಗಳ ಮೇಲೆ ಸೂರ್ಯಕಾಂತಿಗೆ ಥಳಥಳ ಹೊಳೆಯುತ್ತಿದ್ದ ಬಂಗಾರದ ತಂಬಿಗೆ ತೇಲಾಡುತ್ತ ಕಾಣಿಸಿಕೊಂಡಿತು! ಸನಾತನಧರ್ಮನೌಕೆಯೇ ಕ್ರಮಿಸುತ್ತಿರುವಂತೆ ಕಂಡಿತು ಆ ತಂಬಿಗೆಯ ಚಲನೆ. ಕೆಲವರಿಗೆ ಅದು ಕಾಳೀಯಮರ್ದನವನ್ನು ನೆನಪಿಗೆ ತಂದಿತು.
ನೆರೆದಿದ್ದ ಜನರೆಲ್ಲ ಭಕ್ತಿಪಾರವಶ್ಯದಿಂದ ಶಿವಸ್ತೋತ್ರ ಮಾಡತೊಡಗಿದರು. `ಹರ ಹರ ಮಹಾದೇವ’, `ಶಂಭೋ ಶಂಕರ’ ನಿನಾದಗಳು ಮಾರ್ದನಿಸಿದವು.
ಇದನ್ನು ಕಂಡೊಡನೆ ಧರ್ಮಪಾಲನು ಅಲ್ಲಿಂದ ಕಾಲ್ತೆಗೆದ. ಆದರೆ ಜನರು ಅವನನ್ನು ಹೋಗಗೊಡಲಿಲ್ಲ. ಅವನು ಮಹಾರಾಜರಲ್ಲಿ ಕ್ಷಮೆ ಕೋರಬೇಕೆಂದು ಅವನನ್ನು ಒತ್ತಾಯಿಸಿದರು.
ಈ ಎಲ್ಲ ಗದ್ದಲದಿಂದ ಏಕಾಗ್ರತೆಗೆ ಭಂಗ ಬಂದು ಮಹಾರಾಜನು ಬಳಿಸಾರಿದ. ಸಂದರ್ಭವೇನೆಂದು ತಿಳಿದೊಡನೆ ಅವನು ಅಲ್ಲಿ ನೆರೆದಿದ್ದವರಿಗೆ ಹೇಳಿದ: “ಅವನನ್ನು ಬಿಟ್ಟುಬಿಡಿ. ಅವನು ತಗಾದೆ ಮಾಡಿದುದರಿಂದ ನಿಮ್ಮ ಮನಸ್ಸುಗಳನ್ನು ಹೊಕ್ಕಿದ್ದ ಸಂದೇಹವು ತೀರಿದಂತಾಯಿತು. ಇದು ನಡೆಯದಿದ್ದಿದ್ದರೆ ಮುಂದೆಂದಾದರೂ ಇನ್ನಾರಾದರೂ ಇದನ್ನು ಪ್ರಶ್ನಿಸಿ ನಿಮ್ಮ ಶ್ರದ್ಧೆಯನ್ನು ಶಿಥಿಲಗೊಳಿಸುವ ಸಂಭವ ಇದ್ದಿತು. ಆ ಅಪಾಯದಿಂದ ನಮ್ಮನ್ನು ಪಾರುಮಾಡಿದ ಧರ್ಮಪಾಲನಿಗೆ ನಮ್ಮ ಕೃತಜ್ಞತೆ ಸಲ್ಲಬೇಕಾಗಿದೆ.”
ಅನಂತರ ಧರ್ಮಪಾಲನು ಅಲ್ಲಿಂದ ಮೌನವಾಗಿ ನಿಷ್ಕ್ರಮಿಸಿದ. ಅಲ್ಲಿಂದಾಚೆಗೆ ಅವನು ಎಂದೂ ತನ್ನ ವಿಹಾರದ ಪ್ರಾಕಾರದಿಂದಾಚೆಗೆ ಕಾಣಿಸಿಕೊಳ್ಳುತ್ತಿರಲಿಲ್ಲ. ಜನರು ಜಲೌಕ ಮಹಾರಾಜನಲ್ಲಿ ಇರಿಸಿದ್ದ ಶ್ರದ್ಧೆ ಇನ್ನಷ್ಟು ಹೆಚ್ಚಿತು. ಅವನು ದೈವಾಂಶಸಂಭೂತನೆಂದೇ ಜನ ಭಾವಿಸತೊಡಗಿದರು.
ಹೀಗಿದ್ದರೂ ಜಲೌಕ ಮಹಾರಾಜನನ್ನು ಒಮ್ಮೊಮ್ಮೆ ದುಃಸ್ಪಪ್ನ ಕಾಡುತ್ತಿತ್ತು. ಅಮಾಯಕ ಸನಾತನಿ ಕುಟುಂಬಗಳನ್ನು ಬೌದ್ಧರು ಸಜೀವದಹನ ಮಾಡುವ ಚಿತ್ರ ಮಹಾರಾಜನ ಮನಃಪಟಲದ ಮೇಲೆ ಪದೇ ಪದೇ ಮೂಡುತ್ತಿತ್ತು. ಆ ಘೋರ ನಡವಳಿಕೆಗೆ ತಾನೂ ಪರೋಕ್ಷವಾಗಿ ಕಾರಣನಾಗಿದ್ದೇನೆಂಬ ತೀಕ್ಷ್ಣ ಅಪರಾಧಿಭಾವ ಅವರನ್ನು ಬಾಧಿಸುತ್ತಿತ್ತು. ದಹಿಸಲ್ಪಡುತ್ತಿದ್ದವರ ಆಕ್ರಂದನಗಳಿಗೆ ಬೌದ್ಧವಿಹಾರಗಳೊಳಗಿನ ತೂರ್ಯಘೋಷ ಪ್ರತಿಧ್ವನಿಯಂತೆ ಇರುತ್ತಿತ್ತು. ಈ ಕಾರಣದಿಂದಲೇ ಯಾವುದೋ ರಾಜಕಾರ್ಯಗಳಲ್ಲಿ ಮುಳುಗಿದ್ದಾಗಲೂ ಒಮ್ಮೊಮ್ಮೆ ವಿಹಾರಗಳೊಳಗಿನಿಂದ ತೂರ್ಯಧ್ವನಿ ಕೇಳಿಸಿದಾಗ ಜಲೌಕನು ಬೆಚ್ಚಿಬೀಳುತ್ತಿದ್ದ. ಅವನ ಮೈ ಬೆವರುತ್ತಿತ್ತು.
