ದಾತೃತ್ವಮೇವ ಸರ್ವೇಭ್ಯೋ ಗುಣೇಭ್ಯೋ ಭಾಸತೇತರಾಮ್ |
ಜ್ಞಾತೃತ್ವಸಹಿತಂ ತಚ್ಚೇತ್ ಸುವರ್ಣಸ್ಯೇವ ಸೌರಭಮ್ ||
– ಸುಭಾಷಿತಸುಧಾನಿಧಿ
ಜಗತ್ತಿನಲ್ಲಿ ಎಲ್ಲ ಗುಣಗಳಿಗಿಂತ ಮಿಗಿಲಾಗಿ ಹೊಳೆಯುವ ಗುಣವೆಂದರೆ ದಾನಶೀಲತೆ. ಅದರೊಡನೆ ವಿವೇಕಪರಿಜ್ಞಾನವೂ ಬೆರೆತರಂತೂ ಅದು ಬಂಗಾರಕ್ಕೆ ಪರಿಮಳದ್ರವ್ಯವನ್ನು ಲೇಪಿಸಿದಂತೆ ಮನೋಹರವಾಗುತ್ತದೆ.
ಸದ್ವರ್ತನೆಯ ಮೇಲ್ಮೆ
ಲೋಕದಲ್ಲಿ ಎಲ್ಲರ ಪ್ರಶಂಸೆಗೆ ಪಾತ್ರವಾಗುವ ಗುಣವೆಂದರೆ ದಾನಮಾಡುವ ಸ್ವಭಾವ. ಇನ್ನೊಬ್ಬರ ಬಗೆಗೆ ಒಳ್ಳೆಯ ಮಾತನಾಡುವುದು, ಸ್ನೇಹವನ್ನು ತೋರುವುದು, ಕ್ಲೇಶದ ಸಂದರ್ಭವಿದ್ದಲ್ಲಿ ಸಾಂತ್ವನ ನೀಡುವುದು – ಇವೆಲ್ಲ ಶ್ಲಾಘನೀಯ ಗುಣಗಳೇ ಎಂಬುದು ನಿಸ್ಸಂಶಯ. ಆದರೆ ಇನ್ನೊಬ್ಬರಿಗೆ ಧನವನ್ನೋ ಅನ್ಯ ವಸ್ತುವನ್ನೋ ದಾನವಾಗಿ ಕೊಡುವುದು ಮೇಲಣ ಗುಣಗಳಿಗಿಂತ ಹೆಚ್ಚು ಉದಾತ್ತವಾದುದೆನಿಸುತ್ತದೆ. ಇನ್ನೊಬ್ಬರ ಆವಶ್ಯಕತೆಯನ್ನು ಅವರಿಂದ ಹೇಳಿಸಿಕೊಳ್ಳದೆಯೇ ಊಹಿಸಿ ಪೂರೈಸುವುದು, ಅವರಿಗೆ ಸಂಕೋಚ ಉಂಟಾಗದ ರೀತಿಯಲ್ಲಿ ಸಹಾಯ ನೀಡುವುದು, ಅತ್ಯಲ್ಪ ಪ್ರತಿಫಲದ ಅಥವಾ ಪ್ರಚಾರದ ನಿರೀಕ್ಷೆಯೂ ತೋರದಂತೆ ಎಚ್ಚರ ವಹಿಸುವುದು – ಇಂತಹ ಸದ್ವರ್ತನೆಯ ಮೇಲ್ಮೆಯನ್ನು ‘ಜ್ಞಾತೃತ್ವಸಹಿತಂ’ ಎಂಬ ಪದಪುಂಜವು ಧ್ವನಿಸಿದೆ.
ತೆಲುಗಿನ ಪ್ರಸಿದ್ಧ ಹಾಸ್ಯನಟ ಬ್ರಹ್ಮಾನಂದಂ ಅವರ ಮನೆಯ ಮುಂದೆ ಒಮ್ಮೆ ಸೀಬೆಹಣ್ಣುಗಳನ್ನು ಮಂಕರಿಯಲ್ಲೊಯ್ದು ಮಾರುತ್ತಿದ್ದ ಹೆಂಗಸೊಬ್ಬಳು ಬಂದಳು.
ಆಕೆಯನ್ನು ಬ್ರಹ್ಮಾನಂದಂ ಕೇಳಿದರು:
ಹಣ್ಣಿಗೆ ಬೆಲೆ ಎಷ್ಟು?
ಆಕೆ ತಾನು ಮಾರುತ್ತಿದ್ದ ದರವನ್ನು ತಿಳಿಸಿದಳು.
ಇಡೀ ಬುಟ್ಟಿ ಹಣ್ಣಿಗೆ ಎಷ್ಟು ಕೊಡಬೇಕು? – ಎಂದು ಕೇಳಿದರು ಬ್ರಹ್ಮಾನಂದಂ. ಹೇಗೂ ಅವರ ಮನೆಯ ತುಂಬಾ ನಂಟರಿಷ್ಟರು ಇದ್ದರು.
ಇಡೀ ಬುಟ್ಟಿ ಹಣ್ಣಿಗೆ ಇನ್ನೂರೈವತ್ತು ರೂಪಾಯಿ ಎಂದಳು ಆಕೆ.
ಬ್ರಹ್ಮಾನಂದಂ ಮರುಮಾತಾಡದೆ ಇನ್ನೂರೈವತ್ತು ರೂಪಾಯನ್ನು ಆಕೆಯ ಕೈಯಲ್ಲಿರಿಸಿ ಅಷ್ಟೂ ಹಣ್ಣನ್ನು ಖರೀದಿ ಮಾಡಿದರು. ಆಕೆ ಸಂತೋಷದಿಂದ ನಿರ್ಗಮಿಸಿದಳು.
ಆಕೆ ತೆರಳಿದ ಮೇಲೆ ಹತ್ತಿರವಿದ್ದ ನಂಟರು ಬ್ರಹ್ಮಾನಂದಂ ಅವರನ್ನು ಕೇಳಿದರು: ಇದೇಕೆ ಹೀಗೆ ಮಾಡಿದಿರಿ? ನೀವು ಒಂದು ಮಾತು ಕೇಳಿದ್ದಿದ್ದರೆ ಅವಳು ಇನ್ನೂರು ರೂಪಾಯಿಗೇ ಕೊಡುತ್ತಿದ್ದಳೇನೊ!
ಅದಕ್ಕೆ ಬ್ರಹ್ಮಾನಂದಂ ಉತ್ತರಿಸಿದರು: ಐವತ್ತು ರೂಪಾಯಿ ಎಂಬುದು ನನಗೇನೂ ಹೆಚ್ಚಿನದಲ್ಲ. ಆದರೆ ಆಕೆಗೆ ಅದು ಬಹಳ ದೊಡ್ಡ ಮೊತ್ತ. ಅದಕ್ಕಾಗಿ ಉದ್ದೇಶಪೂರ್ವಕವಾಗಿಯೆ ನಾನು ಆಕೆಯಲ್ಲಿ ಚೌಕಾಶಿ ಮಾಡಲಿಲ್ಲ.