ಅದೊಂದು ದುರ್ದಿನ.
ಧರ್ಮಪಾಲನ ಮುಂದಾಳ್ತನದಲ್ಲಿ ಹಲವರು ಶತ್ರುಸೈನಿಕರು ತಮ್ಮ ಗಡಿಯಾಚೆಗೆ ಬಂದು ಹಲವರು ಸನಾತನಧರ್ಮೀಯರನ್ನು ಸಜೀವದಹನ ಮಾಡಿದರೆಂಬ ವಾರ್ತೆ ಮಹಾರಾಜನಿಗೆ ತಲಪಿತು. ಕೂಡಲೆ ಅದೃಶ್ಯ ನಾಗನ ನೆರವಿನಿಂದ ಮಹಾರಾಜನು ಆ ದುರ್ಘಟನೆಯ ಪ್ರದೇಶವನ್ನು ಸೇರಿದ. ಅಲ್ಲಿ ಇದ್ದುದು ದುರ್ಗಂಧ, ಸುಟ್ಟ ಮನುಷ್ಯದೇಹಗಳು, ರೋದಿಸುತ್ತಿದ್ದ ಬಂಧುಗಳು. ಆದರೆ ಘೋರವನ್ನು ನಡೆಸಿದವರಾರೂ ಅಲ್ಲಿ ಕಾಣಲಿಲ್ಲ. ಅವರು ಹತ್ತಿರದ ಬೌದ್ಧವಿಹಾರದೊಳಕ್ಕೆ ಹೋಗಿ ಅವಿತುಕೊಂಡಿದ್ದಾರೆಂದು ಚಾರರ ಮೂಲಕ ಮಹಾರಾಜನಿಗೆ ತಿಳಿಯಿತು. ಈಗ ಮಹಾರಾಜನಿಗೆ ಆಗಾಗ ತನಗೆ ಬೀಳುತ್ತಿದ್ದ ದುಸ್ವಪ್ನ ನೆನಪಾಯಿತು. ದುಃಸ್ವಪ್ನವನ್ನು ಮರೆಯುವುದು ಅವನಿಗೆ ಅಸಾಧ್ಯವಾಗಿತ್ತು. ಈಗಲಾದರೋ ಕನಸಿನಲ್ಲಿ ಕಂಡಿದ್ದ ಘೋರವು ವಾಸ್ತವವಾಗಿಯೆ ಎದುರಿಗೆ ನಡೆದಿತ್ತು. ಮಹಾರಾಜನು ಆವೇಶಗೊಂಡ.
ಇಷ್ಟರಲ್ಲಿ ಇನ್ನೊಂದು ವಾರ್ತೆ.
ವಿಹಾರದಲ್ಲಿ ಅಡಗಿಕೊಂಡಿದ್ದ ಹಂತಕರನ್ನು ಹಿಡಿಯಲು ಹೋದ ರಾಜಸೈನಿಕರನ್ನು ಬೌದ್ಧರು ದ್ವಾರದಲ್ಲಿಯೆ ತಡೆದದ್ದು ಮಾತ್ರವಲ್ಲದೆ ಅವರ ಮೇಲೆ ಆಯುಧಗಳಿಂದ ಹಲ್ಲೆಯನ್ನೂ ಮಾಡಿದ್ದರು.
ಮಹಾರಾಜನ ಕ್ರೋಧವು ದುಸ್ಸಹವಾಯಿತು.
“ವಿಹಾರಗಳಾಗಲಿ ದೇವಾಲಯಗಳಾಗಲಿ ದಿವ್ಯ ತಾಣಗಳು. ಆ ಪವಿತ್ರ ಸ್ಥಳಗಳಲ್ಲಿ ಆಧ್ಯಾತ್ಮಿಕ ವಾತಾವರಣ ಇರಬೇಕು. ಮನುಷ್ಯನ ಪಾಶವೀಯತೆಯನ್ನು ಪ್ರತಿನಿಧಿಸುವ ಆಯುಧಗಳು ಆ ಸ್ಥಳಗಳಲ್ಲಿ ಇರತಕ್ಕವಲ್ಲ. ಅವು ಆ ಆಲಯಗಳನ್ನು ಅಪವಿತ್ರಗೊಳಿಸುತ್ತವೆ. ಪವಿತ್ರ ಸ್ಥಳಗಳಲ್ಲಿ ಆಯುಧ ಧರಿಸುವವರಿಗೆ ದಂಡನೆ ಸಲ್ಲುತ್ತದೆ” ಎಂದ ಮಹಾರಾಜನು ಹಂತಕರನ್ನು ಬಂಧಿಸಿ ತರುವಂತೆ ಸೇನಾಧಿಕಾರಿಗೆ ಆಜ್ಞಾಪಿಸಿದ.
ಜಲೌಕನ ಮನಸ್ಸಿನಲ್ಲಿ ಹಿಂದೆ ಸನಾತನಿಗಳ ಮೇಲೆ ಬೌದ್ಧರು ಎಸಗುತ್ತಿದ್ದ ಘೋರಗಳನ್ನು ತಾನು ನೋಡುತ್ತಿದ್ದುದರ ನೆನಪು ಮರುಕಳಿಸಿತು. ಆ ಸಂದರ್ಭಗಳಲ್ಲಿ ವಿಹಾರಗಳಿಂದ ಕೇಳಿಬರುತ್ತಿದ್ದ ತೂರ್ಯಘೋಷಗಳ ಧ್ವನಿಯೂ ಕಿವಿಗೆ ಅಪ್ಪಳಿಸಿದಂತೆ ಭಾಸವಾಗುತ್ತಿತ್ತು. ಅಂದು ಮಧ್ಯಾಹ್ನ ಭೋಜನಾನಂತರ ವಿಶ್ರಮಿಸುತ್ತಿದ್ದ ಮಹಾರಾಜನಿಗೆ ಮತ್ತೆ ಅದೇ ದುಃಸ್ವಪ್ನ ಕಾಣಿಸಿತು.
ಬೆಚ್ಚಿಬಿದ್ದು ಕಣ್ತೆರೆದ ಮಹಾರಾಜನೆದುರಿಗೆ ರಕ್ತಸಿಕ್ತ ಗಾಯಗಳು ತುಂಬಿದ್ದ ಸೇನಾಪತಿಯೂ ಮಹಾಮಂತ್ರಿಯೂ ಕಂಡರು.
“ಏನಾಯಿತು?” ಎಂದು ಮಹಾರಾಜನು ಗಂಭೀರವಾಗಿ ವಿಚಾರಿಸಿದ.
ಸೇನಾಪತಿ ಉತ್ತರಿಸಿದ:
“ಮಹಾರಾಜರೆ! ಆ ವಿಹಾರದಲ್ಲಿ ಅಡಗಿಕೊಂಡಿದ್ದವರು ಹಂತಕರು ಮಾತ್ರವಲ್ಲ. ಅಲ್ಲಿದ್ದವರು ಬೌದ್ಧ ಶ್ರಮಣರ ವೇಷ ಧರಿಸಿದ್ದ ಶತ್ರುರಾಜ್ಯಸೈನಿಕರು. ತಾವು ಸನಾತನಧರ್ಮದ ಬಗೆಗೆ ತೋರುತ್ತಿರುವ ಆದರಣೆಗೆ ಪ್ರತಿಕ್ರಿಯೆಯಾಗಿ ಬೌದ್ಧರು ಈ ರಾಜ್ಯವನ್ನು ಶತ್ರುರಾಜರ ವಶಕ್ಕೆ ಒಳಪಡಿಸಲು ಹೊಂಚುಹಾಕಿದ್ದಾರೆ. ತಾವು ಅನುಸರಿಸಿರುವ ಪರಮತಸಹಿಷ್ಣುತೆಯ ದುರ್ಲಾಭ ಪಡೆದು ಅವರು ತಮ್ಮ ವಿಹಾರಗಳನ್ನು ಶತ್ರುಕೇಂದ್ರಗಳಾಗಿ ಬೆಳೆಸುತ್ತಿದ್ದಾರೆ.”
`ಮಹಾರಾಜ! ಜೀವಹಿಂಸೆ ಮಾಡದಿರುವುದು ಉತ್ಕೃಷ್ಟ ಧರ್ಮ. ಆದರೆ ತನ್ನನ್ನು ಕಚ್ಚಲು ಬಂದ ವಿಷ ಸರ್ಪವನ್ನು ಕೊಲ್ಲದಿರುವುದು ಮೂರ್ಖತೆಯಾಗುತ್ತದೆ’ ಎಂಬ ಸಿದ್ಧಗುರುವಿನ ಮಾತುಗಳು ಜಲೌಕನಿಗೆ ನೆನಪಾದವು.
ಸೇನಾಪತಿಯನ್ನು ಚಿಕಿತ್ಸೆಗಾಗಿ ವೈದ್ಯರಲ್ಲಿಗೆ ಕಳುಹಿಸಿ ಮಹಾರಾಜನು ಮಂತ್ರಿಗೆ ಆದೇಶವನ್ನಿತ್ತ: “ಯಾವಾಗ ಬೌದ್ಧವಿಹಾರಗಳಲ್ಲಿ ಶತ್ರು ಸೈನಿಕರು ಅಡಗಿಕೊಂಡಿದ್ದಾರೋ ಅವನ್ನೆಲ್ಲ ನೆಲಸಮ ಮಾಡಿರಿ. ಒಳಗೆ ಅಡಗಿರುವ ವಿಷಸರ್ಪ ಹೊರಕ್ಕೆ ಬರಬೇಕಾದರೆ ಹುತ್ತವನ್ನು ನೆಲಸಮ ಮಾಡಲೇಬೇಕು. ಶತ್ರುಗಳಿಗೆ ಆಶ್ರಯ ನೀಡುವ ದೇಶದ್ರೋಹವೆಸಗುತ್ತಿರುವವರನ್ನು ನಿರ್ದಾಕ್ಷಿಣ್ಯವಾಗಿ ಕೊಚ್ಚಿಹಾಕಿರಿ.”
ಇದನ್ನು ಕೇಳಿ ಮಹಾಮಂತ್ರಿ ವಿಚಲಿತಗೊಂಡು ಹೇಳಿದ: “ಪ್ರಭುಗಳೆ! ಪವಿತ್ರ ಸ್ಥಳಗಳ ಮೇಲೆ ಕೈಯೆತ್ತಿದ ಯಾವ ರಾಜರೂ ನೆಮ್ಮಂದಿಯಿಂದಿರಲಾರರು. ಅಂತಹ ರಾಜರ ದೇಶಗಳಲ್ಲಿ ಪ್ರಜೆಗಳೂ ಶಾಂತಿಯಿಂದ ಇರಲಾರರು. ಪ್ರತಿ ವ್ಯಕ್ತಿಯಲ್ಲಿಯೂ ಪರಮಾತ್ಮನನ್ನು ಕಾಣಬೇಕೆಂದು ಸಿದ್ಧಗುರುಗಳೂ ಹೇಳಿದ್ದರಲ್ಲವೆ.”
ಜಲೌಕನು ನಕ್ಕು ಹೇಳಿದ – “ಆದರೆ ಅವು ಈಗ ಪವಿತ್ರ ಸ್ಥಳಗಳಾಗಿ ಉಳಿದಿವೆಯೆ? ಶತ್ರುಸೈನಿಕರ ಓಡಾಟದಿಂದಲೂ, ಮಾರಕಾಸ್ತ್ರಗಳ ವಿಜೃಂಭಣೆಯಿಂದಲೂ, ಕೆಟ್ಟ ಆಲೋಚನೆಗಳಿಂದಲೂ ಆ ಸ್ಥಳಗಳಿಂದ ಪಾವಿತ್ರ್ಯ ಎಂದೋ ನಷ್ಟವಾಗಿದೆ. ಈಗ ಅವು ಪವಿತ್ರ ಸ್ಥಳಗಳಾಗಿರದೆ ಶತ್ರುಶಿಬಿರಗಳಷ್ಟೆ ಆಗಿವೆ.”
“ಆದರೂ…..”
ಮಂತ್ರಿಯ ಮಾತನ್ನು ಮುಂದುವರಿಸಗೊಡದೆ ಜಲೌಕನು ಹೇಳಿದ: “ಕಶ್ಮೀರ ದೇಶವು ದೇವಿ ಪಾರ್ವತಿಗೆ ಸಮಾನ. ಇಲ್ಲಿಯ ರಾಜನು ಶಿವಾಂಶಸಂಭೂತನು. ತಾಯಿ ಪಾರ್ವತಿಗೆ ಅಪಮಾನವೆಸಗುವ ಒಂದು ಕ್ರಿಮಿಯನ್ನೂ ಶಿವನು ಕ್ಷಮಿಸಲಾರ. ಕಶ್ಮೀರವನ್ನು ಶತ್ರುವಶ ಮಾಡಲು ವಿಹಾರಗಳನ್ನು ಆಧಾರವಾಗಿ ಬಳಸಿಕೊಳ್ಳುವವರನ್ನು ಕ್ಷಮಿಸುವ ಯೋಚನೆ ಬೇಡ. ಅಂತಹವರನ್ನು ಕ್ಷಮಿಸುವುದು ಸ್ವದೇಶದ್ರೋಹವೇ ಆಗುತ್ತದೆ.”
ಗತ್ಯಂತರವಿಲ್ಲದೆ ಮಂತ್ರಿಯು ತನಗೆ ಇಚ್ಛೆ ಇರದಿದ್ದರೂ ರಾಜಾಜ್ಞೆಯನ್ನು ನೆರವೇರಿಸಿದ.
ನಗರವೆಲ್ಲ ಧ್ವಂಸಗೊಂಡ ಕಟ್ಟಡಗಳಿಂದೆದ್ದ ಧೂಳಿನಿಂದ ತುಂಬಿಹೋಯಿತು. ಆಸರೆ ತಪ್ಪಿದವರ ಆಕ್ರಂದನವು ತಾರಕಕ್ಕೆ ಏರಿತ್ತು. ಅನೇಕ ವಿಹಾರಗಳಲ್ಲಿ ಕಶ್ಮೀರ ರಾಜಸೈನಿಕರಿಗೂ ಶತ್ರು ಸೈನಿಕರಿಗೂ ನಡುವೆ ತೀಕ್ಷ್ಮ ಹೋರಾಟಗಳು ನಡೆದವು. ಒಂದಕ್ಕೊಂದು ತಾಗಿದ ಕತ್ತಿಗಳಿಂದ ಕಿಡಿಗಳು ಹಾರುತ್ತಿದ್ದವು.
ರಾಜಪ್ರಾಸಾದದಿಂದ ವೀಕ್ಷಿಸುತ್ತಿದ್ದ ಮಹಾರಾಜನ ಉದ್ವೇಗ ಕ್ರಮೇಣ ಶಮನಗೊಂಡಿತು. “ನನ್ನ ರಾಜ್ಯದ ರಕ್ಷಣೆ ನನ್ನ ಹೊಣೆಯಾಗಿದೆ. ಶತ್ರುಕೇಂದ್ರಗಳಾಗಿ ಪರಿವರ್ತನೆಗೊಂಡಿರುವ ವಿಹಾರಗಳು ತಮ್ಮ ಪವಿತ್ರತೆಯನ್ನು ಕಳೆದುಕೊಂಡಿರುವುದು ವಾಸ್ತವವೇ.
ಆದರೂ ಅವುಗಳನ್ನು ಧ್ವಂಸ ಮಾಡಿದುದಕ್ಕೆ ಪಾಪ ಬರುವುದಾದರೆ ಅದು ನನಗೇ ಬರಲಿ. ಅದರಿಂದ ನನ್ನ ಪ್ರಜೆಗಳಿಗೆ ಎಷ್ಟು ಮಾತ್ರ ಹಾನಿಯೂ ಆಗದಿರಲಿ” ಎಂದು ರಾಜನ ಮನಸ್ಸಿನೊಳಗೆ ಆಲೋಚನೆ ಹರಿದಿತ್ತು.
ಮಾರನೆಯ ದಿನ ಬೆಳಕು ಹರಿಯಿತು. ಮಹಾರಾಜನು ರಾಜಮಂದಿರವನ್ನು ಪ್ರವೇಶಿಸಿದ.
ಮಂತ್ರಿಯು ವರದಿ ಮಾಡಿದ: “ಪ್ರಭುಗಳೆ! ರಾಜಧಾನಿಯಲ್ಲಿರುವ ವಿಹಾರಗಳೆಲ್ಲ ನೆಲಸಮವಾಗಿವೆ. ಗೂಡು ಕಳಚಿದ ಪಕ್ಷಿಗಳಂತೆ ಬೌದ್ಧರು ಚದುರಿಹೋಗಿದ್ದಾರೆ. ಶತ್ರುಸೈನಿಕರನೇಕರು ಹತರಾಗಿದ್ದಾರೆ. ಉಳಿದವರು ಬಂಧನದಲ್ಲಿದ್ದಾರೆ. ಅವರೆಲ್ಲ ಧರ್ಮಪಾಲನ ಅನುಚರರು. ಆದರೆ ಧರ್ಮಪಾಲನು ಊರುಬಿಟ್ಟು ಓಡಿಹೋಗಿದ್ದಾನೆ.”
“ನಾನು ಪೂಜೆಗೆ ಹೊರಡುವುದಕ್ಕೆ ಮೊದಲು ನಗರದಲ್ಲಿ ಉಳಿದಿರುವ ಬೌದ್ಧರನ್ನು ಮತ್ತು ಅವರ ನಾಯಕರುಗಳನ್ನು ಒಂದೆಡೆ ಸೇರಿಸಿರಿ” ಎಂದು ಮಹಾರಾಜನು ಆಜ್ಞಾಪಿಸಿದ.
ಮಂತ್ರಿಯು ತನ್ನ ಭಾವನೆಯನ್ನು ತಡೆದುಕೊಳ್ಳಲಾಗದೆ ಗದ್ಗದಿತನಾಗಿ ಹೇಳಿದ – “ಪ್ರಭುಗಳೆ! ನಿಮ್ಮ ಅದ್ಭುತವಾದ ಚರಿತ್ರೆಯಲ್ಲಿ ಈ ಘಟನೆ ಒಂದು ಕಳಂಕವಾಗಿ ಉಳಿದೀತೇನೊ. ನೀವು ಮಾಡಿದುದು ದೇಶಕ್ಷೇಮಕ್ಕೋಸ್ಕರವೇ ಆದರೂ ಅದು ಪಾಪವೆಂದೇ ಎನಿಸೀತು. ಇಲ್ಲಿಂದಾಚೆಗೂ ಬೌದ್ಧರನ್ನು ಹಿಂಸೆಗೆ ಒಳಪಡಿಸುವುದರಿಂದ ಸಾಧಿತವಾಗುವುದೇನೂ ಇಲ್ಲ.”
“ಮಂತ್ರಿವರ್ಯರೆ! ದೇಶದ ರಕ್ಷಣೆ ನನ್ನ ಹೊಣೆ. ಧರ್ಮದ ಪಾಲನೆ ನನ್ನ ಕರ್ತವ್ಯ. ನನ್ನ ಕರ್ತವ್ಯ ನಿರ್ವಹಣೆಯಿಂದ ಬರುವ ದೋಷಗಳಿಗೂ ನಾನೇ ಬಾಧ್ಯ. ಬೌದ್ಧರನ್ನೆಲ್ಲ ಕರೆಸಿರಿ.”
ರಾಜಪ್ರಾಸಾದದ ಎದುರಿಗೆ ಬೌದ್ಧರೆಲ್ಲ ಸಮಾವೇಶಗೊಂಡರು. ಎಲ್ಲರೂ ಕೆಟ್ಟ ಶಬ್ದಗಳಲ್ಲಿ ಮಹಾರಾಜನಿಗೆ ಶಾಪ ಹಾಕುತ್ತಿದ್ದರು. ಮಹಾರಾಜನು ಬರುತ್ತಿದ್ದುದರ ಸೂಚಕವಾಗಿ ಘಂಟೆಯ ಶಬ್ದ ಆದೊಡನೆ ಎಲ್ಲರೂ ನಿಶ್ಶಬ್ದವಾದರು.
ಮಹಾರಾಜನ ಮುಖ ಚಹರೆ ಕಾಂತಿಯುತವಾಗಿತ್ತು. ಜನರನ್ನು ಉದ್ದೇಶಿಸಿ ಅವನು ಹೇಳಿದ –
“ನಿಮ್ಮ ವಿಹಾರಗಳನ್ನು ನಾನು ನೆಲಸಮ ಮಾಡಿದೆನೆಂದು ನೀವು ಕೋಪಗೊಂಡಿದ್ದೀರಲ್ಲವೆ?”
“ಹೌದು” ಎಂದರು ಬೌದ್ಧರು ಎತ್ತರದ ಧ್ವನಿಯಲ್ಲಿ.
“ಪರಮತಸಹಿಷ್ಣುತೆಯು ದೌರ್ಬಲ್ಯವಲ್ಲ. ಪ್ರತಿಯೊಬ್ಬರಿಗೂ ಅವರಿಗೆ ಯುಕ್ತವೆನಿಸಿದ ಮಾರ್ಗವನ್ನು ಅನುಸರಿಸುವ ಸ್ವಾತಂತ್ರ್ಯ ನೀಡಲಾಗಿರುವುದರ ಉದ್ದೇಶವು ನೀವು ಸಭ್ಯರಾಗಿರಬೇಕೆಂಬುದೇ ಹೊರತು ದೇಶದ್ರೋಹ ಮಾಡಲಿ ಎಂದಲ್ಲ. ಸ್ವಾತಂತ್ರ್ಯವನ್ನು ದುರುಪಯೋಗ ಪಡಿಸಿಕೊಂಡು ದೇಶದ್ರೋಹ ಮಾಡುವವರು ಬೌದ್ಧರೇ ಆಗಿರಲಿ ಸನಾತನಿಗಳೇ ಆಗಿರಲಿ ಯಾರೇ ಆಗಿರಲಿ ಅವರು ಕ್ಷಮೆಗೆ ಅರ್ಹರಲ್ಲ. ಶತ್ರುಗಳ ಕೇಂದ್ರಗಳಾಗಿದ್ದ ವಿಹಾರಗಳನ್ನು ನಾನು ನೆಲಸಮ ಮಾಡಿದುದು ದೋಷವಾದರೆ ಆ ವಿಹಾರಗಳೊಳಕ್ಕೆ ಆಯುಧಸನ್ನದ್ಧ ಶತ್ರುಗಳನ್ನು ತಡೆಯದೆ ಇದ್ದುದು ಅಪರಾಧವಲ್ಲವೆ? ನೀವೆಲ್ಲ ಏಕೆ ಮೌನದಿಂದಿದ್ದೀರಿ?”
ಬೌದ್ಧರಾರೂ ಉತ್ತರಿಸಲಿಲ್ಲ.
“ಇನ್ನು ಮೇಲಾದರೂ ನೀವು ದೇಶದ್ರೋಹದ ಆಲೋಚನೆಗಳನ್ನು ತ್ಯಜಿಸಿ ಧರ್ಮದ ಪಾಲನೆಗೆ ಗಮನ ಕೊಡಿರಿ. ಇತರರನ್ನು ಉದ್ಧರಿಸುವೆವೆಂಬ ಯೋಚನೆಯನ್ನು ಕೈಬಿಡಿರಿ. ನಿಮ್ಮನ್ನು ನೀವು ಉದ್ಧರಿಸಿಕೊಳ್ಳಿರಿ.”
ಬೌದ್ಧರು ಮೌನವಾಗಿ ತಲೆದೂಗಿದರು.
ಮಹಾರಾಜನು ಮುಗುಳ್ನಕ್ಕು ಮುಂದುವರಿಸಿದ:
“ನನಗೆ ನಿಮ್ಮ ಮೇಲೆ ದ್ವೇಷವಿಲ್ಲ. ಆದರೆ ಒಂದು ಸಂಗತಿಯನ್ನು ನೆನಪಿಡಿ. ಅಪರಾಧವನ್ನು ಮಾಡುವವರಿಗಿಂತ ಅದನ್ನು ಕಂಡು ಸುಮ್ಮನಿರುವುದು ಹೆಚ್ಚಿನ ಅಪರಾಧ ಆಗುತ್ತದೆಂದಿದ್ದಾರೆ ಹಿರಿಯರು. ಹೀಗಿರುವುದರಿಂದ ಇನ್ನು ಮುಂದೆ ನಿಮ್ಮ ವಿಹಾರಗಳು ನಿರಾತಂಕವಾಗಿ ಇರಬೇಕಾದರೆ ಅವನ್ನು ದೈವಪ್ರಾರ್ಥನೆಗೂ ಪವಿತ್ರ ಕಲಾಪಗಳಿಗೂ ಮಾತ್ರ ವಿನಿಯೋಗಿಸಿರಿ. ನಿಮ್ಮ ವಿಹಾರಗಳನ್ನು ಮತ್ತೆ ನಿರ್ಮಿಸಿಕೊಡುವ ಹೊಣೆ ನನ್ನದು.”
ಬೌದ್ಧರು ಜಯಜಯಕಾರ ಮಾಡುತ್ತ ನಿರ್ಗಮಿಸಿದರು.
ಮಹಾರಾಜನು ಮಂತ್ರಿಯತ್ತ ನೋಡಿದ. ಮಂತ್ರಿಯು ರಾಜನನ್ನು ಆಶೀರ್ವದಿಸಿದ. ಅನಂತರ ಮಹಾರಾಜನು ಪ್ರಶಾಂತಮನಸ್ಕನಾಗಿ ತನ್ನ ಪೂಜೆ-ಪ್ರಾರ್ಥನೆಗಾಗಿ ವಿಜಯೇಶ್ವರ ದೇವಾಲಯದತ್ತ ಹೆಜ್ಜೆಹಾಕಿದ.
ಮಾರ್ಗಮಧ್ಯದಲ್ಲಿ ಮಹಾರಾಜನಿಗೆ ಒಬ್ಬ ಸ್ತ್ರೀ ಎದುರಾಗಿ ಹೇಳಿದಳು:
“ಮಹಾರಾಜರೆ! ನನಗೆ ಹಸಿವು. ಭಿಕ್ಷೆ ಬೇಕು.”
ಜಲೌಕನು ಅಚ್ಚರಿಗೊಂಡ. ತನ್ನ ರಾಜ್ಯದಲ್ಲಿ ಹಸಿದಿರುವವರಿಗೆ ಅನ್ನ ಸಿಗುತ್ತಿಲ್ಲವೆ? – ಎಂದುಕೊಂಡ. ಇದೇನಾದರೂ ನನ್ನ ದೋಷದ ಫಲಿತ ಇರಬಹುದೆ?
ಕೂಡಲೆ ಆಕೆಗೆ ರುಚಿಕರವಾದ ಊಟವನ್ನು ನೀಡುವಂತೆ ಭಟರಿಗೆ ಆಜ್ಞೆ ಮಾಡಿದ.
ಇದ್ದಕ್ಕಿದ್ದಂತೆ ಆ ಹೆಂಗಸು ಎಲ್ಲರನ್ನು ಭಯಗೊಳಿಸುವಂತಹ ವಿಕಾರರೂಪ ತಳೆದಳು. ಅವಳ ಒಸಡಿನಿಂದ ರಕ್ತ ಒಸರುತ್ತಿತ್ತು.
“ನನಗೆ ನರಮಾಂಸ ಬೇಕಾಗಿದೆ!” ಎಂದಳು ಅವಳು ವಿಕೃತವಾಗಿ ನಗುತ್ತ.
ಅಲ್ಲಿದ್ದವರೆಲ್ಲ ಬೆಚ್ಚಿದರು. ಹಾಹಾಕಾರವೆದ್ದಿತು.
ಜಲೌಕನು ಮುಗುಳ್ನಕ್ಕು “ಓ ವಿಕೃತರೂಪಿಯೆ! ನನ್ನ ಪಾಪವೇ ನಿನ್ನ ವಿಕೃತರೂಪವನ್ನು ಧರಿಸಿ ಬಂದ ಹಾಗಿದೆ. ನೀನು ನನ್ನನ್ನೇ ಆಹಾರವಾಗಿ ಸೇವಿಸು” ಎಂದ.
ಕೂಡಲೇ ಆ ವಿಕೃತ ರೂಪಧಾರಿಣಿ ಮಹಾರಾಜನ ಕಾಲಿಗೆ ಬಿದ್ದಳು.
“ಮಹಾರಾಜ! ನೀವು ಸತ್ತ್ವಗುಣವಂತರು, ಮಹಾತ್ಮರು. ನಿಮಗೆ ನಾನಾಗಲಿ ಯಾವ ದೈವಶಕ್ತಿಯೇ ಆಗಲಿ ಅಪಕಾರ ಮಾಡಲಾಗದು” ಎಂದಳು.
“ತಾಯಿ! ನೀನು ಯಾರು?” ಎಂದು ಕೇಳಿದ, ಮಹಾರಾಜ.
“ಮಹಾರಾಜರೆ! ನೀವು ಬೌದ್ಧರನ್ನು ಬಹಿಷ್ಕರಿಸಿ ಅವರ ವಿಹಾರಗಳನ್ನು ನಾಶ ಮಾಡಿದುದರಿಂದ ಕ್ರೋಧ ತಪ್ತನಾದ ಧರ್ಮಪಾಲನು ಮಂತ್ರಶಕ್ತಿಯಿಂದ ಕ್ಷುದ್ರಶಕ್ತಿಯನ್ನು ಆವಾಹಿಸಿ ಲೋಕಾಲೋಕ ಪರ್ವತ ಪಾರ್ಶ್ವದಲ್ಲಿದ್ದ ಕೃತ್ತಿಕೆಯೆಂಬ ನನ್ನನ್ನು ನಿಯುಕ್ತಿ ಮಾಡಿದ. ನಿನ್ನ ದರ್ಶನದಿಂದ ನನ್ನ ತಮಸ್ಸಿನ ರೂಪ ನಶಿಸಿದೆ. ನಿಜವಾದ ಬೋಧಿಸತ್ತ್ವರು ನೀವೇ!”
“ಹಾಗೆಂದರೆ ಯಾರು?”
“ಸೃಷ್ಟಿಯ ಆದಿಯಿಂದ ಈಗಿನವರೆಗೆ ಯಾರು ಯಾವ ಜೀವಕ್ಕೂ ಹಾನಿಯನ್ನು ಮಾಡಿಲ್ಲವೋ ಅವರೆಲ್ಲ ಬೋಧಿಸತ್ತ್ವನ ಅಂಶಗಳು. ತಮಗೆ ಅಪರಾಧವೆಸಗಿದವರಲ್ಲಿಯೂ ಅವರು ಕೋಪಿಸುವುದಿಲ್ಲ. ಯಾರಿಗೂ ಪ್ರತೀಕಾರ ಮಾಡುವುದಿಲ್ಲ. ಅಂತಹವರು ಇರುವುದರಿಂದಲೇ ಜಗತ್ತೂ ಸಮಾಜವೂ ಮುಂದುವರಿದಿರುವುದು. ಬೌದ್ಧಮತೀಯರನ್ನು ಉಚ್ಛಾಟಿಸಿದ ನಿಮ್ಮ ಪಾಪವು ನಿಮ್ಮ ಕ್ಷಮಾಗುಣದಿಂದ ನಶಿಸಿದೆ. ಧರ್ಮಪಾಲನ ಮಂತ್ರಶಕ್ತಿಯಿಂದ ಆವಾಹಿತಳಾಗಿದ್ದ ನನ್ನನ್ನು ಬೋಧಿಸತ್ತ್ವನು ತಡೆದು `ಓ ಕಲ್ಯಾಣಿಯೆ! ಜಲೌಕ ಮಹಾರಾಜನು ಮಹಾ ಶಾಕ್ಯನು; ಶ್ರೇಷ್ಠ ಬೌದ್ಧನು. ಅವನನ್ನು ಹಿಂಸಿಸಲು ನಿನ್ನ ಶಕ್ತಿಯು ಸಮರ್ಥವಲ್ಲ. ಅವನ ದರ್ಶನದಿಂದ ನಿನ್ನ ಕತ್ತಲರೂಪ ನಶಿಸುತ್ತದೆ” ಎಂದು ತಿಳಿಸಿ ನಿಮಗೆ ಅರ್ಪಿಸುವಂತೆ ಈ ಬಂಗಾರದ ರಾಶಿಯನ್ನು ಕಳಿಸಿದ್ದಾನೆ. ಇದನ್ನು ಬಳಸಿ ತಾವು ಈಗ ನೆಲಸಮವಾಗಿರುವ ಬೌದ್ಧಮಠಗಳನ್ನು ಪುನರ್ನಿರ್ಮಾಣ ಮಾಡಿರಿ. ಅದರಿಂದ ನಿಮಗೆ ತಗಲಿರುವ ಪಾಪ ಮಾತ್ರವಲ್ಲದೆ ಆ ಕಾರ್ಯಕ್ಕೆ ಪರೋಕ್ಷವಾಗಿ ಕಾರಣರಾದವರ ಪಾಪ ಕೂಡಾ ಕ್ಷಯಿಸಿಹೋಗುತ್ತದೆ. ಸ್ವಯಂ ಬೋಧಿಸತ್ವನೇ ಹೊಗಳಿದ ನಿಮ್ಮನ್ನು ಪರೀಕ್ಷಿಸಲು ನಾನು ಆಹಾರವನ್ನು ಕೇಳಿದೆ. ನೀವು ರಾಜರಾಗಿರುವಾಗ ರಾಜ್ಯದಲ್ಲಿ ಯಾರಿಗೂ ಯಾವ ಕೊರತೆಯೂ ಇರುವುದಿಲ್ಲ” – ಎಂದು ಹೇಳಿ ಬಂಗಾರದ ಮೂಟೆಯನ್ನು ಜಲೌಕನ ಕೈಯಲ್ಲಿ ಇರಿಸಿದಳು.
ಜಲೌಕನು ಆ ಬಂಗಾರದ ಮೂಟೆಯನ್ನು ಸ್ವೀಕರಿಸುತ್ತಿದ್ದಂತೆಯೆ ಎದುರಿಗಿದ್ದ ಕರಾಳರೂಪ ಲಯಗೊಂಡು ಸಹಸ್ರ ಸೂರ್ಯ ಪ್ರಭೆ ಹೊಮ್ಮಿತು.
ಈ ಅದ್ಭುತವನ್ನು ವೀಕ್ಷಿಸಿದ ಪ್ರಜೆಗಳೂ ಬೌದ್ಧರೂ ಮಹಾರಾಜನಿಗೆ ಜಯ ಜಯಕಾರ ಮಾಡಿದರು.
ಜಲೌಕ ಮಹಾರಾಜನು ಆ ಬಂಗಾರದಿಂದ ಕೃತ್ಸಾಶ್ರಮವೆಂಬ ದೊಡ್ಡ ವಿಹಾರವನ್ನು ನಿರ್ಮಿಸಿ ಅದರಲ್ಲಿ ಇದಕ್ಕೆ ಕಾರಣಳಾದ ತಮೋರೂಪದ ಕೃತ್ಸಾದೇವಿಯನ್ನು ಪ್ರತಿಷ್ಠೆ ಮಾಡಿದ. ನಂದಿ ಕ್ಷೇತ್ರದಲ್ಲಿ ಭೂತೇಶ ದೇವಾಲಯವನ್ನೂ ಕಲ್ಲಿನಿಂದ ನಿರ್ಮಿಸಿ ಅಲ್ಲಿ ಪ್ರತಿದಿನ ಪೂಜೆ ನಡೆಯಲು ಬೇಕಾದ ಕೋಶವನ್ನು ಏರ್ಪಡಿಸಿದ.
ತಾನು ಪ್ರತಿಷ್ಠೆ ಮಾಡಿದ ಜ್ಯೇಷ್ಠ ರುದ್ರ ದೇವಾಲಯದಲ್ಲಿ ಪ್ರತಿ ಸಂಜೆ ಮತ್ತು ಉತ್ಸವಪರ್ವಗಳಂದು ನೃತ್ಯಾದಿ ಸೇವೆಗಳನ್ನು ನಿವೇದಿಸಲು ಅಂತಃಪುರಸ್ತ್ರೀಯರನ್ನು ನಿಯುಕ್ತಿ ಮಾಡಿದ.
ಆಮೇಲಿನ ಕಾಲದಲ್ಲಿ ಚೀರಮೋಚನ ತೀರ್ಥದ ಕೆಳಭಾಗದಲ್ಲಿ ಜಲೌಕನು ದೀರ್ಘಕಾಲ ತಪಸ್ಸು ಮಾಡಿದ. ಅಪರಿಮಿತ ಭೋಗೈಶ್ವರ್ಯಗಳು ನೆರೆದು ಬಂದವು. ಧರ್ಮಸ್ಥಾಪಕ ಜಲೌಕ ಮಹಾರಾಜನು ಜೀವಿತಕಾರ್ಯಗಳನ್ನೆಲ್ಲ ಸಾಧಿಸಿದ ನಂತರ ಧರ್ಮಪತ್ನಿ ಈಶಾನದೇವಿಯೊಡನೆ ಚೀರಮೋಚನ ತೀರ್ಥವನ್ನು ಪ್ರವೇಶಿಸಿ ಪರಶಿವಸಾಯುಜ್ಯ ಪಡೆದ.
ಇದು ಭಾರತದೇಶ ರಾಜರ ಔನ್ನತ್ಯದ ಪ್ರತೀಕವಾದ ಮತ್ತು ಮುಂದಿನ ರಾಜರುಗಳಿಗೆ ಮಾರ್ಗದರ್ಶಕನಾದ ಕಶ್ಮೀರರಾಜ ಜಲೌಕನ ಅದ್ಭುತ ಜೀವನಗಾಥೆ.?